ಕುಟುಂಬ ಪರಾಮರಿಕೆಯ ಜವಾಬ್ದಾರಿಗೆ ಹೆಗಲುಕೊಡುವುದು
“ತಂದೆಗಳೇ, ನಿಮ್ಮ ಮಕ್ಕಳನ್ನು ಕೆರಳಿಸಬೇಡಿರಿ, ಆದರೆ ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಅವರನ್ನು ಬೆಳೆಸುತ್ತಾ ಇರಿ.” (ಎಫೆಸ 6:4, NW) ಆ ಪ್ರೇರಿತ ಮಾತುಗಳಿಂದ ಅಪೊಸ್ತಲ ಪೌಲನು, ಕುಟುಂಬದ ಪರಾಮರಿಕೆಯು ಯಾರಿಗೆ ಸೇರಿರುತ್ತದೊ ಅವನ ಮೇಲೆ—ತಂದೆಯ ಹೆಗಲಿನ ಮೇಲೆ—ಜವಾಬ್ದಾರಿಯನ್ನು ಹೊರಿಸಿದನೆಂಬುದು ಸ್ಪಷ್ಟ.
ಅಧಿಕಾಂಶ ಕುಟುಂಬಗಳಲ್ಲಿ, ತನ್ನ ಮಕ್ಕಳ ಪರಾಮರಿಕೆ ಮಾಡುವ ಜವಾಬ್ದಾರಿಯನ್ನು ತಂದೆಯೊಬ್ಬನೇ ಹೊತ್ತುಕೊಳ್ಳುವುದಿಲ್ಲ. ಅವನ ಹೆಂಡತಿಯೂ, ಅವನ ಮಕ್ಕಳ ತಾಯಿಯೂ ಆದವಳು, ಹರ್ಷಾನಂದದಿಂದ ತನ್ನ ಗಂಡನೊಂದಿಗೆ ಆ ಹೊರೆಯಲ್ಲಿ ಭಾಗಿಯಾಗುತ್ತಾಳೆ. ಹೀಗೆ, ಅರಸನಾದ ಸೊಲೊಮೋನನು ಘೋಷಿಸಿದ್ದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.”—ಜ್ಞಾನೋಕ್ತಿ 1:8.
ಭೌತಿಕ ಹಾಗೂ ಆತ್ಮಿಕ ಪರಾಮರಿಕೆ
ತಮ್ಮ ಮಕ್ಕಳನ್ನು ಪ್ರೀತಿಸುವ ಹೆತ್ತವರು, ಉದ್ದೇಶಪೂರ್ವಕವಾಗಿ ಅವರನ್ನು ಕಡೆಗಣಿಸುವುದಿಲ್ಲ. ಕ್ರೈಸ್ತರಿಗಾದರೋ ಹಾಗೆ ಮಾಡುವುದು, ತಿಮೊಥೆಯನಿಗೆ ಬರೆದ ಪೌಲನ ಮಾತುಗಳಿಂದ ನಾವು ನಿರ್ಧರಿಸುವಂತೆ, ತಮ್ಮ ನಂಬಿಕೆಯನ್ನು ಅಲ್ಲಗಳೆಯುವುದಕ್ಕೆ ಸರಿಸಮವಾದದ್ದಾಗಿರುವುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆ”ಯಲ್ಲಿ ಬೆಳೆಸುವುದು, ಅವರಿಗೆ ಭೌತಿಕ ರೀತಿಯಲ್ಲಿ ಒದಗಿಸುವಿಕೆಯನ್ನು ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಅಗತ್ಯಪಡಿಸುತ್ತದೆ ಎಂಬುದನ್ನು ಕ್ರೈಸ್ತರು ಗ್ರಹಿಸುತ್ತಾರೆ.
ಇಸ್ರಾಯೇಲ್ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ಸ್ವಲ್ಪ ಮುಂಚೆ, ಮೋವಾಬ್ ಬಯಲಿನಲ್ಲಿ ಪಾಳೆಯಹೂಡಿದ್ದಾಗ, ಅವರಿಗೆ ಮೋಶೆಯು ಕೊಟ್ಟಂತಹ ಪ್ರಬೋಧನೆಯನ್ನು ಪರಿಗಣಿಸಿರಿ. ಅಲ್ಲಿ ಅವನು ಅವರಿಗೆ ದೇವರ ನಿಯಮಗಳನ್ನು ಪುನರಾವರ್ತಿಸಿ, ಅವರಿಗೆ ಉಪದೇಶಿಸಿದ್ದು: “ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು.” (ಧರ್ಮೋಪದೇಶಕಾಂಡ 11:18) ಈ ಮುಂಚೆ ಅವನು, ಅವರು ಯೆಹೋವನನ್ನು ತಮ್ಮ ಪೂರ್ಣ ಹೃದಯ, ಪ್ರಾಣ, ಮತ್ತು ಜೀವಶಕ್ತಿಯಿಂದ ಪ್ರೀತಿಸಬೇಕೆಂದು ಅವರಿಗೆ ಮರುಜ್ಞಾಪಿಸಿ, ಕೂಡಿಸಿ ಹೇಳಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.” (ಧರ್ಮೋಪದೇಶಕಾಂಡ 6:5, 6) ದೇವರ ಧರ್ಮಶಾಸ್ತ್ರದ ಮಾತುಗಳು ತಮ್ಮ ಹೃದಯಗಳಲ್ಲಿ ಆಳವಾಗಿ ಬೇರೂರುವಂತೆ ಬಿಡುವುದು ಇಸ್ರಾಯೇಲ್ಯ ಹೆತ್ತವರಿಗೆ ಅತ್ಯಾವಶ್ಯಕವಾದದ್ದಾಗಿತ್ತು. ಆತ್ಮಿಕ ಗಣ್ಯತೆಯಿಂದ ತುಂಬಿತುಳುಕುತ್ತಿದ್ದ ಹೃದಯಗಳೊಂದಿಗೆ, ಇಸ್ರಾಯೇಲ್ಯ ಹೆತ್ತವರು ಮೋಶೆಯ ಮುಂದಿನ ಮಾತುಗಳಿಗೆ ಪರಿಣಾಮಕಾರಿಯಾಗಿ ವಿಧೇಯರಾಗಸಾಧ್ಯವಿತ್ತು: “ಇವುಗಳನ್ನು [ದೇವರ ಧರ್ಮಶಾಸ್ತ್ರದ ಮಾತುಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ [“ನಾಟಿಸಿ,” NW] ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:7; 11:19; ಹೋಲಿಸಿರಿ ಮತ್ತಾಯ 12:34, 35.
ತಂದೆಯಂದಿರು ಆ ಮಾತುಗಳನ್ನು ತಮ್ಮ ಮಕ್ಕಳಲ್ಲಿ ‘ನಾಟಿಸ’ಬೇಕಿತ್ತು ಮತ್ತು “ಇವುಗಳ ವಿಷಯದಲ್ಲಿ ಮಾತಾಡ”ಬೇಕಿತ್ತು ಎಂಬುದನ್ನು ಗಮನಿಸಿರಿ. ‘ನಾಟಿಸು’ ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರೂ ಪದದ ಅರ್ಥವು, “ಪುನರಾವೃತ್ತಿಸು,” “ಪದೇ ಪದೇ ಹೇಳು,” “ಸ್ಪಷ್ಟವಾಗಿ ಅಚ್ಚೊತ್ತು” ಎಂದಾಗಿದೆ. ಹೆತ್ತವರು ದೇವರ ಧರ್ಮಶಾಸ್ತ್ರದ ಕುರಿತು ದಿನಾಲೂ—ಬೆಳಗ್ಗೆ, ಮಧ್ಯಾಹ್ನ, ಹಾಗೂ ರಾತ್ರಿ—ಮಾತಾಡಿದಾಗ, ಇದು ಅವರ ಮಕ್ಕಳಿಗೆ ಹೆಚ್ಚನ್ನು ತಿಳಿಯಪಡಿಸುತ್ತಿತ್ತು. ದೇವರ ಧರ್ಮಶಾಸ್ತ್ರಕ್ಕಾಗಿ ತಮ್ಮ ಹೆತ್ತವರಿಗಿದ್ದ ಪ್ರೀತಿಯನ್ನು ಆ ಎಳೆಯರು ಅರ್ಥಮಾಡಿಕೊಂಡಂತೆ, ಅದಕ್ಕೆ ಪ್ರತಿಯಾಗಿ ಅವರು ಯೆಹೋವನೊಂದಿಗೆ ಒಂದು ನಿಕಟ ಸಂಬಂಧವನ್ನು ವಿಕಸಿಸಿಕೊಳ್ಳುವಂತೆ ಪ್ರಭಾವಿಸಲ್ಪಟ್ಟರು. (ಧರ್ಮೋಪದೇಶಕಾಂಡ 6:24, 25) ಆಸಕ್ತಿಕರವಾಗಿ, ಮೋಶೆಯು ನಿರ್ದಿಷ್ಟವಾಗಿ ತಂದೆಯಂದಿರಿಗೆ, ಅವರು ‘ತಮ್ಮ ಮನೆಯಲ್ಲಿ ಕುಳಿತುಕೊಂಡಾಗ’ ತಮ್ಮ ಮಕ್ಕಳಿಗೆ ಕಲಿಸುವಂತೆ ಬೋಧಿಸಿದನು. ಅಂತಹ ಕಲಿಸುವಿಕೆಯು, ಕುಟುಂಬದ ಪರಾಮರಿಕೆಯ ಒಂದು ಭಾಗವಾಗಿತ್ತು. ಆದರೆ ಇಂದಿನ ಕುರಿತಾಗಿ ಏನು?
“ಮನೆಯಲ್ಲಿ ಕೂತಿರುವಾಗ”
“ಅದು ಸುಲಭದ ಕೆಲಸವಲ್ಲ” ಎಂದು, ನಾಲ್ಕು ಮಕ್ಕಳ ಕ್ರೈಸ್ತ ತಾಯಿಯಾಗಿರುವ ಜ್ಯಾನೆಟ್ ವಿವರಿಸುತ್ತಾಳೆ.a “ನೀವು ಪಟ್ಟುಹಿಡಿಯಬೇಕಾಗುತ್ತದೆ” ಎಂದು ಅವಳ ಗಂಡನಾದ ಪಾಲ್ ಒಪ್ಪಿಕೊಳ್ಳುತ್ತಾನೆ. ಇನ್ನಿತರ ಸಾಕ್ಷಿ ಹೆತ್ತವರಂತೆ, ಪಾಲ್ ಹಾಗೂ ಜ್ಯಾನೆಟ್, ಕಡಿಮೆಪಕ್ಷ ವಾರಕ್ಕೊಮ್ಮೆ ತಮ್ಮ ಮಕ್ಕಳೊಂದಿಗೆ ಬೈಬಲ್ ಅಭ್ಯಾಸವನ್ನು ನಡೆಸಲು ಪ್ರಯತ್ನಿಸುತ್ತಾರೆ. “ಪ್ರತಿ ಸೋಮವಾರ ಒಂದು ನಿಗದಿತ ಸಮಯದಲ್ಲಿ ನಮ್ಮ ಕುಟುಂಬದ ಬೈಬಲ್ ಚರ್ಚೆಯನ್ನು ನಡೆಸಲು ನಾವು ಪ್ರಯತ್ನಿಸುತ್ತೇವೆ” ಎಂದು ಪಾಲ್ ವಿವರಿಸುತ್ತಾ, “ಆದರೆ ನಾವು ಯಾವಾಗಲೂ ಯಶಸ್ವಿಯಾಗುವುದಿಲ್ಲ” ಎಂದು ಒಪ್ಪಿಕೊಳ್ಳುತ್ತಾನೆ. ಸಭೆಯಲ್ಲಿ ಒಬ್ಬ ನೇಮಿತ ಹಿರಿಯನೋಪಾದಿ ಅವನಿಗೆ ಕೆಲವೊಮ್ಮೆ ತುರ್ತಿನ ವಿಚಾರಗಳೊಂದಿಗೆ ವ್ಯವಹರಿಸಲಿಕ್ಕಾಗಿ ಹೊರಗೆ ಹೋಗಬೇಕಾಗುತ್ತದೆ. ಅವನ ಇಬ್ಬರು ಹಿರಿಯ ಮಕ್ಕಳು ಪೂರ್ಣ ಸಮಯದ ಶುಶ್ರೂಷಕರೋಪಾದಿ ಸೇವೆಮಾಡುತ್ತಿದ್ದಾರೆ. ಶುಶ್ರೂಷೆಯಲ್ಲಿ ಜನರನ್ನು ಸಂಪರ್ಕಿಸಲಿಕ್ಕಾಗಿ ಸಾಯಂಕಾಲಗಳು ಉತ್ಪನ್ನದಾಯಕ ಸಮಯಗಳಾಗಿವೆ ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಹೀಗೆ, ಒಂದು ಕುಟುಂಬದೋಪಾದಿ ಅವರು ತಮ್ಮ ಕುಟುಂಬ ಅಭ್ಯಾಸಕ್ಕಾಗಿ ಸಮಯವನ್ನು ಸರಿಹೊಂದಿಸಿಕೊಂಡಿದ್ದಾರೆ. “ನಾವು ಕೆಲವೊಮ್ಮೆ ನಮ್ಮ ರಾತ್ರಿಯೂಟವಾದ ಕೂಡಲೆ ಅಭ್ಯಾಸವನ್ನು ನಡೆಸುತ್ತೇವೆ” ಎಂದು ಪಾಲ್ ವಿವರಿಸುತ್ತಾನೆ.
ತಮ್ಮ ಕುಟುಂಬ ಅಭ್ಯಾಸದ ಸಮಯದಲ್ಲಿ ಹೆತ್ತವರು ವಿವೇಕಯುತವಾಗಿ ಹೊಂದಿಕೊಳ್ಳುವಿಕೆಯನ್ನು ತೋರಿಸುತ್ತಾರಾದರೂ, ಅದರ ಕ್ರಮತೆಯನ್ನು ಕಾಪಾಡಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ. “ನಮ್ಮ ಅಭ್ಯಾಸದ ಸಮಯವನ್ನು ಬದಲಾಯಿಸಬೇಕಾಗಿರುವಲ್ಲಿ, ತಂದೆಯವರು ಯಾವಾಗಲೂ ಹೊಸ ಸಮಯವನ್ನು ಫ್ರಿಜ್ ಬಾಗಿಲಿನ ಮೇಲೆ ಅಂಟಿಸುತ್ತಾರೆ, ಇದರಿಂದಾಗಿ ಅದು ಯಾವಾಗ ನಡೆಸಲ್ಪಡುವುದು ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ” ಎಂದು ಅವರ ಮಗಳಾದ ಕ್ಲ್ಯಾರ್ ಹೇಳುತ್ತಾಳೆ.
ಒಂದು ಕ್ರಮವಾದ ಕುಟುಂಬ ಬೈಬಲ್ ಅಭ್ಯಾಸಕ್ಕಾಗಿ ಒಟ್ಟುಗೂಡುವುದು, ಕುಟುಂಬದ ಎಳೆಯ ಸದಸ್ಯರು ತಮ್ಮ ಚಿಂತೆಗಳನ್ನು ಹಾಗೂ ಸಮಸ್ಯೆಗಳನ್ನು ತಮ್ಮ ಹೆತ್ತವರೊಂದಿಗೆ ಹಂಚಿಕೊಳ್ಳಲು, ಅವರಿಗೆ ಒಂದು ಒಳ್ಳೆಯ ಅವಕಾಶವನ್ನು ಸಹ ಒದಗಿಸುತ್ತದೆ. ಅಂತಹ ಒಂದು ಅಭ್ಯಾಸವು, ಎಳೆಯರು ತಾವು ಉಪಯೋಗಿಸುವ ಬೈಬಲ್ ಪಠ್ಯಪುಸ್ತಕದಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಕೇವಲ ಉತ್ತರಗಳನ್ನು ಓದಿಹೇಳುವಷ್ಟು ಕಟ್ಟುನಿಟ್ಟಾಗಿಲ್ಲದಿರುವಾಗ, ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. “ನಮ್ಮ ಕುಟುಂಬ ಅಭ್ಯಾಸವು, ಚರ್ಚೆಗಾಗಿರುವ ಒಂದು ಕೂಟವಾಗಿದೆ” ಎಂದು, ಇಬ್ಬರು ಪುತ್ರರಿರುವ ಮಾರ್ಟಿನ್ ವಿವರಿಸುತ್ತಾನೆ. “ಒಂದು ಶಾಸ್ತ್ರೀಯ ವಿಷಯವನ್ನು ಚರ್ಚಿಸಲಿಕ್ಕಾಗಿ ನೀವು ವಾರಕ್ಕೊಮ್ಮೆ ಒಟ್ಟುಗೂಡುವಾಗ, ಆತ್ಮಿಕವಾಗಿ ನಿಮ್ಮ ಕುಟುಂಬವು ಹೇಗೆ ಕಾರ್ಯನಡಿಸುತ್ತಿದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ” ಎಂದು ಅವನು ಹೇಳಿಕೆ ನೀಡುತ್ತಾನೆ. “ಚರ್ಚೆಯಲ್ಲಿ ಬೇರೆ ಬೇರೆ ವಿಚಾರಗಳನ್ನು ನಾವು ಕಂಡುಕೊಳ್ಳುತ್ತೇವೆ. ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ, ಮತ್ತು ಹೆಚ್ಚು ಆಸಕ್ತಿಕರವಾಗಿ, ನಿಮ್ಮ ಮಕ್ಕಳು ಯಾವ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ.” ಅವನ ಹೆಂಡತಿಯಾದ ಸ್ಯಾಂಡ್ರ ಇದನ್ನು ಒಪ್ಪಿಕೊಳ್ಳುತ್ತಾಳೆ. ಮತ್ತು ಕುಟುಂಬ ಅಭ್ಯಾಸದಿಂದ ತಾನು ಸಹ ತುಂಬ ವಿಷಯಗಳನ್ನು ಸಂಗ್ರಹಿಸಿಕೊಳ್ಳುತ್ತೇನೆ ಎಂಬುದು ಅವಳ ಅನಿಸಿಕೆ. “ನನ್ನ ಗಂಡನು ಅಭ್ಯಾಸವನ್ನು ನಡೆಸುತ್ತಿರುವಾಗ, ನನ್ನ ಪುತ್ರರು ಅವರ ಪ್ರಶ್ನೆಗಳಿಗೆ ಉತ್ತರಿಸುವ ರೀತಿಗೆ ಕಿವಿಗೊಡುವ ಮೂಲಕ ನಾನು ಅನೇಕ ವಿಷಯಗಳನ್ನು ಕಲಿಯುತ್ತೇನೆ” ಎಂದು ಅವಳನ್ನುತ್ತಾಳೆ. ತದನಂತರ ಸ್ಯಾಂಡ್ರ ತನ್ನ ಪುತ್ರರಿಗೆ ಸಹಾಯ ಮಾಡಲಿಕ್ಕಾಗಿ ತನ್ನ ಹೇಳಿಕೆಗಳನ್ನು ತಕ್ಕಂತೆ ಮಾರ್ಪಡಿಸುತ್ತಾಳೆ. ಅವಳು ಅಭ್ಯಾಸದಲ್ಲಿ ಹೆಚ್ಚಾಗಿ ಆನಂದಿಸುತ್ತಾಳೆ, ಏಕೆಂದರೆ ಅವಳು ಅದರಲ್ಲಿ ಕ್ರಿಯಾಶೀಲವಾಗಿ ಒಳಗೂಡುತ್ತಾಳೆ. ಹೌದು, ಕುಟುಂಬ ಅಭ್ಯಾಸದ ಅವಧಿಗಳು ಹೆತ್ತವರಿಗೆ, ತಮ್ಮ ಮಕ್ಕಳ ಆಲೋಚನೆಯ ವಿಷಯದಲ್ಲಿ ಒಳನೋಟವನ್ನು ಒದಗಿಸುತ್ತವೆ.—ಜ್ಞಾನೋಕ್ತಿ 16:23; 20:5.
ಹೊಂದಿಕೊಳ್ಳುವವರಾಗಿರಿ ಹಾಗೂ ಪಟ್ಟುಹಿಡಿಯಿರಿ
ನಿಮ್ಮ ಕುಟುಂಬ ಅಭ್ಯಾಸದ ಸಮಯವಾಗುವಾಗ, ಒಂದು ಮಗು ಜಾಗೃತವಾಗಿದ್ದು, ಅಭಿರುಚಿಯುಳ್ಳದ್ದಾಗಿರುವಾಗ, ಅದೇ ಸಮಯದಲ್ಲಿ ಅಭ್ಯಾಸಕ್ಕೆ ಗಮನಕೊಡಲು ಹಾಗೂ ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಇನ್ನೊಂದು ಮಗುವನ್ನು ಪುಸಲಾಯಿಸಬೇಕಾಗಿರುವುದು ನಿಮ್ಮ ಅರಿವಿಗೆ ಬರಬಹುದು. ಒಬ್ಬ ಕ್ರೈಸ್ತ ತಾಯಿಯು ಹೇಳುವುದು: “ಕುಟುಂಬ ಜೀವನವೇ ಹೀಗೆ! ಒಬ್ಬ ಹೆತ್ತವರೋಪಾದಿ ಏನು ಮಾಡಬೇಕೆಂಬುದು ನಿಮಗೆ ತಿಳಿದಿದೆ. ಆದುದರಿಂದ ಕುಟುಂಬ ಅಭ್ಯಾಸವನ್ನು ನಡೆಸಲು ನೀವು ಪಟ್ಟುಹಿಡಿಯುವಾಗ, ಯೆಹೋವನು ಸಹಾಯ ಮಾಡುತ್ತಾನೆ ಮತ್ತು ಫಲಿತಾಂಶಗಳನ್ನು ತರುತ್ತಾನೆ.”
ಒಬ್ಬ ಎಳೆಯನ ಗಮನದ ವ್ಯಾಪ್ತಿಯು ಅವನ ವಯಸ್ಸಿಗನುಸಾರವಾಗಿ ಬಹಳ ವ್ಯತ್ಯಾಸಗೊಳ್ಳಬಹುದು. ವಿವೇಚನಾಶಕ್ತಿಯುಳ್ಳ ಹೆತ್ತವನು ಇದನ್ನು ಪರಿಗಣಿಸುತ್ತಾನೆ. ಒಬ್ಬ ದಂಪತಿಗಳಿಗೆ ಐವರು ಮಕ್ಕಳಿದ್ದಾರೆ. ಅವರು 6ರಿಂದ 20ರ ಪ್ರಾಯದವರಾಗಿದ್ದಾರೆ. ತಂದೆಯಾದ ಮೈಕಲ್ ಹೇಳುವುದು: “ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾಗಿ ಕಿರಿಯ ಮಗುವಿಗೆ ಮೊತ್ತಮೊದಲಾಗಿ ಅವಕಾಶವನ್ನು ಕೊಡಿರಿ. ತದನಂತರ ಹಿರಿಯ ಮಕ್ಕಳು ಹೆಚ್ಚಿನ ವಿವರಗಳನ್ನು ಅದಕ್ಕೆ ಕೂಡಿಸಲಿ ಮತ್ತು ಅವರು ತಯಾರಿಸಿರುವ ಅಂಶಗಳನ್ನು ತಿಳಿಯಪಡಿಸಲಿ.” ತಮ್ಮ ಮಕ್ಕಳೊಂದಿಗೆ ವಿವೇಚನಾಭರಿತವಾಗಿ ವ್ಯವಹರಿಸುವ ಈ ವಿಧವು, ಇತರರನ್ನು ಪರಿಗಣಿಸುವುದರ ಮೌಲ್ಯವನ್ನು ಕಲಿಸಲು ಹೆತ್ತವರನ್ನು ಶಕ್ತಗೊಳಿಸುತ್ತದೆ. “ನಮ್ಮ ಪುತ್ರರಲ್ಲಿ ಒಬ್ಬನು ಅರ್ಥಮಾಡಿಕೊಳ್ಳಬಹುದು” ಎಂದು ಮಾರ್ಟಿನ್ ಹೇಳುತ್ತಾನೆ, “ಆದರೆ ಆ ಅಂಶವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಇನ್ನೊಬ್ಬ ಮಗನಿಗೆ ಹೆಚ್ಚಿನ ಸಹಾಯದ ಅಗತ್ಯವಿದೆ. ಕ್ರೈಸ್ತ ತಾಳ್ಮೆಯನ್ನು ಹಾಗೂ ಆತ್ಮದ ಇನ್ನಿತರ ಫಲಗಳನ್ನು ಪ್ರದರ್ಶಿಸಲಿಕ್ಕಾಗಿ, ಅಭ್ಯಾಸದ ಅವಧಿಯು ಒಂದು ತರಬೇತಿಯ ಸ್ಥಳವಾಗಿ ಪರಿಣಮಿಸುತ್ತದೆ ಎಂಬುದು ನನ್ನ ಅಭಿಪ್ರಾಯ.”—ಗಲಾತ್ಯ 5:22, 23; ಫಿಲಿಪ್ಪಿ 2:4.
ನಿಮ್ಮ ಮಕ್ಕಳ ವ್ಯತ್ಯಾಸಮಯವಾದ ಸಾಮರ್ಥ್ಯಗಳು ಹಾಗೂ ಬೆಳವಣಿಗೆಯ ಮಟ್ಟಗಳಿಗೆ ಹೊಂದಿಕೊಳ್ಳಲು ಸಿದ್ಧರಾಗಿರಿ. ಈಗ ಹದಿಪ್ರಾಯದವರಾಗಿರುವ ಸೈಮನ್ ಹಾಗೂ ಮಾರ್ಕ್, ಎಳೆಯವರಾಗಿದ್ದಾಗ ತಮ್ಮ ಹೆತ್ತವರೊಂದಿಗೆ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ಅಭ್ಯಾಸಿಸುವುದರಲ್ಲಿ ನಿಜವಾಗಿಯೂ ಆನಂದಿಸಿದೆವೆಂದು ಕಂಡುಕೊಂಡರು. “ನಮ್ಮ ತಂದೆಯವರು, ಬೇರೆ ಬೇರೆ ಪಾತ್ರಗಳನ್ನು ನಾವು ಒಂದು ನಾಟಕದಂತೆಯೇ ಅಭಿನಯಿಸಿ ತೋರಿಸುವಂತೆ ಮಾಡುತ್ತಿದ್ದರು” ಎಂದು ಅವರು ಜ್ಞಾಪಿಸಿಕೊಳ್ಳುತ್ತಾರೆ. ನೆರೆಯವನಾದ ಸಮಾರ್ಯದವನ ದೃಷ್ಟಾಂತವನ್ನು ತನ್ನ ಪುತ್ರರೊಂದಿಗೆ ಅಭಿನಯಿಸಿದ್ದನ್ನು ಅವರ ತಂದೆ ಜ್ಞಾಪಿಸಿಕೊಳ್ಳುತ್ತಾರೆ. (ಲೂಕ 10:30-35) “ಅದು ವಾಸ್ತವಿಕವಾಗಿತ್ತು ಮತ್ತು ತುಂಬ ವಿನೋದಕರವಾಗಿತ್ತು.”
ಅನೇಕ ಮಕ್ಕಳು ಒಂದು ಕುಟುಂಬ ಅಭ್ಯಾಸದ ನಿಯತಕ್ರಮವನ್ನು ವಿರೋಧಿಸುತ್ತಾರೆ. ಯಾವಾಗ ಯೋಜಿಸಲ್ಪಟ್ಟಿದೆಯೋ ಆಗ ಅಭ್ಯಾಸವನ್ನು ನಡೆಸುವುದರಿಂದ ಇದು ಹೆತ್ತವರನ್ನು ತಡೆಯಬೇಕೊ? ಇಲ್ಲ, ಖಂಡಿತವಾಗಿಯೂ ತಡೆಯಬಾರದು. “ಮೂರ್ಖತನವು ಹುಡುಗನ [ಅಥವಾ, ಹುಡುಗಿಯ] ಮನಸ್ಸಿಗೆ ಸಹಜ” ಎಂದು ಜ್ಞಾನೋಕ್ತಿ 22:15 ಒಪ್ಪಿಕೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ ಅಪಕರ್ಷಣೆಗಳು ಅಭ್ಯಾಸದ ಅವಧಿಯನ್ನು ಭಂಗಗೊಳಿಸುವಂತೆ ತೋರಿದಾಗ, ಕುಟುಂಬ ಅಭ್ಯಾಸದ ನಿರ್ವಾಹಕಿಯೋಪಾದಿ ತಾನು ಯಶಸ್ವಿಯಾಗುತ್ತಿಲ್ಲ ಎಂದು ಏಕ ಹೆತ್ತವಳೊಬ್ಬಳು ಅಭಿಪ್ರಯಿಸಿದಳು. ಆದರೆ ಅವಳು ಪಟ್ಟುಹಿಡಿದಳು. ಈಗ ಅವಳ ಮಕ್ಕಳಿಗೆ ಅವಳ ಬಗ್ಗೆ ಅಪಾರ ಗೌರವವಿದೆ ಮತ್ತು ಒಂದು ಕ್ರಮವಾದ ಕುಟುಂಬ ಅಭ್ಯಾಸವನ್ನು ನಡೆಸುವುದರಲ್ಲಿ ಪಟ್ಟುಹಿಡಿಯುವ ಮೂಲಕ ಅವಳು ತೋರಿಸಿದ ಪ್ರೀತಿ ಹಾಗೂ ಚಿಂತೆಯನ್ನು ಅವರು ಅಮೂಲ್ಯವಾಗಿ ಪರಿಗಣಿಸಲಾರಂಭಿಸಿದ್ದಾರೆ.
‘ತಂದೆಯಿಲ್ಲದ’ ಹುಡುಗರಿಗೆ ಹಾಗೂ ಹುಡುಗಿಯರಿಗೆ ಸಹಾಯ ಮಾಡುವುದು
ಕ್ರೈಸ್ತ ಹಿರಿಯರು “ದೇವರ ಮಂದೆಯನ್ನು ಕಾಯ”ಬೇಕಾಗಿದೆ. (1 ಪೇತ್ರ 5:2, 3) ತಮ್ಮ ಸಭೆಗಳಲ್ಲಿರುವ ಕುಟುಂಬಗಳಿಗೆ ನಿಯತಕಾಲಿಕವಾಗಿ ಭೇಟಿ ನೀಡುವುದು, ತಮ್ಮ ಕ್ರೈಸ್ತ ಜವಾಬ್ದಾರಿಗಳಿಗೆ ಹೆಗಲುಕೊಡುವ ಹೆತ್ತವರನ್ನು ಶ್ಲಾಘಿಸಲು ಅವರಿಗೆ ಅವಕಾಶಗಳನ್ನು ಒದಗಿಸುತ್ತದೆ. ಏಕ ಹೆತ್ತವರ ಮಕ್ಕಳಿಗೆ ಕಲಿಸುವ ಜವಾಬ್ದಾರಿಯು ಯಾರಿಗಿದೆ? ಮಕ್ಕಳಿಗೆ ಬೋಧಿಸುವ ಜವಾಬ್ದಾರಿಯು ಹೆತ್ತವರ ಮೇಲಿರುತ್ತದೆ ಎಂಬುದನ್ನು ಎಂದಿಗೂ ಮರೆಯದಿರಿ.
ತಮ್ಮ ಜೊತೆಯಲ್ಲಿ ಇಲ್ಲದಿರುವ ಒಬ್ಬ ಹೆತ್ತವರ ಪಾತ್ರವನ್ನು ಹಿರಿಯರು ನಿರ್ವಹಿಸುವಲ್ಲಿ, ಏಳಸಾಧ್ಯವಿರುವಂತಹ ಸನ್ನಿವೇಶಗಳೊಂದಿಗೆ ರಾಜಿಯಾಗುವುದರಿಂದ ದೂರವಿರಲು, ಕ್ರೈಸ್ತ ಜಾಣತನವು ಅವರಿಗೆ ಸಹಾಯ ಮಾಡುವುದು. ಇಬ್ಬರು ಸಹೋದರರು ಒಬ್ಬ ಏಕ ಹೆತ್ತವಳಾಗಿರುವ ಕ್ರೈಸ್ತ ಸಹೋದರಿಯನ್ನು ಸಂದರ್ಶಿಸಲು ಶಕ್ತರಾಗಿರಬಹುದಾದರೂ, ಕುಟುಂಬ ಅಭ್ಯಾಸ ಏರ್ಪಾಡಿಗಾಗಿರುವ ಬೆಂಬಲದೋಪಾದಿ ಅವರು ಏನನ್ನು ಏರ್ಪಡಿಸುತ್ತಾರೋ ಅದರಲ್ಲಿ, ಎಲ್ಲ ಸಮಯಗಳಲ್ಲಿ ಅವರು ಜಾಗರೂಕರಾಗಿರುವರು. ಆಗಿಂದಾಗ್ಗೆ, ಹಿರಿಯರ ಸ್ವಂತ ಕುಟುಂಬ ಅಭ್ಯಾಸದಲ್ಲಿ ಜೊತೆಗೂಡುವಂತೆ ಮಕ್ಕಳನ್ನು (ಹಾಗೂ, ಅವರೊಂದಿಗೆ ಏಕ ಹೆತ್ತವರನ್ನು ಸಹ) ಆಮಂತ್ರಿಸುವುದು, ಭಕ್ತಿವೃದ್ಧಿಮಾಡುವಂತಹದ್ದೂ ಪ್ರಾಯೋಗಿಕವಾದದ್ದೂ ಆಗಿ ಪರಿಣಮಿಸಬಹುದು. ಹಾಗಿದ್ದರೂ, ಯೆಹೋವನು ನಮ್ಮ ಮಹಾ ಸ್ವರ್ಗೀಯ ತಂದೆಯಾಗಿದ್ದಾನೆ ಎಂಬುದನ್ನು ಎಂದಿಗೂ ಮರೆಯದಿರಿ. ತಾಯಿಯು ಕುಟುಂಬ ಅಭ್ಯಾಸವನ್ನು ಒಂಟಿಯಾಗಿಯೇ ಮಾಡುವುದಾದರೂ, ಅವಳು ತನ್ನ ಮಕ್ಕಳೊಂದಿಗೆ ಅಭ್ಯಾಸವನ್ನು ನಡೆಸುವಾಗ, ಅವಳಿಗೆ ಸಹಾಯ ಮಾಡಲಿಕ್ಕಾಗಿ ಹಾಗೂ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ಖಂಡಿತವಾಗಿಯೂ ಆತನು ಉಪಸ್ಥಿತನಿರುತ್ತಾನೆ.
ಯುವ ವ್ಯಕ್ತಿಯೊಬ್ಬನು ಆತ್ಮಿಕ ಮನೋಭಾವವುಳ್ಳವನಾಗಿದ್ದು, ಅವನ ಹೆತ್ತವರು ತಮ್ಮ ಆತ್ಮಿಕ ಜವಾಬ್ದಾರಿಗಳ ವಿಷಯದಲ್ಲಿ ಸ್ವಲ್ಪವೂ ಆಸಕ್ತಿಯನ್ನು ತೋರಿಸದಿರುವಲ್ಲಿ, ಅಂತಹ ಸನ್ನಿವೇಶದ ಕುರಿತಾಗಿ ಏನು? ಯೆಹೋವನ ನಂಬಿಗಸ್ತ ಸೇವಕರು ಎಂದಿಗೂ ಎದೆಗುಂದುವ ಅಗತ್ಯವಿಲ್ಲ. “ಗತಿಯಿಲ್ಲದವನು ತನ್ನನ್ನು [ಯೆಹೋವ ದೇವರೇ] ನಿನಗೇ ಒಪ್ಪಿಸುವನು; ದಿಕ್ಕಿಲ್ಲದವನಿಗೆ ನೀನೇ ದಿಕ್ಕು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 10:14) ಇದಕ್ಕೆ ಪ್ರತಿಯಾಗಿ, ಹೆತ್ತವರು ತಮ್ಮ ಮಕ್ಕಳ ಪರಾಮರಿಕೆ ಮಾಡುವಾಗ, ಅವರನ್ನು ಉತ್ತೇಜಿಸಲಿಕ್ಕಾಗಿ ಸಭೆಯಲ್ಲಿರುವ ಪ್ರೀತಿಪೂರ್ಣರಾದ ಹಿರಿಯರು ತಮ್ಮಿಂದಾದುದೆಲ್ಲವನ್ನೂ ಮಾಡುವರು. ಅವರು ಒಂದು ಕೌಟುಂಬಿಕ ಚರ್ಚೆಯನ್ನು ನಡೆಸುವಂತೆ ಸೂಚಿಸಬಹುದು ಮತ್ತು ಒಟ್ಟಿಗೆ ಅಭ್ಯಾಸಿಸುವುದು ಹೇಗೆ ಎಂಬುದರ ಕುರಿತು ಕೆಲವು ಪ್ರಾಯೋಗಿಕ ಸಲಹೆಗಳನ್ನು ಕೊಡಲಿಕ್ಕಾಗಿ ಆ ಚರ್ಚೆಗೆ ಹಾಜರಾಗಬಹುದು. ಹೆತ್ತವರ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುವುದಿಲ್ಲ ಎಂಬುದು ನಿಶ್ಚಯ. ಏಕೆಂದರೆ ಶಾಸ್ತ್ರೀಯವಾಗಿ ಆ ಜವಾಬ್ದಾರಿಯು ಹೆತ್ತವರ ಹೆಗಲುಗಳ ಮೇಲಿದೆ.
ಯಾರ ಹೆತ್ತವರು ಅವಿಶ್ವಾಸಿಗಳಾಗಿರುತ್ತಾರೋ ಅಂತಹ ಮಕ್ಕಳಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ. ಒಂದು ವೇಳೆ ನಿಮ್ಮ ಕುಟುಂಬ ಅಭ್ಯಾಸದಲ್ಲಿ ಅವರನ್ನು ಸಹ ಒಳಗೂಡಿಸುವುದು ಅವರ ಹೆತ್ತವರಿಗೆ ಅಂಗೀಕೃತವಾಗಿರುವಲ್ಲಿ, ಅದು ಪ್ರಯೋಜನಕರವಾದದ್ದಾಗಿ ಪರಿಣಮಿಸಬಹುದು. ಈಗ ದೊಡ್ಡವನಾಗಿದ್ದು, ತನ್ನದೇ ಆದ ಕುಟುಂಬವಿರುವ ರಾಬರ್ಟ್, ಕೇವಲ ಮೂರು ವರ್ಷ ಪ್ರಾಯದವನಾಗಿದ್ದಾಗ ತನ್ನ ಹೆತ್ತವರೊಂದಿಗೆ ಕ್ರೈಸ್ತ ಕೂಟಗಳಿಗೆ ಹಾಜರಾದನು. ಅವನ ಹೆತ್ತವರು ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಿದ ಬಳಿಕವೂ, ಆ ಕೂಟಗಳ ಕುರಿತಾದ ಸವಿನೆನಪುಗಳು ಅವನಿಗಿದ್ದವು. ಅವನು ಹತ್ತು ವರ್ಷದವನಾಗಿದ್ದಾಗ, ತನ್ನನ್ನು ಕೂಟಗಳಿಗೆ ಜೊತೆಯಲ್ಲಿ ಕರೆದುಕೊಂಡ ಹೋದ ಸಾಕ್ಷಿ ಹುಡುಗನೊಬ್ಬನನ್ನು ಅವನು ಭೇಟಿಯಾದನು. ಆ ಸಾಕ್ಷಿ ಹುಡುಗನ ಹೆತ್ತವರು ರಾಬರ್ಟ್ನನ್ನು, ಒಬ್ಬ ಆತ್ಮಿಕ ಅನಾಥ ಹುಡುಗನೋಪಾದಿ ತಮ್ಮ ಆರೈಕೆಯ ಕೆಳಗೆ ಸಂತೋಷದಿಂದ ಬರಮಾಡಿಕೊಂಡರು ಮತ್ತು ತದನಂತರ ಅವನೊಂದಿಗೆ ಅಭ್ಯಾಸಿಸಿದರು. ಅವರ ಪ್ರೀತಿಪರ ಆರೈಕೆಯ ಫಲಿತಾಂಶವಾಗಿ, ಅವನು ತೀವ್ರವಾದ ಪ್ರಗತಿಯನ್ನು ಮಾಡಿದನು ಮತ್ತು ಈಗ ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಮಾಡುವುದರಲ್ಲಿ ಆನಂದಿಸುತ್ತಿದ್ದಾನೆ.
ಹೆತ್ತವರು ತಮ್ಮ ಮಕ್ಕಳ ಪ್ರಗತಿಯನ್ನು ವಿರೋಧಿಸುವಾಗಲೂ, ಮಕ್ಕಳು ಒಂಟಿಯಾಗಿರುವುದಿಲ್ಲ. ಯೆಹೋವನು ಒಬ್ಬ ನಂಬಿಗಸ್ತ ಸ್ವರ್ಗೀಯ ತಂದೆಯಾಗಿ ಉಳಿಯುತ್ತಾನೆ. “ಪರಿಶುದ್ಧವಾಸಸ್ಥಾನದಲ್ಲಿರುವ ದೇವರು . . . ತಂದೆಯಿಲ್ಲದ ಹುಡುಗರ ತಂದೆಯಾಗಿದ್ದಾನೆ” ಎಂದು ಕೀರ್ತನೆ 68:5 (NW) ಪ್ರಕಟಿಸುತ್ತದೆ. ತಾವು ಪ್ರಾರ್ಥನೆಯಲ್ಲಿ ಆತನ ಕಡೆಗೆ ತಿರುಗಸಾಧ್ಯವಿದೆ, ಮತ್ತು ಆತನು ತಮ್ಮನ್ನು ಪೋಷಿಸುತ್ತಾನೆ ಎಂಬುದು, ಆತ್ಮಿಕವಾಗಿ ತಂದೆಯಿಲ್ಲದವರಾದ ಹುಡುಗರು ಹಾಗೂ ಹುಡುಗಿಯರಿಗೆ ತಿಳಿದಿದೆ. (ಕೀರ್ತನೆ 55:22; 146:9) ಯೆಹೋವನ ಮಾತೃಸದೃಶ ಸಂಸ್ಥೆಯು, ತನ್ನ ಪ್ರಕಾಶನಗಳ ಮೂಲಕ ಹಾಗೂ ಲೋಕವ್ಯಾಪಕವಾಗಿರುವ 85,000ಕ್ಕಿಂತಲೂ ಹೆಚ್ಚಿನ ಕ್ರೈಸ್ತ ಸಭೆಗಳ ಕೂಟಗಳ ಮೂಲಕ ಬಡಿಸಲ್ಪಡುವ, ಆನಂದದಾಯಕ ಆತ್ಮಿಕ ಊಟಗಳನ್ನು ಸಿದ್ಧಪಡಿಸಲಿಕ್ಕಾಗಿರುವ ತನ್ನ ಜವಾಬ್ದಾರಿಯನ್ನು ಶ್ರದ್ಧಾಪೂರ್ವಕವಾಗಿ ಪೂರೈಸುತ್ತದೆ. ಹೀಗೆ, ನಮ್ಮ ತಂದೆಯಾದ ಯೆಹೋವನಿಂದ, ಹಾಗೂ ಆತನ ಮಾತೃಸದೃಶ ಸಂಸ್ಥೆಯಿಂದ ಕೊಡಲ್ಪಡುವ ಆತ್ಮಿಕ ಸಹಾಯದಿಂದ, “ತಂದೆಯಿಲ್ಲದ” ಮಕ್ಕಳು ಸಹ ಸ್ವಲ್ಪ ಮಟ್ಟಿಗೆ ಬೈಬಲ್ ಅಭ್ಯಾಸದಲ್ಲಿ ಆನಂದವನ್ನು ಪಡೆದುಕೊಳ್ಳುವರು.
ತಮ್ಮ ಮಕ್ಕಳೊಂದಿಗೆ ಕ್ರಮವಾದ ಕುಟುಂಬ ಬೈಬಲ್ ಅಭ್ಯಾಸಗಳನ್ನು ನಡಿಸುವ ಕ್ರೈಸ್ತ ಹೆತ್ತವರು, ಪ್ರಶಂಸಾರ್ಹರು. ಯೆಹೋವನ ಮಾರ್ಗಗಳಲ್ಲಿ ತಮ್ಮ ಎಳೆಯರನ್ನು ತರಬೇತುಗೊಳಿಸುವುದರಲ್ಲಿ ಪಟ್ಟುಹಿಡಿಯುವ ಏಕ ಹೆತ್ತವರು, ವಿಶೇಷ ಪರಿಗಣನೆಗೆ ಮತ್ತು ತಮ್ಮ ಪ್ರಯತ್ನಗಳಿಗಾಗಿ ಮೆಚ್ಚುಗೆಗೆ ಅರ್ಹರಾಗಿದ್ದಾರೆ. (ಜ್ಞಾನೋಕ್ತಿ 22:6) ಆತ್ಮಿಕವಾಗಿ ತಂದೆಯಿಲ್ಲದ ಮಕ್ಕಳಿಗಾಗಿ ಚಿಂತೆಯನ್ನು ತೋರಿಸುವವರಿಗೆ, ಇದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಆನಂದವನ್ನು ಉಂಟುಮಾಡುತ್ತದೆ ಎಂಬುದು ತಿಳಿದಿದೆ. ಕುಟುಂಬದ ಆತ್ಮಿಕ ಆವಶ್ಯಕತೆಗಳ ಪರಾಮರಿಕೆಮಾಡುವುದು, ಒಂದು ದೊಡ್ಡ ಜವಾಬ್ದಾರಿಯಾಗಿದೆ. ಆದರೆ ‘ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರಿ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವಿರಿ.’—ಗಲಾತ್ಯ 6:9.
[ಪಾದಟಿಪ್ಪಣಿ]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 23 ರಲ್ಲಿರುವ ಚಿತ್ರ]
ಕುಟುಂಬ ಅಭ್ಯಾಸವು, ಎಳೆಯ ಸದಸ್ಯರು ತಮ್ಮ ಚಿಂತೆಗಳನ್ನು ತಮ್ಮ ಹೆತ್ತವರೊಂದಿಗೆ ಹಂಚಿಕೊಳ್ಳಲು ಒಂದು ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ
[ಪುಟ 20 ರಲ್ಲಿರುವ ಚಿತ್ರ]
Harper’s