ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು
“ನನ್ನ ಸೇವಕನಾದ ಮೋಶೆ ಸತ್ತನು. ನೀನು ಈಗ ಎದ್ದು ಸಮಸ್ತ ಪ್ರಜಾಸಹಿತವಾಗಿ ಈ ಯೊರ್ದನ್ ಹೊಳೆಯನ್ನು ದಾಟಿ ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶಕ್ಕೆ ಹೋಗು” ಎಂದು ಯೆಹೋವನು ಹೇಳಿದನು. (ಯೆಹೋಶುವ 1:2) ಯೆಹೋಶುವನ ಮುಂದೆ ಎಷ್ಟು ಪ್ರಯಾಸಕರ ಕೆಲಸವಿತ್ತು! ಅವನು ಸುಮಾರು 40 ವರುಷಗಳ ಕಾಲ ಮೋಶೆಯ ಸೇವಕನಾಗಿದ್ದನು. ಈಗ ಅವನು ತನ್ನ ಯಜಮಾನನ ಸ್ಥಾನವನ್ನು ನಿರ್ವಹಿಸುವಂತೆಯೂ, ಅನೇಕವೇಳೆ ನಿಯಂತ್ರಿಸಲು ಕಷ್ಟಕರವಾಗಿದ್ದ ಆ ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸುವಂತೆಯೂ ಕೇಳಿಕೊಳ್ಳಲ್ಪಟ್ಟನು.
ಯೆಹೋಶುವನು ತನ್ನ ಮುಂದಿರುವ ವಿಷಯಗಳ ಕುರಿತು ಯೋಚಿಸುತ್ತಿದ್ದಾಗ, ತಾನು ಈಗಾಗಲೇ ಎದುರಿಸಿ ಜಯಿಸಿರುವ ಪರೀಕ್ಷೆಗಳು ಪ್ರಾಯಶಃ ಅವನ ಮನಸ್ಸಿಗೆ ಬಂದವು. ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು ಆಗ ಅವನಿಗೆ ಮಹತ್ವಪೂರ್ಣವಾದ ಸಹಾಯಕಗಳಾಗಿದ್ದವೆಂಬುದು ನಿಶ್ಚಯ ಮತ್ತು ಅವು ಇಂದು ಕ್ರೈಸ್ತರಿಗೂ ಸಹಾಯಕವಾಗಿರಬಲ್ಲವು.
ಗುಲಾಮನಿಂದ ಜನನಾಯಕ
ದೀರ್ಘ ಕಾಲದ ದಾಸತ್ವವು ಯೆಹೋಶುವನ ಸ್ಮರಣೆಗಳ ಒಂದು ಭಾಗವಾಗಿತ್ತು. (ವಿಮೋಚನಕಾಂಡ 1:13, 14; 2:23) ಆ ಸಮಯಾವಧಿಯಲ್ಲಿ ಯೆಹೋಶುವನಿಗಾಗಿದ್ದ ಅನುಭವಗಳನ್ನು ನಾವು ಕೇವಲ ಊಹಿಸಿಕೊಳ್ಳಬಹುದು ಅಷ್ಟೆ, ಏಕೆಂದರೆ ಅದನ್ನು ಬೈಬಲು ವಿವರವಾಗಿ ತಿಳಿಸುವುದಿಲ್ಲ. ಐಗುಪ್ತದಲ್ಲಿ ದಾಸನಾಗಿದ್ದಾಗ ಯೆಹೋಶುವನು ಉತ್ತಮ ಸಂಘಟಕನಾಗಲು ಕಲಿತಿದ್ದಿರಬಹುದು ಮತ್ತು ಇಬ್ರಿಯರು ಹಾಗೂ “ಬಹು ಮಂದಿ ಅನ್ಯರು” ಆ ದೇಶದಿಂದ ನಿರ್ಗಮಿಸಿದಾಗ ಅವನು ಅವರ ಸಂಘಟನೆಯಲ್ಲಿ ಸಹಾಯಮಾಡಿದ್ದಿರಬಹುದು.—ವಿಮೋಚನಕಾಂಡ 12:38.
ಯೆಹೋಶುವನು ಎಫ್ರಾಯೀಮ್ ಗೋತ್ರಕ್ಕೆ ಸೇರಿದ ಕುಟುಂಬದವನು. ಅವನ ಅಜ್ಜ ಎಲೀಷಾಮಾ ಎಂಬವನು ಆ ಗೋತ್ರದ ಪ್ರಧಾನನಾಗಿದ್ದು, ಇಸ್ರಾಯೇಲ್ಯರ ಮೂರು ಕುಲಗಳ ವಿಭಾಗಗಳೋಪಾದಿ ಒಂದರ 1,08,100 ಸಶಸ್ತ್ರ ಪುರುಷರ ನಾಯಕನಾಗಿದ್ದನೆಂದು ವ್ಯಕ್ತವಾಗುತ್ತದೆ. (ಅರಣ್ಯಕಾಂಡ 1:4, 10, 16; 2:18-24; 1 ಪೂರ್ವಕಾಲವೃತ್ತಾಂತ 7:20, 26, 27) ಆದರೂ, ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದ ಸ್ವಲ್ಪದರಲ್ಲಿ ಅಮಾಲೇಕ್ಯರು ಅವರ ಮೇಲೆ ದಾಳಿ ಮಾಡಿದಾಗ, ರಕ್ಷಣಾವ್ಯವಸ್ಥೆಯನ್ನು ಸಂಘಟಿಸಲು ಮೋಶೆಯು ಯೆಹೋಶುವನಿಗೆ ಕರೆಕೊಟ್ಟನು. (ವಿಮೋಚನಕಾಂಡ 17:8, 9ಎ) ಆದರೆ ಯೆಹೋಶುವನ ಅಜ್ಜನನ್ನೊ, ತಂದೆಯನ್ನೊ ಕರೆಯದೆ ಯೆಹೋಶುವನನ್ನು ಏಕೆ ಕರೆಯಲಾಯಿತು? ಒಂದು ಸೂಚನೆಯು ಹೀಗಿದೆ: “ಪ್ರಮುಖವಾಗಿದ್ದ
ಎಫ್ರಾಯೀಮ್ ಕುಲದ ಮುಖ್ಯಸ್ಥನಾಗಿದ್ದು, ಸಂಘಟನಾ ಕೌಶಲಕ್ಕೆ ಈಗಾಗಲೇ ಹೆಸರುವಾಸಿಯಾಗಿದ್ದ ಮತ್ತು ಜನರ ಭರವಸಯೋಗ್ಯನಾಗಿದ್ದ ಯೋಧರನ್ನು ಆರಿಸಿ ಏರ್ಪಡಿಸಲು [ಯೆಹೋಶುವನು] ಅತಿ ಯೋಗ್ಯನು ಎಂದು ಮೋಶೆಯು ತಿಳಿದುಕೊಂಡು ಅವನನ್ನು ನಾಯಕನನ್ನಾಗಿ ನೇಮಿಸಿದನು.”
ಅದು ಹೇಗೂ ಇರಲಿ, ಆರಿಸಲ್ಪಟ್ಟಾಗ ಯೆಹೋಶುವನು ಮೋಶೆ ಆಜ್ಞಾಪಿಸಿದಂತೆಯೇ ಮಾಡಿದನು. ಇಸ್ರಾಯೇಲ್ಯರಿಗೆ ಯುದ್ಧಾನುಭವವು ಎಳ್ಳಷ್ಟೂ ಇರದಿದ್ದರೂ, ಯೆಹೋಶುವನಿಗೆ ದೇವರ ಸಹಾಯದ ಕುರಿತು ದೃಢನಿಶ್ಚಯತೆಯಿತ್ತು. ಆದುದರಿಂದ, “ನಾನು ದೇವದಂಡವನ್ನು ಕೈಯಲ್ಲಿ ಹಿಡುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು” ಎಂದು ಮೋಶೆ ಹೇಳಿದ್ದು ಅವನನ್ನು ಮನಗಾಣಿಸಲು ಸಾಕಾಗಿತ್ತು. ಆ ದಿನಗಳ ಅತ್ಯಂತ ದೊಡ್ಡ ಮಿಲಿಟರಿ ಶಕ್ತಿಯನ್ನು ದೇವರು ಆಗ ತಾನೇ ನಾಶಮಾಡಿಬಿಟ್ಟಿದ್ದನೆಂಬುದನ್ನು ಯೆಹೋಶುವನು ಜ್ಞಾಪಿಸಿಕೊಂಡಿರಬೇಕು. ಮರುದಿನ ಮೋಶೆ, ತನ್ನ ಕೈಗಳನ್ನು ಸೂರ್ಯಾಸ್ತಮಾನದ ತನಕ ಎತ್ತಿಹಿಡಿದಾಗ, ಯಾವ ಶತ್ರುವೂ ಇಸ್ರಾಯೇಲಿನ ಎದುರು ನಿಲ್ಲಸಾಧ್ಯವಾಗದೆ, ಅಮಾಲೇಕ್ಯರು ಸೋಲಿಸಲ್ಪಟ್ಟರು. ಬಳಿಕ ಯೆಹೋವನು ಮೋಶೆಗೆ, “ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು” ಎಂಬ ದೈವಿಕ ತೀರ್ಪನ್ನು ಪುಸ್ತಕದಲ್ಲಿ ಬರೆದು, ಅದನ್ನು “ಯೆಹೋಶುವನಿಗೆ ಮಂದಟ್ಟು ಮಾಡಿಕೊಡು” ಎಂದು ಹೇಳಿದನು. (ವಿಮೋಚನಕಾಂಡ 17:9ಬಿ-14) ಹೌದು, ಯೆಹೋವನು ಆ ತೀರ್ಪನ್ನು ತಪ್ಪದೆ ಜಾರಿಗೆ ತರಲಿದ್ದನು.
ಮೋಶೆಯ ಸೇವಕನಾಗಿ
ಅಮಾಲೇಕ್ಯರ ಸಂಬಂಧದಲ್ಲಿ ಆದ ಆ ಅನುಭವವು, ಯೆಹೋಶುವ ಮತ್ತು ಮೋಶೆಯ ನಡುವೆ ಇನ್ನೂ ಹೆಚ್ಚು ಆಪ್ತವಾದ ಸಂಬಂಧವನ್ನು ಬೆಸೆದಿರಬೇಕು. ಯೆಹೋಶುವನಿಗೆ ತನ್ನ “ಯೌವನದಿಂದ” ಹಿಡಿದು ಮೋಶೆಯ ಮರಣದ ತನಕ, ಸುಮಾರು 40 ವರ್ಷಕಾಲ ಅವನ ಖಾಸಗಿ ಸೇವಕನು ಅಥವಾ ‘ಶಿಷ್ಯನು [“ಶುಶ್ರೂಷಕನು,” NW]’ ಆಗಿರುವ ಸದವಕಾಶ ಸಿಕ್ಕಿತ್ತು.—ಅರಣ್ಯಕಾಂಡ 11:28.
ಆ ಸೇವಾ ಸ್ಥಾನವು ವಿಶೇಷವಾದ ಸುಯೋಗಗಳನ್ನೂ ಜವಾಬ್ದಾರಿಗಳನ್ನೂ ತಂದೊಡ್ಡಿತು. ಉದಾಹರಣೆಗೆ, ಮೋಶೆ, ಆರೋನ, ಆರೋನನ ಪುತ್ರರು ಮತ್ತು 70 ಮಂದಿ ಹಿರಿಯರು ಸೀನಾಯಿ ಬೆಟ್ಟವನ್ನು ಹತ್ತಿ ಯೆಹೋವನ ತೇಜಸ್ಸನ್ನು ನೋಡಿದಾಗ, ಯೆಹೋಶುವನು ಅವರೊಂದಿಗಿದ್ದಿರಬಹುದು. ಮೋಶೆಯ ಸೇವಕನ ಪಾತ್ರದಲ್ಲಿ ಅವನು ಮೋಶೆಯ ಜೊತೆಯಲ್ಲಿ ಬೆಟ್ಟವನ್ನು ಇನ್ನೂ ಹೆಚ್ಚು ಎತ್ತರಕ್ಕೆ ಹತ್ತಿ, ಮೋಶೆಯು ಯೆಹೋವನ ಸನ್ನಿಧಿಯನ್ನು ಸೂಚಿಸುವ ಮೋಡದೊಳಗೆ ಹೋದಾಗ, ಅವನು ದೂರದಲ್ಲಿ ನಿಂತಿದ್ದಿರಬೇಕು. ಗಮನಾರ್ಹವಾದ ವಿಚಾರವೇನಂದರೆ, ಯೆಹೋಶುವನು 40 ಹಗಲು 40 ರಾತ್ರಿಗಳನ್ನು ಬೆಟ್ಟದಲ್ಲಿ ಕಳೆದಿರುವಂತೆ ಕಾಣುತ್ತದೆ. ಅವನು ತನ್ನ ಯಜಮಾನನು ಹಿಂದಿರುಗಿ ಬರುವುದನ್ನು ನಂಬಿಗಸ್ತಿಕೆಯಿಂದ ಕಾಯುತ್ತಿದ್ದನು. ಹೀಗೆ ಹೇಳಲು ಕಾರಣವೇನೆಂದರೆ, ಮೋಶೆ ಆಜ್ಞಾಶಾಸನಗಳ ಹಲಿಗೆಗಳನ್ನು ಹೊತ್ತುಕೊಂಡು ಬೆಟ್ಟದಿಂದ ಕೆಳಗಿಳಿದಾಗ, ಯೆಹೋಶುವನು ಅವನನ್ನು ಸಂಧಿಸಲು ಅಲ್ಲಿದ್ದನು.—ವಿಮೋಚನಕಾಂಡ 24:1, 2, 9-18; 32:15-17.
ಚಿನ್ನದ ಬಸವನ ಆರಾಧನೆಯಲ್ಲಿ ಇಸ್ರಾಯೇಲ್ಯರು ಸಿಕ್ಕಿಕೊಂಡ ಘಟನೆಯ ಬಳಿಕ, ಯೆಹೋಶುವನು ಪಾಳೆಯದ ಹೊರಗಿದ್ದ ದೇವದರ್ಶನ ಗುಡಾರದಲ್ಲಿ ಮೋಶೆಯ ಸೇವೆ ಮಾಡುತ್ತಾ ಮುಂದುವರಿದನು. ಅಲ್ಲಿ ಯೆಹೋವನು ಮೋಶೆಯೊಂದಿಗೆ ಮುಖಾಮುಖಿಯಾಗಿ ಮಾತಾಡಿದನು. ಆದರೆ ಮೋಶೆ ಪಾಳೆಯಕ್ಕೆ ಹಿಂದಿರುಗಿ ಹೋಗುತ್ತಿದ್ದಾಗ, ‘ಯೆಹೋಶುವನು ಆ ಡೇರೆಯಲ್ಲೇ ಇದ್ದು, ಅದರ ಬಳಿಯಿಂದ ಹೋಗುತ್ತಲೇ ಇರಲಿಲ್ಲ.’ ಪ್ರಾಯಶಃ ಇಸ್ರಾಯೇಲ್ಯರು ತಮ್ಮ ಅಶುದ್ಧ ಸ್ಥಿತಿಯಲ್ಲಿ ಡೇರೆಯನ್ನು ಪ್ರವೇಶಿಸುವುದನ್ನು ತಡೆಯಲು ಅವನು ಅಲ್ಲಿರಬೇಕಾಗುತ್ತಿತ್ತು. ಯೆಹೋಶುವನು ತನ್ನ ಜವಾಬ್ದಾರಿಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡನು!—ವಿಮೋಚನಕಾಂಡ 33:7, 11.
ಇತಿಹಾಸಕಾರ ಜೋಸೀಫಸ್ನಿಗನುಸಾರ, ಮೋಶೆ ಯೆಹೋಶುವನಿಗಿಂತ 35 ವರುಷ ದೊಡ್ಡವನಾಗಿದ್ದನು. ಆದರೆ ಮೋಶೆಯೊಂದಿಗೆ ಯೆಹೋಶುವನಿಗಿದ್ದ ಸಹವಾಸವು ಯೆಹೋಶುವನ ನಂಬಿಕೆಯನ್ನು ಹೆಚ್ಚು ಬಲಪಡಿಸಿದ್ದಿರಬೇಕು. ಅವರ ಸಂಬಂಧವನ್ನು, “ಪ್ರೌಢತೆ ಮತ್ತು ಯೌವನ, ಗುರು ಮತ್ತು ಶಿಷ್ಯನ ನಡುವಣ ಸಂಪರ್ಕ” ಎಂದು ಕರೆಯಲಾಗಿದೆ. ಇದರಿಂದಾಗಿ ಯೆಹೋಶುವನು, “ದೃಢನಿಶ್ಚಯತೆಯ, ಭರವಸಾರ್ಹ ಪುರುಷನು” ಆದನು. ನಮ್ಮ ಮಧ್ಯೆ ಇಂದು ಮೋಶೆಯಂತಹ ಪ್ರವಾದಿಗಳು ಇಲ್ಲವಾದರೂ, ಯೆಹೋವನ ಜನರ ಸಭೆಗಳಲ್ಲಿ ವೃದ್ಧರು ಖಂಡಿತವಾಗಿಯೂ ಇದ್ದಾರೆ. ಮತ್ತು ಇವರು ತಮ್ಮ ಅನುಭವ ಮತ್ತು ಆತ್ಮಿಕತೆಯ ಕಾರಣ ಬಲ ಹಾಗೂ ಪ್ರೋತ್ಸಾಹದ ನಿಜ ಮೂಲವಾಗಿದ್ದಾರೆ. ನೀವು ಅವರನ್ನು ಅಮೂಲ್ಯರಾಗಿ ಪರಿಗಣಿಸುತ್ತೀರೊ? ಮತ್ತು ಅವರ ಒಡನಾಟದಿಂದ ನೀವು ಪ್ರಯೋಜನ ಪಡೆಯುತ್ತಿದ್ದೀರೊ?
ಕಾನಾನಿನಲ್ಲೊಬ್ಬ ಗೂಢಚಾರ
ಇಸ್ರಾಯೇಲ್ಯರು ಧರ್ಮಶಾಸ್ತ್ರವನ್ನು ಪಡೆದ ಸ್ವಲ್ಪ ಸಮಯಾನಂತರ ಯೆಹೋಶುವನ ಜೀವನದಲ್ಲಿ ಒಂದು ನಿರ್ಧಾರಕ ಸಂಭವವು ನಡೆಯಿತು. ವಾಗ್ದತ್ತ ದೇಶವನ್ನು ಹೊಂಚಿನೋಡಲು ಅವನನ್ನು ಅವನ ಕುಲದ ಪ್ರತಿನಿಧಿಯಾಗಿ ಆರಿಸಲಾಯಿತು. ಈ ಕಥೆ ಸುಪ್ರಸಿದ್ಧವಾಗಿದೆ. ಯೆಹೋವನು ವಾಗ್ದಾನಿಸಿದ್ದಂತೆಯೇ, ಆ ದೇಶವು “ಹಾಲೂ ಜೇನೂ ಹರಿಯುತ್ತಿರುವ” ದೇಶವಾಗಿದೆ ಎಂಬುದನ್ನು ಎಲ್ಲಾ 12 ಮಂದಿ ಗೂಢಚಾರರೂ ಒಪ್ಪಿಕೊಂಡರು. ಆದರೂ, ಅವರಲ್ಲಿ ಹತ್ತು ಮಂದಿ, ಇಸ್ರಾಯೇಲ್ಯರು ಆ ದೇಶದ ನಿವಾಸಿಗಳನ್ನು ಸೋಲಿಸಶಕ್ತರಲ್ಲ ಎಂದು ಅಪನಂಬಿಗಸ್ತಿಕೆಯಿಂದ ಭಯಪಟ್ಟರು. ಆದರೆ ಯೆಹೋಶುವ ಮತ್ತು ಕಾಲೇಬರು ಮಾತ್ರ, ಯೆಹೋವನು ನಿಶ್ಚಯವಾಗಿಯೂ ಅವರೊಂದಿಗಿರುವುದರಿಂದ ಅವರು ಭಯದಿಂದ ದಂಗೆಯೇಳಬಾರದು ಎಂದು ಪ್ರೋತ್ಸಾಹಿಸಿದರು. ಆಗ ಜನಸಮೂಹವೆಲ್ಲವೂ ಆಕ್ಷೇಪವನ್ನೆತ್ತಿ, ಇವರಿಬ್ಬರನ್ನು ಕಲ್ಲೆಸೆದು ಕೊಲ್ಲುವುದರ ಕುರಿತು ಮಾತಾಡಿತು. ಯೆಹೋವನು ತನ್ನ ಪ್ರಭೆಯನ್ನು ತೋರಿಸದೆ ಇರುತ್ತಿದ್ದಲ್ಲಿ ಆ ಜನರು ಪ್ರಾಯಶಃ ಅವರನ್ನು ಕಲ್ಲೆಸೆದು ಕೊಲ್ಲುತ್ತಿದ್ದರು. ಅವರಲ್ಲಿದ್ದ ನಂಬಿಕೆಯ ಕೊರತೆಯ ಕಾರಣ, ಇಸ್ರಾಯೇಲ್ಯರಲ್ಲಿ ದಾಖಲೆ ಮಾಡಲ್ಪಟ್ಟಿರುವ 20 ವಯಸ್ಸಿಗಿಂತ ಹೆಚ್ಚಿನ ಯಾವನೂ ಕಾನಾನ್ದೇಶವನ್ನು ಪ್ರವೇಶಿಸುವುದಿಲ್ಲವೆಂದು ದೇವರು ಆಜ್ಞಾಪಿಸಿದನು. ಹೀಗೆ ಅವರಲ್ಲಿ, ಯೆಹೋಶುವ, ಕಾಲೇಬ ಮತ್ತು ಲೇವ್ಯರು ಮಾತ್ರ ಬದುಕಿ ಉಳಿದರು.—ಅರಣ್ಯಕಾಂಡ 13:1-16, 25-29; 14:6-10, 26-30.
ಐಗುಪ್ತದಲ್ಲಿ ಯೆಹೋವನು ನಡೆಸಿದ ಅದ್ಭುತಕಾರ್ಯಗಳನ್ನು ಆ ಜನರೆಲ್ಲರೂ ನೋಡಿರಲಿಲ್ಲವೆ? ಹಾಗಿರುವಾಗ, ಅಧಿಕಾಂಶ ಮಂದಿ ಸಂದೇಹಪಟ್ಟಾಗ ಯೆಹೋಶುವನಿಗೆ ದೇವರ ಸಹಾಯದಲ್ಲಿ ನಂಬಿಕೆಯನ್ನಿಡುವಂತೆ ಯಾವುದು ಶಕ್ತಗೊಳಿಸಿತು? ಯೆಹೋವನು ವಾಗ್ದಾನಮಾಡಿ ನೆರವೇರಿಸಿರುವುದೆಲ್ಲವನ್ನೂ ಯೆಹೋಶುವನು ಜ್ಞಾಪಿಸಿಕೊಂಡು ಅದರ ಕುರಿತು ಮನನಮಾಡಿದ್ದಿರಬೇಕು. ಆದುದರಿಂದಲೇ ಅವನು ಅನೇಕ ವರ್ಷಗಳ ನಂತರ, ‘ಯೆಹೋವನು ಇಸ್ರಾಯೇಲ್ಯರಿಗೆ ನುಡಿದಿದ್ದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಿಲ್ಲ. ಅವೆಲ್ಲವೂ ತಪ್ಪದೆ ನೆರವೇರಿವೆ’ ಎಂದು ಹೇಳಸಾಧ್ಯವಾಯಿತು. (ಯೆಹೋಶುವ 23:14) ಹೀಗೆ, ಭವಿಷ್ಯತ್ತಿನ ಸಂಬಂಧದಲ್ಲಿಯೂ ಯೆಹೋವನು ಮಾಡಿರುವ ವಾಗ್ದಾನಗಳು ತಪ್ಪದೆ ನೆರವೇರಲಿವೆ ಎಂಬ ನಂಬಿಕೆ ಯೆಹೋಶುವನಿಗಿತ್ತು. (ಇಬ್ರಿಯ 11:6) ಇದು ಒಬ್ಬನನ್ನು ಹೀಗೆ ಕೇಳಿಕೊಳ್ಳುವಂತೆ ಪ್ರೇರಿಸಬೇಕು: ‘ನನ್ನ ವಿಷಯದಲ್ಲೇನು? ಯೆಹೋವನ ವಾಗ್ದಾನಗಳ ಕುರಿತು ಅಧ್ಯಯನ ಮಾಡಲು ಮತ್ತು ಧ್ಯಾನಮಾಡಲು ನಾನು ಮಾಡಿರುವ ಪ್ರಯತ್ನವು ಆ ವಾಗ್ದಾನಗಳ ಭರವಸಯೋಗ್ಯತೆಯನ್ನು ನನ್ನಲ್ಲಿ ಅಚ್ಚೊತ್ತಿದೆಯೆ? ಆಗಮಿಸುತ್ತಿರುವ ಮಹಾಸಂಕಟದಲ್ಲಿ ದೇವರು ತನ್ನ ಜನರೊಂದಿಗೆ ನನ್ನನ್ನು ಸಂರಕ್ಷಿಸಬಲ್ಲನೆಂಬುದನ್ನು ನಾನು ನಂಬುತ್ತೇನೊ?’
ಯೆಹೋಶುವನು ನಂಬಿಕೆಯನ್ನಿಟ್ಟದ್ದು ಮಾತ್ರವಲ್ಲ ಅವನು ನೈತಿಕ ಧೈರ್ಯವನ್ನೂ ಪ್ರದರ್ಶಿಸಿದನು. ಅವನೂ ಕಾಲೇಬನೂ ಇಬ್ಬರೇ ದೇವರ ಪರವಾದ ಸ್ಥಾನವನ್ನು ತೆಗೆದುಕೊಂಡಾಗ ಜನಸಮೂಹದ ಎಲ್ಲರೂ ಅವರ ಮೇಲೆ ಕಲ್ಲೆಸೆಯುವ ಮಾತುಗಳನ್ನಾಡಿದರು. ಆಗ ನೀವು ಅಲ್ಲಿದ್ದಿದ್ದರೆ ನಿಮಗೆ ಹೇಗನಿಸುತ್ತಿತ್ತು? ನೀವು ಧೈರ್ಯಗೆಡುತ್ತಿದ್ದಿರೊ? ಯೆಹೋಶುವನು ಧೈರ್ಯಗೆಡಲಿಲ್ಲ. ಅವನೂ ಕಾಲೇಬನೂ ತಾವು ಏನು ನಂಬಿದ್ದೇವೆಂಬುದನ್ನು ದೃಢವಾಗಿ ತಿಳಿಸಿದರು. ಯೆಹೋವನಿಗೆ ನಾವು ತೋರಿಸಬೇಕಾದ ನಿಷ್ಠೆಯು, ನಾವೂ ಒಂದು ದಿನ ಹಾಗೆ ಮಾಡುವಂತೆ ಕೇಳಿಕೊಳ್ಳಬಹುದು.
ಈ ಗೂಢಚಾರರ ಕಥೆಯು ಯೆಹೋಶುವನ ಹೆಸರು ಬದಲಾಯಿಸಲ್ಪಟ್ಟದ್ದನ್ನೂ ನಮಗೆ ತಿಳಿಸುತ್ತದೆ. “ರಕ್ಷಣೆ” ಎಂಬ ಅರ್ಥವಿರುವ ಹೋಶೇಯ ಎಂಬ ಅವನ ಮೂಲ ಹೆಸರಿಗೆ ಮೋಶೆಯು ದೈವಿಕ ನಾಮವನ್ನು ಸೂಚಿಸುವ ಒಂದು ಸ್ವರಾಕ್ಷರವನ್ನು ಕೂಡಿಸಿ, ಅವನನ್ನು ಯೆಹೋಶುವ ಅಥವಾ ಯೋಶುವ—“ಯೆಹೋವನೇ ರಕ್ಷಣೆ”—ಎಂದು ಕರೆದನು. ಸೆಪ್ಟೂಅಜಂಟ್ ಅವನ ಹೆಸರನ್ನು “ಜೀಸಸ್” (ಯೇಸು) ಎಂದು ಭಾಷಾಂತರಿಸುತ್ತದೆ. (ಅರಣ್ಯಕಾಂಡ 13:8, 16) ಆ ಮಹಾ ಹೆಸರಿಗೆ ಹೊಂದಿಕೆಯಾಗಿ, ಯೆಹೋವನೇ ರಕ್ಷಣೆ ಎಂಬುದನ್ನು ಯೆಹೋಶುವನು ಧೈರ್ಯದಿಂದ ತಿಳಿಯಪಡಿಸಿದನು. ಯೆಹೋಶುವನ ನಾಮ ಬದಲಾವಣೆಯನ್ನು ಉದ್ದೇಶವಿಲ್ಲದೆ ಮಾಡಿರಲಿಕ್ಕಿಲ್ಲ. ಅದು ಯೆಹೋಶುವನ ನಡತೆಯ ಬಗ್ಗೆ ಮೋಶೆಗಿದ್ದ ಗೌರವವನ್ನು ಪ್ರತಿಬಿಂಬಿಸಿ, ಹೊಸದಾದ ಸಂತತಿಯೊಂದನ್ನು ವಾಗ್ದತ್ತ ದೇಶಕ್ಕೆ ನಡೆಸಲು ಯೆಹೋಶುವನಿಗಿದ್ದ ಸುಯೋಗಭರಿತ ಪಾತ್ರಕ್ಕೆ ಅನುರೂಪವಾಗಿತ್ತು.
ಅವರ ಪಿತೃಗಳು ಸತ್ತುಹೋಗುತ್ತಿದ್ದಂತೆ, ಇಸ್ರಾಯೇಲ್ಯರು 40 ವರ್ಷಕಾಲ ಅರಣ್ಯದಲ್ಲಿ ಅಲೆದಾಡುತ್ತಾ ಬಳಲಿಬೆಂಡಾದರು. ಆ ಸಮಯದಲ್ಲಿ ಯೆಹೋಶುವನ ಬಗ್ಗೆ ನಮಗೆ ಏನೂ ತಿಳಿದಿರುವುದಿಲ್ಲವಾದರೂ, ಅದು ಅವನಿಗೆ ಬಹಳಷ್ಟು ಸಂಗತಿಗಳನ್ನು ಖಂಡಿತವಾಗಿಯೂ ಕಲಿಸಿರಬೇಕು. ಕೋರಹ, ದಾತಾನ್ ಮತ್ತು ಅಬೀರಾಮರ ಮೇಲೆ ಹಾಗೂ ಅವರ ಹಿಂಬಾಲಕರ ಮೇಲೆ ಮತ್ತು ಪೆಗೋರದ ಬಾಳನ ಕೀಳ್ಮಟ್ಟದ ಆರಾಧನೆಯಲ್ಲಿ ಭಾಗವಹಿಸಿದವರ ಮೇಲೆ ಬಂದ ದೇವರ ತೀರ್ಪನ್ನು ಅವನು ನೋಡಿದ್ದಿರಬೇಕು. ಮೆರೀಬಾ ನೀರಿನ ಪ್ರವಾಹದ ಸಂಬಂಧದಲ್ಲಿ ಯೆಹೋವನನ್ನು ಪವಿತ್ರೀಕರಿಸಲು ಮೋಶೆಯು ತಪ್ಪಿಬಿದ್ದ ಕಾರಣ, ಮೋಶೆಯೂ ವಾಗ್ದತ್ತ ದೇಶದಿಂದ ಹೊರಗಿರಿಸಲ್ಪಡುವನೆಂಬುದನ್ನು ಕೇಳಿದಾಗ ನಿಸ್ಸಂದೇಹವಾಗಿಯೂ ಯೆಹೋಶುವನಿಗೆ ಮಹಾ ದುಃಖವುಂಟಾಗಿರಬೇಕು.—ಅರಣ್ಯಕಾಂಡ 16:1-50; 20:9-13; 25:1-9.
ಮೋಶೆಯ ಉತ್ತರಾಧಿಕಾರಿಯಾಗಿ ನೇಮಕ
ಮೋಶೆಯ ಮರಣವು ಸಮೀಪಿಸಿದಾಗ, ಇಸ್ರಾಯೇಲ್ಯರು “ಕುರುಬನಿಲ್ಲದ ಕುರಿಗಳ” ಹಾಗೆ ಆಗದಂತೆ ಒಬ್ಬ ಉತ್ತರಾಧಿಕಾರಿಯನ್ನು ನೇಮಿಸಬೇಕೆಂದು ಅವನು ಯೆಹೋವನನ್ನು ಕೇಳಿಕೊಂಡನು. ಯೆಹೋವನ ಉತ್ತರವೇನಾಗಿತ್ತು? “ಆತ್ಮವರಸಂಪನ್ನ”ನಾದ ಯೆಹೋಶುವನು ಸಮೂಹದವರೆಲ್ಲರ ಮುಂದೆ ನೇಮಿಸಲ್ಪಡಬೇಕು. ಅವರು ಅವನಿಗೆ ಕಿವಿಗೊಡಬೇಕಿತ್ತು. ಎಂತಹ ಶಿಫಾರಸ್ಸಿದು! ಯೆಹೋವನು ಯೆಹೋಶುವನ ನಂಬಿಕೆಯನ್ನೂ ಸಾಮರ್ಥ್ಯವನ್ನೂ ನೋಡಿದ್ದನು. ಇಸ್ರಾಯೇಲಿನ ನಾಯಕತ್ವವನ್ನು ವಹಿಸಿಕೊಡಲಿಕ್ಕಾಗಿ ಅವನಿಗಿಂತ ಹೆಚ್ಚು ಯೋಗ್ಯತೆಯುಳ್ಳವನು ಬೇರಾರೂ ಇರಲಿಲ್ಲ. (ಅರಣ್ಯಕಾಂಡ 27:15-20) ಆದರೂ ಯೆಹೋಶುವನು ಭಾರಿ ಸಮಸ್ಯೆಗಳನ್ನು ಎದುರಿಸಲಿಕ್ಕಿದೆ ಎಂಬುದು ಮೋಶೆಗೆ ತಿಳಿದಿತ್ತು. ಆದುದರಿಂದ ಯೆಹೋವನು ಅವನ ಸಂಗಡ ಇರುವುದರಿಂದ “ಅಂಜದೆ ಧೈರ್ಯದಿಂದಿರು” ಎಂದು ಮೋಶೆ ತನ್ನ ಉತ್ತರಾಧಿಕಾರಿಗೆ ಹೇಳಿದನು.—ಧರ್ಮೋಪದೇಶಕಾಂಡ 31:7, 8.
ಅದೇ ಪ್ರೋತ್ಸಾಹನೆಯನ್ನು ಸ್ವತಃ ದೇವರು ಯೆಹೋಶುವನಿಗೆ ಪುನರಾವರ್ತಿಸಿ ಹೇಳಿದನು: “ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ. ಆಗ ನೀನು ಎಲ್ಲಿ ಹೋದರೂ ಕೃತಾರ್ಥನಾಗುವಿ. ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ. ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.”—ಯೆಹೋಶುವ 1:7-9.
ಯೆಹೋವನ ಮಾತುಗಳು ಅವನ ಕಿವಿಯಲ್ಲಿ ಘಣಘಣಿಸುತ್ತಿರುವಾಗ ಮತ್ತು ಅವನು ಈಗಾಗಲೇ ಶೇಖರಿಸಿರುವ ಅನುಭವಗಳಿರುವಾಗ, ಯೆಹೋಶುವನು ಅದನ್ನು ಹೇಗೆ ಸಂಶಯಿಸಬಲ್ಲನು? ದೇಶದ ಗೆಲ್ಲುವಿಕೆಯ ಆಶ್ವಾಸನೆಯನ್ನು ಅವನಿಗೆ ನೀಡಲಾಗಿತ್ತು. ಕಷ್ಟಗಳು ಬರಲಿದ್ದವು ನಿಜ. ನೆರೆಯ ಸಮಯದಲ್ಲಿ ಯೊರ್ದನ್ ಹೊಳೆಯನ್ನು ದಾಟುವ ಪ್ರಥಮ ಪಂಥಾಹ್ವಾನವೇ ದೊಡ್ಡದಾಗಿತ್ತು. ಆದರೂ, ಯೆಹೋವನು ತಾನೇ “ಈ ಯೊರ್ದನ್ ಹೊಳೆಯನ್ನು ದಾಟಿ” ಎಂದು ಆಜ್ಞಾಪಿಸಿದ್ದನು. ಹಾಗಿರುವಾಗ, ಅದು ಸಮಸ್ಯೆಯಾಗಿದ್ದೀತೆ?—ಯೆಹೋಶುವ 1:2.
ಯೆಹೋಶುವನ ಜೀವನದಲ್ಲಿ ಒಂದರ ಹಿಂದೆ ಇನ್ನೊಂದಾಗಿ ನಡೆದ ಘಟನೆಗಳು—ಯೆರಿಕೋ ಪಟ್ಟಣದ ಮೇಲೆ ವಿಜಯ, ವೈರಿಗಳನ್ನು ಪ್ರಗತಿಪರವಾಗಿ ಅಧೀನಪಡಿಸಿಕೊಂಡದ್ದು, ಮತ್ತು ದೇಶವನ್ನು ಪಾಲುಮಾಡಿದ್ದು—ಅವನು ದೇವರ ವಾಗ್ದಾನಗಳನ್ನು ಮರೆತಿರಲಿಲ್ಲವೆಂಬುದನ್ನು ತೋರಿಸಿದವು. ಅವನ ಮರಣವು ಸಮೀಪಿಸುತ್ತಿದ್ದಾಗ, ಯೆಹೋವನು ಇಸ್ರಾಯೇಲ್ಯರಿಗೆ ವೈರಿಗಳಿಂದ ವಿಶ್ರಾಂತಿಯನ್ನು ಕೊಟ್ಟಿದ್ದ ಸಮಯದಲ್ಲಿ, ಯೆಹೋಶುವನು ದೇವರ ವ್ಯವಹಾರಗಳನ್ನು ಪುನರ್ವಿಮರ್ಶಿಸಲು ಮತ್ತು ಯೆಹೋವನನ್ನು ಪೂರ್ಣಹೃದಯದಿಂದ ಸೇವಿಸುವಂತೆ ಜನರನ್ನು ಪ್ರೋತ್ಸಾಹಿಸಲು ಅವರನ್ನು ಒಟ್ಟುಗೂಡಿಸಿದನು. ಇದರ ಪರಿಣಾಮವಾಗಿ, ಇಸ್ರಾಯೇಲ್ಯರು ಯೆಹೋವನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಗಂಭೀರವಾಗಿ ನವೀಕರಿಸಿದರು. ಮತ್ತು ಖಂಡಿತವಾಗಿಯೂ ತಮ್ಮ ನಾಯಕನ ಮಾದರಿಯಿಂದ ಪ್ರಚೋದಿತರಾಗಿ, “ಯೆಹೋಶುವನ ದಿನಗಳಲ್ಲಿಯೂ [“ದಿನಗಳುದ್ದಕ್ಕೂ,” NW] . . . ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.”—ಯೆಹೋಶುವ 24:16, 31.
ಯೆಹೋಶುವನು ನಮಗೆ ಒಂದು ಉತ್ಕೃಷ್ಟ ಮಾದರಿಯನ್ನು ಒದಗಿಸುತ್ತಾನೆ. ಕ್ರೈಸ್ತರಿಗೆ ಇಂದು ಅನೇಕಾನೇಕ ಪರೀಕ್ಷೆಗಳನ್ನು ಎದುರಿಸಲಿಕ್ಕಿದೆ. ಇವುಗಳನ್ನು ಯಶಸ್ಸಿನೊಂದಿಗೆ ನಿಭಾಯಿಸುವುದು, ಯೆಹೋವನ ಸಮ್ಮತಿಗೂ ಅಂತಿಮವಾಗಿ ಆತನ ವಾಗ್ದಾನಗಳಿಗೆ ಬಾಧ್ಯರಾಗಲಿಕ್ಕೂ ಮಹತ್ವವುಳ್ಳದ್ದಾಗಿದೆ. ಯೆಹೋಶುವನ ಯಶಸ್ಸು ಅವನ ಬಲವಾದ ನಂಬಿಕೆಯ ಮೇಲೆ ಹೊಂದಿಕೊಂಡಿತ್ತು. ಯೆಹೋಶುವನಂತೆ ನಾವು ದೇವರ ಅದ್ಭುತಕಾರ್ಯಗಳನ್ನು ನೋಡಿರುವುದಿಲ್ಲ ನಿಜ. ಆದರೆ ಯಾರಾದರೂ ಸಂಶಯಪಡುವಲ್ಲಿ, ಯೆಹೋಶುವ ಎಂಬ ಹೆಸರಿನ ಬೈಬಲ್ ಪುಸ್ತಕವು ಯೆಹೋವನ ಮಾತಿನ ಭರವಸಯೋಗ್ಯತೆಗೆ ಪ್ರತ್ಯಕ್ಷವಾದ ಪುರಾವೆಯನ್ನು ಒದಗಿಸುತ್ತದೆ. ನಾವು ದೇವರ ವಾಕ್ಯವನ್ನು ಪ್ರತಿದಿನ ಓದುವಲ್ಲಿ ಮತ್ತು ಅದನ್ನು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುವಲ್ಲಿ, ಯೆಹೋಶುವನಂತೆ ವಿವೇಕ ಮತ್ತು ಯಶಸ್ಸು ದೊರೆಯುವ ಆಶ್ವಾಸನೆ ನಮಗಿದೆ.
ಜೊತೆ ಕ್ರೈಸ್ತರ ವರ್ತನೆಯು ನಿಮ್ಮನ್ನು ಕೆಲವೊಮ್ಮೆ ನೋಯಿಸುತ್ತದೆಯೆ? ಯೆಹೋಶುವನು ಆ 40 ವರುಷಗಳಲ್ಲಿ ಹೇಗೆ ತಾಳಿಕೊಂಡನೆಂಬುದನ್ನು ಯೋಚಿಸಿರಿ. ಅವನ ತಪ್ಪು ಏನೂ ಇರದಿದ್ದರೂ, ಅವನು ಆ ನಂಬಿಕೆಯಿಲ್ಲದ ಸಂಗಾತಿಗಳೊಂದಿಗೆ ಅರಣ್ಯದಲ್ಲಿ ಅಲೆದಾಡಬೇಕಾಯಿತು. ನೀವು ನಂಬುವ ವಿಷಯಗಳ ಪಕ್ಷದಲ್ಲಿ ನಿಂತು ಅದನ್ನು ಸಮರ್ಥಿಸುವುದು ಕಷ್ಟವೆಂದು ನಿಮಗೆ ಕಂಡುಬರುತ್ತದೊ? ಯೆಹೋಶುವ ಮತ್ತು ಕಾಲೇಬರು ಏನು ಮಾಡಿದರೊ ಅದನ್ನು ಜ್ಞಾಪಿಸಿಕೊಳ್ಳಿರಿ. ಅವರ ನಂಬಿಕೆ ಮತ್ತು ವಿಧೇಯತೆಗಾಗಿ ಅವರಿಗೆ ಮಹತ್ವಪೂರ್ಣ ಪ್ರತಿಫಲ ದೊರೆಯಿತು. ಹೌದು, ಯೆಹೋವನು ತನ್ನ ಸಕಲ ವಾಗ್ದಾನಗಳನ್ನೂ ನೆರವೇರಿಸುವನೆಂಬ ನಂಬಿಕೆ ಯೆಹೋಶುವನಲ್ಲಿ ನಿಜವಾಗಿಯೂ ಇತ್ತು. ಅದು ನಮ್ಮ ವಿಷಯದಲ್ಲಿಯೂ ನಿಜವಾಗಿರಲಿ.—ಯೆಹೋಶುವ 23:14.
[ಪುಟ 10ರಲ್ಲಿರುವ ಚಿತ್ರ]
ಮೋಶೆಯೊಂದಿಗಿನ ಸಹವಾಸವು ಯೆಹೋಶುವನ ನಂಬಿಕೆಯನ್ನು ಬಲಪಡಿಸಿತು
[ಪುಟ 10ರಲ್ಲಿರುವ ಚಿತ್ರ]
ಯೆಹೋಶುವ ಮತ್ತು ಕಾಲೇಬರಿಗೆ ಯೆಹೋವನ ಶಕ್ತಿಯಲ್ಲಿ ದೃಢಭರವಸೆಯಿತ್ತು
[ಪುಟ 10ರಲ್ಲಿರುವ ಚಿತ್ರ]
ಯೆಹೋಶುವನ ನಾಯಕತ್ವವು ಜನರು ಯೆಹೋವನಿಗೆ ಅಂಟಿಕೊಳ್ಳುವಂತೆ ಅವರನ್ನು ಪ್ರಚೋದಿಸಿತು