ಅಧ್ಯಯನ ಲೇಖನ 48
ಏನೇ ಆದ್ರೂ ಯೆಹೋವ ನಿಮ್ಮ ಜೊತೆ ಇರ್ತಾನೆ
‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ಧೈರ್ಯವಾಗಿರು. ನಾನು ನಿಮ್ಮ ಜೊತೆ ಇದ್ದೀನಿ.’—ಹಗ್ಗಾ. 2:4.
ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
ಈ ಲೇಖನದಲ್ಲಿ ಏನಿದೆ?a
1-2. (ಎ) ಇವತ್ತು ನಮಗೆ ಯಾವೆಲ್ಲ ಸಮಸ್ಯೆಗಳು ಬರ್ತಾ ಇದೆ? (ಬಿ) ಯೆರೂಸಲೇಮಿಗೆ ವಾಪಸ್ ಬಂದ ಯೆಹೂದ್ಯರಿಗೆ ನಮ್ಮ ತರ ಯಾವೆಲ್ಲ ಕಷ್ಟಗಳು ಬಂತು? (“ಹಗ್ಗಾಯ, ಜೆಕರ್ಯ ಮತ್ತು ಎಜ್ರನ ಕಾಲದಲ್ಲಿ ನಡೆದ ಘಟನೆಗಳು” ಅನ್ನೋ ಚೌಕ ನೋಡಿ)
ಮುಂದೆ ಏನಾಗುತ್ತೋ ಅಂತ ನಿಮಗೆ ಚಿಂತೆ ಆಗ್ತಿದೆಯಾ? ಕೆಲವೊಮ್ಮೆ ನೀವು ಕೆಲಸ ಕಳ್ಕೊಂಡಿರಬಹುದು. ಇದ್ರಿಂದ ನಿಮ್ಮ ಕುಟುಂಬ ನೋಡ್ಕೊಳ್ಳೋಕೆ ಕಷ್ಟ ಆಗ್ತಿರಬಹುದು. ಅಷ್ಟೇ ಅಲ್ಲ ಸರ್ಕಾರದಲ್ಲಾಗೋ ಏರುಪೇರುಗಳಿಂದ ನಿಮಗೆ ತೊಂದರೆಗಳು ಆಗ್ತಿರಬಹುದು. ಸಿಹಿಸುದ್ದಿ ಸಾರ್ತಾ ಇರೋದ್ರಿಂದ ವಿರೋಧ-ಹಿಂಸೆ ಎದುರಿಸ್ತಿರಬಹುದು. ಈ ತರ ಸಮಸ್ಯೆ ನಿಮಗಷ್ಟೇ ಅಲ್ಲ ಇಸ್ರಾಯೇಲ್ಯರಿಗೂ ಬಂದಿತ್ತು. ಆ ಸಮಯದಲ್ಲಿ ಯೆಹೋವ ಅವ್ರಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡೋಣ. ಆಗ, ನಿಮಗೆ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಧೈರ್ಯ ಸಿಗುತ್ತೆ.
2 ಬಾಬೆಲಿನ ಐಷಾರಾಮಿ ಜೀವನವನ್ನ ಬಿಟ್ಟುಬಂದ ಯೆಹೂದ್ಯರು ಯೆಹೋವನ ಮೇಲೆ ತುಂಬ ನಂಬಿಕೆ ಇಡಬೇಕಿತ್ತು. ಯಾಕಂದ್ರೆ ಅವ್ರಲ್ಲಿ ತುಂಬ ಜನ್ರಿಗೆ ಯೆರೂಸಲೇಮ್ ಬಗ್ಗೆ ಗೊತ್ತೇ ಇರ್ಲಿಲ್ಲ. ಅಲ್ಲಿಗೆ ಬಂದಾಗ ಅವ್ರಿಗೆ ಹಣಕಾಸಿನ ಸಮಸ್ಯೆ ಆಯ್ತು, ಸರ್ಕಾರದಿಂದ ಅವ್ರಿಗೆ ತೊಂದರೆಗಳು ಬಂತು, ಆಲಯ ಕಟ್ಟುವಾಗ ವಿರೋಧನೂ ಬಂತು. ಹಾಗಾಗಿ ಆಲಯ ಕಟ್ಟೋದಕ್ಕಿಂತ ಅವ್ರ ಸಮಸ್ಯೆಗಳೇ ಅವ್ರಿಗೆ ದೊಡ್ಡದಾಗಿತ್ತು. ಅದಕ್ಕೆ ಕ್ರಿಸ್ತ ಪೂರ್ವ 520ರಲ್ಲಿ ಯೆಹೋವ, ಹಗ್ಗಾಯ ಮತ್ತು ಜೆಕರ್ಯನನ್ನ ಕಳಿಸಿ ಅವ್ರಿಗೆ ಧೈರ್ಯ ತುಂಬಿದನು. (ಹಗ್ಗಾ. 1:1; ಜೆಕ. 1:1) ಇದ್ರಿಂದ ಅವ್ರಿಗೆ ತುಂಬ ಪ್ರೋತ್ಸಾಹ ಸಿಕ್ತು. ಆದ್ರೆ 50 ವರ್ಷ ಆದ್ಮೇಲೆ ಮತ್ತೆ ಯೆಹೂದ್ಯರು ಧೈರ್ಯ ಕಳ್ಕೊಂಡ್ರು. ಆಗ ನಿಪುಣ ನಕಲುಗಾರನಾದ ಎಜ್ರ ಬಂದು ಅವ್ರಿಗೆ ಪ್ರೋತ್ಸಾಹ ಕೊಡ್ತಾನೆ. ಇದ್ರಿಂದ ಅವರು ಸಂತೋಷವಾಗಿ ಶುದ್ಧಾರಾಧನೆ ಮಾಡೋಕಾಯ್ತು.—ಎಜ್ರ 7:1, 6.
3. ನಾವು ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ? (ಜ್ಞಾನೋಕ್ತಿ 22:19)
3 ಕಷ್ಟಗಳು ಬಂದಾಗ ಯೆಹೋವನ ಮೇಲೆ ನಂಬಿಕೆ ಇಡೋಕೆ ಹಗ್ಗಾಯ ಮತ್ತು ಜೆಕರ್ಯ ಹೇಳಿದ ಭವಿಷ್ಯವಾಣಿಗಳು ಯೆಹೂದ್ಯರಿಗೆ ಸಹಾಯ ಮಾಡ್ತು. ಈ ಭವಿಷ್ಯವಾಣಿಗಳು, ಏನೇ ಕಷ್ಟಗಳು ಬಂದ್ರೂ ಯೆಹೋವನ ಮೇಲೆ ನಂಬಿಕೆ ಇಡೋಕೆ ನಮಗೂ ಸಹಾಯ ಮಾಡುತ್ತೆ. (ಜ್ಞಾನೋಕ್ತಿ 22:19 ಓದಿ.) ಹಾಗಾಗಿ ನಾವೀಗ ಹಗ್ಗಾಯ ಮತ್ತು ಜೆಕರ್ಯ ಹೇಳಿದ ಭವಿಷ್ಯವಾಣಿಗಳ ಬಗ್ಗೆ ನೋಡೋಣ ಮತ್ತು ಎಜ್ರನ ಬಗ್ಗೆನೂ ತಿಳ್ಕೊಳ್ಳೋಣ. ಆಗ ನಮಗೆ ಮೂರು ಪ್ರಶ್ನೆಗಳಿಗೆ ಉತ್ರ ಸಿಗುತ್ತೆ. (1) ಕಷ್ಟಗಳು ಬಂದಾಗ ಯೆಹೂದ್ಯರು ಏನು ಮಾಡಿದ್ರು? (2) ಸಮಸ್ಯೆಗಳಿದ್ರೂ ನಾವ್ಯಾಕೆ ಯೆಹೋವನ ಸೇವೆ ಮಾಡ್ತಾ ಇರಬೇಕು? (3) ಕಷ್ಟಗಳು ಬಂದಾಗ ಯೆಹೋವನ ಮೇಲೆ ನಂಬಿಕೆ ಇಡೋಕೆ ನಾವೇನು ಮಾಡಬೇಕು?
ಕಷ್ಟಗಳು ಬಂದಾಗ ಯೆಹೂದ್ಯರು ಏನು ಮಾಡಿದ್ರು?
4-5. ಆಲಯ ಕಟ್ಟೋಕೆ ಯೆಹೂದ್ಯರಿಗೆ ಇದ್ದ ಹುರುಪು ಯಾಕೆ ತಣ್ಣಗಾಯ್ತು?
4 ಯೆಹೂದ್ಯರು ಯೆರೂಸಲೇಮಿಗೆ ವಾಪಾಸ್ ಬಂದಾಗ ತುಂಬ ಕೆಲಸ ಮಾಡಬೇಕಿತ್ತು. ಅವರು ಯಜ್ಞವೇದಿ ಕಟ್ಟಬೇಕಿತ್ತು ಮತ್ತು ಆಲಯಕ್ಕೆ ತಳಪಾಯ ಹಾಕಬೇಕಿತ್ತು. (ಎಜ್ರ 3:1-3, 10) ಮೊದಮೊದ್ಲು ಅವ್ರಿಗೆ ಈ ಕೆಲಸ ಮಾಡೋಕೆ ತುಂಬ ಹುರುಪಿತ್ತು. ಆದ್ರೆ ಹೋಗ್ತಾಹೋಗ್ತಾ ಅದು ತಣ್ಣಗಾಯ್ತು. ಯಾಕಂದ್ರೆ ಆಲಯ ಕಟ್ಟೋದ್ರ ಜೊತೆಗೆ ತಮಗಾಗಿ ಮನೆಗಳನ್ನ ಕಟ್ಕೊಬೇಕಿತ್ತು, ಹೊಲಗದ್ದೆಗಳನ್ನ ನೋಡ್ಕೊಬೇಕಿತ್ತು ಮತ್ತು ಕುಟುಂಬನೂ ನೋಡ್ಕೊಬೇಕಿತ್ತು. (ಎಜ್ರ 2:68, 70) ಇದ್ರ ಜೊತೆಗೆ ಆಲಯ ಕಟ್ಟುವಾಗ ವಿರೋಧನೂ ಬಂತು.—ಎಜ್ರ 4:1-5.
5 ಯೆಹೂದ್ಯರಿಗೆ ಇನ್ನೂ ಕಷ್ಟಗಳು ಬಂತು. ಅವ್ರಿಗೆ ಹಣಕಾಸಿನ ಸಮಸ್ಯೆ ಆಯ್ತು, ಅಷ್ಟೇ ಅಲ್ಲ ಅವರು ಪರ್ಷಿಯನ್ನರ ಆಳ್ವಿಕೆ ಕೆಳಗಿದ್ದಿದ್ರಿಂದ ಸರ್ಕಾರದಲ್ಲಿ ಬದಲಾವಣೆಗಳಾದ ತುಂಬ ತೊಂದ್ರೆನೂ ಅನುಭವಿಸಬೇಕಾಯ್ತು. ಕ್ರಿಸ್ತ ಪೂರ್ವ 530ರಲ್ಲಿ ಪರ್ಷಿಯನ್ ರಾಜ ಕೋರೆಷ ತೀರಿ ಹೋಗ್ತಾನೆ. ಆಮೇಲೆ ಅಹಷ್ವೇರೋಷ ರಾಜನಾಗ್ತಾನೆ. ಇವನು ಈಜಿಪ್ಟನ್ನ ಆಕ್ರಮಣ ಮಾಡೋಕೆ ಸೈನ್ಯವನ್ನ ಕರ್ಕೊಂಡು ಹೋಗ್ತಾನೆ. ಈ ಸೈನಿಕರು ಈಜಿಪ್ಟಿಗೆ ಹೋಗ್ತಿದ್ದಾಗ ಇಸ್ರಾಯೇಲ್ಯರ ಹತ್ರ ‘ನಮಗೆ ಊಟ ಕೊಡಿ, ನೀರು ಕೊಡಿ, ಉಳ್ಕೊಳ್ಳೋಕೆ ವ್ಯವಸ್ಥೆ ಮಾಡಿಕೊಡಿ’ ಅಂತ ಒತ್ತಾಯ ಮಾಡ್ತಾರೆ. ಇದ್ರಿಂದ ಇಸ್ರಾಯೇಲ್ಯರಿಗೆ ಇನ್ನೂ ಕಷ್ಟ ಆಯ್ತು. ಅಹಷ್ವೇರೋಷನ ನಂತರ ಒಂದನೇ ದಾರ್ಯಾವೆಷ ರಾಜನಾಗ್ತಾನೆ. ಆ ಸಮಯದಲ್ಲಿ ಜನ್ರು ದಂಗೆ ಏಳ್ತಾರೆ ಮತ್ತು ಸರ್ಕಾರದಲ್ಲೂ ಕೆಲವೊಂದು ಗೊಂದಲ ಆಗುತ್ತೆ. ಇಷ್ಟೆಲ್ಲ ಸಮಸ್ಯೆಗಳಿದ್ದಿದ್ರಿಂದ ಯೆಹೂದ್ಯರಿಗೆ ಅವ್ರ ಕುಟುಂಬ ನೋಡ್ಕೊಳ್ಳೋಕೆ ಕಷ್ಟ ಆಯ್ತು. ಅಷ್ಟೇ ಅಲ್ಲ, ಈಗ ಯೆಹೋವನ ಆಲಯ ಕಟ್ಟೋಕೆ ಆಗಲ್ಲ ಅಂತನೂ ಅವರು ಅಂದ್ಕೊಂಡ್ರು.—ಹಗ್ಗಾ. 1:2.
6. (ಎ) ಯೆಹೂದ್ಯರಿಗೆ ಇನ್ನೂ ಯಾವ ಕಷ್ಟಗಳು ಬಂತು? (ಜೆಕರ್ಯ 4:6, 7) (ಬಿ) ಆಗ ಜೆಕರ್ಯ ಏನು ಮಾಡಿದನು?
6 ಜೆಕರ್ಯ 4:6, 7 ಓದಿ. ಯೆಹೂದ್ಯರಿಗೆ ಹಿಂಸೆನೂ ಬಂತು. ಕ್ರಿಸ್ತ ಪೂರ್ವ 522ರಲ್ಲಿ ಅವರ ವಿರೋಧಿಗಳು ಆಲಯ ಕಟ್ಟಬಾರದು ಅಂತ ನಿಷೇಧ ಹಾಕಿದ್ರು. ಆಗ ಜೆಕರ್ಯ, ಯಾವುದೇ ಅಡ್ಡಿತಡೆ ಬಂದ್ರೂ ಅದನ್ನ ಜಯಿಸೋಕೆ ಯೆಹೋವನ ಪವಿತ್ರಶಕ್ತಿ ಸಹಾಯ ಮಾಡುತ್ತೆ ಅಂತ ಹೇಳಿ ಯೆಹೂದ್ಯರಿಗೆ ಧೈರ್ಯ ತುಂಬಿದ. ಆಮೇಲೆ ಏನಾಯ್ತು? ಕ್ರಿಸ್ತ ಪೂರ್ವ 520ರಲ್ಲಿ ರಾಜ ದಾರ್ಯಾವೆಷ, ಆಲಯ ಕಟ್ಟಬಾರದು ಅಂತ ಇದ್ದ ನಿಷೇಧವನ್ನ ತೆಗೆದು ಹಾಕ್ತಾನೆ. ಅಷ್ಟೇ ಅಲ್ಲ ಆ ಕೆಲಸಕ್ಕೆ ಹಣನೂ ಕೊಡ್ತಾನೆ ಮತ್ತು ಅಲ್ಲಿದ್ದ ಅಧಿಕಾರಿಗಳ ಹತ್ರ ಯೆಹೂದ್ಯರಿಗೆ ಹೋಗಿ ಸಹಾಯ ಮಾಡೋಕೂ ಹೇಳ್ತಾನೆ.—ಎಜ್ರ 6:1, 6-10.
7. ಯೆಹೂದ್ಯರು ಆಲಯ ಕಟ್ಟೋಕೆ ಮುಂದೆ ಬಂದಿದ್ರಿಂದ ಅವ್ರಿಗೆ ಯಾವೆಲ್ಲ ಆಶೀರ್ವಾದಗಳು ಸಿಕ್ತು?
7 ಆಲಯ ಕಟ್ಟೋಕೆ ಮುಂದೆ ಬಂದ್ರೆ ಅವ್ರಿಗೆ ಬನ್ನೆಲುಬಾಗಿ ಇರ್ತೀನಿ ಅಂತ ಯೆಹೋವ ದೇವರು, ಹಗ್ಗಾಯ ಮತ್ತು ಜೆಕರ್ಯನ ಮೂಲಕ ಯೆಹೂದ್ಯರಿಗೆ ಹೇಳಿದನು. (ಹಗ್ಗಾ. 1:8, 13, 14; ಜೆಕ. 1:3, 16) ಹೀಗೆ ಅವರು ಪ್ರವಾದಿಗಳಿಂದ ಪ್ರೋತ್ಸಾಹ ಪಡ್ಕೊಂಡಿದ್ದಕ್ಕೆ ಕ್ರಿಸ್ತ ಪೂರ್ವ 520ರಲ್ಲಿ ಆಲಯವನ್ನ ಮತ್ತೆ ಕಟ್ಟೋಕೆ ಶುರುಮಾಡಿದ್ರು. ಬರೀ 5 ವರ್ಷದ ಒಳಗೆ ಅವರು ಆಲಯವನ್ನ ಕಟ್ಟಿ ಮುಗಿಸಿದ್ರು. ಎಷ್ಟೇ ಕಷ್ಟ ಬಂದ್ರೂ ಅವರು ಆಲಯ ಕಟ್ಟೋಕೆ ಮುಂದೆ ಬಂದಿದ್ರಿಂದ ಯೆಹೋವ ಅವರಿಗೆ ಬೇಕಾಗಿದ್ದನ್ನ ಕೊಟ್ಟನು ಮತ್ತು ಅವ್ರನ್ನ ಸ್ನೇಹಿತರಾಗಿ ಮಾಡ್ಕೊಂಡನು. ಇದ್ರಿಂದ ಅವರು ಯೆಹೋವನನ್ನ ಖುಷಿಖುಷಿಯಾಗಿ ಆರಾಧಿಸೋಕೆ ಆಯ್ತು.—ಎಜ್ರ 6:14-16, 22.
ಕಷ್ಟಗಳು ಬಂದ್ರೂ ಯೆಹೋವನ ಸೇವೆ ಮಾಡ್ತಾ ಇರಿ
8. ಯೆಹೋವನ ಸೇವೆ ಮಾಡ್ತಾ ಇರೋಕೆ ಹಗ್ಗಾಯ 2:4 ನಮಗೆ ಹೇಗೆ ಸಹಾಯ ಮಾಡುತ್ತೆ? (ಪಾದಟಿಪ್ಪಣಿನೂ ನೋಡಿ.)
8 ಅಂತ್ಯ ಹತ್ರ ಆಗ್ತಾ ಇರೋದ್ರಿಂದ ನಾವು ಸಿಹಿಸುದ್ದಿ ಸಾರೋದನ್ನ ಇನ್ನೂ ಜಾಸ್ತಿ ಮಾಡಬೇಕು. (ಮಾರ್ಕ 13:10) ಆದ್ರೆ ಕೆಲವೊಮ್ಮೆ ಹಣಕಾಸಿನ ಸಮಸ್ಯೆಯಿಂದ ಅಥವಾ ಸಿಹಿಸುದ್ದಿ ಸಾರುವಾಗ ಹಿಂಸೆ ಬರೋದ್ರಿಂದ ಯೆಹೋವನ ಸೇವೆ ಮಾಡೋಕೆ ಕಷ್ಟ ಅಂತ ನಮಗೆ ಅನಿಸಬಹುದು. ಆಗ ನಮಗೆ ಏನು ಸಹಾಯ ಮಾಡುತ್ತೆ? “ಸೈನ್ಯಗಳ ದೇವರಾದ ಯೆಹೋವ”b ನಮ್ಮ ಜೊತೆ ಇದ್ದಾನೆ ಅನ್ನೋ ಮಾತು ಸಹಾಯ ಮಾಡುತ್ತೆ. ಹಾಗಾಗಿ ನಾವು ಹೆದರಬೇಕಾಗಿಲ್ಲ. ಎಷ್ಟೇ ಕಷ್ಟ ಆದ್ರೂ ನಾವು ಯೆಹೋವನ ಸೇವೆ ಮಾಡ್ತಾ ಇದ್ರೆ ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ.—ಹಗ್ಗಾಯ 2:4 ಓದಿ.
9-10. ಒಂದು ದಂಪತಿಯ ಜೀವನದಲ್ಲಿ ಮತ್ತಾಯ 6:33ರಲ್ಲಿರೋ ಮಾತು ಹೇಗೆ ನಿಜ ಆಯ್ತು?
9 ಪಯನಿಯರ್ ಆಗಿರೋ ಆಲ್ಫ್ರೆಡ್ ಮತ್ತು ಐರಿನಾc ಅನ್ನೋ ಒಂದು ದಂಪತಿಯ ಉದಾಹರಣೆ ನೋಡಿ. ಅವರು ಹೆಚ್ಚು ಸೇವೆ ಮಾಡೋಕೆ ಇನ್ನೊಂದು ಸಭೆಗೆ ಹೋದರು. ಆದ್ರೆ ಅವ್ರ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದಿದ್ರಿಂದ ಕೆಲಸ ಕಳ್ಕೊಂಡ್ರು. ಒಂದು ವರ್ಷದ ವರೆಗೆ ಅವ್ರಿಗೆ ಸರಿಯಾದ ಕೆಲಸನೂ ಸಿಗ್ಲಿಲ್ಲ. ಆಗ ಸಹೋದರ ಸಹೋದರಿಯರಿಂದ ಯೆಹೋವ ಅವ್ರಿಗೆ ಸಹಾಯ ಮಾಡಿದನು. ಮೊದಮೊದ್ಲು ಅವ್ರಿಗೆ ಆ ಸಮಸ್ಯೆಗಳು ಬಂದಾಗ ತುಂಬ ಕಷ್ಟ ಆಯ್ತು. ಆದ್ರೂ ಹೇಗೆ ತಾಳ್ಕೊಂಡ್ರು? “ನಾವು ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇದ್ದಿದ್ರಿಂದ ಕಷ್ಟಗಳನ್ನ ಮರೆಯೋಕೆ ಆಯ್ತು.” ಅಂತ ಆಲ್ಫ್ರೆಡ್ ಹೇಳ್ತಾರೆ. ಅವರು ಕೆಲಸನೂ ಹುಡುಕ್ತಿದ್ರು, ಅದ್ರ ಜೊತೆಗೆ ಯೆಹೋವನ ಸೇವೆ ಮಾಡ್ತಾ ಬಿಜ಼ಿಯಾಗಿದ್ರು.
10 ಒಂದಿನ ಅವರು ಸೇವೆ ಮುಗಿಸಿ ಮನೆಗೆ ಬಂದಾಗ ಅವ್ರ ಮನೆ ಮುಂದೆ ಎರಡು ಚೀಲದ ತುಂಬ ಆಹಾರ ಇತ್ತು. ಅವ್ರ ಒಬ್ಬ ಫ್ರೆಂಡ್ 160 ಕಿ.ಮೀ. ದೂರದಿಂದ ಬಂದು ಆ ಚೀಲಗಳನ್ನ ಇಟ್ಟು ಹೋದ್ರು ಅಂತ ಅವ್ರ ಪಕ್ಕದ ಮನೆಯವರು ಅವ್ರಿಗೆ ಹೇಳಿದ್ರು. ಇದ್ರ ಬಗ್ಗೆ ಆಲ್ಫ್ರೆಡ್ ಹೇಳಿದ್ದು: “ಆ ದಿನ ನಾವು, ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥ ಮಾಡ್ಕೊಂಡ್ವಿ. ಸಹೋದರ ಸಹೋದರಿಯರು ನಮ್ಮ ಬಗ್ಗೆ ಎಷ್ಟು ಯೋಚಿಸ್ತಾರೆ ಅಂತ ಅರ್ಥ ಆಯ್ತು. ನಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಬಂದ್ರೂ ಯೆಹೋವ ಮಾತ್ರ ನಮ್ಮನ್ನ ಮರೆಯಲ್ಲ ಅಂತ ಗೊತ್ತಾಯ್ತು.”—ಮತ್ತಾ. 6:33.
11. ಏನೇ ಕಷ್ಟ ಬಂದ್ರೂ ನಾವ್ಯಾಕೆ ಸಿಹಿಸುದ್ದಿ ಸಾರ್ತಾ ಇರಬೇಕು?
11 ಪ್ಯಾರ 7ರಲ್ಲಿ ನೋಡಿದ ಹಾಗೆ ಹಗ್ಗಾಯ ಯೆಹೋವನ ಜನ್ರಿಗೆ, ಮತ್ತೆ ಆಲಯ ಕಟ್ಟೋಕೆ ಶುರುಮಾಡಿ ಅಂತ ಹೇಳಿದ. ಅವರು ಹಾಗೆ ಮಾಡಿದ್ರೆ ಯೆಹೋವ ಅವ್ರನ್ನ “ಆಶೀರ್ವದಿಸ್ತೀನಿ” ಅಂತ ಮಾತು ಕೊಟ್ಟನು. (ಹಗ್ಗಾ. 2:18, 19) ಅವ್ರ ತರ ನಾವೂ ಏನೇ ಕಷ್ಟ ಬಂದ್ರೂ ಸಿಹಿಸುದ್ದಿ ಸಾರ್ತಾ ಶಿಷ್ಯರನ್ನಾಗಿ ಮಾಡೋ ಕೆಲಸದಲ್ಲಿ ಬಿಜ಼ಿಯಾಗಿದ್ರೆ ಯೆಹೋವ ನಮ್ಮನ್ನು ಆಶೀರ್ವದಿಸ್ತಾನೆ.
ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು?
12. ಎಜ್ರ ಮತ್ತು ಯೆಹೂದ್ಯರು ಯೆಹೋವನ ಮೇಲೆ ಯಾಕೆ ಜಾಸ್ತಿ ನಂಬಿಕೆ ಇಡಬೇಕಿತ್ತು?
12 ಕ್ರಿಸ್ತ ಪೂರ್ವ 468ರಲ್ಲಿ ಎಜ್ರ ಇನ್ನೊಂದು ಗುಂಪನ್ನ ಯೆರೂಸಲೇಮಿಗೆ ಕರ್ಕೊಂಡು ಹೋಗ್ತಾನೆ. ಇವರು ಯೆಹೋವನ ಮೇಲೆ ಜಾಸ್ತಿ ನಂಬಿಕೆ ಇಡಬೇಕಿತ್ತು. ಯಾಕಂದ್ರೆ ಅವರು ಹೋಗಬೇಕಾಗಿದ್ದ ದಾರಿಲಿ ಅವ್ರಿಗೆ ತುಂಬ ಅಪಾಯ ಆಗಬಹುದಿತ್ತು. ಅವರು ಬರುವಾಗ ಆಲಯಕ್ಕೆ ಬೇಕಾಗಿದ್ದ ಚಿನ್ನ ಮತ್ತು ಬೆಳ್ಳಿಯನ್ನ ತಗೊಂಡು ಬರ್ತಾ ಇದ್ರು. ಇದ್ರಿಂದ ಕಳ್ಳರು ಅವ್ರಿಗೆ ತೊಂದರೆ ಕೊಟ್ಟು ಅದನ್ನೆಲ್ಲ ಕಿತ್ತುಕೊಂಡು ಹೋಗಿಬಿಡಬಹುದಿತ್ತು. (ಎಜ್ರ 7:12-16; 8:31) ಅಷ್ಟೇ ಅಲ್ಲ ಯೆರೂಸಲೇಮ್ ಸುರಕ್ಷಿತವಾಗಿಲ್ಲ ಅಂತನೂ ಅವ್ರಿಗೆ ಗೊತ್ತಾಯ್ತು. ಯಾಕಂದ್ರೆ ಅಲ್ಲಿ ಜಾಸ್ತಿ ಜನ ಇರ್ಲಿಲ್ಲ ಮತ್ತು ಅಲ್ಲಿದ್ದ ಬಾಗಿಲು, ಗೋಡೆಗಳೆಲ್ಲ ಹಾಳಾಗಿ ಬಿಟ್ಟಿತ್ತು. ಆ ಸಮಯದಲ್ಲಿ ಎಜ್ರ ಹೇಗೆ ಯೆಹೋವನ ಮೇಲೆ ನಂಬಿಕೆ ಇಟ್ಟ? ಅವನಿಂದ ನಾವೇನು ಕಲಿಬಹುದು?
13. ಎಜ್ರನಿಗೆ ಯೆಹೋವನ ಮೇಲೆ ಹೇಗೆ ನಂಬಿಕೆ ಜಾಸ್ತಿ ಆಯ್ತು? (ಪಾದಟಿಪ್ಪಣಿನೂ ನೋಡಿ.)
13 ಹಿಂದೆ ತನ್ನ ಜನ್ರಿಗೆ ಕಷ್ಟ ಬಂದಾಗ ಯೆಹೋವ ಅವ್ರನ್ನ ಹೇಗೆ ಕಾಪಾಡಿದ್ದ ಅಂತ ಎಜ್ರ ನೋಡಿದ್ದ. ಕ್ರಿಸ್ತ ಪೂರ್ವ 484ರ ಆರಂಭದಲ್ಲಿ ಎಜ್ರ ಬಾಬೆಲಿನಲ್ಲಿ ಇದ್ದಿರಬೇಕು. ಆಗ ರಾಜ ಅಹಷ್ವೇರೋಷ ಪರ್ಷಿಯ ಸಾಮ್ರಾಜ್ಯದಲ್ಲಿದ್ದ ಎಲ್ಲಾ ಯೆಹೂದ್ಯರನ್ನ ಕೊಲ್ಲಬೇಕು ಅಂತ ಆಜ್ಞೆ ಹೊರಡಿಸಿದ. (ಎಸ್ತೇ. 3:7, 13-15) ಎಜ್ರನ ಜೀವನೂ ಆಗ ಅಪಾಯದಲ್ಲಿತ್ತು. ಇದನ್ನೆಲ್ಲ ಕೇಳಿದಾಗ “ಪ್ರಾಂತ್ಯಗಳಲ್ಲಿ ಇದ್ದ ಎಲ್ಲಾ ಯೆಹೂದ್ಯರು” ಅಳ್ತಾ ಉಪವಾಸ ಮಾಡಿದ್ರು. ಅವರು ಖಂಡಿತ ಯೆಹೋವನಿಗೆ ಪ್ರಾರ್ಥನೆನೂ ಮಾಡಿರ್ತಾರೆ. (ಎಸ್ತೇ. 4:3) ಆದ್ರೆ ತಮ್ಮನ್ನ ಕೊಲ್ಲಬೇಕು ಅಂತ ಸಂಚು ಮಾಡಿದವ್ರೇ ಸತ್ತು ಹೋದ್ರು ಅಂತ ಗೊತ್ತಾದಾಗ ಎಜ್ರ ಮತ್ತು ಯೆಹೂದ್ಯರಿಗೆ ಎಷ್ಟು ಸಮಾಧಾನ ಆಗಿರಬೇಕಲ್ವಾ? (ಎಸ್ತೇ. 9:1, 2) ಇದ್ರಿಂದ ಎಜ್ರನಿಗೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಯ್ತು. ತನ್ನ ಜನ್ರಿಗೆ ಏನೇ ಆದ್ರೂ ಯೆಹೋವ ಖಂಡಿತ ಕಾಪಾಡ್ತಾನೆ ಅನ್ನೋ ಧೈರ್ಯ ಬಂತು.d
14. ಕಷ್ಟ ಬಂದಾಗ ಒಬ್ಬ ಸಹೋದರಿಗೆ ಯೆಹೋವನ ಬಗ್ಗೆ ಏನು ಗೊತ್ತಾಯ್ತು?
14 ಕಷ್ಟದ ಸಂದರ್ಭದಲ್ಲಿ ಯೆಹೋವ ನಮಗೆ ಸಹಾಯ ಮಾಡೋದನ್ನ ನೋಡುವಾಗ ಆತನ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. ಪೂರ್ವ ಯೂರೋಪಿನಲ್ಲಿರೋ ಸಹೋದರಿ ಅನಾಸ್ಟಾಸಿಯಾ ಅವ್ರ ಅನುಭವ ನೋಡಿ. ಅವ್ರ ಜೊತೆ ಕೆಲಸ ಮಾಡುವವರು ಅವ್ರಿಗೆ ರಾಜಕೀಯ ಪಕ್ಷವನ್ನ ಬೆಂಬಲಿಸೋಕೆ ಒತ್ತಾಯ ಮಾಡ್ತಿದ್ರು. ಅದಕ್ಕೇ ಅವರು ಆ ಕೆಲಸ ಬಿಟ್ಟುಬಿಟ್ರು. “ಆಗ ನನ್ನ ಹತ್ರ ಹಣನೇ ಇರ್ಲಿಲ್ಲ. ಈ ತರ ಆಗಿದ್ದು ಇದೇ ಮೊದಲನೇ ಸಲ. ಆದ್ರೆ ನನ್ನ ನೋವನ್ನೆಲ್ಲ ಯೆಹೋವನ ಹತ್ರ ಹೇಳ್ಕೊಂಡೆ. ಯೆಹೋವ ನನ್ನನ್ನ ಚೆನ್ನಾಗಿ ನೋಡ್ಕೊಂಡನು. ನನಗೆ ನಾಳೆ ಕೆಲಸ ಇಲ್ಲಾಂದ್ರೂ ಭಯ ಇಲ್ಲ. ಯಾಕಂದ್ರೆ ಯೆಹೋವ ಇವತ್ತು ನನ್ನನ್ನ ನೋಡ್ಕೊಳ್ತಾನೆ ಅಂದ್ರೆ ನಾಳೆನೂ ನೋಡ್ಕೊಳ್ತಾನೆ” ಅಂತ ಅವರು ಹೇಳ್ತಾರೆ.
15. ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಇಡೋಕೆ ಎಜ್ರನಿಗೆ ಯಾವುದು ಸಹಾಯ ಮಾಡ್ತು? (ಎಜ್ರ 7:27, 28)
15 ಯೆಹೋವ ತನಗೆ ಹೇಗೆ ಸಹಾಯ ಮಾಡಿದನು ಅಂತ ಎಜ್ರ ನೋಡಿದ. ಕಷ್ಟ ಬಂದಾಗ ಯೆಹೋವ ತನಗೆ ಮಾಡಿದ ಸಹಾಯವನ್ನ ನೆನಸ್ಕೊಂಡಾಗ ಎಜ್ರನಿಗೆ ಆತನ ಮೇಲಿರೋ ನಂಬಿಕೆ ಜಾಸ್ತಿ ಆಯ್ತು. ಅದಕ್ಕೇ ಅವನು “ಯೆಹೋವನ ಹಸ್ತ ನನ್ನ ಮೇಲಿದೆ” ಅಂತ ಹೇಳಿದ. (ಎಜ್ರ 7:27, 28 ಓದಿ, ಪಾದಟಿಪ್ಪಣಿ.) ಇದೇ ಅರ್ಥ ಕೊಡೋ ಮಾತುಗಳನ್ನ ಎಜ್ರ ಇನ್ನೂ ಐದು ಸಲ ಹೇಳಿದ್ದಾನೆ.—ಎಜ್ರ 7:6, 9; 8:18, 22, 31.
16. ಯೆಹೋವ ನಮಗೆ ಯಾವಾಗೆಲ್ಲ ಸಹಾಯ ಮಾಡ್ತಾನೆ? (ಚಿತ್ರನೂ ನೋಡಿ.)
16 ಎಜ್ರನಿಗೆ ಸಹಾಯ ಮಾಡಿದ ತರ ಯೆಹೋವ ನಮಗೂ ಸಹಾಯ ಮಾಡ್ತಾನೆ. ಉದಾಹರಣೆಗೆ, ಕೂಟಗಳಿಗೆ ಬೇಗ ಹೋಗೋಕೆ ನೀವು ಬಾಸ್ ಹತ್ರ ಕೇಳಬಹುದು ಅಥವಾ ಅಧಿವೇಶನಕ್ಕೆ ಹೋಗೋಕೆ ನೀವು ರಜೆ ಕೇಳಬಹುದು. ಆಗ ಯೆಹೋವ ತನ್ನ ಸಹಾಯ ಹಸ್ತ ನಿಮ್ಮ ಮೇಲೆ ಚಾಚೋದನ್ನ ನೋಡೋಕೆ ಆಗುತ್ತೆ. ಇದ್ರಿಂದ ಆತನ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ.
17. ಎಜ್ರ ಹೇಗೆ ದೀನತೆ ತೋರಿಸಿದ? (ಮುಖಪುಟ ಚಿತ್ರ ನೋಡಿ.)
17 ಎಜ್ರ ದೀನತೆಯಿಂದ ಯೆಹೋವನ ಹತ್ರ ಸಹಾಯ ಕೇಳಿದ. ‘ಕೊಟ್ಟಿರೋ ಕೆಲಸ ಹೇಗಪ್ಪಾ ಮಾಡೋದು’ ಅಂತ ನೆನಸಿ ಎಜ್ರನಿಗೆ ಚಿಂತೆ ಆದಾಗ ಅವನು ದೀನತೆಯಿಂದ ಯೆಹೋವನ ಹತ್ರ ಪ್ರಾರ್ಥಿಸಿದ. (ಎಜ್ರ 8:21-23; 9:3-5) ಅವನನ್ನ ನೋಡಿ ಬೇರೆಯವರು ಯೆಹೋವನ ಮೇಲೆ ನಂಬಿಕೆ ಇಡೋಕೆ ಕಲಿತ್ರು. ಅಷ್ಟೇ ಅಲ್ಲ ಎಜ್ರನಿಗೆ ಅವರು ಬೆಂಬಲನೂ ಕೊಟ್ರು. (ಎಜ್ರ 10:1-4) ನಮಗೂ ಕೆಲವೊಮ್ಮೆ ಕುಟುಂಬವನ್ನ ಹೇಗೆ ನೋಡ್ಕೊಳ್ಳೋದು ಅಂತ ಚಿಂತೆ ಆದಾಗ ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಂಬಿಕೆ ಇಟ್ಟು ಪ್ರಾರ್ಥಿಸಬೇಕು.
18. ನಾವು ಏನು ಮಾಡಿದ್ರೆ ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ?
18 ಕಷ್ಟಗಳು ಬಂದಾಗ ನಾವು ದೀನತೆಯಿಂದ ಯೆಹೋವನ ಹತ್ರ ಸಹಾಯ ಕೇಳಬೇಕು. ಅಷ್ಟೇ ಅಲ್ಲ ಸಹೋದರ ಸಹೋದರಿಯರಿಂದನೂ ಸಹಾಯ ಪಡಿಬೇಕು. ಆಗ ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ. ಎರಿಕಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವ್ರಿಗೆ ಮೂರು ಮಕ್ಕಳು. ಇದ್ದಕ್ಕಿದ್ದ ಹಾಗೆ ಅವ್ರಿಗೆ ಕಷ್ಟಗಳು ಬಂತು. ಅವ್ರ ಹೊಟ್ಟೆಯಲ್ಲಿದ್ದ ಮಗು ತೀರಿ ಹೋಯ್ತು, ಅಷ್ಟೇ ಅಲ್ಲ ಅವ್ರ ಗಂಡನೂ ತೀರಿ ಹೋದ್ರು. ಆದ್ರೂ ಯೆಹೋವನ ಮೇಲಿರೋ ಅವ್ರ ನಂಬಿಕೆ ಕಮ್ಮಿ ಆಗ್ಲಿಲ್ಲ. ಯಾಕೆ ಅಂತ ಅವ್ರ ಮಾತಲ್ಲೇ ಕೇಳಿ: “ನಾನು ಯೆಹೋವನ ಹತ್ರ ಪ್ರಾರ್ಥನೆ ಮಾಡಿದಾಗ ಆತನು ನನಗೆ ಉತ್ರ ಕೊಟ್ಟಿದ್ದಾನೆ. ಸಹೋದರ ಸಹೋದರಿಯರನ್ನ ಕಳಿಸಿ ನನಗೆ ಸಹಾಯ ಮಾಡಿದ್ದಾನೆ. ಅಷ್ಟೇ ಅಲ್ಲ ಅವರು ನನಗೆ ಸಮಾಧಾನನೂ ಮಾಡಿದ್ದಾರೆ. ನಮ್ಮ ಸಹೋದರರ ಹತ್ರ ಕಷ್ಟಗಳನ್ನ ಹೇಳ್ಕೊಂಡ್ರೆನೇ ಅವರು ನಮಗೆ ಸಹಾಯ ಮಾಡೋಕೆ ಆಗೋದು” ಅಂತ ಆ ಸಹೋದರಿ ಹೇಳ್ತಾರೆ.
ಕೊನೇ ತನಕ ಯೆಹೋವನನ್ನ ನಂಬಿ
19-20. ಯೆರೂಸಲೇಮಿಗೆ ವಾಪಸ್ ಬರೋಕೆ ಆಗದೇ ಇದ್ದ ಯೆಹೂದ್ಯರಿಂದ ನಾವೇನು ಕಲಿಬಹುದು?
19 ಬಾಬೆಲಲ್ಲಿದ್ದ ಕೆಲವ್ರಿಗೆ ತುಂಬ ವಯಸ್ಸಾಗಿತ್ತು, ಕೆಲವ್ರಿಗೆ ಹುಷಾರಿರ್ಲಿಲ್ಲ, ಇನ್ನು ಕೆಲವ್ರಿಗೆ ತಮ್ಮ ಕುಟುಂಬ ನೋಡ್ಕೊಬೇಕಿತ್ತು. ಅದಕ್ಕೇ ಅವ್ರಿಗೆ ಯೆರೂಸಲೇಮಿಗೆ ವಾಪಸ್ ಬರೋಕೆ ಆಗ್ಲಿಲ್ಲ. ಆದ್ರೆ ದೇವರ ಆಲಯ ಕಟ್ಟೋಕೆ ಅವರು ತಮ್ಮ ಹತ್ರ ಇದ್ದ ವಸ್ತುಗಳನ್ನ ಧಾರಾಳವಾಗಿ ಕೊಟ್ರು. (ಎಜ್ರ 1:5, 6) ಮೊದಲನೇ ಗುಂಪು ಯೆರೂಸಲೇಮಿಗೆ ಹೋಗಿ ಸುಮಾರು 19 ವರ್ಷಗಳು ಆದ್ಮೇಲೂ, ಬಾಬೆಲಲ್ಲಿದ್ದ ಯೆಹೂದ್ಯರು ಯೆರೂಸಲೇಮಿಗೆ ಉಡುಗೊರೆಗಳನ್ನ ಕೊಟ್ಟು ಕಳಿಸ್ತಾನೇ ಇದ್ದಿರಬಹುದು. (ಜೆಕ. 6:10) ಇವ್ರಿಂದ ನಾವೇನು ಕಲಿಬಹುದು?
20 ಯೆಹೋವನ ಸೇವೆನ ನಿಮ್ಮಿಂದ ಜಾಸ್ತಿ ಮಾಡೋಕೆ ಆಗಲ್ಲ ಅಂತ ಅನಿಸ್ತಿದ್ರೆ ಬೇಜಾರು ಮಾಡ್ಕೊಬೇಡಿ. ನೀವು ಹಾಕ್ತಿರೋ ಪ್ರಯತ್ನನ ಯೆಹೋವ ಗಮನಿಸ್ತಾನೆ ಮತ್ತು ಅದನ್ನ ಮೆಚ್ಚಿಕೊಳ್ತಾನೆ. ಬಾಬೆಲಿನಲ್ಲಿದ್ದ ಯೆಹೂದ್ಯರು ಕೊಟ್ಟ ಚಿನ್ನ ಮತ್ತು ಬೆಳ್ಳಿಯಿಂದ ಒಂದು ಕಿರೀಟ ಮಾಡೋಕೆ ಯೆಹೋವ ಜೆಕರ್ಯನಿಗೆ ಹೇಳಿದನು. (ಜೆಕ. 6:11) ಅವರು ಕೊಟ್ಟ ಕಾಣಿಕೆಗಳ “ನೆನಪಿಗಾಗಿ” ಆ “ಮಹಾ ಕರೀಟ” ಮಾಡೋಕೆ ಹೇಳಿದನು. (ಜೆಕ. 6:14, ಪಾದಟಿಪ್ಪಣಿ) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ ಅಂದ್ರೆ ಏನೇ ಕಷ್ಟ ಬಂದ್ರೂ ನಾವು ಯೆಹೋವನ ಸೇವೆ ಮಾಡೋಕೆ ಹಾಕೋ ಪ್ರಯತ್ನನ ಆತನು ಯಾವತ್ತೂ ಮರಿಯಲ್ಲ.—ಇಬ್ರಿ. 6:10.
21. ಮುಂದೆ ಏನೇ ಆದ್ರೂ ನಾವ್ಯಾಕೆ ಯೆಹೋವನ ಮೇಲೆ ನಂಬಿಕೆ ಇಡಬಹುದು?
21 ಈ ಕೊನೇ ದಿನಗಳಲ್ಲಿ ನಮಗೆ ಕಷ್ಟ ಬರೋದಂತೂ ಗ್ಯಾರಂಟಿ. ಮುಂದೆ ಅದಿನ್ನೂ ಜಾಸ್ತಿ ಆಗುತ್ತೆ. (2 ತಿಮೊ. 3:1, 13) ಹಾಗಂತ ನಾವು ಚಿಂತೆಯಲ್ಲಿ ಮುಳುಗಿ ಹೋಗಬೇಕಾಗಿಲ್ಲ. ಯೆಹೋವ ಹಗ್ಗಾಯನ ಕಾಲದಲ್ಲಿ ತನ್ನ ಜನ್ರಿಗೆ “ನಾನು ನಿಮ್ಮ ಜೊತೆ ಇದ್ದೀನಿ . . . ಹೆದರಬೇಡಿ” ಅಂತ ಹೇಳಿದ ಮಾತನ್ನ ನೆನಪಿಸ್ಕೊಳ್ಳಿ. (ಹಗ್ಗಾ. 2:4, 5) ನಾವು ಯೆಹೋವನ ಸೇವೆಯನ್ನ ಎಲ್ಲಿ ತನಕ ಮಾಡ್ತಾ ಇರ್ತೀವೋ ಅಲ್ಲಿ ತನಕ ಆತನು ನಮ್ಮ ಜೊತೆನೇ ಇರ್ತಾನೆ. ಈ ಲೇಖನದಲ್ಲಿ ಹಗ್ಗಾಯ ಮತ್ತು ಜೆಕರ್ಯನ ಭವಿಷ್ಯವಾಣಿಯಿಂದ ಹಾಗೂ ಎಜ್ರನ ಮಾದರಿಯಿಂದ ಏನೆಲ್ಲಾ ಕಲಿತಿದ್ದೀವೋ ಅದನ್ನ ನಮ್ಮ ಜೀವನದಲ್ಲಿ ಪಾಲಿಸೋಣ. ಆಗ ಆಕಾಶನೇ ತಲೆಮೇಲೆ ಬಿದ್ರೂ ಯೆಹೋವನ ಮೇಲೆ ನಮಗಿರೋ ನಂಬಿಕೆ ಕಮ್ಮಿ ಆಗಲ್ಲ.
ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
a ಹಣಕಾಸಿನ ಸಮಸ್ಯೆಗಳಾದಾಗ, ಸರ್ಕಾರದಲ್ಲಾಗೋ ಬದಲಾವಣೆಗಳಿಂದ ನಮಗೆ ತೊಂದರೆಗಳಾದಾಗ, ಸಾರೋ ಕೆಲಸಕ್ಕೆ ವಿರೋಧ ಬಂದಾಗ ಯೆಹೋವ ನಮ್ಮ ಜೊತೆನೇ ಇರ್ತಾನೆ ಅಂತ ಈ ಲೇಖನದಲ್ಲಿ ಕಲಿತೀವಿ.
b “ಸೈನ್ಯಗಳ ದೇವರಾದ ಯೆಹೋವ” ಅಂತ ಹಗ್ಗಾಯ ಪುಸ್ತಕದಲ್ಲಿ 13 ಸಲ ಇದೆ. ಇದು ಯೆಹೋವನಿಗೆ ತುಂಬ ಶಕ್ತಿ ಇದೆ, ಆತನ ಹಿಂದೆ ದೇವದೂತರ ಒಂದು ದೊಡ್ಡ ಸೈನ್ಯನೇ ಇದೆ ಅಂತ ಯೆಹೂದ್ಯರಿಗೆ ನೆನಪಿಸ್ತು. ಅವ್ರಿಗಷ್ಟೇ ಅಲ್ಲ ಇದು ನಮಗೂ ಧೈರ್ಯ ಕೊಡುತ್ತೆ.—ಕೀರ್ತ. 103:20, 21.
c ಕೆಲವರ ಹೆಸ್ರು ಬದಲಾಗಿದೆ.
d ಎಜ್ರ ದೇವರ ವಾಕ್ಯ ನಕಲು ಮಾಡೋದ್ರಲ್ಲಿ ನಿಪುಣನಾಗಿದ್ದ. ಅದಕ್ಕೇ ಅವನಿಗೆ ಯೆಹೋವ ಹೇಳಿದ ಭವಿಷ್ಯವಾಣಿ ಖಂಡಿತ ನಡಿಯುತ್ತೆ ಅನ್ನೋ ನಂಬಿಕೆ ಯೆರೂಸಲೇಮಿಗೆ ಹೋಗೋಕೆ ಮುಂಚೆನೇ ಇತ್ತು.—2 ಪೂರ್ವ. 36:22, 23; ಎಜ್ರ 7:6, 9, 10; ಯೆರೆ. 29:14.
e ಚಿತ್ರ ವಿವರಣೆ: ಒಬ್ಬ ಸಹೋದರ ಅಧಿವೇಶನಕ್ಕೆ ಹೋಗೋಕೆ ಬಾಸ್ ಹತ್ರ ರಜೆ ಕೇಳ್ತಿದ್ದಾನೆ. ಆದ್ರೆ ಆ ಬಾಸ್ ಕೊಡ್ತಿಲ್ಲ. ಮತ್ತೆ ಆ ಬಾಸ್ ಹತ್ರ ಮಾತಾಡೋಕೆ ಧೈರ್ಯ ಕೊಡು ಅಂತ ಯೆಹೋವನ ಹತ್ರ ಬೇಡ್ಕೊತಿದ್ದಾನೆ. ಆಮೇಲೆ ಅವನು ಬಾಸ್ ಹತ್ರ ಹೋಗಿ ಅಧಿವೇಶನದ ಕಾರ್ಯಕ್ರಮ ಪಟ್ಟಿ ತೋರಿಸ್ತಾ ಏನೆಲ್ಲಾ ಒಳ್ಳೇ ವಿಷ್ಯಗಳನ್ನ ಅಲ್ಲಿ ಕಲಿತೀವಿ ಅಂತ ವಿವರಿಸ್ತಿದ್ದಾನೆ. ಆಗ ಬಾಸ್ ತನ್ನ ಮನಸ್ಸನ್ನ ಬದಲಾಯಿಸ್ತಾನೆ.