‘ವಿವೇಕದಿಂದ ನಮ್ಮ ದಿನಗಳು ಹೆಚ್ಚುವವು’
ಜೀವಿತದ ಸಮಸ್ಯೆಗಳೊಂದಿಗೆ ಸೆಣಸಾಡಲು ವಿವೇಕವು ಅನಿವಾರ್ಯ ಎಂಬ ಮಾತನ್ನು ಯಾರೂ ಅಲ್ಲಗಳೆಯಲಾರರು, ಅಲ್ಲವೇ? ಜ್ಞಾನ ಮತ್ತು ತಿಳುವಳಿಕೆಯನ್ನು ಸದ್ವಿನಿಯೋಗಿಸುವ ಸಾಮರ್ಥ್ಯವೇ ನಿಜ ವಿವೇಕವಾಗಿದೆ. ಅದು, ಮೂರ್ಖತನ, ಮೂಢತನ ಮತ್ತು ಹುಚ್ಚುತನಕ್ಕೆ ತೀರ ವಿರುದ್ಧವಾದದ್ದಾಗಿದೆ. ಆದುದರಿಂದಲೇ, ವಿವೇಕವನ್ನು ಸಂಪಾದಿಸಿಕೊಳ್ಳುವಂತೆ ಶಾಸ್ತ್ರವಚನಗಳು ನಮಗೆ ಬುದ್ಧಿಹೇಳುತ್ತವೆ. (ಜ್ಞಾನೋಕ್ತಿ 4:7, NW) ನಿಜ ಸಂಗತಿಯೇನೆಂದರೆ, ಬೈಬಲಿನ ಜ್ಞಾನೋಕ್ತಿ ಪುಸ್ತಕವು ಮುಖ್ಯವಾಗಿ ವಿವೇಕ ಮತ್ತು ಶಿಸ್ತನ್ನು ಕೊಡಲಿಕ್ಕಾಗಿಯೇ ಬರೆಯಲ್ಪಟ್ಟಿತು. ಆ ಪುಸ್ತಕದ ಆರಂಭದ ಮಾತುಗಳು ಹೀಗಿವೆ: “ಇಸ್ರಾಯೇಲ್ಯರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಇವುಗಳಿಂದ ಜನರು ಜ್ಞಾನವನ್ನೂ [“ವಿವೇಕವನ್ನೂ,” NW] ಶಿಕ್ಷೆಯನ್ನೂ [“ಶಿಸ್ತನ್ನೂ,” NW] ಪಡೆದು ಬುದ್ಧಿವಾದಗಳನ್ನು ಗ್ರಹಿ”ಸುವರು.—ಜ್ಞಾನೋಕ್ತಿ 1:1, 2.
ಈಗ, ಜ್ಞಾನೋಕ್ತಿ ಪುಸ್ತಕದ ಮೊದಲ ಕೆಲವು ಅಧ್ಯಾಯಗಳಲ್ಲಿರುವ ಕೇವಲ ಕೆಲವೊಂದು ದೃಢವಾದ ಬೋಧನೆಗಳನ್ನು ಪರಿಗಣಿಸೋಣ. ತನ್ನ ಮಗನನ್ನು ಪ್ರೇರೇಪಿಸುತ್ತಿರುವ ಪ್ರೇಮಮಯಿ ತಂದೆಯಂತೆ ಸೊಲೊಮೋನನು, ಶಿಸ್ತನ್ನು ಸ್ವೀಕರಿಸಿ, ವಿವೇಕಕ್ಕೆ ಗಮನಕೊಡುವಂತೆ ತನ್ನ ವಾಚಕರನ್ನು ಬೇಡಿಕೊಳ್ಳುತ್ತಾನೆ. (ಅಧ್ಯಾಯಗಳು 1 ಮತ್ತು 2) ಯೆಹೋವನೊಂದಿಗೆ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳುವುದು ಹೇಗೆ ಮತ್ತು ನಮ್ಮ ಹೃದಯವನ್ನು ರಕ್ಷಿಸುವುದು ಹೇಗೆಂಬುದನ್ನು ಆತನು ನಮಗೆ ತೋರಿಸುತ್ತಾನೆ. (ಅಧ್ಯಾಯಗಳು 3 ಮತ್ತು 4) ನಾವು ನೈತಿಕವಾಗಿ ಶುದ್ಧರಾಗಿರುವಂತೆ ಬುದ್ಧಿವಾದವನ್ನು ಕೊಡಲಾಗಿದೆ. (ಅಧ್ಯಾಯಗಳು 5 ಮತ್ತು 6) ಒಬ್ಬ ಅನೈತಿಕ ವ್ಯಕ್ತಿಯು ಕಾರ್ಯನಡೆಸುವ ರೀತಿಯನ್ನು ಬಯಲುಮಾಡುತ್ತಾ ತಿಳಿಸಲ್ಪಟ್ಟಿರುವ ವಿಷಯಗಳು ನಮಗೆ ಅತ್ಯಮೂಲ್ಯವಾದದ್ದಾಗಿವೆ. (ಅಧ್ಯಾಯ 7) ಮತ್ತು ಮನುಷ್ಯನಂತೆ ಮೂರ್ತೀಕರಿಸಲ್ಪಟ್ಟಿರುವ ವಿವೇಕದ ಕರೆಯು ಎಲ್ಲರಿಗೂ ಎಷ್ಟು ಆಕರ್ಷಕವಾಗಿದೆ! (ಅಧ್ಯಾಯ 8) ಮುಂದಿನ ಅಧ್ಯಾಯಗಳಲ್ಲಿರುವ ಸಂಕ್ಷಿಪ್ತವಾದ ಒಂದೊಂದು ಜ್ಞಾನೋಕ್ತಿಗಳನ್ನು ಬರೆಯಲು ಮುಂದುವರಿಯುವ ಮುಂಚೆ, ರಾಜ ಸೊಲೊಮೋನನು ಈ ವರೆಗೆ ಚರ್ಚಿಸಿರುವ ಸಂಗತಿಗಳ ಪ್ರಚೋದಕ ಸಾರಾಂಶವನ್ನು ಕೊಡುತ್ತಾನೆ.—ಅಧ್ಯಾಯ 9.
‘ಬನ್ನಿರಿ, ನನ್ನ ಆಹಾರವನ್ನು ಉಣ್ಣಿರಿ, ನನ್ನ ದ್ರಾಕ್ಷಾರಸವನ್ನು ಕುಡಿಯಿರಿ’
ಜ್ಞಾನೋಕ್ತಿ ಪುಸ್ತಕದ ಮೊದಲ ಭಾಗದ ಸಮಾಪ್ತಿಯಲ್ಲಿ, ಆ ಪುಸ್ತಕದ ಆರಂಭದಲ್ಲಿ ಕೊಡಲ್ಪಟ್ಟಿರುವ ವಿಷಯಗಳು ಬೇಸರಹುಟ್ಟಿಸುವಂಥ ರೀತಿಯಲ್ಲಿ ಸಾರಾಂಶಿಸಲ್ಪಟ್ಟಿಲ್ಲ. ಅದಕ್ಕೆ ಬದಲಾಗಿ, ವಾಚಕನು ವಿವೇಕವನ್ನು ಬೆನ್ನಟ್ಟುವಂತೆ ಪ್ರಚೋದಿಸುವ, ಒಂದು ಪ್ರೇರಕ ಹಾಗೂ ಮನಮುಟ್ಟುವ ದೃಷ್ಟಾಂತದ ರೂಪದಲ್ಲಿ ಆ ಸಾರಾಂಶವು ಸಾದರಪಡಿಸಲ್ಪಟ್ಟಿದೆ.
ಬೈಬಲಿನ ಜ್ಞಾನೋಕ್ತಿ ಪುಸ್ತಕದ 9ನೆಯ ಅಧ್ಯಾಯವು ಈ ಮಾತುಗಳೊಂದಿಗೆ ಆರಂಭವಾಗುತ್ತದೆ: “ಜ್ಞಾನ [“ವಿವೇಕ,” NW] ವೆಂಬಾಕೆಯು ಏಳು ಕಂಬಗಳನ್ನು ಕಡಿದು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:1) ‘ಏಳು ಕಂಬಗಳು’ ಎಂಬ ಪದಗಳು, “ಮಧ್ಯದಲ್ಲಿ ಅಂಗಣವಿದ್ದು ಅದರ ಸುತ್ತಲೂ ಕಟ್ಟಲ್ಪಟ್ಟಿರುವ ದೊಡ್ಡ ಭವನಕ್ಕೆ ಸೂಚಿಸುತ್ತವೆ. ಈ ಕಟ್ಟೋಣದ ಆಧಾರಕ್ಕಾಗಿ ಅದರ ಪ್ರತಿಯೊಂದು ಪಕ್ಕದಲ್ಲಿ ಮೂರು ಕಂಬಗಳಿವೆ, ಮತ್ತು ಪ್ರವೇಶಕ್ಕಾಗಿರುವ ತೆರೆದ ಕ್ಷೇತ್ರದ ಎದುರುಬದಿಗಿರುವ ಪಕ್ಕದ ಮಧ್ಯಭಾಗದಲ್ಲಿ ಒಂದು ಕಂಬವಿದೆ.” ಈ ವಿಷಯವು ಸತ್ಯವಾಗಿರಲಿ ಇಲ್ಲದಿರಲಿ, ಒಂದು ವಿಷಯವಂತೂ ಖಂಡಿತ. ಅದೇನೆಂದರೆ, ವಿವೇಕವು ಅನೇಕ ಅತಿಥಿಗಳನ್ನು ಬರಮಾಡಿಕೊಳ್ಳಲಿಕ್ಕಾಗಿ ಒಂದು ಗಟ್ಟಿಮುಟ್ಟಾದ ಮನೆಯನ್ನು ಕಟ್ಟಿದೆ.
ಔತಣಕ್ಕಾಗಿ ಬೇಕಾಗಿರುವುದೆಲ್ಲವೂ ಸಿದ್ಧವಾಗಿದೆ. ಮಾಂಸವು ಇದೆ ಮತ್ತು ದ್ರಾಕ್ಷಾರಸವೂ ಇದೆ. ಊಟದ ತಯಾರಿಗೆ ಮತ್ತು ಮೇಜನ್ನು ಸಿದ್ಧವಾಗಿಡಲಿಕ್ಕಾಗಿ ವಿವೇಕವು ವೈಯಕ್ತಿಕ ಗಮನವನ್ನು ಕೊಟ್ಟಿದೆ. “ಪಶುಗಳನ್ನು ಕೊಯಿಸಿ [ಪಾನದ್ರವ್ಯಗಳೊಡನೆ] ದ್ರಾಕ್ಷಾರಸವನ್ನು ಬೆರಸಿ ಔತಣವನ್ನು ಸಿದ್ಧಪಡಿಸಿದ್ದಾಳೆ.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:2) ಈ ಸಾಂಕೇತಿಕ ಮೇಜಿನ ಮೇಲೆ ಜಾಗರೂಕತೆಯಿಂದ ಪರಿಗಣಿಸಬೇಕಾದ ಆತ್ಮಿಕ ಆಹಾರವು ಲಭ್ಯವಿದೆಯೆಂಬುದು ಅದರಿಂದ ವ್ಯಕ್ತವಾಗುತ್ತದೆ.—ಯೆಶಾಯ 55:1, 2.
ನಿಜವಾದ ವಿವೇಕವು ಸಿದ್ಧಗೊಳಿಸಿರುವ ಈ ಔತಣಕ್ಕೆ ಯಾರೆಲ್ಲ ಆಮಂತ್ರಿಸಲ್ಪಟ್ಟಿದ್ದಾರೆ? “ಆಕೆಯು ತನ್ನ ದಾಸಿಯರನ್ನು ಕಳುಹಿಸಿ ಮೂಢನಾಗಿರುವವನು ಈ ಕಡೆಗೆ ತಿರುಗಲಿ ಎಂದು ಪಟ್ಟಣದ ರಾಜಮಾರ್ಗಗಳ ಅಗ್ರಸ್ಥಾನಗಳಲ್ಲಿ ಪ್ರಕಟಿಸುತ್ತಾಳೆ. ಆಕೆಯು ಬುದ್ಧಿಹೀನರಿಗೆ—ಬನ್ನಿರಿ, ನಾನು ಬಡಿಸುವ ಆಹಾರವನ್ನು ಉಣ್ಣಿರಿ, ನಾನು ಬೆರಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. ಮೂಢರೇ [ಮೂಢತ್ವವನ್ನು] ಬಿಟ್ಟು ಬಾಳಿರಿ, ವಿವೇಕಮಾರ್ಗದಲ್ಲಿ ನೆಟ್ಟಗೆ ನಡೆಯಿರಿ ಎಂದು ಪ್ರಬೋಧಿಸುತ್ತಾಳೆ.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 9:3-6.
ಆಮಂತ್ರಣವನ್ನು ಕೊಡಲಿಕ್ಕಾಗಿ ವಿವೇಕವು ತನ್ನ ದಾಸಿಯರನ್ನು ಕಳುಹಿಸಿದೆ. ಅವರು ಅತಿ ಹೆಚ್ಚು ಸಂಖ್ಯೆಯ ಜನರಿಗೆ ಕರೆಕೊಡಬಹುದಾದಂಥ ಸಾರ್ವಜನಿಕ ಸ್ಥಳಗಳಿಗೆ ಹೋಗಿದ್ದಾರೆ. ಎಲ್ಲರಿಗೂ, ಅಂದರೆ “ಬುದ್ಧಿಹೀನರಿಗೆ” ಅಥವಾ ತಿಳುವಳಿಕೆಯಿಲ್ಲದವರಿಗೂ ಮತ್ತು ಅನುಭವವಿಲ್ಲದವರಿಗೂ ಆಮಂತ್ರಣವಿದೆ. (ಜ್ಞಾನೋಕ್ತಿ 9:4) ಮತ್ತು ಅವರಿಗೆ ಜೀವಿತದ ವಾಗ್ದಾನವನ್ನೂ ನೀಡಲಾಗಿದೆ. ಜ್ಞಾನೋಕ್ತಿ ಪುಸ್ತಕವನ್ನು ಸೇರಿಸಿ ದೇವರ ವಾಕ್ಯದಲ್ಲಿರುವ ವಿವೇಕವು ಬಹುಮಟ್ಟಿಗೆ ಎಲ್ಲರಿಗೂ ಲಭ್ಯವಿದೆ. ಇಂದು ನಿಜ ವಿವೇಕದ ಸಂದೇಶವಾಹಕರೋಪಾದಿ ಯೆಹೋವನ ಸಾಕ್ಷಿಗಳು ಜನರನ್ನು ಎಲ್ಲಿಯೇ ಭೇಟಿಯಾಗಲಿ, ಅವರಿಗೆ ಬೈಬಲನ್ನು ಅಭ್ಯಾಸಮಾಡುವ ಆಮಂತ್ರಣವನ್ನು ನೀಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಈ ಜ್ಞಾನವನ್ನು ತೆಗೆದುಕೊಳ್ಳುವುದು ಖಂಡಿತವಾಗಿಯೂ ನಿತ್ಯ ಜೀವಕ್ಕೆ ನಡೆಸಬಲ್ಲದು.—ಯೋಹಾನ 17:3.
ಕ್ರೈಸ್ತರು ನಮ್ರಭಾವದಿಂದ ವಿವೇಕವು ಕೊಡುವ ಶಿಸ್ತನ್ನು ಸ್ವೀಕರಿಸಬೇಕು. ಯುವ ಜನರು ಮತ್ತು ಇತ್ತೀಚೆಗೆ ಯೆಹೋವನ ಕುರಿತಾಗಿ ಕಲಿಯಲು ಆರಂಭಿಸಿರುವವರಿಗೆ ಇದು ವಿಶೇಷವಾಗಿ ಅನ್ವಯವಾಗುತ್ತದೆ. ಇವರಿಗೆ ದೇವರ ಮಾರ್ಗಗಳ ವಿಷಯದಲ್ಲಿ ಕಡಿಮೆ ಅನುಭವವಿರುವುದರಿಂದ “ಬುದ್ಧಿಹೀನ”ರಾಗಿರಬಹುದು. ಅವರ ಎಲ್ಲ ಉದ್ದೇಶಗಳು ಕೆಟ್ಟದ್ದಾಗಿವೆಯೆಂಬುದು ಇದರರ್ಥವಲ್ಲ. ಆದರೆ ವಿಷಯವೇನೆಂದರೆ, ನಮ್ಮ ಹೃದಯವನ್ನು ಯೆಹೋವ ದೇವರಿಗೆ ನಿಜವಾಗಿಯೂ ಸಂತೋಷ ತರುವಂಥ ಸ್ಥಿತಿಗೆ ತರಲು ಸಮಯ ಹಿಡಿಯುತ್ತದೆ ಮತ್ತು ಪ್ರಯತ್ನವೂ ಅಗತ್ಯ. ಹೃದಯವನ್ನು ಆ ಸ್ಥಿತಿಗೆ ತರಲಿಕ್ಕಾಗಿ, ನಾವು ನಮ್ಮ ವಿಚಾರಗಳನ್ನು, ಅಭಿಲಾಷೆಗಳನ್ನು, ಭಾವನೆಗಳನ್ನು ಮತ್ತು ಗುರಿಗಳನ್ನು ದೇವರು ಮೆಚ್ಚುವಂತಹ ವಿಷಯಗಳಿಗೆ ಹೊಂದಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಆದುದರಿಂದ ಅವರು ‘ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳುವುದು’ ಎಷ್ಟು ಅತ್ಯಾವಶ್ಯಕ!—1 ಪೇತ್ರ 2:2, NW.
ವಾಸ್ತವದಲ್ಲಿ ನಾವೆಲ್ಲರೂ ‘ಪ್ರಥಮಬೋಧನೆ’ಗಿಂತಲೂ ಮುಂದಕ್ಕೆ ಹೋಗಬೇಕಲ್ಲವೊ? “ದೇವರ ಅಗಾಧವಾದ ವಿಷಯಗಳ” ಕುರಿತು ನಾವು ಖಂಡಿತವಾಗಿಯೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಪ್ರೌಢ ಜನರಿಗಾಗಿರುವ ಗಟ್ಟಿಯಾದ ಆಹಾರದಿಂದ ಪೋಷಿಸಲ್ಪಡಬೇಕು. (ಇಬ್ರಿಯ 5:12–6:1; 1 ಕೊರಿಂಥ 2:10) ಯೇಸು ಕ್ರಿಸ್ತನು ಯಾರ ಮೇಲೆ ನೇರವಾಗಿ ಮೇಲ್ವಿಚಾರಣೆ ನಡೆಸುತ್ತಾನೊ ಆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಸಮಯಕ್ಕೆ ಸರಿಯಾಗಿ ಶ್ರದ್ಧಾಪೂರ್ವಕವಾಗಿ ಆತ್ಮಿಕ ಆಹಾರವನ್ನು ಎಲ್ಲರಿಗೂ ಒದಗಿಸುತ್ತದೆ. (ಮತ್ತಾಯ 24:45-47) ದೇವರ ವಾಕ್ಯವನ್ನು ಮತ್ತು ಆಳು ವರ್ಗವು ಒದಗಿಸುವಂಥ ಬೈಬಲ್ ಆಧಾರಿತ ಪ್ರಕಾಶನಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಮಾಡುವ ಮೂಲಕ, ವಿವೇಕವು ಸಿದ್ಧಪಡಿಸಿರುವ ಮೇಜಿನಲ್ಲಿ ನಾವು ಔತಣವನ್ನು ಆನಂದಿಸೋಣ.
“ಧರ್ಮನಿಂದಕನನ್ನು ಗದರಿಸಬೇಡ”
ವಿವೇಕದ ಬೋಧನೆಗಳಲ್ಲಿ ತಿದ್ದುಪಾಟು ಮತ್ತು ಗದರಿಕೆಯೂ ಸೇರಿದೆ. ವಿವೇಕದ ಈ ವೈಶಿಷ್ಟ್ಯವನ್ನು ಎಲ್ಲರೂ ಸಂತೋಷದಿಂದ ಅಂಗೀಕರಿಸುವುದಿಲ್ಲ. ಆದುದರಿಂದ, ಜ್ಞಾನೋಕ್ತಿ ಪುಸ್ತಕದ ಮೊದಲನೆಯ ಭಾಗದ ಸಮಾಪ್ತಿಯಲ್ಲಿ ಒಂದು ಎಚ್ಚರಿಕೆಯಿದೆ: “ಧರ್ಮನಿಂದಕನನ್ನು ಶಿಕ್ಷಿಸುವವನು ತನ್ನನ್ನು ಅವಮಾನಕ್ಕೆ ಗುರಿಮಾಡಿಕೊಳ್ಳುವನು, ಕೆಟ್ಟವನನ್ನು ಗದರಿಸುವವನಿಗೇ ಕಳಂಕವಾಗುವದು. ಧರ್ಮನಿಂದಕನನ್ನು ಗದರಿಸಬೇಡ, ನಿನ್ನನ್ನು ಹಗೆಮಾಡುವನು.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 9:7, 8ಎ.
ಧರ್ಮನಿಂದಕನು ತನ್ನ ಮಾರ್ಗವನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಯಾರಾದರೂ ಸಹಾಯಮಾಡಲು ಪ್ರಯತ್ನಿಸಿದರೆ, ಅವನು ಆ ವ್ಯಕ್ತಿಯ ಕಡೆಗೆ ಅಸಮಾಧಾನ ಮತ್ತು ದ್ವೇಷವನ್ನು ಬೆಳೆಸಿಕೊಳ್ಳುತ್ತಾನೆ. ಒಬ್ಬ ದುಷ್ಟ ವ್ಯಕ್ತಿಗೆ, ಗದರಿಕೆಯ ಮೌಲ್ಯವೇನೆಂಬುದೇ ಗೊತ್ತಿರುವುದಿಲ್ಲ. ಸತ್ಯವನ್ನು ದ್ವೇಷಿಸುವ ಅಥವಾ ಅದನ್ನು ನಿಂದಿಸಲು ಪ್ರಯತ್ನಿಸುತ್ತಿರುವ ಒಬ್ಬ ವ್ಯಕ್ತಿಗೆ, ದೇವರ ವಾಕ್ಯದಲ್ಲಿರುವ ಸುಂದರ ಸತ್ಯಗಳನ್ನು ಕಲಿಸಲು ಪ್ರಯತ್ನಿಸುವುದು ಎಷ್ಟು ಮೂರ್ಖತನದ ಕೆಲಸವಾಗಿದೆ! ಅಪೊಸ್ತಲ ಪೌಲನು ಅಂತಿಯೋಕ್ಯದಲ್ಲಿ ಸಾರುತ್ತಿದ್ದಾಗ, ಸತ್ಯವನ್ನು ಕಿಂಚಿತ್ತೂ ಇಷ್ಟಪಡದಿದ್ದ ಯೆಹೂದ್ಯರ ಗುಂಪನ್ನು ಎದುರಿಸಿದನು. ಅವನಿಗೆ ಎದುರುಮಾತಾಡುವ ಮೂಲಕ, ಅವರು ಅವನನ್ನು ಒಂದು ವಾಗ್ವಾದದಲ್ಲಿ ಸಿಲುಕಿಸಲು ಪ್ರಯತ್ನಿಸಿದರು. ಆದರೆ ಪೌಲನು ಹೇಳಿದನು: “ನೀವು [ದೇವರ ವಾಕ್ಯವನ್ನು] ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪುಮಾಡಿಕೊಂಡದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ.”—ಅ. ಕೃತ್ಯಗಳು 13:45, 46.
ರಾಜ್ಯದ ಸುವಾರ್ತೆಯನ್ನು ಪ್ರಾಮಾಣಿಕ ಹೃದಯದ ಜನರಿಗೆ ತಲಪಿಸಲು ನಾವು ಪ್ರಯತ್ನಮಾಡಬೇಕು ನಿಜ. ಆದರೆ ಅದೇ ಸಮಯದಲ್ಲಿ ನಿಂದಕರೊಂದಿಗೆ ವಾದವಿವಾದಗಳಲ್ಲಿ ಸಿಲುಕದಂತೆ ನಾವು ಜಾಗ್ರತೆವಹಿಸಬೇಕು. ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಈ ಸೂಚನೆಯನ್ನು ಕೊಟ್ಟನು: “ಆ ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದಕ್ಕೆ ಬರಲಿ. ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.”—ಮತ್ತಾಯ 10:12-14.
ಗದರಿಕೆಗೆ ಒಬ್ಬ ವಿವೇಕಿಯು ತೋರಿಸುವ ಪ್ರತಿಕ್ರಿಯೆಯು, ಒಬ್ಬ ನಿಂದಕನ ಪ್ರತಿಕ್ರಿಯೆಗಿಂತ ತೀರ ವಿರುದ್ಧವಾದದ್ದಾಗಿರುತ್ತದೆ. ಸೊಲೊಮೋನನು ತಿಳಿಸುವುದು: “ವಿವೇಕಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿಸುವನು. ವಿವೇಕಿಗೆ ಉಪದೇಶಿಸಿದರೆ ಅವನು ಹೆಚ್ಚು ವಿವೇಕಿಯಾಗುವನು.” (ಜ್ಞಾನೋಕ್ತಿ 9:8ಬಿ, 9ಎ, NW) “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂಬುದು ಒಬ್ಬ ವಿವೇಕಿಗೆ ತಿಳಿದಿರುವ ಸಂಗತಿಯಾಗಿದೆ. (ಇಬ್ರಿಯ 12:11) ಸಲಹೆಯು ಮನಸ್ಸಿಗೆ ಸ್ವಲ್ಪ ನೋವನ್ನುಂಟುಮಾಡಿದರೂ, ಅದನ್ನು ಅಂಗೀಕರಿಸುವುದರಿಂದ ನಾವೇ ಹೆಚ್ಚು ವಿವೇಕಿಗಳಾಗುವುದಾದರೆ, ನಾವದನ್ನು ಏಕೆ ಅನ್ವಯಿಸದೇ ಇರಬೇಕು ಇಲ್ಲವೇ ಸಲಹೆಯನ್ನು ಪಡೆಯುವುದರಿಂದ ತಪ್ಪಿಸಿಕೊಳ್ಳಬೇಕು?
“ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳುವಳಿಕೆಯನ್ನು ಪಡೆಯುವನು” ಎಂದು ಆ ಬುದ್ಧಿವಂತ ರಾಜನು ಮುಂದುವರಿಸುತ್ತಾ ಹೇಳುತ್ತಾನೆ. (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:9ಬಿ) ತನ್ನಲ್ಲಿ ಹೆಚ್ಚು ವಿವೇಕವಿರುವುದರಿಂದ, ಇಲ್ಲವೇ ತನಗೆ ತುಂಬ ಪ್ರಾಯವಾಗಿರುವುದರಿಂದ ಇನ್ನೂ ಹೆಚ್ಚನ್ನು ಕಲಿಯಲು ಸಾಧ್ಯವಿಲ್ಲವೆಂದು ಯಾರೂ ಹೇಳಸಾಧ್ಯವಿಲ್ಲ. ವೃದ್ಧರು ಸಹ ಸತ್ಯವನ್ನು ಸ್ವೀಕರಿಸಿ, ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದನ್ನು ನೋಡಿ ಎಷ್ಟು ಸಂತೋಷವಾಗುತ್ತದೆ! ನಾವು ಸಹ ಯಾವಾಗಲೂ ಕಲಿಯುತ್ತಾ ಇರುವ ಇಚ್ಛೆಯನ್ನು ನಮ್ಮಲ್ಲಿ ಇಟ್ಟುಕೊಳ್ಳಲು ಮತ್ತು ಮನಸ್ಸನ್ನು ಸಕ್ರಿಯವಾಗಿಡಲು ಪ್ರಯತ್ನಿಸೋಣ.
“ನಿನ್ನ ಆಯುಸ್ಸಿನ ವರುಷಗಳು ವೃದ್ಧಿಯಾಗುವವು”
ಪರಿಗಣಿಸಲಾಗುತ್ತಿರುವ ಮುಖ್ಯಾಂಶವನ್ನು ಎತ್ತಿತೋರಿಸುತ್ತಾ, ವಿವೇಕವನ್ನು ಪಡೆಯಲಿಕ್ಕಾಗಿ ಇರಲೇಬೇಕಾದ ಅತ್ಯಾವಶ್ಯಕ ಸಂಗತಿಯನ್ನು ಲೇಖಕನು ಸೇರಿಸುತ್ತಾನೆ. ಅವನು ಬರೆದುದು: “ಯೆಹೋವನ ಭಯವೇ ಜ್ಞಾನಕ್ಕೆ [“ವಿವೇಕದ,” NW] ಮೂಲವು, ಪರಿಶುದ್ಧನ ತಿಳುವಳಿಕೆಯೇ ವಿವೇಕವು.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:10) ಸತ್ಯ ದೇವರಿಗಾಗಿ ಗಾಢವಾದ, ಪೂಜ್ಯಭಾವನೆಯ ಭಯಭಕ್ತಿ ಇಲ್ಲದಿರುವಲ್ಲಿ, ದೈವಿಕ ವಿವೇಕವನ್ನು ಪಡೆಯಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯ ತಲೆಯಲ್ಲಿ ಜ್ಞಾನವು ತುಂಬಿರಬಹುದು. ಆದರೆ ಅವನಲ್ಲಿ ಯೆಹೋವನ ಭಯ ಇಲ್ಲದಿರುವಲ್ಲಿ, ಆ ಜ್ಞಾನವನ್ನು ಸೃಷ್ಟಿಕರ್ತನಿಗೆ ಗೌರವವನ್ನು ತರುವಂಥ ರೀತಿಯಲ್ಲಿ ಅವನು ಉಪಯೋಗಿಸಲಿಕ್ಕಿಲ್ಲ. ವಾಸ್ತವಾಂಶಗಳೆಂದು ಎಲ್ಲರಿಗೂ ತಿಳಿದಿರುವ ಸಂಗತಿಗಳ ಕುರಿತಾಗಿ ಅವನು ತಪ್ಪಾದ ತೀರ್ಮಾನಗಳನ್ನೂ ಮಾಡಬಹುದು. ಮತ್ತು ಹೀಗೆ ತನ್ನನ್ನೇ ಮೂರ್ಖನನ್ನಾಗಿ ಮಾಡಿಕೊಳ್ಳುವನು. ಅತಿ ಪರಿಶುದ್ಧನಾಗಿರುವ ಯೆಹೋವನ ಕುರಿತಾದ ಜ್ಞಾನವು ತಿಳುವಳಿಕೆಯನ್ನು ಪಡೆಯಲಿಕ್ಕಾಗಿಯೂ ತೀರ ಆವಶ್ಯಕ. ಮತ್ತು ತಿಳುವಳಿಕೆಯು, ವಿವೇಕದ ಒಂದು ಗಮನಾರ್ಹ ಲಕ್ಷಣವಾಗಿದೆ.
ವಿವೇಕವು ಯಾವ ಫಲವನ್ನು ಉತ್ಪಾದಿಸುತ್ತದೆ? (ಜ್ಞಾನೋಕ್ತಿ 8:12-21, 35) ಇಸ್ರಾಯೇಲಿನ ರಾಜನು ಹೇಳುವುದು: “ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಸ್ಸಿನ ವರುಷಗಳು ವೃದ್ಧಿಯಾಗುವವು.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:11) ಆಯುಸ್ಸಿನ ದಿನಗಳು ಹಾಗೂ ವರುಷಗಳ ಲಂಬಿಸುವಿಕೆಯು, ವಿವೇಕದೊಂದಿಗೆ ಸಹವಾಸಿಸುವುದರ ಫಲಿತಾಂಶವಾಗಿದೆ. ಹೌದು, “ಜ್ಞಾನಕ್ಕೆ [“ವಿವೇಕಕ್ಕೆ,” NW] ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.”—ಪ್ರಸಂಗಿ 7:12.
ವಿವೇಕವನ್ನು ಸಂಪಾದಿಸಲು ಶ್ರಮಿಸುವುದು ನಮ್ಮ ವೈಯಕ್ತಿಕ ಜವಾಬ್ದಾರಿಯಾಗಿದೆ. ಈ ವಾಸ್ತವಾಂಶವನ್ನು ಒತ್ತಿಹೇಳುತ್ತಾ, ಸೊಲೊಮೋನನು ತಿಳಿಸಿದ್ದು: “ನೀನು ಜ್ಞಾನವಂತನಾದರೆ [“ವಿವೇಕಿಯಾದರೆ,” NW] ನಿನ್ನ ಜ್ಞಾನವು [“ವಿವೇಕವು,” NW] ನಿನಗೇ ಲಾಭಕರ, ಧರ್ಮನಿಂದಕನಾದರೆ ನೀನೇ ಅದರ ಫಲವನ್ನು ಅನುಭವಿಸುವಿ.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:12) ಒಬ್ಬ ವಿವೇಕಿಯ ವಿವೇಕದಿಂದ ಅವನಿಗೇ ಲಾಭವಾಗುತ್ತದೆ. ಮತ್ತು ಒಬ್ಬ ನಿಂದಕನು ಅನುಭವಿಸುವ ಕಷ್ಟಾನುಭವಕ್ಕೆ ಸ್ವತಃ ಅವನೇ ಜವಾಬ್ದಾರನು. ನಿಶ್ಚಯವಾಗಿಯೂ ನಾವೇನನ್ನು ಬಿತ್ತುತ್ತೇವೊ ಅದನ್ನೇ ಕೊಯ್ಯುತ್ತೇವೆ. ಹೀಗಿರುವುದರಿಂದ ನಾವು, ‘ಕಿವಿಯನ್ನು ಜ್ಞಾನದ [“ವಿವೇಕದ,” NW] ಕಡೆಗೆ ತಿರುಗಿಸಬೇಕು.’—ಜ್ಞಾನೋಕ್ತಿ 2:2.
‘ಮೂಢಳು ಕೂಗಾಟದವಳು’
ತದ್ವಿರುದ್ಧವಾಗಿ, ಸೊಲೊಮೋನನು ಮುಂದೆ ಹೇಳುವುದು: ‘ಅಜ್ಞಾನವೆಂಬವಳಾದರೋ [“ಮೂಢಳಾದರೋ,” NW] ಕೂಗಾಟದವಳು, ಏನೂ ತಿಳಿಯದವಳು. ಅವಳು ತನ್ನ ಮನೆಯ ಬಾಗಿಲಿನಲ್ಲಿ ಪಟ್ಟಣದ ರಾಜಮಾರ್ಗಗಳಲ್ಲಿ ಗದ್ದುಗೆಯ ಮೇಲೆ ಕೂತುಕೊಂಡವಳಾಗಿ ತಮ್ಮ ಮಾರ್ಗವನ್ನು ಹಿಡಿದು ಹೋಗಿ ಬರುವವರನ್ನು ನೋಡಿ—ಮೂಢನಾಗಿರುವವನು [“ಅನನುಭವಿಯು,” NW] ಈ ಕಡೆಗೆ ತಿರುಗಲಿ ಎಂದು ಕೂಗಿ ಹೇಳುತ್ತಾಳೆ.’ (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 9:13-16ಎ.
ಇಲ್ಲಿ ಅಜ್ಞಾನವನ್ನು ದೊಡ್ಡಬಾಯಿಯುಳ್ಳ, ಶಿಸ್ತಿಲ್ಲದ ಹಾಗೂ ಅಜ್ಞಾನಿಯಾದ ಹೆಂಗಸಿನೋಪಾದಿ ಚಿತ್ರಿಸಲಾಗಿದೆ. ಅವಳೂ ಒಂದು ಮನೆಯನ್ನು ಕಟ್ಟಿದ್ದಾಳೆ. ಮತ್ತು ಅನನುಭವಿಗಳಿಗೆ ಕರೆಕೊಡುವ ಕೆಲಸವನ್ನು ಅವಳೇ ಮಾಡುತ್ತಾಳೆ. ಆದುದರಿಂದ ಈಗ ದಾರಿಯಲ್ಲಿ ಹೋಗುತ್ತಿರುವವರಿಗೆ ಒಂದು ಆಯ್ಕೆಯಿದೆ. ಅವರು ವಿವೇಕದ ಆಮಂತ್ರಣವನ್ನು ಸ್ವೀಕರಿಸುವರೊ ಅಥವಾ ಮೂಢತನದ ಆಮಂತ್ರಣವನ್ನು ಸ್ವೀಕರಿಸುವರೊ?
“ಕದ್ದ ನೀರು ಸಿಹಿಯಾಗಿದೆ”
ವಿವೇಕ ಮತ್ತು ಮೂಢತನ ಇವೆರಡೂ, ಕೇಳುಗರಿಗೆ ‘ಈ ಕಡೆಗೆ ತಿರುಗಿರಿ’ ಎಂಬ ಆಮಂತ್ರಣವನ್ನು ಕೊಡುತ್ತವೆ. ಆದರೆ ಅವುಗಳ ಆಕರ್ಷಣೆಯ ವಿಷಯಗಳು ಭಿನ್ನವಾಗಿವೆ. ದ್ರಾಕ್ಷಾರಸ, ಮಾಂಸ ಮತ್ತು ಆಹಾರದ ಔತಣಕ್ಕೆ ವಿವೇಕವು ಜನರನ್ನು ಆಮಂತ್ರಿಸುತ್ತದೆ. ಆದರೆ ಮೂಢತನವು ನೀಡುವಂಥ ಆಕರ್ಷಕ ಸಂಗತಿಗಳು, ಸಡಿಲು ನಡತೆಯ ಹೆಂಗಸಿನ ರೀತಿನೀತಿಗಳನ್ನು ನೆನಪಿಗೆ ತರುತ್ತವೆ. ಸೊಲೊಮೋನನು ಹೇಳುವುದು: “ಕದ್ದ ನೀರು ಸಿಹಿಯಾಗಿದೆ, ಗುಟ್ಟಾಗಿ ತಿನ್ನುವ ತಿಂಡಿಯು ರುಚಿಯಾಗಿದೆ ಎಂದು ಬುದ್ಧಿಹೀನನಿಗೆ ಹೇಳುತ್ತಾಳೆ.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 9:17.
ಮಿಶ್ರಿತ ದ್ರಾಕ್ಷಾರಸದ ಬದಲಿಗೆ, ಈ ‘ಮೂಢಳು’ (NW) ಕದ್ದ ನೀರನ್ನು ನೀಡುತ್ತಾಳೆ. (ಜ್ಞಾನೋಕ್ತಿ 9:13) ಶಾಸ್ತ್ರವಚನಗಳಲ್ಲಿ, ಪ್ರಿಯ ಪತ್ನಿಯೊಂದಿಗೆ ಲೈಂಗಿಕ ಆನಂದವನ್ನು ಪಡೆಯುವುದನ್ನು, ಚೈತನ್ಯದಾಯಕ ನೀರನ್ನು ಕುಡಿಯುವುದಕ್ಕೆ ಹೋಲಿಸಲಾಗಿದೆ. (ಜ್ಞಾನೋಕ್ತಿ 5:15-17) ಹೀಗಿರುವುದರಿಂದ, ಕದ್ದ ನೀರು ಗುಪ್ತವಾಗಿ ನಡೆಸಲಾಗುವ ಅನೈತಿಕ ಲೈಂಗಿಕ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಇಂಥ ನೀರು ರುಚಿಕರವಾಗಿದೆ, ಹೌದು ದ್ರಾಕ್ಷಾರಸಕ್ಕಿಂತಲೂ ಸಿಹಿಯಾಗಿದೆಯೆಂದು ತೋರುವಂತೆ ಮಾಡಲಾಗಿದೆ. ಏಕೆಂದರೆ ಅದನ್ನು ಕದಿಯಲಾಗಿದೆ ಮತ್ತು ಯಾರೂ ಪತ್ತೆಹಚ್ಚಲ್ಪಡದೇ ತಪ್ಪಿಸಿಕೊಳ್ಳಬಹುದೆಂಬ ವಿಚಾರವು ಮನಸ್ಸಿಗೆ ಬರುತ್ತದೆ. ಗುಪ್ತವಾಗಿ ತಿನ್ನಲ್ಪಡುವ ಈ ಆಹಾರವು, ವಿವೇಕದ ಆಹಾರ ಮತ್ತು ಮಾಂಸಕ್ಕಿಂತಲೂ ಹೆಚ್ಚು ರುಚಿಕರವಾಗಿರುವ ತೋರಿಕೆಯನ್ನು ಕೊಡಲಾಗಿದೆ, ಯಾಕೆಂದರೆ ಅದನ್ನು ಅನ್ಯಾಯವಾಗಿ ಗಳಿಸಲಾಗಿದೆ. ನಿಷೇಧಿಸಲ್ಪಟ್ಟಿರುವ ಮತ್ತು ಗುಪ್ತವಾಗಿರುವ ವಿಷಯವನ್ನು ಆಕರ್ಷಕವೆಂದು ಪರಿಗಣಿಸುವುದು, ಮೂಢತನದ ಒಂದು ಚಿಹ್ನೆಯಾಗಿದೆ.
ವಿವೇಕವು ಕೊಡುವ ಆಮಂತ್ರಣದಲ್ಲಿ ಜೀವದ ವಾಗ್ದಾನವು ಒಳಗೂಡಿದೆ, ಆದರೆ ಮೂಢ ಹೆಂಗಸು ತನ್ನ ಮಾರ್ಗಗಳನ್ನು ಅನುಸರಿಸುವುದರಿಂದ ಸಿಗುವ ಪ್ರತಿಫಲದ ಬಗ್ಗೆ ಪ್ರಸ್ತಾವವನ್ನೇ ಮಾಡುವುದಿಲ್ಲ. ಆದರೆ ಸೊಲೊಮೋನನು ಎಚ್ಚರಿಕೆಯನ್ನು ಕೊಡುತ್ತಾನೆ: “ಆ ಮನೆಯು ಪ್ರೇತನಿವಾಸವೆಂದೂ ಅವಳ ಅತಿಥಿಗಳು ಅಗಾಧಪಾತಾಳದಲ್ಲಿ ಬಿದ್ದಿರುವರೆಂದೂ ಅವನಿಗೆ ತಿಳಿಯದು.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:18) “ಈ ಮೂಢ ಹೆಂಗಸಿನ ಮನೆಯು ಒಂದು ಮನೆಯಲ್ಲ, ಬದಲಾಗಿ ಒಂದು ದೊಡ್ಡ ಸಮಾಧಿಯಾಗಿದೆ. ನೀವು ಒಮ್ಮೆ ಅದರೊಳಗೆ ಹೋದರೆ, ಅಲ್ಲಿಂದ ಜೀವಂತವಾಗಿ ಹೊರಬರುವುದಿಲ್ಲ” ಎಂದು ಒಬ್ಬ ವಿದ್ವಾಂಸನು ಬರೆಯುತ್ತಾನೆ. ಅನೈತಿಕ ಜೀವನವನ್ನು ನಡೆಸುವುದು ಖಂಡಿತವಾಗಿಯೂ ವಿವೇಕಯುತವಲ್ಲ, ಅದು ಮೃತ್ಯುಕಾರಕವಾಗಿದೆ.
ಯೇಸು ಕ್ರಿಸ್ತನು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ನಾವು ಯಾವಾಗಲೂ ವಿವೇಕದ ಮೇಜಿನ ಮೇಲೆಯೇ ಉಂಡು, ಜೀವಕ್ಕೆ ನಡೆಸುವ ಮಾರ್ಗದಲ್ಲಿರುವವರೊಂದಿಗೆ ಇರೋಣ.
[ಪುಟ 31ರಲ್ಲಿರುವ ಚಿತ್ರ]
ವಿವೇಕಿಯು ತಿದ್ದುಪಾಟನ್ನು ಅಂಗೀಕರಿಸುತ್ತಾನೆ
[ಪುಟ 31ರಲ್ಲಿರುವ ಚಿತ್ರ]
ವಿವೇಕವನ್ನು ಸಂಪಾದಿಸಿಕೊಳ್ಳುವುದು ಒಂದು ವೈಯಕ್ತಿಕ ಜವಾಬ್ದಾರಿಯಾಗಿದೆ