ಯೆಹೋವನ ವಾಕ್ಯವು ಸಜೀವವಾದದ್ದು
ಎಜ್ರ ಪುಸ್ತಕದ ಮುಖ್ಯಾಂಶಗಳು
ಎರಡನೇ ಪೂರ್ವಕಾಲವೃತ್ತಾಂತವು ಅದರ ವೃತ್ತಾಂತವನ್ನು ಎಲ್ಲಿ ಕೊನೆಗೊಳಿಸುತ್ತದೊ ಅಲ್ಲಿಂದ ಬೈಬಲಿನ ಎಜ್ರ ಪುಸ್ತಕವು ಆರಂಭಗೊಳ್ಳುತ್ತದೆ. ಅದರ ಬರಹಗಾರನು ಎಜ್ರ ಎಂಬ ಯಾಜಕನಾಗಿದ್ದಾನೆ. ಅವನು ಈ ವೃತ್ತಾಂತವನ್ನು, ಬಾಬೆಲಿನಲ್ಲಿ ಬಂಧಿವಾಸಿಗಳಾಗಿದ್ದ ಯೆಹೂದಿ ಶೇಷಜನರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂತೆ ಅನುಮತಿಸುತ್ತಾ ಪಾರಸಿಯ ರಾಜ ಕೋರೆಷನು ಹೊರಡಿಸಿದ ಅಪ್ಪಣೆಯಿಂದ ಆರಂಭಗೊಳಿಸುತ್ತಾನೆ. ಈ ಕಥನವು, ದೇಶದಲ್ಲಿರುವ ಜನರಿಂದ ತಮ್ಮನ್ನು ಕಲುಷಿತಗೊಳಿಸಿಕೊಂಡವರು ತಮ್ಮನ್ನು ಶುದ್ಧಪಡಿಸಿಕೊಳ್ಳಲು ಎಜ್ರನು ತೆಗೆದುಕೊಂಡ ಕ್ರಮಗಳೊಂದಿಗೆ ಅಂತ್ಯಗೊಳ್ಳುತ್ತದೆ. ಇದೆಲ್ಲವನ್ನು ಸೇರಿಸಿ, ಪುಸ್ತಕವು 70 ವರ್ಷಗಳ ಅಂದರೆ ಸಾ.ಶ.ಪೂ. 537ರಿಂದ 467ರ ವರೆಗಿನ ಅವಧಿಯನ್ನು ಆವರಿಸುತ್ತದೆ.
ಈ ಪುಸ್ತಕವನ್ನು ಬರೆಯಲು ಎಜ್ರನಿಗೆ ಒಂದು ಸ್ಪಷ್ಟವಾದ ಉದ್ದೇಶವಿದೆ. ಅದೇನೆಂದರೆ, ಬಾಬೆಲಿನಲ್ಲಿ ಸೆರೆಯಾಗಿದ್ದ ತನ್ನ ಜನರನ್ನು ಬಿಡಿಸುವ ಮತ್ತು ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ತನ್ನ ವಾಗ್ದಾನವನ್ನು ಯೆಹೋವನು ಹೇಗೆ ನೆರವೇರಿಸಿದನೆಂಬುದನ್ನು ತೋರಿಸುವುದೇ. ಹೀಗಿರುವುದರಿಂದ ಎಜ್ರನು ಈ ಉದ್ದೇಶಕ್ಕೆ ಸಂಬಂಧಪಟ್ಟ ಘಟನೆಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುತ್ತಾನೆ. ವಿರೋಧ ಮತ್ತು ದೇವಜನರ ಅಪರಿಪೂರ್ಣತೆಯ ಮಧ್ಯೆಯೂ ಆಲಯವು ಹೇಗೆ ಪುನಃ ಕಟ್ಟಲ್ಪಟ್ಟಿತು ಮತ್ತು ಯೆಹೋವನ ಆರಾಧನೆಯು ಹೇಗೆ ಪುನಸ್ಸ್ಥಾಪಿಸಲ್ಪಟ್ಟಿತೆಂಬುದರ ವೃತ್ತಾಂತವೇ ಈ ಎಜ್ರನ ಪುಸ್ತಕವಾಗಿದೆ. ಈ ವೃತ್ತಾಂತವು ನಮಗೆ ಅತಿ ಆಸಕ್ತಿದಾಯಕವಾಗಿದೆ ಏಕೆಂದರೆ ನಾವು ಸಹ ಪುನಸ್ಸ್ಥಾಪನೆಯ ಸಮಯವೊಂದರಲ್ಲಿ ಜೀವಿಸುತ್ತಿದ್ದೇವೆ. ಅನೇಕರು ‘ಯೆಹೋವನ ಮಂದಿರದ ಬೆಟ್ಟಕ್ಕೆ’ ಪ್ರವಾಹದಂತೆ ಬರುತ್ತಿದ್ದಾರೆ, ಮತ್ತು ಇಡೀ ಭೂಮಿಯು ಇನ್ನೇನು ‘ಯೆಹೋವನ ಮಹಿಮೆಯ ಜ್ಞಾನದಿಂದ ತುಂಬಿಕೊಳ್ಳಲಿದೆ.’—ಯೆಶಾಯ 2:2, 3; ಹಬಕ್ಕೂಕ 2:14.
ಆಲಯವನ್ನು ಪುನಃ ಕಟ್ಟಲಾಗುತ್ತದೆ
ಕೋರೆಷನು ಹೊರಡಿಸಿದ ಬಿಡುಗಡೆಯ ಅಪ್ಪಣೆಗೆ ಪ್ರತಿಕ್ರಿಯಿಸುತ್ತಾ ಸುಮಾರು 50,000 ಮಂದಿ ಯೆಹೂದಿ ಬಂಧಿವಾಸಿಗಳು, ದೇಶಾಧಿಪತಿಯಾದ ಜೆರುಬ್ಬಾಬೆಲ್ ಇಲ್ಲವೆ ಶೆಷ್ಬಚ್ಚರನ ನೇತೃತ್ವದಲ್ಲಿ ಯೆರೂಸಲೇಮಿಗೆ ಹಿಂದಿರುಗುತ್ತಾರೆ. ತಡಮಾಡದೆ ಅವರು ಅಲ್ಲಿ ಯಜ್ಞವೇದಿಯನ್ನು ಅದರ ಸ್ಥಾನದಲ್ಲಿ ಕಟ್ಟಿ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲಾರಂಭಿಸುತ್ತಾರೆ.
ಮುಂದಿನ ವರ್ಷದಲ್ಲಿ ಈ ಇಸ್ರಾಯೇಲ್ಯರು ಯೆಹೋವನ ಆಲಯದ ಅಸ್ತಿವಾರವನ್ನು ಹಾಕುತ್ತಾರೆ. ಈ ಪುನರ್ನಿರ್ಮಾಣದ ಕೆಲಸಕ್ಕೆ ಶತ್ರುಗಳು ಅಡ್ಡಬರುತ್ತಾ ಇರುತ್ತಾರೆ, ಮತ್ತು ಈ ಕೆಲಸವನ್ನು ನಿಲ್ಲಿಸಲಿಕ್ಕಾಗಿ ರಾಜನಿಂದ ಆಜ್ಞೆಯನ್ನು ಹೊರಡಿಸುವುದರಲ್ಲಿ ಕೊನೆಗೂ ಸಫಲರಾಗುತ್ತಾರೆ. ಈ ನಿಷೇಧದ ಮಧ್ಯೆಯೂ ಆಲಯದ ನಿರ್ಮಾಣ ಕೆಲಸವನ್ನು ಪುನಃ ಆರಂಭಿಸುವಂತೆ ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರು ಜನರನ್ನು ಪ್ರೋತ್ಸಾಹಿಸುತ್ತಾರೆ. ಆರಂಭದಲ್ಲಿ ಕೋರೆಷನು ಹೊರಡಿಸಿದ ಬದಲಾಯಿಸಲಾಗದಂಥ ಪಾರಸಿಯ ಅಪ್ಪಣೆಯನ್ನು ವಿರೋಧಿಸಲು ಭಯಪಟ್ಟು ಇಸ್ರಾಯೇಲ್ಯರ ಶತ್ರುಗಳು ದೂರವಿರುತ್ತಾರೆ. ಕೋರೆಷನು ‘ಯೆರೂಸಲೇಮಿನ ದೇವಾಲಯದ ವಿಷಯವಾಗಿ ಕೊಟ್ಟ’ ಈ ಅಪ್ಪಣೆ, ಅಧಿಕೃತವಾಗಿ ಮಾಡಲ್ಪಟ್ಟ ಒಂದು ಪರಿಶೋಧನೆಯಿಂದ ಬೆಳಕಿಗೆ ಬರುತ್ತದೆ. (ಎಜ್ರ 6:3) ನಿರ್ಮಾಣ ಕೆಲಸವು ಸರಾಗವಾಗಿ ಮುನ್ನಡೆದು ಪೂರ್ಣಗೊಳ್ಳುತ್ತದೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:3-6—ತಮ್ಮ ಸ್ವದೇಶಕ್ಕೆ ಹಿಂದಿರುಗಲು ಮುಂದೆ ಬರದಿದ್ದ ಇಸ್ರಾಯೇಲ್ಯರ ನಂಬಿಕೆಯು ದುರ್ಬಲವಾಗಿತ್ತೊ? ಕೆಲವರು ಪ್ರಾಪಂಚಿಕ ಭಾವದವರು ಇಲ್ಲವೆ ಸತ್ಯಾರಾಧನೆಗಾಗಿ ಗಣ್ಯತೆಯಿಲ್ಲದವರು ಆಗಿದ್ದರಿಂದ ಯೆರೂಸಲೇಮಿಗೆ ಹಿಂದಿರುಗದೇ ಇದ್ದಿರಬಹುದು. ಆದರೆ ಎಲ್ಲರೂ ಹಾಗಿರಲಿಲ್ಲ. ಮೊದಲನೆಯದಾಗಿ ನೋಡುವುದಾದರೆ, ಯೆರೂಸಲೇಮಿಗೆ ಹಿಂದಿರುಗಲು 1,600 ಕಿಲೊಮೀಟರ್ ದೂರದ ಪ್ರಯಾಣಕ್ಕೆ ನಾಲ್ಕೈದು ತಿಂಗಳು ಹಿಡಿಯುತ್ತಿತ್ತು. ಅಲ್ಲದೆ, 70 ವರ್ಷಗಳ ವರೆಗೆ ಹಾಳುಬಿದ್ದಿದ್ದ ಒಂದು ದೇಶದಲ್ಲಿ ನೆಲೆಸಲಿಕ್ಕಾಗಿ ಮತ್ತು ಅಲ್ಲಿನ ಪುನರ್ನಿರ್ಮಾಣದ ಕೆಲಸಕ್ಕಾಗಿ ಬಹಳಷ್ಟು ಶಾರೀರಿಕ ಬಲದ ಅಗತ್ಯವಿತ್ತು. ಹೀಗೆ ಶಾರೀರಿಕ ಕಾಯಿಲೆಗಳು, ಇಳಿವಯಸ್ಸು, ಕುಟುಂಬದ ಕರ್ತವ್ಯಗಳಂಥ ಅನನುಕೂಲಕರ ಪರಿಸ್ಥಿತಿಗಳು ಕೆಲವರನ್ನು ಹಿಂದಿರುಗುವುದರಿಂದ ತಡೆದವೆಂಬುದು ನಿಶ್ಚಯ.
2:43—ದೇವಸ್ಥಾನದಾಸರು (ನೆತಿನಿಮ್) ಯಾರಾಗಿದ್ದರು? ಇವರು ಆಲಯದಲ್ಲಿ ದಾಸರು ಇಲ್ಲವೆ ಶುಶ್ರೂಷಕರಾಗಿ ಸೇವೆಸಲ್ಲಿಸುತ್ತಿದ್ದ ಇಸ್ರಾಯೇಲ್ಯೇತರ ಮೂಲದ ಜನರಾಗಿದ್ದರು. ಅವರಲ್ಲಿ, ಯೆಹೋಶುವನ ದಿನದ ಗಿಬ್ಯೋನ್ಯರ ವಂಶಜರು ಮತ್ತು “ದಾವೀದನೂ ಅವನ ಸರದಾರರೂ ಲೇವಿಯರ ಸಹಾಯಕ್ಕಾಗಿ ಕೊಟ್ಟ” ಇತರರೂ ಒಳಗೂಡಿದ್ದರು.—ಎಜ್ರ 8:20.
2:55—ಸೊಲೊಮೋನನ ದಾಸರು ಯಾರಾಗಿದ್ದರು? ಇವರು, ಯೆಹೋವನ ಸೇವೆಯಲ್ಲಿ ವಿಶೇಷ ನೇಮಕಗಳು ಕೊಡಲ್ಪಟ್ಟಿದ್ದ ಇಸ್ರಾಯೇಲ್ಯೇತರರಾಗಿದ್ದರು. ಇವರು ಆಲಯದಲ್ಲಿ ಶಾಸ್ತ್ರಿಗಳು ಇಲ್ಲವೆ ನಕಲುಗಾರರಾಗಿ ಅಥವಾ ಆಡಳಿತಕ್ಕೆ ಸಂಬಂಧಿಸಿದ ಒಂದು ಸ್ಥಾನದಲ್ಲಿ ಸೇವೆಸಲ್ಲಿಸಿದ್ದಿರಬಹುದು.
2:61-63—ಯೆಹೋವನಿಂದ ಉತ್ತರವು ಬೇಕಾದಾಗ ಉಪಯೋಗಿಸಲ್ಪಡುತ್ತಿದ್ದ ಊರೀಮ್ ತುಮ್ಮೀಮುಗಳು, ಬಂಧಿವಾಸದಿಂದ ಹಿಂದಿರುಗಿ ಬಂದವರಿಗೆ ಲಭ್ಯವಿದ್ದವೊ? ಯಾಜಕ ವಂಶದವರೆಂದು ಹೇಳಿಕೊಳ್ಳುತ್ತಿದ್ದ ಆದರೆ ತಮ್ಮ ವಂಶಾವಳಿಯನ್ನು ರುಜುಪಡಿಸಲಾಗದವರು, ಊರೀಮ್ ತುಮ್ಮೀಮುಗಳ ಮೂಲಕ ತಮ್ಮ ದಾವೆ ಸತ್ಯವೆಂದು ರುಜುಪಡಿಸಬಹುದಿತ್ತು. ಆದರೆ ಎಜ್ರನು ಇದನ್ನು ಕೇವಲ ಒಂದು ಸಾಧ್ಯತೆ ಆಗಿತ್ತೆಂದು ಹೇಳುತ್ತಾನೆ. ಆ ಸಮಯದಲ್ಲಿ ಮತ್ತು ಅನಂತರದ ಸಮಯದಲ್ಲಿ ಊರೀಮ್ ತುಮ್ಮೀಮುಗಳು ಉಪಯೋಗಿಸಲ್ಪಡುತ್ತಿದುದರ ಕುರಿತು ಶಾಸ್ತ್ರವಚನಗಳಲ್ಲಿ ಯಾವುದೇ ದಾಖಲೆಯಿಲ್ಲ. ಯೆಹೂದಿ ಸಂಪ್ರದಾಯಕ್ಕನುಸಾರ, ಊರೀಮ್ ತುಮ್ಮೀಮುಗಳು ಸಾ.ಶ.ಪೂ. 607ರಲ್ಲಿ ದೇವಾಲಯದ ನಾಶನದೊಂದಿಗೆ ಕಣ್ಮರೆಯಾದವು.
3:12—ಯೆಹೋವನ “ಮುಂಚಿನ ದೇವಾಲಯವನ್ನು ನೋಡಿದ್ದ ಮುದುಕರು” ಅತ್ತದ್ದೇಕೆ? ಸೊಲೊಮೋನನಿಂದ ಕಟ್ಟಲ್ಪಟ್ಟಿದ್ದ ಆಲಯವು ಎಷ್ಟು ಭವ್ಯವಾಗಿತ್ತೆಂಬುದು ಈ ಪುರುಷರಿಗೆ ನೆನಪಿತ್ತು. ಅದಕ್ಕೆ ಹೋಲಿಕೆಯಲ್ಲಿ, ಅವರ ಮುಂದೆ ಹೊಸ ಆಲಯಕ್ಕಾಗಿ ಹಾಕಲ್ಪಡುತ್ತಿದ್ದ ಅಸ್ತಿವಾರವು ‘ಏನೂ ಇಲ್ಲದಾಗಿ ಕಾಣಿಸುತ್ತಿತ್ತು.’ (ಹಗ್ಗಾಯ 2:2, 3) ಅವರು ಮಾಡುತ್ತಿದ್ದ ಪ್ರಯತ್ನಗಳು ಆ ಹಿಂದಿನ ಆಲಯದ ವೈಭವವನ್ನು ಹೇಗೆ ತಾನೇ ಪುನಃ ತರಸಾಧ್ಯವಿತ್ತು? ಅವರು ಎದೆಗುಂದಿರಬಹುದು ಮತ್ತು ಈ ಕಾರಣದಿಂದ ಅವರು ಅತ್ತರು.
3:8-10; 4:23, 24; 6:15, 16—ಆಲಯವನ್ನು ಪುನಃ ಕಟ್ಟಲಿಕ್ಕಾಗಿ ಎಷ್ಟು ವರ್ಷಗಳು ಹಿಡಿದವು? ಆಲಯದ ಅಸ್ತಿವಾರವನ್ನು ಸಾ.ಶ.ಪೂ. 536ರಲ್ಲಿ ಅಂದರೆ ಅವರು ಯೆರೂಸಲೇಮನ್ನು ‘ಮುಟ್ಟಿದ ಎರಡನೆಯ ವರುಷದಲ್ಲಿ’ ಹಾಕಲಾಗಿತ್ತು. ರಾಜ ಅರ್ತಷಸ್ತನ ದಿನಗಳಲ್ಲಿ, ಸಾ.ಶ.ಪೂ. 522ರಲ್ಲಿ ಕಟ್ಟುವ ಕೆಲಸವು ನಿಂತುಹೋಯಿತು. ಈ ನಿಷೇಧವು, ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷ ಅಂದರೆ ಸಾ.ಶ.ಪೂ. 520ರ ತನಕ ಮುಂದುವರಿಯಿತು. ಆಲಯವು, ಅವನ ಆಳಿಕೆಯ ಆರನೇ ವರ್ಷದಲ್ಲಿ ಅಂದರೆ ಸಾ.ಶ.ಪೂ. 515ರಲ್ಲಿ (“ಸಾ.ಶ.ಪೂ. 537ರಿಂದ 467ರ ವರೆಗಿನ ಪಾರಸಿಯ ರಾಜರು” ಎಂಬ ಶೀರ್ಷಿಕೆಯಿರುವ ಚೌಕವನ್ನು ನೋಡಿರಿ.) ಪೂರ್ಣಗೊಂಡಿತು. ಹೀಗೆ ಆಲಯದ ನಿರ್ಮಾಣ ಕೆಲಸಕ್ಕೆ ಸುಮಾರು 20 ವರ್ಷಗಳು ಹಿಡಿದವು.
4:8–6:18—ಈ ಭಾಗವನ್ನು ಅರೇಮೀಯಿಕ್ ಭಾಷೆಯಲ್ಲಿ ಏಕೆ ಬರೆಯಲಾಯಿತು? ಈ ಭಾಗದಲ್ಲಿ ಹೆಚ್ಚಾಗಿ, ಸರಕಾರಿ ಅಧಿಕಾರಿಗಳು ರಾಜನಿಗೆ ಬರೆದಂಥ ಮತ್ತು ಅವರಿಗೆ ಉತ್ತರಿಸುತ್ತಾ ರಾಜನು ಬರೆದಂಥ ಪತ್ರಗಳ ಪ್ರತಿಯಿದೆ. ಅರೇಮೀಯಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿದ್ದ ಸಾರ್ವಜನಿಕ ದಾಖಲೆಗಳಿಂದ ಎಜ್ರನು ಅವುಗಳನ್ನು ನಕಲುಮಾಡಿದನು. ಆ ಕಾಲದಲ್ಲಿ ಅದು ವಾಣಿಜ್ಯ ಹಾಗೂ ಸರಕಾರೀ ಕೆಲಸಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಭಾಷೆಯಾಗಿತ್ತು. ಈ ಪ್ರಾಚೀನ ಸಿಮಿಟಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಇತರ ಬೈಬಲ್ ಭಾಗಗಳು ಎಜ್ರ 7:12-26, ಯೆರೆಮೀಯ 10:11 ಮತ್ತು ದಾನಿಯೇಲ 2:4ಬಿ–7:28 ಆಗಿವೆ.
ನಮಗಾಗಿರುವ ಪಾಠಗಳು:
1:2. ಯೆಶಾಯನು 200 ವರ್ಷಗಳ ಹಿಂದೆ ಪ್ರವಾದಿಸಿದ್ದ ವಿಷಯಗಳು ಸತ್ಯವಾಗಿ ಪರಿಣಮಿಸಿದವು. (ಯೆಶಾಯ 44:28) ಯೆಹೋವನ ವಾಕ್ಯದಲ್ಲಿರುವ ಪ್ರವಾದನೆಗಳು ಎಂದೂ ನೆರವೇರದೆ ಹೋಗುವುದಿಲ್ಲ.
1:3-6. ಬಾಬೆಲಿನಲ್ಲಿ ಉಳಿದಿದ್ದ ಕೆಲವು ಮಂದಿ ಇಸ್ರಾಯೇಲ್ಯರಂತೆ, ಯೆಹೋವನ ಸಾಕ್ಷಿಗಳಲ್ಲಿ ಅನೇಕ ಮಂದಿ ಇಂದು ಪೂರ್ಣ ಸಮಯದ ಸೇವೆಯನ್ನು ಮಾಡಲಾರರು ಇಲ್ಲವೆ ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಲಾರರು. ಆದರೂ ಅವರು, ಯಾರು ಅಂಥ ಸೇವೆಯನ್ನು ಮಾಡಬಲ್ಲರೊ ಅವರನ್ನು ಬೆಂಬಲಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ, ಹಾಗೂ ರಾಜ್ಯ ಸಾರುವಿಕೆಯ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಸ್ವಯಂಪ್ರೇರಿತ ದಾನಗಳನ್ನು ಕೊಡುತ್ತಾರೆ.
3:1-6. ಹಿಂದಿರುಗಿ ಬಂದವರು ಸಾ.ಶ.ಪೂ. 537ರ ಏಳನೇ ತಿಂಗಳಿನಲ್ಲಿ (ತಿಶ್ರಿ, ಸೆಪ್ಟೆಂಬರ್/ಅಕ್ಟೋಬರ್ ತಿಂಗಳಿಗೆ ಸರಿಹೋಲುತ್ತದೆ) ತಮ್ಮ ಪ್ರಥಮ ಯಜ್ಞವನ್ನು ಅರ್ಪಿಸಿದರು. ರಾಜ ನೆಬೂಕದ್ನೆಚ್ಚರನು ಸಾ.ಶ.ಪೂ. 607ರ ಐದನೆಯ ತಿಂಗಳಿನಲ್ಲಿ, ಯೆರೂಸಲೇಮನ್ನು ಪ್ರವೇಶಿಸಿದ್ದನು ಮತ್ತು ಎರಡು ತಿಂಗಳುಗಳ ಬಳಿಕ ಆ ನಗರದ ಧ್ವಂಸವು ಪೂರ್ಣಗೊಂಡಿತು. (2 ಅರಸುಗಳು 25:8-17, 2 ಅರಸುಗಳು 25:22-26) ಮುಂತಿಳಿಸಲ್ಪಟ್ಟಂತೆಯೇ ಯೆರೂಸಲೇಮಿನ 70 ವರ್ಷಗಳ ನಿರ್ಜನಾವಸ್ಥೆಯು ಸರಿಯಾದ ಸಮಯದಲ್ಲಿ ಕೊನೆಗೊಂಡಿತು. (ಯೆರೆಮೀಯ 25:11; 29:10) ಯೆಹೋವನ ವಾಕ್ಯವು ಮುಂತಿಳಿಸುವಂಥದ್ದೆಲ್ಲವೂ ಯಾವಾಗಲೂ ಸತ್ಯವಾಗುತ್ತದೆ.
4:1-3. ಸುಳ್ಳು ಆರಾಧಕರೊಂದಿಗೆ ಧಾರ್ಮಿಕ ಮೈತ್ರಿಯನ್ನು ಮಾಡಿಕೊಳ್ಳುವ ಒಂದು ನೀಡಿಕೆಯನ್ನು ನಂಬಿಗಸ್ತ ಶೇಷಜನರು ತಿರಸ್ಕರಿಸಿದರು. (ವಿಮೋಚನಕಾಂಡ 20:5; 34:12) ಅದೇ ರೀತಿಯಲ್ಲಿ ಇಂದು ಯೆಹೋವನ ಆರಾಧಕರು ಯಾವುದೇ ಮಿಶ್ರನಂಬಿಕೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ.
5:1-7; 6:1-12. ಯೆಹೋವನು ತನ್ನ ಜನರ ಯಶಸ್ಸಿಗಾಗಿ ವಿಷಯಗಳನ್ನು ಹೇಗೆ ಬೇಕೊ ಹಾಗೆ ನಿರ್ವಹಿಸಬಲ್ಲನು.
6:14, 22. ಯೆಹೋವನ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವುದು ಆತನ ಒಪ್ಪಿಗೆ ಹಾಗೂ ಆಶೀರ್ವಾದವನ್ನು ತರುತ್ತದೆ.
6:21. ಆ ಸಮಯದಲ್ಲಿ ಯೆಹೂದ್ಯರ ಸ್ವದೇಶದಲ್ಲಿ ಜೀವಿಸುತ್ತಿದ್ದ ಸಮಾರ್ಯದವರು ಮತ್ತು ಅಲ್ಲಿಗೆ ಹಿಂದಿರುಗಿದರೂ ವಿಧರ್ಮಿ ಪ್ರಭಾವಗಳಿಗೆ ಶರಣಾಗಿದ್ದ ಯೆಹೂದ್ಯರು, ಯೆಹೋವನ ಕೆಲಸದ ಮುನ್ನಡೆಯನ್ನು ನೋಡಿ ತಮ್ಮ ಜೀವನಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡರು. ರಾಜ್ಯ ಘೋಷಣೆಯ ಕಾರ್ಯವು ಒಳಗೂಡಿರುವ ನಮ್ಮ ದೇವನೇಮಿತ ಕೆಲಸದಲ್ಲಿ ನಾವು ಸಹ ಉತ್ಸಾಹದಿಂದ ಪಾಲ್ಗೊಳ್ಳಬೇಕಲ್ಲವೇ?
ಎಜ್ರನು ಯೆರೂಸಲೇಮಿಗೆ ಬರುತ್ತಾನೆ
ಯೆಹೋವನ ಪುನರ್ನಿರ್ಮಿತ ಆಲಯವು ಪ್ರತಿಷ್ಠಾಪಿಸಲ್ಪಟ್ಟು ಐವತ್ತು ವರ್ಷಗಳು ದಾಟಿವೆ. ಸಮಯವು ಸಾ.ಶ.ಪೂ. 468 ಆಗಿದೆ. ಎಜ್ರನು ತನ್ನೊಂದಿಗೆ, ದೇವಜನರಲ್ಲಿ ಉಳಿದಿದ್ದವರಲ್ಲಿ ಕೆಲವರನ್ನೂ ಕಾಣಿಕೆಯಾಗಿ ಕೊಡಲ್ಪಟ್ಟ ಹಣವನ್ನೂ ತೆಗೆದುಕೊಂಡು ಬಾಬೆಲಿನಿಂದ ಯೆರೂಸಲೇಮಿಗೆ ಹೋಗುತ್ತಾನೆ. ಅಲ್ಲಿ ಅವನೇನು ನೋಡುತ್ತಾನೆ?
ಪ್ರಧಾನಪುರುಷರು ಎಜ್ರನಿಗೆ ಹೇಳುವುದು: ‘ಇಸ್ರಾಯೇಲ್ಯರಲ್ಲಿ ಸಾಧಾರಣಜನರೂ ಯಾಜಕರೂ ಲೇವಿಯರೂ ಅನ್ಯದೇಶಗಳವರ ಬಳಕೆಯನ್ನು ತೊರೆಯದೆ ಅವರ ಅಸಹ್ಯ ಕಾರ್ಯಗಳನ್ನು ಅನುಸರಿಸಿದ್ದಾರೆ.’ ಅಲ್ಲದೆ ‘ಪ್ರಭುಗಳೂ ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾಗಿದ್ದಾರೆ.’ (ಎಜ್ರ 9:1, 2) ಎಜ್ರನಿಗೆ ಆಘಾತವಾಗುತ್ತದೆ. “ಧೈರ್ಯದಿಂದ ಕೈಹಾಕು” ಅಥವಾ ಕ್ರಮಕೈಗೊಳ್ಳು ಎಂದು ಅವನನ್ನು ಪ್ರೋತ್ಸಾಹಿಸಲಾಗುತ್ತದೆ. (ಎಜ್ರ 10:4) ಎಜ್ರನು ಸರಿಪಡಿಸುವಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ, ಮತ್ತು ಜನರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
7:1, 7, 11—ಈ ಎಲ್ಲ ವಚನಗಳು, ನಿರ್ಮಾಣ ಕಾರ್ಯವನ್ನು ನಿಲ್ಲಿಸಿದಂಥ ಅರ್ತಷಸ್ತನಿಗೆ ಸೂಚಿಸುತ್ತಿವೆಯೊ? ಇಲ್ಲ. ಅರ್ತಷಸ್ತ ಎಂಬುದು ಇಬ್ಬರು ಪಾರಸಿಯ ರಾಜರುಗಳಿಗೆ ಅನ್ವಯಿಸಲ್ಪಟ್ಟಿರುವ ಒಂದು ಹೆಸರು ಇಲ್ಲವೆ ಬಿರುದು ಆಗಿದೆ. ಇವರಲ್ಲಿ ಒಬ್ಬನು ಬಾರ್ಡಿಯ ಇಲ್ಲವೆ ಗೌಮಾಟಾ ಆಗಿದ್ದನು. ಇವನೇ ಸಾ.ಶ.ಪೂ. 522ರಲ್ಲಿ ಆಲಯದ ಕೆಲಸವನ್ನು ನಿಲ್ಲಿಸುವಂತೆ ಆಜ್ಞೆಹೊರಡಿಸಿದ್ದನು. ಎಜ್ರನು ಯೆರೂಸಲೇಮಿಗೆ ಬಂದಂಥ ಸಮಯದಲ್ಲಿದ್ದ ಅರ್ತಷಸ್ತನು, ಅರ್ತಷಸ್ತ ಲಾಂಜೀಮೆನಸ್ ಆಗಿದ್ದನು.
7:28–8:20—ಬಾಬೆಲಿನಲ್ಲಿದ್ದ ಅನೇಕ ಯೆಹೂದ್ಯರು ಎಜ್ರನೊಂದಿಗೆ ಯೆರೂಸಲೇಮಿಗೆ ಹೋಗಲು ಏಕೆ ಹಿಂಜರಿದರು? ಯೆಹೂದ್ಯರ ಮೊದಲ ಗುಂಪು ತಮ್ಮ ಸ್ವದೇಶಕ್ಕೆ ಹಿಂದಿರುಗಿ ಈಗಾಗಲೇ 60 ವರ್ಷಗಳು ಕಳೆದಿದ್ದವು. ಆದರೂ ಯೆರೂಸಲೇಮಿನಲ್ಲಿ ಕೊಂಚ ಮಂದಿಯೇ ನೆಲೆಸಿದ್ದರು. ಯೆರೂಸಲೇಮಿಗೆ ಹಿಂದಿರುಗುವುದಾದರೆ, ಸುಖಕರವಲ್ಲದ ಮತ್ತು ಅಪಾಯಕರವಾದ ಸಂದರ್ಭಗಳ ಕೆಳಗೆ ಹೊಸ ಜೀವನವನ್ನು ನಡೆಸಬೇಕಾಗುತ್ತಿತ್ತು. ಬಾಬೆಲಿನಲ್ಲಿ ಸಮೃದ್ಧಿಯನ್ನು ಅನುಭವಿಸುತ್ತಿದ್ದ ಯೆಹೂದ್ಯರಿಗೆ ಆ ಸಮಯದಲ್ಲಿ ಯೆರೂಸಲೇಮ್ ಪಟ್ಟಣವು ಆಕರ್ಷಕವಾದ ಭೌತಿಕ ಪ್ರತೀಕ್ಷೆಗಳನ್ನು ನೀಡಲಿಲ್ಲ. ಹಿಂದಿರುಗಿ ಹೋಗುವ ಪ್ರಯಾಣವು ಸಹ ಅಪಾಯಕರವಾಗಿತ್ತು. ಹಿಂದಿರುಗಿ ಹೋಗುವವರಿಗೆ ಯೆಹೋವನಲ್ಲಿ ಬಲವಾದ ನಂಬಿಕೆ, ಸತ್ಯ ಆರಾಧನೆಗಾಗಿ ಹುರುಪು ಮತ್ತು ಅಲ್ಲಿಗೆ ಸ್ಥಳಾಂತರಿಸಲು ಧೈರ್ಯವು ಬೇಕಾಗಿತ್ತು. ತನ್ನ ಮೇಲಿದ್ದ ಯೆಹೋವನ ಹಸ್ತದಿಂದ ಎಜ್ರನು ಕೂಡ ತನ್ನನ್ನು ಬಲಪಡಿಸಿಕೊಂಡನು. ಎಜ್ರನ ಪ್ರೋತ್ಸಾಹದಿಂದಾಗಿ 1,500 ಕುಟುಂಬಗಳು, ಬಹುಶಃ ಒಟ್ಟು 6,000 ಮಂದಿ ಪ್ರತಿಕ್ರಿಯೆ ತೋರಿಸಿದರು. ಮತ್ತು ಎಜ್ರನು ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡ ಬಳಿಕ, 38 ಮಂದಿ ಲೇವ್ಯರು ಹಾಗೂ 220 ಮಂದಿ ದೇವಸ್ಥಾನದಾಸರು ಪ್ರತಿಕ್ರಿಯೆ ತೋರಿಸಿದರು.
9:1, 2—ಆ ದೇಶದಲ್ಲಿದ್ದ ಜನರೊಂದಿಗೆ ಅಂತರ್ಜಾತಿ ವಿವಾಹವು ಎಷ್ಟು ಗಂಭೀರವಾದ ಬೆದರಿಕೆಯಾಗಿತ್ತು? ಪುನಸ್ಸ್ಥಾಪಿತ ಜನಾಂಗವು, ಮೆಸ್ಸೀಯನು ಬರುವ ವರೆಗೂ ಯೆಹೋವನ ಆರಾಧನೆಯನ್ನು ಕಾಪಾಡಿಕೊಳ್ಳಬೇಕಿತ್ತು. ಆದುದರಿಂದ ಇತರ ನಿವಾಸಿಗಳೊಂದಿಗಿನ ಅಂತರ್ಜಾತಿ ವಿವಾಹವು ಸತ್ಯಾರಾಧನೆಗೆ ದೊಡ್ಡ ಬೆದರಿಕೆಯಾಗಿರಲಿತ್ತು. ಕೆಲವರು ವಿಗ್ರಹಾರಾಧಕ ಜನರೊಂದಿಗೆ ಈಗಾಗಲೇ ವಿವಾಹಮಾಡಿಕೊಂಡಿದ್ದರಿಂದ, ಇಡೀ ಜನಾಂಗವೇ ಕಟ್ಟಕಡೆಗೆ ವಿಧರ್ಮೀ ಜನಾಂಗಗಳೊಂದಿಗೆ ಬೆರೆತುಹೋಗುವ ಸಾಧ್ಯತೆಯಿತ್ತು. ಶುದ್ಧಾರಾಧನೆಯು ಭೂಮಿಯಿಂದಲೇ ಅಳಿದುಹೋಗಸಾಧ್ಯವಿತ್ತು. ಹಾಗಾಗುವಲ್ಲಿ, ಮೆಸ್ಸೀಯನು ಯಾರ ಬಳಿಗೆ ಬರಲಿದ್ದನು? ಆದುದರಿಂದಲೇ ನಡೆದಂಥ ಸಂಗತಿಯನ್ನು ನೋಡಿ ಎಜ್ರನಿಗೆ ಆಘಾತವಾಯಿತು.
10:3, 44—ಹೆಂಡತಿಯರೊಂದಿಗೆ ಮಕ್ಕಳನ್ನು ಸಹ ಏಕೆ ಕಳುಹಿಸಿಬಿಡಲಾಯಿತು? ಒಂದುವೇಳೆ ಮಕ್ಕಳನ್ನು ಇಟ್ಟುಕೊಳ್ಳುತ್ತಿದ್ದರೆ, ಹಿಂದೆ ಕಳುಹಿಸಲ್ಪಟ್ಟಿದ್ದ ಹೆಂಡತಿಯರು ಅವರಿಗಾಗಿ ಮರಳಿ ಬರುವ ಸಾಧ್ಯತೆ ಹೆಚ್ಚಾಗಿತ್ತು. ಅಲ್ಲದೆ, ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ಅವರ ತಾಯಂದಿರ ಆರೈಕೆಯು ಆವಶ್ಯಕ.
ನಮಗಾಗಿರುವ ಪಾಠಗಳು:
7:10. ದೇವರ ವಾಕ್ಯದ ಶ್ರದ್ಧಾಭರಿತ ಮತ್ತು ಪರಿಣಾಮಕಾರಿ ಬೋಧಕನಾಗಿ ಎಜ್ರನು ನಮಗಾಗಿ ಮಾದರಿಯನ್ನಿಟ್ಟನು. ಅವನು ಯೆಹೋವನ ಧರ್ಮಶಾಸ್ತ್ರವನ್ನು ಪರಿಶೀಲಿಸಲು ಜಾಗರೂಕತೆಯಿಂದ ತನ್ನ ‘ಹೃದಯವನ್ನು ತಯಾರಿಸಿದನು.’ (NW) ಅವನು ಅದನ್ನು ಪರಿಶೀಲಿಸಿದಾಗ, ಯೆಹೋವನು ತಿಳಿಸುತ್ತಿರುವ ವಿಷಯಕ್ಕೆ ಅತ್ಯಧಿಕ ಗಮನವನ್ನು ಕೊಟ್ಟನು. ಎಜ್ರನು ತಾನು ಕಲಿತಂಥ ವಿಷಯಗಳನ್ನು ಅನ್ವಯಿಸಿಕೊಂಡನು ಮತ್ತು ಇತರರಿಗೂ ಬೋಧಿಸುವುದರಲ್ಲಿ ಶ್ರಮವಹಿಸಿದನು.
7:13. ಯೆಹೋವನು ಸಿದ್ಧಮನಸ್ಸಿನ ಸೇವಕರನ್ನು ಬಯಸುತ್ತಾನೆ.
7:27, 28; 8:21-23. ಎಜ್ರನು ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸಿದನು, ಯೆರೂಸಲೇಮಿಗೆ ಹೋಗುವ ದೀರ್ಘ ಹಾಗೂ ಅಪಾಯಕಾರಿಯಾದ ಪ್ರಯಾಣವನ್ನು ಮಾಡುವ ಮುಂಚೆ ಆತನಿಗೆ ಮನಃಪೂರ್ವಕವಾಗಿ ಪ್ರಾರ್ಥಿಸಿದನು, ಮತ್ತು ದೇವರ ಮಹಿಮೆಗಾಗಿ ತನ್ನನ್ನೇ ಅಪಾಯಕ್ಕೊಡ್ಡಿಕೊಳ್ಳಲು ಸಿದ್ಧನಿದ್ದನು. ಈ ರೀತಿಯಲ್ಲಿ ಅವನು ನಮಗಾಗಿ ಉತ್ತಮ ಮಾದರಿಯನ್ನಿಟ್ಟನು.
9:2. ‘ಕರ್ತನಲ್ಲಿ ಮಾತ್ರ’ ಮದುವೆಯಾಗುವುದರ ಬುದ್ಧಿವಾದವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು.—1 ಕೊರಿಂಥ 7:39, NW.
9:14, 15. ದುಸ್ಸಹವಾಸವು ಯೆಹೋವನ ಕೋಪವನ್ನು ಬರಮಾಡಬಲ್ಲದು.
10:2-12, 44. ಅನ್ಯಜನರಿಂದ ಹೆಂಡತಿಯರನ್ನು ಮಾಡಿಕೊಂಡಿದ್ದ ಜನರು ನಮ್ರಭಾವದಿಂದ ಪಶ್ಚಾತ್ತಾಪಪಟ್ಟು ತಮ್ಮ ತಪ್ಪು ಮಾರ್ಗಗಳನ್ನು ತಿದ್ದಿಕೊಂಡರು. ಅವರ ಮನೋಭಾವ ಮತ್ತು ಅವರು ಕೈಗೊಂಡ ಕ್ರಿಯೆಯು ಆದರ್ಶಪ್ರಾಯವಾಗಿದೆ.
ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆ
ಎಜ್ರನ ಪುಸ್ತಕವು ನಮಗೆಷ್ಟು ಅಮೂಲ್ಯವಾಗಿದೆ! ಸರಿಯಾದ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬಾಬೆಲಿನ ಸೆರೆಯಿಂದ ಬಿಡಿಸಿ ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ತನ್ನ ವಾಗ್ದಾನವನ್ನು ಪೂರೈಸಿದನು. ಇದು ಯೆಹೋವನಲ್ಲೂ ಆತನ ವಾಗ್ದಾನಗಳಲ್ಲೂ ನಮ್ಮ ನಂಬಿಕೆಯನ್ನು ಬಲಪಡಿಸುವುದಿಲ್ಲವೊ?
ಎಜ್ರನ ಪುಸ್ತಕವು ಒದಗಿಸುವಂಥ ಮಾದರಿಗಳ ಬಗ್ಗೆ ಯೋಚಿಸಿರಿ. ಯೆರೂಸಲೇಮಿನಲ್ಲಿ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುವುದರಲ್ಲಿ ಪಾಲ್ಗೊಳ್ಳಲು ಹಿಂದಿರುಗಿ ಹೋದ ಎಜ್ರನು ಮತ್ತು ಇತರರು ದೇವರ ಕಡೆಗೆ ತೋರಿಸಿದ ಭಕ್ತಿಯು ಆದರ್ಶಪ್ರಾಯವಾಗಿದೆ. ಈ ಪುಸ್ತಕವು, ದೈವಭಕ್ತಿಯುಳ್ಳ ಅನ್ಯಜನಾಂಗದವರ ನಂಬಿಕೆ ಮತ್ತು ಪಶ್ಚಾತ್ತಾಪಿ ತಪ್ಪಿತಸ್ಥರ ದೀನಭಾವವನ್ನು ಸಹ ಎತ್ತಿತೋರಿಸುತ್ತದೆ. ಹೌದು, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂಬುದಕ್ಕೆ ಎಜ್ರನ ಪ್ರೇರಿತ ಮಾತುಗಳು ಸ್ಪಷ್ಟವಾದ ರುಜುವಾತನ್ನು ಕೊಡುತ್ತವೆ.—ಇಬ್ರಿಯ 4:12.
[ಪುಟ 18ರಲ್ಲಿರುವ ಚಾರ್ಟು/ಚಿತ್ರ]
ಸಾ.ಶ.ಪೂ. 537ರಿಂದ 467ರ ವರೆಗಿನ ಪಾರಸಿಯ ರಾಜರು
ಮಹಾ ಕೋರೆಷನು (ಎಜ್ರ 1:1) ಸಾ.ಶ.ಪೂ. 530ರಲ್ಲಿ ಮೃತಪಟ್ಟನು
ಕ್ಯಾಂಬಿಸೀಸ್ ಇಲ್ಲವೆ (ಎಜ್ರ 4:6) ಸಾ.ಶ.ಪೂ. 530-22
ಅಹಷ್ವೇ ರೋಷನು
ಅರ್ತಷಸ್ತ—ಬಾರ್ಡಿಯ (ಎಜ್ರ 4:7) ಸಾ.ಶ.ಪೂ. 522 (ಕೇವಲ ಏಳು ತಿಂಗಳುಗಳು
ಇಲ್ಲವೆ ಗೌಮಾಟಾ ಆಳಿದ ನಂತರ ಹತಿಸಲ್ಪಟ್ಟನು)
ದಾರ್ಯಾವೆಷ I (ಎಜ್ರ 4:24) ಸಾ.ಶ.ಪೂ. 522-486
ಸರ್ಕ್ಸೀಸ್ ಇಲ್ಲವೆ ಸಾ.ಶ.ಪೂ. 486-75
ಅಹಷ್ವೇರೋಷa (ಸಾ.ಶ.ಪೂ. 496-86ರ ವರೆಗೆ
ದಾರ್ಯಾವೆಷ Iನೊಂದಿಗೆ
ರಾಜಪ್ರತಿನಿಧಿಯಾಗಿ ಆಳಿದನು)
ಅರ್ತಷಸ್ತ (ಎಜ್ರ 7:1) ಸಾ.ಶ.ಪೂ. 475-24
ಲಾಂಜೀಮೆನಸ್
[ಪಾದಟಿಪ್ಪಣಿ]
a ಸರಕ್ಸೀಸ್ ಬಗ್ಗೆ ಎಜ್ರನ ಪುಸ್ತಕದಲ್ಲಿ ತಿಳಿಸಲಾಗಿಲ್ಲ. ಆದರೆ ಎಸ್ತೇರಳ ಪುಸ್ತಕದಲ್ಲಿ ಅವನನ್ನು ಅಹಷ್ವೇರೋಷನೆಂದು ಸೂಚಿಸಲಾಗಿದೆ.
[ಚಿತ್ರ]
ಅಹಷ್ವೇರೋಷ
[ಪುಟ 17ರಲ್ಲಿರುವ ಚಿತ್ರ]
ಕೋರೆಷ
[ಪುಟ 17ರಲ್ಲಿರುವ ಚಿತ್ರ]
ಸೈರಸ್ ಸಿಲಿಂಡರ್ನಲ್ಲಿ, ಬಂಧಿವಾಸಿಗಳನ್ನು ತಮ್ಮ ಸ್ವದೇಶಕ್ಕೆ ಹಿಂದಿರುಗಿಸುವ ಕಾರ್ಯನೀತಿಯನ್ನು ತಿಳಿಸಲಾಗಿದೆ
[ಕೃಪೆ]
ಸಿಲಿಂಡರ್: Photograph taken by courtesy of the British Museum
[ಪುಟ 20ರಲ್ಲಿರುವ ಚಿತ್ರ]
ಎಜ್ರನು ಹೇಗೆ ಒಬ್ಬ ಪರಿಣಾಮಕಾರಿ ಬೋಧಕನಾಗಿದ್ದನೆಂದು ನಿಮಗೆ ತಿಳಿದಿದೆಯೊ?