ಒಳ್ಳೆಯ ಶಿಷ್ಟಾಚಾರಗಳು—ದೇವಜನರ ಒಂದು ವಿಶೇಷ ಗುಣಲಕ್ಷಣ
1 ಇಂದು ಒಳ್ಳೇ ಶಿಷ್ಟಾಚಾರಗಳು ತುಂಬ ಅಪರೂಪವಾಗಿವೆ. ಹೀಗೇಕೆ? ಜನರು ಎಷ್ಟು ತರಾತುರಿಯಿಂದಿರುತ್ತಾರೆಂದರೆ, “ದಯವಿಟ್ಟು,” “ಉಪಕಾರ,” ಅಥವಾ “ಕ್ಷಮಿಸಿ” ಎಂದು ಹೇಳುವಂತಹ ಮೂಲಭೂತ ಸಭ್ಯತೆಗಳ ಕುರಿತು ಅವರು ಆಲೋಚಿಸುವುದೇ ತುಂಬ ವಿರಳ. ಜನರು ‘ಸ್ವಾರ್ಥಚಿಂತಕರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ಉಪಕಾರನೆನಸದವರೂ, ಮಮತೆಯಿಲ್ಲದವರೂ, ದಮೆಯಿಲ್ಲದವರೂ, ಒಳ್ಳೇದನ್ನು ಪ್ರೀತಿಸದವರೂ, ದುಡುಕಿನವರೂ’ ಆಗಿರುವರು ಎಂದು ದೇವರ ವಾಕ್ಯವು ಹೇಳಿದಾಗ, ಅದು ಕಡೇ ದಿವಸಗಳಲ್ಲಿ ಶಿಷ್ಟಾಚಾರಗಳು ಇನ್ನೂ ಹದಗೆಡುವವು ಎಂಬುದನ್ನು ಮುಂತಿಳಿಸಿತು. (2 ತಿಮೊ. 3:1-4) ಈ ಎಲ್ಲ ಗುಣಲಕ್ಷಣಗಳಿಂದಾಗಿಯೇ ಕೆಟ್ಟ ಶಿಷ್ಟಾಚಾರಗಳು ಫಲಿಸುತ್ತವೆ. ದೇವಜನರೋಪಾದಿ ಕ್ರೈಸ್ತರು, ಇತರರ ಕಡೆಗೆ ಅಗೌರವ ತೋರಿಸುವಂಥ ಈ ಲೋಕದ ಮನೋಭಾವವನ್ನು ತಾಳದಂತೆ ಎಚ್ಚರವಹಿಸಬೇಕು.
2 ಶಿಷ್ಟಾಚಾರಗಳು ಏನಾಗಿವೆ? ಇತರರ ಭಾವನೆಗಳ ಕುರಿತಾದ ಸೂಕ್ಷ್ಮ ಅರಿವು, ಇತರರೊಂದಿಗೆ ಶಾಂತಿಯಿಂದ ಜೀವಿಸುವ ಸಾಮರ್ಥ್ಯ ಎಂದು ಒಳ್ಳೇ ಶಿಷ್ಟಾಚಾರಗಳನ್ನು ವರ್ಣಿಸಸಾಧ್ಯವಿದೆ. ದಾಕ್ಷಿಣ್ಯಪರತೆ, ಸಭ್ಯತೆ, ದಯಾಭಾವ, ವಿನಯಶೀಲತೆ, ಜಾಣ್ಮೆ ಮತ್ತು ಪರಹಿತ ಚಿಂತನೆಯು ಒಳ್ಳೇ ಶಿಷ್ಟಾಚಾರಗಳಾಗಿವೆ. ಈ ಗುಣಲಕ್ಷಣಗಳು ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಒಬ್ಬನ ಪ್ರೀತಿಯಲ್ಲಿ ಆಳವಾಗಿ ಬೇರೂರಿರುತ್ತವೆ. (ಲೂಕ 10:27) ಅವುಗಳಿಗೆ ಬೆಲೆ ತಗಲುವುದಿಲ್ಲವಾದರೂ, ಇತರರೊಂದಿಗೆ ಸಂಪರ್ಕ ಬೆಳೆಸುವುದರಲ್ಲಿ ಅವು ಅತ್ಯಮೂಲ್ಯವಾಗಿವೆ.
3 ಈ ವಿಷಯದಲ್ಲಿ ಯೇಸು ಕ್ರಿಸ್ತನು ಪರಿಪೂರ್ಣ ಮಾದರಿಯನ್ನಿಟ್ಟನು. ಅವನು ಯಾವಾಗಲೂ ಈ ಸುವರ್ಣ ನಿಯಮವನ್ನು ಪಾಲಿಸಿದನು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.” (ಲೂಕ 6:31) ತನ್ನ ಶಿಷ್ಯರೊಂದಿಗೆ ವ್ಯವಹರಿಸುವುದರಲ್ಲಿ ಯೇಸುವಿನ ಪರಹಿತ ಚಿಂತನೆ ಮತ್ತು ಪ್ರೀತಿಭರಿತ ರೀತಿಯನ್ನು ನೋಡಿ ನಾವು ಬೆರಗಾಗುವುದಿಲ್ಲವೋ? (ಮತ್ತಾ. 11:28-30) ಅವನ ಒಳ್ಳೇ ಶಿಷ್ಟಾಚಾರಗಳು, ಸಭ್ಯಾಚಾರದ ಪುಸ್ತಕಗಳಲ್ಲಿ ಬರೆದಿಡಲ್ಪಟ್ಟ ನಿಯಮಗಳಿಂದ ಬಂದವುಗಳಾಗಿರಲಿಲ್ಲ. ಅವು ಯಥಾರ್ಥವಾದ ಹಾಗೂ ಉದಾರಭಾವದ ಹೃದಯದಿಂದ ಹೊರಬಂದವು. ನಾವು ಆತನ ಅತ್ಯುತ್ತಮ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಬೇಕು.
4 ಕ್ರೈಸ್ತರಿಗೆ ಯಾವಾಗ ಒಳ್ಳೇ ಶಿಷ್ಟಾಚಾರಗಳ ಆವಶ್ಯಕತೆಯಿದೆ? ಕೇವಲ ವಿಶೇಷ ಸಂದರ್ಭಗಳಲ್ಲಿ, ಅಂದರೆ ಇತರರ ಮೇಲೆ ಒಳ್ಳೇ ಪರಿಣಾಮವನ್ನು ಬೀರುವುದರ ಕುರಿತು ಆಸಕ್ತರಾಗಿರುವಾಗ ಮಾತ್ರವೋ? ಇತರರನ್ನು ಪ್ರಭಾವಿಸಲು ಪ್ರಯತ್ನಿಸುವಾಗ ಮಾತ್ರ ಇವುಗಳ ಆವಶ್ಯಕತೆಯಿದೆಯೋ? ಖಂಡಿತವಾಗಿಯೂ ಇಲ್ಲ! ನಾವು ಒಳ್ಳೇ ಶಿಷ್ಟಾಚಾರಗಳನ್ನು ಯಾವಾಗಲೂ ತೋರಿಸುವ ಅಗತ್ಯವಿದೆ. ಸಭೆಯಲ್ಲಿ ನಾವು ಇತರರೊಂದಿಗೆ ಸಹವಾಸಮಾಡುವಾಗ, ನಾವು ವಿಶೇಷವಾಗಿ ಯಾವ ರೀತಿಗಳಲ್ಲಿ ಈ ವಿಷಯದ ಕುರಿತು ಆಸಕ್ತರಾಗಿರಬೇಕು?
5 ರಾಜ್ಯ ಸಭಾಗೃಹದಲ್ಲಿ: ರಾಜ್ಯ ಸಭಾಗೃಹವು ನಮ್ಮ ಆರಾಧನಾ ಸ್ಥಳವಾಗಿದೆ. ಯೆಹೋವ ದೇವರ ಆಮಂತ್ರಣದ ಮೇರೆಗೆ ನಾವು ಅಲ್ಲಿಗೆ ಹೋಗುತ್ತೇವೆ. ಈ ಅರ್ಥದಲ್ಲಿ ನಾವು ಆತನ ಅತಿಥಿಗಳಾಗಿದ್ದೇವೆ. (ಕೀರ್ತ. 15:1, NW) ನಾವು ರಾಜ್ಯ ಸಭಾಗೃಹಕ್ಕೆ ಬರುವಾಗ ಆದರ್ಶಪ್ರಾಯ ಅತಿಥಿಗಳಾಗಿದ್ದೇವೋ? ನಮ್ಮ ಉಡುಪು ಮತ್ತು ಕೇಶಾಲಂಕಾರಕ್ಕೆ ನಾವು ಸೂಕ್ತವಾದ ಗಮನವನ್ನು ಕೊಡುತ್ತೇವೋ? ತೀರ ಮಾಮೂಲಾದ ಅಥವಾ ತೀರ ವಿಪರೀತವಾದ ಅಲಂಕಾರಮಾಡಿಕೊಳ್ಳುವುದರಿಂದ ನಾವು ದೂರವಿರಬೇಕು ಎಂಬುದಂತೂ ಖಂಡಿತ. ಯೆಹೋವನ ಜನರು ಅಧಿವೇಶನಗಳಿಗೆ ಹಾಜರಾಗುತ್ತಿರಲಿ ಅಥವಾ ನಮ್ಮ ಸಾಪ್ತಾಹಿಕ ಸಭಾ ಕೂಟಗಳಿಗೆ ಹಾಜರಾಗುತ್ತಿರಲಿ, ದೇವಭಕ್ತಿಯುಳ್ಳವರೆಂದು ಹೇಳಿಕೊಳ್ಳುವವರಿಗೆ ಯೋಗ್ಯವಾಗಿರುವ ಸಭ್ಯ ತೋರಿಕೆಗಾಗಿ ಅವರು ಖ್ಯಾತರಾಗಿದ್ದಾರೆ. (1 ತಿಮೊ. 2:9, 10) ಹೀಗೆ, ನಮ್ಮ ಸ್ವರ್ಗೀಯ ಆತಿಥೇಯನಿಗೆ ಮತ್ತು ಆಮಂತ್ರಿಸಲ್ಪಟ್ಟಿರುವ ಇತರ ಅತಿಥಿಗಳಿಗೆ ಸಲ್ಲತಕ್ಕ ಪರಿಗಣನೆ ಮತ್ತು ಗೌರವವನ್ನು ನಾವು ತೋರಿಸುತ್ತೇವೆ.
6 ಕೂಟಗಳ ವಿಷಯದಲ್ಲಿ ನಾವು ಒಳ್ಳೇ ಶಿಷ್ಟಾಚಾರಗಳನ್ನು ತೋರಿಸುವ ಇನ್ನೊಂದು ವಿಧವು, ಸಮಯಕ್ಕೆ ಸರಿಯಾಗಿ ಹಾಜರಾಗುವುದೇ ಆಗಿದೆ. ಇದು ಯಾವಾಗಲೂ ಸುಲಭವಾಗಿರುವುದಿಲ್ಲ ಎಂಬುದು ಒಪ್ಪತಕ್ಕದ್ದೇ. ಏಕೆಂದರೆ ಕೆಲವರು ತುಂಬ ದೂರದಲ್ಲಿ ವಾಸಿಸುತ್ತಿರಬಹುದು ಅಥವಾ ದೊಡ್ಡ ಕುಟುಂಬಗಳಿದ್ದು, ಎಲ್ಲರೂ ತಯಾರಾಗಲು ತುಂಬ ಸಮಯ ತಗಲಬಹುದು. ಆದರೂ, ಕೆಲವು ಸಭೆಗಳಲ್ಲಿ ಸುಮಾರು 25 ಪ್ರತಿಶತದಷ್ಟು ಪ್ರಚಾರಕರು, ಆರಂಭದ ಗೀತೆ ಹಾಗೂ ಪ್ರಾರ್ಥನೆಯ ಬಳಿಕ ಬರುವುದು ರೂಢಿಯಾಗಿಬಿಟ್ಟಿದೆ ಎಂಬುದನ್ನು ಗಮನಿಸಲಾಗಿದೆ. ಇದು ತುಂಬ ಗಂಭೀರವಾದ ಸಂಗತಿಯಾಗಿದೆ. ಇತರರ ಭಾವನೆಗಳ ಕುರಿತಾದ ನಮ್ಮ ಅರಿವು ಮತ್ತು ಶಿಷ್ಟಾಚಾರಕ್ಕೆ ಸಂಬಂಧವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ನಮ್ಮ ಕೃಪಾಪೂರ್ಣ ಆತಿಥೇಯನಾದ ಯೆಹೋವನು, ನಮ್ಮ ಪ್ರಯೋಜನಕ್ಕೋಸ್ಕರ ಈ ಆತ್ಮಿಕ ಉತ್ಸವಗಳನ್ನು ಏರ್ಪಡಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಹಾಜರಾಗುವ ಮೂಲಕ ನಾವು ಆತನ ಭಾವನೆಗಳ ಕಡೆಗೆ ನಮ್ಮ ಗಣ್ಯತೆ ಹಾಗೂ ಆಸಕ್ತಿಯನ್ನು ತೋರ್ಪಡಿಸುತ್ತೇವೆ. ಇದಲ್ಲದೆ, ಕೂಟಗಳಿಗೆ ತಡವಾಗಿ ಬರುವುದು ಇತರರನ್ನು ಅಪಕರ್ಷಿಸುತ್ತದೆ ಮತ್ತು ಈಗಾಗಲೇ ಉಪಸ್ಥಿತರಿರುವವರಿಗೆ ಅಗೌರವವನ್ನು ತೋರಿಸುತ್ತದೆ.
7 ನಾವು ಒಟ್ಟುಗೂಡಿಬರುವಾಗ, ಹಾಜರಿರುವ ಹೊಸಬರನ್ನು ನಾವು ಗಮನಿಸುತ್ತೇವೋ? ಅವರನ್ನು ಸ್ವಾಗತಿಸುವುದು ಸಹ ಶಿಷ್ಟಾಚಾರದ ಒಂದು ಭಾಗವಾಗಿದೆ. (ಮತ್ತಾ. 5:47; ರೋಮಾ. 15:7) ಹಿತಕರವಾದ ಅಭಿವಂದನೆ, ಹಾರ್ದಿಕ ಹಸ್ತಲಾಘವ, ಸೌಜನ್ಯಶೀಲ ಮುಗುಳುನಗೆಯಂತಹ ಚಿಕ್ಕಪುಟ್ಟ ವಿಷಯಗಳು, ಸತ್ಕ್ರೈಸ್ತರೋಪಾದಿ ನಮ್ಮನ್ನು ಯಾವುದು ಗುರುತಿಸುತ್ತದೋ ಅದಕ್ಕೆ ಹೆಚ್ಚನ್ನು ಕೂಡಿಸುತ್ತದೆ. (ಯೋಹಾ. 13:35) ಮೊದಲ ಬಾರಿ ರಾಜ್ಯ ಸಭಾಗೃಹಕ್ಕೆ ಬಂದ ಬಳಿಕ ಒಬ್ಬ ವ್ಯಕ್ತಿಯು ಹೇಳಿದ್ದು: “ನಾನು ಬೆಳೆದು ದೊಡ್ಡವನಾದ ಚರ್ಚಿನಲ್ಲಿ ಭೇಟಿಯಾದದ್ದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿ ಪ್ರೀತಿಪೂರ್ಣರೂ ಮತ್ತು ತೀರ ಅಪರಿಚಿತರೂ ಆದಂಥ ಜನರನ್ನು ಒಂದೇ ದಿನದಲ್ಲಿ ಸಂಧಿಸಿದೆ. ನಾನು ಸತ್ಯವನ್ನು ಕಂಡುಕೊಂಡಿದ್ದೆ ಎಂಬುದು ಸುವ್ಯಕ್ತವಾಗಿತ್ತು.” ಇದರ ಫಲಿತಾಂಶವಾಗಿ, ಅವನು ತನ್ನ ಜೀವನ ಮಾರ್ಗವನ್ನು ಬದಲಾಯಿಸಿದನು ಮತ್ತು ಏಳು ತಿಂಗಳುಗಳ ಬಳಿಕ ದೀಕ್ಷಾಸ್ನಾನ ಪಡೆದುಕೊಂಡನು. ಹೌದು, ಒಳ್ಳೇ ಶಿಷ್ಟಾಚಾರಗಳು ಬಹಳ ಪರಿಣಾಮಕಾರಿ ಪ್ರಭಾವವನ್ನು ಬೀರಬಲ್ಲವು!
8 ನಮಗೆ ಭೇಟಿಯಾಗುವಂತಹ ಅಪರಿಚಿತರೊಂದಿಗೆ ನಾವು ಶಿಷ್ಟಾಚಾರದಿಂದ ವರ್ತಿಸುವುದಾದರೆ, “ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವ”ರೊಂದಿಗೆ ನಾವು ಹಾಗೆಯೇ ವರ್ತಿಸಬಾರದೋ? (ಗಲಾ. 6:10) ಇಲ್ಲಿ ಈ ಮೂಲತತ್ತ್ವವು ಅನ್ವಯಿಸುತ್ತದೆ: “ವೃದ್ಧ ಪುರುಷನಿಗೆ [ಅಥವಾ ಸ್ತ್ರೀಗೆ] ನೀವು ಪರಿಗಣನೆಯನ್ನು ತೋರಿಸಬೇಕು.” (ಯಾಜ. 19:32, NW) ನಮ್ಮ ಒಟ್ಟುಗೂಡುವಿಕೆಗಳಲ್ಲಿ ಇಂಥವರನ್ನು ಎಂದೂ ಅಲಕ್ಷಿಸಬಾರದು.
9 ನಿಕಟ ಗಮನವನ್ನು ಕೊಡುವುದು: ಸಭಾ ಕೂಟಗಳಲ್ಲಿ, ನಮ್ಮ ಭಕ್ತಿವೃದ್ಧಿಮಾಡಲಿಕ್ಕಾಗಿ ಆತ್ಮಿಕ ವರವನ್ನು ದಯಪಾಲಿಸಲು ದೇವರ ಕ್ರೈಸ್ತ ಶುಶ್ರೂಷಕರು ಭಾಷಣಗಳನ್ನು ಕೊಡುತ್ತಾರೆ. (ರೋಮಾ. 1:11) ಕೂಟದ ಸಮಯದಲ್ಲಿ ನಾವು ತೂಕಡಿಸುತ್ತಿರುವಲ್ಲಿ, ಕುರುಕು ತಿಂಡಿಯನ್ನು ತಿನ್ನುತ್ತಿರುವಲ್ಲಿ ಅಥವಾ ಚೂಯಿಂಗಮ್ ಅಗಿಯುತ್ತಿರುವಲ್ಲಿ, ನಮ್ಮ ಪಕ್ಕ ಕುಳಿತಿರುವ ವ್ಯಕ್ತಿಯ ಕಿವಿಯಲ್ಲಿ ಆಗಿಂದಾಗ್ಗೆ ಏನನ್ನಾದರೂ ಪಿಸುಗುಟ್ಟುತ್ತಿರುವಲ್ಲಿ, ಪುನಃ ಪುನಃ ಶೌಚಾಲಯಕ್ಕೆ ಅನಗತ್ಯವಾಗಿ ಹೋಗುತ್ತಿರುವಲ್ಲಿ, ಕೂಟಕ್ಕೆ ಸಂಬಂಧಿಸದಂತಹ ವಿಷಯವನ್ನು ಓದುತ್ತಿರುವಲ್ಲಿ ಅಥವಾ ಬೇರೆ ಕೆಲಸಗಳಿಗೆ ಗಮನ ಕೊಡುತ್ತಿರುವಲ್ಲಿ, ಖಂಡಿತವಾಗಿಯೂ ಇದು ಕೆಟ್ಟ ಶಿಷ್ಟಾಚಾರವನ್ನು ತೋರಿಸುವುದಕ್ಕೆ ಸಮಾನವಾಗಿದೆ. ಈ ವಿಷಯದಲ್ಲಿ ಹಿರಿಯರು ಆದರ್ಶಪ್ರಾಯರಾಗಿರಬೇಕು. ಭಾಷಣಕರ್ತನಿಗೆ ಏಕಾಗ್ರತೆಯಿಂದ ಗಮನ ಕೊಡುವ ಮೂಲಕ, ಅವನಿಗೆ ಮತ್ತು ಅವನ ಬೈಬಲ್ ಆಧಾರಿತ ಸಂದೇಶಕ್ಕೆ ನಾವು ಯೋಗ್ಯವಾದ ಗೌರವವನ್ನು ತೋರಿಸುವಂತೆ ಒಳ್ಳೇ ಕ್ರೈಸ್ತ ಶಿಷ್ಟಾಚಾರಗಳು ನಮ್ಮನ್ನು ಪ್ರಚೋದಿಸುವವು.
10 ಇದಲ್ಲದೆ, ಭಾಷಣಕರ್ತನಿಗೆ ಮತ್ತು ಸಭಿಕರಿಗೆ ಪರಿಗಣನೆ ತೋರಿಸಲಿಕ್ಕಾಗಿ, ನಾವು ಇಲೆಕ್ಟ್ರಾನಿಕ್ ಪೇಜರ್ಗಳು ಮತ್ತು ಸೆಲ್ಯುಲರ್ ಟೆಲಿಫೋನ್ಗಳನ್ನು ನಮ್ಮ ಕೂಟಗಳಿಗೆ ಭಂಗತರದಂತೆ ಇರಿಸಬೇಕು.
11 ಶಿಷ್ಟಾಚಾರಗಳು ಮತ್ತು ಮಕ್ಕಳು: ಹೆತ್ತವರು ತಮ್ಮ ಮಕ್ಕಳ ನಡತೆಯ ವಿಷಯದಲ್ಲಿ ಯಾವಾಗಲೂ ಎಚ್ಚರವಾಗಿರಬೇಕು. ಕೂಟಗಳ ಸಮಯದಲ್ಲಿ ಒಂದು ಮಗುವು ಅಳಲು ಆರಂಭಿಸಿದರೆ ಅಥವಾ ಚಡಪಡಿಸುತ್ತಿರುವಲ್ಲಿ ಮತ್ತು ಇದು ಇತರರಿಗೆ ತೊಂದರೆಯನ್ನು ಉಂಟುಮಾಡುತ್ತಿರುವಲ್ಲಿ, ಮಗುವನ್ನು ಸಮಾಧಾನಗೊಳಿಸಲಿಕ್ಕಾಗಿ ಸಾಧ್ಯವಾದಷ್ಟು ಬೇಗನೆ ಅದನ್ನು ಸಭಾಂಗಣದ ಹೊರಗೆ ತೆಗೆದುಕೊಂಡುಹೋಗುವುದು ಒಳ್ಳೇದು. ಕೆಲವೊಮ್ಮೆ ಇದು ಕಷ್ಟಕರವಾಗಿರಬಹುದಾದರೂ, ನೀವು ಇತರರ ಭಾವನೆಗಳಿಗೆ ಪರಿಗಣನೆ ತೋರಿಸುತ್ತಿರುವುದನ್ನು ಇದು ವ್ಯಕ್ತಪಡಿಸುತ್ತದೆ ಎಂಬುದು ನೆನಪಿರಲಿ. ಒಂದು ಕಡೆ ನಿಲ್ಲದೆ ಸದಾ ಚಡಪಡಿಸುತ್ತಿರುವ ಹೆಚ್ಚಿನ ಸಂಭಾವ್ಯತೆಯುಳ್ಳ ಚಿಕ್ಕ ಮಕ್ಕಳಿರುವ ಹೆತ್ತವರು, ಅನೇಕವೇಳೆ ಸಭಾಂಗಣದ ಹಿಂಭಾಗದಲ್ಲಿ ಕುಳಿತುಕೊಳ್ಳುವ ಆಯ್ಕೆಮಾಡುತ್ತಾರೆ. ಏಕೆಂದರೆ ಇದರಿಂದ ಕೂಟದ ಸಮಯದಲ್ಲಿ ಅವರು ಹೊರಗೆ ಹೋಗುವ ಅಗತ್ಯ ಬಿದ್ದರೂ, ತೀರ ಕೊಂಚ ಜನರಿಗೆ ತೊಂದರೆಯಾಗುತ್ತದೆ. ಇಂತಹ ಕುಟುಂಬಗಳು ಇಷ್ಟಪಡುವಲ್ಲಿ ಹಿಂದಿನ ಸಾಲುಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ, ಹಾಜರಾಗುವ ಇತರರು ಆ ಸಾಲುಗಳನ್ನು ಬಿಟ್ಟು, ಬೇರೆ ಕಡೆ ಕುಳಿತುಕೊಳ್ಳುವ ಮೂಲಕ ಸಹ ತಮ್ಮ ಪರಿಗಣನೆಯನ್ನು ಖಂಡಿತವಾಗಿಯೂ ತೋರಿಸಸಾಧ್ಯವಿದೆ.
12 ಕೂಟಗಳಿಗೆ ಮುಂಚೆ ಮತ್ತು ಕೂಟಗಳ ನಂತರವೂ ತಮ್ಮ ಮಕ್ಕಳ ನಡತೆಯ ಕುರಿತು ಹೆತ್ತವರು ಅರಿತಿರಬೇಕು. ಮಕ್ಕಳು ಕಟ್ಟಡದ ಒಳಗೆ ಓಡಾಡುತ್ತಿರಬಾರದು, ಏಕೆಂದರೆ ಇದು ಅಪಘಾತಗಳನ್ನು ಉಂಟುಮಾಡಸಾಧ್ಯವಿದೆ. ರಾಜ್ಯ ಸಭಾಗೃಹದ ಹೊರಗೆ ಓಡುವುದು ಸಹ ಅಪಾಯಕರವಾಗಿರಸಾಧ್ಯವಿದೆ, ಅದರಲ್ಲೂ ವಿಶೇಷವಾಗಿ ಸಾಯಂಕಾಲಗಳಲ್ಲಿ ಕತ್ತಲೆಯು ಆವರಿಸಿರುವಾಗ ತುಂಬ ಅಪಾಯಕರವಾಗಿದೆ. ಸಭಾಗೃಹದ ಹೊರಗೆ ಗಟ್ಟಿಯಾಗಿ ಮಾತಾಡುವುದು ನೆರೆಯವರಿಗೆ ತೊಂದರೆಯನ್ನು ಉಂಟುಮಾಡಸಾಧ್ಯವಿದೆ ಮತ್ತು ನಮ್ಮ ಆರಾಧನೆಯ ಕುರಿತು ನಕಾರಾತ್ಮಕ ಅಭಿಪ್ರಾಯವನ್ನು ಮೂಡಿಸಬಲ್ಲದು. ರಾಜ್ಯ ಸಭಾಗೃಹದ ಒಳಗೆ ಮತ್ತು ಹೊರಗೆ ತಮ್ಮ ಮಕ್ಕಳ ಮೇಲ್ವಿಚಾರಣೆಮಾಡಲು ನಿಷ್ಠೆಯಿಂದ ಪ್ರಯತ್ನ ಮಾಡುತ್ತಿರುವ ಹೆತ್ತವರು ಪ್ರಶಂಸೆಗೆ ಅರ್ಹರಾಗಿದ್ದಾರೆ, ಏಕೆಂದರೆ ಅದು ನಾವು ಐಕ್ಯಭಾವದಿಂದ ಒಂದಾಗಿರುವ ರಮ್ಯತೆಗೆ ಹೆಚ್ಚನ್ನು ಕೂಡಿಸುತ್ತದೆ.—ಕೀರ್ತ. 133:1.
13 ಪುಸ್ತಕ ಅಭ್ಯಾಸದ ಸ್ಥಳದಲ್ಲಿ: ಸಭಾ ಕೂಟಗಳಿಗಾಗಿ ತಮ್ಮ ಮನೆಗಳನ್ನು ನೀಡುವಂತಹ ನಮ್ಮ ಸಹೋದರರ ಅತಿಥಿಸತ್ಕಾರವನ್ನು ನಾವು ಗಣ್ಯಮಾಡುತ್ತೇವೆ. ಅಲ್ಲಿ ನಾವು ಕೂಟಗಳಿಗೆ ಹಾಜರಾಗುವಾಗ, ಅವರ ಸೊತ್ತುಗಳಿಗಾಗಿ ನಾವು ಗೌರವ ಹಾಗೂ ಪರಿಗಣನೆಯನ್ನು ತೋರಿಸುವ ಅಗತ್ಯವಿದೆ. ಮನೆಯೊಳಗೆ ಪ್ರವೇಶಿಸುವುದಕ್ಕೆ ಮುಂಚೆ, ನೆಲವನ್ನು ಅಥವಾ ಕಾರ್ಪೆಟನ್ನು ಕೊಳೆಮಾಡದಿರಲಿಕ್ಕಾಗಿ ನಾವು ನಮ್ಮ ಪಾದರಕ್ಷೆಗಳನ್ನು ಸರಿಯಾಗಿ ಒರೆಸಿಕೊಂಡು ಒಳಗೆ ಬರಬೇಕು. ತಮ್ಮ ಮಕ್ಕಳು ಆ ಮನೆಯಲ್ಲೆಲ್ಲಾ ಓಡಾಡದೇ, ಪುಸ್ತಕ ಅಭ್ಯಾಸಕ್ಕಾಗಿ ನಿಗದಿಪಡಿಸಲ್ಪಟ್ಟಿರುವ ಜಾಗದಲ್ಲೇ ಉಳಿಯುವುದನ್ನು ಖಚಿತಪಡಿಸಿಕೊಳ್ಳುವಂತೆ ಹೆತ್ತವರು ಅವರ ಮೇಲೆ ಕಣ್ಣಿಡಬೇಕು. ಅಲ್ಲಿ ಕೂಡಿಬರುವ ಗುಂಪು ಚಿಕ್ಕದಾಗಿದ್ದು, ಅಲ್ಲಿನ ವಾತಾವರಣವು ತುಂಬ ಕಟ್ಟುನಿಟ್ಟಿನದ್ದಾಗಿರದಿದ್ದರೂ ಇತರರ ಮನೆಗಳಲ್ಲಿ ನಾವು ಹೆಚ್ಚು ಸಲಿಗೆಯಿಂದ ವರ್ತಿಸಬಾರದು. ಒಂದು ಚಿಕ್ಕ ಮಗುವಿಗೆ ಶೌಚಾಲಯಕ್ಕೆ ಹೋಗಬೇಕಾದಾಗ, ಅದರ ಹೆತ್ತವರಲ್ಲಿ ಒಬ್ಬರು ಯಾವಾಗಲೂ ಅವನೊಂದಿಗೆ ಅಥವಾ ಅವಳೊಂದಿಗೆ ಹೋಗಬೇಕು. ಅಷ್ಟುಮಾತ್ರವಲ್ಲ, ಪುಸ್ತಕ ಅಭ್ಯಾಸವು ಸಹ ಒಂದು ಸಭಾ ಕೂಟವಾಗಿರುವುದರಿಂದ, ರಾಜ್ಯ ಸಭಾಗೃಹಕ್ಕೆ ಹೋಗುವಾಗ ನಾವು ಯಾವ ರೀತಿಯ ಉಡುಪುಗಳನ್ನು ಧರಿಸುತ್ತೇವೋ ಅದೇ ರೀತಿಯ ಉಡುಪನ್ನು ಧರಿಸಿಕೊಂಡು ಹೋಗಬೇಕು.
14 ಒಳ್ಳೇ ಶಿಷ್ಟಾಚಾರಗಳು ಅತ್ಯಗತ್ಯವಾಗಿವೆ: ಕ್ರೈಸ್ತ ಶಿಷ್ಟಾಚಾರಗಳನ್ನು ಪಾಲಿಸುವುದು ನಮ್ಮ ಶುಶ್ರೂಷೆಯ ಕುರಿತು ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುತ್ತದೆ ಮಾತ್ರವಲ್ಲ ಇತರರೊಂದಿಗೆ ಒಳ್ಳೇ ಸಂಬಂಧಗಳನ್ನು ಬೆಳೆಸುವಂತೆ ಸಹ ಸಹಾಯಮಾಡುತ್ತದೆ. (2 ಕೊರಿಂ. 6:3-6) ಸಂತೋಷಭರಿತ ದೇವರ ಆರಾಧಕರೋಪಾದಿ ನಮಗೆ, ಮುಗುಳ್ನಗೆ ಬೀರುವುದು, ಹೊಂದಿಕೊಂಡು ಹೋಗುವುದು ಮತ್ತು ಇತರರಿಗೆ ಆನಂದವನ್ನು ತರುವಂತಹ ಚಿಕ್ಕಪುಟ್ಟ ದಯಾಪರ ಕೆಲಸಗಳನ್ನು ಮಾಡುವುದು ಸಹಜವಾದ ವಿಷಯವಾಗಿರಬೇಕು. ಈ ಶಿಷ್ಟಾಚಾರದ ಗುಣಲಕ್ಷಣಗಳು ದೇವಜನರೋಪಾದಿ ನಮ್ಮ ಜೀವಿತಗಳನ್ನು ಇನ್ನಷ್ಟು ಅಂದಗೊಳಿಸುವವು.