ದೇವರಲ್ಲಿ ನಂಬಿಕೆಯಿಟ್ಟು ಒಳ್ಳೇ ನಿರ್ಣಯಗಳನ್ನು ಮಾಡಿ!
‘ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಕೇಳಿಕೊಳ್ಳುತ್ತಾ ಇರಿ.’—ಯಾಕೋ. 1:6.
1. (ಎ) ಕಾಯಿನನು ಕೆಟ್ಟ ನಿರ್ಣಯ ಮಾಡಿದ್ದು ಯಾಕೆ? (ಬಿ) ಫಲಿತಾಂಶ ಏನಾಗಿತ್ತು?
ಕಾಯಿನನು ಒಂದು ಮುಖ್ಯ ನಿರ್ಣಯ ಮಾಡಬೇಕಿತ್ತು. ಅದೇನು? ತನ್ನಲ್ಲಿ ಹುಟ್ಟಿಕೊಂಡಿದ್ದ ದುಷ್ಟ ಭಾವನೆಗಳನ್ನು ತಾನು ನಿಯಂತ್ರಿಸಬೇಕಾ ಅಥವಾ ಆ ಭಾವನೆಗಳು ತನ್ನನ್ನು ನಿಯಂತ್ರಿಸುವಂತೆ ಬಿಡಬೇಕಾ ಎಂದು ತೀರ್ಮಾನಿಸಬೇಕಿತ್ತು. ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟರೆ ಒಳ್ಳೇ ಫಲಿತಾಂಶ ಸಿಗಲಿತ್ತು. ಇಡದಿದ್ದರೆ ಫಲಿತಾಂಶ ಕೆಟ್ಟದಾಗಲಿತ್ತು. ಅವನು ಕೆಟ್ಟ ನಿರ್ಣಯ ಮಾಡಿದನೆಂದು ಬೈಬಲ್ ಹೇಳುತ್ತದೆ. ಅದರಿಂದಾಗಿ ಅವನ ತಮ್ಮನಾದ ಹೇಬೆಲನ ಜೀವ ಹೋಯಿತು. ಕಾಯಿನನು ಸೃಷ್ಟಿಕರ್ತನೊಂದಿಗಿನ ಸ್ನೇಹವನ್ನು ಕಳಕೊಂಡನು.—ಆದಿ. 4:3-16.
2. ಒಳ್ಳೇ ನಿರ್ಣಯಗಳನ್ನು ಮಾಡುವುದು ಯಾಕೆ ಮುಖ್ಯ?
2 ಹಾಗೆಯೇ ನಮ್ಮೆಲ್ಲರಿಗೂ ಜೀವನದಲ್ಲಿ ಆಯ್ಕೆಗಳನ್ನು, ತೀರ್ಮಾನಗಳನ್ನು ಮಾಡಲಿಕ್ಕಿರುತ್ತದೆ. ಕೆಲವು ನಿರ್ಣಯಗಳು ತುಂಬ ಗಂಭೀರ. ಇನ್ನೂ ಕೆಲವು ಅಷ್ಟೇನೂ ಗಂಭೀರವಲ್ಲ. ಆದರೆ ಹೆಚ್ಚಿನ ನಿರ್ಣಯಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಒಳ್ಳೇ ನಿರ್ಣಯಗಳನ್ನು ಮಾಡಿದರೆ ಜೀವನದಲ್ಲಿ ಸಮಸ್ಯೆಗಳು ಕಡಿಮೆ ಇರುತ್ತವೆ, ಹೆಚ್ಚು ನೆಮ್ಮದಿ ಇರುತ್ತದೆ. ಆದರೆ ಕೆಟ್ಟ ನಿರ್ಣಯಗಳನ್ನು ಮಾಡಿದರೆ ಜೀವನದಲ್ಲಿ ಸಮಸ್ಯೆಗಳು, ದುಃಖ, ನಿರಾಶೆಯೇ ತುಂಬಿಕೊಂಡಿರುತ್ತದೆ.—ಜ್ಞಾನೋ. 14:8.
3. (ಎ) ಒಳ್ಳೇ ನಿರ್ಣಯ ಮಾಡಬೇಕಾದರೆ ನಮಗೆ ಯಾವ ನಂಬಿಕೆಯಿರಬೇಕು? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
3 ಒಳ್ಳೇ ನಿರ್ಣಯಗಳನ್ನು ಮಾಡಲು ನಮಗೆ ಯಾವುದು ಸಹಾಯಮಾಡುತ್ತದೆ? ದೇವರಲ್ಲಿ ನಂಬಿಕೆ. ಒಳ್ಳೇ ನಿರ್ಣಯಗಳನ್ನು ಮಾಡಲು ಬೇಕಾದ ವಿವೇಕ ಕೊಟ್ಟು ಆತನು ಸಹಾಯ ಮಾಡುತ್ತಾನೆಂದು ನಾವು ಭರವಸೆ ಇಡಬೇಕು. ಆತನ ವಾಕ್ಯದಲ್ಲೂ ನಾವು ನಂಬಿಕೆಯಿಡಬೇಕು. ಅದರಲ್ಲಿ ಆತನು ಕೊಟ್ಟಿರುವ ಸಲಹೆಸೂಚನೆಗಳನ್ನು ನಂಬಬೇಕು. (ಯಾಕೋಬ 1:5-8 ಓದಿ.) ನಾವು ಯೆಹೋವನಿಗೆ ಹತ್ತಿರವಾದಂತೆ, ಆತನ ವಾಕ್ಯದ ಮೇಲೆ ನಮಗಿರುವ ಪ್ರೀತಿ ಹೆಚ್ಚುತ್ತಾ ಹೋದಂತೆ ನಮಗೇನು ಒಳ್ಳೇದು ಅನ್ನುವುದು ಆತನಿಗೆ ತಿಳಿದಿದೆ ಎಂಬ ನಮ್ಮ ಭರವಸೆಯೂ ಹೆಚ್ಚಾಗುತ್ತದೆ. ಆಗ ಒಂದು ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆತನ ವಾಕ್ಯದಿಂದ ಮಾರ್ಗದರ್ಶನ ಪಡೆಯುತ್ತೇವೆ. ಆದರೆ ಒಳ್ಳೇ ನಿರ್ಣಯಗಳನ್ನು ಮಾಡುವ ನಮ್ಮ ಸಾಮರ್ಥ್ಯವನ್ನು ನಾವು ಹೇಗೆ ಉತ್ತಮಗೊಳಿಸಬಹುದು? ನಾವು ಒಮ್ಮೆ ನಿರ್ಣಯ ಮಾಡಿದ ಮೇಲೆ ಅದನ್ನು ಬದಲಾಯಿಸಬಹುದಾ?
ಎಲ್ಲರೂ ನಿರ್ಣಯಗಳನ್ನು ಮಾಡಲೇಬೇಕಾಗುತ್ತದೆ
4. (ಎ) ಆದಾಮನು ಯಾವ ಆಯ್ಕೆ ಮಾಡಬೇಕಿತ್ತು? (ಬಿ) ಅವನ ನಿರ್ಣಯದ ಪರಿಣಾಮ ಏನಾಗಿತ್ತು?
4 ಮಾನವ ಇತಿಹಾಸದ ಆರಂಭದಿಂದಲೇ ಜನರು ಮುಖ್ಯವಾದ ತೀರ್ಮಾನಗಳನ್ನು ಮಾಡಬೇಕಾಗಿ ಬಂದಿದೆ. ಪ್ರಥಮ ಮಾನವ ಆದಾಮ ಒಂದು ಆಯ್ಕೆ ಮಾಡಬೇಕಿತ್ತು. ತನ್ನ ಸೃಷ್ಟಿಕರ್ತನ ಮಾತು ಕೇಳಬೇಕಾ ಅಥವಾ ತನ್ನ ಹೆಂಡತಿ ಹವ್ವಳ ಮಾತು ಕೇಳಬೇಕಾ? ಅವನು ಹವ್ವಳ ಮಾತು ಕೇಳುವ ಆಯ್ಕೆ ಮಾಡಿದ. ಅವನು ತುಂಬ ಕೆಟ್ಟ ನಿರ್ಣಯ ಮಾಡುವಂತೆ ಮನವೊಪ್ಪಿಸಿದಳು. ಪರಿಣಾಮ? ಯೆಹೋವನು ಆದಾಮನನ್ನು ಏದೆನ್ ತೋಟದಿಂದ ಹೊರಹಾಕಿದನು. ಸಮಯಾನಂತರ ಆದಾಮ ಸತ್ತುಹೋದನು. ಅವನು ಮಾಡಿದ ಕೆಟ್ಟ ನಿರ್ಣಯದಿಂದ ನಾವೂ ಇಂದಿನ ತನಕ ಕಷ್ಟಪಡುತ್ತಿದ್ದೇವೆ.
5. ನಿರ್ಣಯಗಳನ್ನು ಮಾಡುವ ಜವಾಬ್ದಾರಿಯ ಬಗ್ಗೆ ನಮ್ಮ ಮನೋಭಾವ ಏನಾಗಿರಬೇಕು?
5 ‘ನಿರ್ಣಯಗಳನ್ನು ಮಾಡುವ ತಲೆನೋವು ಇಲ್ಲದಿದ್ದರೆ ಚೆನ್ನಾಗಿರುತ್ತಿತ್ತು, ಹಾಯಾಗಿರಬಹುದಿತ್ತು’ ಎಂದು ಕೆಲವರು ನೆನಸುತ್ತಾರೆ. ನಿಮಗೂ ಹಾಗೆ ಅನಿಸುತ್ತದಾ? ಆದರೆ ನೆನಪಿಡಿ, ಯೆಹೋವನು ಮನುಷ್ಯರನ್ನು ಯಂತ್ರಮಾನವನ ಹಾಗೆ ಯೋಚಿಸಲಿಕ್ಕಾಗದ, ಆಯ್ಕೆಮಾಡಲಿಕ್ಕಾಗದ ರೀತಿಯಲ್ಲಿ ಸೃಷ್ಟಿಸಲಿಲ್ಲ. ನಾವು ನಿರ್ಣಯಗಳನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ. ತನ್ನ ವಾಕ್ಯದ ಮೂಲಕ ನಮಗೆ ಒಳ್ಳೇ ನಿರ್ಣಯಗಳನ್ನು ಮಾಡುವುದು ಹೇಗೆಂದು ಕಲಿಸುತ್ತಾನೆ. ನಿರ್ಣಯಗಳನ್ನು ಮಾಡುವ ಈ ಜವಾಬ್ದಾರಿ ಇರುವುದರಿಂದ ನಮಗೇ ಸಹಾಯ ಆಗುತ್ತದೆ. ಕೆಲವು ಉದಾಹರಣೆಗಳನ್ನು ನೋಡೋಣ.
6, 7. (ಎ) ಇಸ್ರಾಯೇಲ್ಯರು ಯಾವ ನಿರ್ಣಯ ಮಾಡಬೇಕಿತ್ತು? (ಬಿ) ಆ ನಿರ್ಣಯ ಮಾಡಲು ಅವರಿಗೇಕೆ ಕಷ್ಟವಾಗುತ್ತಿತ್ತು? (ಲೇಖನದ ಆರಂಭದ ಚಿತ್ರ ನೋಡಿ.)
6 ವಾಗ್ದತ್ತ ದೇಶದಲ್ಲಿದ್ದಾಗ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸಬೇಕಾ ಬೇರೆ ದೇವತೆಗಳನ್ನು ಆರಾಧಿಸಬೇಕಾ ಎಂಬ ನಿರ್ಣಯ ಮಾಡಬೇಕಿತ್ತು. (ಯೆಹೋಶುವ 24:15 ಓದಿ.) ಇದು ದೊಡ್ಡ ವಿಷಯ ಅಲ್ಲ ಅಂತ ನಮಗೆ ಅನಿಸಬಹುದು. ಆದರೆ ಅದು ನಿಜವಾಗಲೂ ಜೀವ-ಮರಣದ ಆಯ್ಕೆ ಆಗಿತ್ತು. ನ್ಯಾಯಸ್ಥಾಪಕರ ಕಾಲದಲ್ಲಿ ಇಸ್ರಾಯೇಲ್ಯರು ಪದೇಪದೇ ಕೆಟ್ಟ ಆಯ್ಕೆ ಮಾಡಿದರು. ಯೆಹೋವನನ್ನು ಆರಾಧಿಸುವುದನ್ನು ನಿಲ್ಲಿಸಿ, ಸುಳ್ಳು ದೇವರುಗಳನ್ನು ಆರಾಧಿಸಲು ಆರಂಭಿಸಿದರು. (ನ್ಯಾಯ. 2:3, 11-23) ಮುಂದೆ ಪ್ರವಾದಿ ಎಲೀಯನ ಸಮಯದಲ್ಲಿ ದೇವಜನರಿಗೆ ಪುನಃ ಒಮ್ಮೆ ನಿರ್ಣಯ ಮಾಡಲಿಕ್ಕಿತ್ತು. ಯೆಹೋವನನ್ನು ಆರಾಧಿಸಬೇಕಾ? ಸುಳ್ಳು ದೇವರಾದ ಬಾಳನನ್ನು ಆರಾಧಿಸಬೇಕಾ? (1 ಅರ. 18:21) ಇದು ಕೂಡ ಒಂದು ಸುಲಭದ ನಿರ್ಣಯದಂತೆ ನಮಗೆ ತೋರಬಹುದು. ಏಕೆಂದರೆ ಯೆಹೋವನ ಆರಾಧನೆ ಮಾಡುವುದೇ ಯಾವಾಗಲೂ ಪ್ರಯೋಜನಕರ ಎಂದು ನಮಗೆ ಗೊತ್ತು. ಅವನನ್ನು ಬಿಟ್ಟು ಜೀವವಿಲ್ಲದ ಒಂದು ದೇವರನ್ನು ಆರಾಧಿಸುವುದು ಮೂರ್ಖತನ ಅಲ್ಲವಾ? ಹೀಗಿದ್ದರೂ ಆ ಇಸ್ರಾಯೇಲ್ಯರಿಗೆ ನಿರ್ಣಯ ಮಾಡಲಿಕ್ಕಾಗದೆ ‘ಎರಡು ಮನಸ್ಸುಳ್ಳವರಾಗಿದ್ದರು.’ ಆದ್ದರಿಂದ ಎಲೀಯನು ಅವರಿಗೆ ಸತ್ಯ ದೇವರಾದ ಯೆಹೋವನನ್ನು ಆರಾಧಿಸುವ ಆಯ್ಕೆಮಾಡುವಂತೆ ಉತ್ತೇಜಿಸುವ ಮೂಲಕ ವಿವೇಕದ ಮಾತುಗಳನ್ನಾಡಿದನು.
7 ಆ ಇಸ್ರಾಯೇಲ್ಯರಿಗೆ ಒಂದು ಒಳ್ಳೇ ನಿರ್ಣಯ ಮಾಡುವುದು ಯಾಕೆ ಕಷ್ಟಕರವಾಗಿತ್ತು? ಮೊದಲನೇ ಕಾರಣ, ಅವರಿಗೆ ಯೆಹೋವನ ಮೇಲೆ ನಂಬಿಕೆ ಇರಲಿಲ್ಲ, ಆತನ ಮಾತಿಗೆ ಕಿವಿಗೊಡಲು ಮನಸ್ಸಿರಲಿಲ್ಲ. ಆತನಲ್ಲಿ ಅವರಿಗೆ ಭರವಸೆಯಿರಲಿಲ್ಲ. ಆತನ ಬಗ್ಗೆ, ಆತನ ವಿವೇಕದ ಬಗ್ಗೆ ಕಲಿಯಲು ಸಮಯ ಕೊಡಲಿಲ್ಲ. ಹಾಗೆ ಕಲಿತಿದ್ದಲ್ಲಿ ಆ ಜ್ಞಾನದಿಂದಾಗಿ ಅವರು ಒಳ್ಳೇ ನಿರ್ಣಯಗಳನ್ನು ಮಾಡಲಿಕ್ಕಾಗುತ್ತಿತ್ತು. (ಕೀರ್ತ. 25:12) ಎರಡನೇ ಕಾರಣ, ಇಸ್ರಾಯೇಲ್ಯರು ಬೇರೆ ಜನಾಂಗದವರ ಯೋಚನಾ ರೀತಿಯಿಂದ ಪ್ರಭಾವಿತರಾಗಿದ್ದರು. ಅವರು ತಮಗಾಗಿ ನಿರ್ಣಯಗಳನ್ನೂ ಮಾಡುವಂತೆ ಬಿಟ್ಟಿದ್ದರು. ಹಾಗಾಗಿ ಇಸ್ರಾಯೇಲ್ಯರು ಅವರನ್ನು ಹಿಂಬಾಲಿಸಿ ಅವರ ಸುಳ್ಳು ದೇವರುಗಳನ್ನು ಪೂಜಿಸಲು ಆರಂಭಿಸಿದರು. ಯೆಹೋವನು ಅನೇಕ ವರ್ಷಗಳ ಹಿಂದೆಯೇ ಅಂಥ ಜನಾಂಗಗಳ ಜೊತೆ ಸೇರಿ ಅವರನ್ನು ಹಿಂಬಾಲಿಸಬಾರದೆಂದು ಎಚ್ಚರಿಸಿದ್ದನು.—ವಿಮೋ. 23:2.
ಬೇರೆಯವರು ನಮಗಾಗಿ ನಿರ್ಣಯ ಮಾಡಬೇಕಾ?
8. ಇಸ್ರಾಯೇಲ್ಯರಿಂದ ನಾವು ಯಾವ ಮುಖ್ಯ ಪಾಠವನ್ನು ಕಲಿಯಬಹುದು?
8 ಇಸ್ರಾಯೇಲ್ಯರಿಂದ ನಾವು ಕಲಿಯಬಹುದಾದ ಪಾಠವೇನೆಂದರೆ, ಒಳ್ಳೇ ನಿರ್ಣಯಗಳನ್ನು ಮಾಡಬೇಕಾದರೆ ನಾವು ದೇವರ ವಾಕ್ಯದ ಸಹಾಯ ತೆಗೆದುಕೊಳ್ಳಲೇಬೇಕು. ಪ್ರತಿಯೊಬ್ಬ ವ್ಯಕ್ತಿ ತಾನು ಮಾಡುವ ಆಯ್ಕೆ, ನಿರ್ಣಯಗಳಿಗಾಗಿ ಸ್ವತಃ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಗಲಾತ್ಯ 6:5 ನಮಗೆ ನೆನಪಿಸುತ್ತದೆ. ಇದರರ್ಥ ನಿರ್ಣಯಗಳನ್ನು ಮಾಡುವ ಜವಾಬ್ದಾರಿ ನಮ್ಮದು, ಅದನ್ನು ಬೇರೆಯವರ ಮೇಲೆ ಹಾಕಬಾರದು. ದೇವರ ದೃಷ್ಟಿಯಲ್ಲಿ ಯಾವುದು ಸರಿ ಎಂಬದನ್ನು ನಾವೇ ಕಲಿತು ನಿರ್ಣಯ ಮಾಡಬೇಕು.
9. ಬೇರೆಯವರು ನಮಗಾಗಿ ನಿರ್ಣಯಗಳನ್ನು ಮಾಡುವಂತೆ ಬಿಡುವುದು ಅಪಾಯಕಾರಿ ಯಾಕೆ?
9 ನಾವು ಬೇರೆಯವರ ಒತ್ತಡಕ್ಕೆ ಮಣಿದು ಅವರು ಹೇಳಿದಂತೆ ನಿರ್ಣಯ ಮಾಡಿದರೆ ಅವರು ನಮಗಾಗಿ ನಿರ್ಣಯ ಮಾಡಿದಂತಾಗುತ್ತದೆ. (ಜ್ಞಾನೋ. 1:10, 15) ಈ ರೀತಿ ಅವರು ನಮ್ಮನ್ನು ಪ್ರಭಾವಿಸುವಂತೆ ಬಿಟ್ಟುಕೊಟ್ಟರೆ ಅದು ಅಪಾಯಕಾರಿ. ನಮ್ಮ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಗನುಸಾರ ನಡೆದುಕೊಳ್ಳುವ ಜವಾಬ್ದಾರಿ ನಮಗಿದೆ. ಆದರೆ ಬೇರೆಯವರು ನಮಗಾಗಿ ನಿರ್ಣಯಗಳನ್ನು ಮಾಡುವಂತೆ ಬಿಟ್ಟುಕೊಟ್ಟರೆ ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆ. ಇದು ದುರಂತಕ್ಕೆ ನಡೆಸಲು ಸಾಧ್ಯವಿದೆ.
10. ಪೌಲನು ಗಲಾತ್ಯದವರನ್ನು ಯಾವ ವಿಷಯದಲ್ಲಿ ಎಚ್ಚರಿಸಿದನು?
10 ಬೇರೆಯವರು ನಿಮಗಾಗಿ ನಿರ್ಣಯಗಳನ್ನು ಮಾಡುವಂತೆ ಬಿಡಬೇಡಿ ಎಂದು ಅಪೊಸ್ತಲ ಪೌಲನು ಗಲಾತ್ಯದವರನ್ನು ಎಚ್ಚರಿಸಿದನು. (ಗಲಾತ್ಯ 4:17 ಓದಿ.) ಏಕೆಂದರೆ ಗಲಾತ್ಯ ಸಭೆಯಲ್ಲಿದ್ದ ಕೆಲವು ಸಹೋದರರು ಇತರರಿಗಾಗಿ ನಿರ್ಣಯಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದರು? ಸಭೆಯಲ್ಲಿದ್ದವರು ಅಪೊಸ್ತಲರು ಹೇಳುವಂತೆ ಮಾಡುವ ಬದಲು ತಮ್ಮನ್ನು ‘ಹುಡುಕಬೇಕು’ ಅಥವಾ ಹಿಂಬಾಲಿಸಬೇಕೆಂಬ ಸ್ವಾರ್ಥ ಆಸೆ ಅವರಿಗಿತ್ತು. ಅವರು ದೀನರಾಗಿರಲಿಲ್ಲ. ಸಭೆಯಲ್ಲಿದ್ದವರಿಗೆ ತಮ್ಮತಮ್ಮ ನಿರ್ಣಯಗಳನ್ನು ಮಾಡುವ ಹಕ್ಕಿದೆ ಎಂಬದನ್ನು ಅವರು ಗೌರವಿಸಲಿಲ್ಲ.
11. ಬೇರೆಯವರು ನಿರ್ಣಯಗಳನ್ನು ಮಾಡಲಿಕ್ಕಿರುವಾಗ ನಾವು ಹೇಗೆ ಸಹಾಯ ಮಾಡಬಹುದು?
11 ನಿರ್ಣಯಗಳನ್ನು ಮಾಡಲು ಸಹೋದರರಿಗಿರುವ ಹಕ್ಕನ್ನು ಅಪೊಸ್ತಲ ಪೌಲನು ಗೌರವಿಸಿದನು. ಈ ವಿಷಯದಲ್ಲಿ ಅವನು ನಮಗೊಂದು ಒಳ್ಳೇ ಮಾದರಿ. (2 ಕೊರಿಂಥ 1:24 ಓದಿ.) ಇಂದು ಹಿರಿಯರು ವೈಯಕ್ತಿಕ ಆಯ್ಕೆಗೆ ಬಿಟ್ಟಿರುವ ವಿಷಯಗಳ ಬಗ್ಗೆ ಯಾರಿಗಾದರೂ ಬುದ್ಧಿವಾದ ಕೊಡುವಾಗ ಪೌಲನ ಮಾದರಿಯನ್ನು ಅನುಸರಿಸಬಹುದು. ಹಿರಿಯರು ಸಹೋದರ ಸಹೋದರಿಯರಿಗೆ ದೇವರ ವಾಕ್ಯದ ಮೇಲೆ ಆಧರಿತವಾದ ಮಾಹಿತಿ ಕೊಡಬಹುದು. ಆದರೆ ಅವರಿಗಾಗಿ ನಿರ್ಣಯಗಳನ್ನು ಮಾಡುವುದಿಲ್ಲ. ಪ್ರತಿಯೊಬ್ಬ ಕ್ರೈಸ್ತನು ತನ್ನ ಸ್ವಂತ ನಿರ್ಣಯ ಮಾಡುವಂತೆ ಹಿರಿಯರು ಬಿಡಬೇಕು. ಏಕೆಂದರೆ ಆ ನಿರ್ಣಯದ ಫಲಿತಾಂಶಗಳನ್ನು ಅವರೇ ಅನುಭವಿಸಬೇಕಾಗುತ್ತದೆ. ನಾವು ನೆನಪಿಡಬೇಕಾದ ಮುಖ್ಯವಾದ ಪಾಠ: ಸಹೋದರ ಸಹೋದರಿಯರ ಸನ್ನಿವೇಶಕ್ಕೆ ಅನ್ವಯವಾಗುವಂಥ ಬೈಬಲ್ ಸಲಹೆಯನ್ನು ಅರ್ಥಮಾಡಿಕೊಳ್ಳಲು ನಾವು ಅವರಿಗೆ ಸಹಾಯ ಮಾಡಬಹುದು. ಆದರೆ ನಿರ್ಣಯ ಅವರೇ ಮಾಡಬೇಕು. ಆ ಹಕ್ಕು ಮತ್ತು ಜವಾಬ್ದಾರಿ ಅವರದ್ದೇ. ಅವರಾಗಿಯೇ ಒಳ್ಳೇ ನಿರ್ಣಯಗಳನ್ನು ಮಾಡುವಾಗ ಅವರಿಗೆ ಪ್ರಯೋಜನವಾಗುತ್ತದೆ. ಅವರೇನು ಮಾಡಬೇಕೆಂದು ನಿರ್ಣಯಿಸುವ ಅಧಿಕಾರ ನಮಗಿದೆಯೆಂದು ನಾವು ಯಾವತ್ತೂ ನೆನಸಬಾರದು.
ಭಾವನೆಗಳು ನಿಮ್ಮ ನಿರ್ಣಯಗಳನ್ನು ನಿಯಂತ್ರಿಸದಿರಲಿ
12, 13. ನಾವು ಸಿಟ್ಟಿನಿಂದಿರುವಾಗ ಇಲ್ಲವೇ ನಿರುತ್ಸಾಹಗೊಂಡಿರುವಾಗ ನಿರ್ಣಯಗಳನ್ನು ಮಾಡುವುದು ಅಪಾಯಕಾರಿ ಏಕೆ?
12 ಇಂದು ಹೆಚ್ಚಿನ ಜನರು ಅವರ ಭಾವನೆಗಳ ಮೇಲೆ ಆಧರಿಸಿ ನಿರ್ಣಯಗಳನ್ನು ಮಾಡುತ್ತಾರೆ. ಆದರೆ ಇದೂ ಅಪಾಯಕರ. ನಮ್ಮ ಭಾವನೆಗಳ ಅಥವಾ ಅಪರಿಪೂರ್ಣ ಹೃದಯದ ಮೇಲೆ ಆಧರಿತವಾದ ನಿರ್ಣಯಗಳನ್ನು ಮಾಡಬಾರದೆಂದು ಬೈಬಲ್ ಎಚ್ಚರಿಸುತ್ತದೆ. (ಜ್ಞಾನೋ. 28:26) ಏಕೆ? ಏಕೆಂದರೆ “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ.” (ಯೆರೆ. 17:9) ಆದ್ದರಿಂದ ನಮ್ಮ ಹೃದಯವನ್ನು ನಂಬಲಿಕ್ಕಾಗಲ್ಲ. ಅಪರಿಪೂರ್ಣ ಹೃದಯವನ್ನು ನಂಬಿಕೊಂಡು ಅದು ಹೇಳಿದಂತೆ ನಡೆಯುವುದರಿಂದ ಪರಿಣಾಮಗಳು ದುಃಖಕರವಾಗಿರುತ್ತವೆ. ಇದನ್ನು ತೋರಿಸುವ ಹಲವಾರು ಉದಾಹರಣೆಗಳು ಬೈಬಲಿನಲ್ಲಿವೆ. (1 ಅರ. 11:9-11; ಯೆರೆ. 3:17; 13:10) ನಮ್ಮ ಭಾವನೆಗಳ ಮೇಲೆ ಆಧರಿಸಿ ನಿರ್ಣಯಗಳನ್ನು ಮಾಡಿದರೆ ಏನಾಗಬಲ್ಲದು?
13 ಯೆಹೋವನನ್ನು ನಮ್ಮ ಪೂರ್ಣ ಹೃದಯದಿಂದ ಪ್ರೀತಿಸಬೇಕು, ನೆರೆಯವನನ್ನು ನಮ್ಮಂತೆಯೇ ಪ್ರೀತಿಸಬೇಕು ಅಂತ ಯೆಹೋವನೇ ಆಜ್ಞೆ ಕೊಟ್ಟಿದ್ದಾನೆ. (ಮತ್ತಾ. 22:37-39) ಆದರೂ ನಾವು ಹುಷಾರಾಗಿರಬೇಕು. ನಮ್ಮ ಯೋಚನಾ ರೀತಿ ಹಾಗೂ ಕ್ರಿಯೆಗಳನ್ನು ನಮ್ಮ ಭಾವನೆಗಳು ನಿಯಂತ್ರಿಸಿದರೆ ಅಪಾಯ ಖಂಡಿತವೆಂದು ಹಿಂದಿನ ಪ್ಯಾರದಲ್ಲಿರುವ ವಚನಗಳು ತೋರಿಸುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತುಂಬ ಸಿಟ್ಟಿನಲ್ಲಿದ್ದರೆ ಒಳ್ಳೇ ನಿರ್ಣಯ ಮಾಡಲು ಆಗುವುದಿಲ್ಲ. (ಜ್ಞಾನೋ. 14:17; 29:22) ಒಬ್ಬ ವ್ಯಕ್ತಿ ತುಂಬ ನಿರುತ್ಸಾಹಗೊಂಡು ಬಳಲಿದ್ದರೂ ಒಳ್ಳೇ ನಿರ್ಣಯ ಮಾಡಲು ಕಷ್ಟವಾಗುತ್ತದೆ. (ಅರ. 32:6-12; ಜ್ಞಾನೋ. 24:10) ದೇವರ ವಾಕ್ಯ ನಮ್ಮ ಯೋಚನಾ ರೀತಿಯನ್ನು ನಿಯಂತ್ರಿಸುವಂತೆ ಬಿಡಬೇಕು. (ರೋಮ. 7:25) ಮಹತ್ವಪೂರ್ಣ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ನಮ್ಮ ಭಾವನೆಗಳು ನಮ್ಮನ್ನು ನಿಯಂತ್ರಿಸಬಾರದು.
ನಿರ್ಣಯಗಳನ್ನು ಯಾವಾಗ ಬದಲಾಯಿಸಬೇಕು?
14. ನಿರ್ಣಯವನ್ನು ಬದಲಾಯಿಸುವುದು ತಪ್ಪಲ್ಲವೆಂದು ನಮಗೆ ಹೇಗೆ ಗೊತ್ತು?
14 ನಾವು ಒಳ್ಳೇ ನಿರ್ಣಯಗಳನ್ನು ಮಾಡಿದರೂ ಕೆಲವೊಮ್ಮೆ ಅಂಥ ನಿರ್ಣಯದ ಬಗ್ಗೆ ಮತ್ತೆ ಯೋಚಿಸಿ, ಅದನ್ನು ಬದಲಾಯಿಸಬೇಕಾಗಿ ಬರುತ್ತದೆ. ಹಾಗೆ ಮಾಡುವುದರಿಂದ ಒಳಿತೂ ಆಗುತ್ತದೆ. ಈ ವಿಷಯದಲ್ಲಿ ಯೆಹೋವ ದೇವರೇ ಉತ್ತಮ ಮಾದರಿ. ಯೋನನ ದಿನದಲ್ಲಿದ್ದ ನಿನೆವೆಯ ಜನರ ವಿಷಯದಲ್ಲಿ ಆತನು ಏನು ಮಾಡಿದನೆಂದು ಗಮನಿಸಿ. “ದೇವರು ನಿನೆವೆಯವರ ಕಾರ್ಯಗಳನ್ನು ನೋಡಿ ಅವರು ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡರೆಂದು ತಿಳಿದು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.” (ಯೋನ 3:10) ನಿನೆವೆಯವರು ಬದಲಾವಣೆ ಮಾಡಿ, ಕೆಟ್ಟ ಕೆಲಸಗಳನ್ನು ನಿಲ್ಲಿಸಿದಾಗ ಯೆಹೋವನು ತನ್ನ ನಿರ್ಧಾರ ಬದಲಾಯಿಸಿದನು. ಆತನು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವವನು, ದೀನನು, ಕರುಣಾಮಯಿ ಎಂದು ಇದು ತೋರಿಸಿತು. ಮನುಷ್ಯರಂತೆ ಯೆಹೋವನು ದುಡುಕಿ ನಿರ್ಣಯಗಳನ್ನು ಮಾಡುವುದಿಲ್ಲ. ಆತನು ಕೋಪದಲ್ಲಿರುವಾಗಲೂ ಹಾಗೆ ಮಾಡುವುದಿಲ್ಲ.
15. ನಾವೊಂದು ನಿರ್ಣಯವನ್ನು ಯಾಕೆ ಬದಲಾಯಿಸಬೇಕಾದೀತು?
15 ನಾವು ಹಿಂದೆ ಮಾಡಿರುವ ನಿರ್ಣಯದ ಬಗ್ಗೆ ಮತ್ತೆ ಯೋಚಿಸಿ, ಬದಲಾಯಿಸಲು ಬೇರೆಬೇರೆ ಕಾರಣಗಳಿರಬಹುದು. ಉದಾಹರಣೆಗೆ, ಪರಿಸ್ಥಿತಿಗಳು ಬದಲಾಗಿರುವುದು ಒಂದು ಕಾರಣ ಆಗಿದೆ. ಯೆಹೋವನು ಕೂಡ ತನ್ನ ನಿರ್ಣಯಗಳನ್ನು ಬದಲಾಯಿಸಿದ್ದಾನೆಂದು ನೆನಪಿಗೆ ತನ್ನಿ. (1 ಅರ. 21:20, 21, 27-29; 2 ಅರ. 20:1-5) ನಿರ್ಣಯ ಬದಲಾಯಿಸಲು ಇನ್ನೊಂದು ಕಾರಣ, ನಮಗೆ ಸಿಕ್ಕಿರುವ ಹೊಸ ಮಾಹಿತಿ ಆಗಿರಬಹುದು. ರಾಜ ದಾವೀದನು ಹೀಗೆ ಮಾಡಿದ್ದನ್ನು ನೆನಪಿಸಿಕೊಳ್ಳಿ. ಅವನಿಗೆ ಸಿಕ್ಕಿದ್ದ ತಪ್ಪು ಮಾಹಿತಿಯ ಆಧಾರದ ಮೇಲೆ ಸೌಲನ ಮೊಮ್ಮಗನಾದ ಮೆಫೀಬೋಶೆತನ ವಿಷಯದಲ್ಲಿ ಒಂದು ನಿರ್ಣಯ ಮಾಡಿದ್ದನು. ಆದರೆ ನಂತರ ಅವನಿಗೆ ಸರಿಯಾದ ಮಾಹಿತಿ ಸಿಕ್ಕಿತು. ಆಗ ಅವನು ತನ್ನ ನಿರ್ಣಯ ಬದಲಾಯಿಸಿದನು. (2 ಸಮು. 16:3, 4; 19:24-29) ಒಮ್ಮೊಮ್ಮೆ ನಾವು ಕೂಡ ಹಾಗೆ ಮಾಡಬೇಕಾದೀತು. ಇದು ಜಾಣತನ.
16. (ಎ) ನಿರ್ಣಯಗಳನ್ನು ಮಾಡುವಾಗ ಸಹಾಯಕರವಾಗಿರುವ ಕೆಲವು ಸಲಹೆಗಳು ಯಾವವು? (ಬಿ) ಹಿಂದೆ ಮಾಡಿರುವ ನಿರ್ಣಯಗಳ ಬಗ್ಗೆ ಪುನಃ ಯಾಕೆ ಯೋಚಿಸಿ ಬದಲಾಯಿಸಬೇಕಾಗಬಹುದು? (ಸಿ) ನಾವು ಏನು ಮಾಡಲು ಸಿದ್ಧರಿರಬೇಕು?
16 ಮಹತ್ವದ ನಿರ್ಣಯಗಳನ್ನು ಆತುರಾತುರದಿಂದ ಮಾಡಬಾರದೆಂದು ಬೈಬಲ್ ಹೇಳುತ್ತದೆ. (ಜ್ಞಾನೋ. 21:5) ಒಳ್ಳೇ ನಿರ್ಣಯ ಮಾಡಬೇಕಾದರೆ, ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಯೋಚಿಸಲು ಸಮಯ ತಕ್ಕೊಳ್ಳಬೇಕು. (1 ಥೆಸ. 5:21) ಒಂದು ನಿರ್ಣಯ ಮಾಡುವ ಮುಂಚೆ ಕುಟುಂಬದ ಯಜಮಾನನು ಬೈಬಲ್ ಮತ್ತು ಕ್ರೈಸ್ತ ಪ್ರಕಾಶನಗಳನ್ನು ಬಳಸಿ ಸಂಶೋಧನೆ ಮಾಡಬೇಕು. ಹಾಗೆಯೇ ಕುಟುಂಬದಲ್ಲಿರುವ ಬೇರೆ ಸದಸ್ಯರ ಅಭಿಪ್ರಾಯಗಳೇನೆಂದು ತಿಳಿದುಕೊಳ್ಳುವುದು ಸಹ ಒಳ್ಳೇದು. ಹೆಂಡತಿ ಹೇಳಿದ್ದನ್ನು ಮಾಡುವಂತೆ ಅಬ್ರಹಾಮನಿಗೆ ದೇವರು ಉತ್ತೇಜಿಸಿದ್ದನ್ನು ನೆನಪಿಸಿಕೊಳ್ಳಿ. (ಆದಿ. 21:9-12) ಹಿರಿಯರು ಸಹ ಸಂಶೋಧನೆ ಮಾಡಲು ಸಮಯ ತೆಗೆದುಕೊಳ್ಳಬೇಕು. ತಮಗೆ ಸಿಕ್ಕಿರುವ ಹೊಸ ಮಾಹಿತಿಯಿಂದಾಗಿ ತಾವು ಹಿಂದೆ ಮಾಡಿದ ಒಂದು ನಿರ್ಧಾರವನ್ನು ಬದಲಾಯಿಸಬೇಕೆಂದು ಗೊತ್ತಾದಾಗ ಅದನ್ನು ಬದಲಾಯಿಸುತ್ತಾರೆ. ಬೇರೆಯವರ ಮುಂದೆ ಮರ್ಯಾದೆ ಹೋಗುತ್ತದೆ ಅಂತ ಹೆದರುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ದೀನರಾಗಿರುವ ಹಿರಿಯರು ಅಗತ್ಯವಿರುವಾಗೆಲ್ಲ ತಮ್ಮ ಯೋಚನಾ ರೀತಿ ಮತ್ತು ನಿರ್ಣಯಗಳನ್ನು ಬದಲಾಯಿಸಲು ಸಿದ್ಧರಿರಬೇಕು. ನಾವೆಲ್ಲರೂ ಅವರ ಈ ಮಾದರಿಯನ್ನು ಅನುಸರಿಸುವುದು ಒಳ್ಳೇದು. ಇದರಿಂದಾಗಿ ಸಭೆಯಲ್ಲಿ ಶಾಂತಿ, ಐಕ್ಯವನ್ನು ಕಾಪಾಡಿಕೊಳ್ಳಲಿಕ್ಕಾಗುತ್ತದೆ.—ಅ. ಕಾ. 6:1-4.
ನಿರ್ಣಯ ಮಾಡಿದ ಮೇಲೆ ಅದರಂತೆಯೇ ಮಾಡಿ
17. ಒಳ್ಳೇ ನಿರ್ಣಯಗಳನ್ನು ಮಾಡಲು ನಮಗೆ ಯಾವ ಸಹಾಯ ಇದೆ?
17 ಕೆಲವು ನಿರ್ಣಯಗಳು ಹೆಚ್ಚು ಗಂಭೀರ ಆಗಿರುತ್ತವೆ. ಉದಾಹರಣೆಗೆ, ಮದುವೆಯಾಗಬೇಕಾ ಬೇಡವಾ? ಯಾರನ್ನು ಮದುವೆಯಾಗಬೇಕು? ಎನ್ನುವುದು ತುಂಬ ಗಂಭೀರವಾದ ನಿರ್ಣಯ. ಪೂರ್ಣ ಸಮಯದ ಸೇವೆ ಯಾವಾಗ ಆರಂಭಿಸಬೇಕು ಎನ್ನುವುದು ಕೂಡ ಗಂಭೀರವಾದ ನಿರ್ಣಯ. ಇಂಥ ನಿರ್ಣಯಗಳನ್ನು ಮಾಡುವ ಮುಂಚೆ ಚೆನ್ನಾಗಿ ಯೋಚಿಸಬೇಕು. ಯೆಹೋವನ ಸಹಾಯ ಕೇಳಬೇಕು. ಇದೆಲ್ಲ ಮಾಡಲಿಕ್ಕೆ ಸಮಯ ಹಿಡಿಯಬಹುದು. ಆದರೆ ಒಳ್ಳೇ ನಿರ್ಣಯ ಮಾಡಬೇಕಾದರೆ ಯೆಹೋವನಲ್ಲಿ ಭರವಸೆಯಿಡಬೇಕು, ಆತನು ಕೊಡುವ ಉಪದೇಶಕ್ಕೆ ಕಿವಿಗೊಡಬೇಕು, ಅದರಂತೆ ನಡೆಯಬೇಕು. (ಜ್ಞಾನೋ. 1:5) ಯೆಹೋವನು ನಮಗೆ ತನ್ನ ವಾಕ್ಯದಲ್ಲಿ ಅತ್ಯುತ್ತಮ ಸಲಹೆಯನ್ನು ಕೊಟ್ಟಿದ್ದಾನೆ. ಅದನ್ನು ಪಡೆಯಲಿಕ್ಕಾಗಿ ಸಂಶೋಧನೆ ಮಾಡಬೇಕು, ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಬೇಕು. ಇದು ತುಂಬ ಮುಖ್ಯ. ಆತನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ನಿರ್ಣಯಗಳನ್ನು ಮಾಡಲು ಬೇಕಾದ ಗುಣಗಳನ್ನು ಆತನು ನಮಗೆ ಕೊಡಬಲ್ಲನು. ಮಹತ್ವದ ನಿರ್ಣಯಗಳನ್ನು ಮಾಡುವ ಮುಂಚೆ ನಾವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಈ ನಿರ್ಣಯ ನನಗೆ ಯೆಹೋವನ ಮೇಲಿರುವ ಪ್ರೀತಿಯನ್ನು ತೋರಿಸುತ್ತದಾ? ಇದು ನನ್ನ ಕುಟುಂಬಕ್ಕೆ ಸಂತೋಷ, ನೆಮ್ಮದಿ ತರಲಿದೆಯಾ? ನನಗೆ ತಾಳ್ಮೆ, ದಯೆ ಇದೆಯೆಂದು ಅದು ತೋರಿಸುತ್ತದಾ?’
18. ನಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಯೆಹೋವನು ಏಕೆ ನಿರೀಕ್ಷಿಸುತ್ತಾನೆ?
18 ಯೆಹೋವನು ನಮಗೆ ಆತನನ್ನು ಪ್ರೀತಿಸುವಂತೆ, ಆತನ ಸೇವೆ ಮಾಡುವಂತೆ ಒತ್ತಾಯಿಸುವುದಿಲ್ಲ. ಆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟಿದ್ದಾನೆ. ಆ ಆಯ್ಕೆ ಮಾಡುವ ನಮ್ಮ ಜವಾಬ್ದಾರಿ ಮತ್ತು ಹಕ್ಕನ್ನು ಗೌರವಿಸುತ್ತಾನೆ. (ಯೆಹೋ. 24:15; ಪ್ರಸಂ. 5:4) ಆದರೆ ನಾವು ಆತನ ವಾಕ್ಯಕ್ಕನುಸಾರ ಒಂದು ನಿರ್ಣಯ ತಕ್ಕೊಂಡ ಮೇಲೆ ಅದರಂತೆ ಮಾಡಬೇಕೆಂದು ನಿರೀಕ್ಷಿಸುತ್ತಾನೆ. ಆತನ ನಿರ್ದೇಶನಗಳಲ್ಲಿ ನಾವು ನಂಬಿಕೆಯಿಡುವಾಗ ಮತ್ತು ಆತನ ತತ್ವಗಳನ್ನು ಪಾಲಿಸುವಾಗ ಒಳ್ಳೇ ನಿರ್ಣಯಗಳನ್ನು ಮಾಡಲು ಆಗುತ್ತದೆ. ನಾವು ಚಂಚಲರಲ್ಲ, ನಮ್ಮೆಲ್ಲ ಮಾರ್ಗಗಳಲ್ಲಿ ಸ್ಥಿರರಾಗಿದ್ದೇವೆಂದು ಇದು ತೋರಿಸುತ್ತದೆ.—ಯಾಕೋ. 1:5-8; 4:8.