ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿ
ಯೆಹೋವ ದೇವರು, ತನ್ನ ಜನರ ಮಹಾನ್ ಉಪದೇಶಕನಾಗಿದ್ದಾನೆ. ಆತನು ತನ್ನ ಕುರಿತಾಗಿ ಮಾತ್ರವಲ್ಲ, ಜೀವಿತದ ಕುರಿತಾಗಿಯೂ ಶಿಕ್ಷಣವನ್ನು ನೀಡುತ್ತಾನೆ. (ಯೆಶಾಯ 30:20; 54:13; ಕೀರ್ತನೆ 27:11) ಉದಾಹರಣೆಗಾಗಿ, ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಪ್ರವಾದಿಗಳನ್ನು, ಲೇವಿಯರನ್ನು, ಅವರಲ್ಲಿ ವಿಶೇಷವಾಗಿ ಯಾಜಕರನ್ನು, ಮತ್ತು ಇತರ ವಿವೇಕಿ ಪುರುಷರನ್ನು ಶಿಕ್ಷಕರೋಪಾದಿ ಸೇವೆಸಲ್ಲಿಸುವಂತೆ ನೇಮಿಸಿದನು. (2 ಪೂರ್ವಕಾಲವೃತ್ತಾಂತ 35:3; ಯೆರೆಮೀಯ 18:18) ಪ್ರವಾದಿಗಳು ಜನರಿಗೆ ದೇವರ ಉದ್ದೇಶಗಳು, ಗುಣಗಳು ಮತ್ತು ಅವರು ನಡೆಯಬೇಕಾದ ಸರಿಯಾದ ಮಾರ್ಗಗಳ ಕುರಿತು ಕಲಿಸಿದರು. ಯಾಜಕರು ಮತ್ತು ಲೇವಿಯರಿಗೆ, ಯೆಹೋವನ ಧರ್ಮಶಾಸ್ತ್ರವನ್ನು ಕಲಿಸುವ ಜವಾಬ್ದಾರಿಯಿತ್ತು. ಮತ್ತು ವಿವೇಕಿ ಪುರುಷರು ಅಥವಾ ಹಿರೀ ಪುರುಷರು, ದೈನಂದಿನ ಜೀವಿತದ ಬಗ್ಗೆ ಸ್ವಸ್ಥಕರವಾದ ಸಲಹೆಯನ್ನು ಒದಗಿಸಿದರು.
ಇಸ್ರಾಯೇಲಿನ ವಿವೇಕಿ ಪುರುಷರಲ್ಲಿ ದಾವೀದನ ಮಗನಾದ ಸೊಲೊಮೋನನು ಪ್ರಮುಖ ವ್ಯಕ್ತಿಯಾಗಿದ್ದನು. (1 ಅರಸುಗಳು 4:30, 31) ಅವನ ಅತ್ಯಂತ ಪ್ರಸಿದ್ಧ ಸಂದರ್ಶಕರಲ್ಲಿ ಒಬ್ಬಳಾದ ಶೆಬದ ರಾಣಿಯು ಅವನ ಮಹಿಮೆ ಮತ್ತು ಐಶ್ವರ್ಯವನ್ನು ನೋಡಿದ ಬಳಿಕ ಹೇಳಿದ್ದು: “ಈಗ ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ; ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.” (1 ಅರಸುಗಳು 10:7) ಸೊಲೊಮೋನನ ವಿವೇಕದ ಗುಟ್ಟು ಏನಾಗಿತ್ತು? ಸೊಲೊಮೋನನು ಸಾ.ಶ.ಪೂ. 1037ರಲ್ಲಿ ಇಸ್ರಾಯೇಲಿನ ರಾಜನಾದಾಗ, ಅವನು ‘ಜ್ಞಾನವಿವೇಕ’ಕ್ಕಾಗಿ ಪ್ರಾರ್ಥಿಸಿದನು. ಅವನ ಬೇಡಿಕೆಯಿಂದ ಪ್ರಸನ್ನನಾಗಿ ಯೆಹೋವನು ಅವನಿಗೆ ಜ್ಞಾನ, ವಿವೇಕ, ಮತ್ತು ಒಂದು ತಿಳಿವಳಿಕೆಯುಳ್ಳ ಹೃದಯವನ್ನು ದಯಪಾಲಿಸಿದನು. (2 ಪೂರ್ವಕಾಲವೃತ್ತಾಂತ 1:10-12; 1 ಅರಸುಗಳು 3:12) ಆದುದರಿಂದ ಸೊಲೊಮೋನನು ‘ಮೂರು ಸಾವಿರ ಜ್ಞಾನೋಕ್ತಿಗಳನ್ನು’ ನುಡಿದನೆಂಬುದು ಆಶ್ಚರ್ಯದ ಸಂಗತಿಯೇನಲ್ಲ! (1 ಅರಸುಗಳು 4:32) ಇವುಗಳಲ್ಲಿ ಕೆಲವೊಂದು, ಬೈಬಲಿನ ಜ್ಞಾನೋಕ್ತಿಗಳು ಎಂಬ ಪುಸ್ತಕದಲ್ಲಿ “ಆಗೂರನ ಮಾತುಗಳು” ಮತ್ತು “ಅರಸನಾದ ಲೆಮೂವೇಲನ ಮಾತು”ಗಳೊಂದಿಗೆ ದಾಖಲಿಸಲ್ಪಟ್ಟವು. (ಜ್ಞಾನೋಕ್ತಿ 30:1; 31:1) ಈ ಜ್ಞಾನೋಕ್ತಿಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಸತ್ಯಗಳು ದೇವರ ವಿವೇಕವನ್ನು ಪ್ರತಿಬಿಂಬಿಸುತ್ತವೆ ಮತ್ತು ಅನಂತಕಾಲ ಬಾಳುವಂಥದ್ದಾಗಿವೆ. (1 ಅರಸುಗಳು 10:23, 24) ಒಂದು ಸಂತೋಷಕರ ಮತ್ತು ಯಶಸ್ವೀ ಜೀವನವನ್ನು ಆಶಿಸುವ ಯಾವುದೇ ವ್ಯಕ್ತಿಗೆ, ಇವು ನುಡಿಯಲ್ಪಟ್ಟ ಸಮಯದಲ್ಲಿ ಎಷ್ಟು ಆವಶ್ಯಕವಾಗಿದ್ದವೊ, ಇಂದು ಸಹ ಅಷ್ಟೇ ಆವಶ್ಯಕವಾಗಿವೆ.
ಯಶಸ್ಸು ಮತ್ತು ನೈತಿಕ ಶುದ್ಧತೆ—ಹೇಗೆ?
ಜ್ಞಾನೋಕ್ತಿ ಪುಸ್ತಕದ ಉದ್ದೇಶವನ್ನು ಅದರ ಆರಂಭದ ಮಾತುಗಳಲ್ಲಿ ವಿವರಿಸಲಾಗಿದೆ: “ಇಸ್ರಾಯೇಲ್ಯರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಇವುಗಳಿಂದ ಜನರು ಜ್ಞಾನವನ್ನೂ [“ವಿವೇಕವನ್ನೂ,” NW] ಶಿಕ್ಷೆಯನ್ನೂ [“ಶಿಸ್ತನ್ನೂ,” NW] ಪಡೆದು ಬುದ್ಧಿವಾದಗಳನ್ನು ಗ್ರಹಿಸಿ ವಿವೇಕಮಾರ್ಗದಲ್ಲಿ ಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗುವರು. ಇವು ಮೂಢರಿಗೆ [“ಅನನುಭವಸ್ಥರಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡುವವು.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:1-4.
“ಸೊಲೊಮೋನನ ಜ್ಞಾನೋಕ್ತಿ”ಗಳು ಎಷ್ಟೊಂದು ಉದಾತ್ತವಾದ ಉದ್ದೇಶವನ್ನು ಪೂರೈಸಲಿವೆ! ಅವು ಒಬ್ಬನು ‘ವಿವೇಕ ಮತ್ತು ಶಿಸ್ತನ್ನು ಪಡೆಯಲಿಕ್ಕಾಗಿವೆ.’ ವಿವೇಕದಲ್ಲಿ, ವಿಷಯಗಳನ್ನು ಇದ್ದ ಹಾಗೆ ನೋಡುವುದು ಮತ್ತು ಈ ಜ್ಞಾನವನ್ನು ಸಮಸ್ಯೆಗಳನ್ನು ಬಗೆಹರಿಸಲು, ಗುರಿಗಳನ್ನು ತಲಪಲು, ಅಪಾಯಗಳನ್ನು ತಪ್ಪಿಸಲು ಅಥವಾ ತೊಡೆದುಹಾಕಲು ಇಲ್ಲವೆ ಹಾಗೆ ಮಾಡುವಂತೆ ಇತರರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸುವುದು ಸೇರಿರುತ್ತದೆ. “ಜ್ಞಾನೋಕ್ತಿ ಪುಸ್ತಕದಲ್ಲಿ ‘ವಿವೇಕ’ ಎಂಬ ಶಬ್ದವು, ಕೌಶಲಭರಿತವಾಗಿ ಜೀವನ ನಡೆಸುವುದನ್ನು, ಅಂದರೆ ವಿವೇಕಯುತ ಆಯ್ಕೆಗಳನ್ನು ಮಾಡಿ ಯಶಸ್ವಿಕರವಾಗಿ ಜೀವಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ” ಎಂದು ಒಂದು ಕೃತಿಯು ಹೇಳುತ್ತದೆ. ಆದುದರಿಂದ ವಿವೇಕವನ್ನು ಸಂಪಾದಿಸಿಕೊಳ್ಳುವುದು ಎಷ್ಟು ಪ್ರಾಮುಖ್ಯ!—ಜ್ಞಾನೋಕ್ತಿ 4:7.
ಸೊಲೊಮೋನನ ಜ್ಞಾನೋಕ್ತಿಗಳು ಶಿಸ್ತನ್ನು ಸಹ ಒದಗಿಸುತ್ತವೆ. ನಮಗೆ ಈ ತರಬೇತಿಯ ಅಗತ್ಯವಿದೆಯೊ? ಶಾಸ್ತ್ರವಚನಗಳಲ್ಲಿ ಶಿಸ್ತು ಎಂಬುದು ತಿದ್ದುಪಡಿ, ಗದರಿಕೆ, ಅಥವಾ ದಂಡನೆಯ ಅರ್ಥವನ್ನು ಕೊಡುತ್ತದೆ. ಒಬ್ಬ ಬೈಬಲ್ ವಿದ್ವಾಂಸನಿಗನುಸಾರ, ಅದು “ನೈತಿಕ ಸ್ವರೂಪದ ತರಬೇತಿಯನ್ನು ಸೂಚಿಸುತ್ತದೆ. ಇದರಲ್ಲಿ, ಒಬ್ಬನನ್ನು ಮೂರ್ಖ ಕೃತ್ಯಗಳು ಅಥವಾ ವಿಚಾರಗಳ ಕಡೆಗೆ ನಡಿಸಸಾಧ್ಯವಿರುವ ಪ್ರವೃತ್ತಿಗಳನ್ನು ಸರಿಪಡಿಸುವುದು ಒಳಗೂಡಿದೆ.” ನೀವೇ ನಿಮ್ಮನ್ನು ಶಿಸ್ತುಗೊಳಿಸುತ್ತಿರಲಿ ಅಥವಾ ಬೇರೆಯವರು ನಿಮಗೆ ಶಿಸ್ತನ್ನು ನೀಡುತ್ತಿರಲಿ, ಅದು ತಪ್ಪುಮಾಡುವುದರಿಂದ ನಮ್ಮನ್ನು ನಿಗ್ರಹಿಸುತ್ತದೆ ಮಾತ್ರವಲ್ಲ, ಹೆಚ್ಚು ಉತ್ತಮ ವ್ಯಕ್ತಿಗಳಾಗಿ ಬದಲಾಗಲು ನಮ್ಮನ್ನು ಪ್ರಚೋದಿಸುತ್ತದೆ. ಹೌದು, ನಾವು ನೈತಿಕವಾಗಿ ಶುದ್ಧರಾಗಿ ಉಳಿಯಲಿಕ್ಕಾಗಿ ನಮಗೆ ಶಿಸ್ತಿನ ಅಗತ್ಯವಿದೆ.
ಹೀಗೆ, ಆ ಜ್ಞಾನೋಕ್ತಿಗಳು ಇಮ್ಮಡಿ ಉದ್ದೇಶವನ್ನು ಪೂರೈಸುತ್ತವೆ—ವಿವೇಕವನ್ನು ನೀಡುವುದು ಮತ್ತು ಶಿಸ್ತನ್ನು ಒದಗಿಸುವುದು. ನೈತಿಕ ಶಿಸ್ತು ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಅಸಂಖ್ಯಾತ ಅಂಶಗಳಿವೆ. ದೃಷ್ಟಾಂತಕ್ಕಾಗಿ ನೀತಿ ಮತ್ತು ನ್ಯಾಯ, ನೈತಿಕ ಗುಣಗಳಾಗಿವೆ ಮತ್ತು ನಾವು ಯೆಹೋವನ ಉಚ್ಚ ಮಟ್ಟಗಳಿಗೆ ಅಂಟಿಕೊಳ್ಳುವಂತೆ ಅವು ನಮಗೆ ಸಹಾಯಮಾಡುತ್ತವೆ.
ವಿವೇಕವು ತಿಳಿವಳಿಕೆ, ಒಳನೋಟ, ಜಾಣತನ ಮತ್ತು ಯೋಚನಾ ಸಾಮರ್ಥ್ಯವನ್ನು ಸೇರಿಸಿ ಅನೇಕ ಅಂಶಗಳ ಮಿಶ್ರಣವಾಗಿದೆ. ತಿಳಿವಳಿಕೆಯು, ಒಂದು ವಿಷಯವನ್ನು ಪರಿಶೀಲಿಸಿ, ಅದರ ವಿಭಿನ್ನ ಭಾಗಗಳು ಮತ್ತು ಇಡೀ ವಿಷಯದ ನಡುವಿನ ಸಂಬಂಧಗಳನ್ನು ಗ್ರಹಿಸುವ ಮೂಲಕ ಅದರ ಸಂಯೋಜನೆಯನ್ನು ವಿವೇಚಿಸುವ ಸಾಮರ್ಥ್ಯವಾಗಿದೆ. ಒಳನೋಟವನ್ನು ಹೊಂದಲಿಕ್ಕಾಗಿ, ಕಾರಣಗಳ ಅರಿವು, ಮತ್ತು ಒಂದು ನಿರ್ದಿಷ್ಟ ಮಾರ್ಗಕ್ರಮವು ಏಕೆ ಸರಿ ಅಥವಾ ತಪ್ಪಾಗಿದೆಯೆಂಬುದರ ಗ್ರಹಿಕೆಯು ಆವಶ್ಯಕವಾಗಿದೆ. ಉದಾಹರಣೆಗಾಗಿ, ತಿಳಿವಳಿಕೆಯುಳ್ಳ ಒಬ್ಬ ಮನುಷ್ಯನು, ಯಾರಾದರೂ ತಪ್ಪಾದ ದಿಕ್ಕಿನಲ್ಲಿ ಸಾಗುತ್ತಿರುವುದಾದರೆ ಅದನ್ನು ವಿವೇಚಿಸಬಲ್ಲನು ಮತ್ತು ಅವನು ತತ್ಕ್ಷಣವೇ ಅಂಥವನಿಗೆ ಮುಂದಿರುವಂತಹ ಅಪಾಯದ ಕುರಿತಾಗಿ ಎಚ್ಚರಿಸಬಹುದು. ಆದರೆ ಆ ವ್ಯಕ್ತಿಯು ಆ ದಿಕ್ಕಿನ ಕಡೆಗೆ ಏಕೆ ಸಾಗುತ್ತಿದ್ದಾನೆಂಬುದನ್ನು ತಿಳಿದುಕೊಳ್ಳಲು ಮತ್ತು ಅವನನ್ನು ಪಾರುಗೊಳಿಸುವ ಅತ್ಯಂತ ಪರಿಣಾಮಕಾರಿ ಮಾರ್ಗದ ಕುರಿತು ಯೋಚಿಸಲು ಒಳನೋಟದ ಅಗತ್ಯವಿದೆ.
ಜಾಣರು ದೂರದೃಷ್ಟಿಯುಳ್ಳವರು—ಸುಲಭವಾಗಿ ಮರುಳಾಗುವವರಾಗಿರುವುದಿಲ್ಲ. (ಜ್ಞಾನೋಕ್ತಿ 14:15) ಅವರು ಕೇಡನ್ನು ಮುನ್ನೋಡಿ, ಅದಕ್ಕಾಗಿ ಸಿದ್ಧರಾಗಲು ಶಕ್ತರಾಗಿರುತ್ತಾರೆ. ಮತ್ತು ವಿವೇಕವು, ಜೀವನದಲ್ಲಿ ಉದ್ದೇಶಪೂರ್ವಕ ನಿರ್ದೇಶನವನ್ನು ಕೊಡುವ ಹಿತಕರವಾದ ಯೋಚನೆಗಳನ್ನು ಮತ್ತು ವಿಚಾರಗಳನ್ನು ನಿರೂಪಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ. ಬೈಬಲಿನ ಜ್ಞಾನೋಕ್ತಿಗಳ ಅಭ್ಯಾಸವು ನಿಜವಾಗಿಯೂ ಪ್ರತಿಫಲದಾಯಕವಾಗಿದೆ, ಯಾಕಂದರೆ ನಾವು ವಿವೇಕ ಮತ್ತು ಶಿಸ್ತನ್ನು ತಿಳಿದುಕೊಳ್ಳುವಂತೆ ಅವು ದಾಖಲಿಸಲ್ಪಟ್ಟಿವೆ. ಜ್ಞಾನೋಕ್ತಿಗಳಿಗೆ ಗಮನವನ್ನು ಕೊಡುವ “ಅನನುಭವಸ್ಥರು” ಸಹ ಜಾಣತನವನ್ನು ಪಡೆದುಕೊಳ್ಳುವರು ಮತ್ತು ‘ಯೌವನಸ್ಥರು’ ಜ್ಞಾನ ಮತ್ತು ಯೋಚನಾ ಸಾಮರ್ಥ್ಯವನ್ನು ಪಡೆದುಕೊಳ್ಳುವರು.
ವಿವೇಕಿಗಳಿಗೆ ಜ್ಞಾನೋಕ್ತಿಗಳು
ಆದರೆ ಬೈಬಲಿನ ಜ್ಞಾನೋಕ್ತಿಗಳು ಕೇವಲ ಅನನುಭವಸ್ಥರು ಮತ್ತು ಯುವ ಜನರಿಗಾಗಿರುವುದಿಲ್ಲ. ಕಿವಿಗೊಡುವಷ್ಟು ವಿವೇಕಿಯಾಗಿರುವ ಯಾವುದೇ ವ್ಯಕ್ತಿಗಾಗಿ ಅವು ಬರೆಯಲ್ಪಟ್ಟಿವೆ. “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು, ವಿವೇಕಿಯು [ಮತ್ತಷ್ಟು] ಉಚಿತಾಲೋಚನೆಯುಳ್ಳವನಾಗುವನು. ಇವು ಗಾದೆ, ಸಾಮ, ಜ್ಞಾನಿಗಳ ನುಡಿ, ಒಗಟು ಇವುಗಳನ್ನು ತಿಳಿಯಲು ಸಾಧನವಾಗಿವೆ” ಎಂದು ರಾಜ ಸೊಲೊಮೋನನು ಹೇಳುತ್ತಾನೆ. (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 1:5, 6) ಈಗಾಗಲೇ ವಿವೇಕವನ್ನು ಸಂಪಾದಿಸಿರುವ ಒಬ್ಬ ವ್ಯಕ್ತಿಯು ಜ್ಞಾನೋಕ್ತಿಗಳಿಗೆ ಗಮನ ಕೊಡುವ ಮೂಲಕ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವನು ಮತ್ತು ತಿಳಿವಳಿಕೆಯುಳ್ಳ ಮನುಷ್ಯನು ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸುವ ಸಾಮರ್ಥ್ಯವನ್ನು ಚುರುಕುಗೊಳಿಸುವನು.
ಒಂದು ಜ್ಞಾನೋಕ್ತಿಯು ಹೆಚ್ಚಾಗಿ, ಗಾಢವಾದ ಸತ್ಯವನ್ನು ಕೆಲವೇ ಮಾತುಗಳಲ್ಲಿ ವ್ಯಕ್ತಪಡಿಸುತ್ತದೆ. ಬೈಬಲಿನ ಒಂದು ಜ್ಞಾನೋಕ್ತಿಯು, ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದಾದ ನುಡಿಯ ರೂಪದಲ್ಲಿ ತಿಳಿಸಲ್ಪಟ್ಟಿರಬಹುದು. (ಜ್ಞಾನೋಕ್ತಿ 1:17-19) ಕೆಲವು ಜ್ಞಾನೋಕ್ತಿಗಳು ಒಗಟುಗಳಾಗಿವೆ, ಅಂದರೆ ಬಿಡಿಸಿಹೇಳಬೇಕಾದಂತಹ ಗಲಿಬಿಲಿಗೊಳಿಸುವ ಮತ್ತು ಜಟಿಲವಾದ ಹೇಳಿಕೆಗಳಾಗಿವೆ. ಒಂದು ಜ್ಞಾನೋಕ್ತಿಯಲ್ಲಿ, ಉಪಮೆಗಳು, ರೂಪಕಾಲಂಕಾರಗಳು, ಮತ್ತು ಭಾಷಾಲಂಕಾರಗಳ ಇತರ ರೂಪಗಳೂ ಇರಬಹುದು. ಇದನ್ನು ಅರ್ಥಮಾಡಿಕೊಳ್ಳಲು ಸಮಯ ಹಾಗೂ ಮನನದ ಅಗತ್ಯವಿದೆ. ಇಷ್ಟೊಂದು ಜ್ಞಾನೋಕ್ತಿಗಳ ರಚಕನಾದ ಸೊಲೊಮೋನನು, ಒಂದು ಜ್ಞಾನೋಕ್ತಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಗಳನ್ನು ನಿಶ್ಚಯವಾಗಿಯೂ ಗ್ರಹಿಸಿಕೊಂಡಿದ್ದನು. ಜ್ಞಾನೋಕ್ತಿ ಪುಸ್ತಕದಲ್ಲಿ ಅವನು ತನ್ನ ವಾಚಕರಿಗೆ ಆ ಸಾಮರ್ಥ್ಯವನ್ನು ದಾಟಿಸುವ ಕಾರ್ಯವನ್ನು ಕೈಗೊಳ್ಳುತ್ತಾನೆ. ವಿವೇಕವುಳ್ಳ ವ್ಯಕ್ತಿಯೊಬ್ಬನು ಇದಕ್ಕೆ ಗಮನವನ್ನು ಕೊಡಲು ಬಯಸಬೇಕು.
ಗುರಿಯ ಕಡೆಗೆ ನಡಿಸುವ ಆರಂಭ
ವಿವೇಕ ಮತ್ತು ಶಿಸ್ತಿನ ಬೆನ್ನಟ್ಟುವಿಕೆಯನ್ನು ಒಬ್ಬ ವ್ಯಕ್ತಿಯು ಎಲ್ಲಿಂದ ಆರಂಭಿಸುತ್ತಾನೆ? ಸೊಲೊಮೋನನು ಉತ್ತರಿಸುವುದು: “ಯೆಹೋವನ ಭಯವೇ ತಿಳುವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನೂ [“ವಿವೇಕವನ್ನು,” NW] ಶಿಕ್ಷೆಯನ್ನೂ [“ಶಿಸ್ತನ್ನೂ,” NW] ಅಸಡ್ಡೆಮಾಡುವರು.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 1:7) ಯೆಹೋವನ ಭಯದೊಂದಿಗೆ ಜ್ಞಾನವು ಆರಂಭಗೊಳ್ಳುತ್ತದೆ. ಜ್ಞಾನವಿಲ್ಲದೆ, ಯಾವುದೇ ವಿವೇಕ ಅಥವಾ ಶಿಸ್ತು ಇರಲಾರದು. ಹಾಗಿರುವುದರಿಂದ, ಯೆಹೋವನ ಭಯವೇ ವಿವೇಕ ಮತ್ತು ಶಿಸ್ತಿನ ಆರಂಭವಾಗಿದೆ.—ಜ್ಞಾನೋಕ್ತಿ 9:10; 15:33.
ದೇವರ ಭಯ ಅಂದರೆ ಆತನ ಕಡೆಗಿನ ಅಹಿತಕರವಾದ ಭೀತಿಯಾಗಿರುವುದಿಲ್ಲ. ಅದಕ್ಕೆ ಬದಲಾಗಿ ಅದು ಗಾಢವಾದ ಪೂಜ್ಯಭಾವನೆ ಮತ್ತು ಭಯಭಕ್ತಿಯಾಗಿದೆ. ಈ ಭಯವಿಲ್ಲದೆ ಸತ್ಯ ಜ್ಞಾನವಿರಲಾರದು. ಯೆಹೋವ ದೇವರು ಜೀವದ ಮೂಲನಾಗಿದ್ದಾನೆ, ಮತ್ತು ಯಾವುದೇ ರೀತಿಯ ಜ್ಞಾನವನ್ನು ಪಡೆದುಕೊಳ್ಳಲು ಖಂಡಿತವಾಗಿಯೂ ಜೀವವು ಅತ್ಯಾವಶ್ಯಕ. (ಕೀರ್ತನೆ 36:9; ಅ. ಕೃತ್ಯಗಳು 17:25, 28) ಅಷ್ಟುಮಾತ್ರವಲ್ಲದೆ, ದೇವರೇ ಎಲ್ಲವನ್ನೂ ಸೃಷ್ಟಿಸಿದನು; ಆದುದರಿಂದ ಮಾನವರಿಗಿರುವ ಎಲ್ಲ ಜ್ಞಾನವು, ಆತನ ಕೈಕೆಲಸದ ಕುರಿತಾದ ಅಭ್ಯಾಸದ ಮೇಲೆ ಆಧಾರಿಸಲ್ಪಟ್ಟಿದೆ. (ಕೀರ್ತನೆ 19:1, 2; ಪ್ರಕಟನೆ 4:11) ದೇವರು ತನ್ನ ಲಿಖಿತ ವಾಕ್ಯವನ್ನೂ ಪ್ರೇರಿಸಿದನು. ಇದು “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಹೀಗೆ, ಯೆಹೋವನು ಎಲ್ಲ ಸತ್ಯ ಜ್ಞಾನದ ಕೇಂದ್ರ ಬಿಂದುವಾಗಿದ್ದಾನೆ. ಮತ್ತು ಆ ಜ್ಞಾನವನ್ನು ಹುಡುಕುವ ವ್ಯಕ್ತಿಗೆ, ಆತನ ಕಡೆಗೆ ಪೂಜ್ಯಭಾವನೆಯ ಭಯವಿರಬೇಕು.
ದೇವರ ಭಯವಿಲ್ಲದಿದ್ದಲ್ಲಿ, ಮಾನವ ಜ್ಞಾನ ಮತ್ತು ಲೌಕಿಕ ವಿವೇಕದ ಪ್ರಯೋಜನವೇನು? ಅಪೊಸ್ತಲ ಪೌಲನು ಬರೆದುದು: “ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕಜ್ಞಾನವನ್ನು ಹುಚ್ಚುತನವಾಗ ಮಾಡಿದ್ದಾನಲ್ಲವೇ.” (1 ಕೊರಿಂಥ 1:20) ಲೌಕಿಕವಾಗಿ ವಿವೇಕಿಯಾಗಿರುವ ವ್ಯಕ್ತಿಗೆ ದೇವರ ಭಯವಿಲ್ಲದಿರುವುದರಿಂದ, ತನಗೆ ತಿಳಿದಿರುವ ವಾಸ್ತವಾಂಶಗಳ ಆಧಾರದ ಮೇಲೆ ತಪ್ಪು ತೀರ್ಮಾನಗಳನ್ನು ಮಾಡುತ್ತಾನೆ ಮತ್ತು ಹೀಗೆ ‘ಮೂರ್ಖ’ನಾಗುತ್ತಾನೆ.
“ಕೊರಳಿಗೆ ಹಾರ”
ಆ ವಿವೇಕಿ ರಾಜನು ಅನಂತರ ಯುವ ಜನರನ್ನು ಸಂಬೋಧಿಸುತ್ತಾ ಹೇಳುವುದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ. ಅವು ನಿನ್ನ ತಲೆಗೆ ಅಂದದ ಪುಷ್ಪಕಿರೀಟ; ಕೊರಳಿಗೆ ಹಾರ.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:8, 9.
ಪುರಾತನ ಇಸ್ರಾಯೇಲಿನಲ್ಲಿ, ತಮ್ಮ ಮಕ್ಕಳಿಗೆ ಕಲಿಸುವ ದೇವದತ್ತ ಜವಾಬ್ದಾರಿಯು ಹೆತ್ತವರಿಗಿತ್ತು. ಮೋಶೆಯು ತಂದೆಯರಿಗೆ ಉತ್ತೇಜಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7) ತಾಯಂದಿರು ಸಹ ಗಮನಾರ್ಹವಾದ ರೀತಿಯಲ್ಲಿ ಪ್ರಭಾವವನ್ನು ಬೀರುತ್ತಿದ್ದರು. ತನ್ನ ಗಂಡನ ಅಧಿಕಾರದ ಚೌಕಟ್ಟಿನೊಳಗೆ, ಒಬ್ಬ ಹೀಬ್ರೂ ಹೆಂಡತಿಯು ಕುಟುಂಬ ನಿಯಮವನ್ನು ಜಾರಿಗೆ ತರಬಹುದಿತ್ತು.
ವಾಸ್ತವದಲ್ಲಿ ಬೈಬಲಿನಾದ್ಯಂತ, ಕುಟುಂಬವು ಶಿಕ್ಷಣವನ್ನು ಕೊಡುವ ಒಂದು ಮೂಲಭೂತ ಏಕಾಂಶವಾಗಿದೆಯೆಂದು ತೋರಿಸಲಾಗಿದೆ. (ಎಫೆಸ 6:1-3) ಮಕ್ಕಳು ತಮ್ಮ ವಿಶ್ವಾಸಿ ಹೆತ್ತವರಿಗೆ ವಿಧೇಯರಾಗುವಾಗ, ಅವರು ಒಂದು ಆಕರ್ಷಕ ಪುಷ್ಪಕಿರೀಟ ಮತ್ತು ಗೌರವದ ಹಾರದೊಂದಿಗೆ ಅಲಂಕೃತರಾಗಿರುವಂತಿದೆ.
“ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು”
ಏಷಿಯದಲ್ಲಿನ ಒಬ್ಬ ತಂದೆಯು ತನ್ನ 16 ವರ್ಷ ಪ್ರಾಯದ ಮಗನನ್ನು ಉಚ್ಚ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳುಹಿಸುವ ಮೊದಲು, ಕೆಟ್ಟ ಜನರೊಂದಿಗೆ ಸಹವಾಸಿಸಬಾರದೆಂದು ಬುದ್ಧಿಹೇಳಿದನು. ಈ ಬುದ್ಧಿವಾದವು ಸೊಲೊಮೋನನ ಎಚ್ಚರಿಕೆಯನ್ನು ಪ್ರತಿಧ್ವನಿಸುತ್ತದೆ: “ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 1:10) ಅವರು ಉಪಯೋಗಿಸುವಂತಹ ಪಾಶದ ಕುರಿತಾಗಿ ಸೊಲೊಮೋನನು ತಿಳಿಸುವುದು: “ಅವರು—ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವದಕ್ಕೆ ಕಾದಿರೋಣ, ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ ನಾವೂ ಇವರನ್ನು ಜೀವದೊಡನೆ ನುಂಗಿಬಿಡುವ. ಸಕಲವಿಧವಾದ ಅಮೂಲ್ಯಸಂಪತ್ತನ್ನು ಕಂಡುಹಿಡಿದು ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬುವೆವು. ನಮ್ಮ ಸಂಗಡ ಪಾಲುಗಾರನಾಗು; ನಮ್ಮೆಲ್ಲರಿಗೂ ಹುದುವಾದ ಒಂದೇ ಹಮ್ಮಿಣಿ ಇರುವದು ಎಂದು” ಹೇಳುತ್ತಾರೆ. (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:11-14.
ಈ ಆಕರ್ಷಿಸುವ ವಸ್ತುವು ಐಶ್ವರ್ಯವಾಗಿದೆ ಎಂಬುದು ಸ್ಪಷ್ಟ. ತ್ವರಿತವಾಗಿ ಲಾಭಗಳನ್ನು ಸಂಪಾದಿಸುವುದಕ್ಕಾಗಿ “ಪಾಪಿಗಳು” ಇತರರನ್ನು ತಮ್ಮ ಹಿಂಸಾತ್ಮಕ ಅಥವಾ ಅನ್ಯಾಯದ ಯೋಜನೆಗಳಲ್ಲಿ ಜೊತೆಗೂಡುವಂತೆ ಸೆಳೆಯುತ್ತಾರೆ. ಆರ್ಥಿಕ ಲಾಭಕ್ಕಾಗಿ ಈ ದುಷ್ಟರು ರಕ್ತವನ್ನು ಹರಿಸಲು ಸಹ ಹೇಸುವುದಿಲ್ಲ. ಅವರು ತಮ್ಮ ‘ಬಲಿಯನ್ನು ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ ಜೀವದೊಡನೆ ನುಂಗಿಬಿಡು’ತ್ತಾರೆ, ಅಂದರೆ ಸಮಾಧಿಯು ಇಡೀ ದೇಹವನ್ನು ಕಬಳಿಸುವಂತೆ, ಆ ವ್ಯಕ್ತಿಯ ಬಳಿ ಇರುವಂಥದ್ದೆಲ್ಲವನ್ನೂ ದೋಚಿಕೊಳ್ಳುತ್ತಾರೆ. ಪಾತಕವನ್ನು ಜೀವನವೃತ್ತಿಯಾಗಿ ಮಾಡುವಂತೆ ಅವರು ಆಮಂತ್ರಣ ಕೊಡುತ್ತಾರೆ. ತಮ್ಮ ‘ಮನೆಗಳನ್ನು ಕೊಳ್ಳೆಯೊಂದಿಗೆ ತುಂಬಿಸಲು’ ಬಯಸುತ್ತಾರೆ ಮತ್ತು ಅನನುಭವಸ್ಥ ವ್ಯಕ್ತಿಯು ‘ಅವರ ಸಂಗಡ ಪಾಲುಗಾರನಾಗು’ವಂತೆ ಬಯಸುತ್ತಾರೆ. ಇದು ನಮಗೆ ಎಷ್ಟು ಸಮಯೋಚಿತವಾದ ಎಚ್ಚರಿಕೆಯಾಗಿದೆ! ಯುವಕರ ಗ್ಯಾಂಗುಗಳು ಮತ್ತು ಅಮಲೌಷಧದ ವಿತರಕರು ಈ ರೀತಿಯ ವಿಧಾನಗಳನ್ನೇ ಉಪಯೋಗಿಸುತ್ತಾರಲ್ಲವೊ? ಅನೇಕ ಸಂದೇಹಾಸ್ಪದ ವ್ಯಾಪಾರ ಯೋಜನೆಗಳನ್ನು ಮಾಡಲು ಆಕರ್ಷಿಸುವ ಸಂಗತಿಯು, ತ್ವರಿತವಾಗಿ ಹಣವನ್ನು ಸಂಪಾದಿಸುವುದೇ ಆಗಿದೆಯಲ್ಲವೊ?
ಆ ವಿವೇಕಿ ಅರಸನು ಸಲಹೆ ನೀಡುವುದು: “ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು, ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ. ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು, ಅವರು ರಕ್ತವನ್ನು ಸುರಿಸಲು ಆತುರಪಡುವರು.” ಅವರ ವಿಪತ್ಕಾರಕ ಅಂತ್ಯವನ್ನು ಮುಂತಿಳಿಸುತ್ತಾ, ಅವನು ಕೂಡಿಸುವುದು: “ಪಕ್ಷಿಗಳ [“ರೆಕ್ಕೆಗಳುಳ್ಳ ಯಾವುದೇ ಜೀವಿಯ,” NW] ಕಣ್ಣೆದುರಿಗೆ ಬಲೆಯನ್ನೊಡ್ಡುವದು ವ್ಯರ್ಥ. ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವದಕ್ಕೆ ಹೊಂಚುಹಾಕುತ್ತಾರೆ, ಸ್ವಜೀವವನ್ನು ತೆಗೆದುಕೊಳ್ಳುವದಕ್ಕೆ ಕಾದಿರುತ್ತಾರೆ. ಸೂರೆಮಾಡುವವರೆಲ್ಲರ ದಾರಿಯೂ ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:15-19.
“ಸೂರೆಮಾಡುವವರೆಲ್ಲ”ರೂ ತಮ್ಮ ಸ್ವಂತ ಮಾರ್ಗದಲ್ಲಿಯೇ ನಾಶವಾಗುವರು. ದುಷ್ಟರು ಇತರರಿಗಾಗಿ ರಚಿಸುವ ಹೊಂಚು, ಅವರಿಗೇ ಒಂದು ಬಲೆಯಾಗುವುದು. ಉದ್ದೇಶಪೂರ್ವಕವಾಗಿ ಕೆಟ್ಟತನ ಮಾಡುವವರು ತಮ್ಮ ಮಾರ್ಗಕ್ರಮವನ್ನು ಬದಲಾಯಿಸುವರೊ? ಇಲ್ಲ. ಒಂದು ಬಲೆಯು ಅವುಗಳಿಗೆ ಕಾಣುವಂತಹ ರೀತಿಯಲ್ಲಿ ಇಡಲ್ಪಟ್ಟಿರುವುದಾದರೂ, “ರೆಕ್ಕೆಗಳುಳ್ಳ” ಜೀವಿಗಳಾದ ಪಕ್ಷಿಗಳು ಹೇಗಾದರೂ ಅದರಲ್ಲಿ ಸಿಕ್ಕಿಬೀಳುತ್ತವೆ. ಹಾಗೆಯೇ, ತಮ್ಮ ಲೋಭದಿಂದ ಅಂಧರಾಗಿರುವ ದುಷ್ಟರು, ತಮ್ಮ ದುಷ್ಕೃತ್ಯಗಳನ್ನು ನಡಿಸುತ್ತಾ ಇರುತ್ತಾರೆ. ಆದರೆ ಒಂದಲ್ಲ ಒಂದು ದಿನ ಅವರು ಸಿಕ್ಕಿಬೀಳುವರು.
ವಿವೇಕವು ಧ್ವನಿಗೈಯುವಾಗ ಯಾರು ಕಿವಿಗೊಡುವರು?
ಪಾಪಿಗಳಿಗೆ ತಮ್ಮ ಮಾರ್ಗಕ್ರಮವು ವಿಪತ್ಕಾರಕವಾಗಿದೆಯೆಂದು ನಿಜವಾಗಿ ತಿಳಿದಿರುತ್ತದೊ? ಅವರು ನಡೆಯುತ್ತಿರುವ ಮಾರ್ಗಗಳ ಅಂತ್ಯಫಲ ಏನಾಗಿರುವುದೆಂದು ಅವರಿಗೆ ಎಚ್ಚರಿಕೆಯನ್ನು ನೀಡಲಾಗಿದೆಯೊ? ತಮಗೆ ತಿಳಿದಿರಲಿಲ್ಲವೆಂಬ ನೆವವನ್ನು ಅವರು ಕೊಡಲಾರರು, ಯಾಕಂದರೆ ಈ ಅತಿ ಸ್ಪಷ್ಟವಾದ ಸಂದೇಶವನ್ನು ಸಾರ್ವಜನಿಕ ಸ್ಥಳಗಳಲ್ಲಿ ಘೋಷಿಸಲಾಗುತ್ತಿದೆ.
ಸೊಲೊಮೋನನು ಘೋಷಿಸುವುದು: “ಜ್ಞಾನವೆಂಬಾಕೆಯು [“ನಿಜ ವಿವೇಕವು,” NW] ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ದನಿಗೈಯುತ್ತಾಳೆ. ಪೇಟೆಯ ಅಗ್ರಸ್ಥಾನದಲ್ಲಿಯೂ ಊರ ಬಾಗಿಲಿನಲ್ಲಿಯೂ ಆಕೆಯು ನುಡಿಯು”ತ್ತಾಳೆ. (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 1:20, 21) ಒಂದು ದೊಡ್ಡ ಮತ್ತು ಸ್ಪಷ್ಟವಾದ ದನಿಯಲ್ಲಿ, ವಿವೇಕವು ಎಲ್ಲರಿಗೂ ಕೇಳಿಸುವಂತಹ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೂಗುತ್ತಿದೆ. ಪ್ರಾಚೀನ ಇಸ್ರಾಯೇಲಿನಲ್ಲಿ, ಹಿರೀ ಪುರುಷರು ಊರ ಬಾಗಿಲುಗಳ ಬಳಿ ವಿವೇಕಯುಕ್ತ ಸಲಹೆಯನ್ನು ಕೊಡುತ್ತಿದ್ದರು ಮತ್ತು ನ್ಯಾಯತೀರ್ಪಿನ ನಿರ್ಣಯಗಳನ್ನು ತಿಳಿಸುತ್ತಿದ್ದರು. ಯೆಹೋವನು ನಮಗಾಗಿ, ವ್ಯಾಪಕವಾಗಿ ಲಭ್ಯವಿರುವ ಆತನ ವಾಕ್ಯವಾದ ಬೈಬಲಿನಲ್ಲಿ ನಿಜ ವಿವೇಕವನ್ನು ದಾಖಲಿಸಿದ್ದಾನೆ. ಮತ್ತು ಇಂದು ಆತನ ಸೇವಕರು ಅದರ ಸಂದೇಶವನ್ನು ಎಲ್ಲೆಡೆಯೂ ಬಹಿರಂಗವಾಗಿ ಘೋಷಿಸುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ನಿಶ್ಚಯವಾಗಿಯೂ ದೇವರು ವಿವೇಕವನ್ನು ಎಲ್ಲರ ಮುಂದೆ ಘೋಷಿಸುತ್ತಿದ್ದಾನೆ.
ನಿಜ ವಿವೇಕವು ಏನು ಹೇಳುತ್ತದೆ? ಇದನ್ನು: “ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವದಕ್ಕೆ ಎಷ್ಟುಕಾಲ ಇಷ್ಟಪಡುವರು? . . . ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ಗಮನಿಸಲಿಲ್ಲ; ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.” ವಿವೇಕವು ಧ್ವನಿಗೈಯುವಾಗ ಮೂರ್ಖರು ಲಕ್ಷ್ಯಕೊಡುವುದಿಲ್ಲ. ಆದುದರಿಂದ “ಅವರು ತಮ್ಮ ನಡತೆಯ ಫಲವನ್ನು” ಅನುಭವಿಸುವರು. ಅವರು ಸ್ವಂತ ‘ಉದಾಸೀನತೆ ಮತ್ತು ನಿಶ್ಚಿಂತೆಯಿಂದಲೇ ನಾಶವಾಗುವರು.’ (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:22-32.
ಆದರೆ ವಿವೇಕವು ಧ್ವನಿಗೈಯುವಾಗ ಕಿವಿಗೊಡಲು ಸಮಯ ಕೊಡುವವನ ಕುರಿತಾಗಿ ಏನು? ಅವನು “ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 1:33) ಬೈಬಲಿನ ಜ್ಞಾನೋಕ್ತಿಗಳಿಗೆ ಗಮನವನ್ನು ಕೊಡುವ ಮೂಲಕ ವಿವೇಕವನ್ನು ಸಂಪಾದಿಸಿ, ಶಿಸ್ತನ್ನು ಸ್ವೀಕರಿಸುವವರಲ್ಲಿ ನೀವೂ ಒಬ್ಬರಾಗಿರುವಂತಾಗಲಿ.
[ಪುಟ 15 ರಲ್ಲಿರುವ ಚಿತ್ರ]
ನಿಜ ವಿವೇಕವು ವ್ಯಾಪಕವಾಗಿ ಲಭ್ಯವಿದೆ