“ನನ್ನ ಪ್ರಾಣವೇ, ಯೆಹೋವನನ್ನು ಸ್ತುತಿಸು”
“ಇತ್ತೀಚಿನ ತಿಂಗಳುಗಳಲ್ಲಿ ನನ್ನ ಶುಶ್ರೂಷೆಯು ಜೀವವಿಲ್ಲದ್ದೂ ಆನಂದರಹಿತವಾದದ್ದೂ ಆಗಿದೆ” ಎಂದು ನ್ಯಾನ್ಸಿ ಹೇಳುತ್ತಾಳೆ.a ಹೀಗಿದ್ದರೂ ಅವಳು ಕೂಡಿಸಿ ಹೇಳಿದ್ದು: “ನನಗಾಗುತ್ತಿರುವ ಅನಿಸಿಕೆ ನನಗೆ ಇಷ್ಟವಾಗುತ್ತಿಲ್ಲ. ರಾಜ್ಯದ ಸಂದೇಶವನ್ನು ನಾನು ಹೃತ್ಪೂರ್ವಕವಾಗಿ ಮತ್ತು ಉತ್ಸಾಹದಿಂದ ತಿಳಿಸುತ್ತಿಲ್ಲವೆಂದು ನನಗನಿಸುತ್ತದೆ. ನಾನೇನು ಮಾಡಬೇಕು?”
ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಒಬ್ಬ ಹಿರಿಯನಾಗಿರುವ ಕೀತ್ ಎಂಬವನ ಪರಿಸ್ಥಿತಿಯನ್ನೂ ಪರಿಗಣಿಸಿರಿ. ಅವನ ಪತ್ನಿ ಅವನಿಗೆ ಹೀಗಂದಾಗ ಅವನಿಗೆಷ್ಟು ಆಶ್ಚರ್ಯವಾಗಿದ್ದಿರಬೇಕು: “ನಿಮ್ಮ ಮನಸ್ಸಿನಲ್ಲಿ ಏನೊ ಇದೆ ಎಂದನಿಸುತ್ತದೆ. ಇದು ಊಟದ ಸಮಯವಲ್ಲದಿದ್ದರೂ, ನೀವು ಈಗತಾನೇ ಹೇಳಿದ ಪ್ರಾರ್ಥನೆಯಲ್ಲಿ ಊಟಕ್ಕಾಗಿ ಉಪಕಾರ ಎಂದು ಹೇಳಿದಿರಿ!” ಕೀತ್ ಒಪ್ಪಿಕೊಳ್ಳುವುದು: “ನನ್ನ ಪ್ರಾರ್ಥನೆಗಳು ಯಾಂತ್ರಿಕವಾಗಿಬಿಟ್ಟಿವೆ ಎಂದು ನನಗನಿಸುತ್ತದೆ.”
ನೀವು ಯೆಹೋವ ದೇವರಿಗೆ ಸಲ್ಲಿಸುವ ಸ್ತುತಿಯ ಅಭಿವ್ಯಕ್ತಿಗಳು ಉತ್ಸಾಹಹೀನ ಮತ್ತು ಯಾಂತ್ರಿಕವಾಗಿರುವುದನ್ನು ನೀವು ನಿಸ್ಸಂದೇಹವಾಗಿಯೂ ಬಯಸಲಾರಿರಿ. ಅದಕ್ಕೆ ಬದಲಾಗಿ, ಅವು ಕೃತಜ್ಞತೆಯ ಭಾವನೆಗಳಿಂದ ಹೊರಚಿಮ್ಮಿ, ಹೃತ್ಪೂರ್ವಕವಾಗಿರುವಂತೆ ಬಯಸುವಿರಿ. ಆದರೆ ಭಾವನೆಯನ್ನು ಉಡುಪಿನಂತೆ ಹಾಕಿಕೊಳ್ಳಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ. ಅದು ಒಬ್ಬ ವ್ಯಕ್ತಿಯ ಅಂತರಂಗದಿಂದ ಹೊರಹೊಮ್ಮಬೇಕಾಗಿರುವ ಸಂಗತಿಯಾಗಿದೆ. ಒಬ್ಬ ವ್ಯಕ್ತಿಯು ಹೇಗೆ ಅಂತರಾಳದಿಂದ ಕೃತಜ್ಞನಾಗಿರಸಾಧ್ಯವಿದೆ? ನಮಗೆ ಈ ವಿಷಯದ ಸಂಬಂಧದಲ್ಲಿ 103ನೆಯ ಕೀರ್ತನೆಯು ಒಳನೋಟವನ್ನು ಕೊಡುತ್ತದೆ.
ಪುರಾತನ ಇಸ್ರಾಯೇಲಿನ ರಾಜ ದಾವೀದನು 103ನೆಯ ಕೀರ್ತನೆಯನ್ನು ರಚಿಸಿದನು. ಈ ಮಾತುಗಳೊಂದಿಗೆ ಅವನು ಆರಂಭಿಸುತ್ತಾನೆ: “ಓ ನನ್ನ ಪ್ರಾಣವೇ, ಯೆಹೋವನನ್ನು, ನನ್ನೊಳಗಿರುವ ಸಮಸ್ತವು ಆತನ ಪವಿತ್ರನಾಮವನ್ನು ಸ್ತುತಿಸಲಿ.” (ಕೀರ್ತನೆ 103:1, NW) “ಸ್ತುತಿಸು ಎಂಬ ಪದವು, ದೇವರಿಗೆ ಅನ್ವಯಿಸಲ್ಪಡುವಾಗ ಅದು ಕೊಂಡಾಡುವುದನ್ನು, ಆತನ ಕಡೆಗೆ ಬಲವಾದ ಅಕ್ಕರೆ ಹಾಗೂ ಕೃತಜ್ಞತೆಯ ಭಾವವನ್ನು ಸೂಚಿಸುತ್ತದೆ” ಎಂದು ಒಂದು ಪ್ರಮಾಣಕೃತಿ ಹೇಳುತ್ತದೆ. ಪ್ರೀತಿ ಹಾಗೂ ಗಣ್ಯತೆಯಿಂದ ತುಂಬಿತುಳುಕುತ್ತಿರುವ ಹೃದಯದೊಂದಿಗೆ ಯೆಹೋವನನ್ನು ಸ್ತುತಿಸಲು ಆಶಿಸುತ್ತಾ ತನ್ನ ಸ್ವಂತ ಪ್ರಾಣವು, ಅಂದರೆ ತಾನೇ ‘ಯೆಹೋವನನ್ನು ಸ್ತುತಿಸುವಂತೆ’ ದಾವೀದನು ಉತ್ತೇಜಿಸುತ್ತಾನೆ. ಆದರೆ ದಾವೀದನ ಹೃದಯದಲ್ಲಿ, ಅವನು ಆರಾಧಿಸುವ ದೇವರ ಕಡೆಗೆ ಇಂತಹ ಅನುರಾಗದ ಭಾವನೆಯನ್ನು ಯಾವುದು ಉಂಟಾಗಿಸುತ್ತದೆ?
ದಾವೀದನು ಮುಂದುವರಿಸುವುದು: “ಆತನ [ಯೆಹೋವನ] ಉಪಕಾರಗಳಲ್ಲಿ ಒಂದನ್ನೂ [“ಮಾಡುವಿಕೆಗಳನ್ನೆಲ್ಲ,” NW] ಮರೆಯಬೇಡ.” (ಕೀರ್ತನೆ 103:2) ಯೆಹೋವನ ಕಡೆಗೆ ಕೃತಜ್ಞತಾಭಾವವನ್ನು ಹೊಂದುವುದು “ಆತನ ಮಾಡುವಿಕೆಗಳ” ಕುರಿತು ಗಣ್ಯತೆಯಿಂದ ಮನನಮಾಡುವುದರೊಂದಿಗೆ ಸಂಬಂಧಿಸುತ್ತದೆ ಎಂಬುದು ಸುಸ್ಪಷ್ಟ. ದಾವೀದನ ಮನಸ್ಸಿನಲ್ಲಿ ನಿಷ್ಕೃಷ್ಟವಾಗಿ ಯೆಹೋವನ ಯಾವ ಮಾಡುವಿಕೆಗಳು ಇದ್ದಿರಬಹುದು? ನಿರ್ಮಲವಾದ ಒಂದು ರಾತ್ರಿಯಲ್ಲಿ ನಕ್ಷತ್ರಮಯ ಆಕಾಶದಂತಹ, ಯೆಹೋವ ದೇವರ ಸೃಷ್ಟಿಯನ್ನು ನೋಡುವಾಗ ಖಂಡಿತವಾಗಿಯೂ ನಮ್ಮ ಹೃದಯವು ಸೃಷ್ಟಿಕರ್ತನಿಗಾಗಿ ಕೃತಜ್ಞತೆಯೊಂದಿಗೆ ತುಂಬಿತುಳುಕಬಲ್ಲದು. ನಕ್ಷತ್ರಮಯ ಆಕಾಶಗಳು ದಾವೀದನ ಹೃದಯವನ್ನು ಗಾಢವಾಗಿ ಸ್ಪರ್ಶಿಸಿದವು. (ಕೀರ್ತನೆ 8:3, 4; 19:1) ಆದರೆ 103ನೆಯ ಕೀರ್ತನೆಯಲ್ಲಿ, ದಾವೀದನು ಯೆಹೋವನ ಇನ್ನೊಂದು ವಿಧದ ಚಟುವಟಿಕೆಯನ್ನು ನೆನಪಿಸಿಕೊಳ್ಳುತ್ತಾನೆ.
ಯೆಹೋವನು ‘ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುತ್ತಾನೆ’
ಈ ಕೀರ್ತನೆಯಲ್ಲಿ ದಾವೀದನು ದೇವರ ಪ್ರೀತಿದಯೆಯ ಕೃತ್ಯಗಳನ್ನು ವಿವರವಾಗಿ ವರ್ಣಿಸುತ್ತಾನೆ. ಇವುಗಳಲ್ಲಿ ಪ್ರಪ್ರಥಮ ಮತ್ತು ಅಗ್ರಗಣ್ಯವಾದದ್ದನ್ನು ಸೂಚಿಸುತ್ತಾ ಅವನು ಹಾಡುವುದು: ‘ಯೆಹೋವನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುತ್ತಾನೆ.’ (ಕೀರ್ತನೆ 103:3) ದಾವೀದನಿಗೆ ನಿಶ್ಚಯವಾಗಿಯೂ ತನ್ನ ಸ್ವಂತ ಪಾಪಪೂರ್ಣ ಸ್ಥಿತಿಯ ಕುರಿತಾಗಿ ಅರಿವಿತ್ತು. ಬತ್ಷೇಬಳೊಂದಿಗೆ ಅವನು ಇಟ್ಟುಕೊಂಡಿದ್ದ ಹಾದರ ಸಂಬಂಧದ ಕುರಿತಾಗಿ ಪ್ರವಾದಿಯಾದ ನಾತಾನನು ಅವನಿಗೆ ನೇರವಾಗಿ ತಿಳಿಸಿದ ನಂತರ, ದಾವೀದನು ಒಪ್ಪಿಕೊಂಡದ್ದು: “ನಿನಗೆ [ಯೆಹೋವನೇ] ಕೇವಲ ನಿನಗೇ ತಪ್ಪು ಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವದನ್ನೇ ಮಾಡಿದ್ದೇನೆ.” (ಕೀರ್ತನೆ 51:4) ಮುರಿದ ಮನವುಳ್ಳವನಾಗಿ ಅವನು ಹೀಗೆ ಬಿನ್ನೈಸಿದನು: “ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು.” (ಕೀರ್ತನೆ 51:1, 2) ದೇವರು ದಾವೀದನನ್ನು ಕ್ಷಮಿಸಿದಾಗ ಅವನು ಎಷ್ಟು ಕೃತಜ್ಞನಾಗಿದ್ದಿರಬೇಕು! ಅವನೊಬ್ಬ ಅಪರಿಪೂರ್ಣ ಮನುಷ್ಯನಾಗಿದ್ದುದರಿಂದ, ತನ್ನ ಜೀವಿತದಲ್ಲಿ ಇನ್ನಿತರ ಪಾಪಗಳನ್ನೂ ಮಾಡಿದನು. ಆದರೆ ಅವನು ಪಶ್ಚಾತ್ತಾಪಪಡಲು, ಗದರಿಕೆಯನ್ನು ಸ್ವೀಕರಿಸಲು, ಮತ್ತು ತನ್ನನ್ನು ಸರಿಪಡಿಸಿಕೊಳ್ಳಲು ಎಂದೂ ತಪ್ಪಿಹೋಗಲಿಲ್ಲ. ತನ್ನ ಕಡೆಗೆ ದೇವರ ದಯೆಯ ಕೃತ್ಯಗಳ ಕುರಿತು ಚಿಂತಿಸಿದ್ದು, ದಾವೀದನು ಯೆಹೋವನನ್ನು ಸ್ತುತಿಸುವಂತೆ ಪ್ರಚೋದಿಸಿತು.
ನಾವು ಕೂಡ ಪಾಪಿಗಳಾಗಿಲ್ಲವೊ? (ರೋಮಾಪುರ 5:12) ಅಪೊಸ್ತಲ ಪೌಲನು ಕೂಡ ಹೀಗೆ ಪ್ರಲಾಪಿಸಿದನು: “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ. ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” (ರೋಮಾಪುರ 7:22-24) ಯೆಹೋವನು ನಮ್ಮ ತಪ್ಪುಗಳ ಒಂದು ಲೆಕ್ಕಪುಸ್ತಕವನ್ನು ಇಟ್ಟುಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಎಷ್ಟೊಂದು ಆಭಾರಿಗಳಾಗಿರಬೇಕು! ನಾವು ಪಶ್ಚಾತ್ತಾಪಪಟ್ಟು, ಕ್ಷಮೆಯನ್ನು ಕೋರುವಾಗ ಆತನು ಅವುಗಳನ್ನು ಸಂತೋಷದಿಂದ ಅಳಿಸಿಬಿಡುತ್ತಾನೆ.
ದಾವೀದನು ಸ್ವತಃ ಜ್ಞಾಪಿಸಿಕೊಂಡದ್ದು: ‘[ಯೆಹೋವನು] ಸಮಸ್ತರೋಗಗಳನ್ನು ವಾಸಿಮಾಡುತ್ತಾನೆ.’ (ಕೀರ್ತನೆ 103:3) ವಾಸಿಮಾಡುವುದು ಪುನಸ್ಸ್ಥಾಪನೆಯ ಕೃತ್ಯವಾಗಿರುವುದರಿಂದ, ಅದರಲ್ಲಿ ತಪ್ಪನ್ನು ಕ್ಷಮಿಸುವುದಕ್ಕಿಂತಲೂ ಹೆಚ್ಚಿನದ್ದು ಸೇರಿರುತ್ತದೆ. ಅದರಲ್ಲಿ ನಮ್ಮ ‘ರೋಗಗಳ,’ ಅಂದರೆ ನಮ್ಮ ತಪ್ಪುಗಳ ಕೆಟ್ಟ ಪರಿಣಾಮಗಳನ್ನು ತೊಲಗಿಸುವುದು ಒಳಗೂಡಿರುತ್ತದೆ. ಯೆಹೋವನು ತರಲಿರುವ ಹೊಸ ಲೋಕದಲ್ಲಿ, ಪಾಪವು ಶರೀರದ ಮೇಲೆ ಬರಮಾಡುವ ರೋಗ ಮತ್ತು ಮರಣದಂತಹ ಪರಿಣಾಮಗಳನ್ನು ಆತನು ಖಂಡಿತವಾಗಿಯೂ ನಿರ್ಮೂಲಮಾಡುವನು. (ಯೆಶಾಯ 25:8; ಪ್ರಕಟನೆ 21:1-4) ಆದರೆ ಇಂದು ಕೂಡ ಯೆಹೋವನು ನಮ್ಮ ಆತ್ಮಿಕ ರೋಗಗಳನ್ನು ವಾಸಿಮಾಡುತ್ತಿದ್ದಾನೆ. ಕೆಲವರಲ್ಲಿ ಈ ರೋಗವು ಒಂದು ಕೆಟ್ಟ ಮನಸ್ಸಾಕ್ಷಿ ಹಾಗೂ ಆತನೊಂದಿಗೆ ಕಡಿದಿರುವ ಸಂಬಂಧವನ್ನು ಒಳಗೊಂಡಿರುತ್ತದೆ. ಈ ವಿಷಯದಲ್ಲಿ ಯೆಹೋವನು ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ಈಗಾಗಲೇ ಏನನ್ನು ಮಾಡಿದ್ದಾನೊ ಅದನ್ನು ‘ಮರೆಯಬೇಡಿ.’
ಆತನು ‘ನಿನ್ನ ಜೀವವನ್ನು ಮೇಲಕ್ಕೆತ್ತುತ್ತಾನೆ’
“[ಯೆಹೋವನು] ಸಾಕ್ಷಾತ್ ಕುಳಿಯಿಂದಲೂ ನಿನ್ನ ಜೀವವನ್ನು ಮೇಲಕ್ಕೆತ್ತುತ್ತಾನೆ” ಎಂದು ದಾವೀದನು ಹಾಡಿದನು. (ಕೀರ್ತನೆ 103:4, NW) ಈ “ಕುಳಿ” ಮಾನವಕುಲದ ಸಾಮಾನ್ಯ ಸಮಾಧಿಯಾದ ಷೀಓಲ್ ಅಥವಾ ಹೇಡೀಸ್ ಆಗಿದೆ. ಇಸ್ರಾಯೇಲಿನ ರಾಜನಾಗುವ ಮುಂಚೆಯೇ, ದಾವೀದನು ಸಾವಿನ ದವಡೆಯಲ್ಲಿದ್ದನು. ಉದಾಹರಣೆಗಾಗಿ, ಇಸ್ರಾಯೇಲಿನ ರಾಜನಾದ ಸೌಲನು ದಾವೀದನನ್ನು ತುಂಬ ದ್ವೇಷಿಸುತ್ತಿದ್ದನು ಮತ್ತು ಈ ಕಾರಣದಿಂದ ಅವನನ್ನು ಅನೇಕ ಸಂದರ್ಭಗಳಲ್ಲಿ ಕೊಲ್ಲಲು ಪ್ರಯತ್ನಿಸಿದನು. (1 ಸಮುವೇಲ 18:9-29; 19:10; 23:6-29) ಫಿಲಿಷ್ಟಿಯರು ಕೂಡ ದಾವೀದನನ್ನು ಕೊಲ್ಲಲು ಅವನ ಹಿಂದೆ ಬಿದ್ದಿದ್ದರು. (1 ಸಮುವೇಲ 21:10-15) ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಯೆಹೋವನು ಅವನನ್ನು “ಕುಳಿ”ಯಿಂದ ಪಾರುಮಾಡಿದನು. ಯೆಹೋವನ ಈ ಎಲ್ಲ ಕೃತ್ಯಗಳನ್ನು ನೆನಸಿಕೊಳ್ಳುವಾಗ, ದಾವೀದನು ಎಷ್ಟೊಂದು ಕೃತಜ್ಞನಾಗಿದ್ದಿರಬೇಕು!
ನಿಮ್ಮ ಕುರಿತಾಗಿ ಏನು? ಖಿನ್ನತೆಯ ಅವಧಿಗಳಲ್ಲಿ ಅಥವಾ ನಷ್ಟದ ಸಮಯಗಳಲ್ಲಿ ಯೆಹೋವನು ನಿಮಗೆ ಆಸರೆಯಾಗಿ ಪರಿಣಮಿಸಿದ್ದಾನೊ? ಇಲ್ಲವೇ ನಮ್ಮ ಸಮಯದಲ್ಲಿ ಆತನು ತನ್ನ ನಂಬಿಗಸ್ತ ಸಾಕ್ಷಿಗಳ ಜೀವಗಳನ್ನು ಷೀಓಲ್ನಿಂದ ತಪ್ಪಿಸಿರುವ ಪ್ರಸಂಗಗಳು ನಿಮಗೆ ತಿಳಿದಿವೆಯೊ? ಈ ಪತ್ರಿಕೆಯ ಪುಟಗಳಿಂದಲೇ ಆತನ ರಕ್ಷಣಾ ಕೃತ್ಯಗಳ ವೃತ್ತಾಂತಗಳನ್ನು ಓದಿ, ನಿಮ್ಮ ಹೃದಯವು ಸ್ಪರ್ಶಿಸಲ್ಪಟ್ಟಿರಬಹುದು. ಸತ್ಯ ದೇವರ ಈ ಕೃತ್ಯಗಳ ಕುರಿತು ಗಣ್ಯತೆಯಿಂದ ಯೋಚಿಸಲಿಕ್ಕಾಗಿ ಸಮಯವನ್ನು ಏಕೆ ಬದಿಗಿರಿಸಬಾರದು? ಮತ್ತು ಖಂಡಿತವಾಗಿಯೂ ಪುನರುತ್ಥಾನದ ನಿರೀಕ್ಷೆಗಾಗಿ ಯೆಹೋವನಿಗೆ ಆಭಾರಿಗಳಾಗಿರಲು ನಮಗೆಲ್ಲರಿಗೂ ಕಾರಣವಿದೆ.—ಯೋಹಾನ 5:28, 29; ಅ. ಕೃತ್ಯಗಳು 24:15.
ಯೆಹೋವನು ನಮಗೆ ಜೀವವನ್ನು ಕೊಟ್ಟಿದ್ದಾನೆ ಮಾತ್ರವಲ್ಲ, ಜೀವನವನ್ನು ಆನಂದಮಯಗೊಳಿಸಲು ಮತ್ತು ಜೀವಿಸಲು ಯೋಗ್ಯವನ್ನಾಗಿ ಮಾಡುವ ವಿಷಯಗಳನ್ನೂ ಕೊಡುತ್ತಾನೆ. ದೇವರು “ಪ್ರೀತಿಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸು”ತ್ತಾನೆಂದು ಕೀರ್ತನೆಗಾರನು ಘೋಷಿಸುತ್ತಾನೆ. (ಕೀರ್ತನೆ 103:4) ನಾವು ಕಷ್ಟದಲ್ಲಿರುವಾಗ, ಯೆಹೋವನು ನಮ್ಮ ಕೈಬಿಡುವುದಿಲ್ಲ. ಬದಲಾಗಿ ತನ್ನ ದೃಶ್ಯ ಸಂಸ್ಥೆ ಮತ್ತು ಸಭೆಯಲ್ಲಿರುವ ನೇಮಿತ ಹಿರಿಯರು ಅಥವಾ ಕುರುಬರ ಮೂಲಕ ನಮಗೆ ಸಹಾಯಮಾಡುತ್ತಾನೆ. ಅಂತಹ ಸಹಾಯದಿಂದಾಗಿ, ನಾವು ನಮ್ಮ ಸ್ವಗೌರವ ಮತ್ತು ಘನತೆಯನ್ನು ಕಳೆದುಕೊಳ್ಳದೆ ಒಂದು ಕಷ್ಟಕರ ಸನ್ನಿವೇಶದೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತದೆ. ಕ್ರೈಸ್ತ ಕುರುಬರು ಕುರಿಗಳ ಕುರಿತಾಗಿ ತುಂಬ ಕಾಳಜಿ ವಹಿಸುತ್ತಾರೆ. ಅಸ್ವಸ್ಥರನ್ನು ಮತ್ತು ಖಿನ್ನರಾಗಿರುವವರನ್ನು ಅವರು ಉತ್ತೇಜಿಸುತ್ತಾರೆ. ಮತ್ತು ದಾರಿತಪ್ಪಿಬಿದ್ದವರನ್ನು ಪುನಃಸ್ಸ್ಥಾಪಿಸಲು ತಮ್ಮಿಂದಾಗುವುದೆಲ್ಲವನ್ನೂ ಮಾಡುತ್ತಾರೆ. (ಯೆಶಾಯ 32:1, 2; 1 ಪೇತ್ರ 5:2, 3; ಯೂದ 22, 23) ಈ ಕುರುಬರು ಮಂದೆಯ ಕಡೆಗೆ ಕನಿಕರವುಳ್ಳವರೂ ಪ್ರೀತಿಪರರೂ ಆಗಿರುವಂತೆ ಯೆಹೋವನ ಆತ್ಮವು ಅವರನ್ನು ಪ್ರಚೋದಿಸುತ್ತದೆ. ಆತನ “ಪ್ರೀತಿಕೃಪೆ”ಯು ಖಂಡಿತವಾಗಿಯೂ ನಮ್ಮನ್ನು ಶೃಂಗರಿಸಿ, ಘನತೆಯನ್ನು ಕೊಡುವ ಒಂದು ಕಿರೀಟದಂತಿದೆ! ಯೆಹೋವನ ಕೃತ್ಯಗಳನ್ನು ಎಂದೂ ಮರೆಯದೆ, ನಾವು ಯೆಹೋವನನ್ನು ಮತ್ತು ಆತನ ಪವಿತ್ರ ಹೆಸರನ್ನು ಸ್ತುತಿಸೋಣ.
ತನ್ನ ಸ್ವಬುದ್ಧಿವಾದವನ್ನು ಮುಂದುವರಿಸುತ್ತಾ, ಕೀರ್ತನೆಗಾರನಾದ ದಾವೀದನು ಹಾಡುವುದು: “[ಯೆಹೋವನು] ನಿನ್ನ ಜೀವಮಾನವನ್ನು ಒಳ್ಳೆಯದರಿಂದ ತೃಪ್ತಿಪಡಿಸುತ್ತಾನೆ. ನಿನ್ನ ಯೌವನವು ಹದ್ದಿನದ್ದರಂತೆ ನವೀಕರಿಸಲ್ಪಡುತ್ತಾ ಇರುತ್ತದೆ.” (ಕೀರ್ತನೆ 103:5, NW) ಯೆಹೋವನು ಕೊಡುವ ಜೀವನವು, ತೃಪ್ತಿ ಮತ್ತು ಆನಂದದಾಯಕವಾದದ್ದು. ಅಷ್ಟೇಕೆ, ಸತ್ಯದ ಜ್ಞಾನ ತಾನೇ, ಹೋಲಿಕೆಗೂ ಮೀರಿದ ಒಂದು ನಿಕ್ಷೇಪದಂತಿದ್ದು, ಅಪಾರ ಆನಂದದ ಮೂಲವಾಗಿದೆ! ಅದಲ್ಲದೆ, ಯೆಹೋವನು ನಮಗೆ ಕೊಟ್ಟಿರುವ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಎಷ್ಟೊಂದು ತೃಪ್ತಿದಾಯಕವಾಗಿದೆ ಎಂಬುದನ್ನು ಪರಿಗಣಿಸಿರಿ. ಸತ್ಯ ದೇವರ ಕುರಿತಾಗಿ ಕಲಿಯಲು ಆಸಕ್ತನಾಗಿರುವ ಒಬ್ಬ ವ್ಯಕ್ತಿಯನ್ನು ಕಂಡುಹಿಡಿದು, ಅವನು ಯೆಹೋವನ ಕುರಿತು ತಿಳಿದುಕೊಂಡು ಆತನನ್ನು ಸ್ತುತಿಸುವಂತೆ ಸಹಾಯಮಾಡುವುದು ಎಷ್ಟು ಹರ್ಷದಾಯಕವಾದದ್ದು! ಆದರೆ ನಮ್ಮ ಕ್ಷೇತ್ರದಲ್ಲಿ ಜನರು ಕಿವಿಗೊಡಲಿ ಕಿವಿಗೊಡದಿರಲಿ, ಯೆಹೋವನ ಹೆಸರಿನ ಪವಿತ್ರೀಕರಣ ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣಕ್ಕೆ ಸಂಬಂಧಿಸಿರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ಭವ್ಯ ಸುಯೋಗವಾಗಿದೆ.
ದೇವರ ರಾಜ್ಯವನ್ನು ಘೋಷಿಸುವ ಕೆಲಸವನ್ನು ಮಾಡುತ್ತಾ ಇರುವಾಗ, ಬಳಲಿ ಹೋಗದಿರುವವರು ಯಾರು? ಆದರೆ ಯೆಹೋವನು ತನ್ನ ಸೇವಕರ ಬಲವನ್ನು ನವೀಕರಿಸುತ್ತಾ, ಅವರನ್ನು ಆಕಾಶದಲ್ಲಿ ಬಹು ಎತ್ತರದ ವರೆಗೆ ಹಾರುವ, ಬಲವಾದ ರೆಕ್ಕೆಗಳುಳ್ಳ ‘ಹದ್ದುಗಳಂತೆ’ ಮಾಡುತ್ತಾನೆ. ನಾವು ದಿನಂಪ್ರತಿ ನಮ್ಮ ಶುಶ್ರೂಷೆಯನ್ನು ನಂಬಿಗಸ್ತಿಕೆಯಿಂದ ನೆರವೇರಿಸಲು ಸಾಧ್ಯವಾಗುವಂತೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಅಂತಹ “ಬಹು ಬಲವನ್ನು” ಒದಗಿಸುತ್ತಿರುವುದಕ್ಕೆ ನಾವೆಷ್ಟು ಆಭಾರಿಗಳಾಗಿರಬೇಕು!—ಯೆಶಾಯ 40:29-31.
ದೃಷ್ಟಾಂತಿಸಲು: ಕ್ಲಾರಾ ಎಂಬವಳು ಪೂರ್ಣ ಸಮಯದ ಉದ್ಯೋಗದಲ್ಲಿದ್ದಾಳೆ. ಆದರೂ ಅವಳು ಕ್ಷೇತ್ರ ಸೇವೆಯಲ್ಲಿ ಪ್ರತಿ ತಿಂಗಳು 50 ತಾಸುಗಳನ್ನೂ ಕಳೆಯುತ್ತಾಳೆ. ಅವಳನ್ನುವುದು: “ಕೆಲವೊಮ್ಮೆ ನಾನು ದಣಿದಿರುತ್ತೇನಾದರೂ, ನಾನು ಬೇರೊಬ್ಬರೊಂದಿಗೆ ಸೇವೆಯ ಏರ್ಪಾಡನ್ನು ಮಾಡಿರುವ ಕಾರಣದಿಂದಾಗಿ ಕ್ಷೇತ್ರ ಸೇವೆಗೆ ಹೋಗಲೇಬೇಕಾಗುತ್ತದೆ. ಆದರೆ ಪ್ರತಿ ಸಲ ನಾನು ಕ್ಷೇತ್ರ ಸೇವೆಯನ್ನು ಆರಂಭಿಸಿದ ಕೂಡಲೇ, ನನ್ನಲ್ಲಿ ನವಶಕ್ತಿಯು ತುಂಬಿಸಲ್ಪಟ್ಟಿರುವಂತೆ ಆಗುತ್ತದೆ.” ಕ್ರೈಸ್ತ ಶುಶ್ರೂಷೆಗಿರುವ ದೈವಿಕ ಬೆಂಬಲದಿಂದ ಸಿಗುವ ಚೈತನ್ಯವನ್ನು ನೀವು ಕೂಡ ಅನುಭವಿಸಿದ್ದಿರಬಹುದು. ದಾವೀದನು ಈ ಕೀರ್ತನೆಯ ಆರಂಭದ ಮಾತುಗಳಲ್ಲಿ ಹೇಳಿದಂತೆ ನೀವು ಕೂಡ “ಓ ನನ್ನ ಪ್ರಾಣವೇ, ಯೆಹೋವನನ್ನು, ನನ್ನೊಳಗಿರುವ ಸಮಸ್ತವು ಆತನ ಪವಿತ್ರನಾಮವನ್ನು ಸ್ತುತಿಸಲಿ” ಎಂದು ಹೇಳುವಂತೆ ಪ್ರಚೋದಿಸಲ್ಪಡುವಂತಾಗಲಿ.
ಯೆಹೋವನು ತನ್ನ ಜನರನ್ನು ವಿಮೋಚಿಸುತ್ತಾನೆ
ಕೀರ್ತನೆಗಾರನು ಹೀಗೂ ಹಾಡುತ್ತಾನೆ: “ಯೆಹೋವನು ನೀತಿಯನ್ನು ಸಾಧಿಸುವವನಾಗಿ ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ. ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.” (ಕೀರ್ತನೆ 103:6, 7) ಮೋಶೆಯ ದಿನಗಳಲ್ಲಿ ಐಗುಪ್ತದ ದಬ್ಬಾಳಿಕೆಯ ಕೆಳಗೆ ಇಸ್ರಾಯೇಲ್ಯರ ‘ಕುಗ್ಗುವಿಕೆ’ಯ ಕುರಿತು ದಾವೀದನು ಯೋಚಿಸುತ್ತಿದ್ದಿರಬಹುದು. ಯೆಹೋವನು ಮೋಶೆಗೆ ತನ್ನ ವಿಮೋಚನೆಯ ಮಾರ್ಗಗಳನ್ನು ತಿಳಿಸಿದಂತಹ ವಿಧದ ಕುರಿತು ಮನನಮಾಡುವುದು, ದಾವೀದನ ಹೃದಯದಲ್ಲಿ ಕೃತಜ್ಞತೆಯ ಭಾವನೆಯನ್ನು ಉಂಟುಮಾಡಿದ್ದಿರಬಹುದು.
ಇಸ್ರಾಯೇಲ್ಯರೊಂದಿಗಿನ ದೇವರ ವ್ಯವಹಾರಗಳ ಕುರಿತು ಚಿಂತಿಸುವ ಮೂಲಕ ನಮ್ಮಲ್ಲೂ ಅಂತಹ ಕೃತಜ್ಞತೆಯ ಭಾವನೆಯು ಹುಟ್ಟಬಹುದು. ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕದ 29 ಮತ್ತು 30ನೆಯ ಅಧ್ಯಾಯಗಳಲ್ಲಿ ತಿಳಿಸಲ್ಪಟ್ಟಿರುವಂತಹ ಯೆಹೋವನ ಆಧುನಿಕ ದಿನದ ಸೇವಕರ ಅನುಭವಗಳ ಕುರಿತಾಗಿಯೂ ಚಿಂತಿಸುವುದನ್ನು ನಾವು ಅಲಕ್ಷಿಸಬಾರದು. ಇದರಲ್ಲಿ ಮತ್ತು ವಾಚ್ ಟವರ್ ಸೊಸೈಟಿಯ ಇನ್ನಿತರ ಪ್ರಕಾಶನಗಳಲ್ಲಿ ದಾಖಲಿಸಲ್ಪಟ್ಟಿರುವ ವೃತ್ತಾಂತಗಳು, ಯೆಹೋವನು ಆಧುನಿಕ ಸಮಯದಲ್ಲಿ ತನ್ನ ಜನರು ಸೆರೆಮನೆವಾಸ, ದೊಂಬಿ, ನಿಷೇಧಗಳು, ಕೂಟ ಶಿಬಿರಗಳು, ಮತ್ತು ಗುಲಾಮ ದುಡಿಮೆ ಶಿಬಿರಗಳನ್ನು ತಾಳಿಕೊಳ್ಳುವಂತೆ ಸಹಾಯಮಾಡಿರುವ ರೀತಿಯನ್ನು ನೋಡಲು ಶಕ್ತರನ್ನಾಗಿ ಮಾಡಿದೆ. ಯುದ್ಧದಿಂದ ಛಿದ್ರಗೊಂಡಿರುವ, ಬುರುಂಡಿ, ಹಿಂದಿನ ಯುಗಾಸ್ಲಾವಿಯ, ರುಆಂಡ, ಮತ್ತು ಲೈಬೀರಿಯದಂತಹ ದೇಶಗಳಲ್ಲಿ ಅವರು ಸಂಕಷ್ಟಗಳನ್ನು ಎದುರಿಸಿದ್ದಾರೆ. ಹಿಂಸಿಸಲ್ಪಟ್ಟಾಗಲೆಲ್ಲ, ಯೆಹೋವನ ಹಸ್ತವು ತನ್ನ ನಂಬಿಗಸ್ತ ಸೇವಕರಿಗೆ ಆಸರೆಯಾಗಿ ಪರಿಣಮಿಸಿದೆ. ಐಗುಪ್ತದಿಂದ ಬಿಡುಗಡೆಯ ವೃತ್ತಾಂತದ ಕುರಿತು ಪರ್ಯಾಲೋಚಿಸುವುದು ದಾವೀದನಲ್ಲಿ ಕೃತಜ್ಞತೆಯ ಭಾವನೆಯನ್ನು ಹುಟ್ಟಿಸಿದಂತೆಯೇ, ನಮ್ಮ ಮಹಾ ದೇವರಾದ ಯೆಹೋವನ ಈ ಕೃತ್ಯಗಳ ಕುರಿತು ಯೋಚಿಸುವುದು ನಮ್ಮಲ್ಲೂ ಅದೇ ಭಾವನೆಯನ್ನು ಹುಟ್ಟಿಸುವುದು.
ಯೆಹೋವನು ಎಷ್ಟು ಕೋಮಲವಾಗಿ ನಮ್ಮನ್ನು ಪಾಪದ ಹೊರೆಯಿಂದ ಬಿಡಿಸುತ್ತಾನೆಂಬುದನ್ನೂ ಪರಿಗಣಿಸಿರಿ. ‘ನಿರ್ಜೀವಕರ್ಮಗಳಿಂದ ಬಿಡಿಸಿ ನಮ್ಮ ಮನಸ್ಸನ್ನು ಶುದ್ಧೀಕರಿಸಲಿಕ್ಕಾಗಿ’ ಆತನು ‘ಕ್ರಿಸ್ತನ ರಕ್ತ’ವನ್ನು ಒದಗಿಸಿದ್ದಾನೆ. (ಇಬ್ರಿಯ 9:14) ನಮ್ಮ ಪಾಪಗಳಿಗಾಗಿ ನಾವು ಪಶ್ಚಾತ್ತಾಪಪಟ್ಟು, ಕ್ರಿಸ್ತನ ಸುರಿದ ರಕ್ತದ ಆಧಾರದ ಮೇಲೆ ಕ್ಷಮೆಯನ್ನು ಕೋರುವಾಗ, ದೇವರು ನಮ್ಮ ತಪ್ಪುಗಳನ್ನು ನಮ್ಮಿಂದ “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ” ಅಷ್ಟು ದೂರ ಹಾಕಿ, ನಮ್ಮನ್ನು ಆತನ ಅನುಗ್ರಹಕ್ಕೆ ಪುನಸ್ಸ್ಥಾಪಿಸುತ್ತಾನೆ. ಮತ್ತು ಕ್ರೈಸ್ತ ಕೂಟಗಳು, ಭಕ್ತಿವೃದ್ಧಿಯನ್ನುಂಟುಮಾಡುವ ಸಹವಾಸ, ಸಭೆಯಲ್ಲಿರುವ ಕುರುಬರು ಹಾಗೂ “ನಂಬಿಗಸ್ತನೂ ವಿವೇಕಿಯೂ ಆದ ಆಳಿ”ನ ಮೂಲಕ ಬೈಬಲ್ ಆಧಾರಿತ ಪ್ರಕಾಶನಗಳ ರೂಪದಲ್ಲಿ ಯೆಹೋವನು ಕೊಡುವ ಒದಗಿಸುವಿಕೆಗಳ ಕುರಿತು ಯೋಚಿಸಿರಿ. (ಮತ್ತಾಯ 24:45) ಯೆಹೋವನ ಈ ಎಲ್ಲ ಮಾಡುವಿಕೆಗಳು ಆತನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುವುದಿಲ್ಲವೊ? ದಾವೀದನು ಘೋಷಿಸುವುದು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. . . . ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.” (ಕೀರ್ತನೆ 103:8-14) ಯೆಹೋವನ ಪ್ರೀತಿಪರ ಆರೈಕೆಯ ಕುರಿತಾಗಿ ಮನನಮಾಡುವುದು, ನಾವು ಆತನನ್ನು ಮಹಿಮೆಪಡಿಸುವಂತೆ ಮತ್ತು ಆತನ ಪವಿತ್ರ ಹೆಸರನ್ನು ಉನ್ನತಕ್ಕೇರಿಸುವಂತೆ ಖಂಡಿತವಾಗಿಯೂ ಪ್ರಚೋದಿಸುವುದು.
“ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ”
“ನಿತ್ಯದೇವರಾದ” ಯೆಹೋವನ ಅಮರತ್ವಕ್ಕೆ ಹೋಲಿಕೆಯಲ್ಲಿ, “ಮನುಷ್ಯನ ಆಯುಷ್ಕಾಲವು” ಖಂಡಿತವಾಗಿಯೂ ಅಲ್ಪವಾಗಿದೆ—“ಹುಲ್ಲಿನಂತಿದೆ.” ಆದರೆ ದಾವೀದನು ಗಣ್ಯತಾಪೂರ್ವಕವಾಗಿ ಯೋಚಿಸುವುದು: “ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ಯುಗಯುಗಾಂತರಗಳ ವರೆಗೂ ಇರುತ್ತದೆ. ಆತನ ನಿಬಂಧನೆಗಳನ್ನು ಕೈಕೊಂಡು ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳುಮೊಮ್ಮಕ್ಕಳ ವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು.” (ಆದಿಕಾಂಡ 21:33; ಕೀರ್ತನೆ 103:15-18) ತನಗೆ ಭಯಪಡುವವರನ್ನು ಯೆಹೋವನು ಎಂದಿಗೂ ಮರೆಯುವುದಿಲ್ಲ. ತಕ್ಕ ಸಮಯದಲ್ಲಿ, ಆತನು ಅವರಿಗೆ ನಿತ್ಯ ಜೀವವನ್ನು ಕೊಡುವನು.—ಯೋಹಾನ 3:16; 17:3.
ಯೆಹೋವನ ರಾಜತ್ವಕ್ಕೆ ತನ್ನ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ, ದಾವೀದನು ಹೇಳುವುದು: “ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.” (ಕೀರ್ತನೆ 103:19) ಯೆಹೋವನ ರಾಜತ್ವವು ಒಂದು ಸಮಯದಲ್ಲಿ ಇಸ್ರಾಯೇಲ್ ರಾಜ್ಯದ ಮೂಲಕ ದೃಶ್ಯರೂಪದಲ್ಲಿ ತೋರಿಸಲ್ಪಟ್ಟಿತ್ತಾದರೂ, ಆತನ ಸಿಂಹಾಸನವು ವಾಸ್ತವದಲ್ಲಿ ಸ್ವರ್ಗದಲ್ಲಿದೆ. ಆತನು ಎಲ್ಲವನ್ನೂ ಸೃಷ್ಟಿಸಿರುವುದರಿಂದ ಯೆಹೋವನು ವಿಶ್ವದ ಪರಮಾಧಿಕಾರಿ ಪ್ರಭುವಾಗಿದ್ದಾನೆ ಮತ್ತು ತನ್ನ ಸ್ವಂತ ಉದ್ದೇಶಗಳಿಗನುಸಾರ ಸ್ವರ್ಗ ಮತ್ತು ಭೂಮಿಯಲ್ಲಿ ತನ್ನ ದೈವಿಕ ಚಿತ್ತವನ್ನು ನಡೆಸುತ್ತಾನೆ.
ದಾವೀದನು ಸ್ವರ್ಗೀಯ ದೇವದೂತರನ್ನೂ ಉತ್ತೇಜಿಸುತ್ತಾನೆ. ಅವನು ಹಾಡುವುದು: “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ. ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ. ಆತನ ರಾಜ್ಯದ ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ, ನನ್ನ ಮನವೇ, ಯೆಹೋವನನ್ನು ಕೊಂಡಾಡು [“ಸ್ತುತಿಸು,” NW].” (ಕೀರ್ತನೆ 103:20-22) ನಮ್ಮ ಪರವಾಗಿ ಯೆಹೋವನ ಪ್ರೀತಿದಯೆಯ ಕೃತ್ಯಗಳ ಕುರಿತಾದ ಪರ್ಯಾಲೋಚನೆಯು, ನಾವು ಕೂಡ ಆತನನ್ನು ಸ್ತುತಿಸುವಂತೆ ಪ್ರೇರಿಸಬೇಕಲ್ಲವೊ? ಖಂಡಿತವಾಗಿಯೂ! ದೇವರಿಗೆ ನಾವು ವೈಯಕ್ತಿಕವಾಗಿ ಸಲ್ಲಿಸುವ ಸ್ತುತಿಯ ಧ್ವನಿಯು, ನೀತಿವಂತ ದೇವದೂತರು ಒಳಗೂಡಿರುವ ಸ್ತುತಿಗಾರರ ಮಹಾ ಗಾಯಕತಂಡದ ಧ್ವನಿಯಲ್ಲಿ ಮರೆಯಾಗಿ ಹೋಗದೆಂದು ನಮಗೆ ನಿಶ್ಚಯವಿರಬಲ್ಲದು. ನಮ್ಮ ಸ್ವರ್ಗೀಯ ತಂದೆಯ ಕುರಿತಾಗಿ ಯಾವಾಗಲೂ ಒಳ್ಳೇದನ್ನು ಮಾತಾಡುತ್ತಾ, ನಾವು ಹೃತ್ಪೂರ್ವಕವಾಗಿ ಆತನನ್ನು ಸ್ತುತಿಸೋಣ. “ಓ ನನ್ನ ಪ್ರಾಣವೇ, ಯೆಹೋವನನ್ನು ಸ್ತುತಿಸು” ಎಂಬ ದಾವೀದನ ಮಾತುಗಳನ್ನು ನಾವು ಮನಸ್ಸಿಗೆ ಹಚ್ಚಿಕೊಳ್ಳೋಣ.
[ಅಧ್ಯಯನ ಪ್ರಶ್ನೆಗಳು]
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 23 ರಲ್ಲಿರುವ ಚಿತ್ರ]
ಯೆಹೋವನ ಪ್ರೀತಿದಯೆಯ ಕೃತ್ಯಗಳ ಕುರಿತು ದಾವೀದನು ಮನನಮಾಡಿದನು. ನೀವು ಮಾಡುತ್ತೀರೊ?