ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಜನವರಿ 6-12
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 1-2
“ಯೆಹೋವನು ಭೂಮಿಯಲ್ಲಿ ಜೀವಿಗಳನ್ನು ಸೃಷ್ಟಿಸಿದನು”
(ಆದಿಕಾಂಡ 1:3, 4) ಆಗ ದೇವರು—ಬೆಳಕಾಗಲಿ ಅನ್ನಲು ಬೆಳಕಾಯಿತು. ದೇವರು ಆ ಬೆಳಕನ್ನು ಒಳ್ಳೇದೆಂದು ನೋಡಿದನು. 4 ದೇವರು ಬೆಳಕನ್ನೂ ಕತ್ತಲೆಯನ್ನೂ ಬೇರೆ ಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟನು.
(ಆದಿಕಾಂಡ 1:6) ಬಳಿಕ ದೇವರು—ಜಲಸಮೂಹಗಳ ನಡುವೆ ವಿಸ್ತಾರವಾದ ಗುಮಟವು ಉಂಟಾಗಲಿ; ಅದು ಕೆಳಗಣ ನೀರುಗಳನ್ನೂ ಮೇಲಣ ನೀರುಗಳನ್ನೂ ಬೇರೆ ಬೇರೆ ಮಾಡಲಿ ಅಂದನು.
(ಆದಿಕಾಂಡ 1:9) ಅನಂತರ ದೇವರು—ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ ಅಂದನು; ಹಾಗೆಯೇ ಆಯಿತು.
(ಆದಿಕಾಂಡ 1:11) ತರುವಾಯ ದೇವರು—ಭೂಮಿಯು ಹುಲ್ಲನ್ನೂ ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳಿಸಲಿ; ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನೂ ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ ಎಂದು ಹೇಳಿದನು; ಹಾಗೆಯೇ ಆಯಿತು.
it-1 ಪುಟ 527-528
ಸೃಷ್ಟಿ
ಸೃಷ್ಟಿಯ ಮೊದಲನೇ ದಿನ ಆರಂಭಗೊಳ್ಳುವ ಮುಂಚೆಯೇ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಅಸ್ತಿತ್ವದಲ್ಲಿದ್ದವು. ಆದರೆ ಅವುಗಳ ಬೆಳಕು ಭೂಮಿಗೆ ತಲುಪುತ್ತಿರಲಿಲ್ಲ. ಸೃಷಿಯ ಮೊದಲನೇ ದಿನ ದೇವರು, “ಬೆಳಕಾಗಲಿ” ಅಂತ ಹೇಳಿದಾಗಲೇ ಅವುಗಳ ಬೆಳಕು ದಟ್ಟವಾದ ಮೋಡಗಳನ್ನು ತೂರಿ ಭೂಮಿಗೆ ಬಂತು. ‘ಬೆಳಕು ಕ್ರಮೇಣವಾಗಿ ಅಸ್ತಿತ್ವಕ್ಕೆ ಬಂತು’ ಅಂತ ಜೆ. ಡಬ್ಲು. ವಾಟ್ಸ್ ಎಂಬ ಭಾಷಾಂತರಗಾರರು ಹೇಳುತ್ತಾರೆ. (ಆದಿಕಾಂಡ 1:3, ಅ ಡಿಸ್ಟಿಂಗ್ಟಿವ್ ಟ್ರಾನ್ಸಲೇಶನ್ ಆಫ್ ಜೆನೆಸಸ್) ಇದರಿಂದ ಈ ವಿಷಯ ಒಂದು ಕ್ಷಣದಲ್ಲಿ ಅಲ್ಲ ಹಂತಹಂತವಾಗಿ ಆಯಿತು ಅಂತ ಗೊತ್ತಾಗುತ್ತೆ. ಆಮೇಲೆ ದೇವರು ಬೆಳಕಿಗೆ ‘ಹಗಲು’ ಮತ್ತು ಕತ್ತಲೆಗೆ ‘ರಾತ್ರಿ’ ಅಂತ ಹೆಸರಿಟ್ಟನು. ಭೂಮಿ ಸುತ್ತುವುದರಿಂದ ಒಂದು ಕಡೆ ಬೆಳಕಾದರೆ ಇನ್ನೊಂದು ಕಡೆ ಕತ್ತಲಾಗುತ್ತೆ.—ಆದಿ 1:3, 4.
ಎರಡನೇ ದಿನ ದೇವರು “ಕೆಳಗಣ ನೀರುಗಳನ್ನೂ ಮೇಲಣ ನೀರುಗಳನ್ನೂ” ಬೇರೆ ಬೇರೆ ಮಾಡಿ ವಾಯುಮಂಡಲವನ್ನು ಸೃಷ್ಟಿಸಿದನು. ಅಂದರೆ, ಸ್ವಲ್ಪ ನೀರನ್ನು ಭೂಮಿಯ ಮೇಲೆ ಉಳಿಸಿ, ಜಾಸ್ತಿ ನೀರನ್ನು ಆವಿಯಾಗಿ ಭೂಮಿಯಿಂದ ತುಂಬಾ ಎತ್ತರಕ್ಕೆ ಏರಿಸಿದನು. ಮಧ್ಯದಲ್ಲಿರುವ ವಾಯುಮಂಡಲಕ್ಕೆ ದೇವರು, ಆಕಾಶ ಅಂತ ಹೆಸರಿಟ್ಟನು. ಈ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು, ಆಕಾಶ ಅಥವಾ ವಾಯುಮಂಡಲದ ಮೇಲಿರುವ ನೀರಿನ ಆವಿಯಲ್ಲಿ ಅಲ್ಲ ಬದಲಿಗೆ ಬಾಹ್ಯಾಕಾಶದಲ್ಲಿ ಇವೆ.—ಆದಿ 1:6-8.
ಮೂರನೇ ದಿನ ದೇವರು ಆಕಾಶದ ಕೆಳಗಿರುವ ನೀರನ್ನೆಲ್ಲಾ ಒಂದು ಸ್ಥಳದಲ್ಲಿ ಕೂಡಿಸಿ ಒಣನೆಲ ಕಾಣಿಸೋ ತರ ಮಾಡಿದನು. ಆ ಒಣನೆಲಕ್ಕೆ ಭೂಮಿ ಅಂತ ಹೆಸರಿಟ್ಟನು. ಅದೇ ದಿನ, ದೇವರು ಹುಲ್ಲು, ಕಾಯಿಪಲ್ಯದ ಗಿಡಗಳು ಮತ್ತು ಹಣ್ಣಿನ ಮರಗಳನ್ನು ಸೃಷ್ಟಿಸಿದನು. ಇವು ವಿಕಾಸವಾಗಲಿಲ್ಲ ಅಥವಾ ಆಕಸ್ಮಿಕವಾಗಿ ಬರಲಿಲ್ಲ. ಇವುಗಳೆಲ್ಲಾ ತಮ್ಮ ತಮ್ಮ “ಜಾತಿಗನುಸಾರವಾಗಿ” ಹೊಸ ಬೆಳೆಗಳನ್ನು, ಗಿಡಮರಗಳನ್ನು ಉತ್ಪಾದಿಸಿದವು.—ಆದಿ 1:9-13.
(ಆದಿಕಾಂಡ 1:14) ಬಳಿಕ ದೇವರು—ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ; ಇದಲ್ಲದೆ ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ;
(ಆದಿಕಾಂಡ 1:20) ತರುವಾಯ ದೇವರು—ಗುಂಪುಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದೊಳಗೆ ಹಾರಾಡಲಿ ಎಂದು ಹೇಳಿದನು.
(ಆದಿಕಾಂಡ 1:24) ಮತ್ತು ದೇವರು—ಭೂಮಿಯಿಂದ ಜೀವಜಂತುಗಳು ಉಂಟಾಗಲಿ; ಪಶುಕ್ರಿಮಿಗಳೂ ಕಾಡುಮೃಗಗಳೂ ತಮ್ಮತಮ್ಮ ಜಾತಿಗನುಸಾರವಾಗಿ ಹುಟ್ಟಲಿ ಅಂದನು; ಹಾಗೆಯೇ ಆಯಿತು.
(ಆದಿಕಾಂಡ 1:27) ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
it-1 ಪುಟ 528 ಪ್ಯಾರ 5-8
ಸೃಷ್ಟಿ
ಆದಿಕಾಂಡ 1:16 ರಲ್ಲಿ “ಸೃಷ್ಟಿಸು” ಅಂತ ಅರ್ಥ ಬರುವ ‘ಬಾರಾ’ ಅನ್ನೋ ಹೀಬ್ರು ಕ್ರಿಯಾಪದವನ್ನು ಬಳಸಲಿಲ್ಲ. ಅದರ ಬದಲು “ಮಾಡು” ಅಂತ ಅರ್ಥ ಬರುವ ‘ಅಸ’ ಅನ್ನೋ ಹೀಬ್ರು ಕ್ರಿಯಾಪದವನ್ನು ಬಳಸಲಾಗಿದೆ. ದೇವರು ಆದಿಯಲ್ಲಿ ಆಕಾಶವನ್ನು ಸೃಷ್ಟಿಸಿದನು ಅಂತ ಆದಿಕಾಂಡ 1:1 ಹೇಳುತ್ತೆ. ಇದರ ಅರ್ಥ ಆ ಆಕಾಶದಲ್ಲಿ ಇರುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಸಹ ಆರಂಭದಲ್ಲೇ ಅಂದರೆ ಸೃಷ್ಟಿಯ ನಾಲ್ಕನೇ ದಿನದ ಮುಂಚೆಯೇ ಸೃಷ್ಟಿಸಲಾಗಿತ್ತು. ಸೃಷ್ಟಿಯ ನಾಲ್ಕನೇ ದಿನ ದೇವರು ಈ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಉಂಟುಮಾಡಿದನು ಅಂದರೆ, ಅವುಗಳಿಗೆ ಭೂಮಿ ಮತ್ತು ಅದರ ಸುತ್ತ ಇರುವ ವಾಯುಮಂಡಲದ ಜೊತೆ, ಒಂದು ವಿಶೇಷ ಸಂಬಂಧ ಶುರುವಾಯಿತು ಅಂತ ಅರ್ಥ. ದೇವರು ಅವುಗಳನ್ನು (ಸೂರ್ಯ, ಚಂದ್ರ, ನಕ್ಷತ್ರಗಳನ್ನು) “ಆಕಾಶದಲ್ಲಿಟ್ಟು ಭೂಮಿಯ ಮೇಲೆ ಬೆಳಕುಕೊಡುವದಕ್ಕೂ” ನೇಮಿಸಿದನು. ಇದರ ಅರ್ಥ, ಅವುಗಳನ್ನು ಈಗ ಭೂಮಿಯಿಂದ ನೋಡಲು ಸಾಧ್ಯವಾಯಿತು. ಅವುಗಳು ಬಾಹ್ಯಾಕಾಶದಲ್ಲಿ ಇದ್ದರೂ ಆಕಾಶದಲ್ಲಿ ಇದ್ದಂತೆ ಕಾಣುತ್ತಿತ್ತು. ಇದಲ್ಲದೆ, “ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ” ತೋರಿಸಬೇಕಿತ್ತು. (ಆದಿ 1:14) ಇದರಿಂದ ಮನುಷ್ಯನಿಗೆ ತುಂಬ ಸಹಾಯ ಆಗಲಿತ್ತು.
ಐದನೇ ದಿನದಲ್ಲಿ ದೇವರು ಜೀವಿಗಳನ್ನು (ಮಾನವರನ್ನು ಬಿಟ್ಟು ಬೇರೆ ಜೀವಿಗಳನ್ನು) ಸೃಷ್ಟಿಸಿದನು. ಕೇವಲ ಒಂದು ಜೀವಿಯನ್ನು ಸೃಷ್ಟಿ ಮಾಡಿ ಅದರಿಂದ ಬೇರೆ ಎಲ್ಲಾ ಜೀವಿಗಳು ವಿಕಾಸವಾಗುವಂತೆ ದೇವರು ಮಾಡಲಿಲ್ಲ. ಬದಲಿಗೆ, ತನ್ನ ಶಕ್ತಿಯನ್ನು ಉಪಯೋಗಿಸಿ, ಆ ಜೀವಿಗಳನ್ನು ಗುಂಪು ಗುಂಪಾಗಿ ಸೃಷ್ಟಿ ಮಾಡಿದನು. “ದೇವರು ಮಹಾಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು” ಅಂತ ಬೈಬಲ್ ಹೇಳುತ್ತೆ. ತನ್ನ ಈ ಸೃಷ್ಟಿಯನ್ನು ನೋಡಿ ದೇವರಿಗೆ ತುಂಬಾ ಖುಷಿ ಆಯಿತು. “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ” ಅಂತ ಆ ಜೀವಿಗಳನ್ನು ಆಶೀರ್ವದಿಸಿದನು. ತಮ್ಮ ತಮ್ಮ “ಜಾತಿಗನುಸಾರವಾಗಿ” ಇನ್ನೂ ಅನೇಕ ಜೀವಿಗಳನ್ನು ಹುಟ್ಟಿಸುವಂಥ ಸಾಮರ್ಥ್ಯವನ್ನು ಅವುಗಳಿಗೆ ಕೊಟ್ಟನು.—ಆದಿ 1:20-23.
ಆರನೇ ದಿನದಲ್ಲಿ “ದೇವರು ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ಅವುಗಳ ಜಾತಿಗನುಸಾರ ಉಂಟುಮಾಡಿದನು.” ದೇವರು ಮಾಡಿದ ಬೇರೆ ಎಲ್ಲಾ ಸೃಷ್ಟಿಯ ಹಾಗೆನೇ ಈ ಸೃಷ್ಟಿ ಕೂಡ ತುಂಬಾ ಚೆನ್ನಾಗಿತ್ತು.—ಆದಿ 1:24, 25.
ಆರನೇ ದಿನದ ಕೊನೆಯಲ್ಲಿ ದೇವರು ಹೊಸ ರೀತಿಯ ಜೀವಯನ್ನು, ಪ್ರಾಣಿಗಳಿಗಿಂತ ಶ್ರೇಷ್ಠವಾದ ಜೀವಿಯನ್ನು ಸೃಷ್ಟಿ ಮಾಡಿದನು. ಅದು ಯಾವ ಜೀವಿ? ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ‘ಮನುಷ್ಯ.’ ಆದಿಕಾಂಡ 1:27, ದೇವರು “ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು” ಅಂತ ತಿಳಿಸುತ್ತೆ. ಯೆಹೋವನು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು, ಆಗ ಆ ಮನುಷ್ಯನು ಬದುಕುವ ಪ್ರಾಣಿಯಾದನು ಅಂತ ಆದಿಕಾಂಡ 2:7-9 ಹೇಳುತ್ತೆ. ದೇವರು ಮನುಷ್ಯನನ್ನು ಸೃಷ್ಟಿಸಿ ಅವನಿಗೆ ತೋಟವನ್ನೇ ಮನೆಯಾಗಿ ಕೊಟ್ಟನು. ಇದರ ಜೊತೆ, ಒಳ್ಳೇ ಆಹಾರನೂ ಕೊಟ್ಟನು. ಆ ಮನುಷ್ಯನನ್ನು ದೇವರು ಮಣ್ಣಿನಿಂದ ಸೃಷ್ಟಿಸಿದನು. ಆದರೆ ಮೊದಲ ಸ್ತ್ರೀಯನ್ನು ಆ ಮನುಷ್ಯನ ಪಕ್ಕೆ ಎಲುಬಿನಿಂದ ಸೃಷ್ಟಿಸಿದನು. (ಆದಿ 2:18-25) ಈ ಸ್ತ್ರೀಯ ಸೃಷ್ಟಿಯಿಂದ ಮಾನವ ಜಾತಿಯ ಆರಂಭಾವಾಯಿತು.—ಆದಿ 5:1, 2.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 1:1) ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.
w15-E 6/1 ಪುಟ 5
ವಿಜ್ಞಾನ ನಿಮ್ಮ ಬದುಕನ್ನು ಹೇಗೆ ಪ್ರಭಾವಿಸುತ್ತೆ?
ಈ ಭೂಮಿಯ ಮತ್ತು ಪ್ರಪಂಚದ ಆಯಸ್ಸು
ಭೂಮಿಯ ಆಯಸ್ಸು ಸುಮಾರು 400 ಕೋಟಿ ವರ್ಷಗಳು ಮತ್ತು ಪ್ರಪಂಚದ ಆಯಸ್ಸು ಸುಮಾರು 1,300 ರಿಂದ 1,400 ಕೋಟಿ ವರ್ಷಗಳು ಇರಬೇಕು ಅಂತ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಆದರೆ ಬೈಬಲ್, ಈ ಪ್ರಪಂಚ ಅಥವಾ ಭೂಮಿ ಸೃಷ್ಟಿಯಾಗಿ ಎಷ್ಟು ವರ್ಷ ಆಯ್ತು ಅಂತ ಹೇಳಲ್ಲ. ಅದರಲ್ಲಿರುವ ಮೊದಲ ವಚನ ಹೇಳುತ್ತೆ: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿಕಾಂಡ 1:1) ಪ್ರಪಂಚದ ಮತ್ತು ಭೂಮಿಯ ಆಯಸ್ಸನ್ನು ಅಂದಾಜು ಮಾಡಲು ವಿಜ್ಞಾನಿಗಳಿಗೆ, ಈ ಆಧಾರವೇ ಸಹಾಯಮಾಡಿದೆ.
(ಆದಿಕಾಂಡ 1:26) ಆ ಮೇಲೆ ದೇವರು—ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು.
it-2 ಪುಟ 52
ಯೇಸು ಕ್ರಿಸ್ತ
ಜೊತೆ ಸೃಷ್ಟಿಕರ್ತನಲ್ಲ. ಸೃಷ್ಟಿಕಾರ್ಯದ ಕೆಲಸದಲ್ಲಿ ಯೇಸು ಕೈ ಜೋಡಿಸಿದಾಗ, ಅವನು ತಂದೆ ತರ ಒಬ್ಬ ಸೃಷ್ಟಿಕರ್ತನಾಗಲಿಲ್ಲ. ಅವನಿಗೆ, ಸೃಷ್ಟಿಕಾರ್ಯ ಮಾಡುವ ಶಕ್ತಿಯನ್ನು ದೇವರು, ಪವಿತ್ರಾತ್ಮದ ಮೂಲಕ ಕೊಟ್ಟನು. (ಆದಿ 1:2; ಕೀರ್ತ 33:6) ಕಣ್ಣಿಗೆ ಕಾಣುವ, ಕಾಣದಿರುವ ಎಲ್ಲಾ ಜೀವಿಗಳಿಗೂ ಯೆಹೋವನೇ ಜೀವದ ಬುಗ್ಗೆ ಆಗಿದ್ದಾನೆ. (ಕೀರ್ತ 36:9) ಯೇಸು ಜೊತೆ ಸೃಷ್ಟಿಕರ್ತನಾಗುವ ಬದಲು, ಒಬ್ಬ ಮಧ್ಯವರ್ತಿಯಾಗಿ ಅಥವಾ ಯೆಹೋವನಿಂದ ಉಪಯೊಗಿಸಲ್ಪಡುವ ಒಂದು ಸಾಧನವಾಗಿ ಕೆಲಸ ಮಾಡಿದನು. ಅನೇಕ ವಚನಗಳು ಹೇಳುವ ಹಾಗೆ ಸ್ವತಃ ಯೇಸುವೇ, ‘ಸೃಷ್ಟಿಕರ್ತ’ ಅನ್ನೋ ಕೀರ್ತಿಯನ್ನು ಯೆಹೋವನಿಗೇ ಕೊಟ್ಟಿದ್ದಾನೆ.—ಮತ್ತಾ 19:4-6.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ?
ದೇವರಿಂದಲೇ “ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿದೆ” ಎಂಬ ಅರಿವು ಇತರರ ಕುರಿತು ನಮಗಿರುವ ಅಭಿಪ್ರಾಯವನ್ನು ಬದಲಾಯಿಸುತ್ತದೆ. (ಎಫೆಸ 3:14, 15, NIBV) ಅಲ್ಲದೆ, ಸ್ವತಃ ನಮ್ಮ ಹಾಗೂ ನಮ್ಮ ಸಮಸ್ಯೆಗಳ ಬಗೆಗಿನ ದೃಷ್ಟಿಕೋನವನ್ನೂ ಅದು ಪ್ರಭಾವಿಸುತ್ತದೆ. ನಮ್ಮ ಆಲೋಚನೆಗಳು ಈ ಮುಂದಿನ ವಿಧಗಳಲ್ಲಿ ಪ್ರಭಾವಿಸಲ್ಪಡುವವು.
ಕಷ್ಟಕರ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಪರಸ್ಪರ ವ್ಯತಿರಿಕ್ತವಾದ ಮಾನವ ಅಭಿಪ್ರಾಯಗಳಿಂದ ನಾವು ಗೊಂದಲಕ್ಕೀಡಾಗುವುದಿಲ್ಲ. ಬದಲಾಗಿ ದೃಢವಿಶ್ವಾಸದಿಂದ ಬೈಬಲ್ ಸಲಹೆಯನ್ನು ಅವಲಂಬಿಸುತ್ತೇವೆ. ಯಾಕೆ? ಯಾಕೆಂದರೆ “ಪವಿತ್ರ ಗ್ರಂಥವೆಲ್ಲವೂ ದೇವರಿಂದ ಪ್ರೇರಿತವಾದದ್ದು. ಅದು ಎಲ್ಲಾ ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ. ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17, NIBV.
ಬೈಬಲಿನ ಸಲಹೆಯನ್ನು ಅನ್ವಯಿಸಲು ಪ್ರಯತ್ನ ಮತ್ತು ಸ್ವಶಿಸ್ತು ಅಗತ್ಯ ನಿಜ. ಅದರ ಮಾರ್ಗದರ್ಶನವನ್ನು ಪಾಲಿಸಲು, ಕೆಲವೊಮ್ಮೆ ನಮ್ಮ ಮನಸ್ಸಂಕಲ್ಪಕ್ಕೆ ವಿರುದ್ಧವಾಗಿರುವಂತೆ ತೋರುವ ವಿಧಗಳಲ್ಲಿ ಕ್ರಿಯೆಗೈಯಬೇಕಾಗಬಹುದು. (ಆದಿಕಾಂಡ 8:21) ಆದರೆ, ಸ್ವರ್ಗದಲ್ಲಿರುವ ಒಬ್ಬ ಪ್ರೀತಿಯ ತಂದೆಯು ನಮ್ಮನ್ನು ಸೃಷ್ಟಿಸಿದ್ದಾನೆಂದು ನಾವು ಒಪ್ಪಿಕೊಳ್ಳುವಲ್ಲಿ, ಆತನ ಮಾರ್ಗವೇ ನಮಗೆ ಅತ್ಯುತ್ತಮವಾದದ್ದು ಎಂಬ ತರ್ಕಬದ್ಧ ತೀರ್ಮಾನಕ್ಕೆ ಬರುವೆವು. (ಯೆಶಾಯ 55:9) ಆದುದರಿಂದ ಆತನ ವಾಕ್ಯವು ನಮಗನ್ನುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಆ ಸಲಹೆಯನ್ನು ಅನ್ವಯಿಸುವಲ್ಲಿ ನಾವು ಸವಾಲುಗಳನ್ನು ಎದುರಿಸುವಾಗ ಹಾಗೂ ನಿರ್ಣಯಗಳನ್ನು ಮಾಡುವಾಗ ಉಂಟಾಗುವ ವ್ಯಾಕುಲತೆ ಕಡಿಮೆಯಾಗುವುದು.
ಪೂರ್ವಾಗ್ರಹಕ್ಕೆ ಗುರಿಯಾಗುವಾಗ ನಾವು ಇನ್ನೊಂದು ಜಾತಿ ಇಲ್ಲವೇ ಸಂಸ್ಕೃತಿಯ ಜನರಿಗಿಂತ ಕೆಳಮಟ್ಟದವರೆಂದು ನೆನಸುತ್ತಾ ಕೀಳರಿಮೆಯ ಭಾವನೆಗಳಡಿ ಹೂತುಹೋಗುವುದಿಲ್ಲ. ಅದಕ್ಕೆ ಬದಲಾಗಿ, ನಾವು ಸೂಕ್ತಪ್ರಮಾಣದಲ್ಲಿ ಸ್ವಗೌರವದ ಪ್ರಜ್ಞೆಯನ್ನು ಬೆಳೆಸಿಕೊಳ್ಳುವೆವು. ಏಕೆ? ಏಕೆಂದರೆ ನಮ್ಮ ತಂದೆಯಾದ ಯೆಹೋವ ದೇವರು “ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ಈ ಪರಿಜ್ಞಾನ ಬೇರೆಯವರ ಕಡೆಗಿನ ನಮ್ಮ ಮನೋಭಾವವು ಪೂರ್ವಾಗ್ರಹದಿಂದ ವಿಕೃತವಾಗದಂತೆಯೂ ತಡೆಯುವುದು. ಬೇರೊಂದು ಜಾತಿಯ ಜನರಿಗಿಂತ ನಾವು ಶ್ರೇಷ್ಠರೆಂದು ನೆನಸಲು ಯಾವ ಕಾರಣವೂ ಇಲ್ಲ ಯಾಕೆಂದರೆ ದೇವರು ‘ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿದನು.’—ಅ. ಕೃತ್ಯಗಳು 17:26.
ಹಾಗಾದರೆ, ನಮ್ಮನ್ನು ಸೃಷ್ಟಿಸಲಾಗಿದೆ ಮತ್ತು ನಮ್ಮ ಸೃಷ್ಟಿಕರ್ತನು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆ ಎಂದು ತಿಳಿದಿರುವುದು ನಿಜ ನೆಮ್ಮದಿಗೆ ಅಸ್ತಿವಾರವೆಂಬುದು ನಿಶ್ಚಯ. ಆದರೆ ಈ ನೆಮ್ಮದಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಹೆಚ್ಚಿನದ್ದು ಅಗತ್ಯ.
ಜನವರಿ 13-19
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 3-5
“ಮೊದಲ ಸುಳ್ಳಿನ ಕೆಟ್ಟ ಪರಿಣಾಮಗಳು”
(ಆದಿಕಾಂಡ 3:1-5) ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು—ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು 2 ಸ್ತ್ರೀಯು—ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; 3 ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು. 4 ಆಗ ಸರ್ಪವು ಸ್ತ್ರೀಗೆ—ನೀವು ಹೇಗೂ ಸಾಯುವದಿಲ್ಲ; 5 ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು.
ಯೆಹೋವನ ಉದ್ದೇಶ ಖಂಡಿತ ನೆರವೇರುತ್ತದೆ!
9 ಹವ್ವಳು ತನ್ನ ತಂದೆಯಾದ ಯೆಹೋವನ ಮಾತನ್ನು ಮೀರಿ ನಡೆಯುವಂತೆ ಮಾಡಲು ಸೈತಾನ ಒಂದು ಸರ್ಪವನ್ನು ಉಪಯೋಗಿಸಿದ. (ಆದಿಕಾಂಡ 3:1-5 ಓದಿ; ಪ್ರಕ. 12:9) ಯೆಹೋವನ ಮಾನವ ಮಕ್ಕಳು ‘ತೋಟದಲ್ಲಿರುವ ಯಾವ ಮರದ ಹಣ್ಣನ್ನು’ ಬೇಕಾದರೂ ತೆಗೆದು ತಿನ್ನುವ ಹಾಗಿಲ್ಲ ಎಂಬ ವಿಷಯದಲ್ಲಿ ವಿವಾದ ಎಬ್ಬಿಸಿದ. ‘ಏನು!? ನಿಮಗೆ ಏನು ಬೇಕೋ ಅದನ್ನು ಮಾಡುವ ಹಾಗಿಲ್ಲವಾ?’ ಎಂದು ಅವನು ಕೇಳುವ ಹಾಗಿತ್ತು. ಸೈತಾನ ಹವ್ವಳಿಗೆ, “ನೀವು ಹೇಗೂ ಸಾಯುವದಿಲ್ಲ” ಎಂದನು. ಇದು ಶುದ್ಧ ಸುಳ್ಳಾಗಿತ್ತು. ಅವರು ದೇವರ ಮಾತನ್ನು ಕೇಳುವ ಅವಶ್ಯಕತೆ ಇಲ್ಲ ಅಂತ ಅವಳ ಕಿವಿ ಊದಿದ. “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು . . . ಇದು ದೇವರಿಗೆ ಚೆನ್ನಾಗಿ ಗೊತ್ತುಂಟು” ಅಂದ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈ ಹಣ್ಣು ತಿಂದರೆ ಅವರಿಗೆ ಜ್ಞಾನೋದಯವಾಗುತ್ತದೆ ಎಂದು ದೇವರಿಗೆ ಗೊತ್ತಿರುವುದರಿಂದ ತಿನ್ನಬೇಡಿ ಅಂತಿದ್ದಾನೆ ಅನ್ನುವುದು ಸೈತಾನನ ಆರೋಪವಾಗಿತ್ತು. ಕೊನೆಗೆ, “ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ” ಎಂದು ಸುಳ್ಳು ಭರವಸೆ ನೀಡಿ ದಾರಿತಪ್ಪಿಸಿದ.
(ಆದಿಕಾಂಡ 3:6) ಆಗ ಸ್ತ್ರೀಯು—ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.
ಪ್ರಥಮ ಮಾನವ ದಂಪತಿಗಳಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ
ಹವ್ವಳ ಪಾಪವು ಅನಿವಾರ್ಯವಾಗಿತ್ತೋ? ಖಂಡಿತವಾಗಿಯೂ ಇಲ್ಲ! ಸ್ವತಃ ನಿಮ್ಮನ್ನು ಅವಳ ಸ್ಥಾನದಲ್ಲಿರಿಸಿಕೊಂಡು ನೋಡಿ. ಸರ್ಪದ ವಾದವು, ದೇವರು ಹಾಗೂ ಆದಾಮನು ಹೇಳಿದ್ದ ವಿಷಯಕ್ಕೆ ಸಂಪೂರ್ಣವಾಗಿ ಅಪಾರ್ಥವನ್ನು ಕಲ್ಪಿಸಿತು. ನೀವು ತುಂಬ ಪ್ರೀತಿಸುವ ಹಾಗೂ ಭರವಸೆಯಿಡುವ ಒಬ್ಬ ವ್ಯಕ್ತಿಯ ಮೇಲೆ, ಅಪರಿಚಿತನೊಬ್ಬನು ಅಪ್ರಾಮಾಣಿಕತೆಯ ಆರೋಪವನ್ನು ಹೊರಿಸುವಲ್ಲಿ ನಿಮಗೆ ಹೇಗನಿಸುತ್ತದೆ? ಸರ್ಪವು ಹವ್ವಳನ್ನು ಸಮೀಪಿಸಿದಾಗ, ಅದರ ಕಡೆಗೆ ಕೋಪವನ್ನು ತೋರಿಸುವ ಮೂಲಕ ಅವಳು ಭಿನ್ನವಾದ ರೀತಿಯಲ್ಲಿ ವರ್ತಿಸಬೇಕಾಗಿತ್ತು. ಅಷ್ಟುಮಾತ್ರವಲ್ಲ, ಸರ್ಪಕ್ಕೆ ಕಿವಿಗೊಡಲು ಸಹ ನಿರಾಕರಿಸಬೇಕಾಗಿತ್ತು. ಏಕೆಂದರೆ, ದೇವರ ನೀತಿಯನ್ನು ಹಾಗೂ ಅವಳ ಗಂಡನ ಮಾತನ್ನು ಪ್ರಶ್ನಿಸಲು ಸರ್ಪಕ್ಕೆ ಯಾವ ಹಕ್ಕೂ ಇರಲಿಲ್ಲ. ತಲೆತನದ ಮೂಲತತ್ವಕ್ಕೆ ಗೌರವವನ್ನು ತೋರಿಸಲಿಕ್ಕಾಗಿ ಹವ್ವಳು, ಯಾವುದೇ ನಿರ್ಣಯವನ್ನು ಮಾಡುವುದಕ್ಕೆ ಮೊದಲು ಗಂಡನಿಂದ ಸಲಹೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದುದರಿಂದ, ದೇವದತ್ತ ಉಪದೇಶಗಳಿಗೆ ವಿರುದ್ಧವಾದ ಮಾಹಿತಿಯು ನಮಗೆ ಎಂದಾದರೂ ಕೊಡಲ್ಪಡುವಲ್ಲಿ, ನಾವು ಸಹ ಇತರರ ಸಲಹೆಯನ್ನು ಪಡೆದುಕೊಳ್ಳಬೇಕು. ಆದರೂ ಹವ್ವಳು ಶೋಧಕನ ಮಾತುಗಳನ್ನು ನಂಬಿದಳು, ಮತ್ತು ಒಳ್ಳೇದರ ಕೆಟ್ಟದ್ದರ ಭೇದವನ್ನು ತಾನಾಗಿಯೇ ನಿರ್ಧರಿಸಲು ಬಯಸಿದಳು. ಸರ್ಪವು ಹೇಳಿದಂತಹ ವಿಷಯದ ಬಗ್ಗೆಯೇ ಹವ್ವಳು ಹೆಚ್ಚು ಯೋಚಿಸಿದ್ದರಿಂದ, ಆ ಪ್ರಸ್ತಾಪವು ಅವಳಿಗೆ ಹೆಚ್ಚು ಆಕರ್ಷಣೀಯವಾಗಿ ಕಂಡಿತು. ಆದರೆ ಅವಳು ಒಂದು ದೊಡ್ಡ ತಪ್ಪನ್ನು ಮಾಡಿದ್ದಳು; ಅದೇನೆಂದರೆ, ಕೆಟ್ಟ ಬಯಕೆಯೊಂದನ್ನು ಮನಸ್ಸಿನಿಂದ ತೆಗೆದುಹಾಕುವುದಕ್ಕೆ ಬದಲಾಗಿ, ಅಥವಾ ಆ ವಿಷಯವನ್ನು ತನ್ನ ಗಂಡನೊಂದಿಗೆ ಚರ್ಚಿಸುವುದಕ್ಕೆ ಬದಲಾಗಿ, ತಾನೇ ಕ್ರಿಯೆಗೈಯಲು ನಿರ್ಧರಿಸಿದಳು.—1 ಕೊರಿಂಥ 11:3; ಯಾಕೋಬ 1:14, 15.
ತನ್ನ ಹೆಂಡತಿಯ ಮಾತಿಗೆ ಆದಾಮನು ಕಿವಿಗೊಟ್ಟದ್ದು
ಆ ಕೂಡಲೆ ಹವ್ವಳು ತನ್ನೊಂದಿಗೆ ಪಾಪದಲ್ಲಿ ಒಳಗೂಡುವಂತೆ ಆದಾಮನನ್ನು ಪ್ರಚೋದಿಸಿದಳು. ಆಗ ಆದಾಮನು ಆಕ್ಷೇಪವೆತ್ತದೆ ಸುಲಭವಾಗಿ ಒಪ್ಪಿಕೊಂಡದ್ದನ್ನು ನಾವು ಹೇಗೆ ವಿವರಿಸಸಾಧ್ಯವಿದೆ? (ಆದಿಕಾಂಡ 3:6, 17) ಯಾರಿಗೆ ನಿಷ್ಠೆ ತೋರಿಸಬೇಕು ಎಂಬ ವಿಷಯದಲ್ಲಿ ಆದಾಮನ ಮನಸ್ಸಿನಲ್ಲಿ ಹೋರಾಟ ನಡೆಯಿತು. ತನ್ನ ಪ್ರೀತಿಯ ಸಂಗಾತಿಯಾದ ಹವ್ವಳನ್ನೂ ಸೇರಿಸಿ ಪ್ರತಿಯೊಂದನ್ನೂ ತನಗೆ ಒದಗಿಸಿರುವ ತನ್ನ ಸೃಷ್ಟಿಕರ್ತನಿಗೆ ಅವನು ವಿಧೇಯನಾಗುವನೊ? ಈಗ ತಾನು ಏನು ಮಾಡಬೇಕು ಎಂಬುದರ ಬಗ್ಗೆ ಆದಾಮನು ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವನೊ? ಅಥವಾ ಈ ಮನುಷ್ಯನು ತನ್ನ ಹೆಂಡತಿಯ ಪಾಪದಲ್ಲಿ ಒಳಗೂಡಲು ನಿರ್ಧರಿಸುವನೊ? ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ ಹವ್ವಳು ಏನನ್ನು ಪಡೆದುಕೊಳ್ಳಲು ಬಯಸುತ್ತಾಳೋ ಅದು ಭ್ರಾಂತಿಕಾರಕವಾದದ್ದಾಗಿದೆ ಎಂಬುದು ಆದಾಮನಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯದಲ್ಲಿ ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು.” (1 ತಿಮೊಥೆಯ 2:14) ಹೀಗೆ ಆದಾಮನು ಉದ್ದೇಶಪೂರ್ವಕವಾಗಿ ಯೆಹೋವನ ಮಾತನ್ನು ಉಲ್ಲಂಘಿಸುವ ಆಯ್ಕೆಮಾಡಿದನು. ದೇವರ ಸಾಮರ್ಥ್ಯದಲ್ಲಿ ಆದಾಮನಿಗಿದ್ದ ನಂಬಿಕೆಗಿಂತಲೂ, ತನ್ನ ಹೆಂಡತಿಯಿಂದ ದೇವರು ತನ್ನನ್ನು ದೂರಮಾಡಿಬಿಡುತ್ತಾನೆಂಬ ಭಯವು ಅವನಲ್ಲಿ ಅತ್ಯಧಿಕವಾಗಿತ್ತು.
(ಆದಿಕಾಂಡ 3:15-19) ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ ಎಂದು ಹೇಳಿದನು. 16 ಆ ಮೇಲೆ ಸ್ತ್ರೀಗೆ—ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು ಎಂದು ಹೇಳಿದನು. 17 ಮತ್ತು ಪುರುಷನಿಗೆ—ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದ ಕಾರಣ ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. 18 ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ. 19 ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ ಎಂದು ಹೇಳಿದನು.
w12-E 9/1 ಪುಟ 4 ಪ್ಯಾರ 2
ದೇವರಿಗೆ ಸ್ತ್ರೀಯರ ಬಗ್ಗೆ ಕಾಳಜಿ ಇದೆಯಾ?
ದೇವರು ಸ್ತ್ರೀಯರನ್ನು ಶಪಿಸಿದ್ದಾನಾ?
ಇಲ್ಲ. ಸ್ತ್ರೀಯರ ಬದಲು ದೇವರು “ಶಾಪ” ಕೊಟ್ಟಿದ್ದು ‘ಮಹಾ ಘಟಸರ್ಪ, ಅಂದರೆ ಪಿಶಾಚನಿಗೆ.’ (ಪ್ರಕಟನೆ 12:9; ಆದಿಕಾಂಡ 3:14) ದೇವರು ಆದಾಮನಿಗೆ, ನೀನು ನಿನ್ನ ಹೆಂಡತಿಗೆ ‘ಒಡೆಯನಾಗುತ್ತೀಯ’ ಅಂತ ಹೇಳಿದನು. (ಆದಿಕಾಂಡ 3:16) ಆದರೆ ಇದನ್ನು ದೇವರು, ಪುರುಷರು ಸ್ತ್ರೀಯರ ಮೇಲೆ ಅಧಿಕಾರ ಚಲಾಯಿಸಬೇಕು ಅನ್ನೋ ಅರ್ಥದಲ್ಲಿ ಹೇಳಲಿಲ್ಲ. ಬದಲಿಗೆ ಮೊದಲ ದಂಪತಿಗಳಾದ ಆದಾಮ-ಹವ್ವ ಮಾಡಿದ ಪಾಪದಿಂದ ಭವಿಷ್ಯದಲ್ಲಿ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಮುಂತಿಳಿಸಿದನು ಅಷ್ಟೇ.
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I
3:17—ಯಾವ ವಿಧದಲ್ಲಿ ಮತ್ತು ಎಷ್ಟು ಕಾಲದ ವರೆಗೆ ಭೂಮಿಗೆ ಶಾಪವು ಕೊಡಲ್ಪಟ್ಟಿತು? ಭೂಮಿಗೆ ಕೊಡಲ್ಪಟ್ಟ ಶಾಪವು, ಈಗ ಆ ಭೂಮಿಯಲ್ಲಿ ವ್ಯವಸಾಯಮಾಡುವುದು ತುಂಬ ಕಷ್ಟಕರವಾಗಿರುವುದು ಎಂಬುದನ್ನು ಅರ್ಥೈಸಿತು. ಆದಾಮನ ಸಂತತಿಯವರಿಗೆ ಮುಳ್ಳುಗಿಡಗಳು ಮತ್ತು ಕಳೆಗಳಿಂದ ತುಂಬಿರುವ ಶಾಪಗ್ರಸ್ತ ಭೂಮಿಯ ಪರಿಣಾಮಗಳ ಅನುಭವ ಎಷ್ಟರ ಮಟ್ಟಿಗೆ ಆಯಿತೆಂದರೆ, ನೋಹನ ತಂದೆಯಾಗಿದ್ದ ಲೆಮೆಕನು ‘ಯೆಹೋವನು ಶಪಿಸಿದ ಭೂಮಿಯಿಂದ ಉಂಟಾದ ಕೈಕಷ್ಟ ಮತ್ತು ಶ್ರಮೆಯ’ ಕುರಿತಾಗಿ ಮಾತಾಡಿದನು. (ಆದಿಕಾಂಡ 5:29) ಜಲಪ್ರಳಯದ ನಂತರ ಯೆಹೋವನು ನೋಹನನ್ನೂ ಅವನ ಪುತ್ರರನ್ನೂ ಆಶೀರ್ವದಿಸಿ, ಅವರು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳುವುದೇ ತನ್ನ ಉದ್ದೇಶವಾಗಿದೆ ಎಂದು ಹೇಳಿದನು. (ಆದಿಕಾಂಡ 9:1) ದೇವರು ಭೂಮಿಗೆ ಕೊಟ್ಟಿದ್ದ ಶಾಪವು ಹಿಂದೆಗೆದುಕೊಳ್ಳಲ್ಪಟ್ಟಿತು ಎಂಬುದು ಸುವ್ಯಕ್ತ.—ಆದಿಕಾಂಡ 13:10.
it-2 ಪುಟ 186
ಪ್ರಸವವೇದನೆ
ಪ್ರಸವವೇದನೆ ಅಂದರೆ ಮಗುವನ್ನು ಹೆರುವಾಗ ಆಗುವ ನೋವು. ಮೊದಲ ಸ್ತ್ರೀಯಾದ ಹವ್ವ ಮಾಡಿದ ಪಾಪದ ಪರಿಣಾಮವಾಗಿ ದೇವರು, ಮಗುವನ್ನು ಹೆರುವಾಗ ಏನಾಗುತ್ತೆ ಅಂತ ಅವಳಿಗೆ ಹೇಳಿದನು. ಒಂದುವೇಳೆ ಅವಳು ದೇವರ ಮಾತನ್ನು ಕೇಳಿದ್ರೆ, ಆತನ ಆಶೀರ್ವಾದ ಅವರ ಮೇಲೆ ಯಾವಾಗಲೂ ಇರುತ್ತಿತ್ತು. ಮಕ್ಕಳನ್ನು ಹೆರುವಾಗ ನೋವಾಗುತ್ತಿರಲಿಲ್ಲ. ಯಾಕೆಂದರೆ, “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.” (ಜ್ಞಾನೋ 10:22) ಆದರೆ ಈಗ, ಮಾನವನ ದೇಹ ಸರಿಯಾಗಿ ಕೆಲಸ ಮಾಡದ ಕಾರಣ ಎಲ್ಲರಿಗೂ ನೋವಾಗುತ್ತೆ. ದೇವರು, “ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ” ಅಂತ ಹೇಳಿದನು. (ಆದಿ 3:16) ಆದರೆ, ದೇವರು ಅನುಮತಿಸುವ ವಿಷಯಗಳನ್ನು, ಆತನೇ ಮಾಡಿರುವ ವಿಷಯಗಳು ಅಂತ ಕೆಲವರು ಅಂದುಕೊಂಡಿದ್ದಾರೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 4:23, 24) ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು—ಆದಾ, ಚಿಲ್ಲಾ, ನನ್ನ ಮಾತಿಗೆ ಕಿವಿಗೊಡಿರಿ; ಲೆಮೆಕನ ಹೆಂಡತಿಯರೇ, ನಾನು ಹೇಳುವದನ್ನು ಕೇಳಿರಿ. ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು; ನನ್ನನ್ನು ಹೊಡೆದ ಒಬ್ಬ ಪ್ರಾಯಸ್ಥನನ್ನು ಹತಮಾಡಿದೆನು. 24 ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತಿದಂಡನೆ ಬರುವದಾದರೆ ಲೆಮೆಕನನ್ನು ಹೊಡೆಯುವವನಿಗೆ ಎಪ್ಪತ್ತೇಳರಷ್ಟಾಗುವದಲ್ಲವೇ.
it-2 ಪುಟ 192 ಪ್ಯಾರ 5
ಲೆಮೆಕ
ಲೆಮೆಕ ತನ್ನ ಪತ್ನಿಯರಿಗಾಗಿ ರಚಿಸಿದ ಪದ್ಯದಲ್ಲಿ (ಆದಿ 4:23, 24) ಆಗಿನ ಜನರಲ್ಲಿದ್ದ ಹಿಂಸಾತ್ಮಕ ಮನೋಭಾವ ಇದೆ. ಲೆಮೆಕನ ಪದ್ಯ ಹೀಗಿದೆ: “ನನ್ನ ಮಾತಿಗೆ ಕಿವಿಗೊಡಿರಿ; ಲೆಮೆಕನ ಹೆಂಡತಿಯರೇ, ನಾನು ಹೇಳುವದನ್ನು ಕೇಳಿರಿ. ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು; ನನ್ನನ್ನು ಹೊಡೆದ ಒಬ್ಬ ಪ್ರಾಯಸ್ಥನನ್ನು ಹತಮಾಡಿದೆನು.” ಲೆಮೆಕ ತನ್ನನ್ನು ಸಂರಕ್ಷಿಸಿಕೊಳ್ಳಲು, ‘ಕಾಯಿನ ಹೇಬೆಲನನ್ನು ಬೇಕುಬೇಕೆಂದು ಕೊಂದಂತೆ, ನಾನು ಯಾರನ್ನು ಬೇಕುಬೇಕೆಂದು ಕೊಂದಿಲ್ಲ’ ಅಂತ ಹೇಳುತ್ತಿದ್ದಾನೆ. ಲೆಮೆಕ ತನ್ನನ್ನು ರಕ್ಷಿಸಿಕೊಳ್ಳುವಾಗ ತನಗೆ ಹೊಡೆದವನನ್ನು ಕೊಂದೆ ಅಂತ ಒಪ್ಪಿಕೊಂಡ. ಹಾಗಾಗಿ, ಸೇಡು ತೀರಿಸಿಕೊಳ್ಳಲು ಯಾರಾದರೂ ಲೆಮೆಕನನ್ನು ಕೊಲ್ಲಬೇಕು ಅಂತ ಅಂದುಕೊಂಡರೆ, ಅದನ್ನು ತಡೆಯಲು ಈ ಪದ್ಯ ಒಂದು ಕೋರಿಕೆ ತರ ಇತ್ತು.
(ಆದಿಕಾಂಡ 4:26) ತರುವಾಯ ಸೇತನು ಸಹ ಮಗನನ್ನು ಪಡೆದು ಅವನಿಗೆ ಎನೋಷ್ ಎಂಬ ಹೆಸರಿಟ್ಟನು; ಆ ಕಾಲದಲ್ಲಿ ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭವಾಯಿತು.
it-1 ಪುಟ 338 ಪ್ಯಾರ 2
ದೇವದೂಷಣೆ
ಜಲಪ್ರಳಯಕ್ಕೆ ಮುಂಚೆ ಅಂದರೆ ಎನೋಷನ ಕಾಲದಲ್ಲಿ ಕೆಲವು ಜನರು “ದೇವರ ಹೆಸರನ್ನು ಹೇಳಲು” ಶುರುಮಾಡಿದರು. ಇದರ ಅರ್ಥ ಜನರಿಗೆ ಆಗ ಯೆಹೋವ ದೇವರ ಬಗ್ಗೆ ಗೊತ್ತಾಗಿ, ಅವನನ್ನು ಆರಾಧಿಸಲು ಶುರುಮಾಡಿದರು ಅಂತಲ್ಲ. ಯಾಕೆಂದ್ರೆ ಹೇಬೆಲ ಈಗಾಗಲೇ ಯೆಹೋವನ ಹೆಸರನ್ನು ಎತ್ತಿ ಆತನನ್ನು ಆರಾಧಿಸಲು ಶುರುಮಾಡಿ ಆಗಿತ್ತು. (ಆದಿ 4:26; ಇಬ್ರಿ 11:4) ಈ ಮಾತಿನ ಅರ್ಥ, ಆಗಿನ ಜನರು ಯೆಹೋವನ ಹೆಸರಿಂದ ಮನುಷ್ಯರನ್ನು ಮತ್ತು ವಿಗ್ರಹಗಳನ್ನು ಕರೆಯುತ್ತಿದ್ದರು ಅಂತ ಕೆಲವು ವಿದ್ವಾಂಸರು ಹೇಳುತ್ತಾರೆ. ಹೀಗೆ ದೇವರ ಹೆಸರನ್ನು ದುರುಪಯೋಗ ಮಾಡುತ್ತಿದ್ದರು. ಇದು ದೇವದೂಷಣೆ ಆಗಿತ್ತು.
ಜನವರಿ 20-26
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 6-8
“ಅವನು ಅದೇ ರೀತಿ ಮಾಡಿದನು”
(ಆದಿಕಾಂಡ 6:9) ನೋಹನ ಚರಿತ್ರೆಯು—ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.
(ಆದಿಕಾಂಡ 6:13) ಆಗ ದೇವರು ನೋಹನಿಗೆ—ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವುದೆಲ್ಲವನ್ನೂ ಅಳಿಸಿ ಬಿಡುತ್ತೇನೆ.
ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ
4 ನೋಹ ಯಾವ ಸವಾಲುಗಳನ್ನು ಎದುರಿಸಿದನು? ಅವನ ಮುತ್ತಜ್ಜನಾದ ಹನೋಕನ ಸಮಯದಲ್ಲೇ ಜನರು ತುಂಬ ದುಷ್ಟರಾಗಿದ್ದರು, ಯೆಹೋವನ ಬಗ್ಗೆ ‘ಆಘಾತಕರ ಸಂಗತಿಗಳನ್ನು’ ಹೇಳುತ್ತಿದ್ದರು. (ಯೂದ 14, 15) ಸಮಯ ಕಳೆದಂತೆ ಭೂಮಿಯಲ್ಲಿ ಹಿಂಸೆ ಇನ್ನೂ ಹೆಚ್ಚಾಯಿತು. ನೋಹನ ಸಮಯಕ್ಕೆ ಹಿಂಸಾಚಾರ “ಲೋಕವನ್ನು ತುಂಬಿಕೊಂಡಿತ್ತು.” ದುಷ್ಟ ದೇವದೂತರು ಭೂಮಿಗೆ ಬಂದು, ಮಾನವ ದೇಹ ತಾಳಿ, ಸ್ತ್ರೀಯರನ್ನು ಮದುವೆ ಮಾಡಿಕೊಂಡರು. ಅವರಿಗೆ ಹುಟ್ಟಿದ ಮಕ್ಕಳು ತುಂಬ ಕ್ರೂರಿಗಳಾಗಿದ್ದರು. (ಆದಿ. 6:2-4, 11, 12) ಆದರೆ ನೋಹ ಭಿನ್ನನಾಗಿದ್ದನು. ಅವನಿಗೆ “ಯೆಹೋವನ ದಯವು ದೊರಕಿತು.” ಅವನು ತನ್ನ ಸುತ್ತಲಿದ್ದ ಜನರಂತಿರದೆ ಯಾವುದು ಸರಿಯೋ ಅದನ್ನು ಮಾಡಿದನು, “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.”—ಆದಿ. 6:8, 9.
(ಆದಿಕಾಂಡ 6:14-16) ನೀನು ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು. 15 ನೀನು ಅದನ್ನು ಮಾಡಬೇಕಾದ ವಿಧಾನ ಹೇಗಂದರೆ—ಅದು ಮುನ್ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು. 16 ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಬೆಳಕು ಕಂಡಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು.
w13-E 4/1 ಪುಟ 14 ಪ್ಯಾರ 1
ಅವನು “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು”
ಈ ಕೆಲಸ ಮಾಡಿ ಮುಗಿಸಲು ದಶಕಗಳೇ ಹಿಡಿಯಿತು. ಬಹುಶಃ 40-50 ವರ್ಷ ಹಿಡಿದಿರಬೇಕು. ಯಾಕೆಂದರೆ ಮರಗಳನ್ನು ಕಡಿಯಬೇಕಿತ್ತು, ದಿಮ್ಮಿಗಳನ್ನು ಎಳೆದು ತರಬೇಕಿತ್ತು. ನಂತರ ಅವುಗಳಿಂದ ಹಲಗೆಗಳನ್ನು ಮಾಡಿ, ಅದಕ್ಕೆ ಆಕಾರ ಕೊಟ್ಟು, ಜೋಡಿಸಬೇಕಿತ್ತು. ನಾವೆಯಲ್ಲಿ ಮೂರು ಅಂತಸ್ತುಗಳು ಇರಬೇಕಿತ್ತು, ಅವುಗಳಲ್ಲಿ ಹಲವಾರು ಕೋಣೆಗಳಿರಬೇಕಿತ್ತು. ನಾವೆಯ ಒಂದು ಬದಿಗೆ ಬಾಗಿಲಿಟ್ಟು, ಮೇಲ್ಭಾಗದಲ್ಲಿ ಸುತ್ತಲೂ, ಸಾಲಾಗಿ ಕಿಟಿಕಿಗಳನ್ನು ಇಡಬೇಕಿತ್ತು. ಅಲ್ಲದೆ ಛಾವಣಿಯ ಮಧ್ಯಭಾಗ ಸ್ವಲ್ಪ ಮೇಲಿದ್ದು, ನೀರು ಸುಲಭವಾಗಿ ಹರಿದು ಹೋಗಸಾಧ್ಯವಾಗುವಂತೆ ಇಳಿಜಾರಾಗಿರಬೇಕಿತ್ತು.—ಆದಿ. 6:14-16.
(ಆದಿಕಾಂಡ 6:22) ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.
ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ
13 ಓಟದಲ್ಲಿ ತಾಳಿಕೊಳ್ಳಲು ಹಾಗೂ ಜಯಗಳಿಸಲು ದೇವರ ಈ ಸೇವಕರಿಗೆ ಹೇಗೆ ಸಾಧ್ಯವಾಯಿತು? ನೋಹನ ವಿಷಯದಲ್ಲಿ ಪೌಲನು ಏನು ಹೇಳಿದ್ದಾನೆಂದು ನೋಡಿ. (ಇಬ್ರಿಯ 11:7 ಓದಿ.) ಭೂಮಿಯ ಮೇಲೆ ಬರಲಿದ್ದ ಜಲಪ್ರಳಯವು ನೋಹ “ಅದುವರೆಗೆ ಕಾಣದಿದ್ದ ವಿಷಯ” ಆಗಿತ್ತು. (ಆದಿ. 6:17) ಏಕೆಂದರೆ ಜಲಪ್ರಳಯ ಈ ಮುಂಚೆ ಬಂದೇ ಇರಲಿಲ್ಲ. ಆದರೂ ಜಲಪ್ರಳಯ ಬರುವುದೆಂದು ಯೆಹೋವ ದೇವರು ಹೇಳಿದ ಮಾತನ್ನು ನೋಹ ಅಲಕ್ಷಿಸಲಿಲ್ಲ. ದೇವರು ನುಡಿದದ್ದನ್ನು ಮಾಡಿಯೇ ತೀರುವನು ಎಂಬ ಅಚಲ ನಂಬಿಕೆ ಅವನಿಗಿತ್ತು. ಹಾಗಾಗಿ ದೇವರು ಕೊಟ್ಟಿರುವ ಕೆಲಸ ತುಂಬ ಕಷ್ಟ, ತನ್ನಿಂದಾಗದು ಎಂದು ಅವನು ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. “ದೇವರು ಅಪ್ಪಣೆಕೊಟ್ಟ ಪ್ರಕಾರವೇ” ಮಾಡಿದನು. (ಆದಿ. 6:22) ಏನೆಲ್ಲ ಮಾಡಬೇಕಿತ್ತೆಂದು ಗಮನಿಸಿ. ನಾವೆ ಕಟ್ಟಬೇಕಿತ್ತು, ಪ್ರಾಣಿಪಕ್ಷಿಗಳನ್ನು ಅದರಲ್ಲಿ ಸೇರಿಸಬೇಕಿತ್ತು, ಆಹಾರಪದಾರ್ಥಗಳನ್ನು ಶೇಖರಿಸಬೇಕಿತ್ತು. ಅಷ್ಟೇ ಅಲ್ಲ ಜನರಿಗೆ ಎಚ್ಚರಿಕೆಯ ಸಂದೇಶ ಸಾರಬೇಕಿತ್ತು, ತನ್ನ ಕುಟುಂಬದವರ ನಂಬಿಕೆ ಬಲವಾಗಿರುವಂತೆ ನೋಡಿಕೊಳ್ಳಬೇಕಿತ್ತು. “ಅಪ್ಪಣೆಕೊಟ್ಟ ಪ್ರಕಾರವೇ” ಇವನ್ನೆಲ್ಲ ಮಾಡಿ ಮುಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ನೋಹ ನಂಬಿಕೆ ಹಾಗೂ ತಾಳ್ಮೆ ತೋರಿಸಿದನು. ಅದು ಅವನ ಹಾಗೂ ಅವನ ಕುಟುಂಬದ ಜೀವ ಉಳಿಸಿತು. ದೇವರ ಹೇರಳ ಆಶೀರ್ವಾದವನ್ನೂ ತಂದಿತು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 7:2) ಎಲ್ಲಾ ಶುದ್ಧಪಶುಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನೂ ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೋ.
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I
7:2—ಶುದ್ಧಪಶುಗಳ ಮತ್ತು ಅಶುದ್ಧಪಶುಗಳ ನಡುವಿನ ಭಿನ್ನತೆಯನ್ನು ಗುರುತಿಸಲಿಕ್ಕಾಗಿ ಯಾವುದನ್ನು ಆಧಾರವಾಗಿ ಉಪಯೋಗಿಸಲಾಯಿತು? ಭಿನ್ನತೆಯನ್ನು ಗುರುತಿಸುವ ಆಧಾರವು, ಆರಾಧನೆಯಲ್ಲಿ ಯಜ್ಞಾರ್ಪಣೆಗಳ ಉಪಯೋಗಕ್ಕೆ ಸೂಚಿತವಾಗಿತ್ತೇ ಹೊರತು ಯಾವುದನ್ನು ತಿನ್ನಸಾಧ್ಯವಿದೆ ಮತ್ತು ಯಾವುದನ್ನು ತಿನ್ನಬಾರದು ಎಂಬುದಕ್ಕಲ್ಲ ಎಂಬುದು ಸುವ್ಯಕ್ತ. ಜಲಪ್ರಳಯಕ್ಕೆ ಮುಂಚೆ ಪ್ರಾಣಿಗಳ ಮಾಂಸವು ಮನುಷ್ಯನ ಆಹಾರದ ಭಾಗವಾಗಿರಲಿಲ್ಲ. ಆಹಾರದ ವಿಷಯದಲ್ಲಿ “ಶುದ್ಧ” ಮತ್ತು “ಅಶುದ್ಧ” ಎಂಬ ವರ್ಣನೆಗಳು ಅಸ್ತಿತ್ವಕ್ಕೆ ಬಂದದ್ದು ಮೋಶೆಯ ಧರ್ಮಶಾಸ್ತ್ರದಲ್ಲಿಯೇ, ಮತ್ತು ಆ ಧರ್ಮಶಾಸ್ತ್ರವು ರದ್ದುಗೊಳಿಸಲ್ಪಟ್ಟಾಗ ಇವುಗಳು ಸಹ ಸಂಪೂರ್ಣವಾಗಿ ಕೊನೆಗೊಂಡವು. (ಅ. ಕೃತ್ಯಗಳು 10:9-16; ಎಫೆಸ 2:15) ಯೆಹೋವನ ಆರಾಧನೆಯಲ್ಲಿ ಯಾವುದು ಯಜ್ಞಕ್ಕೆ ಯೋಗ್ಯವಾಗಿದೆ ಎಂಬುದು ನೋಹನಿಗೆ ಖಂಡಿತವಾಗಿಯೂ ಗೊತ್ತಿತ್ತು. ಏಕೆಂದರೆ ನಾವೆಯಿಂದ ಹೊರಬಂದ ಕೂಡಲೆ ಅವನು “ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಮಾಡಿ ಅದರ ಮೇಲೆ ಶುದ್ಧವಾದ ಎಲ್ಲಾ ಪಶುಪಕ್ಷಿಜಾತಿಗಳಲ್ಲಿ ಸರ್ವಾಂಗಹೋಮ ಮಾಡಿದನು.”—ಆದಿಕಾಂಡ 8:20.
(ಆದಿಕಾಂಡ 7:11) ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು; ಆಕಾಶದ ತೂಬುಗಳು ತೆರೆದವು.
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I
7:11—ಭೂಮಿಯಾದ್ಯಂತ ಪ್ರಳಯವನ್ನು ಉಂಟುಮಾಡುವಷ್ಟು ನೀರು ಎಲ್ಲಿಂದ ಬಂತು? ಎರಡನೆಯ ಸೃಷ್ಟಿಕಾರಕ ಕಾಲಾವಧಿಯಲ್ಲಿ ಅಥವಾ “ದಿನ”ದಲ್ಲಿ ಭೂಮಿಯ ವಾಯುಮಂಡಲದ “ಗುಮಟ”ವು ರೂಪಿಸಲ್ಪಟ್ಟಾಗ, ಗುಮಟದ ‘ಕೆಳಗೂ’ ನೀರುಗಳಿದ್ದವು ಮತ್ತು ಗುಮಟದ ‘ಮೇಲೂ’ ನೀರುಗಳಿದ್ದವು. (ಆದಿಕಾಂಡ 1:6, 7) “ಕೆಳಗಣ” ನೀರುಗಳೆಂದರೆ ಈಗಾಗಲೇ ಭೂಮಿಯ ಮೇಲಿದ್ದ ನೀರುಗಳಾಗಿದ್ದವು. “ಮೇಲಣ” ನೀರುಗಳು, ಭೂಮಿಯಿಂದ ಅತಿ ಎತ್ತರದಲ್ಲಿ ಭಾರಿ ಪ್ರಮಾಣಗಳಲ್ಲಿ ತೇಲಾಡುತ್ತಿರುವ ತೇವಾಂಶವನ್ನು ಒಳಗೂಡಿದ್ದು, ಅಪಾರ ಜಲರಾಶಿಯಿಂದ ಕೂಡಿದ “ಸೆಲೆ”ಗಳಾಗಿದ್ದವು. ನೋಹನ ದಿನದಲ್ಲಿ ಈ ನೀರುಗಳು ಭೂಮಿಯ ಮೇಲೆ ಮಳೆಯ ರೂಪದಲ್ಲಿ ಸುರಿಸಲ್ಪಟ್ಟವು.
ಜನವರಿ 27-ಫೆಬ್ರವರಿ 2
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 9-11
“ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು”
(ಆದಿಕಾಂಡ 11:1-4) ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು; ಭಾಷಾಭೇದವೇನೂ ಇರಲಿಲ್ಲ. 2 ಅವರು ಪೂರ್ವ ದಿಕ್ಕಿಗೆ ಮುಂದೆ ಮುಂದೆ ಪ್ರಯಾಣಮಾಡುತ್ತಿರುವಾಗ ಶಿನಾರ್ ದೇಶದಲ್ಲಿ ಬೈಲುಸೀಮೆ ಸಿಕ್ಕಲು ಅಲ್ಲೇ ವಾಸಮಾಡಿಕೊಂಡು ತಮ್ಮತಮ್ಮೊಳಗೆ— 3 ಬನ್ನಿ, ಒಳ್ಳೊಳ್ಳೇ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; 4 ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ ಅಂದುಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಸುಣ್ಣಕ್ಕೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
it-1 ಪುಟ 239
ಮಹಾ ಬಾಬೆಲ್
ಪ್ರಾಚೀನ ಬಾಬೆಲಿನ ಗುಣಲಕ್ಷಣಗಳು. ಶಿನಾರ್ ದೇಶದ ಬಯಲು ಸೀಮೆಯಲ್ಲಿ, ಬಾಬೆಲ್ ಪಟ್ಟಣವನ್ನು ಕಟ್ಟಿದ ಸಮಯದಲ್ಲೇ ಬಾಬೆಲಿನ ಬುರುಜನ್ನು ಕಟ್ಟುವ ಕೆಲಸ ಕೂಡ ನಡೀತಾ ಇತ್ತು. (ಆದಿ. 11:2-9) ಬಾಬೆಲ್ ಪಟ್ಟಣ ಮತ್ತು ಬುರುಜು ಕಟ್ಟುವವರಿಗೆ ದೊಡ್ಡ ಹೆಸರು ಪಡೆಯಬೇಕಂಬ ಆಸೆ ಇತ್ತೇ ಹೊರತು ಯೆಹೋವನ ನಾಮಕ್ಕೆ ಮಹಿಮೆ ತರುವ ಉದ್ದೇಶ ಇರಲಿಲ್ಲ. ಇದು ಸತ್ಯ ಅಂತ, ಬ್ಯಾಬಿಲೋನ್ (ಬಾಬೆಲ್) ಮತ್ತು ಮೆಸೊಪಟ್ಯಾಮಿಯಾದಲ್ಲಿ ಸಿಕ್ಕ ದೇವಾಲಯದ ಅವಶೇಷಗಳಿಂದ ಗೊತ್ತಾಗುತ್ತೆ. ಈ ದೇವಾಲಯ ಸುಳ್ಳು ಧರ್ಮದ ಭಾಗವಾಗಿದ್ದರಿಂದ ಯೆಹೋವನು ಈ ದೇವಾಲಯವನ್ನು ನಾಶಮಾಡುವ ದೃಢ ನಿರ್ಧಾರ ತೆಗೆದುಕೊಂಡನು. ಹೀಬ್ರು ಭಾಷೆಯಲ್ಲಿ ಬಾಬೆಲ್ ಎಂಬ ಪದಕ್ಕೆ “ಗಲಿಬಿಲಿ” ಅಂತ ಅರ್ಥ ಇದೆ. ಈ ಹೆಸರನ್ನು ದೇವರೇ ಇಟ್ಟಿದ್ದು. ಇದು ಖಂಡನೆಯನ್ನು ಸೂಚಿಸುತ್ತಿತ್ತು. ಆದರೆ ಜನರು ಇದನ್ನು, ಸುಮೇರಿಯನ್ ಭಾಷೆಯಲ್ಲಿ ‘ಕಾಡಿಂಗೀರ್ರಾ’ ಮತ್ತು ಅಕಾಡಿಯನ್ ಭಾಷೆಯಲ್ಲಿ ‘ಬಾಬಿಲು’ ಅಂತ ಬದಲಾಯಿಸಿಕೊಂಡರು. ಈ ಎರಡೂ ಭಾಷೆಯ ಪದಗಳ ಅರ್ಥ ಒಂದೇ ಅದು “ದೇವರಿಗೆ ದಾರಿ.” ಅವರು ಈ ಹೆಸರುಗಳನ್ನು ಬದಲಾಯಿಸಿದ್ರೂ, ಬಾಬೆಲ್ ಪಟ್ಟಣ ಧರ್ಮಗಳ ಮೂಲ ಎಂಬ ಅರ್ಥನೇ ಕೊಡುತ್ತೆ.
it-2 ಪುಟ 202 ಪ್ಯಾರ 2
ಭಾಷೆ
ಆದಿಕಾಂಡ ಪುಸ್ತಕದಲ್ಲಿ ತಿಳಿಸುವ ಹಾಗೆ, ಜಲ ಪ್ರಳಯದ ನಂತರ ಇದ್ದ ಕೆಲವು ಜನರು ಒಂದೇ ಕಡೆ ಜೀವಿಸುವ ವಿಚಾರ ಮಾಡಿದರು. ಇದು ದೇವರು, ನೋಹ ಮತ್ತು ಅವನ ಕುಟುಂಬಕ್ಕೆ ಕೊಟ್ಟ ಆಜ್ಞೆಗೆ ವಿರುದ್ಧವಾಗಿತ್ತು. (ಆದಿ 9:1) ಜನರು ಎಲ್ಲಾ ಕಡೆ ಚದುರಿ ಭೂಮಿಯನ್ನು ತುಂಬಿಸುವ ಬದಲು, ಒಂದೇ ಕಡೇ ಅಂದರೆ ಮೆಸೊಪಟ್ಯಾಮಿಯಾದ ಶಿನಾರ್ ದೇಶದ ಬಯಲು ಸೀಮೆಯಲ್ಲೇ ವಾಸಮಾಡಲು ಇಷ್ಟಪಟ್ಟರು. ಹೀಗೆ, ಈ ಸ್ಥಳ ಕೂಡ ಸುಳ್ಳು ಧರ್ಮದ ಕೇಂದ್ರ ಬಿಂದುವಾಯಿತು.—ಆದಿ 11:2-4.
(ಆದಿಕಾಂಡ 11:6-8) ನೋಡಿದ ಮೇಲೆ ಆತನು—ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇಷ್ಟು ದೊಡ್ಡ ಕೆಲಸ ಮಾಡುವವರಾಗಿರಲು ಮುಂದೆ ಏನು ಆಲೋಚಿಸಿದರೂ ಇವರಿಗೆ ಅಸಾಧ್ಯವಲ್ಲ. 7 ನಾವು ಇಳಿದು ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ತಾರುಮಾರು ಮಾಡೋಣ ಬನ್ನಿ ಅಂದನು. 8 ಹಾಗೆಯೇ ಮಾಡಿ ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು. ಅವರು ಆ ಪಟ್ಟಣ ಕಟ್ಟುವದನ್ನು ನಿಲ್ಲಿಸಿಬಿಟ್ಟರು.
it-2 ಪುಟ 202 ಪ್ಯಾರ 3
ಭಾಷೆ
ಅವರ ಭಾಷೆಯನ್ನು ತಾರುಮಾರು ಮಾಡುವ ಮೂಲಕ ಯೆಹೋವನು ಅವರ ಒಗ್ಗಟ್ಟನ್ನು ಮುರಿದನು, ಬುರುಜನ್ನು ಕಟ್ಟುವ ಸೊಕ್ಕಿನ ಕೆಲಸಕ್ಕೆ ತಡೆಯನ್ನು ತಂದನು. ಇದರಿಂದ ಯೋಜನೆ ಪ್ರಕಾರ ಕಟ್ಟಡ ಕಟ್ಟುವುದು ಅಸಾಧ್ಯವಾಯಿತು. ಜನರು ತಲೆಕೆಟ್ಟು ಲೋಕದ ಎಲ್ಲಾ ಕಡೆ ಚದರಿಹೋದರು. ಹೀಗೆ ಭಾಷೆಯಲ್ಲಿ ಗಲಿಬಿಲಿ ಆಗಿದ್ದರಿಂದ ಭವಿಷ್ಯದಲ್ಲೂ ದೇವರಿಗೆ ವಿರುದ್ಧವಾಗಿ ಹೋಗಲು ಅವರಿಗೆ ಆಗಲ್ಲ, ಒಂದುವೇಳೆ ಹೋಗಲು ಪ್ರಯತ್ನಿಸಿದರೂ ಕೂಡಲೇ ಅವರಿಗೆ ಯಶಸ್ಸು ಸಿಗಲ್ಲ. ಯಾಕೆಂದರೆ ಭಾಷೆ ಬದಲಾದಾಗ ಮನುಷ್ಯರು ತಮ್ಮ ಬುದ್ಧಿಯನ್ನು, ಶಕ್ತಿಯನ್ನು ಒಟ್ಟುಸೇರಿಸಿ ಕೆಲಸಮಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಬಿಟ್ಟರು. ಹಾಗಾಗಿ ಅವರಿಂದ ದೊಡ್ಡದೊಡ್ಡ ಪ್ರೋಜೆಕ್ಟಗಳನ್ನು ಕೈಗೆತ್ತಿಕೊಳ್ಳಲು ಆಗಲ್ಲ. ಅಷ್ಟೇ ಅಲ್ಲ, ಬೇರೆಬೇರೆ ಭಾಷಾ ಗುಂಪಿನವರು ದೇವರ ಮೇಲೆ ಆತುಕೊಳ್ಳದೆ ತಮ್ಮ ಸ್ವಂತ ಅನುಭವ ಮತ್ತು ಸಂಶೋಧನೆಯನ್ನು ಆಧರಿಸಿ ಪ್ರಯೋಜನ ಆಗುವಂಥ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಕಷ್ಟ. (ಪ್ರಸಂ 7:29 ಹೋಲಿಸಿ; ಧರ್ಮೋ 32:5) ಇದು ಮಾನವ ಸಮಾಜವನ್ನು ಮುರಿಯಿತಾದರೂ, ಮನುಷ್ಯನನ್ನು ಅಪಾಯಕರ ಗುರಿಗಳಿಂದ ತಪ್ಪಿಸಿತು. (ಆದಿ 11:5-9; ಯೆಶಾ 8:9, 10 ಹೋಲಿಸಿ) ಪ್ರಗತಿಯ ಹೆಸರಿನಲ್ಲಿ ಲೋಕದ ಜ್ಞಾನ ಮತ್ತು ಮಾನವನ ಅಧಿಕಾರದ ದುರುಪಯೋಗದಿಂದ ಆಗಿರುವ ಇವತ್ತಿನ ಪರಿಸ್ಥಿತಿ ಏನಂತ ನಿಮಗೆ ಗೊತ್ತೆ ಇದೆ. ಇದೆಲ್ಲ ಆಗುತ್ತೆ ಅಂತ ದೇವರಿಗೆ ಮುಂಚೆನೇ ಗೊತ್ತಿತ್ತು ಅನಿಸುತ್ತೆ. ಅದಕ್ಕೇ ಬಾಬೆಲಿನ ಗೋಪುರ ಕಟ್ಟುವಾಗ ದೇವರು ಭಾಷೆ ತಾರುಮಾರು ಮಾಡಿ ಅದಕ್ಕೆ ತಡೆ ತಂದ.
(ಆದಿಕಾಂಡ 11:9) ಸಮಸ್ತಲೋಕದ ಭಾಷೆಯನ್ನು ಯೆಹೋವನು ಅಲ್ಲಿ ತಾರುಮಾರುಮಾಡಿ ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ ಎಂಬ ಹೆಸರಾಯಿತು.
it-2 ಪುಟ 472
ಜನಾಂಗಗಳು
ಭಾಷೆಗಳಲ್ಲಿ ಆದ ಗಲಿಬಿಲಿಯಿಂದ, ಜನರು ಚದುರಿ ಹೋಗುವಾಗ ಒಂದೊಂದು ಭಾಷೆಯ ಗುಂಪಿನ ಜನರು ತಮ್ಮದೇ ಆದ ಸಂಸ್ಕೃತಿ, ಕಲೆ, ಆಚಾರ ವಿಚಾರ, ಧರ್ಮಗಳನ್ನು ಬೆಳೆಸಿಕೊಂಡು, ತಮಗೆ ಇಷ್ಟ ಬಂದ ರೀತಿ ನಡೆದುಕೊಂಡ್ರು. (ಯಾಜ 18:3) ದೇವರಿಂದ ದೂರಹೋಗಿ ಅನೇಕ ವಿಗ್ರಹಗಳನ್ನು, ದೇವತೆಗಳನ್ನು ಮಾಡಿಕೊಂಡರು.—ಧರ್ಮೋ 12:30; 2ಅರ 17:29, 33.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 9:20-22) ನೋಹನು ವ್ಯವಸಾಯಗಾರನಾಗಿದ್ದನು; ಅವನೇ ದ್ರಾಕ್ಷೇತೋಟವನ್ನು ಪ್ರಾರಂಭಿಸಿದನು. 21 ಅವನು ದ್ರಾಕ್ಷಾರಸವನ್ನು ಕುಡಿಯಲು ಅಮಲೇರಿದ್ದರಿಂದ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. 22 ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವದನ್ನು ಕಂಡು ಹೊರಗಿದ್ದ ಅಣ್ಣತಮ್ಮಂದಿರಾದ ಶೇಮ್ಯೆಫೆತರಿಗೆ ತಿಳಿಸಿದನು.
(ಆದಿಕಾಂಡ 9:24, 25) ನೋಹನು ಅಮಲಿಳಿದೆದ್ದು ಕಿರೀಮಗನು ಮಾಡಿದ್ದನ್ನು ತಿಳಿದು—ಕಾನಾನನು ಶಾಪಗ್ರಸ್ತನಾಗಲಿ. 25 ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ ಅಂದನು.
it-1 ಪುಟ 1023 ಪ್ಯಾರ 4
ಹಾಮ್
ನಿಜವಾಗಿ ತಪ್ಪು ಮಾಡಿದವನು ಕಾನಾನ ಆಗಿರಬಹುದು. ಆದರೆ ಅವನ ತಂದೆ ಹಾಮನು ಕಾನಾನನ ತಪ್ಪನ್ನು ತಿದ್ದಿರಲಿಕ್ಕಿಲ್ಲ ಅಥವಾ ಹಾಮನ ಕೆಟ್ಟ ಪ್ರವೃತ್ತಿ ಕಾನಾನನಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಿರಬಹುದು. ಅವನ ಇಡೀ ವಂಶಕ್ಕೂ ಇದು ಹರಡಬಹುದೆಂದು ನೋಹನು ಯೋಚಿಸಿರಬಹುದು. ಶೇಮನ ವಂಶಸ್ಥರು ಕಾನಾನ್ಯರನ್ನು ಸ್ವಾಧೀನ ಮಾಡಿಕೊಂಡಾಗ ಈ ಶಾಪದ ಒಂದು ಭಾಗ ನಿಜವಾಯಿತು. ಗಿಬ್ಯೋನ್ಯರು (ಕಾನಾನ್ಯರ ವಂಶಸ್ಥರು) ಇಸ್ರಾಯೇಲ್ಯರಿಗೆ ಗುಲಾಮರಾದರು. ಅನೇಕ ಶತಮಾನಗಳ ನಂತರ ಹಾಮನ ಮಗನಾದ ಕಾನಾನನ ಸಂತತಿಯವರು ಯೆಫೆತನ ವಂಶಾವಳಿಯಲ್ಲಿ ಬಂದ ಮೇದ್ಯ-ಪಾರಸೀಯ, ಗ್ರೀಸ್ ಮತ್ತು ರೋಮ್ ದೇಶಗಳ ಆಳ್ವಿಕೆಯ ಕೆಳಗೆ ಬಂದಾಗ ಈ ಶಾಪ ಪೂರ್ಣವಾಗಿ ನಿಜವಾಯಿತು.
(ಆದಿಕಾಂಡ 10:1) ನೋಹನ ಮಕ್ಕಳಾದ ಶೇಮ್ಹಾಮ್ಯೆಫೆತರ ವಂಶದವರ ಚರಿತ್ರೆಯು—ಜಲಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I
10:1-32. ಜಲಪ್ರಳಯಕ್ಕೆ ಮುಂಚಿನ ಹಾಗೂ ನಂತರದ ವಂಶಾವಳಿಯ ಎರಡು ದಾಖಲೆಗಳು—5 ಮತ್ತು 10ನೆಯ ಅಧ್ಯಾಯಗಳು—ನೋಹನ ಮೂವರು ಪುತ್ರರ ಮೂಲಕ ಪ್ರಥಮ ಮನುಷ್ಯನಾಗಿದ್ದ ಆದಾಮನೊಂದಿಗೆ ಇಡೀ ಮಾನವಕುಲಕ್ಕಿರುವ ಸಂಬಂಧವನ್ನು ಸೂಚಿಸುತ್ತವೆ. ಅಶ್ಶೂರ್ಯರು, ಕಸ್ದೀಯರು, ಇಬ್ರಿಯರು, ಅರಾಮ್ಯರು ಮತ್ತು ಅರೇಬಿಯದ ಕೆಲವು ಬುಡಕಟ್ಟುಗಳವರು ಶೇಮನ ಸಂತಾನದವರಾಗಿದ್ದಾರೆ. ಕೂಷ್ಯರು, ಐಗುಪ್ತ್ಯರು, ಕಾನಾನ್ಯರು ಮತ್ತು ಆಫ್ರಿಕದ ಹಾಗೂ ಅರೇಬಿಯದ ಕೆಲವು ಬುಡಕಟ್ಟುಗಳವರು ಹಾಮನ ವಂಶಜರಾಗಿದ್ದಾರೆ. ಇಂಡೋ-ಯುರೋಪಿಯನ್ನರು ಯೆಫೆತನ ವಂಶದವರಾಗಿದ್ದಾರೆ. ಎಲ್ಲಾ ಮಾನವರು ಸಂಬಂಧಿಕರಾಗಿದ್ದಾರೆ, ಮತ್ತು ಎಲ್ಲರೂ ದೇವರ ಮುಂದೆ ಸಮಾನ ರೀತಿಯಲ್ಲಿ ಜನಿಸಿದವರಾಗಿದ್ದಾರೆ. (ಅ. ಕೃತ್ಯಗಳು 17:26) ಈ ಸತ್ಯವು, ನಾವು ಇತರರನ್ನು ಹೇಗೆ ಪರಿಗಣಿಸುತ್ತೇವೆ ಹಾಗೂ ಅವರನ್ನು ಹೇಗೆ ಉಪಚರಿಸುತ್ತೇವೆ ಎಂಬುದರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ.