ಯೆಹೋವನಿಗಾಗಿ ತಾಳ್ಮೆಯಿಂದ ಕಾಯುವಾಗ ಖುಷಿಯಾಗಿರಿ
ದೇವರು ಈ ಭೂಮಿಯಲ್ಲಿರೋ ಕೆಟ್ಟತನ ತೆಗೆದುಹಾಕಿ ಎಲ್ಲಾನೂ ಹೊಸದು ಮಾಡೋ ದಿನ ಬೇಗ ಬರಲಿ ಅಂತ ನೀವೆಲ್ಲ ಕಾಯ್ತಾ ಇದ್ದೀರಲ್ವಾ? (ಪ್ರಕ. 21:1-5) ಆದ್ರೆ ಕೆಲವೊಮ್ಮೆ ‘ಇನ್ನೂ ಎಷ್ಟು ದಿನ ಕಾಯಬೇಕಪ್ಪಾ’ ಅಂತ ನಿಮಗೆ ಅನಿಸಬಹುದು. ಅದ್ರಲ್ಲೂ ಜೀವನದಲ್ಲಿ ಸಮಸ್ಯೆಗಳು ಬಂದಾಗ ಕಾಯೋಕೆ ಇನ್ನೂ ಕಷ್ಟ ಆಗಬಹುದು. ನಿಜ, ಅಂದ್ಕೊಂಡಿದ್ದು ಆಗೋಕೆ ತಡ ಆದಾಗ ಬೇಜಾರಾಗುತ್ತೆ.—ಜ್ಞಾನೋ. 13:12.
ಆದ್ರೂ ಯೆಹೋವ ನಿರ್ಧರಿಸಿರೋ ಸಮಯ ಬರೋ ತನಕ ನಾವೆಲ್ರೂ ತಾಳ್ಮೆಯಿಂದ ಕಾಯಬೇಕು ಅಂತ ಆತನು ಬಯಸ್ತಾನೆ. ಆತನು ಯಾಕೆ ನಮಗೆ ಕಾಯೋಕೆ ಹೇಳ್ತಿದ್ದಾನೆ? ನಾವು ಹೀಗೆ ತಾಳ್ಮೆಯಿಂದ ಕಾಯುವಾಗ ಖುಷಿಯಾಗಿ ಇರೋಕೆ ಯಾವುದು ಸಹಾಯ ಮಾಡುತ್ತೆ?
ಯೆಹೋವ ಯಾಕೆ ನಮಗೆ ಕಾಯೋಕೆ ಹೇಳ್ತಿದ್ದಾನೆ?
“ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ, ನಿಮಗೆ ಕರುಣೆ ತೋರಿಸೋಕೆ ಆತನು ಹೆಜ್ಜೆ ತಗೊಳ್ತಾನೆ, ಯಾಕಂದ್ರೆ ಯೆಹೋವ ನ್ಯಾಯವಂತ ದೇವರು. ಆತನ ಮೇಲೆ ನಿರೀಕ್ಷೆ ಇಟ್ಕೊಂಡಿರೋ ಎಲ್ರೂ ಸಂತೋಷವಾಗಿ ಇರ್ತಾರೆ” ಅಂತ ಬೈಬಲ್ ಹೇಳುತ್ತೆ. (ಯೆಶಾ. 30:18) ಯೆಶಾಯ ಈ ಮಾತುಗಳನ್ನ ಹಠಮಾರಿ ಯೆಹೂದ್ಯರಿಗೆ ಬರೆದ. (ಯೆಶಾ. 30:1) ಆದ್ರೆ ಅವ್ರಲ್ಲೂ ಯೆಹೋವನ ಮೇಲೆ ಭಯಭಕ್ತಿ ಇಟ್ಕೊಂಡಿದ್ದ ಜನ್ರು ಇದ್ರು. ಈ ಮಾತುಗಳನ್ನ ಕೇಳಿದಾಗ ಅವರ ನಿರೀಕ್ಷೆ ಗಟ್ಟಿ ಆಯ್ತು. ಈ ಮಾತುಗಳಿಂದ ಇವತ್ತು ನಮ್ಮ ನಿರೀಕ್ಷೆನೂ ಗಟ್ಟಿ ಆಗುತ್ತೆ ಅಲ್ವಾ!
ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ, ಹಾಗಾಗಿ ನಾವೂ ಕಾಯಬೇಕು. ಈ ಲೋಕದಲ್ಲಿರೋ ಕೆಟ್ಟತನನೆಲ್ಲ ನಾಶ ಮಾಡೋಕೆ ಯೆಹೋವ ಒಂದು ಸಮಯ ಇಟ್ಟಿದ್ದಾನೆ. ಆತನು ಆ ದಿನ ಮತ್ತು ಸಮಯ ಬರೋ ವರೆಗೂ ತಾಳ್ಮೆಯಿಂದ ಕಾಯ್ತಿದ್ದಾನೆ. (ಮತ್ತಾ. 24:36) ಆ ಸಮಯದಲ್ಲಿ ಸೈತಾನ ಯೆಹೋವನ ಮೇಲೆ ಹಾಕಿದ ಆರೋಪಗಳೆಲ್ಲ ಸುಳ್ಳು ಅಂತ ಸಾಬೀತಾಗುತ್ತೆ. ಅಷ್ಟೇ ಅಲ್ಲ ಅವನ ಕಡೆಯವ್ರೆಲ್ಲ ಸುಳ್ಳುಗಾರರು ಅನ್ನೋದೂ ಗೊತ್ತಾಗುತ್ತೆ. ಅದಾದ್ಮೇಲೆ ಸೈತಾನನನ್ನ ಮತ್ತು ಅವನ ಕಡೆಯವ್ರನ್ನೆಲ್ಲ ಯೆಹೋವ ನಾಶ ಮಾಡ್ತಾನೆ. ಆದ್ರೆ ನಮಗೆ ಆತನು “ಕರುಣೆ” ತೋರಿಸ್ತಾನೆ.
ಆದ್ರೆ ಅಲ್ಲಿ ತನಕ ನಮಗೆ ಕಷ್ಟಗಳು ಇದ್ದೇ ಇರುತ್ತೆ. ಆ ಕಷ್ಟಗಳನ್ನೆಲ್ಲ ಯೆಹೋವ ಈಗ ತೆಗೆದುಹಾಕದೇ ಇರಬಹುದು. ಆದ್ರೂ ನಾವು ತಾಳ್ಮೆಯಿಂದ ಕಾಯ್ತಾ ಖುಷಿಯಾಗಿ ಇರಬಹುದು ಅಂತ ಯೆಹೋವ ಹೇಳ್ತಿದ್ದಾನೆ. ಯೆಶಾಯ ಹೇಳಿದ ಹಾಗೆ, ಒಂದು ಒಳ್ಳೇ ವಿಷ್ಯ ಆಗುತ್ತೆ ಅಂತ ನಾವು ಕಾಯ್ತಾ ಇದ್ರೆ ನಾವು ಖುಷಿಯಾಗಿ ಇರಬಹುದು. (ಯೆಶಾ. 30:18) ಅದಕ್ಕೆ ನಾವು ನಾಲ್ಕು ವಿಷ್ಯಗಳನ್ನ ಮಾಡಬೇಕು. ಅದೇನು ಅಂತ ನಾವೀಗ ನೋಡೋಣ.
ತಾಳ್ಮೆಯಿಂದ ಕಾಯುವಾಗ ಖುಷಿಯಾಗಿ ಇರೋದು ಹೇಗೆ?
ಒಳ್ಳೇ ವಿಷ್ಯಗಳಿಗೆ ಗಮನ ಕೊಡಿ. ರಾಜ ದಾವೀದನ ಸುತ್ತ ಮುತ್ತ ಯಾವಾಗ್ಲೂ ಕೆಟ್ಟ ಜನ್ರೇ ಇದ್ರು. (ಕೀರ್ತ. 37:35) ಆದ್ರೂ ಅವನು “ಯೆಹೋವನ ಮುಂದೆ ಮೌನವಾಗಿದ್ದು ಆತನಿಗಾಗಿ ತಾಳ್ಮೆಯಿಂದ ಕಾದಿರು. ಕುತಂತ್ರದಿಂದ ಗೆಲ್ಲುವವನನ್ನ ನೋಡಿ ನಿನ್ನ ನೆಮ್ಮದಿ ಕಳ್ಕೊಬೇಡ” ಅಂತ ಬರೆದ. (ಕೀರ್ತ. 37:7) ಯೆಹೋವ ತನಗೆ ಸಹಾಯ ಮಾಡ್ತೀನಿ ಅಂತ ಕೊಟ್ಟ ಮಾತಿನ ಮೇಲೆ ದಾವೀದ ನಂಬಿಕೆ ಇಟ್ಟ. ಆತನು ತನ್ನನ್ನ ಇಲ್ಲಿ ತನಕ ಹೇಗೆಲ್ಲ ಆಶೀರ್ವದಿಸಿದ್ದಾನೆ ಅನ್ನೋದನ್ನ ನೆನಪಿಸ್ಕೊಂಡ. (ಕೀರ್ತ. 40:5) ನಾವೂ ನಮ್ಮ ಜೀವನದಲ್ಲಿ ಆಗ್ತಿರೋ ಕೆಟ್ಟ ವಿಷ್ಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆನೇ ಯೋಚ್ನೆ ಮಾಡದೆ ಒಳ್ಳೇ ವಿಷ್ಯಗಳ ಕಡೆ ಗಮನ ಕೊಡಬೇಕು. ಆಗ ಖುಷಿಯಿಂದ ಯೆಹೋವನಿಗಾಗಿ ಕಾಯೋಕೆ ಆಗುತ್ತೆ.
ಯಾವಾಗ್ಲೂ ಯೆಹೋವನನ್ನ ಹೊಗಳಿ. 71ನೇ ಕೀರ್ತನೆಯನ್ನ ದಾವೀದನೇ ಬರೆದಿರಬೇಕು. ಅಲ್ಲಿ ಅವನು ಯೆಹೋವ ದೇವರಿಗೆ, “ನಾನು ನಿನಗಾಗಿ ಕಾಯ್ತಾ ಇರ್ತಿನಿ, ನಿನ್ನನ್ನ ಇನ್ನೂ ಜಾಸ್ತಿ ಹೊಗಳ್ತೀನಿ” ಅಂತ ಹೇಳಿದ. (ಕೀರ್ತ. 71:14) ಅವನು ಯೆಹೋವ ದೇವರನ್ನ ಹೇಗೆಲ್ಲ ಹೊಗಳಿದ? ಜನ್ರಿಗೆ ಆತನ ಬಗ್ಗೆ ಹೇಳ್ತಾ ಇದ್ದ ಮತ್ತು ಆತನಿಗೋಸ್ಕರ ಹಾಡುಗಳನ್ನ ಹಾಡ್ತಿದ್ದ. (ಕೀರ್ತ. 71:16, 23) ನಾವು ಕೂಡ ಯೆಹೋವನಿಗೋಸ್ಕರ ತಾಳ್ಮೆಯಿಂದ ಕಾಯ್ತಾ ಇರುವಾಗ ದಾವೀದನ ತರ ಹೇಗೆ ಖುಷಿಯಾಗಿ ಇರಬಹುದು? ಸೇವೆಲಿ ಸಿಗೋ ಜನ್ರ ಹತ್ರ, ನಮ್ಮ ಕುಟುಂಬದವ್ರ ಹತ್ರ ಮತ್ತು ಸ್ನೇಹಿತರ ಹತ್ರ ಯೆಹೋವನ ಬಗ್ಗೆ ಹೇಳಬೇಕು. ಅಷ್ಟೇ ಅಲ್ಲ ಹಾಡುಗಳನ್ನ ಹಾಡ್ತಾ ಆತನನ್ನ ಹೊಗಳಬೇಕು. ಮುಂದಿನ ಸಲ ನೀವು ರಾಜ್ಯ ಗೀತೆಗಳನ್ನ ಹಾಡುವಾಗ ಅದ್ರಲ್ಲಿರೋ ಪದಗಳಿಗೆ ಗಮನ ಕೊಡಿ.
ಸಹೋದರ ಸಹೋದರಿಯರಿಂದ ಪ್ರೋತ್ಸಾಹ ಪಡ್ಕೊಳ್ಳಿ. ದಾವೀದನಿಗೆ ಸಮಸ್ಯೆಗಳು ಬಂದಾಗ ಅವನು ಯೆಹೋವನಿಗೆ, “ನಿನ್ನ ನಿಷ್ಠಾವಂತ ಜನ್ರ ಮುಂದೆ, ನಿನ್ನ ಹೆಸ್ರಲ್ಲಿ ನಾನು ನಿರೀಕ್ಷೆ ಇಡ್ತೀನಿ” ಅಂತ ಹೇಳಿದ. (ಕೀರ್ತ. 52:9) ನಾವು ಕೂಡ ನಮ್ಮ ಸಹೋದರ ಸಹೋದರಿಯರಿಂದ ಪ್ರೋತ್ಸಾಹ ಪಡ್ಕೊಬೇಕು. ನಾವು ಕೂಟಗಳಿಗೆ ಮತ್ತು ಸೇವೆಗೆ ಹೋದಾಗಷ್ಟೇ ಅಲ್ಲ, ಅವ್ರ ಜೊತೆ ಸಮಯ ಕಳಿಯೋಕೆ ಬಿಡುವು ಮಾಡ್ಕೊಬೇಕು.—ರೋಮ. 1:11, 12.
ನಿಮ್ಮ ನಿರೀಕ್ಷೆಯನ್ನ ಗಟ್ಟಿ ಮಾಡ್ಕೊಳ್ಳಿ. “ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ. ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ” ಅಂತ ಕೀರ್ತನೆ 62:5 ಹೇಳುತ್ತೆ. ನಮ್ಮ ನಿರೀಕ್ಷೆ ಗಟ್ಟಿಯಾಗಿದ್ರೆ ಮಾತ್ರನೇ ನಾವು ಅಂದ್ಕೊಂಡ ಸಮಯಕ್ಕೆ ಅಂತ್ಯ ಬರ್ಲಿಲ್ಲ ಅಂದ್ರೂ ತಾಳ್ಮೆಯಿಂದ ಕಾಯೋಕೆ ಆಗುತ್ತೆ. ಎಷ್ಟೇ ವರ್ಷಗಳು ಕಾಯಬೇಕಾಗಿ ಬಂದ್ರೂ ಯೆಹೋವ ಕೊಟ್ಟ ಮಾತು ನಿಜ ಆಗೇ ಆಗುತ್ತೆ ಅನ್ನೋ ಭರವಸೆ ಇರುತ್ತೆ. ನಮ್ಮ ನಿರೀಕ್ಷೆ ಗಟ್ಟಿ ಆಗಬೇಕಂದ್ರೆ ಏನು ಮಾಡಬೇಕು? ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಬೇಕು, ಈಗಾಗ್ಲೆ ನೆರವೇರಿರೋ ಭವಿಷ್ಯವಾಣಿಗಳನ್ನ ಓದಬೇಕು ಮತ್ತು ಬೇರೆಬೇರೆ ಜನ್ರು ಬೈಬಲನ್ನ ಬರೆದ್ರೂ ಅದ್ರಲ್ಲಿರೋ ವಿಷ್ಯಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಅಂತ ತಿಳ್ಕೊಬೇಕು. ಅಷ್ಟೇ ಅಲ್ಲ, ಯೆಹೋವ ಅದ್ರಲ್ಲಿ ತನ್ನ ಬಗ್ಗೆ ಹೇಳಿರೋ ವಿಷ್ಯಗಳನ್ನೂ ಕಲಿಬೇಕು. (ಕೀರ್ತ. 1:2, 3) ಎಲ್ಲಕ್ಕಿಂತ ಹೆಚ್ಚಾಗಿ ಕೊನೆ ತನಕ ಯೆಹೋವನ ಜೊತೆಗಿರೋ ನಮ್ಮ ಸ್ನೇಹ ಉಳಿಸ್ಕೊಬೇಕು. ಅದಕ್ಕೆ “ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ಪ್ರಾರ್ಥನೆ” ಮಾಡ್ತಾ ಇರಬೇಕು.—ಯೂದ 20, 21.
ನಾವು ಕೂಡ ದಾವೀದನ ತರ ಒಂದು ವಿಷ್ಯನ ಕಣ್ಣುಮುಚ್ಚಿ ನಂಬಬಹುದು. ಅದೇನಂದ್ರೆ, ಯಾರೆಲ್ಲ ಯೆಹೋವನಿಗೋಸ್ಕರ ಕಾಯ್ತಾ ಇದ್ದಾರೋ ಅವ್ರನ್ನ ಯೆಹೋವ ನೋಡ್ತಾ ಇದ್ದಾನೆ ಮತ್ತು ಅವ್ರಿಗೆ ಶಾಶ್ವತ ಪ್ರೀತಿ ತೋರಿಸ್ತಾನೆ. (ಕೀರ್ತ. 33:18, 22) ಹಾಗಾಗಿ ಆತನಿಗಾಗಿ ತಾಳ್ಮೆಯಿಂದ ಕಾಯ್ತಾ ಇರಿ, ನಿಮ್ಮ ಜೀವನದಲ್ಲಿ ನಡಿಯೋ ಒಳ್ಳೇ ವಿಷ್ಯಗಳಿಗೆ ಗಮನ ಕೊಡಿ, ಯೆಹೋವನನ್ನ ಹೊಗಳ್ತಾ ಇರಿ, ಸಹೋದರ ಸಹೋದರಿಯರಿಂದ ಪ್ರೋತ್ಸಾಹ ಪಡ್ಕೊಳ್ಳಿ ಮತ್ತು ನಿಮ್ಮ ನಿರೀಕ್ಷೆಯನ್ನ ಗಟ್ಟಿ ಮಾಡ್ಕೊಳ್ಳಿ.