ರಾಜ ಸೊಲೊಮೋನನ ಐಶ್ವರ್ಯವು ಅತಿಶಯಿಸಿ ಹೇಳಲ್ಪಟ್ಟಿದೆಯೊ?
“ಸೊಲೊಮೋನನಿಗೆ . . . ಪ್ರತಿವರುಷ ಆರುನೂರರುವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು.”—1 ಅರಸುಗಳು 10:14, 15.
ಆ ಬೈಬಲ್ ವಚನಕ್ಕನುಸಾರ, ರಾಜ ಸೊಲೊಮೋನನು ಒಂದು ವರ್ಷದಲ್ಲಿ 25 ಟನ್ನುಗಳಿಗಿಂತಲೂ ಹೆಚ್ಚು ಚಿನ್ನವನ್ನು ಪಡೆದನು! ಇದು ಇಂದು 24,00,00,000 ಡಾಲರುಗಳಷ್ಟು ಮೌಲ್ಯದ್ದಾಗಿರುವುದು. ಅದು ಇಸವಿ 1800ರಲ್ಲಿ, ಲೋಕವ್ಯಾಪಕವಾಗಿ ಗಣಿಯಿಂದ ತೆಗೆಯಲ್ಪಟ್ಟ ಚಿನ್ನಕ್ಕಿಂತ ಬಹುಮಟ್ಟಿಗೆ ಎರಡು ಪಟ್ಟು ಹೆಚ್ಚಾಗಿತ್ತು. ಇದು ಸಾಧ್ಯವೊ? ಅಗೆತಶಾಸ್ತ್ರ ಸಾಕ್ಷ್ಯವು ಏನನ್ನು ತೋರಿಸುತ್ತದೆ? ಸೊಲೊಮೋನನ ಐಶ್ವರ್ಯದ ಕುರಿತಾದ ಬೈಬಲಿನ ದಾಖಲೆಯು ನಿಶ್ಚಯವಾಗಿಯೂ ನ್ಯಾಯಸಮ್ಮತವಾಗಿ ತೋರುತ್ತದೆಂದು ಅದು ಸೂಚಿಸುತ್ತದೆ. ಬಿಬ್ಲಿಕಲ್ ಆರ್ಕಿಆಲಾಜಿ ರಿವ್ಯೂ ಹೇಳುವುದು:
◻ ಐಗುಪ್ತದ ರಾಜನಾದ IIIನೆಯ ತೂಟ್ಮೋಸ (ಸಾ.ಶ.ಪೂ. ಎರಡನೆಯ ಸಹಸ್ರ ವರ್ಷ) ಕರ್ನ್ಯಾಕ್ನಲ್ಲಿರುವ ಆಮನ್-ರಾನ ದೇವಾಲಯಕ್ಕೆ ಸರಿಸುಮಾರು 13.5 ಟನ್ನುಗಳಷ್ಟು ಚಿನ್ನದ ವಸ್ತುಗಳನ್ನು ಕೊಟ್ಟನು—ಮತ್ತು ಇದು ಕೊಡುಗೆಯ ಕೇವಲ ಒಂದು ಭಾಗವಾಗಿತ್ತು.
◻ ದೇವತೆಗಳಿಗೆ, ರಾಜನಾದ Iನೆಯ ಓಸೊರ್ಕಾನ್ನಿಂದ ಅರ್ಪಿಸಲ್ಪಟ್ಟ ಸರಿಸುಮಾರು 383 ಟನ್ನುಗಳಷ್ಟು ಮೊತ್ತದ ಚಿನ್ನ ಮತ್ತು ಬೆಳ್ಳಿಯ ಕೊಡುಗೆಗಳನ್ನು ಐಗುಪ್ತ್ಯ ಸ್ಮಾರಕಲೇಖನಗಳು ದಾಖಲಿಸುತ್ತವೆ.
ಇನ್ನೂ ಹೆಚ್ಚಾಗಿ, ಗ್ರೇಟ್ ಏಜಸ್ ಆಫ್ ಮ್ಯಾನ್ ಎಂಬ ಸರಣಿಯ ಕ್ಲಾಸಿಕಲ್ ಗ್ರೀಸ್ ಎಂಬ ಸಂಪುಟವು ವರದಿಸುವುದು:
◻ ತ್ರೇಸ್ನಲ್ಲಿದ್ದ ಪಾಂಗೇಯನ್ ಗಣಿಗಳು, ರಾಜನಾದ IIನೆಯ ಫಿಲಿಪ್ಗಾಗಿ (ಸಾ.ಶ.ಪೂ. 359-336) ಪ್ರತಿ ವರ್ಷ 37 ಟನ್ನುಗಳಿಗಿಂತಲೂ ಹೆಚ್ಚು ಚಿನ್ನವನ್ನು ಕೊಟ್ಟವು.
◻ ಫಿಲಿಪ್ಪನ ಮಗನಾದ ಮಹಾ ಅಲೆಕ್ಸಾಂಡರನು (ಸಾ.ಶ.ಪೂ. 336-323) ಪರ್ಷಿಯನ್ ಸಾಮ್ರಾಜ್ಯದ ರಾಜಧಾನಿಯಾದ ಸೂಸವನ್ನು ಸೆರೆಹಿಡಿದಾಗ, 1,000 ಟನ್ನುಗಳಿಗಿಂತ ಎಷ್ಟೋ ಹೆಚ್ಚು ಚಿನ್ನದ ಒಟ್ಟು ಮೊತ್ತದ ನಿಧಿಗಳು ಕಂಡುಹಿಡಿಯಲ್ಪಟ್ಟಿದ್ದವು.—ದ ನ್ಯೂ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ.
ಆದುದರಿಂದ ರಾಜ ಸೊಲೊಮೋನನ ಐಶ್ವರ್ಯದ ಕುರಿತಾದ ಬೈಬಲಿನ ವರ್ಣನೆಯು ಅಸಹಜವಾದದ್ದಾಗಿರುವುದಿಲ್ಲ. ಸೊಲೊಮೋನನು “ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ” ಆ ಸಮಯದಲ್ಲಿನ “ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು” ಎಂಬುದನ್ನೂ ನೆನಪಿನಲ್ಲಿಡಿರಿ.—1 ಅರಸುಗಳು 10:23.
ಸೊಲೊಮೋನನು ತನ್ನ ಐಶ್ವರ್ಯವನ್ನು ಹೇಗೆ ಉಪಯೋಗಿಸಿದನು? ಅವನ ಸಿಂಹಾಸನವು “ಚೊಕ್ಕಬಂಗಾರ”ದಿಂದ ಲೇಪಿಸಲ್ಪಟ್ಟಿತು, ಅವನ ಪಾನಪಾತ್ರೆಗಳು “ಬಂಗಾರದವು”ಗಳಾಗಿದ್ದವು, ಮತ್ತು ಅವನಲ್ಲಿ “ಬಂಗಾರದ ತಗಡಿನ” 200 ದೊಡ್ಡ ಗುರಾಣಿಗಳು ಮತ್ತು 300 ಖೇಡ್ಯಗಳು ಇದ್ದವು. (1 ಅರಸುಗಳು 10:16-21) ಎಲ್ಲಕ್ಕಿಂತಲೂ ಮಿಗಿಲಾಗಿ, ಸೊಲೊಮೋನನ ಬಂಗಾರವು, ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯದ ಸಂಬಂಧದಲ್ಲಿ ಉಪಯೋಗಿಸಲ್ಪಟ್ಟಿತು. ದೇವಾಲಯದ ದೀಪಸ್ತಂಭಗಳು ಮತ್ತು ಮುಳ್ಳು ಕವಲುಗೋಲುಗಳು, ಬಟ್ಟಲುಗಳು, ಹೂಜಿಗಳು, ಮತ್ತು ಬೋಗುಣಿಗಳಂತಹ ಪವಿತ್ರ ಪಾತ್ರೆಗಳು ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. ಅತಿ ಪವಿತ್ರ ಸ್ಥಾನದಲ್ಲಿದ್ದ 4.5 ಮೀಟರ್ ಉದ್ದದ ಕೆರೂಬಿಗಳು, ಧೂಪದ ವೇದಿ, ಮತ್ತು ಆಲಯದ ಒಳಗಿನ ಭಾಗವೂ ಚಿನ್ನದಿಂದ ಲೇಪಿಸಲ್ಪಟ್ಟಿತ್ತು.—1 ಅರಸುಗಳು 6:20-22; 7:48-50; 1 ಪೂರ್ವಕಾಲವೃತ್ತಾಂತ 28:17.
ಚಿನ್ನದಿಂದ ಲೇಪಿಸಲ್ಪಟ್ಟ ಒಂದು ದೇವಾಲಯದ ಕುರಿತಾಗಿ ಏನು? ಆಸಕ್ತಿಕರವಾಗಿ, ಚಿನ್ನದ ಅಂತಹ ಉಪಯೋಗವು ಪುರಾತನ ಲೋಕದಲ್ಲಿ ಯಾವುದೇ ರೀತಿಯಲ್ಲಿ ಅಸಾಮಾನ್ಯವಾಗಿರಲಿಲ್ಲ. ಬಿಬ್ಲಿಕಲ್ ಆರ್ಕಿಆಲಜಿ ರಿವ್ಯೂ ಹೇಳುವುದೇನಂದರೆ ಐಗುಪ್ತದ IIIನೆಯ ಅಮಿನೊಫಿಸ್ “ಮಹಾ ದೇವನಾದ ಆಮುನ್ನನ್ನು, ತೀಬ್ಸ್ನಲ್ಲಿ ‘ಎಲ್ಲ ಕಡೆಯೂ ಚಿನ್ನದಿಂದ ಲೇಪಿಸಲ್ಪಟ್ಟ, ಅದರ ನೆಲವು ಬೆಳ್ಳಿಯಿಂದ ಅಲಂಕರಿಸಲ್ಪಟ್ಟ, [ಮತ್ತು] ಅದರ ಎಲ್ಲಾ ಬಾಗಿಲುಗಳು ಇಲೆಕ್ಟ್ರಂ’”—ಚಿನ್ನ ಮತ್ತು ಬೆಳ್ಳಿಯ ಒಂದು ಮಿಶ್ರಲೋಹ—“ನಿಂದ ಲೇಪಿಸಲ್ಪಟ್ಟ ಒಂದು ದೇವಾಲಯವನ್ನು ಮಾಡಿ ಸನ್ಮಾನಿಸಿದನು.” ಇನ್ನೂ ಹೆಚ್ಚಾಗಿ, ಅಶ್ಶೂರದ ಎಸ್ಸಾರ-ಹಾಡ್ಡನ್ (ಸಾ.ಶ.ಪೂ. ಏಳನೆಯ ಶತಮಾನ) ಆಶೂರ್ನ ಆಲಯದ ಗೋಡೆಗಳನ್ನು ಮತ್ತು ಬಾಗಿಲುಗಳನ್ನು ಚಿನ್ನದೊಂದಿಗೆ ಲೇಪಿಸಿದನು. ಹಾರಾನ್ನಲ್ಲಿದ್ದ ಸಿನ್ನ ದೇವಾಲಯದ ಕುರಿತಾಗಿ, ಬಾಬೆಲಿನ ನಬಾನಿಡಸ್ (ಸಾ.ಶ.ಪೂ. ಆರನೆಯ ಶತಮಾನ) ದಾಖಲಿಸಿದ್ದು: “ನಾನು ಅದರ ಗೋಡೆಗಳನ್ನು ಚಿನ್ನ ಮತ್ತು ಬೆಳ್ಳಿಯಿಂದ ಹೊದಿಸಿದೆನು, ಮತ್ತು ಅವುಗಳು ಸೂರ್ಯನಂತೆ ಹೊಳೆಯುವ ಹಾಗೆ ಮಾಡಿದೆನು.”
ಹೀಗೆ, ಸೊಲೊಮೋನನ ಐಶ್ವರ್ಯದ ಕುರಿತಾದ ಬೈಬಲ್ ಸಂಬಂಧಿತ ವೃತ್ತಾಂತವು ಅತಿಶಯಗೊಳಿಸಿ ಹೇಳಲ್ಪಟ್ಟಿಲ್ಲವೆಂಬುದನ್ನು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ.