ಅಧ್ಯಯನ ಲೇಖನ 38
ಗೀತೆ 147 ದೇವರ ಅಮೂಲ್ಯ ಪುತ್ರರು
ಎಚ್ಚೆತ್ಕೊಳ್ಳಿ! ಇದು ಯೇಸು ಕೊಟ್ಟ ಎಚ್ಚರಿಕೆ!
“ದೇವರು ಒಬ್ಬನನ್ನ ಆರಿಸ್ಕೊಳ್ತಾನೆ, ಇನ್ನೊಬ್ಬನನ್ನ ಬಿಟ್ಟುಬಿಡ್ತಾನೆ.” —ಮತ್ತಾ. 24:40.
ಈ ಲೇಖನದಲ್ಲಿ ಏನಿದೆ?
ನಾವು ಈ ಲೇಖನದಲ್ಲಿ ಯೇಸು ಹೇಳಿದ ಮೂರು ಉದಾಹರಣೆಗಳ ಬಗ್ಗೆ ಕಲಿತೀವಿ. ಅಷ್ಟೇ ಅಲ್ಲ ಲೋಕದ ಅಂತ್ಯದಲ್ಲಿ ನಡೆಯೋ ನ್ಯಾಯತೀರ್ಪಿಗೂ ಈ ಉದಾಹರಣೆಗಳಿಗೂ ಏನು ಸಂಬಂಧ ಅಂತ ತಿಳ್ಕೊತೀವಿ.
1. ಯೇಸು ಆದಷ್ಟು ಬೇಗ ಏನು ಮಾಡ್ತಾನೆ?
ನಾವು ದೊಡ್ಡದೊಡ್ಡ ಬದಲಾವಣೆಗಳು ಆಗೋ ಸಮಯದಲ್ಲಿ ಜೀವಿಸ್ತಾ ಇದ್ದೀವಿ. ಆದಷ್ಟು ಬೇಗ ಯೇಸು ಭೂಮಿಲಿರೋ ಒಬ್ಬೊಬ್ರಿಗೂ ನ್ಯಾಯ ತೀರಿಸ್ತಾನೆ. ಆದ್ರೆ ಆ ನ್ಯಾಯತೀರ್ಪಿಗೂ ಮುಂಚೆ ಏನೆಲ್ಲ ನಡಿಯುತ್ತೆ ಅಂತ ಯೇಸು “ಸೂಚನೆ” ಕೊಟ್ಟನು. ಅಂದ್ರೆ ತಾನು ‘ಮತ್ತೆ ಬರೋ ಕಾಲದಲ್ಲಿ ಮತ್ತು ಲೋಕದ ಅಂತ್ಯದಲ್ಲಿ’ ಏನೆಲ್ಲ ಆಗುತ್ತೆ ಅಂತ ಅವ್ರಿಗೆ ಹೇಳಿದನು. (ಮತ್ತಾ. 24:3) ಈ ಭವಿಷ್ಯವಾಣಿಯ ಬಗ್ಗೆ ಮತ್ತಾಯ 24, 25 ಮತ್ತು ಮಾರ್ಕ 13 ಹಾಗೂ ಲೂಕ 21ನೇ ಅಧ್ಯಾಯದಲ್ಲಿ ಇದೆ.
2. (ಎ) ಈ ಲೇಖನದಲ್ಲಿ ನಾವು ಏನು ಕಲಿತೀವಿ? (ಬಿ) ಅದನ್ನ ತಿಳ್ಕೊಳ್ಳೋದ್ರಿಂದ ನಮಗೇನು ಪ್ರಯೋಜನ?
2 ನ್ಯಾಯತೀರ್ಪಿಗೆ ನಾವು ತಯಾರಾಗೋಕೆ ಸಹಾಯ ಮಾಡೋ ಮೂರು ಉದಾಹರಣೆಗಳ ಬಗ್ಗೆ ಯೇಸು ಹೇಳಿದನು. ಒಂದು, ಕುರಿಗಳು ಮತ್ತು ಆಡುಗಳು. ಎರಡು, ಬುದ್ಧಿವಂತ ಮತ್ತು ಮೂರ್ಖ ಕನ್ಯೆಯರು. ಮೂರು, ತಲಾಂತು. ಒಬ್ಬ ವ್ಯಕ್ತಿ ಹೇಗೆ ನಡ್ಕೊಳ್ತಾನೆ ಅಂತ ನೋಡಿ ಯೇಸು ಅವನಿಗೆ ನ್ಯಾಯತೀರ್ಪು ಮಾಡ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಈ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ. ಹಾಗಾಗಿ ಈ ಉದಾರಣೆಗಳಿಂದ ನಾವೇನು ಕಲಿಯಬಹುದು ಅಂತ ನೋಡೋಣ. ಮೊದಲನೇದಾಗಿ ನಾವು ಕುರಿಗಳ ಮತ್ತು ಆಡುಗಳ ಉದಾಹರಣೆ ನೋಡೋಣ.
ಕುರಿಗಳು ಮತ್ತು ಆಡುಗಳು
3. ಯೇಸು ಯಾವಾಗ ನ್ಯಾಯತೀರ್ಪು ಮಾಡ್ತಾನೆ?
3 ಕುರಿಗಳ ಮತ್ತು ಆಡುಗಳ ಉದಾಹರಣೆಯಿಂದ ನಮಗೆ ಏನು ಗೊತ್ತಾಗುತ್ತೆ? ಜನ್ರು ಸಿಹಿಸುದ್ದಿ ಕೇಳ್ತಾರಾ ಇಲ್ವಾ? ಅಭಿಷಿಕ್ತರಿಗೆ ಬೆಂಬಲ ಕೊಡ್ತಾರಾ ಇಲ್ವಾ ಅನ್ನೋದನ್ನ ನೋಡಿ ಯೇಸು ನ್ಯಾಯತೀರ್ಪು ಮಾಡ್ತಾನೆ. (ಮತ್ತಾ. 25:31-46) ಯೇಸು ಈ ನ್ಯಾಯತೀರ್ಪನ್ನ ‘ಮಹಾಸಂಕಟದ’ ಕೊನೆಯಲ್ಲಿ, ಅರ್ಮಗೆದೋನ್ಗೆ ಸ್ವಲ್ಪ ಮುಂಚೆ ಮಾಡ್ತಾನೆ. (ಮತ್ತಾ. 24:21) ಒಬ್ಬ ಕುರುಬ ಹೇಗೆ ಕುರಿಗಳನ್ನ ಮತ್ತು ಆಡುಗಳನ್ನ ಬೇರೆಬೇರೆ ಮಾಡ್ತಾನೋ ಹಾಗೇ ಅಭಿಷಿಕ್ತರಿಗೆ ನಿಯತ್ತಿಂದ ಬೆಂಬಲ ಕೊಡೋರನ್ನ ಮತ್ತು ಕೊಡದೇ ಇರೋರನ್ನ ಯೇಸು ಬೇರೆಬೇರೆ ಮಾಡ್ತಾನೆ.
4. ಯೇಸು ಸರಿಯಾಗೇ ತೀರ್ಪು ಮಾಡ್ತಾನೆ ಅಂತ ಯೆಶಾಯ 11:3, 4ರಿಂದ ನಮಗೆ ಹೇಗೆ ಗೊತ್ತಾಗುತ್ತೆ? (ಚಿತ್ರ ನೋಡಿ.)
4 ಯೆಹೋವ ದೇವರು ಯೇಸುವನ್ನ ನ್ಯಾಯಾಧೀಶನಾಗಿ ನೇಮಿಸಿದ್ದಾನೆ. ಯೇಸು ಯಾವಾಗ್ಲೂ ಸರಿಯಾಗೇ ನ್ಯಾಯ ತೀರಿಸ್ತಾನೆ ಅಂತ ಬೈಬಲ್ ಹೇಳುತ್ತೆ. (ಯೆಶಾಯ 11:3, 4 ಓದಿ.) ನಾವು ಪ್ರತಿದಿನ ಹೇಗೆ ಯೋಚಿಸ್ತೀವಿ, ಹೇಗೆ ಮಾತಾಡ್ತೀವಿ ಮತ್ತು ಹೇಗೆ ನಡ್ಕೊಳ್ತೀವಿ ಅನ್ನೋದನ್ನ ಯೇಸು ಗಮನಿಸ್ತಿದ್ದಾನೆ. ಅಷ್ಟೇ ಅಲ್ಲ, ಅಭಿಷಿಕ್ತರ ಬಗ್ಗೆ ಏನು ಯೋಚಿಸ್ತೀವಿ, ಮಾತಾಡ್ತೀವಿ ಮತ್ತು ಅವ್ರ ಜೊತೆ ಹೇಗೆ ನಡ್ಕೊಳ್ತೀವಿ ಅನ್ನೋದನ್ನೂ ನೋಡ್ತಿದ್ದಾನೆ. (ಮತ್ತಾ. 12:36, 37; 25:40) ಅಭಿಷಿಕ್ತರು ಮಾಡೋ ಕೆಲಸಕ್ಕೆ ಯಾರು ಬೆಂಬಲ ಕೊಡ್ತಿದ್ದಾರೆ, ಯಾರು ಕೊಡ್ತಿಲ್ಲ ಅಂತ ಯೇಸುಗೆ ಗೊತ್ತಾಗುತ್ತೆ.a ಹಾಗಾದ್ರೆ ನಾವು ಅವ್ರಿಗೆ ಹೇಗೆ ಬೆಂಬಲ ಕೊಡಬಹುದು? ನಾವು ಸಿಹಿಸುದ್ದಿ ಸಾರೋದೇ ಅಭಿಷಿಕ್ತರಿಗೆ ಬೆಂಬಲ ಕೊಡೋ ಮುಖ್ಯ ವಿಧಾನ! ಈ ಕೆಲಸ ಮಾಡಿದ್ರೆ ಯೇಸು ನಮಗೆ ‘ನೀತಿವಂತರು’ ಅಂತ ತೀರ್ಪು ಕೊಡ್ತಾನೆ. ಅಷ್ಟೇ ಅಲ್ಲ, ನಮಗೆ ಭೂಮಿಯಲ್ಲಿ ‘ಶಾಶ್ವತವಾಗಿ ಜೀವಿಸೋ’ ಅವಕಾಶನೂ ಸಿಗುತ್ತೆ. (ಮತ್ತಾ. 25:46; ಪ್ರಕ. 7:16, 17) ನಿಯತ್ತಿಂದ ಯೆಹೋವನ ಸೇವೆ ಮಾಡೋರಿಗೆ ಎಂಥ ದೊಡ್ಡ ಆಶೀರ್ವಾದ ಅಲ್ವಾ? ಹಾಗಾಗಿ ಮಹಾ ಸಂಕಟದವರೆಗೂ ಅದಾದ್ಮೇಲೂ ಯೆಹೋವನಿಗೆ ನಿಯತ್ತಿಂದ ಸೇವೆ ಮಾಡೋಣ. ಆಗ “ಜೀವದ ಪುಸ್ತಕದಲ್ಲಿ” ನಮ್ಮ ಹೆಸ್ರು ಇರುತ್ತೆ.—ಪ್ರಕ. 20:15.
5. (ಎ) ಕುರಿಗಳ ಮತ್ತು ಆಡುಗಳ ಉದಾಹರಣೆಯಿಂದ ನಾವೇನು ಕಲಿತೀವಿ? (ಬಿ) ಈ ಉದಾಹರಣೆಯಿಂದ ಯಾರಿಗೆಲ್ಲ ಪ್ರಯೋಜನ ಆಗುತ್ತೆ?
5 ನಿಯತ್ತಾಗಿ ಇದ್ದೀರ ಅಂತ ತೋರಿಸ್ಕೊಡಿ. ಯೇಸು ಕುರಿಗಳ ಮತ್ತು ಆಡುಗಳ ಉದಾಹರಣೆಯನ್ನ ಮುಖ್ಯವಾಗಿ ಭೂಮಿಯಲ್ಲಿ ಜೀವಿಸೋ ನಿರೀಕ್ಷೆ ಇರೋರಿಗೆ ಹೇಳಿದನು. ಅವರು ನಿಯತ್ತಾಗಿ ಇದ್ದಾರೆ ಅಂತ ಹೇಗೆ ತೋರಿಸ್ಕೊಡ್ತಿದ್ದಾರೆ? ಇವರು ಸಿಹಿಸುದ್ದಿ ಸಾರುತ್ತಾ ಅಭಿಷಿಕ್ತರಿಗೆ ಬೆಂಬಲ ಕೊಡೋದಷ್ಟೇ ಅಲ್ಲ, ನಮ್ಮನ್ನ ನಡಿಸೋಕೆ ಯೇಸು ಆರಿಸ್ಕೊಂಡಿರೋ ಅಭಿಷಿಕ್ತರ ಚಿಕ್ಕ ಗುಂಪಿನ ಮಾತನ್ನೂ ಕೇಳ್ತಾರೆ. (ಮತ್ತಾ. 24:45) ಯೇಸು ಉದಾಹರಣೆಯಲ್ಲಿ ಕೊಟ್ಟ ಎಚ್ಚರಿಕೆನ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರೋರೂ ಪಾಲಿಸಬೇಕು. ಯಾಕೆ? ಯಾಕಂದ್ರೆ ಅವರು ಹೇಗೆ ಮಾತಾಡ್ತಾರೆ, ಯೋಚಿಸ್ತಾರೆ ಮತ್ತು ನಡ್ಕೊಳ್ತಾರೆ ಅಂತ ಯೇಸು ಗಮನಿಸ್ತಾ ಇರ್ತಾನೆ. ಹಾಗಾಗಿ ಅವರು ನಿಯತ್ತಾಗಿ ಇದ್ದಾರೆ ಅಂತ ತೋರಿಸ್ಕೊಡಬೇಕು. ಯೇಸು ಅಭಿಷಿಕ್ತರನ್ನ ಎಚ್ಚರಿಸೋಕೆ ಅಂತಾನೇ ಮುಂದೆ ಬರೋ ಎರಡು ಉದಾಹರಣೆಗಳನ್ನ ಹೇಳಿದನು. ಅದು ಮತ್ತಾಯ 25ನೇ ಅಧ್ಯಾಯದಲ್ಲಿ ಇದೆ. ಹಾಗಾಗಿ ನಾವು ಬುದ್ಧಿವಂತ ಮತ್ತು ಮೂರ್ಖ ಕನ್ಯೆಯರ ಉದಾಹರಣೆ ನೋಡೋಣ.
ಬುದ್ಧಿವಂತ ಮತ್ತು ಮೂರ್ಖ ಕನ್ಯೆಯರು
6. ಐದು ಕನ್ಯೆಯರು ಬುದ್ಧಿವಂತೆಯರಾಗಿದ್ರು ಅಂತ ನಮಗೆ ಹೇಗೆ ಗೊತ್ತು? (ಮತ್ತಾಯ 25:6-10)
6 ಕನ್ಯೆಯರ ಉದಾಹರಣೆಯಲ್ಲಿ ಯೇಸು ಮದುಮಗನಿಗಾಗಿ ಕಾಯ್ತಿದ್ದ ಹತ್ತು ಕನ್ಯೆಯರ ಬಗ್ಗೆ ಹೇಳಿದನು. (ಮತ್ತಾ. 25:1-4) ಇವ್ರೆಲ್ರೂ ಅವನ ಜೊತೆ ಮದುವೆ ಊಟಕ್ಕೆ ಹೋಗೋಕೆ ಕಾಯ್ತಾ ಇದ್ರು. ಇವ್ರಲ್ಲಿ ಐದು ಜನ “ಬುದ್ಧಿವಂತರಾಗಿದ್ರು” ಇನೈದು ಜನ “ಮೂರ್ಖರಾಗಿದ್ರು.” ಬುದ್ಧಿವಂತ ಕನ್ಯೆಯರು ತಯಾರಾಗಿದ್ರು. ಅದು ನಮಗೆ ಹೇಗೆ ಗೊತ್ತಾಗುತ್ತೆ? ಮದುಮಗ ಬರೋಕೆ ಎಷ್ಟು ಹೊತ್ತಾದ್ರೂ ಅವರು ಕಾಯೋಕೆ ರೆಡಿಯಾಗಿದ್ರು. ಅದಕ್ಕೆ ಅವರು ದೀಪ ತಂದಿದ್ರು, ಒಂದುವೇಳೆ ಮದುಮಗ ಬರೋಕೆ ತಡರಾತ್ರಿ ಆದ್ರೂ ಬೇಕಾಗುತ್ತೆ ಅಂತ ಸ್ವಲ್ಪ ಜಾಸ್ತಿನೇ ಎಣ್ಣೆ ತಂದಿದ್ರು. (ಮತ್ತಾಯ 25:6-10 ಓದಿ.) ಅದಕ್ಕೇ ಮದುಮಗ ಬಂದಾಗ ಈ ಬುದ್ಧಿವಂತ ಕನ್ಯೆಯರು ಅವನ ಜೊತೆ ಮದುವೆ ಊಟಕ್ಕೆ ಹೋದ್ರು. ಆ ಕನ್ಯೆಯರ ತರನೇ ಅಭಿಷಿಕ್ತ ಕ್ರೈಸ್ತರು ತಯಾರಾಗಿರಬೇಕು. ಅವರು ಹೀಗೆ ಮದುಮಗನಾಗಿರೋ ಕ್ರಿಸ್ತ ಬರೋ ತನಕ ತಯಾರಾಗಿದ್ರೆ ಯೇಸು ಅವ್ರಿಗೆ ಬಹುಮಾನ ಕೊಡ್ತಾನೆ.b (ಪ್ರಕ. 7:1-3) ಹಾಗಿದ್ರೆ ಆ ಮೂರ್ಖ ಕನ್ಯೆಯರ ಕಥೆ ಏನಾಯ್ತು?
7. ಉಳಿದ ಐದು ಕನ್ಯೆಯರು ಮೂರ್ಖರಾಗಿದ್ರು ಅಂತ ನಾವ್ಯಾಕೆ ಹೇಳಬಹುದು?
7 ಬುದ್ಧಿವಂತ ಕನ್ಯೆಯರ ತರ ಈ ಐದು ಮೂರ್ಖ ಕನ್ಯೆಯರು ಸಿದ್ಧರಾಗಿರಲಿಲ್ಲ. ಅವ್ರ ದೀಪ ಆರಿಹೋಗ್ತಾ ಇತ್ತು, ಎಣ್ಣೆ ಖಾಲಿ ಆಗ್ತಾ ಇತ್ತು. ಹೋಗ್ಲಿ, ಎಣ್ಣೆನಾದ್ರೂ ಜಾಸ್ತಿ ಇತ್ತಾ? ಅದೂ ಇಲ್ಲ! ಅದಕ್ಕೇ ಮದುಮಗ ಇನ್ನೇನು ಬರ್ತಿದ್ದಾನೆ ಅಂತ ಗೊತ್ತಾದಾಗ ಎಣ್ಣೆ ತರೋಕೆ ಹೋದ್ರು. ಅವರು ವಾಪಸ್ ಬರೋಷ್ಟರಲ್ಲಿ ಮದುಮಗ ಬಂದ. “ಸಿದ್ಧರಾಗಿದ್ದ ಕನ್ಯೆಯರು ಅವನ ಜೊತೆ ಒಳಗೆ ಮದುವೆ ಊಟಕ್ಕೆ ಹೋದ್ರು. ಬಾಗಿಲನ್ನ ಮುಚ್ಚಿಬಿಟ್ರು.” (ಮತ್ತಾ. 25:10) ಆಮೇಲೆ ಮೂರ್ಖ ಕನ್ಯೆಯರು ಎಣ್ಣೆ ತಗೊಂಡು ವಾಪಸ್ ಬಂದ್ರು, ಅವರೂ ಒಳಗೆ ಬರಬೇಕು ಅಂದ್ರು. ಆದ್ರೆ ಮದುಮಗ “ನೀವು ಯಾರಂತ ನಿಜವಾಗ್ಲೂ ಗೊತ್ತಿಲ್ಲ” ಅಂತ ಹೇಳಿದನು. (ಮತ್ತಾ. 25:11, 12) ಈ ಮೂರ್ಖ ಕನ್ಯೆಯರು ಮೊದ್ಲೇ ತಯಾರಿ ಮಾಡ್ಕೊಂಡಿದ್ರೆ ಇವ್ರಿಗೆ ಇಂಥ ಪರಿಸ್ಥಿತಿ ಬರ್ತಿರಲಿಲ್ಲ. ಈ ಉದಾಹರಣೆಯಿಂದ ಅಭಿಷಿಕ್ತರು ಏನು ಕಲಿಬಹುದು?
8-9. ಕನ್ಯೆಯರ ಉದಾಹರಣೆಯಿಂದ ಅಭಿಷಿಕ್ತರು ಏನು ಕಲಿಬಹುದು? (ಚಿತ್ರ ನೋಡಿ.)
8 ತಯಾರಾಗಿದ್ದೀರ ಅಂತ ತೋರಿಸ್ಕೊಡಿ. ಈ ಉದಾಹರಣೆಯಲ್ಲಿ ಇರೋ ತರ ಅಭಿಷಿಕ್ತರಲ್ಲೂ ಎರಡು ಗುಂಪು ಇರುತ್ತೆ ಅಂತ ಯೇಸು ಹೇಳಿಲ್ಲ. ಅಂದ್ರೆ, ಅಭಿಷಿಕ್ತರಲ್ಲಿ ಸ್ವಲ್ಪ ಜನ ತಯಾರಾಗಿ ಇರ್ತಾರೆ ಇನ್ನು ಸ್ಪಲ್ಪ ಜನ ತಯಾರಾಗಿ ಇರಲ್ಲ ಅಂತ ಯೇಸು ಹೇಳಿಲ್ಲ. ಬದಲಿಗೆ ಅವರು ಕೊನೇವರೆಗೆ ತಯಾರಾಗಿ ಇಲ್ಲ ಅಂದ್ರೆ ಬಹುಮಾನ ಕಳ್ಕೊಂಡು ಬಿಡ್ತಾರೆ ಅಂತ ಹೇಳ್ತಿದ್ದಾನೆ. (ಯೋಹಾ. 14:3, 4) ಈ ತರ ಆದ್ರೆ ಅದು ಎಷ್ಟು ಬೇಜಾರಿನ ವಿಷ್ಯ ಅಲ್ವಾ? ನಮಗೆ ಭೂಮಿ ಮೇಲೆ ಬದುಕೋ ನಿರೀಕ್ಷೆ ಇರಲಿ ಅಥವಾ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ ನಾವೆಲ್ರೂ ಕನ್ಯೆಯರಿಂದ ಒಂದು ವಿಷ್ಯ ಕಲೀಬೇಕು. ಅದೇನಂದ್ರೆ, ನಾವೆಲ್ರೂ ಕೊನೇವರೆಗೂ ಎಚ್ಚರವಾಗಿದ್ದು ಸಿದ್ಧವಾಗಿರಬೇಕು. ಆಗ ಮಾತ್ರ ನಾವು ಕೊನೇವರೆಗೆ ಸಹಿಸ್ಕೊಳ್ಳೋಕೆ ಆಗುತ್ತೆ!—ಮತ್ತಾ. 24:13.
9 ನಾವು ತಯಾರಾಗಿ ಇರೋದು ಎಷ್ಟು ಮುಖ್ಯ ಅಂತ ಯೇಸು ಕನ್ಯೆಯರ ಉದಾಹರಣೆಯಿಂದ ಹೇಳಿದ ಮೇಲೆ ತಲಾಂತು ಉದಾಹರಣೆ ಹೇಳಿದನು. ಇದ್ರಿಂದ ಕಷ್ಟಪಟ್ಟು ಕೆಲಸ ಮಾಡೋದು ಎಷ್ಟು ಮುಖ್ಯ ಅಂತ ಗೊತ್ತಾಗುತ್ತೆ.
ತಲಾಂತು
10. ಇಬ್ರು ಸೇವಕರು ನಿಯತ್ತಾಗಿದ್ರು ಅಂತ ಹೇಗೆ ತೋರಿಸ್ಕೊಟ್ರು? (ಮತ್ತಾಯ 25:19-23)
10 ಈ ಉದಾಹರಣೆಯಲ್ಲಿ ನಿಯತ್ತಾಗಿದ್ದ ಇಬ್ರು ಸೇವಕರ ಬಗ್ಗೆ ಮತ್ತು ಸೋಮಾರಿಯಾಗಿದ್ದ ಒಬ್ಬ ಸೇವಕನ ಬಗ್ಗೆ ಯೇಸು ಹೇಳ್ತಿದ್ದಾನೆ. (ಮತ್ತಾ. 25:14-18) ಈ ಉದಾಹರಣೆಯಲ್ಲಿ ಒಬ್ಬ ಯಜಮಾನ ವಿದೇಶಕ್ಕೆ ಹೋಗೋಕ್ಕಿಂತ ಮುಂಚೆ ತನ್ನ ಸೇವಕರನ್ನ ಕರೆದು ತಲಾಂತನ್ನ ಕೊಟ್ಟು ಅಂದ್ರೆ ತುಂಬ ಹಣ ಕೊಟ್ಟು ಹೋಗ್ತಾನೆ. ಅದ್ರಲ್ಲಿ ಇಬ್ರು ಸೇವಕರು ಯಜಮಾನನಿಗೆ ಹೆಚ್ಚು ಲಾಭ ಬರಲಿ ಅಂತ ಕಷ್ಟಪಟ್ಟು ದುಡಿದು ವ್ಯಾಪಾರ ಮಾಡ್ತಾರೆ. ಯಜಮಾನ ವಾಪಸ್ ಬಂದ ಮೇಲೆ ಅವ್ರನ್ನ ಬಾಯಿತುಂಬ ಹೊಗಳಿ ‘ಬನ್ನಿ, ನನ್ನ ಜೊತೆ ಖುಷಿ ಪಡಿ’ ಅಂತ ಅವ್ರಿಗೆ ಹೇಳಿದನು. (ಮತ್ತಾಯ 25:19-23 ಓದಿ.) ಹಾಗಿದ್ರೆ ಮೂರನೇ ಆಳಿಗೆ ಕೊಟ್ಟ ದುಡ್ಡನ್ನ ಅವನು ಏನು ಮಾಡಿದ? ಅವನಿಗೆ ಏನಾಯ್ತು?
11. ಸೋಮಾರಿ ಸೇವಕನಿಗೆ ಯಜಮಾನ ಏನು ಮಾಡ್ತಾನೆ ಮತ್ತು ಯಾಕೆ?
11 ಮೂರನೇ ಸೇವಕನಿಗೆ ಯಜಮಾನ ಒಂದು ತಲಾಂತನ್ನ ಕೊಟ್ಟು ಅದನ್ನ ಜಾಸ್ತಿ ಮಾಡೋಕೆ ಹೇಳ್ತಾನೆ. ಆದ್ರೆ ಆ ಸೇವಕ ‘ಸೋಮಾರಿ’ ಆಗಿದ್ದ. ಅದಕ್ಕೆ ಅವನು ಆ ಹಣನ ನೆಲ ಅಗೆದು ಬಚ್ಚಿಡ್ತಾನೆ. ಅವನು ಕೆಲಸಾನೂ ಮಾಡ್ಲಿಲ್ಲ, ಏನೂ ಸಂಪಾದಿಸಲಿಲ್ಲ. ಅದಕ್ಕೇ ಯಜಮಾನನಿಗೆ ಕೊಡೋಕೆ ಆ ತಲಾಂತು ಒಂದನ್ನ ಬಿಟ್ರೆ ಬೇರೇನೂ ಇರಲಿಲ್ಲ. ಅವನು ತಾನು ಮಾಡಿದ ತಪ್ಪನ್ನ ಒಪ್ಕೊಂಡು ಕ್ಷಮೆ ಕೇಳಬೇಕಿತ್ತು. ಆದ್ರೆ ಅವನು ಯಜಮಾನನನ್ನೇ “ಆಸೆಬುರುಕ” ಅಂತ ದೂರುತ್ತಾನೆ. ಅವನು ಹೇಳಿದ್ದು ಸುಳ್ಳಾಗಿತ್ತು. ಅದಕ್ಕೇ ಯಜಮಾನನಿಗೆ ತುಂಬ ಕೋಪ ಬಂದು ಅವನ ಹತ್ರ ಇದ್ದ ತಲಾಂತನ್ನೂ ಕಿತ್ಕೊಂಡು ಅವನನ್ನ ಮನೆಯಿಂದ ದೊಬ್ಬಿಬಿಡ್ತಾನೆ.—ಮತ್ತಾ. 25:24, 26-30.
12. ನಿಯತ್ತಾಗಿದ್ದ ಸೇವಕರು ಯಾರನ್ನ ಸೂಚಿಸ್ತಾರೆ?
12 ನಿಯತ್ತಾಗಿದ್ದ ಇಬ್ರು ಸೇವಕರು ನಿಯತ್ತಾಗಿರೋ ಅಭಿಷಿಕ್ತ ಕ್ರೈಸ್ತರನ್ನ ಸೂಚಿಸ್ತಾರೆ. ಈ ಅಭಿಷಿಕ್ತರು ನಿಯತ್ತಾಗಿ ಇರೋದ್ರಿಂದ ‘ಬನ್ನಿ, ಯಜಮಾನನ ಜೊತೆ ಖುಷಿಪಡಿ’ ಅಂತ ಯೇಸು ಹೇಳಿದ್ದಾನೆ. ಇದರರ್ಥ ಸತ್ತವರಲ್ಲಿ ಅಭಿಷಿಕ್ತರನ್ನ ಯೇಸು ‘ಮೊದ್ಲು ಎಬ್ಬಿಸ್ತಾನೆ’ ಮತ್ತು ಅವ್ರಿಗೆ ಸ್ವರ್ಗದಲ್ಲಿ ಬಹುಮಾನ ಸಿಗುತ್ತೆ. (ಮತ್ತಾ. 25:21, 23; ಪ್ರಕ. 20:5ಬಿ) ಆದ್ರೆ ಆ ಸೋಮಾರಿಯಾದ ಆಳಿಂದನೂ ಅಭಿಷಿಕ್ತರಿಗೆ ಕಲಿಯೋಕೆ ಒಂದು ಪಾಠ ಇದೆ. ಅದೇನು?
13-14. ತಲಾಂತುಗಳ ಉದಾಹರಣೆಯಿಂದ ಅಭಿಷಿಕ್ತರು ಏನು ಕಲಿಬಹುದು? (ಚಿತ್ರ ನೋಡಿ.)
13 ಕಷ್ಟಪಟ್ಟು ಕೆಲಸ ಮಾಡ್ತೀರ ಅಂತ ತೋರಿಸ್ಕೊಡಿ. ಕೆಲವು ಅಭಿಷಿಕ್ತರು ಸೋಮಾರಿಗಳಾಗ್ತಾರೆ ಅಂತ ಯೇಸು ತಲಾಂತು ಉದಾಹರಣೆಯಲ್ಲಿ ಹೇಳ್ತಿಲ್ಲ. ಬದಲಿಗೆ ಅವರು ತಮ್ಮ ಉತ್ಸಾಹ ಕಳ್ಕೊಂಡ್ರೆ ಏನಾಗುತ್ತೆ ಅಂತ ಹೇಳ್ತಿದ್ದಾನೆ. ದೇವರು ಅವ್ರನ್ನ ‘ತನ್ನ ಜನರಾಗಿ ಕರೆದು ಆರಿಸ್ಕೊಂಡಿರೋ’ ಸುಯೋಗನ ಅವರು ಉಳಿಸ್ಕೊಳ್ಳಲ್ಲ. ಅಷ್ಟೇ ಅಲ್ಲ ಅವರು ಸ್ವರ್ಗಕ್ಕೆ ಹೋಗೋ ಅವಕಾಶನ ಕಳ್ಕೊಂಡು ಬಿಡ್ತಾರೆ.—2 ಪೇತ್ರ 1:10.
14 ಕನ್ಯೆಯರ ಮತ್ತು ತಲಾಂತುಗಳ ಉದಾಹರಣೆಯಿಂದ ನಾವೇನು ಕಲಿತ್ವಿ? ಅಭಿಷಿಕ್ತರು ತಯಾರಾಗಿರಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಬೇಕು ಅಂತ ಕಲಿತ್ವಿ. ಇದಲ್ಲದೇ ಯೇಸು ಅವ್ರಿಗೆ ಇನ್ನೇನಾದ್ರೂ ಎಚ್ಚರಿಕೆ ಕೊಟ್ಟಿದ್ದಾನಾ? ಹೌದು. ಅದು ಮತ್ತಾಯ 24:40, 41ರಲ್ಲಿದೆ. ಅದನ್ನೀಗ ನೋಡೋಣ.
ದೇವರು ಯಾರನ್ನ “ಆರಿಸ್ಕೊಳ್ತಾನೆ?”
15-16. ಅಭಿಷಿಕ್ತರು ಎಚ್ಚರವಾಗಿ ಇರಬೇಕು ಅಂತ ಮತ್ತಾಯ 24:40, 41ರಿಂದ ಹೇಗೆ ಗೊತ್ತಾಗುತ್ತೆ?
15 ಅಭಿಷಿಕ್ತರಲ್ಲಿ ಯಾರಿಗೆ ಕೊನೆ ಮುದ್ರೆ ಸಿಗುತ್ತೆ? ಇದನ್ನ ಯೇಸು ವಿವರಿಸುತ್ತಾ ಹೊಲದಲ್ಲಿ ಕೆಲಸ ಮಾಡೋ ಇಬ್ರು ಗಂಡಸ್ರ ಬಗ್ಗೆ ಮತ್ತು ಕಲ್ಲಲ್ಲಿ ಧಾನ್ಯ ಬೀಸ್ತಾ ಇರೋ ಇಬ್ರು ಹೆಂಗಸ್ರ ಬಗ್ಗೆ ಹೇಳಿದನು. ಆ ಇಬ್ರು ಹೆಂಗಸ್ರು ಮತ್ತು ಗಂಡಸ್ರು ನೋಡೋಕೆ ಒಂದೇ ತರ ಕೆಲಸ ಮಾಡ್ತಾ ಇದ್ರು. ಆದ್ರೆ ದೇವರು ಅವ್ರಲ್ಲಿ“ಒಬ್ಬನನ್ನ ಆರಿಸ್ಕೊಳ್ತಾನೆ, ಇನ್ನೊಬ್ಬನನ್ನ ಬಿಟ್ಟುಬಿಡ್ತಾನೆ.” (ಮತ್ತಾಯ 24:40, 41 ಓದಿ.) ಇದನ್ನ ಹೇಳಿದ ಮೇಲೆ ಯೇಸು ತನ್ನ ಶಿಷ್ಯರಿಗೆ “ಎಚ್ಚರವಾಗೇ ಇರಿ. ಯಾಕಂದ್ರೆ ನಿಮ್ಮ ಒಡೆಯ ಯಾವ ದಿನ ಬರ್ತಾನೆ ಅಂತ ನಿಮಗೆ ಗೊತ್ತಿಲ್ಲ” ಅಂತ ಹೇಳಿದನು. (ಮತ್ತಾ. 24:42) ನೀವು ಗಮನಿಸಿದ್ರಾ, ಕನ್ಯೆಯರ ಉದಾಹರಣೆ ಹೇಳಿದ ಮೇಲೆನೂ ಯೇಸು ಇದೇ ತರದ ಮಾತುಗಳನ್ನ ಹೇಳಿದನು. (ಮತ್ತಾ. 25:13) ಹಾಗಿದ್ರೆ ಇವೆರಡಕ್ಕೂ ಸಂಬಂಧ ಇದ್ಯಾ? ಸಂಬಂಧ ಇರೋ ತರನೇ ಕಾಣ್ತಿದೆ. ವಿಷ್ಯ ಏನೇ ಆಗಿರಲಿ, ನಿಯತ್ತಾಗಿರೋ ಅಭಿಷಿಕ್ತರನ್ನ ಮಾತ್ರ ಯೆಹೋವ “ಆರಿಸ್ಕೊಳ್ತಾನೆ” ಮತ್ತು ಅವರು ಸ್ವರ್ಗದಲ್ಲಿ ಯೇಸು ಜೊತೆ ಆಳ್ತಾರೆ.—ಯೋಹಾ. 14:3.
16 ಎಚ್ಚರವಾಗಿ ಇದ್ದೀರಂತ ತೋರಿಸ್ಕೊಡಿ. ಯಾವ ಅಭಿಷಿಕ್ತರು ಎಚ್ಚರವಾಗಿ ಇರಲ್ವೋ ಅವ್ರನ್ನ ದೇವರು ‘ಆರಿಸ್ಕೊಳ್ಳಲ್ಲ.’ (ಮತ್ತಾ. 24:31) ಹಾಗಂತ ಅಭಿಷಿಕ್ತರು ಮಾತ್ರ ಎಚ್ಚರವಾಗಿ ಇದ್ರೆ ಸಾಕಾ? ಇಲ್ಲ. ಯೆಹೋವನನ್ನ ಆರಾಧಿಸ್ತಿರೋ ನಾವೆಲ್ರೂ ಎಚ್ಚರವಾಗಿ ಇರಬೇಕು ಮತ್ತು ನಿಯತ್ತಿಂದ ಯೆಹೋವನ ಸೇವೆ ಮಾಡಬೇಕು.
17. ಯಾರಾದ್ರೂ ಇತ್ತೀಚೆಗೆ ಅಭಿಷಿಕ್ತರಾದ್ರೂ ನಾವು ಯಾಕೆ ಅದ್ರ ಬಗ್ಗೆ ಜಾಸ್ತಿ ಯೋಚ್ನೆ ಮಾಡೋಕೆ ಹೋಗಲ್ಲ?
17 ಯೆಹೋವ ಯಾರನ್ನೇ ಆರಿಸ್ಕೊಳ್ಳಲಿ ನ್ಯಾಯವಾಗೇ ಅದನ್ನ ಮಾಡ್ತಾನೆ ಅಂತ ನಾವು ಪೂರ್ತಿಯಾಗಿ ನಂಬ್ತೀವಿ. ನಿಯತ್ತಾಗಿರೋ ಯಾರನ್ನಾದ್ರೂ ಯೆಹೋವ ಇತ್ತೀಚಿಗೆ ಆಯ್ಕೆ ಮಾಡಿದ್ರೆ ನಾವು ಅದ್ರ ಬಗ್ಗೆ ಜಾಸ್ತಿ ಯೋಚ್ನೆ ಮಾಡೋಕೆ ಹೋಗಲ್ಲ.c ಯಾಕಂದ್ರೆ ದ್ರಾಕ್ಷಿ ತೋಟದಲ್ಲಿ ಸಂಜೆ ಐದು ಗಂಟೆಗೆ ಕೆಲಸ ಮಾಡೋಕೆ ಹೋದ ಕೆಲಸಗಾರರ ಬಗ್ಗೆ ಯೇಸು ಹೇಳಿದ್ದು ನಮಗೆ ಗೊತ್ತಿದೆ. (ಮತ್ತಾ. 20:1-16) ಅವರು ಸಂಜೆ ಕೆಲಸ ಮಾಡೋಕೆ ಹೋದ್ರೂ ಬೆಳಿಗ್ಗೆಯಿಂದ ಕೆಲಸ ಮಾಡಿದವ್ರಿಗೆ ಸಿಕ್ಕ ಕೂಲಿನೇ ಇವ್ರಿಗೂ ಸಿಕ್ತು ಅಂತ ಆ ಉದಾಹರಣೆ ಹೇಳುತ್ತೆ. ಅದೇ ತರ ಯಾರಾದ್ರೂ ಇತ್ತೀಚೆಗೆ ಅಭಿಷಿಕ್ತರಾಗಿದ್ರೂ ಅವರು ಕೊನೇ ತನಕ ನಿಯತ್ತಾಗಿರೋದಾದ್ರೆ ಅವ್ರಿಗೂ ಸ್ವರ್ಗಕ್ಕೆ ಹೋಗೋ ಬಹುಮಾನವನ್ನ ಯೆಹೋವ ಕೊಟ್ಟೇ ಕೊಡ್ತಾನೆ.
ಎಚ್ಚರಿಕೆಗಳಿಗೆ ಯಾವಾಗ್ಲೂ ಗಮನಕೊಡಿ
18-19. ಈ ಉದಾಹರಣೆಗಳಿಂದ ನಾವೇನು ಕಲಿತ್ವಿ?
18 ಆಡುಗಳ ಮತ್ತು ಕುರಿಗಳ ಉದಾಹರಣೆಯಿಂದ ನಾವೇನು ಕಲಿತ್ವಿ? ಭೂಮಿಯಲ್ಲಿ ಬದುಕೋ ನಿರೀಕ್ಷೆ ಇರೋರು ಯೆಹೋವನಿಗೆ ಈಗಷ್ಟೇ ಅಲ್ಲ, ಮಹಾ ಸಂಕಟದ ಸಮಯದಲ್ಲೂ ನಿಯತ್ತಾಗಿರಬೇಕು. ಹಾಗೆ ನಿಯತ್ತಾಗಿ ಯಾರು ಇರ್ತಾರೋ ಅವ್ರಿಗೆ ಯೇಸು “ಶಾಶ್ವತ ಜೀವ” ಪಡ್ಕೊಳ್ಳೋ ಅವಕಾಶ ಕೊಡ್ತಾನೆ.—ಮತ್ತಾ. 25:46.
19 ಇನ್ನೆರಡು ಉದಾಹರಣೆಗಳಿಂದ ಅಭಿಷಿಕ್ತರು ಏನು ಕಲಿಬಹುದು ಅಂತ ನೋಡಿದ್ವಿ. ಕನ್ಯೆಯರ ಉದಾಹರಣೆಯಲ್ಲಿ ಬುದ್ಧಿವಂತೆಯರಾದ ಕನ್ಯೆಯರು ಮದುಮಗ ಬರೋಕೆ ಎಷ್ಟು ತಡ ಆದ್ರೂ ಅವನು ಬರೋವರೆಗೂ ಕಾಯೋಕೆ ರೆಡಿ ಇದ್ರು. ಹೀಗೆ ಅವರು ತಯಾರಾಗಿದ್ದಾರೆ ಅಂತ ತೋರಿಸಿಕೊಟ್ರು. ಆದ್ರೆ ಇನ್ನೂ ಐದು ಮೂರ್ಖ ಕನ್ಯೆಯರು ತಯಾರಾಗಿ ಇರಲಿಲ್ಲ. ಅದಕ್ಕೆ ಮದುಮಗ ಬಂದಾಗ ಅವ್ರನ್ನ ಮದುವೆ ಊಟಕ್ಕೆ ಕರ್ಕೊಂಡು ಹೋಗೋಕೆ ಮದುಮಗ ಒಪ್ಪಲಿಲ್ಲ. ಹಾಗಾಗಿ ಯೇಸು ಈ ಲೋಕಕ್ಕೆ ಅಂತ್ಯ ತರೋ ತನಕ ನಾವು ತಯಾರಾಗಿ ಕಾಯ್ತಾ ಇರಬೇಕು. ತಲಾಂತುಗಳ ಉದಾಹರಣೆಯಿಂದ ನಾವೇನು ಕಲಿತ್ವಿ? ಕಷ್ಟಪಟ್ಟು ಕೆಲಸ ಮಾಡಿದ ಆ ಇಬ್ರು ಕೆಲಸಗಾರರನ್ನ ಯಜಮಾನ ಹೊಗಳಿದ. ಇನ್ನೊಬ್ಬ ಸೇವಕ ಸೋಮಾರಿ ಆಗಿದ್ರಿಂದ ಅವನನ್ನ ಮನೆಯಿಂದ ದೊಬ್ಬಿದ. ಇದ್ರಿಂದ ನಾವೇನು ಕಲಿತೀವಿ? ಅಂತ್ಯ ಬರೋ ತನಕ ನಾವು ಯೆಹೋವನ ಸೇವೆಯಲ್ಲಿ ಬಿಜ಼ಿ ಆಗಿರಬೇಕು. ಅಷ್ಟೇ ಅಲ್ಲ ಕೊನೇದಾಗಿ, ಅಭಿಷಿಕ್ತರು ಎಚ್ಚರವಾಗಿದ್ರೆನೇ ಅವ್ರನ್ನ ದೇವರು “ಆರಿಸ್ಕೊಳ್ತಾನೆ” ಅಂತ ಕಲಿತ್ವಿ. ಆಗ ಅವ್ರಿಗೆ ಸ್ವರ್ಗಕ್ಕೆ ಹೋಗೋ ಬಹುಮಾನ ಸಿಗುತ್ತೆ. ಇವ್ರೆಲ್ಲ ಯೇಸು ಜೊತೆ ಸ್ವರ್ಗದಲ್ಲಿ ‘ಒಂದಾಗೋಕೆ’ ಕಾಯ್ತಾ ಇದ್ದಾರೆ. ಅರ್ಮಗೆದೋನ್ ಯುದ್ಧ ಆದ್ಮೇಲೆ ಕುರಿಮರಿಯಾದ ಯೇಸುವಿನ ಮದುವೆ ಆಗುತ್ತೆ, ಆಗ ಅಭಿಷಿಕ್ತರು ಯೇಸುವಿನ ಮದುಮಗಳಾಗಿರ್ತಾರೆ.—2 ಥೆಸ. 2:1; ಪ್ರಕ. 19:9.
20. ನಾವು ಎಚ್ಚರಿಕೆಗಳನ್ನ ಗಮನಕೊಟ್ಟು ಪಾಲಿಸಿದ್ರೆ ಯೆಹೋವ ಏನು ಮಾಡ್ತಾನೆ?
20 ಯೆಹೋವನ ನ್ಯಾಯತೀರ್ಪು ಓಡೋಡಿ ಬರ್ತಿದೆ. ಆದ್ರೆ ನಾವು ಹೆದರಬೇಕಾಗಿಲ್ಲ, ಯಾಕಂದ್ರೆ ನಾವು ನಿಯತ್ತಾಗಿದ್ರೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಯೆಹೋವ ಕೊಡ್ತಾನೆ. ಇದ್ರಿಂದ ನಾವು ಅಂತ್ಯನ ಪಾರಾಗಿ “ಮನುಷ್ಯಕುಮಾರನ ಮುಂದೆ ನಿಲ್ಲೋಕಾಗುತ್ತೆ.” (2 ಕೊರಿಂ. 4:7; ಲೂಕ 21:36) ಹಾಗಾದ್ರೆ ನಾವೇನು ಮಾಡಬೇಕು? ನಮಗೆ ಭೂಮಿಲಿ ಜೀವಿಸೋ ನಿರೀಕ್ಷೆ ಇರಲಿ ಅಥವಾ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ, ಯೇಸು ಉದಾಹರಣೆಗಳಿಂದ ನಮಗೆ ಕಲಿಸಿದ ಪಾಠನ ನಾವು ಪಾಲಿಸಬೇಕು. ಆಗ ಯೆಹೋವನಿಗೆ ನಮ್ಮ ಬಗ್ಗೆ ಖುಷಿಯಾಗುತ್ತೆ. ಆತನ ಅಪಾರ ಕೃಪೆಯಿಂದ ನಮ್ಮ ಹೆಸ್ರು ‘ಜೀವದ ಪುಸ್ತಕದಲ್ಲಿ ಬರೆದಿರುತ್ತೆ!’—ದಾನಿ. 12:1; ಪ್ರಕ. 3:5.
ಗೀತೆ 146 ನನಗೂ ಮಾಡಿದಂತೆ
a ಮೇ 2024ರ ಕಾವಲಿನಬುರುಜುವಿನಲ್ಲಿರೋ “ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?” ಅನ್ನೋ ಲೇಖನ ನೋಡಿ.
b ಮಾರ್ಚ್ 15, 2015ರ ಕಾವಲಿನಬುರುಜುವಿನಲ್ಲಿರೋ “‘ಸದಾ ಎಚ್ಚರವಾಗಿ’ ಇರುವಿರಾ?” ಅನ್ನೋ ಲೇಖನ ನೋಡಿ.
d ಚಿತ್ರ ವಿವರಣೆ: ಸೇವೆಯಲ್ಲಿ ಸಿಕ್ಕಿದ್ದ ಒಬ್ಬ ಯುವ ಸ್ತ್ರೀಗೆ ಒಬ್ಬ ಅಭಿಷಿಕ್ತ ಸಹೋದರಿ ಸ್ಟಡಿ ಮಾಡ್ತಿದ್ದಾರೆ.