ನೈತಿಕ ನೈರ್ಮಲ್ಯ ಯೌವನದ ಸೌಂದರ್ಯ
“ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ, ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.”—ಪ್ರಸಂಗಿ 11:9.
1, 2. (ಎ)ಯುವ ಜನರ ವಿಷಯದಲ್ಲಿ ಯೆಹೋವನ ಅಪೇಕ್ಷೆಯೇನು? (ಬಿ) ಹೃದಯ ಮತ್ತು ಕಣ್ಣಿಗೆ ಹಿಡಿಸುವ ಯಾವುದನ್ನೂ ಬೆನ್ನಟ್ಟುವುದು ಮೂರ್ಖತನವೇಕೆ?
“ಯೌವನ, ಉತ್ಸಾಹ ಮತ್ತು ಕೋಮಲತೆ ವಸಂತಕಾಲದ ದಿನಗಳಂತೆ; ಆ ಕೊಂಚ ಕಾಲದ ಕುರಿತು ಗೊಣಗುವುದಕ್ಕೆ ಬದಲು ಅವುಗಳಲ್ಲಿ ಸಂತೋಷಿಸ ಪ್ರಯತ್ನಿಸು.” 19 ನೇ ಶತಮಾನದ ಜರ್ಮನ್ ಕವಿಯೊಬ್ಬನು ಹಾಗೆ ಬರೆದನು. ಎಳೆಯರಾದ ನಿಮಗೆ ಕೊಡಲ್ಪಟ್ಟಿರುವ ಈ ಮಾತುಗಳು ಅದಕ್ಕಿಂತಲೂ ಎಷ್ಟೋ ಸಾವಿರ ವರ್ಷಗಳ ಹಿಂದೆ ಪ್ರಸಂಗಿ ಎಂಬ ಬೈಬಲ್ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಪ್ರತಿಬಿಂಬಿಸುತ್ತದೆ: “ಯೌವನಸ್ಥನೇ, [ಅಥವಾ ಯುವತಿಯೇ,] ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.” (ಪ್ರಸಂಗಿ 11:9ಎ) ಹೀಗೆ, ಯೌವನದ ಅಪೇಕ್ಷೆಗಳಿಗೆ ರುಚಿಸುವ ವಿಷಯಗಳ ಕುರಿತು ಯೆಹೋವ ದೇವರ ವೀಕ್ಷಣ ನಕಾರಾತ್ಮವಲ್ಲ. ನಿಮ್ಮ ತಾರುಣ್ಯದ ಶಕ್ತಿ ಮತ್ತು ಹುರುಪನ್ನು ಪೂರ್ತಿ ಅನುಭವಿಸಬೇಕೆಂದೇ ಅವನ ಅಪೇಕ್ಷೆ.—ಜ್ಞಾನೋಕ್ತಿ 20:29.
2 ಹಾಗಾದರೆ ನಿಮ್ಮ ಹೃದಯ ಮತ್ತು ಕಣ್ಣಿಗೆ ಹಿಡಿಸುವ ಯಾವುದನ್ನೂ ನೀವು ಅನುಭವಿಸ ಪ್ರಯತ್ನಿಸಬೇಕೆಂದು ಇದರ ಅರ್ಥವೂ? ಎಂದಿಗೂ ಅಲ್ಲ! (ಅರಣ್ಯಕಾಂಡ 15:39; 1 ಯೋಹಾನ 2:16) ಶಾಸ್ತ್ರವಚನ ಮುಂದುವರಿಸುವದು: “ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.” (ಪ್ರಸಂಗಿ 11:9ಬಿ) ಹೌದು, ನಿಮ್ಮ ಕೃತ್ಯಗಳ ಫಲದಿಂದ ನೀವು ತಪ್ಪಿಸಿಕೊಳ್ಳಲಾರಿರಿ. ಯುವಕರು, ವಯಸ್ಕರಂತೆಯೇ ಯೆಹೋವನ ತೀರ್ಪಿಗೆ ಅಧೀನರು.—ರೋಮಾಪುರ 14:12.
3, 4. ನೈತಿಕ ಸ್ವಚ್ಛತೆಯಲ್ಲಿ ಉನ್ನತಮಟ್ಟವನ್ನು ಏಕೆ ಕಾಪಾಡಿಕೊಳ್ಳಬೇಕು? (ಬಿ) ನಿಮಗೆ ದೇವರೊಂದಿಗಿರುವ ಶುದ್ಧ ನೆಲೆಯನ್ನು ಕಳೆದುಕೊಳ್ಳಲು ಯಾವ ಒತ್ತಡ ನಿಮ್ಮ ಮೇಲಿದೆ, ಮತ್ತು ಯಾವ ಪ್ರಶ್ನೆಗಳೇಳುತ್ತವೆ?
3 ಯೆಹೋವನ ಅನುಗ್ರಹದ ತೀರ್ಪು ನಿತ್ಯಜೀವಕ್ಕೆ ಮಾತ್ರವಲ್ಲ ದೇವರೊಂದಿಗೆ ಈಗ ಆಪ್ತ ಸಂಬಂಧಕ್ಕೂ ನಡಿಸುತ್ತದೆ. ಅದರೆ ನೀವು ಉತ್ಕೃಷ್ಟ ಮಟ್ಟದ ನೈತಿಕ ಜೀವನವನ್ನು ಅನುಸರಿಸತಕ್ಕದ್ದು. 24ನೇ ಕೀರ್ತನೆಯ 3-5 ವಚನಗಳು ಈ ರೀತಿ ವರ್ಣಿಸುತ್ತವೆ: “ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸ ಪ್ರಮಾಣಮಾಡದೆ ಶುದ್ಧಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ ಅವನೇ ಯೆಹೋವನಿಂದ ಶುಭವನ್ನು ಹೊಂದುವನು; ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.” ಹೌದು, ನೈತಿಕ ಶುದ್ಧತೆಯನ್ನು ಇಟ್ಟುಕೊಳ್ಳುವಲ್ಲಿ ನೀವು ಯೆಹೋವನ ದೃಷ್ಟಿಯಲ್ಲಿ ಸುಂದರರು.
4 ಆದರೂ ದೇವರೊಂದಿಗೆ ನಿಮಗಿರುವ ನಿರ್ಮಲ ನೆಲೆಯನ್ನು ಕಳೆದುಕೊಳ್ಳಲು ನಿಮ್ಮ ಮೇಲೆ ಸದಾ ಒತ್ತಡವಿದೆ. ಈ ಕೊನೇ ದಿವಸಗಳು ತಮ್ಮ ಅಂತ್ಯವನ್ನು ಮುಟ್ಟುತ್ತಿರುವಾಗ ಅನೈತಿಕ ನಡತೆಗಳ ಮತ್ತು ಅಶುದ್ಧ ಪ್ರಭಾವಗಳ ಸಾಂಕ್ರಾಮಿಕ ರೋಗವೇ ತಗಲಿದಂತಿದೆ. (2 ತಿಮೋಥಿ 3:1-5) ನೈತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಇದಕ್ಕಿಂತ ಹೆಚ್ಚಿನ ಪಂಥಾಹ್ವಾನ ಯುವಕರಿಗೆ ಹಿಂದೆಂದೂ ಇದ್ದದ್ದಿಲ್ಲ. ಈ ಪಂಥಾಹ್ವಾನವನ್ನು ನೀವು ಸಾಫಲ್ಯದಿಂದ ಎದುರಿಸುತ್ತೀರೋ? ಹಾಗೆ ಮಾಡುತ್ತಾ ಮುಂದರಿಯುವಿರೋ?
ನಿಮ್ಮೆದುರಿಗಿರುವ ಪಂಥಾಹ್ವಾನ
5. ದೇವರ ಮುಂದೆ ತಮ್ಮ ಶುದ್ಧ ನೆಲೆಯನ್ನು ಕಾಪಾಡಿಕೊಳ್ಳುವುದನ್ನು ಯಾವ ಅಶುದ್ಧ ಪ್ರಭಾವಗಳು ಕಷ್ಟಕರವಾಗಿ ಮಾಡುತ್ತವೆ?
5 ಮನೋರಂಜನಾ ಮಾಧ್ಯಮಗಳು ಸಭ್ಯವಿಷಯಗಳನ್ನು ಬದಿಗೊತ್ತಿ ತೀರಾ ಅನೈತಿಕ ವಿಷಯಗಳನ್ನು ಘನತೆಗೇರಿಸುತ್ತವೆ. ಉದಾಹರಣೆಗೆ, ಹಿಂಸಾತ್ಮಕವಾದ ಭಯಂಕರ ಚಲನ ಚಿತ್ರ ಶ್ರೇಣಿಯಲ್ಲಿ ಒಂದನ್ನು ಬಿಡುಗಡೆ ಮಾಡಿದಾಗ ಒಬ್ಬ ಚಲನ ಚಿತ್ರ ವಿಮರ್ಶಕನು ಬರೆದದ್ದು: ಲೈಂಗಿಕತೆ, ಕೊಲೆ ಮತ್ತು ಅಶ್ಲೀಲತೆಗಳ ವರಸೆಯಿಂದಾಗಿ ಬರುವ ದೊಡ್ಡ ಪರಿಮಾಣದ ಆಘಾತವು ಈ ಚಿತ್ರದಲ್ಲಿ ವಾಡಿಕೆ. ಇದರ ಹಾಜರಿಯ ದಾಖಲೆಯನ್ನಿಡುವಲ್ಲಿ. . . . ಚಲನ ಚಿತ್ರ ಅಭಿರುಚಿಯ ಅವನತಿಯಲ್ಲಿ ಇನ್ನೊಂದು ಮಹಾ ಕುಗ್ಗನ್ನು ಸ್ಮಾರಕಗೊಳಿಸುವದು.” ಇಂತಹ ಚಲನ ಚಿತ್ರಗಳಿಗೆ ಕೂಡಿಸಿ ಸ್ಪಷ್ಟ ಲೈಂಗಿಕ ಕೃತ್ಯಗಳನ್ನು ಸೂಚಿಸುವ ಭಾವಗೀತೆಯ ಹಾಡುಗಳು ಮತ್ತು ನಿಶಿದ್ಧ ಸಂಭೋಗವನ್ನು ಘನತೆಗೇರಿಸುವ ಟೀವೀ ಕಾರ್ಯಕ್ರಮಗಳೂ ಅಲ್ಲಿವೆ. ಇಂಥ “ಅಪರಿಮಿತವಾದ ಪಟಿಂಗತನ”ದ ಸ್ಪಷ್ಟ ಚಿತ್ರೀಕರಣಕ್ಕೆ ನೀವು ನಿಮ್ಮನ್ನು ಈಡುಮಾಡಿಕೊಂಡು ದೇವರ ಮುಂದೆ ಶುದ್ಧ ನೆಲೆಯಲ್ಲಿರಬಹುದೋ (1 ಪೇತ್ರ 4:4) ಜ್ಞಾನೋಕ್ತಿ ಹೇಳುವುದು: “ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೇ?”—ಜ್ಞಾನೋಕ್ತಿ 6:27.
6. ಯುವಜನರು ತಮ್ಮ ಸಮಾನ ವಯಸ್ಕರಿಂದ ಯಾವ ಒತ್ತಡವನ್ನು ಎದುರಿಸುತ್ತಾರೆ?
6 ದೇವರೊಂದಿಗೆ ನಿಮ್ಮ ನೈರ್ಮಲ್ಯವನ್ನು ಕಳಕೊಳ್ಳಲು ಒತ್ತಡವು ಇನ್ನೊಂದು ಮೂಲದಿಂದ—ನಿಮ್ಮ ಸಮಾನಸ್ಥರಿಂದಲೂ ಬರುತ್ತದೆ. 17 ವರ್ಷ ವಯಸ್ಸಿನ ಲೌಕಿಕ ಹುಡುಗಿ ಪ್ರಲಾಪಿಸಿದ್ದು’ “ನನ್ನ ಪ್ರಥಮ ಸಂಭೋಗ ನಡೆದದ್ದು ಎಲ್ಲಾ ತಪ್ಪು ಕಾರಣಗಳಿಂದಾಗಿಯೇ. ನನ್ನ ಹುಡುಗ ಮಿತ್ರ ಪಟ್ಟು ಹಿಡಿದ ಮತ್ತು ಅದನ್ನು ಎಲ್ಲರೂ ಮಾಡುತ್ತಾರೆಂದು ನಾನು ನೆನಸಿದೆ.” ಯಾರಿಗೂ ನಗೆಗೀಡಾಗಲು ಮನಸ್ಸಿಲ್ಲ. ಇತರರು ಮೆಚ್ಚಬೇಕೆಂಬ ಬಯಕೆ ಸ್ವಾಭಾವಿಕ. ಆದರೆ ಬೈಬಲಿನ ನೈತಿಕತೆಯ ಪರವಾಗಿ ನೀವು ನಿಲ್ಲುವಲ್ಲಿ ಇತರ ಯುವಜನರು ನಿಮಗೆ ಕುಚೋದ್ಯ ಮಾಡಾರು. ಹೊಂದಿಕೆಯಾಗಿರಬೇಕು, ಸಮಾನಸ್ಥರನ್ನು ಸಂಪಾದಿಸಿಕೊಳ್ಳಬೇಕೆಂಬ ಅಪೇಕ್ಷೆ ತಪ್ಪೆಂದು ತಿಳಿದಿರುವ ವಿಷಯವನ್ನು ಮಾಡುವಂತೆ ನಿಮ್ಮ ಮೇಲೆ ಒತ್ತಡವನ್ನು ತರಬಲ್ಲರು.—ಜ್ಞಾನೋಕ್ತಿ 13:20.
7. ಯುವ ಜನರಿಗೆ ಅಶುದ್ಧ ಪ್ರಭಾವಗಳ ವಿರುದ್ಧ ಹೋರಾಡುವುದು ವಿಶೇಷವಾಗಿ ಕಷ್ಟಕರವೇಕೆ, ಆದರೆ ಯೆಹೋವನ ಸಂಸ್ಥೆಯಲ್ಲಿ ಸಾವಿರಾರು ಯುವಜನರು ತಾವೇನೆಂದು ತೋರಿಸಿಕೊಂಡಿದ್ದಾರೆ?
7 “ಯೌವನದ ಪರಿಪಕ್ವ ಸ್ಥಿತಿ”ಯಲ್ಲಿ ಲೈಂಗಿಕಾಸಕ್ತಿ ಪ್ರಭಲವಾಗಿರುವಾಗ ಇಂತಹ ಪ್ರಭಾವಗಳ ವಿರುದ್ಧ ಹೋರಾಡುವುದು ವಿಶೇಷವಾಗಿ ಕಷ್ಟ. (1 ಕೊರಿಂಥ 7:36) ಒಂದು ಸಂಶೋಧನಾ ಸಂಸ್ಥೆ, “19 ವಯಸ್ಸಿನೊಳಗೆ ವಿವಾಹಕ್ಕೆ ಮುನ್ನ ಸಂಭೋಗ ಮಾಡದ ಯುವವ್ಯಕ್ತಿ ಅಪವಾದವೇ ಸರಿ.” ಎಂದು ತೀರ್ಮಾನಿಸುವುದು ಆಶ್ಚರ್ಯವೇನಲ್ಲ. ಆದರೂ ಯೆಹೋವನ ಸಂಸ್ಥೆಯಲ್ಲಿರುವ ಸಾವಿರಾರು ಯುವ ವ್ಯಕ್ತಿಗಳಾದ ನೀವು ಇಂಥ ಅಪವಾದಗಳೆಂದು ತೋರಿಸಿ ಕೊಟ್ಟಿದ್ದೀರಿ. ನೀವು ಕಟ್ಟುನಿಟ್ಟಾಗಿ ಪಂಥಾಹ್ವಾನವನ್ನು ಎದುರಿಸಿ ನೈತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತಿದ್ದೀರಿ.
8. ಕೆಲವು ಕ್ರೈಸ್ತ ಯುವ ಜನರು ಲೋಕದ ಅನೈತಿಕ ಮನೋಭಾವ ತಮಗೆ ತಟ್ಟುವಂತೆ ಬಿಟ್ಟಿರುವುದೇಕೆ, ಮತ್ತು ಇದರ ಪರಿಣಾಮವೇನು?
8 ಆದರೂ ವಿಷಾದದ ವಿಷಯವೇನೆಂದರೆ ಕ್ರೈಸ್ತ ಯುವ ಜನರಲ್ಲಿ ಅನೇಕರು ಈ ಲೋಕದ ಅನೈತಿಕ ಮನೋಭಾವ ಅವರಿಗೆ ತಟ್ಟುವಂತೆ ಬಿಟ್ಟಿರುವುದೇ. ಒಳ್ಳೇದನ್ನು ತಾವು ಪ್ರೀತಿಸುವವರೆಂದು ಅವರು ಹೇಳಿಕೊಂಡರೂ ಕೆಟ್ಟದ್ದನ್ನು ಅವರು ದ್ವೇಷಿಸುವುದಿಲ್ಲ. ಕೀರ್ತನೆ 97:10) ಕೆಲವು ಸಲ ಅವರು ಅದನ್ನು ಪ್ರೀತಿಸುವಂತೆ ಸಹ ಕಾಣುತ್ತದೆ. ಕೀರ್ತನೆ 52:3 ಹೇಳುವುದು: “ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಸುಳ್ಳನ್ನು ಸ್ಥಾಪಿಸುವದೇ ನಿನಗೆ ಸಂತೋಷ.” ಕೆಲವರಾದರೋ ಯೆಹೋವನ ಸಂಘಟನೆ ಡೇಟಿಂಗ್, ಮನೋರಂಜನೆ ಮತ್ತು ನೈತಿಕತೆಯಂತಹ ವಿಷಯಗಳ ಕುರಿತು ಕೊಡುವ ನಿರ್ದೇಶನಗಳನ್ನು ನೇರವಾಗಿ ನಿರಾಕರಿಸುವಷ್ಟರ ಮಟ್ಟಿಗೂ ಹೋಗುತ್ತಾರೆ. ಇದರ ಪರಿಣಾಮವಾಗಿ ಅವರು ಅನೇಕ ಸಲ ತಮ್ಮ ಮೇಲೆ ಮತ್ತು ಹೆತ್ತವರ ಮೇಲೆ ಅವಮಾನ ತರುತ್ತಾರೆ. ಅವರು ದೇವರ ದೃಷ್ಟಿಯಲ್ಲಿ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ.—2 ಪೇತ್ರ 2:21,22.
ಪಂಥಾಹ್ವಾನ ಎದುರಿಸುವುದಕ್ಕೆ ಸಹಾಯ
9. ನೈತಿಕವಾಗಿ ನಿರ್ಮಲರಾಗಿ ಉಳಿಯುವ ಪಂಥಾಹ್ವಾನವನ್ನು ಎದುರಿಸಲು ಏನು ಬೇಕು?
9 ನೈತಿಕವಾಗಿ ಸ್ವಚ್ಛವಾಗಿರುವ ಪಂಥಾಹ್ವಾನವನ್ನು ನೀವು ಹೇಗೆ ಎದುರಿಸಬಲ್ಲಿರಿ? ಕೀರ್ತನೆಗಾರನೂ ಇದೇ ಪ್ರಶ್ನೆ ಕೇಳಿದನು. “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತನೆ 119:9) ಹೌದು, ದೇವರ ವಾಕ್ಯದ ಮಾರ್ಗದರ್ಶನ ನಿಮಗೆ ಅಗತ್ಯ. ಮತ್ತು ನಿಮ್ಮ ಸ್ವರ್ಗಪಿತನು ನೀವು ಲೋಕದ ಅಶುದ್ಧ ಒತ್ತಡವನ್ನು ತಡೆಯುವಂತೆ ಸಹಾಯ ಮಾಡಲು ತನ್ನ ಸಂಸ್ಥೆ ಇಂತಹ ಮಾರ್ಗದರ್ಶನೆ ಒದಗಿಸುವಂತೆ ಏರ್ಪಡಿಸಿದ್ದಾನೆ.
10, 11. (ಎ) ಯುವಜನರು ನೈತಿಕವಾಗಿ ಶುದ್ಧರಾಗಿ ಉಳಿಯುವಂತೆ ಸಹಾಯ ಮಾಡಲು ಯಾವ ಸಾಹಿತ್ಯಗಳನ್ನು ತಯಾರಿಸಲಾಗಿದೆ? (ಬಿ) “ಯಂಗ್ ಪೀಪಲ್ ಆಸ್ಕ್. . . .”? ಲೇಖನಮಾಲೆಗಳಿಂದ ಕೆಲವು ಯುವ ವ್ಯಕ್ತಿಗಳಿಗೆ ಹೇಗೆ ಸಹಾಯ ಸಿಕ್ಕಿದೆ? (ಸಿ) “ಯಂಗ್ ಪೀಪಲ್ ಅಸ್ಕ್. . . .”? ಲೇಖನಮಾಲೆಯಿಂದ ನಿಮಗೆ ವೈಯಕ್ತಿಕವಾಗಿ ಹೇಗೆ ಪ್ರಯೋಜನ ಸಿಕ್ಕಿದೆ?
10 ಕೆಲವು ವರ್ಷಗಳಿಂದ ವಿಶೇಷವಾಗಿ ಯುವ ಜನರನ್ನು ನೆನಸಿಕೊಂಡು, ಯುವರ್ ಯೂಥ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್ ಪುಸ್ತಕದಂಥ ಇತರ ಅನೇಕ ಪುಸ್ತಕಗಳನ್ನು ತಯಾರಿಸಲಾಗಿದೆ. 1982 ರಿಂದ ಎವೇಕ್! ಪತ್ರಿಕೆಯಲ್ಲಿ “ಯಂಗ್ ಪೀಪಲ್ ಆಸ್ಕ್. . . .” ಎಂಬ ಲೇಖನ ಮಾಲೆ ಅಶ್ಲೀಲ ಸಾಹಿತ್ಯ, ಕಾಲ್ಪನಿಕ ಪ್ರೇಮ ಕಥೆಗಳು, ಪ್ರಣಯಾಚರಣೆಯ ಸಮಯದ ನಡವಳಿ ಮುಂತಾದ ವಿಷಯಗಳ ಕುರಿತು ಹೆಚ್ಚು ಸಹಾಯಕರ ಸಲಹೆಯನ್ನು ಒದಗಿಸಿದೆ. ಇಂತಹ ಸಮಾಚಾರ ಯುವ ಜನರಿಗೆ ನಿಜವಾಗಿಯೂ ಸಹಾಯ ಮಾಡಿದೆಯೋ? ಒಂದು ದೃಷ್ಟಾಂತವನ್ನು ಪರಿಗಣಿಸಿರಿ. ಆ ಲೇಖನ ಮಾಲೆಯಲ್ಲಿ ಅನೇಕ ಲೇಖನಗಳು ಮುಷ್ಟಿಮೈಥುನವನ್ನು ಚರ್ಚಿಸಿ, ಅದು ಲೈಂಗಿಕ ದುರಾಚಾರಕ್ಕೆ ಒಬ್ಬನು ಸುಲಭವಾಗಿ ಬೀಳುವಂತೆ “ಲೈಂಗಿಕ ಹಸಿವೆ”ಯನ್ನು ಉದ್ರೇಕಿಸಬಲ್ಲದೆಂದು ತೋರಿಸಿತು.a ಈ ಅಭ್ಯಾಸದ ವಿರುದ್ಧ ಹೋರಾಡಲು ಮತ್ತು ಪುನಃ ಅದಕ್ಕೆ ಹಿಂದೆ ಹೋಗುವಲ್ಲಿ ಹೇಗೆ ವ್ಯವಹರಿಸಬೇಕೆಂಬದಕ್ಕೆ ಪ್ರಾಯೋಗಿಕ ಸಲಹೆಗಳು ಕೊಡಲ್ಪಟ್ಟವು. ಈ ಲೇಖನಗಳಿಗೆ ಪ್ರತ್ಯುತ್ತರ ಕೊಡುತ್ತಾ ಕೆಲವು ಯುವ ಜನರು ಬರೆದದ್ದು : “12 ವಯಸ್ಸಿನಿಂದ ನನಗೆ ಈ ಮುಷ್ಟಿಮೈಥುನದ ಸಮಸ್ಯೆ ಇತ್ತು. ನನಗೀಗ 18 ವಯಸ್ಸು ಮತ್ತು ನಿಮ್ಮ ಲೇಖನಗಳ ಸಹಾಯದಿಂದ ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ.” “ನಾನೀಗ ಲೇಖನಗಳ ಸಲಹೆಯಂತೆ ನಡೆಯುವದರಿಂದ ನನ್ನ ಮಾನಸಿಕ ಸ್ಥಿತಿ ಹೆಚ್ಚು ಉತ್ತಮವಾಗಿದೆ. ಮೊದಲಿಗಿಂತ ಈಗ ಹೆಚ್ಚು ಶುದ್ಧನಾಗಿರುವ ಅನಿಸಿಕೆ ನನಗಿದೆ.”
11 ಇಂಥ ಸಮಾಚಾರವನ್ನು ಓದಿ ಅಭ್ಯಸಿಸಲು ಸಮಯ ಹಿಡಿಯುತ್ತದೆಂಬದು ನಿಜವಾದರೂ ಹಾಗೆ ಮಾಡುವುದರಿಂದ ನೀವು ನೈತಿಕವಾಗಿ ನಿರ್ಮಲರಾಗಿರುವಿರಿ. ಇಂತಹ ಪ್ರಕಾಶಿತ ಲೇಖನಗಳ ಪೂರ್ಣ ಪ್ರಯೋಜನವನ್ನು ನೀವು ಪಡೆಯುತ್ತಿದ್ದೀರಾ? “ಯಂಗ್ ಪೀಪಲ್ ಆಸ್ಕ್. . . .” ಲೇಖನಮಾಲೆಯಲ್ಲಿ “ವಿವಾಹಕ್ಕೆ ಪೂರ್ವ ಸಂಭೋಗ—ಬೇಡವೇಕೆ?”b ಎಂಬದಕ್ಕೆ ಉತ್ತರವಾಗಿ ಆಗ ಬೈಬಲ್ ವಿದ್ಯಾರ್ಥಿಯಾಗಿದ್ದ ಒಬ್ಬ ಎಳೆಯ ಹುಡುಗಿ ಬರೆದುದು: “ವಿವಾಹ ಪೂರ್ವ ಸಂಭೋಗದಿಂದಾಗಿ ಬರುವ ಕೆಟ್ಟ, ಅಪರಾಧಿ ಮನಸ್ಸಿನ ಮತ್ತು ಅಸೂಯೆಯ ಅನಿಸಿಕೆಗಳು ನನಗೆ ಗೊತ್ತು ಮತ್ತು ಇದಕ್ಕೆ ನಾನು ತುಂಬಾ ವಿಷಾಧಿಸುತ್ತೇನೆ. ಯೆಹೋವನು ನನ್ನನ್ನು ಅಂಗೀಕರಿಸಿದಕ್ಕೆ ಮತ್ತು ಆತನ ಕ್ಷಮೆಗೆ ನಾನು ಪ್ರತಿದಿನವೂ ಉಪಕಾರ ಹೇಳುತ್ತೇನೆ. ನಿಮ್ಮ ಲೇಖನ ಇತರರಿಗೆ ನಾನು ಮಾಡಿದ್ದನ್ನು ಅವರು ಮಾಡುವ ಮೊದಲೇ ಸಹಾಯಕರವಾಗಿ ಪರಿಣಮಿಸಲಿ ಎಂದೇ ನನ್ನ ಹಾರೈಕೆ. ಇದರಿಂದ ಬರುವ ಬೇನೆ ಅಪಾರ. ‘ಜಾರತ್ವದಿಂದ ದೂರವಿರಬೇಕು’ ಎಂದು ಯೆಹೋವ ದೇವರು ಏಕೆ ಉದ್ದೇಶಿಸುತ್ತಾನೆಂಬ ತಿಳುವಳಿಕೆ ಈಗ ನನಗೆ ಬಂದಿದೆ.”—1 ಥೆಸಲೋನಿಕ 4:3.
12. ನಾವು ಯೆಹೋವನನ್ನು ಸಂತೋಷಿಸಲು ಬಯಸುವಂತೆ ನಮ್ಮನ್ನು ಯಾವುದು ಪ್ರಚೋದಿಸುವುದು?
12 ಇದು, ಪಂಥಾಹ್ವಾನವನ್ನು ಸಾಫಲ್ಯದಿಂದ ಎದುರಿಸುವರೆ ಸಹಾಯ ಮಾಡುವ ಇನ್ನೊಂದು ವಿಷಯಕ್ಕೆ ನಮ್ಮನ್ನು ತರುತ್ತದೆ: ಯೆಹೋವನು ವಿಶ್ವ ಸಾರ್ವಭೌಮನೆಂದೂ ಆತನಿಗೆ ವಿಧೇಯರಾಗಬೇಕೆಂದೂ ನೀವು ಮಾನ್ಯಮಾಡತಕ್ಕದ್ದು. (ಪ್ರಕಟನೆ 4:11) ಆದರೆ, ಅದೇ ಸಮಯದಲ್ಲಿ, ಆತನು ನಮ್ಮ ಪ್ರೀತಿಯ ಪರಲೋಕದ ತಂದೆಯಾದರೂ ನಮ್ಮ ಪರಮಹಿತವೇ ಅವನ ಹೃದಯದಲ್ಲಿದೆ. (ಜ್ಞಾನೋಕ್ತಿ 2:20-22; ಯೆಶಾಯ 48:17) ನೈತಿಕ ನೈರ್ಮಲ್ಯವನ್ನು ಯೆಹೋವನು ಏಕೆ ಒತ್ತಿಹೇಳುತ್ತಾನೆಂದು ನಾವು ಸ್ಪಷ್ಟವಾಗಿ ತಿಳಿಯುವಲ್ಲಿ ಅದರಲ್ಲಿ ನಿಜ ಸೌಂದರ್ಯವಿದೆಯೆಂದು ನೋಡಲು ನಿಮಗೆ ಸಹಾಯಸಿಕ್ಕಿ, ಆತನನ್ನು ಮೆಚ್ಚಿಸಲು ಬಯಸುವಂತೆ ಅದು ನಿಮ್ಮನ್ನು ಪ್ರಚೋದಿಸುವುದು.—ಕೀರ್ತನೆ 112:1.
13. ಜಾರತ್ವವನ್ನು ನಿಶೇಧಿಸುವ ಯೆಹೋವನ ನಿಯಮ ಪರಮಹಿತಕ್ಕಾಗಿದೆಯೆಂದು ನೀವು ಹೇಗೆ ವಿವರಿಸುವಿರಿ.
13 ದೇವರು ಸಂಭೋಗವನ್ನು ವಿವಾಹಕ್ಕೆ ಪರಿಮಿತವಾಗಿ ಮಾಡಿ ಜಾರತ್ವವನ್ನು ಕಟ್ಟುನಿಟ್ಟಾಗಿ ನಿಶೇಧಿಸುತ್ತಾನೆಂದು ನಿಜತ್ವವನ್ನು ಪರಿಗಣಿಸಿರಿ. (ಇಬ್ರಿಯ 13:4) ಈ ನಿಯಮ ವಿಧೇಯತೆಯಿಂದ ಯಾವ ಒಳ್ಳೆಯದನ್ನಾದರೂ ನೀವು ಕಳಕೊಳ್ಳುತ್ತೀರೋ? ಜೀವನದಲ್ಲಿ ಸಂತೋಷ ಪಡೆಯುವ ವಿಷಯವನ್ನು ಅಪಹರಿಸಲು ಪ್ರೀತಿಯ ಸ್ವರ್ಗೀಯ ತಂದೆ ಒಂದು ನಿಯಮವನ್ನು ಮಾಡಾನೇ? ನಿಶ್ಚಯವಾಗಿಯೂ ಇಲ್ಲ! ದೇವರ ನೈತಿಕ ನಿಯಮಗಳನ್ನು ತಮ್ಮ ಜೀವನದಲ್ಲಿ ನಡೆಯುತ್ತಿರುವ ವಿಷಯಗಳನ್ನು ಗಮನಿಸಿರಿ. ಅನೈಚ್ಛಿಕ ಗರ್ಭಧಾರಣೆ ಅನೇಕವೇಳೆ ಅವರನ್ನು ಗರ್ಭಪಾತ ಅಥವಾ ಪ್ರಾಯಶಃ ಅಪಕ್ಷ ವಿವಾಹಕ್ಕೆ ನಡಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಗಂಡನಿಲ್ಲದೆ ಮಗುವನ್ನು ಬೆಳೆಸಬೇಕೆಂಬದೇ ಇದರ ಅರ್ಥ. ಇದಲ್ಲದೆ ಜಾರತ್ವ ಮಾಡುವ ಯುವಜನರು ‘ತಮ್ಮ ಸ್ವಶರೀರದ ವಿರುದ್ಧ ಪಾಪ ಮಾಡಿ’ ರತಿರೋಗಗಳಿಗೆ ಬಲಿಬೀಳುತ್ತಾರೆ. (1 ಕೊರಿಂಥ 6:18) ಮತ್ತು ಯೆಹೋವನಿಗೆ ಸಮರ್ಪಿತ ಯುವ ವ್ಯಕ್ತಿ ಜಾರತ್ವ ನಡಿಸುವಲ್ಲಿ ಮನೋವಿಕಾರದ ಪರಿಣಾಮ ಧ್ವಂಸಕಾರಕವಾಗಬಲ್ಲದು. ಅಪರಾಧಿ ಮನಸ್ಸಾಕ್ಷಿಯ ಪೀಡೆಗಳನ್ನು ಅಡಗಿಸುವ ಪ್ರಯತ್ನವು ಆಯಾಸ ಮತ್ತು ನಿದ್ರಾರಹಿತ ರಾತ್ರಿಗಳಿಗೆ ಕಾರಣವಾಗಬಹುದು. (ಕೀರ್ತನೆ 32:3,4; 51:3) ಆದ್ದರಿಂದ ಜಾರತ್ವವನ್ನು ನಿಶೇಧಿಸುವ ಯೆಹೋವನ ನಿಯಮ ನಿಮ್ಮ ಸಂರಕ್ಷಣೆಗಾಗಿಯೇ ರಚಿಸಲಾಗಿದೆಂಬದು ವ್ಯಕ್ತವಲ್ಲವೇ? ನೈತಿಕ ಶುದ್ಧತೆಯನ್ನು ಕಾಪಾಡುವುದರಲ್ಲಿ ನಿಜ ಪ್ರಯೋಜನವು ಅಲ್ಲಿದೆ.
14. ಹದಿಹರೆಯದವರ ವಿವಾಹ ಒಂದು ಸಂರಕ್ಷಣೆಯಾಗಿದೆ ಎಂಬ ವಾದದ ವಿಷಯವಾಗಿ ನಾವು 1 ಕೊರಿಂಥ 7:9 ಮತ್ತು 7:36 ರ ಪೌಲನ ಮಾತುಗಳನ್ನು ಹೇಗೆ ವೀಕ್ಷಿಸಬೇಕು?
14 ದೇವರ ಕಟ್ಟುನಿಟ್ಟಾದ ನೈತಿಕ ನಿಯಮಗಳಿಗೆ ಅಂಟಿಕೊಳ್ಳುವುದು ಸುಲಭವಲ್ಲ ಎಂಬದನ್ನು ಒಪ್ಪಿಕೊಳ್ಳಲೇ ಬೇಕು. ಈ ಕಾರಣದಿಂದ ಕೆಲವು ಯುವ ವ್ಯಕ್ತಿಗಳು ತಾವಿನ್ನೂ ಹದಿಹರೆಯದವರಾಗಿರುವಾಗ ವಿವಾಹಮಾಡಿಕೊಳ್ಳುವುದೇ ಅತ್ಯುತ್ತಮ ರಕ್ಷಣೆಯೆಂದು ತೀರ್ಮಾನಿಸಿದ್ದಾರೆ. ‘ಹೇಗೂ 1 ಕೊರಿಂಥ 7:9 ರಲ್ಲಿ “ಅವರು ದಮೆಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ; ಕಾಮತಾಪಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮ” ಎಂದು ಹೇಳಿರುವುದಿಲ್ಲವೇ ಎಂದವರ ತರ್ಕ. ಆದರೆ ಇದು ಸಮೀಪ ದೃಷ್ಟಿಯ ವೀಕ್ಷಣ. ಪೌಲನ ಮಾತುಗಳು ಹದಿಹರೆಯದವರಿಗಲ್ಲ, “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿದ” ವ್ಯಕ್ತಿಗಳಿಗೆ ಹೇಳಿದ್ದಾಗಿದ್ದವು. (1 ಕೊರಿಂಥ 7:36) ಹೆಚ್ಚಿನ ಸಂದರ್ಭಗಳಲ್ಲಿ ಇನ್ನೂ ಯೌವನದ ಪರಿಪಕ್ವ ಸ್ಥಿತಿಯಲ್ಲಿರುವವರು ವಿವಾಹದೊಂದಿಗೆ ಬರುವ ಒತ್ತಡ ಮತ್ತು ಜವಾಬ್ದಾರಿಕೆಗಳನ್ನು ಹೊರುವಷ್ಟು ಭಾವಾವೇಶ ಗುಣ ಮತ್ತು ಆತ್ಮಿಕತೆಗಳನ್ನು ಬೆಳೆಸಿಕೊಂಡಿರುವುದಿಲ್ಲ. ಜರ್ನಲ್ ಆಫ್ ಮ್ಯಾರೇಜ್ ಎಂಡ್ ಫ್ಯಾಮಿಲಿ ಪತ್ರಿಕೆ ಹೇಳುವುದು. “ಪ್ರಾಯ ಕಡಿಮೆ ಇರುವಾಗಲೇ ವಿವಾಹವಾಗುವವರಿಗೆ ವಿವಾಹ ಪತ್ರವನ್ನು ನೆರವೇರಿಸಲು ಸಿದ್ಧತೆಯಲ್ಲಿ ಕೊರತೆ ಇರುವ ಕಾರಣ ಕಡಿಮೆ ತೃಪ್ತಿಯನ್ನು ತರುತ್ತದೆ. ಮತ್ತು ಇದು ವೈವಾಹಿಕ ಅಸ್ಥಿರತೆಗೆ ನಡಿಸುತ್ತದೆ.” ಆದುದರಿಂದ ಚಿಕ್ಕಂದಿನಲ್ಲಿಯೇ ವಿವಾಹವಾಗುವುದು ಇದಕ್ಕಿರುವ ಉತ್ತರವಲ್ಲ. ವಿವಾಹದ ಸಾಫಲ್ಯಕ್ಕಾಗಿ ಬೇಕಾಗಿರುವ ಎಲ್ಲಾ ಗುಣಗಳನ್ನು ವಿಕಸಿಸುವ ತನಕ ನಿರ್ಮಲವಾದ ಒಂಟಿಗತನವನ್ನು ಕಾಪಾಡಿಕೊಳ್ಳುವುದೇ ಇದಕ್ಕಿರುವ ಉತ್ತರ.
ನಿಮ್ಮನ್ನು ಶುದ್ಧವಾಗಿರಿಸಿಕೊಳ್ಳಿರಿ.
15. ನಾವು ನೈತಿಕ ನೈರ್ಮಲ್ಯದಲ್ಲಿ ಉಳಿಯಬೇಕಾದರೆ ಯಾವ ಬಲವಾದ ಹೆಜ್ಜೆಗಳನ್ನು ತಕ್ಕೊಳ್ಳುವ ಅಗತ್ಯವಿದೆ?
15 ಅಪೋಸ್ತಲ ಪೌಲನು ಬರೆದದ್ದು: “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ;” (ಕೊಲೊಸ್ಸೆ 3:5) ಹೌದು, ಬಲವಾದ ಹೆಜ್ಜೆಗಳು ಅವಶ್ಯ; ನೀವು ನೈತಿಕವಾಗಿ ನಿರ್ಮಲವಾಗಿರಲು ದೃಢತೆಯಿಂದಿರತಕ್ಕದ್ದು. “ಸಾಯಿಸಿರಿ” ಎಂಬ ಕ್ರಿಯಾಪದದ ಕುರಿತು ಮಾತಾಡುತ್ತಾ ದಿ ಎಕ್ಸ್ಪೊಸಿಟರ್ಸ್ ಬೈಬಲ್ ಕಾಮೆಂಟರಿ ಹೇಳುವುದು: “ನಾವು ಕೆಟ್ಟ ಕೃತ್ಯ ಮತ್ತು ಮನೋಭಾವಗಳನ್ನು ಅಡಗಿಸಬೇಕು ಅಥವಾ ನಿಯಂತ್ರಿಸಬೇಕೆಂದು ಮಾತ್ರ ಇದು ಹೇಳುವುದಿಲ್ಲ. ನಾವು ಅದನ್ನು ಅಳಿಸಿಬಿಡಬೇಕು. ಹಳೇ ಜೀವನ ರೀತಿಯನ್ನು ಪೂರ್ತಿ ನಾಶಪಡಿಸಬೇಕು. ‘ಸಂಪೂರ್ಣವಾಗಿ ವಧಿಸು’ ಎಂಬದು ಅದರ ನಿಜಬಲವನ್ನು ವ್ಯಕ್ತಪಡಿಸೀತು. . . . ಕ್ರಿಯಾಪದದ ಅರ್ಥ ಮತ್ತು ಕಾಲರೂಪದ ಬಲಗಳು ವೈಯಕ್ತಿಕ ದೃಢತೆಯ ಹುರುಪು ಹಾಗೂ ವೇದನೆಯ ವರ್ತನೆಯನ್ನು ಸೂಚಿಸುತ್ತದೆ.—ಮತ್ತಾಯ 5:27-30 ಹೋಲಿಸಿ.
16. ನೈತಿಕವಾಗಿ ಶುದ್ಧರಾಗಿ ಉಳಿಯಬೇಕಾದರೆ ಮಾನಸಿಕವಾಗಿ ಶುದ್ಧರಾಗಿರಲು ಏಕೆ ಶ್ರಮಪಡಬೇಕು, ಮತ್ತು ಹೀಗೆ ಮಾಡುವುದರಲ್ಲಿ ನೀವು ಹೇಗೆ ಜಯ ಹೊಂದುವಿರಿ?
16 ಹಾಗಾದರೆ, ನೈತಿಕವಾಗಿ ಅಶುದ್ಧ ಕೃತ್ಯ ಮತ್ತು ಮನೋಭಾವಗಳನ್ನು ನೀವು ಹೇಗೆ “ಸಂಪೂರ್ಣವಾಗಿ ವಧಿಸ” ಬಲ್ಲಿರಿ ಅಥವಾ “ಅಳಿಸಿಬಿಡ”ಬಲ್ಲಿರಿ? ಯೇಸು ಈ ಸಮಸ್ಯೆಯ ಮೂಲಕ್ಕೆ ಹೋಗುತ್ತಾ ನುಡಿದದ್ದು: “ಒಳಗಿನಿಂದ ಅಂದರೆ ಮನುಷ್ಯರ ಮನಸ್ಸಿನೊಳಗಿಂದ [ಹೃದಯ] ಸೂಳೆಗಾರಿಕೆ,. . . . ಹಾದರ, ದ್ರವ್ಯಾಶೆ ಮೊದಲಾದ ಕೆಟ್ಟ ಆಲೋಚನೆಗಳು ಹೊರಡುತ್ತವೆ.” (ಮಾರ್ಕ 7:21,22) ಈ ಸಾಂಕೇತಿಕ ಹೃದಯದಲ್ಲಿ ನಮ್ಮ ಯೋಚನೆಗಳು ಸೇರಿರುವುದರಿಂದಲೇ “ಆಲೋಚನೆಗಳನ್ನು” ಅದರೊಂದಿಗೆ ಜೋಡಿಸಲಾಗಿದೆ. ಹಾಗಾದರೆ ನೈತಿಕ ರೀತಿಯಲ್ಲಿ ಶುದ್ಧರಾಗಿರಬೇಕಾದರೆ ನೀವು ಮಾನಸಿಕ ರೀತಿಯಲ್ಲಿ ಶುದ್ಧರಾಗಿರಲು ಪ್ರಯತ್ನಿಸಬೇಕು. ಹೇಗೆ? ಸಂವೇದನೆಗಳ ಮೂಲಕ ಮನಸ್ಸು ಪೋಷಿಸಲ್ಪಡುವುದರಿಂದ ನೀವು ಕಣ್ಣುಗಳಿಂದ ನೋಡುವ ವಿಷಯಗಳ ಕುರಿತು ಎಚ್ಚರಿಕೆಯಿಂದಿದ್ದು ಲೈಂಗಿಕ ಅನೈತಿಕತೆಯನ್ನು ಚಿತ್ರಿಸುವ ಅಥವಾ ಒಪ್ಪುವ ಪುಸ್ತಕಗಳು, ಟೀವೀ ಕಾರ್ಯಕ್ರಮಗಳು ಅಥವಾ ಚಲನ ಚಿತ್ರಗಳಿಂದ ದೂರವಿರಬೇಕು. ನಿಮ್ಮ ಕಿವಿಗಳಿಂದ ಕೇಳುವ ವಿಷಯಗಳ ಕುರಿತೂ ಎಚ್ಚರಿಕೆಯಿಂದಿದ್ದು ಲೈಂಗಿಕ ಸ್ಪಷ್ಟ ವಿವರಣೆಗಳಿಂದ ಹಾಡುಗಳನ್ನು ಕೇಳುವುದನ್ನು ತ್ಯಜಿಸಬೇಕು. ಇಂತಹ ಸ್ಥಾನವನ್ನು ಆಯ್ದುಕೊಳ್ಳಲು, ವಿಶೇಷವಾಗಿ ನಿಮ್ಮ ಸಮಾನಸ್ಥರ ಎದುರಿನಲ್ಲಿ ಧೈರ್ಯ ಅಗತ್ಯ. ಆದರೆ ಹೀಗೆ ಮಾಡುವಲ್ಲಿ ನೀವು ನೈತಿಕವಾಗಿ ನಿರ್ಮಲರಾಗಿದ್ದು ಕಾಪಾಡಿಕೊಳ್ಳಲು ನಿಮಗೆ ಸಹಾಯ ದೊರೆಯುವದು.
17. ನೈತಿಕ ಅಶುದ್ಧತೆಯ ಸುದ್ಧಿಯನ್ನೂ ನಿಮ್ಮ ಮಧ್ಯೆ ಎತ್ತಬಾರದೇಕೆ?
17 ಅಪೋಸ್ತಲ ಪೌಲನು ಈ ಬುದ್ಧಿವಾದವನ್ನು ಕೊಟ್ಟನು: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು.” (ಎಫೆ. 5:3; 12ನೇ ವಚನ ಸಹ ನೋಡಿ) ಹೀಗೆ ನೈತಿಕ ಅಶುದ್ಧತೆಯ ವಿಷಯ ಮಾತಾಡಲೂ ಬಾರದು ಅಂದರೆ, ಪರಿಹಾಸ್ಯಕ್ಕಾಗಿಯಾದರೂ ಸಂಭಾಷಣಾ ವಿಷಯವಾಗಿ ಅದನ್ನು ಚರ್ಚಿಸಬಾರದು ಅಥವಾ ಉಪಯೋಗಿಸಬಾರದು. ಏಕೆ ಬಾರದು? ಬೈಬಲ್ ತಜ್ನ ವಿಲ್ಯಂ ಬಾರ್ಕ್ಲೇ ಹೇಳುವುದು: “ಒಂದು ವಿಷಯದ ಕುರಿತು ಮಾತಾಡಿ, ತಮಾಷೆ ಮಾಡಿ, ಪದೇ ಪದೇ ಸಂಭಾಷಣಾ ವಿಷಯವಾಗಿರಿಸುನದೆಂದರೆ ಅದನ್ನು ಮನಸ್ಸಿಗೆ ಪರಿಚಯಿಸುವುದು ಮತ್ತು ಹಾಗೆ ಮಾಡುವಂತೆ ಸಮೀಪ ತರುವುದೆಂದರ್ಥ.” (ಯಾಕೋಬ 1:14,15) ವಿಶೇಷವಾಗಿ ಇತರ ಯುವ ವ್ಯಕ್ತಿಗಳು ಅಶ್ಲೀಲ ಹಾಸ್ಯ ಕಥೆಗಳನ್ನು ಹೇಳುವಾಗ ಅಥವಾ ಲೈಂಗಿಕ ಕೃತ್ಯಗಳನ್ನು ಹೊಲಸು ಭಾಷೆಯಲ್ಲಿ ಹೇಳುವಾಗ ‘ನಮ್ಮ ನಾಲಿಗೆ ಪಾಪಕ್ಕೆ ಹೋಗದಂತೆ’ ಮಾಡಲು ನಿಜ ದೃಢತೆ ಅಗತ್ಯ. (ಕೀರ್ತನೆ 39:1) ಆದರೆ ನೀವು ಪ್ರಾಮಾಣಿಕರಾಗಿ ಮತ್ತು ನಿರ್ಮಲರಾಗಿ ಇರುವುದರಿಂದ ಯೆಹೋವನ ಹೃದಯಕ್ಕೆ ಆನಂದ ತರುವಿರಿ.—ಕೀರ್ತನೆ 11:7; ಜ್ಞಾನೋಕ್ತಿ27:11.
18. (ಎ) ನೈತಿಕ ಅಶುದ್ಧತೆಯನ್ನು ಹೋರಾಡಿ ಜಯಿಸಬೇಕಾದರೆ ಅಶುದ್ಧತೆ ಯೋಚನೆ ಮತ್ತು ಮಾತನ್ನು ತ್ಯಜಿಸುವದಷ್ಟೇ ಸಾಲದೇಕೆ? (ಬಿ) ಪೌಲನು ಫಿಲಿಪ್ಪಿಯವರಿಗೆ ಕೊಟ್ಟ ಸಲಹೆಯಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು?
18 ನೈತಿಕ ಅಶುದ್ಧತೆಯನ್ನು ಹೋರಾಡಿ ಜಯಿಸಲು ಅಶುದ್ಧ ಯೋಚನೆ ಮತ್ತು ಮಾತುಗಳನ್ನು ವಿಸರ್ಜಿಸುವುದಷ್ಟೇ ಸಾಲದು. ಒಂದು ಚೈನೀಸ್ ನಾಣ್ಣುಡಿ ಹೇಳುವುದು: “ಬರಿದಾಗಿರುವ ಮನಸ್ಸು ಸಕಲ ಸೂಚನೆಗಳಿಗೂ ಅವಕಾಶ ನೀಡುತ್ತದೆ.” (ಮತ್ತಾಯ 12:43-45 ಹೋಲಿಸಿ) ಮನಸ್ಸನ್ನು ಆರೋಗ್ಯಕರವಾದ ಶುದ್ಧ ಯೋಚನೆಗಳಿಂದ ತುಂಬಿಸುವ ಅಗತ್ಯವನ್ನು ಪೌಲನು ಅಂಗೀಕರಿಸಿದನು. ಆದುದರಿಂದ ಅವನು ಫಿಲಿಪ್ಪಿಯವರನ್ನು ಪ್ರೋತ್ಸಾಹಿಸಿದ್ದು: “ಯಾವುದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೂ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ [ಜಾಗರೂಕತೆಯ ಪುನರಾಲೋಚನೆಯ ವಿಷಯವಾಗಿc] ತಂದುಕೊಳ್ಳಿರಿ.”—ಫಿಲಿಪ್ಪಿ 4:8.
19. ದೇವರ ವಾಕ್ಯದ ಶ್ರದ್ಧಾಪೂರ್ವಕ ಅಭ್ಯಾಸವನ್ನು ಏಕೆ ಮಾಡಬೇಕು, ಮತ್ತು ನೀವು ನೈತಿಕವಾಗಿ ಶುದ್ಧರಾಗಿ ಉಳಿಯಲು ಇದು ಯಾವ ವಿಧದಲ್ಲಿ ಸಹಾಯ ಮಾಡುವುದು?
19 ದೇವರ ವಾಕ್ಯದ ಶ್ರದ್ಧಾಪೂರ್ವಕವಾದ ಅಭ್ಯಾಸವನ್ನು ಮಾಡಬೇಕೆಂದು ಇದರ ಅರ್ಥ. (ಯೆಹೋಶುವ 1:8; ಕೀರ್ತನೆ 1:2) ಅದು ನಿಮ್ಮ ಮನಸ್ಸು ಮತ್ತು ಹೃದಯವನ್ನು ಬಲಪಡಿಸಿ ನೀವು ಯೆಹೋವನೊಂದಿಗೆ ಆಪ್ತ ವೈಯಕ್ತಿಕ ಸಂಬಂಧವನ್ನು ಬೆಳೆಸುವಂತೆ ಸಹಾಯ ಮಾಡುವುದು. ಆಗ, ನೈತಿಕವಾಗಿ ಅಶುದ್ಧ ವರ್ತನೆಗಳಲ್ಲಿ ಭಾಗವಹಿಸುವಂತೆ ನಿಮ್ಮ ಮೇಲೆ ಬರುವ ಶೋಧನೆಗಳನ್ನು ತಡೆಯಲು ಹೆಚ್ಚು ಉತ್ತಮ ಸ್ಥಾನದಲ್ಲಿ ನೀವಿರುವಿರಿ. ಆಗ ನೀವು ಯೆಹೋವನ ನಾಮಕ್ಕೆ ಅವಮಾನ, ನಿಮ್ಮ ಕುಟುಂಬ ಮತ್ತು ಸಭೆಗೆ ಲಜ್ಜೆಯನ್ನು ತರುವ ನಡತೆಗಳಿಗೆ ಹೋಗಲಾರಿರಿ. ಬದಲಿಗೆ ಯೌವನದಲ್ಲಿ ನಿಮಗಿರುವ ಬಲ ಮತ್ತು ಹುರುಪನ್ನು ಮುಂದಕ್ಕೆ ವಿಷಾದಕರವಾಗಿ ಕಂಡುಬರದ ರೀತಿಯಲ್ಲಿ ಉಪಯೋಗಿಸುವಿರಿ. ಹೌದು, ನೀವು ನೈತಿಕ ನೈರ್ಮಲ್ಯದ ದಾರಿಯನ್ನು, ಯೆಹೋವನನ್ನು ಸೇವಿಸುತ್ತಿರುವ ಯುವ ಜನರ ಸೌಂದರ್ಯವನ್ನು ಅನುಸರಿಸುವಿರಿ.—ಜ್ಞಾನೋಕ್ತಿ 3:1-4. (w89 11/1)
[ಅಧ್ಯಯನ ಪ್ರಶ್ನೆಗಳು]
a ಸಪ್ಟೆಂಬರ 8, 1987 ಪುಟ 18-20; ನವಂಬರ 8, 1987, ಪುಟ 18-20 ಮತ್ತು ಮಾರ್ಚ್ 8, 1988 ಪುಟ 20-3 ಗಳನ್ನು ಅವೇಕ್! ಪತ್ರಿಕೆಯಲ್ಲಿ ನೋಡಿ.
b ಅವೇಕ್! ದಶಂಬರ 8, 1985, ಪುಟ 10-13.
c ದಿ ಎಕ್ಸ್ ಪೊಸಿಟರ್ಸ್ ಗ್ರೀಕ್ ಟೆಸ್ಟಮೆಂಟ್.
ಯುವ ಜನರೇ—ಹೇಗೆ ಉತ್ತರ ಕೊಡುವಿರಿ?
◻ ನೀವು ನೈತಿಕ ನೈರ್ಮಲ್ಯದ ಉನ್ನತ ಮಟ್ಟವನ್ನು ಏಕೆ ಕಾಪಾಡಬೇಕು?
◻ ಯೆಹೋವನ ಮುಂದೆ ಶುದ್ಧತೆಯನ್ನು ಕಾಪಾಡುವ ವಿಷಯವನ್ನು ಯಾವ ಒತ್ತಡಗಳು ಪ್ರತಿಭಟಿಸುತ್ತವೆ?
◻ ನೈತಿಕ ರೀತಿಯಲ್ಲಿ ಶುದ್ಧರಾಗಿರುವ ಪಂಥಾಹ್ವಾನವನ್ನು ಎದುರಿಸಲು ಯಾವುದು ನಿಮಗೆ ಸಹಾಯ ಮಾಡುವುದು?
◻ ಶುದ್ಧತೆ ಕಾಪಾಡಿಕೊಂಡಿರಲು ನಿಮಗೆ ಯಾವ ಬಲವಾದ ಹೆಜ್ಜೆಗಳ ಅಗತ್ಯವಿದೆ?
[ಪುಟ 23 ರಲ್ಲಿರುವ ಚಿತ್ರ]
ಇನ್ನೂ ಯೌವನದ ಪರಿಪಕ್ವ ಸ್ಥಿತಿಯಲ್ಲಿರುವ ಹೆಚ್ಚಿನವರು ತಂದೆತ್ತಾಯನದ ಜವಾಬ್ದಾರಿಕೆಗಳನ್ನು ನಿರ್ವಹಿಸುವರೇ ತೀರಾ ಚಿಕ್ಕವರಾಗಿದ್ದಾರೆ.