ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
“ನೀವು ಸಹ ತಾಳ್ಮೆಯನ್ನು ಅಭ್ಯಸಿಸಿರಿ.”—ಯಾಕೋ. 5:8.
1, 2. (ಎ) “ಇನ್ನೆಷ್ಟು ಸಮಯ” ಎಂಬ ಪ್ರಶ್ನೆಯನ್ನು ನಾವು ಯಾಕೆ ಕೇಳುತ್ತಿರಬಹುದು? (ಬಿ) ಹಿಂದಿನ ಕಾಲದ ನಂಬಿಗಸ್ತ ಸೇವಕರು ಕೇಳಿದ ಪ್ರಶ್ನೆಯಿಂದ ನಮಗೆ ಇಂದು ಹೇಗೆ ಸಮಾಧಾನ ಆಗುತ್ತದೆ?
“ಎಂದಿನ ತನಕ?” ಎಂಬ ಪ್ರಶ್ನೆಯನ್ನು ಯೆಶಾಯನು ಕೇಳಿದನು. (ಯೆಶಾ. 6:11) ಹಬಕ್ಕೂಕನೂ “ಎಷ್ಟು ಕಾಲ”? ಎಂಬ ಪ್ರಶ್ನೆ ಕೇಳಿದನು. (ಹಬ. 1:2) ಈ ಇಬ್ಬರೂ ನಂಬಿಗಸ್ತ ಪ್ರವಾದಿಗಳು ಕೇಳಿದ ಅದೇ ರೀತಿಯ ಪ್ರಶ್ನೆಯನ್ನು ರಾಜ ದಾವೀದನು 13ನೇ ಕೀರ್ತನೆಯನ್ನು ಬರೆದಾಗ ನಾಲ್ಕು ಸಾರಿ ಕೇಳಿದನು. (ಕೀರ್ತ. 13:1, 2) ಯೇಸು ಕ್ರಿಸ್ತನು ಸಹ ಒಂದು ಸಂದರ್ಭದಲ್ಲಿ ತನ್ನ ಸುತ್ತಲಿದ್ದ ನಂಬಿಕೆ ಇಲ್ಲದ ಜನರನ್ನು ನೋಡಿ, “ಇನ್ನೆಷ್ಟು ಸಮಯ” ಎಂದು ಕೇಳಿದ್ದನು. (ಮತ್ತಾ. 17:17) ಇವತ್ತು ನಾವು ಸಹ ಇದೇ ಪ್ರಶ್ನೆಯನ್ನು ಕೇಳುತ್ತಿರಬಹುದು.
2 “ಇನ್ನೆಷ್ಟು ಸಮಯ” ಎಂಬ ಪ್ರಶ್ನೆಯನ್ನು ನಾವು ಯಾಕೆ ಕೇಳುತ್ತಿರಬಹುದು? ನಮಗೇನೋ ಅನ್ಯಾಯ ಆಗಿರಬಹುದು, ಆರೋಗ್ಯ ಹಾಳಾಗಿರಬಹುದು, ವಯಸ್ಸಾಗುತ್ತಾ ಇರಬಹುದು. ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ನಾವು ಜೀವಿಸುತ್ತಿರುವುದರಿಂದ ನಮ್ಮ ಮೇಲೆ ತುಂಬ ಒತ್ತಡ ಇರಬಹುದು. (2 ತಿಮೊ. 3:1) ನಮ್ಮ ಸುತ್ತಲಿರುವ ಜನರ ತಪ್ಪಾದ ಮನೋಭಾವ ಮತ್ತು ನಡತೆಯಿಂದಾಗಿ ನಾವು ಬೇಸತ್ತು ನಿರುತ್ತೇಜನಗೊಂಡಿರಬಹುದು. ಕಾರಣ ಏನೇ ಇರಲಿ, ಹಿಂದಿನ ಕಾಲದಲ್ಲಿ ಆ ಪ್ರಶ್ನೆಯನ್ನು ಕೇಳಿದ ತನ್ನ ನಂಬಿಗಸ್ತ ಸೇವಕರನ್ನು ಯೆಹೋವನು ಖಂಡಿಸಲಿಲ್ಲ ಎಂಬ ವಿಷಯ ತಿಳಿದು ನಮಗೆ ಸಮಾಧಾನ ಆಗುತ್ತದೆ.
3. ಕಷ್ಟಕರವಾದ ಒಂದು ಸನ್ನಿವೇಶದಲ್ಲಿ ನಮಗೆ ಯಾವುದು ಸಹಾಯ ಮಾಡುತ್ತದೆ?
3 ಕಷ್ಟಕರವಾದ ಒಂದು ಸನ್ನಿವೇಶವನ್ನು ಸಹಿಸಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುತ್ತದೆ? ಯೇಸುವಿನ ಮಲತಮ್ಮನಾದ ಯಾಕೋಬ ದೇವಪ್ರೇರಣೆಯಿಂದ ಕೊಟ್ಟ ಸಲಹೆ ಸಹಾಯ ಮಾಡುತ್ತದೆ. “ಸಹೋದರರೇ ಕರ್ತನ ಸಾನ್ನಿಧ್ಯದ ವರೆಗೆ ತಾಳ್ಮೆಯನ್ನು ಅಭ್ಯಸಿಸಿರಿ” ಎಂದು ಆತನು ಬರೆದನು. (ಯಾಕೋ. 5:7) ಹಾಗಾದರೆ ನಾವೆಲ್ಲರೂ ತಾಳ್ಮೆ ತೋರಿಸಬೇಕು. ಆದರೆ ತಾಳ್ಮೆ ಅಂದರೆ ಏನು? ಈ ಸೊಗಸಾದ ಗುಣವನ್ನು ನಾವು ಹೇಗೆ ತೋರಿಸಬಹುದು?
ತಾಳ್ಮೆ ಅಂದರೆ ಏನು?
4, 5. (ಎ) ತಾಳ್ಮೆ ತೋರಿಸುವುದರಲ್ಲಿ ಏನೆಲ್ಲಾ ಸೇರಿದೆ? (ಬಿ) ತಾಳ್ಮೆ ಬಗ್ಗೆ ವಿವರಿಸಲು ಯಾಕೋಬ ಯಾವ ಉದಾಹರಣೆ ಕೊಟ್ಟಿದ್ದಾನೆ? (ಲೇಖನದ ಆರಂಭದ ಚಿತ್ರ ನೋಡಿ.)
4 “ದೀರ್ಘ ಸಹನೆ” ಅಥವಾ ತಾಳ್ಮೆ ದೇವರಾತ್ಮದ ಫಲ ಎಂದು ಬೈಬಲ್ ಹೇಳುತ್ತದೆ. ಅಪರಿಪೂರ್ಣ ಮಾನವರು ತುಂಬ ಕಷ್ಟಕರ ಸನ್ನಿವೇಶಗಳಲ್ಲಿ ತಾಳ್ಮೆ ತೋರಿಸಬೇಕಾದರೆ ಅವರಿಗೆ ದೇವರ ಸಹಾಯ ಬೇಕೇಬೇಕು. ತಾಳ್ಮೆ ಎಂಬ ಈ ಗುಣ ದೇವರು ಕೊಟ್ಟ ಉಡುಗೊರೆ. ನಾವು ತಾಳ್ಮೆಯಿಂದ ಇರುವಾಗ ಯೆಹೋವನ ಮೇಲೆ ಮತ್ತು ಬೇರೆಯವರ ಮೇಲಿರುವ ಪ್ರೀತಿಯನ್ನು ತೋರಿಸುತ್ತೇವೆ. ಆದರೆ ತಾಳ್ಮೆ ತೋರಿಸದಿದ್ದಾಗ ನಮ್ಮ ಮತ್ತು ಬೇರೆಯವರ ಮಧ್ಯೆ ಇರುವ ಪ್ರೀತಿ ಕಡಿಮೆಯಾಗಿ ಬಿಡುತ್ತದೆ. (1 ಕೊರಿಂ. 13:4; ಗಲಾ. 5:22) ತಾಳ್ಮೆ ತೋರಿಸುವುದರಲ್ಲಿ ಏನೆಲ್ಲಾ ಸೇರಿದೆ? ಸಕಾರಾತ್ಮಕ ಮನೋಭಾವದೊಂದಿಗೆ ಕಷ್ಟಕರ ಸನ್ನಿವೇಶಗಳನ್ನು ಸಹಿಸಿಕೊಳ್ಳುವುದು ಸೇರಿದೆ. (ಕೊಲೊ. 1:11; ಯಾಕೋ. 1:3, 4) ಏನೇ ಸಮಸ್ಯೆ ಬಂದರೂ ಯೆಹೋವನಿಗೆ ನಂಬಿಗಸ್ತರಾಗಿರಲು ಸಹ ತಾಳ್ಮೆ ಸಹಾಯ ಮಾಡುತ್ತದೆ. ನಮಗೆ ಯಾರಾದರೂ ಕಷ್ಟ ಕೊಟ್ಟರೆ ಮುಯ್ಯಿಗೆ ಮುಯ್ಯಿ ತೀರಿಸದಿರಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ನಾವು ಸಿದ್ಧಮನಸ್ಸಿನಿಂದ ಕಾಯಬೇಕು. ಈ ಪ್ರಾಮುಖ್ಯ ಪಾಠವನ್ನೇ ಯಾಕೋಬ 5:7, 8 ಕಲಿಸುತ್ತದೆ. (ಓದಿ.)
5 ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಲು ನಾವು ಕಾಯುವುದು ಯಾಕೆ ಒಳ್ಳೇದು? ಶಿಷ್ಯನಾದ ಯಾಕೋಬ ನಮ್ಮ ಸನ್ನಿವೇಶವನ್ನು ಒಬ್ಬ ರೈತನಿಗೆ ಹೋಲಿಸುತ್ತಾನೆ. ಒಬ್ಬ ರೈತನು ಬೀಜ ಬಿತ್ತಿ ಬೆಳೆಯನ್ನು ಬೆಳೆಸಲು ಕಷ್ಟಪಟ್ಟು ಕೆಲಸ ಮಾಡುತ್ತಾನಾದರೂ ಅದರ ಬೆಳವಣಿಗೆಯ ವೇಗದ ಮೇಲೆ, ಹವಾಮಾನದ ಮೇಲೆ ಅವನಿಗೆ ನಿಯಂತ್ರಣ ಇಲ್ಲ. “ಭೂಮಿಯ ಅಮೂಲ್ಯವಾದ ಫಲಕ್ಕಾಗಿ” ಅವನು ತಾಳ್ಮೆಯಿಂದ ಕಾಯಬೇಕು. ಅದೇ ರೀತಿ, ಯೆಹೋವನ ವಾಗ್ದಾನಗಳು ನೆರವೇರಲು ನಾವು ಕಾಯುತ್ತಿರುವಾಗ ಎಷ್ಟೋ ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. (ಮಾರ್ಕ 13:32, 33; ಅ. ಕಾ. 1:7) ಆ ರೈತನಂತೆ ನಾವು ತಾಳ್ಮೆಯಿಂದ ಕಾಯಬೇಕಾಗುತ್ತದೆ.
6. ಪ್ರವಾದಿ ಮೀಕನ ಮಾದರಿಯಿಂದ ನಾವೇನು ಕಲಿಯಬಹುದು?
6 ನಾವಿಂದು ಎದುರಿಸುವಂಥ ರೀತಿಯ ಕಷ್ಟಕರ ಸನ್ನಿವೇಶಗಳನ್ನೇ ಪ್ರವಾದಿ ಮೀಕನು ಸಹ ಎದುರಿಸಿದ್ದನು. ಆಹಾಜನು ರಾಜನಾಗಿ ಆಳುತ್ತಿದ್ದ ಸಮಯದಲ್ಲಿ ಮೀಕ ಜೀವಿಸಿದ್ದನು. ಆಹಾಜ ತುಂಬ ದುಷ್ಟ ರಾಜನಾಗಿದ್ದನು. ಇದರಿಂದ ದೇಶದಲ್ಲೆಲ್ಲಾ ಭ್ರಷ್ಟಾಚಾರ ರಾರಾಜಿಸುತ್ತಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ಜನರು “ಕೆಟ್ಟ ಕೆಲಸಕ್ಕೆ ಎರಡು ಕೈಗಳನ್ನು ಹಾಕಿ ಚೆನ್ನಾಗಿ ಮಾಡುತ್ತಾರೆ” ಎಂದು ಬೈಬಲ್ ಹೇಳುತ್ತದೆ. (ಮೀಕ 7:1-3 ಓದಿ.) ಈ ಪರಿಸ್ಥಿತಿಯನ್ನು ತನ್ನಿಂದ ಸರಿಮಾಡಲು ಆಗುವುದಿಲ್ಲ ಎಂದು ಮೀಕನಿಗೆ ಗೊತ್ತಿತ್ತು. ಆಗ ಅವನು ಏನು ಮಾಡಿದನು? ಅವನ ಮಾತುಗಳನ್ನು ಗಮನಿಸಿ: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.” (ಮೀಕ 7:7) ಮೀಕನಂತೆ ನಾವು ಸಹ ‘ಕಾದುಕೊಳ್ಳಬೇಕು’ ಅಂದರೆ ಕಾಯುವ ಮನೋಭಾವವನ್ನು ತೋರಿಸಬೇಕು.
7. ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುವ ಸಮಯಕ್ಕಾಗಿ ನಾವು ಹೇಗೆ ಕಾಯಬೇಕು?
7 ನಮಗೆ ಮೀಕನಂತೆ ನಂಬಿಕೆ ಇದ್ದರೆ, ಯೆಹೋವನು ಸನ್ನಿವೇಶಗಳನ್ನು ಸರಿಮಾಡಲಿ ಎಂದು ಸಿದ್ಧಮನಸ್ಸಿನಿಂದ ಕಾಯುತ್ತೇವೆ. ನಮ್ಮ ಸನ್ನಿವೇಶ ತನ್ನನ್ನು ಗಲ್ಲಿಗೇರಿಸುವ ದಿನಕ್ಕಾಗಿ ಸೆರೆಮನೆಯಲ್ಲಿ ಕಾಯುತ್ತಿರುವ ಒಬ್ಬ ಕೈದಿಯ ತರ ಇಲ್ಲ. ಅವನು ಕಾಯಲೇಬೇಕಾದ ಪರಿಸ್ಥಿತಿ, ಬೇರೆ ದಾರಿಯಿಲ್ಲ. ತನ್ನನ್ನು ಗಲ್ಲಿಗೇರಿಸುವ ದಿನಕ್ಕಾಗಿ ಅವನು ಎದುರುನೋಡುತ್ತಿಲ್ಲ. ಆದರೆ ನಮ್ಮ ವಿಷಯದಲ್ಲಿ ಹಾಗಲ್ಲ. ನಾವು ಯೆಹೋವನಿಗಾಗಿ ಸ್ವಂತ ಇಷ್ಟದಿಂದ ಕಾಯುತ್ತೇವೆ. ಏಕೆಂದರೆ ನಮಗೆ ನಿತ್ಯಜೀವವನ್ನು ಕೊಡುತ್ತೇನೆಂದು ಹೇಳಿರುವ ವಾಗ್ದಾನವನ್ನು ಆತನು ಸರಿಯಾದ ಸಮಯದಲ್ಲಿ ಪೂರೈಸುತ್ತಾನೆ ಎಂದು ನಮಗೆ ಗೊತ್ತು. ಹಾಗಾಗಿ ನಾವು ಯಾವುದೇ ಕಷ್ಟ ಬಂದರೂ ಅದನ್ನು ತಾಳ್ಮೆ ಮತ್ತು ‘ಆನಂದದಿಂದ ಸಂಪೂರ್ಣವಾಗಿ ತಾಳಿಕೊಳ್ಳುತ್ತೇವೆ.’ (ಕೊಲೊ. 1:11, 12) ಹೀಗೆ ಕಾಯುವಾಗ, ‘ಯೆಹೋವನು ಯಾಕೆ ಸಮಸ್ಯೆಗಳನ್ನು ಬೇಗ ಬಗೆಹರಿಸುತ್ತಿಲ್ಲ’ ಎಂದು ನಾವು ಗೊಣಗುವುದಿಲ್ಲ. ನಾವು ಗೊಣಗಿದರೆ ಯೆಹೋವನಿಗೆ ಇಷ್ಟವಾಗಲ್ಲ.—ಕೊಲೊ. 3:12.
ತಾಳ್ಮೆ ತೋರಿಸಿದ ನಂಬಿಗಸ್ತರ ಮಾದರಿಗಳು
8. ಹಿಂದಿನ ಕಾಲದ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ನಾವೇನು ನೆನಪು ಮಾಡಿಕೊಳ್ಳಬೇಕು?
8 ನಾವು ಸಂತೋಷದಿಂದ ಕಾಯಲು ಯಾವುದು ಸಹಾಯ ಮಾಡುತ್ತದೆ? ಯೆಹೋವನು ಕೊಟ್ಟ ವಾಗ್ದಾನಗಳನ್ನು ಪೂರೈಸುವ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದ ಹಿಂದಿನ ಕಾಲದ ನಂಬಿಗಸ್ತ ಸ್ತ್ರೀಪುರುಷರ ಮಾದರಿಗಳು ಸಹಾಯ ಮಾಡುತ್ತವೆ. ಈ ಮಾದರಿಗಳ ಬಗ್ಗೆ ಯೋಚಿಸಬೇಕು. (ರೋಮ. 15:4) ಹೀಗೆ ಯೋಚಿಸುವಾಗ, ಅವರು ಎಷ್ಟು ಸಮಯ ಕಾಯಬೇಕಿತ್ತು, ಕಾಯಲು ಯಾಕೆ ಸಿದ್ಧರಿದ್ದರು, ತಾಳ್ಮೆ ತೋರಿಸಿದ್ದಕ್ಕಾಗಿ ಯೆಹೋವನು ಅವರನ್ನು ಹೇಗೆ ಆಶೀರ್ವದಿಸಿದನು ಎಂದು ನೆನಪು ಮಾಡಿಕೊಳ್ಳುವುದು ಒಳ್ಳೇದು.
9, 10. ಯೆಹೋವನ ವಾಗ್ದಾನದ ನೆರವೇರಿಕೆಗಾಗಿ ಅಬ್ರಹಾಮ ಮತ್ತು ಸಾರ ಎಷ್ಟು ಸಮಯ ಕಾದರು?
9 ಅಬ್ರಹಾಮ ಮತ್ತು ಸಾರಳ ಮಾದರಿಯನ್ನು ತೆಗೆದುಕೊಳ್ಳಿ. ಅವರು “ನಂಬಿಕೆ ಮತ್ತು ತಾಳ್ಮೆ” ತೋರಿಸಿದ್ದರಿಂದ “ವಾಗ್ದಾನಗಳನ್ನು” ಬಾಧ್ಯತೆಯಾಗಿ ಪಡೆದರು. “ಅಬ್ರಹಾಮನು ತಾಳ್ಮೆಯನ್ನು ತೋರಿಸಿದ ಬಳಿಕ” ಯೆಹೋವನ ಆಶೀರ್ವಾದದಿಂದ ಒಂದು ದೊಡ್ಡ ಜನಾಂಗದ ತಂದೆಯಾಗುವ ವಾಗ್ದಾನ ಪಡೆದನೆಂದು ಬೈಬಲ್ ಹೇಳುತ್ತದೆ. (ಇಬ್ರಿ. 6:12, 15) ಅಬ್ರಹಾಮನು ಯಾಕೆ ತಾಳ್ಮೆ ತೋರಿಸಬೇಕಾಗಿತ್ತು? ಯಾಕೆಂದರೆ ದೇವರು ಕೊಟ್ಟ ಆ ವಾಗ್ದಾನ ನೆರವೇರಲು ಸಮಯ ಹಿಡಿಯಲಿತ್ತು. ಕ್ರಿ.ಪೂ. 1943ರ ನೈಸಾನ್ 14ರಂದು ಅಬ್ರಹಾಮ, ಸಾರ ಮತ್ತು ಅವರ ಮನೆಯವರೆಲ್ಲರೂ ಯೂಫ್ರೇಟೀಸ್ ನದಿಯನ್ನು ದಾಟಿ ವಾಗ್ದತ್ತ ದೇಶವನ್ನು ಪ್ರವೇಶಿಸಿದರು. ಆದರೆ ಮಗ ಇಸಾಕ ಹುಟ್ಟಲು ಅಬ್ರಹಾಮ 25 ವರ್ಷ ಕಾಯಬೇಕಾಯಿತು. ಮೊಮ್ಮಕ್ಕಳಾದ ಏಸಾವ ಮತ್ತು ಯಾಕೋಬ ಹುಟ್ಟಲು ಅವನು ಇನ್ನೂ 60 ವರ್ಷ ಕಾಯಬೇಕಿತ್ತು.—ಇಬ್ರಿ. 11:9.
10 ಅಬ್ರಹಾಮನಿಗೆ ವಾಗ್ದತ್ತ ದೇಶದಲ್ಲಿ ಎಷ್ಟು ಭಾಗ ಬಾಧ್ಯತೆಯಾಗಿ ಸಿಕ್ಕಿತು? ಯೆಹೋವನು “ಅವನಿಗೆ ಬಾಧ್ಯತೆಯಾಗಿ ಯಾವುದೇ ಸ್ವತ್ತನ್ನಾಗಲಿ ಕಾಲಿಡುವಷ್ಟು ಸ್ಥಳವನ್ನಾಗಲಿ ಕೊಡಲಿಲ್ಲ; ಆದರೆ ಅವನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ಅವನಿಗೂ ಬಳಿಕ ಅವನ ಸಂತತಿಗೂ ಈ ದೇಶವನ್ನು ಬಾಧ್ಯತೆಯಾಗಿ ಕೊಡುವೆನೆಂದು ಆತನು ವಾಗ್ದಾನಿಸಿದನು” ಎಂದು ಬೈಬಲ್ ಹೇಳುತ್ತದೆ. (ಅ. ಕಾ. 7:5) ಅಬ್ರಹಾಮನು ಯೂಫ್ರೇಟೀಸ್ ನದಿಯನ್ನು ದಾಟಿ 430 ವರ್ಷಗಳಾದ ಮೇಲೆಯೇ ಅವನ ಸಂತತಿಯವರು ಒಂದು ಜನಾಂಗವಾಗಿ ರೂಪುಗೊಂಡು ಆ ದೇಶದಲ್ಲಿ ವಾಸಿಸಲು ಆರಂಭಿಸಿದರು.—ವಿಮೋ. 12:40-42; ಗಲಾ. 3:17.
11. (ಎ) ಅಬ್ರಹಾಮನು ಯಾಕೆ ಕಾಯಲು ಸಿದ್ಧನಿದ್ದನು? (ಬಿ) ಅವನು ತೋರಿಸಿದ ತಾಳ್ಮೆಗಾಗಿ ಅವನಿಗೆ ಯಾವ ಆಶೀರ್ವಾದಗಳು ಸಿಗಲಿವೆ?
11 ಯೆಹೋವನು ಕೊಟ್ಟ ವಾಗ್ದಾನಗಳನ್ನು ಪೂರೈಸುತ್ತಾನೆ ಎಂಬ ಖಾತ್ರಿ ಇದ್ದದರಿಂದ ಅಬ್ರಹಾಮನು ಕಾಯಲು ಸಿದ್ಧನಿದ್ದನು. ಅವನಿಗೆ ಯೆಹೋವನಲ್ಲಿ ನಂಬಿಕೆ ಇತ್ತು. (ಇಬ್ರಿಯ 11:8-12 ಓದಿ.) ದೇವರ ಎಲ್ಲಾ ವಾಗ್ದಾನಗಳು ನೆರವೇರುವುದನ್ನು ಕಣ್ಣಾರೆ ಕಾಣುವ ಮುಂಚೆಯೇ ಅವನು ತೀರಿಕೊಂಡನಾದರೂ ಬದುಕಿರುವ ವರೆಗೆ ವಾಗ್ದಾನದ ನೆರವೇರಿಕೆಗಾಗಿ ಸಂತೋಷದಿಂದ ಕಾದನು. ಅವನು ಪರದೈಸ್ ಭೂಮಿಯಲ್ಲಿ ಪುನರುತ್ಥಾನವಾಗಿ ಬರುವಾಗ ಅವನಿಗೆಷ್ಟು ಸಂತೋಷ ಆಗುವುದೆಂದು ಸ್ವಲ್ಪ ಯೋಚಿಸಿ! ಬೈಬಲಿನಲ್ಲಿ ಅವನ ಬಗ್ಗೆ ಮತ್ತು ಅವನ ಕುಟುಂಬದ ಬಗ್ಗೆ ಅಷ್ಟೊಂದು ಕಡೆ ಬರೆದಿರುವುದನ್ನು ನೋಡಿ ಅವನಿಗೆ ಆಶ್ಚರ್ಯ ಆಗಬಹುದು.a ವಾಗ್ದತ್ತ ಮೆಸ್ಸೀಯನ ಬಗ್ಗೆ ಯೆಹೋವನಿಗಿದ್ದ ಉದ್ದೇಶವನ್ನು ಪೂರೈಸುವುದರಲ್ಲಿ ತನಗಿದ್ದ ಪ್ರಮುಖ ಪಾತ್ರವನ್ನು ತಿಳಿದುಕೊಂಡು ಅವನಿಗೆ ಎಷ್ಟು ಆನಂದ ಆಗುವುದೆಂದು ಸ್ವಲ್ಪ ಯೋಚಿಸಿ ನೋಡಿ. ಇಷ್ಟೆಲ್ಲಾ ಆಶೀರ್ವಾದಗಳಿಗಾಗಿ ಕಾದದ್ದು ಸಾರ್ಥಕವಾಯಿತು ಎಂದು ಅವನಿಗೆ ಖಂಡಿತ ಅನಿಸುವುದು.
12, 13. (ಎ) ಯೋಸೇಫನು ಯಾಕೆ ತಾಳ್ಮೆ ತೋರಿಸಬೇಕಾಯಿತು? (ಬಿ) ಅವನಿಗೆ ಯಾವ ರೀತಿಯ ಸಕಾರಾತ್ಮಕ ಮನೋಭಾವ ಇತ್ತು?
12 ಅಬ್ರಹಾಮನ ಮರಿಮಗ ಯೋಸೇಫ ಸಹ ತಾಳ್ಮೆಯಿಂದ ಕಾಯಲು ಸಿದ್ಧನಿದ್ದನು. ಅವನು ಕೆಲವು ಘೋರ ಅನ್ಯಾಯಗಳನ್ನು ಅನುಭವಿಸಿದನು. 17 ವರ್ಷ ಇದ್ದಾಗ ಅವನ ಅಣ್ಣಂದಿರೇ ಅವನನ್ನು ಗುಲಾಮನಾಗಿ ಮಾರಿಬಿಟ್ಟರು. ನಂತರ, ತನ್ನ ಮಾಲೀಕನ ಹೆಂಡತಿಯನ್ನು ಬಲಾತ್ಕಾರ ಮಾಡಲು ಪ್ರಯತ್ನಿಸಿದ ಎಂಬ ಸುಳ್ಳಾರೋಪದ ಮೇಲೆ ಅವನನ್ನು ಸೆರೆಮನೆಗೆ ಹಾಕಲಾಯಿತು. (ಆದಿ. 39:11-20; ಕೀರ್ತ. 105:17, 18) ಯೋಸೇಫ ದೇವರ ನಂಬಿಗಸ್ತ ಸೇವಕನಾಗಿದ್ದರೂ ಅವನಿಗೆ ದೇವರಿಂದ ಆಶೀರ್ವಾದ ಅಲ್ಲ, ಶಿಕ್ಷೆ ಸಿಗುತ್ತಿರುವಂತೆ ಕಾಣುತ್ತಿತ್ತು. ಆದರೆ 13 ವರ್ಷಗಳಾದ ಮೇಲೆ ಎಲ್ಲವೂ ಬದಲಾಯಿತು. ಅವನನ್ನು ಸೆರೆಮನೆಯಿಂದ ಬಿಡಿಸಲಾಯಿತು ಮತ್ತು ಅವನಿಗೆ ಐಗುಪ್ತದಲ್ಲಿ ಫರೋಹನ ನಂತರದ ಉನ್ನತ ಸ್ಥಾನ ಸಿಕ್ಕಿತು.—ಆದಿ. 41:14, 37-43; ಅ. ಕಾ. 7:9, 10.
13 ತನಗಾದ ಅನ್ಯಾಯಗಳಿಂದಾಗಿ ಯೋಸೇಫನಲ್ಲಿ ಕಹಿಭಾವನೆ ಹುಟ್ಟಿಕೊಂಡಿತಾ? ಯೆಹೋವನು ತನ್ನ ಕೈಬಿಟ್ಟುಬಿಟ್ಟನು ಎಂದು ಅನಿಸಿತಾ? ಇಲ್ಲ. ಯೋಸೇಫ ತಾಳ್ಮೆಯಿಂದ ಕಾದನು. ಹೀಗೆ ಕಾಯಲು ಅವನಿಗೆ ಯಾವುದು ಸಹಾಯ ಮಾಡಿತು? ಯೆಹೋವನಲ್ಲಿ ಅವನಿಟ್ಟಿದ್ದ ನಂಬಿಕೆಯೇ. ಎಲ್ಲವೂ ಯೆಹೋವನ ನಿಯಂತ್ರಣದಲ್ಲಿದೆ ಎಂದು ಅವನು ಅರ್ಥಮಾಡಿಕೊಂಡನು. ಇದು ಅವನು ತನ್ನ ಅಣ್ಣಂದಿರಿಗೆ ಹೇಳಿದ ಮಾತುಗಳಿಂದ ಗೊತ್ತಾಗುತ್ತದೆ: “ಭಯಪಡಬೇಡಿರಿ, ನಾನು ದೇವರ ಸ್ಥಾನದಲ್ಲಿ ಇದ್ದೇನೋ? ನೀವು ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸಿದ್ದಿರಿ, ಆದರೆ ದೇವರು ಈಗ ಮಾಡಿದ ಹಾಗೆ ಬಹು ಜನರ ಪ್ರಾಣ ಉಳಿಯುವಂತೆ ಒಳ್ಳೆಯದಕ್ಕಾಗಿಯೇ ಸಂಕಲ್ಪಿಸಿದನು.” (ಆದಿ. 50:19, 20, ಪವಿತ್ರ ಗ್ರಂಥ ಭಾಷಾಂತರ) ಯೆಹೋವನು ಕೊಡುವ ಆಶೀರ್ವಾದಗಳಿಗಾಗಿ ಕಾಯುವುದು ಸಾರ್ಥಕ ಎಂದು ಯೋಸೇಫನಿಗೆ ಗೊತ್ತಿತ್ತು.
14, 15. (ಎ) ದಾವೀದ ತೋರಿಸಿದ ತಾಳ್ಮೆ ಅಸಾಧಾರಣವಾಗಿತ್ತು ಎಂದು ಯಾಕೆ ಹೇಳಬಹುದು? (ಬಿ) ತಾಳ್ಮೆಯಿಂದ ಕಾಯಲು ದಾವೀದನಿಗೆ ಯಾವುದು ಸಹಾಯ ಮಾಡಿತು?
14 ರಾಜ ದಾವೀದ ಸಹ ತುಂಬ ಅನ್ಯಾಯಗಳನ್ನು ಅನುಭವಿಸಿದನು. ದಾವೀದ ಎಳೇ ಪ್ರಾಯದಲ್ಲಿದ್ದಾಗಲೇ ಯೆಹೋವನು ಅವನನ್ನು ಇಸ್ರಾಯೇಲಿನ ರಾಜನಾಗಲು ಅಭಿಷೇಕಿಸಿದನು. ಆದರೆ ಅವನು ತನ್ನ ಸ್ವಂತ ಕುಲದ ಮೇಲೇ ರಾಜನಾಗಲು 15 ವರ್ಷ ಕಾಯಬೇಕಾಯಿತು. (2 ಸಮು. 2:3, 4) ಈ ಸಮಯದಲ್ಲಿ ಸ್ವಲ್ಪ ಕಾಲ ದಾವೀದ ಊರು ಬಿಟ್ಟು ಓಡಿಹೋಗಿ ಅಡಗಿಕೊಳ್ಳಬೇಕಿತ್ತು. ಏಕೆಂದರೆ ರಾಜ ಸೌಲನು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು.b ದಾವೀದ ಒಬ್ಬ ಅಲೆಮಾರಿ ತರ ಬದುಕಬೇಕಾಗಿತ್ತು. ಪರದೇಶದಲ್ಲಿ, ಅರಣ್ಯದ ಗುಹೆಗಳಲ್ಲಿ ವಾಸಿಸಬೇಕಾಗಿ ಬಂತು. ಕಾಲಾನಂತರ ಸೌಲನನ್ನು ರಣರಂಗದಲ್ಲಿ ಕೊಲ್ಲಲಾಯಿತು. ಇದಾದ ನಂತರ ದಾವೀದನು ಕೂಡಲೆ ಇಡೀ ಇಸ್ರಾಯೇಲ್ ಜನಾಂಗದ ರಾಜನಾಗಲಿಲ್ಲ. ಇನ್ನೂ ಏಳು ವರ್ಷ ಕಾಯಬೇಕಾಯಿತು.—2 ಸಮು. 5:4, 5.
15 ದಾವೀದನು ಯಾಕೆ ತಾಳ್ಮೆಯಿಂದ ಕಾಯಲು ಸಿದ್ಧನಿದ್ದನು? “ಇನ್ನೆಷ್ಟರ ವರೆಗೆ,” “ಇನ್ನೆಲ್ಲಿಯ ತನಕ” ಎಂದು ಅವನು ಕೇಳಿದ್ದ ಅದೇ ಕೀರ್ತನೆಯಲ್ಲಿ ಉತ್ತರ ಕೊಡುತ್ತಾನೆ: “ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವದು. ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.” (ಕೀರ್ತ. 13:5, 6) ಯೆಹೋವನ “ಕೃಪೆ” ಅಂದರೆ ನಿಷ್ಠಾವಂತ ಪ್ರೀತಿ ತನ್ನ ಮೇಲೆ ಇದೆಯೆಂಬ ಭರವಸೆ ದಾವೀದನಿಗಿತ್ತು. ಹಿಂದೆ ಯೆಹೋವನು ತನಗೆ ಹೇಗೆಲ್ಲಾ ಸಹಾಯ ಮಾಡಿದನೆಂಬುದರ ಕುರಿತು ಅವನು ಯೋಚಿಸಿದನು. ಮುಂದೆ ತನ್ನ ಕಷ್ಟಕಾಲವನ್ನು ಕೊನೆಗೊಳಿಸುವ ಸಮಯಕ್ಕಾಗಿ ಎದುರುನೋಡಿದನು. ಯೆಹೋವನ ಆಶೀರ್ವಾದಗಳಿಗಾಗಿ ಕಾಯುವುದು ಸಾರ್ಥಕ ಎಂದು ದಾವೀದನಿಗೆ ಗೊತ್ತಿತ್ತು.
ತಾಳ್ಮೆ ತೋರಿಸುವ ವಿಷಯದಲ್ಲಿ ಯೆಹೋವನು ತಾನು ಮಾಡದೇ ಇರುವುದನ್ನು ನಮಗೆ ಮಾಡಲು ಹೇಳುತ್ತಿಲ್ಲ
16, 17. ಸಿದ್ಧಮನಸ್ಸಿನಿಂದ ಕಾಯುವ ವಿಷಯದಲ್ಲಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಹೇಗೆ ಅತ್ಯುತ್ತಮ ಮಾದರಿ ಇಟ್ಟಿದ್ದಾರೆ?
16 ತಾಳ್ಮೆ ತೋರಿಸುವ ವಿಷಯದಲ್ಲಿ ಯೆಹೋವನು ತಾನು ಮಾಡದೇ ಇರುವುದನ್ನು ನಮಗೆ ಮಾಡಲು ಹೇಳುತ್ತಿಲ್ಲ. ಆತನೇ ಸಾವಿರಾರು ವರ್ಷಗಳಿಂದ ಕಾಯುತ್ತಿದ್ದಾನೆ. ಈ ವಿಷಯದಲ್ಲಿ ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. (2 ಪೇತ್ರ 3:9 ಓದಿ.) ಉದಾಹರಣೆಗೆ, ಯೆಹೋವನು ಅನ್ಯಾಯ ಮಾಡಿದ್ದಾನೆಂದು ಹಿಂದೆ ಏದೆನ್ ತೋಟದಲ್ಲಿ ಸೈತಾನ ಆರೋಪ ಹಾಕಿದನು. ಹಾಗಾಗಿ ಯೆಹೋವನು ತನ್ನ ನಾಮ ಸಂಪೂರ್ಣವಾಗಿ ಪವಿತ್ರೀಕರಿಸಲ್ಪಡುವ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದಾನೆ. ಆ ಸಮಯ ಬಂದಾಗ ‘ಆತನಿಗಾಗಿ ಕಾದಿರುವವರೆಲ್ಲರಿಗೂ’ ಅದ್ಭುತಕರವಾದ ಆಶೀರ್ವಾದಗಳು ಸಿಗುತ್ತವೆ.—ಯೆಶಾ. 30:18.
17 ಯೇಸು ಸಹ ತಾನು ಕಾಯಲು ಸಿದ್ಧನಿದ್ದೇನೆಂದು ತೋರಿಸಿದ್ದಾನೆ. ಭೂಮಿಯಲ್ಲಿದ್ದಾಗ ಅವನು ಮರಣದ ತನಕ ನಂಬಿಗಸ್ತನಾಗಿದ್ದನು. ಕ್ರಿ.ಶ. 33ರಲ್ಲಿ ಅವನು ಸ್ವರ್ಗಕ್ಕೆ ಹೋಗಿ ತನ್ನ ಯಜ್ಞದ ಮೌಲ್ಯವನ್ನು ಯೆಹೋವ ದೇವರಿಗೆ ಅರ್ಪಿಸಿದನು. ಆದರೆ ರಾಜನಾಗಿ ಆಳಲು 1914ರ ತನಕ ಕಾಯಬೇಕಿತ್ತು. (ಅ. ಕಾ. 2:33-35; ಇಬ್ರಿ. 10:12, 13) ಈಗ ರಾಜನಾಗಿದ್ದರೂ ಅವನು ಕಾಯುವ ಅವಧಿ ಮುಗಿದಿಲ್ಲ. ತನ್ನ ವೈರಿಗಳೆಲ್ಲರೂ ನಾಶವಾಗಲು ಅವನು ಸಾವಿರ ವರ್ಷದ ಆಳ್ವಿಕೆಯ ಕೊನೆಯ ತನಕ ಕಾಯಬೇಕಾಗಿದೆ. (1 ಕೊರಿಂ. 15:25) ಯೇಸು ಇನ್ನೂ ತುಂಬ ವರ್ಷ ಕಾಯಬೇಕಾಗಿದೆ. ಆದರೂ ಇದರಿಂದ ಸಿಗುವ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ ಕಾಯುವುದು ಸಾರ್ಥಕ.
ನಮಗೆ ಯಾವುದು ಸಹಾಯ ಮಾಡುತ್ತದೆ?
18, 19. ತಾಳ್ಮೆಯಿಂದ ಕಾಯಲು ನಮಗೆ ಯಾವುದು ಸಹಾಯ ಮಾಡುತ್ತದೆ?
18 ನಾವು ತಾಳ್ಮೆಯಿಂದ ಇರಬೇಕು, ಕಾಯಲು ಸಿದ್ಧರಾಗಿರಬೇಕು ಎಂದು ಯೆಹೋವನು ಬಯಸುತ್ತಾನೆ ಅನ್ನುವುದು ಸ್ಪಷ್ಟ. ತಾಳ್ಮೆಯಿಂದ ಕಾಯಲು ನಮಗೆ ಯಾವುದು ಸಹಾಯ ಮಾಡುತ್ತದೆ? ನಾವು ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ಏಕೆಂದರೆ “ದೀರ್ಘ ಸಹನೆ” ಅಥವಾ ತಾಳ್ಮೆ ಪವಿತ್ರಾತ್ಮದ ಒಂದು ಗುಣ ಎಂದು ಕಲಿತೆವಲ್ವಾ? (ಎಫೆ. 3:16; 6:18; 1 ಥೆಸ. 5:17-19) ಆದ್ದರಿಂದ ಯಾವುದೇ ಕಷ್ಟವನ್ನು ತಾಳ್ಮೆಯಿಂದ ಸಹಿಸಿಕೊಂಡು ಹೋಗಲು ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ.
19 ಯೆಹೋವನ ವಾಗ್ದಾನಗಳು ನೆರವೇರುವ ತನಕ ತಾಳ್ಮೆಯಿಂದ ಕಾಯಲು ಅಬ್ರಹಾಮ, ಯೋಸೇಫ, ದಾವೀದರಿಗೆ ಯಾವುದು ಸಹಾಯ ಮಾಡಿತು ಎಂದು ಸಹ ಜ್ಞಾಪಿಸಿಕೊಳ್ಳಿ. ಅದು ಅವರು ಯೆಹೋವನಲ್ಲಿಟ್ಟಿದ್ದ ನಂಬಿಕೆ ಮತ್ತು ಭರವಸೆಯೇ ಆಗಿತ್ತು. ಅವರು ಬರೀ ತಮ್ಮ ಬಗ್ಗೆ, ತಮಗೇನು ಬೇಕು ಅನ್ನುವುದರ ಬಗ್ಗೆ ಯೋಚಿಸುತ್ತಿರಲಿಲ್ಲ. ಹಾಗಾಗಿ ಅವರಿಗೆ ಜೀವನದಲ್ಲಿ ಮುಂದಕ್ಕೆ ಆಶೀರ್ವಾದಗಳು ಸಿಕ್ಕಿದವು. ಇವುಗಳ ಬಗ್ಗೆ ನಾವು ಯೋಚಿಸುವುದಾದರೆ ತಾಳ್ಮೆಯಿಂದ ಕಾಯಲು ಬೇಕಾದ ಪ್ರೋತ್ಸಾಹ ಸಿಗುತ್ತದೆ.
20. ನಾವು ಯಾವ ದೃಢತೀರ್ಮಾನ ಮಾಡಬೇಕು?
20 ನಮಗೆ ಸಹ ಕಷ್ಟಗಳು ಎದುರಾದಾಗ ತಾಳ್ಮೆಯಿಂದ ಕಾಯಲು ದೃಢತೀರ್ಮಾನ ಮಾಡಿಕೊಂಡಿದ್ದೇವೆ. ನಾವು ಕೂಡ ‘ಯೆಹೋವನೇ, ಎಂದಿನ ತನಕ?’ ಎಂದು ಕೇಳುವ ಸಂದರ್ಭ ಬರಬಹುದು. (ಯೆಶಾ. 6:11) ಆದರೆ ದೇವರ ಪವಿತ್ರಾತ್ಮದ ಸಹಾಯದಿಂದ ಪ್ರವಾದಿ ಯೆರೆಮೀಯನನ್ನು ಅನುಕರಿಸುತ್ತಾ ಹೀಗೆ ಹೇಳೋಣ: ‘ಯೆಹೋವನೇ ನನ್ನ ಪಾಲು. ನಾನು ಆತನಿಗಾಗಿ ಕಾದಿರುತ್ತೇನೆ.’—ಪ್ರಲಾ. 3:24, ಪವಿತ್ರ ಗ್ರಂಥ ಭಾಷಾಂತರ.
a ಆದಿಕಾಂಡ ಪುಸ್ತಕದ 15 ಅಧ್ಯಾಯಗಳಲ್ಲಿ ಅಬ್ರಹಾಮನ ಜೀವನದ ಬಗ್ಗೆ ತಿಳಿಸಲಾಗಿದೆ. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಬರಹಗಾರರು 70ಕ್ಕಿಂತ ಹೆಚ್ಚು ಸಾರಿ ಅಬ್ರಹಾಮನನ್ನು ಉಲ್ಲೇಖಿಸಿ ಮಾತಾಡಿದ್ದಾರೆ.
b ಸೌಲನು ರಾಜನಾಗಿ ಎರಡು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯ ಆಳಿದ ನಂತರ ಯೆಹೋವನು ಅವನನ್ನು ತಿರಸ್ಕರಿಸಿದನು. ಆದರೂ ಅವನು ತೀರಿಕೊಳ್ಳುವ ವರೆಗೆ ಅಂದರೆ ಇನ್ನೂ 38 ವರ್ಷ ರಾಜನಾಗಿ ಆಳಿದನು.—1 ಸಮು. 13:1; ಅ. ಕಾ. 13:21.