ಬೈಬಲಿನ ದೃಷ್ಟಿಕೋನ
ನಮ್ಮ ಪಾಪಗಳಿಗಾಗಿ ನಾವು ಸೈತಾನನನ್ನು ದೂರಬೇಕೊ?
ಪ್ರಥಮ ಮಾನವನ ಪಾಪಕ್ಕಾಗಿ ಸೈತಾನನ ಮೇಲೆ ತಪ್ಪುಹೊರಿಸಲ್ಪಟ್ಟಿತು. “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಹವ್ವಳು ಹೇಳಿದಳು. (ಆದಿಕಾಂಡ 3:13) ಅಂದಿನಿಂದ, “ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು,” ಮಾನವಕುಲದ ವಿರುದ್ಧ ಆವೇಶದಿಂದ ವರ್ತಿಸುವುದನ್ನು ಮುಂದುವರಿಸಿದೆ. ಮತ್ತು ಜನರ ‘ಮನಸ್ಸನ್ನು ಮಂಕುಮಾಡುತ್ತಾ’ “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿದೆ. (ಪ್ರಕಟನೆ 12:9; 2 ಕೊರಿಂಥ 4:4) ಅವನ ಒತ್ತಡವನ್ನು ಯಾವ ಮಾನವನೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಾದರೂ, ನಾವು ಅವನ ಪ್ರಭಾವವನ್ನು ಪ್ರತಿರೋಧಿಸಸಾಧ್ಯವಿಲ್ಲ ಎಂಬುದನ್ನು ಇದು ಅರ್ಥೈಸುತ್ತದೊ? ಮತ್ತು ನಾವು ಪಾಪಮಾಡುವಾಗಲೆಲ್ಲ ಅವನೇ ಅದಕ್ಕೆ ಕಾರಣನಾಗಿದ್ದಾನೊ?
ಸೈತಾನನು ಹವ್ವಳನ್ನು ವಂಚಿಸಿದನೆಂದು ಬೈಬಲು ವಿವರಿಸುತ್ತದೆ. (1 ತಿಮೊಥೆಯ 2:14) ದೇವರ ಆಜ್ಞೆಯನ್ನು ಉಲ್ಲಂಘಿಸುವ ಮೂಲಕ, ತಾನು ದೇವರಂತಹ ಒಳನೋಟವನ್ನು ಹಾಗೂ ಸ್ವಾತಂತ್ರ್ಯವನ್ನು ಹೊಂದಸಾಧ್ಯವಿದೆಯೆಂದು ಆಲೋಚಿಸುವ ಮೂಲಕ ಅವಳು ವಂಚಿಸಲ್ಪಟ್ಟಳು. (ಆದಿಕಾಂಡ 3:4, 5) ಆ ಕಲ್ಪನೆಯಿಂದ ಪ್ರೇರಿತಳಾಗಿ ಅವಳು ಪಾಪಮಾಡಿದಳು. ಆದರೂ, ಅದಕ್ಕಾಗಿ ದೇವರು ಅವಳನ್ನು ಜವಾಬ್ದಾರಳನ್ನಾಗಿ ಮಾಡಿದನು ಮತ್ತು ಅವಳಿಗೆ ಮರಣದಂಡನೆಯನ್ನು ವಿಧಿಸಿದನು. ಏಕೆ? ಸೈತಾನನು ಸುಳ್ಳು ಹೇಳಿದ್ದನಾದರೂ, ಅವಳಿಗೆ ಸಂಪೂರ್ಣವಾಗಿ ದೇವರ ಆಜ್ಞೆಯ ತಿಳುವಳಿಕೆಯಿತ್ತು. ಅವಿಧೇಯಳಾಗುವಂತೆ ಒತ್ತಾಯಿಸಲ್ಪಟ್ಟಿರಲಿಲ್ಲ; ಬದಲಾಗಿ, ತನ್ನ ಕೃತ್ಯಗಳ ಮೇಲೆ ಅವಳಿಗೆ ಸಂಪೂರ್ಣ ನಿಯಂತ್ರಣವಿತ್ತು, ಅಂದರೆ ಸೈತಾನನ ಪ್ರಭಾವವನ್ನು ಪ್ರತಿರೋಧಿಸಲು ಅವಳು ಸಮರ್ಥಳಾಗಿದ್ದಳು.
ಪಿಶಾಚನನ್ನು ಪ್ರತಿರೋಧಿಸಿರಿ
ಮಾನವರಾದ ನಮಗೆ ಪಿಶಾಚನನ್ನು ಪ್ರತಿರೋಧಿಸುವ ಶಕ್ತಿಯಿದೆ. “ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ” ವಿರುದ್ಧ ನಾವು “ಹೋರಾಡ”ಬೇಕಾಗಿದೆ ಎಂದು ಎಫೆಸ 6:12ರಲ್ಲಿ ನಮಗೆ ಹೇಳಲಾಗಿದೆ. ಹಾಗಾದರೆ, ನಾವು ಸೈತಾನನ ಪ್ರಭಾವಗಳನ್ನು ಎದುರಿಸುವಂತೆ ದೇವರು ನಮ್ಮಿಂದ ಅಪೇಕ್ಷಿಸುತ್ತಾನೆಂಬುದು ಸ್ಪಷ್ಟ. ಆದರೆ ಸೈತಾನನ ಹಾಗೂ ಅವನ ದೆವ್ವಗಳ ಅತಿಮಾನುಷ ಶಕ್ತಿಯ ಎದುರಿನಲ್ಲಿ ಒಬ್ಬ ಮಾನವನ ಹೋರಾಟ ಸಾಧ್ಯವೊ? ನಮಗೆ ಸರಿಸಾಟಿಯಿಲ್ಲದ, ಖಂಡಿತವಾಗಿಯೂ ಸೋಲನ್ನಪ್ಪುವ ಒಂದು ಹೋರಾಟದಲ್ಲಿ ಭಾಗವಹಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಗುತ್ತಿದೆಯೊ? ಇಲ್ಲ. ಏಕೆಂದರೆ ನಮ್ಮ ಸ್ವಂತ ಬಲದಿಂದ ನಾವು ಪಿಶಾಚನೊಂದಿಗೆ ಹೋರಾಡುವಂತೆ ದೇವರು ಹೇಳುತ್ತಿಲ್ಲ. ನಾವು ಪಿಶಾಚನ ಆಕರ್ಷಣೆಗಳನ್ನು ಪ್ರತಿರೋಧಿಸಿ, ವಿಜಯವನ್ನು ಹೊಂದಸಾಧ್ಯವಿರುವ ಅನೇಕ ಸಾಧನೋಪಾಯಗಳನ್ನು ಯೆಹೋವನು ನಮಗೆ ಒದಗಿಸುತ್ತಾನೆ. ಪಿಶಾಚನು ಯಾರು, ಅವನ ಕುತಂತ್ರಗಳೇನು, ಮತ್ತು ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಬೈಬಲು ನಮಗೆ ತಿಳಿಸುತ್ತದೆ.—ಯೋಹಾನ 8:44; 2 ಕೊರಿಂಥ 2:11; 11:14.
“ಪಿಶಾಚನನ್ನು ಎದುರಿಸಿರಿ”
ಪಿಶಾಚನನ್ನು ಪ್ರತಿರೋಧಿಸುವುದರಲ್ಲಿ ಇಬ್ಬಗೆಯ ಸಲಹೆಗಳನ್ನು ಶಾಸ್ತ್ರವಚನಗಳು ಶಿಫಾರಸ್ಸು ಮಾಡುತ್ತವೆ. ನಮಗೆ ಹೀಗೆ ಸಲಹೆ ನೀಡಲಾಗಿದೆ: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು [“ಪಿಶಾಚನನ್ನು,” NW] ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋಬ 4:7) ನಮ್ಮನ್ನು ದೇವರಿಗೆ ಅಧೀನಪಡಿಸಿಕೊಳ್ಳಸಾಧ್ಯವಿರುವ ಒಂದು ಸಲಹೆಯು, ಆತನ ಆಜ್ಞೆಗಳಿಗೆ ವಿಧೇಯತೆ ತೋರಿಸುವುದೇ ಆಗಿದೆ. ದೇವರ ಅಸ್ತಿತ್ವ, ಆತನ ಒಳ್ಳೆಯತನ, ಆತನ ಭಯವಿಸ್ಮಿತ ಶಕ್ತಿ ಹಾಗೂ ಅಧಿಕಾರ, ಮತ್ತು ಆತನ ಅತ್ಯುಚ್ಚ ಮೂಲತತ್ವಗಳ ವಿಷಯದಲ್ಲಿ ನಾವು ಯಾವಾಗಲೂ ಅರಿವುಳ್ಳವರಾಗಿರುವುದು, ಸೈತಾನನನ್ನು ವಿರೋಧಿಸಲು ನಮಗೆ ಬಲವನ್ನು ಕೊಡುತ್ತದೆ. ದೇವರಿಗೆ ಸತತವಾಗಿ ಪ್ರಾರ್ಥಿಸುವುದು ಸಹ ಅತ್ಯಾವಶ್ಯಕವಾಗಿದೆ.—ಎಫೆಸ 6:18.
ಯೇಸು ಪಿಶಾಚನಿಂದ ಶೋಧನೆಗೊಳಗಾದ ಸಂದರ್ಭವನ್ನು ಪರಿಗಣಿಸಿರಿ. ದೇವರಿಂದ ಕೊಡಲ್ಪಟ್ಟ ಬೇರೆ ಬೇರೆ ಆಜ್ಞೆಗಳನ್ನು ಆಧಾರವಾಗಿಟ್ಟುಕೊಂಡಿದ್ದರಿಂದ, ಶೋಧನೆಯನ್ನು ಪ್ರತಿರೋಧಿಸಲು ಯೇಸುವಿಗೆ ಅದು ಸಹಾಯ ಮಾಡಿತು. ಯೇಸುವನ್ನು ಪಾಪದಲ್ಲಿ ಸಿಕ್ಕಿಸಲು ಅಸಮರ್ಥನಾಗಿ, ಸೈತಾನನು ಅವನನ್ನು ಬಿಟ್ಟುಹೋದನು. ಆ ಉಗ್ರ ಪರೀಕ್ಷೆಯ ಬಳಿಕ, ತನ್ನ ದೇವದೂತರ ಮುಖಾಂತರ ಯೆಹೋವನು ಯೇಸುವನ್ನು ಇನ್ನೂ ಹೆಚ್ಚು ಬಲಪಡಿಸಿದನು. (ಮತ್ತಾಯ 4:1-11) ಹೀಗೆ, ‘ಕೇಡಿನಿಂದ ನಮ್ಮನ್ನು ತಪ್ಪಿಸು’ ಎಂದು ದೇವರನ್ನು ಬೇಡಿಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ದೃಢಭರವಸೆಯಿಂದ ಉತ್ತೇಜಿಸಸಾಧ್ಯವಿತ್ತು.—ಮತ್ತಾಯ 6:13.
ದೇವರು ನಮ್ಮನ್ನು ಶೋಧನೆಯಿಂದ ಕಾಪಾಡುವುದು, ಆತನು ನಮ್ಮ ಸುತ್ತಲೂ ರಕ್ಷಣಾತ್ಮಕ ಬೇಲಿಯನ್ನು ಹಾಕುವುದನ್ನು ಅರ್ಥೈಸುವುದಿಲ್ಲ. ಬದಲಾಗಿ, ಸತ್ಯ, ನೀತಿ, ಶಾಂತಿ, ಮತ್ತು ನಂಬಿಕೆಯಂತಹ ದೈವಿಕ ಗುಣಗಳನ್ನು ನಾವು ಬೆನ್ನಟ್ಟುವಂತೆ ಆತನು ನಮಗೆ ಹೇಳುತ್ತಾನೆ. ಈ ಗುಣಗಳು, ನಾವು “ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ” ಮಾಡುತ್ತಾ, “ಸರ್ವಾಯುಧ”ಗಳೋಪಾದಿ ಕಾರ್ಯನಡಿಸುತ್ತವೆ. (ಎಫೆಸ 6:11, 13-18) ಆದುದರಿಂದ, ದೇವರ ಸಹಾಯದಿಂದ ಪಿಶಾಚನ ಶೋಧನೆಗಳನ್ನು ವಿಫಲಗೊಳಿಸಸಾಧ್ಯವಿದೆ.
ಯಾಕೋಬ 4:7ರಲ್ಲಿ ಇನ್ನೊಂದು ಸಲಹೆಯನ್ನು ಶಿಫಾರಸ್ಸು ಮಾಡಲಾಗಿದೆ. ಅದೇನೆಂದರೆ “ಸೈತಾನನನ್ನು ಎದುರಿಸಿರಿ.” ಇದರಲ್ಲಿ ದೃಢವಾದ ಕ್ರಿಯೆಯು ಒಳಗೂಡಿದೆ, ಅಂದರೆ ಅವನ ಹಾನಿಕರ ಪ್ರಭಾವದಿಂದ ದೂರವಿರುವುದು ಒಳಗೂಡಿದೆ. ಒಬ್ಬನು ಸೈತಾನನ ಅಧಿಕಾರಕ್ಕೆ ಒಳಗಾಗುವುದರಿಂದ ದೂರವಿರಬೇಕು ಮತ್ತು ಇಂದು ಲೋಕದಲ್ಲಿ ಹೆಚ್ಚು ಪ್ರಚಲಿತವಾಗಿರುವ ಪ್ರಾಪಂಚಿಕ ಹಾಗೂ ಅನೈತಿಕ ತತ್ವಜ್ಞಾನಗಳನ್ನು ತಿರಸ್ಕರಿಸಬೇಕು. ಈ ರೀತಿಯಲ್ಲಿ ಪಿಶಾಚನನ್ನು ವಿರೋಧಿಸುವುದು, ಅದೇ ಸಮಯದಲ್ಲಿ ದೇವರನ್ನು ಸಂತೋಷಪಡಿಸಲಿಕ್ಕಾಗಿ ನಮ್ಮ ಜೀವಿತವನ್ನು ಸಮರ್ಪಿಸಿಕೊಳ್ಳುವುದು, ಸೈತಾನನ ವಿರುದ್ಧವಾಗಿರುವ ನಮ್ಮ ಹೋರಾಟದಲ್ಲಿ ಅಮೂಲ್ಯವಾದ ಸಾಧನವಾಗಿದೆ. ಆದರೆ ಎಲ್ಲ ಪಾಪಗಳು ಪಿಶಾಚನ ಪ್ರಭಾವದ ನೇರವಾದ ಫಲಿತಾಂಶಗಳಾಗಿವೆಯೊ?
ಆಂತರ್ಯದಿಂದ ನಮ್ಮ ಹೋರಾಟ
ಬೈಬಲ್ ಬರಹಗಾರನಾದ ಯಾಕೋಬನು ವಿವರಿಸುವುದು: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋಬ 1:14, 15) ದುಃಖಕರವಾಗಿ, ಅಂತರ್ಗತ ದೌರ್ಬಲ್ಯವನ್ನು ಹಾಗೂ ಅಪರಿಪೂರ್ಣತೆಯನ್ನು ನಾವು ಸಂಪೂರ್ಣವಾಗಿ ಜಯಿಸಲು ಸಾಧ್ಯವಿಲ್ಲ. (ರೋಮಾಪುರ 5:12) “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ” ಎಂದು ಬೈಬಲು ಹೇಳುತ್ತದೆ.—ಪ್ರಸಂಗಿ 7:20.
ಎಲ್ಲ ಪಾಪಗಳು ಸಂಪೂರ್ಣವಾಗಿ ನಮ್ಮ ನಿಯಂತ್ರಣಕ್ಕೆ ಮೀರಿದವುಗಳಾಗಿವೆ ಎಂಬುದನ್ನು ಇದು ಅರ್ಥೈಸುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ನಾವೇ ತಪ್ಪು ಆಯ್ಕೆಗಳನ್ನು ಮಾಡಿ, ನಮ್ಮ ಮೇಲೆ ನಾವೇ ಶೋಧನೆಗಳನ್ನು ತಂದುಕೊಳ್ಳುತ್ತೇವೆ. ಆದುದರಿಂದ, ನಮ್ಮ ಸ್ವಂತ ಅಪರಿಪೂರ್ಣತೆಯ ಕಾರಣದಿಂದ ಅಥವಾ ಸೈತಾನನ ಪ್ರಭಾವದಿಂದ ನಮ್ಮಲ್ಲಿ ಒಂದು ಕೆಟ್ಟ ಬಯಕೆಯು ಉಂಟಾಗಿರಬಹುದಾದರೂ, ನಾವು ಆ ಬಯಕೆಯನ್ನು ಅಂಗೀಕರಿಸುತ್ತೇವೊ ಅಥವಾ ತಿರಸ್ಕರಿಸುತ್ತೇವೊ ಎಂಬುದು ನಮಗೆ ಬಿಡಲ್ಪಟ್ಟಿದೆ. ಸೂಕ್ತವಾಗಿಯೇ, ಅಪೊಸ್ತಲ ಪೌಲನು ಬರೆದುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”—ಗಲಾತ್ಯ 6:7.
ಜವಾಬ್ದಾರಿಯನ್ನು ಅಂಗೀಕರಿಸಿರಿ
ಅನೇಕವೇಳೆ ತಮ್ಮ ಸ್ವಂತ ಬಲಹೀನತೆಗಳು, ಸೋಲುಗಳು, ಲೋಪದೋಷಗಳನ್ನು—ಅಂದರೆ ಪಾಪಗಳನ್ನು ಅಂಗೀಕರಿಸುವುದು ಮಾನವರಿಗೆ ಕಠಿನವಾದದ್ದಾಗಿದೆ. (ಕೀರ್ತನೆ 36:2) ನಮ್ಮ ಪಾಪಗಳಿಗಾಗಿರುವ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಂತೆ ನಮಗೆ ಸಹಾಯ ಮಾಡಸಾಧ್ಯವಿರುವ ಒಂದು ವಿಷಯವು ಯಾವುದೆಂದರೆ, ಈಗ ನಾವು ಪರಿಪೂರ್ಣರಾಗಿರುವಂತೆ ದೇವರು ನಮ್ಮಿಂದ ಕೇಳಿಕೊಳ್ಳುವುದಿಲ್ಲ ಎಂಬ ಜ್ಞಾನವೇ. “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ” ಎಂದು ಕೀರ್ತನೆಗಾರನಾದ ದಾವೀದನು ಘೋಷಿಸಿದನು. (ಕೀರ್ತನೆ 103:10) ದೇವರು ನಮ್ಮನ್ನು ಕ್ಷಮಿಸುತ್ತಾನಾದರೂ, ಪಿಶಾಚನ ಆಕರ್ಷಣೆಗಳ ವಿರುದ್ಧ ಹಾಗೂ ನಮ್ಮ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ನಮ್ಮನ್ನು ಶಿಸ್ತುಪಡಿಸಿಕೊಳ್ಳುವಂತೆ ಆತನು ನಮ್ಮಿಂದ ಅಪೇಕ್ಷಿಸುತ್ತಾನೆ.—1 ಕೊರಿಂಥ 9:27.
ಪಿಶಾಚನು ನಮ್ಮ ಕೃತ್ಯಗಳನ್ನು ನಿಯಂತ್ರಿಸಬಲ್ಲನು ಮತ್ತು ಮಾನವಕುಲದ ಪಾಪಪೂರ್ಣ ಸ್ಥಿತಿಗಾಗಿ ಬಹುಮಟ್ಟಿಗೆ ಅವನೇ ಜವಾಬ್ದಾರನಾಗಿದ್ದಾನೆ ಎಂಬುದು ದೇವರಿಗೆ ತಿಳಿದಿದೆಯಾದರೂ, ನಮ್ಮ ವೈಯಕ್ತಿಕ ಜವಾಬ್ದಾರಿಯಿಂದ ಇದು ನಮ್ಮನ್ನು ಮುಕ್ತರನ್ನಾಗಿ ಮಾಡುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದುದರಿಂದ, ರೋಮಾಪುರ 14:12 ಹೇಳುವುದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು [“ಲೆಕ್ಕವೊಪ್ಪಿಸಬೇಕು,” NW].”
ಆದರೂ, ನಾವು ‘ಕೆಟ್ಟತನವನ್ನು ಹೇಸಿಕೊಂಡು,’ “ಒಳ್ಳೇದನ್ನು ಬಿಗಿಯಾಗಿ ಹಿಡಿದು”ಕೊಳ್ಳುವಲ್ಲಿ, ನಾವು ಕೆಟ್ಟತನವನ್ನು ಜಯಿಸಸಾಧ್ಯವಿದೆ. (ರೋಮಾಪುರ 12:9, 21) ಪ್ರಪ್ರಥಮ ಸ್ತ್ರೀಯಾದ ಹವ್ವಳು, ಇದನ್ನು ಮಾಡುವುದರಲ್ಲಿ ವಿಫಲಳಾದಳು, ಮತ್ತು ಅವಳ ಅವಿಧೇಯತೆಯ ಕಾರಣದಿಂದ ಅವಳಿಗೆ ಶಿಕ್ಷೆಯು ವಿಧಿಸಲ್ಪಟ್ಟಿತು; ಅವಳು ಸೈತಾನನನ್ನು ಪ್ರತಿರೋಧಿಸಿ, ದೇವರಿಗೆ ವಿಧೇಯಳಾಗಸಾಧ್ಯವಿತ್ತು. (ಆದಿಕಾಂಡ 3:16) ಆದರೂ, ಅವಳನ್ನು ವಂಚಿಸುವುದರಲ್ಲಿ ಸೈತಾನನು ವಹಿಸಿದ ಪಾತ್ರವನ್ನು ದೇವರು ಅಲಕ್ಷಿಸಲಿಲ್ಲ. ಆತನು ಪಿಶಾಚನನ್ನು ಶಪಿಸಿ, ಕಟ್ಟಕಡೆಯ ಸಂಹಾರಕ್ಕೆ ಗುರಿಪಡಿಸಿದ್ದಾನೆ. (ಆದಿಕಾಂಡ 3:14, 15; ರೋಮಾಪುರ 16:20; ಇಬ್ರಿಯ 2:14) ಸಮೀಪ ಭವಿಷ್ಯತ್ತಿನಲ್ಲಿ ನಾವು ಇನ್ನೆಂದಿಗೂ ಅವನ ದುಷ್ಟ ಪ್ರಭಾವದೊಂದಿಗೆ ಹೋರಾಡಬೇಕಾಗಿಲ್ಲ.—ಪ್ರಕಟನೆ 20:1-3, 10.
[ಪುಟ 22 ರಲ್ಲಿರುವ ಚಿತ್ರ ಕೃಪೆ]
Erich Lessing/Art Resource, NY