ರಕ್ಷಣೆಯು ಯೆಹೋವನಿಂದಲೇ ಉಂಟಾಗುತ್ತದೆ
“ಸತ್ಯ ದೇವರು ನಮಗೆ ರಕ್ಷಣೆಯ ಕೃತ್ಯಗಳನ್ನು ಗೈಯುವ ಒಬ್ಬ ದೇವರಾಗಿದ್ದಾನೆ.”—ಕೀರ್ತನೆ 68:20, Nw.
1, 2. (ಎ) ಯೆಹೋವನು ರಕ್ಷಣೆಯ ಮೂಲನಾಗಿದ್ದಾನೆಂದು ನಾವು ಏಕೆ ಹೇಳಸಾಧ್ಯವಿದೆ? (ಬಿ) ಜ್ಞಾನೋಕ್ತಿ 21:31ನ್ನು ನೀವು ಹೇಗೆ ವಿವರಿಸುವಿರಿ?
ಯೆಹೋವನು, ತನ್ನನ್ನು ಪ್ರೀತಿಸುವವರೆಲ್ಲರ ರಕ್ಷಕನಾಗಿದ್ದಾನೆ. (ಯೆಶಾಯ 43:11) ಇದನ್ನು ವೈಯಕ್ತಿಕವಾಗಿ ಅನುಭವಿಸಿದ ಇಸ್ರಾಯೇಲಿನ ಪ್ರಸಿದ್ಧ ರಾಜನಾದ ದಾವೀದನು, ಹೃತ್ಪೂರ್ವಕವಾಗಿ ಹೀಗೆ ಹಾಡಿದನು: “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.” (ಕೀರ್ತನೆ 3:8) ಪ್ರವಾದಿಯಾದ ಯೋನನು, ದೊಡ್ಡ ಮೀನಿನ ಹೊಟ್ಟೆಯೊಳಗಿದ್ದಾಗ ಕಟ್ಟಾಸಕ್ತಿಯಿಂದ ಮಾಡಿದ ಪ್ರಾರ್ಥನೆಯಲ್ಲಿ ಆ ಪದಗಳನ್ನೇ ಉಪಯೋಗಿಸಿದನು.—ಯೋನ 2:9.
2 ಯೆಹೋವನು ರಕ್ಷಣೆಯ ಮೂಲನಾಗಿದ್ದಾನೆಂದು ದಾವೀದನ ಮಗನಾದ ಸೊಲೊಮೋನನಿಗೂ ತಿಳಿದಿತ್ತು. ಆದುದರಿಂದಲೇ ಅವನು ಹೇಳಿದ್ದು: “ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು [“ರಕ್ಷಣೆಯು,” NW] ಯೆಹೋವನಿಂದಲೇ.” (ಜ್ಞಾನೋಕ್ತಿ 21:31) ಪ್ರಾಚೀನಕಾಲದ ಮಧ್ಯಪೂರ್ವದಲ್ಲಿ, ನೇಗಿಲನ್ನು ಎಳೆಯಲಿಕ್ಕಾಗಿ ಎತ್ತುಗಳನ್ನು, ಹೊರೆಗಳನ್ನು ಒಯ್ಯಲಿಕ್ಕಾಗಿ ಕತ್ತೆಗಳನ್ನು, ಪ್ರಯಾಣಕ್ಕಾಗಿ ಹೇಸರಗತ್ತೆಗಳನ್ನು, ಮತ್ತು ಯುದ್ಧಕ್ಕಾಗಿ ಕುದುರೆಗಳನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಇಸ್ರಾಯೇಲ್ಯರ ಭಾವೀ ಅರಸನು “ಕುದುರೆ ದಂಡನ್ನು ಕೂಡಿಸಿಕೊಳ್ಳಬಾರದು” ಎಂಬ ಆಜ್ಞೆಯನ್ನು ಅವರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ದೇವರು ಅವರಿಗೆ ಕೊಟ್ಟನು. (ಧರ್ಮೋಪದೇಶಕಾಂಡ 17:16) ಯೆಹೋವನು ತನ್ನ ಜನರನ್ನು ರಕ್ಷಿಸುವವನಾದದರಿಂದ, ಯುದ್ಧದ ಕುದುರೆಗಳ ಆವಶ್ಯಕತೆಯಿರಲಿಲ್ಲ.
3. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವುದು ಸೂಕ್ತವಾಗಿದೆ?
3 ಪರಮಾಧಿಕಾರಿಯಾದ ಪ್ರಭು ಯೆಹೋವನು “ರಕ್ಷಣೆಯ ಕೃತ್ಯಗಳನ್ನು ಗೈಯುವ ಒಬ್ಬ ದೇವರಾಗಿದ್ದಾನೆ.” (ಕೀರ್ತನೆ 68:20, NW) ಎಷ್ಟೊಂದು ಉತ್ತೇಜನದಾಯಕ ಸಂಗತಿ! ಆದರೆ ಯೆಹೋವನು ಯಾವ “ರಕ್ಷಣೆಯ ಕೃತ್ಯಗಳನ್ನು” ನಡಿಸಿದ್ದಾನೆ? ಮತ್ತು ಆತನು ಯಾರನ್ನು ರಕ್ಷಿಸಿದ್ದಾನೆ?
ಯೆಹೋವನು ಯಥಾರ್ಥವಂತರನ್ನು ರಕ್ಷಿಸುತ್ತಾನೆ
4. ಯೆಹೋವನು ದೈವಭಕ್ತಿಯುಳ್ಳ ಜನರನ್ನು ರಕ್ಷಿಸುತ್ತಾನೆಂದು ನಮಗೆ ಹೇಗೆ ಗೊತ್ತಿದೆ?
4 ದೇವರ ಸಮರ್ಪಿತ ಸೇವಕರೋಪಾದಿ ಯಥಾರ್ಥ ಮಾರ್ಗಕ್ರಮವನ್ನು ಬೆನ್ನಟ್ಟುವವರೆಲ್ಲರೂ ಅಪೊಸ್ತಲ ಪೇತ್ರನ ಈ ಮಾತುಗಳಿಂದ ಸಾಂತ್ವನವನ್ನು ಪಡೆದುಕೊಳ್ಳಬಹುದು: “ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” ಈ ವಿಷಯವನ್ನು ರುಜುಪಡಿಸುತ್ತಾ ಪೇತ್ರನು ಹೇಳಿದ್ದೇನೆಂದರೆ, ದೇವರು “ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.”—2 ಪೇತ್ರ 2:5, 9.
5. ನೋಹನು ಯಾವ ಪರಿಸ್ಥಿತಿಗಳ ಮಧ್ಯದಲ್ಲಿ ‘ಸುನೀತಿಯನ್ನು ಸಾರುವವನೋಪಾದಿ’ ಸೇವೆಸಲ್ಲಿಸಿದನು?
5 ನೋಹನ ದಿನಗಳಲ್ಲಿದ್ದಂತಹ ಪರಿಸ್ಥಿತಿಗಳಲ್ಲಿ ನೀವು ಜೀವಿಸುತ್ತಿದ್ದೀರೆಂದು ಕಲ್ಪಿಸಿಕೊಳ್ಳಿರಿ. ಮಾನವ ದೇಹವನ್ನು ತಾಳಿದಂತಹ ದೆವ್ವಗಳು ಭೂಮಿಯಲ್ಲಿದ್ದಾರೆ. ಈ ಅವಿಧೇಯ ದೇವದೂತರ ಸಂತಾನವು ಜನರೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆ, ಮತ್ತು ‘ಅನ್ಯಾಯವು ಲೋಕವನ್ನು ತುಂಬಿಕೊಂಡಿದೆ.’ (ಆದಿಕಾಂಡ 6:1-12) ಆದರೆ, ಯೆಹೋವನ ಸೇವೆಯನ್ನು ಬಿಟ್ಟುಬಿಡುವಂತೆ ನೋಹನನ್ನು ಹೆದರಿಸಲು ಸಾಧ್ಯವಿಲ್ಲ. ಅವನು ‘ಸುನೀತಿಯನ್ನು ಸಾರುವವ’ನಾಗಿದ್ದಾನೆ. ಅವನು ಮತ್ತು ಅವನ ಕುಟುಂಬವು ಜೊತೆಯಾಗಿ ನಾವೆಯನ್ನು ಕಟ್ಟುತ್ತದೆ. ದುಷ್ಟತನವು ತಮ್ಮ ಜೀವಮಾನಕಾಲದಲ್ಲೇ ಅಂತ್ಯಗೊಳ್ಳುವುದೆಂಬ ವಿಷಯವನ್ನು ಅವರು ಸ್ವಲ್ಪವೂ ಸಂದೇಹಿಸುವುದಿಲ್ಲ. ಆ ಲೋಕವು ದಂಡನೆಗೆ ಅರ್ಹವಾಗಿದೆ ಎಂಬುದನ್ನು ನೋಹನ ನಂಬಿಕೆಯು ತೋರಿಸುತ್ತದೆ. (ಇಬ್ರಿಯ 11:7) ಇಂದಿನ ಪರಿಸ್ಥಿತಿಗಳು ನೋಹನ ದಿನಗಳಲ್ಲಿದ್ದ ಪರಿಸ್ಥಿತಿಗಳಂತೆಯೇ ಇದ್ದು, ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳನ್ನು ಅವು ಗುರುತಿಸುತ್ತವೆ. (ಮತ್ತಾಯ 24:37-39; 2 ತಿಮೊಥೆಯ 3:1-5) ಆದುದರಿಂದ, ಯೆಹೋವನ ರಕ್ಷಣೆಗಾಗಿ ಕಾಯುತ್ತಾ ದೇವರ ಜನರೊಂದಿಗೆ ನೀವು ಸೇವೆ ಸಲ್ಲಿಸುತ್ತಿರುವಾಗ, ಸುನೀತಿಯನ್ನು ಸಾರುವವರೋಪಾದಿ ನೀವು ನೋಹನಂತೆ ನಂಬಿಗಸ್ತರಾಗಿರುವಿರೊ?
6. ಯೆಹೋವನು ಯಥಾರ್ಥವಂತರನ್ನು ರಕ್ಷಿಸುತ್ತಾನೆಂದು 2 ಪೇತ್ರ 2:7, 8 ಹೇಗೆ ರುಜುಪಡಿಸುತ್ತದೆ?
6 ಯೆಹೋವನು ಯಥಾರ್ಥವಂತರನ್ನು ರಕ್ಷಿಸುತ್ತಾನೆಂಬುದಕ್ಕೆ ಪೇತ್ರನು ಇನ್ನೂ ಹೆಚ್ಚಿನ ರುಜುವಾತನ್ನು ಕೊಡುತ್ತಾನೆ. “[ದೇವರು] ಆ ಅಧರ್ಮಿಗಳ ನಾಚಿಕೆಗೆಟ್ಟ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು. ಆ ನೀತಿವಂತನು ಅವರ ನಡುವೆ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡನು” ಎಂದು ಆ ಅಪೊಸ್ತಲನು ಹೇಳುತ್ತಾನೆ. (2 ಪೇತ್ರ 2:7, 8; ಆದಿಕಾಂಡ 19:1-29) ಈ ಕಡೇ ದಿವಸಗಳಲ್ಲಿ ಲೈಂಗಿಕ ಅನೈತಿಕತೆಯು ಕೋಟ್ಯಂತರ ಜನರಿಗೆ ಒಂದು ಸರ್ವಸಾಮಾನ್ಯ ಸಂಗತಿಯಾಗಿದೆ. ಆದರೆ ನೀವು ಲೋಟನಂತೆ, ಇಂದು ಹೆಚ್ಚಿನವರು ನಡಿಸುತ್ತಿರುವ ‘ನಾಚಿಕೆಗೆಟ್ಟ ನಡತೆಯಿಂದ ವೇದನೆಪಡುತ್ತೀರೊ?’ ನೀವು ಹಾಗೆ ವೇದನೆಪಡುತ್ತಿರುವಲ್ಲಿ ಮತ್ತು ನೀತಿಯನ್ನು ಆಚರಿಸುತ್ತಿರುವಲ್ಲಿ, ಈ ದುಷ್ಟ ವ್ಯವಸ್ಥೆಯು ಅಂತ್ಯಗೊಳ್ಳುವಾಗ, ಯೆಹೋವನು ರಕ್ಷಿಸುವ ಜನರ ನಡುವೆ ನೀವೂ ಒಬ್ಬರಾಗಿರಬಹುದು.
ಯೆಹೋವನು ತನ್ನ ಜನರನ್ನು ಪೀಡಕರಿಂದ ರಕ್ಷಿಸುತ್ತಾನೆ
7. ಐಗುಪ್ತದಲ್ಲಿದ್ದ ಇಸ್ರಾಯೇಲ್ಯರೊಂದಿಗಿನ ಯೆಹೋವನ ವ್ಯವಹಾರಗಳು, ಆತನು ತನ್ನ ಜನರನ್ನು ಪೀಡಕರಿಂದ ವಿಮೋಚಿಸುತ್ತಾನೆಂಬುದನ್ನು ಹೇಗೆ ರುಜುಪಡಿಸುತ್ತವೆ?
7 ಈ ಹಳೆಯ ವ್ಯವಸ್ಥೆಯು ಅಂತ್ಯಗೊಳ್ಳುವ ಸಮಯದ ವರೆಗೆ, ಯೆಹೋವನ ಸೇವಕರು ಹಿಂಸೆ ಮತ್ತು ಶತ್ರುಗಳ ಪೀಡೆಯನ್ನು ಅನುಭವಿಸುವರು. ಆದರೆ ಯೆಹೋವನು ಅವರನ್ನು ವಿಮೋಚಿಸುವನೆಂದು ಅವರು ಭರವಸೆಯಿಂದಿರಬಲ್ಲರು, ಯಾಕಂದರೆ ಗತಕಾಲದಲ್ಲಿ ಆತನು ಕಷ್ಟದಲ್ಲಿದ್ದ ತನ್ನ ಜನರನ್ನು ರಕ್ಷಿಸಿದ್ದಾನೆ. ಮೋಶೆಯ ದಿನಗಳಲ್ಲಿ, ಐಗುಪ್ತರ ದಬ್ಬಾಳಿಕೆಯಿಂದ ಕಷ್ಟಾನುಭವಿಸುತ್ತಿದ್ದ ಇಸ್ರಾಯೇಲ್ಯರಲ್ಲಿ ನೀವೂ ಒಬ್ಬರಾಗಿದ್ದೀರೆಂದು ಭಾವಿಸಿಕೊಳ್ಳಿರಿ. (ವಿಮೋಚನಕಾಂಡ 1:1-14; 6:8) ದೇವರು ಐಗುಪ್ತದ ಮೇಲೆ ಒಂದರ ನಂತರ ಇನ್ನೊಂದು ಬಾಧೆಯನ್ನು ತರುತ್ತಾನೆ. (ವಿಮೋಚನಕಾಂಡ 8:5–10:29) ಮಾರಕವಾದ ಹತ್ತನೆಯ ಬಾಧೆಯಿಂದಾಗಿ ಐಗುಪ್ತ್ಯರ ಜ್ಯೇಷ್ಠಪುತ್ರರೆಲ್ಲರೂ ಸಾಯುವಾಗ, ಇಸ್ರಾಯೇಲ್ಯರನ್ನು ಹೋಗುವಂತೆ ಫರೋಹನು ಅನುಮತಿಸುತ್ತಾನೆ. ಆದರೆ ಅನಂತರ ಅವನು ತನ್ನ ಪಡೆಗಳನ್ನು ಸಜ್ಜುಗೊಳಿಸಿ, ಅವರನ್ನು ಬೆನ್ನಟ್ಟುತ್ತಾನೆ. ಸ್ವಲ್ಪ ಸಮಯದೊಳಗೆ, ಅವನು ಮತ್ತು ಅವನ ಸೈನಿಕರು ಕೆಂಪು ಸಮುದ್ರದಲ್ಲಿ ನಾಶವಾಗುತ್ತಾರೆ. (ವಿಮೋಚನಕಾಂಡ 14:23-28) ಮೋಶೆ ಮತ್ತು ಎಲ್ಲ ಇಸ್ರಾಯೇಲ್ಯರೊಂದಿಗೆ ಈ ಹಾಡನ್ನು ಹಾಡುವುದರಲ್ಲಿ ನೀವು ಜೊತೆಗೂಡುತ್ತೀರಿ: “ಯೆಹೋವನು ಯುದ್ಧಶೂರನು; ಆತನ ನಾಮಧೇಯವು ಯೆಹೋವನೇ. ಆತನು ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದಲ್ಲಿ ಕೆಡವಿದನು; ಅವನ ಶ್ರೇಷ್ಠವೀರರನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು. ಸಾಗರವು ಅವರನ್ನು ಮುಚ್ಚಿಬಿಟ್ಟಿತು; ಕಲ್ಲಿನಂತೆ ಧಡಲ್ಲೆಂದು ಸಮುದ್ರದ ತಳವನ್ನು ಸೇರಿದರು.” (ವಿಮೋಚನಕಾಂಡ 15:3-5) ಈ ಕಡೇ ದಿವಸಗಳಲ್ಲಿ ದೇವರ ಜನರನ್ನು ಪೀಡಿಸುವವರೆಲ್ಲರಿಗೆ ತದ್ರೀತಿಯ ವಿಪತ್ತು ಕಾದಿದೆ.
8, 9. ಯೆಹೋವನು ತನ್ನ ಜನರನ್ನು ಪೀಡಕರಿಂದ ರಕ್ಷಿಸುತ್ತಾನೆಂಬುದಕ್ಕೆ, ನ್ಯಾಯಸ್ಥಾಪಕರ ಪುಸ್ತಕದಿಂದ ಒಂದು ಉದಾಹರಣೆಯನ್ನು ಕೊಡಿರಿ.
8 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಸೇರಿದ ಬಳಿಕ, ಅನೇಕ ವರ್ಷಗಳ ವರೆಗೆ, ನ್ಯಾಯಸ್ಥಾಪಕರು ನ್ಯಾಯದಿಂದ ಆಡಳಿತವನ್ನು ನಡೆಸುತ್ತಿದ್ದರು. ಕೆಲವೊಮ್ಮೆ ಜನರು ವಿದೇಶೀಯರ ದಬ್ಬಾಳಿಕೆಯಿಂದ ಕಷ್ಟಾನುಭವಿಸುತ್ತಿದ್ದರು. ಆದರೆ ದೇವರು ಅವರನ್ನು ವಿಮೋಚಿಸಲಿಕ್ಕಾಗಿ ನಂಬಿಗಸ್ತ ನ್ಯಾಯಸ್ಥಾಪಕರನ್ನು ಉಪಯೋಗಿಸುತ್ತಿದ್ದನು. ನಾವು ಸಹ ತದ್ರೀತಿಯಲ್ಲಿ, ‘ವೈರಿಗಳ ಹಿಂಸೆಯನ್ನು ತಾಳಲಾರದೆ ಗೋಳಾಡು’ತ್ತಿರಬಹುದಾದರೂ, ಯೆಹೋವನು ತನ್ನ ನಿಷ್ಠಾವಂತ ಸೇವಕರಾದ ನಮ್ಮನ್ನೂ ರಕ್ಷಿಸುವನು. (ನ್ಯಾಯಸ್ಥಾಪಕರು 2:16-18; 3:9, 15) ವಾಸ್ತವದಲ್ಲಿ, ಬೈಬಲಿನ ನ್ಯಾಯಸ್ಥಾಪಕರು ಪುಸ್ತಕವು, ಆ ವಿಷಯದ ಕುರಿತು ಮತ್ತು ದೇವರು ತನ್ನ ನೇಮಿತ ನ್ಯಾಯಾಧಿಪತಿಯಾದ ಯೇಸು ಕ್ರಿಸ್ತನ ಮೂಲಕ ಒದಗಿಸಲಿರುವ ಇನ್ನೂ ಮಹಾನ್ ರಕ್ಷಣೆಯ ಕುರಿತಾಗಿ ನಮಗೆ ಆಶ್ವಾಸನೆಯನ್ನು ಕೊಡುತ್ತದೆ.
9 ನಾವು ನ್ಯಾಯಸ್ಥಾಪಕನಾದ ಬಾರಾಕನ ದಿನಗಳಿಗೆ ತೆರಳೋಣ. ಸುಳ್ಳಾರಾಧನೆ ಮತ್ತು ದೇವರ ಅಸಮ್ಮತಿಯಿಂದಾಗಿ, ಇಸ್ರಾಯೇಲ್ಯರು 20 ವರ್ಷಗಳ ವರೆಗೆ ಕಾನಾನ್ಯ ರಾಜನಾದ ಯಾಬೀನನ ಕ್ರೂರ ಆಳ್ವಿಕೆಯ ಕೆಳಗೆ ಕಷ್ಟಾನುಭವಿಸಬೇಕಾಯಿತು. ಈ ದೊಡ್ಡ ಕಾನಾನ್ಯ ಮಿಲಿಟರಿ ಪಡೆಯ ಮುಖ್ಯಸ್ಥನು, ಸೀಸೆರನಾಗಿದ್ದನು. ಆದರೆ ಇಸ್ರಾಯೇಲ್ ಜನರ ಸಂಖ್ಯೆ ಸುಮಾರು ನಾಲ್ವತ್ತು ಲಕ್ಷವಾಗಿದ್ದರೂ, ‘ಇಸ್ರಾಯೇಲ್ಯರ ನಾಲ್ವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳು ಇರಲಿಲ್ಲ.’ (ನ್ಯಾಯಸ್ಥಾಪಕರು 5:6-8) ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟು ಯೆಹೋವನಿಗೆ ಮೊರೆಯಿಡುತ್ತಾರೆ. ಪ್ರವಾದಿನಿಯಾದ ದೆಬೋರಳ ಮೂಲಕ ಕೊಡಲ್ಪಟ್ಟ ದೇವರ ನಿರ್ದೇಶನದ ಮೇರೆಗೆ, ಬಾರಾಕನು ತಾಬೋರ್ ಬೆಟ್ಟದಲ್ಲಿ 10,000 ಪುರುಷರನ್ನು ಒಟ್ಟುಗೂಡಿಸುತ್ತಾನೆ. ಮತ್ತು ಯೆಹೋವನು ಅವರ ಶತ್ರುಗಳನ್ನು ಎತ್ತರವಾದ ತಾಬೋರ್ ಬೆಟ್ಟದ ಕಣಿವೆಗೆ ಸೆಳೆಯುತ್ತಾನೆ. ತಗ್ಗು ಪ್ರದೇಶ ಮತ್ತು ಒಣಗಿಹೋಗಿದ್ದ ಕೀಷೋನ್ ಹಳ್ಳದ ತಳದಾಚೆಯಿಂದ, ಸೀಸೆರನ ಸೈನಿಕರು ಮತ್ತು 900 ಯುದ್ಧ ರಥಗಳು ರಭಸವಾಗಿ ದೌಡಾಯಿಸುತ್ತಾ ಮುನ್ನುಗ್ಗುತ್ತವೆ. ಆದರೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯು ಕೀಷೋನ್ ಹಳ್ಳವನ್ನು ನೆರೆನೀರಿನಿಂದ ತುಂಬಿಸಿ, ಉಕ್ಕೇರುವಂತೆ ಮಾಡಿತು. ಬಿರುಗಾಳಿ ಬೀಸುತ್ತಿರುವಾಗಲೇ ಬಾರಾಕನು ಮತ್ತು ಅವನ ಸೈನಿಕರು ತಾಬೋರ್ ಬೆಟ್ಟದಿಂದ ಕೆಳಗಿಳಿದುಬರುವಾಗ, ಯೆಹೋವನ ಕೋಪದಿಂದಾಗಿ ಪರಿಣಮಿಸಿರುವ ಅಲ್ಲೋಲಕಲ್ಲೋಲವನ್ನು ಅವರು ಕಣ್ಣಾರೆನೋಡುತ್ತಾರೆ. ಬಾರಾಕನ ಸೈನಿಕರು ಓಡಿಹೋಗುತ್ತಿದ್ದ ಕಾನಾನ್ಯರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಾರೆ, ಮತ್ತು ಯಾರಿಗೂ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇಂದು ದೇವರ ವಿರುದ್ಧ ಹೋರಾಡಲು ಧೈರ್ಯಮಾಡುವ ನಮ್ಮ ಪೀಡಕರಿಗೆ ಇದು ಒಂದು ಉತ್ತಮ ಎಚ್ಚರಿಕೆಯಾಗಿದೆ!—ನ್ಯಾಯಸ್ಥಾಪಕರು 4:3-16; 5:19-22.
10. ದೇವರು ತನ್ನ ಸದ್ಯದ ದಿನದ ಸೇವಕರನ್ನು ಅವರ ಎಲ್ಲ ಪೀಡಕರಿಂದ ರಕ್ಷಿಸುವನೆಂದು ನಾವು ಹೇಗೆ ನಿಶ್ಚಿತರಾಗಿರಬಲ್ಲೆವು?
10 ಯೆಹೋವನು ದೇವಭಯವುಳ್ಳ ಇಸ್ರಾಯೇಲ್ಯರನ್ನು ಕಷ್ಟದ ಸಮಯಗಳಲ್ಲಿ ರಕ್ಷಿಸಿದಂತೆಯೇ, ತನ್ನ ಇಂದಿನ ಸೇವಕರನ್ನು ಪೀಡಿಸುವ ಶತ್ರುಗಳ ಕೈಗಳಿಂದ ರಕ್ಷಿಸುವನು. (ಯೆಶಾಯ 43:3; ಯೆರೆಮೀಯ 14:8) ದೇವರು ದಾವೀದನನ್ನು ‘ತನ್ನ ಎಲ್ಲಾ ಶತ್ರುಗಳ ಕೈಗೆ ಸಿಕ್ಕದಂತೆ ತಪ್ಪಿಸಿದನು.’ (2 ಸಮುವೇಲ 22:1-3) ನಾವು ಯೆಹೋವನ ಜನರಾಗಿರುವ ಕಾರಣದಿಂದ ಪೀಡಿಸಲ್ಪಟ್ಟರೂ ಇಲ್ಲವೇ ಹಿಂಸಿಸಲ್ಪಟ್ಟರೂ, ಧೈರ್ಯದಿಂದಿರೋಣ. ಯಾಕಂದರೆ ಈ ಮೆಸ್ಸೀಯ ರಾಜನು ನಮ್ಮನ್ನು ದಬ್ಬಾಳಿಕೆಯಿಂದ ಬಿಡಿಸುವನು. ಹೌದು, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.” (ಕೀರ್ತನೆ 72:13, 14) ಆ ವಿಮೋಚನೆಯು ಖಂಡಿತವಾಗಿಯೂ ಹತ್ತಿರವಿದೆ.
ದೇವರು ತನ್ನಲ್ಲಿ ಭರವಸೆಯಿಡುವವರನ್ನು ರಕ್ಷಿಸುತ್ತಾನೆ
11. ಯುವ ದಾವೀದನು ಯೆಹೋವನ ಮೇಲೆ ಆತುಕೊಳ್ಳುವ ವಿಷಯದಲ್ಲಿ ಯಾವ ಮಾದರಿಯನ್ನಿಟ್ಟನು?
11 ಯೆಹೋವನ ರಕ್ಷಣೆಯನ್ನು ಅನುಭವಿಸಲಿಕ್ಕೋಸ್ಕರ ನಾವು ಧೈರ್ಯದಿಂದ ಆತನಲ್ಲಿ ಭರವಸೆಯನ್ನಿಡಬೇಕು. ದಾವೀದನು, ದೈತ್ಯ ಗೊಲ್ಯಾತನನ್ನು ಎದುರಿಸುತ್ತಿದ್ದಾಗ, ತಾನು ದೇವರ ಮೇಲೆ ಧೈರ್ಯದಿಂದ ಆತುಕೊಂಡಿದ್ದೇನೆಂಬುದನ್ನು ಪ್ರದರ್ಶಿಸಿದನು. ಯುವ ದಾವೀದನ ಮುಂದೆ ಆ ಆಜಾನುಬಾಹು ಫಿಲಿಷ್ಟಿಯನು ನಿಂತಿರುವುದನ್ನು ಊಹಿಸಿಕೊಳ್ಳಿರಿ. ದಾವೀದನು ಹೀಗೆ ಕೂಗಿ ಹೇಳುತ್ತಾನೆ: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದುಹಾಕಿ ಫಿಲಿಷ್ಟಿಯ ಸೈನ್ಯದ ಶವಗಳನ್ನು ಮೃಗಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲ್ಯರೊಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದುಬರುವದು. ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು.” ಸ್ವಲ್ಪ ಸಮಯದೊಳಗೆ ಗೊಲ್ಯಾತನು ಸತ್ತುಬಿದ್ದಿದ್ದನು, ಮತ್ತು ಫಿಲಿಷ್ಟಿಯರನ್ನು ಸಂಪೂರ್ಣವಾಗಿ ಸೋಲಿಸಲಾಗುತ್ತದೆ. ಯೆಹೋವನೇ ತನ್ನ ಜನರನ್ನು ರಕ್ಷಿಸಿದ್ದನೆಂಬುದು ಸ್ಪಷ್ಟ.—1 ಸಮುವೇಲ 17:45-54.
12. ದಾವೀದನ ವೀರಪುರುಷನಾದ ಎಲ್ಲಾಜಾರನನ್ನು ನೆನಪಿನಲ್ಲಿಟ್ಟುಕೊಳ್ಳುವುದು ಏಕೆ ಸಹಾಯಕರವಾಗಿರಬಹುದು?
12 ಹಿಂಸಕರನ್ನು ಎದುರಿಸುತ್ತಿರುವಾಗ, ನಾವು “ಧೈರ್ಯ ತಂದುಕೊಳ್ಳುವ” ಮತ್ತು ದೇವರಲ್ಲಿ ಹೆಚ್ಚು ಪೂರ್ಣವಾಗಿ ಭರವಸೆಯನ್ನಿಡುವ ಅಗತ್ಯವಿರಬಹುದು. (ಯೆಶಾಯ 46:8-13; ಜ್ಞಾನೋಕ್ತಿ 3:5, 6) ಪಸ್ದಮ್ಮೀಮಿ ಎಂಬ ಸ್ಥಳದಲ್ಲಿ ನಡೆದ ಈ ಸಂಗತಿಯನ್ನು ಗಮನಕ್ಕೆ ತಂದುಕೊಳ್ಳಿ. ಇಸ್ರಾಯೇಲ್ಯರು ಫಿಲಿಷ್ಟಿಯರ ಪಡೆಗಳ ಎದುರಿನಿಂದ ಹಿಮ್ಮೆಟ್ಟಿದ್ದಾರೆ. ಆದರೆ ದಾವೀದನ ಮೂವರು ಪ್ರಮುಖ ವೀರ ಪುರುಷರಲ್ಲಿ ಒಬ್ಬನಾಗಿರುವ ಎಲ್ಲಾಜಾರನು ಭಯದಿಂದ ಧೃತಿಗೆಡಲಿಲ್ಲ. ಜವೆಗೋದಿಯ ಒಂದು ಹೊಲದಲ್ಲಿ ನಿಂತುಕೊಂಡು ಅವನೊಬ್ಬನೇ ಫಿಲಿಷ್ಟಿಯರನ್ನು ಕತ್ತಿಯಿಂದ ಕೊಂದುಹಾಕುತ್ತಾನೆ. ಹೀಗೆ, ‘ಯೆಹೋವನು ಇಸ್ರಾಯೇಲಿಗೆ ಮಹಾಜಯವನ್ನುಂಟುಮಾಡುತ್ತಾನೆ.’ (1 ಪೂರ್ವಕಾಲವೃತ್ತಾಂತ 11:12-14; 2 ಸಮುವೇಲ 23:9, 10) ಇಂದು ನಾವು ಕೂಡ ಒಂದು ಮಿಲಿಟರಿ ಪಡೆಯ ವಿರುದ್ಧ ಒಬ್ಬರೇ ಹೋರಾಡುವಂತೆ ಯಾರೂ ನಮ್ಮಿಂದ ಅಪೇಕ್ಷಿಸುವುದಿಲ್ಲ. ಆದರೂ ನಾವು ಕೆಲವೊಮ್ಮೆ ಒಬ್ಬಂಟಿಗರಾಗಿದ್ದು, ಶತ್ರುಗಳಿಂದ ಒತ್ತಡಕ್ಕೊಳಗಾಗಬಹುದು. ರಕ್ಷಣೆಯ ಕೃತ್ಯಗಳನ್ನು ಗೈಯುವ ದೇವರಾದ ಯೆಹೋವನ ಮೇಲೆ ನಾವು ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುವೆವೊ? ನಮ್ಮ ಜೊತೆ ವಿಶ್ವಾಸಿಗಳ ಕುರಿತಾಗಿ ಹಿಂಸಕರಿಗೆ ಮಾಹಿತಿಯನ್ನು ಕೊಟ್ಟು, ಅವರಿಗೆ ದ್ರೋಹಬಗೆಯದಂತೆ ನಾವು ಆತನ ಸಹಾಯವನ್ನು ಕೇಳುವೆವೊ?
ಯೆಹೋವನು ಸಮಗ್ರತಾ ಪಾಲಕರನ್ನು ರಕ್ಷಿಸುತ್ತಾನೆ
13. ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯದಲ್ಲಿ ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಏಕೆ ಕಷ್ಟಕರವಾಗಿತ್ತು?
13 ಯೆಹೋವನ ರಕ್ಷಣೆಯನ್ನು ಅನುಭವಿಸಲಿಕ್ಕಾಗಿ, ನಾವು ಏನೇ ಆಗಲಿ ಆತನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು. ಪ್ರಾಚೀನ ಸಮಯದಲ್ಲಿನ ದೇವರ ಜನರು, ವಿಭಿನ್ನ ಕಷ್ಟತೊಂದರೆಗಳನ್ನು ಅನುಭವಿಸಿದರು. ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯದಲ್ಲಿ ನೀವು ಜೀವಿಸುತ್ತಿದ್ದಲ್ಲಿ, ನೀವು ಏನನ್ನು ಎದುರಿಸಬೇಕಾಗುತ್ತಿತ್ತೆಂಬುದರ ಕುರಿತು ಯೋಚಿಸಿರಿ. ರೆಹಬ್ಬಾಮನ ನಿರ್ದಯತೆಯಿಂದಾಗಿ ಹತ್ತು ಕುಲಗಳು, ಅವನಿಗೆ ಬೆಂಬಲವನ್ನು ಕೊಡುವುದನ್ನು ನಿಲ್ಲಿಸಿ, ಇಸ್ರಾಯೇಲಿನ ಉತ್ತರ ರಾಜ್ಯವನ್ನು ರಚಿಸಿದವು. (2 ಪೂರ್ವಕಾಲವೃತ್ತಾಂತ 10:16, 17; 11:13, 14) ಆ ರಾಜ್ಯದ ಅನೇಕ ರಾಜರುಗಳಲ್ಲಿ, ಯೇಹು ಒಬ್ಬ ಅತ್ಯುತ್ತಮ ರಾಜನಾಗಿದ್ದನು. ಆದರೆ ಅವನು ಕೂಡ ‘ಯೆಹೋವನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುವದಕ್ಕೆ ಪ್ರಯತ್ನಿಸಲಿಲ್ಲ.’ (2 ಅರಸುಗಳು 10:30, 31) ಹಾಗಿದ್ದರೂ, ಹತ್ತು ಕುಲಗಳ ಆ ರಾಜ್ಯದಲ್ಲಿ ಸಮಗ್ರತಾ ಪಾಲಕರಿದ್ದರು. (1 ಅರಸುಗಳು 19:18) ಅವರು ದೇವರಲ್ಲಿ ನಂಬಿಕೆಯಿಟ್ಟರು, ಮತ್ತು ಆತನು ಅವರೊಂದಿಗೆ ಇದ್ದನು. ನಿಮ್ಮ ನಂಬಿಕೆಯ ಮೇಲೆ ಬರುವ ಪರೀಕ್ಷೆಗಳ ಎದುರಿನಲ್ಲೂ, ನೀವು ಯೆಹೋವನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಿದ್ದೀರೊ?
14. ರಾಜ ಹಿಜ್ಕೀಯನ ದಿನಗಳಲ್ಲಿ ಯೆಹೋವನು ಯಾವ ರಕ್ಷಣಾಕಾರ್ಯವನ್ನು ನಡಿಸಿದನು, ಮತ್ತು ಬಬಿಲೋನ್ ಸಾಮ್ರಾಜ್ಯವು ಯೆಹೂದವನ್ನು ಆಕ್ರಮಿಸುವಂತೆ ಯಾವುದು ನಡಿಸಿತು?
14 ದೇವರ ಧರ್ಮಶಾಸ್ತ್ರದ ಕಡೆಗಿನ ವ್ಯಾಪಕವಾದ ನಿರ್ಲಕ್ಷದಿಂದಾಗಿ, ಇಸ್ರಾಯೇಲ್ ರಾಜ್ಯವು ಆಪತ್ತಿಗೊಳಗಾಯಿತು. ಸಾ.ಶ.ಪೂ. 740ರಲ್ಲಿ ಅಶ್ಶೂರ್ಯರು ಅದನ್ನು ಜಯಿಸಿದಾಗ, ಅದರ ಹತ್ತು ಕುಲಗಳಲ್ಲಿದ್ದ ಕೆಲವು ವ್ಯಕ್ತಿಗಳು ನಿಸ್ಸಂದೇಹವಾಗಿ ಯೆಹೂದದ ಎರಡು ಕುಲಗಳ ರಾಜ್ಯಕ್ಕೆ ಓಡಿಹೋದರು. ಅಲ್ಲಿ ಅವರು ಯೆಹೋವನನ್ನು ಆತನ ಆಲಯದಲ್ಲಿ ಆರಾಧಿಸಬಹುದಿತ್ತು. ದಾವೀದನ ವಂಶದಿಂದ ಬಂದ ಯೆಹೂದದ 19 ರಾಜರುಗಳಲ್ಲಿ ನಾಲ್ಕು ಮಂದಿ—ಆಸಾ, ಯೆಹೋಷಾಫಾಟ, ಹಿಜ್ಕೀಯ, ಮತ್ತು ಯೋಷೀಯ—ದೇವರಿಗೆ ಅಸಾಧಾರಣವಾದ ಭಕ್ತಿಯನ್ನು ತೋರಿಸಿದರು. ಸಮಗ್ರತಾ ಪಾಲಕನಾದ ಹಿಜ್ಕೀಯನ ಸಮಯದಲ್ಲಿ, ಅಶ್ಶೂರ್ಯರು ಯೆಹೂದದ ವಿರುದ್ಧ ಒಂದು ಬಲಿಷ್ಠ ಸೇನೆಯೊಂದಿಗೆ ಬಂದರು. ಹಿಜ್ಕೀಯನ ಬೇಡಿಕೆಗಳಿಗೆ ಉತ್ತರವಾಗಿ, ಒಂದೇ ರಾತ್ರಿಯೊಳಗೆ 1,85,000 ಅಶ್ಶೂರ್ಯರನ್ನು ಕೊಲ್ಲಲು ಒಬ್ಬನೇ ಒಬ್ಬ ದೇವದೂತನನ್ನು ಉಪಯೋಗಿಸಿ, ದೇವರು ತನ್ನ ಆರಾಧಕರಿಗೆ ರಕ್ಷಣೆಯನ್ನು ಒದಗಿಸಿದನು! (ಯೆಶಾಯ 37:36-38) ತದನಂತರ, ಜನರು ಧರ್ಮಶಾಸ್ತ್ರವನ್ನು ಪಾಲಿಸಲು ಮತ್ತು ದೇವರ ಪ್ರವಾದಿಗಳಿಗೆ ಲಕ್ಷ್ಯಕೊಡಲು ತಪ್ಪಿಹೋದದ್ದಕ್ಕಾಗಿ, ಬಬಿಲೋನ್ ಸಾಮ್ರಾಜ್ಯವು, ಸಾ.ಶ.ಪೂ. 607ರಲ್ಲಿ ಯೆಹೂದವನ್ನು ಆಕ್ರಮಿಸಿ, ಅದರ ರಾಜಧಾನಿಯಾಗಿರುವ ಯೆರೂಸಲೇಮನ್ನು ಮತ್ತು ದೇವಾಲಯವನ್ನು ನಾಶಗೊಳಿಸಿತು.
15. ಬಬಿಲೋನಿನಲ್ಲಿದ್ದ ಯೆಹೂದಿ ಬಂಧಿವಾಸಿಗಳಿಗೆ ತಾಳ್ಮೆಯ ಅಗತ್ಯವಿತ್ತು ಏಕೆ, ಮತ್ತು ಯೆಹೋವನು ಕಟ್ಟಕಡೆಗೆ ಅವರನ್ನು ಹೇಗೆ ವಿಮೋಚಿಸಿದನು?
15 ದುಃಖಭರಿತವಾದ ಸುಮಾರು 70 ವರ್ಷಗಳ ವರೆಗೆ ಬಬಿಲೋನಿನ ಬಂಧಿವಾಸದಲ್ಲಿ ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕೋಸ್ಕರ, ಯೆಹೂದಿ ಜನರಿಗೆ ತಾಳ್ಮೆಯ ಅಗತ್ಯವಿತ್ತು. (ಕೀರ್ತನೆ 137:1-6) ಗಮನಾರ್ಹವಾದ ಒಬ್ಬ ಸಮಗ್ರತಾ ಪಾಲಕನು, ಪ್ರವಾದಿಯಾದ ದಾನಿಯೇಲನಾಗಿದ್ದನು. (ದಾನಿಯೇಲ 1:1-7; 9:1-3) ದೇವಾಲಯವನ್ನು ಪುನಃ ಕಟ್ಟಲಿಕ್ಕೋಸ್ಕರ ಯೆಹೂದ್ಯರು ಯೆಹೂದಕ್ಕೆ ಹಿಂದಿರುಗುವಂತೆ ಪಾರಸಿಯ ರಾಜನಾದ ಕೋರೇಷನು ಸಾ.ಶ.ಪೂ. 537ರಲ್ಲಿ ಆಜ್ಞೆಯನ್ನು ಹೊರಡಿಸಿದಾಗ ಅವನಿಗೆಷ್ಟು ಆನಂದವಾಗಿದ್ದಿರಬೇಕೆಂಬುದನ್ನು ಊಹಿಸಿಕೊಳ್ಳಿರಿ! (ಎಜ್ರ 1:1-4) ದಾನಿಯೇಲನು ಮತ್ತು ಇತರರು ಹಲವಾರು ವರ್ಷಗಳ ವರೆಗೆ ತಾಳಿಕೊಂಡಿದ್ದರು. ಮತ್ತು ಕೊನೆಯಲ್ಲಿ ಅವರು ಬಬಿಲೋನಿನ ಪತನ, ಹಾಗೂ ದೇವರ ಜನರ ವಿಮೋಚನೆಯನ್ನು ನೋಡಿದರು. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನ’ ನಾಶನಕ್ಕಾಗಿ ಕಾಯುತ್ತಿರುವಾಗ, ನಾವು ತಾಳ್ಮೆಯನ್ನು ಪ್ರದರ್ಶಿಸುವಂತೆ ಇದು ನಮಗೆ ಸಹಾಯಮಾಡಬೇಕು.—ಪ್ರಕಟನೆ 18:1-5.
ಯೆಹೋವನು ತನ್ನ ಜನರನ್ನು ಯಾವಾಗಲೂ ರಕ್ಷಿಸುತ್ತಾನೆ
16. ಎಸ್ತೇರ್ ರಾಣಿಯ ದಿನಗಳಲ್ಲಿ ದೇವರು ಯಾವ ರಕ್ಷಣಾಕಾರ್ಯವನ್ನು ನಡಿಸಿದನು?
16 ಯೆಹೋವನ ಸೇವಕರು ಆತನಿಗೆ ನಂಬಿಗಸ್ತರಾಗಿರುವಾಗ ಆತನು ಅವರನ್ನು ಯಾವಾಗಲೂ ರಕ್ಷಿಸುತ್ತಾನೆ. (1 ಸಮುವೇಲ 12:22; ಯೆಶಾಯ 43:10-12) ಎಸ್ತೇರ್ ರಾಣಿಯ ದಿನಗಳಿಗೆ, ಅಂದರೆ ಸಾ.ಶ.ಪೂ. ಐದನೆಯ ಶತಮಾನದ ಕುರಿತು ಯೋಚಿಸಿರಿ. ರಾಜ ಅಹಷ್ವೇರೋಷನು (ಕ್ಸರ್ಕ್ಸೀಸ್ I) ಹಾಮಾನನನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದ್ದನು. ಯೆಹೂದ್ಯನಾದ ಮೊರ್ದೆಕೈ ಅವನಿಗೆ ಅಡ್ಡಬೀಳಲು ನಿರಾಕರಿಸಿದ್ದರಿಂದಾಗಿ ಸಿಟ್ಟಿಗೆದ್ದು, ಹಾಮಾನನು ಅವನನ್ನು ಮತ್ತು ಪಾರಸೀಯ ಸಾಮ್ರಾಜ್ಯದಲ್ಲಿದ್ದ ಎಲ್ಲ ಯೆಹೂದ್ಯರನ್ನು ನಾಶಮಾಡಲು ಯೋಜನೆಯನ್ನು ಮಾಡುತ್ತಾನೆ. ಯೆಹೂದ್ಯರು ನಿಯಮವನ್ನು ಮುರಿಯುವವರಾಗಿದ್ದಾರೆಂದು ಅವನು ಕಥೆಕಟ್ಟುತ್ತಾನೆ ಮತ್ತು ಅದರೊಂದಿಗೆ ಆರ್ಥಿಕ ಲಾಭದ ಆಸೆಯನ್ನೊಡ್ಡುತ್ತಾನೆ. ಆಗ ಅವನಿಗೆ, ಯೆಹೂದ್ಯರ ಸಂಹಾರಕ್ಕೆ ಆಜ್ಞೆಯನ್ನು ಕೊಡುವ ಒಂದು ಪ್ರಮಾಣಪತ್ರಕ್ಕೆ ಮುದ್ರೆಯೊತ್ತಲಿಕ್ಕಾಗಿ ರಾಜನ ಮುದ್ರೆಯುಂಗುರವನ್ನು ಉಪಯೋಗಿಸಲು ಅನುಮತಿಸಲಾಗುತ್ತದೆ. ಎಸ್ತೇರಳು ಧೈರ್ಯದಿಂದ, ತಾನು ಯೆಹೂದಿ ಮನೆತನದವಳೆಂದು ರಾಜನಿಗೆ ಪ್ರಕಟಪಡಿಸಿ, ಹಾಮಾನನು ಯೋಜಿಸುತ್ತಿದ್ದ ಕೊಲೆಯ ಸಂಚನ್ನು ಬಯಲುಮಾಡುತ್ತಾಳೆ. ಮೊರ್ದೆಕೈಯ ಹತ್ಯೆಗಾಗಿ ಹಾಮಾನನು ತಯಾರಿಸಿದ ಕಂಬದ ಮೇಲೆ ಅವನನ್ನೇ ನೇತುಹಾಕಲಾಗುತ್ತದೆ. ಅನಂತರ ಮೊರ್ದೆಕೈಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗುತ್ತದೆ. ಇದರೊಂದಿಗೆ, ಯೆಹೂದ್ಯರು ತಮ್ಮನ್ನೇ ರಕ್ಷಿಸಿಕೊಳ್ಳಲು ಕ್ರಿಯೆಗೈಯುವುದನ್ನು ಅನುಮತಿಸುವ ಅಧಿಕಾರವನ್ನೂ ಅವನಿಗೆ ಕೊಡಲಾಗುತ್ತದೆ. ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮಹಾ ವಿಜಯವನ್ನು ಪಡೆದುಕೊಳ್ಳುತ್ತಾರೆ. (ಎಸ್ತೇರ 3:1–9:19) ಈ ಘಟನೆಯು, ಯೆಹೋವನು ತನ್ನ ಆಧುನಿಕ ದಿನದ ವಿಧೇಯ ಸೇವಕರ ಪರವಾಗಿ ರಕ್ಷಣೆಯ ಕೃತ್ಯಗಳನ್ನು ಗೈಯುವನೆಂಬ ನಮ್ಮ ನಂಬಿಕೆಯನ್ನು ಇನ್ನೂ ಹೆಚ್ಚು ಬಲಪಡಿಸಬೇಕು.
17. ಯೂದಾಯದಲ್ಲಿ ಜೀವಿಸುತ್ತಿದ್ದ ಪ್ರಥಮ ಶತಮಾನದ ಯೆಹೂದಿ ಕ್ರೈಸ್ತರ ವಿಮೋಚನೆಯಲ್ಲಿ ವಿಧೇಯತೆಯು ಹೇಗೆ ಪಾತ್ರವನ್ನು ವಹಿಸಿತು?
17 ದೇವರು ತನ್ನ ಜನರನ್ನು ರಕ್ಷಿಸಲು ಇನ್ನೊಂದು ಕಾರಣವೇನೆಂದರೆ, ಅವರು ಆತನಿಗೆ ಮತ್ತು ಆತನ ಪುತ್ರನಿಗೆ ವಿಧೇಯರಾಗುತ್ತಾರೆ. ಯೇಸುವಿನ ಪ್ರಥಮ ಶತಮಾನದ ಯೆಹೂದಿ ಶಿಷ್ಯರಲ್ಲಿ ನೀವು ಒಬ್ಬರಾಗಿದ್ದೀರೆಂದು ಊಹಿಸಿಕೊಳ್ಳಿರಿ. ಅವನು ಅವರಿಗೆ ಹೇಳುವುದು: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.” (ಲೂಕ 21:20-22) ಅನೇಕ ವರ್ಷಗಳು ದಾಟಿ ಹೋದರೂ ಏನೂ ಸಂಭವಿಸದೆ ಇರುವುದರಿಂದ, ಆ ಮಾತುಗಳು ಯಾವಾಗ ನೆರವೇರುವವು ಎಂದು ನೀವು ಕುತೂಹಲಪಡುತ್ತೀರಿ. ಆಗ ಸಾ.ಶ. 66ರಲ್ಲಿ ಯೆಹೂದಿ ದಂಗೆಯು ಆರಂಭವಾಗುತ್ತದೆ. ಸೆಸ್ಟಿಯಸ್ ಗ್ಯಾಲಸನ ನೇತೃತ್ವದಲ್ಲಿ ರೋಮನ್ ಪಡೆಗಳು ಯೆರೂಸಲೇಮನ್ನು ಮುತ್ತಿಕೊಂಡು, ದೇವಾಲಯದ ಗೋಡೆಗಳ ಕಡೆಗೆ ಮುಂದುವರಿಯುತ್ತವೆ. ಆದರೆ ಇದ್ದಕ್ಕಿದ್ದ ಹಾಗೆ, ಈ ರೋಮನರು ಯಾವುದೇ ಸುವ್ಯಕ್ತ ಕಾರಣವಿಲ್ಲದೆ ಹಿಮ್ಮರಳುತ್ತಾರೆ. ಯೆಹೂದಿ ಕ್ರೈಸ್ತರು ಏನು ಮಾಡುವರು? ಅವರು ಯೆರೂಸಲೇಮ್ ಮತ್ತು ಯೂದಾಯ ಕ್ಷೇತ್ರದಿಂದ ಓಡಿಹೋದರೆಂದು, ಇಕ್ಲೀಸಿಆ್ಯಸ್ಟಿಕಲ್ ಹಿಸ್ಟರಿ (IIIನೆಯ ಪುಸ್ತಕ, Vನೆಯ ಅಧ್ಯಾಯ 3) ಎಂಬ ತನ್ನ ಪುಸ್ತಕದಲ್ಲಿ ಯುಸೀಬೀಯಸನು ಹೇಳುತ್ತಾನೆ. ಅವರು ಯೇಸುವಿನ ಪ್ರವಾದನಾತ್ಮಕ ಎಚ್ಚರಿಕೆಗೆ ಕಿವಿಗೊಟ್ಟದ್ದರಿಂದ ಬದುಕಿ ಉಳಿದರು. ಯೇಸುವಿನ “ಆಸ್ತಿಯ” ಮೇಲೆ ನೇಮಿಸಲ್ಪಟ್ಟಿರುವ “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನ” ಮೂಲಕ ಕೊಡಲ್ಪಡುವ ಶಾಸ್ತ್ರೀಯ ಮಾರ್ಗದರ್ಶನಕ್ಕನುಸಾರ ನೀವು ಅಷ್ಟೇ ತ್ವರಿತವಾಗಿ ಕ್ರಿಯೆಗೈಯುತ್ತೀರೊ?—ಲೂಕ 12:42-44.
ನಿತ್ಯಜೀವಕ್ಕಾಗಿ ರಕ್ಷಣೆ
18, 19. (ಎ) ಯೇಸುವಿನ ಮರಣವು ಯಾವ ರಕ್ಷಣೆಯನ್ನು ಸಾಧ್ಯಮಾಡಿತು, ಮತ್ತು ಯಾರಿಗಾಗಿ? (ಬಿ) ಅಪೊಸ್ತಲ ಪೌಲನು ಏನನ್ನು ಮಾಡಲು ದೃಢನಿರ್ಧಾರವುಳ್ಳವನಾಗಿದ್ದನು?
18 ಯೇಸುವಿನ ಎಚ್ಚರಿಕೆಯನ್ನು ಪಾಲಿಸಿದ್ದರಿಂದ, ಯೂದಾಯದಲ್ಲಿದ್ದ ಯೆಹೂದಿ ಕ್ರೈಸ್ತರು ತಮ್ಮ ಜೀವಗಳನ್ನು ರಕ್ಷಿಸಲು ಸಾಧ್ಯವಾಯಿತು. ಆದರೆ ಯೇಸುವಿನ ಮರಣವು, ‘ಎಲ್ಲಾ ಮನುಷ್ಯರೂ’ ನಿತ್ಯಜೀವವನ್ನು ಪಡೆಯುವಂತೆ ಸಾಧ್ಯಮಾಡುತ್ತದೆ. (1 ತಿಮೊಥೆಯ 4:10) ಆದಾಮನು ಪಾಪಮಾಡಿ, ತನ್ನ ಜೀವವನ್ನು ಕಳೆದುಕೊಂಡು ತನ್ನನ್ನು ಮತ್ತು ತನ್ನ ಇಡೀ ಸಂತಾನವನ್ನು ಪಾಪ ಮತ್ತು ಮರಣದ ದಾಸ್ವತಕ್ಕೆ ಮಾರಿದಾಗಲೇ, ಮನುಷ್ಯನಿಗೆ ಪ್ರಾಯಶ್ಚಿತ್ತದ ಅಗತ್ಯ ಎದ್ದಿತು. (ರೋಮಾಪುರ 5:12-19) ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಟ್ಟ ಪ್ರಾಣಿ ಯಜ್ಞಗಳು ಪಾಪವನ್ನು ಕೇವಲ ಸಾಂಕೇತಿಕವಾಗಿ ಆವರಿಸಸಾಧ್ಯವಿತ್ತು. (ಇಬ್ರಿಯ 10:1-4) ಯೇಸುವಿಗೆ ಒಬ್ಬ ಮಾನವ ತಂದೆಯಿರಲ್ಲಿಲ್ಲ ಮತ್ತು ಮರಿಯಳು ಗರ್ಭಧರಿಸಿದ ಸಮಯದಿಂದ ಹಿಡಿದು ಯೇಸುವಿನ ಜನನದ ವರೆಗೆ ಪವಿತ್ರಾತ್ಮವು ಅವಳ ‘ಮೇಲೆ ಇದ್ದದ’ರಿಂದ, ಯೇಸು ಜನಿಸಿದಾಗ ಯಾವುದೇ ಪಾಪ ಅಥವಾ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳಲಿಲ್ಲ. (ಲೂಕ 1:35; ಯೋಹಾನ 1:29; 1 ಪೇತ್ರ 1:18, 19) ಯೇಸು ಒಬ್ಬ ಪರಿಪೂರ್ಣ ಸಮಗ್ರತಾ ಪಾಲಕನೋಪಾದಿ ಮರಣಹೊಂದಿದಾಗ, ಮಾನವಕುಲವನ್ನು ಪುನಃ ಕೊಂಡುಕೊಂಡು, ಬಿಡುಗಡೆಗೊಳಿಸಲು ಅವನು ತನ್ನ ಸ್ವಂತ ಪರಿಪೂರ್ಣ ಜೀವವನ್ನು ಕೊಟ್ಟನು. (ಇಬ್ರಿಯ 2:14, 15) ಹೀಗಿರುವುದರಿಂದ ಕ್ರಿಸ್ತನು, “ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು.” (1 ತಿಮೊಥೆಯ 2:5, 6) ಎಲ್ಲರೂ ರಕ್ಷಣೆಗಾಗಿರುವ ಈ ಏರ್ಪಾಡಿನಿಂದ ಲಾಭವನ್ನು ಪಡೆದುಕೊಳ್ಳದಿದ್ದರೂ, ಅದನ್ನು ನಂಬಿಕೆಯಿಂದ ಅಂಗೀಕರಿಸುವವರಿಗೆ ದೇವರು ಅದರ ಪ್ರಯೋಜನಗಳನ್ನು ಅನುಭವಿಸುವಂತೆ ಸಮ್ಮತಿ ನೀಡುತ್ತಾನೆ.
19 ಕ್ರಿಸ್ತನು, ಸ್ವರ್ಗದಲ್ಲಿ ದೇವರಿಗೆ ತನ್ನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ಸಾದರಪಡಿಸುವ ಮೂಲಕ, ಆದಾಮನ ಸಂತಾನವನ್ನು ಪುನಃ ಕೊಂಡುಕೊಂಡನು. (ಇಬ್ರಿಯ 9:24) ಹೀಗೆ ಯೇಸು, ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಟ್ಟಿರುವ ತನ್ನ 1,44,000 ಅಭಿಷಿಕ್ತ ಹಿಂಬಾಲಕರಿಂದ ರಚಿಸಲ್ಪಟ್ಟಿರುವ ಮದಲಗಿತ್ತಿಯನ್ನು ಪಡೆದುಕೊಳ್ಳುತ್ತಾನೆ. (ಎಫೆಸ 5:25-27; ಪ್ರಕಟನೆ 14:3, 4; 21:9) ತನ್ನ ಯಜ್ಞವನ್ನು ಅಂಗೀಕರಿಸಿ, ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವವರಿಗೆ ಅವನು ಒಬ್ಬ “ನಿತ್ಯನಾದ ತಂದೆ”ಯೂ ಆಗುತ್ತಾನೆ. (ಯೆಶಾಯ 9:6, 7; 1 ಯೋಹಾನ 2:1, 2) ಎಂತಹ ಪ್ರೀತಿಪರ ಏರ್ಪಾಡು! ಮುಂದಿನ ಲೇಖನವು ತೋರಿಸಲಿರುವಂತೆ, ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದ ಎರಡನೆಯ ಪ್ರೇರಿತ ಪತ್ರದಲ್ಲಿ ಅದಕ್ಕಾಗಿ ಅವನ ಗಣ್ಯತೆಯು ವ್ಯಕ್ತವಾಗುತ್ತದೆ. ವಾಸ್ತವದಲ್ಲಿ, ನಿತ್ಯಜೀವಕ್ಕಾಗಿ ರಕ್ಷಣೆಯನ್ನು ಹೊಂದುವುದಕ್ಕೋಸ್ಕರ ಯೆಹೋವನು ಮಾಡಿರುವ ಅದ್ಭುತಕರವಾದ ಏರ್ಪಾಡಿನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡುವುದರಿಂದ, ಯಾವುದೇ ಸಂಗತಿಯೂ ತನ್ನನ್ನು ತಡೆಯದಂತೆ ಪೌಲನು ದೃಢನಿರ್ಧಾರವುಳ್ಳವನಾಗಿದ್ದನು.
ನೀವು ಹೇಗೆ ಉತ್ತರಿಸುವಿರಿ?
◻ ದೇವರು ತನ್ನ ಯಥಾರ್ಥ ಜನರನ್ನು ರಕ್ಷಿಸುತ್ತಾನೆಂಬುದಕ್ಕೆ ಯಾವ ಶಾಸ್ತ್ರೀಯ ಪುರಾವೆಯಿದೆ?
◻ ತನ್ನಲ್ಲಿ ಭರವಸೆಯಿಡುವವರನ್ನು ಮತ್ತು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವವರನ್ನು ಯೆಹೋವನು ರಕ್ಷಿಸುತ್ತಾನೆಂದು ನಮಗೆ ಹೇಗೆ ತಿಳಿದಿದೆ?
◻ ನಿತ್ಯಜೀವಕ್ಕಾಗಿ ರಕ್ಷಣೆಯನ್ನು ಪಡೆಯಲಿಕ್ಕಾಗಿ ದೇವರು ಯಾವ ಏರ್ಪಾಡನ್ನು ಮಾಡಿದ್ದಾನೆ?
[ಪುಟ 12 ರಲ್ಲಿರುವ ಚಿತ್ರ]
ದಾವೀದನು, “ರಕ್ಷಣೆಯ ಕೃತ್ಯಗಳನ್ನು ಗೈಯುವ ದೇವರಾದ” ಯೆಹೋವನಲ್ಲಿ ಭರವಸೆಯನ್ನಿಟ್ಟನು. ನೀವೂ ಭರವಸೆಯನ್ನಿಡುತ್ತೀರೊ?
[ಪುಟ 14 ರಲ್ಲಿರುವ ಚಿತ್ರ]
ಎಸ್ತೇರ್ ರಾಣಿಯ ದಿನದಲ್ಲಿ ರುಜುಪಡಿಸಿದಂತೆ, ಯೆಹೋವನು ಯಾವಾಗಲೂ ತನ್ನ ಜನರನ್ನು ರಕ್ಷಿಸುತ್ತಾನೆ