ಬೈಬಲಿನ ದೃಷ್ಟಿಕೋನ
ಕ್ರೈಸ್ತರು ಸಲಿಂಗಿಕಾಮಿಗಳನ್ನು ದ್ವೇಷಿಸಬೇಕೊ?
ಸಾವಿರದ ಒಂಬೈನೂರ ಅರವತ್ತೊಂಬತ್ತರಲ್ಲಿ, ಸಲಿಂಗಿಕಾಮಿಗಳ ಅಸಂಬದ್ಧವಾದ ಭಯ ಅಥವಾ ಅವರ ಕಡೆಗಿನ ಹೇವರಿಕೆಯನ್ನು ವರ್ಣಿಸುವ ಒಂದು ಪದವನ್ನು ಇಂಗ್ಲಿಷ್ ಭಾಷೆಗೆ ಜೋಡಿಸಲಾಯಿತು. ಆ ಪದವು “ಹೋಮೊಫೋಬಿಯಾ” ಆಗಿದೆ. ಅನೇಕ ಭಾಷೆಗಳಲ್ಲಿ ಅಂತಹ ಒಂದು ನಿರ್ದಿಷ್ಟವಾದ ಪದವಿಲ್ಲವಾದರೂ, ಸಾವಿರಾರು ವರ್ಷಗಳಿಂದ, ಅನೇಕ ರಾಷ್ಟ್ರಗಳ ಮತ್ತು ಭಾಷೆಗಳ ಜನರು ಸಲಿಂಗಿಕಾಮಿಗಳ ಕಡೆಗೆ ದ್ವೇಷವನ್ನು ಪ್ರದರ್ಶಿಸಿದ್ದಾರೆ.
ಇನ್ನೂ ಇತ್ತೀಚಿನ ಸಮಯಗಳಲ್ಲಾದರೊ, ಸಲಿಂಗಿಕಾಮವು, ಲೈಂಗಿಕ ಅಭಿವ್ಯಕ್ತಿಯ ಬರಿಯ ಒಂದು ಪರ್ಯಾಯ ರೂಪವಾಗಿ ವ್ಯಾಪಕವಾಗಿ ಪ್ರವರ್ಧಿಸಲ್ಪಟ್ಟಿದೆ. ಇತ್ತೀಚೆಗೆ, ಇತಿಹಾಸಕಾರ ಜೆರಿ ಸೆಡ್. ಮಲರ್, “ಸ್ವತಃ ಸಲಿಂಗಿಕಾಮಕ್ಕೆ, ಸಾರ್ವಜನಿಕರ ಅಂಗೀಕಾರ ಮತ್ತು ಗೌರವದ ಹೆಚ್ಚುತ್ತಿರುವ ಬೇಡಿಕೆಯ” ಕುರಿತಾಗಿ ಬರೆದರು. ಸಲಿಂಗಿಕಾಮಿಗಳು, “ತಮ್ಮ ಆಚಾರವನ್ನು ಸ್ತುತಿಯೋಗ್ಯವೆಂದು ಘೋಷಿಸಲು ಮತ್ತು ಇತರರೂ ಅದನ್ನು ಮಾಡುವಂತೆ ಒತ್ತಾಯಿಸಲು ಹೆಚ್ಚೆಚ್ಚಾಗಿ ಐಕ್ಯರಾಗುತ್ತಿದ್ದಾರೆ” ಎಂದು ಅವರು ವಿವರಿಸಿದರು. ಇದು ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ಕಂಡುಬರುತ್ತದೆ. ಆದಾಗಲೂ, ಲೋಕದ ಹೆಚ್ಚಿನ ಭಾಗಗಳಲ್ಲಿ, ಉದಾರ ದೃಷ್ಟಿಯುಳ್ಳವುಗಳೆಂದು ಹೇಳಲಾಗುವ ದೇಶಗಳಲ್ಲೂ, ಅನೇಕರು ಈಗಲೂ ಸಲಿಂಗಿಕಾಮವನ್ನು ಖಂಡಿಸುತ್ತಾರೆ ಮತ್ತು ಧಿಕ್ಕರಿಸುತ್ತಾರೆ.
ಅನೇಕವೇಳೆ, ಸಲಿಂಗಿಕಾಮಿಗಳು ಮತ್ತು ಸಲಿಂಗಿಕಾಮವನ್ನು ನಡಿಸುತ್ತಾರೆಂದು ಶಂಕಿಸಲ್ಪಟ್ಟವರನ್ನು, ಕಡೆಗಣಿಸುವ ಹೇಳಿಕೆಗಳು, ಕಿರುಕುಳ, ಮತ್ತು ಹಿಂಸಾಚಾರದ ಗುರಿಹಲಗೆಗಳಾಗಿ ಕೂಡ ಮಾಡಲಾಗುತ್ತದೆ. ಧಾರ್ಮಿಕ ಮುಖಂಡರೂ ಅಂತಹ ದ್ವೇಷವನ್ನು ತೋರಿಸಿದ್ದಾರೆ. ಕೆಲವರು, ಯಾವುದು ಸಲಿಂಗಿಕಾಮಿಗಳ ವಿರುದ್ಧ ತಮ್ಮ ಸ್ವಂತ ಖಾಸಗಿ ಯುದ್ಧಗಳೆಂಬಂತೆ ತೋರಬಹುದೊ ಅದನ್ನು ಆರಂಭಿಸಿದ್ದಾರೆ. ದೃಷ್ಟಾಂತಕ್ಕಾಗಿ, ಗ್ರೀಕ್ ಆರ್ತೊಡಾಕ್ಸ್ ಚರ್ಚ್ವೊಂದರ ಬಿಷಪರಿಂದ ನುಡಿಯಲ್ಪಟ್ಟ ಹೇಳಿಕೆಗಳನ್ನು ತೆಗೆದುಕೊಳ್ಳಿರಿ. ಅದನ್ನು ಇತ್ತೀಚೆಗೆ ಗ್ರೀಕ್ ರಾಷ್ಟ್ರೀಯ ರೇಡಿಯೊದಲ್ಲಿ ಪ್ರಸಾರಗೊಳಿಸಲಾಯಿತು. ಅವರು ತಿಳಿಸಿದ್ದು: “ದೇವರು ಸಲಿಂಗಿಕಾಮಿಗಳನ್ನು ನರಕದ ಅಗ್ನಿಮಯ ಕುಂಡದಲ್ಲಿ ಶಾಶ್ವತವಾಗಿ ಸುಟ್ಟುಬಿಡುವನು. ಅವರ ಹೊಲಸು ಬಾಯಿಗಳ ಚೀತ್ಕಾರಗಳು ಸರ್ವಕಾಲಕ್ಕೂ ಪ್ರತಿಧ್ವನಿಸುವವು. ಅವರ ಭ್ರಷ್ಟ ದೇಹಗಳು ಸಹಿಸಲಾರದಂತಹ ಹಿಂಸೆಯನ್ನು ಅನುಭವಿಸುವವು.” ಇದು ನಿಜವೊ? ಸಲಿಂಗಿಕಾಮಿಗಳ ಕುರಿತು ದೇವರಿಗೆ ಹೇಗನಿಸುತ್ತದೆ?
ದೇವರ ದೃಷ್ಟಿಕೋನ
ಕ್ರೈಸ್ತರಿಂದ ಬಹಿಷ್ಕರಿಸಲ್ಪಡಬೇಕಾದ ಅಥವಾ ದ್ವೇಷಿಸಲ್ಪಡಬೇಕಾದ ಗುಂಪಿನೋಪಾದಿ, ಬೈಬಲ್ ಸಲಿಂಗಿಕಾಮಿಗಳ ಕಡೆಗೆ ವಿಶೇಷವಾದ ಗಮನವನ್ನು ಸೆಳೆಯುವುದಿಲ್ಲ. ಇನ್ನೂ ಹೆಚ್ಚಾಗಿ, ದೇವರು ಸಲಿಂಗಿಕಾಮಿಗಳನ್ನು—ಅಥವಾ ತನ್ನ ಯಾವುದೇ ಸೃಷ್ಟಿಜೀವಿಯನ್ನು—ಒಂದು ಅಗ್ನಿಮಯ ನರಕದಲ್ಲಿ ನಿತ್ಯಕ್ಕೂ ಸುಟ್ಟುಹಾಕುವ ಮೂಲಕ ದಂಡಿಸುತ್ತಾನೆಂದು ಅದು ಕಲಿಸುವುದಿಲ್ಲ.—ಹೋಲಿಸಿರಿ ರೋಮಾಪುರ 6:23.
ಆದಾಗಲೂ, ಶಾಸ್ತ್ರವಚನಗಳು ನಮ್ಮ ಸೃಷ್ಟಿಕರ್ತನ ನೈತಿಕ ಮಟ್ಟಗಳನ್ನು ತಿಳಿಸುತ್ತವೆ. ಇವು ಅನೇಕಸಲ ಆಧುನಿಕ ದಿನದ ನೈತಿಕ ಮನೋಭಾವಗಳಿಗೆ ವಿರುದ್ಧವಾಗಿರುತ್ತವೆ. ಸಲಿಂಗಿಕಾಮಿ ಕೃತ್ಯಗಳು, ಅವಿವಾಹಿತ ವ್ಯಕ್ತಿಗಳ ನಡುವಣ ಅನ್ಯ ಸಂಭೋಗ, ಮತ್ತು ಪಶುಗಮನ ಇವೆಲ್ಲವೂ ಬೈಬಲಿನಲ್ಲಿ ಖಂಡಿಸಲ್ಪಟ್ಟಿವೆ. (ವಿಮೋಚನಕಾಂಡ 22:19; ಎಫೆಸ 5:3-5) ಅಂತಹ ಲೈಂಗಿಕ ಆಚರಣೆಗಳಿಂದಾಗಿ ದೇವರು ಸೊದೋಮ್ ಮತ್ತು ಗೊಮೋರವನ್ನು ನಾಶಗೊಳಿಸಿದನು.—ಆದಿಕಾಂಡ 13:13; 18:20; 19:4, 5, 24, 25.
ಸಲಿಂಗಿಕಾಮಿ ಕೃತ್ಯಗಳ ಕುರಿತಾಗಿ, ದೇವರ ವಾಕ್ಯವು ಮನಸ್ಸಿಗೆ ನಾಟುವ ರೀತಿಯಲ್ಲಿ ಹೇಳುವುದು: “ಇದೊಂದು ಅಸಹ್ಯ ವಿಷಯ.” (ಯಾಜಕಕಾಂಡ 18:22, ದಿ ನ್ಯೂ ಜೆರೂಸಲೇಮ್ ಬೈಬಲ್) ಇಸ್ರಾಯೇಲಿಗೆ ದೇವರು ಕೊಟ್ಟ ಧರ್ಮಶಾಸ್ತ್ರವು ವಿಧಿಸಿದ್ದು: “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಿದರೆ ಅವರಿಬ್ಬರೂ ಹೇಸಿಗೆಯ ಕೆಲಸವನ್ನು ಮಾಡಿದದರಿಂದ ಅವರಿಗೆ ಮರಣಶಿಕ್ಷೆಯಾಗಬೇಕು.” (ಯಾಜಕಕಾಂಡ 20:13) ಪಶುಗಮನ, ಅಗಮ್ಯಗಮನ, ಮತ್ತು ಹಾದರವನ್ನು ನಡಿಸಿದವರಿಗೂ ಅದೇ ದಂಡನೆಯು ವಿಧಿಸಲ್ಪಟ್ಟಿತು.—ಯಾಜಕಕಾಂಡ 20:10-12, 14-17.
ಅಪೊಸ್ತಲ ಪೌಲನು ಸಲಿಂಗಿಕಾಮಿ ಕೃತ್ಯಗಳನ್ನು “ತುಚ್ಛವಾದ ಕಾಮಾಭಿಲಾಷೆ”ಯ ಅಭಿವ್ಯಕ್ತಿಗಳು ಮತ್ತು “ಸ್ವಭಾವಕ್ಕೆ ವಿರುದ್ಧವಾದ”ದ್ದಾಗಿ ವರ್ಣಿಸುವಂತೆ ಪ್ರೇರಿಸಲ್ಪಟ್ಟನು. ಅವನು ಬರೆದುದು: “ಅವರು ಇಂಥದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು. ಹೇಗಂದರೆ ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಭೋಗವನ್ನು ಅನುಸರಿಸಿದರು. ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ ತಮ್ಮ ಭ್ರಾಂತಿಗೆ ತಕ್ಕ ಫಲವನ್ನು ತಮ್ಮಲ್ಲಿ ಹೊಂದುವವರಾದರು. ಇದಲ್ಲದೆ ದೇವರ ಜ್ಞಾನವು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅನಿಷ್ಟಭಾವಕ್ಕೆ ಒಪ್ಪಿಸಿದನು.”—ರೋಮಾಪುರ 1:26-28.
ಶಾಸ್ತ್ರವಚನಗಳು ಯಾವುದೇ ನೆವಗಳನ್ನು, ಯಾವುದೇ ವಿನಾಯಿತಿಗಳನ್ನು, ಯಾವುದೇ ಅನಿಶ್ಚಿತತೆಯನ್ನು ನೀಡುವುದಿಲ್ಲ. ಸಲಿಂಗಿಕಾಮಿ ಆಚಾರಗಳು, ಹಾದರ, ವ್ಯಭಿಚಾರ, ಇವೆಲ್ಲವೂ ದೇವರ ದೃಷ್ಟಿಯಲ್ಲಿ ಹೇಸಿಗೆಯನ್ನು ಉಂಟುಮಾಡುವಂತಹವುಗಳಾಗಿವೆ. ಅದಕ್ಕನುಸಾರವಾಗಿ, ನಿಜ ಕ್ರೈಸ್ತರು ಕೇವಲ ಹೆಚ್ಚು ಜನಪ್ರಿಯರಾಗಲು ಅಥವಾ ಆಧುನಿಕ ಸಂಸ್ಕೃತಿಗೆ ಹೆಚ್ಚು ಸ್ವೀಕಾರಯೋಗ್ಯರಾಗಲು “ತುಚ್ಛವಾದ ಕಾಮಾಭಿಲಾಷೆ”ಗಳ ಕುರಿತ ಬೈಬಲಿನ ಸ್ಥಾನದ ತೀಕ್ಷ್ಣತೆಯನ್ನು ಕಡಿಮೆಗೊಳಿಸುವುದಿಲ್ಲ. ಅಲ್ಲದೆ, ಸಲಿಂಗಿಕಾಮವನ್ನು ಒಂದು ಸಾಧಾರಣವಾದ ಜೀವನ ಶೈಲಿಯಾಗಿ ಪ್ರವರ್ಧಿಸುವುದಕ್ಕೆ ಸಮರ್ಪಿಸಲ್ಪಟ್ಟ ಯಾವುದೇ ಚಳುವಳಿಯೊಂದಿಗೆ ಅವರು ಸಮ್ಮತಿಸುವುದಿಲ್ಲ.
“ಕೆಟ್ಟತನವನ್ನು ಹಗೆಮಾಡಿರಿ”
ಬೈಬಲು ಬುದ್ಧಿವಾದ ಕೊಡುವುದು: “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” (ಕೀರ್ತನೆ 97:10) ಹೀಗಿರುವುದರಿಂದ, ಕ್ರೈಸ್ತರು ಯೆಹೋವನ ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಂದು ಆಚರಣೆಯನ್ನು ದ್ವೇಷಿಸುವಂತೆ ನಿರೀಕ್ಷಿಸಲಾಗುತ್ತದೆ. ಸಲಿಂಗಿಕಾಮವನ್ನು ಒಂದು ಅಸ್ವಾಭಾವಿಕ ಲೈಂಗಿಕ ವಕ್ರತೆಯಾಗಿ ವೀಕ್ಷಿಸುತ್ತಾ, ಕೆಲವು ಜನರು ಸಲಿಂಗಿಕಾಮದ ಕಡೆಗೆ ಹೇವರಿಕೆಯ ಹೆಚ್ಚು ಬಲವಾದ ಅನಿಸಿಕೆಗಳು ಅಥವಾ ಜುಗುಪ್ಸೆಯೊಂದಿಗೂ ಪ್ರತಿಕ್ರಿಯಿಸಬಹುದು. ಆದರೆ ಅಂತಹ ಸಂಗತಿಗಳನ್ನು ಆಚರಿಸುವ ವ್ಯಕ್ತಿಗಳನ್ನು ಕ್ರೈಸ್ತರು ದ್ವೇಷಿಸಬೇಕೊ?
ಕೀರ್ತನೆ 139:21, 22ರಲ್ಲಿ ಈ ವಿವಾದಾಂಶದ ಕುರಿತು ಕೀರ್ತನೆಗಾರನು ಬೆಳಕನ್ನು ಬೀರುತ್ತಾನೆ: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.” ಯೆಹೋವನ ಮತ್ತು ಆತನ ತತ್ತ್ವಗಳ ಕಡೆಗಿನ ನಮ್ಮ ನಿಷ್ಠೆಯು, ಉದ್ದೇಶಪೂರ್ವಕವಾಗಿ ಯೆಹೋವನ ವಿರುದ್ಧ ದಂಗೆಯೇಳುವ ಮತ್ತು ದೇವರ ವೈರಿಗಳಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳುವವರ ವಿರುದ್ಧ ಬಲವಾದ ದ್ವೇಷವನ್ನು ನಮ್ಮಲ್ಲಿ ಹುಟ್ಟಿಸಬೇಕು. ದೇವರ ಅಂತಹ ಬದ್ಧ ವೈರಿಗಳಲ್ಲಿ ಸೈತಾನನು ಮತ್ತು ಅವನ ದೆವ್ವಗಳು ಸೇರಿವೆ. ಕೆಲವು ಮಾನವರೂ ಬಹುಶಃ ಈ ವಿಭಾಗಕ್ಕೆ ಸೇರುತ್ತಾರೆ. ಆದರೂ, ಅಂತಹ ಜನರನ್ನು ಹೊರತೋರಿಕೆಗಳಿಂದ ಗುರುತಿಸುವುದು ಕ್ರೈಸ್ತನೊಬ್ಬನಿಗೆ ತುಂಬ ಕಷ್ಟಕರವಾಗಿರಬಹುದು. ನಾವು ಹೃದಯಗಳನ್ನು ಓದಲಾರೆವು. (ಯೆರೆಮೀಯ 17:9, 10) ಒಬ್ಬ ವ್ಯಕ್ತಿಯು ತಪ್ಪನ್ನು ನಡಿಸುತ್ತಿರುವ ಕಾರಣದಿಂದ, ಅವನು ಅಥವಾ ಅವಳು ದೇವರ ಸುಧಾರಿಸಲಾಗದಂತಹ ಒಬ್ಬ ವೈರಿಯೆಂದು ಊಹಿಸಿಕೊಳ್ಳುವುದು ತಪ್ಪು. ಅನೇಕ ವಿದ್ಯಮಾನಗಳಲ್ಲಿ ತಪ್ಪಿತಸ್ಥರಿಗೆ ದೇವರ ಮಟ್ಟಗಳ ಕುರಿತು ತಿಳಿದಿರುವುದೇ ಇಲ್ಲ.
ಹೀಗಿರುವುದರಿಂದ, ಸಾಮಾನ್ಯವಾಗಿ ಹೇಳುವುದಾದರೆ, ಕ್ರೈಸ್ತರು ಜೊತೆ ಮಾನವರನ್ನು ದ್ವೇಷಿಸುವುದರಲ್ಲಿ ನಿಧಾನಿಗಳಾಗಿದ್ದಾರೆ. ಕೆಲವೊಂದು ಜೀವನ ಶೈಲಿಗಳ ಕಡೆಗೆ ಅವರಿಗೆ ಹೇವರಿಕೆಯ ಬಲವಾದ ಅನಿಸಿಕೆಗಳಿರುವುದಾದರೂ, ಅವರು ಇತರರಿಗೆ ಹಾನಿಯನ್ನುಂಟುಮಾಡಲು ಅಥವಾ ಅವರ ಕಡೆಗೆ ಹಗೆ ಅಥವಾ ಮತ್ಸರದ ಭಾವನೆಯುಳ್ಳವರಾಗಿರಲು ಪ್ರಯತ್ನಿಸುವುದಿಲ್ಲ. ಬದಲಿಗೆ, ಕ್ರೈಸ್ತರು “ಎಲ್ಲರ ಸಂಗಡ ಸಮಾಧಾನದಿಂದ” ಇರುವಂತೆ ಬೈಬಲ್ ಸಲಹೆಕೊಡುತ್ತದೆ.—ರೋಮಾಪುರ 12:9, 17-19.
“ದೇವರು ಪಕ್ಷಪಾತಿಯಲ್ಲ”
ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಅನೈತಿಕತೆಯನ್ನು ನಡಿಸುತ್ತಿರಲಿ, ಅವನು ನಿಜವಾಗಿ ಪಶ್ಚಾತ್ತಾಪಪಡುವಲ್ಲಿ ಯೆಹೋವನು ಅವನಿಗೆ ಕ್ಷಮೆಯನ್ನು ದಯಪಾಲಿಸುವನು. ಯೆಹೋವನು ಅನೈತಿಕತೆಯ ಒಂದು ರೂಪವನ್ನು ಇನ್ನೊಂದು ರೂಪಕ್ಕಿಂತ ಹೆಚ್ಚು ಕೆಟ್ಟದ್ದಾಗಿ ವೀಕ್ಷಿಸುವನೆಂಬುದಕ್ಕೆ ಯಾವುದೇ ಪುರಾವೆಯಿಲ್ಲ. “ದೇವರು ಪಕ್ಷಪಾತಿಯಲ್ಲ.” (ಅ. ಕೃತ್ಯಗಳು 10:34, 35) ಉದಾಹರಣೆಗಾಗಿ, ಕೊರಿಂಥದಲ್ಲಿನ ಪ್ರಥಮ ಶತಮಾನದ ವಿದ್ಯಮಾನವನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು ಅವರಿಗೆ ಬರೆದುದು: “ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (ಓರೆ ಅಕ್ಷರಗಳು ನಮ್ಮವು.) ಪೂರ್ವಕಾಲದಲ್ಲಿ ವ್ಯಭಿಚಾರಿಗಳು, ಹಾದರಮಾಡುವವರು, ಸಲಿಂಗಿಕಾಮಿಗಳು, ಮತ್ತು ಕಳ್ಳರಾಗಿದ್ದವರು ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಯೊಳಗೆ ಸ್ವೀಕರಿಸಲ್ಪಟ್ಟಿದ್ದರೆಂಬುದನ್ನು ಪೌಲನು ಒಪ್ಪಿಕೊಂಡನು. ಅವನು ವಿವರಿಸಿದ್ದು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
ಖಂಡಿತವಾಗಿಯೂ ಯೆಹೋವನು, ತನ್ನ ಪರಿಪೂರ್ಣ ನೈತಿಕ ಮಟ್ಟಗಳ ನಿರಂತರ ಮತ್ತು ಸತತವಾದ ಉಲ್ಲಂಘನೆಯನ್ನು ಸಹಿಸುವುದಿಲ್ಲ. ತನ್ನ ಮೂಲತತ್ವಗಳ ಮೊಂಡುತನದ ನಿರಾಕರಣೆಯನ್ನು ಆತನು ಖಡಾಖಂಡಿತವಾಗಿಯೂ ದ್ವೇಷಿಸುತ್ತಾನೆ. ಆದಾಗಲೂ, ಆತನು ರಾಜಿಮಾಡಿಕೊಳ್ಳುವಿಕೆಗಾಗಿರುವ ಬಾಗಿಲನ್ನು ತೆರೆದಿಡುತ್ತಾನೆ. (ಕೀರ್ತನೆ 86:5; ಯೆಶಾಯ 55:7) ಇದಕ್ಕೆ ಹೊಂದಿಕೆಯಲ್ಲಿ, ಕ್ರೈಸ್ತರು ಸಲಿಂಗಿಕಾಮಿಗಳನ್ನೇ ಆಗಲಿ ಬೇರೆ ಯಾರನ್ನೇ ಆಗಲಿ, ಕೆಡುಕು, ನಿಂದೆ ಅಥವಾ ಕಿರುಕುಳದ ಗುರಿಹಲಗೆಯನ್ನಾಗಿ ಮಾಡುವುದಿಲ್ಲ. ನಿಜ ಕ್ರೈಸ್ತರು ತಮ್ಮ ಜೊತೆ ಮಾನವರನ್ನು ಕ್ರಿಸ್ತನ ಭಾವೀ ಶಿಷ್ಯರಾಗಿ ವೀಕ್ಷಿಸುತ್ತಾ, ಅವರನ್ನು ಗೌರವಪೂರ್ಣವಾದ ಮತ್ತು ಘನತೆಯ ರೀತಿಯಲ್ಲಿ ಉಪಚರಿಸುತ್ತಾರೆ. ಬೈಬಲ್ ಹೇಳುವುದು: “ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.”—1 ತಿಮೊಥೆಯ 2:3, 4.
ಕ್ರೈಸ್ತರು ಪಶ್ಚಾತ್ತಾಪಿಗಳನ್ನು ಸ್ವಾಗತಿಸುತ್ತಾರೆ
ಪದೇ ಪದೇ, ದೇವರು ಕ್ಷಮಿಸುವವನಾಗಿದ್ದಾನೆಂದು ಬೈಬಲು ಪ್ರಕಟಿಸುತ್ತದೆ. ಅದು ಆತನನ್ನು “ಪಾಪಗಳನ್ನು ಕ್ಷಮಿಸುವವನೂ ಕನಿಕರದಯೆಗಳುಳ್ಳವನೂ ದೀರ್ಘಶಾಂತನೂ ಕೃಪಾಳುವೂ ಆಗಿರುವ ದೇವರು” ಆಗಿ ವರ್ಣಿಸುತ್ತದೆ. (ನೆಹೆಮೀಯ 9:17; ಯೆಹೆಜ್ಕೇಲ 33:11; 2 ಪೇತ್ರ 3:9) ಬೈಬಲು ಆತನನ್ನು ಪೋಲಿಹೋದ ಮಗನ ಕುರಿತಾದ ಯೇಸುವಿನ ಸಾಮ್ಯದಲ್ಲಿನ ತಂದೆಗೆ ಹೋಲಿಸುತ್ತದೆ. ಆ ಮಗನು ತನ್ನ ಆಸ್ತಿಯನ್ನು ದೂರದ ದೇಶದಲ್ಲಿ ಭೋಗಲೋಲುಪತೆಯಲ್ಲಿ ಹಾಳುಮಾಡಿದನು. ಕೊನೆಗೆ ಮಗನಿಗೆ ಬುದ್ಧಿ ಬಂದು, ಪಶ್ಚಾತ್ತಾಪಪಟ್ಟು ತನ್ನ ಕುಟುಂಬದ ಮನೆಗೆ ಹಿಂದಿರುಗಿದಾಗ, ಅವನನ್ನು ಸ್ವಾಗತಿಸಲು ತಂದೆಯು ಆದರದಿಂದ ಕಾದನು.—ಲೂಕ 15:11-24.
ಹೌದು, ಒಬ್ಬ ತಪ್ಪಿತಸ್ಥನು ಬದಲಾಗುವ ಸಾಧ್ಯತೆಯಿದೆ. ಹಳೆಯ ವ್ಯಕ್ತಿತ್ವವನ್ನು ಕಳಚಿಹಾಕಿ, ಹೊಸ ವ್ಯಕ್ತಿತ್ವವನ್ನು ಧರಿಸಲು ಮತ್ತು “ಆಂತರ್ಯದಲ್ಲಿ ಹೊಸಬರು” ಆಗಲು ಜನರನ್ನು ಉತ್ತೇಜಿಸುವ ಮೂಲಕ ಶಾಸ್ತ್ರವಚನಗಳು ಇದನ್ನು ಅಂಗೀಕರಿಸುತ್ತವೆ. (ಎಫೆಸ 4:22-24) ಸಲಿಂಗಿಕಾಮಿಗಳನ್ನು ಸೇರಿಸಿ, ಕೆಟ್ಟದ್ದನ್ನು ಆಚರಿಸುವವರು ಆಲೋಚನೆ ಮತ್ತು ವರ್ತನೆಯ ತಮ್ಮ ನಮೂನೆಯಲ್ಲಿ ತೀವ್ರ ಬದಲಾವಣೆಗಳನ್ನು ಮಾಡಸಾಧ್ಯವಿದೆ ಮತ್ತು ಈ ರೂಪಾಂತರವನ್ನು ಮಾಡುವುದರಲ್ಲಿ ಅನೇಕರು ನಿಶ್ಚಯವಾಗಿಯೂ ಯಶಸ್ವಿಯಾಗಿದ್ದಾರೆ.a ಯೇಸು ತಾನೇ ಅಂತಹವರಿಗೆ ಸಾರಿದನು, ಮತ್ತು ಅವರು ಪಶ್ಚಾತ್ತಾಪ ತೋರಿಸಿದಾಗ, ಅವರು ಅವನಿಗೆ ಸ್ವೀಕಾರಯೋಗ್ಯರಾದರು.—ಮತ್ತಾಯ 21:31, 32.
ಜೀವನದ ವಿಭಿನ್ನ ಕಸಬುಗಳಿಂದ ಬರುವ ಜನರನ್ನು ಕ್ರೈಸ್ತರು ಸ್ವಾಗತಿಸುತ್ತಾರೆ. ಅವರು ಏನೇ ಆಗಿದ್ದಿರಲಿ, ಅನೈತಿಕ ರೂಢಿಗಳನ್ನು ಹಿಂದೆ ಬಿಟ್ಟುಬಂದ ಅನಂತರ, ಎಲ್ಲರೂ ದೇವರ ಕ್ಷಮೆಯ ಪೂರ್ಣ ಪ್ರಯೋಜನಗಳಲ್ಲಿ ಆನಂದಿಸಬಲ್ಲರು ಯಾಕಂದರೆ, “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.”—ಕೀರ್ತನೆ 145:9.
ಕ್ರೈಸ್ತರು, ಸಲಿಂಗಿಕಾಮಿ ಪ್ರವೃತ್ತಿಗಳೊಂದಿಗೆ ಹೆಣಗಾಡುತ್ತಿರುವವರಿಗೂ ಅಗತ್ಯವಿರುವ ಆತ್ಮಿಕ ಬೆಂಬಲವನ್ನು ನೀಡಲು ಸಿದ್ಧರಿದ್ದಾರೆ. ಇದು ದೇವರ ಪ್ರೀತಿಯ ಸ್ವಂತ ಪ್ರಕಟನೆಗೆ ಹೊಂದಿಕೆಯಲ್ಲಿದೆ, ಯಾಕಂದರೆ ಬೈಬಲ್ ಹೇಳುವುದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.”—ರೋಮಾಪುರ 5:8.
[ಪಾದಟಿಪ್ಪಣಿ]
a ಎಚ್ಚರ! ಪತ್ರಿಕೆಯ ಏಪ್ರಿಲ್ 8, 1995ರ ಸಂಚಿಕೆಯಲ್ಲಿ, “ಈ ಅನಿಸಿಕೆಗಳು ತೊಲಗುವಂತೆ ನಾನು ಹೇಗೆ ಮಾಡಬಲ್ಲೆ?” ಎಂಬ ಲೇಖನವನ್ನು ನೋಡಿರಿ.
[ಪುಟ 14 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕ್ರೈಸ್ತರು, ಸಲಿಂಗಿಕಾಮದ ಕುರಿತ ಬೈಬಲಿನ ದೃಷ್ಟಿಕೋನದ ತೀಕ್ಷ್ಣತೆಯನ್ನು ಕಡಿಮೆಗೊಳಿಸುವುದಿಲ್ಲ
[ಪುಟ 16 ರಲ್ಲಿರುವ ಚಿತ್ರ ಕೃಪೆ]
Punch