ಯೆಹೋವನ “ವಚನವು” ನಿಮ್ಮನ್ನು ಕಾಯಲಿ
ಮ್ಯಾರತನ್ಎಂಬ ಸ್ಥಳದಲ್ಲಿ, ಸಾ.ಶ.ಪೂ. 490ರಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ, 10 ಸಾವಿರದಿಂದ 20 ಸಾವಿರ ಮಂದಿ ಅಥೇನೆಯವರು ಒಂದು ಲಕ್ಷ ಪುರುಷರನ್ನು ಹೊಂದಿದ್ದ ಪಾರಸಿಯದ ಸೈನ್ಯವನ್ನು ಎದುರಿಸಿದರು. ಗ್ರೀಕರು ಉಪಯೋಗಿಸಿದ ಯುದ್ಧತಂತ್ರದಲ್ಲಿ ಒಂದು ಪಂಕ್ತಿವ್ಯೂಹವಾಗಿತ್ತು—ಇದು ಒತ್ತಾಗಿ ವ್ಯೂಹಗೂಡಿಸಿದ ಪದಾತಿ ತಂಡವಾಗಿತ್ತು. ಈ ತಂಡದ ಗುರಾಣಿಗಳು ಅಭೇದ್ಯವಾದ ಲೋಹದ ಗೋಡೆಯಂತೆ ತೋರುತ್ತಿದ್ದವು, ಮತ್ತು ಅದರ ಮಧ್ಯದಿಂದ ಈಟಿಗಳು ನೇರವಾಗಿ ಚಾಚಿದ್ದವು. ಅಥೇನೆಯವರು ಈ ಪಂಕ್ತಿವ್ಯೂಹ ತಂತ್ರವನ್ನು ಉಪಯೋಗಿಸಿದ್ದರಿಂದಾಗಿ ಅತಿ ಹೆಚ್ಚು ಪ್ರಮಾಣದಲ್ಲಿದ್ದ ಪಾರಸಿಯದ ಸೈನ್ಯದ ಮೇಲೆ ಜಯಸಾಧಿಸಿದರು.
ಸತ್ಯ ಕ್ರೈಸ್ತರು ಒಂದು ಆಧ್ಯಾತ್ಮಿಕ ಹೋರಾಟದಲ್ಲಿ ಒಳಗೂಡಿದ್ದಾರೆ. ಅವರ ಎದುರಾಳಿಗಳೋ ಅತಿ ಬಲಶಾಲಿಗಳು—ಅವರು ಸದ್ಯದ ದುಷ್ಟ ವ್ಯವಸ್ಥೆಯ ಅಗೋಚರವಾದ ನಾಯಕರಾಗಿದ್ದಾರೆ. ಅವರನ್ನು ‘ಈ ಅಂಧಕಾರದ ಲೋಕಾಧಿಪತಿಗಳು, ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆ’ ಎಂದು ಬೈಬಲಿನಲ್ಲಿ ವರ್ಣಿಸಲಾಗಿದೆ. (ಎಫೆಸ 6:12; 1 ಯೋಹಾನ 5:19) ದೇವಜನರು ಜಯವನ್ನು ಸಾಧಿಸುತ್ತಿದ್ದಾರೆ ನಿಜ, ಆದರೆ ಅವರ ಸ್ವಂತ ಶಕ್ತಿಯಿಂದಲ್ಲ. ಎಲ್ಲ ಕೀರ್ತಿಯು, ಅವರನ್ನು ಸಂರಕ್ಷಿಸಿ ಉಪದೇಶಿಸುವ ಯೆಹೋವನಿಗೆ ಸಲ್ಲುತ್ತದೆ. ಈ ವಿಚಾರವನ್ನು ಕೀರ್ತನೆ 18:30 ಹೀಗೆ ತಿಳಿಸುತ್ತದೆ: “ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.”
ಹೌದು, ಪವಿತ್ರ ಶಾಸ್ತ್ರಗಳಲ್ಲಿ ಅಡಕವಾಗಿರುವ ತನ್ನ ಶುದ್ಧ ‘ವಚನದ’ ಮೂಲಕ ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಆಧ್ಯಾತ್ಮಿಕ ಹಾನಿಯಿಂದ ತಪ್ಪಿಸುವ ಗುರಾಣಿಯಂತಿದ್ದಾನೆ. (ಕೀರ್ತನೆ 19:7-11; 119:93) ದೇವರ ವಾಕ್ಯದಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ವಿವೇಕದ ಕುರಿತು ಸೊಲೊಮೋನನು ಬರೆದುದು: “ಜ್ಞಾನ [“ವಿವೇಕ,” NW]ವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವದು, ಪ್ರೀತಿಸಿದರೆ, ನಿನ್ನನ್ನು ಕಾಯುವದು.” (ಜ್ಞಾನೋಕ್ತಿ 4:6; ಪ್ರಸಂಗಿ 7:12) ದೈವಿಕ ವಿವೇಕವು ನಮ್ಮನ್ನು ಹೇಗೆ ಹಾನಿಯಿಂದ ಕಾಪಾಡುವುದು? ಪುರಾತನ ಇಸ್ರಾಯೇಲಿನ ಉದಾಹರಣೆಯನ್ನು ಪರಿಗಣಿಸಿರಿ.
ದೈವಿಕ ವಿವೇಕದಿಂದ ಸಂರಕ್ಷಿಸಲ್ಪಟ್ಟ ಜನರು
ಯೆಹೋವನ ಧರ್ಮಶಾಸ್ತ್ರವು ಇಸ್ರಾಯೇಲ್ಯರ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಅವರನ್ನು ಸಂರಕ್ಷಿಸಿ ಮಾರ್ಗದರ್ಶಿಸಿತು. ಉದಾಹರಣೆಗೆ, ಆಹಾರಪಥ್ಯ, ಆರೋಗ್ಯ ಸೂತ್ರಗಳು ಮತ್ತು ಸಂಪರ್ಕ ನಿಷೇಧಕ್ಕೆ ಸಂಬಂಧಿಸಿದ ಕಟ್ಟಳೆಗಳು ಅವರನ್ನು, ಅನೇಕ ದೇಶಗಳನ್ನು ಧ್ವಂಸಮಾಡುತ್ತಿದ್ದ ನಾನಾ ರೋಗಗಳಿಂದ ಸಂರಕ್ಷಿಸಿದವು. ಆದರೆ 19ನೇ ಶತಮಾನದಲ್ಲಿ ಏಕಾಣುಜೀವಿಗಳ ಅಸ್ತಿತ್ವವನ್ನು ಕಂಡುಕೊಂಡ ಮೇಲೆಯೇ ವಿಜ್ಞಾನವು ದೇವರ ಧರ್ಮಶಾಸ್ತ್ರದ ಮಟ್ಟವನ್ನು ತಲಪಿತು. ಭೂ ಸ್ವಾಮ್ಯ, ಪುನಃ ಕೊಂಡುಕೊಳ್ಳುವ ಪದ್ಧತಿ, ಸಾಲ ಬಿಡುಗಡೆ ಮತ್ತು ವಿಪರೀತ ಬಡ್ಡಿಗೆ ಸಾಲ ಕೊಡುವುದರ ಬಗ್ಗೆ ಕೊಡಲ್ಪಟ್ಟಿದ್ದ ನಿಯಮಗಳು ಸಾಮಾಜಿಕ ಪ್ರಯೋಜನಗಳನ್ನು ತಂದವು. ಇದರಿಂದಾಗಿ ಅಲ್ಲಿ ಸುದೃಢವಾದ ಸಮಾಜ ಮತ್ತು ನೀತಿಯುತವಾದ ಆರ್ಥಿಕ ಸ್ಥಿತಿ ನೆಲಸಿತ್ತು. (ಧರ್ಮೋಪದೇಶಕಾಂಡ 7:12, 15; 15:4, 5) ಯೆಹೋವನ ಧರ್ಮಶಾಸ್ತ್ರವು ಇಸ್ರಾಯೇಲ್ ಮಣ್ಣಿನ ಸುಕ್ಷೇಮವನ್ನೂ ಕಾಪಾಡಿತು! (ವಿಮೋಚನಕಾಂಡ 23:10, 11) ಸುಳ್ಳು ಆರಾಧನೆಯ ವಿರುದ್ಧ ಕೊಡಲ್ಪಟ್ಟಿದ್ದ ಆಜ್ಞೆಗಳು ಜನರನ್ನು ದೆವ್ವಗಳ ಕಾಟ, ಶಿಶು ಬಲಿ ಮತ್ತು ಇತರ ಅನೇಕ ಕೆಡುಕಿನಿಂದ ಸಂರಕ್ಷಿಸಿ ಆಧ್ಯಾತ್ಮಿಕವಾಗಿ ಕಾಪಾಡುವುದರೊಂದಿಗೆ, ನಿರ್ಜೀವ ವಿಗ್ರಹಗಳನ್ನು ನಮಿಸುವ ಹೀನಾಯ ಕೃತ್ಯದಿಂದ ತಪ್ಪಿಸಿತು.—ವಿಮೋಚನಕಾಂಡ 20:3-5; ಕೀರ್ತನೆ 115:4-8.
ಸ್ಪಷ್ಟವಾಗಿಯೇ, ಯೆಹೋವನ “ವಚನವು” ಇಸ್ರಾಯೇಲ್ಯರಿಗೆ “ನಿರರ್ಥಕ” ಶಬ್ದದಂತಿರಲಿಲ್ಲ; ಅದಕ್ಕೆ ಕಿವಿಗೊಟ್ಟವರಿಗೆ ಅದು ಜೀವವನ್ನೂ ದೀರ್ಘಾಯುಷ್ಯವನ್ನೂ ಕೊಟ್ಟಿತು. (ಧರ್ಮೋಪದೇಶಕಾಂಡ 32:47) ಇಂದು ಕ್ರೈಸ್ತರು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿಲ್ಲವಾದರೂ, ಆ ಮಾತುಗಳು ಯೆಹೋವನ ವಿವೇಕಯುತ ವಚನಗಳಿಗೆ ಕಿವಿಗೊಡುವವರ ವಿಷಯದಲ್ಲಿ ಸತ್ಯವಾಗಿವೆ. (ಗಲಾತ್ಯ 3:24, 25; ಇಬ್ರಿಯ 8:8) ವಾಸ್ತವದಲ್ಲಿ, ಒಂದು ನಿಯಮಾವಳಿಯ ಬದಲಿಗೆ ಕ್ರೈಸ್ತರು ತಮ್ಮನ್ನು ಮಾರ್ಗದರ್ಶಿಸಿ ಕಾಪಾಡುವ ವ್ಯಾಪಕವಾದ ಬೈಬಲ್ ಮೂಲತತ್ತ್ವಗಳನ್ನು ಹೊಂದಿದ್ದಾರೆ.
ಮೂಲತತ್ತ್ವಗಳಿಂದ ಸಂರಕ್ಷಿಸಲ್ಪಟ್ಟ ಜನ
ನಿಯಮಗಳನ್ನು ವಿಸ್ತಾರವಾಗಿ ಅನ್ವಯಿಸಲು ಸಾಧ್ಯವಿರಲಿಕ್ಕಿಲ್ಲ ಮತ್ತು ಅವು ತಾತ್ಕಾಲಿಕವೂ ಆಗಿರಬಹುದು. ಆದರೆ ಬೈಬಲ್ ಮೂಲತತ್ತ್ವಗಳು ಮೂಲಭೂತ ಸತ್ಯಗಳಾಗಿದ್ದು, ಸಾಮಾನ್ಯವಾಗಿ ವ್ಯಾಪಕವಾದ ಮತ್ತು ಶಾಶ್ವತವಾದ ಅನ್ವಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಯಾಕೋಬ 3:17ರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವವನ್ನು ಪರಿಗಣಿಸಿರಿ. ಅದು ಭಾಗಶಃ ಹೇಳುವುದು: “ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು.” ಈ ಮೂಲಭೂತ ಸತ್ಯವು ಇಂದು ದೇವಜನರಿಗೆ ಹೇಗೆ ಒಂದು ಗುರಾಣಿಯಂತೆ ಪರಿಣಮಿಸಬಲ್ಲದು?
ಪರಿಶುದ್ಧವಾಗಿರುವುದು ಎಂಬುದು ನೈತಿಕ ಶುದ್ಧತೆಗೆ ಸೂಚಿಸುತ್ತದೆ. ಆದುದರಿಂದ, ಈ ಪರಿಶುದ್ಧತೆಯನ್ನು ಅಮೂಲ್ಯವೆಂದೆಣಿಸುವವರು ಅನೈತಿಕತೆಯನ್ನು ಮಾತ್ರವಲ್ಲದೆ, ಅದಕ್ಕೆ ನಡೆಸುವಂಥ ವಿಷಯಗಳ ಸಮೇತ ಪ್ರಣಯಾತ್ಮಕ ಭ್ರಮೆಗಳು ಮತ್ತು ಅಶ್ಲೀಲ ಸಾಹಿತ್ಯವನ್ನು ತ್ಯಜಿಸುತ್ತಾರೆ. (ಮತ್ತಾಯ 5:28) ತದ್ರೀತಿಯಲ್ಲಿ, ಯಾಕೋಬ 3:17ರ ಮೂಲತತ್ತ್ವವನ್ನು ಮನಸ್ಸಿಗೆ ಹಚ್ಚಿಕೊಂಡಿರುವ ಪ್ರಣಯಾಚರಣೆಯನ್ನು ಮಾಡುತ್ತಿರುವಂಥ ಹುಡುಗ ಹುಡುಗಿಯರು, ಆತ್ಮನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡಬಹುದಾದ ನಿಕಟವರ್ತನೆಯನ್ನು ತ್ಯಜಿಸುತ್ತಾರೆ. ಅವರು ತತ್ತ್ವ ಪ್ರೇಮಿಗಳಾಗಿರುವುದರಿಂದ, ದೇವರ ನಿಯಮದ ನೇರವಾದ ಉಲ್ಲಂಘನೆಯು ಒಳಗೂಡಿರದ ವರೆಗೆ ತಮ್ಮ ನಡತೆಯು ಯೆಹೋವನಿಗೆ ಮೆಚ್ಚಿಗೆಯಾಗಿದೆ ಎಂದು ಯೋಚಿಸಿ ಪರಿಶುದ್ಧತೆಯಿಂದ ದೂರ ತೇಲಿಹೋಗುವುದಿಲ್ಲ. ಯೆಹೋವನು ‘ಹೃದಯದಲ್ಲಿ ಏನಿದೆ ಎಂದು ನೋಡುತ್ತಾನೆ’ ಮತ್ತು ಅದಕ್ಕೆ ತಕ್ಕ ಹಾಗೆ ಕ್ರಿಯೆಗೈಯುತ್ತಾನೆ ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. (1 ಸಮುವೇಲ 16:7; 2 ಪೂರ್ವಕಾಲವೃತ್ತಾಂತ 16:9) ಇಂತಹ ವಿವೇಕಿಗಳು ಇಂದು ವ್ಯಾಪಕವಾಗಿರುವ ಲೈಂಗಿಕವಾಗಿ ರವಾನಿಸಲ್ಪಡುವ ಅನೇಕ ರೋಗಗಳಿಂದ ತಮ್ಮ ದೇಹವನ್ನು ರಕ್ಷಿಸಿಕೊಳ್ಳುತ್ತಾರೆ ಮತ್ತು ತಮ್ಮ ಮಾನಸಿಕ ಹಾಗೂ ಭಾವನಾತ್ಮಕ ಸುಕ್ಷೇಮವನ್ನು ಕಾಪಾಡಿಕೊಳ್ಳುತ್ತಾರೆ.
ದೈವಿಕ ವಿವೇಕವು “ಸಮಾಧಾನಕರವಾದದ್ದು” ಎಂದು ಸಹ ಯಾಕೋಬ 3:17 ಹೇಳುತ್ತದೆ. ನಮ್ಮ ಹೃದಯಗಳಲ್ಲಿ ಹಿಂಸಾತ್ಮಕ ಮನೋಭಾವವನ್ನು ನಾಟಿಸುವ ಮೂಲಕ ಸೈತಾನನು ನಮ್ಮನ್ನು ಯೆಹೋವನಿಂದ ವಿಮುಖಗೊಳಿಸಲು ಪ್ರಯತ್ನಿಸುತ್ತಾನೆ ಎಂಬುದನ್ನು ನಾವು ತಿಳಿದಿದ್ದೇವೆ. ಅವನಿದನ್ನು ಭಾಗಶಃ ಸಂದೇಹಾಸ್ಪದವಾದ ಸಾಹಿತ್ಯ, ಚಲನಚಿತ್ರಗಳು, ಸಂಗೀತ ಮತ್ತು ಕಂಪ್ಯೂಟರ್ ಆಟಗಳನ್ನು ಉಪಯೋಗಿಸುವ ಮೂಲಕ ಮಾಡುತ್ತಾನೆ. ಇಂತಹ ಕೆಲವು ಕಂಪ್ಯೂಟರ್ ಆಟಗಳು, ಆಟಗಾರರು ಯೋಚಿಸಲಸಾಧ್ಯವಾದ ಭೀಕರತೆಗಳನ್ನು ಮತ್ತು ಕಗ್ಗೊಲೆಯನ್ನು ಮಾಡುತ್ತಿದ್ದಾರೋ ಎಂಬಂಥ ಭಾವನೆಯನ್ನು ಹುಟ್ಟಿಸುತ್ತವೆ! (ಕೀರ್ತನೆ 11:5) ಸೈತಾನನು ಇದರಲ್ಲಿ ಯಶಸ್ಸನ್ನು ಗಳಿಸುತ್ತಿದ್ದಾನೆ ಎಂಬುದಕ್ಕೆ, ಇಂದು ಹೆಚ್ಚು ಹೆಚ್ಚಾಗಿ ಬೆಳೆಯುತ್ತಿರುವ ಹಿಂಸಾತ್ಮಕ ಅಪರಾಧಗಳು ಸಾಕ್ಷ್ಯವಾಗಿವೆ. ಇಂತಹ ಅಪರಾಧಗಳ ಕುರಿತು, ಕೆಲವು ವರ್ಷಗಳ ಹಿಂದೆ ದ ಸಿಡ್ನಿ ಮಾರ್ನಿಂಗ್ ಹೆರಲ್ಡ್ ಎಂಬ ಆಸ್ಟ್ರೇಲಿಯದ ವಾರ್ತಾಪತ್ರಿಕೆಯು “ಸರಣಿ ಕೊಲೆಗಾರ” ಎಂಬ ಶಬ್ದವನ್ನು ರಚಿಸಿದ ರಾಬರ್ಟ್ ರೆಸ್ಲರ್ ಎಂಬ ವ್ಯಕ್ತಿಯ ಮಾತುಗಳನ್ನು ಉಲ್ಲೇಖಿಸಿತು. 1970ಗಳಲ್ಲಿ ತಾವು ಇಂಟರ್ವ್ಯೂ ಮಾಡಿದ ಕೊಲೆಗಾರರು, “ಇಂದಿನ ಅಶ್ಲೀಲ ಸಾಹಿತ್ಯದಷ್ಟು ಹೇಯವಾಗಿರದಿದ್ದ” ಕಾಮ ಪ್ರಚೋದಕ ಸಾಹಿತ್ಯದಿಂದ ಕಾವೇರಿದ್ದರು ಎಂದು ರೆಸ್ಲರ್ ತಿಳಿಸಿದರು. ಆದುದರಿಂದ, “ಭವಿಷ್ಯವು ಅಷ್ಟು ಆಶಾದಾಯಕವಾಗಿಲ್ಲ—ಸರಣಿ ಕೊಲೆಗಾರರು ಸರಸರನೆ ಬೆಳೆಯುವ ಯುಗವು ಅದಾಗಿರುವುದು” ಎಂದು ರೆಸ್ಲರ್ ಅಭಿಪ್ರಾಯಪಟ್ಟರು.
ವಾಸ್ತವದಲ್ಲಿ, ಆ ವಾರ್ತಾ ವಿಷಯವು ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ, ಬಂದೂಕುಧಾರಿಯಾದ ಒಬ್ಬ ಮನುಷ್ಯನು ಸ್ಕಾಟ್ಲಂಡ್ನ ಡನ್ಬ್ಲೇನ್ನಲ್ಲಿರುವ ಒಂದು ಕಿಂಡರ್ಗಾರ್ಟ್ನ್ ಶಾಲೆಯಲ್ಲಿದ್ದ 16 ಶಿಶುಗಳು ಮತ್ತು ಅವರ ಶಿಕ್ಷಕಿಯನ್ನು ಕೊಂದುಹಾಕಿದ ಮೇಲೆ ತನ್ನನ್ನೇ ಕೊಂದುಕೊಂಡನು. ಮುಂದಿನ ತಿಂಗಳು ಹುಚ್ಚನಂತೆ ವರ್ತಿಸಿದ ಮತ್ತೊಬ್ಬ ಬಂದೂಕುಧಾರಿಯು ಆಸ್ಟ್ರೇಲಿಯದ ಪೋರ್ಟ್ ಆರ್ಥರ್ನಲ್ಲಿರುವ ಪ್ರಶಾಂತವಾದ ಟಾಸ್ಮೇನ್ಯ ಪಟ್ಟಣದಲ್ಲಿದ್ದ 32 ವ್ಯಕ್ತಿಗಳನ್ನು ದಯೆದಾಕ್ಷಿಣ್ಯವಿಲ್ಲದೆ ಕೊಂದುಹಾಕಿದನು. ಇತ್ತೀಚಿನ ವರ್ಷಗಳಲ್ಲಿ, ಯುನೈಟಡ್ ಸ್ಟೇಟ್ಸ್ ಅನ್ನು ಅಲುಗಾಡಿಸಿರುವ ಅನೇಕ ಶಾಲಾ ಕಗ್ಗೊಲೆಗಳು, ಅನೇಕ ಅಮೇರಿಕನ್ನರು ‘ಹೀಗೇಕೆ ಆಯಿತು?’ ಎಂದು ಕೇಳುವಂತೆ ಮಾಡಿದೆ. 2001ರ ಜೂನ್ ತಿಂಗಳಲ್ಲಿ, ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡಿದ್ದ ಒಬ್ಬ ವ್ಯಕ್ತಿ ಒಂದು ಶಾಲೆಯನ್ನು ಪ್ರವೇಶಿಸಿ ಮೊದಲನೇ ಮತ್ತು ಎರಡನೇ ತರಗತಿಗಳಲ್ಲಿ ಓದುತ್ತಿದ್ದ 8 ಮಂದಿ ಮಕ್ಕಳನ್ನು ಗುದ್ದಿ ಸಾಯಿಸುತ್ತಾ 15 ಮಂದಿ ವ್ಯಕ್ತಿಗಳ ಮೇಲೆ ಚಾಕುಪ್ರಹಾರ ಮಾಡಿದಾಗ ಜಪಾನ್ ವಿಶ್ವವಿಖ್ಯಾತ ಸುದ್ದಿಯನ್ನು ಮಾಡಿತು. ಇಂತಹ ದುಷ್ಕೃತ್ಯಗಳ ಹಿಂದೆ ಜಟಿಲವಾದ ಅನೇಕ ಕಾರಣಗಳಿರಬಹುದು ಎಂಬುದು ಖಚಿತವಾಗಿರುವುದಾದರೂ, ಸಮೂಹ ಮಾಧ್ಯಮದ ಹಿಂಸಾಚಾರವು ಇದಕ್ಕೆ ಇಂಬುಕೊಡುತ್ತಿದೆ ಎಂಬುದು ಹೆಚ್ಚೆಚ್ಚಾಗಿ ತೋರಿಬರುತ್ತಿದೆ. “60 ಸೆಕೆಂಡುಗಳ ಒಂದು ಜಾಹೀರಾತು ಬೃಹತ್ಪ್ರಮಾಣದಲ್ಲಿ ಸರಕುಗಳನ್ನು ಮಾರಾಟ ಮಾಡುವುದಾದರೆ, ಬಹುಕೋಟಿ ರೂಪಾಯಿಗಳ ವೆಚ್ಚದಲ್ಲಿ ತೆಗೆಯಲ್ಪಟ್ಟ ಎರಡು ತಾಸಿನ ಚಲನಚಿತ್ರವು ಮನೋಭಾವಗಳನ್ನು ರೂಪಿಸುವುದಿಲ್ಲ ಎಂದು ನನಗೆ ಹೇಳಬೇಡಿ” ಎಂದು ಆಸ್ಟ್ರೇಲಿಯದ ಅಂಕಣಗಾರನಾದ ಫಿಲಿಪ್ ಆ್ಯಡಮ್ಸ್ ಬರೆದರು. ಆಸಕ್ತಿಕರವಾಗಿ, ಪೋರ್ಟ್ ಆರ್ಥರ್ನ ಬಂದೂಕುಧಾರಿಯ ಮನೆಯಲ್ಲಿ ಪೊಲೀಸರು 2,000 ಹಿಂಸಾತ್ಮಕ ಮತ್ತು ಕಾಮ ಪ್ರಚೋದಕ ವಿಡಿಯೋಗಳನ್ನು ವಶಪಡಿಸಿಕೊಂಡರು.
ಬೈಬಲ್ ಮೂಲತತ್ತ್ವಗಳಿಗೆ ಅಂಟಿಕೊಳ್ಳುವವರು, ಹಿಂಸಾತ್ಮಕ ವಿಷಯಗಳ ಕಡೆಗೆ ಒಲವನ್ನು ಬೆಳೆಸಿಕೊಳ್ಳುವಂತೆ ಮಾಡುವ ಎಲ್ಲ ರೀತಿಯ ಮನೋರಂಜನೆಯಿಂದ ತಮ್ಮ ಹೃದಮನಗಳನ್ನು ರಕ್ಷಿಸಿಕೊಳ್ಳುತ್ತಾರೆ. ಆದುದರಿಂದ, ಈ ‘ಪ್ರಪಂಚದ ಆತ್ಮವು’ ಅವರ ಆಲೋಚನೆಗಳು ಮತ್ತು ಆಶೆಗಳಿಂದ ಆಹ್ವಾನವನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ, “ದೇವರಾತ್ಮನೇ [“ದೇವರಾತ್ಮವೇ,” NW] ಕಲಿಸಿಕೊಟ್ಟ” ಮಾತುಗಳಿಗೆ ಅವರು ಕಿವಿಗೊಡುತ್ತಾರೆ ಮತ್ತು ಸಮಾಧಾನವನ್ನು ಒಳಗೊಂಡಿರುವ ಅದರ ಎಲ್ಲ ಫಲಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. (1 ಕೊರಿಂಥ 2:12, 13; ಗಲಾತ್ಯ 5:22, 23) ಅವರಿದನ್ನು, ಕ್ರಮವಾದ ಬೈಬಲ್ ಅಧ್ಯಯನ, ಪ್ರಾರ್ಥನೆ ಮತ್ತು ಭಕ್ತಿವೃದ್ಧಿಮಾಡುವ ಧ್ಯಾನದ ಮೂಲಕ ಮಾಡುತ್ತಾರೆ. ಅವರು ಹಿಂಸಾತ್ಮಕ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸ್ನೇಹಸಂಬಂಧ ಬೆಳೆಸಿಕೊಳ್ಳುವುದನ್ನು ಸಹ ತ್ಯಜಿಸುತ್ತಾ, ತಮ್ಮ ಹಾಗೆ ಯೆಹೋವನ ಶಾಂತಿದಾಯಕ ಹೊಸ ಲೋಕಕ್ಕಾಗಿ ಹಾತೊರೆಯುವ ಜನರೊಂದಿಗೆ ಸಹವಾಸವನ್ನು ಮಾಡುತ್ತಾರೆ. (ಕೀರ್ತನೆ 1:1-3; ಜ್ಞಾನೋಕ್ತಿ 16:29) ಹೌದು, ದೈವಿಕ ವಿವೇಕವು ಎಂತಹ ಸಂರಕ್ಷಣೆಯನ್ನು ತರುತ್ತದೆ!
ಯೆಹೋವನ “ವಚನವು” ನಿಮ್ಮ ಹೃದಯಗಳನ್ನು ಕಾಪಾಡಲಿ
ಯೇಸು ಅರಣ್ಯದಲ್ಲಿ ಶೋಧಿಸಲ್ಪಟ್ಟಾಗ, ದೇವರ ವಾಕ್ಯವನ್ನು ನಿಷ್ಕೃಷ್ಟವಾಗಿ ಉಲ್ಲೇಖಿಸುವ ಮೂಲಕ ಸೈತಾನನ ವಾದವನ್ನು ಖಂಡಿಸಿದನು. (ಲೂಕ 4:1-13) ಆದರೂ, ಯೇಸು ಅಲ್ಲಿ ತನ್ನ ವಾಗ್ವೈಖರಿಯನ್ನು ತೋರಿಸುವ ಪ್ರಯತ್ನದಲ್ಲಿರಲಿಲ್ಲ. ತನ್ನ ಪ್ರತಿವಾದವನ್ನು ಶಾಸ್ತ್ರವಚನಗಳ ಮೇಲೆ ಆಧರಿಸುವ ಮೂಲಕ ಯೇಸು ತನ್ನ ಹೃದಯದಿಂದ ಮಾತಾಡಿದನು, ಮತ್ತು ಈ ಕಾರಣದಿಂದಲೇ, ಏದೆನ್ ತೋಟದಲ್ಲಿ ಅಷ್ಟು ಕಾರ್ಯಸಾಧಕವಾಗಿ ಪರಿಣಮಿಸಿದ ಸೈತಾನನ ಕುತಂತ್ರವು ಇಲ್ಲಿ ಕೆಲಸಕ್ಕೆ ಬಾರದೆ ಹೋಯಿತು. ನಾವು ಸಹ ನಮ್ಮ ಹೃದಯಗಳಲ್ಲಿ ಯೆಹೋವನ ವಚನಗಳನ್ನು ತುಂಬಿಸುವುದಾದರೆ ಸೈತಾನನ ವಂಚನೆಗಳು ನಮ್ಮ ಮುಂದೆ ಬಾಲ ಬಿಚ್ಚವು. ‘[ನಮ್ಮ ಹೃದಯದಿಂದ] ಜೀವಧಾರೆಗಳು ಹೊರಡುವುದರಿಂದ,’ ಅದರಲ್ಲಿ ಯೆಹೋವನ ವಚನಗಳನ್ನು ತುಂಬಿಸುವುದೇ ಅತಿ ಪ್ರಾಮುಖ್ಯವಾಗಿದೆ.—ಜ್ಞಾನೋಕ್ತಿ 4:23.
ಮಾತ್ರವಲ್ಲದೆ, ನಾವು ನಮ್ಮ ಹೃದಯವನ್ನು ಸದಾ ಕಾಪಾಡಬೇಕು; ಇದನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬಾರದು. ಅರಣ್ಯದಲ್ಲಿ ಸೈತಾನನು ಸೋಲನ್ನಪ್ಪಿದ ಕಾರಣ, ಮುಂದಕ್ಕೆ ಯೇಸುವನ್ನು ಪರೀಕ್ಷೆಗೊಳಪಡಿಸುವುದನ್ನು ಬಿಟ್ಟುಬಿಡಲಿಲ್ಲ. (ಲೂಕ 4:13) ನಮ್ಮ ವಿಷಯದಲ್ಲಿಯೂ ಅನೇಕ ರೀತಿಯ ಕುತಂತ್ರಗಳನ್ನು ಉಪಯೋಗಿಸುತ್ತಾ ನಮ್ಮ ಸಮಗ್ರತೆಯನ್ನು ಮುರಿದುಹಾಕಲು ಸೈತಾನನು ಪಟ್ಟುಹಿಡಿದು ಪ್ರಯತ್ನಿಸುವನು. (ಪ್ರಕಟನೆ 12:17) ಆದುದರಿಂದ, ಯೇಸುವನ್ನು ಅನುಕರಿಸುತ್ತಾ ದೇವರ ವಾಕ್ಯಕ್ಕಾಗಿ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳೋಣ ಮತ್ತು ಅದೇ ಸಮಯದಲ್ಲಿ ಪವಿತ್ರಾತ್ಮಕ್ಕಾಗಿಯೂ ವಿವೇಕಕ್ಕಾಗಿಯೂ ಎಡೆಬಿಡದೆ ಪ್ರಾರ್ಥಿಸೋಣ. (1 ಥೆಸಲೊನೀಕ 5:16; ಇಬ್ರಿಯ 5:7) ಯೆಹೋವನಾದರೋ ತನ್ನಲ್ಲಿ ಆಶ್ರಯಹೂಡುವ ಯಾರೊಬ್ಬರಿಗೂ ಯಾವುದೇ ಆಧ್ಯಾತ್ಮಿಕ ಹಾನಿಯಾಗುವುದಿಲ್ಲ ಎಂದು ಮಾತು ಕೊಟ್ಟಿದ್ದಾನೆ.—ಕೀರ್ತನೆ 91:1-10; ಜ್ಞಾನೋಕ್ತಿ 1:33.
ದೇವರ ವಾಕ್ಯವು ಸಭೆಯನ್ನು ಸಂರಕ್ಷಿಸುತ್ತದೆ
ಮುಂತಿಳಿಸಲ್ಪಟ್ಟ “ಮಹಾ ಸಮೂಹವು” ಮಹಾ ಸಂಕಟವನ್ನು ಪಾರಾಗುವುದನ್ನು ಸೈತಾನನಿಂದ ತಡೆಗಟ್ಟಲಾಗದು. (ಪ್ರಕಟನೆ 7:9, 14) ಆದರೂ, ಕೇವಲ ಕೆಲವು ವ್ಯಕ್ತಿಗಳಾದರೂ ಯೆಹೋವನ ಅನುಗ್ರಹವನ್ನು ಕಳೆದುಕೊಳ್ಳುವಂತೆ ಮಾಡಲಿಕ್ಕಾಗಿ ಸೈತಾನನು ಉದ್ರಿಕ್ತ ರೀತಿಯಲ್ಲಿ ಕ್ರೈಸ್ತರನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಾನೆ. ಆ ಕುತಂತ್ರವು ಪುರಾತನ ಇಸ್ರಾಯೇಲಿನ ವಿಷಯದಲ್ಲಿ ಕಾರ್ಯಸಾಧಕವಾಯಿತು, ಮತ್ತು ವಾಗ್ದತ್ತ ದೇಶದ ಸಮ್ಮುಖದಲ್ಲೇ ಅವರಲ್ಲಿ 24,000 ಮಂದಿ ಮಡಿದರು. (ಅರಣ್ಯಕಾಂಡ 25:1-9) ವಾಸ್ತವದಲ್ಲಿ, ತಪ್ಪಿತಸ್ಥ ಕ್ರೈಸ್ತರು ನಿಜವಾದ ಪಶ್ಚಾತ್ತಾಪವನ್ನು ತೋರಿಸುವುದಾದರೆ ಅವರು ಪ್ರೀತಿಯ ಸಹಾಯವನ್ನು ಪಡೆದುಕೊಂಡು ಆಧ್ಯಾತ್ಮಿಕವಾಗಿ ಪುನಸ್ಥಾಪಿಸಲ್ಪಡುವರು. ಆದರೆ ಪಶ್ಚಾತ್ತಾಪಪಡದ ಪಾಪಿಗಳು, ಪ್ರಾಚೀನಕಾಲದ ಜಿಮ್ರೀಯಂತೆ ಇತರರ ನೈತಿಕ ಹಾಗೂ ಆಧ್ಯಾತ್ಮಿಕ ಒಳಿತನ್ನು ಅಪಾಯಕ್ಕೊಡ್ಡುತ್ತಾರೆ. (ಅರಣ್ಯಕಾಂಡ 25:14) ಪಂಕ್ತಿವ್ಯೂಹದಲ್ಲಿರುವ ಸೈನಿಕರು ತಮ್ಮ ಗುರಾಣಿಗಳನ್ನು ಎಸೆದುಬಿಟ್ಟಿದ್ದಾರೋ ಎಂಬಂತೆ, ಅವರು ತಮ್ಮನ್ನು ಮಾತ್ರವಲ್ಲದೆ ತಮ್ಮ ಸಂಗಡಿಗರನ್ನೂ ಅಪಾಯಕ್ಕೊಡ್ಡುತ್ತಾರೆ.
ಆದುದರಿಂದ, ಬೈಬಲ್ ಆಜ್ಞಾಪಿಸುವುದು: “ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು . . . ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (1 ಕೊರಿಂಥ 5:11, 13) ಈ ವಿವೇಕಯುತ “ವಚನವು” ಕ್ರೈಸ್ತ ಸಭೆಯ ನೈತಿಕ ಹಾಗೂ ಆಧ್ಯಾತ್ಮಿಕ ಪವಿತ್ರತೆಯನ್ನು ಸಂರಕ್ಷಿಸಲು ಸಹಾಯಮಾಡುತ್ತದೆ ಎಂಬುದನ್ನು ನೀವು ಒಪ್ಪುವುದಿಲ್ಲವೋ?
ಇದಕ್ಕೆ ತದ್ವಿರುದ್ಧವಾಗಿ, ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳು ಮತ್ತು ಧರ್ಮಭ್ರಷ್ಟರು ಸಹ ನೈತಿಕತೆಯ ಬಗ್ಗೆ ಇಂದು ವ್ಯಾಪಕವಾಗಿರುವ ಸ್ವತಂತ್ರ ದೃಷ್ಟಿಕೋನಗಳಿಗೆ ವಿರುದ್ಧವಾಗಿರುವ ಬೈಬಲಿನ ನಿರ್ದಿಷ್ಟ ಭಾಗಗಳನ್ನು ಹಳೆಯ ಕಾಲದ್ದು ಎಂದು ಪರಿಗಣಿಸುತ್ತಾರೆ. ಆದುದರಿಂದ, ಪುರೋಹಿತ ವರ್ಗದ ಮಧ್ಯೆಯೂ ಎಲ್ಲ ರೀತಿಯ ಘೋರ ಪಾಪಕ್ಕೆ ಸೈ ಎನ್ನಲಾಗುತ್ತದೆ. (2 ತಿಮೊಥೆಯ 4:3, 4) ಆದರೆ, ಯೆಹೋವನ ಗುರಾಣಿಯಂಥ “ಮಾತು” ಅಥವಾ ‘ವಚನದ’ ಬಗ್ಗೆ ಮಾತಾಡುವ ಜ್ಞಾನೋಕ್ತಿ 30:5ರ ನಂತರ ಈ ಆಜ್ಞೆಯನ್ನು ಕೂಡಿಸಲಾಗಿದೆ: “[ದೇವರ] ಮಾತುಗಳಿಗೆ ಯಾವದನ್ನೂ ಸೇರಿಸಬೇಡ; ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ.” ಹೌದು, ಬೈಬಲಿನ ಮಾತುಗಳನ್ನು ಮೇಲೆ ಕೆಳಗೆ ಮಾಡುವವರು ಆಧ್ಯಾತ್ಮಿಕ ಸುಳ್ಳುಗಾರರಾಗಿದ್ದು, ಇರುವವರಲ್ಲೇ ಅತಿ ಹೇಯಕರವಾದ ಸುಳ್ಳುಗಾರರಾಗಿದ್ದಾರೆ! (ಮತ್ತಾಯ 15:6-9) ಆದುದರಿಂದ, ದೇವರ ವಾಕ್ಯವನ್ನು ಆಳವಾಗಿ ಗೌರವಿಸುವ ಒಂದು ಸಂಘಟನೆಯ ಭಾಗವಾಗಿರುವುದಕ್ಕಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರೋಣ.
“ಪರಿಮಳ”ದಿಂದ ರಕ್ಷಿಸಲ್ಪಟ್ಟಿರುವುದು
ದೇವಜನರು ಬೈಬಲಿಗೆ ಅಂಟಿಕೊಂಡು ಅದರಲ್ಲಿರುವ ಸಾಂತ್ವನದಾಯಕ ಸಂದೇಶವನ್ನು ಇತರರಿಗೆ ಹಂಚುವುದರಿಂದ, ಜೀವಕರವಾದ “ಪರಿಮಳ”ವನ್ನು ಹೊರಸೂಸುವವರಾಗಿದ್ದಾರೆ ಮತ್ತು ಇದು ಯೆಹೋವನಿಗೆ ಸಂತೋಷವನ್ನು ತರುತ್ತದೆ. ಆದರೆ ಅನೀತಿವಂತರಿಗೆ, ಈ ಸಂದೇಶವಾಹಕರು “ಮರಣವನ್ನು ಹುಟ್ಟಿಸುವ ವಾಸನೆ”ಯನ್ನು ಹೊರಸೂಸುವವರಾಗಿರುತ್ತಾರೆ. ಹೌದು, ದುಷ್ಟರ ಘ್ರಾಣೇಂದ್ರಿಯವು ಸೈತಾನನ ವಿಷಯಗಳ ವ್ಯವಸ್ಥೆಯಿಂದ ಎಷ್ಟು ಹಾಳಾಗಿದೆಯೆಂದರೆ, “ಕ್ರಿಸ್ತನ ಪರಿಮಳ”ವನ್ನು ಹೊರಸೂಸುವವರನ್ನು ಕಂಡರೆ ಅವರಿಗೆ ಕಷ್ಟವಾಗುತ್ತದೆ ಅಥವಾ ಕೋಪವೂ ಬರುತ್ತದೆ. ಮತ್ತೊಂದು ಬದಿಯಲ್ಲಿ, ಸುವಾರ್ತೆಯನ್ನು ಹುರುಪಿನಿಂದ ಸಾರುವವರು ‘ರಕ್ಷಣಾಮಾರ್ಗದಲ್ಲಿರುವವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದಾರೆ.’ (2 ಕೊರಿಂಥ 2:14-16) ಇಂತಹ ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಇಂದು ಸುಳ್ಳು ಧರ್ಮದಲ್ಲಿ ತುಂಬಿತುಳುಕುತ್ತಿರುವ ಕಪಟತನ ಮತ್ತು ಧಾರ್ಮಿಕ ಸುಳ್ಳುಗಳನ್ನು ನೋಡಿ ಬೇಸತ್ತುಹೋಗಿದ್ದಾರೆ. ಆದುದರಿಂದ, ನಾವು ದೇವರ ವಾಕ್ಯವನ್ನು ತೆರೆದು ರಾಜ್ಯ ಸಂದೇಶವನ್ನು ಅವರೊಂದಿಗೆ ಹಂಚಿಕೊಳ್ಳುವಾಗ, ಅವರು ಕ್ರಿಸ್ತನತ್ತ ಸೆಳೆಯಲ್ಪಡುತ್ತಾರೆ ಮತ್ತು ಹೆಚ್ಚನ್ನು ಕಲಿಯಲು ಬಯಸುತ್ತಾರೆ.—ಯೋಹಾನ 6:44.
ಆದುದರಿಂದ, ಕೆಲವರು ರಾಜ್ಯ ಸಂದೇಶಕ್ಕೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸುವಾಗ ನಿರುತ್ಸಾಹಗೊಳ್ಳಬೇಡಿರಿ. ಬದಲಿಗೆ, “ಕ್ರಿಸ್ತನ ಪರಿಮಳ”ವನ್ನು ಒಂದು ರೀತಿಯ ಆಧ್ಯಾತ್ಮಿಕ ಸಂರಕ್ಷಣೆಯಾಗಿ ವೀಕ್ಷಿಸಿರಿ. ಇದು ಅನೇಕ ಹಾನಿಕರ ವ್ಯಕ್ತಿಗಳನ್ನು ದೇವಜನರು ಪಡೆದುಕೊಂಡಿರುವ ಆಧ್ಯಾತ್ಮಿಕ ಸ್ವತ್ತಿನಿಂದ ವಿಕರ್ಷಿಸುವಾಗ ಸಹೃದಯಿಗಳನ್ನು ತನ್ನತ್ತ ಸೆಳೆಯುತ್ತದೆ.—ಯೆಶಾಯ 35:8, 9.
ಮ್ಯಾರತನ್ನಲ್ಲಿ ಹೋರಾಡಿದ ಗ್ರೀಕ್ ಸೈನಿಕರು ಒತ್ತಾಗಿ ವ್ಯೂಹಗೂಡಿಸಿ ನಡೆಯುತ್ತಾ ತಮ್ಮ ಸಂಪೂರ್ಣ ಶಕ್ತಿಯಿಂದ ತಮ್ಮ ಗುರಾಣಿಗಳನ್ನು ಹಿಡಿದುಕೊಂಡದ್ದರಿಂದ, ಸೈನಿಕರ ಸಂಖ್ಯೆಯಲ್ಲಿ ಅಷ್ಟು ವ್ಯತ್ಯಾಸವಿದ್ದರೂ ವಿಜಯಿಗಳಾದರು. ತದ್ರೀತಿಯಲ್ಲಿ, ಯೆಹೋವನ ನಿಷ್ಠಾವಂತ ಸಾಕ್ಷಿಗಳು ತಮ್ಮ ಆಧ್ಯಾತ್ಮಿಕ ಹೋರಾಟದಲ್ಲಿ ಸಂಪೂರ್ಣ ಜಯವನ್ನು ಹೊಂದುವರು ಎಂಬ ಆಶ್ವಾಸನೆಯು ಕೊಡಲ್ಪಟ್ಟಿದೆ, ಏಕೆಂದರೆ ಅದು ಅವರ “ಸ್ವಾಸ್ತ್ಯ” ಆಗಿದೆ. (ಯೆಶಾಯ 54:17) ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ‘ಜೀವದಾಯಕ ವಾಕ್ಯವನ್ನು ಬಲವಾಗಿ ಹಿಡಿದುಕೊಳ್ಳುವ’ ಮೂಲಕ ಯೆಹೋವನಲ್ಲಿ ಆಶ್ರಯವನ್ನು ಕಂಡುಕೊಳ್ಳೋಣ.—ಫಿಲಿಪ್ಪಿ 2:16, NW.
[ಪುಟ 31ರಲ್ಲಿರುವ ಚಿತ್ರಗಳು]
“ಮೇಲಣಿಂದ ಬರುವ ಜ್ಞಾನವು . . . ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು”