ನಿಮ್ಮ ಬಟ್ಟೆ ದೇವರಿಗೆ ಮಹಿಮೆ ತರುವ ಹಾಗಿದೆಯಾ?
“ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.”—1 ಕೊರಿಂಥ 10:31.
1, 2. ಯಾವ ಬಟ್ಟೆ ಹಾಕಬೇಕೆಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಕೆಲವು ಮಟ್ಟಗಳಿವೆ ಯಾಕೆ? (ಲೇಖನದ ಆರಂಭದ ಚಿತ್ರ ನೋಡಿ.)
ಚರ್ಚಿನ ಧರ್ಮಗುರುಗಳು ತಮ್ಮ ಒಂದು ಕೂಟಕ್ಕೆ ಬಂದಾಗ “ತುಂಬ ಮಾಮೂಲಿಯಾದ ಬಟ್ಟೆ ಧರಿಸಿದ್ದರು. ಸೆಕೆ ಇರೋದ್ರಿಂದ ಈ ರೀತಿಯ ಬಟ್ಟೆ ಹಾಕಿದ್ದರು” ಎಂದು ಡಚ್ ವಾರ್ತಾಪತ್ರಿಕೆಯೊಂದು ವರದಿ ಮಾಡಿತು. ಆದರೆ ಯೆಹೋವನ ಸಾಕ್ಷಿಗಳು ತಮ್ಮ ಅಧಿವೇಶನಕ್ಕೆ ಹೀಗೆ ಬಂದಿರಲಿಲ್ಲ. ಹುಡುಗರು ಮತ್ತು ಪುರುಷರು ಕೋಟ್ ಮತ್ತು ಟೈ ಹಾಕಿದ್ದರು. ಹುಡುಗಿಯರು ಮತ್ತು ಸ್ತ್ರೀಯರು ಹೊಸ ಸ್ಟೈಲಿನ ಸ್ಕರ್ಟುಗಳನ್ನು ಹಾಕಿದ್ದರೂ ಅದು ಸಭ್ಯವಾಗಿತ್ತು ಎಂದಿತು ಅದೇ ವಾರ್ತಾಪತ್ರಿಕೆ. ಯೆಹೋವನ ಸಾಕ್ಷಿಗಳು ಹಾಕುವ ಬಟ್ಟೆಯನ್ನು ನೋಡಿ ತುಂಬ ಜನ ಮೆಚ್ಚಿಕೆ ವ್ಯಕ್ತಪಡಿಸಿದ್ದಾರೆ. ಕ್ರೈಸ್ತರು ದೇವರ ಸೇವಕರಿಗೆ ಯೋಗ್ಯವಾಗಿರುವ ಸಭ್ಯವಾದ ಬಟ್ಟೆಗಳನ್ನು ಹಾಕಿಕೊಳ್ಳಬೇಕೆಂದು ಅಪೊಸ್ತಲ ಪೌಲ ಹೇಳಿದ್ದಾನೆ. (1 ತಿಮೊ. 2:9, 10) ಪೌಲನು ಸ್ತ್ರೀಯರನ್ನು ಉದ್ದೇಶಿಸಿ ಮಾತಾಡಿದ್ದರೂ ಈ ತತ್ವ ಕ್ರೈಸ್ತ ಪುರುಷರಿಗೂ ಅನ್ವಯಿಸುತ್ತದೆ.
2 ಯೆಹೋವನ ಜನರಾಗಿರುವ ನಾವು ಯೋಗ್ಯವಾದ ಬಟ್ಟೆ ಹಾಕುವುದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ನಾವು ಆರಾಧಿಸುವ ದೇವರು ಸಹ ಅದನ್ನು ಗಂಭೀರ ವಿಷಯವಾಗಿ ನೋಡುತ್ತಾನೆ. (ಆದಿ. 3:21) ಇಡೀ ವಿಶ್ವದ ಪರಮಾಧಿಕಾರಿಯಾದ ಯೆಹೋವನು ತನ್ನ ಜನರು ಯಾವ ರೀತಿಯ ಬಟ್ಟೆ ಹಾಕಬೇಕೆಂಬ ವಿಷಯದಲ್ಲಿ ಕೆಲವು ಮಟ್ಟಗಳನ್ನಿಟ್ಟಿದ್ದಾನೆ ಎಂದು ಬೈಬಲ್ ಹೇಳುತ್ತದೆ. ಆದ್ದರಿಂದ ನಾವು ಹಾಕುವ ಬಟ್ಟೆ ನಮಗೆ ಮಾತ್ರ ಇಷ್ಟವಾದರೆ ಸಾಲದು, ಪರಮಾಧಿಕಾರಿ ಕರ್ತನಾದ ಯೆಹೋವನಿಗೂ ಇಷ್ಟವಾಗಬೇಕು.
3. ದೇವರು ಬಟ್ಟೆಯ ವಿಷಯದಲ್ಲಿ ಇಸ್ರಾಯೇಲ್ಯರಿಗೆ ಯಾವ ನಿರ್ದೇಶನವನ್ನು ಕೊಟ್ಟಿದ್ದನು?
3 ಮೋಶೆಯ ಧರ್ಮಶಾಸ್ತ್ರದಲ್ಲಿ ಕೊಡಲಾಗಿದ್ದ ನಿಯಮಗಳು ಇಸ್ರಾಯೇಲ್ಯರನ್ನು ಸುತ್ತಲಿನ ಅನ್ಯಜನಾಂಗಗಳ ಅನೈತಿಕ ಜೀವನ ರೀತಿಯಿಂದ ಕಾಪಾಡಿತು. ಒಬ್ಬ ವ್ಯಕ್ತಿ ಹಾಕುವ ಬಟ್ಟೆಯಿಂದ ಅವನು ಪುರುಷನೋ ಸ್ತ್ರೀಯೋ ಎಂದು ಗೊತ್ತಾಗದಂಥ ವಸ್ತ್ರ ಧರಿಸುವುದನ್ನು ಯೆಹೋವನು ಖಂಡಿಸಿದ್ದಾನೆ. ಆದರೆ ಇಂಥ ಬಟ್ಟೆಯನ್ನು ಹಾಕುವುದು ಇಂದು ಫ್ಯಾಷನ್ ಆಗಿಬಿಟ್ಟಿದೆ. (ಧರ್ಮೋಪದೇಶಕಾಂಡ 22:5 ಓದಿ.) ಪುರುಷರು ಸ್ತ್ರೀಯರಂತೆ ಕಾಣುವ ಅಥವಾ ಸ್ತ್ರೀಯರು ಪುರುಷರಂತೆ ಕಾಣುವ ಇಲ್ಲವೆ ಯಾರು ಗಂಡಸು ಯಾರು ಹೆಂಗಸು ಎಂದು ಗೊತ್ತಾಗದ ರೀತಿಯ ಬಟ್ಟೆ ಹಾಕುವುದನ್ನು ಯೆಹೋವನು ಇಷ್ಟಪಡುವುದೇ ಇಲ್ಲ.
4. ಯಾವ ರೀತಿಯ ಬಟ್ಟೆ ಹಾಕಬೇಕೆಂಬ ವಿಷಯದಲ್ಲಿ ಯಾವುದು ಕ್ರೈಸ್ತರಿಗೆ ಸಹಾಯ ನೀಡುತ್ತದೆ?
4 ಯಾವ ರೀತಿಯ ಬಟ್ಟೆ ಹಾಕಬೇಕೆಂಬ ವಿಷಯದಲ್ಲಿ ಬೈಬಲಿನ ಕೆಲವು ತತ್ವಗಳು ನಮಗೆ ಸಹಾಯಮಾಡುತ್ತವೆ. ನಮ್ಮ ದೇಶ, ಹವಾಮಾನ, ಸಂಸ್ಕೃತಿ ಏನೇ ಇರಲಿ ಈ ತತ್ವಗಳು ಅನ್ವಯಿಸುತ್ತವೆ. ಯಾವ ಬಟ್ಟೆ ಯೋಗ್ಯವಾದದ್ದು ಯಾವುದು ಯೋಗ್ಯವಾದದ್ದಲ್ಲ ಎಂಬ ಒಂದು ಪಟ್ಟಿ ನಮಗೆ ಬೇಕಿಲ್ಲ. ನಾವು ಇಷ್ಟಪಡುವ ಬಟ್ಟೆಗಳು ಬೈಬಲಿನ ತತ್ವಗಳಿಗೆ ಹೊಂದಿಕೆಯಲ್ಲಿದ್ದರೆ ಅದನ್ನು ಹಾಕಬಹುದು. ಬಟ್ಟೆಯ ವಿಷಯದಲ್ಲಿ “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತ” ಯಾವುದೆಂದು ತಿಳಿಯಲು ಬೈಬಲಿನ ತತ್ವಗಳು ಹೇಗೆ ಸಹಾಯಮಾಡುತ್ತವೆಂದು ಈಗ ನೋಡೋಣ.—ರೋಮ. 12:1, 2.
“ನಾವು ದೇವರ [ಸೇವಕರಾಗಿ] ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ”
5, 6. ನಾವು ಹಾಕುವ ಬಟ್ಟೆಯನ್ನು ನೋಡಿ ಜನರ ಮೇಲೆ ಯಾವ ಪ್ರಭಾವ ಆಗಬೇಕು?
5 ಒಂದು ಪ್ರಾಮುಖ್ಯ ತತ್ವವನ್ನು ಬರೆಯುವಂತೆ ದೇವರು ಪೌಲನನ್ನು ಪ್ರೇರಿಸಿದನು. ಅದನ್ನು ನಾವು 2 ಕೊರಿಂಥ 6:4ರಲ್ಲಿ ನೋಡಬಹುದು. (ಓದಿ.) ನಮ್ಮ ಹೊರತೋರಿಕೆ ನಾವು ಒಳಗೆ ಏನಾಗಿದ್ದೇವೆಂದು ತೋರಿಸುತ್ತದೆ. ಜನ ನಮ್ಮ ವೇಷಭೂಷಣ ನೋಡಿ ನಾವು ಎಂಥ ವ್ಯಕ್ತಿಗಳೆಂದು ತೀರ್ಮಾನಿಸುತ್ತಾರೆ. (1 ಸಮು. 16:7) ನಾವು ದೇವರ ಸೇವಕರಾಗಿರುವುದರಿಂದ ನಾವು ಹಾಕುವ ಬಟ್ಟೆ ನಮಗೆ ಇಷ್ಟವಾಗಿದೆಯಾ ಎಂದು ಮಾತ್ರ ನೋಡಲ್ಲ. ಬೈಬಲ್ನಲ್ಲಿರುವ ತತ್ವಗಳನ್ನು ಅನ್ವಯಿಸಿಕೊಳ್ಳುತ್ತೇವೆ. ಮೈಗೆ ಅಂಟಿಕೊಳ್ಳುವಂಥ ಬಿಗಿಯಾದ ಬಟ್ಟೆಗಳನ್ನು ಅಥವಾ ಮೈ ಕಾಣಿಸುವಂಥ ಲೈಂಗಿಕವಾಗಿ ಪ್ರಚೋದಿಸುವಂಥ ಬಟ್ಟೆಗಳನ್ನು ಹಾಕಲ್ಲ. ಇದರರ್ಥ ನಮ್ಮ ದೇಹದ ಗುಪ್ತ ಅಂಗಗಳು ಎದ್ದು ಕಾಣುವಂಥ ಬಟ್ಟೆಗಳನ್ನು ನಾವು ಹಾಕಲ್ಲ. ನಾವು ಹಾಕಿರುವ ಬಟ್ಟೆಯಿಂದಾಗಿ ಬೇರೆಯವರಿಗೆ ಕಸಿವಿಸಿ ಆಗಬಾರದು ಅಥವಾ ಅವರು ಬೇರೆ ಕಡೆ ನೋಡಬೇಕಾಗಿ ಬರಬಾರದು.
6 ನಮ್ಮ ಬಟ್ಟೆಬರೆ ಹೊರತೋರಿಕೆ ಎಲ್ಲಾ ಅಚ್ಚುಕಟ್ಟಾಗಿದ್ದು ಸಭ್ಯವಾಗಿದ್ದರೆ ಜನರು ನಮ್ಮನ್ನು ಪರಮಾಧಿಕಾರಿ ಕರ್ತನಾದ ಯೆಹೋವನ ಆರಾಧಕರೆಂದು ಗುರುತಿಸಿ ಗೌರವಿಸಬಹುದು. ನಮ್ಮ ದೇವರ ಆರಾಧನೆಯಲ್ಲೂ ಅವರು ಆಸಕ್ತಿ ತೋರಿಸಬಹುದು. ನಮ್ಮ ಸಂಘಟನೆ ಮೇಲೆ ಗೌರವ ಹೆಚ್ಚಾಗಬಹುದು. ನಮ್ಮ ಜೀವರಕ್ಷಕ ಸಂದೇಶಕ್ಕೆ ಕಿವಿಗೊಡುವ ಸಾಧ್ಯತೆಯೂ ಹೆಚ್ಚಾಗಬಹುದು.
7, 8. ಮುಖ್ಯವಾಗಿ ಯಾವ ಸಂದರ್ಭದಲ್ಲಿ ನಾವು ಯೋಗ್ಯವಾದ ಬಟ್ಟೆ ಹಾಕಿರಬೇಕು?
7 ಯೆಹೋವನಿಗೆ ಮತ್ತು ನಾವು ಸಾರುವ ಸಂದೇಶಕ್ಕೆ ಗೌರವ ತರುವಂಥ ರೀತಿಯಲ್ಲಿ ಬಟ್ಟೆ ಧರಿಸುವುದು ನಮ್ಮ ಕರ್ತವ್ಯ. ಇದು ನಮ್ಮ ಪವಿತ್ರ ದೇವರಿಗೆ, ನಮ್ಮ ಸಹೋದರ ಸಹೋದರಿಯರಿಗೆ, ನಮ್ಮ ಕ್ಷೇತ್ರದಲ್ಲಿರುವ ಜನರಿಗೆ ತೀರಿಸಬೇಕಾದ ಋಣ. (ರೋಮ. 13:8-10) ಮುಖ್ಯವಾಗಿ ನಾವು ಕ್ರೈಸ್ತ ಕೂಟಗಳಿಗೆ ಮತ್ತು ಸೇವೆಗೆ ಹೋಗುವಾಗ ಯಾವ ರೀತಿ ಬಟ್ಟೆ ಹಾಕುತ್ತೇವೆ ಅನ್ನುವುದಕ್ಕೆ ಹೆಚ್ಚು ಗಮನ ಕೊಡಬೇಕು. ದೇವರನ್ನು ಆರಾಧಿಸುವ ಜನರಿಗೆ ಸೂಕ್ತವಾಗಿರುವ ಬಟ್ಟೆಯನ್ನು ಹಾಕಬೇಕು. (1 ತಿಮೊ. 2:10) ಒಂದು ಸ್ಥಳದಲ್ಲಿ ಜನರು ಸೂಕ್ತವೆಂದು ಒಪ್ಪಿಕೊಳ್ಳುವ ಬಟ್ಟೆಯನ್ನು ಇನ್ನೊಂದು ಸ್ಥಳದಲ್ಲಿರುವ ಜನರು ಅಸಭ್ಯವೆಂದು ಹೇಳಬಹುದು. ಆದ್ದರಿಂದ ನಾವು ಎಲ್ಲೇ ಇರಲಿ, ಯೆಹೋವನ ಸಾಕ್ಷಿಗಳಾಗಿ ನಾವು ಹಾಕುವ ಬಟ್ಟೆಯಿಂದ ಇತರರು ಎಡವದಂತೆ ನೋಡಿಕೊಳ್ಳೋಣ.
8 ಒಂದನೇ ಕೊರಿಂಥ 10:31 ಓದಿ. ನಾವು ಸಮ್ಮೇಳನ ಅಧಿವೇಶನಗಳಿಗೆ ಹೋಗುವಾಗ ನಮ್ಮ ಬಟ್ಟೆ ಯೋಗ್ಯವಾಗಿಯೂ ಸಭ್ಯವಾಗಿಯೂ ಇರಬೇಕು. ಈ ಲೋಕದವರ ತರ ವಿಚಿತ್ರವಾದ ಬಟ್ಟೆಗಳನ್ನು ಹಾಕಬಾರದು. ಅಧಿವೇಶನಕ್ಕೆ ಮುಂಚೆ ಮತ್ತು ನಂತರ, ಹೋಟೆಲಲ್ಲಿ ರೂಮ್ ಬುಕ್ ಮಾಡುವಾಗ ಅಥವಾ ಖಾಲಿಮಾಡುವಾಗ ಸಹ ಮನೆಯಲ್ಲಿ ಹಾಕುವಂಥ ಬಟ್ಟೆಯನ್ನು ಹಾಕಿ ಓಡಾಡಬೇಡಿ. ಆಗ ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಳ್ಳಲು ಹೆಮ್ಮೆಪಡುತ್ತೇವೆ. ಯಾವುದೇ ಸಮಯದಲ್ಲಿ ಸಾಕ್ಷಿಕೊಡಲು ಸಹ ಸಿದ್ಧರಿರುತ್ತೇವೆ.
9, 10. ಫಿಲಿಪ್ಪಿ 2:4ರಲ್ಲಿರುವ ತತ್ವವನ್ನು ಬಟ್ಟೆ ಹಾಕುವ ವಿಷಯಕ್ಕೆ ಅನ್ವಯಿಸಬೇಕು ಯಾಕೆ?
9 ಫಿಲಿಪ್ಪಿ 2:4 ಓದಿ. ನಾವು ಹಾಕುವಂಥ ಬಟ್ಟೆ ನಮ್ಮ ಸಹೋದರ ಸಹೋದರಿಯರ ಮೇಲೆ ಯಾವ ಪರಿಣಾಮ ಬೀರುತ್ತದೆಂದು ಯೋಚಿಸಬೇಕು ಯಾಕೆ? ಒಂದು ಕಾರಣ, ದೇವರ ಸೇವಕರು ಈ ಮುಂದಿನ ಸಲಹೆಯನ್ನು ಪಾಲಿಸಲು ಪ್ರಯತ್ನಿಸುವುದರಿಂದ. “ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, . . . ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.” (ಕೊಲೊ. 3:2, 5) ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರು ಸತ್ಯಕ್ಕೆ ಬರುವ ಮುಂಚೆ ಅನೈತಿಕ ಜೀವನ ನಡೆಸುತ್ತಿದ್ದರು. ಅವರು ಆ ಜೀವನವನ್ನು ಬಿಟ್ಟುಬಂದಿದ್ದರೂ ತಪ್ಪಾದ ಆಸೆಗಳನ್ನು ಅದುಮಿಡಲು ಹೋರಾಟ ಮಾಡುತ್ತಿರಬೇಕು. ನಾವು ಜಾಗ್ರತೆ ವಹಿಸಿಲ್ಲವಾದರೆ ಬೈಬಲಿನ ಸಲಹೆಯನ್ನು ಪಾಲಿಸಲು ಮತ್ತು ತಪ್ಪಾದ ಆಸೆಗಳನ್ನು ನಿಯಂತ್ರಿಸಲು ಅವರಿಗೆ ತುಂಬ ಕಷ್ಟ ಆಗಬಹುದು. (1 ಕೊರಿಂ. 6:9, 10) ಅವರು ಅನೈತಿಕತೆಯ ಪಾಶಕ್ಕೆ ಸಿಕ್ಕಿ ನರಳುವುದನ್ನು ನೋಡಲು ನಾವು ಇಷ್ಟಪಡುವುದಿಲ್ಲ ಅಲ್ಲವೆ?
10 ನಾವು ಸಹೋದರ ಸಹೋದರಿಯರೊಟ್ಟಿಗೆ ಇರುವಾಗ ಸುರಕ್ಷಿತವಾಗಿರುತ್ತೇವೆ. ಏಕೆಂದರೆ ಅನೈತಿಕತೆಯನ್ನು ಪ್ರೋತ್ಸಾಹಿಸುವ ಜನರು ನಮ್ಮ ಮಧ್ಯೆ ಇಲ್ಲ. ನಾವು ಕೂಟಗಳಲ್ಲಿರಲಿ ಅಥವಾ ಒಟ್ಟಿಗೆ ಸಮಯ ಕಳೆಯಲು ಎಲ್ಲಾದರೂ ಹೋಗಿರಲಿ, ನಮ್ಮ ಬಟ್ಟೆ ಯೋಗ್ಯವಾಗಿದ್ದರೆ ಎಲ್ಲರೂ ಆರಾಮವಾಗಿರಲು ಆಗುತ್ತದೆ. ನಮಗೆ ಇಷ್ಟವಾಗುವ ಬಟ್ಟೆಯನ್ನು ಹಾಕುವ ಸ್ವಾತಂತ್ರ್ಯ ನಮಗಿದ್ದರೂ ಬೇರೆಯವರು ತಮ್ಮ ಯೋಚನೆ, ಮಾತು, ಕ್ರಿಯೆಯನ್ನು ದೇವರ ದೃಷ್ಟಿಯಲ್ಲಿ ಶುದ್ಧವಾಗಿಡಲು ಸಹಾಯ ಮಾಡುವಂಥ ಬಟ್ಟೆಯನ್ನು ಹಾಕುವ ಜವಾಬ್ದಾರಿಯೂ ನಮಗಿದೆ. (1 ಪೇತ್ರ 1:15, 16) ನಿಜ ಪ್ರೀತಿ “ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ.”—1 ಕೊರಿಂ. 13:4, 5.
ಸ್ಥಳ ಮತ್ತು ಸಮಯಕ್ಕೆ ತಕ್ಕ ಬಟ್ಟೆ
11, 12. ಪ್ರಸಂಗಿ 3:1, 17ರಲ್ಲಿರುವ ತತ್ವ ಬಟ್ಟೆ ಹಾಕುವ ವಿಷಯಕ್ಕೆ ಹೇಗೆ ಅನ್ವಯಿಸುತ್ತದೆ?
11 ಯಾವ ಬಟ್ಟೆ ಹಾಕಬೇಕೆಂದು ದೇವರ ಸೇವಕರು ನಿರ್ಣಯಿಸುವಾಗ ‘ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯವುಂಟು’ ಅನ್ನುವುದನ್ನು ಮನಸ್ಸಿನಲ್ಲಿಡುತ್ತಾರೆ. (ಪ್ರಸಂ. 3:1, 17) ಹವಾಮಾನ, ನಾವಿರುವಂಥ ಸ್ಥಳ, ನಮ್ಮ ಪರಿಸ್ಥಿತಿ ಎಲ್ಲಾ ನೋಡಿ ನಾವು ಏನು ಹಾಕಬೇಕೆಂದು ತೀರ್ಮಾನಿಸುತ್ತೇವೆ. ಅದೇನೇ ಇದ್ದರೂ ಯೆಹೋವನ ಮಟ್ಟಗಳಂತೂ ಬದಲಾಗಲ್ಲ.—ಮಲಾ. 3:6.
12 ಬೇಸಗೆ ಕಾಲದಲ್ಲಿ ಸಭ್ಯವಾದ ಮತ್ತು ಗೌರವಯುತವಾದ ಬಟ್ಟೆ ಹಾಕುವುದು ಕಷ್ಟಾನೇ. ಆದರೆ ನಾವು ಮೈ ಕಾಣುವಂಥ ತುಂಬ ಬಿಗಿಯಾದ ಅಥವಾ ತುಂಬ ಸಡಿಲವಾದ ಬಟ್ಟೆಗಳನ್ನು ಹಾಕದಿದ್ದಾಗ ನಮ್ಮ ಸಹೋದರ ಸಹೋದರಿಯರಿಗೆ ಸಂತೋಷವಾಗುತ್ತದೆ. (ಯೋಬ 31:1) ಸಮುದ್ರ ತೀರಕ್ಕೋ ಈಜು ಕೊಳಕ್ಕೋ ಹೋದಾಗ ಸಹ ನಾವು ಹಾಕುವ ಬಟ್ಟೆ ಸಭ್ಯವಾಗಿರಬೇಕು. (ಜ್ಞಾನೋ. 11:2, 20) ಇಂಥ ಕಡೆಗಳಲ್ಲಿ ಲೋಕದ ಜನ ಮೈ ಕಾಣಿಸುವಂಥ ಬಟ್ಟೆಗಳನ್ನು ಹಾಕುವುದಾದರೂ ನಾವು ಹಾಕುವಂಥ ಬಟ್ಟೆಯಿಂದ ನಮ್ಮ ಪವಿತ್ರ ದೇವರಾದ ಯೆಹೋವನಿಗೆ ಗೌರವ ತರುತ್ತಿದ್ದೇವಾ ಎಂದು ಖಚಿತಪಡಿಸಿಕೊಳ್ಳಬೇಕು.
13. ಒಂದನೇ ಕೊರಿಂಥ 10:32, 33ರಲ್ಲಿರುವ ತತ್ವವನ್ನು ನಾವು ಬಟ್ಟೆ ಹಾಕುವ ವಿಷಯಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು?
13 ಬಟ್ಟೆ ಹಾಕುವ ವಿಷಯದಲ್ಲಿ ಒಳ್ಳೇ ತೀರ್ಮಾನ ಮಾಡಲು ಇನ್ನೊಂದು ತತ್ವ ಸಹ ಸಹಾಯ ಮಾಡುತ್ತದೆ. ಅದೇನೆಂದರೆ ಬೇರೆಯವರ ಮನಸ್ಸಾಕ್ಷಿಗೆ ನೋವಾಗದಂತೆ ನಾವು ನೋಡಿಕೊಳ್ಳಬೇಕು. (1 ಕೊರಿಂಥ 10:32, 33 ಓದಿ.) ಸಹೋದರ ಸಹೋದರಿಯರು ಅಥವಾ ಹೊರಗಿನವರು ನಮ್ಮ ಬಟ್ಟೆ ನೋಡಿ ಅಸಹ್ಯಪಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅಪೊಸ್ತಲ ಪೌಲ ಹೀಗೆ ಬರೆದನು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿವೃದ್ಧಿಗಾಗಿ ಒಳ್ಳೇದನ್ನೇ ಮಾಡುತ್ತಾ ಅವನನ್ನು ಮೆಚ್ಚಿಸಲಿ.” ಯಾಕೆಂದರೆ “ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ.” (ರೋಮ. 15:2, 3) ನಾವು ನಮಗೆ ಯಾವುದು ಇಷ್ಟ ಅನ್ನುವುದನ್ನು ನೋಡದೆ ಯೇಸುವಿನಂತೆ ದೇವರ ಚಿತ್ತ ಏನೆಂದು ನೋಡಬೇಕು. ಬೇರೆಯವರಿಗೆ ಒಳ್ಳೇ ಮಾದರಿಯಾಗಿರಬೇಕು. ಆದ್ದರಿಂದ ಜನರು ಸುವಾರ್ತೆಗೆ ಕಿವಿಗೊಡದಂತೆ ಮಾಡುವ ಯಾವುದೇ ಬಟ್ಟೆಯನ್ನು ನಾವು ಹಾಕುವುದಿಲ್ಲ.
14. ದೇವರಿಗೆ ಗೌರವ ತರುವಂಥ ಬಟ್ಟೆಯನ್ನು ಹಾಕಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಬಲ್ಲರು?
14 ಬೈಬಲ್ ತತ್ವಗಳನ್ನು ಅನ್ವಯಿಸಲು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಬೇಕು. ಇದು ಅವರ ಜವಾಬ್ದಾರಿ. ಕುಟುಂಬದವರೆಲ್ಲರೂ ತಮ್ಮ ಬಟ್ಟೆಬರೆ, ವೇಷಭೂಷಣದ ಮೂಲಕ ದೇವರನ್ನು ಸಂತೋಷಪಡಿಸುತ್ತಿದ್ದಾರೆಂದು ಖಚಿತಪಡಿಸಿಕೊಳ್ಳಬೇಕು. (ಜ್ಞಾನೋ. 22:6; 27:11) ನಮ್ಮ ಪವಿತ್ರ ದೇವರನ್ನು ಮತ್ತು ಆತನ ಮಟ್ಟಗಳನ್ನು ಗೌರವಿಸುವಂತೆ ಹೆತ್ತವರು ಮಕ್ಕಳಿಗೆ ಹೇಗೆ ಕಲಿಸಬಹುದು? ಹೆತ್ತವರು ಮೊದಲು ಒಳ್ಳೇ ಮಾದರಿ ಇಡಬೇಕು. ಯೋಗ್ಯವಾದ ಬಟ್ಟೆ ಎಲ್ಲಿ ಸಿಗುತ್ತದೆ, ಹೇಗೆ ಆಯ್ಕೆಮಾಡುವುದೆಂದು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಬೇಕು. ಮಕ್ಕಳು ತಮಗೆ ಇಷ್ಟವಾಯಿತು ಎಂದ ಮಾತ್ರಕ್ಕೆ ಒಂದು ಬಟ್ಟೆಯನ್ನು ಖರೀದಿಸಬಾರದು. ಅದರಿಂದ ಯೆಹೋವನಿಗೆ ಗೌರವ ಸಿಗುತ್ತದಾ ಎಂದು ನೋಡಬೇಕು. ಏಕೆಂದರೆ ನಾವೆಲ್ಲಾ ಆತನ ಪ್ರತಿನಿಧಿಗಳು.
ನಿಮಗಿರುವ ಸ್ವಾತಂತ್ರ್ಯವನ್ನು ಜಾಣ್ಮೆಯಿಂದ ಉಪಯೋಗಿಸಿ
15. ವಿವೇಕಯುತ ತೀರ್ಮಾನಗಳನ್ನು ಮಾಡಲು ಯಾವುದು ಸಹಾಯಮಾಡುತ್ತದೆ?
15 ಬೈಬಲಿನಲ್ಲಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕುವಾಗ ದೇವರಿಗೆ ಗೌರವ ತರುವಂಥ ವಿವೇಕಯುತ ತೀರ್ಮಾನಗಳನ್ನು ಮಾಡುತ್ತೇವೆ. ನಾವು ಹಾಕುವ ಬಟ್ಟೆ ನಮಗೆ ಏನು ಇಷ್ಟ ಅನ್ನುವುದನ್ನು ತೋರಿಸುತ್ತದೆ. ಒಬ್ಬೊಬ್ಬರಿಗೂ ಬೇರೆ ಬೇರೆ ರೀತಿಯ ಸ್ಟೈಲು ಇಷ್ಟವಾಗುತ್ತದೆ ಮತ್ತು ಕೆಲವರು ದುಬಾರಿ ಬಟ್ಟೆಗಳನ್ನು ಬೇರೆಯವರು ಕಡಿಮೆ ಬೆಲೆಯ ಬಟ್ಟೆಗಳನ್ನು ಹಾಕಬಹುದು. ಅದೇನೇ ಇದ್ದರೂ ನಾವು ಹಾಕುವ ಬಟ್ಟೆ ಯಾವಾಗಲೂ ಅಚ್ಚುಕಟ್ಟಾಗಿಯೂ ಶುದ್ಧವಾಗಿಯೂ ಸಭ್ಯವಾಗಿಯೂ ಸನ್ನಿವೇಶಕ್ಕೆ ಸೂಕ್ತವಾದದ್ದೂ ನಮ್ಮ ಸುತ್ತಮುತ್ತಲಿನ ಜನರು ಒಪ್ಪುವಂಥದ್ದೂ ಆಗಿರಬೇಕು.
16. ಯೋಗ್ಯವಾದ ಬಟ್ಟೆ ಹಾಕಲು ನಾವು ಮಾಡುವ ಪ್ರಯತ್ನದಿಂದ ಏನು ಪ್ರಯೋಜನ?
16 ಸಭ್ಯವಾದ ಯೋಗ್ಯ ಬಟ್ಟೆಗಳು ಸಿಗುವುದು ಕೆಲವೊಮ್ಮೆ ಕಷ್ಟ ಆಗಬಹುದು. ಏಕೆಂದರೆ ಅನೇಕ ಅಂಗಡಿಗಳು ಜನಪ್ರಿಯವಾಗಿರುವ ಫ್ಯಾಷನ್ ಬಟ್ಟೆಗಳನ್ನು ಮಾತ್ರ ಮಾರುತ್ತವೆ. ಆದ್ದರಿಂದ ಸಭ್ಯವಾದ ಸ್ಕರ್ಟು ಸೀರೆ ರವಿಕೆ ಮತ್ತು ತುಂಬ ಬಿಗಿಯಾಗಿಲ್ಲದ ಕೋಟು ಪ್ಯಾಂಟುಗಳು ಎಲ್ಲಿ ಸಿಗುತ್ತದೆಂದು ತಿಳಿಯಲು ಹೆಚ್ಚು ಪ್ರಯತ್ನ ಹಾಕಬೇಕಾಗಬಹುದು. ಆದರೆ ಆಕರ್ಷಕವಾದ ಯೋಗ್ಯ ಬಟ್ಟೆಗಳನ್ನು ಹಾಕಲು ನಾವು ಮಾಡುವ ಪ್ರಯತ್ನವನ್ನು ನಮ್ಮ ಸಹೋದರ ಸಹೋದರಿಯರು ಗಮನಿಸಿ ಮೆಚ್ಚುವರು. ಆದರೆ ಈ ವಿಷಯದಲ್ಲಿ ನಾವು ಯಾವುದೇ ತ್ಯಾಗಗಳನ್ನು ಮಾಡಿದರೆ ಅದನ್ನು ನಮ್ಮ ಸ್ವರ್ಗೀಯ ತಂದೆಗೆ ಗೌರವ ತರಲು ಮಾಡಿದ್ದೇವೆಂಬ ತೃಪ್ತಿ ನಮಗೆ ಖಂಡಿತ ಸಿಗುತ್ತದೆ.
17. ಗಡ್ಡ ಬಿಡಬೇಕಾ ಬೇಡವಾ ಎಂಬ ತೀರ್ಮಾನವನ್ನು ಮಾಡಲಿಕ್ಕಿರುವಾಗ ಯಾವ ಅಂಶಗಳನ್ನು ಮನಸ್ಸಿನಲ್ಲಿಡಬೇಕು?
17 ಸಹೋದರರು ಗಡ್ಡ ಬಿಡಬಹುದಾ? ಪುರುಷರು ಗಡ್ಡ ಬಿಡಬೇಕೆಂದು ಮೋಶೆಯ ಧರ್ಮಶಾಸ್ತ್ರ ಹೇಳಿತ್ತು. ಆದರೆ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ. (ಯಾಜ. 19:27; 21:5; ಗಲಾ. 3:24, 25) ಕೆಲವು ಸ್ಥಳಗಳಲ್ಲಿ ನೀಟಾಗಿ ಟ್ರಿಮ್ ಮಾಡಿರುವ ಗಡ್ಡ ಬಿಡುವುದು ತಪ್ಪಿಲ್ಲದೆ ಇರಬಹುದು ಮತ್ತು ಇಂಥ ವ್ಯಕ್ತಿ ಸುವಾರ್ತೆ ಸಾರಿದಾಗ ಜನರಿಗೆ ಏನೂ ತೊಂದರೆ ಆಗದಿರಬಹುದು. ನೇಮಿತ ಸ್ಥಾನಗಳಲ್ಲಿರುವ ಕೆಲವು ಸಹೋದರರು ಸಹ ಗಡ್ಡ ಬಿಟ್ಟಿರುವುದು ನಿಜಾನೇ. ಆದರೆ ಕೆಲವು ಸಹೋದರರು ಗಡ್ಡ ಬಿಡುವುದು ಬೇಡ ಎಂದು ತೀರ್ಮಾನಿಸಬಹುದು. (1 ಕೊರಿಂ. 8:9, 13; 10:32) ಬೇರೆ ಸ್ಥಳಗಳಲ್ಲಿ ಗಡ್ಡ ಬಿಡುವುದು ಸಾಮಾನ್ಯವಾಗಿರಲಿಕ್ಕಿಲ್ಲ. ಒಬ್ಬ ಯೆಹೋವನ ಸಾಕ್ಷಿ ಗಡ್ಡ ಬಿಟ್ಟಿರುವುದು ಯೋಗ್ಯವೆಂದು ಅನಿಸಲಿಕ್ಕಿಲ್ಲ. ಇದರಿಂದ ದೇವರಿಗೆ ಗೌರವ ಸಿಗಲ್ಲ ಮತ್ತು ಅಂಥ ಸಹೋದರ ‘ದೋಷಾರೋಪಣೆ ಇಲ್ಲದವನಾಗಿರಲು’ ಸಾಧ್ಯವಿಲ್ಲ.—1 ತಿಮೊ. 3:2, 7; ರೋಮ. 15:1-3.
18, 19. ಮೀಕ 6:8 ನಮಗೆ ಹೇಗೆ ಸಹಾಯ ಮಾಡುತ್ತದೆ?
18 ಯಾವ ಬಟ್ಟೆ ಹಾಕಬಹುದು, ಯಾವುದು ಹಾಕಬಾರದೆಂಬ ಉದ್ದ ಪಟ್ಟಿಯನ್ನು ಯೆಹೋವನು ಕೊಟ್ಟಿಲ್ಲವಾದ್ದರಿಂದ ನಾವು ಸಂತೋಷಪಡಬೇಕು. ಬೈಬಲ್ ತತ್ವಗಳ ಮೇಲಾಧರಿಸಿದ ವೈಯಕ್ತಿಕ ತೀರ್ಮಾನಗಳನ್ನು ಮಾಡುವ ಸ್ವಾತಂತ್ರ್ಯವನ್ನು ಆತನು ನಮಗೆ ಕೊಟ್ಟಿದ್ದಾನೆ. ಆದ್ದರಿಂದ ನಾವು ನಮ್ಮ ಬಟ್ಟೆ ಮತ್ತು ಹೊರತೋರಿಕೆಯ ವಿಷಯದಲ್ಲಿ ತೀರ್ಮಾನಗಳನ್ನು ಮಾಡುವಾಗಲೂ ನಮ್ರರೆಂದು ತೋರಿಸೋಣ.—ಮೀಕ 6:8.
19 ಯೆಹೋವನು ಪವಿತ್ರನೂ ಪರಿಶುದ್ಧನೂ ಆಗಿದ್ದಾನೆ ಮತ್ತು ಆತನ ಮಟ್ಟಗಳು ನಮ್ಮ ಒಳ್ಳೇದಕ್ಕಾಗಿವೆ ಎಂದು ನಾವು ದೀನತೆಯಿಂದ ಒಪ್ಪಿಕೊಳ್ಳುತ್ತೇವೆ. ನಮ್ಮಲ್ಲಿ ದೀನತೆ ನಮ್ರತೆ ಇದ್ದರೆ ಆತನ ಮಟ್ಟಗಳನ್ನು ಪಾಲಿಸುತ್ತೇವೆ. ನಮ್ರ ವ್ಯಕ್ತಿ ಬೇರೆಯವರ ಭಾವನೆಗಳು ಅನಿಸಿಕೆಗಳನ್ನು ಸಹ ಗಮನಕ್ಕೆ ತೆಗೆದುಕೊಳ್ಳುತ್ತಾನೆ.
20. ನಮ್ಮ ಬಟ್ಟೆ ಮತ್ತು ಹೊರತೋರಿಕೆಯನ್ನು ನೋಡಿದಾಗ ಜನರ ಮೇಲೆ ಯಾವ ಪರಿಣಾಮ ಆಗಬೇಕು?
20 ನಾವು ಹಾಕುವಂಥ ಬಟ್ಟೆ ನಾವು ಯೆಹೋವನ ಸೇವಕರೆಂದು ಸ್ಪಷ್ಟವಾಗಿ ತೋರಿಸುವಂತಿರಬೇಕು. ಈ ವಿಷಯದಲ್ಲಿ ಯೆಹೋವನು ಉನ್ನತ ಮಟ್ಟಗಳನ್ನಿಟ್ಟಿದ್ದಾನೆ. ಇದನ್ನು ನಾವು ಸಂತೋಷದಿಂದ ಪಾಲಿಸುತ್ತೇವೆ. ತಮ್ಮ ಹೊರತೋರಿಕೆ ಮತ್ತು ಒಳ್ಳೆಯ ನಡತೆಯ ಮೂಲಕ ಸಹೃದಯದ ಜನರನ್ನು ಸತ್ಯದ ಕಡೆ ಆಕರ್ಷಿಸುತ್ತಿರುವ ಸಹೋದರ ಸಹೋದರಿಯರನ್ನು ನಾವು ಶ್ಲಾಘಿಸುತ್ತೇವೆ. ಇದು ಯೆಹೋವನಿಗೆ ಗೌರವ ತರುತ್ತದೆ ಮತ್ತು ಆತನ ಮನಸ್ಸಿಗೆ ಸಂತೋಷ ತರುತ್ತದೆ. ನಾವು ಯಾವ ರೀತಿಯ ಬಟ್ಟೆ ಹಾಕಬೇಕೆಂಬ ವಿಷಯದಲ್ಲಿ ವಿವೇಕಯುತ ತೀರ್ಮಾನಗಳನ್ನು ಮಾಡುವಾಗ ‘ಪ್ರಭಾವ ಮಹತ್ವಗಳಿಂದ ಭೂಷಿತನಾಗಿರುವ’ ನಮ್ಮ ದೇವರಿಗೆ ಸದಾ ಮಹಿಮೆ ತರುತ್ತೇವೆ.—ಕೀರ್ತ. 104:1, 2.