ಪಶುಸೃಷ್ಟಿ ಯೆಹೋವನನ್ನು ಘನಪಡಿಸುತ್ತದೆ
ಯೆಹೋವನ ಮಹತ್ತು ಪಶುಸೃಷ್ಟಿಯಲ್ಲಿ ತೋರಿಬರುತ್ತದೆ. ದೇವರು ಮಾನವರನ್ನು ಪರಾಮರಿಸುವಂತೆಯೇ ಪಶುಗಳನ್ನೂ ಉತ್ತಮವಾಗಿ ಪರಾಮರಿಸುತ್ತಾನೆ. (ಕೀರ್ತನೆ 145:16) ಆದಕಾರಣ, ಅವುಗಳನ್ನೂ ನಮ್ಮನ್ನೂ ನಿರ್ಮಿಸಿದ ಸೃಷ್ಟಿಕರ್ತನಲ್ಲಿ ದೋಷವನ್ನು ಹುಡುಕುವುದು ಅದೆಷ್ಟು ತಪ್ಪು! ಯೋಬನೆಂಬವನು ಪ್ರಾಮಾಣಿಕನಾಗಿದ್ದರೂ, “ದೇವರಿಗಿಂತಲೂ ತಾನೇ ನ್ಯಾಯವಂತನು” ಎಂದು ಹೇಳತೊಡಗಿದನು. ಆದಕಾರಣ, ಯೋಬನು ಕೆಲವು ಪಾಠಗಳನ್ನು ಕಲಿಯಲಿಕ್ಕಿತ್ತು!—ಯೋಬ 32:2; 33:8-12; 34:5.
ಪಶುಸೃಷ್ಟಿಯ ದೃಷ್ಟಾಂತಗಳು, ಮನುಷ್ಯರು ದೇವರ ಮಾರ್ಗಗಳನ್ನು ಪ್ರಶ್ನಿಸುವ ಸ್ಥಾನದಲ್ಲಿಲ್ಲವೆಂದು ಯೋಬನಿಗೆ ತೋರಿಸಿದವು. ಯೆಹೋವನು ತನ್ನ ಸೇವಕನಾದ ಯೋಬನಿಗೆ ಹೇಳಿದ ಮಾತುಗಳನ್ನು ನಾವು ಪರಿಶೀಲಿಸುವಾಗ ಅದೆಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ!
ಅವುಗಳಿಗೆ ಮಾನವ ಸಹಾಯದ ಅಗತ್ಯವಿಲ್ಲ
ಪಶುಗಳ ಜೀವನದ ಬಗ್ಗೆ ದೇವರು ಕೇಳಿದ ಪ್ರಶ್ನೆಗಳಿಗೆ ಯೋಬನಲ್ಲಿ ಉತ್ತರವೇ ಇರಲಿಲ್ಲ. (ಯೋಬ 38:39-41) ಹೌದು, ಯೆಹೋವನು ಸಿಂಹಕ್ಕೂ ಕಾಗೆಗೂ ಅಗತ್ಯವಿರುವುದನ್ನು ಒದಗಿಸುವುದು ಮಾನವ ಸಹಾಯವಿಲ್ಲದೆಯೇ. ಕಾಗೆಗಳು ಆಹಾರವನ್ನು ಹುಡುಕುತ್ತ ಹಾರಾಡುತ್ತಿರುವುದಾದರೂ, ಅವುಗಳಿಗೆ ಆಹಾರವು ನಿಜವಾಗಿಯೂ ದೇವರಿಂದಲೇ ದೊರೆಯುತ್ತದೆ.—ಲೂಕ 12:24.
ಕಾಡುಮೃಗಗಳ ಬಗ್ಗೆ ಪ್ರಶ್ನಿಸಿದಾಗ ಯೋಬನಲ್ಲಿ ಉತ್ತರವಿರಲಿಲ್ಲ. (ಯೋಬ 39:1-8) ಬೆಟ್ಟದ ಮೇಕೆಗಳನ್ನೂ ಹುಲ್ಲೆಗಳನ್ನೂ ಅಥವಾ ಹೆಣ್ಣು ಜಿಂಕೆಗಳನ್ನೂ ಕಾಪಾಡುವುದು ಯಾವ ಮನುಷ್ಯನಿಗೂ ಅಸಾಧ್ಯ. ಅಷ್ಟೇಕೆ, ಬೆಟ್ಟದ ಮೇಕೆಗಳನ್ನು [“ಕಾಡು ಮೇಕೆ,” NIBV] ಸಮೀಪಿಸುವುದೂ ಕಷ್ಟ! (ಕೀರ್ತನೆ 104:18) ಹುಲ್ಲೆಯು ಮರಿಹಾಕಲಿರುವಾಗ ಕಾಡಿನಲ್ಲಿ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತದೆ. ಅದು ತನ್ನ ಮರಿಗಳನ್ನು ಯೋಗ್ಯ ರೀತಿಯಲ್ಲಿ ಪೋಷಣೆ ಮಾಡಿದರೂ, ಮರಿಗಳು “ಪುಷ್ಟಿಯಾಗಿ . . . ಬೆಳೆದು” ಬಂದಾಗ “ತಾಯಿಯ ಬಳಿಗೆ ಪುನಃ ಸೇರುವದೇ ಇಲ್ಲ.” ಆ ಬಳಿಕ ಅವು ಸ್ವತಂತ್ರವಾಗಿ ತಮ್ಮನ್ನೇ ಪೋಷಿಸಿಕೊಳ್ಳುತ್ತವೆ.
ಸೀಬ್ರ ಸ್ವತಂತ್ರ ಪ್ರಾಣಿ ಮತ್ತು ಕಾಡುಕತ್ತೆಗೆ ಅಡವಿ ಇಲ್ಲವೆ ಮರುಭೂಮಿಯೇ ಬೀಡು. ಯೋಬನಿಗೆ ಕಾಡುಕತ್ತೆಯ ಮೇಲೆ ಹೊರೆಹೇರುವುದು ಅಸಾಧ್ಯವಾಗಿತ್ತು. ಅದು ಹುಲ್ಲು ಮೇಯಲಿಕ್ಕಾಗಿ ಬೆಟ್ಟಗಳಲ್ಲಿ ಸುತ್ತಾಡುತ್ತಾ “ಹಸುರು ಎಲ್ಲಿದ್ದರೂ” ಅದನ್ನು ಕಂಡುಹಿಡಿಯುವುದು. ಅದು ತನಗೆ ಕಾಡಿನಲ್ಲಿರುವ ಸ್ವಾತಂತ್ರ್ಯವನ್ನು ಪಟ್ಟಣಗಳಲ್ಲಿ ಸುಲಭವಾಗಿ ದೊರೆಯುವ ಆಹಾರಕ್ಕಾಗಿ ವಿನಿಮಯ ಮಾಡದು. ಕಾಡುಕತ್ತೆಯು “ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ,” ಏಕೆಂದರೆ ಮನುಷ್ಯನು ಅದರ ಪ್ರದೇಶದೊಳಗೆ ಕಾಲಿರಿಸುವಲ್ಲಿ ಅದು ಬೇಗನೆ ಅಲ್ಲಿಂದ ಓಡಿಹೋಗುತ್ತದೆ.
ದೇವರು ಮುಂದಕ್ಕೆ ಕಾಡುಕೋಣದ ಕುರಿತು ಹೇಳುತ್ತಾನೆ. (ಯೋಬ 39:9-12) ಅದರ ಬಗ್ಗೆ ಇಂಗ್ಲಿಷ್ ಪ್ರಾಕ್ತನಶಾಸ್ತ್ರಜ್ಞನಾದ ಆಸ್ಟನ್ ಲೇಯರ್ಡ್ ಬರೆದುದು: “ಉಬ್ಬು ಚಿತ್ರಣಗಳಲ್ಲಿ ಪದೇ ಪದೇ ತೋರಿಬರುವಂತೆ ಕಾಡುಕೋಣದ ಬೇಟೆಯು ಹೆಚ್ಚುಕಡಮೆ ಸಿಂಹದ ಬೇಟೆಯಷ್ಟೇ ಭೀಕರವೂ ಘನವಾದುದೂ ಆಗಿ ಪರಿಗಣಿಸಲ್ಪಡುತ್ತಿತ್ತೆಂದು ತೋರುತ್ತದೆ. ರಾಜನು ಕಾಡುಕೋಣದೊಂದಿಗೆ ಪದೇ ಪದೇ ಹೋರಾಡುತ್ತಿರುವವನಾಗಿ ತೋರಿಸಲಾಗುತ್ತದೆ, ಮತ್ತು ಭಟರು ಕುದುರೆಯ ಮೇಲೆ ಓಡುತ್ತಲೂ ಅದನ್ನು ಬೆನ್ನಟ್ಟುತ್ತಾರೆ.” (ನಿನವೆ ಮತ್ತು ಅದರ ಅವಶೇಷಗಳು [ಇಂಗ್ಲಿಷ್] 1849, ಸಂಪುಟ 2, ಪುಟ 326) ಆದರೂ, ವಿವೇಕಿಯಾದ ಯಾವನೂ ಅನಿಯಂತ್ರಿತವಾದ ಕಾಡುಕೋಣವನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ.—ಕೀರ್ತನೆ 22:21.
ಹಾರಾಡುವ ಜೀವಿಗಳು ಯೆಹೋವನನ್ನು ಘನಪಡಿಸುತ್ತವೆ
ದೇವರು ಮುಂದಕ್ಕೆ ಹಾರಾಡುವ ಜೀವಿಗಳ ವಿಷಯವಾಗಿ ಯೋಬನೊಂದಿಗೆ ಮಾತಾಡಿದನು. (ಯೋಬ 39:13-18) ಬಕ ಪಕ್ಷಿಯು ತನ್ನ ಬಲವಾದ ರೆಕ್ಕೆಗಳ ಬಲದಿಂದ ಎತ್ತರದಲ್ಲಿ ಹಾರಾಡುತ್ತದೆ. (ಯೆರೆಮೀಯ 8:7) ಉಷ್ಟ್ರಪಕ್ಷಿ ತನ್ನ ರೆಕ್ಕೆಗಳನ್ನು ಬಡಿಯುತ್ತದಾದರೂ ಅದು ಹಾರಲಾರದು. ಉಷ್ಟ್ರಪಕ್ಷಿಯು ಬಕದಂತೆ ಮರದಲ್ಲಿ ಕಟ್ಟಿರುವ ಗೂಡಿನಲ್ಲಿ ಮೊಟ್ಟೆಗಳನ್ನಿಡುವುದಿಲ್ಲ. (ಕೀರ್ತನೆ 104:17) ಅದು ಮರುಳಿನಲ್ಲಿ ಕುಳಿಮಾಡಿ ಅದರಲ್ಲಿ ತನ್ನ ಮೊಟ್ಟೆಗಳನ್ನಿಡುತ್ತದೆ. ಆದರೆ ಅವುಗಳನ್ನು ಅಲ್ಲಿಟ್ಟು ಹಾಗೆಯೇ ಬಿಟ್ಟು ಹೋಗುವುದಿಲ್ಲ. ಮರಳಿನಿಂದ ಮುಚ್ಚಲ್ಪಟ್ಟಿದ್ದು, ತಕ್ಕ ತಾಪಮಾನದಲ್ಲಿ ಇಡಲ್ಪಟ್ಟಿರುವ ಮೊಟ್ಟೆಗಳನ್ನು ಗಂಡು ಮತ್ತು ಹೆಣ್ಣು ಉಪಷ್ಟ್ರಪಕ್ಷಿಗಳೆರಡೂ ನೋಡಿಕೊಳ್ಳುತ್ತವೆ.
ಪರಭಕ್ಷಕ ಪ್ರಾಣಿಯೊಂದರಿಂದ ಅಪಾಯವಿದೆಯೆಂದು ಕಂಡುಕೊಳ್ಳುವಾಗ ಉಷ್ಟ್ರಪಕ್ಷಿ “ಜ್ಞಾನವನ್ನು” ಮರೆತು ಓಡಿಹೋಗುತ್ತಿರುವಂತೆ ಕಂಡೀತು. ಆದರೆ, ಬೈಬಲಿನಲ್ಲಿನ ಪಶುಗಳ ಕುರಿತಾದ ವಿಶ್ವಕೋಶ (ಇಂಗ್ಲಿಷ್) ತಿಳಿಸುವುದು: “ಇದು ಅಪಕರ್ಷಿಸಲಿಕ್ಕಾಗಿರುವ ಒಂದು ಯುಕ್ತಿಯಾಗಿದೆ: [ಉಷ್ಟ್ರಪಕ್ಷಿಗಳು] ಅಪಾಯಕಾರಿಯಾದ ಯಾವುದೇ ಪ್ರಾಣಿ ಅಥವಾ ವ್ಯಕ್ತಿಯ ಗಮನವನ್ನು ಸೆಳೆಯಲಿಕ್ಕಾಗಿ ತಮ್ಮನ್ನೇ ಎದ್ದುತೋರಿಸಿಕೊಂಡು ರೆಕ್ಕೆಗಳನ್ನು ಬಡಿಯುತ್ತವೆ, ಮತ್ತು ಹೀಗೆ ಮೊಟ್ಟೆಗಳಿಂದ ಅವುಗಳನ್ನು ದೂರಸರಿಸುತ್ತವೆ.”
ಆದರೆ ಉಷ್ಟ್ರಪಕ್ಷಿ “ಕುದುರೆಯನ್ನೂ ಸವಾರನನ್ನೂ ಹೀಯಾಳಿಸುವದು” ಹೇಗೆ? ದ ವರ್ಲ್ಡ್ ಬುಕ್ ಎನ್ಸೈಕ್ಲಪೀಡಿಯ ಹೇಳುವುದು: “ಉಷ್ಟ್ರಪಕ್ಷಿ ಹಾರಾಡದಿದ್ದರೂ ನೆಲದ ಮೇಲಿನ ವೇಗಕ್ಕೆ ಅದು ಪ್ರಸಿದ್ಧ. ಅದರ ನೀಳ ಕಾಲುಗಳು 4.6 ಮೀಟರ್ ಉದ್ದದ ಹೆಜ್ಜೆಗಳನ್ನಿಡುತ್ತಾ ತಾಸಿಗೆ 64 ಕಿಲೊಮೀಟರ್ ವೇಗದಲ್ಲಿ ಓಡಬಲ್ಲವು.”
ದೇವರು ಕುದುರೆಗೆ ಶಕ್ತಿಯನ್ನು ಕೊಡುತ್ತಾನೆ
ಆಮೇಲೆ ದೇವರು ಕುದುರೆಯ ಬಗ್ಗೆ ಯೋಬನನ್ನು ಪ್ರಶ್ನಿಸುತ್ತಾನೆ. (ಯೋಬ 39:19-25) ಪುರಾತನ ಕಾಲದಲ್ಲಿ, ಭಟರು ಕುದುರೆಯ ಮೇಲೆ ಸವಾರಿ ಮಾಡುತ್ತಾ ಕಾದಾಡುತ್ತಿದ್ದರು, ಮತ್ತು ಕುದುರೆಗಳು ಸಾರಥಿ ಹಾಗೂ ಪ್ರಾಯಶಃ ಇಬ್ಬರು ಸೈನಿಕರು ಇರುತ್ತಿದ್ದ ರಥಗಳನ್ನು ಎಳೆಯುತ್ತಿದ್ದವು. ಯುದ್ಧಾವೇಶದಿಂದ ತಾಳ್ಮೆಗೆಟ್ಟು ಒಂದು ಯುದ್ಧಾಶ್ವವು ಹೇಂಕರಿಸಿ ಗೊರಸುಗಳಿಂದ ನೆಲವನ್ನು ಗುದ್ದುತ್ತದೆ. ಖಡ್ಗಕ್ಕೆ ಮುಖಮಾಡಿದಾಗ ಅದು ಭಯಪಡುವುದೂ ಇಲ್ಲ, ಹಿಂದೆ ಸರಿಯುವುದೂ ಇಲ್ಲ. ತುತೂರಿಯ ಸದ್ದು ಕೇಳಿ ರಥಾಶ್ವವು “ಆಹಾ” ಎಂದು ಹೇಳಿಯೊ ಎಂಬಂತೆ ಪ್ರತಿಕ್ರಿಯಿಸುವುದು. ಅದು “ನೆಲವನ್ನು ನುಂಗಿಬಿಡುವುದೊ” ಎಂಬಂತೆ ಮುಂದೆ ಸಾಗುತ್ತದೆ. ಹೀಗಿದ್ದರೂ, ರಥಾಶ್ವವು ತನ್ನ ಸವಾರನ ಮಾತಿಗೆ ವಿಧೇಯತೆ ತೋರಿಸುತ್ತದೆ.
ಇದಕ್ಕೆ ತುಲನಾತ್ಮಕವಾದ ವರ್ಣನೆಯಲ್ಲಿ, ಪ್ರಾಕ್ತನಶಾಸ್ತ್ರಜ್ಞ ಲೇಯರ್ಡ್ ಬರೆದುದು: “ಕುರಿಮರಿಯಂತೆ ಸಾಧುಪ್ರಾಣಿಯಾದರೂ ಮತ್ತು ತಲೆಕುಣಿಕೆಯಲ್ಲದೆ ಇನ್ನಾವುದರ ಅಗತ್ಯವಿಲ್ಲದಿದ್ದರೂ ಅರೇಬಿಯನ್ ಹೆಣ್ಣುಕುದುರೆ ಕುಲದ ರಣಭೇರಿಯನ್ನು ಕೇಳಿ, ತನ್ನ ಸವಾರನ ಕಂಪಿಸುವ ಈಟಿಯನ್ನು ನೋಡುವಾಗ, ಅದು ತನ್ನ ಕಡುಕೆಂಪು ಮೂಗನ್ನು ಅರಳಿಸಿ, ಕತ್ತನ್ನು ಶ್ರೇಷ್ಠರೀತಿಯಲ್ಲಿ ಬಗ್ಗಿಸುತ್ತದೆ, ಬಾಲ ಮತ್ತು ಕತ್ತಿನ ಕೇಶವನ್ನು ಎತ್ತಿ ಗಾಳಿಯಲ್ಲಿ ಹರಡಿಸುತ್ತದೆ.”—ನಿನವೆ ಮತ್ತು ಬಾಬೆಲಿನ ಅವಶೇಷಗಳಲ್ಲಿನ ಕಂಡುಹಿಡಿತಗಳು (ಇಂಗ್ಲಿಷ್), 1853, ಪುಟ 330.
ಗಿಡಗ ಮತ್ತು ಹದ್ದಿನ ಕುರಿತು ಯೋಚಿಸಿರಿ
ಯೆಹೋವನು ತನ್ನ ಗಮನವನ್ನು ಬೇರೆ ಪಕ್ಷಿಗಳ ಕಡೆಗೆ ಹರಿಸುತ್ತಾನೆ. (ಯೋಬ 39:26-30) ಗಿಡಗ (ಡೇಗೆ) ‘ಮೇಲಕ್ಕೇರಿ ಗಾಳಿಗೆ ತನ್ನ ರೆಕ್ಕೆಗಳನ್ನು ಹರಡುತ್ತದೆ.’ ಪೆರಿಗ್ರೈನ್ ಫಾಲ್ಕನ್ ಎಂಬ ಗಿಡಗವನ್ನು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಯಾಗಿ ಹೆಸರಿಸುತ್ತ, ದ ಗಿನ್ನೆಸ್ ಬುಕ್ ಆಫ್ ರೆಕರ್ಡ್ಸ್ ಹೇಳುವುದೇನೆಂದರೆ, ಅದು “ತನ್ನ ಪ್ರಾದೇಶಿಕ ಪ್ರದರ್ಶನಗಳ ಸಮಯದಲ್ಲಿ ಅತಿ ಎತ್ತರದಿಂದ ಎರಗುವಾಗ ಅಥವಾ ಮಧ್ಯಾಕಾಶದಲ್ಲಿ ತನ್ನ ಆಹಾರವನ್ನು ಬೇಟೆಯಾಡುವಾಗ ಎಲ್ಲ ದಾಖಲೆಗಳನ್ನು ಮುರಿಯುವಂಥ ವೇಗದ ಮಟ್ಟಗಳನ್ನು ತಲಪುತ್ತದೆ.” ಈ ಪಕ್ಷಿ ಕೆಳಗಿಳಿಯುತ್ತಿರುವಾಗ 45 ಡಿಗ್ರಿ ಕೋನದಲ್ಲಿ, ತಾಸಿಗೆ 349 ಕಿಲೊಮೀಟರ್ಗಳ ವೇಗವನ್ನು ತಲಪಿರುವ ದಾಖಲೆಯಿದೆ!
ಹದ್ದುಗಳು ಒಂದು ತಾಸಿಗೆ 130 ಕಿಲೊಮೀಟರ್ ವೇಗದಲ್ಲಿ ಹಾರಾಡಿವೆ. ಯೋಬನು ಮಾನವನ ಜೀವನವು ವೇಗವಾಗಿ ದಾಟಿಹೋಗುವುದನ್ನು ಆಹಾರ ಹುಡುಕುವ ಹದ್ದಿನ ವೇಗಕ್ಕೆ ಹೋಲಿಸುತ್ತಾನೆ. (ಯೋಬ 9:25, 26) ನಾವು, ಮೇಲಕ್ಕೇರಿ ಹೋಗುತ್ತಿರುವ ಹದ್ದಿನ ಆಯಾಸರಹಿತವಾದ ರೆಕ್ಕೆಗಳ ಮೇಲಿದ್ದೇವೊ ಎಂಬಂತೆ, ದೇವರು ನಮಗೆ ತಾಳಿಕೊಳ್ಳುವ ಶಕ್ತಿಯನ್ನು ಕೊಡುತ್ತಾನೆ. (ಯೆಶಾಯ 40:31) ಹದ್ದು ಹಾರಾಡುವಾಗ, ಮೇಲಕ್ಕೇರುವ ಶಾಖಾನಿಲವೆಂದು ಕರೆಯಲ್ಪಡುವ ಬಿಸಿಗಾಳಿಯನ್ನು ಸದುಪಯೋಗಿಸಿಕೊಳ್ಳುತ್ತದೆ. ಆ ಶಾಖಾನಿಲದೊಳಗೆ ಪಕ್ಷಿ ಸುತ್ತಾಡುವಾಗ ಅದು ಪಕ್ಷಿಯನ್ನು ಹೆಚ್ಚೆಚ್ಚು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ಹದ್ದು ಒಂದು ನಿರ್ದಿಷ್ಟ ಎತ್ತರವನ್ನು ತಲಪಿದಾಗ ಅದು ಮುಂದಿನ ಶಾಖಾನಿಲಕ್ಕೆ ಜಾರಿ, ಅಲ್ಲಿ ಅತಿ ಕಡಮೆ ಶಕ್ತಿಯನ್ನು ವ್ಯಯಮಾಡಿ ತಾಸುಗಟ್ಟಲೆ ಕಾಲ ಹಾರಾಡುತ್ತಿರುತ್ತದೆ.
ಹದ್ದು “ಉನ್ನತದಲ್ಲಿ,” ಅಂದರೆ ಎಟುಕಲಾಗದಷ್ಟು ಎತ್ತರದ ಪ್ರದೇಶಗಳಲ್ಲಿ “ಗೂಡು” ಕಟ್ಟಿ ತನ್ನ ಮರಿಗಳನ್ನು ಅಪಾಯದಿಂದ ರಕ್ಷಿಸುತ್ತದೆ. ಇದನ್ನು ಹದ್ದು ಹುಟ್ಟರಿವಿನಿಂದಲೇ ಮಾಡುವಂತೆ ಯೆಹೋವನು ಏರ್ಪಡಿಸಿದ್ದಾನೆ. ಮತ್ತು ದೇವರು ಹದ್ದಿಗೆ ಕೊಟ್ಟಿರುವ ದೃಷ್ಟಿಶಕ್ತಿಯಿಂದ ಅದು ತನ್ನ ಬೇಟೆಯು “ದೂರದಲ್ಲಿದ್ದರೂ . . . ಕಂಡುಹಿಡಿಯುವದು.” ತನ್ನ ಕಣ್ಣುಗಳ ನಾಭಿಯನ್ನು ಶೀಘ್ರವಾಗಿ ಬದಲಾಯಿಸುವ ಸಾಮರ್ಥ್ಯವಿರುವ ಕಾರಣ, ಹದ್ದು ಎತ್ತರದಿಂದ ವೇಗವಾಗಿ ಧುಮುಕುತ್ತಾ ಬರುವಾಗಲೂ ತನ್ನ ಬೇಟೆಯನ್ನು ಅಥವಾ ಶವವನ್ನು ತನ್ನ ದೃಷ್ಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹದ್ದು ಸತ್ತ ಪ್ರಾಣಿಗಳನ್ನು ತಿನ್ನಬಹುದಾದ ಕಾರಣ, “ಹತರಿದ್ದಲ್ಲಿ ಹದ್ದು” ಇರುತ್ತದೆ. ಈ ಪಕ್ಷಿ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಮರಿಗಳಿಗಾಗಿ ಕೊಂಡೊಯ್ಯುತ್ತದೆ.
ಯೆಹೋವನು ಯೋಬನನ್ನು ಶಿಸ್ತಿಗೊಳಪಡಿಸುತ್ತಾನೆ
ಪ್ರಾಣಿಗಳ ಕುರಿತು ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೊದಲು, ದೇವರು ಯೋಬನನ್ನು ಶಿಸ್ತಿಗೊಳಪಡಿಸಿದನು. ಆಗ ಯೋಬನು ಹೇಗೆ ಪ್ರತಿವರ್ತಿಸಿದನು? ಅವನು ತನ್ನನ್ನು ತಗ್ಗಿಸಿಕೊಂಡು, ಇನ್ನೂ ಹೆಚ್ಚಿನ ಸಲಹೆಯನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು.—ಯೋಬ 40:1-14.
ಯೋಬನ ಅನುಭವಗಳ ಪ್ರೇರಿತ ದಾಖಲೆಯ ಈ ಹಂತದಲ್ಲಿ, ನಾವು ಅತಿ ಪ್ರಾಮುಖ್ಯವಾದ ಒಂದು ಪಾಠವನ್ನು ಕಲಿಯುತ್ತೇವೆ. ಅದೇನಂದರೆ, ಸರ್ವಶಕ್ತನಲ್ಲಿ ತಪ್ಪು ಕಂಡುಹಿಡಿಯಲು ಯಾವ ಮಾನವನಿಗೂ ಸಮರ್ಪಕವಾದ ಕಾರಣವಿರುವುದಿಲ್ಲ. ನಾವು ನಮ್ಮ ಸ್ವರ್ಗೀಯ ಪಿತನನ್ನು ಮೆಚ್ಚಿಸುವ ವಿಧಗಳಲ್ಲಿ ಮಾತಾಡಬೇಕು ಮತ್ತು ನಡೆದುಕೊಳ್ಳಬೇಕು. ಅಲ್ಲದೆ, ನಮ್ಮ ಮುಖ್ಯ ಆಸಕ್ತಿಯು ಯೆಹೋವನ ಪವಿತ್ರ ನಾಮದ ಪವಿತ್ರೀಕರಣವೂ ಆತನ ಪರಮಾಧಿಕಾರದ ನಿರ್ದೋಷೀಕರಣವೂ ಆಗಿರಬೇಕು.
ನೀರಾನೆಯು ದೇವರನ್ನು ಮಹಿಮೆಪಡಿಸುತ್ತದೆ
ಪಶುಸೃಷ್ಟಿಯ ಕಡೆಗೆ ಪುನಃ ಗಮನವನ್ನು ತಿರುಗಿಸುತ್ತ, ದೇವರು ಯೋಬನಿಗೆ ನೀರಾನೆಯ ಕುರಿತು ಪ್ರಶ್ನಿಸುತ್ತಾನೆ. (ಯೋಬ 40:15-24) ಪೂರ್ತಿ ಬೆಳೆದಿರುವ ನೀರಾನೆಯು ನಾಲ್ಕರಿಂದ ಐದು ಮೀಟರ್ ಉದ್ದ ಮತ್ತು 3,600 ಕಿಲೊಗ್ರ್ಯಾಮ್ ಭಾರ ಇರಬಹುದು. ಅದರ “ಬಲವು ಸೊಂಟದಲ್ಲಿ” ಅಂದರೆ ಅದರ ಬೆನ್ನಿನ ಸ್ನಾಯುಗಳಲ್ಲಿ ಇದೆ. ಈ ಗಿಡ್ಡ ಕಾಲುಗಳ ನೀರಾನೆಯ ಹೊಟ್ಟೆಯನ್ನು ಆವರಿಸಿರುವ ದಪ್ಪ ಚರ್ಮ, ಅದು ತನ್ನ ದೇಹವನ್ನು ನದೀತಳದಲ್ಲಿರುವ ಕಲ್ಲುಗಳ ಮೇಲಿಂದ ಎಳೆದುಕೊಂಡು ಹೋಗುವಾಗ ಅದಕ್ಕೆ ಅತಿ ಪ್ರಯೋಜನಕರವಾಗಿದೆ. ಬೃಹತ್ ದೇಹ, ಭಾರೀ ಬಾಯಿ ಮತ್ತು ಬಲಾಢ್ಯ ದವಡೆಗಳುಳ್ಳ ನೀರಾನೆಗೆ ಮನುಷ್ಯನು ನಿಶ್ಚಯವಾಗಿಯೂ ಸಮಾನನಲ್ಲ.
ನೀರಾನೆಯು ನದಿಯಿಂದ ಮೇಲೆ ಬಂದು “ಹುಲ್ಲನ್ನು ಮೇಯುವದು.” ಒಂದು ಇಡೀ ಗುಡ್ಡದ ಹುಲ್ಲು ಅದನ್ನು ಪೋಷಿಸಲು ಬೇಕಾಗುವಂತೆ ತೋರುತ್ತದೆ! ಪ್ರತಿ ದಿನ ಸುಮಾರು 90ರಿಂದ 180 ಕಿಲೊಗ್ರ್ಯಾಮ್ ಸಸ್ಯಾಹಾರ ಅದರ ಹೊಟ್ಟೆಯ ಪಾಲಾಗುತ್ತದೆ. ಹಸಿವು ನೀಗಿದ ಬಳಿಕ ಈ ನೀರಾನೆಯು ಎಲಚಿ ಗಿಡದಡಿಯಲ್ಲಿ ಇಲ್ಲವೆ ಆಪುಮರಗಳ ಮರೆಯಲ್ಲಿ ಮಲಗುತ್ತದೆ. ನೀರಾನೆಯು ಜೀವಿಸುತ್ತಿರುವ ನದಿ ದಡಮೀರಿ ಹರಿಯುವುದಾದರೆ, ಅದು ತನ್ನ ತಲೆಯನ್ನು ನೀರಿನ ಮಟ್ಟಕ್ಕಿಂತ ಮೇಲಿಟ್ಟು ನೆರೆಗೆದುರಾಗಿ ಈಜಬಲ್ಲದು. ಈ ನೀರಾನೆಯ ಭಾರೀ ಬಾಯಿ ಮತ್ತು ಬಲಾಢ್ಯ ಕೋರೆಹಲ್ಲುಗಳನ್ನು ನೋಡಿದರೆ, ಯೋಬನಿಗೆ ಗಾಳದಿಂದ ಅದರ ಮೂಗನ್ನು ಚುಚ್ಚುವ ಧೈರ್ಯವಿರದು.
ಮೊಸಳೆಯು ದೇವರಿಗೆ ಸ್ತುತಿ ತರುತ್ತದೆ
ಬಳಿಕ ಯೋಬನು ಮೊಸಳೆಯ ಕುರಿತು ಕೇಳಿಸಿಕೊಳ್ಳುತ್ತಾನೆ. (ಯೋಬ 41:1-34) ಈ ವಚನಗಳಲ್ಲಿ ಮೂಲತಃ ಉಪಯೋಗಿಸಲ್ಪಟ್ಟಿರುವ ‘ಲಿವ್ಯಾತಾನ್’ ಎಂಬ ಹೀಬ್ರು ಪದವು “ಹೊಸೆದುಕೊಂಡಿರುವ ಪ್ರಾಣಿಯನ್ನು” ಸೂಚಿಸುತ್ತದೆ. (BSI Reference Edition ಪಾದಟಿಪ್ಪಣಿ) ಅದನ್ನು ಯೋಬನು ಮಕ್ಕಳ ಆಟದ ಸಾಮಾನಾಗಿ ಮಾಡಬಲ್ಲನೊ? ನಿಶ್ಚಯವಾಗಿ ಮಾಡಲಾರನು! ಈ ಜೀವಿಯನ್ನು ಎದುರಿಸಿದವರಿಗೆ ಅದು ಅಪಾಯಕಾರಿಯೆಂದು ಪದೇ ಪದೇ ತಿಳಿದುಬಂದಿದೆ. ಹೌದು, ಒಬ್ಬ ವ್ಯಕ್ತಿಯು ಈ ಮೊಸಳೆಯನ್ನು ಅಂಕೆಯಲ್ಲಿಡಲು ಪ್ರಯತ್ನಿಸುವಲ್ಲಿ, ಅದು ಎಷ್ಟು ಭಾರಿಯಾದ ಹೋರಾಟವಾಗಿರಬಹುದೆಂದರೆ, ಅವನು ಅದಕ್ಕೆ ಇನ್ನೊಮ್ಮೆ ಕೈಹಾಕುವ ಸಾಧ್ಯತೆಯೇ ಇರಲಿಕ್ಕಿಲ್ಲ!
ಸೂರ್ಯೋದಯದ ಸಮಯದಲ್ಲಿ ಮೊಸಳೆಯು ನೀರಿನಿಂದ ತಲೆ ಎತ್ತುವಾಗ ಅದರ ಕಣ್ಣುಗಳು “ಅರುಣನೇತ್ರಕ್ಕೆ” ಸಮಾನವಾಗಿರುತ್ತವೆ. ಅದರ ಪೊರೆಗಳು ಬಿಗಿಯಾಗಿ ಮುಚ್ಚಲ್ಪಟ್ಟಿರುತ್ತವೆ ಮತ್ತು ಅದರ ಚರ್ಮದಲ್ಲಿ ಎಲುಬಿನ ಪಟ್ಟಿಗಳನ್ನು ಭದ್ರವಾಗಿ ನಾಟಿಸಲಾಗಿದೆ. ಖಡ್ಗ ಮತ್ತು ಈಟಿಯನ್ನಂತೂ ಬಿಡಿರಿ, ಗುಂಡು ಸಹ ಅವನ್ನು ತೂರಿಹೋಗುವುದು ಕಷ್ಟ. ಮೊಸಳೆಯ ಹೊಟ್ಟೆಯಡಿಯಲ್ಲಿರುವ ಮೊನಚಾದ ಪೊರೆಗಳು ಕೆಸರಿನ ತೀರದಲ್ಲಿ ‘ಹಲಿವೆಯ’ ಗುರುತನ್ನು ಬಿಟ್ಟುಹೋಗುತ್ತವೆ. ನೀರಿನಲ್ಲಿನ ಅದರ ಆವೇಶವು ಮುಲಾಮಿನ ನೊರೆಯಂತೆ ನೀರನ್ನು ಕದಡಿಸುತ್ತದೆ. ಅದರ ಗಾತ್ರ, ಕವಚ ಹಾಗೂ ಅಪಾಯಕರವಾದ ಬಾಯಿ ಮತ್ತು ಬಲಾಢ್ಯವಾದ ಬಾಲವೆಂಬ ಆಯುಧಗಳ ಕಾರಣ ಮೊಸಳೆಗೆ ಭಯವೆಂಬುದೇ ಇಲ್ಲ.
ಯೋಬನು ತಪ್ಪನ್ನು ಒಪ್ಪಿಕೊಳ್ಳುತ್ತಾನೆ
ತಾನು ‘ಬುದ್ಧಿಗೆ ಮೀರಿದ ಅದ್ಭುತಗಳ ಕುರಿತು ಮಾತಾಡಿದೆನು’ ಎಂದು ಯೋಬನು ಒಪ್ಪಿಕೊಂಡನು. (ಯೋಬ 42:1-3) ಅವನು ದೇವರು ಕೊಟ್ಟ ತಿದ್ದುಪಾಟನ್ನು ಅಂಗೀಕರಿಸಿ, ತಪ್ಪೊಪ್ಪಿಕೊಂಡು, ಪಶ್ಚಾತ್ತಾಪಪಟ್ಟನು. ಅವನ ಸಂಗಾತಿಗಳನ್ನು ಗದರಿಸಲಾಯಿತಾದರೂ ಯೋಬನಿಗೆ ಮಹಾ ಆಶೀರ್ವಾದಗಳು ದೊರೆತವು.—ಯೋಬ 42:4-17.
ಯೋಬನ ಅನುಭವವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಎಷ್ಟು ವಿವೇಕಪ್ರದ! ದೇವರು ಅವನಿಗೆ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವುದು ನಮಗೆ ಅಸಾಧ್ಯವೇ ಸರಿ. ಆದರೂ, ಯೆಹೋವನನ್ನು ಘನಪಡಿಸುವ ವಿವಿಧ ಸೃಷ್ಟಿಯ ಅದ್ಭುತಗಳಿಗೆ ನಾವು ಖಂಡಿತವಾಗಿಯೂ ಕೃತಜ್ಞತೆಯನ್ನು ತೋರಿಸಬಲ್ಲೆವು ಮತ್ತು ತೋರಿಸತಕ್ಕದ್ದು.
[ಪುಟ 13ರಲ್ಲಿರುವ ಚಿತ್ರ]
ಬೆಟ್ಟದ ಮೇಕೆ
[ಪುಟ 13ರಲ್ಲಿರುವ ಚಿತ್ರ]
ಕಾಗೆ
[ಪುಟ 13ರಲ್ಲಿರುವ ಚಿತ್ರ]
ಸಿಂಹಿಣಿ
[ಪುಟ 14ರಲ್ಲಿರುವ ಚಿತ್ರ]
ಸೀಬ್ರ
[ಪುಟ 14ರಲ್ಲಿರುವ ಚಿತ್ರ]
ಉಷ್ಟ್ರಪಕ್ಷಿ ತನ್ನ ಮೊಟ್ಟೆಗಳಿಂದ ದೂರ ಸರಿಯುತ್ತದಾದರೂ ಅವನ್ನು ಬಿಟ್ಟುಹೋಗುವುದಿಲ್ಲ
[ಪುಟ 14ರಲ್ಲಿರುವ ಚಿತ್ರ]
ಉಷ್ಟ್ರಪಕ್ಷಿಯ ಮೊಟ್ಟೆಗಳು
[ಪುಟ 14, 15ರಲ್ಲಿರುವ ಚಿತ್ರ]
ಪೆರಿಗ್ರೈನ್ ಫಾಲ್ಕನ್
[ಕೃಪೆ]
ಗಿಡಗ: © Joe McDonald/Visuals Unlimited
[ಪುಟ 15ರಲ್ಲಿರುವ ಚಿತ್ರ]
ಅರೇಬಿಯನ್ ಹೆಣ್ಣುಕುದುರೆ
[ಪುಟ 15ರಲ್ಲಿರುವ ಚಿತ್ರ]
ಹೊಂಬಣ್ಣದ ಹದ್ದು
[ಪುಟ 16ರಲ್ಲಿರುವ ಚಿತ್ರ]
ನೀರಾನೆ
[ಪುಟ 16ರಲ್ಲಿರುವ ಚಿತ್ರ]
ಬಲಾಢ್ಯವಾದ ಮೊಸಳೆ