ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
“ಮೋಶೆಯು ದೊಡ್ಡವನಾದಾಗ ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು ನಂಬಿಕೆಯಿಂದಲೇ.”—ಇಬ್ರಿ. 11:24.
1, 2. (ಎ) ನಲ್ವತ್ತು ವರ್ಷದವನಾದಾಗ ಮೋಶೆ ಯಾವ ನಿರ್ಧಾರ ತಕ್ಕೊಂಡನು? (ಮೇಲಿನ ಚಿತ್ರ ನೋಡಿ.) (ಬಿ) ದೇವಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮೋಶೆ ಏಕೆ ಮಾಡಿದನು?
ಐಗುಪ್ತದಲ್ಲಿ ತನಗೆಂಥ ಜೀವನ ಸಿಗಲಿದೆ ಎಂದು ಮೋಶೆಗೆ ಗೊತ್ತಿತ್ತು. ಅವನು ದೊಡ್ಡ ಬಂಗಲೆಯಲ್ಲಿ ಬೆಳೆದಿದ್ದನು. ಅವನ ಸುತ್ತಮುತ್ತ ಕೂಡ ಅಂಥ ಶ್ರೀಮಂತರ ಮನೆಗಳಿದ್ದವು. ರಾಜ ಮನೆತನಕ್ಕೆ ಸೇರಿದವನಾಗಿದ್ದನು. ಕಲೆ, ಖಗೋಳ ವಿಜ್ಞಾನ, ಗಣಿತಶಾಸ್ತ್ರ, ವಿಜ್ಞಾನಕ್ಕೆ ಸಂಬಂಧಿಸಿದ ಇತರ ವಿದ್ಯೆಗಳನ್ನು ಸೇರಿಸಿ ಐಗುಪ್ತದವರ “ಸರ್ವವಿದ್ಯೆಗಳಲ್ಲಿ” ಉಪದೇಶಹೊಂದಿದ್ದನು. (ಅ. ಕಾ. 7:22) ಐಗುಪ್ತದ ಒಬ್ಬ ಸಾಮಾನ್ಯ ವ್ಯಕ್ತಿಗೆ ಕೇವಲ ಕನಸಾಗಿದ್ದ ಸಿರಿಸಂಪತ್ತು, ಅಧಿಕಾರ, ಸುಖಸವಲತ್ತು ಮೋಶೆಯ ಅಂಗೈಯಲ್ಲೇ ಇತ್ತು!
2 ಆದರೆ ನಲ್ವತ್ತು ವರ್ಷದವನಾದಾಗ ಮೋಶೆ ಮಾಡಿದ ಒಂದು ನಿರ್ಧಾರವು ಅವನನ್ನು ದತ್ತು ತಕ್ಕೊಂಡಿದ್ದ ಐಗುಪ್ತದ ರಾಜ ಪರಿವಾರವನ್ನು ತಬ್ಬಿಬ್ಬುಗೊಳಿಸಿತು. ಏಕೆಂದರೆ ಮೋಶೆ ಐಗುಪ್ತದ ಸಾಮಾನ್ಯ ಜನರಂತೆ ಕೂಡ ಜೀವಿಸಲು ಬಯಸದೆ ಅಲ್ಲಿ ದಾಸರಾಗಿದ್ದ ಜನರೊಂದಿಗೆ ಜೀವಿಸುವ ಆಯ್ಕೆ ಮಾಡಿದನು! ಏಕೆ? ಅದಕ್ಕೆ ಕಾರಣ ಅವನಲ್ಲಿದ್ದ ನಂಬಿಕೆ. (ಇಬ್ರಿಯ 11:24-26 ಓದಿ.) ಅವನು ತನ್ನ ಸುತ್ತಮುತ್ತಲಿದ್ದ ವಿಷಯಗಳ ಮೇಲೆ ದೃಷ್ಟಿಯಿಡಲಿಲ್ಲ. ನಂಬಿಕೆಯ ಕಣ್ಣುಗಳಿಂದ ಭವಿಷ್ಯತ್ತಿನೆಡೆಗೆ ನೋಡಿದನು. ಆಧ್ಯಾತ್ಮಿಕ ಮನಸ್ಸಿನವನಾಗಿದ್ದ ಮೋಶೆಗೆ ‘ಅದೃಶ್ಯನಾಗಿರುವಾತನಾದ’ ಯೆಹೋವನಲ್ಲಿ ನಂಬಿಕೆಯಿತ್ತು ಹಾಗೂ ಆತನು ಮಾಡಿರುವ ವಾಗ್ದಾನಗಳು ನೆರವೇರುತ್ತವೆ ಎಂಬ ಭರವಸೆಯಿತ್ತು.—ಇಬ್ರಿ. 11:27.
3. ಈ ಲೇಖನದಲ್ಲಿ ನಮಗೆ ಯಾವ ಮೂರು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ?
3 ನಾವು ಸಹ ಮೋಶೆಯಂತೆಯೇ ಕೇವಲ ಕಣ್ಣಿಗೆ ಕಾಣುವ ವಿಷಯಗಳ ಮೇಲೆ ದೃಷ್ಟಿಯಿಡಬಾರದು. ನಾವು “ನಂಬಿಕೆಯಿರುವಂಥ” ವ್ಯಕ್ತಿಗಳಾಗಿರಬೇಕು. (ಇಬ್ರಿ. 10:38, 39) ನಮ್ಮ ನಂಬಿಕೆಯನ್ನು ಹೆಚ್ಚು ದೃಢಗೊಳಿಸಲಿಕ್ಕಾಗಿ ನಾವೀಗ ಮೋಶೆಯ ಕುರಿತು ಇಬ್ರಿಯ 11:24-26ರಲ್ಲಿ ದಾಖಲಾಗಿರುವ ವಿಷಯಗಳನ್ನು ಪರಿಶೀಲಿಸೋಣ. ಹೀಗೆ ಪರಿಶೀಲಿಸುವಾಗ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ: ಶಾರೀರಿಕ ಬಯಕೆಗಳನ್ನು ನಿರಾಕರಿಸಲು ಮೋಶೆಯನ್ನು ನಂಬಿಕೆಯು ಹೇಗೆ ಪ್ರಚೋದಿಸಿತು? ನಿಂದೆಯನ್ನು ಅನುಭವಿಸಿದಾಗ ತನಗಿರುವ ಸೇವಾ ಸುಯೋಗಗಳನ್ನು ಮಾನ್ಯಮಾಡುವಂತೆ ನಂಬಿಕೆ ಅವನಿಗೆ ಹೇಗೆ ಸಹಾಯ ಮಾಡಿತು? ಮೋಶೆ ಏಕೆ “ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು”?
ಶಾರೀರಿಕ ಬಯಕೆಗಳನ್ನು ನಿರಾಕರಿಸಿದನು
4. ‘ಪಾಪದ ಸುಖದ’ ಬಗ್ಗೆ ಮೋಶೆ ಏನನ್ನು ಗ್ರಹಿಸಿದ್ದನು?
4 ‘ಪಾಪದ ಸುಖ’ ತಾತ್ಕಾಲಿಕವೆಂದು ಮೋಶೆಯು ನಂಬಿಕೆಯ ಕಣ್ಣುಗಳಿಂದ ಗ್ರಹಿಸಿದ್ದನು. ಬೇರೆ ಯಾರಾದರೂ ಆಗಿದ್ದಿದ್ದರೆ, ‘ಐಗುಪ್ತ ದೇಶವು ವಿಗ್ರಹಾರಾಧನೆ, ಪ್ರೇತವ್ಯವಹಾರದಲ್ಲಿ ಹೂತುಹೋಗಿದ್ದರೂ ಅದು ಲೋಕಶಕ್ತಿಯಾಗಿ ಬೆಳೆದು ನಿಂತಿದೆಯಲ್ಲಾ; ಹಾಗೆ ನೋಡಿದರೆ ಯೆಹೋವನ ಜನರೇ ದಾಸರಾಗಿ ಹಿಂಸೆಪಡುತ್ತಾ ಇದ್ದಾರೆ’ ಎಂದು ಯೋಚಿಸುತ್ತಿದ್ದರೇನೋ. ಅದು ನಿಜ. ಆದರೆ ದೇವರು ಪರಿಸ್ಥಿತಿಯನ್ನು ಬದಲಾಯಿಸಶಕ್ತನು ಎಂದು ಮೋಶೆ ಅರಿತಿದ್ದನು. ಸ್ವಾರ್ಥ ಆಶೆಗಳನ್ನು ತೃಪ್ತಿಪಡಿಸುವುದರಲ್ಲಿ ಮುಳುಗಿದ್ದ ದುಷ್ಟರು ಹೆಚ್ಚೆಚ್ಚು ಸಮೃದ್ಧಿ ಹೊಂದುತ್ತಿರುವಂತೆ ಕಂಡರೂ ಅವರು ಬೇಗನೆ ನಾಶವಾಗಲಿದ್ದಾರೆ ಎಂಬ ನಂಬಿಕೆ ಅವನಿಗಿತ್ತು. ಹಾಗಾಗಿ ಅವನು ‘ಪಾಪದ ತಾತ್ಕಾಲಿಕ ಸುಖಾನುಭವಕ್ಕೆ’ ಮರುಳಾಗಲಿಲ್ಲ.
5. ‘ಪಾಪದ ತಾತ್ಕಾಲಿಕ ಸುಖಾನುಭವವನ್ನು’ ತಿರಸ್ಕರಿಸಲು ನಮಗೆ ಯಾವುದು ನೆರವಾಗಬಲ್ಲದು?
5 ‘ಪಾಪದ ತಾತ್ಕಾಲಿಕ ಸುಖಾನುಭವವನ್ನು’ ನೀವು ಹೇಗೆ ತಿರಸ್ಕರಿಸಬಹುದು? ಪಾಪಭರಿತ ಸುಖ ಕ್ಷಣಿಕ ಎನ್ನುವುದನ್ನು ಮರೆಯದಿರಿ. ‘ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿರುವುದನ್ನು’ ನಂಬಿಕೆಯ ಕಣ್ಣುಗಳಿಂದ ನೋಡಿ. (1 ಯೋಹಾ. 2:15-17) ಪಶ್ಚಾತ್ತಾಪಪಡದೆ ಪಾಪ ಮಾಡುತ್ತಿರುವವರಿಗೆ ಸಿಗುವ ಅಂತ್ಯಫಲದ ಬಗ್ಗೆ ಯೋಚಿಸಿ. ಅಂಥವರು ‘ಜಾರುವ ಸ್ಥಳಗಳಲ್ಲಿ ಇದ್ದಾರೆ. ನಾಶಕ್ಕೆ ದೊಬ್ಬಲ್ಪಡುತ್ತಾರೆ.’ (ಕೀರ್ತ. 73:18, 19, ಪವಿತ್ರ ಗ್ರಂಥ ಭಾಷಾಂತರ) ಪಾಪ ಮಾಡಲು ನಿಮಗೆ ಪ್ರಲೋಭನೆಯಾದಲ್ಲಿ ‘ಭವಿಷ್ಯತ್ತಿನಲ್ಲಿ ನನಗೆ ಯಾವ ರೀತಿಯ ಜೀವನ ಬೇಕು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.
6. (ಎ) ಮೋಶೆಯು “ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು” ಏಕೆ? (ಬಿ) ಮೋಶೆಯು ಸರಿಯಾದ ನಿರ್ಣಯ ಮಾಡಿದನೆಂದು ನಿಮಗೇಕೆ ಅನಿಸುತ್ತದೆ?
6 ಮೋಶೆಯಲ್ಲಿದ್ದ ನಂಬಿಕೆಯು ಅವನು ತನ್ನ ಜೀವನದಲ್ಲಿ ಏನು ಮಾಡಬೇಕು ಎನ್ನುವುದನ್ನು ಸಹ ಪ್ರಭಾವಿಸಿತು. “ಮೋಶೆಯು ದೊಡ್ಡವನಾದಾಗ ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು ನಂಬಿಕೆಯಿಂದಲೇ.” (ಇಬ್ರಿ. 11:24) ಮೋಶೆಯು ತಾನು ಆಸ್ಥಾನದ ಸದಸ್ಯನಾಗಿದ್ದುಕೊಂಡೇ ದೇವರನ್ನು ಆರಾಧಿಸುತ್ತೇನೆ, ತನಗಿರುವ ಸಂಪತ್ತು, ಅಧಿಕಾರದಿಂದ ಇಸ್ರಾಯೇಲ್ಯ ಸಹೋದರರಿಗೆ ಸಹಾಯ ಮಾಡುತ್ತೇನೆ ಎಂದು ಯೋಚಿಸಲಿಲ್ಲ. ಬದಲಿಗೆ ಯೆಹೋವನನ್ನು ಪೂರ್ಣ ಹೃದಯ, ಪ್ರಾಣ, ಶಕ್ತಿಯಿಂದ ಪ್ರೀತಿಸಲು ದೃಢಮನಸ್ಸು ಮಾಡಿದ್ದನು. (ಧರ್ಮೋ. 6:5) ಈ ನಿರ್ಣಯವು ಅವನನ್ನು ಅನೇಕ ಸಂಕಟಗಳಿಂದ ತಪ್ಪಿಸಿತು. ಅವನು ತ್ಯಾಗಮಾಡಿದ್ದ ಐಗುಪ್ತದ ಸಂಪತ್ತಿನಲ್ಲಿ ಬಹಳಷ್ಟನ್ನು ನಂತರ ಇಸ್ರಾಯೇಲ್ಯರೇ ಸುಲುಕೊಂಡರು. (ವಿಮೋ. 12:35, 36) ಫರೋಹನ ಸೊಕ್ಕಡಗಿತು ಮತ್ತು ಅವನು ಕೊಲ್ಲಲ್ಪಟ್ಟನು. (ಕೀರ್ತ. 136:15) ಮೋಶೆಯನ್ನಾದರೋ ಯೆಹೋವನು ಸಂರಕ್ಷಿಸಿದನು. ಮಾತ್ರವಲ್ಲ ಇಡೀ ಇಸ್ರಾಯೇಲ್ ಜನಾಂಗವನ್ನು ಸುರಕ್ಷೆಗೆ ನಡೆಸಲು ಅವನನ್ನು ಉಪಯೋಗಿಸಿದನು. ನಿಜವಾಗಿಯೂ ಅವನ ಜೀವನಕ್ಕೆ ಒಂದು ಅರ್ಥವಿತ್ತು.
7. (ಎ) ಮತ್ತಾಯ 6:19-21ಕ್ಕನುಸಾರ ನಾವು ನಿತ್ಯನಿರಂತರದ ಭವಿಷ್ಯತ್ತಿನ ಮೇಲೆ ಏಕೆ ದೃಷ್ಟಿಯಿಡಬೇಕು? (ಬಿ) ಭೌತಿಕ ಹಾಗೂ ಆಧ್ಯಾತ್ಮಿಕ ನಿಕ್ಷೇಪಗಳ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುವ ಒಂದು ಅನುಭವ ತಿಳಿಸಿ.
7 ನೀವು ಒಬ್ಬ ಯುವ ಕ್ರೈಸ್ತರೋ? ಹಾಗಿದ್ದಲ್ಲಿ ನಿಮ್ಮ ಜೀವನದಲ್ಲಿ ಏನು ಮಾಡಬೇಕೆಂದು ನಿರ್ಣಯಿಸಲು ನಂಬಿಕೆ ಹೇಗೆ ಸಹಾಯ ಮಾಡಬಲ್ಲದು? ವಿವೇಕದಿಂದ ಭವಿಷ್ಯತ್ತನ್ನು ಮನಸ್ಸಿನಲ್ಲಿಟ್ಟು ಯೋಜನೆಗಳನ್ನು ಮಾಡಿ. ದೇವರ ವಾಗ್ದಾನಗಳಲ್ಲಿ ನಂಬಿಕೆಯಿಟ್ಟು ನಿತ್ಯನಿರಂತರಕ್ಕೂ ಇರುವ ಭವಿಷ್ಯತ್ತಿಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿ, ಕ್ಷಣಿಕ ಭವಿಷ್ಯತ್ತಿಗಾಗಿ ಅಲ್ಲ. (ಮತ್ತಾಯ 6:19-21 ಓದಿ.) ಇಂಥ ಒಂದು ನಿರ್ಣಯವನ್ನು ಸೋಫೀ ಎಂಬ ಪ್ರತಿಭಾವಂತ ಬ್ಯಾಲೆ ನೃತ್ಯಗಾರ್ತಿ ಮಾಡಬೇಕಿತ್ತು. ಅಮೆರಿಕದಾದ್ಯಂತ ಇರುವ ಬ್ಯಾಲೆ ಕಂಪನಿಗಳು ಆಕೆಯ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಂಡು, ನಂತರ ತಮ್ಮ ಕಂಪನಿಯಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಕೊಡಲು ಮುಂದೆಬಂದವು. “ಪ್ರಸಿದ್ಧಿ ಗಳಿಸಿ ಎಲ್ಲರ ಅಚ್ಚುಮೆಚ್ಚಿನ ಕಲಾವಿದೆಯಾಗಿರುವಾಗ ಏನೋ ರೋಮಾಂಚನ. ನನ್ನ ಸಮವಯಸ್ಕರಿಗಿಂತ ಶ್ರೇಷ್ಠಳೆಂಬ ಅನಿಸಿಕೆ ಆಗುತ್ತಿತ್ತು” ಎನ್ನುತ್ತಾಳೆ ಸೋಫೀ. “ಆದರೆ ಒಳಗೊಳಗೆ ಸಂತೋಷ, ಸಂತೃಪ್ತಿ ಇರಲಿಲ್ಲ.” ತದನಂತರ ಯುವ ಜನರು ಪ್ರಶ್ನಿಸುವುದು—ನಾನು ನನ್ನ ಜೀವಿತವನ್ನು ಹೇಗೆ ಉಪಯೋಗಿಸುವೆ? (ಇಂಗ್ಲಿಷ್) ಎಂಬ ವಿಡಿಯೋ ಆಕೆ ನೋಡಿದಳು. ಅವಳು ಹೀಗನ್ನುತ್ತಾಳೆ: “ಈ ಲೋಕ ನನಗೆ ಯಶಸ್ಸು, ಅಭಿಮಾನಿಗಳಿಂದ ಮನ್ನಣೆ, ಗೌರವವನ್ನು ಕೊಟ್ಟಿದೆ. ಆದರೆ ಅದಕ್ಕಾಗಿ ಯೆಹೋವನನ್ನು ಪೂರ್ಣ ಹೃದಯದಿಂದ ಆರಾಧಿಸುವುದನ್ನೇ ಬಿಟ್ಟುಕೊಟ್ಟಿದ್ದೆ ಎಂದು ನನಗಾಗ ಅರಿವಾಯಿತು.” ಸೋಫೀ ಏನು ಮಾಡಿದಳು? “ಹೃದಯದಾಳದಿಂದ ಯೆಹೋವನಲ್ಲಿ ಪ್ರಾರ್ಥಿಸಿದೆ. ಬ್ಯಾಲೆ ವೃತ್ತಿ ಬಿಟ್ಟುಬಿಟ್ಟೆ.” ಈ ನಿರ್ಣಯದ ಬಗ್ಗೆ ಆಕೆಗೆ ಹೇಗನಿಸುತ್ತಿದೆ? “ಏನೋ ಕಳೆದುಕೊಂಡೆ ಎಂದು ಸ್ವಲ್ಪವೂ ಅನಿಸುವುದಿಲ್ಲ. ಈಗ ನಾನು ಸಂಪೂರ್ಣವಾಗಿ ಸಂತೋಷದಿಂದಿದ್ದೇನೆ. ನಾನೂ ನನ್ನ ಪತಿ ಪಯನೀಯರ್ ಸೇವೆ ಮಾಡುತ್ತಿದ್ದೇವೆ. ನಾವೀಗ ಪ್ರಸಿದ್ಧ ವ್ಯಕ್ತಿಗಳಲ್ಲ. ನಮ್ಮ ಹತ್ತಿರ ತುಂಬ ಹಣ ಇಲ್ಲ. ಆದರೆ ನಮಗೆ ಯೆಹೋವನಿದ್ದಾನೆ. ನಮ್ಮ ಬೈಬಲ್ ವಿದ್ಯಾರ್ಥಿಗಳಿದ್ದಾರೆ, ಆಧ್ಯಾತ್ಮಿಕ ಗುರಿಗಳಿವೆ. ನಾನು ಮಾಡಿದ ನಿರ್ಧಾರದ ಬಗ್ಗೆ ಸ್ವಲ್ಪವೂ ವಿಷಾದವಿಲ್ಲ.”
8. ಒಬ್ಬ ಯುವ ವ್ಯಕ್ತಿಗೆ ತನ್ನ ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸಲು ಯಾವ ಬೈಬಲ್ ಸಲಹೆ ನೆರವಾಗುವುದು?
8 ಯಾವುದು ನಿಮಗೆ ಒಳ್ಳೆಯದೆಂದು ಯೆಹೋವನಿಗೆ ಚೆನ್ನಾಗಿ ಗೊತ್ತು. ಮೋಶೆ ಏನೆಂದನೆಂದು ಗಮನಿಸಿ: “ನೀವು ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆಯುತ್ತಾ ಆತನನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” (ಧರ್ಮೋ. 10:12, 13) ಹೌದು ಯೌವನದಲ್ಲಿರುವ ನೀವು, “ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ” ಯೆಹೋವನನ್ನು ಪ್ರೀತಿಸಿ ಆತನ ಸೇವೆ ಮಾಡಲು ಸಾಧ್ಯವಾಗುವಂಥ ಜೀವನವೃತ್ತಿಯನ್ನು ಆರಿಸಿಕೊಳ್ಳಿ. ಅಂಥ ಆಯ್ಕೆಯಿಂದ ‘ನಿಮಗೆ ಮೇಲಾಗುವುದು’ ಎಂಬ ಭರವಸೆ ನಿಮಗಿರಲಿ.
ತನ್ನ ಸೇವಾ ಸುಯೋಗಗಳನ್ನು ಅಮೂಲ್ಯವೆಂದೆಣಿಸಿದನು
9. ತನ್ನ ನೇಮಕವನ್ನು ಪೂರೈಸಲು ಮೋಶೆಗೆ ಏಕೆ ಕಷ್ಟವಾಗಿದ್ದಿರಬಹುದು?
9 ಮೋಶೆ ‘ಐಗುಪ್ತ ದೇಶದ ನಿಕ್ಷೇಪಗಳಿಗಿಂತ ಕ್ರಿಸ್ತನಾಗಿ ಅನುಭವಿಸುವ ನಿಂದೆಯನ್ನು ಎಷ್ಟೋ ಶ್ರೇಷ್ಠವಾದ ಐಶ್ವರ್ಯವೆಂದೆಣಿಸಿದನು.’ (ಇಬ್ರಿ. 11:26) ಮೋಶೆಯು ‘ಕ್ರಿಸ್ತನಾಗಿ’ ಅಥವಾ ‘ಅಭಿಷಿಕ್ತನಾಗಿ’ ನೇಮಿಸಲ್ಪಟ್ಟನು, ಅಂದರೆ ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿ ತರಲಿಕ್ಕಾಗಿ ಯೆಹೋವನು ಮೋಶೆಯನ್ನು ಆರಿಸಿಕೊಂಡನು. ಈ ನೇಮಕ ಕಷ್ಟಕರವೆಂದೂ ಅದಕ್ಕಾಗಿ ‘ನಿಂದೆಗೆ’ ಒಳಗಾಗಬೇಕಾಗುತ್ತದೆಂದೂ ಮೋಶೆಗೆ ಗೊತ್ತಿತ್ತು. ಈ ಮುಂಚೆಯೇ ಇಸ್ರಾಯೇಲ್ಯರಲ್ಲಿ ಒಬ್ಬನು ಮೋಶೆಗೆ ತಿರಸ್ಕಾರದಿಂದ “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು?” ಎಂದು ಕೇಳಿದ್ದನು. (ವಿಮೋ. 2:13, 14) ಅನಂತರ ಮೋಶೆ ಯೆಹೋವನ ಹತ್ತಿರ ‘ಫರೋಹನು ನನ್ನ ಮಾತಿಗೆ ಕಿವಿಗೊಟ್ಟಾನೇ?’ ಎಂದು ಸಂಶಯ ವ್ಯಕ್ತಪಡಿಸಿದನು. (ವಿಮೋ. 6:12) ಮೋಶೆ ನಿಂದೆಯನ್ನು ಎದುರಿಸಲು ಸಿದ್ಧನಾಗಲಿಕ್ಕಾಗಿ ಏನು ಮಾಡಿದನು? ತನ್ನ ಚಿಂತೆ, ದುಗುಡಗಳನ್ನು ಯೆಹೋವನ ಹತ್ತಿರ ಹೇಳಿಕೊಂಡನು. ಈ ಕಷ್ಟದ ನೇಮಕವನ್ನು ಪೂರೈಸಲು ಯೆಹೋವನು ಮೋಶೆಗೆ ಹೇಗೆ ನೆರವಾದನು?
10. ಮೋಶೆಯು ತನ್ನ ನೇಮಕವನ್ನು ಪೂರೈಸಲಿಕ್ಕಾಗಿ ಯೆಹೋವನು ಅವನನ್ನು ಹೇಗೆ ಸನ್ನದ್ಧಗೊಳಿಸಿದನು?
10 ಮೊದಲಾಗಿ ಯೆಹೋವನು ಮೋಶೆಗೆ, “ನಾನೇ ನಿನ್ನ ಸಂಗಡ ಇರುವೆನು” ಎಂದು ಆಶ್ವಾಸನೆ ಕೊಟ್ಟನು. (ವಿಮೋ. 3:12) ಎರಡನೇದಾಗಿ ತನ್ನ ಹೆಸರಿನ ಅರ್ಥದ ಒಂದು ಅಂಶವನ್ನು ವಿವರಿಸುವ ಮೂಲಕ ಅವನಲ್ಲಿ ಭರವಸೆ ತುಂಬಿದನು. “ನಾನು ಏನಾಗಿ ಪರಿಣಮಿಸಬೇಕೊ ಅದಾಗಿ ಪರಿಣಮಿಸುತ್ತೇನೆ” ಎಂಬುದೇ ಆ ಅರ್ಥವಾಗಿತ್ತು.a (ವಿಮೋ. 3:14, NW) ಮೂರನೇದಾಗಿ ಮೋಶೆಗೆ ಅದ್ಭುತಕರವಾದ ಶಕ್ತಿಯನ್ನು ಕೊಟ್ಟನು. ಅದು ದೇವರೇ ಅವನನ್ನು ಕಳುಹಿಸಿದ್ದಾನೆ ಎಂಬುದನ್ನು ರುಜುಪಡಿಸಿತು. (ವಿಮೋ. 4:2-5) ನಾಲ್ಕನೇದಾಗಿ, ಆ ನೇಮಕವನ್ನು ಪೂರೈಸಲು ಸಹಾಯವಾಗುವಂತೆ ಮೋಶೆಗೆ ಜೊತೆಗಾರನಾಗಿ ಹಾಗೂ ಅವನ ಪರವಾಗಿ ಮಾತಾಡಲಿಕ್ಕಾಗಿ ಆರೋನನನ್ನು ನೇಮಿಸಿದನು. (ವಿಮೋ. 4:14-16) ಮೋಶೆಗೆ ತನ್ನ ಜೀವಿತದ ಕೊನೆಯಷ್ಟರಲ್ಲಿ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿತ್ತು ಏನೆಂದರೆ ಯೆಹೋವನು ತನ್ನ ಸೇವಕರಿಗೆ ಯಾವುದೇ ನೇಮಕ ಕೊಡಲಿ, ಅದನ್ನು ಪೂರೈಸಲು ಅವರನ್ನು ಸನ್ನದ್ಧಗೊಳಿಸುತ್ತಾನೆ. ಹಾಗಾಗಿಯೇ ಅವನು ಪೂರ್ಣ ಭರವಸೆಯಿಂದ ತನ್ನ ನಂತರ ಇಸ್ರಾಯೇಲ್ಯರ ನಾಯಕನಾಗಲಿದ್ದ ಯೆಹೋಶುವನಿಗೆ ಹೀಗಂದನು: “ಯೆಹೋವನು ತಾನೇ ನಿನ್ನ ಮುಂದುಗಡೆ ಹೋಗುವನು; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವದೇ ಇಲ್ಲ, ಕೈಬಿಡುವದಿಲ್ಲ; ಅಂಜಬೇಡ, ಧೈರ್ಯದಿಂದಿರು.”—ಧರ್ಮೋ. 31:8.
11. ಮೋಶೆ ತನ್ನ ನೇಮಕವನ್ನು ಏಕೆ ಬಹು ಅಮೂಲ್ಯವಾಗಿ ಎಣಿಸಿದನು?
11 ಯೆಹೋವನ ಬೆಂಬಲವಿದ್ದದರಿಂದ ಭಯಹುಟ್ಟಿಸುವ ಈ ನೇಮಕವನ್ನು ಮೋಶೆ ಬಹು ಅಮೂಲ್ಯವಾಗಿ ಪರಿಗಣಿಸಲು ಶಕ್ತನಾದನು. ಅದನ್ನು ‘ಐಗುಪ್ತ ದೇಶದ ನಿಕ್ಷೇಪಗಳಿಗಿಂತ ಎಷ್ಟೋ ಶ್ರೇಷ್ಠವಾದದ್ದೆಂದು’ ಎಣಿಸಿದನು. ಎಷ್ಟೆಂದರೂ ಸರ್ವಶಕ್ತ ದೇವರ ಸೇವೆ ಮಾಡುವುದರ ಮುಂದೆ ಫರೋಹನ ಸೇವೆ ಯಾವ ಲೆಕ್ಕದ್ದು? ‘ಕ್ರಿಸ್ತನು’ ಅಥವಾ ಯೆಹೋವನ “ಅಭಿಷಿಕ್ತನು” ಆಗಿರುವುದರ ಮುಂದೆ ಐಗುಪ್ತದ ರಾಜಕುಮಾರನಾಗಿರುವುದು ತೃಣಸಮಾನ. ಈ ಗಣ್ಯತಾಭಾವಕ್ಕಾಗಿ ಮೋಶೆ ಆಶೀರ್ವಾದ ಪಡೆದನು. ಹೇಗೆ? ಯೆಹೋವನೊಂದಿಗೆ ವಿಶೇಷವಾದ ಆಪ್ತ ಸಂಬಂಧ ಅವನಿಗಿತ್ತು. ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸುವಾಗ ‘ಭಯಂಕರ ಕಾರ್ಯಗಳನ್ನು’ ಮಾಡುವ ಸಾಮರ್ಥ್ಯವನ್ನು ಯೆಹೋವನು ಅವನಿಗೆ ಕೊಟ್ಟನು.—ಧರ್ಮೋ. 34:10-12.
12. ಯೆಹೋವನು ಕೊಟ್ಟಿರುವ ಯಾವ ನೇಮಕಗಳನ್ನು ನಾವು ಮಾನ್ಯಮಾಡಬೇಕು?
12 ನಮಗೂ ಒಂದು ನೇಮಕವಿದೆ. ಅಪೊಸ್ತಲ ಪೌಲ ಹಾಗೂ ಇತರರಿಗೆ ಕೊಟ್ಟಂತೆ ಯೆಹೋವನು ತನ್ನ ಮಗನ ಮೂಲಕ ನಮಗೂ ಶುಶ್ರೂಷೆಯನ್ನು ನೇಮಿಸಿದ್ದಾನೆ. (1 ತಿಮೊಥೆಯ 1:12-14 ಓದಿ.) ಸುವಾರ್ತೆ ಸಾರುವ ಸುಯೋಗ ನಮ್ಮೆಲ್ಲರಿಗೂ ಇದೆ. (ಮತ್ತಾ. 24:14; 28:19, 20) ಕೆಲವರು ಪೂರ್ಣ ಸಮಯದ ಸೇವೆ ಮಾಡುತ್ತಾರೆ. ದೀಕ್ಷಾಸ್ನಾನ ಪಡೆದಿರುವ ಪ್ರೌಢ ಸಹೋದರರು ಶುಶ್ರೂಷಾ ಸೇವಕರಾಗಿ ಅಥವಾ ಹಿರಿಯರಾಗಿ ಸಭೆಯಲ್ಲಿರುವವರ ಸೇವೆ ಮಾಡುತ್ತಾರೆ. ಆದರೆ ಸತ್ಯದಲ್ಲಿಲ್ಲದ ಕುಟುಂಬ ಸದಸ್ಯರು ನಿಮಗಿರುವ ಈ ಸೇವಾ ಸದವಕಾಶಗಳನ್ನು ಅಮೂಲ್ಯವಾಗಿ ಪರಿಗಣಿಸಲಿಕ್ಕಿಲ್ಲ; ನೀವು ಸ್ವತ್ಯಾಗದ ಗುಣವನ್ನು ತೋರಿಸುತ್ತಿರುವುದಕ್ಕಾಗಿ ನಿಂದಿಸಲೂಬಹುದು. (ಮತ್ತಾ. 10:34-37) ಒಂದುವೇಳೆ ಅವರ ವರ್ತನೆಯಿಂದಾಗಿ ನಿಮಗೆ ನಿರುತ್ತೇಜನವಾಗುವಲ್ಲಿ ನಿಮ್ಮ ಸ್ವತ್ಯಾಗಕ್ಕೆ ನಿಜಕ್ಕೂ ಬೆಲೆಯಿದೆಯಾ ಎಂದು ನೀವು ಸೋಜಿಗಪಡಬಹುದು ಇಲ್ಲವೆ ‘ನನ್ನಿಂದ ಈ ನೇಮಕವನ್ನು ಪೂರೈಸಲು ನಿಜಕ್ಕೂ ಆಗುತ್ತದಾ’ ಎಂದು ಸಂದೇಹಪಡಲು ಆರಂಭಿಸಬಹುದು. ನಿಮಗೆ ಹೀಗಾಗುವಲ್ಲಿ ನಿಮ್ಮ ನಂಬಿಕೆ ಸಹಾಯಕ್ಕೆ ಬರಬಲ್ಲದು. ಅದು ಹೇಗೆ?
13. ನಮ್ಮ ದೇವಪ್ರಭುತ್ವಾತ್ಮಕ ನೇಮಕಗಳನ್ನು ಪೂರೈಸಲು ಯೆಹೋವನು ನಮ್ಮನ್ನು ಹೇಗೆ ಸನ್ನದ್ಧಗೊಳಿಸುತ್ತಾನೆ?
13 ನಿಮಗೆ ಸಹಾಯ ಮಾಡುವಂತೆ ನಂಬಿಕೆಯಿಂದ ಯೆಹೋವನಲ್ಲಿ ಅಂಗಲಾಚಿ. ನಿಮ್ಮ ಭಯ, ಚಿಂತೆಗಳನ್ನು ಆತನ ಹತ್ತಿರ ಹೇಳಿಕೊಳ್ಳಿ. ನಿಮಗೆ ನೇಮಕವನ್ನು ಕೊಟ್ಟಿರುವಾತನು ಯೆಹೋವನೇ ಅಲ್ಲವೆ? ಅದನ್ನು ಯಶಸ್ವಿಯಾಗಿ ಪೂರೈಸುವಂತೆ ಬೇಕಾದ ನೆರವನ್ನೂ ಆತನೇ ಕೊಡುತ್ತಾನೆ. ಹೇಗೆ? ಮೋಶೆಗೆ ಹೇಗೆ ನೆರವು ಕೊಟ್ಟನೋ ಹಾಗೆಯೇ. ಮೊದಲನೇದಾಗಿ ಯೆಹೋವನು ನಿಮಗೆ ಈ ಆಶ್ವಾಸನೆ ಕೊಡುತ್ತಾನೆ: “ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.” (ಯೆಶಾ. 41:10) ಎರಡನೇದಾಗಿ, ತಾನು ಮಾಡಿರುವ ವಾಗ್ದಾನಗಳು ಭರವಸಾರ್ಹ ಎಂಬುದನ್ನು ನಿಮಗೆ ನೆನಪುಹುಟ್ಟಿಸುತ್ತಾನೆ. ಆತನು ಹೀಗನ್ನುತ್ತಾನೆ: “ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.” (ಯೆಶಾ. 46:11) ಮೂರನೇದಾಗಿ ನಿಮ್ಮ ಸೇವೆಯನ್ನು ಪೂರೈಸಲು ಆತನು ನಿಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಡುತ್ತಾನೆ. (2 ಕೊರಿಂ. 4:7) ನಾಲ್ಕನೇದಾಗಿ ಏನೇ ಬಂದರೂ ನೀವು ನಿಮ್ಮ ನೇಮಕವನ್ನು ಬಿಟ್ಟುಬಿಡದಿರಲು ಕಾಳಜಿಭರಿತ ತಂದೆಯಾದ ಯೆಹೋವನು ಸತ್ಯಾರಾಧಕರ ಲೋಕವ್ಯಾಪಕ ಬಳಗವನ್ನು ನಿಮಗೆ ದಯಪಾಲಿಸಿದ್ದಾನೆ. “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ” ಇರುವ ಈ ಜೊತೆ ಆರಾಧಕರು ಸೇವೆಯಲ್ಲಿ ಮುಂದುವರಿಯುವಂತೆ ನಿಮ್ಮನ್ನು ಉತ್ತೇಜಿಸುತ್ತಾರೆ. (1 ಥೆಸ. 5:11) ಹೀಗೆ ನಿಮ್ಮ ನೇಮಕಗಳನ್ನು ಪೂರೈಸಲು ಯೆಹೋವನು ನಿಮ್ಮನ್ನು ಸನ್ನದ್ಧಗೊಳಿಸುವಾಗ ಆತನಲ್ಲಿನ ನಿಮ್ಮ ನಂಬಿಕೆ ಹೆಚ್ಚಾಗುವುದು ಹಾಗೂ ನಿಮಗಿರುವ ಸೇವಾಸುಯೋಗಗಳನ್ನು ಈ ಲೋಕದ ಎಲ್ಲಾ ನಿಕ್ಷೇಪಗಳಿಗಿಂತ ಎಷ್ಟೋ ಶ್ರೇಷ್ಠವಾದ ಐಶ್ವರ್ಯವೆಂದೆಣಿಸುವಿರಿ.
“ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು”
14. ಯೆಹೋವನು ತನಗೆ ಪ್ರತಿಫಲ ಕೊಡುತ್ತಾನೆಂಬ ಖಾತ್ರಿ ಮೋಶೆಗಿತ್ತು ಏಕೆ?
14 ಮೋಶೆಯು “ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು.” (ಇಬ್ರಿ. 11:26) ಭವಿಷ್ಯತ್ತಿನ ಕುರಿತಾಗಿ ಮೋಶೆಗೆ ಸ್ವಲ್ಪವೇ ತಿಳಿವಳಿಕೆ ಇತ್ತಾದರೂ ಆ ಜ್ಞಾನಕ್ಕನುಸಾರ ನಿರ್ಣಯಗಳನ್ನು ಮಾಡಿದನು. ತನ್ನ ಪೂರ್ವಜನಾದ ಅಬ್ರಹಾಮನಂತೆಯೇ ಮೋಶೆಯು ಸಹ ಯೆಹೋವನು ಸತ್ತವರನ್ನು ಪುನರುತ್ಥಾನಗೊಳಿಸಶಕ್ತನು ಎಂದು ನಂಬಿದ್ದನು. (ಲೂಕ 20:37, 38; ಇಬ್ರಿ. 11:17-19) ಯೆಹೋವನು ಮುಂದೆ ಕೊಡಲಿದ್ದ ಆಶೀರ್ವಾದಗಳ ಮೇಲೆ ಮೋಶೆ ಮನಸ್ಸಿಟ್ಟದ್ದರಿಂದ ಐಗುಪ್ತದಿಂದ ಓಡಿ ಹೋಗಿ ಕಳೆದಿದ್ದ 40 ವರ್ಷಗಳನ್ನು ಅಲೆಮಾರಿ ಜೀವನವೆಂಬಂತೆ ನೆನಸಲಿಲ್ಲ. ಮಾತ್ರವಲ್ಲ ನಂತರ ಇಸ್ರಾಯೇಲ್ಯರೊಂದಿಗೆ 40 ವರ್ಷ ಅರಣ್ಯದಲ್ಲಿ ಕಳೆದದ್ದನ್ನು ವ್ಯರ್ಥವಾದ ಜೀವನವೆಂದು ಎಣಿಸಲಿಲ್ಲ. ಯೆಹೋವನು ತನ್ನ ವಾಗ್ದಾನಗಳನ್ನು ಯಾವ ರೀತಿಯಲ್ಲಿ ನೆರವೇರಿಸುತ್ತಾನೆಂಬ ಎಲ್ಲ ವಿವರಗಳು ಮೋಶೆಗೆ ತಿಳಿದಿರಲಿಲ್ಲವಾದರೂ ನಂಬಿಕೆಯ ಕಣ್ಣುಗಳಿಂದ ಮುಂದೆ ಸಿಗಲಿರುವ ಬಹುಮಾನವನ್ನು ನೋಡಿದನು.
15, 16. (ಎ) ನಾವೇಕೆ ನಮ್ಮ ಬಹುಮಾನದ ಮೇಲೆ ದೃಷ್ಟಿ ನೆಡಬೇಕು? (ಬಿ) ದೇವರ ರಾಜ್ಯದಲ್ಲಿ ಯಾವ ಆಶೀರ್ವಾದವನ್ನು ಅನುಭವಿಸಲು ನೀವು ಕಾತರದಿಂದಿದ್ದೀರಿ?
15 ನೀವು ಸಹ ‘ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟಿದ್ದೀರೋ’? ಮೋಶೆಯಂತೆ ನಮಗೂ ದೇವರ ವಾಗ್ದಾನಗಳ ಕುರಿತು ಎಲ್ಲ ವಿವರಗಳು ತಿಳಿದಿಲ್ಲ. ಉದಾಹರಣೆಗೆ, ಮಹಾ ಸಂಕಟ ಆರಂಭವಾಗುವ “ನೇಮಿತ ಸಮಯ” ನಮಗೆ ಗೊತ್ತಿಲ್ಲ. (ಮಾರ್ಕ 13:32, 33) ಆದರೂ ಭವಿಷ್ಯತ್ತಿನ ಪರದೈಸಿನ ಬಗ್ಗೆ ಮೋಶೆಗಿಂತ ಎಷ್ಟೋ ಹೆಚ್ಚು ವಿಷಯಗಳು ನಮಗೆ ಗೊತ್ತಿವೆ. ದೇವರ ರಾಜ್ಯದಲ್ಲಿ ಜೀವನ ಹೇಗಿರುವುದು ಎಂಬ ಕುರಿತು ಪ್ರತಿಯೊಂದು ವಿವರ ನಮಗೆ ತಿಳಿದಿಲ್ಲವಾದರೂ ಆ ಭಾವೀ ಜೀವನದ ಮೇಲೆ “ತೀವ್ರಾಸಕ್ತಿಯಿಂದ” ದೃಷ್ಟಿನೆಡಲು ಬೇಕಾದಷ್ಟು ದೈವಿಕ ವಾಗ್ದಾನಗಳು ನಮಗೆ ತಿಳಿದಿವೆ. ಹೊಸ ಲೋಕದ ಸ್ಪಷ್ಟವಾದ ಚಿತ್ರಣವನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಾದರೆ ಅದು ದೇವರ ರಾಜ್ಯವನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಡುವಂತೆ ಪ್ರಚೋದಿಸುವುದು. ಹೇಗೆ? ಈ ಬಗ್ಗೆ ಯೋಚಿಸಿ: ಒಂದು ಮನೆ ಹೇಗಿದೆ ಎಂದು ನೀವು ತಿಳಿದುಕೊಳ್ಳದೆ ಅದನ್ನು ಖರೀದಿಸಲು ಹಣ ವ್ಯಯಿಸುತ್ತೀರಾ? ಖಂಡಿತ ಇಲ್ಲ. ಅದೇರೀತಿ, ಭವಿಷ್ಯತ್ತಿನ ನಮ್ಮ ನಿರೀಕ್ಷೆಯ ಬಗ್ಗೆ ಸರಿಯಾಗಿ ತಿಳಿದಿಲ್ಲವಾದರೆ ಅದಕ್ಕಾಗಿ ನಮ್ಮ ಇಡೀ ಜೀವನವನ್ನು ವ್ಯಯಿಸಲು ನಾವು ಹೋಗುವುದಿಲ್ಲ. ಹಾಗಾಗಿ ದೇವರ ರಾಜ್ಯದ ಕೆಳಗೆ ಜೀವನ ಹೇಗಿರುವುದು ಎಂಬುದನ್ನು ನಾವು ನಂಬಿಕೆಯ ಕಣ್ಣುಗಳಿಂದ ನೋಡಬೇಕು, ಅದರ ಚಿತ್ರಣ ನಮ್ಮ ಮನಃಪಟಲದಲ್ಲಿ ಸ್ಪಷ್ಟವಾಗಿರಬೇಕು.
16 ದೇವರ ರಾಜ್ಯದ ಚಿತ್ರಣವನ್ನು ನಿಮ್ಮ ಮನಸ್ಸಿನಲ್ಲಿ ಹೆಚ್ಚು ಸ್ಪಷ್ಟಗೊಳಿಸಲಿಕ್ಕಾಗಿ ಪರದೈಸಿನಲ್ಲಿನ ನಿಮ್ಮ ಜೀವನದ ಮೇಲೆ “ತೀವ್ರಾಸಕ್ತಿಯಿಂದ” ದೃಷ್ಟಿನೆಡಿರಿ. ಅದನ್ನು ಹೇಗೆ ಮಾಡಬಹುದು? ನಿಮ್ಮ ಕಲ್ಪನಾಶಕ್ತಿಯನ್ನು ಬಳಸಿ. ಉದಾಹರಣೆಗೆ, ಪ್ರಾಚೀನ ಕಾಲದ ದೇವಸೇವಕರ ಕುರಿತು ನೀವು ಅಧ್ಯಯನ ಮಾಡುತ್ತಿರುವಲ್ಲಿ ಅವರು ಪುನರುತ್ಥಾನವಾಗಿ ಬಂದಾಗ ಅವರ ಹತ್ತಿರ ಏನೆಲ್ಲ ಕೇಳುವಿರಿ ಎಂದು ಆಲೋಚಿಸಿ. ಕಡೇ ದಿವಸಗಳಲ್ಲಿನ ನಿಮ್ಮ ಜೀವನದ ಕುರಿತು ಅವರು ಏನು ಕೇಳಬಹುದೆಂದು ಊಹಿಸಿ. ನೂರಾರು ವರ್ಷಗಳ ಹಿಂದೆ ಜೀವಿಸಿದ ನಿಮ್ಮ ಪೂರ್ವಜರನ್ನು ಭೇಟಿಮಾಡುವಾಗ, ಅವರಿಗಾಗಿ ದೇವರು ಏನೆಲ್ಲ ಮಾಡಿದ್ದಾನೆಂದು ನೀವು ಅವರಿಗೆ ಕಲಿಸುವಾಗ ಎಷ್ಟು ಆನಂದದಿಂದ ಹಿಗ್ಗುವಿರೆಂದು ಕಲ್ಪಿಸಿಕೊಳ್ಳಿ. ಕ್ರೂರ ಪ್ರಾಣಿಗಳು ಶಾಂತಿಯಿಂದ ಜೀವಿಸುವುದನ್ನು ಗಮನಿಸುತ್ತಾ ಅವುಗಳ ಕುರಿತು ನೀವು ಹೆಚ್ಚು ಕಲಿತುಕೊಳ್ಳುವಾಗ ನೀವೆಷ್ಟು ರೋಮಾಂಚನಗೊಳ್ಳುವಿರೆಂದು ಊಹಿಸಿ. ನೀವು ಪರಿಪೂರ್ಣತೆಗೇರುತ್ತಿರುವಾಗ ಯೆಹೋವನಿಗೆ ಎಷ್ಟು ಹೆಚ್ಚು ಆಪ್ತರಾಗುವಿರಿ ಎಂಬುದನ್ನು ಆಲೋಚಿಸಿ.
17. ಕಣ್ಣಿಗೆ ಕಾಣದಿರುವ ನಮ್ಮ ಬಹುಮಾನದ ಸ್ಪಷ್ಟ ಚಿತ್ರಣವು ಇಂದು ನಮಗೆ ಹೇಗೆ ನೆರವಾಗುತ್ತದೆ?
17 ಕಣ್ಣಿಗೆ ಕಾಣದಿರುವ ನಮ್ಮ ಬಹುಮಾನದ ಕುರಿತು ಮನಸ್ಸಿನಲ್ಲಿ ಸ್ಪಷ್ಟ ಚಿತ್ರಣವನ್ನು ಹೊಂದಿರುವುದು ನಾವು ಮುಂದೆ ಸಾಗುತ್ತಾ ಇರುವಂತೆ, ಆನಂದದಿಂದಿರುವಂತೆ ಹಾಗೂ ನಮ್ಮ ಮುಂದಿರುವ ನಿರಂತರ ಜೀವನವನ್ನು ಮನಸ್ಸಿನಲ್ಲಿಟ್ಟು ನಿರ್ಣಯಗಳನ್ನು ಮಾಡುವಂತೆ ನೆರವಾಗುವುದು. ಈ ಕುರಿತು ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಹೀಗೆ ಬರೆದನು: “ನಾವು ಕಾಣದಿರುವುದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ಇರುತ್ತೇವೆ.” (ರೋಮ. 8:25) ಈ ಮಾತುಗಳು ನಿತ್ಯಜೀವದ ನಿರೀಕ್ಷೆಯಿರುವ ಎಲ್ಲ ಕ್ರೈಸ್ತರಿಗೂ ಅನ್ವಯವಾಗುತ್ತವೆ. ನಾವಿನ್ನೂ ಬಹುಮಾನ ಪಡೆದಿಲ್ಲವಾದರೂ ನಮ್ಮ ನಂಬಿಕೆ ಎಷ್ಟು ದೃಢವಾಗಿದೆಯೆಂದರೆ ‘ಬಹುಮಾನದ ನೀಡುವಿಕೆಗಾಗಿ’ ನಾವು ತಾಳ್ಮೆಯಿಂದ ಕಾಯುತ್ತಾ ಇರುತ್ತೇವೆ. ನಾವು ಎಷ್ಟೇ ವರ್ಷ ಯೆಹೋವನ ಸೇವೆ ಮಾಡಿರಲಿ ಮೋಶೆಯಂತೆಯೇ ನಾವದನ್ನು ವ್ಯರ್ಥವೆಂದು ಎಣಿಸುವುದಿಲ್ಲ. ಬದಲಿಗೆ ‘ಕಾಣುವಂಥ ಸಂಗತಿಗಳು ತಾತ್ಕಾಲಿಕ, ಕಾಣದಿರುವಂಥ ಸಂಗತಿಗಳು ನಿರಂತರ’ ಎಂಬ ಖಾತ್ರಿ ನಮಗಿದೆ.—2 ಕೊರಿಂಥ 4:16-18 ಓದಿ.
18, 19. (ಎ) ನಮ್ಮ ನಂಬಿಕೆ ಕಾಪಾಡಿಕೊಳ್ಳಲು ನಾವೇಕೆ ಹೋರಾಟ ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುತ್ತೇವೆ?
18 ನಂಬಿಕೆಯಿಂದಾಗಿ ನಾವು “ಕಣ್ಣಿಗೆ ಕಾಣದಿರುವ ನಿಜತ್ವಗಳ” ಮನಗಾಣಿಸುವ ರುಜುವಾತುಗಳನ್ನು ಗ್ರಹಿಸಲು ಶಕ್ತರಾಗುತ್ತೇವೆ. (ಇಬ್ರಿ. 11:1) ಭೌತಿಕ ಮನುಷ್ಯನಾದರೋ ನಂಬಿಕೆಯ ಕಣ್ಣುಗಳಿಂದ ನೋಡದ ಕಾರಣ ದೇವರ ಸೇವೆಯನ್ನು ಅಮೂಲ್ಯವಾದದ್ದಾಗಿ ಎಣಿಸುವುದಿಲ್ಲ. ಅಂಥ ವ್ಯಕ್ತಿಗೆ ಆಧ್ಯಾತ್ಮಿಕ ನಿಕ್ಷೇಪಗಳು “ಹುಚ್ಚುಮಾತಾಗಿ” ತೋರುತ್ತವೆ. (1 ಕೊರಿಂ. 2:14) ಆದರೆ ನಾವು ಶಾಶ್ವತ ಜೀವನವನ್ನು ಆನಂದಿಸಲು, ಪುನರುತ್ಥಾನವನ್ನು ಕಣ್ಣಾರೆ ನೋಡಲು ಕಾಯುತ್ತಿದ್ದೇವೆ. ಆದರೆ ಲೋಕದ ಜನರಿಗೆ ಅದು ಕಲ್ಪನೆಗೂ ಮೀರಿದ್ದಾಗಿದೆ. ಪೌಲನನ್ನು ಆ ಕಾಲದಲ್ಲಿದ್ದ ತತ್ತ್ವಜ್ಞಾನಿಗಳು ಅಜ್ಞಾನಿಯಾದ “ಮಾತಾಳಿ” ಎಂದು ಕರೆದರು. ಹಾಗೆಯೇ ಇಂದು ಸಹ ನಾವು ಸಾರುವ ನಿರೀಕ್ಷೆಯು ಹೆಚ್ಚಿನ ಜನರಿಗೆ ಹುರುಳಿಲ್ಲದ ಮಾತಾಗಿ ತೋರುತ್ತದೆ.—ಅ. ಕಾ. 17:18.
19 ನಂಬಿಕೆಯಿಲ್ಲದ ಲೋಕದಲ್ಲಿ ಜೀವಿಸುತ್ತಿರುವುದರಿಂದ ನಾವು ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಲು ಹೋರಾಟ ಮಾಡಬೇಕು. ಹಾಗಾಗಿ ನಿಮ್ಮ “ನಂಬಿಕೆಯು ಮುರಿದುಬೀಳದಂತೆ” ಯೆಹೋವನಲ್ಲಿ ಯಾಚಿಸಿರಿ. (ಲೂಕ 22:32) ಪಾಪದ ಪರಿಣಾಮಗಳಿಗೆ ಕುರುಡರಾಗಬೇಡಿರಿ. ಯೆಹೋವನ ಸೇವೆ ಮತ್ತು ನಿತ್ಯಜೀವದ ನಿರೀಕ್ಷೆ ಎಷ್ಟು ಅಮೂಲ್ಯ ಎಂಬುದನ್ನು ಮನಸ್ಸಿನಲ್ಲಿಡಿ. ಮೋಶೆಯಲ್ಲಿದ್ದ ನಂಬಿಕೆಯು ಇನ್ನೂ ಹೆಚ್ಚಿನದ್ದನ್ನು ನೋಡಲು ಅವನಿಗೆ ಸಹಾಯ ಮಾಡಿತು. ಅವನು “ಅದೃಶ್ಯನಾಗಿರುವಾತನನ್ನು” ನೋಡಲು ಶಕ್ತನಾದನು. ಹೇಗೆಂದು ಮುಂದಿನ ಲೇಖನದಲ್ಲಿ ಪರಿಗಣಿಸೋಣ.—ಇಬ್ರಿ. 11:27.
a ವಿಮೋಚನಕಾಂಡ 3:14ರಲ್ಲಿರುವ ದೇವರ ಮಾತುಗಳ ಬಗ್ಗೆ ಒಬ್ಬ ಬೈಬಲ್ ವಿದ್ವಾಂಸನು ಬರೆದದ್ದು: “ತನ್ನ ಚಿತ್ತವನ್ನು ಪೂರೈಸುವುದರಿಂದ ದೇವರನ್ನು ಯಾರೂ ಯಾವುದೂ ತಡೆಯಸಾಧ್ಯವಿಲ್ಲ. . . . ಈ ಹೆಸರು [ಯೆಹೋವ] ಇಸ್ರಾಯೇಲ್ಯರ ಕೋಟೆಯೂ ನಿರೀಕ್ಷೆ ಹಾಗೂ ಸಾಂತ್ವನದ ಬತ್ತಿಹೋಗದ ಮೂಲವೂ ಆಗಿರಬೇಕಿತ್ತು.”