ತನ್ನ ಹೆಸರಿಗೆ ಯೋಗ್ಯವಾಗಿರುವ ಯೆರೂಸಲೇಮ್
“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ . . . ಮಾಡುವೆನು.”—ಯೆಶಾಯ 65:18.
1. ದೇವರು ಆಯ್ದುಕೊಂಡಿದ್ದ ಪಟ್ಟಣದ ಬಗ್ಗೆ ಎಜ್ರನಿಗೆ ಹೇಗನಿಸಿತು?
ಬೈಬಲಿನ ಉತ್ಸುಕ ವಿದ್ಯಾರ್ಥಿಯೋಪಾದಿ ಯೆಹೂದಿ ಯಾಜಕನಾದ ಎಜ್ರನು, ಯೆಹೋವನ ಶುದ್ಧಾರಾಧನೆಯೊಂದಿಗೆ ಯೆರೂಸಲೇಮಿಗೆ ಒಮ್ಮೆ ಇದ್ದ ಸಂಬಂಧವನ್ನು ಮಾನ್ಯಮಾಡಿದನು. (ಧರ್ಮೋಪದೇಶಕಾಂಡ 12:5; ಎಜ್ರ 7:27) ದೇವರ ಪಟ್ಟಣಕ್ಕಾಗಿ ಅವನಲ್ಲಿದ್ದ ಪ್ರೀತಿಯು, ಅವನು ಬರೆಯುವಂತೆ ಪ್ರೇರೇಪಿಸಲ್ಪಟ್ಟ ಬೈಬಲಿನ ಭಾಗವಾಗಿರುವ ಒಂದನೆಯ ಹಾಗೂ ಎರಡನೆಯ ಪೂರ್ವಕಾಲವೃತ್ತಾಂತಗಳು ಮತ್ತು ಎಜ್ರನ ಪುಸ್ತಕಗಳಲ್ಲಿ ಪ್ರಕಟವಾಗಿದೆ. ಯೆರೂಸಲೇಮ್ ಎಂಬ ಹೆಸರು ಇಡೀ ಬೈಬಲಿನಲ್ಲಿ 800 ಬಾರಿಗಿಂತಲೂ ಹೆಚ್ಚು ಸಮಯ ಕಂಡುಬಂದರೂ, ಈ ಐತಿಹಾಸಿಕ ದಾಖಲೆಗಳಲ್ಲಿ ಅದು ಬಹುಮಟ್ಟಿಗೆ 25 ಪ್ರತಿಶತದಷ್ಟು ಬಾರಿ ಕಾಣಿಸಿಕೊಳ್ಳುತ್ತದೆ.
2. ಯೆರೂಸಲೇಮ್ ಎಂಬ ಹೆಸರಿನ ಮಹತ್ವದಲ್ಲಿ ಯಾವ ಪ್ರವಾದನಾತ್ಮಕ ಅರ್ಥವನ್ನು ನಾವು ಗ್ರಹಿಸಸಾಧ್ಯವಿದೆ?
2 ಬೈಬಲಿನ ಹೀಬ್ರೂ ಭಾಷೆಯಲ್ಲಿ, “ಯೆರೂಸಲೇಮ್” ಎಂಬುದು ಹೀಬ್ರೂ ಭಾಷೆಯ ದ್ವಿರೂಪ ಶೈಲಿಯಲ್ಲಿರುವುದಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ. ದ್ವಿರೂಪ ಶೈಲಿಯು ಅನೇಕ ವೇಳೆ, ಜೊತೆಜೊತೆಯಾಗಿ ಬರುವ ಕಣ್ಣುಗಳು, ಕಿವಿಗಳು, ಕೈಗಳು, ಮತ್ತು ಕಾಲುಗಳಂತಹ ವಸ್ತುಗಳಿಗಾಗಿ ಬಳಸಲ್ಪಡುತ್ತದೆ. ಈ ದ್ವಿರೂಪ ಶೈಲಿಯಲ್ಲಿ ಯೆರೂಸಲೇಮ್ ಎಂಬ ಹೆಸರು, ದೇವಜನರು ಇಬ್ಬಗೆಯ ಅರ್ಥದಲ್ಲಿ, ಅಂದರೆ ಆತ್ಮಿಕವಾಗಿ ಹಾಗೂ ಭೌತಿಕವಾಗಿ ಅನುಭವಿಸಲಿದ್ದ ಶಾಂತಿಯ ಮುನ್ಸೂಚಕವಾಗಿ ವೀಕ್ಷಿಸಲ್ಪಡಸಾಧ್ಯವಿತ್ತು. ಎಜ್ರನು ಇದನ್ನು ಪೂರ್ಣವಾಗಿ ಅರ್ಥಮಾಡಿಕೊಂಡನೊ ಇಲ್ಲವೊ ಎಂಬುದನ್ನು ಶಾಸ್ತ್ರವಚನಗಳು ಪ್ರಕಟಿಸುವುದಿಲ್ಲ. ಆದರೆ ಒಬ್ಬ ಯಾಜಕನೋಪಾದಿ, ಯೆಹೂದ್ಯರು ದೇವರೊಂದಿಗೆ ಶಾಂತಿಯನ್ನು ಅನುಭವಿಸುವಂತೆ ಸಹಾಯ ಮಾಡಲು ತನ್ನಿಂದ ಸಾಧ್ಯವಾದುದನ್ನು ಅವನು ಮಾಡಿದನು. ಯೆರೂಸಲೇಮ್ ಅದರ ಹೆಸರಿಗೆ, ಅಂದರೆ, “ಇಬ್ಬಗೆಯ ಶಾಂತಿಯ ಇರುವಿಕೆ [ಇಲ್ಲವೆ, ಅಸ್ತಿವಾರ]”ಕ್ಕೆ ಯೋಗ್ಯವಾಗಿರುವಂತೆ, ಅವನು ನಿಶ್ಚಯವಾಗಿಯೂ ಪ್ರಯಾಸಪಟ್ಟನು.—ಎಜ್ರ 7:6.
3. ಎಜ್ರನ ಚಟುವಟಿಕೆಗಳು ನಮ್ಮ ಗಮನಕ್ಕೆ ಪುನಃ ತರಲ್ಪಡುವ ಮುಂಚೆ ಎಷ್ಟು ವರ್ಷಗಳು ಗತಿಸಿಹೋಗುತ್ತವೆ, ಮತ್ತು ಯಾವ ಸಂದರ್ಭಗಳಲ್ಲಿ ನಾವು ಅವನನ್ನು ಬೈಬಲಲ್ಲಿ ಕಾಣುತ್ತೇವೆ?
3 ಎಜ್ರನು ಯೆರೂಸಲೇಮನ್ನು ಭೇಟಿಮಾಡಿದ ಮತ್ತು ನೆಹೆಮೀಯನು ಆ ಪಟ್ಟಣವನ್ನು ಬಂದು ತಲಪಿದ ಸಮಯದ ನಡುವೆ, 12 ವರ್ಷಗಳ ಕಾಲ ಎಜ್ರನು ಎಲ್ಲಿದ್ದನೆಂಬುದನ್ನು ಬೈಬಲು ಸೂಚಿಸುವುದಿಲ್ಲ. ಎಜ್ರನು ಯೆರೂಸಲೇಮಿನಲ್ಲಿ ಇರಲಿಲ್ಲವೆಂಬುದಕ್ಕೆ, ಆ ಸಮಯದಲ್ಲಿನ ಜನಾಂಗದ ಬಲಹೀನ ಆತ್ಮಿಕ ಪರಿಸ್ಥಿತಿಯು ಸೂಚಿಸುತ್ತದೆ. ಆದರೂ, ಪಟ್ಟಣದ ಗೋಡೆಯು ಪುನಃ ಕಟ್ಟಲ್ಪಟ್ಟ ತರುವಾಯ, ಯೆರೂಸಲೇಮಿನಲ್ಲಿ ಎಜ್ರನು ಮತ್ತೆ ಒಬ್ಬ ನಂಬಿಗಸ್ತ ಯಾಜಕನಾಗಿ ಸೇವೆಸಲ್ಲಿಸುವುದನ್ನು ಬೈಬಲು ತಿಳಿಸುತ್ತದೆ.
ಅದ್ಭುತಕರವಾದ ಸಮ್ಮೇಳನ ದಿನ
4. ಇಸ್ರಾಯೇಲಿನ ಏಳನೆಯ ತಿಂಗಳಿನ ಮೊದಲನೆಯ ದಿನದ ಪ್ರಮುಖತೆಯು ಏನಾಗಿತ್ತು?
4 ಯೆರೂಸಲೇಮಿನ ಗೋಡೆಯು, ಇಸ್ರಾಯೇಲಿನ ಧಾರ್ಮಿಕ ಕ್ಯಾಲೆಂಡರಿನ ಏಳನೆಯ ತಿಂಗಳಾದ ತಿಷ್ರಿ—ಪ್ರಾಮುಖ್ಯವಾದ ಉತ್ಸವ ತಿಂಗಳು—ಆರಂಭವಾಗುವ ಮುಂಚೆ ಪೂರ್ಣಗೊಂಡಿತು. ತಿಷ್ರಿಯ ಮೊದಲನೆಯ ದಿನವು, ತುತೂರಿಯ ಧ್ವನಿ ಎಂಬುದಾಗಿ ಕರೆಯಲ್ಪಟ್ಟ ಒಂದು ವಿಶೇಷ ಅಮಾವಾಸ್ಯೆ ಉತ್ಸವವಾಗಿತ್ತು. ಆ ದಿನದಂದು, ಯಜ್ಞಗಳು ಯೆಹೋವನಿಗೆ ಅರ್ಪಿಸಲ್ಪಡುತ್ತಿರುವಾಗ, ಯಾಜಕರು ತುತೂರಿಗಳನ್ನು ಊದಿದರು. (ಅರಣ್ಯಕಾಂಡ 10:10; 29:1) ಈ ದಿನವು, ತಿಷ್ರಿಯ 10ನೆಯ ದಿನವಾದ ವಾರ್ಷಿಕ ದೋಷಪರಿಹಾರ ದಿನಕ್ಕಾಗಿ ಮತ್ತು ಅದೇ ತಿಂಗಳಿನ 15ರಿಂದ 21ನೆಯ ದಿನಾಂಕದ ವರೆಗೆ ನಡೆಯುತ್ತಿದ್ದ ಫಲಸಂಗ್ರಹದ ಆನಂದಭರಿತ ಉತ್ಸವಕ್ಕಾಗಿ ಇಸ್ರಾಯೇಲ್ಯರನ್ನು ತಯಾರುಗೊಳಿಸಿತು.
5. (ಎ) ಎಜ್ರ ಮತ್ತು ನೆಹೆಮೀಯರು “ಏಳನೆಯ ತಿಂಗಳಿನ ಪ್ರಥಮ ದಿನದ” ಸದುಪಯೋಗವನ್ನು ಹೇಗೆ ಮಾಡಿದರು? (ಬಿ) ಇಸ್ರಾಯೇಲ್ಯರು ಏಕೆ ಅತ್ತರು?
5 “ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ” ‘ಎಲ್ಲ ಜನರು’ ಕೂಡಿಬಂದರು. ಹಾಗೆ ಮಾಡುವಂತೆ ಅವರು ನೆಹೆಮೀಯ ಮತ್ತು ಎಜ್ರರಿಂದ ಬಹುಶಃ ಉತ್ತೇಜಿಸಲ್ಪಟ್ಟರು. ಸ್ತ್ರೀಪುರುಷರು ಮತ್ತು “ಗ್ರಹಿಸಶಕ್ತರಾದ” ಎಲ್ಲರು ಅಲ್ಲಿದ್ದರು. ಹೀಗೆ, ಚಿಕ್ಕ ಮಕ್ಕಳೂ ಅಲ್ಲಿ ನೆರೆದಿದ್ದು, ಎಜ್ರನು ಪೀಠದ ಮೇಲೆ ನಿಂತು ಧರ್ಮಶಾಸ್ತ್ರವನ್ನು “ಪ್ರಾತಃಕಾಲದಿಂದ ಮಧ್ಯಾಹ್ನದ ವರೆಗೂ” ಓದಿದಾಗ, ಗಮನವಿಟ್ಟು ಆಲಿಸಿದರು. (ನೆಹೆಮೀಯ 8:1-4) ಓದಲ್ಪಡುತ್ತಿದ್ದ ವಿಷಯವನ್ನು ಜನರು ಗ್ರಹಿಸುವಂತೆ ಲೇವಿಯರು ಅವರಿಗೆ ಸಹಾಯಮಾಡಿದರು. ಇದರಿಂದ, ತಾವೂ ತಮ್ಮ ಪೂರ್ವಜರೂ, ದೇವರ ಧರ್ಮಶಾಸ್ತ್ರಕ್ಕೆ ವಿಧೇಯತೆ ತೋರಿಸುವ ವಿಷಯದಲ್ಲಿ ಎಷ್ಟೊಂದು ತಪ್ಪಿಹೋಗಿದ್ದರೆಂಬುದನ್ನು ಇಸ್ರಾಯೇಲ್ಯರು ಗ್ರಹಿಸಿದಾಗ, ಅವರು ಅದಕ್ಕಾಗಿ ಅತ್ತರು.—ನೆಹೆಮೀಯ 8:5-9.
6, 7. ಯೆಹೂದ್ಯರು ಅಳುವುದನ್ನು ತಡೆಯಲು ನೆಹೆಮೀಯನು ಮಾಡಿದ ವಿಷಯದಿಂದ ಕ್ರೈಸ್ತರು ಯಾವ ಪಾಠವನ್ನು ಕಲಿತುಕೊಳ್ಳಬಲ್ಲರು?
6 ಆದರೆ ಇದು ಗೋಳಾಡುವ ಸಮಯವಾಗಿರಲಿಲ್ಲ. ಅದೊಂದು ಉತ್ಸವವಾಗಿತ್ತು, ಮತ್ತು ಯೆರೂಸಲೇಮಿನ ಗೋಡೆಯ ಪುನರ್ಕಟ್ಟುವಿಕೆಯನ್ನು ಜನರು ಆಗ ತಾನೇ ಪೂರ್ಣಗೊಳಿಸಿದ್ದರು. ನೆಹೆಮೀಯನು ಹೀಗೆ ಹೇಳುತ್ತಾ, ಅವರನ್ನು ಸಂತೈಸಿದನು: “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿರಿ; ತಮಗೋಸ್ಕರ ಏನೂ ಸಿದ್ಧಮಾಡದವರಿಗೆ ಭಾಗಗಳನ್ನು ಕಳುಹಿಸಿರಿ. ಈ ದಿನವು ನಮ್ಮ ಯೆಹೋವನಿಗೆ ಪ್ರತಿಷ್ಠಿತ ದಿನವಾಗಿರುವದರಿಂದ ವ್ಯಸನಪಡಬೇಡಿರಿ; ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ.” ವಿಧೇಯಪೂರ್ವಕವಾಗಿ, “ತಮಗೆ ತಿಳಿಯಪಡಿಸಿದ ಮಾತುಗಳನ್ನು ಜನರೆಲ್ಲರೂ ಗಮನಿಸಿ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡು ಏನೂ ಇಲ್ಲದವರಿಗೆ ಭಾಗಗಳನ್ನು ಕಳುಹಿಸಿ ಬಹಳವಾಗಿ ಸಂತೋಷಪಟ್ಟರು.”—ನೆಹೆಮೀಯ 8:10-12.
7 ಇಂದು ದೇವರ ಜನರು ಈ ವೃತ್ತಾಂತದಿಂದ ಹೆಚ್ಚನ್ನು ಕಲಿತುಕೊಳ್ಳಬಲ್ಲರು. ಕೂಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವವರು, ಈ ಮೇಲಿನ ನಮೂನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳತಕ್ಕದ್ದು. ಕೆಲವೊಮ್ಮೆ ಅಗತ್ಯವಾಗಿರುವ, ಸರಿಪಡಿಸಲಿಕ್ಕಾಗಿ ನೀಡಲ್ಪಡುವ ಸಲಹೆಯ ಜೊತೆಗೆ, ಇಂತಹ ಸಂದರ್ಭಗಳು ದೇವರ ಆವಶ್ಯಕತೆಗಳನ್ನು ಪೂರೈಸುವುದರಿಂದ ಬರುವ ಪ್ರಯೋಜನಗಳನ್ನು ಹಾಗೂ ಆಶೀರ್ವಾದಗಳನ್ನು ಎತ್ತಿತೋರಿಸುತ್ತವೆ. ಅವರು ಮಾಡುವಂತಹ ಉತ್ತಮ ಕಾರ್ಯಗಳಿಗಾಗಿ ಪ್ರಶಂಸೆ ಮತ್ತು ತಾಳಿಕೊಳ್ಳುವಂತೆ ಬೇಕಾದ ಉತ್ತೇಜನವು ನೀಡಲ್ಪಡುತ್ತದೆ. ದೇವರ ಜನರು ಆತನ ವಾಕ್ಯದಿಂದ ಪಡೆದುಕೊಳ್ಳುವ ಭಕ್ತಿವೃದ್ಧಿಮಾಡುವಂತಹ ಉಪದೇಶದ ಕಾರಣ, ಆನಂದಭರಿತರಾಗಿ ಇಂತಹ ಕೂಟಗಳಿಂದ ಹಿಂದಿರುಗಬೇಕಾಗಿದೆ.—ಇಬ್ರಿಯ 10:24, 25.
ಮತ್ತೊಂದು ಆನಂದಭರಿತ ಒಕ್ಕೂಟ
8, 9. ಏಳನೆಯ ತಿಂಗಳಿನ ಎರಡನೆಯ ದಿನದಂದು ಯಾವ ವಿಶೇಷ ಕೂಟವು ನಡೆಯಿತು, ಮತ್ತು ದೇವರ ಜನರಿಗೆ ಇದರಿಂದಾದ ಲಾಭವೇನು?
8 ಆ ವಿಶೇಷ ತಿಂಗಳಿನ ಎರಡನೆಯ ದಿನದಂದು, “ಎಲ್ಲಾ ಇಸ್ರಾಯೇಲ್ ಗೋತ್ರಪ್ರಧಾನರೂ ಯಾಜಕರೂ ಲೇವಿಯರೂ ಧರ್ಮಶಾಸ್ತ್ರದ ಅಧ್ಯಯನಕ್ಕಾಗಿ ಧರ್ಮೋಪದೇಶಕನಾದ ಎಜ್ರನ ಬಳಿಗೆ ಕೂಡಿ”ಬಂದರು. (ನೆಹೆಮೀಯ 8:13) ಈ ಕೂಟವನ್ನು ನಡೆಸುವ ಯೋಗ್ಯತೆ ಎಜ್ರನಿಗಿತ್ತು, ಏಕೆಂದರೆ “ಅವನು ಯೆಹೋವಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ ಇಸ್ರಾಯೇಲ್ಯರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಲಿಕ್ಕೂ” ನಿಶ್ಚಯಿಸಿಕೊಂಡಿದ್ದನು. (ಎಜ್ರ 7:10) ದೇವಜನರು ನಿಯಮದ ಒಡಂಬಡಿಕೆಯ ಯಾವ ವಿಷಯಗಳನ್ನು ಹೆಚ್ಚು ನಿಕಟವಾಗಿ ಅನುಸರಿಸಬೇಕು ಎಂಬುದನ್ನು, ಈ ಕೂಟವು ಎತ್ತಿತೋರಿಸಿತು ಎಂಬುದರಲ್ಲಿ ಸಂದೇಹವಿಲ್ಲ. ಸನ್ನಿಹಿತವಾಗಿರುವ ಪರ್ಣಶಾಲೆಗಳ ಉತ್ಸವವನ್ನು ಆಚರಿಸಲಿಕ್ಕಾಗಿ, ಯೋಗ್ಯವಾದ ಏರ್ಪಾಡುಗಳನ್ನು ಮಾಡುವ ಅಗತ್ಯದ ಕುರಿತು ಎಲ್ಲರೂ ಯೋಚಿಸಿದರು.
9 ವಾರದ ಉದ್ದಕ್ಕೂ ನಡೆಯುವ ಈ ಉತ್ಸವವು ಸರಿಯಾದ ವಿಧದಲ್ಲಿ ಆಚರಿಸಲ್ಪಟ್ಟಿತು. ವಿಭಿನ್ನ ಮರಗಳ ಕೊಂಬೆಗಳು ಹಾಗೂ ಎಲೆಗಳಿಂದ ನಿರ್ಮಿಸಲ್ಪಟ್ಟ ತಾತ್ಕಾಲಿಕ ಆಸರೆಗಳಲ್ಲಿ ಜನರು ವಾಸಿಸಿದರು. ಜನರು ಈ ಪರ್ಣಶಾಲೆಗಳನ್ನು ತಮ್ಮ ಚಪ್ಪಟೆಯಾದ ಮಾಳಿಗೆಗಳು, ಅಂಗಳಗಳು, ದೇವಾಲಯದ ಪ್ರಾಕಾರಗಳು, ಮತ್ತು ಯೆರೂಸಲೇಮಿನ ಬೈಲುಗಳಲ್ಲಿ ಕಟ್ಟಿದರು. (ನೆಹೆಮೀಯ 8:15, 16) ಜನರನ್ನು ಒಟ್ಟುಗೂಡಿಸಿ, ದೇವರ ಧರ್ಮಶಾಸ್ತ್ರವನ್ನು ಓದಿ ತಿಳಿಸುವ ಎಂತಹ ಸುಸಂದರ್ಭ ಇದಾಗಿತ್ತು! (ಧರ್ಮೋಪದೇಶಕಾಂಡ 31:10-13ನ್ನು ಹೋಲಿಸಿರಿ.) ಇದನ್ನು ಪ್ರತಿದಿನ, ಆ ಉತ್ಸವದ “ಮೊದಲನೆಯ ದಿನದಿಂದ ಕಡೆಯ ದಿನದ ವರೆಗೆ” ಮಾಡಲಾಯಿತು. ಇದರಿಂದ ದೇವಜನರು “ಬಹು ಸಂತೋಷಪಟ್ಟರು.”—ನೆಹೆಮೀಯ 8:17, 18.
ನಾವು ದೇವರ ಮನೆಯನ್ನು ಅಲಕ್ಷಿಸಬಾರದು
10. ಏಳನೆಯ ತಿಂಗಳಿನ 24ನೆಯ ದಿನದಂದು, ಒಂದು ವಿಶೇಷ ಕೂಟವು ಏಕೆ ಏರ್ಪಡಿಸಲ್ಪಟ್ಟಿತ್ತು?
10 ದೇವರ ಜನರಲ್ಲಿರುವ ಗಂಭೀರವಾದ ಕುಂದುಕೊರತೆಗಳನ್ನು ಸರಿಪಡಿಸಲಿಕ್ಕಾಗಿರುವ ಯೋಗ್ಯವಾದ ಸಮಯ ಹಾಗೂ ಸ್ಥಳವೊಂದಿದೆ. ಇದು ಅಂತಹ ಒಂದು ಸಮಯವಾಗಿತ್ತೆಂದು ಗುರುತಿಸುತ್ತಾ, ತಿಷ್ರಿಯ 24ರಂದು ಎಜ್ರ ಮತ್ತು ನೆಹೆಮೀಯರು ಉಪವಾಸ ದಿನವನ್ನು ಏರ್ಪಡಿಸಿದರು. ಮತ್ತೊಮ್ಮೆ ದೇವರ ಧರ್ಮಶಾಸ್ತ್ರವನ್ನು ಓದಲಾಯಿತು, ಮತ್ತು ಜನರು ಪಾಪನಿವೇದನೆಯನ್ನು ಮಾಡಿದರು. ತರುವಾಯ ಲೇವಿಯರು, ದೇವರು ತನ್ನ ಪಾಪಪೂರ್ಣ ಜನರೊಂದಿಗೆ ಕರುಣೆಯಿಂದ ವ್ಯವಹರಿಸಿದ ವಿಷಯವನ್ನು ಪುನರ್ವಿಮರ್ಶಿಸಿದರು, ಯೆಹೋವನನ್ನು ಸೊಗಸಾದ ಮಾತುಗಳಿಂದ ಸ್ತುತಿಸಿದರು. ಮತ್ತು ತಮ್ಮ ಪ್ರಭುಗಳೂ ಲೇವಿಯರೂ ಯಾಜಕರೂ ಸಹಿಮಾಡಿ ಮುದ್ರೆಹಾಕಿದ ಒಂದು “ಲೇಖನರೂಪವಾದ ಪ್ರತಿಜ್ಞೆಯನ್ನು” ಮಾಡಿದರು.—ನೆಹೆಮೀಯ 9:1-38.
11. ಯಾವ “ಲೇಖನರೂಪವಾದ ಪ್ರತಿಜ್ಞೆಯ” ಕರ್ತವ್ಯವನ್ನು ಯೆಹೂದ್ಯರು ವಹಿಸಿಕೊಂಡರು?
11 ಈ “ಲೇಖನರೂಪವಾದ ಪ್ರತಿಜ್ಞೆಯನ್ನು” ಕಾರ್ಯರೂಪಕ್ಕೆ ತರಲು ಎಲ್ಲ ಜನರು ಹರಕೆಹೊತ್ತರು. ಅವರು “ದೇವರ ಧರ್ಮೋಪದೇಶವನ್ನು ಅನುಸರಿಸಿ . . . ನಡೆ”ಯಲಿದ್ದರು. ಮತ್ತು ಅನ್ಯ “ದೇಶನಿವಾಸಿ”ಗಳೊಂದಿಗೆ ಮದುವೆಯ ಸಂಬಂಧಗಳನ್ನು ಮಾಡಿಕೊಳ್ಳುವುದಿಲ್ಲವೆಂದು ಅವರು ಒಪ್ಪಿಕೊಂಡರು. (ನೆಹೆಮೀಯ 10:28-30) ಅಲ್ಲದೆ, ಸಬ್ಬತ್ತನ್ನು ಆಚರಿಸುವ, ಸತ್ಯಾರಾಧನೆಗಾಗಿ ವಾರ್ಷಿಕ ಹಣಕಾಸಿನ ದಾನವನ್ನು ಮಾಡುವ, ಬಲಿಪೀಠಕ್ಕೆ ಕಟ್ಟಿಗೆಯನ್ನು ಸರಬರಾಯಿಮಾಡುವ, ಚೊಚ್ಚಲ ಕರುಗಳನ್ನೂ ಚೊಚ್ಚಲ ಆಡುಕುರಿಮರಿಗಳನ್ನೂ ಬಲಿಗಳಿಗಾಗಿ ನೀಡುವ, ಮತ್ತು ಆಲಯದಲ್ಲಿರುವ ಊಟದ ಕೋಣೆಗಳಿಗೆ ತಮ್ಮ ಹೊಲಗಳ ಪ್ರಥಮಫಲಗಳನ್ನು ತರುವ ಕರ್ತವ್ಯವನ್ನು ಯೆಹೂದ್ಯರು ವಹಿಸಿಕೊಂಡರು. ಸ್ಪಷ್ಟವಾಗಿಯೇ, ಅವರು ‘ತಮ್ಮ ದೇವರ ಆಲಯವನ್ನು ಅಲಕ್ಷ್ಯಮಾಡದಿರಲು’ ನಿಶ್ಚಯಿಸಿಕೊಂಡರು.—ನೆಹೆಮೀಯ 10:32-39.
12. ಇಂದು ದೇವರ ಮನೆಯನ್ನು ಅಲಕ್ಷಿಸದಿರುವುದರಲ್ಲಿ ಏನು ಒಳಗೂಡಿದೆ?
12 ಇಂದು, ಯೆಹೋವನ ಮಹಾ ಆತ್ಮಿಕ ಆಲಯದ ಅಂಗಳಗಳಲ್ಲಿ ‘ಪವಿತ್ರ ಸೇವೆಯನ್ನು ಸಲ್ಲಿಸುವ’ ತಮ್ಮ ಸುಯೋಗವನ್ನು ಅಲಕ್ಷಿಸದಿರಲು, ಯೆಹೋವನ ಜನರು ಜಾಗರೂಕರಾಗಿರಬೇಕು. (ಪ್ರಕಟನೆ 7:15) ಇದರಲ್ಲಿ, ಯೆಹೋವನ ಆರಾಧನೆಯ ಪ್ರಗತಿಗಾಗಿ, ನಿಯಮಿತವಾದ ಹೃತ್ಪೂರ್ವಕ ಪ್ರಾರ್ಥನೆಗಳು ಸೇರಿವೆ. ಇಂತಹ ಪ್ರಾರ್ಥನೆಗಳಿಗೆ ಅನುರೂಪವಾಗಿ ಜೀವಿಸುವುದು, ಕ್ರೈಸ್ತ ಕೂಟಗಳಿಗೆ ತಯಾರಿಸಿ, ಅವುಗಳಲ್ಲಿ ಭಾಗವಹಿಸುವುದನ್ನು, ಸುವಾರ್ತೆಯನ್ನು ಸಾರಲು ಮಾಡಲ್ಪಟ್ಟ ಏರ್ಪಾಡುಗಳಲ್ಲಿ ಭಾಗವಹಿಸುವುದನ್ನು, ಮತ್ತು ಆಸಕ್ತರ ಬಳಿಗೆ ಹಿಂದಿರುಗಿ, ಸಾಧ್ಯವಾದಲ್ಲಿ ಅವರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುವ ಮೂಲಕ ಸಹಾಯ ಮಾಡುವುದನ್ನು ಒಳಗೊಳ್ಳುತ್ತದೆ. ದೇವರ ಆಲಯವನ್ನು ಅಲಕ್ಷಿಸಲು ಬಯಸದಿರುವ ಅನೇಕರು, ಸಾರುವ ಕೆಲಸ ಮತ್ತು ಸತ್ಯಾರಾಧನೆಯ ಸ್ಥಳಗಳ ದುರಸ್ತಿಗಾಗಿ ಹಣಕಾಸಿನ ದಾನಗಳನ್ನು ಮಾಡುತ್ತಾರೆ. ತುರ್ತಾಗಿ ಬೇಕಾಗಿರುವ ಕೂಟದ ಸ್ಥಳಗಳ ನಿರ್ಮಾಣಕ್ಕೆ ಮತ್ತು ಅವುಗಳನ್ನು ನೀಟಾಗಿಯೂ ಶುಚಿಯಾಗಿಯೂ ಇಡಲು ಬೇಕಾದ ಬೆಂಬಲವನ್ನೂ ಕೊಡಲು ನಾವು ಶಕ್ತರಾಗಿರಬಹುದು. ದೇವರ ಆತ್ಮಿಕ ಆಲಯಕ್ಕಾಗಿ ನಮ್ಮ ಪ್ರೀತಿಯನ್ನು ತೋರಿಸುವ ಒಂದು ಪ್ರಮುಖವಾದ ವಿಧವು, ಜೊತೆ ವಿಶ್ವಾಸಿಗಳಲ್ಲಿ ಸಮಾಧಾನವನ್ನು ಪ್ರವರ್ಧಿಸಲು ಮತ್ತು ಭೌತಿಕ ಇಲ್ಲವೆ ಆತ್ಮಿಕ ಸಹಾಯದ ಅಗತ್ಯದಲ್ಲಿರುವ ಯಾರಿಗೇ ಆಗಲಿ ಸಹಾಯ ಮಾಡಲು ಶ್ರಮಿಸುವುದೇ ಆಗಿದೆ.—ಮತ್ತಾಯ 24:14; 28:19, 20; ಇಬ್ರಿಯ 13:15, 16.
ಒಂದು ಆನಂದಭರಿತ ಪ್ರತಿಷ್ಠಾಪನೆ
13. ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯ ಮೊದಲು, ಯಾವ ತುರ್ತಿನ ವಿಷಯದ ಕಡೆಗೆ ಗಮನವು ಕೊಡಲ್ಪಡಬೇಕಿತ್ತು, ಮತ್ತು ಅನೇಕರು ಯಾವ ಉತ್ತಮ ಮಾದರಿಯನ್ನಿಟ್ಟರು?
13 ನೆಹೆಮೀಯನ ದಿನದಲ್ಲಿ ಮುದ್ರೆಹಾಕಲ್ಪಟ್ಟ “ಲೇಖನರೂಪವಾದ ಪ್ರತಿಜ್ಞೆಯು,” ಪ್ರಾಚೀನ ಸಮಯದ ದೇವಜನರನ್ನು, ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯ ದಿನಕ್ಕಾಗಿ ತಯಾರುಗೊಳಿಸಿತು. ಆದರೆ ಮತ್ತೊಂದು ತುರ್ತಿನ ವಿಷಯಕ್ಕೆ ಗಮನವು ಕೊಡಲ್ಪಡಬೇಕಿತ್ತು. ಯೆರೂಸಲೇಮಿನ ದೊಡ್ಡ ಗೋಡೆಯು ಈಗ 12 ದ್ವಾರಗಳನ್ನು ಒಳಗೊಂಡಿದ್ದರಿಂದ, ಅಧಿಕ ಜನಸಂಖ್ಯೆಯ ಆವಶ್ಯಕತೆ ಅದಕ್ಕಿತ್ತು. ಕೆಲವು ಇಸ್ರಾಯೇಲ್ಯರು ಅಲ್ಲಿ ವಾಸಿಸುತ್ತಿದ್ದರೂ, “ಪಟ್ಟಣವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದರೂ ಅದರೊಳಗೆ ಬಹು ಸ್ವಲ್ಪ ಜನರಿದ್ದರು.” (ನೆಹೆಮೀಯ 7:4) ಈ ಸಮಸ್ಯೆಯನ್ನು ಬಗೆಹರಿಸಲು, ಜನರು “ಹತ್ತತ್ತು ಮಂದಿಯಲ್ಲಿ ಒಂಭತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿದ್ದುಕೊಂಡು ಒಬ್ಬನು ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಿಸುವದಕ್ಕಾಗಿ ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತುಮಾಡಿದರು.” ಈ ಏರ್ಪಾಡಿಗೆ ಸ್ವಇಚ್ಛೆಯಿಂದ ಪ್ರತಿಕ್ರಿಯಿಸಿದನ್ನು ನೋಡಿ, ಜನರು “ಯೆರೂಸಲೇಮಿನಲ್ಲಿ ವಾಸಿಸುವದಕ್ಕೆ ಮನಸ್ಸುಮಾಡಿದಂಥವರನ್ನು” ಆಶೀರ್ವದಿಸಿದರು. (ನೆಹೆಮೀಯ 11:1, 2) ಪ್ರೌಢ ಕ್ರೈಸ್ತ ಸಹಾಯಕ್ಕಾಗಿ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಇಂದು ಯಾರ ಪರಿಸ್ಥಿತಿಗಳು ಅನುಮತಿಸುತ್ತವೊ, ಅಂತಹ ಸತ್ಯಾರಾಧಕರಿಗೆ ಇದು ಎಂತಹ ಒಂದು ಉತ್ತಮ ಉದಾಹರಣೆಯಾಗಿದೆ!
14. ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯ ದಿನದಂದು ಏನು ಸಂಭವಿಸಿತು?
14 ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯ ಮಹಾ ದಿನಕ್ಕಾಗಿ ಪ್ರಮುಖ ತಯಾರಿಗಳು ಬೇಗನೆ ಆರಂಭಗೊಂಡವು. ಯೆಹೂದದ ಸುತ್ತಮುತ್ತಲಿನ ಪಟ್ಟಣಗಳಿಂದ ಸಂಗೀತಗಾರರನ್ನು ಮತ್ತು ಗಾಯಕರನ್ನು ಕೂಡಿಸಲಾಯಿತು. ಇವರನ್ನು ಎರಡು ದೊಡ್ಡ ಗಾಯನಮಂಡಲಿಗಳಾಗಿ ಪ್ರತ್ಯೇಕಿಸಿ, ಪ್ರತಿಯೊಂದರ ಹಿಂದೆ ಜನರ ಒಂದು ಮೆರವಣಿಗೆಯಿತ್ತು. (ನೆಹೆಮೀಯ 12:27-31, 36, 38) ಈ ಗಾಯನಮಂಡಲಿಗಳು ಮತ್ತು ಮೆರವಣಿಗೆಗಳು, ದೇವಾಲಯದಿಂದ ಬಹು ದೂರದಲ್ಲಿದ್ದ ಒಂದು ಸ್ಥಳದಿಂದ, ಬಹುಶಃ ತಿಪ್ಪೆಬಾಗಲಿನಿಂದ ಆರಂಭಿಸಿ, ದೇವರ ಆಲಯದಲ್ಲಿ ಅವು ಸಂಧಿಸುವ ತನಕ ವಿರುದ್ಧ ದಿಕ್ಕುಗಳಲ್ಲಿ ನಡೆದುಬಂದವು. “ದೇವರು ತಮಗೆ ವಿಶೇಷಾನಂದವನ್ನುಂಟುಮಾಡಿದ್ದರಿಂದ ಜನರು ಆ ದಿನದಲ್ಲಿ ಅನೇಕಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವಮಾಡಿದರು. ಯೆರೂಸಲೇಮಿನ ಉತ್ಸವದ ಹರ್ಷಧ್ವನಿಯು ಬಹುದೂರದ ವರೆಗೂ ಕೇಳಿಸಿತು.”—ನೆಹೆಮೀಯ 12:43.
15. ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯು, ಶಾಶ್ವತ ಆನಂದಕ್ಕೆ ಕಾರಣವಾಗಿರಲಿಲ್ಲ ಏಕೆ?
15 ಈ ಆನಂದಭರಿತ ಆಚರಣೆಯ ದಿನಾಂಕವನ್ನು ಬೈಬಲು ತಿಳಿಸುವುದಿಲ್ಲ. ಅದು ಯೆರೂಸಲೇಮಿನ ಪುನಸ್ಸ್ಥಾಪನೆಯ ವಿಷಯದಲ್ಲಿ ಅತಿಮುಖ್ಯವಾದ ಸಂಗತಿಯಾಗಿದ್ದರೂ, ಪರಾಕಾಷ್ಠೆಯಾಗಿರಲಿಲ್ಲ. ಪಟ್ಟಣದೊಳಗೇ ಬಹಳಷ್ಟು ನಿರ್ಮಾಣ ಕಾರ್ಯವು ಮಾಡಲ್ಪಡಬೇಕಿತ್ತು. ಸಕಾಲದಲ್ಲಿ, ಯೆರೂಸಲೇಮಿನ ಪ್ರಜೆಗಳು ತಮ್ಮ ಉತ್ತಮ ಆತ್ಮಿಕ ನಿಲುವನ್ನು ಕಳೆದುಕೊಂಡರು. ಉದಾಹರಣೆಗೆ, ನೆಹೆಮೀಯನು ಆ ಪಟ್ಟಣವನ್ನು ಎರಡನೆಯ ಬಾರಿ ಸಂದರ್ಶಿಸಿದಾಗ, ದೇವರ ಆಲಯವು ಪುನಃ ಅಲಕ್ಷಿಸಲ್ಪಟ್ಟಿರುವುದನ್ನು ಮತ್ತು ಇಸ್ರಾಯೇಲ್ಯರು ಮತ್ತೆ ವಿಧರ್ಮಿ ಸ್ತ್ರೀಯರನ್ನು ವಿವಾಹವಾಗುತ್ತಿರುವುದನ್ನು ಕಂಡುಕೊಂಡನು. (ನೆಹೆಮೀಯ 13:6-11, 15, 23) ಇವೇ ಕೆಟ್ಟ ಪರಿಸ್ಥಿತಿಗಳು, ಪ್ರವಾದಿಯಾದ ಮಲಾಕಿಯನ ಬರಹಗಳಲ್ಲಿ ದೃಢಗೊಳಿಸಲ್ಪಟ್ಟಿವೆ. (ಮಲಾಕಿಯ 1:6-8; 2:11; 3:8) ಆದುದರಿಂದ ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯು, ಶಾಶ್ವತ ಆನಂದಕ್ಕೆ ಕಾರಣವಾಗಿರಲಿಲ್ಲ.
ನಿತ್ಯಾನಂದಕ್ಕಾಗಿರುವ ಕಾರಣ
16. ಯಾವ ವಿಶೇಷ ಘಟನೆಗಳಿಗಾಗಿ ದೇವಜನರು ಎದುರುನೋಡುತ್ತಿದ್ದಾರೆ?
16 ಇಂದು, ದೇವರು ತನ್ನ ಎಲ್ಲ ವೈರಿಗಳ ಮೇಲೆ ಜಯಸಾಧಿಸುವ ಸಮಯಕ್ಕಾಗಿ ಯೆಹೋವನ ಜನರು ಹಾತೊರೆಯುತ್ತಾರೆ. ಇದು “ಮಹಾ ಬಾಬೆಲ್”ನ ನಾಶನದೊಂದಿಗೆ ಆರಂಭಿಸುವುದು. ಇದು ಸುಳ್ಳು ಧರ್ಮವನ್ನು ಒಳಗೊಂಡ ಸಾಂಕೇತಿಕ ಪಟ್ಟಣವಾಗಿದೆ. (ಪ್ರಕಟನೆ 18:2, 8) ಸುಳ್ಳು ಧರ್ಮದ ನಾಶನವು, ಬರಲಿರುವ ಮಹಾ ಸಂಕಟದ ಪ್ರಥಮ ಚಿಹ್ನೆಯಾಗಿದೆ. (ಮತ್ತಾಯ 24:21, 22) ನಮ್ಮ ಮುಂದೆ ಒಂದು ವಿಶೇಷವಾದ ಘಟನೆಯೂ ಇದೆ. ಅದು ಕರ್ತನಾದ ಯೇಸು ಕ್ರಿಸ್ತನ ಮತ್ತು “ಹೊಸ ಯೆರೂಸಲೇಮ್”ನ 1,44,000 ಪ್ರಜೆಗಳುಳ್ಳ ಅವನ ವಧುವಿನ ಸ್ವರ್ಗೀಯ ವಿವಾಹವಾಗಿದೆ. (ಪ್ರಕಟನೆ 19:7; 21:2) ಆ ಸ್ವರ್ಗೀಯ ವಿವಾಹವು ಯಾವಾಗ ಸಂಭವಿಸುವುದೆಂದು ನಮಗೆ ನಿಖರವಾಗಿ ಹೇಳಲುಸಾಧ್ಯವಿಲ್ಲ, ಆದರೆ ಅದು ಖಂಡಿತವಾಗಿಯೂ ಒಂದು ಆನಂದಭರಿತ ಘಟನೆಯಾಗಿರುವುದು.—ದ ವಾಚ್ಟವರ್, ಆಗಸ್ಟ್ 15, 1990, ಪುಟಗಳು 30-1ನ್ನು ನೋಡಿರಿ.
17. ಹೊಸ ಯೆರೂಸಲೇಮಿನ ಪೂರ್ಣಗೊಳ್ಳುವಿಕೆಯ ಬಗ್ಗೆ ನಮಗೆ ಏನು ಗೊತ್ತಿದೆ?
17 ಹೊಸ ಯೆರೂಸಲೇಮಿನ ಪೂರ್ಣಗೊಳ್ಳುವಿಕೆಯು ಬಹಳ ಹತ್ತಿರವಿದೆ ಎಂದು ನಮಗೆ ಗೊತ್ತಿದೆ. (ಮತ್ತಾಯ 24:3, 7-14; ಪ್ರಕಟನೆ 12:12) ಭೌಮಿಕ ಯೆರೂಸಲೇಮ್ ಪಟ್ಟಣಕ್ಕೆ ವ್ಯತಿರಿಕ್ತವಾಗಿ, ಅದು ಎಂದಿಗೂ ನಿರಾಶೆಗೆ ಕಾರಣವಾಗಿರದು. ಏಕೆಂದರೆ ಅದರ ಪ್ರಜೆಗಳೆಲ್ಲರೂ, ಯೇಸು ಕ್ರಿಸ್ತನ ಆತ್ಮಾಭಿಷಿಕ್ತರೂ, ಪರೀಕ್ಷಿಸಲ್ಪಟ್ಟವರೂ ಮತ್ತು ನೈತಿಕ ಅಪರಿಪೂರ್ಣತೆಗಳು ಇಲ್ಲದವರೂ ಆಗಿದ್ದಾರೆ. ಮರಣದ ವರೆಗೆ ನಂಬಿಗಸ್ತರಾಗಿ ಉಳಿಯುವ ಮೂಲಕ, ಅವರು ವಿಶ್ವದ ಪರಮಾಧಿಕಾರಿಯಾದ ಯೆಹೋವ ದೇವರಿಗೆ ನಿತ್ಯಕ್ಕೂ ನಿಷ್ಠಾವಂತರಾಗಿ ಉಳಿಯುವರು. ಅದು ಬದುಕಿರುವ ಮತ್ತು ಮೃತರಾಗಿರುವ ಮಾನವಕುಲಕ್ಕೆ ಮಹತ್ತರವಾದ ಅರ್ಥವನ್ನು ಹೊಂದಿರುತ್ತದೆ!
18. ನಾವು ಏಕೆ ‘ಹರ್ಷಿಸಬೇಕು ಮತ್ತು ನಿತ್ಯವೂ ಉಲ್ಲಾಸಪಡಬೇಕು’?
18 ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವ ಮಾನವರ ಕಡೆಗೆ ಹೊಸ ಯೆರೂಸಲೇಮ್ ಗಮನಹರಿಸುವಾಗ ಏನು ಸಂಭವಿಸುವುದು ಎಂಬುದನ್ನು ಪರಿಗಣಿಸಿರಿ. ಅಪೊಸ್ತಲ ಯೋಹಾನನು ಬರೆದುದು, “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:2-4) ಅಲ್ಲದೆ, ಈ ಪಟ್ಟಣಸದೃಶ ಏರ್ಪಾಡನ್ನು ದೇವರು, ಮಾನವಕುಲವನ್ನು ಮಾನವ ಪರಿಪೂರ್ಣತೆಗೆ ತರಲು ಉಪಯೋಗಿಸುವನು. (ಪ್ರಕಟನೆ 22:1, 2) ‘ದೇವರು ಈಗ ಸೃಷ್ಟಿಸುತ್ತಿರುವುದರಲ್ಲಿ ಹರ್ಷಿಸಲು ಮತ್ತು ನಿತ್ಯವೂ ಉಲ್ಲಾಸಪಡಲು’ ಇವು ಎಂತಹ ಅದ್ಭುತಕರವಾದ ಕಾರಣಗಳಾಗಿವೆ!—ಯೆಶಾಯ 65:18.
19. ಯಾವ ಆತ್ಮಿಕ ಪ್ರಮೋದವನದೊಳಕ್ಕೆ ಕ್ರೈಸ್ತರು ಒಟ್ಟುಗೂಡಿಸಲ್ಪಡುತ್ತಿದ್ದಾರೆ?
19 ಹಾಗಿದ್ದರೂ, ದೇವರಿಂದ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ, ಪಶ್ಚಾತ್ತಾಪಿ ಮಾನವರು ಅಲ್ಲಿಯ ತನಕ ಕಾಯಬೇಕಾಗಿಲ್ಲ. 1919ರಲ್ಲಿ, ಯೆಹೋವನು 1,44,000 ಮಂದಿಯ ಅಂತಿಮ ಸದಸ್ಯರನ್ನು ಆತ್ಮಿಕ ಪ್ರಮೋದವನದೊಳಗೆ ಒಟ್ಟುಸೇರಿಸಲು ಆರಂಭಿಸಿದನು. ಆ ಪ್ರಮೋದವನದಲ್ಲಿ ಪ್ರೀತಿ, ಆನಂದ, ಮತ್ತು ಶಾಂತಿಯಂತಹ ದೇವರ ಆತ್ಮದ ಫಲಗಳು ತುಂಬಿತುಳುಕುತ್ತವೆ. (ಗಲಾತ್ಯ 5:22, 23) ಈ ಆತ್ಮಿಕ ಪ್ರಮೋದವನದ ಒಂದು ಮುಖ್ಯ ವೈಶಿಷ್ಟ್ಯವು, ಅದರ ಅಭಿಷಿಕ್ತ ನಿವಾಸಿಗಳ ನಂಬಿಕೆಯಾಗಿದೆ. ಇವರು, ಸರ್ವಲೋಕದಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸಿಕೊಂಡದ್ದರಲ್ಲಿ ಬಹಳ ಸಫಲರಾಗಿದ್ದಾರೆ. (ಮತ್ತಾಯ 21:43; 24:14) ಫಲಸ್ವರೂಪವಾಗಿ, ಭೂನಿರೀಕ್ಷೆಯಿರುವ ಸುಮಾರು ಅರವತ್ತು ಲಕ್ಷ “ಬೇರೆ ಕುರಿಗಳು,” ಆತ್ಮಿಕ ಪ್ರಮೋದವನವನ್ನು ಪ್ರವೇಶಿಸಿ, ಫಲಪ್ರದವಾದ ಕೆಲಸದಲ್ಲಿ ಆನಂದಿಸುವಂತೆ ಅನುಮತಿಸಲ್ಪಟ್ಟಿದ್ದಾರೆ. (ಯೋಹಾನ 10:16) ಅವರು ಯೆಹೋವ ದೇವರ ಮಗನಾದ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿನ ತಮ್ಮ ನಂಬಿಕೆಯ ಆಧಾರದ ಮೇಲೆ, ತಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವ ಮೂಲಕ ಇದಕ್ಕೆ ಅರ್ಹರಾಗಿದ್ದಾರೆ. ಹೊಸ ಯೆರೂಸಲೇಮಿನ ಭಾವೀ ಸದಸ್ಯರೊಂದಿಗಿನ ಅವರ ಸಹವಾಸವು, ನಿಶ್ಚಯವಾಗಿಯೂ ಒಂದು ಆಶೀರ್ವಾದವಾಗಿ ಪರಿಣಮಿಸಿದೆ. ಹೀಗೆ, ಅಭಿಷಿಕ್ತ ಕ್ರೈಸ್ತರೊಂದಿಗಿನ ತನ್ನ ವ್ಯವಹಾರಗಳಿಂದ, ಯೆಹೋವನು “ನೂತನ ಭೂಮಂಡಲ”ಕ್ಕಾಗಿ ಸ್ಥಿರವಾದ ಅಸ್ತಿವಾರವನ್ನು ಹಾಕಿದ್ದಾನೆ. ಈ ನೂತನ ಭೂಮಂಡಲವು, ಸ್ವರ್ಗೀಯ ರಾಜ್ಯದ ಭೂಕ್ಷೇತ್ರವನ್ನು ಪಡೆಯಲಿಕ್ಕಾಗಿರುವ ದೇವಭಯವುಳ್ಳ ಮಾನವರ ಸಮಾಜವಾಗಿದೆ.—ಯೆಶಾಯ 65:17; 2 ಪೇತ್ರ 3:13.
20. ಹೊಸ ಯೆರೂಸಲೇಮ್ ತನ್ನ ಹೆಸರಿನ ಅರ್ಥಕ್ಕನುಗುಣವಾಗಿ ಹೇಗೆ ಜೀವಿಸುವುದು?
20 ಯೆಹೋವನ ಜನರು ತಮ್ಮ ಆತ್ಮಿಕ ಪ್ರಮೋದವನದಲ್ಲಿ ಈಗ ಆನಂದಿಸುತ್ತಿರುವ ಶಾಂತಿದಾಯಕ ಪರಿಸ್ಥಿತಿಗಳು, ಬೇಗನೆ ಭೂಮಿಯ ಮೇಲಿನ ಭೌತಿಕ ಪ್ರಮೋದವನದಲ್ಲಿ ಅನುಭವಿಸಲ್ಪಡುವುವು. ಹೊಸ ಯೆರೂಸಲೇಮು ಮಾನವಕುಲವನ್ನು ಆಶೀರ್ವದಿಸಲು ಸ್ವರ್ಗದಿಂದ ಕೆಳಗಿಳಿಯುವಾಗ ಅದು ಸಂಭವಿಸುವುದು. ಇಬ್ಬಗೆಯ ವಿಧದಲ್ಲಿ, ದೇವಜನರು ಯೆಶಾಯ 65:21-25ರಲ್ಲಿ ವಾಗ್ದಾನಿಸಲ್ಪಟ್ಟ ಶಾಂತಿಭರಿತ ಪರಿಸ್ಥಿತಿಗಳನ್ನು ಅನುಭವಿಸುವರು. ಈ ಆತ್ಮಿಕ ಪ್ರಮೋದವನದಲ್ಲಿನ ಯೆಹೋವನ ಐಕ್ಯ ಆರಾಧಕರೋಪಾದಿ, ಸ್ವರ್ಗೀಯ ಹೊಸ ಯೆರೂಸಲೇಮಿನಲ್ಲಿ ತಮ್ಮ ಸ್ಥಾನವನ್ನು ಇನ್ನೂ ತೆಗೆದುಕೊಳ್ಳಬೇಕಾದ ಅಭಿಷಿಕ್ತರು ಮತ್ತು “ಬೇರೆ ಕುರಿಗಳ”ಲ್ಲಿನ ಇತರರು, ಈಗ ದೇವದತ್ತ ಶಾಂತಿಯನ್ನು ಅನುಭವಿಸುತ್ತಿದ್ದಾರೆ. ಮತ್ತು ಇಂತಹ ಶಾಂತಿಯು ಭೌತಿಕ ಪ್ರಮೋದವನಕ್ಕೂ ವಿಸ್ತರಿಸುವುದು. ಆಗ ‘ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವುದು.’ (ಮತ್ತಾಯ 6:10) ಹೌದು, ದೇವರ ಮಹಿಮಾಭರಿತ ಸ್ವರ್ಗೀಯ ಪಟ್ಟಣವು, ಬೇಗನೆ ಯೆರೂಸಲೇಮ್ ಎಂಬ ತನ್ನ ಹೆಸರಿಗೆ—‘ಇಬ್ಬಗೆಯ ಶಾಂತಿಯ ಅಸ್ತಿವಾರ’—ತಕ್ಕದ್ದಾಗಿರುವುದು. ಎಲ್ಲ ನಿತ್ಯತೆಗೂ ಅದು ತನ್ನ ಮಹಾನ್ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಮತ್ತು ಅದರ ಮದಲಿಂಗ ರಾಜನಾದ ಯೇಸು ಕ್ರಿಸ್ತನಿಗೆ ಸತ್ಕೀರ್ತಿಯ ಅರ್ಥದಲ್ಲಿರುವುದು.
ನಿಮಗೆ ನೆನಪಿದೆಯೊ?
◻ ನೆಹೆಮೀಯನು ಯೆರೂಸಲೇಮಿನಲ್ಲಿ ಜನರನ್ನು ಒಟ್ಟುಗೂಡಿಸಿದಾಗ ಏನನ್ನು ಸಾಧಿಸಿದನು?
◻ ದೇವರ ಆಲಯವನ್ನು ಅಲಕ್ಷಿಸದಿರುವಂತೆ ಪ್ರಾಚೀನ ಯೆಹೂದ್ಯರು ಏನನ್ನು ಮಾಡಬೇಕಿತ್ತು, ಮತ್ತು ಏನನ್ನು ಮಾಡುವಂತೆ ನಾವು ಉತ್ತೇಜಿಸಲ್ಪಟ್ಟಿದ್ದೇವೆ?
◻ ಶಾಶ್ವತ ಆನಂದ ಮತ್ತು ಶಾಂತಿಯನ್ನು ತರುವುದರಲ್ಲಿ “ಯೆರೂಸಲೇಮ್” ಹೇಗೆ ಒಳಗೂಡಿದೆ?
[ಪುಟ 23 ರಲ್ಲಿರುವಚಿತ್ರ]
(For fully formatted text, see publication)
ಯೆರೂಸಲೇಮಿನ ಬಾಗಲುಗಳು
ಸಂಖ್ಯೆಗಳು ಪ್ರಚಲಿತ ದಿನದ ಎತ್ತರವನ್ನು ಮೀಟರುಗಳಲ್ಲಿ ಪ್ರತಿನಿಧಿಸುತ್ತವೆ
ಮೀನು ಬಾಗಲು
ಯೆಷಾನಾ ಬಾಗಲು
ಎಫ್ರಾಯೀಮ್ ಬಾಗಲು
ಮೂಲೆಯ ಬಾಗಲು
ಅಗಲಗೋಡೆ
ಸಾರ್ವಜನಿಕ ಬೈಲು
ತಗ್ಗಿನ ಬಾಗಲು
ಎರಡನೆಯ ಕೇರಿ
ಮೊದಲಿದ್ದ ಉತ್ತರ ಗೋಡೆ
ದಾವೀದ ನಗರ
ತಿಪ್ಪೆಬಾಗಲು
ಹಿನ್ನೋಮ್ ಕಣಿವೆ
ದುರ್ಗ
ಕುರಿಬಾಗಲು
ಸೆರೆಮನೆಯ ಬಾಗಲು
ದೇವಾಲಯದ ಕ್ಷೇತ್ರ
ದಂಡಕೊಡುವ ಬಾಗಲು
ಕುದುರೆ ಬಾಗಲು
ಓಪೇಲ್
ಸಾರ್ವಜನಿಕ ಬೈಲು
ನೀರುಬಾಗಲು
ಗೀಹೋನ್ ಬುಗ್ಗೆ
ಬುಗ್ಗೆಬಾಗಲು
ಅರಸನ ತೋಟ
ಎನ್-ರೋಗೆಲ್
ಟೈರೋಪಿಯನ್ (ಮಧ್ಯ) ಕಣಿವೆ
ಕಿದ್ರೋನ್ ಕಣಿವೆ
740
730
730
750
770
770
750
730
710
690
670
620
640
660
680
700
720
740
730
710
690
670
ಪಟ್ಟಣದ ನಾಶನದ ಸಮಯದಲ್ಲಿ ಮತ್ತು ನೆಹೆಮೀಯನು ಗೋಡೆಯ ಪುನರ್ಕಟ್ಟುವಿಕೆಯಲ್ಲಿ ನೇತೃತ್ವ ವಹಿಸಿದಾಗ, ಯೆರೂಸಲೇಮಿನ ಗೋಡೆಯ ಸಂಭವನೀಯ ವ್ಯಾಪ್ತಿ