ಯೆಹೋವನ ವಾಕ್ಯವು ಸಜೀವವಾದದ್ದು
ಎಸ್ತೇರಳು ಪುಸ್ತಕದ ಮುಖ್ಯಾಂಶಗಳು
ಉಪಾಯವು ಅಷ್ಟು ಸುಲಭವಾಗಿ ಸೋತುಹೋಗುವುದಿಲ್ಲ. ಈ ಉಪಾಯದಿಂದಾಗಿ ಯೆಹೂದ್ಯರು ಸಂಪೂರ್ಣವಾಗಿ ನಾಶವಾಗುವರು. ಒಂದೇ ಒಂದು ಪೂರ್ವನಿರ್ಧರಿತ ದಿನದಲ್ಲಿ, ಭಾರತದಿಂದ ಇಥಿಯೋಪಿಯದ ವರೆಗಿನ ಸಾಮ್ರಾಜ್ಯದಲ್ಲಿ ಚದರಿರುವ ಎಲ್ಲ ಯೆಹೂದ್ಯರು ನಾಶವಾಗಲಿದ್ದಾರೆ. ಇದನ್ನು ಯೋಜಿಸಿದವನು ಈ ರೀತಿಯಾಗಿ ಯೋಚಿಸುತ್ತಿದ್ದಾನೆ. ಆದರೆ ಒಂದು ಪ್ರಾಮುಖ್ಯ ವಿಚಾರವನ್ನು ಅವನು ಮರೆತಿದ್ದಾನೆ. ಅದೇನೆಂದರೆ, ಪರಲೋಕದ ದೇವರು ತಾನು ಆಯ್ದುಕೊಂಡಿರುವ ಜನರನ್ನು ಯಾವುದೇ ಭಯಾನಕ ಸನ್ನಿವೇಶದಿಂದಲೂ ಬಿಡಿಸಬಲ್ಲನು ಎಂಬುದೇ. ಅವರಿಗೆ ದೊರೆತ ಬಿಡುಗಡೆಯ ಕುರಿತು ಬೈಬಲಿನ ಎಸ್ತೇರಳು ಪುಸ್ತಕದಲ್ಲಿ ದಾಖಲಿಸಲಾಗಿದೆ.
ಮೊರ್ದೆಕೈ ಎಂಬ ವೃದ್ಧ ಯೆಹೂದಿ ಮನುಷ್ಯನಿಂದ ಬರೆಯಲ್ಪಟ್ಟ ಎಸ್ತೇರಳು ಪುಸ್ತಕವು, ಪಾರಸಿಯ ಅರಸನಾದ ಅಹಷ್ವೇರೋಷ ಇಲ್ಲವೆ ಒಂದನೇ ಸರ್ಕ್ಸೀಸ್ನ ಆಳ್ವಿಕೆಯ 18 ವರುಷಗಳನ್ನು ಆವರಿಸುತ್ತದೆ. ಈ ನಾಟಕೀಯ ವೃತ್ತಾಂತವು, ತನ್ನ ಸೇವಕರು ಒಂದು ವಿಸ್ತಾರವಾದ ಸಾಮ್ರಾಜ್ಯದಾದ್ಯಂತ ಚದರಿರುವುದಾದರೂ ಯೆಹೋವನು ಅವರನ್ನು ಅವರ ಶತ್ರುಗಳ ದುಷ್ಟ ಒಳಸಂಚುಗಳಿಂದ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಇಂದು, ಈ ಜ್ಞಾನವು 235 ದೇಶಗಳಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಯೆಹೋವನ ಜನರ ನಂಬಿಕೆಯನ್ನು ಬಲಪಡಿಸುತ್ತದೆ. ಮಾತ್ರವಲ್ಲದೆ, ಎಸ್ತೇರಳು ಪುಸ್ತಕವು ನಾವು ಅನುಕರಿಸಬೇಕಾದ ಮತ್ತು ಅನುಕರಿಸಬಾರದಾದ ವ್ಯಕ್ತಿಗಳ ಮಾದರಿಗಳನ್ನು ಒದಗಿಸುತ್ತದೆ. ವಾಸ್ತವದಲ್ಲಿ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ.—ಇಬ್ರಿಯ 4:12.
ರಾಣಿಯು ಮಧ್ಯಸ್ಥಿಕೆ ಮಾಡಬೇಕು
ಅರಸನಾದ ಅಹಷ್ವೇರೋಷನು ತನ್ನ ಆಳಿಕೆಯ ಮೂರನೆಯ ವರುಷದಲ್ಲಿ (ಸಾ.ಶ.ಪೂ. 493) ಒಂದು ರಾಜಯೋಗ್ಯ ಔತಣವನ್ನು ಅಣಿಮಾಡುತ್ತಾನೆ. ಸೌಂದರ್ಯಕ್ಕೆ ಪ್ರಖ್ಯಾತಳಾದ ರಾಣಿ ವಷ್ಟಿಯು ಅರಸನ ಮಹಾ ಕೋಪವನ್ನು ತನ್ನ ಮೇಲೆ ಬರಮಾಡಿಕೊಂಡು ತನ್ನ ರಾಣಿ ಪಟ್ಟವನ್ನು ಕಳೆದುಕೊಳ್ಳುತ್ತಾಳೆ. ಅವಳ ಸ್ಥಾನಕ್ಕೆ, ದೇಶದ ಎಲ್ಲ ಸುಂದರ ಕನ್ಯೆಯರಲ್ಲಿ ಯೆಹೂದ್ಯಳಾದ ಹದೆಸ್ಸಾಳು ಆಯ್ಕೆಯಾಗುತ್ತಾಳೆ. ಅವಳ ದೊಡ್ಡಪ್ಪನ ಮಗನಾದ ಮೊರ್ದೆಕೈಯ ಆದೇಶದ ಮೇರೆಗೆ ಅವಳು ತನ್ನ ಯೆಹೂದಿ ಗುರುತನ್ನು ಮರೆಮಾಚುತ್ತಾಳೆ ಮತ್ತು ಎಸ್ತೇರ್ ಎಂಬ ತನ್ನ ಪಾರಸಿಯ ಹೆಸರನ್ನು ಉಪಯೋಗಿಸುತ್ತಾಳೆ.
ಸಕಾಲದಲ್ಲಿ, ಹೆಮ್ಮೆಯ ಮನುಷ್ಯನಾದ ಹಾಮಾನನು ಪ್ರಧಾನಮಂತ್ರಿ ಪಟ್ಟಕ್ಕೆ ಏರಿಸಲ್ಪಡುತ್ತಾನೆ. ‘ಹಾಮಾನನಿಗೆ ಸಾಷ್ಟಾಂಗನಮಸ್ಕಾರಮಾಡಲು’ ಮೊರ್ದೆಕೈ ನಿರಾಕರಿಸಿದ ಕಾರಣ ಹಾಮಾನನು ಕುಪಿತನಾಗುತ್ತಾನೆ. ಈ ಕಾರಣ, ಪಾರಸಿಯ ಸಾಮ್ರಾಜ್ಯದಲ್ಲಿರುವ ಎಲ್ಲ ಯೆಹೂದ್ಯರನ್ನು ಸಂಪೂರ್ಣವಾಗಿ ನಾಶಮಾಡಲು ಅವನು ಒಳಸಂಚುಮಾಡುತ್ತಾನೆ. (ಎಸ್ತೇರಳು 3:2) ಈ ವಿಚಾರಕ್ಕೆ ಅಹಷ್ವೇರೋಷನು ಸಮ್ಮತಿಯನ್ನು ನೀಡುವಂತೆ ಹಾಮಾನನು ಅವನ ಮನವೊಪ್ಪಿಸುತ್ತಾನೆ ಮತ್ತು ಈ ಸರ್ವನಾಶವನ್ನು ಪೂರೈಸಲು ಅರಸನು ಒಂದು ಆಜ್ಞೆಯನ್ನು ಹೊರಡಿಸುವಂತೆ ಮಾಡುವುದರಲ್ಲಿಯೂ ಯಶಸ್ವಿಯಾಗುತ್ತಾನೆ. ಮೊರ್ದೆಕೈ “ಗೋಣಿತಟ್ಟನ್ನು ಕಟ್ಟಿಕೊಂಡು ಬೂದಿಯನ್ನು ಹಾಕಿಕೊಂಡು” ಕುಳಿತುಕೊಳ್ಳುತ್ತಾನೆ. (ಎಸ್ತೇರಳು 4:1) ಎಸ್ತೇರಳು ಈಗ ಮಧ್ಯಪ್ರವೇಶಿಸುತ್ತಾಳೆ. ಒಂದು ಖಾಸಗಿ ಔತಣಕ್ಕೆ ಅವಳು ಅರಸನನ್ನೂ ಪ್ರಧಾನಮಂತ್ರಿಯನ್ನೂ ಆಮಂತ್ರಿಸುತ್ತಾಳೆ. ಅವರು ಸಂತೋಷದಿಂದ ಅದಕ್ಕೆ ಹಾಜರಾದಾಗ, ಮರುದಿನ ಇನ್ನೊಂದು ಔತಣಕ್ಕೆ ಬರುವಂತೆ ಎಸ್ತೇರಳು ಅವರನ್ನು ಬಿನ್ನಹಿಸುತ್ತಾಳೆ. ಹಾಮಾನನು ಬಹಳ ಸಂತೋಷಿತನಾಗುತ್ತಾನೆ. ಆದರೆ, ತನ್ನನ್ನು ಗೌರವಿಸಲು ಮೊರ್ದೆಕೈ ತಿರಸ್ಕರಿಸಿದಾಗ ಅವನು ಪುನಃ ಉದ್ರೇಕಿತನಾಗುತ್ತಾನೆ. ಮರುದಿನದ ಔತಣಕ್ಕಿಂತ ಮುಂಚೆ ಮೊರ್ದೆಕೈಯನ್ನು ಕೊಲ್ಲಲು ಹಾಮಾನನು ಉಪಾಯಹೂಡುತ್ತಾನೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:3-5—ಅರಸನ ಔತಣವು 180 ದಿನಗಳ ವರೆಗೆ ಮುಂದುವರಿಯಿತೊ? ಔತಣವು 180 ದಿನಗಳ ವರೆಗೆ ಮುಂದುವರಿಯಿತೆಂದು ಬೈಬಲ್ ತಿಳಿಸುವುದಿಲ್ಲ. ಬದಲಾಗಿ, ಅರಸನು ತನ್ನ ಘನವಾದ ರಾಜ್ಯದ ಐಶ್ವರ್ಯವನ್ನೂ ಮಹಾಮಹಿಮೆಯ ವೈಭವಗಳನ್ನೂ ಅಧಿಕಾರಿಗಳಿಗೆ 180 ದಿನಗಳ ವರೆಗೆ ತೋರಿಸಿದನೆಂದು ತಿಳಿಸುತ್ತದೆ. ಪ್ರಾಯಶಃ, ಮೇಧಾವಿಗಳನ್ನು ಮೆಚ್ಚಿಸಲು ಮತ್ತು ದಾಳಿಮಾಡುವ ತನ್ನ ಉಪಾಯಗಳನ್ನು ಕೈಗೂಡಿಸುವ ಸಾಮರ್ಥ್ಯ ತನಗಿದೆ ಎಂಬುದನ್ನು ಅವರಿಗೆ ಮಂದಟ್ಟುಮಾಡಲು ಅರಸನು ಇಷ್ಟು ದಿವಸಗಳ ವರೆಗೆ ತನ್ನ ರಾಜ್ಯ ವೈಭವಗಳನ್ನು ಪ್ರದರ್ಶಿಸಿರಬೇಕು. ಹಾಗಿರುವಲ್ಲಿ, ವಚನ 3 ಮತ್ತು 5ರಲ್ಲಿ ಸೂಚಿಸಿರುವಂತೆ ಔತಣವು 180 ದಿನಗಳ ಒಕ್ಕೂಟದ ಕೊನೆಯ 7 ದಿನಗಳಲ್ಲಿ ಏರ್ಪಡಿಸಲ್ಪಟ್ಟಿತು.
1:8—‘ಪಾನಮಾಡುವದರಲ್ಲಿ ಯಾರಿಗೂ ಒತ್ತಾಯಮಾಡಬಾರದೆಂಬ ಕ್ರಮವಿದ್ದದ್ದು’ ಯಾವ ಅರ್ಥದಲ್ಲಿ? ಪಾರಸಿಯ ಪದ್ಧತಿಯ ಪ್ರಕಾರ ಇಂಥ ಒಕ್ಕೂಟಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಒಂದು ನಿರ್ದಿಷ್ಟ ಮೊತ್ತದಷ್ಟು ಕುಡಿಯುವಂತೆ ಒತ್ತಾಯಿಸುತ್ತಿದ್ದರೆಂಬಂತೆ ತೋರುತ್ತದೆ. ಆದರೆ ಈ ಸಂದರ್ಭದಲ್ಲಿ, ಅರಸ ಅಹಷ್ವೇರೋಷನು ಈ ಪದ್ಧತಿಗೆ ಒಂದು ವಿನಾಯಿತಿಯನ್ನು ನೀಡಿದನು. ಒಂದು ಕೃತಿಯು ತಿಳಿಸುವುದು: “ಅವರು ತಮಗೆ ಇಷ್ಟಬಂದಂತೆ ಎಷ್ಟು ಹೆಚ್ಚಾದರೂ ಇಲ್ಲವೆ ಎಷ್ಟು ಕಡಿಮೆಯಾದರೂ ಕುಡಿಯಬಹುದಾಗಿತ್ತು.”
1:10-12—ಅರಸನ ಬಳಿಗೆ ಬರಲು ವಷ್ಟಿ ರಾಣಿ ನಿರಾಕರಿಸಿದ್ದೇಕೆ? ಕುಡಿದು ಮತ್ತರಾಗಿದ್ದ ಅರಸನ ಅತಿಥಿಗಳ ಮುಂದೆ ತನ್ನನ್ನು ಅವಮಾನಗೊಳಿಸಿಕೊಳ್ಳಲು ಇಚ್ಛಿಸದ ಕಾರಣ ರಾಣಿಯು ವಿಧೇಯತೆಯನ್ನು ತೋರಿಸಲು ನಿರಾಕರಿಸಿದಳು ಎಂದು ಕೆಲವು ವಿದ್ವಾಂಸರು ತಿಳಿಸುತ್ತಾರೆ. ಅಥವಾ, ಹೊರತೋರಿಕೆಯಲ್ಲಿ ಸುಂದರಿಯಾಗಿದ್ದ ಈ ರಾಣಿಯು ಒಂದುವೇಳೆ ಅಧೀನತೆಯನ್ನು ತೋರಿಸದಿದ್ದಿರಬಹುದು. ಅವಳ ಹೇತುವನ್ನು ಬೈಬಲ್ ತಿಳಿಸುವುದಿಲ್ಲವಾದರೂ, ಅವಳು ತನ್ನ ಗಂಡನಿಗೆ ವಿಧೇಯತೆಯನ್ನು ತೋರಿಸದಿದ್ದದ್ದು ಖಂಡಿತವಾಗಿಯೂ ಶಿಕ್ಷೆಗೆ ಪಾತ್ರವಾದ ತಪ್ಪಾಗಿತ್ತು ಮತ್ತು ವಷ್ಟಿಯ ಕೆಟ್ಟ ಮಾದರಿಯು ಪಾರಸಿಯ ಪ್ರಾಂತದಲ್ಲಿದ್ದ ಎಲ್ಲ ಪತ್ನಿಯರ ಮೇಲೆ ಒಂದು ಕೆಟ್ಟ ಪ್ರಭಾವವನ್ನು ಬೀರಲಿಕ್ಕಿತ್ತು ಎಂಬುದನ್ನು ಆ ಕಾಲದ ಜ್ಞಾನಿಗಳು ನೆನಸಿದರು.
2:14-17—ಎಸ್ತೇರಳು ಅರಸನೊಂದಿಗೆ ಅನೈತಿಕ ಲೈಂಗಿಕ ಸಂಬಂಧವನ್ನು ಹೊಂದಿದ್ದಳೊ? ಉತ್ತರವು ಇಲ್ಲ ಎಂದಾಗಿದೆ. ಅರಸನ ಬಳಿಗೆ ಬಂದ ಇತರ ಸ್ತ್ರೀಯರು ಮರುದಿನ ಬೆಳಿಗ್ಗೆ ಅರಸನ “ಉಪಪತ್ನಿಗಳ ಪಾಲಕನಾದ” ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಹೋದರು. ಅರಸನೊಂದಿಗೆ ರಾತ್ರಿಯನ್ನು ಕಳೆದ ಸ್ತ್ರೀಯರು ಈ ರೀತಿಯಾಗಿ ಅವನ ಉಪಪತ್ನಿಯರಾದರು. ಆದರೆ, ಎಸ್ತೇರಳು ಅರಸನನ್ನು ನೋಡಿದ ಬಳಿಕ ಅವಳನ್ನು ಉಪಪತ್ನಿಗಳ ಅಂತಃಪುರಕ್ಕೆ ಕೊಂಡೊಯ್ಯಲಿಲ್ಲ. ಎಸ್ತೇರಳನ್ನು ಅಹಷ್ವೇರೋಷನ ಬಳಿಗೆ ಕರತಂದಾಗ, ‘ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು. ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದಳು.’ (ಎಸ್ತೇರಳು 2:17) ಅವಳು ಅಹಷ್ವೇರೋಷನ ‘ಮೆಚ್ಚಿಗೆಗೂ ಪ್ರೀತಿಗೂ’ ಪಾತ್ರಳಾದದ್ದು ಹೇಗೆ? ಇತರರ ಮೆಚ್ಚಿಗೆಗೆ ಹೇಗೆ ಪಾತ್ರಳಾದಳೊ ಹಾಗೆಯೇ. ‘ಹೇಗೈಯು ಆಕೆಯನ್ನು ಮೆಚ್ಚಿದನು’ ಮತ್ತು ಈ ಕಾರಣ ಅವಳು ‘[ಅವನ] ದಯೆಗೆ ಪಾತ್ರಳಾದಳು.’ (ಎಸ್ತೇರಳು 2:8, 9) ಅವನೇನನ್ನು ಗಮನಿಸಿದನೋ ಆ ಕಾರಣ, ಅಂದರೆ ಅವಳ ತೋರಿಕೆ ಮತ್ತು ಉತ್ತಮ ಗುಣಗಳ ಕಾರಣ ಹೇಗೈ ಅವಳನ್ನು ಮೆಚ್ಚಿದನು. ವಾಸ್ತವದಲ್ಲಿ, “ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು.” (ಎಸ್ತೇರಳು 2:15) ಅದೇ ರೀತಿಯಲ್ಲಿ, ಅರಸನು ಸಹ ಎಸ್ತೇರಳಲ್ಲಿ ಏನನ್ನು ಗಮನಿಸಿದನೊ ಅದರಿಂದ ಪ್ರಭಾವಿತನಾದನು ಮತ್ತು ಈ ಕಾರಣ ಅವಳನ್ನು ಪ್ರೀತಿಸಲಾರಂಭಿಸಿದನು.
3:2; 5:9—ಹಾಮಾನನಿಗೆ ಸಾಷ್ಟಾಂಗನಮಸ್ಕಾರಮಾಡಲು ಮೊರ್ದೆಕೈ ನಿರಾಕರಿಸಿದ್ದೇಕೆ? ಉನ್ನತಸ್ಥಾನದಲ್ಲಿರುವ ವ್ಯಕ್ತಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವನ ಸ್ಥಾನವನ್ನು ಅಂಗೀಕರಿಸುವುದು ಇಸ್ರಾಯೇಲ್ಯರಿಗೆ ತಪ್ಪಾಗಿರಲಿಲ್ಲ. ಆದರೆ, ಹಾಮಾನನ ವಿಷಯದಲ್ಲಿ ಹೆಚ್ಚಿನದ್ದು ಒಳಗೂಡಿತ್ತು. ಹಾಮಾನನು ಅಗಾಗನ ವಂಶದವನಾಗಿದ್ದನು, ಅಂದರೆ ಪ್ರಾಯಶಃ ಒಬ್ಬ ಅಮಾಲೇಕ್ಯನಾಗಿದ್ದನು ಮತ್ತು ಅಮಾಲೇಕ್ಯರನ್ನು ಯೆಹೋವನು ನಾಶನಕ್ಕಾಗಿ ಗುರುತಿಸಿಟ್ಟಿದ್ದನು. (ಧರ್ಮೋಪದೇಶಕಾಂಡ 25:19) ಆದುದರಿಂದ, ಮೊರ್ದೆಕೈಯ ದೃಷ್ಟಿಯಲ್ಲಿ ಹಾಮಾನನಿಗೆ ಸಾಷ್ಟಾಂಗನಮಸ್ಕಾರ ಮಾಡುವುದು ಯೆಹೋವನಿಗೆ ಅಪನಂಬಿಗಸ್ತಿಕೆ ತೋರಿಸುವುದಕ್ಕೆ ಸಮಾನವಾಗಿತ್ತು. ಹಾಗಾಗಿ ತಾನೊಬ್ಬ ಯೆಹೂದ್ಯನು ಎಂದು ಹೇಳುವ ಮೂಲಕ ಅವನು ಹಾಗೆ ಮಾಡುವುದನ್ನು ಕಡಾಖಂಡಿತವಾಗಿ ನಿರಾಕರಿಸಿದನು.—ಎಸ್ತೇರಳು 3:3, 4.
ನಮಗಾಗಿರುವ ಪಾಠಗಳು:
2:10, 20; 4:12-16. ಎಸ್ತೇರಳು ಯೆಹೋವನ ಒಬ್ಬ ಪ್ರೌಢ ಆರಾಧಕನಿಂದ ಮಾರ್ಗದರ್ಶನೆ ಮತ್ತು ಸಲಹೆಯನ್ನು ಸ್ವೀಕರಿಸಿದಳು. ನಾವು ಸಹ ‘[ನಮ್ಮ] ಸಭಾನಾಯಕರ ಮಾತನ್ನು ಕೇಳಿ, ಅವರಿಗೆ ಅಧೀನರಾಗುವುದು’ ವಿವೇಕಯುತವಾಗಿದೆ.—ಇಬ್ರಿಯ 13:17.
2:11; 4:5. ನಾವು ‘ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಬೇಕು.’—ಫಿಲಿಪ್ಪಿ 2:4.
2:15. ಹೇಗೈ ಒದಗಿಸಿದ್ದನ್ನು ಹೊರತು ಹೆಚ್ಚಿನ ಒಡವೆ ಇಲ್ಲವೆ ಉತ್ತಮ ವಸ್ತ್ರಗಳನ್ನು ಕೇಳದಿರುವ ಮೂಲಕ ಎಸ್ತೇರಳು ವಿನಯಶೀಲತೆ ಮತ್ತು ಸ್ವನಿಯಂತ್ರಣವನ್ನು ಪ್ರದರ್ಶಿಸಿದಳು. “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ” ಅರಸನ ಮೆಚ್ಚಿಗೆಗೆ ಎಸ್ತೇರಳನ್ನು ಪಾತ್ರಳನ್ನಾಗಿ ಮಾಡಿತು.—1 ಪೇತ್ರ 3:4.
2:21-23. ‘ಮೇಲಿರುವ ಅಧಿಕಾರಿಗಳಿಗೆ ಅಧೀನರಾಗುವುದರಲ್ಲಿ’ ಎಸ್ತೇರಳು ಮತ್ತು ಮೊರ್ದೆಕೈ ಉತ್ತಮ ಮಾದರಿಗಳಾಗಿದ್ದಾರೆ.—ರೋಮಾಪುರ 13:1.
3:4. ಕೆಲವು ಸಂದರ್ಭಗಳಲ್ಲಿ, ಎಸ್ತೇರಳಂತೆ ನಾವು ನಮ್ಮ ಗುರುತಿನ ವಿಷಯದಲ್ಲಿ ಮೌನವಾಗಿರುವುದು ವಿವೇಕಪ್ರದ. ಹಾಗಿದ್ದರೂ, ಯೆಹೋವನ ಪರಮಾಧಿಕಾರ ಮತ್ತು ನಮ್ಮ ಸಮಗ್ರತೆ ಎಂಬ ಪ್ರಾಮುಖ್ಯವಾದ ವಿವಾದಗಳ ವಿಷಯದಲ್ಲಿ ನಿಲುವನ್ನು ತೆಗೆದುಕೊಳ್ಳಬೇಕಾಗಿ ಬಂದಾಗ, ಯೆಹೋವನ ಸಾಕ್ಷಿಗಳು ಎಂಬುದನ್ನು ತಿಳಿಸಲು ಹೆದರಲೇಬಾರದು.
4:3. ಪರೀಕ್ಷೆಗಳನ್ನು ಎದುರಿಸಿದಾಗ, ಬಲ ಮತ್ತು ವಿವೇಕಕ್ಕಾಗಿ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಕಡೆಗೆ ತಿರುಗಬೇಕು.
4:6-8. ಹಾಮಾನನು ಹೂಡಿದ ಒಳಸಂಚಿನ ಬೆದರಿಕೆಗೆ ಮೊರ್ದೆಕೈ ಒಂದು ಕಾನೂನುಬದ್ಧ ಪರಿಹಾರವನ್ನು ಹುಡುಕಿದನು.—ಫಿಲಿಪ್ಪ 1:7.
4:14. ಯೆಹೋವನಲ್ಲಿ ಮೊರ್ದೆಕೈಗಿದ್ದ ಭರವಸೆಯು ಒಂದು ಉತ್ತಮ ಮಾದರಿಯಾಗಿದೆ.
4:16. ಎಸ್ತೇರಳು ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸಿ, ತನ್ನ ಮರಣಕ್ಕೆ ನಡಿಸಸಾಧ್ಯವಿದ್ದ ಸನ್ನಿವೇಶವನ್ನು ನಂಬಿಗಸ್ತಿಕೆಯಿಂದಲೂ ಧೈರ್ಯದಿಂದಲೂ ಎದುರಿಸಿದಳು. ನಾವು ಸಹ ನಮ್ಮ ಮೇಲೆಯೇ ಅವಲಂಬಿಸದೆ ಯೆಹೋವನ ಮೇಲೆ ಅವಲಂಬಿಸಲು ಕಲಿಯುವುದು ಬಹು ಪ್ರಾಮುಖ್ಯವಾಗಿದೆ.
5:6-8. ಅಹಷ್ವೇರೋಷನ ಮೆಚ್ಚಿಗೆಯನ್ನು ಪಡೆದುಕೊಳ್ಳಲು ಎಸ್ತೇರಳು ಅವನನ್ನು ಎರಡನೇ ಬಾರಿ ಔತಣಕ್ಕೆ ಆಮಂತ್ರಿಸಿದಳು. ಅವಳು ಜಾಣತನದಿಂದ ಕ್ರಿಯೆಗೈದಳು. ಅಂತೆಯೇ ನಾವು ಸಹ ಇರಬೇಕು.—ಜ್ಞಾನೋಕ್ತಿ 14:15.
ಒಂದರ ಅನಂತರ ಇನ್ನೊಂದು ಪರಿಸ್ಥಿತಿಗಳು ತಲೆಕೆಳಗಾಗುತ್ತವೆ
ವಿಷಯಗಳು ಬಯಲಾದಂತೆ ಪರಿಸ್ಥಿತಿಗಳು ತಲೆಕೆಳಗಾಗುತ್ತವೆ. ಮೊರ್ದೆಕೈಗಾಗಿ ಸಿದ್ಧಮಾಡಿದ ಗಲ್ಲಿಗೆ ಹಾಮಾನನನ್ನೇ ನೇತುಹಾಕಲಾಗುತ್ತದೆ ಮತ್ತು ಮೊರ್ದೆಕೈಯು ಪ್ರಧಾನಮಂತ್ರಿಯಾಗುತ್ತಾನೆ! ಯೆಹೂದ್ಯರನ್ನು ನಾಶಮಾಡುವ ಯೋಜನೆಯ ಕುರಿತೇನು? ಅದು ಸಹ ತಲೆಕೆಳಗಾಗಬೇಕು.
ನಂಬಿಗಸ್ತಳಾದ ಎಸ್ತೇರಳು ಪುನಃ ಒಮ್ಮೆ ಮಾತಾಡುತ್ತಾಳೆ. ತನ್ನ ಜೀವವನ್ನು ಗಂಡಾಂತರಕ್ಕೊಡ್ಡುತ್ತಾ, ಹಾಮಾನನ ಒಳಸಂಚನ್ನು ರದ್ದುಗೊಳಿಸಲು ಯಾವುದಾದರು ಮಾರ್ಗವನ್ನು ಕಂಡುಕೊಳ್ಳುವಂತೆ ಅರಸನಲ್ಲಿ ಬಿನ್ನಹಿಸಲಿಕ್ಕಾಗಿ ಅವಳು ಅವನ ಮುಂದೆ ಬರುತ್ತಾಳೆ. ಏನು ಮಾಡಬೇಕೆಂಬುದು ಅಹಷ್ವೇರೋಷನಿಗೆ ತಿಳಿದಿದೆ. ಆದುದರಿಂದ ಯೆಹೂದ್ಯರನ್ನು ಸಂಹಾರಮಾಡುವ ದಿನವು ಬಂದಾಗ, ಯೆಹೂದ್ಯರಲ್ಲ ಬದಲಾಗಿ ಅವರಿಗೆ ಹಾನಿಮಾಡಲು ಕಾಯುತ್ತಿದ್ದವರೇ ಸಂಹಾರವಾಗುತ್ತಾರೆ. ಈ ಮಹಾ ಬಿಡುಗಡೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಪ್ರತಿ ವರುಷ ಪೂರೀಮ್ ಹಬ್ಬವನ್ನು ಆಚರಿಸಬೇಕೆಂದು ಮೊರ್ದೆಕೈ ಆಜ್ಞಾಪಿಸುತ್ತಾನೆ. ಅರಸ ಅಹಷ್ವೇರೋಷನಿಗೆ ಎರಡನೇ ಸ್ಥಾನದಲ್ಲಿದ್ದ ಮೊರ್ದೆಕೈ “ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೋಸ್ಕರ ಸುಖಪ್ರಾರ್ಥನಾಪರನೂ” ಆಗಿ ಕ್ರಿಯೆಗೈಯುತ್ತಾನೆ.—ಎಸ್ತೇರಳು 10:3.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
7:4—ಯೆಹೂದ್ಯರ ನಾಶನವು ‘ರಾಜನಿಗೆ ತೊಂದರೆಯನ್ನು’ ಹೇಗೆ ತರುತ್ತಿತ್ತು? ಯೆಹೂದ್ಯರನ್ನು ದಾಸದಾಸಿಯರನ್ನಾಗಿ ಮಾರುವ ಸಾಧ್ಯತೆಯನ್ನು ಜಾಣ್ಮೆಯಿಂದ ತಿಳಿಸುವ ಮೂಲಕ, ಅವರನ್ನು ನಾಶಮಾಡುವುದು ರಾಜನಿಗೆ ತೊಂದರೆಯ ಅಥವಾ ನಷ್ಟದ ಅರ್ಥದಲ್ಲಿದೆ ಎಂಬುದನ್ನು ಎಸ್ತೇರಳು ತಿಳಿಯಪಡಿಸಿದಳು. ಹಾಮಾನನು ಮಾತುಕೊಟ್ಟ 10,000 ಬೆಳ್ಳಿ ನಾಣ್ಯಗಳು ಅರಸನ ಬೊಕ್ಕಸಕ್ಕೆ ಏನೂ ಅಲ್ಲದವುಗಳಾಗಿದ್ದವು. ಒಂದುವೇಳೆ ಯೆಹೂದ್ಯರನ್ನು ದಾಸದಾಸಿಯಂತೆ ಮಾರಲು ಹಾಮಾನನು ಒಳಸಂಚು ಮಾಡುತ್ತಿದ್ದರೆ ಆಗ ಅರಸನಿಗೆ ಎಷ್ಟೊ ಹೆಚ್ಚು ಲಾಭವಾಗುತ್ತಿತ್ತು. ಆದರೆ ಹಾಮಾನನ ಒಳಸಂಚು ನೆರವೇರಿದರೆ ಅದು ರಾಣಿಯ ನಷ್ಟದ ಅರ್ಥದಲ್ಲಿತ್ತು.
7:8—ಸೇವಕರು ಹಾಮಾನನ ಮೋರೆಗೆ ಮುಸುಕು ಹಾಕಿದ್ದೇಕೆ? ಒಂದುವೇಳೆ ನಾಚಿಕೆಗೇಡನ್ನು ಇಲ್ಲವೆ ಅವನ ಮುಂದಿದ್ದ ವಿನಾಶವನ್ನು ಸೂಚಿಸಲು ಹೀಗೆ ಮಾಡಿದ್ದಿರಬಹುದು. ಒಂದು ಕೃತಿಗನುಸಾರ, “ಪುರಾತನ ಕಾಲದಲ್ಲಿ ಕೆಲವೊಮ್ಮೆ ಗಲ್ಲಿಗೇರಿಸಲ್ಪಡಲಿದ್ದವರ ತಲೆಯನ್ನು ಮುಸುಕಿನಿಂದ ಮುಚ್ಚಲಾಗುತ್ತಿತ್ತು.”
8:17—‘ದೇಶದ ಜನರಲ್ಲಿ ಅನೇಕರು ಯೆಹೂದ್ಯ ಮತಕ್ಕೆ ಸೇರಿದ್ದು’ ಯಾವ ಅರ್ಥದಲ್ಲಿ? ಹಾಮಾನನು ಅರಸನಿಂದ ಅನುಮತಿಹೊಂದಿ ಬರಿಸಿದ ಕಟ್ಟಳೆಗಳನ್ನು ರದ್ದುಮಾಡುವದಕ್ಕಾಗಿ ಹೊರಡಿಸಲಾದ ಪ್ರತಿಕಟ್ಟಳೆಯು ಯೆಹೂದ್ಯರ ಮೇಲೆ ದೇವರಿಗಿರುವ ಮೆಚ್ಚಿಗೆಯನ್ನು ಸೂಚಿಸುತ್ತದೆ ಎಂದು ನೆನಸಿ ಅನೇಕ ಪಾರಸಿಯರು ಯೆಹೂದಿ ಮತಾವಲಂಬಿಗಳಾದರು. ಜೆಕರ್ಯ ಪುಸ್ತಕದ ಪ್ರವಾದನೆಯ ನೆರವೇರಿಕೆಯಲ್ಲಿಯೂ ಇದೇ ಮೂಲತತ್ತ್ವವು ಒಳಗೂಡಿದೆ. ಅದು ತಿಳಿಸುವುದು: “ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.”—ಜೆಕರ್ಯ 8:23.
9:10, 15, 16—ಸುಲಿಗೆಮಾಡುವುದಕ್ಕೆ ಕಟ್ಟಳೆಯು ಕೊಡಲ್ಪಟ್ಟರೂ ಯೆಹೂದ್ಯರು ಹಾಗೆ ಮಾಡಲು ನಿರಾಕರಿಸಿದ್ದೇಕೆ? ಅವರ ಉದ್ದೇಶವು ತಮ್ಮನ್ನು ರಕ್ಷಿಸಿಕೊಳ್ಳುವುದಾಗಿತ್ತೇ ಹೊರತು ಐಶ್ವರ್ಯವನ್ನು ಗಳಿಸುವುದಾಗಿರಲಿಲ್ಲ ಎಂಬುದನ್ನು ಅವರ ನಿರಾಕರಣೆಯು ಸ್ಪಷ್ಟಪಡಿಸಿತು.
ನಮಗಾಗಿರುವ ಪಾಠಗಳು:
6:6-10. “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.”—ಜ್ಞಾನೋಕ್ತಿ 16:18.
7:3, 4. ಹಿಂಸೆಯನ್ನು ಎದುರಿಸಬೇಕಾದರೂ ನಾವು ನಮ್ಮನ್ನು ಧೈರ್ಯದಿಂದ ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಳ್ಳುತ್ತೇವೊ?
8:3-6. ವೈರಿಗಳಿಂದ ರಕ್ಷಣೆಯನ್ನು ಪಡೆಯಲು ನಾವು ಸರಕಾರಿ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಅಪೀಲು ಮಾಡಸಾಧ್ಯವಿದೆ ಮತ್ತು ಮಾಡಬೇಕು.
8:5. ತನ್ನ ಜನರನ್ನು ನಾಶಮಾಡಲು ನೀಡಲಾದ ಕಟ್ಟಳೆಗೆ ಅರಸನೂ ಜವಾಬ್ದಾರನಾಗಿದ್ದಾನೆ ಎಂಬುದನ್ನು ಎಸ್ತೇರಳು ಜಾಣ್ಮೆಯಿಂದ ತಿಳಿಸಲಿಲ್ಲ. ಅಂತೆಯೇ, ಉನ್ನತ ಅಧಿಕಾರಿಗಳಿಗೆ ಸಾಕ್ಷಿನೀಡುವಾಗ ನಾವು ಸಹ ಜಾಣ್ಮೆಯನ್ನು ಉಪಯೋಗಿಸಬೇಕು.
9:22. ನಮ್ಮ ಮಧ್ಯದಲ್ಲಿರುವ ಬಡವರನ್ನು ನಾವು ಮರೆಯಬಾರದು.—ಗಲಾತ್ಯ 2:10.
ಯೆಹೋವನು ‘ಸಹಾಯವನ್ನೂ ವಿಮೋಚನೆಯನ್ನೂ’ ಒದಗಿಸುವನು
ಎಸ್ತೇರಳು ರಾಣಿ ಪಟ್ಟವನ್ನು ಹೊಂದುವುದು ದೇವರ ಉದ್ದೇಶವಾಗಿದೆ ಎಂಬುದನ್ನು ಮೊರ್ದೆಕೈ ಸೂಚಿಸುತ್ತಾನೆ. ಬೆದರಿಕೆಯೊಡ್ಡಲ್ಪಟ್ಟಾಗ ಯೆಹೂದ್ಯರು ಸಹಾಯಕ್ಕಾಗಿ ಉಪವಾಸ ಪ್ರಾರ್ಥನೆಯನ್ನು ಮಾಡುತ್ತಾರೆ. ಆಮಂತ್ರಣವಿಲ್ಲದೆಯೇ ರಾಣಿಯು ರಾಜನ ಸಮಕ್ಷಮಕ್ಕೆ ಬರುತ್ತಾಳೆ ಮತ್ತು ಪ್ರತಿ ಬಾರಿ ರಾಜನ ಮೆಚ್ಚಿಗೆಯನ್ನು ಪಡೆಯುತ್ತಾಳೆ. ಆ ನಿರ್ಣಾಯಕ ದಿನದಂದು ಅರಸನಿಗೆ ನಿದ್ರಿಸಲು ಸಹ ಅಸಾಧ್ಯವಾಗುತ್ತದೆ. ವಾಸ್ತವದಲ್ಲಿ, ಯೆಹೋವನು ತನ್ನ ಜನರ ಪರವಾಗಿ ಹೇಗೆ ವಿಷಯಗಳನ್ನು ನಿರ್ದೇಶಿಸುತ್ತಾನೆ ಎಂಬುದರ ಕುರಿತು ಎಸ್ತೇರಳು ಪುಸ್ತಕದಲ್ಲಿದೆ.
ಎಸ್ತೇರಳು ಪುಸ್ತಕದ ರೋಮಾಂಚಕ ವೃತ್ತಾಂತವು ಮುಖ್ಯವಾಗಿ ‘ಅಂತ್ಯಕಾಲದಲ್ಲಿ’ ಜೀವಿಸುವ ನಮಗೆ ಉತ್ತೇಜನದಾಯಕವಾಗಿದೆ. (ದಾನಿಯೇಲ 12:4) ಅಂತ್ಯಕಾಲದಲ್ಲಿ ಮಾಗೋಗ್ ದೇಶದ ಗೋಗನಾದ ಪಿಶಾಚನಾದ ಸೈತಾನನು ಯೆಹೋವನ ಜನರ ಮೇಲೆ ಭಯಂಕರ ದಾಳಿಯನ್ನು ಮಾಡಲಿದ್ದಾನೆ. ಸತ್ಯಾರಾಧಕರನ್ನು ಸಂಪೂರ್ಣವಾಗಿ ನಾಶಮಾಡಬೇಕೆಂಬುದೇ ಅವನ ಗುರಿಯಾಗಿದೆ. ಆದರೆ ಎಸ್ತೇರಳ ದಿನದಂತೆ, ಯೆಹೋವನು ತನ್ನ ಆರಾಧಕರಿಗೆ ‘ಸಹಾಯವನ್ನೂ ವಿಮೋಚನೆಯನ್ನೂ’ ಒದಗಿಸುತ್ತಾನೆ.—ಯೆಹೆಜ್ಕೇಲ 38:16-23; ಎಸ್ತೇರಳು 4:14.
[ಪುಟ 10ರಲ್ಲಿರುವ ಚಿತ್ರ]
ಅಹಷ್ವೇರೋಷನ ಸಮ್ಮುಖದಲ್ಲಿ ಎಸ್ತೇರಳು ಮತ್ತು ಮೊರ್ದೆಕೈ