ಜಾಗರೂಕರೂ ಕಾರ್ಯತತ್ಪರರೂ ಆಗಿರಿ!
“ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದಎಚ್ಚರವಾಗಿರ್ರಿ.”—ಮತ್ತಾಯ 25:13.
1. ಯಾವ ವಿಷಯವನ್ನು ಅಪೊಸ್ತಲ ಯೋಹಾನನು ಎದುರುನೋಡುತ್ತಿದ್ದನು?
ಬೈಬಲಿನ ಕೊನೆಯ ಸಂವಾದದಲ್ಲಿ, ಯೇಸು ವಾಗ್ದಾನಿಸಿದ್ದು: “ಬೇಗ ಬರುತ್ತೇನೆ.” ಅವನ ಅಪೊಸ್ತಲನಾದ ಯೋಹಾನನು ಉತ್ತರಿಸಿದ್ದು: “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.” ಯೇಸು ಬರುವನೆಂಬ ವಿಷಯದಲ್ಲಿ ಈ ಅಪೊಸ್ತಲನಿಗೆ ಯಾವ ಸಂಶಯವೂ ಇರಲಿಲ್ಲ. ಏಕೆಂದರೆ, “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷ [“ಸಾನ್ನಿಧ್ಯ,” NW, ಗ್ರೀಕ್ ಭಾಷೆಯಲ್ಲಿ, ಪರೋಸಿಯ]ನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” ಎಂದು ಯೇಸುವನ್ನು ಕೇಳಿದ ಅಪೊಸ್ತಲರಲ್ಲಿ ಯೋಹಾನನು ಒಬ್ಬನಾಗಿದ್ದನು. ಹೌದು, ಯೋಹಾನನು ಪೂರ್ಣಭರವಸೆಯಿಂದ ಯೇಸುವಿನ ಭಾವೀ ಸಾನ್ನಿಧ್ಯವನ್ನು ಎದುರುನೋಡಿದನು.—ಪ್ರಕಟನೆ 22:20; ಮತ್ತಾಯ 24:3.
2. ಯೇಸುವಿನ ಸಾನ್ನಿಧ್ಯದ ವಿಷಯದಲ್ಲಿ, ಚರ್ಚುಗಳ ಪರಿಸ್ಥಿತಿಯು ಏನಾಗಿದೆ?
2 ಅಂತಹ ಭರವಸೆಯು ಇಂದು ವಿರಳವಾಗಿದೆ. ಯೇಸುವಿನ ‘ಬರುವಿಕೆಯ’ ಕುರಿತು ಅನೇಕ ಚರ್ಚುಗಳಲ್ಲಿ ಒಂದು ಅಧಿಕೃತ ನಂಬಿಕೆಯಿರುವುದಾದರೂ, ಅದನ್ನು ನಿಜವಾಗಿಯೂ ನಿರೀಕ್ಷಿಸುವ ಅವರ ಸದಸ್ಯರ ಸಂಖ್ಯೆ ಕೊಂಚವೇ. ಯೇಸು ಬರುವುದೇ ಇಲ್ಲವೊ ಎಂಬಂತೆ ಅವರು ಜೀವಿಸುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಪರೋಸಿಯ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಚರ್ಚಿನ ಜೀವನರೀತಿ ಮತ್ತು ಆಚಾರವಿಚಾರಗಳಲ್ಲಿ ಪರೋಸಿಯದ ನಿರೀಕ್ಷೆಯು ಸಾಕಷ್ಟು ಪ್ರಭಾವವನ್ನು ಬೀರಿರುವುದಿಲ್ಲ. . . . ಚರ್ಚು ಪಶ್ಚಾತ್ತಾಪ ಮತ್ತು ಸುವಾರ್ತೆಯ ಸಾರುವಿಕೆಯಂತಹ ಕೆಲಸಗಳನ್ನು ತೀವ್ರವಾದ ತುರ್ತಿನ ಭಾವದಲ್ಲಿ ಮಾಡಬೇಕಾಗಿದ್ದರೂ, ಆ ಭಾವನೆಯು ಸಂಪೂರ್ಣವಾಗಿ ಕಳೆದುಹೋಗಿಲ್ಲವಾದರೂ ದುರ್ಬಲಗೊಂಡಿದೆ.” ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ!
3. (ಎ) ಪರೋಸಿಯದ ಕುರಿತು ನಿಜ ಕ್ರೈಸ್ತರ ಅನಿಸಿಕೆ ಏನು? (ಬಿ) ವಿಶೇಷವಾಗಿ ಯಾವ ವಿಷಯವನ್ನು ನಾವು ಈಗ ಪರಿಗಣಿಸುವೆವು?
3 ಯೇಸುವಿನ ನಿಜ ಶಿಷ್ಯರು, ಈ ಪ್ರಚಲಿತ ದುಷ್ಟ ವ್ಯವಸ್ಥೆಯ ಅಂತ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ನಿಷ್ಠೆಯಿಂದ ಹಾಗೆ ಮಾಡುವಾಗ, ಯೇಸುವಿನ ಸಾನ್ನಿಧ್ಯದಲ್ಲಿ ಒಳಗೂಡಿರುವ ಎಲ್ಲ ವಿಷಯಗಳ ಕಡೆಗೆ ನಾವು ಸರಿಯಾದ ದೃಷ್ಟಿಕೋನವನ್ನು ಪಡೆದಿದ್ದು, ಅದಕ್ಕನುಗುಣವಾಗಿ ಕ್ರಿಯೆಗೈಯಬೇಕು. ಇದು ‘ಕಡೇ ವರೆಗೂ ತಾಳಿಕೊಂಡು ರಕ್ಷಣೆಹೊಂದಲು’ ನಮಗೆ ಸಹಾಯಮಾಡುವುದು. (ಮತ್ತಾಯ 24:13) ಮತ್ತಾಯ 24 ಮತ್ತು 25ನೆಯ ಅಧ್ಯಾಯಗಳಲ್ಲಿರುವ ಪ್ರವಾದನೆಯನ್ನು ಯೇಸು ಕೊಡುವಾಗ, ಅದರೊಂದಿಗೆ ನೀಡಿದ ವಿವೇಕಯುತ ಬುದ್ಧಿವಾದವನ್ನು ನಮ್ಮ ಶಾಶ್ವತ ಪ್ರಯೋಜನಕ್ಕಾಗಿ ನಾವು ಅನ್ವಯಿಸಿಕೊಳ್ಳಬಹುದು. ನಿಮಗೆ ಬಹುಶಃ ಗೊತ್ತಿರುವಂತಹ ಸಾಮ್ಯಗಳು 25ನೆಯ ಅಧ್ಯಾಯದಲ್ಲಿವೆ. ಒಂದು, ಹತ್ತು ಮಂದಿ ಕನ್ಯೆಯರ ಕುರಿತು (ಬುದ್ಧಿವಂತೆಯರು ಹಾಗೂ ಬುದ್ಧಿಯಿಲ್ಲದ ಕನ್ಯೆಯರು) ಮತ್ತು ಇನ್ನೊಂದು ತಲಾಂತುಗಳ ಸಾಮ್ಯವಾಗಿದೆ. (ಮತ್ತಾಯ 25:1-30) ಈ ದೃಷ್ಟಾಂತಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
ಆ ಐದು ಮಂದಿ ಕನ್ಯೆಯರಂತೆ ಜಾಗರೂಕರಾಗಿರಿ!
4. ಕನ್ಯೆಯರ ಸಾಮ್ಯದ ಸಾರಾಂಶವೇನು?
4 ಮತ್ತಾಯ 25:1-13ರಲ್ಲಿರುವ ಕನ್ಯೆಯರ ಸಾಮ್ಯವನ್ನು ಮತ್ತೆ ಓದಲು ನೀವು ಬಯಸಬಹುದು. ಅದರ ಹಿನ್ನೆಲೆಯು ಒಂದು ಆಡಂಬರದ ಯೆಹೂದಿ ವಿವಾಹೋತ್ಸವವಾಗಿದೆ. ಅಲ್ಲಿ, ವರನು ವಧುವಿನ ತಂದೆಯ ಮನೆಗೆ ಹೋಗಿ, ಅವಳನ್ನು ವರನ (ಇಲ್ಲವೆ ಅವನ ತಂದೆಯ) ಮನೆಗೆ ಕರೆದುಕೊಂಡು ಬರುತ್ತಾನೆ. ಅಂತಹ ಮೆರವಣಿಗೆಯಲ್ಲಿ ಸಂಗೀತಗಾರರು ಮತ್ತು ಗಾಯಕರು ಸೇರಿದ್ದು, ಅದರ ಆಗಮನದ ಸಮಯವು ನಿಖರವಾಗಿ ತಿಳಿದಿರುವುದಿಲ್ಲ. ಸಾಮ್ಯದಲ್ಲಿ, ಹತ್ತು ಮಂದಿ ಕನ್ಯೆಯರು ವರನ ಆಗಮನಕ್ಕಾಗಿ ರಾತ್ರಿಯ ವರೆಗೆ ಕಾದರು. ಅವರಲ್ಲಿ ಐದು ಮಂದಿ ಕನ್ಯೆಯರು ಮೂರ್ಖತನದಿಂದ ಸಾಕಷ್ಟು ಎಣ್ಣೆಯನ್ನು ತರದ ಕಾರಣ, ಅದನ್ನು ಕೊಂಡುಕೊಳ್ಳಲು ಹೋಗಬೇಕಾಗಿತ್ತು. ಉಳಿದ ಐದು ಮಂದಿ ಕನ್ಯೆಯರು ವಿವೇಕಯುತವಾಗಿ ಪಾತ್ರೆಗಳಲ್ಲಿ ಹೆಚ್ಚಿನ ಎಣ್ಣೆಯನ್ನು ತಂದ ಕಾರಣ, ಕಾಯುವಾಗ ಅಗತ್ಯವಾದಲ್ಲಿ ತಮ್ಮ ದೀಪಗಳಿಗೆ ಅದನ್ನು ತುಂಬಿಕೊಳ್ಳಬಹುದಿತ್ತು. ವರನು ಆಗಮಿಸಿದಾಗ ಈ ಐವರು ಮಾತ್ರ ಸಿದ್ಧರಾಗಿ ಅಲ್ಲಿದ್ದರು. ಆದಕಾರಣ, ಅವರು ಮಾತ್ರ ಉತ್ಸವದಲ್ಲಿ ಭಾಗವಹಿಸುವಂತೆ ಅನುಮತಿಸಲ್ಪಟ್ಟರು. ಐದು ಮಂದಿ ಬುದ್ಧಿಯಿಲ್ಲದ ಕನ್ಯೆಯರು ಹಿಂದಿರುಗಿದಾಗ, ಒಳಪ್ರವೇಶಿಸುವ ಕಾಲ ಮಿಂಚಿಹೋಗಿತ್ತು.
5. ಕನ್ಯೆಯರ ಸಾಮ್ಯದ ಸಾಂಕೇತಿಕ ಅರ್ಥದ ಮೇಲೆ ಯಾವ ವಚನಗಳು ಬೆಳಕು ಬೀರುತ್ತವೆ?
5 ಈ ಸಾಮ್ಯದ ಅನೇಕ ಅಂಶಗಳಿಗೆ ಸಾಂಕೇತಿಕ ಅರ್ಥವಿರುವುದಾಗಿ ನಾವು ತಿಳಿದುಕೊಳ್ಳಬಹುದು. ಉದಾಹರಣೆಗೆ, ಶಾಸ್ತ್ರಗಳಲ್ಲಿ ಯೇಸು ಒಬ್ಬ ಮದಲಿಂಗನೋಪಾದಿ ಗುರುತಿಸಲ್ಪಟ್ಟಿದ್ದಾನೆ. (ಯೋಹಾನ 3:28-30) ಯಾರಿಗಾಗಿ ಮದುವೆಯ ಉತ್ಸವವು ಸಿದ್ಧಗೊಳಿಸಲ್ಪಟ್ಟಿತ್ತೊ, ಆ ರಾಜನ ಮಗನಿಗೆ ಯೇಸು ತನ್ನನ್ನು ಹೋಲಿಸಿಕೊಂಡನು. (ಮತ್ತಾಯ 22:1-14) ಮತ್ತು ಬೈಬಲು ಕ್ರಿಸ್ತನನ್ನು ಒಬ್ಬ ಗಂಡನಿಗೆ ಹೋಲಿಸುತ್ತದೆ. (ಎಫೆಸ 5:23) ರಸಕರವಾಗಿ ಬೇರೆ ಕಡೆಗಳಲ್ಲಿ ಅಭಿಷಿಕ್ತ ಕ್ರೈಸ್ತರು ಕ್ರಿಸ್ತನ “ಮದಲಗಿತ್ತಿ” ಎಂಬುದಾಗಿ ವರ್ಣಿಸಲ್ಪಡುತ್ತಾರಾದರೂ, ಈ ಸಾಮ್ಯದಲ್ಲಿ ವಧುವಿನ ಉಲ್ಲೇಖವಿರುವುದಿಲ್ಲ. (ಯೋಹಾನ 3:29; ಪ್ರಕಟನೆ 19:7; 21:2, 9) ಆದರೆ, ಅದು ಹತ್ತು ಮಂದಿ ಕನ್ಯೆಯರ ಕುರಿತು ಮಾತಾಡುತ್ತದೆ, ಮತ್ತು ಅಭಿಷಿಕ್ತರು, ಕ್ರಿಸ್ತನು ವರಿಸಲಿರುವ ಕನ್ಯೆಗೆ ಹೋಲಿಸಲ್ಪಟ್ಟಿದ್ದಾರೆ.—2 ಕೊರಿಂಥ 11:2.a
6. ಕನ್ಯೆಯರ ಸಾಮ್ಯವನ್ನು ಕೊನೆಗೊಳಿಸುವಾಗ, ಯೇಸು ಯಾವ ಪ್ರೋತ್ಸಾಹನೆಯನ್ನು ಕೊಟ್ಟನು?
6 ಇಂತಹ ವಿವರಗಳು ಮತ್ತು ಯಾವುದೇ ಪ್ರವಾದನಾತ್ಮಕ ಅನ್ವಯಗಳಲ್ಲದೆ, ಈ ಸಾಮ್ಯದಿಂದ ನಾವು ಅತ್ಯುತ್ತಮ ತತ್ವಗಳನ್ನು ಕಲಿತುಕೊಳ್ಳಸಾಧ್ಯವಿದೆ. ದೃಷ್ಟಾಂತಕ್ಕೆ, ಯೇಸು ಈ ಮಾತುಗಳಿಂದ ಅದನ್ನು ಸಮಾಪ್ತಿಗೊಳಿಸಿದ್ದನ್ನು ಗಮನಿಸಿರಿ: “ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” ನಮ್ಮಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿದ್ದು, ಆಸನ್ನವಾಗಿರುವ ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ಎಚ್ಚತ್ತವರಾಗಿರುವ ಅಗತ್ಯವನ್ನು ಈ ಸಾಮ್ಯವು ತಿಳಿಸುತ್ತದೆ. ನಾವು ಒಂದು ತಾರೀಖನ್ನು ನಿಖರವಾಗಿ ಸೂಚಿಸಿ ಹೇಳಲು ಸಾಧ್ಯವಿಲ್ಲದಿದ್ದರೂ, ಅಂತ್ಯವು ಬರುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಸಂಬಂಧದಲ್ಲಿ, ಆ ಕನ್ಯೆಯರ ಎರಡು ಗುಂಪುಗಳವರಿಂದ ವ್ಯಕ್ತಗೊಳಿಸಲ್ಪಟ್ಟ ಮನೋಭಾವಗಳನ್ನು ಗಮನಿಸಿರಿ.
7. ಯಾವ ಅರ್ಥದಲ್ಲಿ ಸಾಮ್ಯದಲ್ಲಿರುವ ಐವರು ಕನ್ಯೆಯರು ಬುದ್ಧಿಯಿಲ್ಲದವರಾಗಿ ರುಜುವಾದರು?
7 ಯೇಸು ಹೇಳಿದ್ದು: “ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು.” ವರನು ಬರುತ್ತಿದ್ದಾನೆಂಬ ವಿಷಯವನ್ನು ಅವರು ನಂಬಲಿಲ್ಲವೊ? ಅವರು ಸುಖಭೋಗಗಳನ್ನು ಬೆನ್ನಟ್ಟುತ್ತಾ ಇದ್ದರೊ? ಇಲ್ಲವೆ ಅವರು ವಂಚಿಸಲ್ಪಟ್ಟರೊ? ಈ ಯಾವ ಕಾರಣವೂ ಸೂಕ್ತವಲ್ಲ. ಈ ಐವರು “ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟ”ರೆಂದು ಯೇಸು ಹೇಳಿದನು. ಅವನು ಬರುತ್ತಿದ್ದಾನೆಂದು ತಿಳಿದವರಾಗಿದ್ದ ಅವರು, ಅದರಲ್ಲಿ ಒಳಗೂಡಲು ಅಂದರೆ ‘ಮದುವೆಯ ಉತ್ಸವದಲ್ಲಿ’ ಭಾಗವಹಿಸಲು ಬಯಸಿದರು. ಆದರೂ, ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರೊ? ಅವರು ಒಂದಿಷ್ಟು ಸಮಯದ ವರೆಗೆ, ಅಂದರೆ “ಅರ್ಧರಾತ್ರಿಯ” ತನಕ ಕಾದರಾದರೂ, ಅವನ ಆಗಮನವು ತಾವು ನಿರೀಕ್ಷಿಸಿದ ಸಮಯಕ್ಕಿಂತ ಮುಂಚಿತವಾಗಿ ಇಲ್ಲವೆ ತಡವಾಗಿ, ಅಂದರೆ ಯಾವಾಗಲಾದರೂ ಆಗಲಿ, ಅದಕ್ಕಾಗಿ ಅವರು ಸಿದ್ಧರಾಗಿರಲಿಲ್ಲ.
8. ಸಾಮ್ಯದಲ್ಲಿರುವ ಐವರು ಕನ್ಯೆಯರು ಯಾವ ರೀತಿಯಲ್ಲಿ ಬುದ್ಧಿವಂತೆಯರೆಂದು ರುಜುವಾದರು?
8 ಯಾರನ್ನು ಯೇಸು ಬುದ್ಧಿವಂತರೆಂದು ಕರೆದನೊ, ಆ ಐದು ಮಂದಿ ಕನ್ಯೆಯರು ಸಹ, ವರನ ಆಗಮನವನ್ನು ನಿರೀಕ್ಷಿಸುತ್ತಾ ಬೆಳಗಿದ ದೀಪಗಳೊಂದಿಗೆ ಹೊರಟರು. ಅವರು ಕೂಡ ಕಾಯಬೇಕಿತ್ತು, ಆದರೆ ಅವರು “ಬುದ್ಧಿವಂತೆ”ಯರಾಗಿದ್ದರು. “ಬುದ್ಧಿವಂತ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್ ಪದವು, “ದೂರದೃಷ್ಟಿಯುಳ್ಳ, ಸೂಕ್ಷ್ಮ ಅರಿವುಳ್ಳ, ವ್ಯಾವಹಾರಿಕ ಬುದ್ಧಿಯುಳ್ಳ”ವರಾಗಿರುವ ಅರ್ಥವನ್ನು ನೀಡಬಲ್ಲದು. ಅಗತ್ಯವಾದಲ್ಲಿ, ತಮ್ಮ ದೀಪಗಳಲ್ಲಿ ಮತ್ತೆ ಎಣ್ಣೆಯನ್ನು ತುಂಬಿಕೊಳ್ಳಲು ಸಾಧ್ಯವಾಗುವಂತೆ, ಪಾತ್ರೆಗಳಲ್ಲಿ ಹೆಚ್ಚಿನ ಎಣ್ಣೆಯನ್ನು ತರುವ ಮೂಲಕ ತಾವು ಬುದ್ಧಿವಂತೆಯರೆಂಬುದನ್ನು ತೋರಿಸಿಕೊಟ್ಟರು. ವರನ ಆಗಮನಕ್ಕಾಗಿ ಸಿದ್ಧರಾಗಿರಲು ಅವರೆಷ್ಟು ನಿಶ್ಚಿತರಾಗಿದ್ದರೆಂದರೆ, ತಮ್ಮ ಎಣ್ಣೆಯನ್ನು ಬೇರೆಯವರಿಗೆ ಹಂಚಲು ಅವರು ಸಿದ್ಧರಾಗಿರಲಿಲ್ಲ. ಇಂತಹ ಜಾಗರೂಕತೆಯು ತಪ್ಪಾಗಿರಲಿಲ್ಲ. ಇದು ಅವರ ಉಪಸ್ಥಿತಿಯಿಂದ ಮತ್ತು ವರನು ಆಗಮಿಸಿದಾಗ ಸಂಪೂರ್ಣವಾಗಿ ಸಿದ್ಧರಾಗಿದ್ದ ಸಂಗತಿಯಿಂದ ತಿಳಿದುಬರುತ್ತದೆ. “ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಲು ಮುಚ್ಚಲಾಯಿತು.”
9, 10. ಕನ್ಯೆಯರ ಸಾಮ್ಯದ ಮುಖ್ಯ ವಿಷಯವು ಏನಾಗಿದೆ, ಮತ್ತು ಯಾವ ಪ್ರಶ್ನೆಗಳನ್ನು ನಾವು ನಮ್ಮನ್ನೇ ಕೇಳಿಕೊಳ್ಳಬೇಕು?
9 ಯೇಸು ವಿವಾಹೋತ್ಸವದಲ್ಲಿ ಯೋಗ್ಯ ರೀತಿಯ ವರ್ತನೆಯ ಕುರಿತು ಒಂದು ಪಾಠವನ್ನಾಗಲಿ, ಇಲ್ಲವೆ ಹಂಚಿಕೊಳ್ಳುವುದರ ಬಗ್ಗೆ ಸಲಹೆಯನ್ನಾಗಲಿ ನೀಡುತ್ತಿರಲಿಲ್ಲ. ಅವನ ಮುಖ್ಯಾರ್ಥವು ಹೀಗಿತ್ತು: “ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” ‘ಯೇಸುವಿನ ಸಾನ್ನಿಧ್ಯದ ಸಂಬಂಧದಲ್ಲಿ ನಾನು ನಿಜವಾಗಿಯೂ ಜಾಗರೂಕನಾಗಿದ್ದೇನೊ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ. ಯೇಸು ಈಗ ಸ್ವರ್ಗದಲ್ಲಿ ಆಳುತ್ತಾನೆಂದು ನಾವು ನಂಬುತ್ತೇವಾದರೂ, ‘ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬೇಗನೆ ಬರುವನೆಂಬ’ ನಿಜತ್ವದ ಸಂಬಂಧದಲ್ಲಿ ನಾವೆಷ್ಟು ಕಾರ್ಯತತ್ಪರರಾಗಿದ್ದೇವೆ? (ಮತ್ತಾಯ 24:30) “ಅರ್ಧರಾತ್ರಿ”ಯೊಳಗಾಗಿ, ವರನ ಆಗಮನವು ಆ ಕನ್ಯೆಯರು ಅವನನ್ನು ಎದುರುಗೊಳ್ಳಲು ಮೊದಲಾಗಿ ಹೊರಟ ಸಮಯಕ್ಕಿಂತಲೂ ಇನ್ನೂ ನಿಕಟವಾಗಿತ್ತು. ತದ್ರೀತಿಯಲ್ಲಿ, ಈ ಪ್ರಸ್ತುತ ದುಷ್ಟ ವ್ಯವಸ್ಥೆಯನ್ನು ನಾಶಮಾಡಲು ಬರುವ ಮನುಷ್ಯಕುಮಾರನ ಆಗಮನವು, ಅವನ ಬರುವಿಕೆಗಾಗಿ ನಾವು ಎದುರುನೋಡಲು ತೊಡಗಿದ ಸಮಯಕ್ಕಿಂತಲೂ ಇನ್ನೂ ನಿಕಟವಾಗಿದೆ. (ರೋಮಾಪುರ 13:11-14) ನಾವು ನಮ್ಮ ಜಾಗರೂಕತೆಯನ್ನು ಕಾಪಾಡಿಕೊಂಡು, ಆ ಸಮಯವು ಹತ್ತಿರಬಂದಂತೆ ಇನ್ನೂ ಅಧಿಕ ಜಾಗರೂಕರಾಗಿದ್ದೇವೊ?
10 “ಎಚ್ಚರವಾಗಿರ್ರಿ” ಎಂಬ ಆಜ್ಞೆಗೆ ವಿಧೇಯರಾಗಲು, ಸತತವಾದ ಜಾಗರೂಕತೆಯು ಅಗತ್ಯವಾಗಿದೆ. ಐದು ಕನ್ಯೆಯರು ಎಣ್ಣೆಯನ್ನು ಪೂರ್ತಿಯಾಗಿ ಮುಗಿಸಿ, ಹೆಚ್ಚನ್ನು ಕೊಂಡುಕೊಳ್ಳಲು ಹೊರಟುಹೋದರು. ಇಂದು ಒಬ್ಬ ಕ್ರೈಸ್ತನು, ಯೇಸುವಿನ ಸನ್ನಿಹಿತವಾದ ಆಗಮನಕ್ಕೆ ಪೂರ್ಣವಾಗಿ ಸಿದ್ಧನಾಗಿರದೆ ತದ್ರೀತಿಯಲ್ಲಿ ಅಪಕರ್ಷಿಸಲ್ಪಡಬಹುದು. ಅದು ಪ್ರಥಮ ಶತಮಾನದ ಕೆಲವು ಕ್ರೈಸ್ತರಿಗೆ ಸಂಭವಿಸಿತು. ಇಂದೂ ಕೆಲವರಿಗೆ ಅದು ಸಂಭವಿಸಬಹುದು. ಆದುದರಿಂದ, ‘ಅದು ನನಗೆ ಸಂಭವಿಸುತ್ತಿದೆಯೊ?’ ಎಂದು ನಾವು ನಮ್ಮನ್ನೇ ಕೇಳಿಕೊಳ್ಳೋಣ.—1 ಥೆಸಲೊನೀಕ 5:6-8; ಇಬ್ರಿಯ 2:1; 3:12; 12:3; ಪ್ರಕಟನೆ 16:15.
ಅಂತ್ಯವು ಸಮೀಪಿಸಿದಂತೆ ಕಾರ್ಯತತ್ಪರರಾಗಿರಿ
11. ಯಾವ ಸಾಮ್ಯವನ್ನು ಯೇಸು ತದನಂತರ ಕೊಡುತ್ತಾನೆ, ಮತ್ತು ಅದು ಯಾವುದಕ್ಕೆ ಸಮಾನವಾಗಿದೆ?
11 ಯೇಸು ತನ್ನ ಮುಂದಿನ ಸಾಮ್ಯದಲ್ಲಿ, ಜಾಗರೂಕರಾಗಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುವಂತೆ ತನ್ನ ಶಿಷ್ಯರಲ್ಲಿ ಕೇಳಿಕೊಂಡನು. ಬುದ್ಧಿವಂತೆಯರು ಹಾಗೂ ಬುದ್ಧಿಯಿಲ್ಲದ ಕನ್ಯೆಯರ ಕುರಿತು ತಿಳಿಸಿದ ಮೇಲೆ, ಅವನು ತಲಾಂತುಗಳ ದೃಷ್ಟಾಂತವನ್ನು ತಿಳಿಸಿದನು. (ಮತ್ತಾಯ 25:14-30ನ್ನು ಓದಿರಿ.) ಇದು ಅನೇಕ ರೀತಿಗಳಲ್ಲಿ ಮೊಹರಿಗಳ ಸಾಮ್ಯಕ್ಕೆ ಸಮಾನವಾಗಿದೆ. ಅನೇಕರು “ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು . . . ಭಾವಿಸಿದ್ದ” ಕಾರಣ, ಯೇಸು ಮೊಹರಿಗಳ ಸಾಮ್ಯವನ್ನು ಈ ಮೊದಲು ನೀಡಿದ್ದನು.—ಲೂಕ 19:11-27.
12. ತಲಾಂತುಗಳ ಸಾಮ್ಯದ ಸಾರಾಂಶವೇನು?
12 ಯೇಸು ನೀಡಿದ ತಲಾಂತುಗಳ ಸಾಮ್ಯದಲ್ಲಿ, ದೇಶಾಂತರಕ್ಕೆ ಹೋಗುವ ಮೊದಲು ತನ್ನ ಮೂವರು ಸೇವಕರನ್ನು ಕರೆಸಿದ ಮನುಷ್ಯನ ಕುರಿತು ಹೇಳಿದನು. “ಅವನವನ ಸಾಮರ್ಥ್ಯದ ಪ್ರಕಾರ” ಅವನು ಒಬ್ಬನಿಗೆ ಐದು ತಲಾಂತುಗಳನ್ನು, ಮತ್ತೊಬ್ಬನಿಗೆ ಎರಡನ್ನು, ಮಗದೊಬ್ಬನಿಗೆ ಕೇವಲ ಒಂದು ತಲಾಂತನ್ನು ನೀಡಿದನು. ಬಹುಶಃ ಇದೊಂದು ಬೆಳ್ಳಿಯ ತಲಾಂತಾಗಿದ್ದು, ಆಗಿನ ಕಾಲದಲ್ಲಿ ಒಬ್ಬ ಕಾರ್ಮಿಕನು 14 ವರ್ಷಗಳಲ್ಲಿ ದುಡಿಯುವ ಹಣಕ್ಕೆ ಸಮಾನವಾಗಿತ್ತು. ನಿಜವಾಗಿಯೂ ದೊಡ್ಡ ಮೊತ್ತವೇ! ಆ ಮನುಷ್ಯನು ಹಿಂದಿರುಗಿದಾಗ, ಅವನ ಅನುಪಸ್ಥಿತಿಯ “ಬಹುಕಾಲ”ದಲ್ಲಿ ಸೇವಕರು ಮಾಡಿದುದರ ಲೆಕ್ಕವನ್ನು ಒಪ್ಪಿಸುವಂತೆ ಕೇಳಿಕೊಂಡನು. ಮೊದಲಿನ ಇಬ್ಬರು ಸೇವಕರು ತಮಗೆ ಕೊಟ್ಟಿದ್ದ ಹಣವನ್ನು ಇಮ್ಮಡಿಗೊಳಿಸಿದ್ದರು. ಅವನು ಪ್ರತಿಯೊಬ್ಬನಿಗೆ ಹೆಚ್ಚಿನ ಜವಾಬ್ದಾರಿಯನ್ನು ವಾಗ್ದಾನಿಸಿ, “ಭಲಾ” ಎಂದು ಬೆನ್ನು ತಟ್ಟಿದನು. ಮತ್ತು ಅವನು ಹೇಳಿದ್ದು: “ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು.” ಧಣಿಯು ತುಂಬ ಕಠಿಣ ಮನುಷ್ಯನೆಂದು ಪ್ರತಿಪಾದಿಸುತ್ತಾ, ಒಂದು ತಲಾಂತುವಿದ್ದ ಸೇವಕನು ಅದನ್ನು ಯಾವುದೇ ಲಾಭಕರ ಉದ್ಯೋಗಕ್ಕೆ ಬಳಸಿಕೊಂಡಿರಲಿಲ್ಲ. ಅದನ್ನು ಸಾಹುಕಾರರಲ್ಲಿ ಬಡ್ಡಿಗೂ ಹಾಕದೆ, ಮಣ್ಣಿನಲ್ಲಿ ಬಚ್ಚಿಟ್ಟನು. ಅವನು ಧಣಿಯ ಅಭಿರುಚಿಗಳಿಗೆ ತಕ್ಕಂತೆ ನಡೆಯದಿದ್ದ ಕಾರಣ, ಧಣಿಯು ಅವನನ್ನು “ಮೈಗಳ್ಳನಾದ ಕೆಟ್ಟ” ಆಳು ಎಂದು ಕರೆದನು. ತರುವಾಯ ಅವನಿಂದ ಆ ತಲಾಂತನ್ನು ತೆಗೆದುಕೊಂಡು, ಅವನನ್ನು ಹೊರಗೆ ಹಾಕಲಾಯಿತು. “ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.”
13. ಯೇಸು ಸಾಮ್ಯದಲ್ಲಿರುವ ಧಣಿಯಾಗಿ ಹೇಗೆ ರುಜುವಾದನು?
13 ಈ ಸಾಮ್ಯದ ವಿವರಗಳನ್ನು ಸಹ ಸಾಂಕೇತಿಕ ಅರ್ಥದಲ್ಲಿ ತಿಳಿದುಕೊಳ್ಳಬಹುದು. ಉದಾಹರಣೆಗೆ, ದೇಶಾಂತರಕ್ಕೆ ಪ್ರಯಾಣಿಸುವ ಆ ಮನುಷ್ಯನನ್ನು ಚಿತ್ರಿಸುವ ಯೇಸು, ತನ್ನ ಶಿಷ್ಯರನ್ನು ಬಿಟ್ಟು ಸ್ವರ್ಗಕ್ಕೆ ಹೋಗಿ, ರಾಜ್ಯಾಧಿಕಾರವನ್ನು ಪಡೆಯುವ ತನಕ ಬಹಳ ಸಮಯದ ವರೆಗೆ ಕಾಯುವನು.b (ಕೀರ್ತನೆ 110:1-4; ಅ. ಕೃತ್ಯಗಳು 2:34-36; ರೋಮಾಪುರ 8:34; ಇಬ್ರಿಯ 10:12, 13) ಆದರೆ, ನಾವೆಲ್ಲರೂ ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಬೇಕಾದ ವಿಶಾಲವಾದ ಅರ್ಥವನ್ನು ಇಲ್ಲವೆ ತತ್ವವನ್ನು ಗ್ರಹಿಸಿಕೊಳ್ಳಸಾಧ್ಯವಿದೆ. ಅದು ಏನಾಗಿದೆ?
14. ತಲಾಂತುಗಳ ಸಾಮ್ಯವು ಯಾವ ಅತ್ಯಾವಶ್ಯಕ ಅಗತ್ಯದ ಬಗ್ಗೆ ಒತ್ತಿಹೇಳುತ್ತದೆ?
14 ನಮ್ಮ ನಿರೀಕ್ಷೆಯು ಸ್ವರ್ಗದಲ್ಲಿ ಅಮರ ಜೀವಿತವಾಗಿರಲಿ ಇಲ್ಲವೆ ಭೂಪ್ರಮೋದವನದಲ್ಲಿ ನಿತ್ಯಜೀವವಾಗಿರಲಿ, ಕ್ರೈಸ್ತ ಚಟುವಟಿಕೆಗಳಲ್ಲಿ ನಾವು ಪ್ರಯಾಸಪಡುತ್ತಾ ಇರಬೇಕೆಂಬುದು ಯೇಸುವಿನ ಸಾಮ್ಯದಿಂದ ಸ್ಪಷ್ಟವಾಗುತ್ತದೆ. ವಾಸ್ತವದಲ್ಲಿ, ಈ ಸಾಮ್ಯದ ಸಂದೇಶವನ್ನು ಒಂದೇ ಶಬ್ದದಲ್ಲಿ ಸಾರಾಂಶಿಸಬಹುದು: ಕಾರ್ಯತತ್ಪರತೆ. ಅಪೊಸ್ತಲರು ಅನುಸರಿಸಬೇಕಾದ ಮಾದರಿಯನ್ನು ಸಾ.ಶ. 33ರ ಪಂಚಾಶತ್ತಮದಿಂದ ಒದಗಿಸಿದರು. ನಾವು ಓದುವುದು: “ಬೇರೆ ಅನೇಕವಾದ ಮಾತುಗಳಿಂದ [ಪೇತ್ರನು] ಖಂಡಿತವಾಗಿ ಸಾಕ್ಷಿನುಡಿದು—ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ ಎಂದು ಅವರನ್ನು ಎಚ್ಚರಿಸಿದನು.” (ಅ. ಕೃತ್ಯಗಳು 2:40-42) ಮತ್ತು ಅವನ ಪ್ರಯತ್ನಕ್ಕೆ ಎಂತಹ ಉತ್ತಮವಾದ ಫಲಿತಾಂಶಗಳು ದೊರಕಿದವು! ಕ್ರೈಸ್ತ ಸಾರುವಿಕೆಯಲ್ಲಿ ಅಪೊಸ್ತಲರನ್ನು ಸೇರಿದ ಇತರರು ಸಹ ಕಾರ್ಯತತ್ಪರರಾಗಿದ್ದರು. ಈ ಕಾರಣ ಸುವಾರ್ತೆಯು “ಲೋಕದಲ್ಲೆಲ್ಲಾ ಹಬ್ಬಿ”ತು.—ಕೊಲೊಸ್ಸೆ 1:3-6, 23; 1 ಕೊರಿಂಥ 3:5-9.
15. ತಲಾಂತುಗಳ ಸಾಮ್ಯದ ಮುಖ್ಯ ವಿಷಯವನ್ನು ನಾವು ಯಾವ ವಿಶೇಷವಾದ ರೀತಿಯಲ್ಲಿ ಅನ್ವಯಿಸಿಕೊಳ್ಳುತ್ತಿರಬೇಕು?
15 ಈ ಸಾಮ್ಯದ ಪೂರ್ವಾಪರವನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅದು ಯೇಸುವಿನ ಸಾನ್ನಿಧ್ಯದ ಕುರಿತಾದ ಒಂದು ಪ್ರವಾದನೆಯಾಗಿದೆ. ಯೇಸುವಿನ ಪರೋಸಿಯ ಮುಂದುವರಿಯುತ್ತಾ ಇದ್ದು, ಬೇಗನೆ ಪರಾಕಾಷ್ಠೆಯನ್ನು ತಲಪುವುದು ಎಂಬುದಕ್ಕೆ ನಮಗೆ ಸಾಕಷ್ಟು ಆಧಾರಗಳಿವೆ. ಕ್ರೈಸ್ತರು ಮಾಡಬೇಕಾದ ಕೆಲಸಕ್ಕೂ “ಅಂತ್ಯ”ಕ್ಕೂ ಯೇಸು ಕಲ್ಪಿಸಿದ ಸಂಬಂಧವನ್ನು ಜ್ಞಾಪಿಸಿಕೊಳ್ಳಿರಿ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾ, ನಾವು ಯಾವ ರೀತಿಯ ಸೇವಕನನ್ನು ಹೋಲುತ್ತೇವೆ? ನಿಮ್ಮನ್ನೇ ಕೇಳಿಕೊಳ್ಳಿ: ‘ತನ್ನ ಸ್ವಂತ ಕೆಲಸಗಳನ್ನು ನೋಡಿಕೊಂಡು, ತನಗೆ ವಹಿಸಿಕೊಟ್ಟದ್ದನ್ನು ಬಚ್ಚಿಟ್ಟ ಆಳಿನಂತೆ ನಾನಿದ್ದೇನೆಂದು ತೀರ್ಮಾನಿಸಲು ಯಾವ ಕಾರಣವಾದರೂ ಇದೆಯೊ? ಅಥವಾ ನಂಬಿಗಸ್ತರಾದ ಆ ಒಳ್ಳೆಯ ಆಳುಗಳಂತೆ ನಾನೂ ಇದ್ದೇನೆಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೊ? ಪ್ರತಿಯೊಂದು ಸಂದರ್ಭದಲ್ಲಿ ಧಣಿಯ ಅಭಿರುಚಿಗಳನ್ನು ಹೆಚ್ಚಿಸುವ ಕೆಲಸಕ್ಕೆ ನಾನು ಸಂಪೂರ್ಣವಾಗಿ ಬದ್ಧನೊ?’
ಅವನ ಸಾನ್ನಿಧ್ಯದ ಸಮಯದಲ್ಲಿ ಜಾಗರೂಕರೂ ಕಾರ್ಯತತ್ಪರರೂ
16. ನಾವು ಚರ್ಚಿಸಿರುವ ಎರಡು ಸಾಮ್ಯಗಳು ನಿಮಗೆ ಯಾವ ಸಂದೇಶವನ್ನು ನೀಡುತ್ತವೆ?
16 ಈ ಎರಡು ಸಾಮ್ಯಗಳು, ಸಾಂಕೇತಿಕ ಮತ್ತು ಪ್ರವಾದನಾತ್ಮಕ ಅರ್ಥವನ್ನಲ್ಲದೆ ಯೇಸುವಿನ ಬಾಯಿಂದಲೇ ಬರುವ ಸ್ಪಷ್ಟವಾದ ಉತ್ತೇಜನವನ್ನು ನಮಗೆ ನೀಡುತ್ತವೆ. ಅವನ ಸಂದೇಶವು ಹೀಗಿದೆ: ವಿಶೇಷವಾಗಿ ಕ್ರಿಸ್ತನ ಪರೋಸಿಯ ಕಾಣಿಸಿಕೊಳ್ಳುವಾಗ ಜಾಗರೂಕರಾಗಿರಿ ಮತ್ತು ಕಾರ್ಯತತ್ಪರರಾಗಿರಿ. ಆ ಸಮಯವು ಇದೇ ಆಗಿದೆ. ಹಾಗಾದರೆ, ನಾವು ನಿಜವಾಗಿಯೂ ಜಾಗರೂಕರು ಮತ್ತು ಕಾರ್ಯತತ್ಪರರು ಆಗಿದ್ದೇವೊ?
17, 18. ಯೇಸುವಿನ ಸಾನ್ನಿಧ್ಯದ ಕುರಿತು ಶಿಷ್ಯನಾದ ಯಾಕೋಬನು ಯಾವ ಸಲಹೆಯನ್ನು ನೀಡಿದನು?
17 ಯೇಸುವಿನ ಪ್ರವಾದನೆಯನ್ನು ಕೇಳಿಸಿಕೊಳ್ಳಲು ಯೇಸುವಿನ ಮಲತಮ್ಮನಾದ ಯಾಕೋಬನು ಎಣ್ಣೆಯ ಮರಗಳ ಗುಡ್ಡದ ಮೇಲಿರಲಿಲ್ಲ. ಆದರೆ ಅದರ ಬಗ್ಗೆ ಅವನು ತದನಂತರ ತಿಳಿದುಕೊಂಡು, ಅದರ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸಿಕೊಂಡನು. ಅವನು ಬರೆದುದು: “ಸಹೋದರರೇ, ಕರ್ತನು ಪ್ರತ್ಯಕ್ಷ [“ಸಾನ್ನಿಧ್ಯ,” NW]ನಾಗುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು.” (ಓರೆಅಕ್ಷರಗಳು ನಮ್ಮವು.)—ಯಾಕೋಬ 5:7, 8.
18 ತಮ್ಮ ಐಶ್ವರ್ಯಗಳನ್ನು ದುರುಪಯೋಗಿಸಿಕೊಳ್ಳುವವರನ್ನು ದೇವರು ಪ್ರತಿಕೂಲವಾಗಿ ನ್ಯಾಯತೀರಿಸುವನೆಂಬ ಆಶ್ವಾಸನೆಯನ್ನು ನೀಡುವುದರ ಜೊತೆಗೆ, ಯೆಹೋವನು ಕ್ರಿಯೆಗೈಯುವಂತೆ ಕಾಯುತ್ತಿರುವಾಗ ಕ್ರೈಸ್ತರು ಅಸಹನೆಯನ್ನು ತೋರಿಸಬಾರದೆಂದು ಯಾಕೋಬನು ಪ್ರೇರಿಸಿದನು. ಅಸಹನೆಯುಳ್ಳ ಕ್ರೈಸ್ತನು, ಮಾಡಲ್ಪಟ್ಟ ತಪ್ಪುಗಳನ್ನು ತಾನೇ ಸರಿಪಡಿಸಬೇಕಾಗಿದೆಯೊ ಎಂಬಂತೆ ಪ್ರತೀಕಾರಕನಾಗಬಹುದು. ಹಾಗೆ ಮಾಡುವುದು ಸರಿಯಲ್ಲ, ಏಕೆಂದರೆ ನ್ಯಾಯತೀರಿಸುವ ಸಮಯವು ಬಂದೇ ಬರುವುದು. ಯಾಕೋಬನು ವಿವರಿಸಿದಂತೆ, ಒಬ್ಬ ವ್ಯವಸಾಯಗಾರನ ಉದಾಹರಣೆಯು ಇದನ್ನು ದೃಷ್ಟಾಂತಿಸುತ್ತದೆ.
19. ಒಬ್ಬ ಇಸ್ರಾಯೇಲ್ಯ ವ್ಯವಸಾಯಗಾರನು ಯಾವ ರೀತಿಯ ತಾಳ್ಮೆಯನ್ನು ತೋರಿಸಬಹುದಿತ್ತು?
19 ಇಸ್ರಾಯೇಲ್ಯ ವ್ಯವಸಾಯಗಾರನೊಬ್ಬನು ಬೀಜವನ್ನು ಬಿತ್ತಿದ ಮೇಲೆ, ಪೈರು ಮೊಳೆತು, ನಂತರ ದೊಡ್ಡದಾಗಿ, ಕೊನೆಗೆ ಕೊಯ್ಲಿನ ಸಮಯಕ್ಕಾಗಿ ಕಾಯಬೇಕಿತ್ತು. (ಲೂಕ 8:5-8; ಯೋಹಾನ 4:35) ಆ ತಿಂಗಳುಗಳಲ್ಲಿ, ಒಂದಿಷ್ಟು ಕಳವಳ ಪಡಲು ಕಾರಣ ಮತ್ತು ಬಹುಶಃ ಸಮಯವೂ ಇತ್ತು. ಸಾಕಷ್ಟು ಮುಂಗಾರು ಮಳೆಗಳು ಬರುವವೊ? ಹಿಂಗಾರು ಮಳೆಗಳ ಕುರಿತೇನು? ಕೀಟಗಳು ಇಲ್ಲವೆ ಬಿರುಗಾಳಿಯು ಬೆಳೆಯನ್ನು ನಾಶಮಾಡುವುದೊ? (ಹೋಲಿಸಿ ಯೋವೇಲ 1:4; 2:23-25.) ಹಾಗಿದ್ದರೂ, ಒಬ್ಬ ಇಸ್ರಾಯೇಲ್ಯ ವ್ಯವಸಾಯಗಾರನು ಯೆಹೋವನಲ್ಲಿ ಮತ್ತು ಆತನು ಸ್ಥಾಪಿಸಿರುವ ನೈಸರ್ಗಿಕ ಚಕ್ರಗಳಲ್ಲಿ ಭರವಸೆಯಿಡಬಹುದಿತ್ತು. (ಧರ್ಮೋಪದೇಶಕಾಂಡ 11:14; ಯೆರೆಮೀಯ 5:24) ಆ ವ್ಯವಸಾಯಗಾರನ ತಾಳ್ಮೆಯು ಭರವಸೆಯುಳ್ಳ ನಿರೀಕ್ಷೆಗೆ ಖಂಡಿತವಾಗಿಯೂ ನಡೆಸಲಿತ್ತು. ತಾನು ಯಾವುದಕ್ಕಾಗಿ ಕಾಯುತ್ತಿದ್ದನೊ ಅದು ಬರುವುದೆಂಬ ನಂಬಿಕೆ ಅವನಿಗಿತ್ತು. ಅದು ಖಂಡಿತವಾಗಿಯೂ ಬರಲಿತ್ತು!
20. ಯಾಕೋಬನ ಸಲಹೆಗೆ ಅನುಗುಣವಾಗಿ ನಾವು ತಾಳ್ಮೆಯನ್ನು ಹೇಗೆ ಪ್ರದರ್ಶಿಸಬಹುದು?
20 ಸುಗ್ಗಿಕಾಲವು ಯಾವಾಗ ಬರುವುದೆಂಬ ವಿಷಯದಲ್ಲಿ ಒಬ್ಬ ವ್ಯವಸಾಯಗಾರನಿಗೆ ಒಂದಿಷ್ಟು ಮಾಹಿತಿ ಇರಬಹುದಾದರೂ, ಯೇಸುವಿನ ಸಾನ್ನಿಧ್ಯ ಯಾವಾಗ ಆರಂಭಿಸುವುದು ಎಂಬುದನ್ನು ಪ್ರಥಮ ಶತಮಾನದ ಕ್ರೈಸ್ತರು ಲೆಕ್ಕಿಸಸಾಧ್ಯವಿರಲಿಲ್ಲ. ಆದರೆ ಅದು ಖಂಡಿತವಾಗಿಯೂ ಬರಲಿಕ್ಕಿತ್ತು. ಯಾಕೋಬನು ಬರೆದುದು: “ಕರ್ತನ ಪ್ರತ್ಯಕ್ಷತೆ [“ಸಾನ್ನಿಧ್ಯ,” NW, ಗ್ರೀಕ್, ಪರೋಸಿಯ]ಯು ಹತ್ತಿರವಾಯಿತು.” ಆ ಮಾತುಗಳನ್ನು ಯಾಕೋಬನು ಬರೆದ ಸಮಯದಲ್ಲಿ, ಕ್ರಿಸ್ತನ ಸಾನ್ನಿಧ್ಯದ ದೊಡ್ಡ ಪ್ರಮಾಣದ ಇಲ್ಲವೆ ಭೌಗೋಲಿಕ ಸೂಚನೆಯು ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ ಈಗ ಅದು ತೀರ ಸ್ಪಷ್ಟವಾಗಿದೆ! ಆದುದರಿಂದ, ಈ ಸಮಯಾವಧಿಯಲ್ಲಿ ನಮಗೆ ಹೇಗನಿಸಬೇಕು? ಸೂಚನೆಯು ನಿಜವಾಗಿಯೂ ದೃಗ್ಗೋಚರವಾಗಿದೆ. ನಾವು ಅದನ್ನು ಕಣ್ಣಾರೆ ನೋಡುತ್ತೇವೆ. ‘ಆ ಸೂಚನೆಯು ನೆರವೇರುತ್ತಿರುವುದನ್ನು ನಾನು ನೋಡಬಲ್ಲೆ’ ಎಂಬುದಾಗಿ ನಾವು ಭರವಸೆಯಿಂದ ಹೇಳಬಹುದು. ‘ಕರ್ತನ ಪ್ರತ್ಯಕ್ಷತೆ [“ಸಾನ್ನಿಧ್ಯ,” NW, ಗ್ರೀಕ್, ಪರೋಸಿಯ]ಯು ಹತ್ತಿರವಾಯಿತು’ ಎಂದು ನಾವು ಭರವಸೆಯಿಂದ ಹೇಳಸಾಧ್ಯವಿದೆ.
21. ಏನನ್ನು ಮಾಡಲು ನಾವು ಸಂಪೂರ್ಣವಾಗಿ ನಿರ್ಧರಿಸಿದ್ದೇವೆ?
21 ಕರ್ತನ ಸಾನ್ನಿಧ್ಯವು ನಿಕಟವಾಗಿರುವ ಕಾರಣ, ನಾವು ಚರ್ಚಿಸಿರುವ ಯೇಸುವಿನ ಎರಡು ಸಾಮ್ಯಗಳ ಮೂಲಭೂತ ಪಾಠಗಳನ್ನು ಹೃದಯಕ್ಕೆ ತೆಗೆದುಕೊಂಡು, ಅವುಗಳನ್ನು ಅನ್ವಯಿಸಿಕೊಳ್ಳಲು ಬಲವಾದ ಕಾರಣ ನಮಗಿದೆ. ಅವನು ಹೇಳಿದ್ದು: “ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” (ಮತ್ತಾಯ 25:13) ನಮ್ಮ ಕ್ರೈಸ್ತ ಸೇವೆಯಲ್ಲಿ ಹುರುಪುಳ್ಳವರಾಗಿರುವ ಸಮಯವು ಇದೇ ಆಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಯೇಸುವಿನ ಮುಖ್ಯ ವಿಷಯವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನು ನಮ್ಮ ಜೀವಿತಗಳಲ್ಲಿ ಅನುದಿನವೂ ತೋರಿಸೋಣ. ನಾವು ಜಾಗರೂಕರಾಗಿರೋಣ! ನಾವು ಕಾರ್ಯತತ್ಪರರಾಗಿರೋಣ!
[ಅಧ್ಯಯನ ಪ್ರಶ್ನೆಗಳು]
a ಈ ಸಾಮ್ಯದ ಸಾಂಕೇತಿಕ ವಿವರಗಳಿಗಾಗಿ, ವಾಚ್ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಸಾವಿರ ವರ್ಷಗಳ ದೇವರ ರಾಜ್ಯವು ಸಮೀಪಿಸಿದೆ (ಇಂಗ್ಲಿಷ್) ಎಂಬ ಪುಸ್ತಕದ, 169-211ನೆಯ ಪುಟಗಳನ್ನು ನೋಡಿರಿ.
b ಸಾವಿರ ವರ್ಷಗಳ ದೇವರ ರಾಜ್ಯವು ಸಮೀಪಿಸಿದೆ, 212-56ನೆಯ ಪುಟಗಳನ್ನು ನೋಡಿರಿ.
ನಿಮಗೆ ಜ್ಞಾಪಕವಿದೆಯೆ?
◻ ಬುದ್ಧಿವಂತೆಯರ ಹಾಗೂ ಬುದ್ಧಿಯಿಲ್ಲದ ಕನ್ಯೆಯರ ಸಾಮ್ಯದಿಂದ ನೀವು ಯಾವ ಮುಖ್ಯ ವಿಷಯವನ್ನು ತಿಳಿದುಕೊಂಡಿದ್ದೀರಿ?
◻ ತಲಾಂತುಗಳ ಸಾಮ್ಯದ ಮೂಲಕ, ಯಾವ ಮೂಲಭೂತ ಸಲಹೆಯನ್ನು ಯೇಸು ನಿಮಗೆ ನೀಡುತ್ತಿದ್ದಾನೆ?
◻ ಒಬ್ಬ ಇಸ್ರಾಯೇಲ್ಯ ವ್ಯವಸಾಯಗಾರನ ತಾಳ್ಮೆಯಂತೆ, ನಿಮ್ಮ ತಾಳ್ಮೆಯು ಪರೋಸಿಯಕ್ಕೆ ಸಂಬಂಧಿಸಿರುವುದು ಯಾವ ಅರ್ಥದಲ್ಲಿ?
◻ ನಾವು ಜೀವಿಸುತ್ತಿರುವ ಸಮಯವು ರೋಮಾಂಚಕವೂ ತುರ್ತಿನದ್ದೂ ಆಗಿದೆ ಏಕೆ?
[ಪುಟ 23 ರಲ್ಲಿರುವ ಚಿತ್ರ]
ಕನ್ಯೆಯರ ಸಾಮ್ಯ ಮತ್ತು ತಲಾಂತುಗಳ ಸಾಮ್ಯದಿಂದ ನೀವು ಯಾವ ಪಾಠಗಳನ್ನು ಕಲಿಯುತ್ತೀರಿ?