ಅಧ್ಯಯನ ಲೇಖನ 2
ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ
“ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.”—ಕೀರ್ತ. 22:22.
ಗೀತೆ 104 ನನ್ನೊಂದಿಗೆ ಯಾಹುವನ್ನು ಸ್ತುತಿಸು
ಕಿರುನೋಟa
1. (ಎ) ದಾವೀದನಿಗೆ ಯೆಹೋವನ ಬಗ್ಗೆ ಏನನಿಸಿತು? (ಬಿ) ಇದರಿಂದ ಅವನಿಗೆ ಯಾವ ಪ್ರಚೋದನೆ ಸಿಕ್ಕಿತು?
“ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ” ಎಂದು ದಾವೀದನು ಬರೆದನು. (ಕೀರ್ತ. 145:3) ಆತನಿಗೆ ಯೆಹೋವನ ಮೇಲೆ ಪ್ರೀತಿ ಇತ್ತು. ಈ ಪ್ರೀತಿ “ಸಭಾಮಧ್ಯದಲ್ಲಿ” ದೇವರನ್ನು ಸ್ತುತಿಸಲು ಪ್ರಚೋದಿಸಿತು. (ಕೀರ್ತ. 22:22; 40:5) ನೀವೂ ಯೆಹೋವನನ್ನು ಪ್ರೀತಿಸುತ್ತೀರಿ ಅಲ್ವಾ? ಹಾಗಾದರೆ ದಾವೀದನಂತೆ ನಿಮಗೂ ಅನಿಸುತ್ತಿರಬೇಕು. ಆತನು ಹೇಳಿದ್ದು: “ನಮ್ಮ ಪಿತೃವಾಗಿರುವ ಇಸ್ರಾಯೇಲನ ದೇವರೇ, ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ.”—1 ಪೂರ್ವ. 29:10-13.
2. (ಎ) ನಾವು ಯೆಹೋವನನ್ನು ಸ್ತುತಿಸುವ ಒಂದು ವಿಧ ಯಾವುದು? (ಬಿ) ನಮ್ಮಲ್ಲಿ ಕೆಲವರಿಗೆ ಯಾವ ಸವಾಲುಗಳು ಎದುರಾಗುತ್ತವೆ? (ಸಿ) ನಾವೀಗ ಏನನ್ನು ಚರ್ಚಿಸಲಿದ್ದೇವೆ?
2 ಇಂದು ನಾವು ಯೆಹೋವನನ್ನು ಸ್ತುತಿಸುವ ಒಂದು ವಿಧ, ಕ್ರೈಸ್ತ ಕೂಟಗಳಲ್ಲಿ ಉತ್ತರ ಕೊಡುವುದೇ ಆಗಿದೆ. ಆದರೆ ಎಷ್ಟೋ ಸಹೋದರ-ಸಹೋದರಿಯರಿಗೆ ಉತ್ತರ ಕೊಡುವುದೆಂದರೆ ತುಂಬ ಭಯ ಆಗುತ್ತದೆ. ಉತ್ತರ ಕೊಡಲು ಆಸೆ, ಆದರೆ ಭಯದಿಂದ ನಾಲಿಗೆಯೇ ಹೊರಳುವುದಿಲ್ಲ. ಈ ಭಯವನ್ನು ಅವರು ಹೇಗೆ ಮೆಟ್ಟಿನಿಲ್ಲಬಹುದು? ಒಳ್ಳೇ ಉತ್ತರಗಳನ್ನು ಕೊಡಲು ಯಾವ ಸಲಹೆಗಳು ನಮ್ಮೆಲ್ಲರಿಗೂ ಸಹಾಯ ಮಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಮುಂಚೆ, ನಾವು ಕೂಟಗಳಲ್ಲಿ ಯಾಕೆ ಉತ್ತರ ಕೊಡಬೇಕು ಅನ್ನುವುದಕ್ಕೆ ನಾಲ್ಕು ಕಾರಣಗಳನ್ನು ನೋಡೋಣ.
ಕೂಟಗಳಲ್ಲಿ ಉತ್ತರ ಕೊಡಲು ಕಾರಣ
3-5. (ಎ) ಇಬ್ರಿಯ 13:15 ಹೇಳುವ ಪ್ರಕಾರ, ನಾವು ಯಾಕೆ ಕೂಟಗಳಲ್ಲಿ ಉತ್ತರ ಕೊಡಬೇಕು? (ಬಿ) ನಾವೆಲ್ಲರೂ ಒಂದೇ ರೀತಿಯಲ್ಲಿ ಉತ್ತರ ಕೊಡಬೇಕಾ? ವಿವರಿಸಿ.
3 ಯೆಹೋವನನ್ನು ಸ್ತುತಿಸುವ ಸುಯೋಗವನ್ನು ಆತನು ನಮ್ಮೆಲ್ಲರಿಗೂ ಕೊಟ್ಟಿದ್ದಾನೆ. (ಕೀರ್ತ. 119:108) ನಾವು ಕೂಟಗಳಲ್ಲಿ ಕೊಡುವ ಉತ್ತರ ನಮ್ಮ “ಸ್ತೋತ್ರಯಜ್ಞ” ಆಗಿದೆ. ಈ ಯಜ್ಞವನ್ನು ಬೇರೆ ಯಾರೂ ನಮಗೋಸ್ಕರ ಕೊಡಲಿಕ್ಕಾಗಲ್ಲ. (ಇಬ್ರಿಯ 13:15 ಓದಿ.) ಯೆಹೋವನು ನಮ್ಮೆಲ್ಲರಿಂದ ಒಂದೇ ರೀತಿಯ ಯಜ್ಞ ಅಥವಾ ಉತ್ತರವನ್ನು ಕೇಳುತ್ತಾನಾ? ಇಲ್ಲ.
4 ನಮ್ಮೆಲ್ಲರ ಸಾಮರ್ಥ್ಯ ಸನ್ನಿವೇಶ ಬೇರೆಬೇರೆ ಅಂತ ಯೆಹೋವನಿಗೆ ಗೊತ್ತಿದೆ. ನಾವು ಆತನಿಗೆ ಯಾವ ಯಜ್ಞಗಳನ್ನು ಕೊಡಲಿಕ್ಕಾಗುತ್ತದೋ ಅದನ್ನು ಆತನು ತುಂಬ ಮೆಚ್ಚುತ್ತಾನೆ. ಆತನು ಇಸ್ರಾಯೇಲ್ಯರಿಂದ ಯಾವ ರೀತಿಯ ಯಜ್ಞಗಳನ್ನು ಸ್ವೀಕರಿಸಿದನು ಎಂದು ಯೋಚಿಸಿ ನೋಡಿ. ಕೆಲವು ಇಸ್ರಾಯೇಲ್ಯರಿಗೆ ಒಂದು ಕುರಿ ಅಥವಾ ಆಡನ್ನು ಕೊಡುವ ಶಕ್ತಿ ಇತ್ತು. ಆದರೆ ಬಡವನಾಗಿದ್ದ ಒಬ್ಬ ಇಸ್ರಾಯೇಲ್ಯನು “ಎರಡು ಬೆಳವಕ್ಕಿ” ಅಥವಾ “ಎರಡು ಪಾರಿವಾಳದ ಮರಿ” ಕೊಡಬಹುದಿತ್ತು. ಎರಡು ಪಕ್ಷಿಗಳನ್ನೂ ಕೊಡಲಿಕ್ಕಾಗದವರು “ಮೂರು ಸೇರು ಗೋದಿಹಿಟ್ಟನ್ನು” ಕೊಡಬಹುದಿತ್ತು. (ಯಾಜ. 5:7, 11) ಹಿಟ್ಟು ಕಡಿಮೆ ಬೆಲೆಯ ವಸ್ತುವಾದರೂ ಅದು ಉತ್ತಮ ಗುಣಮಟ್ಟದ್ದಾಗಿದ್ದರೆ ಯೆಹೋವನು ಅದನ್ನು ಸ್ವೀಕರಿಸುತ್ತಿದ್ದನು.
5 ಯೆಹೋವನು ಬದಲಾಗಿಲ್ಲ. ನಾವು ಉತ್ತರ ಕೊಡುವಾಗ ಅಪೊಲ್ಲೋಸನಂತೆ “ವಾಕ್ಚಾತುರ್ಯ” ತೋರಿಸಬೇಕು ಅಥವಾ ಪೌಲನಂತೆ ಮನವೊಲಿಸುವ ರೀತಿ ಮಾತಾಡಬೇಕೆಂದು ದೇವರು ಬಯಸುವುದಿಲ್ಲ. (ಅ. ಕಾ. 18:24; 26:28) ನಮ್ಮಿಂದಾದಷ್ಟು ಉತ್ತಮವಾದ ಹೇಳಿಕೆಗಳನ್ನು ಕೊಡಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ ಅಷ್ಟೆ. ಎರಡು ಚಿಕ್ಕ ನಾಣ್ಯಗಳನ್ನು ಕೊಟ್ಟ ವಿಧವೆಯ ನೆನಪಿದೆಯಾ? ಯೆಹೋವನ ದೃಷ್ಟಿಯಲ್ಲಿ ಆಕೆ ತುಂಬ ಅಮೂಲ್ಯವಾಗಿದ್ದಳು. ಯಾಕೆಂದರೆ ಆಕೆ ತನ್ನಿಂದಾದ ಅತ್ಯುತ್ತಮ ಕೊಡುಗೆಯನ್ನು ಕೊಟ್ಟಳು.—ಲೂಕ 21:1-4.
6. (ಎ) ಇಬ್ರಿಯ 10:24, 25 ತಿಳಿಸುವಂತೆ, ಬೇರೆಯವರು ಕೊಡುವ ಉತ್ತರ ಕೇಳಿಸಿಕೊಳ್ಳುವಾಗ ನಮ್ಮ ಮೇಲೆ ಯಾವ ಪ್ರಭಾವ ಆಗುತ್ತದೆ? (ಬಿ) ಬೇರೆಯವರು ಕೊಡುವ ಉತ್ತರವನ್ನು ನೀವು ಮೆಚ್ಚುತ್ತೀರಿ ಎಂದು ಹೇಗೆ ತೋರಿಸಬಹುದು?
6 ಉತ್ತರ ಕೊಡುವ ಮೂಲಕ ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ. (ಇಬ್ರಿಯ 10:24, 25 ಓದಿ.) ಕೂಟಗಳಲ್ಲಿ ಬೇರೆಬೇರೆ ರೀತಿಯ ಉತ್ತರಗಳನ್ನು ಕೇಳಿಸಿಕೊಂಡಾಗ ನಮ್ಮೆಲ್ಲರಿಗೂ ಖುಷಿ ಆಗುತ್ತದೆ ಅಲ್ವಾ? ಒಂದು ಮಗು ಮುಗ್ಧವಾಗಿ, ಮುದ್ದುಮುದ್ದಾಗಿ ಒಂದು ಉತ್ತರ ಕೊಟ್ಟರೆ ನಮಗೆ ಖುಷಿ ಆಗುತ್ತದೆ. ಯಾರಾದರೂ ತಮಗೆ ಸಿಕ್ಕಿದ ಯಾವುದೋ ಒಳ್ಳೇ ಅಂಶದ ಬಗ್ಗೆ ತುಂಬ ಉತ್ಸಾಹದಿಂದ ಉತ್ತರ ಕೊಡುವುದನ್ನು ಕೇಳಿಸಿಕೊಂಡಾಗ ನಮಗೂ ಪ್ರೋತ್ಸಾಹ ಸಿಗುತ್ತದೆ. ನಾಚಿಕೆ ಸ್ವಭಾವ ಇರುವ ಅಥವಾ ನಮ್ಮ ಭಾಷೆಯನ್ನು ಈಗತಾನೇ ಕಲಿಯುತ್ತಿರುವ ಒಬ್ಬ ವ್ಯಕ್ತಿ ‘ಧೈರ್ಯ ತಂದುಕೊಂಡು’ ಉತ್ತರ ಕೊಟ್ಟರೆ ನಾವದನ್ನು ತುಂಬ ಮೆಚ್ಚುತ್ತೇವೆ. (1 ಥೆಸ. 2:2) ಇಂಥವರು ಹಾಕುವ ಪ್ರಯತ್ನವನ್ನು ನಾವು ಮೆಚ್ಚುತ್ತೇವೆ ಎಂದು ಹೇಗೆ ತೋರಿಸಬಹುದು? ಕೂಟವಾದ ಮೇಲೆ ಅವರು ಉತ್ತರ ಕೊಟ್ಟದ್ದಕ್ಕೆ ಧನ್ಯವಾದ ಹೇಳಬಹುದು. ಕೂಟದ ಸಮಯದಲ್ಲಿ ನಾವೇ ಉತ್ತರ ಕೊಡುವ ಮೂಲಕ ಸಹ ನಾವು ನಮ್ಮ ಮೆಚ್ಚಿಕೆಯನ್ನು ತೋರಿಸಬಹುದು. ಆಗ ನಾವು ನಮ್ಮ ಕೂಟಗಳಲ್ಲಿ ಪ್ರೋತ್ಸಾಹ ಪಡೆಯುವುದು ಮಾತ್ರ ಅಲ್ಲ ಕೊಡುತ್ತೇವೆ ಕೂಡ.—ರೋಮ. 1:11, 12.
7. ಉತ್ತರ ಕೊಡುವುದರಿಂದ ನಮಗೇ ಹೇಗೆ ಪ್ರಯೋಜನ ಸಿಗುತ್ತದೆ?
7 ಉತ್ತರ ಕೊಡುವುದರಿಂದ ನಮಗೇ ಪ್ರಯೋಜನ ಸಿಗುತ್ತದೆ. (ಯೆಶಾ. 48:17) ಹೇಗೆ? ಮೊದಲನೇದಾಗಿ, ನಾವು ಉತ್ತರ ಕೊಡಬೇಕೆಂದು ಮನಸ್ಸು ಮಾಡಿದರೆ ಕೂಟಕ್ಕೆ ತಯಾರಿ ಮಾಡಲು ಪ್ರಚೋದನೆ ಸಿಗುತ್ತದೆ. ನಾವು ಒಳ್ಳೇ ತಯಾರಿ ಮಾಡಿದರೆ ದೇವರ ವಾಕ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವು ದೇವರ ವಾಕ್ಯವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೊ ಅಷ್ಟು ಚೆನ್ನಾಗಿ ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಲು ಸಾಧ್ಯವಾಗುತ್ತದೆ. ಎರಡನೇದಾಗಿ, ನಾವು ಚರ್ಚೆಯಲ್ಲಿ ಭಾಗವಹಿಸುವಾಗ ಕೂಟವನ್ನು ಹೆಚ್ಚು ಆನಂದಿಸಲು ಸಾಧ್ಯವಾಗುತ್ತದೆ. ಮೂರನೇದಾಗಿ, ಉತ್ತರ ಕೊಡಲು ಪ್ರಯತ್ನ ಹಾಕುವುದರಿಂದ ತುಂಬ ಸಮಯದ ವರೆಗೆ ನಾವು ಹೇಳಿದ ಅಂಶ ಮನಸ್ಸಲ್ಲಿ ಉಳಿಯುತ್ತದೆ.
8-9. (ಎ) ಮಲಾಕಿಯ 3:16 ತಿಳಿಸುವಂತೆ, ನಾವು ಉತ್ತರ ಕೊಡುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತದೆ? (ಬಿ) ಆದರೂ ಕೆಲವರಿಗೆ ಯಾವ ಕಷ್ಟ ಇರಬಹುದು?
8 ನಾವು ನಮ್ಮ ನಂಬಿಕೆಯನ್ನು ತೋರಿಸುವಾಗ ಯೆಹೋವನನ್ನು ಸಂತೋಷಪಡಿಸುತ್ತೇವೆ. ಯೆಹೋವ ದೇವರು ನಾವು ಹೇಳುವುದನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಕೂಟಗಳಲ್ಲಿ ನಾವು ಉತ್ತರ ಕೊಡಲು ಹಾಕುವ ಪ್ರಯತ್ನವನ್ನು ಖಂಡಿತ ಮೆಚ್ಚುತ್ತಾನೆ. (ಮಲಾಕಿಯ 3:16 ಓದಿ.) ಆತನಿಗೆ ಇಷ್ಟವಾದದ್ದನ್ನು ಮಾಡಲು ನಾವು ತುಂಬ ಪ್ರಯತ್ನ ಹಾಕುವಾಗ ಯೆಹೋವನು ನಮ್ಮನ್ನು ಆಶೀರ್ವದಿಸುವ ಮೂಲಕ ತನ್ನ ಮೆಚ್ಚುಗೆಯನ್ನು ತೋರಿಸುತ್ತಾನೆ.—ಮಲಾ. 3:10.
9 ಹಾಗಾದರೆ ಕೂಟಗಳಲ್ಲಿ ಉತ್ತರ ಕೊಡಲು ಎಷ್ಟೋ ಒಳ್ಳೇ ಕಾರಣಗಳಿವೆ ಎಂದು ಗೊತ್ತಾಯಿತು. ಆದರೂ ಭಯದಿಂದ ಕೆಲವರಿಗೆ ಉತ್ತರ ಕೊಡಲು ಕೈ ಮೇಲೆ ಬರುವುದೇ ಇಲ್ಲ. ನಿಮಗೂ ಈ ತರ ಆಗುತ್ತಾ? ಬೇಸರ ಮಾಡಿಕೊಳ್ಳಬೇಡಿ. ಬೈಬಲಲ್ಲಿರುವ ಕೆಲವು ತತ್ವಗಳು, ಉದಾಹರಣೆಗಳು ಮತ್ತು ಸಲಹೆಗಳು ಕೂಟಗಳಲ್ಲಿ ಹೆಚ್ಚು ಉತ್ತರ ಕೊಡಲು ಸಹಾಯ ಮಾಡುತ್ತವೆ. ಅವನ್ನು ಈಗ ನೋಡೋಣ.
ಭಯವನ್ನು ಮೆಟ್ಟಿನಿಲ್ಲುವುದು ಹೇಗೆ?
10. (ಎ) ನಮ್ಮಲ್ಲಿ ಹೆಚ್ಚಿನವರಿಗೆ ಉತ್ತರ ಕೊಡಲು ಯಾಕೆ ಭಯ ಆಗುತ್ತದೆ? (ಬಿ) ಉತ್ತರ ಕೊಡಲು ನಾವು ಹೆದರುವುದು ಯಾಕೆ ಒಂದು ಒಳ್ಳೇ ಸೂಚನೆಯಾಗಿದೆ?
10 ಕೈ ಎತ್ತಿ ಉತ್ತರ ಕೊಡಬೇಕು ಅಂತ ಯೋಚಿಸುವಾಗಲೇ ಚಳಿಜ್ವರ ಬಂದ ಹಾಗೆ ಆಗುತ್ತಾ? ತುಂಬ ಜನರಿಗೆ ಈ ರೀತಿ ಆಗುತ್ತದೆ. ಉತ್ತರ ಕೊಡುವಾಗ ನಮ್ಮಲ್ಲಿ ಹೆಚ್ಚಿನವರಿಗೆ ಸ್ವಲ್ಪ ಭಯ ಆಗುತ್ತದೆ. ಈ ಭಯವನ್ನು ಮೆಟ್ಟಿನಿಲ್ಲಬೇಕೆಂದರೆ ನಿಮಗೆ ಯಾಕೆ ಭಯ ಆಗುತ್ತದೆ ಅಂತ ಮೊದಲು ಅರ್ಥಮಾಡಿಕೊಳ್ಳಬೇಕು. ನೀವು ಏನು ಹೇಳಲು ಇಷ್ಟಪಡುತ್ತೀರೋ ಅದನ್ನು ಮರೆತುಬಿಡಬಹುದು ಅಥವಾ ತಪ್ಪು ಉತ್ತರ ಕೊಟ್ಟುಬಿಡಬಹುದು ಅಂತ ಹೆದರುತ್ತೀರಾ? ನೀವು ಕೊಡುವ ಉತ್ತರ ಬೇರೆಯವರು ಕೊಡುವ ಉತ್ತರದಷ್ಟು ಚೆನ್ನಾಗಿರಲ್ಲ ಅಂತ ಯೋಚಿಸುತ್ತೀರಾ? ಈ ರೀತಿಯ ಯೋಚನೆ ಒಂದು ಒಳ್ಳೇ ಸೂಚನೆ. ನಿಮ್ಮಲ್ಲಿ ದೀನತೆ ಇದೆ ಮತ್ತು ನೀವು ಬೇರೆಯವರನ್ನು ನಿಮಗಿಂತ ಶ್ರೇಷ್ಠರೆಂದು ನೋಡುತ್ತೀರಿ ಎಂದು ಇದು ತೋರಿಸುತ್ತದೆ. ಯೆಹೋವನಿಗೆ ಈ ಗುಣ ತುಂಬ ಇಷ್ಟ. (ಕೀರ್ತ. 138:6; ಫಿಲಿ. 2:3) ಆದರೆ ನೀವು ಕೂಟಗಳಲ್ಲಿ ಆತನನ್ನು ಸ್ತುತಿಸಬೇಕು ಮತ್ತು ನಿಮ್ಮ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸಬೇಕೆಂದು ಸಹ ಯೆಹೋವನು ಇಷ್ಟಪಡುತ್ತಾನೆ. (1 ಥೆಸ. 5:11) ಆತನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮಗೆ ಬೇಕಾದ ಧೈರ್ಯವನ್ನು ಕೊಟ್ಟೇ ಕೊಡುತ್ತಾನೆ.
11. ಉತ್ತರ ಕೊಡುವ ವಿಷಯದಲ್ಲಿ ನಾವು ಯಾವ ಕೆಲವು ತತ್ವಗಳನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕು?
11 ನಾವು ಮನಸ್ಸಲ್ಲಿಡಬೇಕಾದ ಕೆಲವು ತತ್ವಗಳನ್ನು ಈಗ ನೋಡೋಣ. ನಾವೆಲ್ಲರೂ ಏನು ಹೇಳುತ್ತೇವೋ ಅಥವಾ ಅದನ್ನು ಹೇಗೆ ಹೇಳುತ್ತೇವೋ ಆ ವಿಷಯದಲ್ಲಿ ತಪ್ಪು ಮಾಡುತ್ತೇವೆ ಎಂದು ಬೈಬಲ್ ಹೇಳುತ್ತದೆ. (ಯಾಕೋ. 3:2) ನಾವು ಮಾತಾಡುವಾಗ ತಪ್ಪೇ ಮಾಡಬಾರದೆಂದು ಯೆಹೋವನೂ ಬಯಸಲ್ಲ, ನಮ್ಮ ಸಹೋದರ-ಸಹೋದರಿಯರೂ ಬಯಸಲ್ಲ. (ಕೀರ್ತ. 103:12-14) ಅವರು ನಮ್ಮನ್ನು ಸ್ವಂತ ಕುಟುಂಬದವರಂತೆ ತುಂಬ ಪ್ರೀತಿಸುತ್ತಾರೆ. (ಮಾರ್ಕ 10:29, 30; ಯೋಹಾ. 13:35) ಕೆಲವೊಮ್ಮೆ ನಾವು ನೆನಸಿದಷ್ಟು ಒಳ್ಳೇದಾಗಿ ಉತ್ತರ ಕೊಡುವುದಕ್ಕಾಗಲ್ಲ ಅಂತ ಅವರಿಗೆ ಅರ್ಥವಾಗುತ್ತದೆ.
12-13. ನೆಹೆಮೀಯ ಮತ್ತು ಯೋನನ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ?
12 ನಿಮ್ಮ ಭಯವನ್ನು ಮೆಟ್ಟಿನಿಲ್ಲಲು ಸಹಾಯ ಮಾಡುವ ಬೈಬಲ್ ಉದಾಹರಣೆಗಳನ್ನು ಸಹ ನೋಡಿ. ನೆಹೆಮೀಯನ ಬಗ್ಗೆ ಯೋಚಿಸಿ. ಒಬ್ಬ ಬಲಿಷ್ಠ ರಾಜನ ಆಸ್ಥಾನದಲ್ಲಿ ನೆಹೆಮೀಯ ಕೆಲಸ ಮಾಡುತ್ತಿದ್ದನು. ನೆಹೆಮೀಯನಿಗೆ ಯೆರೂಸಲೇಮಿನ ಗೋಡೆಗಳು ಮತ್ತು ಬಾಗಿಲುಗಳು ಪಾಳುಬಿದ್ದಿವೆ ಎಂದು ಗೊತ್ತಾಗಿ ತುಂಬ ಬೇಸರದಲ್ಲಿದ್ದನು. (ನೆಹೆ. 1:1-4) ಅವನು ಯಾಕೆ ಇಷ್ಟು ಬೇಸರದಲ್ಲಿದ್ದಾನೆ ಎಂದು ರಾಜ ಕೇಳಿದಾಗ ನೆಹೆಮೀಯನ ಎದೆ ಧಸಕ್ ಅಂದಿರಬೇಕು. ತಕ್ಷಣ ಮನಸ್ಸಲ್ಲೇ ಒಂದು ಪ್ರಾರ್ಥನೆ ಮಾಡಿದ, ರಾಜನಿಗೆ ಉತ್ತರ ಕೊಟ್ಟ. ಇದರಿಂದ ರಾಜ ತುಂಬ ಸಹಾಯ ಮಾಡಿದ. (ನೆಹೆ. 2:1-8) ಯೋನನ ಉದಾಹರಣೆ ಸಹ ಇದೆ. ನಿನೆವೆಗೆ ಹೋಗಿ ಸಾರುವಂತೆ ಹೇಳಿದಾಗ ಯೋನ ಎಷ್ಟು ಹೆದರಿಹೋದನೆಂದರೆ ವಿರುದ್ಧ ದಿಕ್ಕಿನಲ್ಲಿ ತಾರ್ಷೀಷಿಗೆ ಓಡಿಹೋದನು. (ಯೋನ 1:1-3) ಆದರೆ ಯೆಹೋವನ ಸಹಾಯದಿಂದ ಆತನು ನಿನೆವೆಗೆ ಹೋಗಿ ಸಾರಿದನು. ಇದರಿಂದ ನಿನೆವೆಯಲ್ಲಿದ್ದ ಜನರಿಗೆ ತುಂಬ ಸಹಾಯವಾಯಿತು. (ಯೋನ 3:5-10) ಇದರಿಂದ ನಾವೇನು ಕಲಿಯಬಹುದು? ಉತ್ತರ ಕೊಡುವ ಮುಂಚೆ ನೆಹೆಮೀಯನಂತೆ ಪ್ರಾರ್ಥಿಸುವುದು ಮುಖ್ಯ. ನಮಗೆಷ್ಟೇ ಭಯ ಆಗಿದ್ದರೂ ಯೋನನಂತೆ ಯೆಹೋವನ ಸಹಾಯದಿಂದ ನಾವು ಭಯವನ್ನು ಮೆಟ್ಟಿನಿಲ್ಲಬಹುದು. ಯೋನ ನ್ಯಾಯತೀರ್ಪಿನ ಸಂದೇಶವನ್ನು ಸಾರಬೇಕಾಗಿದ್ದದ್ದು ನಿನೆವೆಯಲ್ಲಿದ್ದ ಕ್ರೂರ ಜನರ ಮುಂದೆ, ಆದರೆ ನಾವು ಉತ್ತರ ಕೊಡಬೇಕಾಗಿರುವುದು ನಮ್ಮ ಪ್ರೀತಿಯ ಸಹೋದರ-ಸಹೋದರಿಯರ ಮುಂದೆ!
13 ಕೂಟಗಳಲ್ಲಿ ಒಳ್ಳೇ ಉತ್ತರಗಳನ್ನು ಕೊಡಲು ಯಾವ ಸಲಹೆಗಳು ಸಹಾಯ ಮಾಡುತ್ತವೆ? ಕೆಲವು ಸಲಹೆಗಳನ್ನು ಮುಂದೆ ನೋಡೋಣ.
14. (ಎ) ನಾವು ಯಾಕೆ ನಮ್ಮ ಕೂಟಗಳಿಗೆ ಒಳ್ಳೇ ತಯಾರಿ ಮಾಡಬೇಕು? (ಬಿ) ಇದನ್ನು ಯಾವಾಗ ಮಾಡಬಹುದು?
14 ಪ್ರತಿ ಕೂಟಕ್ಕೆ ತಯಾರಿ ಮಾಡಿ. ನೀವು ಸಮಯ ತಗೊಂಡು ಒಳ್ಳೇ ತಯಾರಿ ಮಾಡಿದರೆ ಉತ್ತರ ಕೊಡಲು ಧೈರ್ಯ ಸಿಗುತ್ತದೆ. (ಎಫೆ. 5:16) ನಾವೆಲ್ಲರೂ ಒಂದೇ ರೀತಿಯಲ್ಲಿ ತಯಾರಿ ಮಾಡಲ್ಲ. 80ರ ಪ್ರಾಯದ ಅಲವೀಜ್ ಎಂಬ ವಿಧವೆ ವಾರದ ಆರಂಭದಲ್ಲೇ ಕಾವಲಿನಬುರುಜು ಅಧ್ಯಯನಕ್ಕೆ ತಯಾರಿ ಮಾಡಲು ಶುರುಮಾಡುತ್ತಾರೆ. “ನಾನು ಸ್ವಲ್ಪ ಮುಂಚೆನೇ ಅಧ್ಯಯನ ಮಾಡಿದರೆ ಕೂಟಗಳನ್ನು ಆನಂದಿಸುತ್ತೇನೆ” ಎಂದವರು ಹೇಳುತ್ತಾರೆ. ಪೂರ್ಣ ಸಮಯ ಐಹಿಕ ಕೆಲಸ ಮಾಡುವ ಜಾಯ್ ಎಂಬ ಸಹೋದರಿ ಕಾವಲಿನಬುರುಜುವನ್ನು ಅಧ್ಯಯನ ಮಾಡಲು ಶನಿವಾರ ಸಮಯ ಮಾಡಿಕೊಳ್ಳುತ್ತಾರೆ. “ಓದಿದ ವಿಷಯ ಮನಸ್ಸಲ್ಲಿ ಹಚ್ಚಹಸುರಾಗಿದ್ದರೆ ನನಗಿಷ್ಟ” ಎಂದವರು ಹೇಳುತ್ತಾರೆ. ಹಿರಿಯನೂ ಪಯನೀಯರನೂ ಆಗಿರುವ ಐಕ್ ತುಂಬ ಬ್ಯುಸಿ ಇರುತ್ತಾರೆ. ಅವರು ಹೇಳುವುದು: “ನಾನು ಒಂದೇ ಸಾರಿ ತುಂಬ ಹೊತ್ತು ಕೂತು ಅಧ್ಯಯನ ಮಾಡುವ ಬದಲು ಇಡೀ ವಾರ ಸ್ವಲ್ಪಸ್ವಲ್ಪ ಅಧ್ಯಯನ ಮಾಡಲು ಇಷ್ಟಪಡುತ್ತೇನೆ.”
15. ನೀವು ಹೇಗೆ ಚೆನ್ನಾಗಿ ತಯಾರಿ ಮಾಡಬಹುದು?
15 ಚೆನ್ನಾಗಿ ತಯಾರಿ ಮಾಡುವುದು ಹೇಗೆ? ನೀವು ಅಧ್ಯಯನ ಮಾಡಲು ಕುಳಿತಾಗ ಪವಿತ್ರಾತ್ಮ ಕೊಡುವಂತೆ ಯೆಹೋವನಿಗೆ ಮೊದಲು ಪ್ರಾರ್ಥಿಸಿ. (ಲೂಕ 11:13; 1 ಯೋಹಾ. 5:14) ಆಮೇಲೆ ಸ್ವಲ್ಪ ಹೊತ್ತು ಇಡೀ ಲೇಖನದ ಮೇಲೆ ಕಣ್ಣಾಡಿಸಿ. ಶೀರ್ಷಿಕೆ, ಉಪ-ಶೀರ್ಷಿಕೆ, ಚಿತ್ರಗಳು ಮತ್ತು ಬೋಧನಾ ಚೌಕಗಳನ್ನು ನೋಡಿ. ಒಂದೊಂದೇ ಪ್ಯಾರ ಓದುವಾಗ, ಕೊಡಲಾಗಿರುವ ವಚನಗಳನ್ನು ತೆರೆದು ಓದಿ. ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ವಚನಗಳನ್ನು ಓದುವುದು ಉತ್ತಮ. ಓದಿದ ಮಾಹಿತಿಯ ಬಗ್ಗೆ ಧ್ಯಾನ ಮಾಡಿ. ಮುಖ್ಯವಾಗಿ ನೀವು ಉತ್ತರ ಕೊಡಲು ಬಯಸುವ ಅಂಶಗಳಿಗೆ ವಿಶೇಷ ಗಮನ ಕೊಡಿ. ನೀವು ಎಷ್ಟು ಚೆನ್ನಾಗಿ ತಯಾರಿ ಮಾಡುತ್ತೀರೋ ಅಷ್ಟು ಹೆಚ್ಚಾಗಿ ಪ್ರಯೋಜನ ಪಡೆಯುತ್ತೀರಿ. ಇದರಿಂದ ನೀವು ಉತ್ತರ ಕೊಡಲು ಸಹ ಸುಲಭವಾಗುತ್ತದೆ.—2 ಕೊರಿಂ. 9:6.
16. (ಎ) ತಯಾರಿ ಮಾಡಲು ನಿಮ್ಮ ಹತ್ತಿರ ಯಾವ ಉಪಕರಣಗಳು ಇವೆ? (ಬಿ) ನೀವು ಅವನ್ನು ಹೇಗೆ ಉಪಯೋಗಿಸುತ್ತೀರಿ?
16 ನಿಮ್ಮಿಂದ ಸಾಧ್ಯವಿರುವುದಾದರೆ, ನಿಮಗೆ ಗೊತ್ತಿರುವ ಭಾಷೆಯಲ್ಲಿರುವ ಡಿಜಿಟಲ್ ಉಪಕರಣಗಳನ್ನು ಉಪಯೋಗಿಸಿ. ಕೂಟಗಳಿಗೆ ತಯಾರಿ ಮಾಡಲು ಯೆಹೋವನು ತನ್ನ ಸಂಘಟನೆಯ ಮೂಲಕ ನಮಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಟ್ಟಿದ್ದಾನೆ. JW ಲೈಬ್ರರಿ ಆ್ಯಪ್ ಮೂಲಕ ನಾವು ನಮ್ಮ ಮೊಬೈಲ್ಗೋ ಟ್ಯಾಬ್ಗೋ ಅಧ್ಯಯನ ಮಾಡಲು ಉಪಯೋಗಿಸುವ ಪ್ರಕಾಶನಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹೀಗೆ ನಾವು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ಅಧ್ಯಯನ ಮಾಡಬಹುದು ಅಥವಾ ಓದಬಹುದು ಅಥವಾ ಕೇಳಿಸಿಕೊಳ್ಳಬಹುದು. ಕೆಲವರು ಕೆಲಸದ ಸ್ಥಳದಲ್ಲಿ ಅಥವಾ ಶಾಲೆ-ಕಾಲೇಜುಗಳಲ್ಲಿ ವಿರಾಮ ಸಿಕ್ಕಿದಾಗ ಅಥವಾ ಪ್ರಯಾಣಿಸುವಾಗ ಅಧ್ಯಯನ ಮಾಡಲು JW ಲೈಬ್ರರಿ ಆ್ಯಪ್ ಅನ್ನು ಉಪಯೋಗಿಸುತ್ತಾರೆ. ನಾವು ಓದುವ ಪಾಠದಲ್ಲಿರುವ ಯಾವುದಾದರೂ ಅಂಶದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದರೆ ನಮಗೆ ವಾಚ್ಟವರ್ ಲೈಬ್ರರಿ ಮತ್ತು ವಾಚ್ಟವರ್ ಆನ್ಲೈನ್ ಲೈಬ್ರರಿ ಇದೆ.
17. (ಎ) ನಾವು ಅನೇಕ ಉತ್ತರಗಳನ್ನು ತಯಾರಿ ಮಾಡಿ ಬರುವುದು ಯಾಕೆ ಒಳ್ಳೇದು? (ಬಿ) ಯೆಹೋವ ದೇವರ ಗೆಳೆಯರಾಗೋಣ—ಉತ್ತರಗಳನ್ನು ತಯಾರಿಸಿ ಎಂಬ ವಿಡಿಯೋದಿಂದ ನೀವೇನು ಕಲಿತಿರಿ?
17 ಸಾಧ್ಯವಿದ್ದರೆ, ಅನೇಕ ಉತ್ತರಗಳನ್ನು ತಯಾರಿ ಮಾಡಿ ಬನ್ನಿ. ಯಾಕೆ? ಯಾಕೆಂದರೆ ನೀವು ಕೈ ಎತ್ತಿದಾಗ ನಿಮ್ಮನ್ನೇ ಕೇಳುತ್ತಾರೆ ಅಂತ ಹೇಳಕ್ಕಾಗಲ್ಲ. ಬೇರೆಯವರು ಕೂಡ ಅದೇ ಸಮಯಕ್ಕೆ ಕೈ ಎತ್ತಬಹುದು ಮತ್ತು ನಡೆಸುವವರು ಅವರಿಗೆ ಅವಕಾಶ ಕೊಡಬಹುದು. ಕೂಟವನ್ನು ಸರಿಯಾದ ಸಮಯಕ್ಕೆ ಮುಗಿಸಲಿಕ್ಕಾಗಿ ಭಾಗವನ್ನು ನಿರ್ವಹಿಸುವ ಸಹೋದರನು ಒಂದೇ ಅಂಶದ ಮೇಲೆ ತುಂಬ ಉತ್ತರ ಹೇಳಲು ಅವಕಾಶ ಕೊಡದೇ ಇರಬಹುದು. ಹಾಗಾಗಿ ಅವರು ಆರಂಭದಲ್ಲೇ ನಿಮ್ಮನ್ನು ಕೇಳದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ. ನೀವು ಅನೇಕ ಉತ್ತರಗಳನ್ನು ತಯಾರಿ ಮಾಡಿಕೊಂಡು ಬಂದರೆ, ಅವಕಾಶ ಸಿಕ್ಕೇ ಸಿಗುತ್ತದೆ. ಬಹುಶಃ ಒಂದು ವಚನ ಓದಲು ಸಹ ನೀವು ತಯಾರಿ ಮಾಡಿಕೊಂಡು ಬರಬಹುದು. ಆದರೆ ನಿಮ್ಮಿಂದ ಸಾಧ್ಯವಿದ್ದರೆ ನಿಮ್ಮ ಸ್ವಂತ ಮಾತಲ್ಲಿ ಒಂದು ಉತ್ತರವನ್ನಾದರೂ ಕೊಡಲು ತಯಾರಿ ಮಾಡಿ ಬನ್ನಿ.b
18. ನಾವು ಯಾಕೆ ಚಿಕ್ಕ ಉತ್ತರಗಳನ್ನು ಕೊಡಬೇಕು?
18 ಚಿಕ್ಕಚಿಕ್ಕ ಉತ್ತರಗಳನ್ನು ಕೊಡಿ. ಸಾಮಾನ್ಯವಾಗಿ ಸರಳವಾದ ಚಿಕ್ಕ ಉತ್ತರ ಎಲ್ಲರಿಗೂ ಇಷ್ಟವಾಗುತ್ತದೆ. ಹಾಗಾಗಿ ಚಿಕ್ಕ ಉತ್ತರಗಳನ್ನು ಕೊಡಲು ಪ್ರಯತ್ನಿಸಿ. ನಿಮ್ಮ ಉತ್ತರ 30 ಸೆಕೆಂಡಿನಷ್ಟು ಇದ್ದರೆ ಉತ್ತಮ. (ಜ್ಞಾನೋ. 10:19; 15:23) ನೀವು ಅನೇಕ ವರ್ಷಗಳಿಂದ ಕೂಟಗಳಲ್ಲಿ ಉತ್ತರ ಕೊಡುತ್ತಿರುವವರಾದರೆ, ನೀವು ಮುಖ್ಯವಾಗಿ ಒಂದು ವಿಷಯ ಮಾಡಬೇಕು. ಅದೇನೆಂದರೆ, ಚಿಕ್ಕ ಉತ್ತರಗಳನ್ನು ಕೊಡುವ ಮೂಲಕ ಒಳ್ಳೇ ಮಾದರಿ ಇಡಬೇಕು. ನೀವು ಉದ್ದುದ್ದವಾದ ಜಟಿಲವಾದ ಉತ್ತರಗಳನ್ನು ಕೊಡುವುದಾದರೆ ಬೇರೆಯವರಿಗೆ ಹಿಂಜರಿಕೆ ಆಗಬಹುದು. ನಿಮ್ಮಷ್ಟು ಒಳ್ಳೇ ಉತ್ತರ ಕೊಡಲು ತಮ್ಮಿಂದ ಯಾವತ್ತೂ ಆಗಲ್ಲ ಎಂಬ ಯೋಚನೆ ಅವರಿಗೆ ಬರಬಹುದು. ಅಷ್ಟೇ ಅಲ್ಲ, ಚಿಕ್ಕ ಉತ್ತರ ಕೊಟ್ಟರೆ ತುಂಬ ಜನರಿಗೆ ಭಾಗವಹಿಸಲು ಅವಕಾಶ ಸಿಗುತ್ತದೆ. ನಿಮಗೆ ಮೊದಲು ಉತ್ತರ ಕೊಡುವ ಅವಕಾಶ ಸಿಕ್ಕಿದರೆ, ಪ್ರಶ್ನೆಗಿರುವ ನೇರವಾದ ಉತ್ತರ ಕೊಡಿ ಸಾಕು. ಪ್ಯಾರದಲ್ಲಿರುವ ಎಲ್ಲಾ ಅಂಶಗಳನ್ನು ಹೇಳಲು ಹೋಗಬೇಡಿ. ಪ್ಯಾರದಲ್ಲಿರುವ ಮುಖ್ಯ ವಿಚಾರದ ಬಗ್ಗೆ ಚರ್ಚೆಯಾದ ನಂತರ ಹೆಚ್ಚಿನ ಅಂಶಗಳ ಬಗ್ಗೆ ನೀವು ಉತ್ತರ ಕೊಡಬಹುದು.—“ನೀವು ಯಾವುದರ ಬಗ್ಗೆ ಉತ್ತರ ಕೊಡಬಹುದು?” ಎಂಬ ಚೌಕ ನೋಡಿ.
19. ಸುಲಭವಾಗಿ ಉತ್ತರ ಕೊಡಲು ನೀವೇನು ಮಾಡಬಹುದು?
19 ನೀವು ಯಾವ ಪ್ಯಾರದಲ್ಲಿ ಉತ್ತರ ಕೊಡಲು ಬಯಸುತ್ತೀರೋ ಅದನ್ನು ಚರ್ಚೆ ನಡೆಸುವವರಿಗೆ ಮೊದಲೇ ಹೇಳಿ. ನೀವು ಇದನ್ನು ಕೂಟ ಆರಂಭವಾಗುವ ಮುಂಚೆನೇ ಚರ್ಚೆ ನಡೆಸುವ ಸಹೋದರನ ಹತ್ತಿರ ಹೋಗಿ ಹೇಳಬೇಕು. ಆ ನಿರ್ದಿಷ್ಟ ಪ್ಯಾರ ಬಂದಾಗ, ತಕ್ಷಣ ನಿಮ್ಮ ಕೈಯನ್ನು ಅವರಿಗೆ ಕಾಣಿಸುವಷ್ಟು ಮೇಲೆ ಎತ್ತಿರಿ.
20. ಕ್ರೈಸ್ತ ಕೂಟಗಳನ್ನು ಸ್ನೇಹಿತರ ಜೊತೆ ಸೇರಿ ಮಾಡುವ ಊಟಕ್ಕೆ ಹೇಗೆ ಹೋಲಿಸಬಹುದು?
20 ಕ್ರೈಸ್ತ ಕೂಟಗಳನ್ನು ಒಳ್ಳೇ ಸ್ನೇಹಿತರೊಂದಿಗೆ ಸೇರಿ ಮಾಡುವ ಊಟಕ್ಕೆ ಹೋಲಿಸಬಹುದು. ನಿಮ್ಮನ್ನು ಮತ್ತು ಸಭೆಯಲ್ಲಿರುವ ಕೆಲವರನ್ನು ಯಾರಾದರೂ ಊಟಕ್ಕೆ ಕರೆದಿದ್ದರೆ ಮತ್ತು ನೀವು ಸಹ ಏನಾದರೂ ಮಾಡಿಕೊಂಡು ತರುವಂತೆ ಹೇಳಿದ್ದರೆ ನಿಮಗೆ ಹೇಗನಿಸುತ್ತದೆ? ಸ್ವಲ್ಪ ಚಿಂತೆ-ಭಯ ಆಗಬಹುದು. ಆದರೆ ಎಲ್ಲರಿಗೂ ಇಷ್ಟವಾಗುವ ಏನನ್ನಾದರೂ ಮಾಡಿಕೊಂಡು ತರಲು ನೀವು ಖಂಡಿತ ಪ್ರಯತ್ನ ಮಾಡುತ್ತೀರಿ. ನಮ್ಮನ್ನು ಕೂಟಗಳಿಗೆ ಕರೆದಿರುವುದು ಯೆಹೋವನು. ರುಚಿರುಚಿಯಾದ ಆಧ್ಯಾತ್ಮಿಕ ಆಹಾರವನ್ನು ನಮ್ಮ ಮುಂದೆ ಇಟ್ಟಿದ್ದಾನೆ. (ಕೀರ್ತ. 23:5; ಮತ್ತಾ. 24:45) ನಾವು ಸಹ ನಮ್ಮಿಂದಾದ ಏನಾದರೂ ಮಾಡಿಕೊಂಡು ತಂದರೆ ಆತನಿಗೆ ತುಂಬ ಖುಷಿಯಾಗುತ್ತದೆ. ಹಾಗಾಗಿ ಚೆನ್ನಾಗಿ ತಯಾರಿ ಮಾಡಿಕೊಂಡು ಬಂದು ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಉತ್ತರ ಕೊಡಿ. ಆಗ ನೀವು ಯೆಹೋವನು ಕರೆದಿರುವ ಊಟಕ್ಕೆ ಬಂದು ಬರೀ ತಿಂದು ಹೋಗುವುದಿಲ್ಲ, ಸಭೆಯೊಂದಿಗೆ ಹಂಚಿಕೊಳ್ಳಲು ಏನನ್ನೋ ತಂದಂತೆ ಕೂಡ ಆಗುತ್ತದೆ.
ಗೀತೆ 138 ಯೆಹೋವ ನಿನ್ನ ನಾಮ
a ಕೀರ್ತನೆಗಾರನಾದ ದಾವೀದನಂತೆ ನಾವೆಲ್ಲರೂ ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನನ್ನು ಸ್ತುತಿಸಲು ಇಷ್ಟಪಡುತ್ತೇವೆ. ನಾವು ಆರಾಧನೆಗಾಗಿ ಸೇರಿಬರುವಾಗ ದೇವರ ಮೇಲಿರುವ ನಮ್ಮ ಪ್ರೀತಿಯನ್ನು ತೋರಿಸಲು ಒಂದು ವಿಶೇಷ ಅವಕಾಶ ಸಿಗುತ್ತದೆ, ಅದು ಉತ್ತರ ಕೊಡುವ ಅವಕಾಶ. ಆದರೆ ನಮ್ಮಲ್ಲಿ ಕೆಲವರಿಗೆ ಉತ್ತರ ಕೊಡಲು ಭಯ ಆಗುತ್ತದೆ. ಇದಕ್ಕೆ ಕಾರಣ ಏನಿರಬಹುದು ಮತ್ತು ಆ ಭಯವನ್ನು ಹೇಗೆ ಮೆಟ್ಟಿನಿಲ್ಲುವುದು ಅಂತ ಈ ಲೇಖನದಲ್ಲಿ ಕಲಿಯಲಿದ್ದೇವೆ.
b ನಮ್ಮ ವೆಬ್ಸೈಟಲ್ಲಿ ಯೆಹೋವ ದೇವರ ಗೆಳೆಯರಾಗೋಣ—ಉತ್ತರಗಳನ್ನು ತಯಾರಿಸಿ ಎಂಬ ವಿಡಿಯೋ ನೋಡಿ. ಇದು ಬೈಬಲ್ ಬೋಧನೆಗಳು > ಮಕ್ಕಳು ಎಂಬ ವಿಭಾಗದಲ್ಲಿದೆ.
c ಚಿತ್ರ ವಿವರಣೆ: ಒಂದು ಸಭೆಯ ಸದಸ್ಯರು ಕಾವಲಿನಬುರುಜು ಚರ್ಚೆಯಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದಾರೆ.
d ಚಿತ್ರ ವಿವರಣೆ: ಪುಟ 9ರ ಚಿತ್ರದಲ್ಲಿರುವ ಕೆಲವು ಸಹೋದರ-ಸಹೋದರಿಯರು. ಪ್ರತಿಯೊಬ್ಬರ ಸನ್ನಿವೇಶ ಬೇರೆಬೇರೆ ಆಗಿದ್ದರೂ ಕೂಟದಲ್ಲಿ ಚರ್ಚಿಸಲಿರುವ ಮಾಹಿತಿಯನ್ನು ಅಧ್ಯಯನ ಮಾಡಲು ಎಲ್ಲರೂ ಸಮಯ ಕೊಡುತ್ತಿದ್ದಾರೆ.