“ಕ್ರಿಸ್ತನ ದೈವತ್ವ”ದ ಕುರಿತು ಶಾಸ್ತ್ರವಚನಗಳು ಹೇಳುವುದೇನು?
ಯೇಸುಕ್ರಿಸ್ತನು ಮಾನವ ಕುಲದ ಮೇಲೆ ಪ್ರಬಲವಾದ ಧಾರ್ಮಿಕ ಪ್ರಭಾವವನ್ನು ಹಾಕಿದ್ದಾನೆ. ವಿಷಯವು ಹಾಗಿದೆ ಯಾಕಂದರೆ ಲಕ್ಷಾಂತರ ಜನರು ಆತನ ಹಿಂಬಾಲಕರೆಂದು ವಾದಿಸುತ್ತಾರೆ. ಆದರೂ ಅವನ ಗುರುತು ಪರಿಚಯದ ಬಗ್ಗೆ ಎಲ್ಲರೂ ಸಹಮತದಿಂದಿಲ್ಲ.
ಯೇಸುವಿನ ಬೋಧನೆಗಳನ್ನು ತಾವು ಸ್ವೀಕರಿಸುತ್ತೇವೆಂದು ಹೇಳುವ ಕೆಲವರು ಆತನನ್ನು ದೇವರ ಕುಮಾರನಾಗಿ ವೀಕ್ಷಿಸುತ್ತಾರೆ, ಸಥ್ವಾ ನಿರ್ಮಾಣಿಕನಾಗಿ ಅಲ್ಲ. ಇತರರು “ಕ್ರಿಸ್ತನ ದೇವತ್ವ”ವನ್ನು ನಂಬುತ್ತಾರೆ ಮತ್ತು ಆತನು ಸಾಕ್ಷಾತ್ ದೇವರೆಂದು ನೆನಸುತ್ತಾರೆ. ಯೇಸುವು ಯಾವಾಗಲೂ ಅಸ್ತಿತ್ವದಲ್ಲಿ ಇದ್ದನು ಮತ್ತು ಭೂಮಿಯಲ್ಲಿದ್ದಾಗ ಆತನು ಮಾನವರಿಗಿಂತ ಮೇಲಿನವನಾಗಿದ್ದನೆಂದು ಅವರ ನಂಬಿಕೆ. ಅವರ ಈ ನಂಬಿಕೆ ಸರಿಯೋ? ಶಾಸ್ತ್ರ ವಚನಗಳು ಹೇಳುವದೇನು?
ಯೇಸುವಿನ ಮಾನವಪೂರ್ವ ಅಸ್ತಿತ್ವ
ತನಗೆ ಮಾನವ ಪೂರ್ವ ಅಸ್ತಿತ್ವವಿತ್ತು ಎಂದು ಯೇಸು ಸಾಕ್ಷಿಕೊಟ್ಟನು. “ಪರಲೋಕದಿಂದ ಇಳಿದು ಬಂದವನೇ ಅಂದರೆ ಮನುಷ್ಯ ಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ” ಎಂದನವನು. (ಯೋಹಾನ 3:13) ಯೇಸು ಮತ್ತೂ ಅಂದದ್ದು: “ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು, ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ. ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು.”—ಯೋಹಾನ 6:51.
“ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ,” ಎಂಬ ಆತನ ಮಾತುಗಳಿಂದ ಭೂಮಿಗೆ ಬರುವ ಮುಂಚೆ ಯೇಸು ಜೀವಿತನಿದ್ದನೆಂಬದು ಸ್ಪಷ್ಟವಾಗಿಗುತ್ತದೆ. (ಯೋಹಾನ 8:58) ಅಬ್ರಹಾಮನು ಸಾ.ಶ.ಪೂ. 2018ರಿಂದ 1843ರ ತನಕ ಜೀವಿಸಿದ್ದನು, ಯೇಸುವಿನ ಮಾನವ ಜೀವಿತವು ಸಾ.ಶ.ಪೂ. 2ರಿಂದ ಸಾ.ಶ. 33ರ ತನಕ ಇತ್ತು. ತನ್ನ ಮರಣಕ್ಕೆ ಸ್ವಲ್ಪ ಮೊದಲು ಯೇಸು ಪ್ರಾರ್ಥಿಸಿದ್ದು: “ತಂದೆಯೇ, . . . ಲೋಕ ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆ ಪಡಿಸು.”—ಯೋಹಾನ 17:5.
ಯೇಸುವಿನ ಹಿಂಬಾಲಕರು ಸಹಾ ಇದೇ ರೀತಿಯ ಸಾಕ್ಷಿಯನ್ನು ನೀಡಿದ್ದರು. ಅಪೊಸ್ತಲ ಯೋಹಾನನು ಬರೆದದ್ದು: “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ಒಂದು ದೇವರಾಗಿತ್ತು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. . . . ಆ ವಾಕ್ಯವೆಂಬವನು ಮಾಂಸವಾಗಿ ಬಂದು ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಏಕ-ಜಾತ ಪುತ್ರನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.” (ಯೋಹಾನ 1:1, 3, 14, NW) ಹೌದು, “ವಾಕ್ಯವು ಮಾಂಸವಾಗಿ” ಬಂದವನೇ ಮನುಷ್ಯನಾದ ಯೇಸು ಕ್ರಿಸ್ತನು.
ಯೇಸುವಿನ ಮಾನವ ಪೂರ್ವದ ಅಸ್ತಿತ್ವಕ್ಕೆ ಸೂಚಿಸುತ್ತಾ, ಅಪೊಸ್ತಲ ಪೌಲನು ಬರೆದದ್ದು: “ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನವಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲೆನ್ಲು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನಾಗಿ ಮನುಷ್ಯರಿಗೆ ಸದೃಶ್ಯನಾದನು.” (ಫಿಲಿಪ್ಪಿ 2:5-7) ಪೌಲನು ಯೇಸುವನ್ನು “ಸೃಷ್ಟಿಗೆಲ್ಲಾ ಜ್ಯೇಷ್ಠ ಪುತ್ರನು, ಯಾಕಂದರೆ ಸರ್ವವು ಆತನ ಮುಖಾಂತರವಾಗಿ ಸೃಷ್ಟಿಸಲ್ಪಟ್ಟಿತು,” ಎಂದು ಕರೆದಿದ್ದಾನೆ.—ಕೊಲೊಸ್ಸೆ 1:13-16.
ಭೂಮಿಯಲ್ಲಿರುವಾಗ ದೈವಿಕನಾಗಿರಲಿಲ್ಲ
ಯೇಸು ಭೂಮಿಯಲ್ಲಿ ತನ್ನ ಜನನದಿಂದ ಮರಣದ ತನಕ ಪೂರ್ಣ ಮಾನವನಾಗಿಯೇ ಇದ್ದನೆಂದು ಶಾಸ್ತ್ರ ವಚನಗಳು ಸೃಷ್ಟಗೊಳಿಸುತ್ತವೆ. ವಾಕ್ಯವು ಕೇವಲ ಮಾಂಸಧಾರಿಯಾಗಿದ್ದನೆಂದು ಯೋಹಾನನು ಹೇಳಲಿಲ್ಲ. ಅವನು “ಮಾಂಸವಾಗಿ ಬಂದನು,” ಅರ್ಧ ಮನುಷ್ಯನಾಗಿ ಮತ್ತು ಅರ್ಧ ದೇವರಾಗಿ ಅಲ್ಲ. ಯೇಸುವು ಒಂದೇ ಸಮಯ ಅರ್ಧ ದೇವರೂ ಅರ್ಧ ಮನುಷ್ಯನೂ ಆಗಿದ್ದಲ್ಲಿ, ಅವನು “ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು” ಎಂದು ಹೇಳಲಾಗುತ್ತಿರಲಿಲ್ಲ.—ಇಬ್ರಿಯರಿಗೆ 2:9; ಕೀರ್ತನೆ 8:4, 5.
ಯೇಸು ಭೂಮಿಯಲ್ಲಿರುವಾಗ ದೇವರೂ ಮನುಷ್ಯನೂ ಆಗಿದ್ದಲ್ಲಿ, ಆತನು ಪದೇ ಪದೇ ದೇವರಿಗೆ ಪ್ರಾರ್ಥಿಸಿದ್ದು ಏತಕ್ಕೆ? ಪೌಲನು ಬರೆದದ್ದು: “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.”—ಇಬ್ರಿಯ 5:7.
ಕ್ರಿಸ್ತನು “ಶರೀರ ಸಂಬಂಧದಲ್ಲಿ ಕೊಲ್ಲಲ್ಪಟ್ಟನು, ಆತ್ಮ ಸಂಬಂಧದಲ್ಲಿ ತಿರುಗಿ ಬದುಕುವವನಾದನು” ಎಂಬ ಪೇತ್ರನ ಹೇಳಿಕೆಯಿಂದಲೂ ಯೇಸುವು ಭೂಮಿಯಲ್ಲಿರುವಾಗ ಅರ್ಧ ಆತ್ಮಿಕ ಶರೀರಿಯಾಗಿರಲಿಲ್ಲವೆಂದು ರುಜುವಾಗುತ್ತದೆ. (1 ಪೇತ್ರ 3:18) ಪೂರಾ ರೀತಿಯಲ್ಲಿ ಮನುಷ್ಯನಾಗಿದ್ದರಿಂದ ಮಾತ್ರವೇ ಯೇಸು ಅಪೂರ್ಣ ಮನುಷ್ಯರು ಅನುಭವಿಸುವುದನ್ನು ಅನುಭವಿಸ ಸಾಧ್ಯವಿತ್ತು ಮತ್ತು ಹೀಗೆ ಅನುತಾಪವುಳ್ಳ ಮಹಾ ಯಾಜಕನಾಗಿರಲು ಸಾಧ್ಯತೆ ಇತ್ತು. ಪೌಲನು ಬರೆದದ್ದು: “ನಮಗಿರುವ ಮಹಾ ಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.”—ಇಬ್ರಿಯ 4:15.
“ಲೋಕದ ಪಾಪದ ನಿವಾರಣೆ ಮಾಡುವ ದೇವರ ಕುರಿಯಾದ” ಯೇಸು, “ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು.” (ಯೋಹಾನ 1:29; 1 ತಿಮೊಥಿ 2:6) ಆ ರೀತಿಯಲ್ಲಿ, ಆದಾಮನು ಏನನ್ನು ಕಳಕೊಂಡನೊ ಅದನ್ನು—ಸಂಪೂರ್ಣವೂ ನಿತ್ಯವೂ ಆದ ಮಾನವ ಜೀವವನ್ನು ಯೇಸು ಹಿಂದೆ ಖರೀದಿ ಮಾಡಿದನು. ದೇವರ ನ್ಯಾಯವು ‘ಜೀವಕ್ಕೆ ಪ್ರತಿಯಾಗಿ ಜೀವವನ್ನು,’ ಕೊಡುವುದನ್ನು ಆವಶ್ಯಪಡಿಸಿದರ್ದಿಂದ, ಆದಾಮನು ಮೂಲದಲ್ಲಿ ಹೇಗಿದ್ದನೋ ಹಾಗೆ ಅಂದರೆ—ಒಬ್ಬ ಪೂರ್ಣ ಮನುಷ್ಯನಾಗಿ ಯೇಸು ಇರಬೇಕಿತ್ತು, ದೇವರು-ಮನುಷ್ಯ ಆಗಿಯಲ್ಲ.—ಧರ್ಮೋಪದೇಶಕಾಂಡ 19:21; 1 ಕೊರಿಂಥ 15:22.
ಬೈಬಲ್ ವಚನಗಳಿಂದ ಅನುಚಿತ ಅರ್ಥವನ್ನು ಹಿಂಡಬೇಡಿರಿ
ಯೇಸು ದೇವರು-ಮನುಷ್ಯನು ಆಗಿದ್ದನೆಂದು ಹೇಳುವವರು ಆತನು ಕ್ರೈಸ್ತ ಪ್ರಪಂಚದ ತ್ರಿಯೈಕ್ಯದ ಒಬ್ಬ ಸದಸ್ಯನೆಂದೂ, ಸಾರದಲ್ಲಿ, ಶಕ್ತಿಯಲ್ಲಿ, ಮಹಿಮೆಯಲ್ಲಿ ಮತ್ತು ಬಾಳಿಕೆಯಲ್ಲಿ ದೇವರಿಗೆ ಸರಿಸಮಾನನೆಂದೂ ರುಜುಪಡಿಸುವ ಪ್ರಯತ್ನದಲ್ಲಿ ಅನೇಕ ಶಾಸ್ತ್ರ ವಚನಗಳನ್ನು ಉಪಯೋಗಿಸುತ್ತಾರೆ. ಆದರೆ ನಾವು ಆ ವಚನಗಳನ್ನು ಜಾಗ್ರತೆಯಿಂದ ಪರಿಶೀಲಿಸುವಾಗ, “ಕ್ರಿಸ್ತನ ದೈವತ್ವ”ವನ್ನು ವಾದಿಸುವವರು ಆ ವಚನಗಳನ್ನು ಅವು ನಿಜವಾಗಿ ಹೇಳುವುದಕ್ಕಿಂತ ಹೆಚ್ಚಿನ ಅರ್ಥ ಮಾಡುವುದಾಗಿ ಕಂಡು ಬರುತ್ತಾರೆ.
ಕೆಲವರು ಹೇಳುವುದೇನಂದರೆ, “ನಾವು” ಎಂಬ ಸರ್ವನಾಮವನ್ನು ದೇವರು ಉಪಯೋಗಿಸುವ ಬೈಬಲ್ ವಚನಗಳು, ಮನುಷ್ಯ-ಪೂರ್ವದ ಯೇಸುವನ್ನು (ವಾಕ್ಯವನ್ನು) ಯೆಹೋವನಿಗೆ ಸರಿಸಮಾನವಾಗಿ ಮಾಡುತ್ತವೆ ಎಂಬದಾಗಿ. ಆದರೆ ಈ ಸರ್ವನಾಮದ ಉಪಯೋಗವು ದೇವರು ಒಬ್ಬ ಸಮಾನ ವ್ಯಕ್ತಿಯೊಂದಿಗೆ ಮಾತಾಡುತ್ತಿದ್ದ ಅರ್ಥವನ್ನು ಕೊಡುವುದಿಲ್ಲ. ಹೆಚ್ಚೆಂದರೆ ಅದು ಸ್ವರ್ಗೀಯ ಜೀವಿಗಳಲ್ಲಿ ಒಬ್ಬನು ದೇವರಿಗೆ ಇಷ್ಟವಾದ ಸ್ಥಾನವನ್ನು ಪಡೆದಿರುತ್ತಾನೆಂದು ಸೂಚಿಸುತ್ತದೆ ಅಷ್ಟೇ. ಕಾರ್ಯಥ ಯೇಸು, ಮನುಷ್ಯ-ಪೂರ್ವ ಅಸ್ತಿತ್ವದಲ್ಲಿ ದೇವರ ಅತ್ಯಾಪ್ತ ಸಹವಾಸಿ, ನುರಿತ ಶಿಲ್ಪಿ ಮತ್ತು ವದನಕನು ಆಗಿದ್ದನು.—ಆದಿಕಾಂಡ 1:26; 11:7; ಜ್ಞಾನೋಕ್ತಿ 8:30, 31; ಯೋಹಾನ 1:3.
ಯೇಸುವಿನ ದೀಕ್ಷಾಸ್ನಾನಕ್ಕೆ ಸಂಬಂಧಿಸಿದ ಪರಿಸ್ಥಿತಿಗಳು ದೇವರು, ಕ್ರಿಸ್ತನು ಮತ್ತು ಪವಿತ್ರಾತ್ಮವು ಏಕಸಮಾನತ್ವವುಳ್ಳವರು ಎಂಬದನ್ನು ಸೂಚಿಸುವುದಿಲ್ಲ. ಮನುಷ್ಯನಾದ ಯೇಸು ತನ್ನ ಸ್ವರ್ಗೀಯ ತಂದೆಗೆ ತನ್ನನ್ನು ನೀಡಿಕೊಂಡದರ್ದ ಸೂಚಕವಾಗಿ ದೀಕ್ಷಾಸ್ನಾನವನ್ನು ಮಾಡಿಕೊಂಡನು. ಆ ಸಂದರ್ಭದಲ್ಲಿ, “ಆಕಾಶವು ತೆರೆಯಿತು” ಮತ್ತು ಪವಿತ್ರಾತ್ಮವು ಪಾರಿವಾಳದ ಹಾಗೆ ಯೇಸುವಿನ ಮೇಲೆ ಇಳಿದು ಬಂತು. ಅಲ್ಲದೆ, “ಆಕಾಶದಿಂದ,” ಯೆಹೋವನ ವಾಣಿಯು ಹೀಗಂದದ್ದು ಕೇಳಬಂತು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.”—ಮತ್ತಾಯ 3:13-17.
ಹೀಗಿರಲಾಗಿ, “ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ” ಶಿಷ್ಯರಿಗೆ ದೀಕ್ಷಾಸ್ನಾನ ಮಾಡಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು ಯಾವ ಅರ್ಥದಲ್ಲಿ? (ಮತ್ತಾಯ 28:19, 20) ತಾನು, ತನ್ನ ತಂದೆ, ಮತ್ತು ಪವಿತ್ರ ಆತ್ಮ ಸರಿಸಮಾನತೆಯುಳ್ಳವರು ಎಂದು ಯೇಸು ಅರ್ಥಮಾಡಲೂ ಇಲ್ಲ ಹೇಳಲೂ ಇಲ್ಲ. ಬದಲಿಗೆ, ದೀಕ್ಷಾಸ್ನಾನ ಹೊಂದಿದವರು ಯೆಹೋವನನ್ನು ಜೀವದಾತನಾಗಿ ಮತ್ತು ಸರ್ವಶಕ್ತ ದೇವರಾಗಿ ಅಂಗೀಕರಿಸಿ, ಆತನಿಗೆ ತಮ್ಮ ಜೀವವನ್ನು ಸಮರ್ಪಿಸುತ್ತಾರೆ. ಅವರು ಯೇಸುವನ್ನು ಮೆಸ್ಸೀಯನಾಗಿಯೂ ನಂಬುವ ಮಾನವ ಕುಲಕ್ಕೆ ವಿಮೋಚನೆಯನ್ನು ದೇವರು ಅವನ ಮೂಲಕವಾಗಿ ಒದಗಿಸಿದನೆಂದೂ ಸ್ವೀಕರಿಸುತ್ತಾರೆ. ಮತ್ತು ದೇವರಾತ್ಮವು ಆತನ ಕ್ರಿಯಾಶೀಲ ಶಕಿಯ್ತೆಂದೂ ಮತ್ತು ತಾವು ಅದಕ್ಕೆ ಅಧೀನರಾಗಿರಬೇಕೆಂದೂ ಅವರು ಅಂಗೀಕರಿಸುತ್ತಾರೆ. ಆದರೂ, ಅಂಥ ದೀಕ್ಷಾಸ್ನಾನದ ಅಭ್ಯರ್ಥಿಗಳು ಯೆಹೋವನನ್ನು, ಯೇಸುವನ್ನು ಮತ್ತು ಪವಿತ್ರಾತ್ಮವನ್ನು ಒಬ್ಬ ತ್ರಿಯೈಕ್ಯ ದೇವರೆಂಬದಾಗಿ ವೀಕ್ಷಿಸುವುದಿಲ್ಲ.
ಆದರೆ ಯೇಸುವಿನ ಅದ್ಭುತಗಳು ಆತನು ದೇವರೂ-ಮನುಷ್ಯನೂ ಆಗಿದ್ದನೆಂದು ರುಜುಪಡಿಸುವುದಿಲ್ಲವೇ? ಇಲ್ಲ, ಯಾಕಂದರೆ ಮೋಶೆ, ಎಲೀಯ, ಎಲೀಷ, ಅಪೊಸ್ತಲರಾದ ಪೇತ್ರ ಮತ್ತು ಪೌಲ ಮತ್ತು ಇತರರು ದೇವ-ಮನುಷ್ಯರಾಗಿರದೇ ಅದ್ಭುತಗಳನ್ನು ನಡಿಸಿದ್ದರು. (ವಿಮೋಚನಕಾಂಡ 14:15-31; 1 ಅರಸು 18:18-40; 2 ಅರಸು 4:17-37; ಅಪೊಸ್ತಲರ ಕೃತ್ಯಗಳು 9:36-42; 19:11, 12) ಅವರಂತೆ, ಯೇಸುವೂ ದೈವ-ದತ್ತ ಶಕಿಯ್ತಿಂದ ಅದ್ಭುತವನ್ನು ನಡಿಸಿದ ಒಬ್ಬ ಮನುಷ್ಯನಾಗಿದ್ದನು.—ಲೂಕ 11:14-19.
ಯೆಶಾಯನು ಪ್ರವಾದನಾ ರೂಪವಾಗಿ ಮೆಸ್ಸೀಯನಾದ ಯೇಸುವಿಗೆ “ಶಕ್ತಿಶಾಲಿ ದೇವರು” ಎಂದು ನಿರ್ದೇಶಿಸಿದ್ದಾನೆ. (ಯೆಶಾಯ 9:6, NW) ಯೆಶಾಯ 10:21, NWರಲ್ಲಿ, ಅದೇ ಪ್ರವಾದಿಯು ಯೆಹೋವನ ಕುರಿತೂ “ಶಕ್ತಿಶಾಲಿ” ಎಂದು ಹೇಳಿರುತ್ತಾನೆ. ಕೆಲವರು ಈ ವಚನಗಳ ಸಾಮ್ಯತೆಯನ್ನು ಉಪಯೋಗಿಸಿ ಯೇಸು ದೇವರು ಎಂದು ಹೇಳುತ್ತಾರೆ. ಆದರೆ ಈ ವಚನಗಳ ಅನುಚಿತ ಅರ್ಥವನ್ನು ಮಾಡದಂತೆ ನಾವು ಜಾಗ್ರತೆಯಿಂದಿರುವ ಅಗತ್ಯವಿದೆ. “ಶಕ್ತಿಶಾಲಿ ದೇವರು” ಎಂದು ತರ್ಜುಮೆಯಾದ ಹಿಬ್ರೂ ಪದವು “ಸರ್ವಶಕ್ತ ದೇವರು” ಎಂಬ ಪದದಂತೆ ಕೇವಲ ಯೆಹೋವ ದೇವರಿಗೆ ಸೀಮಿತವಲ್ಲ. (ಆದಿಕಾಂಡ 17:1) ಶಕ್ತಿಶಾಲಿ ಆಗಿರುವುದರಲಿಯ್ಲಾ ಮತ್ತು ಮೇಲಧಿಕಾರವಿಲ್ಲದ ಸರ್ವಶಕತ್ತೆಯಲ್ಲಿಯೂ ಒಂದು ವ್ಯತ್ಯಾಸವಿದೆ ಎಂಬುದು ಗ್ರಾಹ್ಯ.
ಯೆಶಾಯ 43:10ಕ್ಕೆ ಅನುಸಾರ, ಯೆಹೋವನು ಅಂದದ್ದು: “ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ.” ಆದರೆ ಆ ಮಾತುಗಳು ಯೇಸು ದೇವರೆಂದು ರುಜುಪಡಿಸುವುದಿಲ್ಲ. ಯೆಹೋವನಿಗೆ ಪೂರ್ವಾಧಿಕಾರಿ ಯಾರೂ ಇರಲಿಲ್ಲ, ಆತನ ಮುಂಚೆ ಯಾವ ದೇವರೂ ಅಸ್ತಿತ್ವದಲ್ಲಿರಲಿಲ್ಲ ನಿಶ್ಚಯ ಯಾಕಂದರೆ ಆತನು ಶಾಶ್ವತನು. ಆತನ ಅನಂತರವೂ ಯಾವ ದೇವರೂ ಇರಲಾರನು ಯಾಕಂದರೆ ಆತನು ಸದಾ ಇರುವಾತನು ಮತ್ತು ಪರಮಾಧಿಕಾರಿಯಾದ ಆತನಿಗೆ ಯಾವ ಉತ್ತರಾಧಿಕಾರಿಯೂ ಇರಲಾರನು. ಆದರೂ, ಅವನು ತಾನೇ ದೇವರುಗಳೆಂದು ಕರೆದ ಇತರರನ್ನು ಯೆಹೋವನು ನಿರ್ಮಿಸಿದ್ದನು. ನಿರ್ದಿಷ್ಟ ಮಾನವರ ಕುರಿತು ಹೇಳುವಾಗ ಶಾಸ್ತ್ರವಚನಗಳು ತೋರಿಸುವ ಮೇರೆಗೆ: “ನೀವು ದೇವರುಗಳು, ಎಲ್ಲರೂ ಪರಾತ್ಪರನ ಮಕ್ಕಳು ಎಂದು ನಾನು ಹೇಳಿದೆನು. ಆದರೆ ನರರಂತೆ ಸತ್ತೇ ಹೋಗುವಿರಿ. ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದುಹೋಗುವಿರಿ.” (ಕೀರ್ತನೆ 82:6, 7) ಇದೇ ರೀತಿಯಲ್ಲಿ, ವಾಕ್ಯವೆಂಬಾತನು ಯೆಹೋವನಿಂದ ನಿರ್ಮಿಸಲ್ಪಟ್ಟ ಒಬ್ಬ ದೇವರು, ಆದರೆ ಅದು ಯೇಸುವನ್ನು ಯಾವುದೇ ಸಮಯದಲ್ಲಿ ಸರ್ವಶಕ್ತನಾದ ದೇವರಿಗೆ ಸರಿಸಮಾನವಾಗಿ ಮಾಡಿರಲಿಲ್ಲ.
ಯೇಸುವಿನ ನಿಜ ಸ್ಥಾನವು
ಯೆಹೋವನು ದೇವರು-ಮನುಷ್ಯನಾಗಿ ಮಾನವ ಅಸ್ತಿತ್ವವನ್ನು ತಕ್ಕೊಂಡನು ಎಂದು ವಾದಿಸುವವರು, ಯೇಸು ತನ್ನನ್ನು ಆ ರೀತಿಯಲ್ಲಿ ವೀಕ್ಷಿಸಿದ್ದನೆಂಬದಕ್ಕೆ ಬೈಬಲ್ ಕೊಂಚ ಸುಳಿವನ್ನಾದರೂ ಕೊಡುವುದಿಲ್ಲವೆಂಬದನ್ನು ಗಮನಿಸತಕ್ಕದ್ದು. ಬದಲಿಗೆ, ಅದು ಪದೇ ಪದೇ ಯೇಸು ತನ್ನ ತಂದೆಗಿಂತ ಕೆಳಗಿನವನು ಎಂದು ಯಾವಾಗಲೂ ತೋರಿಸಿದೆ. ಯೇಸು ಭೂಮಿಯಲ್ಲಿರುವಾಗ ತನ್ನನ್ನು ದೇವರ ಪುತ್ರನಿಗಿಂತ ಹೆಚ್ಚಿನವನು ಎಂದು ಎಂದೂ ಹೇಳಲಿಲ್ಲ. ಅದಲ್ಲದೆ, “ತಂದೆಯು ನನಗಿಂತ ದೊಡ್ಡವನು” ಎಂದು ಕ್ರಿಸ್ತನು ಅಂದಿದ್ದನು.—ಯೋಹಾನ 14:28.
“ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು. ನಾವು ಆತನಿಂದ ಉಂಟಾದೆವು. ಮತ್ತು ನಮಗೆ ಒಬ್ಬನೇ ಕರ್ತ; ಆತನು ಯೇಸು ಕ್ರಿಸ್ತನೇ. ಆತನ ಮುಖಾಂತರ ಸಮಸ್ತವೂ ಉಂಟಾಯಿತು” ಎಂದು ಹೇಳಿದ್ದರಲ್ಲಿ ಪೌಲನು ಯೆಹೋವ ಮತ್ತು ಯೇಸುವಿನ ನಡುವೆ ಒಂದು ವ್ಯತ್ಯಾಸವನ್ನು ತೋರಿಸಿದ್ದಾನೆ. (1 ಕೊರಿಂಥ 8:6) ಪೌಲನು ಮತ್ತೂ ಅಂದದ್ದು: “ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು.” (1 ಕೊರಿಂಥ 3:23) ನಿಶ್ಚಯವಾಗಿ ಕ್ರೈಸ್ತರು ತಮ್ಮ ಗುರುವಾದ ಯೇಸು ಕ್ರಿಸ್ತನಿಗೆ ಸೇರಿದವರು, ಮತ್ತು ಯೇಸುವು ತನ್ನ ತಲೆಯಾದ ಯೆಹೋವ ದೇವರಿಗೆ ಸೇರಿದವನು.
ಇದೇ ವಿಷಯವನ್ನು ಸೂಚಿಸುತ್ತಾ ಪೌಲನು ಬರೆದದ್ದು: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ದೇವರ ಮತ್ತು ಕ್ರಿಸ್ತನ ನಡುವಣ ಈ ಸಂಬಂಧವು ಮುಂದುವರಿಯುವುದು, ಯೇಸುವಿನ ಸಾವಿರ ವರ್ಷದ ಆಳಿಕೆಯ ನಂತರವೂ, “ಆತನು ತಂದೆಯಾದ ದೇವರಿಗೆ ರಾಜ್ಯವನ್ನು ಒಪ್ಪಿಸುವನು” ಮತ್ತು “ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿ ಸಮಸ್ತವೂ ಆಗುವನು.”—1 ಕೊರಿಂಥ 15:24, 28; ಪ್ರಕಟನೆ 20:6.
ಬೇರೆ ವಚನಗಳೆಡೆಗೆ ಒಂದು ನೋಟ
ಯೇಸುವಿನ ಜನನದ ಕುರಿತು ಮತ್ತಾಯನು ಬರೆದದ್ದು: “ಯೆಹೋವನು ಪ್ರವಾದಿಯ ಮುಖಾಂತರ [ಯೆಶಾಯ 7:14ರಲ್ಲಿ] ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡಿಯಿತು. ಆ ಮಾತು ಏನಂದರೆ—ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬದು. ದೇವರು ನಮ್ಮ ಕೂಡ ಇದ್ದಾನೆಂದು ಆ ಹೆಸರಿನ ಅರ್ಥ.” (ಮತ್ತಾಯ 1:22, 23) ಇಮ್ಮಾನುವೇಲ್ ಎಂಬ ವೈಯಕ್ತಿಕ ಹೆಸರು ಯೇಸುವಿಗೆ ಕೊಡಲ್ಪಡಲಿಲ್ಲ, ಆದರೆ ಮನುಷ್ಯನಾಗಿ ಆತನು ನಡೆಸಿದ ಪಾತ್ರವು ಆ ಹೆಸರಿನ ಅರ್ಥವನ್ನು ನೆರವೇರಿಸಿತು. ಮೆಸ್ಸೀಯ ಸಂತತಿಯಾದ ಮತ್ತು ದಾವೀದನ ಸಿಂಹಾಸನಕ್ಕೆ ಬಾಧ್ಯನಾದ ಯೇಸುವು ಭೂಮಿಯಲ್ಲಿ ಆಗಮಿಸಿದ್ದು, ಯೆಹೋವನ ಆರಾಧಕರಿಗೆ ದೇವರು ನಮ್ಮ ಕೂಡ ಇದ್ದಾನೆಂದು, ತಮ್ಮ ಪಕ್ಷದಲ್ಲಿದ್ದಾನೆಂದು, ತಮ್ಮ ಕಾರ್ಯದಲ್ಲಿಲ್ಲಾ ತಮ್ಮನ್ನು ಬೆಂಬಲಿಸುತ್ತಾನೆಂದು ರುಜುವಾತನ್ನು ಕೊಟ್ಟಿತು.—ಆದಿಕಾಂಡ 28:15; ವಿಮೋಚನಕಾಂಡ 3:11, 12; ಯೆಹೋಶುವ 1:5, 9; ಕೀರ್ತನೆ 46:5-7; ಯೆರೆಮೀಯ 1:19.
ಪುನರುತಿಥ್ತ ಯೇಸುವನ್ನು ಉದ್ದೇಶಿಸಿ, ಅಪೊಸ್ತಲ ತೋಮನು ಉದ್ಗರಿಸಿದ್ದು: “ನನ್ನ ಸ್ವಾಮೀ, ನನ್ನ ದೇವರು!” (ಯೋಹಾನ 20:28) ಇದು ಮತ್ತು ಬೇರೆ ದಾಖಲೆಗಳು ಬರೆಯಲ್ಪಟ್ಟದ್ದು “ಯೇಸು ದೇವ ಕುಮಾರನಾದ ಕ್ರಿಸ್ತನೆಂದು [ನಾವು] ನಂಬುವಂತೆಯೇ.” ಮತ್ತು “ನಾನು ನನ್ನ ದೇವರೂ ನಿಮ್ಮ ದೇವರೂ . . . ಆಗಿರುವಾತನ ಬಳಿಗೆ ಏರಿಹೋಗುತ್ತೇನೆ” ಎಂದು ತನ್ನ ಶಿಷ್ಯರಿಗೆ ಯೇಸು ಕಳುಹಿಸಿದ ಸಂದೇಶವನ್ನು ತೋಮನೇನೂ ಪ್ರತಿರೋಧಿಸಿರಲಿಲ್ಲ. (ಯೋಹಾನ 20:17, 30, 31) ಹೀಗೆ ಯೇಸು ಸರ್ವಶಕ್ತನಾದ ದೇವರೆಂದು ತೋಮನು ನೆನಸಿರಲಿಲ್ಲ. “ನನ್ನ ದೇವರು” ಎಂದು ತೋಮನು ಯೇಸುವನ್ನು ಕರೆದದ್ದು, ಕ್ರಿಸ್ತನು “ಒಬ್ಬ ದೇವರು” ಆಗಿದ್ದ ಅರ್ಥದಲಿದ್ಲಿರ್ದಬಹುದು, “ಒಬ್ಬನೇ ಸತ್ಯ ದೇವರು” ಎಂಬರ್ಥದಲ್ಲಿ ಅಲ್ಲ. (ಯೋಹಾನ 1:1; 17:1-3) ಅಥವಾ “ನನ್ನ ದೇವರು” ಎಂದು ಕರೆದ ಮೂಲಕ ತೋಮನು ಯೇಸುವನ್ನು ದೇವರ ವದನಕನಾಗಿ ಅಥವಾ ಪ್ರತಿನಿಧಿಯಾಗಿ ಅಂಗೀಕರಿಸಿರುವುದಾಗಿ ತೋರಿಸಿದಿರ್ದಬಹುದು, ಬೇರೆಯವರು ಕೂಡ ಒಬ್ಬ ದೇವದೂತ ಸಂದೇಶವಾಹಕನನ್ನು ಯೆಹೋವ ದೇವರೋ ಎಂಬಂತೆ ಸಂಬೋಧಿಸಿ ಕರೆದಿದ್ದಂತೆಯೇ.—ಆದಿಕಾಂಡ 18:1-5, 22-33ಕ್ಕೆ ಹೋಲಿಸಿರಿ; 31:11-13; 32:24-30; ನ್ಯಾಯಸ್ಥಾಪಕರು 2:1-5; 6:11-15; 13:20-22.
ಹಾಗಾದರೆ ಬೈಬಲಿಗೆ ಅನುಸಾರವಾಗಿ, ಯೇಸುವಿಗೆ ವಾಕ್ಯವೆಂಬ ಒಂದು ಮಾನವ ಪೂರ್ವದ ಅಸ್ತಿತ್ವವು ಇತ್ತು. ಭೂಮಿಯಲ್ಲಿರುವಾಗ, ಆತನು ಒಬ್ಬ ದೈವಿಕ ದೇವ-ಮನುಷ್ಯನು ಆಗಿರಲಿಲ್ಲ. ಆತನು ಪೂರಾ ಮನುಷ್ಯನಾಗಿದ್ದನು, ಆದರೂ ಆದಾಮನು ಮೂಲದಲ್ಲಿ ಇದ್ದಂತೆಯೇ, ಪೂರ್ಣನಾಗಿದ್ದನು. ಯೇಸುವಿನ ಪುನರುತ್ಥಾನದ ನಂತರ ಆತನು ಅಮರ ಆತ್ಮವಾಗಿ ಮೇಲೇರಿಸಲ್ಪಟ್ಟರೂ ಸದಾ ದೇವರಿಗೆ ಅಧೀನನಾಗಿದ್ದನು. ಆದುದರಿಂದ ಸ್ಪಷ್ಟವಾಗಿಗಿಯೇ, “ಕ್ರಿಸ್ತನ ದೈವತ್ವ”ದ ವಿಚಾರವನ್ನು ಶಾಸ್ತ್ರವಚನಗಳು ಬೆಂಬಲಿಸುವುದಿಲ್ಲ. (w92 1/15)
[ಪುಟ 23 ರಲ್ಲಿರುವ ಚೌಕ]
ದೇವದೂತರು ಯೇಸುವನ್ನು ಆರಾಧಿಸುತ್ತಾರೋ?
ಕೆಲವು ಭಾಷಾಂತರಗಳು ಇಬ್ರಿಯ 1:6ರಲ್ಲಿ ಹೀಗಂದಿವೆ: “ದೇವರ ದೂತರೆಲ್ಲರೂ ಆತನನ್ನು [ಯೇಸು] ಆರಾಧಿಸಲಿ.” (ಕಿಂಗ್ ಜೇಮ್ಸ್ ವರ್ಷನ್; ದಿ ಜೆರೂಸಲೇಮ್ ಬೈಬಲ್) ಅಪೊಸ್ತಲ ಪೌಲನಿಂದ ಸೆಪ್ಟ್ಯುಅಜಿಂಟ್ನಿಂದ ಉಲ್ಲೇಖಿಸಿರಬಹುದಾದ, ಕೀರ್ತನೆ 97:7 ಹೇಳುವುದು: “ದೇವದೂತರೆಲ್ಲರೂ ಆತನನ್ನು [ದೇವರನ್ನು] ಆರಾಧಿಸಲಿ.”—ಸಿ. ಥಾಮ್ಸನ್.
ಇಬ್ರಿಯ 1:6ರಲ್ಲಿ “ಆರಾಧನೆ” ಎಂದು ತರ್ಜುಮೆಯಾದ ಗ್ರೀಕ್ ಪದವಾದ (ಪ್ರೊಸ್ಕಿನ್ಯೋ) ಕೀರ್ತನೆ 97:7ರಲ್ಲಿ “ಅಡ್ಡಬೀಳು” ಎಂದರ್ಥವಿರುವ ಹಿಬ್ರೂ ಪದವಾದ (ಶಾ-ಹಾಹ್) ಗಾಗಿ ಸೆಪ್ಟ್ಯುಅಜಿಂಟ್ನಲ್ಲಿ ಬಳಸಲಾಗಿದೆ. ಇದು ಮಾನವರಿಗೆ ಗೌರವ ತೋರಿಸುವ ಒಂದು ಸ್ವೀಕರಣೀಯ ಕ್ರಿಯೆ ಆಗಿರಬಲ್ಲದು. (ಆದಿಕಾಂಡ 23:7; 1 ಸಮುವೇಲ 24:8; 2 ಅರಸು 2:15) ಅಥವಾ ಅದು ಸತ್ಯ ದೇವರ ಆರಾಧನೆಗೆ ಸಂಬಂಧಿಸಬಹುದು ಅಥವಾ ಸುಳ್ಳು ದೇವರುಗಳಿಗೆ ತಪ್ಪಾಗಿ ನೀಡಲ್ಪಡಲೂಬಹುದು.—ವಿಮೋಚನಕಾಂಡ 23:24; 24:1; 34:14; ಧರ್ಮೋಪದೇಶಕಾಂಡ 8:19.
ಸಾಮಾನ್ಯವಾಗಿ ಯೇಸುವಿಗೆ ಕೊಡಲ್ಪಟ್ಟ ಪ್ರೊಸ್ಕಿನ್ಯೋ ರಾಜರುಗಳಿಗೆ ಮತ್ತು ಇತರರಿಗೆ ಮಾಡುವ ಪ್ರಣಾಮಗಳಿಗೆ ಅನುರೂಪವಾಗಿದೆ. (ಮತ್ತಾಯ 2:2, 8: 8:2; 9:18; 15:25; 20:20ನ್ನು 1 ಸಮುವೇಲ 25:23, 24; 2 ಸಮುವೇಲ 14:4-7; 1 ಅರಸು 1:16; 2 ಅರಸು 4:36, 37ಕ್ಕೆ ಹೋಲಿಸಿರಿ.) ಯೇಸುವಿಗೆ ಮಾಡಲ್ಪಟ್ಟ ಪ್ರಣಾಮಗಳು ಆತನಿಗೆ ದೇವರಾಗಿ ಅಲ್ಲ, ಬದಲಿಗೆ “ದೇವರ ಪುತ್ರನಾಗಿ” ಅಥವಾ ಮೆಸ್ಸೀಯ “ಮನುಷ್ಯ ಕುಮಾರ”ನಾಗಿ ಮಾಡಲ್ಪಟ್ಟವು ಎಂಬದು ಆಗಿಂದಾಗ್ಯೆ ಸ್ಪಷ್ಟವಾಗಿಗಿದೆ.—ಮತ್ತಾಯ 14:32, 33; ಲೂಕ 24:50-52; ಯೋಹಾನ 9:35, 38.
ಇಬ್ರಿಯ 1:6 ದೇವರ ಕೈಕೆಳಗೆ ಯೇಸುವಿನ ಸ್ಥಾನಕ್ಕೆ ಸಂಬಂಧಿಸಿದೆ. (ಫಿಲಿಪ್ಪಿ 2:9-11) ಇಲ್ಲಿ ಕೆಲವು ತರ್ಜುಮೆಗಳು ಪ್ರೊಸ್ಕಿನ್ಯೋವನ್ನು “ಗೌರವಾರ್ಪಣೆ . . . ಮಾಡು” (ದ ನ್ಯೂ ಇಂಗ್ಲಿಷ್ ಬೈಬಲ್), “ಪ್ರಣಾಮ ಮಾಡು” (ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್), ಅಥವಾ “ಅಡ್ಡಬೀಳು” (ಅಮೆರಿಕನ್ ಟ್ರಾನ್ಸ್ಲೇಶನ್) ಎಂದು ಭಾಷಾಂತರಿಸಿವೆ. ಒಬ್ಬನು ಅದನ್ನು “ಆರಾಧನೆ” ಎಂದು ಭಾಷಾಂತರಿಸಲು ಇಷ್ಟಪಟ್ಟಲ್ಲಿ, ಅಂಥ ಆರಾಧನೆ ಸಂಬಂಧಿತ ಆರಾಧನೆಯಾಗಿದೆ ಯಾಕಂದರೆ ಯೇಸು ಸೈತಾನನಿಗೆ ಅಂದದ್ದು: “ನಿನ್ನ ದೇವರಾದ ಯೆಹೋವನನ್ನೇ ನೀನು ಆರಾಧಿಸಬೇಕು [ಪ್ರೊಸ್ಕಿನ್ಯೋ ರೂಪದ], ಮತ್ತು ಆತನಿಗೊಬ್ಬನಿಗೇ ಪವಿತ್ರ ಸೇವೆಯನ್ನು ಸಲ್ಲಿಸಬೇಕು.”—ಮತ್ತಾಯ 4:8-10, NW.
ದೇವರ ಆರಾಧನೆಯ ಕುರಿತಾಗಿ ತಿಳಿಸುವ ಕೀರ್ತನೆ 97:7, ಇಬ್ರಿಯ 1:6ರಲ್ಲಿ ಕ್ರಿಸ್ತನಿಗೆ ಅನ್ವಯಿಸಲ್ಪಟ್ಟಿದ್ದರೂ, ಪುನರುತ್ಥಾನಗೊಂಡ ಯೇಸುವು “ದೇವರ ಮಹಿಮೆಯ ಪ್ರತಿಫಲನವೂ ಆತನ ಸ್ವರೂಪದ ಪಡಿಯಚ್ಚೂ” ಆಗಿರುವನೆಂದು ಪೌಲನು ತೋರಿಸಿದ್ದಾನೆ. (ಇಬ್ರಿಯ 1:1-3, NW) ಹೀಗೆ ದೇವರ ಮಗನಿಗೆ ದೇವದೂತರು ಕೊಡುವ ಯಾವುದೇ “ಆರಾಧನೆ”ಯು ಸಂಬಂಧಿತ ಆರಾಧನೆಯಾಗಿದೆ ಮತ್ತು ಅದು ಆತನ ಮೂಲಕ ಯೆಹೋವನಿಗೆ ಸಲ್ಲಿಸಲ್ಪಡುತ್ತದೆ.