ಯೆಹೋವನ ವಾಕ್ಯದಲ್ಲಿ ಭರವಸವಿಡಿರಿ
‘ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನೆ.’ —ಕೀರ್ತನೆ 119:42.
ಯೆಹೋವನ ವಾಕ್ಯವು ಕೀರ್ತನೆ 119ರ ರಚನಕಾರನಿಗೆ ಅತ್ಯಮೂಲ್ಯವಾಗಿತ್ತು. ಅದನ್ನು ರಚಿಸಿದವನು ಯೆಹೂದದ ರಾಜಕುಮಾರನಾದ ಹಿಜ್ಕೀಯನಾಗಿದ್ದಿರಬಹುದು. ಈ ಪ್ರೇರಿತ ಗೀತೆಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಭಾವನೆಗಳು, ಯೆಹೂದದ ರಾಜನಾಗಿ ಸೇವೆಸಲ್ಲಿಸುತ್ತಿರುವಾಗ ‘ಯೆಹೋವನನ್ನೇ ಹೊಂದಿಕೊಂಡಿದ್ದ’ ಹಿಜ್ಕೀಯನ ಸ್ವಭಾವಕ್ಕೆ ಹೊಂದಿಕೆಯಲ್ಲಿವೆ. (2 ಅರಸುಗಳು 18:3-7) ಒಂದು ಮಾತಂತೂ ಖಂಡಿತ: ಈ ಕೀರ್ತನೆಯನ್ನು ರಚಿಸಿದವನಿಗೆ ತನ್ನ ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯಿತ್ತು.’—ಮತ್ತಾಯ 5:3, NW.
2 ಕೀರ್ತನೆ 119ರಲ್ಲಿ ಕಂಡುಬರುವ ಒಂದು ಪ್ರಮುಖ ಅಂಶವು ದೇವರ ವಾಕ್ಯ, ಅಥವಾ ಸಂದೇಶದ ಮೌಲ್ಯವಾಗಿದೆ.a ಪ್ರಾಯಶಃ ಜ್ಞಾಪಕದಲ್ಲಿಟ್ಟುಕೊಳ್ಳಲು ಸುಲಭವಾಗಿರಲಿಕ್ಕಾಗಿ, ಬರಹಗಾರನು ಇದನ್ನು ಅಕ್ಷರಕ್ರಮಾನುಸಾರವಾದ ಗೀತೆಯಾಗಿ ಬರೆದನು. ಅದರಲ್ಲಿರುವ 176 ವಚನಗಳು, ಹೀಬ್ರು ಭಾಷೆಯ ಅಕ್ಷರಮಾಲೆಯ ಕ್ರಮದಲ್ಲಿ ಬರೆಯಲ್ಪಟ್ಟಿವೆ. ಮೂಲ ಹೀಬ್ರುವಿನಲ್ಲಿ, ಈ ಕೀರ್ತನೆಯ ಪ್ರತಿ 22 ಪದ್ಯಗಳಲ್ಲೂ 8 ಸಾಲುಗಳಿದ್ದು, ಪ್ರತಿಯೊಂದು ಸಾಲು ಒಂದೇ ಅಕ್ಷರದಿಂದ ಆರಂಭವಾಗುತ್ತದೆ. ಈ ಕೀರ್ತನೆಯು ದೇವರ ವಾಕ್ಯ, ಧರ್ಮಶಾಸ್ತ್ರ, ಮರುಜ್ಞಾಪನಗಳು, ಮಾರ್ಗಗಳು, ನೇಮಗಳು, ನಿಬಂಧನೆಗಳು, ಆಜ್ಞೆಗಳು, ನೀತಿವಿಧಿಗಳು ಮತ್ತು ನುಡಿಗಳಿಗೆ ಸೂಚಿಸುತ್ತದೆ. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಕೀರ್ತನೆ 119ನ್ನು ಚರ್ಚಿಸಲಾಗುವುದು. ಆದಿಯಲ್ಲಿ ಜೀವಿಸಿದ್ದ ಮತ್ತು ಇಂದು ಜೀವಿಸುತ್ತಿರುವ ಯೆಹೋವನ ಸೇವಕರ ಮಾದರಿಗಳನ್ನು ಪರಿಗಣಿಸಿ ಧ್ಯಾನಮಾಡುವುದು ದೈವಪ್ರೇರಿತವಾಗಿರುವ ಈ ಕೀರ್ತನೆಯ ಕಡೆಗಿರುವ ನಮ್ಮ ಗಣ್ಯತೆಯನ್ನು ಮತ್ತು ದೇವರ ಲಿಖಿತ ವಾಕ್ಯವಾದ ಬೈಬಲಿನ ಕಡೆಗಿರುವ ನಮ್ಮ ಕೃತಜ್ಞತೆಯನ್ನು ಹೆಚ್ಚಿಸುವುದು.
ದೇವರ ವಾಕ್ಯಕ್ಕೆ ವಿಧೇಯರಾಗಿ, ಸಂತೋಷವಾಗಿರಿ
3 ದೇವರ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು ನಾವು ಅನುಸರಿಸಿ ನಡೆಯುವುದಾದರೆ ನಮಗೆ ನಿಜ ಸಂತೋಷವು ಸಿಗುವುದು. (ಕೀರ್ತನೆ 119:1-8) ನಾವು ಹೀಗೆ ಮಾಡುವುದಾದರೆ, ಯೆಹೋವನು ನಮ್ಮನ್ನು “ಸದಾಚಾರಿಗಳಾಗಿ ನಡೆಯುವವರು” ಎಂದು ಪರಿಗಣಿಸುವನು. (ಕೀರ್ತನೆ 119:1) ಸದಾಚಾರಿಗಳು ಎಂಬುದು ನಾವು ಪರಿಪೂರ್ಣರೆಂಬುದನ್ನು ಅರ್ಥೈಸುವುದಿಲ್ಲ, ಬದಲಾಗಿ ನಾವು ಯೆಹೋವ ದೇವರ ಚಿತ್ತವನ್ನು ಮಾಡುವುದಕ್ಕೆ ಹೆಣಗಾಡುತ್ತೇವೆ ಎಂಬುದನ್ನು ಸೂಚಿಸುತ್ತದೆ. ನೋಹನು ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುತ್ತಾ,’ “ತನ್ನ ಕಾಲದವರಲ್ಲಿ ತಪ್ಪಿಲ್ಲದ” ವ್ಯಕ್ತಿಯನ್ನಾಗಿ ಅಥವಾ ಸದಾಚಾರಿಯಾಗಿ ತನ್ನನ್ನು ರುಜುಪಡಿಸಿ ತೋರಿಸಿದನು. ಈ ನಂಬಿಗಸ್ತ ಮೂಲಪಿತನು ಯೆಹೋವನಿಂದ ನಿರ್ದೇಶಿಸಲ್ಪಟ್ಟ ಜೀವನಮಾರ್ಗವನ್ನು ಅನುಸರಿಸಿದ್ದರಿಂದ ಅವನು ಮತ್ತು ಅವನ ಕುಟುಂಬವು ಜಲಪ್ರಳಯವನ್ನು ಪಾರಾಯಿತು. (ಆದಿಕಾಂಡ 6:9; 1 ಪೇತ್ರ 3:20) ತದ್ರೀತಿಯಲ್ಲಿ, ನಾವು ‘ದೇವರ ನೇಮಗಳನ್ನು ಜಾಗರೂಕತೆಯಿಂದ ಕೈಕೊಂಡು ನಡೆಯುತ್ತಾ’ ಆತನ ಚಿತ್ತವನ್ನು ಮಾಡುವುದಾದರೆ ಈ ಲೋಕವು ಅಂತ್ಯಗೊಳ್ಳುವಾಗ ರಕ್ಷಣೆಯನ್ನು ಹೊಂದುವೆವು.—ಕೀರ್ತನೆ 119:4.
4 ನಾವು ಯೆಹೋವನನ್ನು ‘ಯಥಾರ್ಥಹೃದಯದಿಂದ ಕೊಂಡಾಡುವುದಾದರೆ ಮತ್ತು ಆತನ ನಿಬಂಧನೆಗಳನ್ನು ಅನುಸರಿಸುತ್ತಾ’ ನಡೆಯುವುದಾದರೆ ಆತನು ನಮ್ಮನ್ನು ಎಂದಿಗೂ ಕೈಬಿಡನು. (ಕೀರ್ತನೆ 119:7, 8) ‘ಧರ್ಮಶಾಸ್ತ್ರದಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡೆಯಲು ಸಾಧ್ಯವಾಗುವಂತೆ ಅದನ್ನು ಹಗಲಿರುಳು’ ಓದಬೇಕು ಎಂಬ ಬುದ್ಧಿವಾದಕ್ಕೆ ಅನುಸಾರವಾಗಿ ಕ್ರಿಯೆಗೈದ ಇಸ್ರಾಯೇಲ್ಯರ ನಾಯಕನಾದ ಯೆಹೋಶುವನನ್ನು ದೇವರು ಕೈಬಿಡಲಿಲ್ಲ. ಇದು ಅವನಿಗೆ ಯಶಸ್ಸನ್ನು ಪಡೆಯುವಂತೆ ಮತ್ತು ವಿವೇಕದಿಂದ ವರ್ತಿಸುವಂತೆ ಸಾಧ್ಯಮಾಡಿತು. (ಯೆಹೋಶುವ 1:8) ತನ್ನ ಆಯುಷ್ಕಾಲದ ಕೊನೆಯಲ್ಲಿಯೂ ಯೆಹೋಶುವನು ದೇವರನ್ನು ಕೊಂಡಾಡುತ್ತಾ ಇದ್ದನು ಮತ್ತು ಇಸ್ರಾಯೇಲ್ಯರಿಗೆ ಇದನ್ನು ಜ್ಞಾಪಿಸಿದನು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:14) ಯೆಹೋಶುವನ ಮತ್ತು ಕೀರ್ತನೆ 119ರ ಬರಹಗಾರನ ವಿಷಯದಲ್ಲಿ ಸತ್ಯವಾಗಿದ್ದಂತೆ, ನಾವು ಯೆಹೋವನನ್ನು ಸ್ತುತಿಸುವುದರ ಮೂಲಕ ಮತ್ತು ಆತನ ವಾಕ್ಯದಲ್ಲಿ ಭರವಸವಿಡುವುದರ ಮೂಲಕ ಸಂತೋಷ ಹಾಗೂ ಯಶಸ್ವಿಯನ್ನು ಪಡೆದುಕೊಳ್ಳಬಲ್ಲೆವು.
ಯೆಹೋವನ ವಾಕ್ಯವು ನಮ್ಮನ್ನು ಶುದ್ಧರನ್ನಾಗಿ ಇರಿಸುತ್ತದೆ
5 ನಾವು ದೇವರ ವಾಕ್ಯವನ್ನು ಗಮನಿಸಿ ನಡೆಯುವುದಾದರೆ ಆಧ್ಯಾತ್ಮಿಕವಾಗಿ ಶುದ್ಧರಾಗಿ ಇರಬಲ್ಲೆವು. (ಕೀರ್ತನೆ 119:9-16) ಒಂದುವೇಳೆ ನಮ್ಮ ಹೆತ್ತವರು ಒಳ್ಳೇ ಮಾದರಿಯನ್ನು ಇಟ್ಟಿಲ್ಲವಾದರೂ ನಾವು ಆಧ್ಯಾತ್ಮಿಕವಾಗಿ ಶುದ್ಧರಾಗಿರಬಲ್ಲೆವು. ಹಿಜ್ಕೀಯನ ತಂದೆಯು ವಿಗ್ರಹಾರಾಧಕನಾಗಿದ್ದರೂ, ಹಿಜ್ಕೀಯನು ತನ್ನ ‘ನಡತೆಯನ್ನು ಶುದ್ಧಪಡಿಸಿಕೊಂಡನು,’ ಬಹುಶಃ ವಿಧರ್ಮಿ ಪ್ರಭಾವವನ್ನು ದೂರವಿಟ್ಟದ್ದಕ್ಕೆ ಇದನ್ನು ಸೂಚಿಸಬಹುದು. ಇಂದು ದೇವರನ್ನು ಸೇವಿಸುತ್ತಿರುವ ಒಬ್ಬ ಯುವಕನು ಗಂಭೀರವಾದ ಪಾಪವನ್ನು ಮಾಡುವುದಾದರೆ ಆಗೇನು? ಪಶ್ಚಾತ್ತಾಪ, ಪ್ರಾರ್ಥನೆ, ಹೆತ್ತವರ ಸಹಾಯ ಮತ್ತು ಕ್ರೈಸ್ತ ಹಿರಿಯರ ಪ್ರೀತಿಭರಿತ ನೆರವು ಹಿಜ್ಕೀಯನಂತೆ ಇದ್ದು ತನ್ನ ‘ನಡತೆಯನ್ನು ಶುದ್ಧಪಡಿಸಿಕೊಂಡು ಗಮನಿಸಿ ನಡೆಯುವಂತೆ’ ಅವನಿಗೆ ಸಹಾಯಮಾಡಬಲ್ಲದು.—ಯಾಕೋಬ 5:13-15.
6 ರಾಹಾಬಳು ಮತ್ತು ರೂತಳು ಕೀರ್ತನೆ 119 ರಚಿಸಲ್ಪಡುವುದಕ್ಕಿಂತ ಎಷ್ಟೋ ಕಾಲದ ಹಿಂದೆ ಜೀವಿಸಿದ್ದರೂ, ಅವರು ತಮ್ಮ ‘ನಡತೆಯನ್ನು ಶುದ್ಧಪಡಿಸಿಕೊಂಡರು.’ ರಾಹಾಬಳು ಒಬ್ಬ ಕಾನಾನ್ಯ ವೇಶ್ಯೆಯಾಗಿದ್ದಳು, ಆದರೆ ಯೆಹೋವನ ಆರಾಧಕಳಾಗಿ ಅವಳು ತೋರಿಸಿದ ನಂಬಿಕೆಗಾಗಿ ಅವಳು ಹೇಸರುವಾಸಿಯಾದಳು. (ಇಬ್ರಿಯ 11:30, 31) ಮೋವಾಬ್ಯ ಸ್ತ್ರೀಯಾದ ರೂತಳು ತನ್ನ ದೇವರುಗಳನ್ನು ಬಿಟ್ಟು, ಯೆಹೋವನನ್ನು ಸೇವಿಸಿ, ಆತನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರಕ್ಕೆ ವಿಧೇಯಳಾದಳು. (ರೂತಳು 1:14-17; 4:9-13) ಇಸ್ರಾಯೇಲ್ಯರಲ್ಲದ ಈ ಇಬ್ಬರು ಸ್ತ್ರೀಯರು ‘ದೇವರ ವಾಕ್ಯವನ್ನು ಗಮನಿಸಿ ನಡೆಯುವವರಾಗಿದ್ದರು’ ಮತ್ತು ಯೇಸು ಕ್ರಿಸ್ತನ ಪೂರ್ವಜರಾಗುವ ಅದ್ಭುತಕರ ಸುಯೋಗವನ್ನು ಪಡೆದುಕೊಂಡರು.—ಮತ್ತಾಯ 1:1, 4-6.
7 “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಆಗಿರುವುದಾದರೂ ಯುವ ಜನರು ಒಂದು ಶುದ್ಧ ಮಾರ್ಗವನ್ನು ಬೆನ್ನಟ್ಟಬಲ್ಲರು. ಮತ್ತು ಇದು, ಸೈತಾನನ ನಿಯಂತ್ರಣದ ಕೆಳಗಿರುವ ಈ ಭ್ರಷ್ಟ ಲೋಕದಲ್ಲೂ ಸಾಧ್ಯವಿದೆ. (ಆದಿಕಾಂಡ 8:21; 1 ಯೋಹಾನ 5:19) ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದ ದಾನಿಯೇಲ ಮತ್ತು ಇತರ ಮೂರು ಮಂದಿ ಯುವಕರು ‘ದೇವರ ವಾಕ್ಯವನ್ನು ಗಮನಿಸಿ ನಡೆಯುವವರಾಗಿದ್ದರು.’ ಉದಾಹರಣೆಗೆ, ಅವರು ‘ರಾಜನ ಭೋಜನಪದಾರ್ಥಗಳಿಂದ’ ತಮ್ಮನ್ನು ಅಶುದ್ಧಮಾಡಿಕೊಳ್ಳಲು ಬಯಸಲಿಲ್ಲ. (ದಾನಿಯೇಲ 1:6-10) ಬಾಬೆಲಿನವರು ಮೋಶೆಯ ಧರ್ಮಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಟಿದ್ದ ಅಶುದ್ಧ ಪ್ರಾಣಿಗಳನ್ನು ತಿನ್ನುತ್ತಿದ್ದರು. (ಯಾಜಕಕಾಂಡ 11:1-31; 20:24-26) ಅವರು ಆಹಾರಕ್ಕಾಗಿ ಕೊಲ್ಲುತ್ತಿದ್ದ ಪ್ರಾಣಿಗಳ ರಕ್ತವನ್ನು ಎಲ್ಲಾ ಸಮಯದಲ್ಲೂ ಹರಿದುಹೋಗುವಂತೆ ಮಾಡುತ್ತಿರಲಿಲ್ಲ. ಮತ್ತು ರಕ್ತದೊಂದಿಗೆ ಕೂಡಿರುವ ಮಾಂಸವನ್ನು ತಿನ್ನುವುದು ರಕ್ತದ ವಿಷಯದಲ್ಲಿದ್ದ ದೇವರ ನಿಯಮವನ್ನು ಉಲ್ಲಂಘಿಸುವುದಾಗಿತ್ತು. (ಆದಿಕಾಂಡ 9:3, 4) ಆದುದರಿಂದ ಆ ನಾಲ್ಕು ಇಬ್ರಿಯರು ರಾಜನ ಭೋಜನಪದಾರ್ಥಗಳನ್ನು ತಿನ್ನದೇ ಇದ್ದದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ! ದೈವಭಕ್ತಿಯುಳ್ಳ ಆ ಯುವಕರು ತಮ್ಮ ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿಕೊಂಡರು ಮತ್ತು ಹೀಗೆ ಒಂದು ಉತ್ತಮ ಮಾದರಿಯನ್ನಿಟ್ಟರು.
ದೇವರ ವಾಕ್ಯವು ನಮ್ಮ ನಂಬಿಗಸ್ತಿಕೆಗೆ ಒಂದು ಸಹಾಯಕವಾಗಿದೆ
8 ಯೆಹೋವನ ಕಡೆಗಿರುವ ನಮ್ಮ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುವುದರಲ್ಲಿ ದೇವರ ವಾಕ್ಯದ ವಿಷಯದಲ್ಲಿ ನಮಗಿರುವ ಆನಂದವು ಒಂದು ಪ್ರಮುಖ ಅಂಶವಾಗಿದೆ. (ಕೀರ್ತನೆ 119:17-24) ನಾವು ಪ್ರೇರಿತ ಕೀರ್ತನೆಗಾರನಂತೆ ಇರುವುದಾದರೆ, ದೇವರ ಧರ್ಮಶಾಸ್ತ್ರದಲ್ಲಿರುವ ಅಥವಾ ನಿಯಮದಲ್ಲಿರುವ ‘ಅದ್ಭುತಕರ ವಿಷಯಗಳನ್ನು’ ಅರ್ಥಮಾಡಿಕೊಳ್ಳುವ ತೀವ್ರ ಅಭಿಲಾಷೆಯು ನಮ್ಮಲ್ಲಿರುವುದು. ನಾವು ‘ಯೆಹೋವನ ವಿಧಿಗಳಿಗಾಗಿ ಯಾವಾಗಲೂ ಹಂಬಲಿಸುತ್ತಿರುವೆವು’ ಮತ್ತು ‘ಆತನ [ಮರುಜ್ಞಾಪನಗಳು] ನಮ್ಮ ಆನಂದವಾಗಿರುವವು.’ (ಕೀರ್ತನೆ 119:18, 20, 24) ನಾವು ನಮ್ಮನ್ನು ಇತ್ತೀಚೆಗಷ್ಟೇ ಯೆಹೋವನಿಗೆ ಸಮರ್ಪಿಸಿಕೊಂಡಿರುವುದಾದರೆ, ವಾಕ್ಯವೆಂಬ ‘ಶುದ್ಧ ಹಾಲಿಗಾಗಿ ಬಯಕೆಯನ್ನು’ ಬೆಳೆಸಿಕೊಂಡಿದ್ದೇವೋ? (1 ಪೇತ್ರ 2:1, 2) ನಾವು ದೇವರ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು ಅರ್ಥಮಾಡಿಕೊಂಡು ಅನ್ವಯಿಸಲು ಸಾಧ್ಯವಾಗಬೇಕಾದರೆ ಮೊದಲು ಬೈಬಲಿನ ಮೂಲಭೂತ ಬೋಧನೆಗಳನ್ನು ತಿಳಿದುಕೊಳ್ಳಬೇಕು.
9 ದೇವರ ಮರುಜ್ಞಾಪನಗಳು ನಮಗೆ ಆನಂದಕರವಾಗಿರಬಹುದು, ಆದರೆ ಯಾವುದೇ ಕಾರಣಕ್ಕಾಗಿ “ಪ್ರಭುಗಳು” ನಮ್ಮ ವಿರುದ್ಧವಾಗಿ ಮಾತಾಡುವುದಾದರೆ ಆಗೇನು? (ಕೀರ್ತನೆ 119:23, 24) ಇಂದು, ಅಧಿಕಾರದ ಸ್ಥಾನಗಳಲ್ಲಿರುವವರು ದೇವರ ನಿಯಮಕ್ಕಿಂತ ಮಾನವನ ನಿಯಮಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡುವಂತೆ ನಮ್ಮನ್ನು ಅನೇಕವೇಳೆ ಒತ್ತಾಯಪಡಿಸಲು ಪ್ರಯತ್ನಿಸುತ್ತಾರೆ. ಮನುಷ್ಯನು ತಗಾದೆಮಾಡುವ ವಿಷಯಗಳು ಮತ್ತು ದೇವರ ಚಿತ್ತದ ಮಧ್ಯೆ ಘರ್ಷಣೆ ಉಂಟಾಗುವಾಗ, ನಾವೇನು ಮಾಡುವೆವು? ದೇವರ ವಾಕ್ಯದ ವಿಷಯದಲ್ಲಿ ನಮಗಿರುವ ಆನಂದವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ನಮಗೆ ಸಹಾಯಮಾಡುವುದು. ಯೇಸು ಕ್ರಿಸ್ತನ ಹಿಂಸೆಗೊಳಪಡಿಸಲ್ಪಟ್ಟ ಅಪೊಸ್ತಲರಂತೆ, ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’ ಎಂದು ಹೇಳುವೆವು.—ಅ. ಕೃತ್ಯಗಳು 5:29.
10 ಅತಿ ಕಷ್ಟಕರ ಪರಿಸ್ಥಿತಿಗಳ ಕೆಳಗೂ ನಾವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಬಲ್ಲೆವು. (ಕೀರ್ತನೆ 119:25-32) ದೇವರಿಗೆ ತೋರಿಸುವ ಸಮಗ್ರತೆಯಲ್ಲಿ ನಾವು ಯಶಸ್ಸನ್ನು ಕಾಣಬೇಕಾದರೆ, ಉಪದೇಶಕ್ಕೆ ಕಿವಿಗೊಡುವವರಾಗಿರಬೇಕು ಮತ್ತು ಆತನ ಬೋಧನೆಗಾಗಿ ಅತ್ಯುತ್ಸಾಹದಿಂದ ಪ್ರಾರ್ಥಿಸಬೇಕು. “ನಂಬಿಗಸ್ತಿಕೆಯ ಮಾರ್ಗವನ್ನು” (NW) ಸಹ ಆರಿಸಿಕೊಳ್ಳಬೇಕು.—ಕೀರ್ತನೆ 119:26, 30.
11 ಕೀರ್ತನೆ 119ನ್ನು ಬರೆದಿರಬಹುದಾದ ಹಿಜ್ಕೀಯನು, “ನಂಬಿಗಸ್ತಿಕೆಯ ಮಾರ್ಗವನ್ನು” ಆರಿಸಿಕೊಂಡನು. ಇದನ್ನು ಅವನು, ಸುಳ್ಳಾರಾಧಕರಿಂದ ಸುತ್ತುವರಿಯಲ್ಪಟ್ಟಿದ್ದರೂ ಮತ್ತು ರಾಜನ ಆಸ್ಥಾನದವರಿಂದ ಅಪಹಾಸ್ಯಮಾಡಲ್ಪಟ್ಟಿರಬಹುದಾದರೂ ಮಾಡಿದನು. ಇಂತಹ ಪರಿಸ್ಥಿತಿಗಳ ದೆಸೆಯಿಂದ, ಅವನು “ಮನೋವ್ಯಥೆಯಿಂದ ಕಣ್ಣೀರು” ಸುರಿಸಿರುವುದು ಹೆಚ್ಚು ಸಂಭವನೀಯ. (ಕೀರ್ತನೆ 119:28) ಆದರೆ ಹಿಜ್ಕೀಯನು ದೇವರಲ್ಲಿ ಭರವಸವಿಟ್ಟನು, ಒಳ್ಳೆಯ ರಾಜನಾಗಿದ್ದನು ಮತ್ತು “ಯೆಹೋವನು ಯೋಗ್ಯವೆಂದು ಹೇಳಿದ್ದನ್ನು ಮಾಡಿದನು.” (ಪರಿಶುದ್ಧ ಬೈಬಲ್b) (2 ಅರಸುಗಳು 18:1-5) ದೇವರ ಮೇಲೆ ಅವಲಂಬಿಸುತ್ತಾ, ಸಮಗ್ರತಾ ಪಾಲಕರಾದ ನಾವು ಕೂಡ ಪರೀಕ್ಷೆಗಳನ್ನು ತಾಳಿಕೊಳ್ಳಬಲ್ಲೆವು.—ಯಾಕೋಬ 1:5-8.
ಯೆಹೋವನ ವಾಕ್ಯವು ಧೈರ್ಯ ತುಂಬಿಸುತ್ತದೆ
12 ದೇವರ ವಾಕ್ಯದ ಮಾರ್ಗದರ್ಶನವನ್ನು ಅನುಸರಿಸುವಾಗ ನಮಗೆ ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ನಿಭಾಯಿಸಲು ಧೈರ್ಯವು ಸಿಗುತ್ತದೆ. (ಕೀರ್ತನೆ 119:33-40) ನಾವು ಯೆಹೋವನ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು “ಪೂರ್ಣಮನಸ್ಸಿನಿಂದ” ಕೈಕೊಂಡು ನಡೆಯಲು ಸಾಧ್ಯವಾಗುವಂತೆ ಆತನ ಬೋಧನೆಗಾಗಿ ದೀನತೆಯಿಂದ ಹುಡುಕುತ್ತೇವೆ. (ಕೀರ್ತನೆ 119:33, 34) ನಾವು ಕೀರ್ತನೆಗಾರನಂತೆ, “ಸ್ವಾರ್ಥದ ಲಾಭಗಳ” ಕಡೆಗೆ, ಅಂದರೆ ಅಯೋಗ್ಯವಾದ ಲಾಭಗಳ ಕಡೆಗಲ್ಲ, ಬದಲಾಗಿ ‘ನಿನ್ನ [ಮರುಜ್ಞಾಪನಗಳ] ಕಡೆಗೆ ನನ್ನ ಹೃದಯವನ್ನು ತಿರುಗಿಸು’ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ. (ಕೀರ್ತನೆ 119:36, NIBV) ಮತ್ತು ಅಪೊಸ್ತಲ ಪೌಲನಂತೆ ನಾವು “ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ” ನಡೆದುಕೊಳ್ಳುತ್ತೇವೆ. (ಇಬ್ರಿಯ 13:18) ಅಪ್ರಾಮಾಣಿಕವಾದ ಒಂದು ವಿಷಯವನ್ನು ಮಾಡುವಂತೆ ನಮ್ಮ ಧಣಿಯು ಕೇಳಿಕೊಳ್ಳುವುದಾದರೆ, ನಾವು ದೇವರ ನಿರ್ದೇಶನಗಳಿಗೆ ಅಂಟಿಕೊಳ್ಳಲಿಕ್ಕಾಗಿ ಧೈರ್ಯವನ್ನು ತಂದುಕೊಳ್ಳುತ್ತೇವೆ ಮತ್ತು ಇಂಥ ಕ್ರಮವನ್ನು ಯೆಹೋವನು ಯಾವಾಗಲೂ ಆಶೀರ್ವದಿಸುತ್ತಾನೆ. ವಾಸ್ತವದಲ್ಲಿ, ಎಲ್ಲಾ ಕೆಟ್ಟ ಪ್ರಭಾವಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಆತನು ನಮಗೆ ಸಹಾಯಮಾಡುತ್ತಾನೆ. ಆದುದರಿಂದ ನಾವು ಹೀಗೆ ಪ್ರಾರ್ಥಿಸೋಣ: “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು.” (ಕೀರ್ತನೆ 119:37) ದೇವರಿಂದ ಹಗೆಮಾಡಲ್ಪಡುವ ಯಾವುದೇ ವ್ಯರ್ಥಕಾರ್ಯದ ಮೇಲೆ ದೃಷ್ಟಿಯಿಟ್ಟು ಅದನ್ನು ಆಸ್ವಾದಿಸಲು ನಾವು ಬಯಸುವುದಿಲ್ಲ. (ಕೀರ್ತನೆ 97:10) ಈ ಪ್ರಾರ್ಥನೆಯು ಬೇರೆಲ್ಲಾ ವಿಷಯಗಳೊಂದಿಗೆ, ಅಶ್ಲೀಲ ಸಾಹಿತ್ಯ ಮತ್ತು ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಆಚರಣೆಗಳನ್ನು ತ್ಯಜಿಸುವಂತೆ ನಮಗೆ ಸಹಾಯಮಾಡುವುದು.—1 ಕೊರಿಂಥ 6:9, 10; ಪ್ರಕಟನೆ 21:8.
13 ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ಧೈರ್ಯದಿಂದ ಸಾಕ್ಷಿಕೊಡುವಂತೆ ನಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. (ಕೀರ್ತನೆ 119:41-48) ಮತ್ತು ‘ನಮ್ಮನ್ನು ನಿಂದಿಸುವವನಿಗೆ ಉತ್ತರಕೊಡಲು’ ನಮಗೆ ಖಂಡಿತವಾಗಿಯೂ ಧೈರ್ಯದ ಅಗತ್ಯವಿದೆ. (ಕೀರ್ತನೆ 119:42) ಕೆಲವೊಮ್ಮೆ, ಯೇಸುವಿನ ಹಿಂಸೆಗೊಳಪಡಿಸಲ್ಪಟ್ಟ ಶಿಷ್ಯರಂತೆ ನಾವಿರಬಹುದು. ಅವರು ಪ್ರಾರ್ಥಿಸಿದ್ದು: “[ಯೆಹೋವನೇ], . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು.” ಇದರ ಫಲಿತಾಂಶವೇನಾಗಿತ್ತು? “ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.” ಪರಮಾಧಿಕಾರಿ ಕರ್ತನು ಆತನ ವಾಕ್ಯವನ್ನು ಧೈರ್ಯದಿಂದ ಹೇಳಲಾಗುವಂತೆ ನಮಗೂ ಧೀರತೆಯನ್ನು ಕೊಡುತ್ತಾನೆ.—ಅ. ಕೃತ್ಯಗಳು 4:24-31.
14 ನಾವು “ಸತ್ಯ ವಾಕ್ಯವನ್ನು” ಪ್ರಾಮುಖ್ಯವಾದದ್ದೆಂದು ಪರಿಗಣಿಸಿ ಅದನ್ನು ಅನ್ವಯಿಸಲು ಪ್ರಯತ್ನಿಸುವುದಾದರೆ ಮತ್ತು ‘ದೇವರ ಧರ್ಮಶಾಸ್ತ್ರವನ್ನು’ ಅಥವಾ ನಿಯಮವನ್ನು ‘ಸದಾ ತಪ್ಪದೆ ಕೈಕೊಳ್ಳುವುದಾದರೆ’ ಸಂಕೋಚಪಡದೆ ಧೈರ್ಯದಿಂದ ಸಾಕ್ಷಿಕೊಡಲು ನಮ್ಮಿಂದ ಸಾಧ್ಯವಿರುವುದು. (ಕೀರ್ತನೆ 119:43, 44) ದೇವರ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನವು ‘ಅರಸುಗಳ ಮುಂದೆ ಆತನ [ಮರುಜ್ಞಾಪನಗಳ] ವಿಷಯ ಮಾತಾಡುವಂತೆ’ ನಮಗೆ ಸಾಧ್ಯಗೊಳಿಸುವುದು. (ಕೀರ್ತನೆ 119:46) ಪ್ರಾರ್ಥನೆ ಮತ್ತು ದೇವರಾತ್ಮವು ಸಹ ಸರಿಯಾದ ವಿಷಯಗಳನ್ನು ಯೋಗ್ಯವಾದ ರೀತಿಯಲ್ಲಿ ಹೇಳುವಂತೆ ನಮಗೆ ಸಹಾಯಮಾಡುವುದು. (ಮತ್ತಾಯ 10:16-20; ಕೊಲೊಸ್ಸೆ 4:6) ಪೌಲನು ಧೈರ್ಯದಿಂದ ದೇವರ ಮರುಜ್ಞಾಪನಗಳ ಕುರಿತು ಪ್ರಥಮ ಶತಮಾನದ ಅಧಿಕಾರಿಗಳ ಮುಂದೆ ಮಾತಾಡಿದನು. ಉದಾಹರಣೆಗೆ, ರೋಮನ್ ದೇಶಾಧಿಪತಿಯಾದ ಫೇಲಿಕ್ಸನಿಗೆ ಪೌಲನು “ಕ್ರಿಸ್ತಯೇಸುವಿನಲ್ಲಿಡತಕ್ಕ ನಂಬಿಕೆಯ ವಿಷಯವಾಗಿ” ಸಾಕ್ಷಿಕೊಟ್ಟನು. (ಅ. ಕೃತ್ಯಗಳು 24:24, 25) ಮತ್ತು ದೇಶಾಧಿಪತಿಯಾದ ಫೆಸ್ತ ಹಾಗೂ ಅಗ್ರಿಪ್ಪರಾಜನ ಮುಂದೆಯೂ ಅವನು ಸಾಕ್ಷಿಕೊಟ್ಟನು. (ಅ. ಕೃತ್ಯಗಳು 25:22-26:32) ಯೆಹೋವನ ಬೆಂಬಲದಿಂದ ನಾವು ಕೂಡ ‘ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳದ’ ಧೀರ ಸಾಕ್ಷಿಗಳಾಗಿರಬಲ್ಲೆವು.—ರೋಮಾಪುರ 1:15.
ದೇವರ ವಾಕ್ಯವು ನಮಗೆ ಸಾಂತ್ವನವನ್ನು ಕೊಡುತ್ತದೆ
15 ಯೆಹೋವನ ವಾಕ್ಯವು ಕೊಡುವ ಸಾಂತ್ವನಕ್ಕೆ ಮಿತಿಯೇ ಇಲ್ಲ. (ಕೀರ್ತನೆ 119:49-56) ನಮಗೆ ಸಾಂತ್ವನವು ಅತ್ಯಗತ್ಯವಾಗಿರುವ ಸಂದರ್ಭಗಳು ಏಳುವದುಂಟು. ನಾವು ಯೆಹೋವನ ಸಾಕ್ಷಿಗಳಾಗಿ ಧೈರ್ಯದಿಂದ ಮಾತಾಡುವುದಾದರೂ, ದೇವರ ವಿರುದ್ಧವಾಗಿ ಗರ್ವದಿಂದ ವರ್ತಿಸುವ “ಗರ್ವಿಷ್ಠರು” ಕೆಲವೊಮ್ಮೆ ‘ನಮ್ಮನ್ನು ಬಹಳವಾಗಿ ಹಾಸ್ಯಮಾಡುವದುಂಟು.’ (ಕೀರ್ತನೆ 119:51) ಆದರೂ, ನಾವು ಪ್ರಾರ್ಥಿಸುವಾಗ ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಸಕಾರಾತ್ಮಕ ವಿಷಯಗಳು ನಮ್ಮ ನೆನಪಿಗೆ ಬರಬಹುದು, ಮತ್ತು ಈ ರೀತಿಯಲ್ಲಿ ನಾವು ‘ನಮ್ಮನ್ನೇ ಸಂತೈಸಿಕೊಳ್ಳುತ್ತೇವೆ.’ (ಕೀರ್ತನೆ 119:52) ನಾವು ದೇವರಲ್ಲಿ ಬಿನ್ನೈಸುತ್ತಿರುವಾಗ, ಒಂದು ಒತ್ತಡಭರಿತ ಸನ್ನಿವೇಶದಲ್ಲಿ ನಮಗೆ ಆವಶ್ಯಕವಾಗಿರುವ ಸಾಂತ್ವನ ಮತ್ತು ಧೈರ್ಯವನ್ನು ನೀಡುವ ಒಂದು ಶಾಸ್ತ್ರೀಯ ನಿಯಮ ಅಥವಾ ಮೂಲತತ್ತ್ವವು ನಮ್ಮ ನೆನಪಿಗೆ ಬರಬಹುದು.
16 ಕೀರ್ತನೆಗಾರನನ್ನು ಹಾಸ್ಯಮಾಡಿದ ಗರ್ವಿಷ್ಠರು, ದೇವರಿಗೆ ಸಮರ್ಪಿತರಾಗಿದ್ದ ಜನಾಂಗದ ಸದಸ್ಯರೇ ಅಂದರೆ ಇಸ್ರಾಯೇಲ್ಯರೇ ಆಗಿದ್ದರು. ಅದೆಷ್ಟು ಶೋಚನೀಯ! ಆದರೆ ಅವರಂತಿರದೆ, ದೇವರ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು ಎಂದಿಗೂ ಬಿಡದೇ ಇರುವ ದೃಢನಿರ್ಣಯವನ್ನು ನಾವು ಮಾಡೋಣ. (ಕೀರ್ತನೆ 119:51) ನಾಸಿ ಹಿಂಸೆ ಮತ್ತು ತದ್ರೀತಿಯ ಉಪಚಾರವನ್ನು ಇದುವರೆಗೆ ಎದುರಿಸಿರುವ ಸಾವಿರಾರು ಮಂದಿ ಯೆಹೋವನ ಸೇವಕರು, ದೇವರ ವಾಕ್ಯದಲ್ಲಿ ಕಂಡುಬರುವ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಬಿಟ್ಟುಬಿಡಲು ಮನಸ್ಸುಮಾಡಿರುವುದಿಲ್ಲ. (ಯೋಹಾನ 15:18-21) ಮತ್ತು ಯೆಹೋವನಿಗೆ ವಿಧೇಯರಾಗುವುದು ನಮಗೂ ಒಂದು ಹೊರೆಯಂತಿರುವುದಿಲ್ಲ. ಏಕೆಂದರೆ ಆತನ ನಿಬಂಧನೆಗಳು ನಮ್ಮನ್ನು ಸಂತೈಸುವ ಮಧುರ ಗಾಯನದಂತೆ ಇವೆ.—ಕೀರ್ತನೆ 119:54; 1 ಯೋಹಾನ 5:3.
ಯೆಹೋವನ ವಾಕ್ಯಕ್ಕಾಗಿ ಆಭಾರಿಗಳಾಗಿರುವುದು
17 ನಾವು ದೇವರ ವಾಕ್ಯಕ್ಕೆ ಅನುಗುಣವಾಗಿ ಕ್ರಿಯೆಗೈಯುವ ಮೂಲಕ ಅದರ ಕಡೆಗಿರುವ ನಮ್ಮ ಕೃತಜ್ಞತೆಯನ್ನು ತೋರಿಸುತ್ತೇವೆ. (ಕೀರ್ತನೆ 119:57-64) “ನಿನ್ನ ವಾಕ್ಯಗಳನ್ನು ಕೈಕೊಳ್ಳುವೆನೆಂದು ನಿರ್ಣಯಿಸಿಕೊಂಡಿದ್ದೇನೆ” ಎಂದು ಕೀರ್ತನೆಗಾರನು ಹೇಳಿದನು, ಮತ್ತು ‘ದೇವರ ನೀತಿವಿಧಿಗಳಿಗೋಸ್ಕರ ಆತನನ್ನು ಕೊಂಡಾಡಲು ಮಧ್ಯರಾತ್ರಿಯಲ್ಲಿ ಅವನು ಏಳುತ್ತಿದ್ದನು.’ ನಾವು ಒಂದುವೇಳೆ ರಾತ್ರಿವೇಳೆಯಲ್ಲಿ ಏಳುವುದಾದರೆ, ದೇವರಿಗೆ ಪ್ರಾರ್ಥನೆಯಲ್ಲಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅದೆಂತಹ ಉತ್ತಮ ಸಂದರ್ಭವಾಗಿರುವುದು! (ಕೀರ್ತನೆ 119:57, 62) ದೇವರ ವಾಕ್ಯದ ಕಡೆಗೆ ನಮಗಿರುವ ಗಣ್ಯತೆಯು ದೈವಿಕ ಬೋಧನೆಗಾಗಿ ಹುಡುಕುವಂತೆ ನಮ್ಮನ್ನು ಪ್ರೇರಿಸುವುದು ಮತ್ತು ನಮ್ಮನ್ನು ‘ದೇವರಲ್ಲಿ ಭಯಭಕ್ತಿಯುಳ್ಳವರ,’ ಅಂದರೆ ದೇವರಿಗಾಗಿ ಪೂಜ್ಯಭಾವನೆಯ ಭಕ್ತಿಯನ್ನು ಹೊಂದಿರುವವರ ಸಂತೋಷಭರಿತ ‘ಸಂಗಡಿಗರನ್ನಾಗಿ’ ಮಾಡುವುದು. (ಕೀರ್ತನೆ 119:63, 64) ಇದಕ್ಕಿಂತ ಉತ್ತಮವಾದ ಸಹವಾಸವು ನಮಗೆ ಎಲ್ಲಿ ತಾನೇ ಸಿಕ್ಕುವುದು?
18 ನಾವು ಪೂರ್ಣಮನಸ್ಸಿನಿಂದ ಪ್ರಾರ್ಥಿಸುವಾಗ ಮತ್ತು ನಮಗೆ ಬೋಧಿಸುವಂತೆ ಯೆಹೋವನಲ್ಲಿ ದೀನತೆಯಿಂದ ಕೇಳಿಕೊಳ್ಳುವಾಗ, ಆತನ ಪ್ರಸನ್ನತೆಯನ್ನು ಪಡೆದುಕೊಳ್ಳುವ ಸಲುವಾಗಿ ಆತನ ‘ದಯೆಯನ್ನು ಅಪೇಕ್ಷಿಸುತ್ತಿದ್ದೇವೆ.’ ವಿಶೇಷವಾಗಿ ‘ದುಷ್ಟರ ಪಾಶಗಳು ನಮ್ಮನ್ನು ಸುತ್ತಿಕೊಳ್ಳುವಾಗ’ ನಾವು ದೇವರ ಬಳಿ ಪ್ರಾರ್ಥಿಸಬೇಕು. (ಕೀರ್ತನೆ 119:58, 61) ಯೆಹೋವನು ಈ ವಿರೋಧಿಗಳ ಪಾಶಗಳನ್ನು ತೆಗೆದುಹಾಕಿ, ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ನಮ್ಮನ್ನು ಮುಕ್ತಮಾರ್ಗದಲ್ಲಿ ನಡೆಸಬಲ್ಲನು. (ಮತ್ತಾಯ 24:14; 28:19, 20) ನಮ್ಮ ಕೆಲಸವು ನಿಷೇಧಿಸಲ್ಪಟ್ಟಿರುವ ಅನೇಕ ದೇಶಗಳಲ್ಲಿ ಇದನ್ನು ಅನೇಕ ಬಾರಿ ಪ್ರತ್ಯಕ್ಷವಾಗಿ ನೋಡಲಾಗಿದೆ.
ದೇವರ ವಾಕ್ಯದಲ್ಲಿ ನಂಬಿಕೆಯಿರಲಿ
19 ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯಿಡುವುದು ಕಷ್ಟಾನುಭವವನ್ನು ತಾಳಿಕೊಂಡು ಆತನ ಚಿತ್ತವನ್ನು ಮಾಡುವಂತೆ ನಮಗೆ ಸಹಾಯಮಾಡುತ್ತದೆ. (ಕೀರ್ತನೆ 119:65-72) ಗರ್ವಿಷ್ಠರು ಕೀರ್ತನೆಗಾರನ ‘ವಿರೋಧವಾಗಿ ಸುಳ್ಳುಕಲ್ಪಿಸಿದ್ದರೂ,’ “ಕಷ್ಟಾನುಭವವು ಹಿತಕರವಾಯಿತು” ಎಂದು ಅವನು ಹಾಡಿದನು. (ಕೀರ್ತನೆ 119:66, 69, 71) ಕಷ್ಟಾನುಭವದಲ್ಲಿ ಬಿದ್ದಿರುವ ಯಾವನೇ ಒಬ್ಬ ಯೆಹೋವನ ಸೇವಕನಿಗೆ ಹೇಗೆ ಹಿತಕರ ಭಾವನೆಯು ಉಂಟಾಗಬಲ್ಲದು?
20 ನಾವು ಕಷ್ಟಾನುಭವಿಸುವಾಗ, ಖಂಡಿತವಾಗಿಯೂ ಯೆಹೋವನಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುತ್ತೇವೆ, ಮತ್ತು ಹೀಗೆ ಪ್ರಾರ್ಥಿಸಿದಾಗ ಯೆಹೋವನ ಹತ್ತಿರಕ್ಕೆ ಸೆಳೆಯಲ್ಪಡುತ್ತೇವೆ. ನಾವು ದೇವರ ಲಿಖಿತ ವಾಕ್ಯವನ್ನು ಅಧ್ಯಯನ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯಬಹುದು ಮತ್ತು ಅದಕ್ಕೆ ತಕ್ಕ ಹಾಗೆ ಕ್ರಿಯೆಗೈಯಲು ಹೆಚ್ಚಿನ ಪ್ರಯತ್ನವನ್ನು ಹಾಕಬಹುದು. ಇದರ ಫಲವಾಗಿ ಜೀವನದಲ್ಲಿ ಹೆಚ್ಚಿನ ಸಂತೋಷವು ಲಭಿಸುತ್ತದೆ. ಆದರೆ ನಾವು ಕಷ್ಟಾನುಭವಕ್ಕೆ ಪ್ರತಿಕ್ರಿಯಿಸುವ ರೀತಿಯಿಂದ ನಮ್ಮಲ್ಲಿ ಕೆಲವು ಅಪ್ರಸನ್ನಕರವಾದ ಪ್ರವೃತ್ತಿಗಳು, ಅಂದರೆ ಅಸಹಿಷ್ಣುತೆ ಮತ್ತು ಅಹಂಭಾವವು ತೋರಿಕೊಳ್ಳುವುದಾದರೆ ಆಗೇನು? ಶ್ರದ್ಧಾಪೂರ್ವಕ ಪ್ರಾರ್ಥನೆ ಮತ್ತು ದೇವರ ವಾಕ್ಯ ಹಾಗೂ ಆತ್ಮದ ಸಹಾಯದೊಂದಿಗೆ, ನಾವು ಇಂತಹ ಲೋಪದೋಷಗಳನ್ನು ಜಯಿಸಿ ಹೆಚ್ಚು ಪೂರ್ಣವಾಗಿ ‘ನೂತನಸ್ವಭಾವವನ್ನು ಧರಿಸಿಕೊಳ್ಳಲು’ ಸಾಧ್ಯವಿದೆ. (ಕೊಲೊಸ್ಸೆ 3:9-14) ಮಾತ್ರವಲ್ಲದೆ, ನಾವು ಕಷ್ಟಸಂಕಟಗಳನ್ನು ತಾಳಿಕೊಳ್ಳುವಾಗ ನಮ್ಮ ನಂಬಿಕೆಯು ಬಲಪಡಿಸಲ್ಪಡುತ್ತದೆ. (1 ಪೇತ್ರ 1:6, 7) ಪೌಲನು ತನ್ನ ಸಂಕಟಗಳಿಂದ ಪ್ರಯೋಜನವನ್ನು ಪಡೆದುಕೊಂಡನು, ಏಕೆಂದರೆ ಅವು ಅವನನ್ನು ಯೆಹೋವನ ಮೇಲೆ ಹೆಚ್ಚು ಅವಲಂಬಿಸುವಂತೆ ಮಾಡಿದವು. (2 ಕೊರಿಂಥ 1:8-10) ಬಾಧೆಗಳು ನಮ್ಮ ಮೇಲೆ ಹಿತಕರ ಪ್ರಭಾವವನ್ನು ಬೀರುವಂತೆ ನಾವು ಅನುಮತಿಸುತ್ತೇವೋ?
ಯೆಹೋವನಲ್ಲಿ ಸದಾ ಭರವಸವುಳ್ಳವರಾಗಿರ್ರಿ
21 ಯೆಹೋವನಲ್ಲಿ ಭರವಸವಿಡಲು ಆತನ ವಾಕ್ಯವು ಸದೃಢವಾದ ಒಂದು ಆಧಾರವನ್ನು ಕೊಡುತ್ತದೆ. (ಕೀರ್ತನೆ 119:73-80) ನಾವು ನಿಜವಾಗಿಯೂ ನಮ್ಮ ಸೃಷ್ಟಿಕರ್ತನಲ್ಲಿ ಭರವಸವಿಡುವುದಾದರೆ, ನಾವು ಆಶಾಭಂಗಗೊಳ್ಳಲು ಯಾವುದೇ ಕಾರಣವಿರುವುದಿಲ್ಲ. ಆದರೆ ಇತರರು ಏನನ್ನು ಮಾಡುತ್ತಾರೋ ಅದರಿಂದಾಗಿ ನಮಗೆ ಸಮಾಧಾನ ಅಥವಾ ಸಾಂತ್ವನ ಬೇಕಾಗಿರುತ್ತದೆ ಮತ್ತು ಹೀಗೆ ಪ್ರಾರ್ಥಿಸುವಂತೆ ನಾವು ಪ್ರಚೋದಿಸಲ್ಪಡಬಹುದು: “ಗರ್ವಿಷ್ಠರು ಮಾನಭಂಗಹೊಂದಲಿ.” (ಕೀರ್ತನೆ 119:76-78) ಯೆಹೋವನು ಇಂಥವರನ್ನು ಮಾನಭಂಗಕ್ಕೊಳಪಡಿಸುವಾಗ, ಅವರ ದುಷ್ಟಮಾರ್ಗಗಳು ಬೈಲಾಗುವವು ಮತ್ತು ಆತನ ಪರಿಶುದ್ಧ ನಾಮವು ಪವಿತ್ರೀಕರಿಸಲ್ಪಡುವುದು. ದೇವರ ಜನರನ್ನು ಹಿಂಸಿಸುವವರು ಯಾವುದೇ ಲಾಭವನ್ನು ಪಡೆಯುವುದಿಲ್ಲ ಎಂಬ ಖಾತ್ರಿ ನಮಗಿರಬಲ್ಲದು. ಉದಾಹರಣೆಗೆ, ದೇವರಲ್ಲಿ ಪೂರ್ಣಮನಸ್ಸಿನಿಂದ ಭರವಸವಿಡುವ ಯೆಹೋವನ ಸಾಕ್ಷಿಗಳನ್ನು ಅವರು ನಿರ್ನಾಮಮಾಡಿಲ್ಲ—ಮುಂದಕ್ಕೂ ಇದು ಸಾಧ್ಯವಾಗದು.—ಜ್ಞಾನೋಕ್ತಿ 3:5, 6.
22 ನಾವು ಹಿಂಸೆಗೊಳಗಾಗುವಾಗ ದೇವರ ವಾಕ್ಯವು ಆತನಲ್ಲಿರುವ ನಮ್ಮ ಭರವಸವನ್ನು ಬಲಪಡಿಸುತ್ತದೆ. (ಕೀರ್ತನೆ 119:81-88) ಗರ್ವಿಷ್ಠರು ತನ್ನನ್ನು ಹಿಂಸಿಸುತ್ತಿದ್ದ ಕಾರಣ, ಕೀರ್ತನೆಗಾರನಿಗೆ ತಾನು “ಹೊಗೆಯಲ್ಲಿ ನೇತುಹಾಕಿರುವ ಬುದ್ದಲಿಯಂತಿದ್ದೇನೆ” ಎಂದು ಭಾಸವಾಯಿತು. (ಕೀರ್ತನೆ 119:83, 86) ಬೈಬಲ್ ಕಾಲಗಳಲ್ಲಿ, ಪ್ರಾಣಿಗಳ ಚರ್ಮದಿಂದ ಮಾಡಲ್ಪಟ್ಟ ಬುದ್ದಲಿಗಳು ನೀರು, ದ್ರಾಕ್ಷಾಮದ್ಯ ಮತ್ತು ಇತರ ದ್ರವಗಳನ್ನು ತುಂಬಿಸಿಡಲು ಉಪಯೋಗಿಸಲ್ಪಡುತ್ತಿದ್ದವು. ಅವು ಉಪಯೋಗದಲ್ಲಿ ಇಲ್ಲದಿರುವಾಗ, ಹೊಗೆ ಕೊಳವಿಯಿಲ್ಲದಿರುವ ಒಂದು ಕೋಣೆಯಲ್ಲಿ, ಬೆಂಕಿಯ ಹತ್ತಿರದಲ್ಲಿ ಗೋಡೆಯ ಮೇಲೆ ನೇತುಹಾಕಲ್ಪಟ್ಟಿರುವ ಇಂತಹ ಒಂದು ಬುದ್ದಲಿಯು ಸಂಕುಚಿಸಿಕೊಳ್ಳಬಹುದು. ಕಷ್ಟಸಂಕಟಗಳು ಅಥವಾ ಹಿಂಸೆಯು ನಿಮಗೆ ‘ಹೊಗೆಯಲ್ಲಿ ನೇತುಹಾಕಿರುವ ಬುದ್ದಲಿಯಂಥ’ ಭಾವನೆಯನ್ನು ತರುತ್ತವೋ? ಹೌದಾದರೆ, ಯೆಹೋವನಲ್ಲಿ ಭರವಸವಿಡಿರಿ ಮತ್ತು ಹೀಗೆ ಪ್ರಾರ್ಥಿಸಿರಿ: “ನಿನ್ನ ಕೃಪೆಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು; ಆಗ ನೀನು ಉಸಿರಿದ [ಮರುಜ್ಞಾಪನವನ್ನು] ಕೈಕೊಳ್ಳುವೆನು.”—ಕೀರ್ತನೆ 119:88.
23 ಕೀರ್ತನೆ 119ರ ಮೊದಲ ಅರ್ಧ ಭಾಗದಲ್ಲಿ ನಾವೇನನ್ನು ಪರಿಗಣಿಸಿದ್ದೇವೋ ಅದು, ಯೆಹೋವನ ಸೇವಕರು ಆತನ ವಾಕ್ಯದಲ್ಲಿ ಭರವಸವಿಡುತ್ತಾರೆ ಮತ್ತು ಅವರು ಆತನ ನಿಬಂಧನೆಗಳು, ಮರುಜ್ಞಾಪನಗಳು, ಆಜ್ಞೆಗಳು ಹಾಗೂ ನಿಯಮಗಳಲ್ಲಿ ಉಲ್ಲಾಸಪಡುವುದರಿಂದ ಆತನು ಅವರಿಗೆ ಕೃಪೆಯನ್ನು ಅಥವಾ ಪ್ರೀತಿಪೂರ್ವಕ ದಯೆಯನ್ನು ದಯಪಾಲಿಸುತ್ತಾನೆ ಎಂಬುದನ್ನು ವ್ಯಕ್ತಪಡಿಸುತ್ತದೆ. (ಕೀರ್ತನೆ 119:16, 47, 64, 70, 77, 88) ತನಗೆ ಸಮರ್ಪಿತರಾಗಿರುವ ಜನರು ‘ತನ್ನ ವಾಕ್ಯವನ್ನು ಗಮನಿಸಿ ನಡೆಯುವವರಾಗಿದ್ದಾರೆ’ ಎಂಬ ವಿಷಯದಿಂದ ಆತನು ಪ್ರಸನ್ನನಾಗಿದ್ದಾನೆ. (ಕೀರ್ತನೆ 119:9, 17, 41, 42) ಈ ಸುಂದರವಾದ ಕೀರ್ತನೆಯ ಉಳಿದ ಭಾಗವನ್ನು ಅಧ್ಯಯನ ಮಾಡಲು ನೀವು ಎದುರುನೋಡುತ್ತಿರುವಾಗ, ನಿಮ್ಮನ್ನು ನೀವು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಯೆಹೋವನ ವಾಕ್ಯವು ನನ್ನ ದಾರಿಗೆ ಬೆಳಕಾಗಿರುವಂತೆ ನಾನು ನಿಜವಾಗಿಯೂ ಅನುಮತಿಸುತ್ತೇನೋ?’
[ಪಾದಟಿಪ್ಪಣಿಗಳು]
a ಇಲ್ಲಿ ಯೆಹೋವನ ಸಂದೇಶವನ್ನು ಉದ್ದೇಶಿಸಿ ಮಾತಾಡಲಾಗಿದೆ, ದೇವರ ವಾಕ್ಯ ಎಂದು ಹೇಳಲ್ಪಡುವಾಗ ಸೂಚಿಸಲ್ಪಡುವ ಇಡೀ ಬೈಬಲಿಗಲ್ಲ.
b Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ನೀವು ಹೇಗೆ ಉತ್ತರಿಸುವಿರಿ?
• ನಿಜ ಸಂತೋಷವು ಹೇಗೆ ಸಿಗುತ್ತದೆ?
• ದೇವರ ವಾಕ್ಯವು ನಮ್ಮನ್ನು ಹೇಗೆ ಆಧ್ಯಾತ್ಮಿಕವಾಗಿ ಶುದ್ಧರನ್ನಾಗಿ ಇಡುವುದು?
• ದೇವರ ವಾಕ್ಯವು ಯಾವ ವಿಧಗಳಲ್ಲಿ ಧೈರ್ಯ ಮತ್ತು ಸಾಂತ್ವನವನ್ನು ಕೊಡುತ್ತದೆ?
• ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ನಾವೇಕೆ ನಂಬಿಕೆಯುಳ್ಳವರಾಗಿರಬೇಕು?
[ಅಧ್ಯಯನ ಪ್ರಶ್ನೆಗಳು]
1. ಕೀರ್ತನೆ 119ರ ಬರಹಗಾರನ ಗುರುತು ಮತ್ತು ಸ್ವಭಾವದ ಕುರಿತು ನೀವೇನನ್ನು ತಿಳಿಸಬಲ್ಲಿರಿ?
2. ಕೀರ್ತನೆ 119ರ ಮುಖ್ಯ ವಿಷಯ ಏನಾಗಿದೆ, ಮತ್ತು ಈ ಗೀತೆಯನ್ನು ಹೇಗೆ ರಚಿಸಲಾಗಿದೆ?
3. ಸದಾಚಾರಿಗಳಾಗಿ ನಡೆಯುವುದೆಂಬುದರ ಅರ್ಥವೇನು ಎಂಬುದನ್ನು ವಿವರಿಸಿ, ಒಂದು ದೃಷ್ಟಾಂತವನ್ನು ಕೊಡಿರಿ.
4. ನಮ್ಮ ಸಂತೋಷ ಮತ್ತು ಯಶಸ್ಸು ಯಾವುದರ ಮೇಲೆ ಅವಲಂಬಿಸಿದೆ?
5. (ಎ) ಆಧ್ಯಾತ್ಮಿಕವಾಗಿ ಶುದ್ಧರಾಗಿ ಉಳಿಯುವುದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿರಿ. (ಬಿ) ಗಂಭೀರವಾದ ಪಾಪವನ್ನು ಮಾಡಿರುವ ಒಬ್ಬ ಯುವಕನಿಗೆ ಯಾವ ಸಹಾಯವು ಲಭ್ಯವಿದೆ?
6. ಯಾವ ಸ್ತ್ರೀಯರು ತಮ್ಮ ‘ನಡತೆಯನ್ನು ಶುದ್ಧಪಡಿಸಿಕೊಂಡು ದೇವರ ವಾಕ್ಯವನ್ನು ಗಮನಿಸಿ ನಡೆಯುವವರಾಗಿದ್ದರು’?
7. ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದರಲ್ಲಿ ದಾನಿಯೇಲ ಮತ್ತು ಆ ಮೂರು ಮಂದಿ ಇಬ್ರಿಯ ಯುವಕರು ಹೇಗೆ ಒಂದು ಉತ್ತಮ ಮಾದರಿಯನ್ನಿಟ್ಟರು?
8. ದೇವರ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು ಅರ್ಥಮಾಡಿಕೊಂಡು ಅನ್ವಯಿಸಲು ಸಾಧ್ಯವಾಗಬೇಕಾದರೆ ನಮ್ಮಲ್ಲಿ ಯಾವ ಮನೋಭಾವ ಮತ್ತು ಜ್ಞಾನವಿರಬೇಕು?
9. ದೇವರ ನಿಯಮ ಮತ್ತು ಮಾನವನು ತಗಾದೆಮಾಡುವ ವಿಷಯಗಳ ಮಧ್ಯೆ ಘರ್ಷಣೆ ಉಂಟಾಗುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು?
10, 11. ಅತಿ ಕಷ್ಟಕರ ಪರಿಸ್ಥಿತಿಗಳಲ್ಲೂ ನಾವು ಯೆಹೋವನಿಗೆ ತೋರಿಸುವ ಸಮಗ್ರತೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು ಎಂಬುದನ್ನು ದೃಷ್ಟಾಂತಿಸಿರಿ.
12. ನಾವು ಕೀರ್ತನೆ 119:36, 37ನ್ನು ವೈಯಕ್ತಿಕವಾಗಿ ಹೇಗೆ ಅನ್ವಯಿಸಬಲ್ಲೆವು?
13. ಧೈರ್ಯದಿಂದ ಸಾಕ್ಷಿಕೊಡಲು ಅಗತ್ಯವಿದ್ದ ಧೀರತೆಯನ್ನು ಯೇಸುವಿನ ಹಿಂಸೆಗೊಳಪಡಿಸಲ್ಪಟ್ಟ ಶಿಷ್ಯರು ಹೇಗೆ ಪಡೆದುಕೊಂಡರು?
14. ಪೌಲನಂತೆ ಧೈರ್ಯದಿಂದ ಸಾಕ್ಷಿಕೊಡಲು ನಮಗೆ ಯಾವುದು ಸಹಾಯಮಾಡುತ್ತದೆ?
15. ಇತರರು ನಮ್ಮನ್ನು ಹಾಸ್ಯಮಾಡುವಾಗ ದೇವರ ವಾಕ್ಯವು ನಮ್ಮನ್ನು ಹೇಗೆ ಸಂತೈಸಬಲ್ಲದು?
16. ಹಿಂಸೆಯ ಹೊರತೂ ದೇವರ ಸೇವಕರು ಏನು ಮಾಡಿರುವುದಿಲ್ಲ?
17. ದೇವರ ವಾಕ್ಯಕ್ಕಾಗಿರುವ ಗಣ್ಯತೆಯು ಏನನ್ನು ಮಾಡುವಂತೆ ನಮ್ಮನ್ನು ಪ್ರೇರಿಸುವುದು?
18. ‘ದುಷ್ಟರ ಪಾಶಗಳು ನಮ್ಮನ್ನು ಸುತ್ತಿಕೊಳ್ಳುವಾಗ’ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ?
19, 20. ಕಷ್ಟಾನುಭವವು ಹಿತಕರವಾಗಿರುತ್ತದೆ ಹೇಗೆ?
21. ದೇವರು ಗರ್ವಿಷ್ಠರನ್ನು ಮಾನಭಂಗಗೊಳಿಸುವಾಗ ಏನು ಸಂಭವಿಸುತ್ತದೆ?
22. ಯಾವ ಅರ್ಥದಲ್ಲಿ ಕೀರ್ತನೆಗಾರನು ‘ಹೊಗೆಯಲ್ಲಿ ನೇತುಹಾಕಿರುವ ಬುದ್ದಲಿಯಂತಿದ್ದನು’?
23. ಕೀರ್ತನೆ 119:1-88ರ ಮರುಪರಿಶೀಲನೆಯಲ್ಲಿ ನಾವೇನನ್ನು ಪರಿಗಣಿಸಿದ್ದೇವೆ, ಮತ್ತು ಕೀರ್ತನೆ 119:89-176ನ್ನು ಅಧ್ಯಯನ ಮಾಡಲು ಮುನ್ನೋಡುವಾಗ ನಮ್ಮನ್ನು ನಾವು ಏನು ಕೇಳಿಕೊಳ್ಳಬಹುದು?
[ಪುಟ 11ರಲ್ಲಿರುವ ಚಿತ್ರಗಳು]
ರೂತಳು, ರಾಹಾಬಳು ಮತ್ತು ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದ ಇಬ್ರಿಯ ಯುವಕರು ‘ದೇವರ ವಾಕ್ಯವನ್ನು ಗಮನಿಸಿ ನಡೆಯುವವರಾಗಿದ್ದರು’
[ಪುಟ 12ರಲ್ಲಿರುವ ಚಿತ್ರ]
ಪೌಲನು ಧೈರ್ಯದಿಂದ ‘ಅರಸುಗಳ ಮುಂದೆ ದೇವರ [ಮರುಜ್ಞಾಪನಗಳ] ವಿಷಯ ಮಾತಾಡಿದನು’