ಪುನರುತ್ಥಾನದ ನಿರೀಕ್ಷೆಯು ನಿಶ್ಚಿತವಾದದ್ದು!
“ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”—ಅ. ಕೃತ್ಯಗಳು 24:15.
1. ನಾವು ಪುನರುತ್ಥಾನದಲ್ಲಿ ಏಕೆ ನಂಬಿಕೆಯನ್ನಿಡಸಾಧ್ಯವಿದೆ?
ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯನ್ನಿಡಲಿಕ್ಕಾಗಿ ಯೆಹೋವನು ನಮಗೆ ಬಲವಾದ ಕಾರಣಗಳನ್ನು ಕೊಟ್ಟಿದ್ದಾನೆ. ಸತ್ತವರು ಖಂಡಿತವಾಗಿಯೂ ಎದ್ದುಬರುವರು, ಅಂದರೆ ಪುನಃ ಜೀವವನ್ನು ಹೊಂದುವರೆಂದು ಆತನು ಮಾತುಕೊಟ್ಟಿದ್ದಾನೆ. ಮತ್ತು ಮರಣದಲ್ಲಿ ನಿದ್ರಿಸುತ್ತಿರುವವರ ಬಗ್ಗೆ ಆತನಿಗಿರುವ ಈ ಉದ್ದೇಶವು ಖಂಡಿತವಾಗಿಯೂ ನೆರವೇರುವುದು. (ಯೆಶಾಯ 55:11; ಲೂಕ 18:27) ಅಷ್ಟುಮಾತ್ರವಲ್ಲದೆ, ತಾನು ಸತ್ತವರನ್ನು ಎಬ್ಬಿಸಬಲ್ಲೆನೆಂಬುದನ್ನು ಆತನು ಈಗಾಗಲೇ ರುಜುಪಡಿಸಿದ್ದಾನೆ.
2. ಪುನರುತ್ಥಾನದ ನಿರೀಕ್ಷೆಯಿಂದ ನಮಗೇನು ಪ್ರಯೋಜನವಿದೆ?
2 ದೇವರು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಸತ್ತವರನ್ನು ಎಬ್ಬಿಸಬಲ್ಲನೆಂಬ ನಂಬಿಕೆಯು, ನಮ್ಮನ್ನು ಒತ್ತಡದ ಸಮಯದಲ್ಲಿ ಸಹಿಸಿಕೊಂಡು ಹೋಗಲು ಸಹಾಯಮಾಡಬಲ್ಲದು. ಮತ್ತು ಈ ಪುನರುತ್ಥಾನದ ನಿರೀಕ್ಷೆಯ ನಿಶ್ಚಿತತೆಯು, ಮರಣದ ವರೆಗೂ ನಮ್ಮ ಸ್ವರ್ಗೀಯ ತಂದೆಯ ಕಡೆಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆಯೂ ನಮಗೆ ಸಹಾಯಮಾಡುವುದು. ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಪುನರುತ್ಥಾನಗಳನ್ನು ನಾವು ಪುನಃ ಒಮ್ಮೆ ಪರಿಗಣಿಸುವ ಮೂಲಕ ಪುನರುತ್ಥಾನದ ನಮ್ಮ ನಿರೀಕ್ಷೆಯು ಹೆಚ್ಚು ಬಲಗೊಳ್ಳುವುದು. ಈ ಎಲ್ಲ ಅದ್ಭುತಗಳು ಪರಮಾಧಿಕಾರಿ ಪ್ರಭುವಾದ ಯೆಹೋವನ ಶಕ್ತಿಯ ಮೂಲಕ ನಡೆಸಲ್ಪಟ್ಟಿದ್ದವು.
ಅವರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು
3. ಚಾರೆಪ್ತಾ ಊರಿನ ವಿಧವೆಯ ಮಗನು ಸತ್ತಾಗ, ಎಲೀಯನಿಗೆ ಏನನ್ನು ಮಾಡುವ ಶಕ್ತಿ ಕೊಡಲ್ಪಟ್ಟಿತು?
3 ಕ್ರೈಸ್ತಪೂರ್ವ ಸಮಯದಲ್ಲಿ ಜೀವಿಸಿದ ಯೆಹೋವನ ಸಾಕ್ಷಿಗಳು ತೋರಿಸಿದಂತಹ ನಂಬಿಕೆಯನ್ನು ಪುನರ್ವಿಮರ್ಶಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು.” (ಇಬ್ರಿಯ 11:35; 12:1) ಆ ಸ್ತ್ರೀಯರಲ್ಲಿ ಒಬ್ಬಳು, ಚೀದೋನ್ಯರ ಚಾರೆಪ್ತಾ ಊರಿನ ಒಬ್ಬ ಬಡ ವಿಧವೆಯಾಗಿದ್ದಳು. ಅವಳು ದೇವರ ಪ್ರವಾದಿಯಾದ ಎಲೀಯನಿಗೆ ಬಹಳ ಅತಿಥಿಸತ್ಕಾರವನ್ನು ತೋರಿಸಿದ್ದಳು. ಆದುದರಿಂದ, ಕ್ಷಾಮದ ಸಮಯದಲ್ಲಿ ಅವಳ ಮತ್ತು ಅವಳ ಮಗನ ಜೀವವು ಅಪಾಯದಲ್ಲಿದ್ದಾಗ, ಅವಳ ಬಳಿ ಇದ್ದ ಹಿಟ್ಟು ಮತ್ತು ಎಣ್ಣೆಯನ್ನು ಅದ್ಭುತಕರವಾದ ರೀತಿಯಲ್ಲಿ ಹೆಚ್ಚಿಸಲಾಯಿತು. ಆದರೆ ತದನಂತರ ಅವಳ ಮಗನು ಸತ್ತುಹೋದನು. ಆಗ ಎಲೀಯನು ಅವನನ್ನು ಒಂದು ಮಂಚದ ಮೇಲೆ ಮಲಗಿಸಿದನು. ಅನಂತರ ಅವನು ಪ್ರಾರ್ಥನೆಮಾಡಿ, ಮೂರು ಬಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರಿಗಿ ಬರುವಂತೆ ಮಾಡು” ಎಂದು ಬೇಡಿಕೊಂಡನು. ಮತ್ತು ಹಾಗೆಯೇ ಆಯಿತು. ದೇವರು ಆ ಹುಡುಗನಿಗೆ ಪ್ರಾಣವನ್ನು ಅಥವಾ ಜೀವವನ್ನು ಪುನಃ ಕೊಟ್ಟನು. (1 ಅರಸು 17:8-24) ತನ್ನ ನಂಬಿಕೆಗೆ ಸಿಕ್ಕಿದ ಈ ಬಹುಮಾನ, ಅಂದರೆ ತನ್ನ ಸ್ವಂತ ಪ್ರಿಯ ಮಗನ ಪುನರುತ್ಥಾನದಿಂದ ಆ ವಿಧವೆಯು ಎಷ್ಟು ಆನಂದಪಟ್ಟಿರಬಹುದೆಂಬುದನ್ನು ಸ್ವಲ್ಪ ಊಹಿಸಿನೋಡಿ! ಇದು ದಾಖಲಿಸಲ್ಪಟ್ಟಿರುವ ಪ್ರಥಮ ಪುನರುತ್ಥಾನವಾಗಿತ್ತು.
4. ಎಲೀಷನು ಶೂನೇಮಿನಲ್ಲಿ ಯಾವ ಅದ್ಭುತವನ್ನು ನಡಿಸಿದನು?
4 ಪುನರುತ್ಥಾನದ ಮೂಲಕ ತನ್ನವರನ್ನು ತಿರಿಗಿ ಹೊಂದಿದ ಇನ್ನೊಬ್ಬ ಸ್ತ್ರೀಯು, ಶೂನೇಮ್ ಪಟ್ಟಣದವಳಾಗಿದ್ದಳು. ಇವಳು ಒಬ್ಬ ವೃದ್ಧ ವ್ಯಕ್ತಿಯ ಹೆಂಡತಿಯಾಗಿದ್ದಳು. ಮತ್ತು ಅವಳು ಪ್ರವಾದಿಯಾದ ಎಲೀಷನು ಮತ್ತು ಅವನ ಸೇವಕನಿಗೆ ದಯೆಯನ್ನು ತೋರಿಸುತ್ತಿದ್ದಳು. ಇದಕ್ಕೆ ಬಹುಮಾನವಾಗಿ ಅವಳಿಗೆ ಒಬ್ಬ ಮಗನು ಹುಟ್ಟಿದನು. ಆದರೆ ಹಲವಾರು ವರ್ಷಗಳ ನಂತರ, ಅವಳು ಪ್ರವಾದಿ ಎಲೀಷನನ್ನು ಕರೆಕಳುಹಿಸಿದಳು. ಅವನು ಮನೆಗೆ ಬಂದಾಗ, ಆ ಹುಡುಗನು ಸತ್ತುಹೋಗಿರುವುದನ್ನು ನೋಡಿದನು. ಆಗ ಎಲೀಷನು ಪ್ರಾರ್ಥನೆಯನ್ನು ಮಾಡಿ, ಕೆಲವೊಂದು ಕ್ರಮಗಳನ್ನು ತೆಗೆದುಕೊಂಡ ನಂತರ, “ಹುಡುಗನ ದೇಹವು ಬೆಚ್ಚಗಾಯಿತು.” ಮತ್ತು ಅವನು “ಏಳು ಸಾರಿ ಸೀತು ಕಣ್ದೆರೆದನು.” ಈ ಪುನರುತ್ಥಾನದಿಂದ, ತಾಯಿಗೂ ಮಗನಿಗೂ ಅಪಾರವಾದ ಆನಂದವುಂಟಾಯಿತು ಎಂಬುದರಲ್ಲಿ ಸಂಶಯವೇ ಇಲ್ಲ! (2 ಅರಸು 4:8-37; 8:1-6) ಆದರೆ ಇದಕ್ಕಿಂತಲೂ ಹೆಚ್ಚಾಗಿ, ಇವರು “ಶ್ರೇಷ್ಠಪುನರುತ್ಥಾನ”ದಲ್ಲಿ ಭೂಮಿಯ ಮೇಲೆ ಎಬ್ಬಿಸಲ್ಪಡುವಾಗ ಇನ್ನೆಷ್ಟು ಹೆಚ್ಚು ಸಂತೋಷಿಸುವರು, ಯಾಕೆಂದರೆ ಆಗ ಅವರಿಗೆ ಪುನಃ ಎಂದಿಗೂ ಸಾಯದೇ ಸದಾಕಾಲ ಜೀವಿಸುವ ಸಾಧ್ಯತೆ ಇರುವುದು! ಪುನರುತ್ಥಾನದ ಪ್ರೀತಿಪರ ದೇವರಾದ ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸಲು ಇದು ಎಷ್ಟೊಂದು ಒಳ್ಳೆಯ ಕಾರಣವಾಗಿದೆ!—ಇಬ್ರಿಯ 11:35.
5. ಸತ್ತ ಬಳಿಕವೂ ಎಲೀಷನು ಒಂದು ಪುನರುತ್ಥಾನದಲ್ಲಿ ಒಳಗೂಡಿದ್ದದ್ದು ಹೇಗೆ?
5 ಎಲೀಷನು ಮರಣಪಟ್ಟು, ಅವನನ್ನು ಹೂತ ನಂತರವೂ, ದೇವರು ಅವನ ಎಲುಬುಗಳನ್ನು ಪವಿತ್ರಾತ್ಮದ ಮೂಲಕ ಶಕ್ತಿಯುತವನ್ನಾಗಿ ಮಾಡಿದನು. ನಾವು ಓದುವುದು: “ಒಂದು ದಿವಸ ಜನರು [ಕೆಲವು ಇಸ್ರಾಯೇಲ್ಯರು] ಒಬ್ಬ ಸತ್ತವನನ್ನು ಸಮಾಧಿಮಾಡುವದಕ್ಕೆ ಹೋದಾಗ ಮೋವಾಬ್ಯರ ಗುಂಪು ಬರುತ್ತಿರುವದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಸತ್ತ ಮನುಷ್ಯನು ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ ಉಜ್ಜೀವಿಸಿ ಎದ್ದು ನಿಂತನು.” (2 ಅರಸು 13:20, 21) ಆ ಮನುಷ್ಯನಿಗೆ ಎಷ್ಟು ಆಶ್ಚರ್ಯವೂ, ಸಂತೋಷವೂ ಆಗಿದ್ದಿರಬೇಕು! ಅದೇ ರೀತಿಯಲ್ಲಿ, ಯೆಹೋವ ದೇವರ ವಿಫಲವಾಗದ ಉದ್ದೇಶಕ್ಕನುಗುಣವಾಗಿ ನಮ್ಮ ಪ್ರಿಯ ಜನರು ಉಜ್ಜೀವಿಸಲ್ಪಡುವಾಗ ನಮಗೆಷ್ಟು ಆನಂದವಾಗುವುದು ಎಂಬುದನ್ನು ಕಲ್ಪಿಸಿಕೊಳ್ಳಿರಿ!
ದೇವರ ಮಗನು ಸತ್ತವರನ್ನು ಎಬ್ಬಿಸಿದನು
6. ಯೇಸು ನಾಯಿನೆಂಬ ಊರಿನ ಬಳಿ ಯಾವ ಅದ್ಭುತವನ್ನು ನಡೆಸಿದನು, ಮತ್ತು ಈ ಘಟನೆಯು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
6 ಸತ್ತವರು ಪುನರುತ್ಥಾನಹೊಂದಿ, ನಿತ್ಯಜೀವದ ಪ್ರತೀಕ್ಷೆಯನ್ನು ಹೊಂದಬಲ್ಲರೆಂಬುದಕ್ಕೆ ದೇವರ ಮಗನಾದ ಯೇಸು ಕ್ರಿಸ್ತನು ನಮಗೆ ಬಲವಾದ ಕಾರಣಗಳನ್ನು ಕೊಟ್ಟಿದ್ದಾನೆ. ದೇವರ ಶಕ್ತಿಯಿಂದ ಪುನರುತ್ಥಾನವು ಖಂಡಿತವಾಗಿಯೂ ಸಾಧ್ಯವಿದೆಯೆಂಬುದನ್ನು ಅರ್ಥಮಾಡಿಕೊಳ್ಳಲು, ನಾಯಿನೆಂಬ ಊರಿನ ಹತ್ತಿರ ನಡೆದ ಒಂದು ಘಟನೆಯು ನಮಗೆ ಸಹಾಯಮಾಡುವುದು. ಒಮ್ಮೆ ಯೇಸು ಇನ್ನೇನೂ ಆ ಊರೊಳಗೆ ಹೋಗಲಿದ್ದಾಗ, ಶೋಕಿಸುತ್ತಿದ್ದ ಕೆಲವರು ಒಬ್ಬ ಯುವ ವ್ಯಕ್ತಿಯ ಶವವನ್ನು ಹೂಣಿಡಲಿಕ್ಕಾಗಿ ಆ ಊರಿನ ಹೊರಕ್ಕೆ ಕೊಂಡೊಯ್ಯುತ್ತಿದ್ದರು. ಆ ವ್ಯಕ್ತಿಯು, ವಿಧವೆಯೊಬ್ಬಳ ಒಬ್ಬನೇ ಮಗನಾಗಿದ್ದನು. ಯೇಸು ಅವಳ ಬಳಿ ಹೋಗಿ “ಅಳಬೇಡ” ಎಂದು ಹೇಳಿದನು. ಅನಂತರ ಅವನು ಚಟ್ಟವನ್ನು ಮುಟ್ಟಿ, ಹೀಗಂದನು: “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ.” ಆಗ ಅವನು ಎದ್ದು ಕುಳಿತು, ಮಾತಾಡಿದನು. (ಲೂಕ 7:11-15) ಈ ಅದ್ಭುತವು ಸಹ, ಪುನರುತ್ಥಾನದ ನಿರೀಕ್ಷೆಯು ನಿಶ್ಚಿತವಾದದ್ದಾಗಿದೆಯೆಂಬ ನಮ್ಮ ದೃಢನಂಬಿಕೆಯನ್ನು ಖಂಡಿತವಾಗಿಯೂ ಬಲಪಡಿಸುತ್ತದೆ.
7. ಯಾಯಿರನ ಮಗಳಿಗೆ ಏನಾಯಿತು?
7 ಇನ್ನೊಂದು ಘಟನೆಯನ್ನೂ ನಾವು ಪರಿಗಣಿಸೋಣ. ಇದು, ಕಪೆರ್ನೌಮಿನಲ್ಲಿದ್ದ ಸಭಾಮಂದಿರದ ಅಧಿಕಾರಿಯಾದ ಯಾಯೀರನಿಗೆ ಸಂಬಂಧಿಸುತ್ತದೆ. ಅವನು ಯೇಸುವಿನ ಬಳಿ ಹೋಗಿ, ಸಾಯುವ ಸ್ಥಿತಿಯಲ್ಲಿದ್ದ ತನ್ನ ಮುದ್ದಿನ 12 ವರ್ಷ ಪ್ರಾಯದ ಮಗಳನ್ನು ಉಳಿಸುವಂತೆ ಕೋರಿದನು. ಆದರೆ ಸ್ವಲ್ಪ ಸಮಯದೊಳಗೆ ಅವಳು ಸತ್ತುಹೋದಳೆಂಬ ಸುದ್ದಿ ಅವರಿಗೆ ಸಿಕ್ಕಿತು. ದುಃಖತಪ್ತನಾದ ಯಾಯಿರನಿಗೆ ನಂಬಿಕೆಯನ್ನಿಡುವಂತೆ ಉತ್ತೇಜಿಸುತ್ತಾ, ಯೇಸು ಅವನೊಂದಿಗೆ ಅವನ ಮನೆಗೆ ಹೋದನು. ಅಲ್ಲಿ ತುಂಬ ಜನರು ಅಳುತ್ತಾ ಇದ್ದರು. ಆದರೆ ಯೇಸು ಅವರಿಗೆ, “ಹುಡುಗಿ ಸತ್ತಿಲ್ಲ; ನಿದ್ದೆಮಾಡುತ್ತಾಳೆ” ಎಂದು ಹೇಳಿದಾಗ ಅವರೆಲ್ಲರೂ ಪರಿಹಾಸ್ಯ ಮಾಡಲಾರಂಭಿಸಿದರು. ಅವಳು ಸತ್ತಿದ್ದಳೆಂಬುದು ನಿಜ. ಆದರೆ ಅವಳು ನಿದ್ದೆಮಾಡುತ್ತಿದ್ದಾಳೆಂದು ಯೇಸು ಹೇಳಿದ್ದಕ್ಕೆ ಕಾರಣವಿತ್ತು. ಗಾಢನಿದ್ರೆಯಲ್ಲಿರುವ ಒಬ್ಬ ವ್ಯಕ್ತಿಯನ್ನು ಹೇಗೆ ಎಬ್ಬಿಸಸಾಧ್ಯವಿದೆಯೊ ಹಾಗೆಯೇ ಸತ್ತವರನ್ನೂ ಪುನಃ ಜೀವಕ್ಕೆ ಎಬ್ಬಿಸಸಾಧ್ಯವಿದೆಯೆಂಬುದನ್ನು ಅವನು ಅವರಿಗೆ ತೋರಿಸಲಿದ್ದನು. ಅವನು ಆ ಹುಡುಗಿಯ ಕೈಹಿಡಿದು, “ಅಮ್ಮಣ್ಣೀ, ಏಳು” ಎಂದು ಹೇಳಿದನು. ಅವಳು ತತ್ಕ್ಷಣವೇ ಎದ್ದಳು, ಮತ್ತು ಆನಂದದಿಂದ “ಆಕೆಯ ತಂದೆತಾಯಿಗಳು ಬೆರಗಾದರು.” (ಮಾರ್ಕ 5:35-43; ಲೂಕ 8:49-56) ಹಾಗೆಯೇ, ಸತ್ತ ಪ್ರಿಯ ಜನರು ಪ್ರಮೋದವನ ಭೂಮಿಯಲ್ಲಿ ಜೀವಕ್ಕೆ ಎಬ್ಬಿಸಲ್ಪಡುವಾಗ, ಅವರ ಕುಟುಂಬ ಸದಸ್ಯರು ಅವರನ್ನು ನೋಡಿ ಆನಂದದಿಂದ ‘ಬೆರಗಾಗುವರು.’
8. ಲಾಜರನ ಸಮಾಧಿಯ ಬಳಿ ಯೇಸು ಏನು ಮಾಡಿದನು?
8 ಇನ್ನೊಂದು ಪುನರುತ್ಥಾನವು ಲಾಜರನದ್ದು. ಅವನು ಸತ್ತು ನಾಲ್ಕು ದಿನಗಳಾದ ಬಳಿಕ ಯೇಸು ಅವನ ಸಮಾಧಿಯ ಬಳಿಗೆ ಬಂದನು. ಅದರ ಪ್ರವೇಶದ್ವಾರದಲ್ಲಿದ್ದ ಕಲ್ಲನ್ನು ತೆಗೆಯುವಂತೆ ಅವನು ಕೇಳಿಕೊಂಡನು. ತಾನು ದೇವರ ಶಕ್ತಿಯಿಂದ ಈ ಕೆಲಸವನ್ನು ಮಾಡುತ್ತಿದ್ದೇನೆಂಬುದನ್ನು ಪ್ರೇಕ್ಷಕರೆಲ್ಲರಿಗೂ ತಿಳಿದುಬರುವಂತೆ ಅವನು ಬಹಿರಂಗವಾಗಿ ಪ್ರಾರ್ಥನೆಮಾಡಿದನು. ಅನಂತರ ಅವನು ಗಟ್ಟಿಯಾದ ಸ್ವರದಲ್ಲಿ “ಲಾಜರನೇ, ಹೊರಗೆ ಬಾ” ಎನ್ನಲಾಗಿ, ಅವನು ಎದ್ದು ಹೊರಗೆ ಬಂದನು! ಅವನ ಕೈಕಾಲುಗಳು ಇನ್ನೂ ಬಟ್ಟೆಗಳಿಂದ ಕಟ್ಟಲ್ಪಟ್ಟಿದ್ದವು, ಮತ್ತು ಮುಖವು ಕೈಪಾವಡದಿಂದ ಸುತ್ತಲ್ಪಟ್ಟಿತ್ತು. “ಅವನನ್ನು ಬಿಚ್ಚಿರಿ, ಹೋಗಲಿ” ಎಂದು ಯೇಸು ಹೇಳಿದನು. ಈ ಅದ್ಭುತವನ್ನು ನೋಡಿ, ಲಾಜರನ ಸಹೋದರಿಯರಾದ ಮಾರ್ಥ ಮತ್ತು ಮರಿಯಳನ್ನು ಸಂತೈಸಲು ಬಂದಿದ್ದ ಅನೇಕರು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು. (ಯೋಹಾನ 11:1-45) ಈ ವೃತ್ತಾಂತವು, ದೇವರ ನೂತನ ಲೋಕದಲ್ಲಿ, ನಿಮ್ಮ ಪ್ರಿಯ ಜನರು ಸಹ ಜೀವಕ್ಕೆ ಎಬ್ಬಿಸಲ್ಪಡುವರೆಂಬ ನಿರೀಕ್ಷೆಯನ್ನು ನಿಮ್ಮ ಹೃದಯದಲ್ಲಿ ತುಂಬಿಸುವುದಿಲ್ಲವೊ?
9. ಯೇಸು ಈಗ ಸತ್ತವರನ್ನು ಪುನರುತ್ಥಾನಗೊಳಿಸಬಲ್ಲನೆಂದು ನಮಗೇಕೆ ಖಾತ್ರಿಯಿದೆ?
9 ಸ್ನಾನಿಕನಾದ ಯೋಹಾನನು ಸೆರೆಮನೆಯಲ್ಲಿದ್ದಾಗ, ಯೇಸು ಅವನಿಗೆ ಈ ಹುರಿದುಂಬಿಸುವ ಸಂದೇಶವನ್ನು ಕಳುಹಿಸಿದನು: “ಕುರುಡರಿಗೆ ಕಣ್ಣು ಬರುತ್ತವೆ; . . . ಸತ್ತವರು ಜೀವವನ್ನು ಹೊಂದುತ್ತಾರೆ.” (ಮತ್ತಾಯ 11:4-6) ಯೇಸು ಮನುಷ್ಯನೋಪಾದಿ ಭೂಮಿಯಲ್ಲಿದ್ದಾಗಲೇ ಸತ್ತವರನ್ನು ಪುನರುತ್ಥಾನಗೊಳಿಸಿದನು. ಹೀಗಿರುವುದರಿಂದ, ಅವನು ದೇವರಿಂದ ಶಕ್ತಿಯನ್ನು ಪಡೆದುಕೊಂಡಿರುವ ಒಬ್ಬ ಶಕ್ತಿಶಾಲಿ ಆತ್ಮಜೀವಿಯಾಗಿ ಅದನ್ನು ಮಾಡುವುದು ಅವನಿಗೇನು ಕಷ್ಟಕರವಾದ ಕೆಲಸವಲ್ಲ. ಯೇಸು “ಪುನರುತ್ಥಾನವೂ ಜೀವವೂ” ಆಗಿದ್ದಾನೆ. ಹತ್ತಿರದ ಭವಿಷ್ಯತ್ತಿನಲ್ಲಿ, ‘ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವರು’ ಎಂಬ ವಿಷಯವು ಎಷ್ಟು ಸಾಂತ್ವನದಾಯಕವಾಗಿದೆ!—ಯೋಹಾನ 5:28, 29; 11:25.
ನಮ್ಮ ನಿರೀಕ್ಷೆಯನ್ನು ಬಲಪಡಿಸುವ ಇತರ ಪುನರುತ್ಥಾನಗಳು
10. ಪ್ರಪ್ರಥಮ ಬಾರಿ ಒಬ್ಬ ಅಪೊಸ್ತಲನು ಮಾಡಿರುವ ಪುನರುತ್ಥಾನವನ್ನು ನೀವು ಹೇಗೆ ವರ್ಣಿಸುವಿರಿ?
10 ಯೇಸು ತನ್ನ ಅಪೊಸ್ತಲರನ್ನು ರಾಜ್ಯ ಪ್ರಚಾರಕರಾಗಿ ಕಳುಹಿಸಿದಾಗ ಅವರಿಗೆ, “ಸತ್ತವರನ್ನು ಬದುಕಿಸಿರಿ” ಎಂದು ಹೇಳಿದನು. (ಮತ್ತಾಯ 10:5-8) ಆದರೆ ಇದನ್ನು ಮಾಡಲಿಕ್ಕಾಗಿ ಅವರು ಖಂಡಿತವಾಗಿಯೂ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕಾಗಿತ್ತು. ಸಾ.ಶ. 36ರಲ್ಲಿ ಯೊಪ್ಪದಲ್ಲಿ ನಡೆದಂತಹ ಈ ಘಟನೆಯನ್ನು ಪರಿಗಣಿಸಿರಿ. ದೊರ್ಕ (ತಬಿಥಾ) ಎಂಬ ಒಬ್ಬ ದೈವಭಕ್ತಿಯುಳ್ಳ ಸ್ತ್ರೀಯು ಮರಣಕ್ಕೀಡಾದಳು. ಅವಳು ಅನೇಕ ಸತ್ಕ್ರಿಯೆಗಳನ್ನು ಮಾಡುತ್ತಿದ್ದಳು. ಅವಳು ಬಡ ವಿಧವೆಯರಿಗಾಗಿ ನಿಲುವಂಗಿಗಳನ್ನು ಸಹ ಮಾಡಿಕೊಡುತ್ತಿದ್ದಳು. ಆದುದರಿಂದ ಅವಳು ಸತ್ತುಹೋದಾಗ ಆ ವಿಧವೆಯರೆಲ್ಲರೂ ತುಂಬ ಅಳುತ್ತಾ ಇದ್ದರು. ಶಿಷ್ಯರು ಅವಳ ಶವವನ್ನು ಹೂಣಿಡಲಿಕ್ಕಾಗಿ ತಯಾರಿಸಿಟ್ಟರು ಮತ್ತು ಅನಂತರ ಅಪೊಸ್ತಲ ಪೇತ್ರನಿಂದ ಪ್ರಾಯಶಃ ಸಾಂತ್ವನವನ್ನು ಪಡೆದುಕೊಳ್ಳುವ ಸಲುವಾಗಿ ಅವನನ್ನು ಬರಹೇಳಿದರು. (ಅ. ಕೃತ್ಯಗಳು 9:32-38) ಅವನು ಬಂದು ಮೇಲಂತಸ್ತಿನಲ್ಲಿದ್ದವರೆಲ್ಲರನ್ನು ಹೊರಗೆ ಕಳುಹಿಸಿ, ಪ್ರಾರ್ಥನೆ ಮಾಡಿ, ಅನಂತರ ಹೀಗಂದನು: “ತಬಿಥಾ, ಏಳು.” ಅವಳು ಕಣ್ದೆರೆದು, ಎದ್ದು ಕುಳಿತುಕೊಂಡಳು. ಆಗ ಅವನು ಅವಳ ಕೈಹಿಡಿದು ಎಬ್ಬಿಸಿದನು. ಪ್ರಪ್ರಥಮ ಬಾರಿ ಒಬ್ಬ ಅಪೊಸ್ತಲನು ನಡಿಸಿರುವ ಈ ಪುನರುತ್ಥಾನದ ಕುರಿತಾಗಿ ಕೇಳಿ, ಅನೇಕರು ವಿಶ್ವಾಸಿಗಳಾದರು. (ಅ. ಕೃತ್ಯಗಳು 9:39-42) ಇದು ನಮಗೆ ಸಹ ಪುನರುತ್ಥಾನದಲ್ಲಿ ನಂಬಿಕೆಯನ್ನಿಡಲು ಹೆಚ್ಚಿನ ಕಾರಣವನ್ನು ಕೊಡುತ್ತದೆ.
11. ಬೈಬಲ್ ದಾಖಲೆಯಲ್ಲಿರುವ ಕೊನೆಯ ಪುನರುತ್ಥಾನವು ಯಾವುದು?
11 ಬೈಬಲ್ ದಾಖಲೆಯಲ್ಲಿರುವ ಕೊನೆಯ ಪುನರುತ್ಥಾನವು ತ್ರೋವ ಎಂಬ ಸ್ಥಳದಲ್ಲಾಯಿತು. ಪೌಲನು ಅಲ್ಲಿ ತನ್ನ ಮೂರನೆಯ ಮಿಷನೆರಿ ಸಂಚಾರದ ಸಮಯದಲ್ಲಿ ತಂಗಿದ್ದನು. ಅವನು ಮಧ್ಯರಾತ್ರಿಯ ವರೆಗೂ ಅಲ್ಲಿ ಭಾಷಣವನ್ನು ಕೊಡುತ್ತಾ ಇದ್ದನು. ಅಲ್ಲಿದ್ದವರಲ್ಲಿ, ಯೂತಿಖನೆಂಬ ಒಬ್ಬ ಯೌವನಸ್ಥನೂ ಇದ್ದನು. ಅಲ್ಲಿ ಜನರು ಕಿಕ್ಕಿರಿದು ತುಂಬಿದ್ದರು, ಅನೇಕ ದೀಪಗಳು ಶಾಖವನ್ನು ಕೊಡುತ್ತಿದ್ದವು ಮತ್ತು ಈ ಯುವಕನು ದಣಿದಿದ್ದರಿಂದ ನಿದ್ದೆಹೋಗಿ, ಮೂರನೆಯ ಅಂತಸ್ತಿನ ಕಿಟಕಿಯ ಮೇಲಿಂದ ಕೆಳಕ್ಕೆ ಬಿದ್ದನು. ಆದರೆ ಆಗ ಯೂತಿಖನು ಕೇವಲ ಪ್ರಜ್ಞೆಯಿಲ್ಲದವನಾಗಿರಲಿಲ್ಲ, ಬದಲಾಗಿ ವೃತ್ತಾಂತದಲ್ಲಿ ಹೇಳಲ್ಪಟ್ಟಿರುವಂತೆ “ಅವನನ್ನು ಎತ್ತಿನೋಡುವಾಗ ಸತ್ತಿದ್ದನು.” ಪೌಲನು ಯೂತಿಖನ ಮೇಲೆ ಬಿದ್ದು ತಬ್ಬಿಕೊಂಡು, “ಗೋಳಾಡಬೇಡಿರಿ, ಅವನ ಪ್ರಾಣ ಅವನಲ್ಲಿ ಅದೆ” ಎಂದು ಅಲ್ಲಿದ್ದವರಿಗೆ ಹೇಳಿದನು. ಇದರರ್ಥ, ಆ ಯೌವನಸ್ಥನಿಗೆ ಪುನಃ ಜೀವಬಂದಿದೆ ಎಂದು ಪೌಲನು ಹೇಳುತ್ತಿದ್ದನು. ಇದರಿಂದಾಗಿ ಅಲ್ಲಿದ್ದವರಿಗೆ “ಬಹಳ ಆದರಣೆ ಉಂಟಾಯಿತು.” (ಅ. ಕೃತ್ಯಗಳು 20:7-12) ಹಿಂದೆ ತಮ್ಮೊಂದಿಗೆ ದೇವರಿಗೆ ಸೇವೆ ಸಲ್ಲಿಸುತ್ತಿದ್ದವರ ಪುನರುತ್ಥಾನವಾಗುವುದೆಂಬ ತಿಳಿವಳಿಕೆಯಿಂದಾಗಿ ಇಂದು ಸಹ ದೇವರ ಸೇವಕರು ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ.
ಪುನರುತ್ಥಾನ—ಬಹುಹಿಂದಿನಿಂದ ಇರುವ ನಿರೀಕ್ಷೆ
12. ರೋಮನ್ ದೇಶಾಧಿಪತಿಯಾದ ಫೇಲಿಕ್ಸನ ಮುಂದೆ ಪೌಲನು ಯಾವುದರ ಬಗ್ಗೆ ತನ್ನ ದೃಢನಂಬಿಕೆಯನ್ನು ವ್ಯಕ್ತಪಡಿಸಿದನು?
12 ರೋಮನ್ ದೇಶಾಧಿಪತಿ ಫೇಲಿಕ್ಸನ ಮುಂದೆ ಪೌಲನು ವಿಚಾರಣೆಗೆ ನಿಲ್ಲಿಸಲ್ಪಟ್ಟಾಗ, ಅವನು ಸಾಕ್ಷ್ಯಕೊಟ್ಟದ್ದು: “ಧರ್ಮಶಾಸ್ತ್ರಕ್ಕನುಗುಣವಾಗಿರುವ ಮತ್ತು ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳನ್ನು ನಂಬುತ್ತೇನೆ. ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:14, 15) ಸತ್ತವರ ಪುನರುತ್ಥಾನವಾಗಲಿದೆ ಎಂಬುದನ್ನು ದೇವರ ವಾಕ್ಯದ ಭಾಗಗಳು, ಉದಾಹರಣೆಗೆ ‘ಧರ್ಮಶಾಸ್ತ್ರವು’ ಯಾವ ರೀತಿಯಲ್ಲಿ ಸೂಚಿಸುತ್ತದೆ?
13. ದೇವರು ಮೊದಲನೆಯ ಪ್ರವಾದನೆಯನ್ನು ನುಡಿದಾಗ, ಆತನು ಪರೋಕ್ಷವಾಗಿ ಪುನರುತ್ಥಾನಕ್ಕೆ ಸೂಚಿಸಿದನೆಂದು ಏಕೆ ಹೇಳಸಾಧ್ಯವಿದೆ?
13 ಸ್ವತಃ ದೇವರೇ, ಏದೆನ್ ತೋಟದಲ್ಲಿ ಮೊದಲನೆಯ ಪ್ರವಾದನೆಯನ್ನು ನುಡಿದಾಗ ಒಂದು ಪುನರುತ್ಥಾನಕ್ಕೆ ಅಪ್ರತ್ಯಕ್ಷವಾಗಿ ಸೂಚಿಸಿದನು. ಪಿಶಾಚನಾದ ಸೈತಾನನು, ಅಂದರೆ ‘ಪುರಾತನ ಸರ್ಪಕ್ಕೆ’ ದಂಡನೆಯನ್ನು ವಿಧಿಸುವಾಗ ದೇವರು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಪ್ರಕಟನೆ 12:9; ಆದಿಕಾಂಡ 3:14, 15) ಸ್ತ್ರೀಯ ಸಂತಾನದ ಹಿಮ್ಮಡಿಯನ್ನು ಕಚ್ಚುವುದರ ಅರ್ಥ, ಯೇಸು ಕ್ರಿಸ್ತನ ಕೊಲ್ಲುವಿಕೆ ಆಗಿತ್ತು. ಆದರೆ ಆ ಸಂತಾನವು ತದನಂತರ ಸರ್ಪನ ತಲೆಯನ್ನು ಜಜ್ಜಬೇಕಾದರೆ, ಆ ಸಂತಾನ ಅಥವಾ ಕ್ರಿಸ್ತನು ಸತ್ತವರೊಳಗಿಂದ ಎದ್ದುಬರುವುದು ಅಥವಾ ಪುನರುತ್ಥಾನವಾಗುವುದು ಅತ್ಯಾವಶ್ಯಕವಾಗಿತ್ತು.
14. ಯೆಹೋವನು “ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ,” ಅದು ಹೇಗೆ?
14 ಯೇಸು ಘೋಷಿಸಿದ್ದು: “ಸತ್ತವರು ಬದುಕಿ ಏಳುತ್ತಾರೆಂಬದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಎಂದು ಹೇಳಿದ್ದಾನೆ. ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ.” (ಲೂಕ 20:27, 37, 38; ವಿಮೋಚನಕಾಂಡ 3:6) ಇದು ಹೇಗೆ? ಅಬ್ರಹಾಮ, ಇಸಾಕ, ಮತ್ತು ಯಾಕೋಬರು ಸತ್ತುಹೋಗಿದ್ದರು. ಆದರೆ, ಅವರನ್ನು ಪುನರುತ್ಥಾನಗೊಳಿಸುವ ದೇವರ ಉದ್ದೇಶದ ನೆರವೇರಿಕೆಯು ಎಷ್ಟು ಖಂಡಿತವಾಗಿತ್ತೆಂದರೆ, ಅವರು ಆತನ ಮುಂದೆ ಜೀವಂತರಾಗಿದ್ದರೋ ಎಂಬಂತಿತ್ತು.
15. ಪುನರುತ್ಥಾನದಲ್ಲಿ ನಂಬಿಕೆಯನ್ನಿಡಲು ಅಬ್ರಹಾಮನಿಗೆ ಯಾವ ಕಾರಣವಿತ್ತು?
15 ಪುನರುತ್ಥಾನದಲ್ಲಿ ನಂಬಿಕೆಯನ್ನಿಡಲು ಅಬ್ರಹಾಮನಿಗೆ ಕಾರಣವಿತ್ತು. ಅದೇನೆಂದರೆ, ಅವನೂ ಅವನ ಹೆಂಡತಿಯಾದ ಸಾರಳೂ ತುಂಬ ವೃದ್ಧರಾಗಿದ್ದಾಗ ಮತ್ತು ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯದಲ್ಲಿ ಸತ್ತವರಂತಿದ್ದಾಗ, ದೇವರು ಅವರ ಪುನರುತ್ಪತ್ತಿಯ ಶಕ್ತಿಯನ್ನು ಪುನಸ್ಥಾಪಿಸಿದ್ದನು. ಇದು ಒಂದು ಪುನರುತ್ಥಾನದಂತೆಯೇ ಇತ್ತು. (ಆದಿಕಾಂಡ 18:9-11; 21:1-3; ಇಬ್ರಿಯ 11:11, 12) ಅವರ ಮಗನಾದ ಇಸಾಕನು ಸುಮಾರು 25 ವರ್ಷ ಪ್ರಾಯದವನಾಗಿದ್ದಾಗ, ಅವನನ್ನು ಬಲಿಯಾಗಿ ಅರ್ಪಿಸುವಂತೆ ದೇವರು ಅಬ್ರಹಾಮನಿಗೆ ಹೇಳಿದನು. ಆದರೆ ಅಬ್ರಹಾಮನು ಇಸಾಕನನ್ನು ಇನ್ನೇನು ಕೊಲ್ಲಲಿದ್ದಾಗಲೇ ಯೆಹೋವನ ದೇವದೂತನು ಅವನನ್ನು ತಡೆದನು. ಅಬ್ರಹಾಮನು, “ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು.”—ಇಬ್ರಿಯ 11:17-19; ಆದಿಕಾಂಡ 22:1-18.
16. ಅಬ್ರಹಾಮನು ಈಗ ಮರಣವೆಂಬ ನಿದ್ರೆಯಲ್ಲಿದ್ದು, ಯಾವುದಕ್ಕಾಗಿ ಕಾಯುತ್ತಿದ್ದಾನೆ?
16 ಮೆಸ್ಸೀಯನ ಅಂದರೆ ವಾಗ್ದತ್ತ ಸಂತಾನದ ಆಳ್ವಿಕೆಯಡಿಯಲ್ಲಿ ಪುನರುತ್ಥಾನವಾಗುವದೆಂದು ಅಬ್ರಹಾಮನು ನಿರೀಕ್ಷೆಯನ್ನಿಟ್ಟುಕೊಂಡಿದ್ದನು. ಅಬ್ರಹಾಮನ ಈ ನಂಬಿಕೆಯನ್ನು ದೇವರ ಮಗನು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಗಮನಿಸಿದ್ದನು. ಆ ಮಗನು ಯೇಸು ಕ್ರಿಸ್ತನೆಂಬ ಹೆಸರಿನ ಮಾನವನೋಪಾದಿ ಈ ಭೂಮಿಗೆ ಬಂದಾಗ, ಯೆಹೂದ್ಯರಿಗೆ ಅಂದದ್ದು: “ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ತಾನು ನೋಡೇನೆಂದು ಉಲ್ಲಾಸಪಟ್ಟನು.” (ಯೋಹಾನ 8:56-58; ಜ್ಞಾನೋಕ್ತಿ 8:30, 31) ಅಬ್ರಹಾಮನು ಈಗ ಮರಣವೆಂಬ ನಿದ್ರೆಯಲ್ಲಿದ್ದಾನೆ ಮತ್ತು ದೇವರ ಮೆಸ್ಸೀಯ ರಾಜ್ಯದ ಕೆಳಗೆ ಭೂಮಿಯ ಮೇಲೆ ಪುನರುತ್ಥಾನಹೊಂದಿ ಬರಲು ಕಾಯುತ್ತಿದ್ದಾನೆ.—ಇಬ್ರಿಯ 11:8-10, 13.
ಧರ್ಮಶಾಸ್ತ್ರ ಮತ್ತು ಕೀರ್ತನೆಗಳಿಂದ ಸಾಕ್ಷ್ಯ
17. ಯೇಸು ಕ್ರಿಸ್ತನ ಪುನರುತ್ಥಾನವು ‘ಧರ್ಮಶಾಸ್ತ್ರದಲ್ಲಿ’ ಹೇಗೆ ಮುನ್ಸೂಚಿಸಲ್ಪಟ್ಟಿತ್ತು?
17 ಪುನರುತ್ಥಾನದಲ್ಲಿ ಪೌಲನಿಗಿದ್ದ ನಿರೀಕ್ಷೆಯು ‘ಧರ್ಮಶಾಸ್ತ್ರಕ್ಕನುಗುಣವಾಗಿತ್ತು.’ ದೇವರು ಇಸ್ರಾಯೇಲ್ಯರಿಗೆ ಹೀಗಂದಿದ್ದನು: “ನೀವು . . . ಪೈರನ್ನು ಕೊಯ್ಯುವಾಗ ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು. ನೀವು ಅಂಗೀಕಾರವಾಗುವಂತೆ ಅವನು ಅದನ್ನು ಯೆಹೋವನ ಸನ್ನಿಧಿಯಲ್ಲಿ [ನೈಸಾನ್ 16ರಂದು] ನೈವೇದ್ಯವಾಗಿ ನಿವಾಳಿಸಬೇಕು.” (ಯಾಜಕಕಾಂಡ 23:9-14) ಬಹುಶಃ ಈ ನಿಯಮವನ್ನೇ ಮನಸ್ಸಿನಲ್ಲಿಟ್ಟುಕೊಂಡು, ಪೌಲನು ಬರೆದುದು: “ಕ್ರಿಸ್ತನು ಸತ್ತವರೊಳಗಿಂದ ಎದ್ದುಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು.” “ಪ್ರಥಮಫಲ”ದೋಪಾದಿ ಯೇಸು ಸಾ.ಶ. 33ರ ನೈಸಾನ್ 16ರಂದು ಪುನರುತ್ಥಾನಗೊಳಿಸಲ್ಪಟ್ಟನು. ಅನಂತರ ಅವನ ಸಾನ್ನಿಧ್ಯದ ಸಮಯದಲ್ಲಿ, ಅವನ ಆತ್ಮಾಭಿಷಿಕ್ತ ಹಿಂಬಾಲಕರ ಅಂದರೆ ‘ತರುವಾಯದ ಫಲಗಳ’ ಪುನರುತ್ಥಾನವಾಗಲಿತ್ತು.—1 ಕೊರಿಂಥ 15:20-23; 2 ಕೊರಿಂಥ 1:21; 1 ಯೋಹಾನ 2:20, 27.
18. ಯೇಸುವಿನ ಪುನರುತ್ಥಾನವನ್ನು ಕೀರ್ತನೆಗಳಲ್ಲಿ ಮುಂತಿಳಿಸಲಾಗಿತ್ತೆಂದು ಪೇತ್ರನು ಹೇಗೆ ತೋರಿಸಿದನು?
18 ಕೀರ್ತನೆಗಳು ಸಹ ಪುನರುತ್ಥಾನವನ್ನು ಬೆಂಬಲಿಸುತ್ತವೆ. ಸಾ.ಶ. 33ನೆಯ ಪಂಚಾಶತ್ತಮದ ದಿನದಂದು, ಅಪೊಸ್ತಲ ಪೇತ್ರನು ಕೀರ್ತನೆ 16:8-11ರಿಂದ ಉಲ್ಲೇಖಿಸುತ್ತಾ ಹೇಳಿದ್ದು: “ಆತನ ವಿಷಯದಲ್ಲಿ ದಾವೀದನು—ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವದನ್ನು ನೋಡುತ್ತಿದ್ದೆನು. ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ. ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು. ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವದು; ಯಾಕಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ, ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲ.” ಪೇತ್ರನು ಕೂಡಿಸಿ ಹೇಳಿದ್ದು: “[ದಾವೀದನು] ಮುಂದಾಗುವದನ್ನು ಕಂಡು ಕ್ರಿಸ್ತನ ಪುನರುತ್ಥಾನವನ್ನೇ ಕುರಿತು—ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ ಆತನ ಶರೀರವು ಕೊಳೆಯುವ ಅವಸ್ಥೆಯನ್ನನುಭವಿಸುವದಿಲ್ಲವೆಂತಲೂ ಹೇಳಿದನು. ಈ ಯೇಸುವನ್ನೇ ದೇವರು ಎಬ್ಬಿಸಿದನು.”—ಅ. ಕೃತ್ಯಗಳು 2:25-32.
19, 20. ಪೇತ್ರನು ಯಾವಾಗ ಕೀರ್ತನೆ 118:22ನ್ನು ಉಲ್ಲೇಖಿಸಿದನು, ಮತ್ತು ಇದು ಯೇಸುವಿನ ಮರಣ ಮತ್ತು ಪುನರುತ್ಥಾನದೊಂದಿಗೆ ಹೇಗೆ ಸಂಬಂಧಿಸಿತ್ತು?
19 ಕೆಲವು ದಿನಗಳ ನಂತರ, ಪೇತ್ರನು ಸನ್ಹೇದ್ರಿನಿನ ಮುಂದೆ ನಿಂತಿದ್ದನು ಮತ್ತು ಆಗ ಅವನು ಪುನಃ ಕೀರ್ತನೆಗಳಿಂದ ಉಲ್ಲೇಖವನ್ನು ಮಾಡಿದನು. ಒಬ್ಬ ಕುಂಟ ಭಿಕ್ಷುಕನನ್ನು ಅವನು ಹೇಗೆ ಗುಣಪಡಿಸಿದನೆಂದು ಕೇಳಲ್ಪಟ್ಟಾಗ ಆ ಅಪೊಸ್ತಲನು ಅಂದದ್ದು: “ನಿಮಗೆಲ್ಲರಿಗೂ ಇಸ್ರಾಯೇಲ್ ಜನರೆಲ್ಲರಿಗೂ ತಿಳಿಯಬೇಕಾದದ್ದೇನಂದರೆ—ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮೆದುರಿನಲ್ಲಿ ಸ್ವಸ್ಥನಾಗಿ ನಿಂತಿರುತ್ತಾನೆ. ಮನೆಕಟ್ಟುವವರಾದ ನೀವು ಹೀನೈಸಿದ ಕಲ್ಲು ಆತನು; ಆತನೇ [ಯೇಸು] ಮುಖ್ಯವಾದ ಮೂಲೆಗಲ್ಲಾದನು. ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.”—ಅ. ಕೃತ್ಯಗಳು 4:10-12.
20 ಪೇತ್ರನು ಇದನ್ನು ಕೀರ್ತನೆ 118:22ರಿಂದ ಉಲ್ಲೇಖಿಸಿ, ಯೇಸುವಿನ ಮರಣ ಹಾಗೂ ಪುನರುತ್ಥಾನಕ್ಕೆ ಅನ್ವಯಿಸಿದನು. ಧಾರ್ಮಿಕ ಮುಖಂಡರಿಂದ ಚಿತಾಯಿಸಲ್ಪಟ್ಟ ಯೆಹೂದ್ಯರು ಯೇಸುವನ್ನು ತಿರಸ್ಕರಿಸಿದರು. (ಯೋಹಾನ 19:14-18; ಅ. ಕೃತ್ಯಗಳು 3:14, 15) ಹೀಗೆ, ‘ಮನೆಕಟ್ಟುವವರು ಆ ಕಲ್ಲನ್ನು ಹೀನೈಸಿದ್ದು,’ ಕ್ರಿಸ್ತನ ಮರಣದಲ್ಲಿ ಫಲಿಸಿತು. ಆದರೆ ‘ಆ ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು’ ಎಂಬ ಸಂಗತಿಯು, ಅವನು ಸ್ವರ್ಗದಲ್ಲಿನ ಆತ್ಮಿಕ ಮಹಿಮೆಗೆ ಎಬ್ಬಿಸಲ್ಪಟ್ಟಿದ್ದನೆಂಬುದನ್ನು ಸೂಚಿಸಿತು. ಕೀರ್ತನೆಗಾರನು ಮುಂತಿಳಿಸಿದಂತೆ, “ಇದು ಯೆಹೋವನಿಂದಲೇ ಆಯಿತು.” (ಕೀರ್ತನೆ 118:23) ಆ ‘ಕಲ್ಲನ್ನು’ ಮುಖ್ಯ ಮೂಲೆಗಲ್ಲಾಗಿ ಮಾಡುವುದರಲ್ಲಿ, ಅವನನ್ನು ನಿಯುಕ್ತ ರಾಜನಾಗಿ ಮಹಿಮೆಗೇರಿಸುವುದು ಸೇರಿತ್ತು.—ಎಫೆಸ 1:19, 20.
ಪುನರುತ್ಥಾನದ ನಿರೀಕ್ಷೆಯು ಆಸರೆಯನ್ನು ನೀಡುತ್ತದೆ
21, 22. ಯೋಬ 14:13-15ರಲ್ಲಿ ತೋರಿಸಲ್ಪಟ್ಟಿರುವಂತೆ ಯೋಬನು ಯಾವ ನಿರೀಕ್ಷೆಯನ್ನು ವ್ಯಕ್ತಪಡಿಸಿದನು, ಮತ್ತು ಇದು ಇಂದು ಮರಣದಲ್ಲಿ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿರುವವರನ್ನು ಹೇಗೆ ಸಂತೈಸಬಲ್ಲದು?
21 ಸತ್ತವರೊಳಗಿಂದ ಯಾವುದೇ ವ್ಯಕ್ತಿಯು ಎಬ್ಬಿಸಲ್ಪಟ್ಟಿರುವುದನ್ನು ಈಗ ನಮ್ಮಲ್ಲಿ ಯಾರೂ ಕಣ್ಣಾರೆ ನೋಡಿಲ್ಲ. ಆದರೆ, ಪುನರುತ್ಥಾನವು ಖಂಡಿತವಾಗಿಯೂ ಆಗಲಿದೆಯೆಂಬ ಆಶ್ವಾಸನೆಯನ್ನು ಕೊಡುವ ಕೆಲವೊಂದು ಶಾಸ್ತ್ರೀಯ ವೃತ್ತಾಂತಗಳನ್ನು ನಾವು ಗಮನಿಸಿದ್ದೇವೆ. ಹೀಗಿರುವುದರಿಂದ ಯಥಾರ್ಥವಂತ ವ್ಯಕ್ತಿಯಾಗಿದ್ದ ಯೋಬನಲ್ಲಿದ್ದ ನಿರೀಕ್ಷೆಯನ್ನು ನಾವು ಸಹ ಇಟ್ಟುಕೊಳ್ಳಬಹುದು. ಕಷ್ಟದಿಂದ ನರಳುತ್ತಿದ್ದಾಗ, ಅವನು ಹೀಗೆ ಬೇಡಿಕೊಂಡನು: “ನೀನು [ಯೆಹೋವನು] ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು . . . ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು! ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? . . . ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:13-15) ಇಲ್ಲಿ ದೇವರು ‘ತನ್ನ ಸೃಷ್ಟಿಗಾಗಿ ಹಂಬಲಿಸುವನು’ ಎಂಬುದು ಯೋಬನನ್ನು ಪುನರುತ್ಥಾನಗೊಳಿಸಲಿಕ್ಕಾಗಿ ಆತನು ತೀವ್ರವಾಗಿ ಆಶಿಸುವನೆಂಬುದನ್ನು ಸೂಚಿಸುತ್ತದೆ. ಇದು ನಮಗೆ ಎಂತಹ ನಿರೀಕ್ಷೆಯನ್ನು ಕೊಡುತ್ತದೆ!
22 ಕುಟುಂಬ ಸದಸ್ಯರಲ್ಲಿ ದೈವಭಕ್ತಿಯುಳ್ಳ ಯಾರಾದರೊಬ್ಬರು ಯೋಬನಂತೆ ಗಂಭೀರವಾದ ಕಾಯಿಲೆಗೆ ತುತ್ತಾಗಿ, ಸಾವನ್ನಪ್ಪಲೂಬಹುದು. ಆಗ, ಯೇಸು ಲಾಜರನ ಮರಣದ ಸಮಯದಲ್ಲಿ ಕಣ್ಣೀರಿಟ್ಟಂತೆ, ಮೃತ ವ್ಯಕ್ತಿಯ ಬಂಧುಬಳಗದವರು ದುಃಖದಿಂದ ಅಳಬಹುದು. (ಯೋಹಾನ 11:35) ಆದರೆ ದೇವರು ಕರೆಕೊಡುವಾಗ, ಆತನ ಸ್ಮರಣೆಯಲ್ಲಿರುವವರು ಆತನಿಗೆ ಓಗೊಡುವರೆಂಬ ಸಂಗತಿಯು ನಮಗೆ ತಿಳಿದಿರುವುದು ಅದೆಷ್ಟು ಸಾಂತ್ವನಕಾರಿಯಾಗಿದೆ! ಅದು, ಅವರು ಕೇವಲ ಒಂದು ಪ್ರಯಾಣವನ್ನು ಕೈಕೊಂಡು, ಯಾವ ಕುಂದೂ ಅಸೌಖ್ಯವೂ ಇಲ್ಲದೆ ಸುಕ್ಷೇಮದಲ್ಲಿ ಹಿಂದೆ ಬಂದಿರುವಂತೆ ಇರುವುದು!
23. ಪುನರುತ್ಥಾನದ ನಿರೀಕ್ಷೆಯಲ್ಲಿ ತಮಗಿರುವ ಭರವಸೆಯನ್ನು ಕೆಲವರು ಮಾತುಗಳಲ್ಲಿ ಹೇಗೆ ವ್ಯಕ್ತಪಡಿಸಿದ್ದಾರೆ?
23 ಒಬ್ಬ ನಂಬಿಗಸ್ತ ವೃದ್ಧ ಕ್ರೈಸ್ತ ಸಹೋದರಿಯು ಸತ್ತಾಗ, ಜೊತೆ ವಿಶ್ವಾಸಿಗಳು ಹೀಗೆ ಬರೆಯುವಂತೆ ಪ್ರಚೋದಿಸಲ್ಪಟ್ಟರು: “ನಿಮ್ಮ ತಾಯಿಯ ಮರಣಕ್ಕಾಗಿ ನಾವು ನಮ್ಮ ಮನದಾಳದ ಸಂತಾಪವನ್ನು ಸೂಚಿಸಲು ಬಯಸುತ್ತೇವೆ. ಆದರೆ ಸ್ವಲ್ಪ ಸಮಯದಲ್ಲೇ ನಾವು ಅವರನ್ನು ಪುನಃ ಸ್ವಾಗತಿಸುವೆವು. ಆಗ ಅವರು ತುಂಬ ಸುಂದರರೂ ಚೈತನ್ಯತುಂಬಿದವರೂ ಆಗಿರುವರು!” ತಮ್ಮ ಮಗನನ್ನು ಮರಣದಲ್ಲಿ ಕಳೆದುಕೊಂಡ ಹೆತ್ತವರು ಹೀಗೆ ಹೇಳಿದರು: “ಜೇಸನ್ ಎದ್ದು ಬರುವ ದಿನಕ್ಕಾಗಿ ನಾವು ಎಷ್ಟೊಂದು ಕಾತುರದಿಂದಿದ್ದೇವೆ! ಆಗ ಅವನು ತನ್ನ ಸುತ್ತಲೂ ನೋಟಹಾಯಿಸಿ, ಅವನು ಯಾವುದಕ್ಕಾಗಿ ಹಾತೊರೆಯುತ್ತಿದ್ದನೋ ಆ ಪ್ರಮೋದವನವನ್ನು ನೋಡುವನು. . . . ಅವನನ್ನು ಪ್ರೀತಿಸುತ್ತಿದ್ದ ನಾವು ಸಹ ಅಲ್ಲಿರುವಂತೆ ಮಾಡಲು ಪುನರುತ್ಥಾನದ ನಿರೀಕ್ಷೆಯು ಎಷ್ಟೊಂದು ಬಲವಾದ ಪ್ರೇರಣೆಯಾಗಿದೆ!” ಅಷ್ಟುಮಾತ್ರವಲ್ಲದೆ, ಪುನರುತ್ಥಾನದ ನಿರೀಕ್ಷೆಯು ನಿಶ್ಚಿತವಾದದ್ದಾಗಿರುವುದರಿಂದ ನಾವು ಎಷ್ಟು ಕೃತಜ್ಞರೂ ಆಗಿರಬಲ್ಲೆವು!
ನಿಮ್ಮ ಉತ್ತರವೇನು?
• ಸತ್ತವರನ್ನು ಎಬ್ಬಿಸಲಿಕ್ಕಾಗಿ ದೇವರು ಮಾಡಿರುವ ಏರ್ಪಾಡಿನಲ್ಲಿ ನಂಬಿಕೆಯು ನಮಗೆ ಹೇಗೆ ಪ್ರಯೋಜನವನ್ನು ತರಬಲ್ಲದು?
• ಪುನರುತ್ಥಾನದಲ್ಲಿ ನಂಬಿಕೆಯನ್ನಿಡಲು, ಶಾಸ್ತ್ರವಚನಗಳಲ್ಲಿರುವ ಯಾವ ಘಟನೆಗಳು ಕಾರಣವನ್ನು ಕೊಡುತ್ತವೆ?
• ಪುನರುತ್ಥಾನವು ಬಹುಹಿಂದಿನಿಂದ ಇರುವ ನಿರೀಕ್ಷೆಯಾಗಿದೆ ಎಂದು ಏಕೆ ಹೇಳಸಾಧ್ಯವಿದೆ?
• ಸತ್ತವರ ಕುರಿತು, ಆಸರೆಯನ್ನು ಕೊಡುವ ಯಾವ ನಿರೀಕ್ಷೆಯು ನಮಗಿರಬಲ್ಲದು?
[ಪುಟ 10ರಲ್ಲಿರುವ ಚಿತ್ರ]
ಯೆಹೋವನಿಂದ ಶಕ್ತಿಯನ್ನು ಪಡೆದು, ಎಲೀಯನು ಒಬ್ಬ ವಿಧವೆಯ ಎಳೆಯ ಮಗನನ್ನು ಉಜ್ಜೀವಿಸಿದನು
[ಪುಟ 12ರಲ್ಲಿರುವ ಚಿತ್ರ]
ಯೇಸು ಯಾಯಿರನ ಮಗಳನ್ನು ಜೀವಿತಳಾಗಿ ಎಬ್ಬಿಸಿದಾಗ, ಅವಳ ಹೆತ್ತವರು ಆನಂದದಿಂದ ಬೆರಗಾದರು
[ಪುಟ 15ರಲ್ಲಿರುವ ಚಿತ್ರ]
ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆಂದು, ಸಾ.ಶ. 33ನೆಯ ಪಂಚಾಶತ್ತಮದಂದು ಅಪೊಸ್ತಲ ಪೇತ್ರನು ಧೈರ್ಯದಿಂದ ಸಾಕ್ಷ್ಯಕೊಟ್ಟನು