ಎರಡನೇ ಅರಸು
17 ಯೆಹೂದದ ರಾಜ ಆಹಾಜ ಆಳ್ತಿದ್ದ 12ನೇ ವರ್ಷದಲ್ಲಿ ಏಲಾನ ಮಗ ಹೋಷೇಯ+ ಸಮಾರ್ಯದಲ್ಲಿ ಇಸ್ರಾಯೇಲಿನ ರಾಜನಾದ. ಅವನು ಅಲ್ಲಿಂದ ಒಂಬತ್ತು ವರ್ಷ ಆಳಿದ. 2 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ. ಆದ್ರೆ ಅವನು ತನಗಿಂತ ಮುಂಚೆ ಇದ್ದ ಇಸ್ರಾಯೇಲ್ ರಾಜರಷ್ಟು ಕೆಟ್ಟವನಾಗಿರಲಿಲ್ಲ. 3 ಅಶ್ಶೂರ್ಯರ ರಾಜ ಶಲ್ಮನೆಸೆರ ಹೋಷೇಯನ ವಿರುದ್ಧ ಯುದ್ಧಕ್ಕೆ ಬಂದ.+ ಆಗ ಹೋಷೇಯ ಅವನಿಗೆ ಅಧೀನನಾಗಿ ಕಪ್ಪ ಕೊಡೋಕೆ ಶುರುಮಾಡಿದ.+ 4 ಕೆಲವು ವರ್ಷಗಳಾದ ಮೇಲೆ ಅಶ್ಶೂರ್ಯರ ರಾಜನಿಗೆ ಹೋಷೇಯ ಏನೋ ಸಂಚು ಮಾಡ್ತಿದ್ದಾನೆ ಅಂತ ಗೊತ್ತಾಯ್ತು. ಯಾಕಂದ್ರೆ ಹೋಷೇಯ ಈಜಿಪ್ಟಿನ+ ರಾಜನಾದ ಸೋ ಅನ್ನುವವನ ಹತ್ರ ಸಂದೇಶವಾಹಕರನ್ನ ಕಳಿಸಿದ್ದ. ಅಷ್ಟೇ ಅಲ್ಲ ಈ ಮುಂಚಿನ ತರ ಅಶ್ಶೂರ್ಯರ ರಾಜನಿಗೆ ಕೊಡಬೇಕಾದ ಕಪ್ಪ ಕೊಟ್ಟಿರಲಿಲ್ಲ. ಹಾಗಾಗಿ ಅಶ್ಶೂರ್ಯರ ರಾಜ ಹೋಷೇಯನನ್ನ ಬಂಧಿಸಿ ಸೆರೆಮನೆಯಲ್ಲಿಟ್ಟ.
5 ಅಶ್ಶೂರ್ಯರ ರಾಜ ಇಡೀ ಇಸ್ರಾಯೇಲ್ ದೇಶದ ಮೇಲೆ ದಾಳಿ ಮಾಡಿದ. ಅವನು ಸಮಾರ್ಯವನ್ನ ಮೂರು ವರ್ಷ ಮುತ್ತಿಗೆ ಹಾಕಿದ. 6 ರಾಜ ಹೋಷೇಯ ಆಳ್ತಿದ್ದ ಒಂಬತ್ತನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಸಮಾರ್ಯವನ್ನ ವಶ ಮಾಡ್ಕೊಂಡ.+ ಆಮೇಲೆ ಅವನು ಇಸ್ರಾಯೇಲ್ ಜನ್ರನ್ನ ಅಶ್ಶೂರ್ ದೇಶಕ್ಕೆ ಕೈದಿಗಳಾಗಿ ಕರ್ಕೊಂಡು ಹೋಗಿ+ ಅವ್ರನ್ನ ಹಲಹದಲ್ಲಿ, ಗೋಜಾನ್ ನದಿಯ+ ಹತ್ರದಲ್ಲಿದ್ದ ಹಾಬೋರಿನಲ್ಲಿ ಮತ್ತು ಮೇದ್ಯರ ಪಟ್ಟಣಗಳಲ್ಲಿ ಇರಿಸಿದ.+
7 ಈ ರೀತಿ ಆಗೋಕೆ ಕಾರಣ ಇಸ್ರಾಯೇಲಿನ ಜನ ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡಿದ್ರು. ಆತನು ಅವ್ರನ್ನ ಈಜಿಪ್ಟಿನ ರಾಜ ಫರೋಹನ ಕೈಯಿಂದ ಬಿಡಿಸಿ ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದಿದ್ದ.+ ಆದ್ರೆ ಇಸ್ರಾಯೇಲ್ಯರು ಬೇರೆ ದೇವರುಗಳನ್ನ ಆರಾಧಿಸಿದ್ರು.*+ 8 ಅಷ್ಟೇ ಅಲ್ಲ ಯೆಹೋವ ಅವ್ರ ಮುಂದಿಂದ ಓಡಿಸಿಬಿಟ್ಟಿದ್ದ ಜನ್ರು ಮಾಡ್ತಿದ್ದ ಪದ್ಧತಿಗಳನ್ನ ಮತ್ತು ಇಸ್ರಾಯೇಲಿನ ರಾಜರು ಆರಂಭಿಸಿದ್ದ ಪದ್ಧತಿಗಳನ್ನ ಅವರು ಪಾಲಿಸ್ತಿದ್ರು.
9 ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದ ವಿಷ್ಯಗಳನ್ನೇ ಮಾಡ್ತಿದ್ರು. ಕಾವಲುಗಾರರ ಕೋಟೆಗಳಿದ್ದ ಚಿಕ್ಕಚಿಕ್ಕ ಊರುಗಳಿಂದ ಹಿಡಿದು ಭದ್ರ ಕೋಟೆಗಳಿದ್ದ ಪಟ್ಟಣಗಳ ತನಕ ಎಲ್ಲ ಕಡೆಗಳಲ್ಲೂ* ಆರಾಧನೆ ಮಾಡೋಕೆ ಪೂಜಾ ಸ್ಥಳಗಳನ್ನ ಕಟ್ತಾ ಹೋದ್ರು.+ 10 ಅವರು ಪ್ರತಿಯೊಂದು ಬೆಟ್ಟಗುಡ್ಡಗಳಲ್ಲೂ ಸೊಂಪಾಗಿ ಬೆಳೆದಿರೋ ಪ್ರತಿಯೊಂದು ಮರದ ಕೆಳಗೂ+ ವಿಗ್ರಹಸ್ತಂಭಗಳನ್ನ, ಪೂಜಾಕಂಬಗಳನ್ನ*+ ನಿಲ್ಲಿಸ್ತಾ ಹೋದ್ರು. 11 ಯೆಹೋವ ಅವ್ರ ಮುಂದಿಂದ ಓಡಿಸಿಬಿಟ್ಟ ಜನ್ರು ಮಾಡ್ತಿದ್ದ ಹಾಗೆ ಇವರು ಸಹ ಎಲ್ಲ ಪೂಜಾ ಸ್ಥಳಗಳಲ್ಲಿ ಬಲಿಗಳನ್ನ ಅರ್ಪಿಸಿ ಅದ್ರ ಹೊಗೆ ಏರೋ ತರ ಮಾಡ್ತಿದ್ರು.+ ಕೆಟ್ಟ ಕೆಲಸಗಳನ್ನ ಮಾಡ್ತಾ ಯೆಹೋವನಿಗೆ ಕೋಪ ಬರಿಸ್ತಾ ಇದ್ರು.
12 ಇಸ್ರಾಯೇಲ್ಯರು ಅಸಹ್ಯ ಮೂರ್ತಿಗಳ* ಆರಾಧನೆಯನ್ನ ಬಿಡಲಿಲ್ಲ.+ ಯೆಹೋವ ಅವ್ರಿಗೆ “ಇದನ್ನ ನೀವು ಮಾಡಬಾರದು!”+ ಅಂತ ಹೇಳಿದ್ರೂ ಅವರು ಅದನ್ನ ಮಾಡಿದ್ರು. 13 ಯೆಹೋವ ತನ್ನ ಎಲ್ಲ ಪ್ರವಾದಿಗಳ ಮತ್ತು ದರ್ಶಿಗಳ ಮೂಲಕ ಇಸ್ರಾಯೇಲ್ಯರಿಗೆ, ಯೆಹೂದ್ಯರಿಗೆ “ಸಾಕು, ಇನ್ಮುಂದೆ ಕೆಟ್ಟ ಕೆಲಸ ಮಾಡಬೇಡಿ!+ ನಾನು ನಿಮ್ಮ ಪೂರ್ವಜರಿಗೆ ಮತ್ತು ನಿಮಗೆ ನನ್ನ ಪ್ರವಾದಿಗಳ ಮೂಲಕ ನಿಯಮ ಪುಸ್ತಕದಲ್ಲಿ ಕೊಟ್ಟ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸ್ತಾ ಇರಿ” ಅಂತ ಎಚ್ಚರಿಸ್ತಾ ಇದ್ದ.+ 14 ಆದ್ರೆ ಅವರು ಆತನ ಮಾತು ಕೇಳಲಿಲ್ಲ. ತಮ್ಮ ದೇವರಾದ ಯೆಹೋವನ ಮೇಲೆ ನಂಬಿಕೆ ಇಡದ ತಮ್ಮ ಪೂರ್ವಜರ ತರ ಹಠಮಾರಿಗಳಾಗೇ ಇದ್ರು.+ 15 ಆತನ ನಿಯಮಗಳನ್ನ ಮುರಿತಾ ಹೋದ್ರು. ಆತನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ,+ ಅವ್ರನ್ನ ಎಚ್ಚರಿಸೋಕೆ ಪದೇ ಪದೇ ಕೊಟ್ಟ ನಿರ್ದೇಶನಗಳನ್ನ ತಿರಸ್ಕರಿಸ್ತಾ ಬಂದ್ರು.+ ಪ್ರಯೋಜನ ಇಲ್ಲದ ಮೂರ್ತಿಗಳನ್ನ ಪೂಜಿಸಿ+ ಪ್ರಯೋಜನಕ್ಕೆ ಬಾರದ ಜನರಾದ್ರು.+ ಯೆಹೋವ ಯಾರನ್ನ ಅನುಕರಿಸಬೇಡಿ ಅಂತ ಹೇಳಿದ್ದನೋ ಆ ಸುತ್ತಮುತ್ತ ಇದ್ದ ಜನ್ರನ್ನೇ ಅವರು ಅನುಕರಿಸಿದ್ರು.+
16 ಅವರು ತಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ಮುರಿತಾ ಹೋದ್ರು. ಅಚ್ಚಲ್ಲಿ ಹೊಯ್ದು ಮಾಡಿದ ಎರಡು ಕರುಗಳ+ ಮೂರ್ತಿಗಳನ್ನ, ಪೂಜಾಕಂಬವನ್ನ*+ ಮಾಡ್ಕೊಂಡ್ರು. ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬೀಳ್ತಾ,+ ಬಾಳನನ್ನ ಆರಾಧಿಸಿದ್ರು.+ 17 ತಮ್ಮ ಮಕ್ಕಳನ್ನ ಬೆಂಕಿಯಲ್ಲಿ ಬಲಿ ಕೊಡ್ತಿದ್ರು,+ ಕಣಿ ಕೇಳ್ತಿದ್ರು,+ ಶಕುನ ನೋಡ್ತಿದ್ರು. ಯೆಹೋವನಿಗೆ ಇಷ್ಟ ಇಲ್ಲದ್ದನ್ನೇ ಮಾಡ್ತಾ ಆತನಿಗೆ ಕೋಪ ಬರಿಸಿದ್ರು.
18 ಹಾಗಾಗಿ ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. ಅವ್ರನ್ನ ತನ್ನ ಕಣ್ಮುಂದೆಯಿಂದ ತೆಗೆದುಹಾಕಿದನು.+ ಯೆಹೂದ ಕುಲವನ್ನ ಬಿಟ್ಟು ಬೇರೆ ಯಾರನ್ನೂ ಆ ದೇಶದಲ್ಲಿ ಉಳಿಸಲಿಲ್ಲ.
19 ಯೆಹೂದದ ಜನ್ರು ಕೂಡ ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸಲಿಲ್ಲ.+ ಇಸ್ರಾಯೇಲ್ಯರು ಮಾಡ್ತಿದ್ದ ಪದ್ಧತಿಗಳನ್ನೇ ಅವರೂ ಮಾಡಿದ್ರು.+ 20 ಯೆಹೋವ ಇಸ್ರಾಯೇಲ್ ವಂಶದವ್ರನ್ನೆಲ್ಲ ತಿರಸ್ಕಾರ ಮಾಡಿದನು. ಅವ್ರಿಗೆ ಅವಮಾನ ಮಾಡಿದನು. ಸುಲಿಗೆ ಮಾಡುವವರ ಕೈಗೆ ಅವ್ರನ್ನ ಒಪ್ಪಿಸಿದನು. ತನ್ನೆದುರಿಂದ ಅವ್ರನ್ನ ತೊಲಗಿಸೋ ತನಕ ಅವನು ಹೀಗೆ ಮಾಡಿದನು. 21 ಆತನು ದಾವೀದನ ಮನೆತನದಿಂದ ಇಸ್ರಾಯೇಲ್ ರಾಜ್ಯವನ್ನ ಕಿತ್ಕೊಂಡನು. ಆಮೇಲೆ ಇಸ್ರಾಯೇಲ್ಯರು ನೆಬಾಟನ ಮಗ ಯಾರೊಬ್ಬಾಮನನ್ನ ರಾಜನಾಗಿ ಮಾಡ್ಕೊಂಡ್ರು.+ ಇಸ್ರಾಯೇಲ್ಯರು ಯೆಹೋವನ ಮಾತು ಕೇಳೋದನ್ನ ಬಿಟ್ಟುಬಿಡೋ ತರ ಮಾಡಿ ಅವರು ಘೋರವಾದ ಪಾಪ ಮಾಡೋಕೆ ಯಾರೊಬ್ಬಾಮ ಕಾರಣನಾದ. 22 ಅವನು ಮಾಡಿದ ಪಾಪಗಳನ್ನೇ ಇಸ್ರಾಯೇಲ್ ಜನ ಮಾಡ್ತಿದ್ರು.+ ಆ ಪಾಪಗಳನ್ನ ಅವರು ಬಿಡ್ಲೇ ಇಲ್ಲ. 23 ಯೆಹೋವ ತನ್ನ ಸೇವಕರಾದ ಪ್ರವಾದಿಗಳ ಮೂಲಕ ಹೇಳಿದ ಹಾಗೇ ಕೊನೆಗೂ ಇಸ್ರಾಯೇಲ್ಯರನ್ನ ತನ್ನ ಕಣ್ಮುಂದೆಯಿಂದ ತೆಗೆದುಹಾಕಿದನು.+ ಹಾಗಾಗಿ ಇಸ್ರಾಯೇಲ್ಯರನ್ನ ಅವ್ರ ದೇಶದಿಂದ ಅಶ್ಶೂರ್ ದೇಶಕ್ಕೆ ಕೈದಿಗಳಾಗಿ ಕರ್ಕೊಂಡು ಹೋದ್ರು.+ ಅವರು ಇವತ್ತಿಗೂ ಅಲ್ಲೇ ಇದ್ದಾರೆ.
24 ಅಶ್ಶೂರ್ಯರ ರಾಜ ಬಾಬೆಲ್, ಕೂತ, ಅವ್ವಾ, ಹಾಮಾತ್, ಸೆಫರ್ವಯಿಮ್+ ಪಟ್ಟಣಗಳಿಂದ ಜನ್ರನ್ನ ಕರ್ಕೊಂಡು ಬಂದು ಅವ್ರನ್ನ ಇಸ್ರಾಯೇಲ್ಯರು ಇದ್ದಂಥ ಸಮಾರ್ಯ ಪಟ್ಟಣಗಳಲ್ಲಿ ಇಟ್ಟ. ಆ ಜನ್ರು ಸಮಾರ್ಯವನ್ನ ತಮ್ಮ ಅಧೀನಕ್ಕೆ ತಗೊಂಡು ಅದ್ರ ಪಟ್ಟಣಗಳಲ್ಲಿ ಇದ್ರು. 25 ಅವರು ಅಲ್ಲಿ ವಾಸಿಸೋಕೆ ಶುರು ಮಾಡಿದಾಗ ಅವ್ರಿಗೆ ಯೆಹೋವನ ಮೇಲೆ ಭಯಭಕ್ತಿ ಇರ್ಲಿಲ್ಲ. ಹಾಗಾಗಿ ಯೆಹೋವ ಅವ್ರ ಪಟ್ಟಣಗಳಿಗೆ ಸಿಂಹಗಳನ್ನ ಕಳಿಸಿದ.+ ಅವು ಸ್ವಲ್ಪ ಜನ್ರನ್ನ ಸಾಯಿಸಿದವು. 26 ಅಶ್ಶೂರ್ಯರ ರಾಜನಿಗೆ “ನೀನು ಕೈದಿಗಳಾಗಿ ಕರ್ಕೊಂಡು ಬಂದು, ಸಮಾರ್ಯದ ಪಟ್ಟಣಗಳಲ್ಲಿ ಇಟ್ಟಿರೋ ಜನ್ರಿಗೆ ಆ ದೇಶದ ದೇವರನ್ನ ಹೇಗೆ ಆರಾಧಿಸಬೇಕಂತ* ಗೊತ್ತಿಲ್ಲ. ಹಾಗಾಗಿ ಆತನು ಆ ಪಟ್ಟಣಗಳಿಗೆ ಸಿಂಹಗಳನ್ನ ಕಳಿಸ್ತಾ ಇದ್ದಾನೆ. ಅವ್ರನ್ನ ಕೊಂದುಹಾಕ್ತಿವೆ. ಯಾಕಂದ್ರೆ ಅವ್ರಲ್ಲಿ ಒಬ್ರಿಗೂ ಆ ದೇಶದ ದೇವರನ್ನ ಹೇಗೆ ಆರಾಧಿಸಬೇಕಂತ ಗೊತ್ತಿಲ್ಲ” ಅಂತ ವರದಿಸಲಾಯ್ತು.
27 ಆಗ ಅಶ್ಶೂರ್ಯರ ರಾಜ “ನೀವು ಸಮಾರ್ಯದಿಂದ ಕೈದಿಗಳಾಗಿ ಕರ್ಕೊಂಡು ಹೋಗಿರೋ ಪುರೋಹಿತರಲ್ಲಿ ಒಬ್ಬನನ್ನ ಮತ್ತೆ ಸಮಾರ್ಯಕ್ಕೆ ಕಳಿಸ್ಕೊಡಿ. ಅವನು ಅಲ್ಲಿದ್ಕೊಂಡು ಆ ದೇಶದ ದೇವರನ್ನ ಹೇಗೆ ಆರಾಧಿಸಬೇಕಂತ ಕಲಿಸ್ಲಿ” ಅಂತ ಹೇಳಿದ. 28 ಹಾಗಾಗಿ ಸಮಾರ್ಯದಿಂದ ಕೈದಿಗಳಾಗಿ ಹೋಗಿದ್ದ ಪುರೋಹಿತರಲ್ಲಿ ಒಬ್ಬ ಬೆತೆಲಿಗೆ ವಾಪಸ್ ಬಂದು ಅಲ್ಲಿ ವಾಸಿಸಿದ.+ ಯೆಹೋವನಿಗೆ ಹೇಗೆ ಭಯಭಕ್ತಿ ತೋರಿಸಬೇಕಂತ ಅವನು ಜನ್ರಿಗೆ ಕಲಿಸೋಕೆ ಶುರುಮಾಡಿದ.+
29 ಹಾಗಿದ್ರೂ ಪ್ರತಿಯೊಂದು ಜನಾಂಗದವರು ತಮ್ಮತಮ್ಮ ದೇವರುಗಳ ಮೂರ್ತಿಗಳನ್ನ ಮಾಡ್ಕೊಂಡ್ರು. ಅವರು ಅವುಗಳನ್ನ ಎತ್ತರ ಸ್ಥಳಗಳಲ್ಲಿ ಕಟ್ಟಿದ ಪೂಜಾ ಮಂದಿರಗಳಲ್ಲಿ ಇಟ್ರು. ಈ ಮಂದಿರಗಳನ್ನ ಸಮಾರ್ಯದವರು ಮಾಡಿದ್ರು. ಪ್ರತಿಯೊಂದು ಜನಾಂಗದವರು ತಾವು ವಾಸಿಸ್ತಿದ್ದ ಪಟ್ಟಣಗಳಲ್ಲಿ ಹೀಗೆ ಮಾಡ್ಕೊಂಡ್ರು. 30 ಬಾಬೆಲಿನ ಜನ ಸುಕ್ಕೋತ್-ಬೆನೋತ್ ಮೂರ್ತಿಯನ್ನ, ಕೂತಿನ ಜನ ನೇರ್ಗಲ್ ಮೂರ್ತಿಯನ್ನ, ಹಾಮಾತಿನ+ ಜನ ಅಷೀಮಾ ಮೂರ್ತಿಯನ್ನ, 31 ಅವ್ವೀಯರು ನಿಭಜ್ ಮತ್ತು ತರ್ತಕ್ ಮೂರ್ತಿಗಳನ್ನ ಮಾಡ್ಕೊಂಡ್ರು. ಸೆಫರ್ವಯಿಮಿನವರು+ ತಮ್ಮ ಗಂಡು ಮಕ್ಕಳನ್ನ ತಮ್ಮ ದೇವರುಗಳಾದ ಅದ್ರಮ್ಮೆಲೆಕನಿಗೆ ಮತ್ತು ಅನಮ್ಮೆಲೆಕನಿಗೆ ಬೆಂಕಿಯಲ್ಲಿ ಬಲಿ ಕೊಡ್ತಿದ್ರು. 32 ಜನ ಯೆಹೋವನಿಗೆ ಭಯಪಡ್ತಿದ್ರು ನಿಜ. ಆದ್ರೆ ಸಾಧಾರಣ ಜನ್ರಿಂದ ಕೆಲವು ಗಂಡಸ್ರನ್ನ ಆರಿಸಿ ಮಂದಿರಗಳಲ್ಲಿ ಪುರೋಹಿತರಾಗಿ ನೇಮಿಸಿದ್ರು. ಆ ಪುರೋಹಿತರು ಎತ್ತರದ ಸ್ಥಳಗಳಲ್ಲಿದ್ದ ಪೂಜಾ ಮಂದಿರಗಳಲ್ಲಿ ಜನ್ರಿಗೋಸ್ಕರ ಸೇವೆ ಮಾಡ್ತಿದ್ರು.+ 33 ಹೀಗೆ ಅವರು ಯೆಹೋವನಿಗೆ ಭಯಪಡ್ತಿದ್ರೂ ತಾವು ಬಿಟ್ಟು ಬಂದಿದ್ದ ದೇಶಗಳಲ್ಲಿ ತಮ್ಮ ದೇವರುಗಳನ್ನ ಹೇಗೆ ಆರಾಧಿಸ್ತಿದ್ರೋ ಇಲ್ಲಿನೂ ಹಾಗೇ ಆರಾಧಿಸ್ತಿದ್ರು.+
34 ಈ ದಿನದ ತನಕ ಅವರು ತಮ್ಮ ಹಳೇ ಧರ್ಮಗಳ ಪದ್ಧತಿಗಳನ್ನೇ ಮಾಡ್ತಿದ್ದಾರೆ. ಯೆಹೋವನನ್ನ ಆರಾಧಿಸುವವರು* ಅವ್ರಲ್ಲಿ ಒಬ್ರೂ ಇಲ್ಲ. ಆತನ ನಿಯಮಗಳನ್ನ, ತೀರ್ಪುಗಳನ್ನ, ನಿಯಮ ಪುಸ್ತಕವನ್ನ, ಆಜ್ಞೆಗಳನ್ನ ಅವರು ಪಾಲಿಸ್ತಿಲ್ಲ. ಆ ನಿಯಮ ಪುಸ್ತಕವನ್ನ ಮತ್ತು ಆಜ್ಞೆಗಳನ್ನ ಯೆಹೋವ ಯಾಕೋಬನ ಮಕ್ಕಳಿಗೆ ಕೊಟ್ಟಿದ್ದನು. ಆತನು ಯಾಕೋಬನ ಹೆಸ್ರನ್ನ ಇಸ್ರಾಯೇಲ್ ಅಂತ ಬದಲಾಯಿಸಿದ್ದನು.+ 35 ಯೆಹೋವ ಇಸ್ರಾಯೇಲ್ಯರ ಜೊತೆ ಒಪ್ಪಂದ ಮಾಡ್ಕೊಂಡಾಗ+ ಅವ್ರಿಗೆ ಹೀಗೆ ಹೇಳಿದ್ದನು: “ನೀವು ಬೇರೆ ದೇವರುಗಳಿಗೆ ಭಯಪಡಬಾರದು. ನೀವು ಅವುಗಳಿಗೆ ಅಡ್ಡಬೀಳೋದಾಗಲಿ, ಆರಾಧಿಸೋದಾಗಲಿ, ಬಲಿ ಅರ್ಪಿಸೋದಾಗಲಿ ಮಾಡಬಾರದು.+ 36 ಯೆಹೋವನಾದ ನಾನು ನನ್ನ ಮಹಾಶಕ್ತಿಯನ್ನ, ನನ್ನ ಬಲಿಷ್ಠ ತೋಳುಗಳನ್ನ ಬಳಸಿ ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದೆ.+ ನೀವು ನನಗೆ ಭಯಪಡಬೇಕು,+ ಅಡ್ಡಬೀಳಬೇಕು ಮತ್ತು ಬಲಿ ಅರ್ಪಿಸಬೇಕು. 37 ನಾನು ನಿಮಗೆ ನಿಯಮಗಳನ್ನ, ತೀರ್ಪುಗಳನ್ನ, ನಿಯಮ ಪುಸ್ತಕವನ್ನ ಮತ್ತು ಆಜ್ಞೆಗಳನ್ನ ಕೊಟ್ಟೆ.+ ನೀವು ಯಾವಾಗ್ಲೂ ಅವುಗಳನ್ನ ಜಾಗರೂಕತೆಯಿಂದ ಪಾಲಿಸಬೇಕು. ನೀವು ಬೇರೆ ದೇವರುಗಳಿಗೆ ಹೆದರಬಾರದು. 38 ನಾನು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದವನ್ನ ನೀವು ಮರಿಬಾರದು.+ ಬೇರೆ ದೇವರುಗಳಿಗೆ ಭಯಪಡಬಾರದು. 39 ಆದ್ರೆ ನಿಮ್ಮ ದೇವರಾಗಿರೋ ಯೆಹೋವನಾದ ನನಗೆ ಭಯಪಡಬೇಕು. ಯಾಕಂದ್ರೆ ನಾನೇ ನಿಮ್ಮನ್ನ ನಿಮ್ಮ ಶತ್ರುಗಳ ಕೈಯಿಂದ ಬಿಡಿಸಿ ಕಾಪಾಡ್ತೀನಿ.”
40 ಆದ್ರೆ ಅವರು ಆತನ ಮಾತನ್ನ ಕೇಳದೆ ತಮ್ಮ ಹಳೇ ಧರ್ಮದ ಪದ್ಧತಿಗಳನ್ನೇ ಮಾಡ್ತಿದ್ರು.+ 41 ಈ ಜನಾಂಗಗಳವರು ಯೆಹೋವನಿಗೂ ಭಯಪಡ್ತಿದ್ರು,+ ತಮ್ಮ ಕೈಯಾರೆ ಮಾಡ್ಕೊಂಡಿದ್ದ ಮೂರ್ತಿಗಳನ್ನೂ ಆರಾಧಿಸ್ತಿದ್ರು. ಇವತ್ತಿನ ತನಕ ಅವ್ರ ಮಕ್ಕಳು, ಮೊಮ್ಮಕ್ಕಳು ಅವರು ಮಾಡಿದ್ದನ್ನೇ ಮಾಡ್ತಿದ್ದಾರೆ.