ವೃದ್ಧರನ್ನು ಗೌರವಿಸಿ
‘ನೀವು ವೃದ್ಧರನ್ನು ಸನ್ಮಾನಿಸಬೇಕು.’—ಯಾಜ. 19:32.
1. ಇಂದು ಮಾನವರು ಎಂಥ ದುಃಖಕರ ಪರಿಸ್ಥಿತಿಯಲ್ಲಿದ್ದಾರೆ?
ಮಾನವರು ಮುದುಕರಾಗಿ ಶಕ್ತಿಗುಂದಿ ನಾನಾ ರೀತಿಯ ನೋವು ಅನುಭವಿಸಬೇಕೆಂದು ಯೆಹೋವನು ಎಂದೂ ಬಯಸಲಿಲ್ಲ. ಸ್ತ್ರೀಪುರುಷರೆಲ್ಲರೂ ಪರದೈಸಿನಲ್ಲಿ ಸಂಪೂರ್ಣ ಆರೋಗ್ಯದಿಂದ ನಳನಳಿಸಬೇಕು ಎನ್ನುವುದೇ ಆತನ ಉದ್ದೇಶವಾಗಿತ್ತು. ಆದರೆ ಇಂದು ಪರಿಸ್ಥಿತಿ ಆತನು ನೆನಸಿದಂತೆ ಇಲ್ಲ. “ಇಡೀ ಸೃಷ್ಟಿಯು . . . ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.” (ರೋಮ. 8:22) ಪಾಪದ ಧ್ವಂಸಕಾರಕ ಪರಿಣಾಮಗಳಿಂದ ಮಾನವರು ನರಳುವುದನ್ನು ನೋಡುವಾಗ ದೇವರಿಗೆ ಹೇಗನಿಸಬಹುದೆಂದು ಸ್ವಲ್ಪ ಊಹಿಸಿ. ಅದೂ ಅಲ್ಲದೆ ಆಸರೆ ಬೇಕಾಗುವ ಸಮಯದಲ್ಲೇ ವೃದ್ಧರನ್ನು ಅನೇಕರು ಕೈಬಿಡುತ್ತಿರುವುದನ್ನು ನೋಡುವಾಗ ಆತನಿಗೆ ಇನ್ನೆಷ್ಟು ಸಂಕಟವಾಗುತ್ತದೆಂದು ಯೋಚಿಸಿ.—ಕೀರ್ತ. 39:5; 2 ತಿಮೊ. 3:3.
2. ಸಭೆಯಲ್ಲಿ ವೃದ್ಧರು ತಮ್ಮೊಂದಿಗೆ ಇರುವುದಕ್ಕಾಗಿ ಕ್ರೈಸ್ತರು ತುಂಬ ಕೃತಜ್ಞರಾಗಿದ್ದಾರೆ ಏಕೆ?
2 ಆದರೆ ಯೆಹೋವನ ಜನರಾದ ನಾವು ಸಭೆಯಲ್ಲಿ ವೃದ್ಧರು ನಮ್ಮೊಂದಿಗಿರುವುದಕ್ಕಾಗಿ ತುಂಬ ಸಂತೋಷಿತರು. ಅವರಲ್ಲಿರುವ ವಿವೇಕದಿಂದ ನಾವು ಪ್ರಯೋಜನ ಪಡೆಯುತ್ತೇವೆ. ಅವರ ನಂಬಿಗಸ್ತ ಮಾದರಿಯಿಂದ ಹುರಿದುಂಬಿಸಲ್ಪಡುತ್ತೇವೆ. ನಮ್ಮಲ್ಲಿ ಅನೇಕರು ಇಂಥ ಪ್ರಿಯ ವೃದ್ಧರಿಗೆ ಸಂಬಂಧಿಕರು. ಆದರೆ ನಾವು ಸಂಬಂಧಿಕರಾಗಿರಲಿ ಇಲ್ಲದಿರಲಿ ವೃದ್ಧ ಸಹೋದರ ಸಹೋದರಿಯರ ಯೋಗಕ್ಷೇಮದಲ್ಲಿ ಮುತುವರ್ಜಿ ವಹಿಸುತ್ತೇವೆ. (ಗಲಾ. 6:10; 1 ಪೇತ್ರ 1:22) ಆದ್ದರಿಂದ ದೇವರು ವೃದ್ಧರನ್ನು ಹೇಗೆ ಕಾಣುತ್ತಾನೆ ಎಂಬುದನ್ನು ನಾವೀಗ ಪರಿಗಣಿಸುವುದು ಪ್ರಯೋಜನಕರ. ನಮ್ಮ ಪ್ರೀತಿಪಾತ್ರರಾದ ವೃದ್ಧ ಸಹೋದರ ಸಹೋದರಿಯರನ್ನು ನೋಡಿಕೊಳ್ಳುವುದರಲ್ಲಿ ಕುಟುಂಬ ಸದಸ್ಯರಿಗೆ ಮತ್ತು ಸಭೆಗೆ ಇರುವ ಜವಾಬ್ದಾರಿಗಳನ್ನು ಕೂಡ ಚರ್ಚಿಸೋಣ.
“ನನ್ನನ್ನು ಧಿಕ್ಕರಿಸಬೇಡ”
3, 4. (ಎ) ಕೀರ್ತನೆ 71ರ ಲೇಖಕನು ಯೆಹೋವನಲ್ಲಿ ಏನೆಂದು ಮೊರೆಯಿಟ್ಟನು? (ಬಿ) ಸಭೆಯ ಹಿರಿಯ ಸದಸ್ಯರು ದೇವರಲ್ಲಿ ಏನನ್ನು ಕೇಳಿಕೊಳ್ಳಸಾಧ್ಯವಿದೆ?
3 “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ” ಎಂದು ದೇವರಲ್ಲಿ ಮೊರೆಯಿಟ್ಟನು ಕೀರ್ತನೆ 71ರ ಲೇಖಕನು. ಪ್ರಾಯಶಃ ಈ ಕೀರ್ತನೆಯು “ದಾವೀದನ ಕೀರ್ತನೆ” ಎಂಬ ಮೇಲ್ಬರಹವಿರುವ 70ನೇ ಕೀರ್ತನೆಯ ಮುಂದುವರಿಕೆಯಾಗಿದೆ. ಹಾಗಾಗಿ ಕೀರ್ತನೆ 71:9ರಲ್ಲಿರುವ ಮೇಲಿನ ಆ ಬಿನ್ನಹವನ್ನು ಮಾಡಿದ್ದು ದಾವೀದನಾಗಿರಬೇಕು. ಅವನು ತಾರುಣ್ಯದಿಂದ ವೃದ್ಧಾಪ್ಯದ ವರೆಗೂ ದೇವರಿಗೆ ಸೇವೆಸಲ್ಲಿಸಿದನು. ಯೆಹೋವನು ಅವನನ್ನು ಅದ್ಭುತ ವಿಧಗಳಲ್ಲಿ ಬಳಸಿದನು. (1 ಸಮು. 17:33-37, 51; 1 ಅರ. 2:1-3, 10) ಹಾಗಿದ್ದರೂ ದಾವೀದನು ಇಳಿವಯಸ್ಸಿನಲ್ಲಿದ್ದಾಗ ತನಗೆ ಕೃಪೆತೋರಿಸುವಂತೆ ಯೆಹೋವನಲ್ಲಿ ಬೇಡಿಕೊಂಡನು.—ಕೀರ್ತನೆ 71:17, 18 ಓದಿ.
4 ಇಂದು ಅನೇಕರು ದಾವೀದನಂತೆಯೇ ಇದ್ದಾರೆ. ಎಷ್ಟೇ ವಯಸ್ಸಾಗಿದ್ದರೂ, ‘ಕಷ್ಟದ ದಿನಗಳನ್ನು’ ಎದುರಿಸುತ್ತಿದ್ದರೂ ಅವರು ದೇವರನ್ನು ಸ್ತುತಿಸಲು ತಮ್ಮಿಂದ ಏನೆಲ್ಲಾ ಆಗುತ್ತದೊ ಅದನ್ನು ಮಾಡುತ್ತಿದ್ದಾರೆ. (ಪ್ರಸಂ. 12:1-7) ಅನೇಕರಿಗೆ ಯಾವುದೇ ಕೆಲಸವನ್ನು, ಸೇವೆಯನ್ನು ಕೂಡ ಮೊದಲಿನಷ್ಟು ಮಾಡಲು ಆಗದಿರಬಹುದು. ಹಾಗಿದ್ದರೂ ಅವರು ದಾವೀದನ ಹಾಗೆ ಯೆಹೋವನ ಆಶೀರ್ವಾದಕ್ಕಾಗಿ ಮತ್ತು ಆತನು ತಮ್ಮನ್ನು ಸದಾ ಆರೈಕೆ ಮಾಡುವಂತೆ ಪ್ರಾರ್ಥಿಸಸಾಧ್ಯವಿದೆ. ತಮ್ಮ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಡುತ್ತಾನೆಂಬ ಭರವಸೆ ಸಹ ಅವರಿಗಿರಲಿ. ಅವರು ಕೇಳಿಕೊಳ್ಳುತ್ತಿರುವುದು ಯೋಗ್ಯ ವಿಚಾರಗಳೇ ಆಗಿವೆಯಲ್ಲವೇ? ಅಂಥ ವಿಚಾರಕ್ಕಾಗಿ ದಾವೀದನು ಪ್ರಾರ್ಥಿಸಿದ್ದು ದೇವಪ್ರೇರಣೆಯಿಂದಲೇ.
5. ನಂಬಿಗಸ್ತರಾಗಿರುವ ವೃದ್ಧರನ್ನು ಯೆಹೋವನು ಹೇಗೆ ಕಾಣುತ್ತಾನೆ?
5 ಯೆಹೋವನು ತನಗೆ ನಂಬಿಗಸ್ತರಾಗಿರುವ ವೃದ್ಧರನ್ನು ಬಹು ಅಮೂಲ್ಯರಾಗಿ ಕಾಣುತ್ತಾನೆ ಮತ್ತು ತನ್ನ ಸೇವಕರೆಲ್ಲರೂ ವೃದ್ಧರನ್ನು ಗೌರವಿಸಬೇಕೆಂದು ಅಪೇಕ್ಷಿಸುತ್ತಾನೆ ಎಂಬುದನ್ನು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ. (ಕೀರ್ತ. 22:24-26 ಜ್ಞಾನೋ. 16:31; 20:29) “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು” ಎಂದು ಹೇಳುತ್ತದೆ ಯಾಜಕಕಾಂಡ 19:32. ಹೌದು, ಆ ಮಾತುಗಳು ಬರೆಯಲ್ಪಟ್ಟ ಸಮಯದಲ್ಲಿ ವೃದ್ಧರನ್ನು ಗೌರವಿಸುವುದು ಒಂದು ಗಂಭೀರ ಜವಾಬ್ದಾರಿಯಾಗಿತ್ತು. ಇಂದು ಕೂಡ ಅದು ಗಂಭೀರ ಜವಾಬ್ದಾರಿಯಾಗಿದೆ. ಆದರೆ ವೃದ್ಧರನ್ನು ನೋಡಿಕೊಳ್ಳುವುದು ಯಾರ ಜವಾಬ್ದಾರಿ?
ಕುಟುಂಬಕ್ಕಿರುವ ಜವಾಬ್ದಾರಿ
6. ಯೇಸು ತನ್ನ ತಾಯಿಯನ್ನು ನೋಡಿಕೊಳ್ಳುವುದರಲ್ಲಿ ಯಾವ ಮಾದರಿಯಿಟ್ಟನು?
6 “ನಿನ್ನ ತಂದೆತಾಯಿಗಳನ್ನು ಸನ್ಮಾನಿಸು” ಎಂದು ದೇವರ ವಾಕ್ಯ ನಮಗನ್ನುತ್ತದೆ. (ವಿಮೋ. 20:12; ಎಫೆ. 6:2) ಹೆತ್ತವರ ಆರೈಕೆಮಾಡದೆ ಅವರನ್ನು ಬಿಟ್ಟುಬಿಡುತ್ತಿದ್ದ ಫರಿಸಾಯರನ್ನೂ ಶಾಸ್ತ್ರಿಗಳನ್ನೂ ಯೇಸು ಖಂಡಿಸುವ ಮೂಲಕ ಆ ಆಜ್ಞೆ ಎಷ್ಟು ಪ್ರಾಮುಖ್ಯ ಎಂಬುದಕ್ಕೆ ಒತ್ತುಕೊಟ್ಟನು. (ಮಾರ್ಕ 7:5, 10-13) ಹೆತ್ತವರನ್ನು ಗೌರವಿಸುವುದರಲ್ಲಿ ಸ್ವತಃ ಯೇಸುವೇ ಒಳ್ಳೇ ಮಾದರಿಯಿಟ್ಟನು. ಉದಾಹರಣೆಗೆ, ಯಾತನಾಕಂಬದ ಮೇಲೆ ಇನ್ನೇನು ಸಾಯಲಿದ್ದಾಗ ಸಹ ಯೇಸು ತನ್ನ ತಾಯಿಯ ಬಗ್ಗೆ ಚಿಂತಿಸುತ್ತಿದ್ದನು. ಪ್ರಾಯಶಃ ಅಷ್ಟರಲ್ಲಿ ವಿಧವೆಯಾಗಿದ್ದ ಆಕೆಯನ್ನು ತನ್ನ ನೆಚ್ಚಿನ ಶಿಷ್ಯ ಯೋಹಾನನ ಕೈಗೊಪ್ಪಿಸಿ ಜೋಕೆ ವಹಿಸುವಂತೆ ಕೇಳಿಕೊಂಡನು.—ಯೋಹಾ. 19:26, 27.
7. (ಎ) ಹೆತ್ತವರನ್ನು ನೋಡಿಕೊಳ್ಳುವ ವಿಚಾರದಲ್ಲಿ ಅಪೊಸ್ತಲ ಪೌಲನು ಯಾವ ತತ್ವವನ್ನು ತಿಳಿಸಿದನು? (ಬಿ) ಯಾವುದನ್ನು ಚರ್ಚಿಸುತ್ತಿದ್ದಾಗ ಪೌಲನು ಆ ಮಾತನ್ನು ಹೇಳಿದನು?
7 ಕ್ರೈಸ್ತರು ತಮ್ಮ ಕುಟುಂಬದವರಿಗೆ ಅಗತ್ಯವಿರುವುದನ್ನು ಒದಗಿಸಬೇಕೆಂದು ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಬರೆದನು. (1 ತಿಮೊಥೆಯ 5:4, 8, 16 ಓದಿ.) ಆ ಮಾತನ್ನು ಪೌಲನು ಯಾವಾಗ ಹೇಳಿದನು ಎಂಬುದರ ಪೂರ್ವಾಪರ ಗಮನಿಸಿ. ಸಭೆಯಿಂದ ಆರ್ಥಿಕ ಸಹಾಯವನ್ನು ಪಡೆಯಲು ಯಾರು ಅರ್ಹರು, ಯಾರು ಅರ್ಹರಲ್ಲ ಎಂಬುದನ್ನು ಚರ್ಚಿಸುವಾಗ ಅದನ್ನು ಹೇಳಿದನು. ವೃದ್ಧ ವಿಧವೆಯರನ್ನು ನೋಡಿಕೊಳ್ಳುವ ಜವಾಬ್ದಾರಿಯು ಕ್ರೈಸ್ತರಾಗಿರುವ ಅವರ ಮಕ್ಕಳು, ಮೊಮ್ಮಕ್ಕಳು ಅಥವಾ ಯಾರಾದರೂ ಸಂಬಂಧಿಕರು ಇರುವುದಾದರೆ ಅವರಿಗಿದೆ ಎಂದು ಪೌಲ ಸ್ಪಷ್ಟಪಡಿಸಿದನು. ಇದರಿಂದ ಸಭೆಗೆ ಅನಗತ್ಯ ಖರ್ಚು ಬೀಳುವುದು ತಪ್ಪುತ್ತದೆ ಎಂದು ಹೇಳಿದನು. ಇಂದು ಕೂಡ ಕ್ರೈಸ್ತರಾದ ನಾವು “ದೇವಭಕ್ತಿಯನ್ನು” ಅಭ್ಯಾಸಿಸುವ ಒಂದು ವಿಧವು ನಮ್ಮ ವೃದ್ಧ ಸಂಬಂಧಿಕರ ಆರೈಕೆ ಮಾಡುವುದೇ.
8. ವೃದ್ಧ ಹೆತ್ತವರನ್ನು ನೋಡಿಕೊಳ್ಳುವ ವಿಷಯದಲ್ಲಿ ಬೈಬಲಿನಲ್ಲಿ ನಿರ್ದಿಷ್ಟ ಆಜ್ಞೆಗಳನ್ನು ಕೊಡಲಾಗಿಲ್ಲ ಏಕೆ?
8 ಸರಳವಾಗಿ ಹೇಳುವುದಾದರೆ ಪ್ರಾಯಕ್ಕೆ ಬಂದಿರುವ ಮಕ್ಕಳಿಗೆ ತಮ್ಮ ಹೆತ್ತವರ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಪೌಲನು ‘ವಿಶ್ವಾಸಿಯಾದ ಸಂಬಂಧಿಕರ’ ಬಗ್ಗೆ ಚರ್ಚಿಸುತ್ತಿದ್ದನು ನಿಜ. ಆದರೆ ಹೆತ್ತವರು ಕ್ರೈಸ್ತ ಸಭೆಯ ಸದಸ್ಯರಾಗಿರದಿರುವಲ್ಲಿ ಕೂಡ ಅವರನ್ನು ಕಡೆಗಣಿಸಬಾರದು. ವೃದ್ಧ ಹೆತ್ತವರನ್ನು ಹೇಗೆ ನೋಡಿಕೊಳ್ಳಬೇಕೆಂದು ಪ್ರತಿ ಕುಟುಂಬವು ಸ್ವಂತ ನಿರ್ಣಯ ಮಾಡಬೇಕು. ಏಕೆಂದರೆ ಎಲ್ಲರ ಕುಟುಂಬ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಂದು ಕುಟುಂಬದಲ್ಲಿರುವ ಹೆತ್ತವರ ಅಗತ್ಯಗಳು, ಆರೋಗ್ಯ ಸ್ಥಿತಿ, ಸ್ವಭಾವ ಭಿನ್ನ ಭಿನ್ನವಾಗಿರುತ್ತವೆ. ಕೆಲವರಿಗೆ ಅನೇಕ ಮಕ್ಕಳು ಇರಬಹುದು, ಇನ್ನಿತರರಿಗೆ ಒಬ್ಬನೇ ಮಗ ಅಥವಾ ಮಗಳು ಇರಬಹುದು. ಕೆಲವು ಹೆತ್ತವರು ಸರ್ಕಾರದಿಂದ ಧನಸಹಾಯ ಪಡೆಯುವ ಸ್ಥಿತಿಯಲ್ಲಿರುತ್ತಾರೆ, ಆದರೆ ಇನ್ನಿತರರಿಗೆ ಹಾಗಾಗುವುದಿಲ್ಲ. ಅವರ ಇಷ್ಟಾನಿಷ್ಟಗಳು ಕೂಡ ಬೇರೆಯಾಗಿರುತ್ತವೆ. ಆದ್ದರಿಂದ ಸಹೋದರ ಸಹೋದರಿಯರು ತಮ್ಮ ವೃದ್ಧ ಹೆತ್ತವರ ಅಥವಾ ಸಂಬಂಧಿಕರ ಆರೈಕೆ ಮಾಡುವ ವಿಧಾನವನ್ನು ನಾವು ಟೀಕಿಸುವುದು ವಿವೇಕಯುತವೂ ಅಲ್ಲ ಪ್ರೀತಿಪರವೂ ಅಲ್ಲ. ಬೈಬಲ್ ಆಧರಿತವಾಗಿ ತಕ್ಕೊಳ್ಳುವ ಯಾವುದೇ ನಿರ್ಣಯವನ್ನು ಯೆಹೋವನು ಆಶೀರ್ವದಿಸಿ ಅದು ಯಶಸ್ವಿಯಾಗುವಂತೆ ಮಾಡಶಕ್ತನು. ಮೋಶೆಯ ಸಮಯದಿಂದಲೂ ಇದು ಸತ್ಯವಾಗಿದೆಯಲ್ಲವೇ?—ಅರ. 11:23.
9-11. (ಎ) ಕೆಲವರು ಯಾವ ಕಷ್ಟಕರ ನಿರ್ಣಯಗಳನ್ನು ಮಾಡಬೇಕಾಗಬಹುದು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.) (ಬಿ) ಪೂರ್ಣ ಸಮಯದ ಸೇವೆಯಲ್ಲಿರುವವರು ಆತುರಪಟ್ಟು ತಮ್ಮ ಸೇವಾಸುಯೋಗವನ್ನು ಬಿಡಬಾರದು ಏಕೆ? ಉದಾಹರಣೆ ಕೊಡಿ.
9 ಮಕ್ಕಳು ಹೆತ್ತವರಿಂದ ದೂರ ವಾಸಿಸುತ್ತಿರುವಲ್ಲಿ ವೃದ್ಧ ಹೆತ್ತವರಿಗೆ ಅಗತ್ಯವಿರುವ ಸಹಾಯ ಮಾಡುವುದು ಮಕ್ಕಳಿಗೆ ಕಷ್ಟವಾಗಬಹುದು. ಇದ್ದಕ್ಕಿದ್ದಂತೆ ಹೆತ್ತವರ ಆರೋಗ್ಯ ಹಾಳಾದರೆ, ಅವರು ಬಿದ್ದು ಮೂಳೆ ಮುರಿದುಕೊಂಡರೆ ಅಥವಾ ಇತರ ಗಂಭೀರ ಸಮಸ್ಯೆಯಾದರೆ ದೂರದಲ್ಲಿರುವ ಮಕ್ಕಳು ಅಪ್ಪಅಮ್ಮನನ್ನು ನೋಡಲು ಕೂಡಲೆ ಹೊರಟು ಬರಬೇಕಾಗಬಹುದು. ಬಳಿಕ ಸ್ವಲ್ಪ ಸಮಯ ಅಲ್ಲೇ ಇದ್ದು ನೋಡಿಕೊಳ್ಳಬೇಕಾಗಬಹುದು ಅಥವಾ ದೀರ್ಘಸಮಯ ಅಲ್ಲೇ ಉಳಿಯಬೇಕಾಗಬಹುದು.a
10 ಮುಖ್ಯವಾಗಿ ದೇವಪ್ರಭುತ್ವಾತ್ಮಕ ನೇಮಕದ ಕಾರಣ ಮನೆಯಿಂದ ದೂರ ಸೇವೆ ಸಲ್ಲಿಸುತ್ತಿರುವ ಪೂರ್ಣ ಸಮಯದ ಸೇವಕರು ತಮ್ಮ ಹೆತ್ತವರಿಗೆ ಬೇಕಾದ ಸಹಾಯ ನೀಡಲಿಕ್ಕಾಗಿ ಹೆಚ್ಚು ಕಷ್ಟಕರ ನಿರ್ಣಯಗಳನ್ನು ಮಾಡಬೇಕಾಗಬಹುದು. ಬೆತೆಲಿನಲ್ಲಿ ಸೇವೆ ಮಾಡುತ್ತಿರುವ ಅಥವಾ ಮಿಷನರಿಗಳಾಗಿ, ಸಂಚರಣ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿರುವ ಎಲ್ಲರೂ ತಮ್ಮ ನೇಮಕವನ್ನು ಯೆಹೋವನಿಂದ ಸಿಕ್ಕಿದ ದೊಡ್ಡ ಆಶೀರ್ವಾದವಾಗಿ ಕಾಣುತ್ತಾರೆ. ಹಾಗಿದ್ದರೂ ತಂದೆತಾಯಿ ಅಸ್ವಸ್ಥರಾದರೆ ಅವರ ಮೊದಲ ಪ್ರತಿಕ್ರಿಯೆ, ‘ನಾವು ನಮ್ಮ ನೇಮಕ ಬಿಟ್ಟು ಮನೆಗೆ ಹಿಂದಿರುಗಿ ಅಪ್ಪಅಮ್ಮನನ್ನು ನೋಡಿಕೊಳ್ಳಬೇಕು’ ಎಂದಾಗಿರುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಹೆತ್ತವರಿಗೆ ನಿಜವಾಗಿ ಏನು ಅವಶ್ಯ ಅಥವಾ ಅವರ ಇಚ್ಛೆ ಏನೆಂದು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವುದು ಉತ್ತಮ. ಆತುರಪಟ್ಟು ಯಾರೂ ತಮ್ಮ ಸೇವಾಸುಯೋಗಗಳನ್ನು ಬಿಟ್ಟು ಬಿಡಬಾರದು. ಯಾವಾಗಲೂ ಹಾಗೆ ಮಾಡಬೇಕಾದ ಅಗತ್ಯವೂ ಇರಲಿಕ್ಕಿಲ್ಲ. ಹೆತ್ತವರಿಗಿರುವ ಆರೋಗ್ಯ ಸಮಸ್ಯೆ ಸ್ವಲ್ಪ ದಿನಗಳಲ್ಲಿ ಸರಿಹೋಗುವಂಥದ್ದೊ? ಅಪ್ಪಅಮ್ಮ ಇರುವ ಸಭೆಯಲ್ಲಿ ಯಾರಾದರೂ ಸಹಾಯ ಮಾಡಲು ಸಿದ್ಧರಿದ್ದಾರೊ? ಇದನ್ನು ಕೂಡ ಪರಿಗಣಿಸುವುದು ಒಳ್ಳೇದು.—ಜ್ಞಾನೋ. 21:5.
11 ಇಬ್ಬರು ಅಣ್ಣತಮ್ಮಂದಿರ ಉದಾಹರಣೆಯನ್ನು ಗಮನಿಸಿ. ಚಿಕ್ಕವನು ದಕ್ಷಿಣ ಅಮೆರಿಕದಲ್ಲಿ ಮಿಷನರಿಯಾಗಿ ಸೇವೆ ಮಾಡುತ್ತಿದ್ದನು. ದೊಡ್ಡವನು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಮಾಡುತ್ತಿದ್ದನು. ಜಪಾನಿನಲ್ಲಿದ್ದ ಅವರ ವೃದ್ಧ ಹೆತ್ತವರಿಗೆ ಸಹಾಯದ ಅಗತ್ಯವಿದ್ದಾಗ, ಅವರಿಗೆ ಯಾವ ಸಹಾಯ ಬೇಕಿದೆ, ಹೇಗೆ ಅದನ್ನು ಒದಗಿಸುವುದೆಂದು ನೋಡಲು ಅಣ್ಣತಮ್ಮಂದಿರು ತಮ್ಮ ಹೆಂಡತಿಯರ ಸಹಿತ ದೂರ ಪ್ರಯಾಣ ಮಾಡಿ ಮನೆಗೆ ಬಂದರು. ಸ್ವಲ್ಪ ಸಮಯದ ನಂತರ, ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಂಪತಿ ತಮ್ಮ ನೇಮಕವನ್ನು ಬಿಟ್ಟು ಅಲ್ಲೇ ಇದ್ದು ಅಪ್ಪಅಮ್ಮನನ್ನು ನೋಡಿಕೊಳ್ಳುವುದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರು. ಆಗ ಒಂದು ಫೋನ್ ಕರೆ ಬಂತು. ಅದು ಹೆತ್ತವರ ಸಭೆಯ ಹಿರಿಯ ಮಂಡಳಿಯ ಸಂಯೋಜಕನಿಂದ. ಆ ಸಭೆಯ ಹಿರಿಯರೆಲ್ಲರು ಇವರ ಸನ್ನಿವೇಶದ ಕುರಿತು ಚರ್ಚಿಸಿದ್ದರು ಮತ್ತು ಆ ದಂಪತಿ ಮಿಷನರಿ ಸೇವೆಯನ್ನು ಮುಂದುವರಿಸಬೇಕೆಂದು ಬಯಸಿದರು. ಅವರು ಮಾಡುತ್ತಿದ್ದ ಸೇವೆಯನ್ನು ಮಾನ್ಯಮಾಡಿದ ಹಿರಿಯರು ವೃದ್ಧ ಹೆತ್ತವರಿಗೆ ಬೇಕಾದ ಸಹಾಯ ನೀಡಲು ಮುಂದಾದರು. ಹಿರಿಯರು ಪ್ರೀತಿಯಿಂದ ನೀಡಿದ ಸಹಾಯಕ್ಕಾಗಿ ಆ ಕುಟುಂಬದವರೆಲ್ಲ ತುಂಬ ಕೃತಜ್ಞರಾಗಿದ್ದರು.
12. ವೃದ್ಧರನ್ನು ನೋಡಿಕೊಳ್ಳುವ ವಿಷಯದಲ್ಲಿ ನಿರ್ಣಯಗಳನ್ನು ಮಾಡುವಾಗ ಕ್ರೈಸ್ತ ಕುಟುಂಬವು ಏನನ್ನು ಖಚಿತಪಡಿಸಿಕೊಳ್ಳಬೇಕು?
12 ವೃದ್ಧ ಹೆತ್ತವರನ್ನು ಪರಾಂಬರಿಸಲು ಯಾವುದೇ ನಿರ್ಣಯವನ್ನು ತಕ್ಕೊಳ್ಳುವಾಗ ಅದು ದೇವರ ಹೆಸರಿಗೆ ಗೌರವ ತರುತ್ತದೆ ಎಂಬುದನ್ನು ಕುಟುಂಬದವರೆಲ್ಲರು ಖಚಿತಪಡಿಸಿಕೊಳ್ಳಬೇಕು. ಯೇಸುವಿನ ದಿನದಲ್ಲಿದ್ದ ಧಾರ್ಮಿಕ ಮುಖಂಡರಂತೆ ನಾವೆಂದೂ ಇರಬಾರದು. (ಮತ್ತಾ. 15:3-6) ನಾವು ಮಾಡುವ ನಿರ್ಣಯಗಳು ಯೆಹೋವನಿಗೂ ಸಭೆಗೂ ಘನತೆ ತರಬೇಕೆಂಬುದು ನಮ್ಮ ಆಶಯವಾಗಿರಬೇಕು.—2 ಕೊರಿಂ. 6:3.
ಸಭೆಯ ಜವಾಬ್ದಾರಿ
13, 14. ವೃದ್ಧರ ಆರೈಕೆ ಮಾಡುವುದರಲ್ಲಿ ಸಭೆಗಳು ಸಹಾಯ ನೀಡಬೇಕೆಂದು ಬೈಬಲ್ ಹೇಗೆ ತೋರಿಸುತ್ತದೆ?
13 ಹಿಂದೆ ತಿಳಿಸಲಾದ ಸಭೆಯವರಂತೆ ಎಲ್ಲರೂ ಪೂರ್ಣ ಸಮಯದ ಸೇವಕರಿಗೆ ಸಹಾಯ ಮಾಡಲು ಶಕ್ತರಾಗಿರುವುದಿಲ್ಲ. ಹಾಗಿದ್ದರೂ ವೃದ್ಧರಾಗಿರುವ ಆದರ್ಶ ಸಹೋದರ ಸಹೋದರಿಯರಿಗೆ ನೆರವು ನೀಡಲು ಸಭೆಗಳು ಸಾಧ್ಯವಾದುದ್ದೆಲ್ಲವನ್ನು ಮಾಡಬೇಕೆಂದು ಬೈಬಲ್ ತೋರಿಸುತ್ತದೆ. ಒಂದನೇ ಶತಮಾನದ ಯೆರೂಸಲೇಮಿನ ಸಭೆಯಲ್ಲಿ “ಕೊರತೆಯಲ್ಲಿದ್ದವನು ಒಬ್ಬನೂ ಇರಲಿಲ್ಲ.” ಇದರರ್ಥ ಎಲ್ಲರೂ ಶ್ರೀಮಂತರಾಗಿದ್ದರು ಎಂದಲ್ಲ. ಕೆಲವರು ಬಡವರಾಗಿದ್ದರು ಆದರೆ ಎಲ್ಲವನ್ನೂ “ಪ್ರತಿಯೊಬ್ಬರ ಆವಶ್ಯಕತೆಗನುಸಾರ ಹಂಚಿಕೊಡಲಾಗುತ್ತಿತ್ತು.” (ಅ. ಕಾ. 4:34, 35) ತದನಂತರ ಆ ಸಭೆಯಲ್ಲಿ ಒಂದು ಗಂಭೀರ ಸಮಸ್ಯೆ ತಲೆದೋರಿತು. ಕೆಲವು “ವಿಧವೆಯರನ್ನು ದೈನಂದಿನ ಆಹಾರದ ವಿತರಣೆಯಲ್ಲಿ ಅಲಕ್ಷಿಸಲಾಗುತ್ತಿತ್ತು.” ಆಗ ಅಪೊಸ್ತಲರು ಏನು ಮಾಡಿದರು? ವಿಧವೆಯರ ಅಗತ್ಯಗಳು ಸಮರ್ಪಕವಾಗಿ ಸಮಾನವಾಗಿ ಪೂರೈಸಲ್ಪಡುವಂತೆ ನೋಡಿಕೊಳ್ಳಲು ಅರ್ಹ ಪುರುಷರನ್ನು ನೇಮಿಸಿದರು. (ಅ. ಕಾ. 6:1-5) ಕ್ರಿ.ಶ. 33ರಲ್ಲಿ ನಾನಾ ದೇಶಗಳಿಂದ ಯೆರೂಸಲೇಮಿಗೆ ಬಂದಿದ್ದವರಲ್ಲಿ ಕ್ರೈಸ್ತರಾದ ಅನೇಕರು ಆಧ್ಯಾತ್ಮಿಕವಾಗಿ ಬಲಗೊಳ್ಳಲಿಕ್ಕಾಗಿ ಸ್ವಲ್ಪ ಕಾಲ ಅಲ್ಲೇ ಉಳಿದಿದ್ದರಿಂದ ಪ್ರತಿದಿನ ಆಹಾರ ಹಂಚುವ ಆ ಏರ್ಪಾಡು ಸ್ವಲ್ಪ ಸಮಯಕ್ಕಾಗಿ ಮಾತ್ರ ಇತ್ತು. ಹಾಗಿದ್ದರೂ ಈ ಸನ್ನಿವೇಶದಲ್ಲಿ ಅಪೊಸ್ತಲರು ತಕ್ಕೊಂಡ ಹೆಜ್ಜೆಯು ಅಗತ್ಯದಲ್ಲಿರುವವರನ್ನು ನೋಡಿಕೊಳ್ಳುವುದರಲ್ಲಿ ಸಭೆಯು ಸಹಾಯ ನೀಡಬಲ್ಲದೆಂದು ತೋರಿಸುತ್ತದೆ.
14 ಯಾವ ಸನ್ನಿವೇಶದಲ್ಲಿರುವ ಕ್ರೈಸ್ತ ವಿಧವೆಯರು ಸಭೆಯಿಂದ ಭೌತಿಕ ಸಹಾಯ ಪಡೆಯಲು ಅರ್ಹರೆಂದು ಪೌಲನು ತಿಮೊಥೆಯನಿಗೆ ವಿವರಿಸಿದನು. (1 ತಿಮೊ. 5:3-16) ಅದೇ ರೀತಿ ಯಾಕೋಬನು, ಸಂಕಟದಲ್ಲಿರುವ ಅಥವಾ ಅಗತ್ಯದಲ್ಲಿರುವ ಅನಾಥರನ್ನು, ವಿಧವೆಯರನ್ನು, ಮತ್ತಿತರರನ್ನು ನೋಡಿಕೊಳ್ಳುವ ಜವಾಬ್ದಾರಿ ಕ್ರೈಸ್ತರಿಗಿದೆ ಎಂದು ದೇವಪ್ರೇರಣೆಯಿಂದ ಬರೆದನು. (ಯಾಕೋ. 1:27; 2:15-17) ಅಪೊಸ್ತಲ ಯೋಹಾನನು ಸಹ ಹೀಗೆ ತರ್ಕಿಸಿದನು: “ಜೀವನಾಧಾರಕ್ಕಾಗಿ ಈ ಲೋಕದ ಸಂಪತ್ತನ್ನು ಹೊಂದಿರುವ ಯಾವನಾದರೂ ತನ್ನ ಸಹೋದರನು ಕೊರತೆಯಲ್ಲಿರುವುದನ್ನು ನೋಡಿದಾಗ್ಯೂ ಕೋಮಲ ಸಹಾನುಭೂತಿಯ ದ್ವಾರವನ್ನು ಅವನಿಗೆ ಮುಚ್ಚಿಬಿಡುವುದಾದರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ?” (1 ಯೋಹಾ. 3:17) ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಹೊಣೆ ಒಬ್ಬೊಬ್ಬ ಕ್ರೈಸ್ತನಿಗೂ ಇದೆಯಾದರೆ ಸಭೆಗಳಿಗೂ ಆ ಹೊಣೆ ಖಂಡಿತ ಇದೆ.
15. ವೃದ್ಧ ಸಹೋದರ ಸಹೋದರಿಯರಿಗೆ ಬೇಕಾದ ಸಹಾಯವನ್ನು ನೀಡುವುದರಲ್ಲಿ ಯಾವೆಲ್ಲ ವಿಷಯಗಳು ಒಳಗೂಡಿವೆ?
15 ಕೆಲವು ದೇಶಗಳಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರವು ಪಿಂಚಣಿ ಕೊಡುತ್ತದೆ, ಅವರಿಗಾಗಿ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ, ಮನೆಯಲ್ಲೇ ಅವರ ಆರೈಕೆ ಮಾಡಲು ಪರಿಚಾರಕರನ್ನು ನೇಮಿಸುತ್ತದೆ. (ರೋಮ. 13:6) ಆದರೆ ಬೇರೆ ದೇಶಗಳಲ್ಲಿ ಅಂಥದ್ದೇನೂ ಇರುವುದಿಲ್ಲ. ಆದ್ದರಿಂದ ಇಳಿವಯಸ್ಸಿನ ಸಹೋದರ ಸಹೋದರಿಯರಿಗೆ ಸಂಬಂಧಿಕರಾಗಲಿ ಸಭೆಯಾಗಲಿ ಎಷ್ಟರ ಮಟ್ಟಿಗೆ ಆರೈಕೆ ನೀಡಬೇಕೆನ್ನುವುದು ಸನ್ನಿವೇಶದಿಂದ ಸನ್ನಿವೇಶಕ್ಕೆ ಭಿನ್ನವಾಗಿರುತ್ತದೆ. ಒಂದುವೇಳೆ ಕ್ರೈಸ್ತ ಮಕ್ಕಳು ಹೆತ್ತವರಿಂದ ದೂರ ವಾಸಿಸುತ್ತಿರುವುದಾದರೆ ತಮ್ಮ ಹೆತ್ತವರಿರುವ ಸಭೆಯ ಹಿರಿಯರೊಂದಿಗೆ ಒಳ್ಳೇ ಸಂವಾದವನ್ನು ಇಟ್ಟುಕೊಂಡು ಅವರಿಗೆ ತಮ್ಮ ಕುಟುಂಬದ ಪರಿಸ್ಥಿತಿ ಚೆನ್ನಾಗಿ ತಿಳಿದಿದೆ ಎಂದು ಖಚಿತಮಾಡಿಕೊಳ್ಳಬೇಕು. ಆಗ, ಸರ್ಕಾರವು ವೃದ್ಧರಿಗೆ ಯಾವ ಸಹಾಯವನ್ನು ನೀಡುತ್ತಿದೆಯೆಂದು ತಿಳಿದುಕೊಳ್ಳಲು ಮತ್ತು ಅದನ್ನು ಪಡೆದುಕೊಳ್ಳಲು ಹಿರಿಯರು ಆ ಹೆತ್ತವರಿಗೆ ಸಹಾಯ ಮಾಡಬಹುದು. ಕೆಲವೊಂದು ವಿಷಯಗಳನ್ನು ಹಿರಿಯರು ಮಕ್ಕಳ ಗಮನಕ್ಕೆ ತರಬಹುದು. ಉದಾಹರಣೆಗೆ, ಇನ್ನೂ ತೆರೆಯದೆ ಇರುವ ಪ್ರಾಮುಖ್ಯ ಪತ್ರಗಳಿರುವುದಾದರೆ ಅಥವಾ ಹೆತ್ತವರು ಯಾವುದೋ ಒಂದು ಮದ್ದನ್ನು ಸೇವಿಸುತ್ತಿಲ್ಲವಾದರೆ ಅದನ್ನು ಮಕ್ಕಳಿಗೆ ತಿಳಿಸಬಹುದು. ಹೀಗೆ ಮಕ್ಕಳು ಮತ್ತು ಹಿರಿಯರು ಒಳ್ಳೇ ಮನಸ್ಸಿನಿಂದ, ದಯೆಯಿಂದ ಮುಕ್ತವಾಗಿ ಮಾತಾಡುವಲ್ಲಿ ಸನ್ನಿವೇಶವು ಹದಗೆಡುವ ಮಟ್ಟಕ್ಕೆ ಹೋಗದಂತೆ ತಡೆಯುತ್ತದೆ. ಮಾತ್ರವಲ್ಲ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಹ ನೆರವಾಗುತ್ತದೆ. ಹೀಗೆ ದೂರದಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಸಹಾಯ ಮಾಡುವವರು ಮತ್ತು ಅಗತ್ಯ ಮಾಹಿತಿಗಳನ್ನು ಮುಟ್ಟಿಸುವವರು ಕುಟುಂಬದ ಚಿಂತೆಯನ್ನು ಕಡಿಮೆಗೊಳಿಸುತ್ತಾರೆ.
16. ಸಭೆಯಲ್ಲಿರುವ ವೃದ್ಧರಿಗೆ ಕೆಲವು ಕ್ರೈಸ್ತರು ಹೇಗೆ ಸಹಾಯಮಾಡುತ್ತಾರೆ?
16 ವೃದ್ಧರ ಮೇಲಿರುವ ಪ್ರೀತಿಯಿಂದಾಗಿ ಕೆಲವು ಕ್ರೈಸ್ತರು ತಮ್ಮಿಂದಾಗುವ ವಿಧದಲ್ಲಿ ಅವರಿಗೆ ಸಹಾಯ ಮಾಡಲು ಸ್ವಇಷ್ಟದಿಂದ ತಮ್ಮ ಸಮಯ, ಶಕ್ತಿಯನ್ನು ಕೊಟ್ಟಿದ್ದಾರೆ. ಸಭೆಯಲ್ಲಿರುವ ವೃದ್ಧರ ಕಡೆಗೆ ಹೆಚ್ಚು ವೈಯಕ್ತಿಕ ಆಸಕ್ತಿ ತೋರಿಸಲು ಅವರು ಶ್ರಮಿಸುತ್ತಾರೆ. ಕೆಲವರು ಸರದಿಯ ಪ್ರಕಾರ ಸಹಾಯ ನೀಡಲು ಮುಂದಾಗುತ್ತಾರೆ ಮತ್ತು ಕೆಲಸಗಳನ್ನು ಸಭೆಯಲ್ಲಿರುವ ಇತರರೊಂದಿಗೆ ಹಂಚಿಕೊಂಡು ಮಾಡುತ್ತಾರೆ. ತಮಗೆ ಪೂರ್ಣ ಸಮಯದ ಸೇವೆ ಮಾಡಲು ಸನ್ನಿವೇಶ ಅನುಮತಿಸದ ಕಾರಣ ಯಾರು ಪೂರ್ಣ ಸಮಯದ ಸೇವೆಯಲ್ಲಿದ್ದಾರೋ ಅವರು ಆದಷ್ಟು ಹೆಚ್ಚು ಸಮಯ ಅದನ್ನು ಮುಂದುವರಿಸಲಿ ಎನ್ನುವುದು ಅವರ ಬಯಕೆ. ಎಷ್ಟೊಂದು ಒಳ್ಳೇ ಮನೋಭಾವ ಅವರಲ್ಲಿದೆ! ಅದೇ ಸಮಯದಲ್ಲಿ, ಬೇರೆಯವರು ಉದಾರ ಮನಸ್ಸಿನಿಂದ ಸಹಾಯ ನೀಡಿದರೂ ಹೆತ್ತವರಿಗೆ ತಮ್ಮಿಂದಾದಷ್ಟು ಸಹಾಯ ಮಾಡುವ ಜವಾಬ್ದಾರಿ ಮಕ್ಕಳಿಗೆ ಇದ್ದೇ ಇದೆ.
ಹುರಿದುಂಬಿಸುವ ಮಾತುಗಳನ್ನಾಡಿ ವೃದ್ಧರನ್ನು ಗೌರವಿಸಿ
17, 18. ಎಂಥ ಗುಣವು ವೃದ್ಧರ ಆರೈಕೆಯನ್ನು ಸುಲಭ ಮಾಡುವುದು?
17 ಸನ್ನಿವೇಶವನ್ನು ಹಿತಕರವಾಗಿ ಮಾಡಲು ಆರೈಕೆ ಪಡೆದುಕೊಳ್ಳುವವರು, ಆರೈಕೆ ಮಾಡುವರು ಇಬ್ಬರೂ ಕೂಡ ಪ್ರಯತ್ನ ಹಾಕಬೇಕು. ಸಕಾರಾತ್ಮಕ ಮನೋಭಾವ ಕಾಪಾಡಿಕೊಳ್ಳಬೇಕು. ಮುಪ್ಪಿನಿಂದಾಗಿ ಶಕ್ತಿಗುಂದುವಾಗ ಕೆಲವು ವೃದ್ಧರು ನಿರಾಶರಾಗುತ್ತಾರೆ, ಖಿನ್ನತೆಗೂ ಒಳಗಾಗುತ್ತಾರೆ. ಆದ್ದರಿಂದ ವೃದ್ಧ ಸಹೋದರ ಸಹೋದರಿಯರೊಂದಿಗೆ ಭಕ್ತಿವರ್ಧಕ ವಿಷಯಗಳನ್ನು ಮಾತಾಡಲು ನೀವು ವಿಶೇಷ ಪ್ರಯತ್ನ ಹಾಕಬೇಕು. ಇದು ನೀವು ಅವರನ್ನು ಗೌರವಿಸುವ ಮತ್ತು ಉತ್ತೇಜಿಸುವ ಒಂದು ವಿಧ. ಈ ಪ್ರಿಯ ವೃದ್ಧರು ಅನೇಕ ವರ್ಷಗಳಿಂದ ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿರುವ ಕಾರಣ ಪ್ರಶಂಸೆಗೆ ಅರ್ಹರು. ಅವರು ಮಾಡಿರುವ ಸೇವೆಯನ್ನು ಯೆಹೋವನು ಎಂದಿಗೂ ಮರೆಯನು. ನಾವು ಕೂಡ ಮರೆಯುವುದಿಲ್ಲ.—ಮಲಾಕಿಯ 3:16; ಇಬ್ರಿಯ 6:10 ಓದಿ.
18 ವೃದ್ಧರು ಮತ್ತು ಅವರನ್ನು ನೋಡಿಕೊಳ್ಳುವವರು ಮಧ್ಯೆ ಮಧ್ಯೆ ಹಾಸ್ಯ ಮಾಡಿ ನಗುವುದರಿಂದ ಪ್ರತಿದಿನದ ಕೆಲಸ ಕಷ್ಟವಿದ್ದರೂ ಅದನ್ನು ಸುಲಭವಾಗಿ ಮುಗಿಸಿಬಿಡಬಹುದು. (ಪ್ರಸಂ. 3:1, 4) ಅನೇಕ ವೃದ್ಧರು ಯಾವುದೇ ವಿಷಯವನ್ನು ಹಕ್ಕೊತ್ತಾಯದಿಂದ ಕೇಳಿಕೊಳ್ಳದಿರಲು ಪ್ರಯತ್ನಿಸುತ್ತಾರೆ. ತಾವು ದಯಾಪರರಾಗಿದ್ದರೆ ಹೆಚ್ಚಿನವರು ತಮ್ಮನ್ನು ನೋಡಿಕೊಳ್ಳಲು ಮತ್ತು ಭೇಟಿ ಮಾಡಲು ಮನಸ್ಸು ಮಾಡುತ್ತಾರೆ ಎಂದವರು ಅರಿತಿದ್ದಾರೆ. ಅನೇಕರು ವೃದ್ಧರನ್ನು ಭೇಟಿಮಾಡಿ ಬಂದ ಮೇಲೆ, “ನಾನು ಆ ವೃದ್ಧ ಸ್ನೇಹಿತರನ್ನು ಪ್ರೋತ್ಸಾಹಿಸಲಿಕ್ಕೆಂದು ಹೋದೆ, ಆದರೆ ಅವರಿಂದ ನಾನೇ ಪ್ರೋತ್ಸಾಹ ಪಡೆದು ಬಂದೆ” ಎಂದು ಹೇಳುವುದು ಸಾಮಾನ್ಯ.—ಜ್ಞಾನೋ. 15:13; 17:22.
19. ಸಂಕಷ್ಟದ ಸಮಯಗಳಲ್ಲಿ ಸ್ಥಿರಚಿತ್ತರಾಗಿರಲು ಆಬಾಲವೃದ್ಧರೆಲ್ಲರಿಗೆ ಯಾವುದು ಸಹಾಯ ಮಾಡಬಲ್ಲದು?
19 ನಾವು ಅಪರಿಪೂರ್ಣತೆಯಿಂದಾಗಿ ಪಡುವ ಪಾಡು, ಅನುಭವಿಸುವ ಪರಿಣಾಮಗಳು ಹೇಳಹೆಸರಿಲ್ಲದೆ ಹೋಗಿಬಿಡುವ ದಿನಕ್ಕಾಗಿ ನಾವೆಲ್ಲರು ತವಕದಿಂದ ಎದುರುನೋಡುತ್ತಿದ್ದೇವೆ. ಆ ವರೆಗೂ ದೇವಜನರು ತಮಗಿರುವ ಅನಂತಕಾಲ ಜೀವನದ ನಿರೀಕ್ಷೆಯ ಮೇಲೆ ಗಮನ ನೆಡಬೇಕು. ದೇವರ ವಾಗ್ದಾನಗಳಲ್ಲಿನ ನಂಬಿಕೆಯು ನಾವು ಕುಗ್ಗಿಹೋಗುವಾಗ ಅಥವಾ ಸಂಕಷ್ಟದ ಸಮಯದಲ್ಲಿರುವಾಗ ನಮ್ಮನ್ನು ಸ್ಥಿರವಾಗಿಡುವ ಲಂಗರವಾಗಿದೆ. ನಂಬಿಕೆ ಇರುವ ಕಾರಣ “ನಾವು ಬಿಟ್ಟುಬಿಡುವುದಿಲ್ಲ; ನಮ್ಮ ಹೊರಗಣ ಮನುಷ್ಯನು ನಶಿಸಿ ಹೋಗುತ್ತಿರುವುದಾದರೂ, ನಮ್ಮ ಒಳಗಣ ಮನುಷ್ಯನು ನಿಶ್ಚಯವಾಗಿಯೂ ದಿನೇ ದಿನೇ ನವೀಕರಿಸಲ್ಪಡುತ್ತಿದ್ದಾನೆ.” (2 ಕೊರಿಂ. 4:16-18; ಇಬ್ರಿ. 6:18, 19) ವೃದ್ಧರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪೂರೈಸಲು ನಮಗೆ ಬೇರೆ ಯಾವ ಸಹಾಯವಿದೆ? ಕೆಲವು ಉಪಯುಕ್ತ ಸಲಹೆಗಳು ಮುಂದಿನ ಲೇಖನದಲ್ಲಿವೆ.
a ವೃದ್ಧರ ಮತ್ತು ಮಕ್ಕಳ ಮುಂದಿರುವ ಕೆಲವು ಆಯ್ಕೆಗಳನ್ನು ಮುಂದಿನ ಲೇಖನ ಚರ್ಚಿಸುತ್ತದೆ.