ವಿಜ್ಞಾನವು ಹೋರಾಡುವ ಮೊದಲೇ ಬೈಬಲು ರೋಗಕ್ಕೆ ಎದುರಾಗಿ ಹೋರಾಡಿತು
ಇಂದು ಬೈಬಲಿನ ಸುದ್ದಿ ತೆಗೆಯುವಾಗಲೆಲ್ಲ, ತಿಳಿವಳಿಕೆಯಿಲ್ಲದ ಅನೇಕರು ಯಾಂತ್ರಿಕವಾಗಿ ಅದು ತಮ್ಮ ಗಮನಕ್ಕೆ ಅನರ್ಹವೆಂದು ಅದನ್ನು ತ್ಯಜಿಸಿ ಬಿಡುತ್ತಾರೆ. ಆಧುನಿಕ ಮನುಷ್ಯನು ಕೇವಲ ಇತ್ತೀಚೆಗೆ ಕಂಡುಹಿಡಿದಿರುವುದನ್ನು ಯಾ ಇನ್ನೂ ಕಂಡುಹಿಡಿಯದೆ ಇರುವುದನ್ನು ಅದು ಸಾವಿರಾರು ವರ್ಷಗಳಿಗೆ ಮೊದಲೇ ಹೇಳಿದೆ ಎಂಬುದನ್ನು ಕಂಡುಹಿಡಿಯುವರೆ ಅವರು ತಮ್ಮ ಮನಸ್ಸುಗಳನ್ನು ತೆರೆಯಲು ನಿರಾಕರಿಸುತ್ತಾರೆ. ಇದು ಲೋಕ ಘಟನೆಗಳ, ಸರಕಾರದ, ಖಗೋಲ ಶಾಸ್ತ್ರದ, ಪರಿಸರದ, ಪ್ರಾಕೃತಿಕ ಇತಿಹಾಸದ, ಶರೀರ ವಿಜ್ಞಾನದ, ಮತ್ತು ಮನೋ ವಿಜ್ಞಾನದ ಸಂಬಂಧದಲ್ಲಿ ಸತ್ಯವಾಗಿದೆ. ಇದು ರೋಗಾವಸ್ಥೆಯ ವಿಷಯದಲ್ಲೂ ಸತ್ಯ.
ಬೈಬಲು ಒಂದು ಜೀವನ ಗ್ರಂಥ. ಇನ್ನಾವ ಮೂಲಗ್ರಂಥವಾಗಲಿ, ಸಾಹಿತ್ಯ ಸಂಗ್ರಹವಾಗಲಿ ಜೀವನದ ಅಷ್ಟೊಂದು ಅಂಶಗಳಿಗೆ ವಿಶಾಲಾನ್ವಯವನ್ನು ಮಾಡಿದ್ದಿಲ್ಲ. ಒಳ್ಳೆಯ ದೇಹಸ್ಥಿತಿ ಮತ್ತು ಜೀವನಗಳ ನಡುವೆ ಸಂಬಂಧವಿರುವುದರಿಂದ ಬೈಬಲಿನಲ್ಲಿ ನೇರವಾಗಿ ಆರೋಗ್ಯಕ್ಕೆ ಸಂಬಂಧವಿರುವ ಅನೇಕ ಮೂಲಸೂತ್ರಗಳು ಅಡಕವಾಗಿರುವುದು ಆಶ್ಚರ್ಯದ ಸಂಗತಿಯಾಗಿರಬಾರದು. ಬೈಬಲು ಕುಷ್ಠರೋಗ, ಮೂಲವ್ಯಾಧಿ (ಮೊಳೆ ರೋಗ), ಜಲೋದರ (ಮಹೋದರ), ಮತ್ತು ಹೊಟ್ಟೆಯ ರೋಗಗಳಂಥ ಅನೇಕ ರೋಗಗಳನ್ನು ಹೆಸರಿಸುತ್ತದೆ.—ಧರ್ಮೋಪದೇಶಕಾಂಡ 24:8; 28:27; ಲೂಕ 14:2; 1 ತಿಮೊಥೆಯ 5:23.
ಬೈಬಲು ಶಾರೀರಿಕ ಕಾಯಿಲೆಯ ಕುರಿತು ಮಾಹಿತಿ ಕೊಡಲಿಕ್ಕಾಗಿ ಮುಖ್ಯವಾಗಿ ಬರೆಯಲ್ಪಟ್ಟಿರುವುದಿಲ್ಲ. ಆದರೆ ಅದು ಯಾವ ಮಾಹಿತಿಯನ್ನು ಕೊಡುತ್ತದೊ ಅದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದ್ದು, ಪುನರ್ವಿಮರ್ಶೆಗೆ ಪ್ರಯೋಜನಕರವಾಗಿದೆ. ಪುರಾತನ ಕಾಲದ ಕೀರ್ತನೆಗಾರನಿಗೆ ಮಾನವ ಶರೀರ ಭಯಭಕ್ತಿ ಉತ್ಪಾದಕವಾಗಿತ್ತು, ಮತ್ತು ಅವನು ಅದರ ಕುರಿತು ಬರೆದುದು: “ಏಕೆಂದರೆ ನೀನು [ಯೆಹೋವ] ನನ್ನ ಮೂತ್ರಪಿಂಡವನ್ನು ಉಂಟುಮಾಡಿದಿ; ನೀನು ನನ್ನನ್ನು ನನ್ನ ತಾಯಿಯ ಹೊಟ್ಟೆಯಲ್ಲಿ ಮರೆ ಮಾಡಿದಿ. ನಾನು ಭಯಭಕ್ತಿ ಹುಟ್ಟಿಸುವ ರೀತಿಯಲ್ಲಿ ಅದ್ಭುತಕರವಾಗಿ ಮಾಡಲ್ಪಟ್ಟಿರುವುದಕ್ಕಾಗಿ ನಿನ್ನನ್ನು ಸ್ತುತಿಸುತ್ತೇನೆ. ನನ್ನಾತ್ಮವು ಬಲು ಚೆನ್ನಾಗಿ ತಿಳಿದಿರುವಂತೆ ನಿನ್ನ ಕೃತ್ಯಗಳು ಆಶ್ಚರ್ಯಕರವಾಗಿವೆ. ನಾನು ಗುಪ್ತವಾಗಿ ಮಾಡಲ್ಪಟ್ಟಾಗ, ಭೂಮಿಯ ಅತಿ ಕೆಳಭಾಗಗಳಲ್ಲಿ ಹೆಣೆಯಲ್ಪಟ್ಟಾಗ, ನನ್ನ ಎಲುಬುಗಳು ನಿನ್ನಿಂದ ಮರೆಯಾಗಿರಲಿಲ್ಲ. ನಿನ್ನ ಕಣ್ಣುಗಳು ನನ್ನ ಭ್ರೂಣವನ್ನು ಸಹ ನೋಡಿದವು, ಮತ್ತು ನಿನ್ನ ಪುಸ್ತಕದಲ್ಲಿ, ಅದರ ಭಾಗಗಳು ಉಂಟಾಗಲಿದ್ದ ದಿನಗಳ ಸಂಬಂಧದಲ್ಲಿ, ಅವುಗಳಲ್ಲಿ ಒಂದೂ ಇಲ್ಲದಿರುವಾಗಲೇ ಅವುಗಳು ಬರೆಯಲ್ಪಟ್ಟವು.”—ಕೀರ್ತನೆ 139:13-16, NW.
ಗರ್ಭದ ಗೋಪ್ಯತೆಯಲ್ಲಿ ಭ್ರೂಣವು ಮರೆ ಮಾಡಲ್ಪಟ್ಟಿರುವುದಾದರೂ, ಯೆಹೋವನು ಅದು ರಚಿಸಲ್ಪಡುವುದನ್ನು ಮತ್ತು ಎಲುಬುಗಳು ಬೆಳೆಯುವುದನ್ನು ನೋಡುತ್ತಾನೆ. ಆತನ ಸಂಬಂಧದಲ್ಲಿ “ಇರುಳು ಹಗಲಾಗಿರು”ವಂತಿದೆ. (12ನೆಯ ವಚನ) ಯೆಹೋವನಿಂದ ಮರೆಯಾಗುವುದೆಂಬುದೇ ಇಲ್ಲ. ವೈದ್ಯಕೀಯ ಭಾಷೆಯಲ್ಲಿ, ಭ್ರೂಣ ಮಾಸು ಚೀಲದ ಮೂಲಕ ತಾಯಿಯಿಂದ ಪ್ರತ್ಯೇಕವಾಗಿರುವುದರಿಂದ ಪರಕೀಯ ವಸ್ತುವಾಗಿ ತ್ಯಜಿಸಲ್ಪಡುವುದರಿಂದ ತಪ್ಪುತ್ತದೆ. ಆದರೂ, ಈ ಕೀರ್ತನೆ ಸೂಚಿಸುವ ಸತ್ಯ ವೈದ್ಯಕೀಯವಲ್ಲ, ಆತ್ಮಿಕವಾಗಿದೆ. ಏನೆಂದರೆ, ಯೆಹೋವನು ಸಕಲವನ್ನು, ಗರ್ಭದ ಅಂಧಕಾರದಲ್ಲಿಯೂ ನೋಡುತ್ತಾನೆ.
ಗರ್ಭಧಾರಣೆಯ ಕ್ಷಣದಿಂದ ಹಿಡಿದು, ‘ನಮ್ಮ ಸಕಲ ಶರೀರಾಂಗಗಳು’ ತಾಯಿಯ ಗರ್ಭಕೋಶದ ಗರ್ಭ ಮೂಡಿರುವ ಅಂಡಕಣದಲ್ಲಿ ತಳಿಶಾಸ್ತ್ರೀಯ ಸಂಕೇತ ಭಾಷೆಯಲ್ಲಿ ‘ಬರೆದಿಡಲ್ಪಟ್ಟಿವೆ.’ ಅಲ್ಲದೆ, ಪ್ರತಿಯೊಂದು ಅದರ ಯೋಗ್ಯ ಕ್ರಮದಲ್ಲಿ ‘ರಚಿಸಲ್ಪಡಲಿದ್ದ ಅವುಗಳ ದಿನಗಳ ಸಂಬಂಧದ’ ಸಮಯವು ವಂಶವಾಹಿಗಳಲ್ಲಿ ಪಟ್ಟಿಯಾಗಿ ಏರ್ಪಡಿಸಿರುವ ಅನೇಕ ಜೈವಿಕ ಗಡಿಯಾರಗಳಿಂದ ನಿರ್ಧರಿಸಲ್ಪಡುತ್ತದೆ.
ಕೀರ್ತನೆಗಾರನಾಗಿದ್ದ ದಾವೀದನಿಗೆ ಈ ವೈಜ್ಞಾನಿಕ ವಿವರಣೆಯೆಲ್ಲ ತಿಳಿದಿರದಿದ್ದರೂ, ಆ ಕೀರ್ತನೆಯನ್ನು ಬರೆಯುವಂತೆ ಅವನನ್ನು ಪ್ರೇರಿಸಿದ್ದ ಯೆಹೋವನಿಗೆ ಇದು ತಿಳಿದಿತ್ತು. ಏಕೆಂದರೆ ಮೊದಲನೆಯದಾಗಿ ಆತನೇ ಮಾನವನನ್ನು ಸೃಷ್ಟಿಸಿದ್ದನು. ಮೂಲರಚನಾ ವಿಮರ್ಶಕರು ದಾವೀದನ ಲೇಖಕತ್ವವನ್ನು ಅಲ್ಲಗಳೆದರೂ ಆ ಕೀರ್ತನೆಯ ಬರೆವಣಿಗೆಯ ಸಮಯವನ್ನು ಅದು ಕ್ರಿಸ್ತನಿಗಿಂತ ಶತಮಾನಗಳಿಗೆ ಮೊದಲು ಬರೆದದ್ದೆಂದು ಅವರೂ ಗೊತ್ತುಮಾಡಲೇ ಬೇಕಾಗಿದೆ.
ಬೈಬಲು ರೋಗತಡೆಯ ಮೇಲೆ ಕೇಂದ್ರೀಕರಿಸುತ್ತದೆ
ಕ್ರಿಸ್ತನಿಗೆ 15 ಶತಕಗಳ ಮೊದಲು ಮೋಶೆಯ ಮೂಲಕ ಇಸ್ರಾಯೇಲಿಗೆ ಕೊಡಲ್ಪಟ್ಟ ದೇವರ ನಿಯಮಗಳ ಪುನರ್ವಿಮರ್ಶೆಯಿಂದ, ಆರೋಗ್ಯದ ಕುರಿತ ಆ ಧರ್ಮಶಾಸ್ತ್ರದ ಪ್ರಧಾನ ಒತ್ತರವು ತಡೆಯುವುದರ ಮೇಲೆ ಸ್ಪಷ್ಟವಾಗಿಗಿ ಕೇಂದ್ರೀಕರಿಸಲ್ಪಟ್ಟಿತ್ತು ಎಂದು ತೋರಿಬರುತ್ತದೆ. ಉದಾಹರಣೆಗೆ, ಧರ್ಮೋಪದೇಶಕಾಂಡ 23:13ರಲ್ಲಿ ಹೇಳುವುದು: “ಯುದ್ಧದ ಸಾಮಾನುಗಳಲ್ಲದೆ ಸಲಿಕೆ ನಿಮ್ಮ ಬಳಿಯಲ್ಲಿ ಇರಬೇಕು. ನೀವು ಬಹಿರ್ಭೂಮಿಗೆ ಹೋದಾಗ ಆ ಸಲಿಕೆಯಿಂದ ಅಗಿದು ಆ ಕಲ್ಮಷವನ್ನು ಮುಚ್ಚಿಬಿಡಬೇಕು.” ಮಲವನ್ನು ಹುಗಿಯುವ ಈ ನಿಯಮವು ನೊಣವಾಹಿಯಾದ ಸಾಲ್ಮನೆಲೋಸಿಸ್, ಶಿಗೆಲೋಸಿಸ್, ಟೈಫಾಯ್ಡ್, ಮತ್ತು ಅನೇಕ ರೀತಿಯ ಆಮಶಂಕೆಗಳಿಂದ ರಕ್ಷಿಸುವ ತೀವ್ರ ಪ್ರಗತಿಪರ ನಿವಾರಕ ಕ್ರಮವಾಗಿತ್ತು. ಈ ಸೂತ್ರವು ಎಲ್ಲಿ ಜಾರಿಯಲ್ಲಿಲ್ಲವೊ ಅಲ್ಲಿ ಇದು ಇಂದೂ ಸಾವಿರಾರು ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತದೆ.
ಯಾಜಕಕಾಂಡ 11ನೆಯ ಅಧ್ಯಾಯವು, ಕ್ರಿಮಿ, ದಂಶಕ, ಮತ್ತು ಹೆಚ್ಚು ಪ್ರಾಮುಖ್ಯವಾಗಿ ಮಲಿನಗೊಂಡಿರುವ ಜಲದ ಮೂಲಕ ರೋಗ ಹರಡಬಲ್ಲದೆಂಬ ಸೂತ್ರವನ್ನು ಸ್ಥಾಪಿಸುತ್ತದೆ. ಈ ಕೊನೆಯ ಸಂಗತಿಯು ರೋಗಗಳು ಸೂಕ್ಷ್ಮದರ್ಶಕೀಯ ಅಣುಗಳಿಂದ ಬರುತ್ತವೆಂಬ ಸೂತ್ರವನ್ನು ಮೌನವಾಗಿ ದೃಢೀಕರಿಸುತ್ತಾ, ಬೈಬಲು ಲೇವೆನ್ಹುಕ್ (1683) ಯಾ ಪ್ಯಾಸ್ಟರ್ (19ನೆಯ ಶತಮಾನ) ಎಂಬವರಿಗಿಂತ ಸಹಸ್ರಾರು ವರ್ಷಗಳಷ್ಟು ಮುಂದುವರಿದುದಾಗಿದೆ ಎಂದು ತೋರಿಸುತ್ತದೆ. ಕುಷ್ಠರೋಗಕ್ಕೆ ಯಾಜಕಕಾಂಡ 13ನೆಯ ಅಧ್ಯಾಯದಲ್ಲಿ ನಿರ್ದೇಶಿಸಲ್ಪಟ್ಟಿದ್ದ ಸಂಪರ್ಕ ನಿಷೇಧದ ಕುರಿತೂ ಇದನ್ನೇ ಹೇಳಸಾಧ್ಯವಿದೆ.
ಯಾಜಕಕಾಂಡ 11:13-20ರಲ್ಲಿ ಕೊಟ್ಟಿರುವ ಆಹಾರ ನಿಷೇಧಗಳಲ್ಲಿ ಗಿಡುಗ, ಕಡಲಹದ್ದು, ಮತ್ತು ಗೂಬೆಗಳಂಥ ಕೊಂದು ತಿನ್ನುವ ಪ್ರಾಣಿವರ್ಗ, ಮತ್ತು ಕಾಗೆ ಮತ್ತು ರಣಹದ್ದುಗಳಂಥ ಕೊಳೆತ ಮಾಂಸ ಭಕ್ಷಕಗಳು ಸೇರಿವೆ. ಆಹಾರ ಸರಣಿಯ ಅಗ್ರಸ್ಥಾನದಲ್ಲಿರುವ ಇವುಗಳು ದೊಡ್ಡ ಪ್ರಮಾಣದಲ್ಲಿ ಜೀವಾಣು ವಿಷವಿರುವವುಗಳಾಗಿವೆ. ಆಹಾರ ಸರಣಿಯ ಕೆಳಭಾಗದಲ್ಲಿರುವ ಪ್ರಾಣಿಗಳು ಈ ಜೀವಾಣು ವಿಷವನ್ನು ಅಲ್ಪ ಪ್ರಮಾಣದಲ್ಲಿ ಹೊಟ್ಟೆಗೆ ಹೊಗಿಸಿಕೊಳ್ಳುವಾಗ ಆಹಾರ ಸರಣಿಯ ಮೇಲ್ಭಾಗದಲ್ಲಿರುವ ಪ್ರಾಣಿಗಳು ಅವುಗಳನ್ನು ಸಾಂದ್ರೀಕೃತ ಪ್ರಮಾಣದಲ್ಲಿ ಶೇಖರಿಸುತ್ತವೆ. ಸಸ್ಯಾಹಾರಿಗಳಾಗಿರುವ ಮತ್ತು ಸಾಂದ್ರೀಕರಿಸಿದ ಜೀವಾಣು ವಿಷವಿರುವ ಆಹಾರ ಸರಣಿಯಲ್ಲಿ ಇಲ್ಲದಿರುವ ಕೆಲವು ಪ್ರಾಣಿಗಳನ್ನು ತಿನ್ನಲು ಮೋಶೆಯ ಧರ್ಮಶಾಸ್ತ್ರ ಅನುಮತಿಸಿತು. ಕೆಲವು ನಿಷೇಧಿತ ಮಾಂಸಗಳು ಟ್ರಿಕಿನಾಸಿಸ್ ರೋಗ ಬರಿಸುವಂಥ ಕೋಶಾವರಣದ ಪರಸತ್ವೋಪಜೀವಿಗಳಿಗೆ ಆಶ್ರಯ ಕೊಡುತ್ತಿದ್ದವು.
ಮೋಶೆಯ ಧರ್ಮಶಾಸ್ತ್ರದಲ್ಲಿ ಅನೇಕ ಕಡೆ ಕೊಟ್ಟಿರುವ ರಕ್ತದ ದುರುಪಯೋಗದ ವಿರುದ್ಧ ಬೈಬಲಿನ ನಿಷೇಧವು ವೈದ್ಯಕೀಯವಾಗಿ ಸ್ವಸ್ಥವೆಂದು 3,500 ವರ್ಷಗಳ ಬಳಿಕ ಈಗ ರುಜುವಾಗುತ್ತಿದೆ. (ಆದಿಕಾಂಡ 9:4; ಯಾಜಕಕಾಂಡ 3:17; 7:26; 17:10-16; 19:26; ಧರ್ಮೋದೇಶಕಾಂಡ 12:16; 15:23) ಈ ನಿಷೇಧವು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಅಪೊಸ್ತಲರ ಕೃತ್ಯಗಳು 15:20, 29 ಮತ್ತು 21:25ರಲ್ಲಿ ಪುನರಾವೃತ್ತಿಸಲ್ಪಟ್ಟಿದೆ. ವೈದ್ಯಕೀಯ ವೃತ್ತಿಯು ರಕ್ತ ಶುದ್ಧೀಕರಿಸುವ ಕಿಡ್ನಿ ಡಯಾಲಿಸಿಸ್, ಹಾರ್ಟ್-ಲಂಗ್ ಮೆಷೀನ್ ಮತ್ತು ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಯಲ್ಲಿ ದಾನಿಗಳ ರಕ್ತವನ್ನು ಕಡಮೆ ಉಪಯೋಗಿಸಲು ಯಾ ಪೂರ್ತಿ ತ್ಯಜಿಸಲು ಪ್ರಯತ್ನಿಸುತ್ತಿದೆ. ಅನೇಕ ರೂಪಗಳಲ್ಲಿರುವ ಹೆಪಟಯಿಟಿಸ್, ಏಯ್ಡ್ಸ್, ಸೈಟೊಮೆಗ್ಯಾಲೊವೈರಸ್ ರೋಗ, ಮತಿತ್ತರ ಅನೇಕ ರಕ್ತವಾಹಿ ರೋಗಗಳು, ದೇವರ ನಿಯಮಗಳನ್ನು ಅಸಡ್ಡೆ ಮಾಡುವ ಐಹಿಕ ಜ್ಞಾನಿಗಳಿಗೆ ಬೀಭತ್ಸ ಮರುಜ್ಞಾಪನಗಳಾಗಿ ನಿಂತಿವೆ.
ಒಳ್ಳೆಯ ಆರೋಗ್ಯಕ್ಕೆ ವ್ಯಾಯಾಮ ಮಹತ್ವವುಳ್ಳದ್ದು, ಮತ್ತು ಬೈಬಲು ಅದರ ಪ್ರಯೋಜನಗಳನ್ನು ಒಪ್ಪುತ್ತದೆ. ವಾರಕ್ಕೆ ಮೂರಾವರ್ತಿ, ಪ್ರತಿ ಬಾರಿ 20 ನಿಮಿಷಗಳಷ್ಟೂ ಕಮ್ಮಿ ಅವಧಿಯಲ್ಲಿ ಮಾಡುವ ವ್ಯಾಯಾಮವು ಹೃದಯ ಮತ್ತು ರಕ್ತ ಪರಿಚಲನಾ ವ್ಯವಸ್ಥೆಗೆ ಬರುವ ಅಪಾಯವನ್ನು ಕಡಮೆ ಮಾಡಬಲ್ಲದು. ಇದು ಕಲೆಸ್ಟರಾಲಿನ ಹೆಚ್ಚು ಸಾಂದ್ರತೆಯ ರಕ್ಷಕ ಲಿಪೊಪ್ರೋಟೀನ್ (HDL) ರೂಪವನ್ನು ಹೆಚ್ಚಿಸಿ, ನಿಮ್ಮ ಶಕ್ತಿ ಮಟ್ಟವನ್ನು ವೃದ್ಧಿಸಿ, ನಿಮ್ಮ ಸುಲಭ ನಿರ್ವಹಣೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಬೈಬಲಾದರೋ, ವ್ಯಾಯಾಮದ ಬೆಲೆಯನ್ನು ಮಾನ್ಯ ಮಾಡಿದರೂ, ಅದನ್ನು ಹೆಚ್ಚು ಪ್ರಾಮುಖ್ಯವಾದ ಅಧ್ಯಾತ್ಮಿಕತೆಯ ವಿಕಸನಕ್ಕೆ ದ್ವಿತೀಯವಾಗಿಡುತ್ತದೆ: “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.”—1 ತಿಮೊಥೆಯ 4:8.
ರತಿ ರವಾನಿತ ರೋಗಗಳೆದುರು ಬೈಬಲಿನ ನೀತಿ ನಿಯಮಗಳು ಪ್ರಧಾನ ಸಂರಕ್ಷಣೆಯಾಗಿವೆ. ಈ ರೋಗಗಳು ಆಗ ಅಸ್ತಿತ್ವದಲ್ಲಿದ್ದುದು ನಿಸ್ಸಂಶಯವಾದರೂ, ಅವುಗಳನ್ನು ತಜ್ಞರು ಶತಮಾನಗಳಲ್ಲಿ ಇನ್ನೂ ಗುರುತಿಸಿರಲಿಲ್ಲ ಯಾ ಪ್ರಾಯಶಃ ಅನುಮಾನಿಸಿಯೂ ಇರಲಿಲ್ಲ.—ವಿಮೋಚನಕಾಂಡ 20:14; ರೋಮಾಪುರ 1:26, 27; 1 ಕೊರಿಂಥ 6:9, 18; ಗಲಾತ್ಯ 5:19.
“ಒಂದು ಅತಿ ನಿಷ್ಕೃಷ್ಟ ವಿಜ್ಞಾನ ಗ್ರಂಥ”
ಹಿಪಾಕ್ರೆಟೀಸ್ ಎಂಬ ಸಾ.ಶ.ಪೂ. ಐದನೆಯ ಮತ್ತು ನಾಲ್ಕನೆಯ ಶತಮಾನದ ಗ್ರೀಕ್ ವೈದ್ಯನು “ಔಷಧದ ಪಿತ”ನೆಂದು ಪ್ರಸಿದ್ಧನಾಗಿದ್ದಾನೆ. ಆದರೆ ರೋಗಗಳ ವಿಷಯ ಹೆಚ್ಚಿನದ್ದು ಅದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮೋಶೆಯಿಂದ ಬರೆಯಲ್ಪಟ್ಟಿತು. ಆದರೂ ಗಮನಾರ್ಹವಾಗಿ, ದಿ ಎಎಮ್ಎ ನ್ಯೂಸ್ ಒಬ್ಬ ವೈದ್ಯನಿಂದ ಬಂದ ಈ ಪತ್ರವನ್ನು ಪ್ರಕಟಿಸಿತು: “ಈಗ ಅತ್ಯುತ್ತಮ ಕೆಲಸವನ್ನು ಮಾಡುತ್ತಿರುವ ಅತ್ಯುತ್ತಮ ಮಾಹಿತಿಯ ವೈದ್ಯಕೀಯ ಸಂಶೋಧಕರು, ಬೈಬಲು ಅತಿ ನಿಷ್ಕೃಷ್ಟ ವಿಜ್ಞಾನ ಗ್ರಂಥವೆಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. . . . ಜೀವನದ ವಾಸ್ತವಾಂಶಗಳು, ರೋಗ ನಿದಾನ, ಚಿಕಿತ್ಸೆ, ಮತ್ತು ಬೈಬಲಿನಲ್ಲಿ ಹೇಳಿರುವ ನಿವಾರಣ ಔಷಧವು ಹಿಪಾಕ್ರೆಟೀಸ್ನ ಅನೇಕ ಇನ್ನೂ ರುಜುವಾಗಿಲ್ಲದ, ಮತ್ತು ಕೆಲವು ತೀರಾ ಅನಿಷ್ಕೃಷ್ಟವೆಂದು ಕಂಡುಬಂದಿರುವ ವಾದಗಳಿಗಿಂತ ಎಷ್ಟೋ ಹೆಚ್ಚು ಮುಂದುವರಿದುದೂ ನಂಬಲರ್ಹವೂ ಆಗಿದೆ.”
ಡಾ. ಎ. ರೆಂಡೆಲ್ ಷಾರ್ಟ್, ದ ಬೈಬಲ್ ಆ್ಯಂಡ್ ಮಾಡರ್ನ್ ಮೆಡಿಸಿನ್ ಎಂಬ ತನ್ನ ಪುಸ್ತಕದಲ್ಲಿ, ಪುರಾತನ ಕಾಲದ ಇಸ್ರಾಯೇಲಿನ ಸುತ್ತಲಿನ ಜನಾಂಗಗಳಲ್ಲಿ ಆರೋಗ್ಯ ನಿಯಮಗಳು ಇದ್ದಿದ್ದರೆ ಅವು ತೀರಾ ಪ್ರಾಥಮಿಕವೆಂದು ಸೂಚಿಸಿದ ಬಳಿಕ ಹೇಳುವುದು: “ಬೈಬಲಿನಂಥ, ಅವೈಜ್ಞಾನಿಕವೆಂದು ಆರೋಪ ಹೊರಿಸಲಾಗಿರುವ ಪುಸ್ತಕವೊಂದರಲ್ಲಿ ಆರೋಗ್ಯ ನಿಯಮವಿರುವುದು ಹೆಚ್ಚು ವಿಸ್ಮಯಕರ ಮಾತ್ರವಲ್ಲ, ಆಗ ತಾನೆ ದಾಸತ್ವದಿಂದ ಪಾರಾಗಿದ್ದ, ಪದೇ ಪದೇ ಶತ್ರುಗಳಿಂದ ಸೋಲಿಸಲ್ಪಟ್ಟು, ಆಗಾಗ ಸೆರೆಗೆ ಕೊಂಡೊಯ್ಯಲಾಗಿದ್ದ ಜನಾಂಗವೊಂದರ ಶಾಸನ ಗ್ರಂಥಗಳಲ್ಲಿ ಆರೋಗ್ಯ ನಿಯಮಗಳ ಅಷ್ಟೊಂದು ವಿವೇಕದ ಮತ್ತು ನ್ಯಾಯಸಮ್ಮತವಾದ ನಿಬಂಧನೆಗಳಿರುವುದೂ ಅಷ್ಟೇ ವಿಸ್ಮಯಕರ.”
ಮನೋಶಾರೀರಿಕ ಸಮಸ್ಯೆಗಳು
ಕೆಲವು ವ್ಯಾಧಿಗಳ ಮನೋಶಾರೀರಿಕ ಸಂಬಂಧವನ್ನು ಬೈಬಲು, ವೈದ್ಯಕೀಯ ಕ್ಷೇತ್ರವು ಅದನ್ನು ಸಾಮಾನ್ಯವಾಗಿ ಒಪ್ಪುವುದಕ್ಕೆ ಎಷ್ಟೋ ಮೊದಲು ಗುರುತಿಸಿ, ಹೀಗೆ ವೈದ್ಯಕೀಯವಾಗಿ ಮುಂದುವರಿದುದೆಂದು ತೋರಿಸಿದೆ. ಇದಲ್ಲದೆ, ಶಾರೀರಿಕ ರೋಗದ ತೋರಿಬರುವಿಕೆಯಲ್ಲಿ ಮನಸ್ಸಿನ ಪಾತ್ರದ ಸಂಬಂಧದಲ್ಲಿ ಬೈಬಲಿನ ವಿವರಣೆಯು ಸ್ಪಷ್ಟ ತಿಳಿವಳಿಕೆಗೆ ಒಂದು ಆದರ್ಶವಾಗಿ ನಿಂತಿದೆ. ಜ್ಞಾನೋಕ್ತಿ 17:22 ಹೇಳುವುದು: “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ.” ಇಲ್ಲಿ ತೀರ್ಮಾನಾತ್ಮಕವಾದ ಯಾವುದೂ ಇಲ್ಲ, ಕೇವಲ ನಿಜತ್ವಗಳ ಹೇಳಿಕೆ ಮಾತ್ರ ಎಂಬುದನ್ನು ಗಮನಿಸಿರಿ. ಖಿನ್ನತಾಪರವಶನಾಗಿರುವವನಿಗೆ, ಅದು ಎಷ್ಟೋ ಸುಲಭವೆಂಬಂತೆ, ನಿನ್ನ ಖಿನ್ನತೆಯನ್ನು ನಿಲ್ಲಿಸು ಎಂದು ಹೇಳಬೇಕೆಂಬ ಯಾವ ಸಲಹೆಯೂ ಅಲ್ಲಿಲ್ಲ.
ಒಂದು ಸಕಾರಾತ್ಮಕ ಮನೋಭಾವ ಸಹಾಯಕರ; ಚಿಂತೆಯು ನಕಾರಾತ್ಮಕ ಮತ್ತು ಹಾನಿಕರ. “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋಕ್ತಿ 12:25) ಜ್ಞಾನೋಕ್ತಿ 18ನೆಯ ಅಧ್ಯಾಯದ 14ನೆಯ ವಚನ ವಿಮರ್ಶಾರ್ಹ: “ಆತ್ಮವು [“ಒಬ್ಬ ಮನುಷ್ಯನ ಮನಸ್ಸು,” NW] ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?” ಒಂದು ನಿರ್ದಿಷ್ಟ ಮಟ್ಟದ ಶಾರೀರಿಕ ರೋಗ (ವ್ಯಾಧಿ) ಯನ್ನು ಸಹಿಸಿಕೊಳ್ಳಲು ಒಬ್ಬನಿಗಿರುವ ಸಾಮರ್ಥ್ಯವು ಅವನ ಆತ್ಮಿಕ ಶಕಿಗ್ತಳಿಂದ ಬಲ ಪಡೆಯುವಲ್ಲಿ ವೃದ್ಧಿಯಾಗಬಹುದೆಂದು ಈ ಶಾಸ್ತ್ರವಚನ ಸೂಚಿಸುತ್ತದೆ.
ಜೇಮ್ಸ್ ಟಿ. ಫಿಷರ್ ಎಂಬ ಮನೋರೋಗ ಚಿಕಿತ್ಸಕರಿಗೆ, ಯೇಸುವಿನ ಪರ್ವತ ಪ್ರಸಂಗದ ಮನೋವೈಜ್ಞಾನಿಕ ಬೆಲೆಯ ಕುರಿತು ಇದನ್ನು ಹೇಳಲಿಕ್ಕಿತ್ತು: “ಮಾನಸಿಕ ಆರೋಗ್ಯದ ವಿಷಯದಲ್ಲಿ ಮನಶ್ಶಾಸ್ತ್ರಜ್ಞರು ಮತ್ತು ಮನೋರೋಗ ಚಿಕಿತ್ಸಕರಲ್ಲಿ ಅತ್ಯರ್ಹರಾದವರು ಬರೆದಿರುವ ಸಕಲ ಅಧಿಕಾರಯುಕ್ತ ಲೇಖನಗಳ ಒಟ್ಟು ಮೊತ್ತವನ್ನು ನೀವು ತೆಗೆದುಕೊಳ್ಳುವಲ್ಲಿ—ಇವುಗಳನ್ನು ನೀವು ಸಂಯೋಜಿಸಿ, ಶುದ್ಧೀಕರಿಸಿ, ಕೂಡಿಸಿರುವ ಶಬ್ದ ಬಾಹುಳ್ಯವನ್ನು ಕತ್ತರಿಸುವಲ್ಲಿ—ಸತ್ವವುಳ್ಳ ಮಾಹಿತಿಯನ್ನು ತೆಗೆದುಕೊಂಡು ಶಬ್ದಾಲಂಕಾರವನ್ನು ಬಿಡುವಲ್ಲಿ, ಮತ್ತು ಜೀವಿಸುತ್ತಿರುವ ಕವಿಗಳಲ್ಲಿ ಅತಿ ಸಮರ್ಥನು ಶುದ್ಧ ವಿಜ್ಞಾನದ ಈ ಮಲಿನವಾಗಿರದ ತುಣುಕುಗಳನ್ನು ಸಂಕ್ಷಿಪ್ತವಾಗಿ ವ್ಯಕ್ತಪಡಿಸುವಲ್ಲಿ, ಪರ್ವತ ಪ್ರಸಂಗದ ಒರಟಾದ ಮತ್ತು ಅಪೂರ್ಣ ಸಾರಾಂಶ ನಿಮಗೆ ದೊರಕೀತು. ಮತ್ತು ಅದಕ್ಕೆ ಹೋಲಿಸುವಾಗ, ಲೇಖನಗಳು ತೀರಾ ಕೊರತೆಯುಳ್ಳವುಗಳಾಗುವುವು.”—ಏ ಫ್ಯೂ ಬಟನ್ಸ್ ಮಿಸಿಂಗ್, ಪುಟ 273.
ಮನೋವಿಕಾರ ಭಾವನೆಗಳು ನಮ್ಮ ಶಾರೀರಿಕ ಸ್ಥಿತಿ ಬಾಧಿಸಬಹುದಾದರೂ, ಶಾರೀರಿಕ ಕಾಯಿಲೆ ಅಲ್ಲಿಲ್ಲವೆಂದು ಇದರ ಅರ್ಥವಲ್ಲ. ಆದುದರಿಂದ ಪ್ರಥಮವಾಗಿ ಶಾರೀರಿಕ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಿ, ಕಡಮೆ ಪಕ್ಷ ಕಾಯಿಲೆಯನ್ನಾದರೂ ಗುರುತಿಸುವಾಗ, ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಗೆ ತಾಳಲು ಸಹಾಯ ಮಾಡುವ ಸಕಾರಾತ್ಮಕ ಮನೋಭಾವ ಮತ್ತು ಚೇತನವನ್ನು ಪ್ರೋತ್ಸಾಹಿಸಬೇಕು. ಈಗಿನ ವಿಷಯ ವ್ಯವಸ್ಥೆಯಲ್ಲಿ ಯಾವ ನಿಶ್ಚಯಾತ್ಮಕ ಚಿಕಿತ್ಸೆಯು ದೊರೆಯದಿರುವಾಗಲಂತೂ ಇದು ವಿಶೇಷವಾಗಿ ಪ್ರಾಮುಖ್ಯ.
ಆದಾಮನ ಪಾಪದ ಬಳಿಕ ಮರಣವು ಸಕಲ ಮಾನವಸಂತತಿಗೆ ಮುನ್ನಿಶ್ಚಿತ ವಂಶವಾಹಿ ವಾಸ್ತವಿಕತೆಯಾಗಿ ಪರಿಣಮಿಸಿತು. (ರೋಮಾಪುರ 5:12) ಈ ಕಾರಣದಿಂದ, ಒಬ್ಬ ವ್ಯಕ್ತಿಯ ನಿರ್ದಿಷ್ಟ ರೋಗವನ್ನು ಅವನ ಆತ್ಮಿಕ ಅಂತಸ್ತಿಗೆ ಸಂಬಂಧಿಸುವುದು ಸಾಮಾನ್ಯವಾಗಿ ಯೋಗ್ಯವಲ್ಲ. ಭಾವನಾತ್ಮಕವಾಗಿ ಬಲಹೀನ ಸ್ಥಿತಿಯಲ್ಲಿರುವ ವ್ಯಕ್ತಿಗಳ ಸಮಸ್ಯೆಯೊಂದಿಗೆ ವ್ಯವಹರಿಸುವಾಗ ಇದನ್ನು ಮನಸ್ಸಿನಲ್ಲಿಡುವುದು ಪ್ರಾಮುಖ್ಯ.
ವೈದ್ಯನ ಪಾತ್ರ
ಕ್ರೈಸ್ತರು ವೈದ್ಯರುಗಳಿಗೆ ಮತ್ತು ಆಧುನಿಕ ವೈದ್ಯಕೀಯ ಚಿಕಿತ್ಸೆಗೆ ಹೇಗೆ ಸಂಬಂಧ ಕಲ್ಪಿಸಬೇಕು? ಬೈಬಲನ್ನು ಪರೀಕ್ಷಿಸುವಾಗ, ವೈದ್ಯರುಗಳಿಗೆ ಅನರ್ಹವಾದ ಗಣ್ಯತೆಯನ್ನು ಕೊಡಬೇಕೆಂಬುದಕ್ಕೆ ಯಾ ವೈದ್ಯಕೀಯ ವಿಜ್ಞಾನವು ಒಳ್ಳೆಯ ಆರೋಗ್ಯಕ್ಕೆ ಅಂತಿಮ ನಿರೀಕ್ಷೆ ಎಂಬುದಾಗಿ ವೀಕ್ಷಿಸುವುದಕ್ಕೆ ಯಾವ ಶಾಸ್ತ್ರೀಯ ಆಧಾರವನ್ನೂ ನಾವು ಕಾಣುವುದಿಲ್ಲ. ಬದಲಿಗೆ ಇದಕ್ಕೆ ಪ್ರತಿಕೂಲವಾದ ಪುರಾವೆಯಿದೆ. ಮಾರ್ಕನು ನಮಗೆ ಅನೇಕ ವರ್ಷಕಾಲ “ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸಿ”ನ ವಿಷಯ, “ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ” ಬಂದಿದ್ದ ಒಬ್ಬಳ ವಿಷಯ ಹೇಳುತ್ತಾನೆ. (ಮಾರ್ಕ 5:25-29) ಈ ಸಾಮಾನ್ಯ ರೋಗಕ್ಕೆ ಇಂದು ಅನೇಕ ವೇಳೆ ಯಶಸ್ವಿಯಾಗಿ ಚಿಕಿತ್ಸೆಯಾಗುತ್ತದಾದರೂ, ಅನೇಕ ರೋಗಗಳಿಗೆ ಚಿಕಿತ್ಸೆಯೇ ಇಲ್ಲದಿರುವುದು ಮಾತ್ರವಲ್ಲ, ಅನೇಕ ಚಿಕಿತ್ಸೆರಹಿತ ಹೊಸ ರೋಗಗಳು ಸಂತತವಾಗಿ ಕಂಡುಹಿಡಿಯಲ್ಪಡುತ್ತಾ ಇವೆ.
ಆದರೂ, ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ತುಸು ಯಾ ಯಾವುದೇ ಉಪಯುಕ್ತತೆಯಿಲ್ಲ ಎನ್ನುವ ಕೆಲವರ ವಿರುದ್ಧ ವೈಪರೀತ್ಯಕ್ಕೆ ಬೈಬಲು ಬೆಂಬಲ ನೀಡುವುದಿಲ್ಲ. ಕೆಲವರು ವೈದ್ಯರನ್ನು ಆಧಾರ ಪೀಠದಿಂದ ಕೆಳಗಿಳಿಸಿ ತಮ್ಮನ್ನು ಯಾ ಆ ಸಮಯದ ಗೀಳಾದ ಇತರ ಅವೈದ್ಯಕೀಯ ಮಾರ್ಗವನ್ನು ಅದರ ಮೇಲಿರಿಸುತ್ತಾರೆ. ಕೊಲೊಸ್ಸೆ 4:14ರಲ್ಲಿ ಲೂಕನನ್ನು “ಪ್ರಿಯ” ವೈದ್ಯನೆಂದು ವರ್ಣಿಸಿದ್ದು ಅವನ ವೈದ್ಯಕೀಯ ಸಾಮರ್ಥ್ಯದ ಕಾರಣದಿಂದಲ್ಲ, ಆತ್ಮಿಕ ಅರ್ಹತೆಯ ಕಾರಣದಿಂದಲೇ ಎಂಬುದು ನಿಸ್ಸಂಶಯ. ಆದರೂ, ಪವಿತ್ರ ಶಾಸ್ತ್ರಗಳ ಭಾಗವನ್ನು ದೇವಪ್ರೇರಣೆಯಿಂದ ಬರೆಯಲು ಅವನಿಗೆ ದೊರೆತ ಸುಯೋಗವು ಅವನ ವೈದ್ಯಕೀಯ ಚಿಕಿತ್ಸೆ ಅನೈತಿಕ ಯಾ ಅಶಾಸ್ತ್ರೀಯವೂ ಆಗಿರುತ್ತಿದ್ದರೆ ಅವನಿಗೆ ದೊರೆಯುತ್ತಿದ್ದುದು ಅಸಂಭಾವ್ಯ.
ಲೂಕನು ಆ ಕಾಲಕ್ಕೆ ಆಧುನಿಕವಾಗಿದ್ದ ರೀತಿಯ ಚಿಕಿತ್ಸೆ ನಡೆಸುತ್ತಿದ್ದನೆಂಬುದಕ್ಕೆ ರುಜುವಾತಿದೆ. ಅವನ ಪದಪ್ರಯೋಗ ಮತ್ತು ವೈದ್ಯಕೀಯ ವರ್ಣನೆಯು ಹಿಪಾಕ್ರೆಟೀಸನ ಪ್ರಭಾವವನ್ನು ಸೂಚಿಸುತ್ತದೆ. ಹಿಪಾಕ್ರೆಟೀಸನು ಸದಾ ನಿಖರವಾಗಿರದಿದ್ದರೂ, ಅವನು ಚಿಕಿತ್ಸಾ ಪದ್ಧತಿಗೆ ತಾರ್ಕಿಕತೆಯನ್ನು ತಂದು ಔಷಧದ ಕುರಿತ ಮೂಢಭಕ್ತಿ ಮತ್ತು ಕೃತಕ ಧಾರ್ಮಿಕ ಊಹೆಗಳನ್ನು ಖಂಡಿಸಿದನು. ಇದಲ್ಲದೆ, ವೈದ್ಯಕೀಯ ಅನುಭವಿಗಳು ರೋಗದೊಂದಿಗೆ ವ್ಯವಹರಿಸಲು ಸ್ವಲ್ಪವಾದರೂ ಉಪಯುಕ್ತರು ಎಂದು ಒಪ್ಪಲ್ಪಡದೆ ಇರುತ್ತಿದ್ದರೆ, ಲೂಕ 5:31ರಲ್ಲಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು” ಎಂಬ ಯೇಸುವಿನ ಸರಳ ದೃಷ್ಟಾಂತಕ್ಕೆ ಅರ್ಥವಿರುತ್ತಿರಲಿಲ್ಲ.
ಪ್ರತಿಜೀವಕ (antibiotic), ಪೂತಿನಾಶಕ (antiseptic), ಯಾ ನೋವುಶಾಮಕ (analgesic) ಗಳ ಉಪಯೋಗ ಬೇಕಾಗಿರುವಲ್ಲಿ ವಿಪರೀತ ವೀಕ್ಷಣ ತೆಗೆದುಕೊಳ್ಳುವುದಕ್ಕೆ ಯಾವ ಶಾಸ್ತ್ರಾಧಾರವೂ ಇಲ್ಲ. ಯೆರೆಮೀಯ 46:11 ಮತ್ತು 51:8ರಲ್ಲಿ ಗಿಲ್ಯಾದಿನ ಅಂಜನ ಔಷಧವನ್ನು ವರ್ಣಿಸಲಾಗಿದೆ. ಇದರಲ್ಲಿ ನೆಮ್ಮದಿ ಕೊಡುವ ನೋವುಶಾಮಕ ಮತ್ತು ಪೂತಿನಾಶಕ ಗುಣಗಳು ಇದ್ದಿರಬಹುದು. ಆಂತರಿಕವಾಗಿ ಔಷಧವನ್ನು ತೆಗೆದುಕೊಳ್ಳುವ ವಿರುದ್ಧ ಯಾವ ಶಾಸ್ತ್ರಾಧಾರಿತ ಯಾ ತಾತ್ವಿಕ ಅಭಿಪ್ರಾಯಗಳೂ ಇಲ್ಲ.
ಆದರೂ, ದೊಡ್ಡ ಪ್ರಮಾಣದ ಪ್ರತಿಜೀವಕ ಸೇವನೆಯೂ, ಲೋಕವ್ಯಾಪಕವಾಗಿ ಒಂದನೆಯ ನಂಬರಿನ ಮರಣ ಕಾರಣವಾಗಿರುವ ನೊಣ, ಸೊಳ್ಳೆ, ಮತ್ತು ಬಸವನ ಹುಳುಗಳು ಒಯ್ಯುವ ಸೋಂಕುರೋಗಕ್ಕೆ ಎಡೆಬಿಡದೆ ಬಲಿ ಬೀಳುವುದನ್ನು ಸೋಲಿಸಿರುವುದಿಲ್ಲ. ಆರೋಗ್ಯ ಕೆಲಸಗಾರರು ಹಿಂದೆ ಹೋಗಿ, ಮೂಲ ಬೈಬಲ್ ಸೂತ್ರಗಳಾದ ಭದ್ರವಾದ ರೊಚ್ಚು ತೊಲಗಿಸುವಿಕೆ, ನೀರಿನ ಸರಬರಾಯಿಯ ರಕ್ಷಣೆ, ಕ್ರಿಮಿ ವಾಹಕಗಳ ನಿಯಂತ್ರಣ, ವ್ಯಕ್ತಿ ವ್ಯಕ್ತಿಯ ಮತ್ತು ಕೈಯಿಂದ ಬಾಯಿಯ ಸಂಪರ್ಕದ ವಿಷಯ ಮುಂಜಾಗ್ರತೆ—ಇವುಗಳನ್ನು ಕಲಿಸಿಕೊಡಬೇಕಾಗಿ ಬಂತು. 1970ಗಳಷ್ಟು ಇತ್ತೀಚೆಗೂ ನರ್ಸ್ಗಳಿಗೂ ವೈದ್ಯರಿಗೂ ಆಸ್ಪತ್ರೆಯ ತೊಳೆತೊಟ್ಟಿಗಳ ಮತ್ತು ರೋಗಿಗಳ ಮಂಚಗಳ ಮೇಲೆ, ರೋಗ ಹರಡುವುದನ್ನು ತಡೆಗಟ್ಟುವ ಒಂದನೆಯ ನಂಬರಿನ ವಿಧವಾದ, “ಕೈ ತೊಳೆಯಿರಿ” ಎಂಬ ಗುರುತು ಹಲಗೆಗಳು ಪದೇ ಪದೇ ನೆನಪು ಹುಟ್ಟಿಸುತ್ತಿದವ್ದು.
ಮುಂಜಾಗ್ರತೆಯ ಒಂದು ನುಡಿ
ಆರೋಗ್ಯ ಸಲಹೆಯನ್ನು ಕೊಡುವವರು—ವೈದ್ಯರಾಗಲಿ, ಕಶೇರುಮರ್ದಕರಾಗಲಿ, ಹೋಮಿಯಾಪತಿ ವೈದ್ಯರಾಗಲಿ, ಯಾ ಸದುದ್ದೇಶವಿದ್ದರೂ ತಿಳಿವಳಿಕೆಯಿಲ್ಲದ ಸ್ನೇಹಿತನಾಗಲಿ—ರೋಗಿಗೆ ಸಲಹೆ ಕೊಡುವಾಗ ದೊಡ್ಡ ಜವಾಬ್ದಾರಿಯನ್ನು ವಹಿಸುತ್ತಾರೆ. ಅವರು ಕೊಡುವ ಸಲಹೆ ಹಾನಿಕರವಾಗಿರುವಾಗ ಯಾ ಅನೇಕ ವೇಳೆ ಪರಿಣಾಮಕಾರಿಯಾಗಿದ್ದ ಚಿಕಿತ್ಸೆಯಿಂದ ಇದು ಅವರನ್ನು ತಿರುಗಿಸುವುದಾದರೆ, ಅವರ ಮನಸ್ಸನ್ನು ಕೆಡಿಸುವುದಾದರೆ, ಯಾ ಸಹಾಯವನ್ನು ವಿಳಂಬಿಸುವುದಾದರೆ ಈ ಜವಾಬ್ದಾರಿ ವಿಶೇಷವಾಗಿ ಅವರ ಮೇಲಿರುತ್ತದೆ. ವೈದ್ಯರಿಗೆ ಹಾಗೂ ರೋಗಿಗಳಿಗೆ ಅವರು ಸಹಾಯವನ್ನು ವ್ಯಕ್ತಿಪರವಾಗಿ ಹತಾಶರಾಗಿ ಹುಡುಕುತ್ತಿರಬಹುದಾಗಿರುವಾಗ, ವೈದ್ಯ ನಟನೆ ಮತ್ತು ಪ್ರೇತ ವ್ಯವಹಾರಗಳ ವಿರುದ್ಧ ಕಾಯಬೇಕೆಂಬುದಕ್ಕೆ ಧಾರಾಳ ಎಚ್ಚರಿಕೆಗಳು ಬೈಬಲಿನಲ್ಲಿವೆ. ಜ್ಞಾನೋಕ್ತಿ 14:15ನ್ನು ನೆನೆಯಿರಿ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”
ಪವಿತ್ರ ಶಾಸ್ತ್ರಗಳಲ್ಲಿ ಇಟ್ಟಿರುವ ಮೂಲಸೂತ್ರಗಳು ಇಂದು ಆರೋಗ್ಯವನ್ನು ಕಾಪಾಡಲಿಕ್ಕೆ ಪ್ರಾಯೋಗಿಕವೇ? ಮೋಶೆಯ ಧರ್ಮಶಾಸ್ತ್ರದ ಪ್ರಧಾನ ಗುರಿ ರೋಗತಡೆಯಾಗಿದ್ದಂತೆಯೇ, ಇಂದು ಆರೋಗ್ಯವನ್ನು ರೋಗ ತಟ್ಟದಂತೆ ಕಾಪಾಡುವ ಮಾರ್ಗವು ಪ್ರಧಾನವಾಗಿ ಚಿಕಿತ್ಸೆಯನ್ನೇ ಆಧಾರ ಮಾಡಿರುವ ಮಾರ್ಗಕ್ಕಿಂತ ಎಷ್ಟೋ ಹೆಚ್ಚು ಬೆಲೆಯದ್ದಾಗಿದೆ. ನ್ಯೂನ ವಿಕಾಸವಿರುವ ದೇಶಗಳಲ್ಲಿ ಆಧುನಿಕ ಆರೋಗ್ಯ ಚಿಕಿತ್ಸೆಗಳನ್ನು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುವಲ್ಲಿ ಲೋಕಾರೋಗ್ಯ ಸಂಸ್ಥೆಯ ಆಧುನಿಕ ಪಾಠ ಹೀಗಿದೆ: “ರೋಗ ಚಿಕಿತ್ಸೆಗಿಂತ ರೋಗತಡೆಯೇ ಲೇಸು.”
ಕೊನೆಯದಾಗಿ, ಒಬ್ಬ ಕ್ರೈಸ್ತನಿಗೆ ಆರೋಗ್ಯದ ಕುರಿತು ಗೌರವಪೂರ್ಣವಾದ ದೂರವ್ಯಾಪ್ತಿಯ ದೃಷ್ಟಿಯಿರಬೇಕು. ತನ್ನ ಒಳ್ಳೆಯ ಆರೋಗ್ಯವನ್ನು ದೇವರ ಮಹಿಮೆಗಾಗಿ ಆನಂದಕರವಾದ ರಾಜ್ಯ ಕೆಲಸವನ್ನು ವೃದ್ಧಿಸುವರೆ ಅವನು ವಿನಿಯೋಗಿಸುವ ಗುರಿಯಿರಬೇಕು. ಮತ್ತು ಆ ರಾಜ್ಯದಾಳಿಕೆಯಲ್ಲಿ ವಾಗ್ದಾನವು ಹೀಗಿದೆ: “ಚೀಯೋನಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24. (g91 11/22)
[ಪುಟ 4 ರಲ್ಲಿರುವ ಚಿತ್ರ]
“ನನ್ನ ತಾಯಿಯ ಹೊಟ್ಟೆಯಲ್ಲಿ ಮರೆಮಾಡಿದಿ”