ಯೆಹೋವನ ಸೃಷ್ಟಿಯ ವೈಭವ
‘ಬೆಟ್ಟಗಳಿಗಿಂತಲೂ ತೇಜೋಮಯನು ನೀನು’
ಮೌಂಟ್ ಫೂಜಿಯ ಮೇಲಿನಿಂದ ಅರುಣೋದಯವಾಗುವುದನ್ನು ನೋಡುವುದು ಒಂದು ಅವಿಸ್ಮರಣೀಯ ಅನುಭವವಾಗಿದೆ. ಜ್ವಾಲೆಯ ವರ್ಣದ ಸೂರ್ಯನು ದಿಗಂತದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಶ್ವೇತವರ್ಣದ ಹಿಮದ ಮೇಲೂ ಬೂದುಬಣ್ಣದ ಶಿಲಾ ಪ್ರವಾಹದ ಬಂಡೆಯ ಮೇಲೂ ಬೆಳಕನ್ನು ಚೆಲ್ಲತೊಡಗುತ್ತಾನೆ. ಇನ್ನೊಂದು ದಿನವು ಆರಂಭಗೊಂಡಂತೆ, ಬೆಟ್ಟದ ಸುಸ್ಪಷ್ಟ ಛಾಯೆಯು ಪರ್ವತಗಳು ಮತ್ತು ಕಣಿವೆಗಳ ಮೇಲೆ ಅನೇಕ ಕಿಲೊಮೀಟರುಗಳ ವರೆಗೂ ಬೇಗನೆ ಹರಡಿಕೊಳ್ಳುತ್ತದೆ.
ಮೌಂಟ್ ಫೂಜಿಯಂತೆ—ಒಂದು ಕಾಲದಲ್ಲಿ “ಅತುಲ್ಯವಾದದ್ದು” ಎಂಬ ಅರ್ಥವುಳ್ಳ ಅಕ್ಷರಗಳಲ್ಲಿ ಬರೆಯಲ್ಪಡುತ್ತಿತ್ತು—ಭವ್ಯ ಪರ್ವತಗಳು ನಮ್ಮನ್ನು ಯಾವಾಗಲೂ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಅಷ್ಟೇಕೆ, ಅವುಗಳ ಗಾತ್ರದ ಮುಂದೆ ನಾವು ತೀರ ಕುಬ್ಜರಾಗಿಬಿಡಬಹುದು! ಬೆಟ್ಟಗುಡ್ಡಗಳ ಭವ್ಯತೆಯು ಎಂಥದ್ದೆಂದರೆ, ಇಬ್ಬನಿ ಹಾಗೂ ಮೋಡಗಳ ತೆರೆಯ ಮರೆಯಲ್ಲಿರುವ ಅತ್ಯುಚ್ಚ ಪರ್ವತಗಳು ದೇವದೇವತೆಗಳ ನಿವಾಸಸ್ಥಾನಗಳಾಗಿವೆ ಎಂದು ಅನೇಕರು ನಂಬಿದ್ದಾರೆ.
ಪರ್ವತ ಶಿಖರಗಳಿಂದ ನಿಜವಾಗಿಯೂ ಸ್ತುತಿಸಲ್ಪಡುವ ಏಕಮಾತ್ರ ದೇವರು, ಅವುಗಳ ಕೌಶಲಭರಿತ ಸೃಷ್ಟಿಕರ್ತನಾಗಿರುವ ಯೆಹೋವನೇ ಆಗಿದ್ದಾನೆ. ಆತನು ಮಾತ್ರವೇ ‘ಪರ್ವತಗಳನ್ನು ರಚಿಸಿದಾತನಾಗಿದ್ದಾನೆ.’ (ಆಮೋಸ 4:13) ಭೂಮಿಯ ಹೆಚ್ಚುಕಡಿಮೆ ನಾಲ್ಕನೇ ಒಂದು ಭಾಗವು ಬೆಟ್ಟಗುಡ್ಡಗಳಿಂದ ಆವೃತವಾಗಿದೆ, ಮತ್ತು ದೇವರು ನಮ್ಮ ಭೂಗ್ರಹವನ್ನು ಸೃಷ್ಟಿಸಿದಾಗ, ಕಟ್ಟಕಡೆಗೆ ನಯನಮನೋಹರವಾದ ಬೆಟ್ಟಗುಡ್ಡಗಳು ಹಾಗೂ ಪರ್ವತ ಶ್ರೇಣಿಗಳನ್ನು ಉಂಟುಮಾಡಿದಂಥ ಶಕ್ತಿಗಳನ್ನು ಉತ್ಪಾದಿಸಿದನು. (ಕೀರ್ತನೆ 95:4) ಉದಾಹರಣೆಗಾಗಿ, ಭೂಮಿಯೊಳಗಿನ ಪ್ರಚಂಡ ನೆಲದುಬ್ಬರಗಳಿಂದ ಹಾಗೂ ಭೂಮಿಯ ಹೊರಪದರದ ಭಾಗಗಳಲ್ಲಿ ಉಂಟಾದ ಚಲನೆಯಿಂದ, ಹಿಮಾಲಯ ಮತ್ತು ಆ್ಯಂಡಿಸ್ನ ದಟ್ಟವಾದ ಪರ್ವತ ಶಿಖರಗಳು ರೂಪಿಸಲ್ಪಟ್ಟಿವೆ ಎಂದು ನಂಬಲಾಗುತ್ತದೆ.
ಹೇಗೆ ಮತ್ತು ಏಕೆ ಪರ್ವತಗಳು ಅಸ್ತಿತ್ವಕ್ಕೆ ಬಂದವು ಎಂಬುದು ಮನುಷ್ಯಮಾತ್ರದವರಾದ ನಮಗೆ ಪೂರ್ಣವಾಗಿ ಅರ್ಥವಾಗುವುದಿಲ್ಲ. ವಾಸ್ತವದಲ್ಲಿ, ನೀತಿವಂತನಾದ ಯೋಬನಿಗೆ ಹಾಕಲ್ಪಟ್ಟ ಈ ಪ್ರಶ್ನೆಗಳನ್ನು ಉತ್ತರಿಸಲು ನಾವು ಅಶಕ್ತರಾಗಿದ್ದೇವೆ: “[ಯೆಹೋವನಾದ] ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? . . . ಭೂಲೋಕದ ಸುಣ್ಣಪಾದಗಳು ಯಾವದರಲ್ಲಿ ನೆಲೆಗೊಂಡವು?”—ಯೋಬ 38:4-7.
ಆದರೂ, ನಮ್ಮ ಜೀವನವು ಪರ್ವತಗಳ ಮೇಲೆ ಅವಲಂಬಿಸಿದೆ ಎಂಬುದು ನಮಗೆ ಗೊತ್ತು. ಇವುಗಳನ್ನು ನೈಸರ್ಗಿಕ ಜಲಶೇಖರಣಾ ಸ್ಥಳಗಳೆಂದು ಕರೆಯಲಾಗುತ್ತದೆ. ಏಕೆಂದರೆ ಎಲ್ಲಾ ಪ್ರಮುಖ ನದಿಗಳಿಗೆ ಪರ್ವತ ಮೂಲಗಳಿಂದ ನೀರು ದೊರಕುತ್ತದೆ ಮತ್ತು ಭೂಮಿಯಲ್ಲಿರುವ ಜನರಲ್ಲಿ ಅರ್ಧದಷ್ಟು ಮಂದಿ ನೀರಿಗಾಗಿ ಪರ್ವತಗಳನ್ನು ಅವಲಂಬಿಸಿದ್ದಾರೆ. (ಕೀರ್ತನೆ 104:13) ನ್ಯೂ ಸೈಂಟಿಸ್ಟ್ ಎಂಬ ಪತ್ರಿಕೆಗನುಸಾರ, “ಲೋಕದ 20 ಪ್ರಮುಖ ಆಹಾರ ಸಸ್ಯಗಳಲ್ಲಿ ಆರು ಸಸ್ಯಗಳಿಗೆ ಪರ್ವತಗಳೇ ಉಗಮಸ್ಥಾನವಾಗಿವೆ.” ದೇವರ ವಾಗ್ದತ್ತ ಹೊಸ ಲೋಕದಲ್ಲಿ, ಜೀವಿಪರಿಸ್ಥಿತಿಯು ಸಮತೂಕವಾಗಿರುವ ಪರಿಸ್ಥಿತಿಗಳ ಕೆಳಗೆ, ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿರುವುದು.’—ಕೀರ್ತನೆ 72:16; 2 ಪೇತ್ರ 3:13.
ಅನೇಕರಿಗಾದರೋ ಪರ್ವತಗಳು ಎಂದ ತಕ್ಷಣ ಯೂರೋಪಿಯನ್ ಆ್ಯಲ್ಪ್ಸ್ ಪರ್ವತಗಳು ನೆನಪಿಗೆ ಬರುತ್ತವೆ. ಇಲ್ಲಿ ತೋರಿಸಲ್ಪಟ್ಟಿರುವ ಮೌಂಟ್ ಸಿವೆಟವನ್ನೂ ಒಳಗೊಂಡು ಅನೇಕ ಪರ್ವತಗಳು, ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದಕ್ಕೆ ಅದ್ಭುತಕರವಾದ ಸಾಕ್ಷ್ಯವನ್ನು ಒದಗಿಸುತ್ತವೆ. (ಕೀರ್ತನೆ 98:8) ಇವು “ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವ”ನಾದ ಯೆಹೋವನನ್ನು ಸ್ತುತಿಸುತ್ತವೆ.—ಕೀರ್ತನೆ 65:6.a
ಆ್ಯಲ್ಪ್ಸ್ ಪರ್ವತಗಳ ಮಂಜುಗಡ್ಡೆಯಿಂದಾವೃತವಾದ ಶಿಖರಗಳು ಮತ್ತು ಬೆಟ್ಟಗಳ ಸಾಲುಗಳು, ಹಿಮದಿಂದಾವೃತವಾದ ಇಳಿಜಾರು ಪ್ರದೇಶಗಳು, ಕಣಿವೆಗಳು ಹಾಗೂ ಸರೋವರಗಳು, ಮತ್ತು ಹುಲ್ಲುಗಾವಲುಗಳ ವೈಭವವು ನಿಜವಾಗಿಯೂ ಭಯಭಕ್ತಿಪ್ರೇರಕವಾಗಿದೆ. ಅರಸನಾದ ದಾವೀದನು ಯೆಹೋವನನ್ನು ‘ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುವಾತನನ್ನಾಗಿ’ ಗುರುತಿಸಿದನು.—ಕೀರ್ತನೆ 147:8.
ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಪ್ರದೇಶಗಳು—ಚೀನಾದ ಗ್ವೀಲಿನ್ನಲ್ಲಿರುವಂಥ ಈ ಬೆಟ್ಟಗಳಂತೆ—ಆ್ಯಲ್ಪ್ಸ್ಗಳಿಗಿಂತ ಕಡಿಮೆ ನಯನಮನೋಹರವಾಗಿ ಕಂಡುಬರುತ್ತವಾದರೂ, ಇವು ಸಹ ಅಪೂರ್ವವಾದ ರೀತಿಯಲ್ಲಿ ಕಣ್ಮನಗಳನ್ನು ತಣಿಸುತ್ತವೆ. ಲೈ ನದಿಯ ಉದ್ದಕ್ಕೂ ಇರುವ ಸುಣ್ಣದಕಲ್ಲಿನ ಶಿಖರಗಳು ತಮ್ಮ ಅಸಾಧಾರಣವಾದ ಸೊಬಗಿನಿಂದ ಸಂದರ್ಶಕರ ಮನಸ್ಸನ್ನು ಸೂರೆಮಾಡುತ್ತವೆ. ಈ ಮಂಜುಗವಿದ ಬೆಟ್ಟಗುಡ್ಡಗಳ ಮೂಲಕ ಹರಿಯುವ ತಿಳಿಯಾದ ನೀರನ್ನು ಗಮನಿಸುವುದು, ಕೀರ್ತನೆಗಾರನ ಈ ಮಾತುಗಳನ್ನು ಒಬ್ಬನ ಮನಸ್ಸಿಗೆ ತರಬಹುದು: ‘[ಯೆಹೋವನು] ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತಾನೆ; ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ.’—ಕೀರ್ತನೆ 104:10.
ನಾವು ಬೆಟ್ಟಗುಡ್ಡಗಳ ಮನೋಹರತೆಯಿಂದ ಪ್ರಭಾವಿತರಾಗುವುದು ಸೂಕ್ತವಾದದ್ದಾಗಿದೆ, ಏಕೆಂದರೆ ಅವು ಮಾನವಕುಲದ ಹಿತಕ್ಕಾಗಿ ಮತ್ತು ಆನಂದಕ್ಕಾಗಿ ಸೃಷ್ಟಿಕರ್ತನು ಮಾಡಿರುವ ಪ್ರೀತಿಭರಿತ ಏರ್ಪಾಡಿನ ಭವ್ಯ ಭಾಗವಾಗಿವೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಬೆಟ್ಟಗುಡ್ಡಗಳು ಎಷ್ಟೇ ಅದ್ಭುತಕರವಾಗಿ ಕಂಡುಬರುವುದಾದರೂ, ಅವೆಂದಿಗೂ ಯೆಹೋವನ ವೈಭವಕ್ಕೆ ಸರಿಸಾಟಿಯಾಗಿರಲು ಸಾಧ್ಯವೇ ಇಲ್ಲ. ಆತನು ನಿಜವಾಗಿಯೂ ‘ಬೆಟ್ಟಗಳಿಗಿಂತಲೂ ತೇಜೋಮಯನಾಗಿದ್ದಾನೆ.’—ಕೀರ್ತನೆ 76:4.
[ಪಾದಟಿಪ್ಪಣಿ]
a ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ನ (ಇಂಗ್ಲಿಷ್) ಮಾರ್ಚ್/ಏಪ್ರಿಲ್ ತಿಂಗಳುಗಳನ್ನು ನೋಡಿ.
[ಪುಟ 9ರಲ್ಲಿರುವ ಚೌಕ/ಚಿತ್ರ]
ಲೋಕದ ಜನಸಂಖ್ಯೆಯಲ್ಲಿ ಹತ್ತು ಪ್ರತಿಶತದಷ್ಟು ಮಂದಿ ಪರ್ವತಮಯ ಕ್ಷೇತ್ರಗಳಲ್ಲಿ ವಾಸಿಸುತ್ತಾರೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವವರಿಗೆ ಇದೊಂದು ದುಸ್ಸಾಧ್ಯ ಅಡಚಣೆಯಾಗಿ ಕಂಡುಬರುವುದಿಲ್ಲ. ಅತಿ ಎತ್ತರವಾಗಿರುವ ಪ್ರದೇಶಗಳಲ್ಲಿ ಈ ಕ್ರೈಸ್ತ ಶುಶ್ರೂಷಕರು ತುಂಬ ಕಾರ್ಯಮಗ್ನರಾಗಿದ್ದಾರೆ. ಮತ್ತು “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!”—ಯೆಶಾಯ 52:7.
“ಉನ್ನತವಾದ ಪರ್ವತಗಳು ಬೆಟ್ಟದ ಮೇಕೆಗಳಿಗೆ ಆಶ್ರಯಸ್ಥಾನಗಳಾಗಿವೆ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 104:18, NW) ಎಲ್ಲಾ ಪರ್ವತ ನಿವಾಸಿಗಳಲ್ಲಿ, ಅತ್ಯಂತ ಮನೋಹರವಾದ ಕೊಂಬುಗಳುಳ್ಳ ನೂಬಿಯನ್ ಮೇಕೆಯಂಥ ಬೆಟ್ಟದ ಮೇಕೆಗಳು ಎಂದಿಗೂ ಮುಗ್ಗರಿಸದ ರೀತಿಯಲ್ಲಿ ಹೆಜ್ಜೆಯಿರಿಸುವ ಪ್ರಾಣಿಗಳಾಗಿವೆ. ಅವು ದಾಟಲು ಅಸಾಧ್ಯವಾಗಿ ತೋರುವಷ್ಟು ಕಡಿದಾದ ಬಂಡೆಚಾಚುಗಳ ಉದ್ದಕ್ಕೂ ನಡೆದಾಡುವ ಸಾಹಸವನ್ನು ಮಾಡುತ್ತವೆ. ಬೆಟ್ಟದ ಮೇಕೆಯು ಅತಿ ದುರ್ಗಮವಾದ ಸ್ಥಳಗಳಲ್ಲಿ ಜೀವಿಸಲು ಸುಸಜ್ಜಿತವಾಗಿದೆ. ಇದಕ್ಕೆ ಒಂದು ಕಾರಣವು, ಅದರ ಗೊರಸುಗಳ ರಚನೆಯೇ ಆಗಿದೆ. ಮೇಕೆಯ ಭಾರಕ್ಕೆ ಅದರ ಗೊರಸಿನ ಬಿರುಕು ಅಗಲವಾಗುತ್ತದೆ ಮತ್ತು ಇದು ಆ ಪ್ರಾಣಿಯು ಕಡಿದಾದ ಬಂಡೆಚಾಚುಗಳ ಮೇಲೆ ನಿಂತಿರುವಾಗ ಅಥವಾ ಓಡಾಡುತ್ತಿರುವಾಗ ಅದರ ಕಾಲಿಗೆ ಬಲವಾದ ಹಿಡಿತವನ್ನು ಕೊಡುತ್ತದೆ. ನಿಜವಾಗಿಯೂ ಬೆಟ್ಟದ ಮೇಕೆಯು ಅತ್ಯುತ್ತಮ ವಿನ್ಯಾಸದ ನಾಯಕಕೃತಿಯಾಗಿದೆ!
[ಪುಟ 9ರಲ್ಲಿರುವ ಚಿತ್ರ]
ಜಪಾನಿನ ಹಾನ್ಶೂ ದ್ವೀಪದಲ್ಲಿರುವ ಮೌಂಟ್ ಫೂಜಿ