ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು—ಇಂದು ಯಾರು?
“ನಾವು ಅವರಿಗೆ ವಿರುದ್ಧವಾಗಿ ಏಳು ಮಂದಿ ಪಾಲಕರನ್ನು, ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು ಏರ್ಪಡಿಸುವೆವು.”—ಮೀಕ 5:5.
1. ಇಸ್ರಾಯೇಲ್ ಮತ್ತು ಅರಾಮಿನ ರಾಜರು ಒಟ್ಟುಗೂಡಿ ಮಾಡಿದ ಸಂಚು ನೆಲಕಚ್ಚಲಿತ್ತು ಏಕೆ?
ಕ್ರಿ.ಪೂ. 762 ಮತ್ತು ಕ್ರಿ.ಪೂ. 759ರ ನಡುವಿನ ಸಮಯದಲ್ಲೊಮ್ಮೆ ಇಸ್ರಾಯೇಲ್ ಮತ್ತು ಅರಾಮಿನ (ಸಿರಿಯದ) ರಾಜರು ಒಟ್ಟುಗೂಡಿ ಯೆಹೂದ ರಾಜ್ಯದ ಮೇಲೆ ಯುದ್ಧ ಸಾರಿದರು. ಅವರ ಗುರಿ ಏನಾಗಿತ್ತು? ಯೆರೂಸಲೇಮನ್ನು ವಶಪಡಿಸಿ, ಆಹಾಜನಿಂದ ರಾಜತ್ವವನ್ನು ಕಿತ್ತುಕೊಂಡು, ಬೇರೊಬ್ಬನನ್ನು ಪ್ರಾಯಶಃ ರಾಜ ದಾವೀದನ ಸಂತಾನಕ್ಕೆ ಸೇರಿರದ ಒಬ್ಬನನ್ನು ಪಟ್ಟಕ್ಕೇರಿಸುವುದೇ. (ಯೆಶಾ. 7:5, 6) ಆದರೆ ದಾವೀದನ ಸಂತಾನಕ್ಕೆ ಸೇರಿದವನೇ ಆ ಸಿಂಹಾಸನದಲ್ಲಿ ನಿರಂತರಕ್ಕೂ ಕೂರುವನೆಂದು ಯೆಹೋವನು ನುಡಿದಿದ್ದನು ಮತ್ತು ಆತನ ಮಾತು ಯಾವತ್ತೂ ಸುಳ್ಳಾಗುವುದಿಲ್ಲ. ಈ ಸಂಗತಿ ಇಸ್ರಾಯೇಲಿನ ರಾಜನಿಗೆ ನೆನಪಿರಬೇಕಿತ್ತು.—ಯೆಹೋ. 23:14; 2 ಸಮು. 7:16.
2-4. (1) ಯೆಶಾಯ 7:14, 16 ಕ್ರಿ.ಪೂ. ಎಂಟನೇ ಶತಮಾನದಲ್ಲಿ ಹೇಗೆ ನೆರವೇರಿತೆಂದು ವಿವರಿಸಿ. (2) ಆ ವಚನಗಳು ಕ್ರಿ.ಶ. ಒಂದನೇ ಶತಮಾನದಲ್ಲಿ ಹೇಗೆ ನೆರವೇರಿದವೆಂದು ವಿವರಿಸಿ.
2 ಅರಾಮ್ ಮತ್ತು ಇಸ್ರಾಯೇಲಿನ ಈ ಮೈತ್ರಿ ಮೊದಮೊದಲು ಮೇಲುಗೈ ಸಾಧಿಸುತ್ತಿರುವಂತೆ ಕಂಡಿತು. ಏಕೆಂದರೆ ಒಂದೇ ಕದನದಲ್ಲಿ ಆಹಾಜನ 1,20,000 ರಣಶೂರರು ಹತರಾದರು! “ರಾಜಪುತ್ರನಾದ ಮಾಸೇಯ” ಸಹ ಹತನಾದನು. (2 ಪೂರ್ವ. 28:6, 7) ಆದರೆ ಯೆಹೋವನು ಇದೆಲ್ಲವನ್ನು ಗಮನಿಸುತ್ತಾ ಇದ್ದನು. ತಾನು ದಾವೀದನಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡನು. ಹಾಗಾಗಿ ಪ್ರವಾದಿ ಯೆಶಾಯನ ಮುಖಾಂತರ ತುಂಬ ಪ್ರೋತ್ಸಾಹದಾಯಕ ಸಂದೇಶವನ್ನು ಹೇಳಿ ಕಳುಹಿಸಿದನು.
3 “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು . . . ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವದರೊಳಗೆ, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು [ಅರಾಮ್ ಮತ್ತು ಇಸ್ರಾಯೇಲ್] ನಿರ್ಜನವಾಗುವದು” ಎಂದನು ಯೆಶಾಯ. (ಯೆಶಾ. 7:14, 16) ಈ ಪ್ರವಾದನೆಯ ಮೊದಲ ಭಾಗವನ್ನು ಹೆಚ್ಚಾಗಿ ಮೆಸ್ಸೀಯನ ಜನನಕ್ಕೆ ಅನ್ವಯಿಸಲಾಗುತ್ತದೆ. ಇದು ಸೂಕ್ತವೂ ಹೌದು. (ಮತ್ತಾ. 1:23) ಆದರೆ ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಆ ‘ಇಬ್ಬರು ರಾಜರಿಂದ’ ಅಂದರೆ ಅರಾಮ್ ಮತ್ತು ಇಸ್ರಾಯೇಲ್ ರಾಜರಿಂದ ಯೆಹೂದಕ್ಕೆ ಬೆದರಿಕೆಯಿರಲಿಲ್ಲ. ಆದ್ದರಿಂದ ಇಮ್ಮಾನುವೇಲನ ಕುರಿತ ಈ ಪ್ರವಾದನೆಯು ಯೆಶಾಯನ ದಿನಗಳಲ್ಲೇ ಪ್ರಥಮ ನೆರವೇರಿಕೆ ಹೊಂದಿರಬೇಕು.
4 ಯೆಶಾಯನು ಆ ಗಮನಾರ್ಹ ಪ್ರಕಟಣೆ ಮಾಡಿದ ಸ್ವಲ್ಪದರಲ್ಲೇ ಅವನ ಹೆಂಡತಿ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಮಹೇರ್-ಶಾಲಾಲ್-ಹಾಷ್-ಬಜ್ ಎಂದು ಆ ಮಗುವಿಗೆ ಹೆಸರಿಡಲಾಯಿತು. ಯೆಶಾಯನು ತಿಳಿಸಿದಂಥ “ಇಮ್ಮಾನುವೇಲ್” ಇವನೇ ಆಗಿರುವ ಸಾಧ್ಯತೆ ಇದೆ.a ಬೈಬಲ್ ಕಾಲಗಳಲ್ಲಿ ಮಗು ಹುಟ್ಟಿದಾಗ ಅದಕ್ಕೆ ಒಂದು ವಿಶೇಷ ಘಟನೆಯ ನೆನಪಿನಾರ್ಥವಾಗಿ ಒಂದು ಹೆಸರನ್ನು ಇಡಲಾಗುತ್ತಿತ್ತೆಂದು ಕಾಣುತ್ತದೆ. ಆದರೆ ತಂದೆತಾಯಿ, ಬಂಧುಬಳಗದವರೆಲ್ಲ ಆ ಮಗುವನ್ನು ಇನ್ನೊಂದು ಹೆಸರಿನಿಂದ ಕರೆಯುತ್ತಿದ್ದಿರಬಹುದು. (2 ಸಮು. 12:24, 25) ಯೇಸುವನ್ನು ಯಾರೂ ಇಮ್ಮಾನುವೇಲ್ ಎಂಬ ಹೆಸರಿನಿಂದ ಕರೆದದ್ದರ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ.—ಯೆಶಾಯ 7:14; 8:3, 4 ಓದಿ.
5. ರಾಜ ಆಹಾಜ ಯಾವ ಮೂರ್ಖ ನಿರ್ಣಯ ಮಾಡಿದನು?
5 ಯೆಹೂದದ ಮೇಲೆ ಒಂದೆಡೆ ಇಸ್ರಾಯೇಲ್ ಮತ್ತು ಅರಾಮ್ ರಾಜ್ಯಗಳು ಕಣ್ಣಿಟ್ಟಿದ್ದವಾದರೆ ಇನ್ನೊಂದೆಡೆ ಮಿಲಿಟರಿ ಪಡೆಯಿದ್ದ ಬೇರೊಂದು ದೇಶವೂ ಕಣ್ಣಿಟ್ಟಿತ್ತು. ಆ ದೇಶವು ಲೋಕ ಶಕ್ತಿಯಾಗಿ ಉದಯಿಸುತ್ತಿದ್ದ ಅಶ್ಶೂರ್ ಆಗಿತ್ತು. ಯೆಶಾಯ 8:3, 4ಕ್ಕನುಸಾರ ಅಶ್ಶೂರವು ದಕ್ಷಿಣದ ಯೆಹೂದ ರಾಜ್ಯವನ್ನು ಆಕ್ರಮಿಸುವುದಕ್ಕೆ ಮುಂಚೆ “ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು” ಹೋಗಲಿತ್ತು ಅಂದರೆ ಇಸ್ರಾಯೇಲ್ ಮತ್ತು ಅರಾಮ್ ಮೇಲೆ ಮೊದಲು ಆಕ್ರಮಣ ಮಾಡಲಿತ್ತು. ಆದರೆ ಯೆಹೂದದ ನಂಬಿಕೆಹೀನ ಅರಸನಾದ ಆಹಾಜನು ಯೆಹೋವನು ಯೆಶಾಯನ ಮೂಲಕ ತಿಳಿಸಿದ ಮಾತಿನಲ್ಲಿ ಭರವಸೆಯಿಡುವ ಬದಲು ಅಶ್ಶೂರ್ಯರೊಂದಿಗೆ ಒಪ್ಪಂದ ಮಾಡಿಕೊಂಡನು. ಅದು ವಿಪತ್ಕಾರಕವಾಗಿ ಪರಿಣಮಿಸಿತು. ಕೊನೆಗೆ ಅಶ್ಶೂರ್ಯರು ಯೆಹೂದದ ಮೇಲೆ ದಬ್ಬಾಳಿಕೆ ಮಾಡಲಾರಂಭಿಸಿದರು. (2 ಅರ. 16:7-10) ಒಬ್ಬ ನಾಯಕನಾಗಿ, ಒಬ್ಬ ಕುರುಬನಾಗಿ ಯೆಹೂದದ ಜನರನ್ನು ಸಂರಕ್ಷಿಸಬೇಕಾಗಿದ್ದ ಆಹಾಜ ತನ್ನ ಕರ್ತವ್ಯಪಾಲನೆಯಲ್ಲಿ ಸೋತುಹೋದ. ಈ ಉದಾಹರಣೆಯನ್ನು ಮನಸ್ಸಿನಲ್ಲಿಟ್ಟು ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನಾನು ಪ್ರಮುಖ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಯಾರಲ್ಲಿ ಭರವಸೆಯಿಡುತ್ತೇನೆ? ದೇವರಲ್ಲೊ ಮನುಷ್ಯನಲ್ಲೊ?’—ಜ್ಞಾನೋ. 3:5, 6.
ಹೊಸ ಕುರಿಪಾಲಕ ತಕ್ಕೊಂಡ ಭಿನ್ನ ಹೆಜ್ಜೆ
6. ಆಹಾಜನ ಆಳ್ವಿಕೆಗೂ ಹಿಜ್ಕೀಯನ ಆಳ್ವಿಕೆಗೂ ಇದ್ದ ವ್ಯತ್ಯಾಸವೇನು?
6 ಆಹಾಜ ಕ್ರಿ.ಪೂ. 746ರಲ್ಲಿ ತೀರಿಹೋದಾಗ ಅವನ ಮಗ ಹಿಜ್ಕೀಯ ಯೆಹೂದದ ರಾಜನಾದ. ಅವನು ಪಟ್ಟವೇರಿದಾಗ ರಾಜ್ಯದ ಧನಸಂಪತ್ತು ಬರಿದಾಗಿತ್ತು. ಮಾತ್ರವಲ್ಲ ಆಧ್ಯಾತ್ಮಿಕ ಸ್ಥಿತಿಯಂತೂ ಹೇಳಲಾಗದಷ್ಟು ಮಟ್ಟಿಗೆ ಹದಗೆಟ್ಟಿತ್ತು. ಒಬ್ಬ ಯುವ ರಾಜನಾಗಿ ಸಿಂಹಾಸನವೇರಿದ ಹಿಜ್ಕೀಯ ಮೊದಲು ಏನು ಮಾಡಿದನು? ಕುಸಿದುಬಿದ್ದಿದ್ದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಹೆಜ್ಜೆ ತಕ್ಕೊಂಡನೊ? ಇಲ್ಲ. ಹಿಜ್ಕೀಯ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ. ತನ್ನ ಮಂದೆಯಂತಿದ್ದ ಜನಾಂಗಕ್ಕೆ ಯೋಗ್ಯ ಕುರಿಪಾಲಕನಾಗಿದ್ದ. ಶುದ್ಧಾರಾಧನೆಯನ್ನು ಪುನಃಸ್ಥಾಪನೆ ಮಾಡಿ, ದಾರಿತಪ್ಪಿದ್ದ ಜನಾಂಗವು ಯೆಹೋವನೊಂದಿಗೆ ಮೊದಲಿದ್ದ ಸಂಬಂಧಕ್ಕೆ ಬರುವಂತೆ ಸಹಾಯ ಮಾಡಲು ಮೊತ್ತಮೊದಲಾಗಿ ಹೆಜ್ಜೆ ತಕ್ಕೊಂಡ. ತಾನೇನು ಮಾಡಬೇಕೆಂಬುದು ದೇವರ ಚಿತ್ತವಾಗಿದೆ ಎಂಬುದನ್ನು ಹಿಜ್ಕೀಯ ಅರ್ಥಮಾಡಿಕೊಂಡಾಗ ಅದನ್ನು ಪೂರೈಸಲು ದೃಢವಾಗಿ ಕ್ರಿಯೆಗೈದ. ನಮಗೆ ಎಂಥ ಉತ್ತಮ ಮಾದರಿ!—2 ಪೂರ್ವ. 29:1-19.
7. ಹೊಸ ರಾಜನ ಬೆಂಬಲ ತಮಗಿದೆಯೆಂಬ ಆಶ್ವಾಸನೆ ಲೇವಿಯರಿಗೆ ಏಕೆ ಅಗತ್ಯವಾಗಿತ್ತು?
7 ಶುದ್ಧಾರಾಧನೆಯನ್ನು ಪುನಃಸ್ಥಾಪಿಸುವ ಪ್ರಾಮುಖ್ಯ ಕೆಲಸದಲ್ಲಿ ಲೇವಿಯರಿಗೆ ಮಹತ್ವದ ಪಾತ್ರವಿತ್ತು. ಆದ್ದರಿಂದ ಹಿಜ್ಕೀಯ ಅವರೊಂದಿಗೆ ಸಭೆ ನಡೆಸಿ ತನ್ನ ಬೆಂಬಲದ ಆಶ್ವಾಸನೆ ಕೊಟ್ಟನು. ‘ಯೆಹೋವನು ತನ್ನನ್ನು ಆರಾಧಿಸುವದಕ್ಕೆ ನಿಮ್ಮನ್ನು ತನ್ನ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡನಲ್ಲಾ’ ಎಂದು ರಾಜನು ಘೋಷಿಸಿದಾಗ ನೆರೆದುಬಂದಿದ್ದ ಆ ನಂಬಿಗಸ್ತ ಲೇವಿಯರಿಗೆ ಹೇಗನಿಸಿರಬೇಕೆಂದು ಸ್ವಲ್ಪ ಊಹಿಸಿಕೊಳ್ಳಿ! ಅವರೆಲ್ಲರ ಕಣ್ಣುಗಳಿಂದ ಹರ್ಷದ ಅಶ್ರುಧಾರೆ ಹರಿದಿರಬಹುದಲ್ಲವೇ? (2 ಪೂರ್ವ. 29:11) ಶುದ್ಧಾರಾಧನೆಯನ್ನು ಪ್ರವರ್ಧಿಸಲು ಅವರಿಗೀಗ ಸ್ಪಷ್ಟ ಆದೇಶ ಸಿಕ್ಕಿತ್ತು.
8. (1) ಜನಾಂಗದ ಆಧ್ಯಾತ್ಮಿಕತೆಯನ್ನು ಪುನಃಸ್ಥಾಪಿಸಲು ಹಿಜ್ಕೀಯನು ಇನ್ನಾವ ಕ್ರಮಗಳನ್ನು ತೆಗೆದುಕೊಂಡನು? (2) ಫಲಿತಾಂಶ ಏನಾಯಿತು?
8 ಹಿಜ್ಕೀಯನು ಯೆಹೂದದ ಮತ್ತು ಇಸ್ರಾಯೇಲ್ನ ಜನರೆಲ್ಲರನ್ನು ಪಸ್ಕದ ಮಹಾ ಆಚರಣೆ ಮತ್ತು ನಂತರ ಹುಳಿಯಿಲ್ಲದ ರೊಟ್ಟಿಗಳ ಏಳು ದಿನದ ಹಬ್ಬಕ್ಕೆ ಆಮಂತ್ರಿಸಿದನು. ಜನರು ಎಷ್ಟು ಆನಂದಿಸಿದರೆಂದರೆ ಆ ಹಬ್ಬವನ್ನು ಇನ್ನೂ ಏಳು ದಿನ ಆಚರಿಸಲಾಯಿತು. ಬೈಬಲ್ ಹೀಗೆ ವರದಿಸುತ್ತದೆ: “ದಾವೀದನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದದರಿಂದ ಯೆರೂಸಲೇಮಿನಲ್ಲಿ ಬಹುಸಂತೋಷವುಂಟಾಯಿತು.” (2 ಪೂರ್ವ. 30:25, 26) ಈ ಆಧ್ಯಾತ್ಮಿಕ ಉತ್ಸವವು ಜನರೆಲ್ಲರಿಗೆ ಸ್ಫೂರ್ತಿದಾಯಕವಾಗಿತ್ತು. ಏಕೆಂದರೆ “ಇದಾದನಂತರ ನೆರೆದುಬಂದ ಇಸ್ರಾಯೇಲ್ಯರೆಲ್ಲರೂ . . . ಕಲ್ಲು ಕಂಬಗಳನ್ನು ಒಡೆದು ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು” ಎನ್ನುತ್ತದೆ 2 ಪೂರ್ವಕಾಲವೃತ್ತಾಂತ 31:1. ಹೀಗೆ ಮಹತ್ತಾದ ವಿಧದಲ್ಲಿ ಕ್ರಮಗೈಯುವ ಮೂಲಕ ಯೆಹೂದವು ಯೆಹೋವನ ಬಳಿ ಹಿಂದಿರುಗಲು ಆರಂಭಿಸಿತು. ಈ ಆಧ್ಯಾತ್ಮಿಕ ಶುದ್ಧೀಕರಣ ಮುಂದೆ ಸಂಭವಿಸಲಿದ್ದ ಸಂಕಷ್ಟಗಳಿಗಾಗಿ ಅವರನ್ನು ಸಿದ್ಧಗೊಳಿಸಿತು.
ರಾಜನು ಯೆಹೋವನಲ್ಲಿ ಭರವಸೆಯಿಟ್ಟನು
9. (1) ಇಸ್ರಾಯೇಲಿನ ಯೋಜನೆಗಳು ಹೇಗೆ ಭಂಗವಾದವು? (2) ಸನ್ಹೇರೀಬನಿಗೆ ಯೆಹೂದದಲ್ಲಿ ಮೊದಮೊದಲು ಯಾವ ಯಶಸ್ಸು ಸಿಕ್ಕಿತು?
9 ಯೆಶಾಯನು ನುಡಿದಂತೆಯೇ ಅಶ್ಶೂರ್ಯರು ಬಂದು ಉತ್ತರದ ಇಸ್ರಾಯೇಲ್ ರಾಜ್ಯವನ್ನು ಜಯಿಸಿ ಅದರ ನಿವಾಸಿಗಳನ್ನು ಸೆರೆ ಒಯ್ದರು. ಹೀಗೆ, ದಾವೀದ ವಂಶಜನಲ್ಲದ ಇನ್ನೊಬ್ಬನನ್ನು ಯೆಹೂದದ ರಾಜನಾಗಿ ಮಾಡುವ ಇಸ್ರಾಯೇಲಿನ ಯೋಜನೆಗಳು ತಲೆಕೆಳಗಾದವು. ಯೆಹೂದದ ಮೇಲೆ ಅಶ್ಶೂರ ಕೂಡ ಕಣ್ಣಿಟ್ಟಿತ್ತಲ್ಲಾ? ಅದರ ಯೋಜನೆಗಳು ಏನಾದವು? “ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರುಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದಪ್ರಾಂತದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.” ಸೆನ್ಹೇರೀಬನು ಒಟ್ಟಿನಲ್ಲಿ ಯೆಹೂದದ 46 ಪಟ್ಟಣಗಳನ್ನು ವಶಮಾಡಿಕೊಂಡನು ಎಂದು ವರದಿ ಹೇಳುತ್ತದೆ. ಅಶ್ಶೂರದ ಸೈನ್ಯವು ಒಂದಾದ ಮೇಲೆ ಒಂದು ಪಟ್ಟಣವನ್ನು ವಶಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿತ್ತು! ಆ ಸಮಯದಲ್ಲಿ ನೀವು ಯೆರೂಸಲೇಮಿನಲ್ಲಿ ವಾಸಿಸಿರುತ್ತಿದ್ದರೆ ನಿಮಗೆ ಹೇಗನಿಸುತ್ತಿತ್ತು? ಶತ್ರು ಸೈನ್ಯ ನೀವಿರುವ ಸ್ಥಳದ ಹತ್ತಿರ ಹತ್ತಿರ ಬರುತ್ತಿದೆ ಎಂದು ತಿಳಿದಾಗ ಏನು ಮಾಡುತ್ತಿದ್ದಿರಿ?—2 ಅರ. 18:13.
10. ಮೀಕ 5:5, 6ರ ಮಾತುಗಳು ಏಕೆ ಹಿಜ್ಕೀಯನಿಗೆ ಪ್ರೋತ್ಸಾಹ ಕೊಟ್ಟಿರಬೇಕು?
10 ಶತ್ರುಸೈನ್ಯದಿಂದ ಅಪಾಯ ಸಮೀಪಿಸುತ್ತಿದೆಯೆಂದು ಹಿಜ್ಕೀಯನಿಗೆ ತಿಳಿದಿತ್ತು. ಆದರೆ ಅವನ ಧರ್ಮಭ್ರಷ್ಟ ತಂದೆ ಆಹಾಜನಂತೆ ಅವನು ವಿಧರ್ಮಿ ಜನಾಂಗದ ಸಹಾಯ ಕೋರಲಿಲ್ಲ. ತನ್ನ ಭರವಸೆಯನ್ನು ಯೆಹೋವನಲ್ಲಿಟ್ಟನು. (2 ಪೂರ್ವ. 28:20, 21) ಆ ಸಮಯದಲ್ಲಿ ಜೀವಿಸುತ್ತಿದ್ದ ಪ್ರವಾದಿ ಮೀಕನು ಅಶ್ಶೂರದ ಕುರಿತು ನುಡಿದ ಈ ಮಾತುಗಳೂ ಹಿಜ್ಕೀಯನಿಗೆ ತಿಳಿದಿದ್ದಿರಬೇಕು: ‘ನಾವು ಅಶ್ಶೂರ್ಯರ ವಿರುದ್ಧವಾಗಿ ಏಳು ಮಂದಿ ಕುರಿಪಾಲಕರನ್ನು, ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು ಏರ್ಪಡಿಸುವೆವು. ಅವರ ಕತ್ತಿಯು ಅಶ್ಶೂರ ದೇಶವನ್ನು ತಿಂದುಬಿಡುವದು.’ (ಮೀಕ 5:5, 6) ಈ ದೇವಪ್ರೇರಿತ ಮಾತುಗಳು ಹಿಜ್ಕೀಯನಲ್ಲಿ ಪ್ರೋತ್ಸಾಹ ತುಂಬಿದ್ದಿರಬೇಕು. ಏಕೆಂದರೆ ಅಶ್ಶೂರ್ಯರ ವಿರುದ್ಧ ತೀರ ಅಸಾಮಾನ್ಯವಾದ ಒಂದು ಸೇನೆ ಏಳಲಿದೆ ಮತ್ತು ಆ ಉಗ್ರ ಆಕ್ರಮಣಕಾರರು ಕೊನೆಗೆ ಸೋಲಲಿದ್ದಾರೆಂದು ಆ ಮಾತುಗಳು ತೋರಿಸಿದವು.
11. ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರ ಕುರಿತ ಪ್ರವಾದನೆಯ ಪ್ರಧಾನ ನೆರವೇರಿಕೆ ಯಾವಾಗ ಆಗಲಿದೆ?
11 ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರ (“ಪ್ರಭುಗಳು,” ದ ನ್ಯೂ ಇಂಗ್ಲಿಷ್ ಬೈಬಲ್) ಕುರಿತ ಪ್ರವಾದನೆಯ ಪ್ರಧಾನ ನೆರವೇರಿಕೆ ಮುಂದೆ ಆಗಲಿತ್ತು. ‘ಇಸ್ರಾಯೇಲನ್ನು ಆಳತಕ್ಕವನು’ ಮತ್ತು ಯಾರ ‘ಹೊರಡೋಣದ ಮೂಲವು ಪುರಾತನವಾದದ್ದೋ’ ಆ ಯೇಸುವಿನ ಜನನದ ಎಷ್ಟೋ ಸಮಯದ ನಂತರ ನೆರವೇರಿಕೆ ಹೊಂದಲಿತ್ತು. (ಮೀಕ 5:1, 2 ಓದಿ.) ಆಧುನಿಕ ದಿನದಲ್ಲಿ “ಅಶ್ಶೂರ್ಯರು” ಅಂದರೆ ಶತ್ರುಗಳು ಯೆಹೋವನ ಸೇವಕರನ್ನು ನಿರ್ನಾಮಗೊಳಿಸಲು ಆಕ್ರಮಣ ಮಾಡುವಾಗ ಅದು ನೆರವೇರಲಿದೆ. ಭಯಹುಟ್ಟಿಸುವ ಆ ವೈರಿಗಳನ್ನು ಎದುರಿಸಲು ಯೆಹೋವನು ಈಗ ಆಳುತ್ತಿರುವ ತನ್ನ ಪುತ್ರನ ಮೂಲಕ ಯಾವ ಸೇನಾಪಡೆಯನ್ನು ಎಬ್ಬಿಸಲಿದ್ದಾನೆ? ಅದನ್ನು ನೋಡುವ ಮುಂಚೆ, ಅಶ್ಶೂರ ಬೆದರಿಕೆಹಾಕುತ್ತಿದ್ದ ಸಮಯದಲ್ಲಿ ಹಿಜ್ಕೀಯನು ತಕ್ಕೊಂಡ ಕ್ರಮಗಳಿಂದ ನಾವೇನು ಕಲಿಯಬಲ್ಲೆವೆಂದು ಪರಿಗಣಿಸೋಣ.
ಹಿಜ್ಕೀಯ ವಿವೇಚನೆಯಿಂದ ಕ್ರಮ ತಕ್ಕೊಂಡನು
12. ಹಿಜ್ಕೀಯ ಮತ್ತು ಅವನೊಂದಿಗಿದ್ದವರು ದೇವಜನರನ್ನು ಸಂರಕ್ಷಿಸಲು ಯಾವ ಕ್ರಮಗಳನ್ನು ತೆಗೆದುಕೊಂಡರು?
12 ನಮ್ಮ ಸ್ವಂತ ಶಕ್ತಿಯಿಂದ ಯಾವುದನ್ನು ಮಾಡಲು ಆಗುವುದಿಲ್ಲವೊ ಅದನ್ನು ನಮಗೋಸ್ಕರ ಮಾಡಲು ಯೆಹೋವನು ಯಾವಾಗಲೂ ಸಿದ್ಧನಿದ್ದಾನೆ. ಆದರೆ ನಮ್ಮಿಂದ ಏನು ಸಾಧ್ಯವಾಗುತ್ತದೊ ಅದನ್ನು ಮಾಡುವಂತೆ ಆತನು ನಿರೀಕ್ಷಿಸುತ್ತಾನೆ. ಅಂತೆಯೇ ಹಿಜ್ಕೀಯನು “ತನ್ನ ಸರದಾರರ ಮತ್ತು ಶೂರರ” ಜೊತೆ ಸಮಾಲೋಚನೆ ಮಾಡಿ, ‘ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸುವ’ ನಿರ್ಣಯ ಮಾಡಿದನು. ಅಲ್ಲದೆ ಹಿಜ್ಕೀಯನು “ಧೈರ್ಯಗೊಂಡು ಅಲ್ಲಲ್ಲಿ ಬಿದ್ದುಹೋದ ಪೌಳಿಗೋಡೆಯನ್ನು ಜೀರ್ಣೋದ್ಧಾರಮಾಡಿಸಿ ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿ . . . ಅನೇಕಾಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.” (2 ಪೂರ್ವ. 32:3-5) ಆ ಸಮಯದಲ್ಲಿ ಯೆಹೋವನು ಕುರಿಗಳಂಥ ತನ್ನ ಜನರನ್ನು ಪಾಲಿಸಲು ಮತ್ತು ಸಂರಕ್ಷಿಸಲು ಹಲವಾರು ಧೀರ ಪುರುಷರನ್ನು ಅಂದರೆ ಹಿಜ್ಕೀಯ, ಅವನ ಸರದಾರರು ಹಾಗೂ ಆಧ್ಯಾತ್ಮಿಕವಾಗಿ ಬಲಿಷ್ಠರಾಗಿದ್ದ ಪ್ರವಾದಿಗಳನ್ನು ಉಪಯೋಗಿಸಿದನು.
13. ಮುಂದೆ ಆಗಲಿದ್ದ ಆಕ್ರಮಣಕ್ಕಾಗಿ ಜನರನ್ನು ಸಿದ್ಧಗೊಳಿಸಲು ಹಿಜ್ಕೀಯ ಯಾವ ಪ್ರಾಮುಖ್ಯ ಕ್ರಮ ತಕ್ಕೊಂಡನು? ವಿವರಿಸಿ.
13 ಬಾವಿಗಳನ್ನು ಮುಚ್ಚಿಸುವ, ಪಟ್ಟಣದ ಗೋಡೆಗಳನ್ನು ಭದ್ರಪಡಿಸುವ ಕೆಲಸಕ್ಕಿಂತಲೂ ಹೆಚ್ಚು ಮಹತ್ವವಾದ ಕೆಲಸವನ್ನು ಹಿಜ್ಕೀಯ ಮುಂದೆ ಮಾಡಿದನು. ಕಾಳಜಿಭರಿತ ಕುರಿಪಾಲಕನಾಗಿದ್ದ ಅವನು ಜನರನ್ನು ಒಟ್ಟುಸೇರಿಸಿ ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸಲು ಹೀಗಂದನು: ‘ಅಶ್ಶೂರದ ಅರಸನಿಗೆ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು. ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು.’ ಎಂಥ ಮನಮುಟ್ಟುವ ಮಾತುಗಳಿವು! ಯೆಹೋವನು ತನ್ನ ಜನರಿಗಾಗಿ ಕಾದಾಡುವನು ಎಂದು ಹಿಜ್ಕೀಯನು ನೆನಪಿಸಿದನು. ಇದು ಜನರ ನಂಬಿಕೆಯನ್ನು ಬಲಪಡಿಸಿ ಅವರಲ್ಲಿ ಧೈರ್ಯ ತುಂಬಿತು. ಯೆಹೂದ್ಯರು “ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು.” ಗಮನಿಸಿ, ಜನರಲ್ಲಿ ಧೈರ್ಯ ತುಂಬಿದ್ದು ‘ಹಿಜ್ಕೀಯನ ಮಾತುಗಳೇ.’ ಹಿಜ್ಕೀಯ, ಅವನ ಶೂರರು, ಸರದಾರರು, ಮಾತ್ರವಲ್ಲ ಪ್ರವಾದಿಗಳಾದ ಮೀಕ ಮತ್ತು ಯೆಶಾಯ ಇವರೆಲ್ಲ ಯೆಹೋವನು ತನ್ನ ಪ್ರವಾದಿಯ ಮೂಲಕ ಮುಂತಿಳಿಸಿದಂತೆಯೇ ಅತ್ಯುತ್ತಮ ಕುರಿಪಾಲಕರಾಗಿ ಕ್ರಿಯೆಗೈದರು.—2 ಪೂರ್ವ. 32:7, 8; ಮೀಕ 5:5, 6 ಓದಿ.
14. (1) ರಬ್ಷಾಕೆ ಏನೆಲ್ಲ ಮಾಡಿದ? (2) ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?
14 ಅಶ್ಶೂರದ ರಾಜನು ಯೆರೂಸಲೇಮಿನ ನೈರುತ್ಯದಲ್ಲಿದ್ದ ಲಾಕೀಷಿಗೆ ಬಂದು ಅಲ್ಲಿ ಬೀಡುಬಿಟ್ಟನು. ಅಲ್ಲಿಂದ ಮೂರು ರಾಯಭಾರಿಗಳನ್ನು ಕಳುಹಿಸಿ ತನಗೆ ಶರಣಾಗುವಂತೆ ಯೆಹೂದಕ್ಕೆ ಹೇಳಿದನು. ರಬ್ಷಾಕೆ ಎಂಬ ಅಧಿಕೃತ ಬಿರುದಿನ ಅವನ ವಕ್ತಾರ ಹಲವಾರು ತಂತ್ರಗಳನ್ನು ಬಳಸಿದ. ಯೆಹೂದದ ಜನರೊಂದಿಗೆ ಹೀಬ್ರು ಭಾಷೆಯಲ್ಲೇ ಮಾತಾಡಿ ಅವರು ತಮ್ಮ ರಾಜನಿಗೆ ತಿರುಗಿಬಿದ್ದು, ಅಶ್ಶೂರ್ಯರಿಗೆ ಶರಣಾಗುವಂತೆ ಪುಸಲಾಯಿಸಿದ. ಆರಾಮದ ಜೀವನ ನಡೆಸಬಹುದಾದ ಒಂದು ಪ್ರದೇಶಕ್ಕೆ ಅವರನ್ನು ಕೊಂಡೊಯ್ಯುವೆನೆಂದು ಸುಳ್ಳು ವಚನಕೊಟ್ಟ. (2 ಅರಸುಗಳು 18:31, 32 ಓದಿ.) ಮಾತ್ರವಲ್ಲ ಬೇರೆ ಜನಾಂಗಗಳ ದೇವರುಗಳಿಗೆ ಹೇಗೆ ತಮ್ಮ ತಮ್ಮ ಆರಾಧಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲವೊ ಹಾಗೆಯೇ ಯೆಹೋವನಿಗೆ ತನ್ನ ಆರಾಧಕರಾದ ಯೆಹೂದ್ಯರನ್ನು ಅಶ್ಶೂರ್ಯರ ಮುಷ್ಟಿಯಿಂದ ಬಿಡಿಸಲು ಸಾಧ್ಯವಿಲ್ಲವೆಂದು ರಬ್ಷಾಕೆ ವಾದಿಸಿದ. ಆದರೆ ಅವನ ಈ ನಿಂದಾತ್ಮಕ ಮಾತುಗಳಿಗೆ ಯೆಹೂದ್ಯರು ಪ್ರತಿಕ್ರಿಯೆ ತೋರಿಸದಿರುವ ಮೂಲಕ ವಿವೇಕದಿಂದ ನಡೆದುಕೊಂಡರು. ನಮ್ಮೀ ದಿನಗಳಲ್ಲೂ ಯೆಹೋವನ ಸೇವಕರು ಹೆಚ್ಚಾಗಿ ಹೀಗೇ ಮಾಡುತ್ತಾರೆ.—2 ಅರಸುಗಳು 18:35, 36 ಓದಿ.
15. (1) ಯೆರೂಸಲೇಮಿನ ನಿವಾಸಿಗಳು ಏನು ಮಾಡಬೇಕಿತ್ತು? (2) ಯೆಹೋವನು ಆ ಪಟ್ಟಣವನ್ನು ಸಂರಕ್ಷಿಸಿದ್ದು ಹೇಗೆ?
15 ಹಿಜ್ಕೀಯ ಚಿಂತೆಗೀಡಾದ. ಆದರೆ ಅವನು ಸಹಾಯಕ್ಕಾಗಿ ಅನ್ಯ ಜನಾಂಗವೊಂದರ ಮುಂದೆ ಕೈಚಾಚಲಿಲ್ಲ. ಬದಲಿಗೆ ಪ್ರವಾದಿ ಯೆಶಾಯನ ಮೂಲಕ ಯೆಹೋವನ ಸಹಾಯ ಯಾಚಿಸಿದನು. ಯೆಶಾಯನು ಹಿಜ್ಕೀಯನಿಗೆ “ಅವನು [ಸನ್ಹೇರೀಬನು] ಪಟ್ಟಣವನ್ನು ಸಮೀಪಿಸುವದಿಲ್ಲ, ಅದಕ್ಕೆ ಬಾಣವನ್ನೆಸೆಯುವದಿಲ್ಲ” ಎಂದು ಹೇಳಿದನು. (2 ಅರ. 19:32) ಯೆರೂಸಲೇಮಿನ ನಿವಾಸಿಗಳು ಮಾಡಬೇಕಾದದ್ದು ಇಷ್ಟೇ: ದೃಢರಾಗಿ ನಿಲ್ಲಬೇಕಿತ್ತು. ಯೆಹೋವನು ಯೆಹೂದಕ್ಕಾಗಿ ಹೋರಾಡಲಿದ್ದನು. ಆತನು ಹೋರಾಡಿದನು ಸಹ. “ಅದೇ ರಾತ್ರಿಯಲ್ಲಿ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು.” (2 ಅರ. 19:35) ಯೆಹೂದಕ್ಕೆ ರಕ್ಷಣೆ ಬಂದದ್ದು, ಹಿಜ್ಕೀಯನು ಪಟ್ಟಣದ ಬಾವಿಗಳನ್ನು ಮುಚ್ಚಿಸಿದ್ದರಿಂದಲೋ ಗೋಡೆಗಳನ್ನು ಕಟ್ಟಿದ್ದರಿಂದಲೋ ಅಲ್ಲ ಬದಲಾಗಿ ಯೆಹೋವನ ಹಸ್ತಕ್ಷೇಪದಿಂದಲೇ.
ಇವತ್ತಿಗಾಗಿ ಪಾಠಗಳು
16. ಇಂದು (1) ಯೆರೂಸಲೇಮಿನ ಪ್ರಜೆಗಳು ಅಂದರೆ ಯಾರು? (2) “ಅಶ್ಶೂರ್ಯರು” ಅಂದರೆ ಯಾರು? (3) ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರು ಅಂದರೆ ಯಾರು?
16 ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರ ಕುರಿತ ಪ್ರವಾದನೆಯ ಪ್ರಧಾನ ನೆರವೇರಿಕೆ ನಮ್ಮೀ ದಿನಗಳಲ್ಲಿ ಆಗಲಿದೆ. ಪುರಾತನ ಯೆರೂಸಲೇಮಿನ ಪ್ರಜೆಗಳು ಅಶ್ಶೂರ್ಯರ ದಾಳಿಗೆ ತುತ್ತಾದರು. ಭವಿಷ್ಯದಲ್ಲಿ ಬಲುಬೇಗನೇ ಆಧುನಿಕ ದಿನದ “ಅಶ್ಶೂರ್ಯರು” ಆಕ್ರಮಣಕ್ಕೆ ಸುಲಭವಾಗಿ ಒಳಗಾಗುವರೇನೋ ಎಂಬಂತೆ ಕಾಣುವ ದೇವಜನರ ಮೇಲೆ ದಾಳಿಮಾಡುವರು. ಅವರ ಗುರಿ ದೇವಜನರನ್ನು ಅಳಿಸಿಬಿಡುವುದೇ ಆಗಿದೆ. ಬೈಬಲಿನಲ್ಲಿ ಈ ಆಕ್ರಮಣದ ಬಗ್ಗೆ ಮಾತ್ರವಲ್ಲ ‘ಮಾಗೋಗಿನ ಗೋಗನ’ ಆಕ್ರಮಣ, ‘ಉತ್ತರರಾಜನ’ ಆಕ್ರಮಣ, ‘ಭೂರಾಜರ’ ಆಕ್ರಮಣದ ಬಗ್ಗೆಯೂ ತಿಳಿಸಲಾಗಿದೆ. (ಯೆಹೆ. 38:2, 10-13; ದಾನಿ. 11:40, 44, 45; ಪ್ರಕ. 17:14; 19:19) ಇವೆಲ್ಲ ಆಕ್ರಮಣಗಳು ಬೇರೆ ಬೇರೆ ಆಗಿವೆಯೇ? ಇರಬೇಕೆಂದಿಲ್ಲ. ಒಂದೇ ಆಕ್ರಮಣಕ್ಕೆ ಸೂಚಿಸಲು ಬೈಬಲ್ ಬೇರೆ ಬೇರೆ ಹೆಸರುಗಳನ್ನು ಬಳಸುತ್ತಿರಬಹುದು. ಈ ನಿರ್ದಯಿ ವೈರಿಗಳಾದ ‘ಅಶ್ಶೂರ್ಯರ’ ವಿರುದ್ಧ ಯೆಹೋವನು ಯಾವ ‘ರಹಸ್ಯ ಅಸ್ತ್ರವನ್ನು’ ಬಳಸಲಿರುವನೆಂದು ಮೀಕನ ಪ್ರವಾದನೆ ಸೂಚಿಸುತ್ತದೆ? ಅಸಾಮಾನ್ಯವಾದ ಅಸ್ತ್ರ ಅದಾಗಿದೆ—‘ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರು!’ (ಮೀಕ 5:5) ಈ ಅಸಾಮಾನ್ಯ ಸೇನಾಪಡೆಯಲ್ಲಿರುವ ಕುರಿಪಾಲಕರೂ ಪುರುಷಶ್ರೇಷ್ಠರೂ (ಇಲ್ಲವೆ ಪ್ರಭುಗಳು) ಸಭಾ ಹಿರಿಯರಾಗಿದ್ದಾರೆ. (1 ಪೇತ್ರ 5:2) ಇಂದು ಯೆಹೋವನು ತನ್ನ ಅಮೂಲ್ಯ ಕುರಿಗಳಾದ ಜನರನ್ನು ಪಾಲನೆಮಾಡಲು ಹಾಗೂ ಆಧುನಿಕ ದಿನದ “ಅಶ್ಶೂರ್ಯರು” ಭವಿಷ್ಯದಲ್ಲಿ ನಡೆಸುವ ಆಕ್ರಮಣದ ವಿರುದ್ಧ ಅವರನ್ನು ಬಲಪಡಿಸಲು ಆಧ್ಯಾತ್ಮಿಕ ಮನಸ್ಸಿನ ಪುರುಷರನ್ನು ಹೇರಳವಾಗಿ ಒದಗಿಸಿದ್ದಾನೆ.b “ಅವರ ಕತ್ತಿಯು ಅಶ್ಶೂರ ದೇಶವನ್ನು ತಿಂದುಬಿಡುವದು” ಎನ್ನುತ್ತದೆ ಮೀಕನ ಪ್ರವಾದನೆ. (ಮೀಕ 5:6) ಹೌದು, ಅವರು ‘ಯುದ್ಧಕ್ಕಾಗಿ ಉಪಯೋಗಿಸುವ ಆಯುಧಗಳಲ್ಲಿ’ ಒಂದು “ಪವಿತ್ರಾತ್ಮದ ಕತ್ತಿ” ಅಂದರೆ ದೇವರ ವಾಕ್ಯ ಆಗಿದೆ.—2 ಕೊರಿಂ. 10:4; ಎಫೆ. 6:17.
17. ನಾವೀಗ ಪರಿಗಣಿಸಿರುವ ವೃತ್ತಾಂತದಿಂದ ಹಿರಿಯರು ಯಾವ ನಾಲ್ಕು ಪಾಠಗಳನ್ನು ಕಲಿಯಬಲ್ಲರು?
17 ಈ ಲೇಖನ ಓದುತ್ತಿರುವ ಸಭಾ ಹಿರಿಯರು ಈಗತಾನೇ ಚರ್ಚಿಸಿರುವ ವೃತ್ತಾಂತದಿಂದ ಈ ಕೆಲವು ಉಪಯುಕ್ತ ಪಾಠಗಳನ್ನು ಕಲಿಯಬಹುದು: (1) “ಅಶ್ಶೂರ್ಯರು” ಮುಂದೆ ನಡೆಸಲಿರುವ ದಾಳಿಗಾಗಿ ನಾವು ಸಿದ್ಧರಾಗಲು ತೆಗೆದುಕೊಳ್ಳಬಹುದಾದ ಅತ್ಯುತ್ತಮ ಹೆಜ್ಜೆಯೆಂದರೆ, ದೇವರ ಮೇಲೆ ನಮಗಿರುವ ನಂಬಿಕೆಯನ್ನು ಬಲಪಡಿಸುವುದು ಮತ್ತು ನಂಬಿಕೆ ಬಲಪಡಿಸಿಕೊಳ್ಳುವಂತೆ ನಮ್ಮ ಸಹೋದರರಿಗೆ ನೆರವಾಗುವುದೇ. (2) “ಅಶ್ಶೂರ್ಯರು” ದಾಳಿಮಾಡುವಾಗ ಯೆಹೋವನು ನಮ್ಮನ್ನು ನಿಶ್ಚಯವಾಗಿ ಪಾರುಗೊಳಿಸುವನೆಂಬ ಪೂರ್ಣ ಖಾತ್ರಿ ಹಿರಿಯರಿಗೆ ಇರಲೇಬೇಕು. (3) ಆ ಸಮಯದಲ್ಲಿ ನಾವು ಯೆಹೋವನ ಸಂಘಟನೆಯಿಂದ ಪಡೆಯುವಂಥ ಜೀವರಕ್ಷಕ ನಿರ್ದೇಶನವು ಮಾನವ ದೃಷ್ಟಿಕೋನದಲ್ಲಿ ಪ್ರಾಯೋಗಿಕವೆಂಬಂತೆ ತೋರಲಿಕ್ಕಿಲ್ಲ. ನಮಗೆ ಸಿಗುವ ಸೂಚನೆಗಳು ಏನೇ ಆಗಿರಲಿ, ಅವು ನಮಗೆ ಒಪ್ಪಿಗೆ ಇರಲಿ ಇಲ್ಲದಿರಲಿ ಅವನ್ನು ಪಾಲಿಸಲು ನಾವೆಲ್ಲರೂ ಸಿದ್ಧರಿರಬೇಕು. (4) ಐಹಿಕ ಶಿಕ್ಷಣ, ಭೌತಿಕ ವಿಷಯಗಳು ಇಲ್ಲವೆ ಮಾನವ ಸಂಸ್ಥೆಗಳಲ್ಲಿ ಭರವಸೆಯಿಡುತ್ತಿರುವ ಕ್ರೈಸ್ತನು ತನ್ನ ಆಲೋಚನಾರೀತಿಯನ್ನು ತಿದ್ದಿಕೊಳ್ಳುವ ಸಮಯ ಇದೇ ಆಗಿದೆ. ನಂಬಿಕೆಯಲ್ಲಿ ಈಗ ವಿಚಲಿತರಾಗಿರುವ ಪ್ರತಿಯೊಬ್ಬರಿಗೂ ಸಹಾಯ ಕೊಡಲು ಹಿರಿಯರು ಸಿದ್ಧರಿರಬೇಕು.
18. ಈ ವೃತ್ತಾಂತದ ಕುರಿತು ಮನನಮಾಡುವುದರಿಂದ ನಮಗೆ ಭವಿಷ್ಯದಲ್ಲಿ ಹೇಗೆ ಪ್ರಯೋಜನವಾಗಲಿದೆ?
18 ಹಿಜ್ಕೀಯನ ದಿನದಲ್ಲಿ ಯೆರೂಸಲೇಮಿನೊಳಗೆ ಸಿಕ್ಕಿಬಿದ್ದಿದ್ದ ಯೆಹೂದ್ಯರಂತೆ ದೇವರ ಇಂದಿನ ಸೇವಕರು ತುಂಬ ಅಪಾಯಕಾರಿ ಸನ್ನಿವೇಶದಲ್ಲಿರುವಂತೆ ಕಾಣುವ ಸಮಯ ಬರಲಿದೆ. ಆ ಸಮಯದಲ್ಲಿ ನಾವೆಲ್ಲರೂ ಹಿಜ್ಕೀಯನ ಮಾತುಗಳಿಂದ ಬಲ ಪಡೆದುಕೊಳ್ಳಬೇಕು. ನಾವು ನೆನಪಿನಲ್ಲಿಡೋಣ, ನಮ್ಮ ಶತ್ರುಗಳಿಗೆ ಇರುವುದು “ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು.”—2 ಪೂರ್ವ. 32:8.
a ಯೆಶಾಯ 7:14ರಲ್ಲಿರುವ “ಕನ್ನಿಕೆ” ಎಂಬುದರ ಮೂಲ ಹೀಬ್ರು ಪದವು ‘ವಿವಾಹಿತ ಸ್ತ್ರೀ’ ಎಂಬ ಅರ್ಥವನ್ನೂ ಕೊಡುತ್ತದೆ, ‘ಕನ್ಯೆ’ ಎಂಬ ಅರ್ಥವನ್ನೂ ಕೊಡುತ್ತದೆ. ಹಾಗಾಗಿ, ಆ ಒಂದೇ ಪದವನ್ನು ಯೆಶಾಯನ ಹೆಂಡತಿಗೂ ಯೆಹೂದಿ ಕನ್ಯೆಯಾದ ಮರಿಯಳಿಗೂ ಅನ್ವಯಿಸಬಹುದು.
b ಸಂಖ್ಯೆ ಏಳನ್ನು ಬೈಬಲಿನಲ್ಲಿ ಅನೇಕಬಾರಿ ಸಂಪೂರ್ಣತೆಯನ್ನು ಸೂಚಿಸಲಿಕ್ಕಾಗಿ ಬಳಸಲಾಗಿದೆ. ಸಂಖ್ಯೆ ಎಂಟು (ಏಳಕ್ಕಿಂತ ಒಂದು ಜಾಸ್ತಿ) ಕೆಲವೊಮ್ಮೆ ಸಮೃದ್ಧಿಯನ್ನು ಸೂಚಿಸುತ್ತದೆ.