ಅಧ್ಯಾಯ 72
ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ
ಈ ವ್ಯಕ್ತಿಯು ಯೆಹೋವ ದೇವರಿಗೆ ಏಕೆ ಪ್ರಾರ್ಥಿಸುತ್ತಿದ್ದಾನೆಂದು ನಿಮಗೆ ಗೊತ್ತೋ? ಯೆಹೋವನ ವೇದಿಯ ಮುಂದೆ ಅವನು ಈ ಪತ್ರಗಳನ್ನು ಇಟ್ಟಿರುವುದೇಕೆ? ಈ ವ್ಯಕ್ತಿಯ ಹೆಸರು ಹಿಜ್ಕೀಯ. ಇಸ್ರಾಯೇಲಿನ ದಕ್ಷಿಣದ ಎರಡು ಕುಲಗಳ ಅರಸನೇ ಇವನು. ಇವನು ತುಂಬಾ ತೊಂದರೆಯೊಳಗೆ ಸಿಕ್ಕಿಕೊಂಡಿದ್ದಾನೆ. ಯಾಕೆ?
ಯಾಕೆಂದರೆ ಅಶ್ಶೂರದ ಸೈನ್ಯಗಳು ಈಗಾಗಲೆ ಉತ್ತರದ ಹತ್ತು ಕುಲಗಳನ್ನು ನಾಶಮಾಡಿವೆ. ಆ ಜನರು ಬಹಳ ಕೆಟ್ಟವರಾಗಿದ್ದುದರಿಂದಲೇ ಯೆಹೋವನು ಹೀಗಾಗುವಂತೆ ಬಿಟ್ಟಿದ್ದಾನೆ. ಈಗ ಅಶ್ಶೂರದ ಸೈನ್ಯಗಳು ಎರಡು-ಕುಲಗಳ ರಾಜ್ಯಕ್ಕೆ ವಿರೋಧವಾಗಿ ಯುದ್ಧಮಾಡಲು ಬಂದಿವೆ.
ಅಶ್ಶೂರದ ಅರಸನು ಹಿಜ್ಕೀಯನಿಗೆ ಈಗಷ್ಟೇ ಪತ್ರಗಳನ್ನು ಕಳುಹಿಸಿದ್ದಾನೆ. ಇಲ್ಲಿ ದೇವರ ಮುಂದೆ ಹಿಜ್ಕೀಯನು ಇಟ್ಟಿರುವ ಪತ್ರಗಳು ಅವೇ ಆಗಿವೆ. ಆ ಪತ್ರಗಳಲ್ಲಿ ಯೆಹೋವನನ್ನು ನಿಂದಿಸುವ ಮಾತುಗಳಿವೆ. ಮಾತ್ರವಲ್ಲ, ಹಿಜ್ಕೀಯನು ಶರಣಾಗಬೇಕೆಂದು ಅದರಲ್ಲಿ ಬರೆದಿದೆ. ಆದುದರಿಂದಲೇ ಹಿಜ್ಕೀಯನು ಪ್ರಾರ್ಥಿಸುವುದು: ‘ಯೆಹೋವನೇ, ಅಶ್ಶೂರದ ಅರಸನಿಂದ ನಮ್ಮನ್ನು ರಕ್ಷಿಸು. ಆಗ ನೀನೊಬ್ಬನೇ ದೇವರೆಂಬದನ್ನು ಎಲ್ಲಾ ಜನಾಂಗಗಳು ತಿಳಿದುಕೊಳ್ಳುವುವು.’ ಯೆಹೋವನು ಹಿಜ್ಕೀಯನಿಗೆ ಕಿವಿಗೊಡುವನೋ?
ಹಿಜ್ಕೀಯನು ಒಬ್ಬ ಒಳ್ಳೆಯ ಅರಸ. ಅವನು ಇಸ್ರಾಯೇಲಿನ ಹತ್ತು-ಕುಲಗಳ ರಾಜ್ಯದ ಕೆಟ್ಟ ಅರಸರಂತೆಯಾಗಲಿ ತನ್ನ ಕೆಟ್ಟ ತಂದೆಯಾದ ಅರಸ ಆಹಾಜನಂತಾಗಲಿ ಇಲ್ಲ. ಯೆಹೋವನ ಎಲ್ಲಾ ನಿಯಮಗಳಿಗೆ ಹಿಜ್ಕೀಯನು ಜಾಗ್ರತೆಯಿಂದ ವಿಧೇಯನಾಗಿದ್ದಾನೆ. ಆದುದರಿಂದ ಹಿಜ್ಕೀಯನು ಪ್ರಾರ್ಥನೆಮಾಡಿ ಮುಗಿಸಿದ ಮೇಲೆ ಪ್ರವಾದಿ ಯೆಶಾಯನ ಮೂಲಕ ಯೆಹೋವನು ಈ ಸಂದೇಶವನ್ನು ಕಳುಹಿಸುತ್ತಾನೆ: ‘ಅಶ್ಶೂರದ ಅರಸನು ಯೆರೂಸಲೇಮಿಗೆ ಬರುವುದಿಲ್ಲ. ಅವನ ಸೈನಿಕರಲ್ಲಿ ಯಾರೂ ಅದರ ಸಮೀಪಕ್ಕೂ ಬರುವುದಿಲ್ಲ. ಪಟ್ಟಣಕ್ಕೆ ಒಂದೇ ಒಂದು ಬಾಣವನ್ನಾದರೂ ಎಸೆಯುವುದಿಲ್ಲ.’
ಈ ಪುಟದಲ್ಲಿರುವ ಚಿತ್ರವನ್ನು ನೋಡಿರಿ. ಈ ಮೃತ ಸೈನಿಕರೆಲ್ಲರು ಯಾರೆಂದು ನಿಮಗೆ ತಿಳಿದಿದೆಯೇ? ಅವರು ಅಶ್ಶೂರ್ಯರು. ಯೆಹೋವನು ತನ್ನ ದೂತನನ್ನು ಕಳುಹಿಸಿದ್ದನು. ಆ ದೂತನು ಒಂದೇ ರಾತ್ರಿಯಲ್ಲಿ 1,85,000 ಅಶ್ಶೂರ್ಯರ ಸೈನಿಕರನ್ನು ಹತಮಾಡಿದನು. ಆಗ ಅಶ್ಶೂರದ ರಾಜನು ತನ್ನ ಪ್ರಯತ್ನವನ್ನು ಕೈಬಿಟ್ಟು ಸ್ವದೇಶಕ್ಕೆ ಹಿಂದಿರುಗುತ್ತಾನೆ.
ಹೀಗೆ, ಎರಡು-ಕುಲಗಳ ರಾಜ್ಯವು ರಕ್ಷಿಸಲ್ಪಡುತ್ತದೆ. ತುಸು ಕಾಲದ ವರೆಗೆ ಜನರಿಗೆ ಶಾಂತಿ ನೆಮ್ಮದಿ ಇರುತ್ತದೆ. ಆದರೆ ಹಿಜ್ಕೀಯನು ಸತ್ತ ಬಳಿಕ ಅವನ ಮಗನಾದ ಮನಸ್ಸೆ ಅರಸನಾಗುತ್ತಾನೆ. ಮನಸ್ಸೆ ಮತ್ತು ಅವನ ಬಳಿಕ ಬಂದ ಆಮೋನ್ ಇವರಿಬ್ಬರೂ ತುಂಬಾ ಕೆಟ್ಟ ಅರಸರು. ಆದುದರಿಂದ ಪುನಃ ದೇಶವು ಪಾತಕ ಮತ್ತು ಹಿಂಸಾಚಾರದಿಂದ ತುಂಬುತ್ತದೆ. ಅರಸ ಆಮೋನನು ತನ್ನ ಸ್ವಂತ ಸೇವಕರಿಂದ ಕೊಲ್ಲಲ್ಪಟ್ಟಾಗ, ಅವನ ಮಗನಾದ ಯೋಷೀಯನು ಎರಡು-ಕುಲಗಳ ರಾಜ್ಯದ ಅರಸನಾಗುತ್ತಾನೆ.