ನಿಮಗೆ ನೆನಪಿದೆಯೆ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೊ? ಹಾಗಿರುವಲ್ಲಿ, ಈ ಮುಂದಿನ ವಿಷಯಗಳನ್ನು ಜ್ಞಾಪಕಕ್ಕೆ ತರುವುದು ನಿಮಗೆ ಆಸಕ್ತಿಕರವಾಗಿರುವುದು:
◻ ಯೆಹೋವನು ತನ್ನ ಜನರನ್ನು ಮಾರ್ಗದರ್ಶಿಸಲು ಆಯ್ಕೆಮಾಡುವ ವ್ಯಕ್ತಿಗಳಲ್ಲಿ ನಾವು ಭರವಸೆಯನ್ನು ಇಡಬಲ್ಲೆವೇಕೆ?
ಒಂದು ನಿರ್ದಿಷ್ಟ ಸಮಯದಲ್ಲಿ, ತನ್ನ ಜನರನ್ನು ತಾನು ಬಯಸುವ ಮಾರ್ಗದಲ್ಲಿ ಮಾರ್ಗದರ್ಶಿಸಲು ಬೇಕಾದ ವಿಶೇಷ ಗುಣಗಳಿರುವ ವ್ಯಕ್ತಿಗಳನ್ನು ನಿರ್ದಿಷ್ಟ ಜವಾಬ್ದಾರಿಗಳಿಗಾಗಿ ಯೆಹೋವನು ಆಯ್ದುಕೊಳ್ಳುತ್ತಾನೆ.—8/15, ಪುಟ 14.
◻ ಯೋನನ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಬಹುದು?
ಯೋನನು ತನ್ನ ಕುರಿತು ಅತಿಯಾಗಿ, ಇತರರ ಕುರಿತು ತೀರ ಅಲ್ಪವಾಗಿ ಯೋಚಿಸುತ್ತಿದ್ದನು. ನಮ್ಮನ್ನು ಮತ್ತು ನಮ್ಮ ವೈಯಕ್ತಿಕ ಅನಿಸಿಕೆಗಳನ್ನು ಎರಡನೆಯ ಸ್ಥಾನದಲ್ಲಿಡುವ ಮೂಲಕ ನಾವು ಯೋನನಿಂದ ಪಾಠವನ್ನು ಕಲಿಯಸಾಧ್ಯವಿದೆ.—8/15, ಪುಟ 19.
◻ “ಯೆಹೋವನ ನಾಮವು ಬಲವಾದ ಬುರುಜು” (ಜ್ಞಾನೋಕ್ತಿ 18:10) ಆಗಿದೆ ಎಂದು ಹೇಗೆ ಹೇಳಸಾಧ್ಯವಿದೆ?
ದೇವರ ನಾಮದಲ್ಲಿ ಆಶ್ರಯವನ್ನು ಪಡೆದುಕೊಳ್ಳುವುದು, ಸ್ವತಃ ಯೆಹೋವನಲ್ಲೇ ಭರವಸೆ ಇಡುವುದನ್ನು ಸೂಚಿಸುತ್ತದೆ. (ಕೀರ್ತನೆ 20:1; 122:4) ಅದು ಆತನ ಪರಮಾಧಿಕಾರವನ್ನು ಸಮರ್ಥಿಸುವುದನ್ನು, ಆತನ ನಿಯಮಗಳು ಹಾಗೂ ತತ್ವಗಳನ್ನು ಎತ್ತಿಹಿಡಿಯುವುದನ್ನು, ಮತ್ತು ಆತನ ವಾಗ್ದಾನಗಳಲ್ಲಿ ನಂಬಿಕೆಯುಳ್ಳವರಾಗಿರುವುದನ್ನು ಅರ್ಥೈಸುತ್ತದೆ. (ಯೆಶಾಯ 50:10; ಇಬ್ರಿಯ 11:6)—9/1, ಪುಟ 10.
◻ ಪ್ರತಿಷ್ಠಿತರ ಮುಂದೆ ಪೌಲನು ಸಾಕ್ಷಿಯನ್ನು ನೀಡಿದ ವಿಧಾನವು, ನಮಗೆ ಹೇಗೆ ಒಂದು ಮಾದರಿಯಾಗಿದೆ?
ರಾಜ ಅಗ್ರಿಪ್ಪನೊಟ್ಟಿಗೆ ಮಾತಾಡುವಾಗ ಪೌಲನು ವಿವೇಚನೆಯನ್ನು ಉಪಯೋಗಿಸಿದನು. ತಾನು ಮತ್ತು ಅಗ್ರಿಪ್ಪನು ಒಮ್ಮತದಲ್ಲಿದ್ದ ವಿಷಯಗಳ ಕುರಿತಾದ ಅಂಶಗಳನ್ನು ಅವನು ಒತ್ತಿಹೇಳಿದನು. ತದ್ರೀತಿಯಲ್ಲಿ ನಾವು, ನಮ್ಮಲ್ಲಿರುವ ಸರ್ವಸಾಮಾನ್ಯ ನಿರೀಕ್ಷೆಗಳನ್ನು, ಸುವಾರ್ತೆಯ ಸಕಾರಾತ್ಮಕ ಅಂಶಗಳನ್ನು ಒತ್ತಿಹೇಳಬೇಕು. (1 ಕೊರಿಂಥ 9:22)—9/1, ಪುಟ 31.
◻ ಯೆಹೋವನ ತಾಳ್ಮೆಯಿಂದ ಯಾರು ಪ್ರಯೋಜನಪಡೆದುಕೊಳ್ಳುತ್ತಾರೆ?
ಯೆಹೋವನ ತಾಳ್ಮೆಯಿಂದಾಗಿ, ಆಗಮಿಸುತ್ತಿರುವ ‘ಯೆಹೋವನ ದಿನ’ದಲ್ಲಿ ರಕ್ಷಿಸಲ್ಪಡಲು ಇನ್ನೂ ಕೋಟಿಗಟ್ಟಲೆ ಜನರಿಗೆ ಅವಕಾಶವನ್ನು ನೀಡಲಾಗುತ್ತಿದೆ. (2 ಪೇತ್ರ 3:9-15) ಆತನ ತಾಳ್ಮೆಯು, ನಮ್ಮಲ್ಲಿ ಪ್ರತಿಯೊಬ್ಬರು, ‘ಮನೋಭೀತಿಯಿಂದ ನಡುಗುವವರಾಗಿ ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳ’ಲಿಕ್ಕಾಗಿಯೂ ಅನುಮತಿಸುತ್ತದೆ. (ಫಿಲಿಪ್ಪಿ 2:12)—9/15, ಪುಟ 20.
◻ ಬೈಬಲಿನ ಸೆಪ್ಟ್ಯುಅಜಿಂಟ್ ಭಾಷಾಂತರವು ಎಷ್ಟು ಅಮೂಲ್ಯವಾಗಿತ್ತು?
ಈ ಭಾಷಾಂತರವು, ಯೆಹೋವ ಮತ್ತು ಯೇಸು ಕ್ರಿಸ್ತನು ರಾಜನಾಗಿರುವ ಆತನ ರಾಜ್ಯದ ಕುರಿತಾದ ಜ್ಞಾನವನ್ನು ಹಬ್ಬಿಸುವುದರಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸಿತು. ಸೆಪ್ಟ್ಯುಅಜಿಂಟ್ ಮೂಲಕ, ಪ್ರಥಮ ಶತಮಾನದಲ್ಲಿದ್ದ ಗ್ರೀಕ್ ಭಾಷೆಯನ್ನಾಡುತ್ತಿದ್ದ ಯೆಹೂದ್ಯರು ಮತ್ತು ಅನ್ಯಜನಾಂಗದವರು ರಾಜ್ಯದ ಸುವಾರ್ತೆಯನ್ನು ಸ್ವೀಕರಿಸಲಿಕ್ಕಾಗಿ ಮಹತ್ವಪೂರ್ಣವಾದ ತಳಪಾಯವನ್ನು ಹಾಕಲಾಯಿತು.—9/15, ಪುಟ 30.
◻ ಪೋಲಿಹೋದ ಮಗನ ಕುರಿತಾದ ಸಾಮ್ಯವು ನಮಗೆ ದೇವರ ಕುರಿತಾಗಿ ಏನನ್ನು ಕಲಿಸುತ್ತದೆ?
ಮೊದಲನೆಯದಾಗಿ, ಯೆಹೋವನು “ಕರುಣೆಯೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳ”ವನಾಗಿದ್ದಾನೆಂಬುದನ್ನು ಕಲಿಸುತ್ತದೆ. (ವಿಮೋಚನಕಾಂಡ 34:6, NW) ಎರಡನೆಯದಾಗಿ, ಒಬ್ಬ ವ್ಯಕ್ತಿಯು ಮನಸ್ಸು ಬದಲಾಯಿಸುವಾಗ, ದಯೆಯನ್ನು ತೋರಿಸುವ ಆಧಾರವಿರುವಾಗ ಯೆಹೋವನು “ಕ್ಷಮಿಸುವವನಾಗಿದ್ದಾನೆ” ಎಂಬುದನ್ನು ಕಲಿಸುತ್ತದೆ. (ಕೀರ್ತನೆ 86:5)—10/1, ಪುಟ 12, 13.
◻ ಯೆಶಾಯ 65:21-25ರಲ್ಲಿ ವಾಗ್ದಾನಿಸಲ್ಪಟ್ಟಿರುವ ಶಾಂತಿಪೂರ್ಣ ಪರಿಸ್ಥಿತಿಗಳು ಯಾವಾಗ ನಿಜವಾಗುವವು?
ಆತ್ಮಿಕ ಪ್ರಮೋದವನದಲ್ಲಿನ ಯೆಹೋವನ ಐಕ್ಯ ಆರಾಧಕರೋಪಾದಿ, ಅಭಿಷಿಕ್ತರು ಮತ್ತು “ಬೇರೆ ಕುರಿಗಳ”ವರು, ಈಗ ದೇವದತ್ತ ಶಾಂತಿಯನ್ನು ಅನುಭವಿಸುತ್ತಿದ್ದಾರೆ. (ಯೋಹಾನ 10:16) ಮತ್ತು ಇಂತಹ ಶಾಂತಿಯು ಭೌತಿಕ ಪ್ರಮೋದವನಕ್ಕೂ ವಿಸ್ತರಿಸುವುದು. ಆಗ ‘ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವುದು.’ ಆ ಸಮಯದಲ್ಲಿ, ಪ್ರವಾದಿ ಯೆಶಾಯನ ಮಾತುಗಳು ಪೂರ್ಣವಾಗಿ ನಿಜವಾಗುವವು. (ಮತ್ತಾಯ 6:10)—10/15, ಪುಟ 24.
◻ ಕ್ರೈಸ್ತರು ವಿವಾಹ ವಾರ್ಷಿಕೋತ್ಸವಗಳನ್ನು ಆಚರಿಸುತ್ತಾರಾದರೂ, ಜನ್ಮದಿನಗಳನ್ನು ಏಕೆ ಆಚರಿಸುವುದಿಲ್ಲ?
ಬೈಬಲು ವಿವಾಹದ ಕುರಿತು ನಕಾರಾತ್ಮಕವಾಗಿ ಮಾತಾಡುವುದಿಲ್ಲ. ಕ್ರೈಸ್ತರು ವಿವಾಹದ ಹರ್ಷದ ಕುರಿತು ಪುನರಾಲೋಚಿಸಲಿಕ್ಕಾಗಿ ಮತ್ತು ದಂಪತಿಗಳೋಪಾದಿ ಯಶಸ್ಸಿಗಾಗಿ ಕೆಲಸಮಾಡುವ ತಮ್ಮ ನಿರ್ಧಾರವನ್ನು ಬಲಗೊಳಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುತ್ತಾ, ಒಂದು ವಿವಾಹದ ವಾರ್ಷಿಕೋತ್ಸವವನ್ನು ಆಚರಿಸುವರೊ ಇಲ್ಲವೊ ಎಂಬುದು ವೈಯಕ್ತಿಕ ವಿಷಯವಾಗಿದೆ. ಆದರೆ ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಎರಡು ಜನ್ಮದಿನ ಆಚರಣೆಗಳು, ವಿಧರ್ಮಿಗಳದ್ದಾಗಿವೆ ಮತ್ತು ಅವುಗಳನ್ನು ಕ್ರೂರವಾದ ಕೃತ್ಯಗಳೊಂದಿಗೆ ಜೋಡಿಸಲಾಗಿದೆ.—10/15, ಪುಟ 30, 31.
◻ 1 ಕೊರಿಂಥ 3:12, 13ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ದೃಷ್ಟಾಂತದಲ್ಲಿ, “ಬೆಂಕಿ” ಏನನ್ನು ಪ್ರತಿನಿಧಿಸುತ್ತದೆ, ಮತ್ತು ಎಲ್ಲ ಕ್ರೈಸ್ತರಿಗೆ ಏನು ತಿಳಿದಿರಬೇಕು?
ನಾವೆಲ್ಲರೂ ಜೀವನದಲ್ಲಿ ಎದುರಿಸುವ ಬೆಂಕಿಯು, ನಮ್ಮ ನಂಬಿಕೆಯ ಪರೀಕ್ಷೆಗಳಾಗಿವೆ. (ಯೋಹಾನ 15:20; ಯಾಕೋಬ 1:2, 3) ನಾವು ಯಾರಿಗೆ ಸತ್ಯವನ್ನು ಕಲಿಸುತ್ತೇವೊ ಅವರೆಲ್ಲರ ಪರೀಕ್ಷೆಯಾಗುವುದು. ನಾವು ಸರಿಯಾಗಿ ಕಲಿಸದಿರುವಲ್ಲಿ, ಪೌಲನು ಎಚ್ಚರಿಸಿದಂತೆ ಫಲಿತಾಂಶವು ದುಃಖಕರವಾಗಿರಬಹುದು. (1 ಕೊರಿಂಥ 3:15)—11/1, ಪುಟ 11.
◻ ನೋಹನು ‘ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದದ್ದು’ ಹೇಗೆ? (ಆದಿಕಾಂಡ 6:9)
ದೇವರು ಅವನಿಗೆ ಏನನ್ನು ಮಾಡುವಂತೆ ಆಜ್ಞಾಪಿಸಿದನೊ, ಅದನ್ನು ಪೂರ್ಣವಾಗಿ ಮಾಡುವ ಅರ್ಥದಲ್ಲಿ ನೋಹನು ದೇವರೊಂದಿಗೆ ನಡೆದನು. ಯೆಹೋವನ ಚಿತ್ತವನ್ನು ನೆರವೇರಿಸಲಿಕ್ಕಾಗಿ ನೋಹನು ತನ್ನ ಜೀವಿತವನ್ನು ಸಮರ್ಪಿಸಿಕೊಂಡಿದ್ದ ಕಾರಣ, ಅವನು ಸರ್ವಶಕ್ತ ದೇವರೊಂದಿಗೆ ಹಾರ್ದಿಕಭಾವದ ಹಾಗೂ ಅನ್ಯೋನ್ಯ ಸಂಬಂಧವನ್ನು ಅನುಭವಿಸಿದನು.—11/15, ಪುಟ 10.
◻ ದುಷ್ಟರ ಮೇಲೆ ದೇವರು ಮುಯ್ಯಿ ತೀರಿಸುವ ನಿಖರವಾದ ಸಮಯ ನಮಗೆ ಗೊತ್ತಿರದೇ ಇರುವುದರಿಂದ, ನಮಗಾಗಿ ಯಾವ ಸಂದರ್ಭಗಳು ತೆರೆಯಲ್ಪಟ್ಟಿವೆ?
ನಾವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುತ್ತೇವೆ ಮತ್ತು ಸದಾಕಾಲ ಆತನ ಮಾರ್ಗಗಳಲ್ಲಿ ನಡೆಯಲು ಬಯಸುತ್ತೇವೆ ಎಂಬುದನ್ನು ರುಜುಪಡಿಸುವ ಸಂದರ್ಭವನ್ನು ಅದು ನೀಡುತ್ತದೆ. ನಾವು ದೇವರಿಗೆ ನಿಷ್ಠಾವಂತರಾಗಿದ್ದೇವೆ ಮತ್ತು ಕಾರ್ಯಗಳನ್ನು ನಿರ್ವಹಿಸುವ ಆತನ ಸಾಮರ್ಥ್ಯದಲ್ಲಿ ನಮಗೆ ಭರವಸೆಯಿದೆ ಎಂಬುದನ್ನು ಸಹ ಅದು ತೋರಿಸುತ್ತದೆ. ಇನ್ನೂ ಹೆಚ್ಚಾಗಿ ಇದು ನಾವು ಜಾಗರೂಕರೂ ಆತ್ಮಿಕವಾಗಿ ಎಚ್ಚರವುಳ್ಳವರೂ ಆಗಿರುವಂತೆ ಸಹಾಯಮಾಡುತ್ತದೆ. (ಮತ್ತಾಯ 24:42-44)—11/15, ಪುಟ 18.
◻ “ದೇವರ ಮಗನ ಹೆಸರಿನಲ್ಲಿ” ನಂಬಿಕೆಯನ್ನಿಡುವುದರ ಅರ್ಥವೇನು? (1 ಯೋಹಾನ 5:13)
ಅದು ಕ್ರಿಸ್ತನ ಎಲ್ಲ ಆಜ್ಞೆಗಳಿಗೆ ವಿಧೇಯರಾಗುವುದನ್ನು ಅರ್ಥೈಸುತ್ತದೆ. ಇದರಲ್ಲಿ ನಾವು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂಬ ಆಜ್ಞೆಯು ಸೇರಿದೆ. (ಯೋಹಾನ 15:14, 17) ಪ್ರೀತಿಯು ಇತರರಿಗೆ ಒಳಿತನ್ನು ಮಾಡಲು ಕೋರುತ್ತದೆ. ಅದು ಎಲ್ಲ ರೀತಿಯ ಕುಲಸಂಬಂಧಿತ, ಧಾರ್ಮಿಕ, ಹಾಗೂ ಸಾಮಾಜಿಕ ಪೂರ್ವಾಗ್ರಹವನ್ನು ಹೊಡೆದೋಡಿಸುತ್ತದೆ.—12/1 ಪುಟ 7.
◻ ಯೆಹೋವನ ಸಾಕ್ಷಿಗಳು ‘ಹಗೆಮಾಡಲ್ಪಟ್ಟಿರುವುದು’ ಏಕೆ? (ಮತ್ತಾಯ 10:22)
ಆದಿ ಕ್ರೈಸ್ತರು ಹಿಂಸಿಸಲ್ಪಟ್ಟಂತಹದ್ದೇ ಕಾರಣಗಳಿಗಾಗಿ ಇಂದು ಯೆಹೋವನ ಸಾಕ್ಷಿಗಳು ಅನ್ಯಾಯವಾಗಿ ದ್ವೇಷಿಸಲ್ಪಟ್ಟಿದ್ದಾರೆ. ಪ್ರಥಮವಾಗಿ, ಯೆಹೋವನ ಸಾಕ್ಷಿಗಳು ತಮ್ಮ ಧಾರ್ಮಿಕ ನಂಬಿಕೆಗಳಿಗನುಸಾರ ಜೀವಿಸುವ ರೀತಿಯಿಂದ ಕೆಲವರಿಗೆ ಅವರು ಅಪ್ರಿಯರಾಗಿದ್ದಾರೆ. ಎರಡನೆಯದಾಗಿ, ಯೆಹೋವನ ಸಾಕ್ಷಿಗಳು ಸುಳ್ಳಾರೋಪಗಳಿಗೂ ಗುರಿಯಾಗಿದ್ದಾರೆ. ಅಂದರೆ, ಅವರ ವಿಷಯವಾಗಿ ಶುದ್ಧ ಸುಳ್ಳುಗಳು ಹೇಳಲ್ಪಟ್ಟಿವೆ ಹಾಗೂ ಅವರ ನಂಬಿಕೆಗಳು ತಪ್ಪಾಗಿ ಅರ್ಥೈಸಲ್ಪಟ್ಟಿವೆ.—12/1, ಪುಟ 14.