ನಿಮ್ಮ ಭವಿಷ್ಯತ್ತು ಏನಾಗಿರುವುದು?
ಸರ್ವಶಕ್ತನಾದ ದೇವರು ಸರ್ವಜ್ಞಾನಿಯಾಗಿದ್ದು, ಗತಕಾಲ, ವರ್ತಮಾನಕಾಲ, ಮತ್ತು ಭವಿಷ್ಯತ್ಕಾಲದ ಕುರಿತಾಗಿ ಎಲ್ಲವನ್ನೂ ತಿಳಿದಿರುವವನಾಗಿರುವಲ್ಲಿ, ಎಲ್ಲ ಸಂಗತಿಗಳು ದೇವರು ಮುಂಗಂಡಿರುವಂತೆಯೇ ಸಂಭವಿಸಲಿಕ್ಕಾಗಿ ಮೊದಲೇ ವಿಧಿಸಲ್ಪಟ್ಟಿವೆಯಲ್ಲವೊ? ಪ್ರತಿಯೊಬ್ಬ ಮಾನವನ ಮಾರ್ಗಕ್ರಮ ಮತ್ತು ಅಂತ್ಯಸ್ಥಿತಿಯನ್ನು ದೇವರು ಮುಂಗಂಡು ವಿಧಿಸಿರುವುದಾದರೆ, ನಮ್ಮ ಜೀವನ ಕ್ರಮವನ್ನು, ನಮ್ಮ ಭವಿಷ್ಯತ್ತನ್ನು ಆಯ್ದುಕೊಳ್ಳಲು ನಾವು ಸ್ವತಂತ್ರರಾಗಿದ್ದೇವೆಂದು ನಿಜವಾಗಿಯೂ ಹೇಳಸಾಧ್ಯವಿದೆಯೊ?
ಈ ಪ್ರಶ್ನೆಗಳ ಕುರಿತು ಶತಮಾನಗಳಿಂದ ವಾಗ್ವಾದವನ್ನು ನಡೆಸಲಾಗಿದೆ. ಈ ವಾಗ್ವಾದವು ಈಗಲೂ ಪ್ರಧಾನ ಧರ್ಮಗಳನ್ನು ವಿಭಜಿಸುತ್ತಿದೆ. ಭವಿಷ್ಯತ್ತನ್ನು ಮುಂದಾಗಿಯೇ ತಿಳಿದುಕೊಳ್ಳುವ ದೇವರ ಸಾಮರ್ಥ್ಯವನ್ನು, ಮಾನವನ ಇಚ್ಛಾ ಸ್ವಾತಂತ್ರ್ಯದೊಂದಿಗೆ ಸರಿಹೊಂದಿಸಬಹುದೊ? ಉತ್ತರಗಳಿಗಾಗಿ ನಾವೆಲ್ಲಿ ನೋಡಬೇಕು?
ದೇವರು ಮಾನವಕುಲದೊಂದಿಗೆ ತನ್ನ ವದನಕರಾದ ಪ್ರವಾದಿಗಳ ಮುಖಾಂತರ ರವಾನಿಸಲ್ಪಟ್ಟಿರುವ ತನ್ನ ಲಿಖಿತ ವಾಕ್ಯದ ಮೂಲಕ ಸಂವಾದಿಸಿದ್ದಾನೆಂದು ಭೂಗೋಲದ ಸುತ್ತಲಿರುವ ಕೋಟಿಗಟ್ಟಲೆ ಜನರು ಒಪ್ಪಿಕೊಳ್ಳುವರು. ಉದಾಹರಣೆಗಾಗಿ, ಪ್ರಕಟಣೆಗಳು ದೇವರಿಂದ ಬರುವವುಗಳೆಂದು ಕುರಾನ್ ಸೂಚಿಸುತ್ತದೆ: ತೌರಾ (ಟೋರಾ, ಧರ್ಮಶಾಸ್ತ್ರ, ಅಥವಾ ಮೋಶೆಯ ಐದು ಪುಸ್ತಕಗಳು), ಸಾಬೂರ್ (ಕೀರ್ತನೆಗಳು), ಮತ್ತು ಇಂಜೀಲ್ (ಸುವಾರ್ತೆಗಳು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು, ಅಥವಾ “ಹೊಸ ಒಡಂಬಡಿಕೆ”), ಹಾಗೂ ಇಸ್ರಾಯೇಲಿನ ಪ್ರವಾದಿಗಳಿಗೆ ಪ್ರಕಟಿಸಲ್ಪಟ್ಟಿರುವ ವಿಷಯ.
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ನಾವು ಓದುವುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ನಾವು ಪಡೆಯುವಂತಹ ಯಾವುದೇ ಮಾರ್ಗದರ್ಶನ ಅಥವಾ ಜ್ಞಾನೋದಯವು, ಕಟ್ಟಕಡೆಗೆ ಸ್ವತಃ ದೇವರಿಂದಲೇ ಬರತಕ್ಕದ್ದು ಎಂಬುದು ಸ್ಪಷ್ಟ. ಹೀಗಿರುವುದರಿಂದ, ದೇವರ ಆದಿ ಪ್ರವಾದಿಗಳ ಬರಹಗಳನ್ನು ಪರಿಶೀಲಿಸುವುದು ವಿವೇಕಯುತವಾಗಿರುವುದಿಲ್ಲವೊ? ನಮ್ಮ ಭವಿಷ್ಯತ್ತಿನ ಕುರಿತಾಗಿ ಅವು ಏನನ್ನು ಪ್ರಕಟಪಡಿಸುತ್ತವೆ?
ಮುಂಚಿತವಾಗಿ ಬರೆದಿಡಲ್ಪಟ್ಟಿರುವ ಭವಿಷ್ಯತ್ತು
ಪವಿತ್ರ ಶಾಸ್ತ್ರವಚನಗಳನ್ನು ಓದಿರುವ ಯಾವುದೇ ವ್ಯಕ್ತಿಗೆ, ಅದರಲ್ಲಿ ಅಕ್ಷರಶಃ ನೂರಾರು ಪ್ರವಾದನೆಗಳಿವೆ ಎಂಬುದು ತಿಳಿದಿದೆ. ಪ್ರಾಚೀನ ಬಾಬೆಲಿನ ಪತನ, ಯೆರೂಸಲೇಮಿನ ಪುನರ್ನಿರ್ಮಾಣ (ಸಾ.ಶ.ಪೂ. ಆರರಿಂದ ಐದನೆಯ ಶತಮಾನ), ಮತ್ತು ಮೇದ್ಯ-ಪಾರಸೀಯ ಮತ್ತು ಗ್ರೀಸ್ನ ಪ್ರಾಚೀನ ರಾಜರುಗಳ ಏಳುಬೀಳುಗಳಂತಹ ವಿಷಯಗಳೆಲ್ಲವೂ ಸವಿಸ್ತಾರವಾಗಿ ಮುಂತಿಳಿಸಲ್ಪಟ್ಟಿದ್ದವು. (ಯೆಶಾಯ 13:17-19; 44:24–45:1; ದಾನಿಯೇಲ 8:1-7, 20-22) ಅಂತಹ ಪ್ರವಾದನೆಗಳ ನೆರವೇರಿಕೆಯು, ಪವಿತ್ರ ಶಾಸ್ತ್ರವಚನಗಳು ಖಂಡಿತವಾಗಿಯೂ ದೇವರ ವಾಕ್ಯವಾಗಿವೆಯೆಂಬುದಕ್ಕೆ ಅತಿ ಬಲವಾದ ಪುರಾವೆಯಾಗಿದೆ. ಏಕೆಂದರೆ ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿಕ್ಕಿದೆಯೋ ಅದನ್ನು ಮುಂಗಂಡು, ನಿರ್ಧರಿಸುವ ಶಕ್ತಿ ಕೇವಲ ದೇವರೊಬ್ಬನಿಗಿದೆ. ಈ ಅರ್ಥದಲ್ಲಿ, ಪವಿತ್ರ ಶಾಸ್ತ್ರವಚನಗಳು ಖಂಡಿತವಾಗಿಯೂ ಮುಂಚಿತವಾಗಿ ಬರೆದಿಡಲ್ಪಟ್ಟಿರುವ ಭವಿಷ್ಯತ್ತನ್ನು ದಾಖಲಿಸುತ್ತವೆ.
ದೇವರು ತಾನೇ ಪ್ರಕಟಿಸುವುದು: “ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ . . . ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.” (ಯೆಶಾಯ 46:9-11; 55:10, 11) ದೇವರು ತನ್ನ ಪ್ರಾಚೀನ ಪ್ರವಾದಿಗಳಿಗೆ ತನ್ನನ್ನು ಪರಿಚಯಿಸಿಕೊಂಡ ಹೆಸರೇ ಯೆಹೋವ ಎಂಬುದಾಗಿದೆ. ಅದು ಅಕ್ಷರಶಃ, “ಆತನು ಆಗಿಸುತ್ತಾನೆ” ಎಂಬುದನ್ನು ಅರ್ಥೈಸುತ್ತದೆ.a (ಆದಿಕಾಂಡ 12:7, 8; ವಿಮೋಚನಕಾಂಡ 3:13-15; ಕೀರ್ತನೆ 83:18) ದೇವರು ತನ್ನ ವಾಕ್ಯವನ್ನು ನೆರವೇರಿಸುವವನು, ತನ್ನ ಉದ್ದೇಶಗಳನ್ನು ಯಾವಾಗಲೂ ಪೂರೈಸುವವನಾಗಿ ತನ್ನನ್ನು ಪ್ರಕಟಪಡಿಸಿಕೊಳ್ಳುತ್ತಾನೆ.
ಹೀಗೆ ಯೆಹೋವನು ತನ್ನ ಮುನ್ನರಿವಿನ ಶಕ್ತಿಯನ್ನು ತನ್ನ ಉದ್ದೇಶಗಳನ್ನು ಪೂರೈಸಲಿಕ್ಕಾಗಿ ಉಪಯೋಗಿಸುತ್ತಾನೆ. ಬರಲಿರುವ ನ್ಯಾಯತೀರ್ಪಿನ ಕುರಿತಾಗಿ ದುಷ್ಟರನ್ನು ಎಚ್ಚರಿಸಲು ಹಾಗೂ ತನ್ನ ಸೇವಕರಿಗೆ ರಕ್ಷಣೆಯ ನಿರೀಕ್ಷೆಯನ್ನು ಕೊಡಲಿಕ್ಕಾಗಿ ಆತನು ಅನೇಕಸಲ ಅದನ್ನು ಉಪಯೋಗಿಸಿದ್ದಾನೆ. ಆದರೆ ದೇವರು ಈ ಶಕ್ತಿಯನ್ನು ಅಸೀಮಿತ ವಿಧದಲ್ಲಿ ಉಪಯೋಗಿಸುತ್ತಾನೊ? ದೇವರು ಮುನ್ನರಿಯಲು ಆಯ್ಕೆಮಾಡಿರದ ವಿಷಯಗಳ ಕುರಿತಾಗಿ ಪವಿತ್ರ ಶಾಸ್ತ್ರಗಳಲ್ಲಿ ಯಾವುದೇ ಪ್ರಮಾಣವಿದೆಯೊ?
ದೇವರು ಎಲ್ಲ ವಿಷಯಗಳನ್ನು ಮುನ್ನರಿಯುತ್ತಾನೊ?
ಪೂರ್ವಾದೃಷ್ಟದ ಸಮರ್ಥನೆಯಲ್ಲಿ ಮಾಡಲ್ಪಡುವ ಎಲ್ಲ ವಾದಗಳು, ದೇವರಿಗೆ ನಿರ್ವಿವಾದವಾಗಿ ಭವಿಷ್ಯತ್ತಿನ ಘಟನೆಗಳನ್ನು ಮುನ್ನರಿಯುವ ಮತ್ತು ನಿರ್ಧರಿಸುವ ಶಕ್ತಿಯಿರುವುದರಿಂದ, ಆತನು ಪ್ರತಿಯೊಬ್ಬ ವ್ಯಕ್ತಿಯ ಭಾವೀ ಕೃತ್ಯಗಳನ್ನು ಸೇರಿಸಿ ಎಲ್ಲವನ್ನೂ ಮುನ್ನರಿಯಲೇಬೇಕೆಂಬ ಊಹೆಯ ಮೇಲೆ ಆಧಾರಿಸಲ್ಪಟ್ಟಿವೆ. ಆದರೆ ಈ ಊಹೆಯು ಯುಕ್ತವಾಗಿದೆಯೊ? ತನ್ನ ಪವಿತ್ರ ಶಾಸ್ತ್ರಗಳಲ್ಲಿ ದೇವರು ಏನನ್ನು ಪ್ರಕಟಪಡಿಸುತ್ತಾನೊ ಅದು ಬೇರೆ ಸಂಗತಿಯನ್ನು ಸೂಚಿಸುತ್ತದೆ.
ಉದಾಹರಣೆಗಾಗಿ, ಶಾಸ್ತ್ರಗಳು ಹೇಳುವುದೇನೆಂದರೆ, “ದೇವರು ಅಬ್ರಹಾಮನನ್ನು ಪರಿಶೋಧಿಸಿ”ದನು. ತನ್ನ ಮಗನಾದ ಇಸಾಕನನ್ನು ಸರ್ವಾಂಗಹೋಮವಾಗಿ ಅರ್ಪಿಸಲಿಕ್ಕಾಗಿ ಆಜ್ಞಾಪಿಸುವ ಮೂಲಕ ಹಾಗೆ ಮಾಡಿದನು. ಅಬ್ರಹಾಮನು ಇಸಾಕನನ್ನು ಇನ್ನೇನು ಅರ್ಪಿಸಲಿದ್ದಾಗ, ದೇವರು ಅವನನ್ನು ತಡೆಗಟ್ಟಿ ಹೇಳಿದ್ದು: “ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು [“ನನಗೆ ಈಗ ತಿಳಿಯಿತು,” NW].” (ಆದಿಕಾಂಡ 22:1-12, ಓರೆಅಕ್ಷರಗಳು ನಮ್ಮವು.) ಅಬ್ರಹಾಮನು ಈ ಆಜ್ಞೆಗೆ ವಿಧೇಯನಾಗುವನೆಂದು ದೇವರಿಗೆ ಮುಂಚೆಯೇ ತಿಳಿದಿರುತ್ತಿದ್ದಲ್ಲಿ, ಆತನು ಈ ಹೇಳಿಕೆಯನ್ನು ನುಡಿಯುತ್ತಿದ್ದನೊ? ಅದೊಂದು ಪ್ರಾಮಾಣಿಕವಾದ ಪರೀಕ್ಷೆಯಾಗಿದ್ದಿರಸಾಧ್ಯವಿತ್ತೊ?
ಇನ್ನೂ ಹೆಚ್ಚಾಗಿ, ದೇವರು ತಾನು ಮಾಡಿರುವ ಯಾವುದೊ ವಿಷಯದಲ್ಲಿ ಅಥವಾ ಮಾಡಲು ಯೋಚಿಸುತ್ತಿರುವ ವಿಷಯದಲ್ಲಿ ಸ್ವತಃ ‘ಮನಮರುಗು’ವುದರ ಕುರಿತು ಪದೇ ಪದೇ ಮಾತಾಡಿದನೆಂದು ಪುರಾತನ ಪ್ರವಾದಿಗಳು ವರದಿಸಿದರು. ಉದಾಹರಣೆಗಾಗಿ, ತಾನು “ಸೌಲನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪ” [ನಾಚಾಮ್ ಎಂಬ ಹೀಬ್ರು ಪದದಿಂದ]ಪಟ್ಟೆನೆಂದು ದೇವರು ಹೇಳಿದನು. (1 ಸಮುವೇಲ 15:11, 35; ಹೋಲಿಸಿರಿ ಯೆರೆಮೀಯ 18:7-10; ಯೋನ 3:10.) ದೇವರು ಪರಿಪೂರ್ಣನಾಗಿರುವುದರಿಂದ, ಸೌಲನನ್ನು ಇಸ್ರಾಯೇಲಿನ ಪ್ರಥಮ ರಾಜನಾಗಿ ಆರಿಸಿಕೊಂಡದ್ದರಲ್ಲಿ ದೇವರು ಒಂದು ತಪ್ಪು ಮಾಡಿದನೆಂಬುದನ್ನು ಈ ವಚನಗಳು ಅರ್ಥೈಸಸಾಧ್ಯವಿಲ್ಲ. ಬದಲಾಗಿ, ಸೌಲನು ನಂಬಿಕೆಯಿಲ್ಲದವನೂ ಅವಿಧೇಯನೂ ಆಗಿ ಪರಿಣಮಿಸಿದ್ದಕ್ಕಾಗಿ ದೇವರು ವ್ಯಥೆಪಟ್ಟನೆಂಬುದನ್ನು ಅವು ಸೂಚಿಸುತ್ತಿರಬೇಕು. ದೇವರು ಸೌಲನ ಕ್ರಿಯೆಗಳನ್ನು ಮುನ್ನರಿಯುತ್ತಿದ್ದಲ್ಲಿ ತನ್ನನ್ನು ಸೂಚಿಸಿಕೊಳ್ಳುವಾಗ ಅಂತಹ ಒಂದು ಅಭಿವ್ಯಕ್ತಿಯನ್ನು ಆತನು ಉಪಯೋಗಿಸುವುದು ಅರ್ಥಹೀನವಾದದ್ದಾಗಿರುತ್ತಿತ್ತು.
ಅದೇ ಪದವು, ಶಾಸ್ತ್ರಗಳಲ್ಲಿನ ಅತಿ ಪ್ರಾಚೀನ ಭಾಗದಲ್ಲಿ ತೋರಿಬರುತ್ತದೆ. ಅಲ್ಲಿ ನೋಹನ ದಿನಗಳಿಗೆ ಸೂಚಿಸುತ್ತಾ ಅದು ಹೇಳುವುದು: “ಯೆಹೋವನು . . . ತಾನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು. ಮತ್ತು ಯೆಹೋವನು—ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂಮಿಯ ಮೇಲಿನಿಂದ ಅಳಿಸಿಬಿಡುವೆನು; ಅದನ್ನು ಉಂಟುಮಾಡಿದ್ದಕ್ಕೆ ನನ್ನಲ್ಲಿ ಪಶ್ಚಾತ್ತಾಪಹುಟ್ಟಿತು . . . ಅಂದುಕೊಂಡನು.” (ಆದಿಕಾಂಡ 6:6, 7) ಪುನಃ ಇಲ್ಲಿ, ಮನುಷ್ಯನ ಕೃತ್ಯಗಳು ದೇವರಿಂದ ಪೂರ್ವನಿರ್ಧರಿಸಲ್ಪಡುವುದಿಲ್ಲವೆಂಬ ವಿಷಯವು ಸೂಚಿಸಲ್ಪಟ್ಟಿದೆ. ದೇವರು ಮರುಗಿದ್ದು, ದುಃಖಗೊಂಡದ್ದು ಮತ್ತು ನೊಂದುಕೊಂಡದ್ದು, ತನ್ನ ಸ್ವಂತ ಕೃತ್ಯಗಳು ತಪ್ಪಾಗಿದ್ದುದರಿಂದಲ್ಲ, ಬದಲಾಗಿ ಮನುಷ್ಯನ ದುಷ್ಟತನವು ಅತಿಯಾಗಿದ್ದುದರಿಂದಲೇ. ನೋಹ ಮತ್ತು ಅವನ ಕುಟುಂಬವನ್ನು ಬಿಟ್ಟು, ಎಲ್ಲ ಮಾನವಕುಲವನ್ನು ನಾಶಮಾಡುವುದು ಆವಶ್ಯಕವಾಗಿ ಪರಿಣಮಿಸಿದ್ದಕ್ಕಾಗಿ ಸೃಷ್ಟಿಕರ್ತನು ಮರುಗಿದನು. ದೇವರು ನಮಗೆ ಆಶ್ವಾಸನೆ ನೀಡುವುದು: “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ.”—ಯೆಹೆಜ್ಕೇಲ 33:11; ಹೋಲಿಸಿ ಧರ್ಮೋಪದೇಶಕಾಂಡ 32:4, 5.
ಹಾಗಾದರೆ ದೇವರಿಗೆ, ಆದಾಮನು ಪಾಪಕ್ಕೆ ವಶವಾಗುವ ಕುರಿತಾಗಿ ಮತ್ತು ಮಾನವ ಕುಟುಂಬದ ಮೇಲೆ ಇದು ತರಲಿದ್ದ ವಿಪತ್ಕಾರಕ ಫಲಿತಾಂಶಗಳ ಕುರಿತಾಗಿ ಮುನ್ನರಿವಿತ್ತೊ ಮತ್ತು ಆತನೇ ಅದನ್ನು ವಿಧಿಸಿದನೊ? ನಾವೇನನ್ನು ಪರಿಗಣಿಸಿದ್ದೇವೊ ಅದು, ಈ ವಿಷಯವು ಸತ್ಯವಾಗಿರಲಾರದು ಎಂಬುದನ್ನು ತೋರಿಸುತ್ತದೆ. ಮತ್ತು ದೇವರಿಗೆ ಇದೆಲ್ಲದ್ದರ ಕುರಿತಾಗಿ ಮುನ್ನರಿವಿರುತ್ತಿದ್ದಲ್ಲಿ, ಆತನು ಮನುಷ್ಯನನ್ನು ನಿರ್ಮಿಸಿದಾಗ ಪಾಪದ ಕರ್ತೃವಾಗುತ್ತಿದ್ದನು, ಮತ್ತು ಎಲ್ಲ ಮಾನವ ದುಷ್ಟತನ ಹಾಗೂ ಕಷ್ಟಾನುಭವಕ್ಕಾಗಿ ದೇವರು ಉದ್ದೇಶಪೂರ್ವಕವಾಗಿ ಜವಾಬ್ದಾರನಾಗುತ್ತಿದ್ದನು. ಸ್ಪಷ್ಟವಾಗಿ, ದೇವರು ತನ್ನ ಕುರಿತಾಗಿಯೇ ಶಾಸ್ತ್ರವಚನಗಳಲ್ಲಿ ಏನನ್ನು ಪ್ರಕಟಪಡಿಸುತ್ತಾನೊ ಅದರೊಂದಿಗೆ ಇದನ್ನು ಹೊಂದಿಸಲು ಸಾಧ್ಯವಿಲ್ಲ. ಆತನು ದುಷ್ಟತನವನ್ನು ದ್ವೇಷಿಸುವ ಒಬ್ಬ ಪ್ರೀತಿಯ ಮತ್ತು ನ್ಯಾಯದ ದೇವರಾಗಿದ್ದಾನೆ.—ಕೀರ್ತನೆ 33:5; ಜ್ಞಾನೋಕ್ತಿ 15:9; 1 ಯೋಹಾನ 4:8.
ಮನುಷ್ಯನ ಎರಡು ಅಂತ್ಯಸ್ಥಿತಿಗಳು
ನಮ್ಮ ವ್ಯಕ್ತಿಗತ ಭವಿಷ್ಯತ್ತು ಯಾವುದೋ ರೀತಿಯಲ್ಲಿ ದೇವರಿಂದ ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟಿದೆ ಅಥವಾ ಪೂರ್ವನಿರ್ಧಾರಿತವಾಗಿದೆಯೆಂದು ಪವಿತ್ರ ಶಾಸ್ತ್ರವಚನಗಳು ಪ್ರಕಟಪಡಿಸುವುದಿಲ್ಲ. ಬದಲಿಗೆ, ದೇವರು ಮನುಷ್ಯನಿಗಾಗಿ ಕೇವಲ ಎರಡು ಸಂಭವನೀಯ ಅಂತ್ಯಸ್ಥಿತಿಗಳನ್ನು ಮುಂತಿಳಿಸಿದ್ದಾನೆಂಬುದನ್ನು ಅವು ಪ್ರಕಟಪಡಿಸುತ್ತವೆ. ಯಾವ ಅಂತ್ಯಸ್ಥಿತಿ ತನ್ನದಾಗುವುದೆಂಬುದನ್ನು ಆರಿಸಿಕೊಳ್ಳಲು, ದೇವರು ಪ್ರತಿಯೊಬ್ಬ ವ್ಯಕ್ತಿಗೆ ಇಚ್ಛಾ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಬಹು ಸಮಯದ ಹಿಂದೆ ಪ್ರವಾದಿಯಾದ ಮೋಶೆಯು ಇಸ್ರಾಯೇಲ್ಯರಿಗೆ ಘೋಷಿಸಿದ್ದು: “ನಾನು ಜೀವಮರಣಗಳನ್ನೂ . . . ನಿಮ್ಮ ಮುಂದೆ ಇಟ್ಟಿದ್ದೇನೆ; . . . ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.” (ಧರ್ಮೋಪದೇಶಕಾಂಡ 30:19, 20, ಓರೆಅಕ್ಷರಗಳು ನಮ್ಮವು.) ದೇವರ ಪ್ರವಾದಿಯಾದ ಯೇಸು ಮುನ್ನೆಚ್ಚರಿಸಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಎರಡು ದಾರಿಗಳು, ಎರಡು ಅಂತ್ಯಸ್ಥಿತಿಗಳು. ನಮ್ಮ ಭವಿಷ್ಯತ್ತು ನಮ್ಮ ಸ್ವಂತ ಕೃತ್ಯಗಳ ಮೇಲೆ ಅವಲಂಬಿತವಾಗಿದೆ. ದೇವರಿಗೆ ವಿಧೇಯರಾಗುವುದು ಜೀವದ ಅರ್ಥದಲ್ಲಿದೆ, ಆತನಿಗೆ ಅವಿಧೇಯರಾಗುವುದು ಮರಣದ ಅರ್ಥದಲ್ಲಿದೆ.—ರೋಮಾಪುರ 6:23.
ದೇವರು “ನಾಲ್ಕು ದಿಕ್ಕಿನಲ್ಲಿರುವ ಮನಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ.” (ಅ. ಕೃತ್ಯಗಳು 17:30, 31) ನೋಹದ ದಿನದಲ್ಲಿದ್ದ ಅಧಿಕಾಂಶ ಮಾನವಕುಲವು ದೇವರಿಗೆ ಅವಿಧೇಯರಾಗಲು ಆರಿಸಿಕೊಂಡು ನಾಶಗೊಳಿಸಲ್ಪಟ್ಟಂತೆಯೇ, ಇಂದು ಅಧಿಕಾಂಶ ಮಂದಿ ದೇವರ ಆಜ್ಞೆಗಳಿಗೆ ವಿಧೇಯರಾಗುವುದಿಲ್ಲ. ಆದರೂ, ಯಾರು ನಾಶವಾಗುವರು ಮತ್ತು ಯಾರು ರಕ್ಷಣೆಯನ್ನು ಪಡೆದುಕೊಳ್ಳುವರು ಎಂಬುದನ್ನು ದೇವರು ಈಗಾಗಲೇ ನಿರ್ಧರಿಸಿಲ್ಲ. ವಾಸ್ತವದಲ್ಲಿ, ‘ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ’ ಎಂದು ದೇವರ ವಾಕ್ಯವು ಹೇಳುತ್ತದೆ. (2 ಪೇತ್ರ 3:9) ತೀರ ದುಷ್ಟ ಜನರು ಕೂಡ ದೇವರ ಅನುಗ್ರಹವನ್ನು ಪಡೆಯಲಿಕ್ಕೋಸ್ಕರ ಪಶ್ಚಾತ್ತಾಪಪಡಬಲ್ಲರು, ವಿಧೇಯರಾಗಬಲ್ಲರು, ಮತ್ತು ಆವಶ್ಯಕ ಬದಲಾವಣೆಗಳನ್ನು ಮಾಡಬಲ್ಲರು.—ಯೆಶಾಯ 1:18-20; 55:6, 7; ಯೆಹೆಜ್ಕೇಲ 33:14-16; ರೋಮಾಪುರ 2:4-8.
ವಿಧೇಯರಾಗಿರುವವರಿಗೆ, ಒಂದು ಶಾಂತಿಪೂರ್ಣ ಪ್ರಮೋದವನದಲ್ಲಿ, ದುಷ್ಟತನ, ಹಿಂಸಾಚಾರ, ಮತ್ತು ಯುದ್ಧದಿಂದ ಶುದ್ಧೀಕರಿಸಲ್ಪಟ್ಟಿರುವ ಒಂದು ಭೂಮಿ, ಇನ್ನು ಮುಂದೆ ಹಸಿವೆ, ಕಷ್ಟಾನುಭವ, ಅಸ್ವಸ್ಥತೆ ಮತ್ತು ಮರಣವು ಇಲ್ಲದಿರುವ ಒಂದು ಲೋಕದಲ್ಲಿ ದೇವರು ನಿತ್ಯಜೀವವನ್ನು ವಾಗ್ದಾನಿಸುತ್ತಾನೆ. (ಕೀರ್ತನೆ 37:9-11; 46:9; ಯೆಶಾಯ 2:4; 11:6-9; 25:6-8; 35:5, 6; ಪ್ರಕಟನೆ 21:4) ಸತ್ತವರೂ ಪುನರುತ್ಥಾನಗೊಳಿಸಲ್ಪಟ್ಟು, ದೇವರನ್ನು ಸೇವಿಸುವ ಅವಕಾಶವು ಅವರಿಗೆ ಕೊಡಲ್ಪಡುವುದು.—ದಾನಿಯೇಲ 12:2; ಯೋಹಾನ 5:28, 29.
ಕೀರ್ತನೆಗಾರನು ಹೇಳುವುದು: “ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವದು. ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟನ ಸಂತಾನವು ತೆಗೆದುಹಾಕಲ್ಪಡುವದು.” (ಕೀರ್ತನೆ 37:37, 38) ನಿಮ್ಮ ಭವಿಷ್ಯತ್ತು ಏನಾಗಿರುವುದು? ಅದೆಲ್ಲವೂ ನಿಮ್ಮ ಮೇಲೆ ಅವಲಂಬಿಸುತ್ತದೆ. ನಿಮಗಾಗಿ ಒಂದು ಸಂತೋಷದಾಯಕ, ಶಾಂತಿಪೂರ್ಣ ಭವಿಷ್ಯತ್ತನ್ನು ಖಚಿತಪಡಿಸಿಕೊಳ್ಳುವಂತೆ ನಿಮ್ಮನ್ನು ಶಕ್ತಗೊಳಿಸಲು, ಈ ಪತ್ರಿಕೆಯ ಪ್ರಕಾಶಕರು ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಮಗೆ ಒದಗಿಸಲು ಸಂತೋಷಿಸುವರು.
[ಪಾದಟಿಪ್ಪಣಿ]
a ಪವಿತ್ರ ಶಾಸ್ತ್ರಗಳಲ್ಲಿ ಯೆಹೋವ ಎಂಬ ಹೆಸರು 7,000ಕ್ಕಿಂತಲೂ ಹೆಚ್ಚು ಸಲ ತೋರಿಬರುತ್ತದೆ; 1993, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 3-5ನೆಯ ಪುಟಗಳಲ್ಲಿ ತೋರಿಬಂದ, “ಸರ್ವಶ್ರೇಷ್ಠ ನಾಮದ ರಹಸ್ಯವನ್ನು ಹೊರಗೆಡಹುವುದು” ಎಂಬ ಲೇಖನವನ್ನು ನೋಡಿರಿ.
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರು ತನ್ನ ಉದ್ದೇಶಗಳ ಪೂರೈಸುವಿಕೆಯಲ್ಲಿ ತನ್ನ ಮುನ್ನರಿವಿನ ಶಕ್ತಿಯನ್ನು ಉಪಯೋಗಿಸುತ್ತಾನೆ
[ಪುಟ 8 ರಲ್ಲಿರುವ ಚಿತ್ರ]
ದೇವರು ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸು’ತ್ತಾನೆ. 2 ಪೇತ್ರ 3:9
[ಪುಟ 7 ರಲ್ಲಿರುವ ಚಿತ್ರ]
ಅಬ್ರಹಾಮನು ತನ್ನ ಮಗನನ್ನು ಬಲಿಕೊಡಲು ಸಿದ್ಧನಾಗಿರುವನೆಂದು ದೇವರಿಗೆ ಮುಂಚಿತವಾಗಿ ತಿಳಿದಿರುತ್ತಿದ್ದಲ್ಲಿ, ಅದೊಂದು ಪ್ರಾಮಾಣಿಕವಾದ ಪರೀಕ್ಷೆಯಾಗಿರುತ್ತಿತ್ತೊ?