“ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
“ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು.”—ಇಬ್ರಿ. 11:27.
1, 2. (ಎ) ಮೋಶೆ ಅಪಾಯದಲ್ಲಿದ್ದಂತೆ ಏಕೆ ತೋರುತ್ತಿತ್ತೆಂದು ವಿವರಿಸಿ. (ಮೇಲಿರುವ ಚಿತ್ರ ನೋಡಿ.) (ಬಿ) ಮೋಶೆ ಅರಸನ ಕೋಪಕ್ಕೆ ಭಯಪಡಲಿಲ್ಲ ಏಕೆ?
ಫರೋಹ ಎಂದೊಡನೆ ಐಗುಪ್ತದಲ್ಲಿ ಎಲ್ಲರ ಎದೆನಡುಗುತ್ತಿತ್ತು. ಅವರಿಗೆ ಅವನು ದೇವಮಾನವನಾಗಿದ್ದನು. ಯಾವ ಭೂಜೀವಿಯೂ ಫರೋಹನನ್ನು “ಬುದ್ಧಿಯಲ್ಲಾಗಲಿ ಶಕ್ತಿಯಲ್ಲಾಗಲಿ” ಮೀರಿಸಲು ಸಾಧ್ಯವಿಲ್ಲ ಎನ್ನುವುದು ಐಗುಪ್ತದವರ ಎಣಿಕೆಯಾಗಿತ್ತು ಎನ್ನುತ್ತದೆ ಒಂದು ಪುಸ್ತಕ. (ಪೂರ್ವದೇಶಗಳ ಮೇಲೆ ಈಜಿಪ್ಟ್ನ ಆಳ್ವಿಕೆ, ಇಂಗ್ಲಿಷ್) ತಾನೆಂದರೆ ಪ್ರಜೆಗಳು ಭಯದಿಂದ ನಡುಗಬೇಕೆಂಬ ಕಾರಣದಿಂದ ಫರೋಹನು ತನ್ನ ಕಿರೀಟದಲ್ಲಿ ಹೆಡೆಬಿಚ್ಚಿ ಕಚ್ಚಲು ಸಿದ್ಧವಾಗಿರುವ ನಾಗರಹಾವಿನ ಪ್ರತೀಕವನ್ನು ಧರಿಸುತ್ತಿದ್ದನು. ಅದು, ಅರಸನ ವಿರೋಧಿಗಳು ಕ್ಷಣದಲ್ಲಿ ನಾಶವಾಗುವರು ಎಂದು ಸಾರಿಹೇಳುತ್ತಿತ್ತು. ಹೀಗಿರುವಾಗ ಯೆಹೋವನು ಮೋಶೆಗೆ, “ನನ್ನ ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ” ಎಂದು ಹೇಳಿದಾಗ ಮೋಶೆಗೆ ಹೇಗಾಗಿರಬೇಕು ಎಂದು ಊಹಿಸಿ.—ವಿಮೋ. 3:10.
2 ಮೋಶೆ ಐಗುಪ್ತಕ್ಕೆ ಹೋದನು. ಯೆಹೋವನ ಮಾತುಗಳನ್ನು ಫರೋಹನಿಗೆ ತಿಳಿಸಿದನು. ಜೊತೆಗೆ ಫರೋಹನ ಕೋಪಕ್ಕೆ ಗುರಿಯಾದನು. ಒಂಭತ್ತು ಬಾಧೆಗಳು ಆ ದೇಶವನ್ನು ಬಾಧಿಸಿದ ಬಳಿಕ ಫರೋಹನು ಮೋಶೆಗೆ ಎಚ್ಚರಿಕೆ ಕೊಡುತ್ತಾ, “ಇನ್ನು ಮುಂದೆ ನನ್ನ ಮುಖದೆದುರಿಗೆ ಬರಲೇ ಕೂಡದು; ಎಚ್ಚರ; ತಿರಿಗಿ ಸನ್ನಿಧಿಗೆ ಬಂದರೆ ಮರಣದಂಡನೆ ಆಗುವದು” ಎಂದು ಗುಡುಗಿದನು. (ವಿಮೋ. 10:28) ಆದರೆ ಅಲ್ಲಿಂದ ಹೋಗುವ ಮುಂಚೆ ಮೋಶೆಯು ಅರಸನ ಚೊಚ್ಚಲ ಮಗ ಸಾಯುವನು ಎಂದು ಮುನ್ನುಡಿದನು. (ವಿಮೋ. 11:4-8) ಬಳಿಕ ಮೋಶೆ ಎಲ್ಲ ಇಸ್ರಾಯೇಲ್ಯ ಕುಟುಂಬಗಳಿಗೆ ಒಂದು ಗಂಡು ಕುರಿ ಅಥವಾ ಒಂದು ಆಡನ್ನು ಕೊಯ್ದು ಅದರ ರಕ್ತವನ್ನು ಬಾಗಲಿನ ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕೆಂದು ಹೇಳಿದನು. ಆದರೆ ಗಂಡು ಕುರಿಯು ಐಗುಪ್ತದ ‘ರಾ’ ದೇವನಿಗೆ ತುಂಬ ಪವಿತ್ರವಾಗಿತ್ತು. (ವಿಮೋ. 12:5-7) ಫರೋಹ ಹೇಗೆ ಪ್ರತಿಕ್ರಿಯಿಸಲಿದ್ದನು? ಅದು ಹೇಗೆಯೇ ಇದ್ದಿರಲಿ ಮೋಶೆ ಹೆದರಲಿಲ್ಲ. ಏಕೆ? ಏಕೆಂದರೆ ಅವನು ಯೆಹೋವನಲ್ಲಿ ನಂಬಿಕೆಯಿಟ್ಟು ಆತನಿಗೆ ವಿಧೇಯನಾದನು. “ಅರಸನ ಕೋಪಕ್ಕೆ ಭಯಪಡದೆ . . . ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು.”—ಇಬ್ರಿಯ 11:27, 28 ಓದಿ.
3. ‘ಅದೃಶ್ಯನಾಗಿರುವಾತನಲ್ಲಿ’ ಮೋಶೆಗಿದ್ದ ನಂಬಿಕೆಯ ವಿಷಯದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?
3 ನಿಮ್ಮ ನಂಬಿಕೆಯು ಎಷ್ಟು ಬಲವಾಗಿದೆ? ‘ದೇವರನ್ನು ನೋಡುತ್ತಿದ್ದೀರೋ’ ಎನ್ನುವಷ್ಟು ಬಲವಾಗಿದೆಯೇ? (ಮತ್ತಾ. 5:8) ‘ಅದೃಶ್ಯನಾಗಿರುವಾತನಾದ’ ದೇವರನ್ನು ಒಬ್ಬ ನೈಜ ವ್ಯಕ್ತಿಯಾಗಿ ನೋಡುವಷ್ಟು ನಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಚುರುಕುಗೊಳಿಸಲು ನಾವೀಗ ಮೋಶೆಯ ಮಾದರಿಯನ್ನು ಚರ್ಚಿಸೋಣ. ಯೆಹೋವನಲ್ಲಿ ಅವನಿಗಿದ್ದ ನಂಬಿಕೆಯು ಮನುಷ್ಯರಿಗೆ ಭಯಪಡದಿರಲು ಹೇಗೆ ಸಹಾಯಮಾಡಿತು? ದೇವರು ನುಡಿದ ಮಾತುಗಳಲ್ಲಿ ಮೋಶೆ ಹೇಗೆ ನಂಬಿಕೆ ವ್ಯಕ್ತಪಡಿಸಿದನು? “ಅದೃಶ್ಯನಾಗಿರುವಾತನನ್ನು” ನೋಡಲು ಶಕ್ತನಾದದ್ದು ಅವನಿಗೂ ಅವನ ಜನರಿಗೂ ಗಂಡಾಂತರ ಬಂದಾಗ ಮೋಶೆಯನ್ನು ಹೇಗೆ ಬಲಪಡಿಸಿತು?
ಅವನು ‘ಅರಸನ ಕೋಪಕ್ಕೆ ಭಯಪಡಲಿಲ್ಲ’
4. ಫರೋಹನ ಸನ್ನಿಧಿಯಲ್ಲಿ ನಿಂತ ಮೋಶೆಯನ್ನು ನಂಬಿಕೆಯಿಲ್ಲದ ಜನರು ಹೇಗೆ ವೀಕ್ಷಿಸಿರಬಹುದು?
4 ಯೆಹೋವನಲ್ಲಿ ನಂಬಿಕೆಯಿಲ್ಲದವರ ದೃಷ್ಟಿಯಲ್ಲಿ ಬಹುಪರಾಕ್ರಮಿಯಾದ ಫರೋಹನ ಮುಂದೆ ಮೋಶೆ ನಿರ್ಬಲನಾಗಿ ಕಂಡಿರಬಹುದು. ಮೋಶೆಯ ಅಳಿವು-ಉಳಿವು, ಭವಿಷ್ಯ ಎಲ್ಲವೂ ಫರೋಹನ ಕೈಯಲ್ಲಿದ್ದಂತೆ ತೋರಿರಬಹುದು. ಸ್ವತಃ ಮೋಶೆ ಕೂಡ ಯೆಹೋವನಿಗೆ, “ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು” ಎಂದು ಕೇಳಿದ್ದನು. (ವಿಮೋ. 3:11) ಸುಮಾರು ನಲ್ವತ್ತು ವರ್ಷಗಳ ಹಿಂದೆ ಐಗುಪ್ತದಿಂದ ಓಡಿಹೋಗಿದ್ದ ಮೋಶೆಗೆ ತಾನು ಈಗ ಐಗುಪ್ತಕ್ಕೆ ಹಿಂದಿರುಗಿ ಅರಸನ ಕೆಂಗಣ್ಣಿಗೆ ಗುರಿಯಾಗುವುದು ಎಷ್ಟು ಸರಿ ಎಂದನಿಸಿರಬಹುದು.
5, 6. ಮೋಶೆಯು ಫರೋಹನಿಗೆ ಭಯಪಡದೆ ಯೆಹೋವನಿಗೆ ಭಯಪಡುವಂತೆ ಯಾವುದು ಸಹಾಯಮಾಡಿತು?
5 ಮೋಶೆ ಐಗುಪ್ತಕ್ಕೆ ಹಿಂದಿರುಗುವ ಮುಂಚೆ ದೇವರು ಅವನಿಗೆ ಒಂದು ಪ್ರಾಮುಖ್ಯ ಅಂಶವನ್ನು ಕಲಿಸಿದನು. ಸಮಯಾನಂತರ ಮೋಶೆ ಅದನ್ನೇ ಯೋಬ ಪುಸ್ತಕದಲ್ಲಿ ದಾಖಲಿಸಿದನು. “ಯೆಹೋವನ ಭಯವೇ ವಿವೇಕವು.” (ಯೋಬ 28:28, NW) ಈ ಭಯವನ್ನು ಬೆಳೆಸಿಕೊಳ್ಳಲು ಮತ್ತು ವಿವೇಕದಿಂದ ಕ್ರಿಯೆಗೈಯಲು ಯೆಹೋವನು ಮೋಶೆಗೆ ಹೇಗೆ ಸಹಾಯ ಮಾಡಿದನು? ಆತನು ಹೀಗೆ ಕೇಳಿದನು: “ಮನುಷ್ಯರಿಗೆ ಬಾಯಿ ಕೊಟ್ಟವರಾರು? ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವುಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ.” ಈ ಮೂಲಕ ಸರ್ವಶಕ್ತ ದೇವರಾದ ತನಗೂ ಮಾನವರಿಗೂ ಇರುವ ವ್ಯತ್ಯಾಸವನ್ನು ತೋರಿಸಿಕೊಟ್ಟನು.—ವಿಮೋ. 4:11.
6 ಇದರಿಂದ ಮೋಶೆ ಏನು ಕಲಿತನು? ಯೆಹೋವನೇ ಮೋಶೆಯನ್ನು ಕಳುಹಿಸಿದ್ದ ಕಾರಣ ಅವನು ಭಯಪಡುವ ಅಗತ್ಯವಿರಲಿಲ್ಲ. ದೇವರ ಸಂದೇಶವನ್ನು ಫರೋಹನಿಗೆ ತಿಳಿಸಲು ಬೇಕಾದ ಎಲ್ಲಾ ಸಹಾಯವನ್ನು ಯೆಹೋವನು ಕೊಡಲಿದ್ದನು. ಫರೋಹನು ಯೆಹೋವನ ಮುಂದೆ ತೃಣಸಮಾನನಾಗಿದ್ದನು. ಅಲ್ಲದೆ ಐಗುಪ್ತದಲ್ಲಿ ದೇವರ ಸೇವಕರು ಗಂಡಾಂತರಕ್ಕೊಳಗಾದದ್ದು ಇದೇನೂ ಮೊದಲ ಬಾರಿಯಲ್ಲ. ಹಿಂದೆ ಬೇರೆ ಫರೋಹರ ಆಳ್ವಿಕೆಯಡಿಯಲ್ಲಿ ಅಬ್ರಹಾಮನನ್ನು ಮತ್ತು ಯೋಸೇಫನನ್ನು ದೇವರು ಕಾಪಾಡಿದ್ದನು. ಈ ಉದಾಹರಣೆಗಳನ್ನು ಮಾತ್ರವಲ್ಲ ಸ್ವತಃ ತನ್ನನ್ನು ಈ ಮುಂಚೆ ಫರೋಹನಿಂದ ಯೆಹೋವನು ಹೇಗೆ ಉಳಿಸಿದನೆಂದು ಮೋಶೆ ಧ್ಯಾನಿಸಿದ್ದಿರಬೇಕು. (ಆದಿ. 12:17-19; 41:14, 39-41; ವಿಮೋ. 1:22–2:10) ‘ಅದೃಶ್ಯನಾಗಿರುವಾತನಾದ’ ಯೆಹೋವನಲ್ಲಿ ನಂಬಿಕೆಯಿಟ್ಟು ಮೋಶೆ ಧೈರ್ಯದಿಂದ ಫರೋಹನ ಸನ್ನಿಧಿಯಲ್ಲಿ ಹೋಗಿ ನಿಂತನು ಮತ್ತು ಯೆಹೋವನು ಆಜ್ಞಾಪಿಸಿದ ಒಂದೊಂದು ಮಾತನ್ನೂ ಫರೋಹನಿಗೆ ತಿಳಿಸಿದನು.
7. ಯೆಹೋವನಲ್ಲಿನ ನಂಬಿಕೆಯು ಒಬ್ಬ ಸಹೋದರಿಯನ್ನು ಹೇಗೆ ಸಂರಕ್ಷಿಸಿತು?
7 ಯೆಹೋವನಲ್ಲಿ ನಂಬಿಕೆಯು ಮನುಷ್ಯರಿಗೆ ಭಯಪಡದಿರಲು ಒಬ್ಬ ಸಹೋದರಿಗೂ ಸಹಾಯಮಾಡಿತು. ಆಕೆಯ ಹೆಸರು ಎಲಾ. 1949ರಲ್ಲಿ ಎಸ್ಟೋನಿಯದ ಗುಪ್ತ ಪೊಲೀಸ್ ದಳವು (KGB) ಈಕೆಯನ್ನು ದಸ್ತಗಿರಿ ಮಾಡಿತು. ಆಕೆಯನ್ನು ಬೆತ್ತಲೆ ಮಾಡಲಾಯಿತು. ಯೌವನಸ್ಥ ಪೊಲೀಸ್ ಅಧಿಕಾರಿಗಳು ದುರುಗುಟ್ಟಿ ನೋಡುತ್ತಿದ್ದರು. “ನನಗೆ ತುಂಬ ಅವಮಾನವಾಯಿತು. ಆದರೆ ಯೆಹೋವನಲ್ಲಿ ಪ್ರಾರ್ಥಿಸಿದ ಮೇಲೆ ಒಂದು ರೀತಿ ಮನಸ್ಸು ಪ್ರಶಾಂತವಾಯಿತು. ಸಮಾಧಾನ ನನ್ನನ್ನಾವರಿಸಿತು” ಎನ್ನುತ್ತಾಳೆ ಎಲಾ. ಬಳಿಕ ಆಕೆಯನ್ನು ಮೂರು ದಿನ ಏಕಾಂತವಾಗಿ ಸೆರೆವಾಸದಲ್ಲಿ ಇಡಲಾಯಿತು. ಅವಳು ಹೀಗಂದಳು: “ಅಧಿಕಾರಿಗಳು ಅರಚುತ್ತಾ ‘ಎಸ್ಟೋನಿಯ ದೇಶದಿಂದ ಯೆಹೋವ ಎನ್ನುವ ಹೆಸರನ್ನೇ ಅಳಿಸಿಹಾಕಿಬಿಡುತ್ತೇವೆ! ನಿನ್ನನ್ನು ಸೆರೆಶಿಬಿರಕ್ಕೆ, ಮಿಕ್ಕಿದವರನ್ನು ಸೈಬೀರಿಯಕ್ಕೆ ಕಳುಹಿಸುತ್ತೇವೆ’ ಎಂದರು. ಅಲ್ಲದೆ, ‘ಎಲ್ಲಿದ್ದಾನೆ ನಿನ್ನ ಯೆಹೋವ?’ ಎಂದು ಅಣಕಿಸಿದರು.” ನಮ್ಮ ಸಹೋದರಿ ಏನು ಮಾಡಿದಳು? ಮನುಷ್ಯರಿಗೆ ಭಯಪಟ್ಟಳೇ? ಯೆಹೋವನಲ್ಲಿ ಭರವಸೆಯಿಟ್ಟಳೇ? ವಿಚಾರಣೆಗೆ ಒಳಪಡಿಸಿದಾಗ ಆಕೆ ತನ್ನನ್ನು ಹಂಗಿಸಿದವರಿಗೆ ನಿರ್ಭಯದಿಂದ ಹೀಗಂದಳು: “ನಾನು ಈ ಬಗ್ಗೆ ತುಂಬ ಯೋಚಿಸಿದ್ದೇನೆ. ನಾನು ಬಿಡುಗಡೆಯಾಗಿ ದೇವರ ಮೆಚ್ಚಿಗೆಯನ್ನು ಕಳಕೊಳ್ಳುವುದಕ್ಕಿಂತ ದೇವರೊಂದಿಗೆ ಆಪ್ತಳಾಗಿ ಉಳಿದು ಸೆರೆಮನೆಯಲ್ಲೇ ಇರುತ್ತೇನೆ.” ಹೌದು ಎಲಾಗೆ ಯೆಹೋವನು ತನ್ನ ಕಣ್ಣೆದುರಿಗೆ ನಿಂತಿದ್ದ ವ್ಯಕ್ತಿಗಳಷ್ಟೇ ನೈಜನಾಗಿದ್ದನು. ಯೆಹೋವನಲ್ಲಿ ನಂಬಿಕೆಯಿದ್ದ ಕಾರಣ ಆಕೆ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡಳು.
8, 9. (ಎ) ಮನುಷ್ಯ ಭಯಕ್ಕೆ ಮದ್ದು ಯಾವುದು? (ಬಿ) ಮನುಷ್ಯ ಭಯಕ್ಕೆ ಮಣಿಯಲು ಪ್ರಲೋಭನೆಯಾದಲ್ಲಿ ನಿಮ್ಮ ಗಮನವನ್ನು ಯಾರ ಮೇಲೆ ನೆಡಬೇಕು?
8 ನಿಮಗೆ ಕೂಡ ಭಯವನ್ನು ಮೆಟ್ಟಿನಿಲ್ಲಲು ಯೆಹೋವನಲ್ಲಿ ನಂಬಿಕೆಯು ಸಹಾಯ ಮಾಡಬಲ್ಲದು. ಯೆಹೋವನನ್ನು ಆರಾಧಿಸದಂತೆ ಅಧಿಕಾರಿಗಳು ತಡೆಯೊಡ್ಡುವಾಗ ನಿಮ್ಮ ಅಳಿವು-ಉಳಿವು, ಭವಿಷ್ಯ ಎಲ್ಲವೂ ಅವರ ಕೈಯಲ್ಲಿರುವಂತೆ ತೋರಬಹುದು. ಯೆಹೋವನನ್ನು ಆರಾಧಿಸುವುದನ್ನು ಮುಂದುವರಿಸಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗುವುದು ಸರಿಯೋ ಎಂದು ಸಹ ನಿಮಗೆ ಅನಿಸಬಹುದು. ಆದರೆ ನೆನಪಿಡಿ: ಮನುಷ್ಯ ಭಯವನ್ನು ಹೋಗಲಾಡಿಸುವ ಮದ್ದು ದೇವರಲ್ಲಿ ನಂಬಿಕೆಯೇ. (ಜ್ಞಾನೋಕ್ತಿ 29:25 ಓದಿ.) “ನೀನು ಜನರಿಗೆ ಯಾಕೆ ಹೆದರಬೇಕು? ಅವರು ಹುಟ್ಟಿ ಸಾಯುವ ನರರಾಗಿದ್ದಾರೆ. ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ” ಎಂದು ಹೇಳುತ್ತಾನೆ ಯೆಹೋವನು.—ಯೆಶಾ. 51:12, 13 ಪರಿಶುದ್ಧ ಬೈಬಲ್.a
9 ನಿಮ್ಮ ಗಮನವು ಯಾವಾಗಲೂ ಸರ್ವಶಕ್ತನಾದ ನಿಮ್ಮ ತಂದೆ ಯೆಹೋವನ ಮೇಲೆ ನೆಟ್ಟಿರಲಿ. ಅನ್ಯಾಯಿ ಅಧಿಕಾರಿಗಳ ಕೆಳಗೆ ಕಷ್ಟವನ್ನು ಅನುಭವಿಸುತ್ತಿರುವವರನ್ನು ಯೆಹೋವನು ನೋಡುತ್ತಾನೆ. ಅವರ ಕಡೆಗೆ ಸಹಾನುಭೂತಿ ತೋರಿಸುತ್ತಾನೆ. ಸಹಾಯಮಾಡುತ್ತಾನೆ ಕೂಡ. (ವಿಮೋ. 3:7-10) ಒಂದುವೇಳೆ ಅಧಿಕಾರಿಗಳ ಮುಂದೆ ನಿಮ್ಮ ನಂಬಿಕೆಯನ್ನು ಸಮರ್ಥಿಸಬೇಕಾದ ಸಂದರ್ಭ ಬಂದರೂ “ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಎಂದು ಚಿಂತಿಸಬೇಡಿರಿ; ನೀವು ಏನು ಮಾತಾಡಬೇಕು ಎಂಬುದು ಆ ಗಳಿಗೆಯಲ್ಲಿ ನಿಮಗೆ ತಿಳಿಯುವುದು.” (ಮತ್ತಾ. 10:18-20) ಯೆಹೋವನ ಮುಂದೆ ಮಾನವ ರಾಜರು ಮತ್ತು ಸರ್ಕಾರಿ ಅಧಿಕಾರಿಗಳು ನಿರ್ಬಲರಾಗಿದ್ದಾರೆ. ನೀವು ಈಗ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವಲ್ಲಿ ಯೆಹೋವನನ್ನು ನಿಮಗೆ ಸಹಾಯಮಾಡಲು ತವಕಿಸುವ ನೈಜ ವ್ಯಕ್ತಿಯಾಗಿ ನೋಡಶಕ್ತರಾಗುವಿರಿ.
ಅವನು ದೇವರ ಮಾತುಗಳಲ್ಲಿ ನಂಬಿಕೆಯಿಟ್ಟನು
10. (ಎ) ಕ್ರಿ.ಪೂ. 1513ರ ನೈಸಾನ್ ತಿಂಗಳಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಯಾವ ನಿರ್ದೇಶನಗಳನ್ನು ಕೊಟ್ಟನು? (ಬಿ) ಮೋಶೆ ದೇವರ ನಿರ್ದೇಶನಗಳಿಗೆ ವಿಧೇಯನಾಗಲು ಕಾರಣವೇನು?
10 ಕ್ರಿ.ಪೂ. 1513ರ ನೈಸಾನ್ ತಿಂಗಳಲ್ಲಿ ಯೆಹೋವನು ಮೋಶೆ ಮತ್ತು ಆರೋನನಿಗೆ ಕೆಲವು ನಿರ್ದೇಶನಗಳನ್ನು ಕೊಟ್ಟು ಅವುಗಳನ್ನು ಇಸ್ರಾಯೇಲ್ಯರಿಗೆ ತಿಳಿಸುವಂತೆ ಹೇಳಿದನು. ಏನೆಂದರೆ, ಅವರು ಯಾವುದೇ ಕುಂದಿಲ್ಲದ, ಆರೋಗ್ಯದಿಂದಿರುವ ಗಂಡು ಕುರಿಯನ್ನು ಅಥವಾ ಆಡನ್ನು ತೆಗೆದುಕೊಂಡು, ಕೊಯ್ದು ಅದರ ರಕ್ತವನ್ನು ಬಾಗಿಲ ನಿಲುವು ಪಟ್ಟಿಗಳಿಗೆ ಹಚ್ಚಬೇಕಿತ್ತು. (ವಿಮೋ. 12:3-7) ಇದಕ್ಕೆ ಮೋಶೆ ಹೇಗೆ ಪ್ರತಿಕ್ರಿಯಿಸಿದನು? ಇಂಥದ್ದನ್ನು ಇಸ್ರಾಯೇಲ್ಯರು ಹಿಂದೆಂದೂ ಮಾಡಿರಲಿಲ್ಲ. ಹಾಗಿದ್ದರೂ ಅಪೊಸ್ತಲ ಪೌಲ ಸಮಯಾನಂತರ ಬರೆದಂತೆ “ಸಂಹಾರಕನು ತಮ್ಮ ಚೊಚ್ಚಲಮಕ್ಕಳನ್ನು ಮುಟ್ಟದಂತೆ [ಮೋಶೆಯು] ಪಸ್ಕವನ್ನೂ ರಕ್ತದ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ.” (ಇಬ್ರಿ. 11:28) ಯೆಹೋವನು ಭರವಸಾರ್ಹನೆಂದು ಮೋಶೆಗೆ ಗೊತ್ತಿತ್ತು. ಐಗುಪ್ತದವರ ಚೊಚ್ಚಲ ಪುತ್ರರೆಲ್ಲರೂ ಸಂಹರಿಸಲ್ಪಡುವರೆಂದು ಯೆಹೋವನು ನುಡಿದ ಮಾತಿನಲ್ಲಿ ಮೋಶೆ ನಂಬಿಕೆಯಿಟ್ಟನು.
11. ಮೋಶೆ ಇತರ ಇಸ್ರಾಯೇಲ್ಯರನ್ನು ಏಕೆ ಎಚ್ಚರಿಸಿದನು?
11 ಮೋಶೆಯ ಗಂಡುಮಕ್ಕಳು ಮಿದ್ಯಾನಿನಲ್ಲಿದ್ದರೆಂಬುದು ಸುವ್ಯಕ್ತ. ಅವರು ‘ಸಂಹಾರಕನಿಂದ’ ಬಹುದೂರದಲ್ಲಿ ಸುರಕ್ಷಿತರಾಗಿದ್ದರು.b (ವಿಮೋ. 18:1-6) ಹಾಗಿದ್ದರೂ ಮೋಶೆ ವಿಧೇಯತೆಯಿಂದ ಇತರ ಇಸ್ರಾಯೇಲ್ಯ ಕುಟುಂಬಗಳಿಗೆ ಎಚ್ಚರಿಕೆ ಕೊಟ್ಟನು. ಏಕೆಂದರೆ ಅವರ ಚೊಚ್ಚಲ ಗಂಡುಮಕ್ಕಳ ಜೀವ ಅಪಾಯದಲ್ಲಿತ್ತು ಮತ್ತು ಮೋಶೆಗೆ ಜೊತೆಇಸ್ರಾಯೇಲ್ಯರ ಮೇಲೆ ಪ್ರೀತಿಯಿತ್ತು. ಆದ್ದರಿಂದ ಅವನು ಕೂಡಲೆ “ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ . . . ಕರಸಿ—ಅವರಿಗೆ ನೀವು ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಹಿಂಡಿನಿಂದ ಮರಿಗಳನ್ನು ತೆಗೆದುಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ” ಎಂದನು.—ವಿಮೋ. 12:21.
12. ಯಾವ ಪ್ರಾಮುಖ್ಯ ಸಂದೇಶವನ್ನು ತಿಳಿಯಪಡಿಸುವಂತೆ ಯೆಹೋವನು ನಮಗೆ ಹೇಳಿದ್ದಾನೆ?
12 ಇಂದು ದೇವದೂತರ ಮಾರ್ಗದರ್ಶನದ ಅಡಿಯಲ್ಲಿ ಯೆಹೋವನ ಜನರು ಬಹುಪ್ರಾಮುಖ್ಯವಾದ ಈ ಸಂದೇಶವನ್ನು ಪ್ರಕಟಪಡಿಸುತ್ತಿದ್ದಾರೆ: “ದೇವರಿಗೆ ಭಯಪಡಿರಿ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ, ಏಕೆಂದರೆ ಆತನ ನ್ಯಾಯತೀರ್ಪಿನ ಗಳಿಗೆಯು ಬಂದಿದೆ; ಆದುದರಿಂದ ಸ್ವರ್ಗವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ.” (ಪ್ರಕ. 14:7) ನಾವಿಂದು ಈ ಸಂದೇಶವನ್ನು ಸಾರಲೇಬೇಕು. ನಮ್ಮ ನೆರೆಯವರು ಮಹಾ ಬಾಬೆಲಿಗೆ ಆಗುವ ‘ಉಪದ್ರವಗಳಲ್ಲಿ ಪಾಲನ್ನು ಪಡೆಯದಿರಬೇಕಾದರೆ’ ಮಹಾ ಬಾಬೆಲನ್ನು ಬಿಟ್ಟು ಹೊರಬರುವಂತೆ ನಾವು ಅವರನ್ನು ಎಚ್ಚರಿಸಲೇಬೇಕು. (ಪ್ರಕ. 18:4) ಅಭಿಷಿಕ್ತ ಕ್ರೈಸ್ತರೊಂದಿಗೆ “ಬೇರೆ ಕುರಿಗಳು” ಜೊತೆಸೇರಿ ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ’ ಜನರನ್ನು ಬೇಡಿಕೊಳ್ಳುತ್ತಿದ್ದಾರೆ.—ಯೋಹಾ. 10:16; 2 ಕೊರಿಂ. 5:20.
13. ಸುವಾರ್ತೆಯನ್ನು ಸಾರುವ ನಮ್ಮ ಇಚ್ಛೆಯನ್ನು ಯಾವುದು ಇನ್ನೂ ತೀವ್ರಗೊಳಿಸುವುದು?
13 “ನ್ಯಾಯತೀರ್ಪಿನ ಗಳಿಗೆಯು” ಬಂದಿದೆ ಎಂಬ ಪೂರ್ಣ ನಿಶ್ಚಯ ನಮಗಿದೆ. ಮಾತ್ರವಲ್ಲ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸ ಎಷ್ಟು ತುರ್ತಿನದ್ದಾಗಿದೆ ಎನ್ನುವುದನ್ನು ಯೆಹೋವನು ಅತಿಶಯಿಸಿ ಹೇಳುತ್ತಿಲ್ಲವೆಂಬ ನಂಬಿಕೆ ಕೂಡ ನಮಗಿದೆ. ಅಪೊಸ್ತಲ ಯೋಹಾನನು ದರ್ಶನದಲ್ಲಿ “ಭೂಮಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿ ದೇವದೂತರು ನಿಂತುಕೊಂಡು . . . ಭೂಮಿಯ ನಾಲ್ಕು ಗಾಳಿಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು” ನೋಡಿದನು. (ಪ್ರಕ. 7:1) ದೇವದೂತರು ಈ ಲೋಕದ ಮೇಲೆ ಮಹಾ ಸಂಕಟದ ವಿನಾಶಕಾರಿ ಗಾಳಿಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿ ನಿಂತಿರುವುದನ್ನು ನಿಮ್ಮ ನಂಬಿಕೆಯ ಕಣ್ಣುಗಳಿಂದ ನೋಡುತ್ತಿದ್ದೀರೋ? ನೋಡುತ್ತಿರುವಲ್ಲಿ, ಸುವಾರ್ತೆಯನ್ನು ದೃಢಭರವಸೆಯಿಂದ ಸಾರಲು ಶಕ್ತರಾಗುವಿರಿ.
14. ‘ದುರ್ಮಾರ್ಗವನ್ನು ಬಿಡುವಂತೆ’ ದುಷ್ಟರನ್ನು ಎಚ್ಚರಿಸಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ?
14 ನಿಜ ಕ್ರೈಸ್ತರಾದ ನಮಗೆ ಯೆಹೋವನೊಂದಿಗೆ ಸ್ನೇಹಸಂಬಂಧವಿದೆ ಮತ್ತು ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಇದೆ. ಅದೇ ಸಮಯದಲ್ಲಿ “ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ” ದುಷ್ಟನನ್ನು ಎಚ್ಚರಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. (ಯೆಹೆಜ್ಕೇಲ 3:17-19 ಓದಿ.) ಆದರೆ ನಾವು ಸಾರುವುದು ರಕ್ತಾಪರಾಧದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮಾತ್ರವಲ್ಲ, ಯೆಹೋವನನ್ನೂ ನಮ್ಮ ನೆರೆಯವರನ್ನೂ ಪ್ರೀತಿಸುವುದರಿಂದಲೇ. ಪ್ರೀತಿ ಮತ್ತು ಕರುಣೆ ತೋರಿಸುವುದರ ನಿಜವಾದ ಅರ್ಥವೇನೆಂದು ಯೇಸು ಸಮಾರ್ಯದವನ ದೃಷ್ಟಾಂತದ ಮೂಲಕ ಹೇಳಿದನು. ನಾವು ಹೀಗೆ ಕೇಳಿಕೊಳ್ಳೋಣ: ‘ನಾನು ಕೂಡ ಆ ಸಮಾರ್ಯದವನಂತಿದ್ದೇನೋ? ಸಾಕ್ಷಿ ನೀಡುವಂತೆ ನನ್ನನ್ನು “ಕನಿಕರ” ಪ್ರೇರೇಪಿಸುತ್ತದೊ? ಅಥವಾ “ದಾರಿಯ ಆಚೇ ಬದಿಯಿಂದ” ಹೋದ ಆ ಯಾಜಕನಂತೆ ಮತ್ತು ಲೇವಿಯನಂತೆ ನಾನಿದ್ದೇನೋ? ಸಾಕ್ಷಿಕೊಡಲು ಸಂದರ್ಭ ಇದ್ದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೋ?’ (ಲೂಕ 10:25-37) ದೇವರ ವಾಗ್ದಾನಗಳಲ್ಲಿ ನಂಬಿಕೆ ಮತ್ತು ನೆರೆಯವರ ಮೇಲೆ ಪ್ರೀತಿ ನಮ್ಮಲ್ಲಿದ್ದರೆ ಕಾಲ ಮಿಂಚಿ ಹೋಗುವ ಮುನ್ನ ಸಾರುವ ಕಾರ್ಯದಲ್ಲಿ ಪೂರ್ಣವಾಗಿ ಒಳಗೂಡುವೆವು.
‘ಅವರು ಕೆಂಪು ಸಮುದ್ರವನ್ನು ದಾಟಿದರು’
15. ಇಸ್ರಾಯೇಲ್ಯರಿಗೆ ತಾವು ಸಿಕ್ಕಿಬಿದ್ದಿದ್ದೇವೆಂದು ಅನಿಸಿದ್ದೇಕೆ?
15 ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಬಂದ ಮೇಲೆ ಅಪಾಯದ ಸನ್ನಿವೇಶದಲ್ಲಿದ್ದಾಗ ಮೋಶೆಗೆ ಸಹಾಯಮಾಡಿದ್ದು ‘ಅದೃಶ್ಯನಾಗಿರುವಾತನಲ್ಲಿ’ ಅವನಿಗಿದ್ದ ನಂಬಿಕೆಯೇ. ಬೈಬಲ್ ಹೀಗನ್ನುತ್ತದೆ: “ಇಸ್ರಾಯೇಲ್ಯರು ಕಣ್ಣೆತ್ತಿ ತಮ್ಮ ಹಿಂದೆ ಹೊರಟುಬಂದಿದ್ದ ಐಗುಪ್ತ್ಯರನ್ನು ಕಂಡು ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು.” (ವಿಮೋ. 14:10-12) ಹೀಗಾಗುವುದೆಂದು ಇಸ್ರಾಯೇಲ್ಯರು ನಿರೀಕ್ಷಿಸಿರಲಿಲ್ಲವೇ? ನಿಜವೇನೆಂದರೆ ಯೆಹೋವನು ಈ ಬಗ್ಗೆ ಮೊದಲೇ ಮುಂತಿಳಿಸಿದ್ದನು: “ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನಾದದರಿಂದ ಅವನು ಅವರನ್ನು ಬೆನ್ನಟ್ಟಿಬರುವನು; ಆಗ ನಾನು ಫರೋಹನಲ್ಲಿಯೂ ಅವನ ಸೈನ್ಯದಲ್ಲಿಯೂ ಪ್ರಖ್ಯಾತಿಗೊಳ್ಳುವೆನು. ನಾನೇ ಯೆಹೋವನೆಂಬದು ಐಗುಪ್ತ್ಯರಿಗೆ ತಿಳಿದುಬರುವದು.” (ವಿಮೋ. 14:4) ಹಾಗಿದ್ದರೂ ಇಸ್ರಾಯೇಲ್ಯರಲ್ಲಿ ನಂಬಿಕೆಯಿರಲಿಲ್ಲ. ಅವರು ತಮ್ಮ ಕಣ್ಣಿಗೆ ಕಾಣುವುದ್ದನ್ನಷ್ಟೇ ನೋಡಿದರು. ಹಿಂದೆ, ಮಿಂಚಿನ ವೇಗದಲ್ಲಿ ದೌಡಾಯಿಸಿ ಬರುತ್ತಿದ್ದ ಫರೋಹನ ಯುದ್ಧ ರಥಗಳು. ಮುಂದೆ, ದಾರಿಗೆ ಅಡ್ಡವಾಗಿದ್ದ ಮಹಾ ಕೆಂಪು ಸಮುದ್ರ! ಅದಲ್ಲದೆ ತಮ್ಮನ್ನು ಕರೆದುಕೊಂಡು ಹೋಗುತ್ತಿರುವುದು 80 ವರ್ಷ ಪ್ರಾಯದ ಒಬ್ಬ ಕುರುಬ! ಇಷ್ಟನ್ನೇ ಅವರು ಕಂಡರು. ಹಾಗಾಗಿ ತಾವು ಸಿಕ್ಕಿಬಿದ್ದಿದ್ದೇವೆ, ಇನ್ನು ತಮ್ಮ ಕಥೆ ಮುಗಿಯಿತೆಂದೇ ಆ ಜನರು ನೆನಸಿದರು.
16. ಕೆಂಪು ಸಮುದ್ರದ ಬಳಿಯಿದ್ದಾಗ ನಂಬಿಕೆಯು ಮೋಶೆಯನ್ನು ಹೇಗೆ ಬಲಪಡಿಸಿತು?
16 ಆದರೆ ಮೋಶೆ ಸ್ವಲ್ಪವೂ ವಿಚಲಿತನಾಗಲಿಲ್ಲ. ಏಕೆ? ಏಕೆಂದರೆ ಅವನು ಸಮುದ್ರ ಮತ್ತು ಸೈನ್ಯಕ್ಕಿಂತ ಹೆಚ್ಚು ಬಲಾಢ್ಯವಾದದ್ದನ್ನು ನಂಬಿಕೆಯ ಕಣ್ಣುಗಳಿಂದ ನೋಡಿದನು. ಹೌದು, ಅವನು ‘ಯೆಹೋವನು ರಕ್ಷಿಸುವ ರೀತಿಯನ್ನು ನೋಡಿದನು.’ ಅಲ್ಲದೆ, ಇಸ್ರಾಯೇಲ್ಯರ ಪರವಾಗಿ ಯೆಹೋವನು ಹೋರಾಡುವನೆಂದು ಅವನಿಗೆ ಗೊತ್ತಿತ್ತು. (ವಿಮೋಚನಕಾಂಡ 14:13, 14 ಓದಿ.) ಮೋಶೆಯಲ್ಲಿದ್ದ ನಂಬಿಕೆಯು ದೇವಜನರನ್ನು ಬಲಪಡಿಸಿ ಪ್ರೋತ್ಸಾಹಿಸಿತು. ಬೈಬಲ್ ಹೀಗನ್ನುತ್ತದೆ: “ನಂಬಿಕೆಯಿಂದಲೇ ಅವರು ಒಣನೆಲದಲ್ಲಿಯೋ ಎಂಬಂತೆ ಕೆಂಪು ಸಮುದ್ರವನ್ನು ದಾಟಿದರು, ಆದರೆ ಈಜಿಪ್ಟ್ ದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿಹೋದರು.” (ಇಬ್ರಿ. 11:29) ಅದರ ನಂತರ ಇಸ್ರಾಯೇಲ್ಯರು “ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.”—ವಿಮೋ. 14:31.
17. ಮುಂದೆ ಸಂಭವಿಸಲಿರುವ ಯಾವ ಘಟನೆ ನಮ್ಮ ನಂಬಿಕೆಯನ್ನು ಪರೀಕ್ಷಿಸುವುದು?
17 ಶೀಘ್ರದಲ್ಲೇ ನಮ್ಮ ಜೀವ ಸಹ ಗಂಡಾಂತರದಲ್ಲಿರುವಂತೆ ತೋರುವುದು. ಮಹಾ ಸಂಕಟದ ಕೊನೆಯ ಹಂತದೊಳಗೆ ಈ ಲೋಕದ ಸರ್ಕಾರಗಳು ನಮ್ಮದಕ್ಕಿಂತಲೂ ಹೆಚ್ಚು ಪ್ರಬಲವಾದ ಮತ್ತು ಹೆಚ್ಚು ಸದಸ್ಯರನ್ನು ಹೊಂದಿರುವ ಧಾರ್ಮಿಕ ಸಂಘಟನೆಗಳನ್ನು ಧ್ವಂಸಗೊಳಿಸಿ ಪೂರ್ತಿಯಾಗಿ ನಾಶಮಾಡಿರುವವು. (ಪ್ರಕ. 17:16) ಆಗ ನಾವು ‘ಪೌಳಿಗೋಡೆಯಿಲ್ಲದ, ಅಗುಳಿ ಬಾಗಿಲು ಗೋಡೆಗಳಿಲ್ಲದ ದೇಶದಂತೆ’ ಇರುತ್ತೇವೆಂದು ಯೆಹೋವನು ಪ್ರವಾದಿಸಿದ್ದಾನೆ. (ಯೆಹೆ. 38:10-12, 14-16) ನಂಬಿಕೆಯ ಕಣ್ಣುಗಳಿಂದ ನೋಡದಿರುವವರಿಗೆ ತಮಗೆ ಪಾರಾಗಲು ಯಾವುದೇ ಅವಕಾಶ ಇಲ್ಲವೆಂದು ತೋರಬಹುದು. ಆದರೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
18. ಮಹಾಸಂಕಟದ ಸಮಯದಲ್ಲಿ ನಾವು ಸ್ಥಿರಚಿತ್ತರಾಗಿ ಉಳಿಯಸಾಧ್ಯವಿದೆ ಏಕೆಂದು ವಿವರಿಸಿ.
18 ನಾವು ಹೆದರಿ ಕಂಗಾಲಾಗಬೇಕಿಲ್ಲ. ಏಕೆ? ಏಕೆಂದರೆ ದೇವಜನರ ಮೇಲೆ ಆಗುವ ಆ ಆಕ್ರಮಣದ ಬಗ್ಗೆ ಯೆಹೋವನು ಈಗಾಗಲೇ ಮುಂತಿಳಿಸಿದ್ದಾನೆ ಮಾತ್ರವಲ್ಲ ಆ ಬಳಿಕ ಏನಾಗುವುದೆಂದೂ ಮುನ್ನುಡಿದಿದ್ದಾನೆ. “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ಗೋಗನು ಇಸ್ರಾಯೇಲ್ ದೇಶದ ಮೇಲೆ ಬೀಳುವ ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು. ನಾನು ರೋಷಾವಿಷ್ಟನಾಗಿ ಕೋಪದಿಂದುರಿಯುತ್ತಾ” ನುಡಿಯುವೆನು. (ಯೆಹೆ. 38:18-23) ತನ್ನ ಜನರಿಗೆ ಹಾನಿಮಾಡಲು ಇಚ್ಛಿಸುವ ಎಲ್ಲರನ್ನು ಯೆಹೋವನು ನಾಶಮಾಡುವನು. ಯೆಹೋವನು ‘ತನ್ನ ಆಗಮನದ ಭಯಂಕರವಾದ ಮಹಾದಿನದಲ್ಲಿ’ ನಿಮ್ಮನ್ನು ರಕ್ಷಿಸುವನೆಂಬ ನಂಬಿಕೆ ನಿಮಗಿರುವಲ್ಲಿ ‘ಯೆಹೋವನು ರಕ್ಷಿಸುವ ರೀತಿಯನ್ನು’ ನೋಡುವಿರಿ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಿರಿ.—ಯೋವೇ. 2:30-32.
19. (ಎ) ಯೆಹೋವನ ಮತ್ತು ಮೋಶೆಯ ಮಧ್ಯೆಯಿದ್ದ ಸಂಬಂಧವು ಎಷ್ಟು ಆಪ್ತವಾಗಿತ್ತು? (ಬಿ) ನಿಮ್ಮ ಎಲ್ಲಾ ನಡವಳಿಯಲ್ಲಿ ಯೆಹೋವನಿಗೆ ನೀವು ವಿಧೇಯರಾದರೆ ಯಾವ ಆಶೀರ್ವಾದ ಸಿಗುವುದು?
19 ‘ಅದೃಶ್ಯನಾಗಿರುವಾತನನ್ನು ನೋಡುತ್ತಿದ್ದೀರೋ ಎಂಬಂತೆ ಸ್ಥಿರಚಿತ್ತರಾಗಿ ಮುಂದುವರಿಯುವ’ ಮೂಲಕ ಆ ರೋಮಾಂಚಕ ಘಟನೆಗಳಿಗಾಗಿ ಈಗಲೇ ಸಿದ್ಧರಾಗಿ. ಕ್ರಮವಾದ ಅಧ್ಯಯನ ಮತ್ತು ಪ್ರಾರ್ಥನೆಯ ಮೂಲಕ ಯೆಹೋವ ದೇವರಿಗೆ ಹೆಚ್ಚೆಚ್ಚು ಆಪ್ತರಾಗಿ. ಮೋಶೆಗೆ ಯೆಹೋವನೊಂದಿಗೆ ಅತ್ಯಾಪ್ತ ಸ್ನೇಹವಿತ್ತು ಮತ್ತು ಯೆಹೋವನು ಅವನನ್ನು ಮಹತ್ತರವಾದ ವಿಧಗಳಲ್ಲಿ ಉಪಯೋಗಿಸಿದನು. ಆದ್ದರಿಂದ ಬೈಬಲ್ ಹೀಗನ್ನುತ್ತದೆ: “ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಬಳಿಕೆಯಾಗಿದ್ದನು.” (ಧರ್ಮೋ. 34:10) ಮೋಶೆ ಬಹು ವಿಶೇಷ ಪ್ರವಾದಿಯಾಗಿದ್ದನು. ನಿಮ್ಮಲ್ಲಿ ನಂಬಿಕೆ ಇರುವಲ್ಲಿ ನೀವು ಕೂಡ ಯೆಹೋವನಿಗೆ ಎಷ್ಟು ಆಪ್ತರಾಗಿರುವಿರೆಂದರೆ ಆತನು ನಿಮ್ಮ ಕಣ್ಣೆದುರಿಗೇ ಇರುವ ವ್ಯಕ್ತಿಯಂತಿರುವನು. ದೇವರ ವಾಕ್ಯ ಉತ್ತೇಜಿಸುವಂತೆ ನೀವು ನಿಮ್ಮ “ಎಲ್ಲಾ ನಡವಳಿಯಲ್ಲಿ” ಯೆಹೋವನಿಗೆ ಸದಾ ವಿಧೇಯರಾಗುವಲ್ಲಿ ಆತನು ನಿಮ್ಮ “ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋ. 3:6.
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ಐಗುಪ್ತದವರ ಚೊಚ್ಚಲ ಗಂಡುಮಕ್ಕಳನ್ನು ಸಂಹರಿಸಲು ಯೆಹೋವನು ದೇವದೂತರನ್ನು ಕಳುಹಿಸಿದನು.—ಕೀರ್ತ. 78:49-51.