ನಂಬಿಕೆಯಿಂದಲೇ ಬಾರಾಕನು ಒಂದು ಪರಾಕ್ರಮಿ ಸೇನೆಯನ್ನು ಸಂಹರಿಸಿದನು
ವಿರೋಧಿ ಸೈನಿಕರ ಒಂದು ಸೇನೆಗೆ ಮುಖಾಮುಖಿಯಾಗಿ ನೀವು ನಿಂತಿರುವುದನ್ನು ಕಲ್ಪಿಸಿಕೊಳ್ಳಿ. ಅವರು, ಮಿಲಿಟರಿ ಸಾಮಾಗ್ರಿಗಳ ಅತ್ಯಾಧುನಿಕ ಶಸ್ತ್ರಗಳಿಂದ ಸಜ್ಜಿತರಾಗಿದ್ದಾರೆ ಮತ್ತು ಅದನ್ನು ಉಪಯೋಗಿಸಲು ಸಿದ್ಧರಾಗಿ ನಿಂತಿದ್ದಾರೆ. ಅವರ ಮುಂದೆ ನೀವು ಮತ್ತು ನಿಮ್ಮ ಸಂಗಾತಿಗಳು ಕಾರ್ಯತಃ ನಿಸ್ಸಹಾಯಕರಾಗಿ ಇದ್ದೀರಿ.
ಇಸ್ರಾಯೇಲ್ಯರ ನ್ಯಾಯಸ್ಥಾಪಕರ ಸಮಯದಲ್ಲಿ, ಬಾರಾಕ್, ದೆಬೋರಾ, ಮತ್ತು 10,000 ಮಂದಿ ಜೊತೆ ಇಸ್ರಾಯೇಲ್ಯರಿಗೆ ಇದೇ ರೀತಿಯ ಅನುಭವವಾಯಿತು. ವಿರೋಧಿಪಡೆಗಳು, ಮಿಲಿಟರಿ ಸೇನಾಪತಿಯಾದ ಸೀಸೆರನಿಂದ ನಡೆಸಲ್ಪಟ್ಟ ಕಾನಾನ್ಯರಾಗಿದ್ದರು. ಅವರ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಮಾರಕವಾದ ಕಬ್ಬಿಣದ ಕತ್ತಿಯಲಗುಗಳುಳ್ಳ ಚಕ್ರಗಳ ರಥಗಳು ಸೇರಿದ್ದವು. ಈ ಘಟನೆಯು ನಡೆದ ಸ್ಥಳವು, ತಾಬೋರ್ ಬೆಟ್ಟ ಮತ್ತು ಕೀಷೋನ್ ಹಳ್ಳವಾಗಿತ್ತು. ಅಲ್ಲಿ ಏನು ಸಂಭವಿಸಿತೋ ಅದು ಬಾರಾಕನನ್ನು ಒಬ್ಬ ಆದರ್ಶಪ್ರಾಯ ನಂಬಿಕೆಯ ಪುರುಷನನ್ನಾಗಿ ಗುರುತಿಸುತ್ತದೆ. ಈ ಎದುರುಗೊಳ್ಳುವಿಕೆಗೆ ನಡೆಸಿದ ಘಟನೆಗಳನ್ನು ಪರಿಗಣಿಸಿರಿ.
ಇಸ್ರಾಯೇಲ್ಯರು ಯೆಹೋವನಿಗೆ ಮೊರೆಯಿಡುತ್ತಾರೆ
ನ್ಯಾಯಸ್ಥಾಪಕರ ಪುಸ್ತಕವು, ಇಸ್ರಾಯೇಲ್ಯರು ಪುನಃ ಪುನಃ ಶುದ್ಧಾರಾಧನೆಯನ್ನು ತ್ಯಜಿಸಿದ ಮತ್ತು ಆ ಕೃತ್ಯಗಳಿಂದಾಗಿ ಎದುರಿಸಿದ ವಿಪತ್ಕಾರಕ ಪರಿಣಾಮಗಳ ಕುರಿತು ತಿಳಿಸುತ್ತದೆ. ಪ್ರತಿಯೊಂದು ಸಂದರ್ಭದಲ್ಲಿಯೂ, ದೇವರ ಕೃಪೆಗಾಗಿ ಮಾಡಲ್ಪಟ್ಟ ಯಥಾರ್ಥವಾದ ಭಿನ್ನಹದ ನಂತರ ಒಬ್ಬ ರಕ್ಷಕನನ್ನು ದೇವರಿಂದ ನೇಮಿಸಲಾಗುತ್ತಿತ್ತು. ಆಮೇಲೆ ಅವರಿಗೆ ಬಿಡುಗಡೆಯಾಗುತ್ತಿತ್ತು, ಮತ್ತು ಸಮಯಾನಂತರ ಇಸ್ರಾಯೇಲ್ಯರು ಪುನಃ ದಂಗೆಯೇಳುತ್ತಿದ್ದರು. ಅವರ ಈ ನಮೂನೆಗೆ ತಕ್ಕಂತೆಯೇ, ‘ಏಹೂದನು [ಮೋವಾಬ್ಯರ ದಬ್ಬಾಳಿಕೆಯಿಂದ ರಕ್ಷಿಸಿದ ನ್ಯಾಯಸ್ಥಾಪಕನು] ಮರಣಹೊಂದಿದ ನಂತರ ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.’ ವಾಸ್ತವದಲ್ಲಿ, “[ಅವರು] ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು.” ಪರಿಣಾಮವೇನಾಯಿತು? “ಆತನು [ಯೆಹೋವನು] ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ಮಾರಿಬಿಟ್ಟನು. . . . ಸೀಸೆರನು ಅವನ ಸೇನಾಪತಿಯಾಗಿದ್ದನು. ಒಂಭೈನೂರು ಕಬ್ಬಿಣದ ರಥಗಳುಳ್ಳ ಇವನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷಗಳ ತನಕ ಬಲವಾಗಿ ಬಾಧಿಸುತ್ತಿರಲು ಅವರು ಯೆಹೋವನಿಗೆ ಮೊರೆಯಿಟ್ಟರು.”—ನ್ಯಾಯಸ್ಥಾಪಕರು 4:1-3; 5:8.
ಆಗ ಇಸ್ರಾಯೇಲಿನಲ್ಲಿನ ಜೀವನದ ಕುರಿತು ಶಾಸ್ತ್ರವಚನಗಳು ತಿಳಿಸುವುದು: “[ಆ ದಿನಗಳಲ್ಲಿ] ರಾಜಮಾರ್ಗಗಳಲ್ಲಿ ಸಂಚಾರವು ನಿಂತು ಹೋಯಿತು; ಪ್ರಯಾಣಿಕರು ಸೀಳುದಾರಿಹಿಡಿದು ಹೋಗುವರು. . . . ಇಸ್ರಾಯೇಲ್ ಗ್ರಾಮಗಳು ಹಾಳು ಬಿದ್ದಿದ್ದವು.” (ನ್ಯಾಯಸ್ಥಾಪಕರು 5:6, 7) ಲೂಟಿಮಾಡುತ್ತಿದ್ದ ಸಾರಥಿಗಳ ಬಗ್ಗೆ ಇಸ್ರಾಯೇಲ್ಯರು ಭಯಭ್ರಾಂತರಾಗಿದ್ದರು. “ಇಸ್ರಾಯೇಲಿನಲ್ಲಿ, ಸಾರ್ವಜನಿಕರ ಜೀವನವು ಭಯದಿಂದ ತುಂಬಿತ್ತು. ಇಡೀ ಸಮಾಜವೇ ಭಯದಿಂದ ಕಂಗಾಲಾಗಿ, ಸಹಾಯಶೂನ್ಯ ಸ್ಥಿತಿಯಲ್ಲಿದ್ದಂತೆ ತೋರಿತು,” ಎಂಬುದಾಗಿ ಒಬ್ಬ ವಿದ್ವಾಂಸರು ತಿಳಿಸುತ್ತಾರೆ. ಆದುದರಿಂದ ಮುಂಚೆ ಅನೇಕಬಾರಿ ಅವರು ಮಾಡಿದಂತೆಯೇ, ಕುಗ್ಗಿಹೋಗಿದ್ದ ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.
ಯೆಹೋವನು ಒಬ್ಬ ನಾಯಕನನ್ನು ನೇಮಿಸುತ್ತಾನೆ
ಕಾನಾನ್ಯರ ದಬ್ಬಾಳಿಕೆಯು, ಇಸ್ರಾಯೇಲ್ಯರಿಗೆ ರಾಷ್ಟ್ರೀಯ ಬಿಕ್ಕಟ್ಟನ್ನು ತಂದಿತು. ದೇವರು ತನ್ನ ನ್ಯಾಯತೀರ್ಪುಗಳನ್ನು ಮತ್ತು ಸೂಚನೆಗಳನ್ನು ತಿಳಿಯಪಡಿಸಲು ಪ್ರವಾದಿನಿಯಾದ ದೆಬೋರಳನ್ನು ಉಪಯೋಗಿಸಿದನು. ಹೀಗೆ ಯೆಹೋವನು ಅವಳಿಗೆ ಇಸ್ರಾಯೇಲ್ಯರಲ್ಲಿ ಒಬ್ಬ ಸಾಂಕೇತಿಕ ತಾಯಿಯಂತೆ ಕ್ರಿಯೆಗೈಯುವ ಸುಯೋಗವನ್ನು ನೀಡಿದನು.—ನ್ಯಾಯಸ್ಥಾಪಕರು 4:4; 5:7.
ದೆಬೋರಳು ಬಾರಾಕನಿಗೆ ಕರೇಕಳುಹಿಸಿ, ಅವನಿಗಂದದ್ದು: “ನಿಶ್ಚಯವಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ನಿನಗೆ—ಎದ್ದು ನಫ್ತಾಲಿ ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು; ನಾನು ಯಾಬೀನನ ಸೇನಾಪತಿಯಾದ ಸೀಸೆರನನ್ನೂ ಅವನ ಸೈನ್ಯ ರಥಗಳನ್ನೂ ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು ಎಂದು ಆಜ್ಞಾಪಿಸಿದ್ದಾನೆ.” (ನ್ಯಾಯಸ್ಥಾಪಕರು 4:6, 7) “ನಿಶ್ಚಯವಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ನಿನಗೆ . . . ಆಜ್ಞಾಪಿಸಿದ್ದಾನೆ” ಎಂದು ಹೇಳುವ ಮೂಲಕ, ಬಾರಾಕನ ಮೇಲೆ ಯಾವುದೇ ವೈಯಕ್ತಿಕ ಅಧಿಕಾರ ತನಗಿಲ್ಲ ಎಂಬುದನ್ನು ದೆಬೋರಳು ಸ್ಪಷ್ಟಪಡಿಸಿದಳು. ಅವಳು ಕೇವಲ, ದೈವಿಕ ಆಜ್ಞೆಯು ತಲಪಿಸಲ್ಪಡುವ ಒಂದು ಮಾಧ್ಯಮವಾಗಿ ಕಾರ್ಯವೆಸಗಿದಳು. ಇದಕ್ಕೆ ಬಾರಾಕನು ಹೇಗೆ ಪ್ರತಿಕ್ರಿಯಿಸಿದನು?
“ನೀನು ನನ್ನ ಸಂಗಡ ಬರುವದಾದರೆ ಹೋಗುವೆನು; ಇಲ್ಲವಾದರೆ ಹೋಗುವದಿಲ್ಲ” ಎಂದು ಬಾರಾಕನು ಹೇಳಿದನು. (ನ್ಯಾಯಸ್ಥಾಪಕರು 4:8) ದೇವದತ್ತ ಜವಾಬ್ದಾರಿಯನ್ನು ಸ್ವೀಕರಿಸಲು ಬಾರಾಕನು ಏಕೆ ಹಿಂಜರಿದನು? ಅವನು ಒಬ್ಬ ಹೇಡಿಯ ರೀತಿಯಲ್ಲಿ ಕ್ರಿಯೆಗೈಯುತ್ತಿದ್ದನೋ? ದೇವರ ವಾಗ್ದಾನಗಳಲ್ಲಿ ಅವನಿಗೆ ಭರವಸೆಯಿರಲಿಲ್ಲವೊ? ಹಾಗಲ್ಲ. ಬಾರಾಕನು ಆ ನೇಮಕವನ್ನು ನಿರಾಕರಿಸಲಿಲ್ಲ ಅಥವಾ ಯೆಹೋವನಿಗೆ ಅವಿಧೇಯನಾಗಲೂ ಇಲ್ಲ. ಬದಲಾಗಿ, ಅವನ ಈ ಪ್ರತಿಕ್ರಿಯೆಯು, ದೇವರ ಆಜ್ಞೆಯನ್ನು ಸ್ವತಃ ಒಬ್ಬನೇ ಪೂರೈಸಲು ತಾನು ಶಕ್ತನಾಗಿಲ್ಲ ಎಂಬ ಭಾವನೆಗಳು ಅವನಿಗಿದ್ದವೆಂದು ತೋರಿಸುತ್ತದೆ. ದೇವರ ಪ್ರತಿನಿಧಿಯ ಉಪಸ್ಥಿತಿಯು, ದೈವಿಕ ಮಾರ್ಗದರ್ಶನ ಸಿಗುವುದನ್ನು ಖಚಿತಪಡಿಸಲಿತ್ತು ಮತ್ತು ಅವನಲ್ಲಿ ಹಾಗೂ ಅವನ ಜನರಲ್ಲಿ ದೃಢಭರವಸೆಯನ್ನು ತುಂಬಲಿತ್ತು. ಆದುದರಿಂದ, ಬಾರಾಕನು ಹಾಕಿದ ಷರತ್ತು ಬಲಹೀನತೆಯನ್ನು ಸೂಚಿಸದೆ, ದೃಢವಾದ ನಂಬಿಕೆಯನ್ನು ಸೂಚಿಸುತ್ತದೆ.
ಬಾರಾಕನ ಪ್ರತಿಕ್ರಿಯೆಯನ್ನು ಮೋಶೆ, ಗಿದ್ಯೋನ್, ಮತ್ತು ಯೆರೆಮೀಯನ ಪ್ರತಿಕ್ರಿಯೆಗೆ ಹೋಲಿಸಸಾಧ್ಯವಿದೆ. ಈ ಪುರುಷರಿಗೂ ದೇವದತ್ತ ನೇಮಕಗಳನ್ನು ಪೂರೈಸಲು ತಮಗಿರುವ ಸಾಮರ್ಥ್ಯದ ಮೇಲೆ ಭರವಸೆಯಿರಲಿಲ್ಲ. ಆದರೆ ಈ ಕಾರಣಕ್ಕಾಗಿ ಅವರ ನಂಬಿಕೆಯಲ್ಲಿ ಕೊರತೆಯಿತ್ತು ಎಂದು ಪರಿಗಣಿಸಲ್ಪಡಲಿಲ್ಲ. (ವಿಮೋಚನಕಾಂಡ 3:11-4:17; 33:12-17; ನ್ಯಾಯಸ್ಥಾಪಕರು 6:11-22, 36-40; ಯೆರೆಮೀಯ 1:4-10) ದೆಬೋರಳ ಮನೋಭಾವದ ಕುರಿತು ಏನು ಹೇಳಬಲ್ಲೆವು? ಅವಳು ವಿಷಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸಲಿಲ್ಲ. ಬದಲಾಗಿ, ಅವಳು ಯೆಹೋವನ ನಮ್ರ ಸೇವಕಿಯಾಗಿ ಉಳಿದಳು. “ನಾನು ಹೇಗೂ ನಿನ್ನ ಸಂಗಡ ಬರುವೆನು,” ಎಂದು ಅವಳು ಬಾರಾಕನಿಗೆ ಹೇಳಿದಳು. (ನ್ಯಾಯಸ್ಥಾಪಕರು 4:9) ಹೆಚ್ಚು ಸುರಕ್ಷಿತ ಸ್ಥಳವಾದ ತನ್ನ ಮನೆಯನ್ನು ಬಿಟ್ಟು, ಸಂಭವಿಸಲಿದ್ದ ಕದನಕ್ಕಾಗಿ ಬಾರಾಕನೊಂದಿಗೆ ಹೋಗಲು ಅವಳು ಸಿದ್ಧಳಿದ್ದಳು. ದೆಬೋರಳು ಸಹ ನಂಬಿಕೆ ಮತ್ತು ಧೈರ್ಯದ ಒಂದು ಉತ್ತಮ ಮಾದರಿಯನ್ನಿಟ್ಟಳು.
ನಂಬಿಕೆಯಿಂದ ಅವರು ಬಾರಾಕನನ್ನು ಹಿಂಬಾಲಿಸಿದರು
ಇಸ್ರಾಯೇಲ್ ಪಡೆಗಳು ಸಂಧಿಸಿದಂಥ ಸ್ಥಳವು ಪ್ರಖ್ಯಾತ ಬೆಟ್ಟವಾದ ತಾಬೋರ್ ಆಗಿತ್ತು. ಇದೊಂದು ಸೂಕ್ತ ಸ್ಥಳವಾಗಿತ್ತು. ಅಲ್ಲಿಯೇ ಸಮೀಪದಲ್ಲಿ ವಾಸಿಸುತ್ತಿದ್ದ ನಫ್ತಾಲಿ ಮತ್ತು ಜೆಬುಲೂನ್ ಕುಲಗಳು ಸಂಧಿಸಲಿಕ್ಕಾಗಿ ಇದೊಂದು ನೈಸರ್ಗಿಕವಾಗಿ ಸೂಕ್ತ ಸ್ಥಳವಾಗಿತ್ತು. ಆದುದರಿಂದ, ದೇವರು ಆಜ್ಞಾಪಿಸಿದಂತೆ ಹತ್ತು ಸಾವಿರ ಸ್ವಯಂಸೇವಕರು ಮತ್ತು ದೆಬೋರಳು ಬಾರಾಕನನ್ನು ಹಿಂಬಾಲಿಸಿ ಈ ಬೆಟ್ಟಕ್ಕೆ ಹೋದರು.
ಬಾರಾಕನೊಂದಿಗೆ ಜೊತೆಗೂಡಿದ ಎಲ್ಲರಿಗೂ ನಂಬಿಕೆಯ ಅಗತ್ಯವಿತ್ತು. ಕಾನಾನ್ಯರನ್ನು ಬಾರಾಕನ ಕೈಗೆ ಒಪ್ಪಿಸಿಕೊಡುತ್ತೇನೆಂದು ಯೆಹೋವನು ಅವನಿಗೆ ವಾಗ್ದಾನಿಸಿದ್ದನಾದರೂ ಇಸ್ರಾಯೇಲ್ಯರ ಬಳಿ ಯಾವ ಆಯುದಗಳಿದ್ದವು? ನ್ಯಾಯಸ್ಥಾಪಕರು 5:8 ತಿಳಿಸುವುದು: “ಇಸ್ರಾಯೇಲ್ಯರ ನಾಲ್ವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳು ಇದ್ದಿಲ್ಲ.” ಇಸ್ರಾಯೇಲ್ಯರು ತೀರಾ ಕಡಿಮೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಒಂದುವೇಳೆ ಅವರ ಬಳಿ ಗುರಾಣಿ ಬರ್ಜಿಗಳಿರುತ್ತಿದ್ದರೂ, ಅದು ಕಬ್ಬಿಣದ ಕತ್ತಿಯಲಗುಗಳನ್ನು ಹೊಂದಿದ್ದ ಯುದ್ಧರಥಗಳ ಮುಂದೆ ಅಲ್ಪವೇ ಸರಿ. ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನವು ಸೀಸೆರನಿಗೆ ಮುಟ್ಟಿದೊಡನೆ, ಅವನು ತನ್ನ ಎಲ್ಲಾ ರಥಗಳನ್ನೂ ಸೈನ್ಯವನ್ನೂ ತೆಗೆದುಕೊಂಡು ಕೀಷೋನ್ ಹಳ್ಳಕ್ಕೆ ಬಂದನು. (ನ್ಯಾಯಸ್ಥಾಪಕರು 4:12, 13) ಆದರೆ ತಾನು ಸರ್ವಶಕ್ತ ದೇವರ ವಿರುದ್ಧ ಹೋರಾಡುತ್ತಿದ್ದೇನೆಂಬದನ್ನು ಮಾತ್ರ ಸೀಸೆರನು ಗ್ರಹಿಸಲು ತಪ್ಪಿಹೋದನು.
ಬಾರಾಕನು ಸೀಸೆರನ ಸೈನ್ಯವನ್ನು ಓಡಿಸಿಬಿಟ್ಟನು
ಎದುರುಬದುರಾಗಿ ಸಂಧಿಸುವ ಸಮಯ ಬಂದಾಗ, ದೆಬೋರಳು ಬಾರಾಕನಿಗೆ ಹೇಳಿದ್ದು: “ಏಳು, ಯೆಹೋವನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನವು ಇದೇ; ನಿಶ್ಚಯವಾಗಿ ಆತನು ತಾನೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವನು.” ಬಾರಾಕನು ಮತ್ತು ಅವನ ಜನರು ತಾಬೋರ್ ಬೆಟ್ಟದಿಂದ ಕೀಷೋನ್ ಹಳ್ಳಕ್ಕೆ ಇಳಿದುಹೋಗಬೇಕಿತ್ತು ಮತ್ತು ಇದರಿಂದಾಗಿ, ಈಗಾಗಲೇ ಹಳ್ಳದಲ್ಲಿ ಅವರಿಗಾಗಿ ಕಾಯುತ್ತಿದ್ದ ಸೀಸೆರನ ರಥಗಳಿಗೆ ವೈರಿಗಳನ್ನು ಹತಿಸಲು ಹೆಚ್ಚು ಸುಲಭವಾಗುತ್ತಿತ್ತು. ಒಂದುವೇಳೆ ಬಾರಾಕನ ಸೈನ್ಯದಲ್ಲಿ ನೀವಿರುತ್ತಿದ್ದಲ್ಲಿ ನಿಮಗೆ ಹೇಗನಿಸುತ್ತಿತ್ತು? ಈ ಮಾರ್ಗದರ್ಶನವು ಯೆಹೋವನಿಂದ ಬಂದಿದೆ ಎಂಬದನ್ನು ನೆನಪಿನಲ್ಲಿಟ್ಟುಕೊಂಡು, ಅದಕ್ಕೆ ನೀವು ಪೂರ್ಣ ವಿಧೇಯತೆಯನ್ನು ತೋರಿಸುತ್ತಿದ್ದಿರೋ? ಬಾರಾಕನು ಮತ್ತು ಅವನ ಹತ್ತು ಸಾವಿರ ಜನರು ವಿಧೇಯರಾದರು. “ಯೆಹೋವನು ಸೀಸೆರನನ್ನೂ ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಪಡಿಸಿ ಕತ್ತಿಗೆ ಬಲಿಕೊಟ್ಟನು.”—ನ್ಯಾಯಸ್ಥಾಪಕರು 4:14, 15.
ಯೆಹೋವನ ಸಹಾಯದಿಂದ, ಬಾರಾಕನು ಸೀಸೆರನ ಸೈನ್ಯವನ್ನು ಓಡಿಸಿದನು. ಕದನದ ವೃತ್ತಾಂತವು, ಅಲ್ಲಿ ಸಂಭವಿಸಿರಬಹುದಾದ ಎಲ್ಲಾ ವಿಷಯಗಳನ್ನು ವಿವರಿಸುವುದಿಲ್ಲ. ಹಾಗಿದ್ದರೂ, ಬಾರಾಕನ ಮತ್ತು ದೆಬೋರಳ ವಿಜಯಗೀತೆಯು, “ಆಕಾಶದಿಂದ ಹನಿ ಬಿದ್ದಿತು; ಮೇಘಮಂಡಲವು ಮಳೆಗರೆಯಿತು” ಎಂದು ಹೇಳುತ್ತದೆ. ಒಂದು ಭಾರಿ ಮಳೆಯು ಸೀಸೆರನ ಯುದ್ಧರಥವು ಕೆಸರಿನಲ್ಲಿ ಹೂತುಹೋಗುವಂತೆ ಮಾಡಿರುವ ಸಾಧ್ಯತೆ ಇದೆ, ಮತ್ತು ಹೀಗೆ ಬಾರಾಕನಿಗೆ ವಿಜಯವು ದೊರಕಿತು. ಕಾನಾನ್ಯರ ಮುಖ್ಯ ರಕ್ಷಣಾ ಶಸ್ತ್ರವಾದ ರಥಗಳೇ ಅವರಿಗೆ ಅಡ್ಡಿಯಾಯಿತು. ಸೀಸೆರನ ಜನರ ಶವಗಳನ್ನೊ “ಕೀಷೋನ್ ಹೊಳೆಯು . . . ಬಡಕೊಂಡು ಹೋಯಿತು” ಎಂದು ಆ ಗೀತೆಯು ಹೇಳುತ್ತದೆ.—ನ್ಯಾಯಸ್ಥಾಪಕರು 5:4, 21.
ಈ ಸನ್ನಿವೇಶವು ನಂಬಲರ್ಹವಾಗಿದೆಯೋ? ಕೀಷೋನ್ ಹೊಳೆಯು, ಸಾಮಾನ್ಯವಾಗಿ ಸ್ವಲ್ಪವೇ ನೀರು ಹರಿಯುತ್ತಿರುವ ಒಂದು ತೊರೆಯ ತಳವಾಗಿದೆ. ಬಿರುಮಳೆಗಳು ಇಲ್ಲವೆ ದೀರ್ಘಕಾಲದ ಮಳೆಗಳ ನಂತರ ಇಂಥ ತೊರೆಗಳು ಕ್ಷಣ ಮಾತ್ರದಲ್ಲಿಯೇ ತುಂಬಿಹರಿಯುತ್ತಾ, ರಭಸವಾಗಿ ಮತ್ತು ಭಯಾನಕವಾಗಿ ಹರಿಯುವ ಪ್ರವಾಹಗಳಾಗುತ್ತವೆ. ಒಂದನೇ ಲೋಕಯುದ್ಧದ ಸಮಯದಲ್ಲಿ, ಇದೇ ಸ್ಥಳದಲ್ಲಿರುವ ಜೇಡಿಮಣ್ಣಿನ ಮೇಲೆ ಸುರಿದ ಕೇವಲ 15 ನಿಮಿಷಗಳ ಮಳೆಯು ಎಲ್ಲಾ ಅಶ್ವಸೈನ್ಯಗಳ ಕಾರ್ಯಾಚರಣೆಗಳನ್ನು ಕೆಡಿಸಿದವು ಎಂದು ಹೇಳಲಾಗಿದೆ. ನೆಪೋಲಿಯನ್ ಮತ್ತು ತುರ್ಕರ ನಡುವೆ 1799, ಏಪ್ರಿಲ್ 16ರಂದು ನಡೆದ ಕದನದ ವೃತ್ತಾಂತಗಳು ವರದಿಸುವುದೇನೆಂದರೆ, “ತುಂಬಿಹರಿಯುತ್ತಿದ್ದ ಕೀಷೋನ್ ಹಳ್ಳದಿಂದಾಗಿ ಮುಳುಗಿಹೋಗಿದ್ದ ಬಯಲಿನ ಒಂದು ಭಾಗವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಅನೇಕ ತುರ್ಕರು ಮುಳುಗಿ ಸತ್ತರು.”
ಯೆಹೂದಿ ಇತಿಹಾಸಗಾರನಾದ ಫ್ಲೇವೀಯಸ್ ಜೋಸಿಫಸ್ ಹೇಳುವುದು, ಸೀಸೆರನ ಮತ್ತು ಬಾರಾಕನ ಸೈನ್ಯಗಳು ಎದುರುಗೊಳ್ಳುವಷ್ಟರಲ್ಲಿ, “ಆಕಾಶದಿಂದ ಭಾರಿ ಮಳೆ ಮತ್ತು ಆಲಿಕಲ್ಲುಗಳನ್ನು ಸುರಿಸುತ್ತಾ ಒಂದು ದೊಡ್ಡ ಬಿರುಗಾಳಿಯು ಬೀಸಿತು. ಗಾಳಿಯು ಮಳೆಯನ್ನು ಕಾನಾನ್ಯರ ಮುಖಕ್ಕೆ ಬಡಿದು, ಅವರ ಕಣ್ಣುಗಳು ಮಬ್ಬಾಗುವಂತೆ ಮಾಡಿತು. ಈ ಕಾರಣ ಅವರ ಬಿಲ್ಲುಗಳು ಹಾಗೂ ಬಲ್ಲೆಯಗಳು ಯಾವ ಪ್ರಯೋಜನಕ್ಕೂ ಬರಲಿಲ್ಲ.”
“ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು” ಎಂದು ನ್ಯಾಯಸ್ಥಾಪಕರು 5:20 ತಿಳಿಸುತ್ತದೆ. ನಕ್ಷತ್ರಗಳು ಸೀಸೆರನೊಡನೆ ಯುದ್ಧಮಾಡಿದ್ದು ಹೇಗೆ? ಇದು ದೈವಿಕ ಸಹಾಯವನ್ನು ಸೂಚಿಸುತ್ತದೆ ಎಂದು ಕೆಲವರ ಅಭಿಪ್ರಾಯವಾಗಿದೆ. ಇನ್ನಿತರರು, ಇದು ದೇವದೂತರ ಸಹಾಯವನ್ನು, ಉಲ್ಕಾಶೇಷಗಳ ಬೀಳುವಿಕೆಯನ್ನು, ಅಥವಾ ಜ್ಯೋತಿಶ್ಶಾಸ್ತ್ರದ ಮೇಲೆ ಸೀಸೆರನ ಆತುಕೊಳ್ಳುವಿಕೆಯು ಸುಳ್ಳಾಗಿ ರುಜುವಾದದ್ದನ್ನು ಸೂಚಿಸುತ್ತದೆ ಎಂದೆಲ್ಲಾ ಭಾವಿಸುತ್ತಾರೆ. ಈ ಕದನದಲ್ಲಿ ನಕ್ಷತ್ರಗಳು ಹೇಗೆ ಕಾದಾಡಿದವೆಂದು ಬೈಬಲ್ ಯಾವುದೇ ವಿವರಣೆಯನ್ನು ನೀಡದಿರುವ ಕಾರಣ ಈ ವಾಕ್ಸರಣಿಯನ್ನು ನಾವು, ಇಸ್ರಾಯೇಲ್ಯರ ಸೈನ್ಯದ ಪರವಾಗಿ ಯಾವುದೋ ಒಂದು ರೀತಿಯ ದೈವಿಕ ಹಸ್ತಕ್ಷೇಪವನ್ನು ಇದು ಸೂಚಿಸುತ್ತದೆ ಎಂದು ಅರ್ಥಮಾಡಿಕೊಂಡರೆ ಸಾಕು. ವಿಷಯವು ಏನೇ ಆಗಿರಲಿ, ಇಸ್ರಾಯೇಲ್ಯರು ಆ ಸಂದರ್ಭವನ್ನು ಪೂರ್ಣವಾಗಿ ಸದುಪಯೋಗಿಸಿಕೊಂಡರು. “ಬಾರಾಕನು ಅವನ ಸೈನ್ಯರಥಗಳನ್ನು . . . ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲಾ ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.” (ನ್ಯಾಯಸ್ಥಾಪಕರು 4:16) ದಂಡನಾಯಕನಾದ ಸೀಸೆರನಿಗೆ ಏನಾಯಿತು?
ದಬ್ಬಾಳಿಕೆ ಮಾಡಿದವನು “ಒಬ್ಬ ಸ್ತ್ರೀಯ ಕೈಗೆ” ಸಿಕ್ಕಿಬೀಳುತ್ತಾನೆ
“ಹಾಚೋರಿನ ಅರಸನಾದ ಯಾಬೀನನಿಗೂ ಕೇನ್ಯನಾದ ಹೆಬೆರನ ಮನೆಯವರಿಗೂ ಸಮಾಧಾನವಿದ್ದದರಿಂದ ಸೀಸೆರನು [ಕದನವನ್ನು ಬಿಟ್ಟು] ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರದ ಕಡೆಗೆ ಹೋದನು” ಎಂದು ಬೈಬಲ್ ತಿಳಿಸುತ್ತದೆ. ಆಯಾಸಗೊಂಡಿದ್ದ ಸೀಸೆರನನ್ನು ಯಾಯೇಲಳು ಗುಡಾರದೊಳಕ್ಕೆ ಆಮಂತ್ರಿಸಿ, ಹಾಲನ್ನು ಕುಡಿಯಕೊಟ್ಟು, ಅವನು ನಿದ್ರಿಸುವಂತೆ ಅವನನ್ನು ಕಂಬಳಿಯಿಂದ ಮುಚ್ಚಿದಳು. ನಂತರ ಯಾಯೇಲಳು, ಗುಡಾರದಲ್ಲಿ ವಾಸಿಸುವವರು ಸಾಮಾನ್ಯವಾಗಿ ಉಪಯೋಗಿಸುವ ವಸ್ತುಗಳನ್ನು ಅಂದರೆ “ಕೈಯಲ್ಲಿ ಗುಡಾರದ ಗೂಟವನ್ನೂ ಒಂದು ಕೊಡತಿಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ ಮೆಲ್ಲಗೆ ಹತ್ತಿರ ಹೋಗಿ ಅವನ ಕಣತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು.”—ನ್ಯಾಯಸ್ಥಾಪಕರು 4:17-21.
ನಂತರ ಯಾಯೇಲಳು ಹೊರಗೆ ಹೋಗಿ ಬಾರಾಕನನ್ನು ಎದುರುಗೊಂಡು, ಅವನಿಗೆ ಹೇಳಿದ್ದು: “ಬಾ, ನೀನು ಹುಡುಕುವ ಮನುಷ್ಯನನ್ನು ತೋರಿಸುತ್ತೇನೆ.” ವೃತ್ತಾಂತವು ಕೂಡಿಸುವುದು: “ಅವನು ಒಳಗೆ ಹೋಗಿ ಸೀಸೆರನು ಸತ್ತು ಬಿದ್ದದ್ದನ್ನು ಕಂಡನು. ಅವನ ತಲೆಯಲ್ಲಿ ಗೂಟವು ಜಡಿಯಲ್ಪಟ್ಟಿತ್ತು.” ಬಾರಾಕನಿಗೆ ಇದು ನಂಬಿಕೆಯನ್ನು ಬಲಗೊಳಿಸುವ ಎಂತಹ ಒಂದು ಅನುಭವವಾಗಿದ್ದಿರಬಹುದು! ಮುಂಚಿತವಾಗಿಯೇ ಪ್ರವಾದಿನಿಯಾದ ದೆಬೋರಳು ಅವನಿಗೆ ಹೇಳಿದ್ದು: “ಈ ಯುದ್ಧಪ್ರಯಾಣದಲ್ಲುಂಟಾಗುವ ಮಾನವು ನಿನಗಲ್ಲ. ಯೆಹೋವನು ಸೀಸೆರನನ್ನು ಒಬ್ಬ ಸ್ತ್ರೀಗೆ [“ಒಬ್ಬ ಸ್ತ್ರೀಯ ಕೈಗೆ,” NW] ಒಪ್ಪಿಸಿಕೊಡುವನು.”—ನ್ಯಾಯಸ್ಥಾಪಕರು 4:9, 22.
ಯಾಯೇಲಳ ಕೃತ್ಯವನ್ನು ವಂಚನೆಯೆಂದು ಕರೆಯಸಾಧ್ಯವಿದೆಯೋ? ಯೆಹೋವನು ಅದನ್ನು ಹಾಗೆ ವೀಕ್ಷಿಸಲಿಲ್ಲ. “ಗುಡಾರಗಳಲ್ಲಿ ವಾಸಿಸುವ ಸ್ತ್ರೀಯರಲ್ಲಿ ಆಕೆಗೇ ಆಶೀರ್ವಾದವು,” ಎಂದು ಬಾರಾಕ್ ಮತ್ತು ದೆಬೋರಳ ವಿಜಯಗೀತೆಯು ಹೇಳುತ್ತದೆ. ಆ ಗೀತೆಯ, ಸೀಸೆರನ ಮರಣವನ್ನು ಸರಿಯಾದ ದೃಷ್ಟಿಕೋನದಿಂದ ವೀಕ್ಷಿಸುವಂತೆ ನಮಗೆ ಸಹಾಯಮಾಡುತ್ತದೆ. ಅವನು ಕದನದಿಂದ ಹಿಂದಿರುಗುವುದನ್ನು ಅವನ ತಾಯಿಯು ಆತುರದಿಂದ ಕಾಯುತ್ತಿರುವುದಾಗಿ ಚಿತ್ರಿಸಲಾಗಿದೆ. “ಅವನ ರಥವು ಬರುವದಕ್ಕೆ ಇಷ್ಟು ಹೊತ್ತೇಕಾಯಿತು!” ಎಂದು ಅವಳು ಕೇಳುತ್ತಾಳೆ. ಅವನು ಕದನದಲ್ಲಿ ಸಿಕ್ಕಿದ ಕೊಳ್ಳೆಯನ್ನು—ಸುಂದರವಾಗಿ ಕಸೂತಿಹಾಕಿದ ವಸ್ತ್ರಗಳನ್ನು ಮತ್ತು ಸೈನಿಕರಿಗೆ ದಾಸಿಯರನ್ನು—ಹಂಚಿಕೊಳ್ಳುತ್ತಿದ್ದಿರಬಹುದು ಎಂದು ಹೇಳುವ ಮೂಲಕ ಅವಳ ಭಯವನ್ನು ಶಮನಗೊಳಿಸಲು ಅವಳ “ಸಭ್ಯಸ್ತ್ರೀಯರಲ್ಲಿ ಬುದ್ಧಿವಂತೆಯರು” ಪ್ರಯತ್ನಿಸಿದರು. ಸ್ತ್ರೀಯರು ಹೇಳುವುದು: “ಅವರಿಗೆ ಕೊಳ್ಳೆ ಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಸೈನಿಕನಿಗೆ ಒಬ್ಬಿಬ್ಬರು ದಾಸಿಯರೂ ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ವಸ್ತ್ರಗಳೂ ಕಂಠಮಾಲೆಯೂ ದೊರಕಿರುತ್ತವೆ.”—ನ್ಯಾಯಸ್ಥಾಪಕರು 5:24, 28-30.
ನಮಗಿರುವ ಪಾಠಗಳು
ಬಾರಾಕನ ವೃತ್ತಾಂತವು ನಮಗೆ ಪ್ರಾಮುಖ್ಯವಾದ ಪಾಠಗಳನ್ನು ಕಲಿಸುತ್ತದೆ. ಯೆಹೋವನನ್ನು ತಮ್ಮ ಜೀವಿತದಿಂದ ಹೊರಗಿಟ್ಟಿರುವ ಯಾವುದೇ ವ್ಯಕ್ತಿಯನ್ನು, ಸಮಸ್ಯೆಗಳು ಮತ್ತು ಅಡ್ಡಿತಡೆಗಳು ಖಂಡಿತವಾಗಿಯೂ ಬಾಧಿಸುವವು. ಆದರೆ ಯಾರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುತ್ತಾರೋ ಮತ್ತು ಆತನಲ್ಲಿ ನಂಬಿಕೆಯಿಡುತ್ತಾರೋ ಅವರಿಗೆ ವಿವಿಧ ರೀತಿಯ ದಬ್ಬಾಳಿಕೆಯಿಂದ ಸ್ವಾತಂತ್ರವು ದೊರೆಯುತ್ತದೆ. ನಾವು ವಿಧೇಯತೆಯ ಆತ್ಮವನ್ನು ಸಹ ಬೆಳೆಸಿಕೊಳ್ಳಬೇಡವೇ? ದೇವರ ಆವಶ್ಯಕತೆಗಳು ಮಾನವ ವಿವೇಚನೆಗೆ ವಿರುದ್ಧವಾದದ್ದಾಗಿರುವಂತೆ ಕಂಡುಬಂದಾಗಲೂ, ಆತನ ಸೂಚನೆಸಲಹೆಗಳು ಯಾವಾಗಲೂ ನಮ್ಮ ನಿತ್ಯ ಒಳಿತಿಗಾಗಿರುತ್ತವೆ ಎಂಬುದರಲ್ಲಿ ನಾವು ಪೂರ್ಣ ಭರವಸೆಯಿಂದಿರಬಲ್ಲೆವು. (ಯೆಶಾಯ 48:17, 18) ಯೆಹೋವನಲ್ಲಿ ನಂಬಿಕೆಯನ್ನಿಟ್ಟು, ದೈವಿಕ ಮಾರ್ಗದರ್ಶನಕ್ಕೆ ವಿಧೇಯನಾಗಿದ್ದಕ್ಕಾಗಿ ಮಾತ್ರವೇ ಬಾರಾಕನು ‘ಪರರ ದಂಡನ್ನು ಓಡಿಸಿಬಿಟ್ಟನು.’—ಇಬ್ರಿಯ 11:32-34.
ದೆಬೋರ ಮತ್ತು ಬಾರಾಕನ ಗೀತೆಯ ಹೃದಯಸ್ಪರ್ಶಿ ಮುಕ್ತಾಯವು ಹೀಗಿದೆ: “ಯೆಹೋವನ ಎಲ್ಲಾ ಶತ್ರುಗಳೂ ಇವರಂತೆಯೇ ನಾಶವಾಗಲಿ; ಆತನ ಭಕ್ತರು ಪ್ರತಾಪದಿಂದ ಉದಯಿಸುವ ಸೂರ್ಯನಂತಿರಲಿ.” (ನ್ಯಾಯಸ್ಥಾಪಕರು 5:31) ಯೆಹೋವನು ಸೈತಾನನ ದುಷ್ಟ ಲೋಕಕ್ಕೆ ಅಂತ್ಯವನ್ನು ತರುವಾಗ ಈ ಮಾತುಗಳು ಎಷ್ಟು ಸತ್ಯವಾಗಲಿವೆ!
[ಪುಟ 29ರಲ್ಲಿರುವ ಚಿತ್ರ]
ಬಾರಾಕನಿಗೆ ಆಜ್ಞೆಯನ್ನು ಕೊಡಲು ಯೆಹೋವನು ದೆಬೋರಳನ್ನು ಉಪಯೋಗಿಸಿದನು
[ಪುಟ 31ರಲ್ಲಿರುವ ಚಿತ್ರ]
ಕಿಷೋನ್ ಹೊಳೆಯು ದಡದಿಂದಾಚೆಗೆ ತುಂಬಿಹರಿಯುತ್ತಿದೆ
[ಕೃಪೆ]
Pictorial Archive (Near Eastern History) Est.
[ಪುಟ 31ರಲ್ಲಿರುವ ಚಿತ್ರ]
ತಾಬೋರ್ ಬೆಟ್ಟ