ಹಾನಿಕರ ಹರಟೆಯ ವಿರುದ್ಧ ಕಾಪಾಡಿಕೊಳ್ಳಿರಿ!
“ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.”—ಜ್ಞಾನೋಕ್ತಿ 10:19.
1. ದ್ವೇಷಪೂರ್ಣವಾದ ಹರಟೆ ಅಥವಾ ಮಿಥ್ಯಾಪವಾದ ಎಷ್ಟು ಹಾನಿಕರ?
ಒಂದು ಮಾರಕ ವಿಷವನ್ನು ಆರೋಗ್ಯಕರವಾದ ಪೇಯವಾಗಿ ಯಾವುದೂ ಪರಿವರ್ತನೆ ಮಾಡದು. ದುರುದ್ದೇಶದ ಹರಟೆ ಅಥವಾ ಮಿಥ್ಯಾಪವಾದವನ್ನು ಯೋಗ್ಯವಾಗಿಯೇ ವಿಷಕ್ಕೆ ಹೋಲಿಸಲಾಗಿದೆ. ಅದೂ ಒಬ್ಬ ಪ್ರಾಮಾಣಿಕನ ಒಳ್ಳೆಯ ಹೆಸರನ್ನು ಅಪಹರಿಸಬಲ್ಲದು. ರೋಮನ್ ಕವಿ ಜೂವೆನಲ್ ಮಿಥ್ಯಾಪವಾದವನ್ನು “ವಿಷಗಳಲ್ಲಿ ಅತ್ಯಂತ ಕೆಟ್ಟದು” ಎಂದು ಕರೆದನು. ಮತ್ತು ಇಂಗ್ಲಿಷ್ ನಾಟಕಗಾರ ವಿಲ್ಯಂ ಶೇಕ್ಸ್ಪಿಯರ್, ನಾಟಕದ ಪಾತ್ರಧಾರಿಗಳಲ್ಲೊಬ್ಬನ ಬಾಯಿಯಲ್ಲಿ ಈ ಮಾತುಗಳನ್ನು ಹಾಕಿದನು: “ನನ್ನಿಂದ ನನ್ನ ಒಳ್ಳೆಯ ಹೆಸರನ್ನು ಕದಿಯುವವನು ತನ್ನನ್ನು ಸಂಪದ್ಯುಕ್ತ ಮಾಡದ ವಿಷಯವನ್ನು ನನ್ನಿಂದ ಅಪಹರಿಸುತ್ತಾನೆ ಹಾಗೂ ನನ್ನನ್ನು ಬಡವನನ್ನಾಗಿ ಮಾಡುತ್ತಾನೆ ನಿಶ್ಚಯ.”
2. ಯಾವ ಪ್ರಶ್ನೆಗಳು ಪರಿಗಣನೆಗೆ ಯೋಗ್ಯವಾಗಿವೆ?
2 ಆದರೆ ಹರಟೆಯೆಂದರೇನು? ಅದು ಮಿಥ್ಯಾಪವಾದದಿಂದ ಹೇಗೆ ಭಿನ್ನವಾಗಿರಬಹುದು? ಹಾನಿಕಾರಕ ಹರಟೆಯ ಎದುರು ಕಾಪಾಡಿಕೊಳ್ಳಬೇಕೇಕೆ? ಮತ್ತು ಇದನ್ನು ಹೇಗೆ ಮಾಡ ಸಾಧ್ಯವಿದೆ?
ಅವುಗಳು ಭಿನ್ನವಾಗಿರುವ ರೀತಿ
3. ಹರಟೆ ಮತ್ತು ಮಿಥ್ಯಾಪವಾದದ ಮಧ್ಯೆ ಇರುವ ವ್ಯತ್ಯಾಸವೇನು?
3 ಹರಟೆಯೆಂದರೆ “ಇತರ ಜನರ ಮತ್ತು ಅವರ ವಿಚಾರಗಳ ಕುರಿತು, ಯಾವಾಗಲೂ ಸತ್ಯವಲ್ಲದ ವ್ಯರ್ಥಮಾತು.” ಅದು, “ಲಘುವಾದ ಬಳಕೆಯ ಮಾತು ಅಥವಾ ಬರಹ.” ನಾವೆಲ್ಲರೂ ಜನರ ವಿಷಯ ಕಾಳಜಿ ವಹಿಸುವುದರಿಂದ, ಕೆಲವು ಸಲ ನಾವು ಇತರರ ಕುರಿತು ಒಳ್ಳೆಯ ರಚನಾತ್ಮಕ ವಿಷಯಗಳನ್ನು ಹೇಳುತ್ತೇವೆ. ಆದರೆ ಮಿಥ್ಯಾಪವಾದ ಭಿನ್ನವಾಗಿದೆ. ಅದು, “ಇನ್ನೊಬ್ಬನು ಒಳ್ಳೆಯ ಹೆಸರು ಮತ್ತು ಖ್ಯಾತಿಗೆ ಹಾನಿಮಾಡುವ ಉದ್ದೇಶದ ಸುಳ್ಳು ವರದಿ.” ಸಾಧಾರಣವಾಗಿ, ಇಂಥ ಮಾತುಗಳು ಮತ್ಸರದಿಂದ ತುಂಬಿದ್ದು ಅವು ಅಕ್ರಿಸ್ತೀಯವಾಗಿವೆ.
4. ಒಬ್ಬ ಲೇಖಕನಿಗನುಸಾರ ಚಾಡಿ ಹೇಗೆ ಆರಂಭವಾಗಬಹುದು, ಮತ್ತು ಅದರ ಉಗಮ ಯಾವುದರಿಂದ?
4 ಮುಗ್ಧ ಹರಟೆ ದೂಷಿತ ಮಿಥ್ಯಾಪವಾದಕ್ಕೆ ತಿರುಗೀತು. ಲೇಖಕ ಆರ್ಥರ್ ಮೀ ಹೇಳಿದ್ದು: “ಅನೇಕ ಸಲ, ಒಬ್ಬನಿಗೆ ಹಾನಿ ಮಾಡಿ ಅವನನ್ನು ಧ್ವಂಸಮಾಡುವ ಚಾಡಿ, ಪ್ರಾಯಶಃ, ಮೊದಲಲ್ಲಿ, ಮೈಗಳ್ಳತನಕ್ಕಿಂತ ಕೆಟ್ಟದ್ದಾಗಿರದ ವಿಷಯದಿಂದ ಎದ್ದು ಬರುವ ಹರಟೆಯಲ್ಲಿ ಆರಂಭವಾಗುತ್ತದೆ. ಇದು ಜಗತ್ತಿನ ಅತ್ಯಂತ ದೊಡ್ಡ ದುಷ್ಕರ್ಮಗಳಲ್ಲಿ ಒಂದಾಗಿದೆ. ಆದರೆ ವಾಡಿಕೆಯಾಗಿ, ಅದು ಮೂಢತನದಿಂದ ಬರುತ್ತವೆ. ಇದನ್ನು ನಾವು ಮುಖ್ಯವಾಗಿ, ಕಡಿಮೆ ಕೆಲಸವಿರುವವರ ಮತ್ತು ಜೀವನದಲ್ಲಿ ಒಂದು ನಿರ್ದಿಷ್ಟ ಉದ್ದೇಶವಿಲ್ಲದವರ ಮಧ್ಯೆ ಕಾಣುತ್ತೇವೆ.”
5. 1 ತಿಮೊಥಿ 5:11-15 ರಲ್ಲಿ ಪೌಲನ ಬುದ್ಧಿವಾದದ ಸಾರಾಂಶವೇನು?
5 ವ್ಯರ್ಥ ಮಾತು ಅಪವಾದಕ್ಕೆ ನಡಿಸಬಹುದಾಗಿರುವುದರಿಂದ ಅಪೊಸ್ತಲ ಪೌಲನು ಹಲವು ಹರಟೆಮಲ್ಲರ ವಿರೋಧ ಮಾತಾಡಿದನು. ಸಭಾ ಸಹಾಯಕ್ಕೆ ಅರ್ಹರಾಗಿರುವ ವಿಧವೆಯರ ವಿಷಯ ಹೇಳಿದ ಮೇಲೆ ಅವನು ಬರೆದುದು: “[ಕಡಿಮೆ] ಪ್ರಾಯದ ವಿಧವೆಯರನ್ನು ಪಟ್ಟಿಗೆ ಸೇರಿಸಬೇಡ; ಅವರು ಮದಿಸಿ ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದುವೆ ಮಾಡಿ ಕೊಳ್ಳಬೇಕೆಂದು ಇಷ್ಟ ಪಟ್ಟಾರು. . . . . ಅವರು ಮನೆಮನೆಗೆ ತಿರುಗಾಡುತ್ತಾ, ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವದಲ್ಲದೆ ಹರಟೆ ಮಾತಾಡುವವರೂ ಇತರರ ಕೆಲಸದಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ. ಆದುದರಿಂದ [ಕಡಿಮೆ] ಪ್ರಾಯದ ವಿಧವೆಯರು ಮದುವೆ ಮಾಡಿ ಕೊಂಡು ಮಕ್ಕಳನ್ನು ಹೆತ್ತು ಮನೆಯ ಯಜಮಾನಿಯರಾಗಿರುವದು ನನಗೆ ಒಳ್ಳೆಯದಾಗಿ ತೋಚುತ್ತದೆ; ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದ ಕೊಡದೆ ಇರುವರು. ಇಷ್ಟರೊಳಗೆ ಕೆಲವರು ದಾರಿಬಿಟ್ಟು ಸೈತಾನನನ್ನು ಹಿಂಬಾಲಿಸಿದ್ದಾರೆ.”—1 ತಿಮೊಥಿ 5:11-15.
6. ಚಾಡಿಗೆ ನಡಿಸುವ ಹರಟೆಯ ಸಂಬಂಧದಲ್ಲಿ ವೈಯಕ್ತಿಕ ಬಲಹೀನತೆಯನ್ನು ಜಯಿಸಲು ಏನು ಮಾಡಬೇಕು?
6 ಪೌಲನು ದೇವಪ್ರೇರಣೆಯಿಂದ ಬರೆದ ಕಾರಣ, ಅವನು ಸ್ತ್ರೀಯರ ಕುರಿತು ಅನ್ಯಾಯವಾದ ಹೇಳಿಕೆಗಳನ್ನು ಇಲ್ಲಿ ಮಾಡಲಿಲ್ಲ. ಅವನು ಹೇಳಿದ ವಿಷಯ ಅತಿ ಗಂಭೀರ ರೀತಿಯ ಯೋಚನೆಗೆ ಗ್ರಾಸ. ದೇವಭಕ್ತಿಯ ಯಾವ ಮಹಿಳೆಯೂ ‘ತಪ್ಪು ದಾರಿಗೆ ಹೋಗಿ ಸೈತಾನನನ್ನು ಹಿಂಬಾಲಿಸಲು’ ಇಷ್ಟ ಪಡಳು. ಆದರೂ, ಒಬ್ಬ ಕ್ರೈಸ್ತ ಮಹಿಳೆ ತನಗೆ ಹಾಗೆ ಮಾತಾಡುವ ಬಲಹೀನತೆ ಇದೆ, ಮತ್ತು ಅದು ತನ್ನನ್ನು ಮಿಥ್ಯಾಪವಾದದ ಅಪರಾಧಕ್ಕೆ ನಡಿಸೀತು ಎಂದು ಕಂಡು ಹಿಡಿಯುವುದಾದರೆ ಏನು? ಆಗ ಆಕೆ ಪೌಲನ ಬುದ್ಧಿವಾದವನ್ನು ದೈನ್ಯತೆಯಿಂದ ಅಂಗೀಕರಿಸಬೇಕು: “ಸ್ತ್ರೀಯರು ಗೌರವವುಳ್ಳವರಾಗಿರಬೇಕು.” ಅವನು ಇನ್ನೂ ಹೇಳಿದ್ದು: “ವೃದ್ಧ ಸ್ತ್ರೀಯರು ಚಾಡಿ ಹೇಳುವವರಾಗಿರದೆ . . . ಯೋಗ್ಯವಾದ ನಡತೆಯುಳ್ಳವರೂ . . . ಆಗಿರಬೇಕು.” (1 ತಿಮೊಥಿ 3:11; ತೀತ 2:3) ಸಹೋದರರೂ ಈ ವಿವೇಕದ ಸಲಹೆಯನ್ನು ಸಮ ಮನಸ್ಸಿನಿಂದ ಅನ್ವಯಿಸಿಕೊಳ್ಳಬೇಕು.
7. ನಾವೆಲ್ಲರೂ ಹೇಳುವುದನ್ನು ನಿಯಂತ್ರಣದಲ್ಲಿರಿಸಬೇಕೆಂದು ಶಾಸ್ತ್ರಾಧಾರಿತವಾಗಿ ನೀವೇಕೆ ಹೇಳುವಿರಿ?
7 ಕೆಲವು ಸಲ ನಾವೆಲ್ಲರೂ ಇತರ ಜನರ ವಿಷಯ, ಅವರ ಸೇವಾ ಅನುಭವ, ಇತ್ಯಾದಿಗಳ ವಿಷಯ ಮಾತಾಡುತ್ತೇವೆ. ಆದರೆ ನಾವು ಎಂದಿಗೂ ‘ಕುಳಿತುಕೊಂಡು, ಸಹೋದರನ ವಿರುದ್ಧ ಮಾತಾಡದೆ’ ಇರೋಣ. (ಕೀರ್ತನೆ 50:19, 20) ಹೌದು, ಮಿತಿಮೀರಿ ಮಾತಾಡುವುದು ವಿವೇಕಹೀನ ಕಾರ್ಯ, ಏಕಂದರೆ, “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.” (ಜ್ಞಾನೋಕ್ತಿ 10:19) ಹೀಗೆ, ಅದು ಹಾನಿಕರವಾಗಿ ಕಾಣದಿದ್ದರೂ ನಾವು ಹರಟೆಯ ವಿರುದ್ಧ ಎಚ್ಚರಿಕೆಯಿಂದಿರಬೇಕು. ಜನರ ವಿಷಯವೇ ಯಾವಾಗಲೂ ಮಾತನಾಡುವ ಅಗತ್ಯ ನಮಗಿಲ್ಲ. ಏಕಂದರೆ ನಮಗೆ ಪರಿಗಣಿಸಲು ನೀತಿಯ, ನೈರ್ಮಲ್ಯದ, ಪ್ರೀತಿಯ, ಸದ್ಗುಣದ ಮತ್ತು ಸ್ತುತ್ಯಾರ್ಹವಾದ ಅನೇಕ ಉತ್ತಮ ವಿಷಯಗಳಿವೆ.—ಫಿಲಿಪ್ಪಿಯ 4:8.
ಹರಟೆ ಮಿಥ್ಯಾಪವಾದವಾಗುವ ವಿಧ
8. ಜೊತೆ ಕ್ರೈಸ್ತರ ಕುರಿತು ಮಾತಾಡುವುದು ಯಾವಾಗಲೂ ತಪ್ಪಲ್ಲವೇಕೆ?
8 ನಾವು ನಿಷ್ಕೃಷ್ಟ ರೀತಿಯಲ್ಲಿ ಮಾತಾಡುವುದಾದರೆ ಮತ್ತು ನಮ್ಮ ಮಾತುಗಳಿಂದ ಹಾನಿ ಪರಿಣಮಿಸದಿರುವಲ್ಲಿ ಜೊತೆ ವಿಶ್ವಾಸಿಗಳ ಕ್ಷೇತ್ರ ಸೇವೆ ಮತ್ತು ಇತರ ದೇವಭಕ್ತಿಯ ಚಟುವಟಿಕೆಗಳ ಕುರಿತು ಮಾತಾಡುವುದರಲ್ಲಿ ಅಪಾಯವಿಲ್ಲ. ವಾಸ್ತವವಾಗಿ, ಇಂಥ ಸಕಾರಾತ್ಮಕ ಹೇಳಿಕೆಗಳು ಇತರರಿಗೆ ಪ್ರೋತ್ಸಾಹನೆ ನೀಡಬಹುದು. (ಅಪೊಸ್ತಲರ ಕೃತ್ಯಗಳು 15:30-33 ಹೋಲಿಸಿ.) ಕೆಲವು ಕ್ರೈಸ್ತರು ಗಾಯನೆಂಬ ನಂಬಿಗಸ್ತ ಹಿರಿಯನ ಕುರಿತು ಮಾತಾಡಿದರು. ಇವನಿಗೆ ಅಪೊಸ್ತಲ ಯೋಹಾನನು ಬರೆದುದು: “ಪ್ರಿಯನೇ, ಪರಿಚಯವಿಲ್ಲದವರಾದ ಸಹೋದರರಿಗೆ ನೀನು ಸತ್ಕಾರವನ್ನು ಮಾಡುವುದರಲ್ಲಿ ನಂಬುವವನಿಗೆ ಯೋಗ್ಯನಾಗಿ ನಡೆಯುತ್ತೀ. ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು.” (3 ಯೋಹಾನ 5, 6) ಹೀಗೆ, ಜೊತೆ ಕ್ರೈಸ್ತರ ವಿಷಯ ಮಾತನಾಡುವುದು ಯಾವಾಗಲೂ ತಪ್ಪಲ್ಲ.
9. (ಎ) ಲಘು ಹರಟೆ ಪ್ರಾಮಾಣಿಕರ ಮೇಲೆ ಮಿಥ್ಯಾಪವಾದ ಹೊರಿಸಲು ಹೇಗೆ ನಡಿಸೀತು? (ಬಿ) ನಾವು ಯಾವ ಪ್ರಶ್ನೆಗಳನ್ನು ಯೋಗ್ಯವಾಗಿಯೇ ಹಾಕಿಕೊಳ್ಳಬೇಕು?
9 ಆದರೂ ಲಘು ಮಾತು, ನಾವು ಪ್ರಾಮಾಣಿಕರ ಗುಪ್ತ ವಿಚಾರಗಳನ್ನು ಪರೀಕ್ಷಿಸುತ್ತಾ ಅವರ ಹೇತುವಿನ ವಿಷಯ ಪ್ರಶ್ನಿಸಿ ಅಥವಾ ಅವರ ನಡತೆಯ ಮೇಲೆ ಸಂಶಯವನ್ನೆಬ್ಬಿಸುವಲ್ಲಿ, ಅವರನ್ನು ಮಿಥ್ಯಾಪವಾದಕ್ಕೊಳಪಡಿಸಬಲ್ಲದು. ನಾವು ಹೀಗೆ ಪ್ರಶ್ನಿಸಿಕೊಳ್ಳುವುದನ್ನು ರೂಢಿ ಮಾಡುವುದು ಒಳ್ಳೆಯದು: ನನ್ನ ಮಾತಿನಿಂದ ಇನ್ನೊಬ್ಬನ ಖ್ಯಾತಿಗೆ ಹಾನಿಯಾದೀತೇ? ನಾನು ಹೇಳುವ ಮಾತು ಸತ್ಯವೋ? (ಪ್ರಕಟನೆ 21:8) ನಾನು ಅವನ ಸಮಕ್ಷಮದಲ್ಲಿಯೂ ಅದೇ ಮಾತನ್ನು ಹೇಳ ಬಲ್ಲನೋ? ಅದು ಸಭೆಯಲ್ಲಿ ವೈಷಮ್ಯವನ್ನು ಹುಟ್ಟಿಸೀತೇ? ನನ್ನ ಮಾತುಗಳಿಂದಾಗಿ ಅವನ ಸೇವಾ ಸುಯೋಗ ನಷ್ಟವಾದೀತೇ? ನನ್ನ ಹೃದಯದಲ್ಲಿ ಹೊಟ್ಟೆಕಿಚ್ಚು ಇದೆಯೋ? (ಗಲಾತ್ಯ 5:25, 26; ತೀತ 3:3) ನನ್ನ ಮಾತಿನ ಪರಿಣಾಮ ಒಳ್ಳೆಯದಾದೀತೇ ಅಥವಾ ಕೆಟ್ಟದ್ದೋ? (ಮತ್ತಾಯ 7:17-20) ಅಪೊಸ್ತಲರ ಕುರಿತು ನಾನು ಇದೇ ರೀತಿಯ ಮಾತುಗಳನ್ನು ಹೇಳುತ್ತಿದ್ದೆನೋ? (2 ಕೊರಿಂಥ 10:10-12; 3 ಯೋಹಾನ 9, 10) ಇಂಥ ಮಾತು, ಯೆಹೋವನಿಗೆ ಪೂಜ್ಯಭಾವನೆ ತೋರಿಸುವವರಿಗೆ ಅರ್ಹವೋ?
10, 11. ಕೀರ್ತನೆ 15:1, 3 ಕ್ಕನುಸಾರ, ದೇವರ ಅತಿಥಿಯಾಗಲು ಬಯಸುವಲ್ಲಿ ನಾವೇನು ಮಾಡೆವು?
10 ದೇವರಿಗೆ ಪೂಜ್ಯಭಾವನೆ ತೋರಿಸುವವರನ್ನು ಸೂಚಿಸುತ್ತಾ ಕೀರ್ತನೆ 15:1 ಕೇಳುವುದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” ಇಂಥ ವ್ಯಕ್ತಿಯ ಕುರಿತು ಕೀರ್ತನೆಗಾರ ದಾವೀದನು ಉತ್ತರ ಕೊಡುವುದು: “ಅವನು ಚಾಡಿ ಹೇಳದವನೂ ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ ಯಾರನ್ನೂ ನಿಂದಿಸದವನೂ ಆಗಿರಬೇಕು.” (ಕೀರ್ತನೆ 15:3) ಇಲ್ಲಿ “ಚಾಡಿಹೇಳು” ಎಂಬ ಪದವು “ನಡೆದಾಡು” ಅಂದರೆ “ತಿರುಗಾಡು” ಎಂಬ ಹಿಬ್ರೂ ಪದದಿಂದ ಬಂದಿದೆ. ಇಸ್ರಾಯೇಲ್ಯರಿಗೆ, “ನಿಮ್ಮ ಜನರ ಮಧ್ಯೆ ಚಾಡಿಯನ್ನು ಹಬ್ಬಿಸುತ್ತಾ ತಿರುಗಾಡಬೇಡಿರಿ” ಎಂಬ ಆಜ್ಞೆ ವಿಧಿಸಲಾಗಿತ್ತು. (ಯಾಜಕಕಾಂಡ 19:16, NIV) ‘ಚಾಡಿಯನ್ನು ಹಬ್ಬಿಸುತ್ತಾ ತಿರುಗಾಡುವ’ ಯಾವನೂ ದೇವರ ಅತಿಥಿಯೂ ಮಿತ್ರನೂ ಅಲ್ಲ.
11 ದೇವರ ಸ್ನೇಹಿತರು ತಮ್ಮ ಒಡನಾಡಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡರು. ಅವರು ತಮ್ಮ ಪ್ರಾಮಾಣಿಕ ಪರಿಚಯಸ್ಥರ ವಿಷಯದಲ್ಲಿ, ನಿಂದೆ ತರುವ ಕಥೆಗಳನ್ನು ಸತ್ಯವೆಂದು ಎಣಿಸರು ಅಥವಾ ಸ್ವೀಕರಿಸರು. ಜೊತೆವಿಶ್ವಾಸಿಗಳ ವಿಷಯ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಭಕ್ತಿಹೀನರಿಂದ ಬಂದಿರುವ ಕೆಟ್ಟ ಅಪವಾದಗಳಿಗೆ ಕೂಡಿಸುವ ಬದಲು, ನಾವು ಅವರ ವಿಷಯ ಹಿತಕರವಾದುದನ್ನು ಮಾತಾಡಬೇಕು. ನಮ್ಮ ನಂಬಿಗಸ್ತ ಸಹೋದರ, ಸಹೋದರಿಯರ ವಿಷಯದಲ್ಲಿ ನಿಂದೆಯ ಮಾತುಗಳನ್ನಾಡುತ್ತಾ ಅವರ ಹೊರೆಯನ್ನು ಹೆಚ್ಚಿಸಲು ನಾವೆಂದಿಗೂ ಅಪೇಕ್ಷಿಸಬಾರದು.
ತೊಂದರೆಗಳು ಏಳುವಾಗ
12. ನಮಗೆ ಭಿನ್ನಾಭಿಪ್ರಾಯವಿರುವ ಒಬ್ಬನ ಕುರಿತು ಹರಟೆಗೆ ಪ್ರೇರಿಸಲ್ಪಡುವಲ್ಲಿ ಅಪೊಸ್ತಲರ ಕೃತ್ಯಗಳು 15:36-41 ನಮಗೆ ಹೇಗೆ ಸಹಾಯ ಮಾಡಬಹುದು?
12 ನಮಗೆ ಇನ್ನೊಬ್ಬನೊಡನೆ ಗಂಭೀರ ಭಿನ್ನಾಭಿಪ್ರಾಯ ಏಳುವಾಗ, ಅಪೂರ್ಣರಾದ ನಾವು ಆ ವ್ಯಕ್ತಿಯ ವಿರುದ್ಧ ಮಾತಾಡಲು ಪ್ರೇರಿಸಲ್ಪಟ್ಟೇವು. ಅಪೊಸ್ತಲ ಪೌಲನು ತನ್ನ ದ್ವಿತೀಯ ಮಿಶನೆರಿ ಪ್ರಯಾಣಕ್ಕೆ ಹೊರಡಲಿದ್ದಾಗ ಏನಾಯಿತೆಂದು ಪರಿಗಣಿಸಿರಿ. ಮಾರ್ಕನು ತಮ್ಮೊಂದಿಗೆ ಹೋಗಬೇಕೆಂದು ಬಾರ್ನಬನು ಪಟ್ಟುಹಿಡಿದರೂ, “ನಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟವ [ಮಾರ್ಕ] ನನ್ನು ಕರೆದು ಕೊಂಡು ಹೋಗುವದು ತಕ್ಕದ್ದಲ್ಲವೆಂದು ನೆನಸಿ” ಪೌಲನು ಇದಕ್ಕೆ ಸಮ್ಮತಿಸಲಿಲ್ಲ. ಆಗ ಅವರೊಳಗೆ “ತೀಕ್ಷ್ಣ ವಾಗ್ವಾದ” ವುಂಟಾಗಿ ಅವರು ಅಗಲಿದರು. ಬಾರ್ನಬನು ಮಾರ್ಕನನ್ನು ಕರೆದು ಕೊಂಡು ಸೈಪ್ರಸಿಗೆ ಮತ್ತು ಪೌಲನು ಸೀಲನನ್ನು ಸಿರಿಯಾ ಮತ್ತು ಸಿಲಿಸಿಯಕ್ಕೆ ಕರೆದು ಕೊಂಡು ಹೋದರು. (ಅಪೊಸ್ತಲರ ಕೃತ್ಯಗಳು 15:36-41) ಕ್ರಮೇಣ, ಪೌಲ, ಬಾರ್ನಬ ಮತ್ತು ಮಾರ್ಕರ ಮಧ್ಯೆ ಇದ್ದ ಮನಸ್ತಾಪ ಗುಣಮುಖವಾಗಿದ್ದಿರಬೇಕು, ಏಕಂದರೆ ಮಾರ್ಕನು ಅಪೊಸ್ತಲನೊಂದಿಗೆ ರೋಮಿನಲ್ಲಿದ್ದದ್ದು ಮಾತ್ರವಲ್ಲ, ಪೌಲನು ಅವನನ್ನು ಪ್ರಶಂಸಿಯೂ ಮಾತಾಡಿದನು. (ಕೊಲೊಸ್ಸೆಯ 4:10) ಭಿನ್ನಾಭಿಪ್ರಾಯವಿದ್ದರೂ, ಆ ಕ್ರೈಸ್ತರು ಜೊತೆವಿಶ್ವಾಸೀಗಳ ಮಧ್ಯೆ ಹೋಗಿ ಪರಸ್ಪರ ಹರಟೆ ಹೊಡೆದಿದ್ದರೆಂಬುದಕ್ಕೆ ಯಾವ ರುಜುವಾತೂ ಇಲ್ಲ.
13. ಪೇತ್ರನನ್ನೊಳಗೊಂಡ ಯಾವ ಸನ್ನಿವೇಶದಲ್ಲಿ, ಪೌಲನು ಜೊತೆ ಕ್ರೈಸ್ತನ ವಿಷಯ ಹರಟೆ ಹೊಡೆಯುವ ಶೋಧನೆಯ ಸಾಧ್ಯತೆಯನ್ನು ತಡೆದನು?
13 ಪೌಲನು ಕೇಫ (ಪೇತ್ರ) ನನ್ನು ಅವನು ಯೆರೂಸಲೇಮಿನ ಕೆಲವು ಯೆಹೂದಿ ಕ್ರೈಸ್ತರ ಸಮಕ್ಷಮದಲ್ಲಿ ಅನ್ಯಜನರಿಂದ ಕ್ರೈಸ್ತರಾಗಿದವ್ದರೊಂದಿಗೆ ಊಟ ಮಾಡಲು ಮತ್ತು ಸಹವಹಿಸಲು ನಾಚಿಕೊಂಡದ್ದಕ್ಕಾಗಿ ಗದರಿಸಿದಾಗ ಹಾನಿಕಾರಕ ಹರಟೆಯನ್ನು ಹಬ್ಬಿಸುವ ಶೋಧನಾ ಸಾಧ್ಯತೆಯನ್ನು ತಡೆದು ಹಿಡಿದನು. ಪೇತ್ರನ ಬೆನ್ನ ಹಿಂದಿನಿಂದ ಮಾತಾಡು ಬದಲು ಅವನನ್ನು “ಮುಖಾಮುಖಿಯಾಗಿ” “ಎಲ್ಲರ ಮುಂದೆ” ಎದುರಿಸಿದನು. (ಗಲಾತ್ಯ 2:11-14) ಪೇತ್ರನು ಸಹ ತನ್ನನ್ನು ಗದರಿಸಿದವನ ಕುರಿತು ಹರಟೆ ಹೊಡೆಯಲಿಲ್ಲ. ವಾಸ್ತವವಾಗಿ, ಅವನು ಸಮಯಾನಂತರ “ನಮ್ಮ ಪ್ರಿಯ ಸಹೋದರ ಪೌಲನು” ಎಂದು ಅವನನ್ನು ಸಂಬೋಧಿಸಿದನು. (2 ಪೇತ್ರ 3:15) ಹೀಗೆ, ಒಬ್ಬ ಜೊತೆ ವಿಶ್ವಾಸಿಯನ್ನು ತಿದ್ದಬೇಕಾಗಿ ಬಂದರೂ ಅವನ ವಿಷಯ ಗಾಳಿಸುದ್ದಿ ಹಬ್ಬಿಸುವ ನೆವವನ್ನು ಇದು ಒದಗಿಸುವುದಿಲ್ಲ. ಇಂಥ ಮಾತಿನ ವಿರುದ್ಧ ಎಚ್ಚರಿಕೆಯಿಂದಿರಲು ಮತ್ತು ಹಾನಿಕರ ಹರಟೆಯನ್ನು ಹಬ್ಬಿಸಲು ಇರುವ ಶೋಧನೆಯನ್ನು ತಡೆಯಲು ಅತ್ಯುತ್ತಮ ಕಾರಣಗಳಿವೆ.
ಏಕೆ ಎಚ್ಚರಿಕೆ?
14. ಅಪಾಯಕರವಾದ ಹರಟೆಗೆ ಕಿವಿಗೊಡದಿರಲು ಅಥವಾ ಅದನ್ನು ಹಬ್ಬಿಸದಿರಲು ಮುಖ್ಯ ಕಾರಣ ಯಾವುದು?
14 ನಾವು ಹಾನಿಕರವಾದ ಹರಟೆಗೆ ಕಿವಿಗೊಡದಿರುವ ಮತ್ತು ಹಬ್ಬಿಸದಿರುವ ಮುಖ್ಯ ಕಾರಣವು ಚಾಡಿಯನ್ನು ಖಂಡಿಸುವ ಯೆಹೋವನನ್ನು ಮೆಚ್ಚಿಸಲು ಅಪೇಕ್ಷಿಸುವುದೇ. ಈ ಮೊದಲೇ ನೋಡಿರುವಂತೆ, ಇಂಥ ಮಾತುಗಳನ್ನು ದೇವರು ವೀಕ್ಷಿಸುವ ವಿಧ, ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲ್ಪಟ್ಟಾಗ ಸ್ಪಷ್ಟ ಮಾಡಲ್ಪಟ್ಟಿತು: “ನಿಮ್ಮ ಜನರ ಮಧ್ಯೆ ಚಾಡಿ ಹೇಳುವ ಸಲುವಾಗಿ ನೀವು ಸುತ್ತಾಡಬಾರದು. ನಿಮ್ಮ ಜೊತೆಗಾರನ ರಕ್ತದ ವಿರುದ್ಧ ನೀವು ಏಳಬಾರದು. ನಾನು ಯೆಹೋವನು.” (ಯಾಜಕಕಾಂಡ 19:16, NW) ನಮಗೆ ದೈವಿಕ ಅನುಗ್ರಹ ಬೇಕಿರುವುದಾದರೆ ನಮ್ಮ ಸಂಭಾಷಣೆಯಲ್ಲಿ ಬರುವ ಯಾರ ಮೇಲೆಯೂ ಮಿಥ್ಯಾಪವಾದ ಹಾಕಬಾರದು.
15. ಪ್ರಧಾನ ಚಾಡಿಕೋರನಾರು, ಮತ್ತು ಅಪಾಯಕರವಾದ ಹರಟೆಯಲ್ಲಿ ಭಾಗವಹಿಸುವುದರಿಂದ ದೇವರೊಂದಿಗೆ ನಮಗಿರುವ ಸಂಬಂಧಕ್ಕೆ ಯಾವ ಪರಿಣಾಮವಾಗಬಲ್ಲದು?
15 ಹಾನಿಕರ ಹರಟೆಯಲ್ಲಿ ಪಾಲು ತೆಗೆದು ಕೊಳ್ಳದಿರಲು ಇನ್ನೊಂದು ಕಾರಣವು, ಯೆಹೋವನ ಪ್ರಧಾನ ಮಿಥ್ಯಾಪಾದಕನಾದ ಸೈತಾನನನ್ನು ಅನುಸರಿಸುವಂತೆ ಇದು ಮಾಡಸಾಧ್ಯವಿರುವುದರಿಂದಲೇ. ದೇವರ ಈ ಪ್ರಧಾನ ಶತ್ರುವಿಗೆ ಯೋಗ್ಯವಾಗಿಯೇ “ಪಿಶಾಚ”, (ಗ್ರೀಕ್, ಡಿಯಾಬೊಲೊಸ್) ಅಂದರೆ “ಮಿಥ್ಯಾಪವಾದಿ” ಎಂಬ ಹೆಸರು ಕೊಡಲ್ಪಟ್ಟಿತು. ಹವ್ವಳು ಸೈತಾನನು ದೇವರ ವಿರುದ್ಧ ಹೇಳಿದ ಆಪಾದನಾತ್ಮಕ ಮಾತುಗಳಿಗೆ ಕಿವಿಗೊಟ್ಟು ಅದನ್ನು ಕಾರ್ಯರೂಪಕ್ಕೆ ಹಾಕಿದಾಗ ಪ್ರಥಮ ಮಾನವ ಜೊತೆ ಅದರ ಅತ್ಯುತ್ತಮ ಸ್ನೇಹಿತನಿಂದ ಬೇರ್ಪಟ್ಟಿತು. (ಆದಿಕಾಂಡ 3:1-24) ನಾವು ಸೈತಾನನ ಕುತಂತ್ರಗಳಿಗೆ ಬಲಿಬಿದ್ದು ದೈವಿಕ ಅಸಮ್ಮತಿಗೆ ಅರ್ಹವಾಗಿರುವ ಹಾನಿಕರ ಮಾತುಗಳಲ್ಲಿ ಸೇರಿಕೊಂಡು ಹೀಗೆ ನಮ್ಮ ಅತ್ಯಾಪ್ತ ಸ್ನೇಹಿತನಾದ ಯೆಹೋವ ದೇವರಿಂದ ಎಂದಿಗೂ ಬೇರ್ಪಡದೆ ಇರೋಣ.
16. ಚಾಡಿಕೋರನು ‘ಮಿತ್ರರನ್ನು ಅಗಲಿಸುವುದು’ ಹೇಗೆ?
16 ದುರುದ್ದೇಶದ ಹರಟೆಮಲ್ಲರು ಮಿತ್ರರನ್ನು ಬೇರ್ಪಡಿಸುವುದರಿಂದ ನಾವು ಅವರಿಗೆ ಕಿವಿಗೊಡಬಾರದು. ಅನೇಕ ವೇಳೆ, ಚಾಡಿಕೋರರು ಅತಿಶಯೋಕ್ತಿಗಳನ್ನಾಡಿ, ತಪ್ಪಾಗಿ ಪ್ರತಿನಿಧೀಕರಿಸಿ, ಸುಳ್ಳಾಡಿ, ಉದ್ರೇಕಕಾರಿ ಮಾತುಗಳ ಗುಡ್ಡೆಯನ್ನೇ ಹಾಕುತ್ತಾರೆ. ಒಬ್ಬನೊಂದಿಗೆ ಮುಖಾಮುಖಿಯಾಗಿ ಮಾತಾಡುವ ಬದಲು ಅವರು ಅವನ ಹಿಂದುಗಡೆ ಪಿಸುಗುಟ್ಟುತ್ತಾರೆ. ಅನೇಕ ವೇಳೆ ಇದರಿಂದ ಅನಾಧಾರಿತ ಸಂಶಯಗಳೇಳುತ್ತವೆ. ಹೀಗೆ, “ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.”—ಜ್ಞಾನೋಕ್ತಿ 16:28.
17. ಲಘು ಹರಟೆಯಲ್ಲಿ ಆಳವಾಗಿ ಸೇರಿಕೊಳ್ಳುವ ವಿಷಯ ನಾವು ಎಚ್ಚರಿಕೆಯಿಂದಿರಬೇಕು ಏಕೆ?
17 ಲಘು ಹರಟೆಯಲ್ಲಿಯೂ ಆಳವಾಗಿ ಸೇರಿಕೊಳ್ಳುವುದರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು. ಏಕೆ? ಏಕೆಂದರೆ ಯಾರಿಗೂ ನೋವಾಗಲಿಕ್ಕಾಗಿ ಹೇಳಿರದ ಮಾತು ಪುನರಾವೃತ್ತಿಯಾಗುವಾಗ ನೋವನ್ನುಂಟು ಮಾಡಬಹುದು. ಅದು ದೇವಭಕ್ತನ ಒಳ್ಳೆಯ ಹೆಸರನ್ನು ಅಪಹರಿಸಿ ಅವನ ಖ್ಯಾತಿಯನ್ನು ಹಾನಿಗೊಳಿಸುವ ತನಕವೂ ಅಲಂಕರಿಸಲ್ಪಟ್ಟು ತಿರುಚಲ್ಪಡಬಹುದು. ಹೀಗಾಗುವಲ್ಲಿ, ನೀವು ಆ ಕಥೆಯ ಜನಕರಾಗಿದ್ದರೆ ಅಥವಾ ಅದನ್ನು ಹಬ್ಬಿಸಿದವರಾಗಿದ್ದರೆ ಸಹ, ನಿಮಗೆ ಹೇಗೆ ಅನಿಸೀತು? ನೀವು ಹಾನಿಕಾರಕರು ಎಂಬ ದೃಷ್ಟಿಯಲ್ಲಿ ಜನರು ನಿಮ್ಮನ್ನು ನೋಡಿಯಾರು ಮತ್ತು ಆ ಕಾರಣದಿಂದ ನಿಮ್ಮ ಒಡನಾಟವನ್ನು ಅವರು ಹುಡುಕದೆ ಇದ್ದಾರು.—ಜ್ಞಾನೋಕ್ತಿ 20:19, ಹೋಲಿಸಿ.
18. ಹರಟೆ ಒಬ್ಬನನ್ನು ಸುಳ್ಳುಗಾರನಾಗಿ ಹೇಗೆ ಮಾಡೀತು?
18 ಇಂಥ ಹಾನಿಕಾರಕ ಹರಟೆ ನಿಮ್ಮನ್ನು ಸುಳ್ಳರಾಗಿ ಮಾಡಸಾಧ್ಯವಿರುವುದೇ ಎಚ್ಚರಿಕೆಯಿಂದಿರಲು ಇನ್ನೊಂದು ಕಾರಣ. “ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು. ಇವು ಹೊಟ್ಟೆಯೊಳಕ್ಕೇ ಇಳಿಯುವವು.” (ಜ್ಞಾನೋಕ್ತಿ 26:22) ನೀವು ಸುಳ್ಳನ್ನು ನುಂಗಿ ಅವುಗಳನ್ನು ಪುನರಾವೃತ್ತಿಸುವುದಾದರೆ? ಆ ಸುಳ್ಳುಗಳು ಸತ್ಯವೆಂದು ನೀವೆಣಿಸಿದರೂ ಅವುಗಳನ್ನು ಹಬ್ಬಿಸುವಲ್ಲಿ ನೀವು ಸುಳ್ಳಾಡುತ್ತೀರಿ. ಮತ್ತು ಅವು ಸುಳ್ಳೆಂದು ಬಯಲಾಗುವಾಗ ನೀವೂ ಸುಳ್ಳರೆಂದು ಎಣಿಸಲಾಗಬಹುದು. ಹಾಗೆ ನಡೆಯಬೇಕೆಂಬುದು ನಿಮ್ಮ ಇಚ್ಛೆಯೋ? ಧಾರ್ಮಿಕ ಸುಳ್ಳುಗಳಿಗೆ ಸುಳ್ಳು ಬೋಧಕರು ಜವಾಬ್ದಾರರೆಂದು ದೇವರು ಎಣಿಸುತ್ತಾನಲ್ಲವೇ? ಹೌದು, ಅದೇ ರೀತಿ ಸುಳ್ಳು ಹೇಳುವ ಮಿಥ್ಯಾಪವಾದಿಗಳನ್ನೂ ಆತನು ಹೊಣೆಗಾರರಾಗಿ ಮಾಡುತ್ತಾನೆ. ಯೇಸು ಎಚ್ಚರಿಸಿದ್ದು: “ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ. ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪು ಹೊಂದುವಿ.” (ಮತ್ತಾಯ 12:36, 37) “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರ” ಕೊಡಬೇಕಾದುದರಿಂದ ಆತನು ನಿಮ್ಮನ್ನು ಸುಳ್ಳನಾದ ಮಿಥ್ಯಾಪವಾದಿ ಎಂದು ಖಂಡಿಸಬೇಕೆಂಬುದು ನಿಮ್ಮ ಅಪೇಕ್ಷೆಯೇ?—ರೋಮಾಪುರ 14:12.
19. ಅಪಾಯಕರವಾದ ಹರಟೆ ಕೊಲೆಪಾತಕದ ಸಂಕಲ್ಪವುಳ್ಳದ್ದು ಎಂದು ಏಕೆ ಹೇಳಸಾಧ್ಯವಿದೆ?
19 ಅಪಾಯಕರವಾದ ಹರಟೆಯನ್ನು ಹಬ್ಬಿಸದಿರಲು ಇನ್ನೊಂದು ಕಾರಣವು ಅದಕ್ಕೆ ಕೊಲೆಮಾಡುವ ಸಂಕಲ್ಪವಿರುವುದೇ. ಹೌದು, ಅದು ಮಾರಕವಾಗಿದ್ದು ನಿರಪರಾಧಿಯ ಸತ್ಕೀರ್ತಿಯನ್ನು ನಾಶಮಾಡಬಲ್ಲದು. ಕೆಲವು ನಾಲಗೆಗಳು ‘ಹರಿತವಾದ ಕತ್ತಿಗಳು’ ಮತ್ತು ಕಟುವಾದ ಮಾತುಗಳು ನಿರಪರಾಧಿಗೆ ಅಡಗಿಕೂತು ಹೊಡೆದ ಬಾಣಗಳಂತಿವೆ. ದಾವೀದನು ಪ್ರಾರ್ಥಿಸಿದ್ದು: “ದುಷ್ಟರ ಒಳಸಂಚಿಗೂ ಕೆಡುಕರ ದೊಂಬಿಗೂ ಸಿಕ್ಕದಂತೆ ನನ್ನನ್ನು ತಪ್ಪಿಸಿ ಭದ್ರಪಡಿಸು. ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ. ವಿಷವಚನವೆಂಬ ಬಾಣವನ್ನು ಹೂಡಿ ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ.” (ಕೀರ್ತನೆ 64:2-4) ಒಬ್ಬ ಜೊತೆಮಾನವನ ವಿಷಯ ಇಂಥ ಮಾತುಗಳನ್ನು ಹೇಳುತ್ತಾ, ಕೀರ್ತನೆಗಾರನು ಮಾಡಿದಂತೆ, ಅವನು ಉಪಶಮನಕ್ಕಾಗಿ ದೇವರಿಗೆ ಪ್ರಾರ್ಥಿಸುವ ಒತ್ತಾಯಕ್ಕೊಳಗಾಗುವುದಕ್ಕೆ ನೀವು ಜವಾಬ್ದಾರರಾಗುವ ಅಪೇಕ್ಷೆ ನಿಮಗಿದೆಯೇ? ಕೊಲೆಪಾತಕದ ಅಪರಾಧ ನಿಮ್ಮ ಮೇಲೆ ಬರುವುದು ನಿಮಗೆ ಇಷ್ಟವೋ?
20. (ಎ) ದೇವರ ಸಭೆಯ ವಿಷಯದಲ್ಲಿ, ಪಶ್ಚಾತ್ತಾಪವಿಲ್ಲದ ಚಾಡಿಕೋರನಿಗೆ ಏನು ಸಂಭವಿಸಸಾಧ್ಯವಿದೆ? (ಬಿ) ಹರಟೆ ಮತ್ತು ಚಾಡಿಯ ಸಂಬಂಧದಲ್ಲಿ ಹಿರಿಯರು ಯಾವ ಜಾಗ್ರತೆ ವಹಿಸಬೇಕು?
20 ಮಿಥ್ಯಾಪವಾದ ದೇವರ ಸಂಸ್ಥೆಯಿಂದ ಹೊರಗೆ ಹಾಕಲ್ಪಡುವುದಕ್ಕೆ ನಡಿಸಬಲ್ಲದು. ಮಿಥ್ಯಾಪವಾದಿ, ಪ್ರಾಯಶಃ, ಪಶ್ಚಾತ್ತಾಪ ಪಡದ ಸುಳ್ಳುಗಾರನಾಗಿ ಬಹಿಷ್ಕರಿಸಲ್ಪಡಬಹುದು. ಆದರೂ ಲಘು ಹರಟೆಯ ವಿಷಯ ದೋಷಿಗಳಾಗುವವರ ವಿರುದ್ಧ ಇಂಥ ಕ್ರಮವನ್ನು ಕೈಕೊಳ್ಳಲಾಗುವುದಿಲ್ಲ. ಹಿರಿಯರು ಪ್ರಾರ್ಥನಾಪೂರ್ವಕವಾಗಿ ವಿಷಯಗಳನ್ನು ತೂಗಿನೋಡಿ, ಕೇವಲ ಹರಟೆ ಮತ್ತು ಮತ್ಸರದ ಚಾಡಿಯ ಮಧ್ಯೆ ಸ್ಪಷ್ಟ ವ್ಯತ್ಯಾಸವನ್ನು ನಿರ್ಮಿಸಬೇಕು. ಒಬ್ಬನು ಬಹಿಷ್ಕಾರ ಯೋಗ್ಯನಾಗಲು ಅವನು ದುರುದ್ದೇಶದ, ಪಶ್ಚಾತ್ತಾಪವಿಲ್ಲದ ಚಾಡಿಕೋರನಾಗಿರಬೇಕು. ಮಾನವಾಸಕ್ತಿಯಿಂದ ಪ್ರೇರೇಪಿಸಲ್ಪಟ್ಟ, ಸುಳ್ಳಲ್ಲದ ಮತ್ತು ದ್ವೇಷರಹಿತವಾದ ಕ್ಷುಲ್ಲಕ ಹರಟೆಯ ಕಾರಣ ಒಬ್ಬನನ್ನು ಬಹಿಷ್ಕರಿಸುವ ಅಧಿಕಾರ ಹಿರಿಯರಿಗಿಲ್ಲ. ವಿಷಯವನ್ನು ಅದರ ಯೋಗ್ಯ ಪ್ರಮಾಣಕ್ಕಿಂತ ದೊಡ್ಡದು ಮಾಡಬಾರದು ಮತ್ತು ಮಿಥ್ಯಾಪವಾದ ಸೇರಿದೆ ಎಂಬುದರಲ್ಲಿ ಸಂಶಯವೇ ಇಲ್ಲವೆಂಬುದಕ್ಕೆ ಗಣನೀಯವಾದ ಸಾಕ್ಷಿ ಇರಬೇಕು. (1 ತಿಮೊಥಿ 5:19) ಇಂಥ ದ್ವೇಷ ತುಂಬಿದ ಹರಟೆ ಮಾತು ಆರಿಸಲ್ಪಡುವಂತೆ ಮತ್ತು ಸಭೆಯು ಪಾಪದ ಹುಳಿಯಿಂದ ರಕ್ಷೆ ಹೊಂದುವಂತೆ ಮಾಡುವುದೇ ಪಶ್ಚಾತ್ತಾಪಪಡದ ಚಾಡಿಕೋರರನ್ನು ಬಹಿಷ್ಕರಿಸುವ ಮುಖ್ಯ ಕಾರಣವಾಗಿದೆ. (1 ಕೊರಿಂಥ 5:6-8, 13) ಆದರೆ ಹಿರಿಯರು ಶಾಸ್ತ್ರಾಧಾರಿತವಲ್ಲದ ಕಾರಣದಿಂದ ಯಾರನ್ನೂ ದುಡುಕಿ ಬಹಿಷ್ಕರಿಸಬಾರದು. ಅವರು ಪ್ರಾರ್ಥನೆ ಮತ್ತು ಸಲಹೆಗಳ ಮೂಲಕ ಅನೇಕ ಸಲ, ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟು, ಕ್ಷಮೆ ಯಾಚಿಸಿ ಅಥವಾ ಇನ್ನಿತರ ರೀತಿಯಲ್ಲಿ ನಷ್ಟ ಪರಿಹಾರ ಮಾಡುವಂತೆಯೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಲ್ಲಿ ಪ್ರಗತಿ ಹೊಂದುವಂತೆಯೂ ಸಹಾಯ ಮಾಡಶಕ್ತರಾಗುವರು.
ಇದು ಚಾಡಿಯೇ?
21. ತಪ್ಪಿತಸ್ಥನ ವಿಷಯ ಹರಟೆ ಹೊಡೆಯುವ ಬದಲು ನೀವೇನು ಮಾಡಬೇಕು?
21 ಒಂದು ವಿವೇಕಪೂರ್ಣ ಜ್ಞಾನೋಕ್ತಿ ನುಡಿಯುವುದು: “ಚಾಡಿಕೋರನು ಗುಟ್ಟು ರಟ್ಟುಮಾಡುವನು; ನಂಬಿಗಸ್ತನು ಸಂಗತಿಯನ್ನು ಗುಪ್ತಪಡಿಸುವನು.” (ಜ್ಞಾನೋಕ್ತಿ 11:13) ಅಂದರೆ, ಒಬ್ಬನು ಘೋರ ಪಾಪದಲ್ಲಿ ಗುಪ್ತರೀತಿಯಲ್ಲಿ ಭಾಗವಹಿಸುತ್ತಿದ್ದಾನೆಂದು ನಿಮಗೆ ತಿಳಿದಾಗ ಅದನ್ನು ತಿಳಿಯಪಡಿಸುವುದು ಚಾಡಿಯೋ? ಅಲ್ಲ. ನೀವು ಅದರ ವಿಷಯ ಹರಟೆ ಹೊಡೆಯಬಾರದೆಂಬುದು ನಿಜ. ಆದರೆ, ನೀವು ತಪ್ಪಿತಸ್ಥನೊಂದಿಗೆ ಮಾತಾಡಿ ಅವನು ಹಿರಿಯರ ಸಹಾಯವನ್ನು ಪಡೆಯುವಂತೆ ಪ್ರೋತ್ಸಾಹಿಸಬೇಕು. (ಯಾಕೋಬ 5:13-18) ಆದರೆ ಅವನು ಒಂದು ನ್ಯಾಯೋಚಿತ ಸಮಯಾವಧಿಯಲ್ಲಿ ಅದನ್ನು ಮಾಡದಿರುವಲ್ಲಿ, ಸಭಾ ಶುದ್ಧತೆಯ ಚಿಂತೆಯು ನೀವು ಅದನ್ನು ಹಿರಿಯರಿಗೆ ವರದಿಮಾಡುವಂತೆ ಪ್ರೇರಿಸಬೇಕು.—ಯಾಜಕಕಾಂಡ 5:1.
22. 1 ಕೊರಿಂಥ 1:11 ಹರಟೆಯ ಅಧಿಕಾರವನ್ನು ನಮಗೆ ಕೊಡುವುದಿಲ್ಲವೆಂದು ನಾವೇಕೆ ಹೇಳಬಲ್ಲೆವು?
22 ಇಂಥ ವರದಿಯಿಂದಾಗಿ ತಪ್ಪಿತಸ್ಥನಿಗೆ ಶಿಕ್ಷೆ ಬರಬಹುದು. ಇದು ಆನಂದದ ವಿಷಯವಲ್ಲ. ಆದರೂ, ಇಂಥ ಶಿಸ್ತಿನಿಂದ ತರಬೇತು ಪಡೆಯುವ ವ್ಯಕ್ತಿ ನೀತಿಯ ಫಲವನ್ನು ಕೊಯ್ಯುತ್ತಾನೆ. (ಇಬ್ರಿಯ 12:11) ಅವುಗಳನ್ನು ಇತ್ಯರ್ಥ ಮಾಡಲಿಕ್ಕಾಗಿ ನೇಮಿಸಲ್ಪಟ್ಟಿರುವ ವ್ಯಕ್ತಿಗಳಿಗೆ ತಪ್ಪನ್ನು ತಿಳಿಸಬೇಕಲ್ಲದೆ ವಟಗುಟ್ಟುವ ಹರಟೆಮಲ್ಲರಿಗಲ್ಲ. ಪೌಲನು ಕೊರಿಂಥದ ಕ್ರೈಸ್ತರಿಗೆ ತಿಳಿಸಿದ್ದು: “ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದು ಬಂತು.” (1 ಕೊರಿಂಥ 1:11) ಆ ಕುಟುಂಬದವರು ಜೊತೆವಿಶ್ವಾಸಿಗಳ ವಿಷಯ ಹರಟೆ ಹೊಡೆದರೋ? ಇಲ್ಲ. ಹೊಣೆಗಾರಿಕೆಯ ಹಿರಿಯನಿಗೆ ಆ ವರದಿ ಮಾಡಲ್ಪಟ್ಟಿತು. ಸಹಾಯ ಬೇಕಾದವರು ಪುನಃ ಜೀವನಪಥದಲ್ಲಿ ನಡೆಯುವಂತೆ ಅವನು ನೆರವು ನೀಡಶಕ್ತನಾಗಿದ್ದನು.
23. ಪರಿಗಣಿಸಲು ಇನ್ನಾವ ಪ್ರಶ್ನೆ ಉಳಿದದೆ?
23 ಅಪಾಯಕರವಾದ ಹರಟೆಯ ವಿರುದ್ಧ ಒಬ್ಬನು ತನ್ನನ್ನು ರಕ್ಷಿಸಿಕೊಳ್ಳುವಂತೆ ಸಹಾಯ ಮಾಡಿದರೆ ನಾವು ಅವನಿಗೆ ಒಳ್ಳೆಯದನ್ನು ಮಾಡುತ್ತೇವೆ. ಒಂದು ವಿವೇಕಪೂರ್ಣ ಜ್ಞಾನೋಕ್ತಿ ತಿಳಿಸುವುದು: “ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ. ತುಟಿಗಳನ್ನು ತೆರೆದು ಬಿಡುವವನು ನಾಶವಾಗುವನು.” (ಜ್ಞಾನೋಕ್ತಿ 13:3) ಹಾಗಾದರೆ, ಹಾನಿಕರವಾದ ಹರಟೆ ಮತ್ತು ನೀಚ ಚಾಡಿಯ ಎದುರು ನಮ್ಮನ್ನು ರಕ್ಷಿಸಿಕೊಳ್ಳಲು ಸಕಾರಣಗಳಿವೆ. ಆದರೂ, ಅಪಾಯಕರವಾದ ಹಾನಿಯನ್ನು ಹೇಗೆ ಜಜ್ಜು ಬಡಿಯಬಹುದು? ಮುಂದಿನ ಸಂಚಿಕೆಯ ಲೇಖನದಲ್ಲಿ ಅದು ತಿಳಿಸಲ್ಪಟ್ಟಿದೆ. (w89 10/15)
ನಿಮ್ಮ ಉತ್ತರಗಳೇನು?
◻ ಲಘು ಹರಟೆ ಮತ್ತು ಮಿಥ್ಯಾಪವಾದ ಮಧ್ಯೆ ವ್ಯತ್ಯಾಸವೇನು?
◻ ಹರಟೆ ಚಾಡಿಯಾಗಿ ಪರಿಣಮಿಸುವುದು ಹೇಗೆ?
◻ ಅಪಾಯಕರ ಹರಟೆಯ ವಿರುದ್ಧ ಕಾಪಾಡಿ ಕೊಳ್ಳಲು ಕೆಲವು ಕಾರಣಗಳಾವುವು?
◻ ಒಬ್ಬನ ಘೋರ ಪಾಪವನ್ನು ವರದಿ ಮಾಡುವುದರಲ್ಲಿ ಚಾಡಿ ಸೇರಿರುವುದಿಲ್ಲವೇಕೆ?
[ಪುಟ 27 ರಲ್ಲಿರುವ ಚಿತ್ರ]
ವ್ಯಕ್ತಿಯ ವಿಷಯ ಹರಟೆ ಹೊಡೆಯುತ್ತಾ ಹಿಂದಿನಿಂದ ಬಾಣ ಹೊಡೆಯುವ ದೋಷ ನಿಮಗೆಂದಿಗೂ ಇರದಂತೆ ನೋಡಿಕೊಳ್ಳಿರಿ