“ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
“ಯಾಹುವಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವದು ಒಳ್ಳೇದೂ ಸಂತೋಷಕರವೂ ಆಗಿದೆ; ಆತನನ್ನು ಕೀರ್ತಿಸುವದು ಯುಕ್ತವಾಗಿದೆ.” —ಕೀರ್ತ. 147:1.
1-3. (ಎ) ಕೀರ್ತನೆ 147ನ್ನು ಬಹುಶಃ ಯಾವ ಸಮಯದಲ್ಲಿ ಬರೆದಿರಬಹುದು? (ಬಿ) ಈ ಕೀರ್ತನೆಯನ್ನು ಅಧ್ಯಯನ ಮಾಡುವುದರಿಂದ ನಾವೇನು ಕಲಿಯುವೆವು?
ಒಬ್ಬ ವ್ಯಕ್ತಿ ಹೇಳಿದ ಅಥವಾ ಮಾಡಿದ ವಿಷಯ ನಮಗೆ ಇಷ್ಟವಾದರೆ ನಾವದನ್ನು ಮೆಚ್ಚಿ ಅವರನ್ನು ಹೊಗಳುತ್ತೇವೆ. ಮನುಷ್ಯರ ವಿಷಯದಲ್ಲೇ ನಾವಿಷ್ಟನ್ನು ಮಾಡುವಾಗ, ಯೆಹೋವ ದೇವರನ್ನು ಹೊಗಳಲು, ಆತನಿಗೆ ಸ್ತೋತ್ರ ಸಲ್ಲಿಸಲು ನಮಗೆ ಇನ್ನೆಷ್ಟು ಕಾರಣಗಳಿವೆ ಅಲ್ಲವೆ? ಆತನ ಅದ್ಭುತವಾದ ಸೃಷ್ಟಿಯಲ್ಲಿ ಕಂಡುಬರುವ ಆತನ ಅಪಾರ ಶಕ್ತಿಗಾಗಿ ಆತನನ್ನು ಸ್ತುತಿಸುತ್ತೇವೆ. ತನ್ನ ಸ್ವಂತ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಡುವ ಮೂಲಕ ನಮ್ಮ ಮೇಲೆ ತೋರಿಸಿದ ಗಾಢ ಪ್ರೀತಿಗಾಗಿಯೂ ಆತನನ್ನು ಸ್ತುತಿಸುತ್ತೇವೆ.
2 ಕೀರ್ತನೆ 147ನ್ನು ನಾವು ಓದುವಾಗ ಅದನ್ನು ಬರೆದವನಿಗೆ ಯೆಹೋವನನ್ನು ಸ್ತುತಿಸಲು ಎಷ್ಟು ತೀವ್ರ ಆಸೆ ಇತ್ತೆನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅವನು ದೇವರನ್ನು ಸ್ತುತಿಸಲು ತನ್ನೊಂದಿಗೆ ಜೊತೆಗೂಡುವಂತೆ ಬೇರೆಯವರನ್ನೂ ಉತ್ತೇಜಿಸಿದನು.—ಕೀರ್ತನೆ 147:1, 7, 12 ಓದಿ.
3 ಕೀರ್ತನೆ 147ನ್ನು ಬರೆದವನು ಯಾರೆಂದು ನಮಗೆ ತಿಳಿದಿಲ್ಲ. ಆದರೆ ಯೆಹೋವನು ಇಸ್ರಾಯೇಲ್ಯರನ್ನು ಬಾಬೆಲಿನಿಂದ ಬಿಡಿಸಿ ಯೆರೂಸಲೇಮಿಗೆ ಹಿಂದಿರುಗಿಸಿದ ಸಮಯದಲ್ಲಿ ಅವನು ಜೀವಿಸಿರಬಹುದು. (ಕೀರ್ತ. 147:2) ಯೆಹೋವನು ತನ್ನ ಜನರು ಸ್ವದೇಶದಲ್ಲಿ ತನ್ನ ಆರಾಧನೆ ಮಾಡುವಂತೆ ಸಾಧ್ಯಗೊಳಿಸಿದ್ದಕ್ಕಾಗಿ ಈ ಕೀರ್ತನೆಗಾರನು ಆತನನ್ನು ಸ್ತುತಿಸಿದನು. ಆತನಿಗೆ ಸ್ತೋತ್ರ ಸಲ್ಲಿಸಲು ಇನ್ನೂ ಹಲವಾರು ಕಾರಣಗಳನ್ನು ಕೊಟ್ಟನು. ಆ ಕಾರಣಗಳೇನು? “ಹಲ್ಲೆಲೂಯಾ” ಅಥವಾ “ಯಾಹುವಿಗೆ ಸ್ತೋತ್ರ!” ಎಂದು ಹೇಳಲು ನಿಮ್ಮ ಜೀವನದಲ್ಲಿ ಯಾವ ಕಾರಣಗಳಿವೆ?—ಕೀರ್ತ. 147:1; 104:35, ಪಾದಟಿಪ್ಪಣಿ.
ಮುರಿದ ಮನಸ್ಸುಳ್ಳವರನ್ನು ಯೆಹೋವನು ವಾಸಿಮಾಡುತ್ತಾನೆ
4. ರಾಜ ಕೋರೆಷನು ಬಂಧಿಗಳಾಗಿದ್ದ ಇಸ್ರಾಯೇಲ್ಯರನ್ನು ಬಿಡಿಸಿದಾಗ ಅವರಿಗೆ ಹೇಗನಿಸಿರಬೇಕು? ಯಾಕೆ?
4 ಬಾಬೆಲಿನಲ್ಲಿ ಸೆರೆಯಲ್ಲಿದ್ದಾಗ ಇಸ್ರಾಯೇಲ್ಯರಿಗೆ ಹೇಗನಿಸಿರಬಹುದೆಂದು ಸ್ವಲ್ಪ ಯೋಚಿಸಿ. ಅವರನ್ನು ಅಲ್ಲಿ ಬಂಧಿಗಳಾಗಿ ಕರೆದುಕೊಂಡು ಬಂದವರು ಅವರನ್ನು ಅಪಹಾಸ್ಯ ಮಾಡುತ್ತಾ, “ನೀವು ಚೀಯೋನಿನ ಗೀತಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು. ಆದರೆ ಯೆಹೂದ್ಯರಿಗೆ ಆ ಗೀತೆಗಳನ್ನು ಹಾಡಲಿಕ್ಕೆ ಮನಸ್ಸೇ ಆಗಲಿಲ್ಲ. ಏಕೆಂದರೆ ಅವರ ಹೆಚ್ಚಿನ ಆನಂದಕ್ಕೆ ಕಾರಣವಾಗಿದ್ದ ಯೆರೂಸಲೇಮ್ ಪಟ್ಟಣವನ್ನು ನಾಶಮಾಡಲಾಗಿತ್ತು. (ಕೀರ್ತ. 137:1-3, 6) ಅವರ ಮನಸ್ಸು ಮುರಿದುಹೋಗಿತ್ತು, ಅವರಿಗೆ ಸಾಂತ್ವನ ಬೇಕಾಗಿತ್ತು. ಆದರೆ ದೇವರ ವಾಕ್ಯ ಮುಂತಿಳಿಸಿದಂತೆಯೇ ಯೆಹೋವನು ತನ್ನ ಜನರಿಗೆ ಸಹಾಯಮಾಡಿದನು. ಹೇಗೆ? ಪಾರಸಿಯ ರಾಜ ಕೋರೆಷನು ಬಾಬೆಲನ್ನು ವಶಪಡಿಸಿಕೊಂಡ ಮೇಲೆ ಹೀಗಂದನು: “ಯೆಹೋವನು ನನಗೆ . . . ತನಗೋಸ್ಕರ ಯೆಹೂದದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಸ್ವದೇಶಕ್ಕೆ ಹೋಗಲಿ; ಅವರ ದೇವರಾದ ಯೆಹೋವನು ಅವರ ಸಂಗಡ ಇರುವನು.” (2 ಪೂರ್ವ. 36:23) ಇದನ್ನು ಕೇಳಿ ಬಾಬೆಲಿನಲ್ಲಿದ್ದ ಇಸ್ರಾಯೇಲ್ಯರಿಗೆ ಎಷ್ಟೊಂದು ಸಾಂತ್ವನ ಸಿಕ್ಕಿರಬೇಕು!
5. ನಮ್ಮನ್ನು ವಾಸಿಮಾಡಲು ಯೆಹೋವನಿಗಿರುವ ಶಕ್ತಿಯ ಬಗ್ಗೆ ಕೀರ್ತನೆಗಾರನು ಏನು ಹೇಳಿದನು?
5 ಯೆಹೋವನು ಇಡೀ ಇಸ್ರಾಯೇಲ್ ಜನಾಂಗಕ್ಕೆ ಮಾತ್ರವಲ್ಲ ಒಬ್ಬೊಬ್ಬ ಇಸ್ರಾಯೇಲ್ಯನಿಗೂ ಸಾಂತ್ವನ ಕೊಟ್ಟನು. ಇಂದು ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಇದನ್ನೇ ಮಾಡುತ್ತಾನೆ. “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 147:3) ನಾವು ಕಾಯಿಲೆಬಿದ್ದಾಗ ಇಲ್ಲವೇ ಖಿನ್ನರಾಗಿರುವಾಗ ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಂದು ನಮಗೆ ಭರವಸೆ ಇದೆ. ಆತನು ನಮಗೆ ಸಾಂತ್ವನ ಕೊಡಲು, ನಮ್ಮ ಭಾವನಾತ್ಮಕ ಗಾಯಗಳನ್ನು ವಾಸಿಮಾಡಲು ಕಾತರದಿಂದಿದ್ದಾನೆ. (ಕೀರ್ತ. 34:18; ಯೆಶಾ. 57:15) ನಮಗೆ ಯಾವುದೇ ರೀತಿಯ ಸಮಸ್ಯೆ ಇರಲಿ ಅದನ್ನು ನಿಭಾಯಿಸಲು ಬೇಕಾದ ವಿವೇಕ ಮತ್ತು ಬಲವನ್ನು ಕೊಡುತ್ತಾನೆ.—ಯಾಕೋ. 1:5.
6. ಕೀರ್ತನೆ 147:4ರಲ್ಲಿರುವ ಮಾತುಗಳಿಂದ ನಮಗೇನು ಅರ್ಥವಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)
6 ಕೀರ್ತನೆಗಾರನು ನಂತರ ಆಕಾಶದ ಕಡೆಗೆ ಗಮನ ಹರಿಸಿ ಯೆಹೋವನು “ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ” ಎಂದು ಹೇಳುತ್ತಾನೆ. (ಕೀರ್ತ. 147:4) ಕೀರ್ತನೆಗಾರನಿಗೆ ನಕ್ಷತ್ರಗಳು ಕಾಣುತ್ತಿದ್ದರೂ ಒಟ್ಟು ಎಷ್ಟು ನಕ್ಷತ್ರಗಳಿವೆ ಅಂತ ಅವನಿಗೆ ಗೊತ್ತಿರಲಿಲ್ಲ. ಇಂದು ವಿಜ್ಞಾನಿಗಳು ಹೇಳುವಂತೆ, ನಮ್ಮ ಕ್ಷೀರಪಥ ಗ್ಯಾಲಕ್ಸಿಯೊಂದರಲ್ಲೇ ಕೋಟಿಗಟ್ಟಲೆ ನಕ್ಷತ್ರಗಳಿವೆ. ಇಡೀ ವಿಶ್ವದಲ್ಲಿ ಇಂಥ ಕೋಟ್ಯಾನುಕೋಟಿ ಗ್ಯಾಲಕ್ಸಿಗಳು ಇರಬಹುದು. ಮಾನವರು ಎಷ್ಟು ನಕ್ಷತ್ರಗಳಿವೆಯೆಂದು ಸರಿಯಾಗಿ ಹೇಳಲಾರರು. ಆದರೆ ಸೃಷ್ಟಿಕರ್ತನು ಹೇಳಬಲ್ಲನು. ಅವನಿಗೆ ಒಂದೊಂದು ನಕ್ಷತ್ರದ ಬಗ್ಗೆ ಎಷ್ಟು ಚೆನ್ನಾಗಿ ಗೊತ್ತಿದೆಯೆಂದರೆ ಒಂದೊಂದಕ್ಕೂ ಹೆಸರು ಇಟ್ಟಿದ್ದಾನೆ! (1 ಕೊರಿಂ. 15:41) ಎಲ್ಲಿ ಯಾವ ನಕ್ಷತ್ರ ಇದೆಯೆಂದು ತಿಳಿದಿರುವ ದೇವರಿಗೆ ನಿಮ್ಮ ಬಗ್ಗೆಯೂ ತಿಳಿದಿದೆ. ನೀವು ಎಲ್ಲಿ ಇದ್ದೀರಿ, ನಿಮಗೆ ಹೇಗನಿಸುತ್ತಾ ಇದೆ, ನಿಮಗೆ ಏನು ಅಗತ್ಯವಿದೆ ಇದೆಲ್ಲ ಆತನಿಗೆ ಚೆನ್ನಾಗಿ ತಿಳಿದಿದೆ!
7, 8. (ಎ) ನಮ್ಮ ಬಗ್ಗೆ ಯೆಹೋವನಿಗೆ ಏನೆಲ್ಲ ಅರ್ಥವಾಗುತ್ತದೆ? (ಬಿ) ಯೆಹೋವನಿಗೆ ನಮ್ಮ ಕಷ್ಟ ಅರ್ಥವಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.
7 ನಿಮ್ಮ ಸಮಸ್ಯೆಗಳಿಂದಾಗಿ ನಿಮಗಾಗುತ್ತಿರುವ ಕಷ್ಟನೋವು ಯೆಹೋವನಿಗೆ ಅರ್ಥವಾಗುತ್ತದೆ. ನಿಮಗೆ ಸಹಾಯ ಮಾಡಲು ಬೇಕಾದ ಶಕ್ತಿಯೂ ಆತನಿಗಿದೆ. (ಕೀರ್ತನೆ 147:5 ಓದಿ.) ನಿಮ್ಮ ಪರಿಸ್ಥಿತಿ ತುಂಬ ಕಷ್ಟಕರ ಆಗಿದೆ, ನಿಭಾಯಿಸಲು ಆಗುತ್ತಿಲ್ಲವೆಂದು ನಿಮಗನಿಸಬಹುದು. ನಮ್ಮ ಈ ಇತಿಮಿತಿಗಳನ್ನು ದೇವರು ಅರ್ಥಮಾಡಿಕೊಳ್ಳುತ್ತಾನೆ. “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತ. 103:14) ನಾವು ಅಪರಿಪೂರ್ಣರು ಆಗಿರುವುದರಿಂದ ಮಾಡಿದ ತಪ್ಪುಗಳನ್ನೇ ಪುನಃ ಪುನಃ ಮಾಡುತ್ತೇವೆ. ಆಗ ನಮಗೆ ನಿರುತ್ತೇಜನ ಆಗಬಹುದು. ನಾವಾಡಿರುವ ಮಾತುಗಳ ಬಗ್ಗೆ, ನಮಗಿದ್ದ ತಪ್ಪು ಆಸೆಗಳ ಬಗ್ಗೆ, ಹೊಟ್ಟೆಕಿಚ್ಚಿನ ಭಾವನೆಗಳ ಬಗ್ಗೆ ನಮಗೆ ಎಷ್ಟೋ ಸಲ ಬೇಜಾರಾಗಿದೆ ಅಲ್ಲವಾ? ಯೆಹೋವನಿಗೆ ಇಂಥ ಯಾವುದೇ ಬಲಹೀನತೆಗಳು ಇಲ್ಲದಿದ್ದರೂ ‘ಆತನಿಗೆ ಅಪರಿಮಿತ ಜ್ಞಾನ’ ಇರುವುದರಿಂದ ನಮ್ಮನ್ನು ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.
8 ನಿಮಗೇನೋ ಕಷ್ಟ ಎದುರಾದಾಗ ಅದರಿಂದ ಹೊರಗೆ ಬರಲು ಯೆಹೋವನು ನಿಮಗೆ ಸಹಾಯ ಮಾಡಿದ ಅನುಭವ ನಿಮಗಾಗಿದೆಯಾ? (ಯೆಶಾ. 41:10, 13) ಕೀಯೊಕೊ ಎಂಬ ಹೆಸರಿನ ಪಯನೀಯರಳಿಗೆ ಹೀಗೇ ಆಯಿತು. ಆಕೆಗೆ ಸಿಕ್ಕಿದ ಹೊಸ ನೇಮಕದಿಂದಾಗಿ ಇನ್ನೊಂದು ಸ್ಥಳಕ್ಕೆ ಹೋದಾಗ ತುಂಬ ನಿರುತ್ಸಾಹ ಆಯಿತು. ತನ್ನ ಕಷ್ಟ ಯೆಹೋವನಿಗೆ ಅರ್ಥವಾಗುತ್ತಿದೆ ಎಂದು ಅವಳಿಗೆ ಗೊತ್ತಾಯಿತು. ಹೇಗೆ? ಅವಳ ಹೊಸ ಸಭೆಯಲ್ಲಿದ್ದ ಅನೇಕರು ಅವಳ ಭಾವನೆಗಳನ್ನು ಅರ್ಥಮಾಡಿಕೊಂಡರು. ಅವರು ಕೊಟ್ಟ ಸಹಾಯದ ಮೂಲಕ ಯೆಹೋವನು ಆಕೆಗೆ “ನಿನ್ನ ಮೇಲೆ ನನಗೆ ತುಂಬ ಪ್ರೀತಿಯಿದೆ. ನೀನು ಪಯನೀಯರಳೆಂಬ ಕಾರಣಕ್ಕೆ ಮಾತ್ರ ಅಲ್ಲ, ನೀನು ನನ್ನ ಮಗಳು, ನನಗೆ ಸಮರ್ಪಿತಳು ಎಂಬ ಕಾರಣಕ್ಕೆ ಪ್ರೀತಿಸುತ್ತೇನೆ. ನನ್ನ ಸಾಕ್ಷಿಯಾಗಿ ನೀನು ಜೀವನವನ್ನು ಆನಂದಿಸಬೇಕೆನ್ನುವುದೇ ನನ್ನ ಆಸೆ” ಎಂದು ಹೇಳಿದಂತಿತ್ತು. ಯೆಹೋವನು ತನ್ನ ‘ಅಪರಿಮಿತ ಜ್ಞಾನದಿಂದಾಗಿ’ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂದು ನಿಮ್ಮ ಜೀವನದಲ್ಲೂ ನೋಡಿದ್ದೀರಾ?
ನಮಗೇನು ಅಗತ್ಯವೊ ಅದನ್ನು ಯೆಹೋವನು ಒದಗಿಸುತ್ತಾನೆ
9, 10. ಯೆಹೋವನು ನಮಗೆ ಅತಿ ಮುಖ್ಯವಾಗಿ ಹೇಗೆ ಸಹಾಯ ಮಾಡುತ್ತಾನೆ? ಒಂದು ಉದಾಹರಣೆ ಕೊಡಿ.
9 ಊಟ, ಬಟ್ಟೆ, ವಸತಿ ನಮಗೆಲ್ಲರಿಗೂ ಅಗತ್ಯವಿರುವ ವಿಷಯಗಳು. ಸಾಕಷ್ಟು ಆಹಾರವಿಲ್ಲದ ಪರಿಸ್ಥಿತಿ ಬರಬಹುದೆಂಬ ಚಿಂತೆ ನಿಮಗಿರಬಹುದು. “ಕೂಗುತ್ತಿರುವ ಕಾಗೇಮರಿಗಳಿಗೂ” ಯೆಹೋವನು ಆಹಾರ ಒದಗಿಸುತ್ತಾನೆ. ಅಂದರೆ ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುವ ರೀತಿಯಲ್ಲಿ ಯೆಹೋವನು ಭೂಮಿಯನ್ನು ಸೃಷ್ಟಿಮಾಡಿದ್ದಾನೆ. (ಕೀರ್ತನೆ 147:8, 9 ಓದಿ.) ಯೆಹೋವನು ಕಾಗೆಗಳಿಗೇ ಆಹಾರ ಒದಗಿಸುತ್ತಾನಾದರೆ, ನಮ್ಮ ಭೌತಿಕ ಅಗತ್ಯಗಳನ್ನು ಖಂಡಿತ ಪೂರೈಸುವನಲ್ಲವಾ?—ಕೀರ್ತ. 37:25.
10 ಇದಕ್ಕಿಂತಲೂ ಮುಖ್ಯವಾಗಿ ಯೆಹೋವನು ನಮ್ಮ ನಂಬಿಕೆಯನ್ನು ಬಲವಾಗಿಡಲು ಬೇಕಾದದ್ದನ್ನು ಒದಗಿಸುತ್ತಾನೆ ಮತ್ತು “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಕೊಡುತ್ತಾನೆ. (ಫಿಲಿ. 4:6, 7) ಮೂಟ್ಸುವೊ ಎಂಬ ಸಹೋದರ ಮತ್ತು ಅವರ ಪತ್ನಿ ಯೆಹೋವನ ಈ ಸಹಾಯವನ್ನು ಅನುಭವಿಸಿದರು. 2011ರಲ್ಲಿ ಜಪಾನಿಗೆ ಸುನಾಮಿ ಬಡಿದಾಗ ಅವರು ತಮ್ಮ ಮನೆಯ ಛಾವಣಿಯನ್ನು ಹತ್ತಿದ್ದರಿಂದ ಹೇಗೋ ತಮ್ಮ ಜೀವ ಉಳಿಸಿಕೊಂಡರು. ಆ ದಿನ ಅವರು ಹೆಚ್ಚುಕಡಿಮೆ ಎಲ್ಲ ಸ್ವತ್ತುಗಳನ್ನು ಕಳೆದುಕೊಂಡರು. ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಕತ್ತಲೆತುಂಬಿದ, ಬಹಳ ಚಳಿಯಿದ್ದ ಕೋಣೆಯಲ್ಲಿ ಆ ರಾತ್ರಿ ಕಳೆದರು. ಬೆಳಿಗ್ಗೆ, ತಮಗೆ ಪ್ರೋತ್ಸಾಹ ಕೊಡುವ ಏನಾದರೂ ಸಾಹಿತ್ಯ ಸಿಗುತ್ತದಾ ಅಂತ ಹುಡುಕಿದರು. ಅವರಿಗೆ ಸಿಕ್ಕಿದ ಒಂದೇ ಒಂದು ಸಾಹಿತ್ಯ, 2006ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ. ಮೂಟ್ಸುವೊ ಅದರ ಪುಟಗಳನ್ನು ತಿರುವುತ್ತಾ ಹೋದಂತೆ, “ದಾಖಲಾಗಿರುವವುಗಳಲ್ಲೇ ಅತ್ಯಂತ ಮಾರಕವಾದ ಸುನಾಮಿಗಳು” ಎಂಬ ಶೀರ್ಷಿಕೆ ಅವರ ಕಣ್ಣಿಗೆ ಬಿತ್ತು. 2004ರಲ್ಲಿ ಸುಮಾತ್ರದಲ್ಲಾದ ಭೂಕಂಪದಿಂದಾಗಿ ಉಂಟಾದ ಅತ್ಯಂತ ವಿನಾಶಕಾರಿ ಸುನಾಮಿಗಳ ಬಗ್ಗೆ ಆ ಭಾಗದಲ್ಲಿ ತಿಳಿಸಲಾಗಿತ್ತು. ಅದರಲ್ಲಿ ಕೊಡಲಾದ ಸಹೋದರ ಸಹೋದರಿಯರ ಅನುಭವಗಳನ್ನು ಓದುತ್ತಾ ಓದುತ್ತಾ ಮೂಟ್ಸುವೊ ಮತ್ತವರ ಪತ್ನಿ ಅತ್ತುಬಿಟ್ಟರು. ತಮಗೆ ತುಂಬ ಅಗತ್ಯವಿದ್ದ ಪ್ರೋತ್ಸಾಹವನ್ನೇ ಯೆಹೋವನು ಈ ಮೂಲಕ ಕೊಡುತ್ತಿದ್ದಾನೆಂದು ಅವರಿಗೆ ಅನಿಸಿತು. ಬೇರೆ ವಿಧಗಳಲ್ಲೂ ಯೆಹೋವನು ಅವರನ್ನು ನೋಡಿಕೊಂಡನು. ಜಪಾನಿನ ಬೇರೆ ಭಾಗಗಳಲ್ಲಿರುವ ಸಹೋದರರು ಅವರಿಗಾಗಿ ಊಟ, ಬಟ್ಟೆ ಕೊಟ್ಟರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ದೇವರ ಸಂಘಟನೆಯು ಕಳುಹಿಸಿಕೊಟ್ಟ ಸಹೋದರರು ಸಭೆಗಳಿಗೆ ಮಾಡಿದ ಭೇಟಿಗಳಿಂದ ಅವರಿಗೆ ತುಂಬ ಬಲ ಸಿಕ್ಕಿತು. ಮೂಟ್ಸುವೊ ಹೇಳುವುದು: “ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರ ಪಕ್ಕದಲ್ಲೇ ಇದ್ದು, ನಮ್ಮ ಆರೈಕೆ ಮಾಡುತ್ತಿರುವಂತೆ ಅನಿಸಿತು. ತುಂಬ ಸಾಂತ್ವನ ಸಿಕ್ಕಿತು!” ಮೊದಲು ನಮ್ಮ ನಂಬಿಕೆಯನ್ನು ಬಲವಾಗಿರಿಸಲು ಬೇಕಾದದ್ದನ್ನು ಯೆಹೋವನು ಒದಗಿಸುತ್ತಾನೆ. ನಂತರ ನಮ್ಮ ಭೌತಿಕ ಅಗತ್ಯಗಳನ್ನೂ ಪೂರೈಸುತ್ತಾನೆ.
ದೇವರ ಸಹಾಯ ಪಡೆಯಿರಿ
11. ದೇವರ ಸಹಾಯ ಪಡೆಯಬೇಕಾದರೆ ನಾವೇನು ಮಾಡಬೇಕು?
11 ಯೆಹೋವನು “ದೀನರಿಗೆ ಆಧಾರ.” (ಕೀರ್ತ. 147:6ಎ) ಆತನು ನಮ್ಮನ್ನು ಪ್ರೀತಿಸುತ್ತಾನೆ. ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿದ್ದಾನೆ. ನಾವು ಆತನ ಸಹಾಯ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು? ಆತನ ಜೊತೆ ನಾವು ಬಲವಾದ ಸಂಬಂಧ ಇಟ್ಟುಕೊಳ್ಳಬೇಕು. ಇಂಥ ಸಂಬಂಧ ಇರಬೇಕಾದರೆ ನಮ್ಮಲ್ಲಿ ದೀನತೆ ಇರಬೇಕು. (ಚೆಫ. 2:3) ದೀನ ಜನರು ತಮಗಾದ ಯಾವುದೇ ಅನ್ಯಾಯವನ್ನು ಯೆಹೋವನು ಸರಿಪಡಿಸಿ ತಮ್ಮ ಕಷ್ಟವನ್ನು ಕೊನೆಗೊಳಿಸುತ್ತಾನೆ ಎಂದು ಭರವಸೆ ಇಡುತ್ತಾರೆ. ಇಂಥವರನ್ನು ಯೆಹೋವನು ಮೆಚ್ಚುತ್ತಾನೆ.
12, 13. (ಎ) ನಮಗೆ ದೇವರ ಸಹಾಯ ಸಿಗಬೇಕಾದರೆ ಯಾವುದನ್ನು ದೂರವಿಡಬೇಕು? (ಬಿ) ಯೆಹೋವನು ಆನಂದಿಸುವುದು ಯಾರಲ್ಲಿ?
12 ಇನ್ನೊಂದು ಕಡೆ, ದೇವರು “ದುಷ್ಟರನ್ನು ನೆಲಕ್ಕೆ ಹತ್ತಿಸಿಬಿಡುತ್ತಾನೆ.” (ಕೀರ್ತ. 147:6ಬಿ) ಇದು ನಮಗೆ ಆಗಬಾರದಲ್ಲವಾ? ದೇವರು ನಮಗೆ ನಿಷ್ಠಾವಂತ ಪ್ರೀತಿ ತೋರಿಸಬೇಕೆನ್ನುವುದೇ ನಮ್ಮಾಸೆ. ಹೀಗೆ ಆಗಬೇಕಾದರೆ ಆತನು ಹಗೆಮಾಡುವುದನ್ನು ನಾವು ಹಗೆಮಾಡಬೇಕು. (ಕೀರ್ತ. 97:10) ಉದಾಹರಣೆಗೆ, ನಾವು ಲೈಂಗಿಕ ಅನೈತಿಕತೆಯನ್ನು ಹಗೆಮಾಡಬೇಕು. ಇದರರ್ಥ ಅನೈತಿಕತೆಗೆ ನಡೆಸುವ ಯಾವುದನ್ನೂ, ಅಶ್ಲೀಲ ಚಿತ್ರಗಳನ್ನೂ ನಾವು ದೂರವಿಡಬೇಕು. (ಕೀರ್ತ. 119:37; ಮತ್ತಾ. 5:28) ಇದೊಂದು ದೊಡ್ಡ ಹೋರಾಟವೇ ಆಗಿರಬಹುದು. ಆದರೆ ನಮಗೆ ಯೆಹೋವನ ಆಶೀರ್ವಾದ ಸಿಗುವುದರಿಂದ ನಾವು ಪಟ್ಟ ಕಷ್ಟ ಸಾರ್ಥಕ ಆಗುವುದು.
13 ನಮ್ಮಷ್ಟಕ್ಕೆ ನಾವೇ ಈ ಹೋರಾಟ ನಡೆಸಲು ಸಾಧ್ಯವಿಲ್ಲ. ಯೆಹೋವನ ಮೇಲೆ ನಾವು ಆತುಕೊಳ್ಳಲೇಬೇಕು. ಆದರೆ “ಕುದುರೆಯ ಶಕ್ತಿಯಲ್ಲಿ” ನಾವು ಭರವಸೆ ಇಟ್ಟರೆ ಅಂದರೆ ಬೇರೆ ಮಾನವರು ಸಹಾಯಕ್ಕಾಗಿ ಯಾವುದರ ಮೊರೆಹೋಗುತ್ತಾರೊ ನಾವೂ ಅದಕ್ಕೇ ಮೊರೆಹೋದರೆ ಆತನಿಗೆ ಇಷ್ಟವಾಗಬಹುದಾ? ಇಲ್ಲ! “ಆಳಿನ ತೊಡೆಯ ಬಲ” ಅಂದರೆ ನಮ್ಮ ಸ್ವಂತ ಬಲದಲ್ಲಿ ಅಥವಾ ಬೇರೆ ಮಾನವರ ಸಹಾಯದಲ್ಲಿ ನಾವು ಭರವಸೆಯಿಡಬಾರದು. (ಕೀರ್ತ. 147:10) ಅದರ ಬದಲು ನಮ್ಮ ಬಲಹೀನತೆಗಳೊಂದಿಗೆ ಹೋರಾಡಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾ, ಬೇಡಿಕೊಳ್ಳುತ್ತಾ ಇರಬೇಕು. ನಾವು ಹೀಗೆ ಪುನಃ ಪುನಃ ಮಾಡುವ ಪ್ರಾರ್ಥನೆಗಳನ್ನು ಕೇಳಿ ಯೆಹೋವನಿಗೆ ಸುಸ್ತಾಗುವುದಿಲ್ಲ, ಯಾವತ್ತೂ ಬೇಜಾರು ಮಾಡಿಕೊಳ್ಳುವುದಿಲ್ಲ. “ಯೆಹೋವನು ಆನಂದಿಸುವದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.” (ಕೀರ್ತ. 147:11) ಆತನಿಗೆ ನಮ್ಮ ಮೇಲೆ ಕೃಪೆ ಅಂದರೆ ನಿಷ್ಠಾವಂತ ಪ್ರೀತಿ ಇರುವುದರಿಂದ ಆತನು ನಮಗೆ ತಪ್ಪಾದ ಆಸೆಗಳನ್ನು ಜಯಿಸಲು ಖಂಡಿತ ಸಹಾಯಮಾಡುತ್ತಾ ಇರುವನು.
14. ಕೀರ್ತನೆಗಾರನಿಗೆ ಯಾವ ವಿಷಯದ ಬಗ್ಗೆ ನಿಶ್ಚಯವಿತ್ತು?
14 ನಮಗೆ ಸಮಸ್ಯೆಗಳು ಎದುರಾದಾಗ ಸಹಾಯ ಮಾಡುತ್ತೇನೆಂದು ಯೆಹೋವನು ಆಶ್ವಾಸನೆ ಕೊಡುತ್ತಾನೆ. ಇಸ್ರಾಯೇಲ್ಯರು ಯೆರೂಸಲೇಮಿಗೆ ಹಿಂದಿರುಗಿದ ಸಮಯದಲ್ಲಿ ಯೆಹೋವನು ಅವರಿಗೆ ಹೇಗೆ ಸಹಾಯ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಕೀರ್ತನೆಗಾರನು ಯೋಚಿಸಿದನು. ಅವನು ಹೀಗೆ ಹಾಡಿದನು: “ಆತನು ನಿನ್ನ ಹೆಬ್ಬಾಗಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ; ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ. ಆತನು ನಿನ್ನ ಪ್ರಾಂತದೊಳಗೆ ಸೌಭಾಗ್ಯವನ್ನುಂಟು ಮಾಡುತ್ತಾನೆ.” (ಕೀರ್ತ. 147:13, 14) ಯೆಹೋವನು ಪಟ್ಟಣದ ಹೆಬ್ಬಾಗಿಲುಗಳನ್ನು ಬಲಪಡಿಸುತ್ತಾನೆ ಎಂಬ ಸಂಗತಿಯಿಂದ ಕೀರ್ತನೆಗಾರನಲ್ಲಿ ಸುರಕ್ಷತೆಯ ಭಾವನೆ ಮೂಡಿತು. ಯೆಹೋವನು ತನ್ನ ಜನರನ್ನು ಖಂಡಿತ ಕಾಪಾಡುವನೆಂಬ ಭರವಸೆ ಸಿಕ್ಕಿತು.
15-17. (ಎ) ನಮ್ಮ ಕಷ್ಟಗಳ ಬಗ್ಗೆ ನಮಗೆ ಒಮ್ಮೊಮ್ಮೆ ಹೇಗನಿಸಬಹುದು? (ಬಿ) ನಮಗೆ ಸಹಾಯಮಾಡಲು ಯೆಹೋವನು ತನ್ನ ವಾಕ್ಯವನ್ನು ಹೇಗೆ ಬಳಸುತ್ತಾನೆ? (ಸಿ) ‘ದೇವರ ನುಡಿ ಬಹುವೇಗಶಾಲಿ’ ಆಗಿರುವುದು ಹೇಗೆಂದು ತೋರಿಸಲು ಒಂದು ಉದಾಹರಣೆ ಕೊಡಿ.
15 ನಿಮ್ಮ ಸಮಸ್ಯೆಗಳಿಂದಾಗಿ ನಿಮಗೆ ತುಂಬ ಚಿಂತೆಯಾಗಬಹುದು. ಆದರೆ ಆ ಸಮಸ್ಯೆಗಳನ್ನು ನಿಭಾಯಿಸಲು ಬೇಕಾದ ವಿವೇಕವನ್ನು ಯೆಹೋವನು ಕೊಡುವನು. ಆತನು “ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ; ಆತನ ವಾಕ್ಯವು ಬಹುವೇಗಶಾಲಿಯಾಗಿದೆ” ಎಂದು ಕೀರ್ತನೆಗಾರನು ಹೇಳಿದನು. ನಂತರ ಹಿಮ, ಇಬ್ಬನಿ, ಆನೆಕಲ್ಲುಗಳ ಬಗ್ಗೆ ಹೇಳಿ, “ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?” ಎಂದು ಕೀರ್ತನೆಗಾರನು ಕೇಳಿದನು. ಯೆಹೋವನು “ಅಪ್ಪಣೆಕೊಡಲು ಅವು ಕರಗುತ್ತವೆ” ಎಂದು ಹೇಳಿದನು. (ಕೀರ್ತ. 147:15-18) ಎಲ್ಲವನ್ನೂ ತಿಳಿದಿರುವ, ಎಲ್ಲವನ್ನೂ ಮಾಡಲು ಶಕ್ತನಾಗಿರುವ, ಆನೆಕಲ್ಲುಗಳನ್ನು ಮತ್ತು ಹಿಮವನ್ನು ನಿಯಂತ್ರಿಸಬಲ್ಲ ನಮ್ಮ ದೇವರು ಯಾವುದೇ ಸಮಸ್ಯೆ ಜಯಿಸುವಂತೆ ನಿಮಗೆ ಸಹಾಯ ಮಾಡಶಕ್ತನು.
16 ಇಂದು ನಮ್ಮನ್ನು ಮಾರ್ಗದರ್ಶಿಸಲು ಯೆಹೋವನು ತನ್ನ ವಾಕ್ಯವಾದ ಬೈಬಲನ್ನು ಕೊಟ್ಟಿದ್ದಾನೆ. ಯೆಹೋವನ ನುಡಿ ನಮಗೆ ಸಹಾಯಮಾಡಲಿಕ್ಕಾಗಿ “ಬಹುವೇಗ”ವಾಗಿ ಬರುತ್ತದೆಂದು ಕೀರ್ತನೆಗಾರನು ಹೇಳಿದನು. ಅಂದರೆ ದೇವರು ನಮಗೆ ಸರಿಯಾದ ವಿಧದಲ್ಲಿ, ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಕೊಡುತ್ತಾನೆ. ತನ್ನ ವಾಕ್ಯವಾದ ಬೈಬಲ್, ‘ನಂಬಿಗಸ್ತ ಮತ್ತು ವಿವೇಚನೆಯುಳ್ಳ ಆಳಿನ’ ಪ್ರಕಾಶನಗಳು, JW ಪ್ರಸಾರ, jw.org ವೆಬ್ಸೈಟ್, ಹಿರಿಯರು ಮತ್ತು ಸಹೋದರ ಸಹೋದರಿಯರ ಮೂಲಕ ನಿಮಗೆ ಹೇಗೆ ಸಹಾಯ ಮಾಡಿದ್ದಾನೆಂದು ಸ್ವಲ್ಪ ಯೋಚಿಸಿ. (ಮತ್ತಾ. 24:45) ನಿಮಗೆ ಬೇಕಾದ ಮಾರ್ಗದರ್ಶನ ಕೊಡಲು ಯೆಹೋವನು ಎಷ್ಟು ವೇಗಶಾಲಿಯಾಗಿದ್ದಾನೆಂದು ನಿಮ್ಮ ಬದುಕಲ್ಲೇ ನೋಡಿದ್ದೀರಾ?
17 ಸಿಮೋನಾ ಎಂಬ ಸಹೋದರಿ ದೇವರ ವಾಕ್ಯ ತನಗೆ ಸಹಾಯಮಾಡಿದ್ದನ್ನು ಸ್ವಂತ ಅನುಭವದಿಂದ ತಿಳಿದುಕೊಂಡಿದ್ದಾಳೆ. ತಾನು ಅಯೋಗ್ಯಳು, ಯೆಹೋವನು ತನ್ನನ್ನು ಮೆಚ್ಚುವುದಿಲ್ಲ ಎಂದು ಆಕೆಗೆ ಅನಿಸುತ್ತಿತ್ತು. ಆದರೆ ಆಕೆಗೆ ನಿರುತ್ಸಾಹ ಆದಾಗೆಲ್ಲಾ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ, ಆತನ ಸಹಾಯಕ್ಕಾಗಿ ಬೇಡಿಕೊಳ್ಳುತ್ತಾ ಇರುತ್ತಿದ್ದಳು. ಬೈಬಲಿನ ಅಧ್ಯಯನವನ್ನೂ ಮಾಡುತ್ತಾ ಇದ್ದಳು. ಅವಳನ್ನುವುದು: “ನಾನು ಎದುರಿಸಿರುವ ಒಂದೊಂದು ಕಷ್ಟದ ಸನ್ನಿವೇಶದಲ್ಲೂ ಯೆಹೋವನಿಂದ ಬಲ ಮತ್ತು ಮಾರ್ಗದರ್ಶನ ಪಡೆದಿದ್ದೇನೆ.” ಇದರಿಂದಾಗಿ ಅವಳಿಗೆ ಹೆಚ್ಚು ಸಕಾರಾತ್ಮಕ ಮನೋಭಾವ ಇದೆ.
18. (ಎ) ದೇವರ ಅನುಗ್ರಹ ನಿಮಗಿದೆಯೆಂದು ನಿಮಗೆ ಯಾಕೆ ಅನಿಸುತ್ತದೆ? (ಬಿ) “ಯಾಹುವಿಗೆ ಸ್ತೋತ್ರ!” ಎಂದು ಹಾಡಲು ನಿಮಗೆ ಯಾವ ಕಾರಣಗಳಿವೆ?
18 ಭೂಮಿಯಲ್ಲಿರುವ ಎಲ್ಲ ಜನಾಂಗಗಳಿಂದ ಪುರಾತನ ಕಾಲದ ಇಸ್ರಾಯೇಲನ್ನು ಮಾತ್ರ ಯೆಹೋವನು ತನ್ನ ಜನರಾಗಿ ಆಯ್ಕೆಮಾಡಿದ್ದಾನೆಂದು ಕೀರ್ತನೆಗಾರನಿಗೆ ಗೊತ್ತಿತ್ತು. ಈ ಜನಾಂಗಕ್ಕೆ ಮಾತ್ರ ದೇವರ “ವಾಕ್ಯ” ಮತ್ತು ‘ನಿಯಮವಿಧಿಗಳನ್ನು’ ಕೊಡಲಾಗಿತ್ತು. (ಕೀರ್ತನೆ 147:19, 20 ಓದಿ.) ಇಂದು ದೇವರ ನಾಮಧಾರಿಗಳಾಗಿರುವ ಮಹಾ ಗೌರವ ನಮಗಿದೆ. ನಮಗೆ ಆತನ ಬಗ್ಗೆ ತಿಳಿದಿರುವುದು, ನಮ್ಮನ್ನು ಮಾರ್ಗದರ್ಶಿಸಲು ನಮ್ಮ ಬಳಿ ಆತನ ವಾಕ್ಯವಿರುವುದು, ಆತನ ಜೊತೆ ಒಂದು ಆಪ್ತ ಸಂಬಂಧ ಇರುವುದು ಇದೆಲ್ಲದಕ್ಕಾಗಿ ನಾವು ಕೃತಜ್ಞರು. ಹಾಗಾಗಿ ಕೀರ್ತನೆ 147ರ ಬರಹಗಾರನಂತೆ ನಿಮಗೂ “ಯಾಹುವಿಗೆ ಸ್ತೋತ್ರ!” ಎಂದು ಹಾಡಲು ಮತ್ತು ಬೇರೆಯವರೂ ಹಾಗೆ ಮಾಡುವಂತೆ ಪ್ರೋತ್ಸಾಹಿಸಲು ಹಲವಾರು ಕಾರಣಗಳಿವೆ.