ನೀತಿಯನ್ನು ಬಿತ್ತಿರಿ, ದೇವರ ಪ್ರೀತಿಪೂರ್ವಕ ದಯೆಯನ್ನು ಕೊಯ್ಯಿರಿ
“ಹೆರರಿಗೆ ಹೊಣೆಯಾದರೆ ಹಾನಿ; ಹೊಣೆಗೆ [“ಕೈಕುಲುಕುವುದಕ್ಕೆ,” NW] ಅಸಹ್ಯಪಟ್ಟರೆ ನಿರ್ಭಯ.” (ಜ್ಞಾನೋಕ್ತಿ 11:15) ಈ ಸಂಕ್ಷಿಪ್ತ ಜ್ಞಾನೋಕ್ತಿಯು ಎಷ್ಟು ಮನಗಾಣಿಸುವ ರೀತಿಯಲ್ಲಿ ಜವಾಬ್ದಾರಿಯ ಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ! ನಂಬಲಾಗದ ಸಾಲಗಾರನಿಗೆ ಸಾಲಕೊಡಿಸಲು ಅವನ ಸಹಿಯೊಂದಿಗೆ ನಿಮ್ಮದನ್ನೂ ಹಾಕುವಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಆಮಂತ್ರಿಸುತ್ತೀರಿ. ಪುರಾತನ ಕಾಲದ ಇಸ್ರಾಯೇಲಿನಲ್ಲಿ ಕರಾರಿಗೆ ಸಹಿ ಹಾಕುವ ಭಾವಾಭಿನಯವಾಗಿದ್ದ ಕೈಕುಲುಕುವಿಕೆಯನ್ನು ತ್ಯಜಿಸುವಲ್ಲಿ, ಹಣಕಾಸಿನ ಬಲೆಯಿಂದ ವಿಮುಕ್ತರಾಗುವಿರಿ.
ಇಲ್ಲಿ ಅನ್ವಯಿಸಲ್ಪಟ್ಟಿರುವ ಮೂಲ ಸತ್ಯವು, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು,” ಎಂಬುದೇನೊ ಸ್ಪಷ್ಟ. (ಗಲಾತ್ಯ 6:7) “ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ [“ಪ್ರೀತಿಪೂರ್ವಕ ದಯೆಯ,” NW] ಫಲವನ್ನು ಕೊಯ್ಯಿರಿ,” ಎಂದನು ಪ್ರವಾದಿಯಾದ ಹೋಶೇಯನು. (ಹೋಶೇಯ 10:12) ಹೌದು, ದೇವರಿಗೆ ಸರಿಯಾಗಿರುವ ರೀತಿಯಲ್ಲಿ ನೀತಿಯನ್ನು ಬಿತ್ತಿ, ಆತನ ಪ್ರೀತಿಪೂರ್ವಕ ದಯೆಯನ್ನು ಕೊಯ್ಯಿರಿ. ಈ ಮೂಲಸತ್ಯವನ್ನು ಪದೇ ಪದೇ ಉಪಯೋಗಿಸುತ್ತಾ, ಇಸ್ರಾಯೇಲಿನ ಸೊಲೊಮೋನ ರಾಜನು ಸರಿಯಾದ ಕ್ರಿಯೆ, ಪ್ರಾಮಾಣಿಕ ನುಡಿ ಮತ್ತು ಯೋಗ್ಯ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಾನೆ. ನಾವು ಅವನ ವಿವೇಕದ ನುಡಿಗಳನ್ನು ಒತ್ತಾಗಿ ಪರೀಕ್ಷಿಸುವಲ್ಲಿ, ಅದು ನಾವು ನಿಶ್ಚಯವಾಗಿಯೂ ನಮಗಾಗಿ ನೀತಿಯ ಬೀಜವನ್ನು ಬಿತ್ತುವಂತೆ ಉತ್ತೇಜನ ನೀಡುವುದು.—ಜ್ಞಾನೋಕ್ತಿ 11:15-31.
“ದಯೆ”ಯನ್ನು ಬಿತ್ತಿ “ಮಾನ”ವನ್ನು ಕೊಯ್ಯಿರಿ
“ದಯಾಳುವಾದ [“ಆಕರ್ಷಣೀಯ,” NW] ಹೆಂಗಸು ಮಾನವನ್ನು ಪಡೆಯುವಳು; ಬಲಾತ್ಕಾರಿಗಳು ಧನವನ್ನು ಮಾತ್ರ ಆರ್ಜಿಸುವರು,” ಎಂದನ್ನುತ್ತಾನೆ ವಿವೇಕಿ ಅರಸನು. (ಜ್ಞಾನೋಕ್ತಿ 11:16) ಈ ವಚನವು ಆಕರ್ಷಣೀಯ ಗುಣಗಳಿರುವ ಸ್ತ್ರೀಯು, “ದಯಾಳುವಾದ ಹೆಂಗಸು” ಪಡೆಯುವ ಬಾಳಿಕೆ ಬರುವ ಮಾನಕ್ಕೂ ಬಲಾತ್ಕಾರಿಯು ಪಡೆಯುವ ಐಶ್ವರ್ಯಕ್ಕೂ ಇರುವ ವೈದೃಶ್ಯವನ್ನು ತೋರಿಸುತ್ತದೆ.
ಹಾಗಾದರೆ ಮಾನವನ್ನು ಫಲಿಸುವ ಆಕರ್ಷಣೀಯತೆಯನ್ನು ಒಬ್ಬ ವ್ಯಕ್ತಿಯು ಹೇಗೆ ಪಡೆಯಸಾಧ್ಯವಿದೆ? ಸೊಲೊಮೋನನು ಬುದ್ಧಿಹೇಳಿದ್ದು: “ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ, . . . ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವವು.” (ಜ್ಞಾನೋಕ್ತಿ 3:21, 22) ಮತ್ತು ಕೀರ್ತನೆಗಾರನು, ‘ರಾಜನ ಮಾತುಗಳು ಬಹಳ ಮಧುರ’ ಎಂದು ಹೇಳಿದನು. (ಕೀರ್ತನೆ 45:1, 2) ಹೌದು, ಪ್ರಾಯೋಗಿಕ ವಿವೇಕ, ಯೋಚನಾ ಸಾಮರ್ಥ್ಯ ಮತ್ತು ನಾಲಿಗೆಯ ಸದುಪಯೋಗವು, ಒಬ್ಬ ವ್ಯಕ್ತಿಯ ಮೌಲ್ಯ ಮತ್ತು ಆಕರ್ಷಣೀಯತೆಯನ್ನು ವರ್ಧಿಸುತ್ತದೆ. ಒಬ್ಬ ಬುದ್ಧಿವಂತೆಯ ವಿಷಯದಲ್ಲಿ ಇದು ಸತ್ಯವಾಗಿತ್ತು. ಮೂರ್ಖ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೇ ಒಂದು ಉದಾಹರಣೆಯಾಗಿದ್ದಾಳೆ. “ಬಹು ಬುದ್ಧಿವಂತೆಯೂ ಸುಂದರಿಯೂ ಆಗಿದ್ದ” ಆಕೆಯನ್ನು, ರಾಜ ದಾವೀದನು ಆಕೆಯ “ಬುದ್ಧಿ”ಯ ಕಾರಣದಿಂದ ಹೊಗಳಿದನು.—1 ಸಮುವೇಲ 25:3, 33.
ನಿಜ ಆಕರ್ಷಣೀಯತೆಯಿರುವ ಒಬ್ಬ ದೇವಭಕ್ತೆಯು ನಿಶ್ಚಯವಾಗಿಯೂ ಸನ್ಮಾನವನ್ನು ಪಡೆಯುವಳು. ಇತರರು ಆಕೆಯನ್ನು ಒಳ್ಳೆಯವಳೆಂದು ಹೇಳುವರು. ವಿವಾಹಿತಳಾಗಿರುವಲ್ಲಿ, ಆಕೆ ತನ್ನ ಗಂಡನ ದೃಷ್ಟಿಯಲ್ಲಿಯೂ ಮಾನವನ್ನು ಪಡೆಯುವಳು. ವಾಸ್ತವವೇನಂದರೆ, ಆಕೆ ಇಡೀ ಕುಟುಂಬಕ್ಕೆ ಮಾನವನ್ನು ತರುವಳು. ಮತ್ತು ಅದು ತಾತ್ಕಾಲಿಕವಾಗಿರುವ ಸನ್ಮಾನವಾಗಿರದು. “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.” (ಜ್ಞಾನೋಕ್ತಿ 22:1) ಆಕೆಗೆ ದೇವರ ದೃಷ್ಟಿಯಲ್ಲಿ ಕಂಡುಬರುವ ಆ ಒಳ್ಳೆಯ ಹೆಸರು ಕಾಯಂ ಮೌಲ್ಯವುಳ್ಳದ್ದಾಗಿರುವುದು.
ಆದರೆ ಬಲಾತ್ಕಾರಿಯ ಸನ್ನಿವೇಶವು ಭಿನ್ನವಾಗಿದೆ. ಅವನನ್ನು ದುಷ್ಟರ ಮತ್ತು ಯೆಹೋವನ ಆರಾಧಕರನ್ನು ವಿರೋಧಿಸುವವರ ವರ್ಗದಲ್ಲಿ ಸೇರಿಸಲಾಗಿದೆ. (ಯೋಬ 6:23; 27:13) ಅಂತಹ ವ್ಯಕ್ತಿಯು “ದೇವರನ್ನು ಲಕ್ಷಿಸುವದೇ ಇಲ್ಲ.” (ಕೀರ್ತನೆ 54:3) ನಿರಪರಾಧಿಗಳ ಮೇಲೆ ದಬ್ಬಾಳಿಕೆ ನಡೆಸಿ, ಅವರಿಂದ ಸ್ವಾರ್ಥಲಾಭವನ್ನು ಪಡೆಯುವ ವ್ಯಕ್ತಿಯು, “ಬೆಳ್ಳಿಯನ್ನು ದೂಳಿನಂತೆ ಹೇರಳವಾಗಿ” ಕೂಡಿಸಿಡಬಹುದು. (ಯೋಬ 27:16) ಆದರೂ, ಒಂದಲ್ಲ ಒಂದು ದಿನ, ನಿದ್ರಿಸುವ ಅವನು ಎದ್ದು ಬರದೆ ಇರಬಹುದು ಮತ್ತು ಒಂದಲ್ಲ ಒಂದು ದಿನ ಅವನು ಕಣ್ಣು ತೆರೆಯುತ್ತಲೇ ಇಲ್ಲದೆ ಹೋಗಬಹುದು. (ಯೋಬ 27:19) ಅವನ ಐಶ್ವರ್ಯ ಮತ್ತು ಸಾಧನೆಗಳೆಲ್ಲವೂ ಆಗ ವ್ಯರ್ಥವಾಗಿ ಹೋಗುವವು.—ಲೂಕ 12:16-21.
ಎಂತಹ ಅತಿ ಮುಖ್ಯವಾದ ಪಾಠವನ್ನು ಜ್ಞಾನೋಕ್ತಿ 11:16 ಕಲಿಸುತ್ತದೆ! ಹೀಗೆ, ಆಕರ್ಷಣೀಯತೆಯೂ ಬಲಾತ್ಕಾರವೂ ಒಂದೊಂದಾಗಿ ಏನನ್ನು ಕೊಯ್ಯುವುದೆಂಬ ವಿಷಯವನ್ನು ನಮ್ಮ ಮುಂದಿಡುತ್ತಾ, ಇಸ್ರಾಯೇಲಿನ ಅರಸನು ನಾವು ನೀತಿಯನ್ನು ಬಿತ್ತುವಂತೆ ಪ್ರೋತ್ಸಾಹಿಸುತ್ತಾನೆ.
“ಪ್ರೀತಿಪೂರ್ವಕ ದಯೆ” ಪ್ರತಿಫಲಗಳನ್ನು ತರುತ್ತದೆ
ಮಾನವ ಸಂಬಂಧಗಳಲ್ಲಿ ಇನ್ನೊಂದು ಪಾಠವನ್ನು ಬೋಧಿಸುತ್ತಾ, ಸೊಲೊಮೋನನು ಹೇಳಿದ್ದು: “ಪರೋಪಕಾರವು [“ಪ್ರೀತಿಪೂರ್ವಕ ದಯೆಯುಳ್ಳ ಮನುಷ್ಯನು,” NW] ತನಗೂ ಉಪಕಾರ [“ಸ್ವತಃ ಲಾಭಕರವಾಗಿ ವರ್ತಿಸುವನು,” NW]; ಕ್ರೂರನು ತನ್ನ ಶರೀರವನ್ನೂ ಹಿಂಸಿಸುವನು.” (ಜ್ಞಾನೋಕ್ತಿ 11:17) ಒಬ್ಬ ವಿದ್ವಾಂಸರು ಹೇಳುವುದು: “ಈ ಜ್ಞಾನೋಕ್ತಿಯ ಸಾರಾಂಶವೇನಂದರೆ, ಇತರರ ಕಡೆಗೆ ಒಬ್ಬನು ತೋರಿಸುವ ವರ್ತನೆಯು, ಅದು ಒಳ್ಳೇದಾಗಿರಲಿ ಕೆಟ್ಟದ್ದಾಗಿರಲಿ, ಅವನ ಮೇಲೆ ಅನುದ್ದೇಶಿತ ಮತ್ತು ಅನಿರೀಕ್ಷಿತ ಪರಿಣಾಮಗಳನ್ನು ತರುತ್ತದೆ.” ಉದಾಹರಣೆಗೆ, ಲೀಸಾ ಎಂಬ ಯುವತಿಯನ್ನು ತೆಗೆದುಕೊಳ್ಳಿ.a ಆಕೆ ಬೇಕುಬೇಕೆಂದೇ ಅಲ್ಲದಿದ್ದರೂ, ತನಗೆ ಕೊಡಲ್ಪಟ್ಟಿರುವ ಭೇಟಿನಿಶ್ಚಯಗಳನ್ನು ಸಮಯಾನುಸಾರವಾಗಿ ಪೂರೈಸದೆ ಸದಾ ವಿಳಂಬಿಸುತ್ತಿದ್ದಳು. ಸಾರುವ ಕಾರ್ಯಕ್ಕಾಗಿ ಇತರ ರಾಜ್ಯ ಪ್ರಚಾರಕರೊಂದಿಗೆ ಕೂಡಿಬರುವಾಗ, ಆಕೆ 30 ಅಥವಾ ಅದಕ್ಕಿಂತಲೂ ಹೆಚ್ಚು ನಿಮಿಷಗಳಷ್ಟು ತಡವಾಗಿ ಬರುವುದು ಅಸಾಮಾನ್ಯವಾಗಿರಲಿಲ್ಲ. ಇದರಿಂದ ಲೀಸಾ ಸ್ವತಃ ಲಾಭಕರವಾಗಿ ವರ್ತಿಸುತ್ತಿದ್ದಾಳೊ? ಇಲ್ಲ. ಆಕೆಯೊಂದಿಗೆ ಸೇವೆ ಮಾಡುವಲ್ಲಿ ತಾವು ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತೇವೆಂದು ನೆನಸಿ ಇತರರು ಆಕೆಯೊಂದಿಗೆ ಭೇಟಿನಿಶ್ಚಯ ಮಾಡದಿದ್ದರೆ ಆಕೆ ಅವರನ್ನು ದೂರಬಹುದೊ?
ಪರಿಪೂರ್ಣತಾವಾದಿಯೊಬ್ಬನು ಅಂದರೆ ಸಾಧನೆಯ ವಿಪರೀತ ಉತ್ಕೃಷ್ಟವಾದ ಮಟ್ಟಗಳನ್ನಿಟ್ಟುಕೊಳ್ಳುವವನು ತನಗೇ ಕ್ರೌರ್ಯವನ್ನು ತೋರಿಸುತ್ತಾನೆ. ತಲಪಲು ಅಸಾಧ್ಯವಾಗಿರುವ ಗುರಿಗಳನ್ನು ಮುಟ್ಟಲು ಅವಿಶ್ರಾಂತನಾಗಿ ದುಡಿಯುವ ಅವನು, ಸುಸ್ತು ಮತ್ತು ನಿರಾಶೆಗಳಿಗೆ ತನ್ನನ್ನು ಬಲಿಪಡಿಸಿಕೊಳ್ಳುತ್ತಾನೆ. ಆದರೆ, ಮುಟ್ಟಸಾಧ್ಯವಿರುವ, ನ್ಯಾಯಸಮ್ಮತವಾದ ಗುರಿಗಳನ್ನು ಇಟ್ಟುಕೊಳ್ಳುವಲ್ಲಿ ನಾವು ಲಾಭಕರವಾಗಿ ವರ್ತಿಸುತ್ತೇವೆ. ಒಂದುವೇಳೆ ವಿಷಯಗಳನ್ನು ಗ್ರಹಿಸುವ ವಿಷಯದಲ್ಲಿ ನಾವು ಇತರರಷ್ಟು ವೇಗಿಗಳಾಗಿರಲಿಕ್ಕಿಲ್ಲ. ಇಲ್ಲವೆ, ಕಾಯಿಲೆಯೊ ವೃದ್ಧಾಪ್ಯವೊ ನಮ್ಮ ಮೇಲೆ ತಡೆಯನ್ನು ಹಾಕಿರಬಹುದು. ಆದುದರಿಂದ, ನಮ್ಮ ಆತ್ಮಿಕ ಪ್ರಗತಿಯ ವಿಷಯದಲ್ಲಿ ನಾವೆಂದಿಗೂ ಕೆರಳದೆ, ನಮ್ಮ ಇತಿಮಿತಿಗಳನ್ನು ನಿಭಾಯಿಸುವಾಗ ಸದಾ ನ್ಯಾಯಸಮ್ಮತತೆಯನ್ನು ತೋರಿಸೋಣ. ನಾವು ನಮ್ಮ ಸಾಮರ್ಥ್ಯಾನುಸಾರ “ಪ್ರಯಾಸಪಡು”ವಲ್ಲಿ ಸಂತುಷ್ಟರಾಗಿರುತ್ತೇವೆ.—2 ತಿಮೊಥೆಯ 2:15; ಫಿಲಿಪ್ಪಿ 4:5.
ನೀತಿವಂತನು ಸ್ವತಃ ಲಾಭಕಾರಿಯಾಗಿ ವರ್ತಿಸುವಾಗ ಕ್ರೂರಿಯು ತನಗೆ ಹೇಗೆ ಹಾನಿಮಾಡಿಕೊಳ್ಳುತ್ತಾನೆಂಬ ವಿಷಯದಲ್ಲಿ ಇನ್ನೂ ಹೆಚ್ಚಾಗಿ ವಿವರಿಸುತ್ತಾ, ಆ ವಿವೇಕಿ ಅರಸನು ಹೇಳುವುದು: “ಅಧರ್ಮಿಯ ಸಂಬಳವು ಜೊಳ್ಳು; ಧರ್ಮವನ್ನು ಬಿತ್ತುವವನ ಲಾಭವು ಗಟ್ಟಿ. ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ. ವಕ್ರಹೃದಯರು ಯೆಹೋವನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ದಯೆಗೆ ಆಸ್ಪದರು. ದುಷ್ಟನಿಗೆ ದಂಡನೆ ಖಂಡಿತ; ಶಿಷ್ಟವಂಶಕ್ಕೆ ರಕ್ಷಣೆ.”—ಜ್ಞಾನೋಕ್ತಿ 11:18-21.
ಈ ವಚನಗಳು ವಿವಿಧ ವಿಧಗಳಲ್ಲಿ ಈ ಮೂಲ ಅಂಶವನ್ನು ಒತ್ತಿಹೇಳುತ್ತವೆ: ನೀತಿಯನ್ನು ಬಿತ್ತಿರಿ ಮತ್ತು ಫಲವನ್ನು ಕೊಯ್ಯಿರಿ. ಯಾವುದೇ ವೆಚ್ಚವಿಲ್ಲದೆ ಲಾಭಗಳಿಸಲು ದುಷ್ಟನು ವಂಚನೆಯನ್ನು ಅಥವಾ ಜೂಜಾಟವನ್ನು ಆರಂಭಿಸಬಹುದು. ಈ ರೀತಿಯ ಸಂಬಳ ತಪ್ಪಾಗಿರುವುದರಿಂದ, ಅವನು ನಿರಾಶೆಗೆ ತುತ್ತಾಗಬಹುದು. ಆದರೆ ಶ್ರದ್ಧಾಪೂರ್ವಕವಾಗಿ ಕೆಲಸ ಮಾಡುವವನು ಭದ್ರತೆಯ ಕಾರಣ ನಿಜ ಆದಾಯವನ್ನು ಪಡೆಯುತ್ತಾನೆ. ದೇವರ ಸಮ್ಮತಿಯನ್ನು ಪಡೆದವನಾಗಿ, ಈ ನಿರ್ದೋಷಿಯು ಜೀವದ ನಿರೀಕ್ಷೆಯುಳ್ಳವನಾಗುತ್ತಾನೆ. ಆದರೆ ಕೆಟ್ಟವನಿಗೆ ಏನಾಗುವುದು? ಅವನು ದ್ರೋಹ ಬಗೆದರೂ ಶಿಕ್ಷೆಯನ್ನು ಪಡೆಯದೆ ಹೋಗುವುದಿಲ್ಲ. (ಜ್ಞಾನೋಕ್ತಿ 2:21, 22) ಹಾಗಾದರೆ, ನೀತಿಯನ್ನು ಬಿತ್ತುವ ವಿಷಯದಲ್ಲಿ ಎಂತಹ ಪ್ರೋತ್ಸಾಹವಿದು!
ಬುದ್ಧಿವಂತೆಗೆ ನಿಜ ಸೌಂದರ್ಯ
“ಹಂದಿಯ ಮೂತಿಗೆ ಚಿನ್ನದ ಮೂಗುತಿಯು ಹೇಗೋ ಅವಿವೇಕಳಿಗೆ ಸೌಂದರ್ಯವು ಹಾಗೆ,” ಅನ್ನುತ್ತಾನೆ ಸೊಲೊಮೋನನು. (ಜ್ಞಾನೋಕ್ತಿ 11:22) ಬೈಬಲ್ ಕಾಲಗಳಲ್ಲಿ ಮೂಗುತಿಗಳು ಜನಪ್ರಿಯವಾದ ಅಲಂಕಾರ ವಸ್ತುಗಳಾಗಿದ್ದವು. ಮೂಗಿನ ಒಂದು ಪಕ್ಕದಲ್ಲಿ ಅಥವಾ ಮೂಗಿನ ನಡು ತಡಕೆಯಲ್ಲಿ ಸಿಕ್ಕಿಸಿರುವ ಮೂಗುತಿಯು, ಒಬ್ಬ ಸ್ತ್ರೀಯಲ್ಲಿ ಒಡನೆ ಕಂಡುಬರುವ ಆಭರಣವಾಗಿತ್ತು. ಆದರೆ ಅಂತಹ ಮನೋಹರವಾದ ಆಭರಣವು ಹಂದಿಯ ಮೂತಿಯಲ್ಲಿರುವಲ್ಲಿ ಅದೆಷ್ಟು ಅಸಮಂಜಸವಾದ ವಿಷಯ! ಹೊರಗಣ ಸೌಂದರ್ಯವಿದ್ದರೂ “ಬುದ್ಧಿವಂತಿಕೆ” ಇಲ್ಲದ ವ್ಯಕ್ತಿಯ ವಿಷಯದಲ್ಲಿಯೂ ಇದು ನಿಜ. ಹೆಂಗಸಾಗಲಿ, ಗಂಡಸಾಗಲಿ, ಶೃಂಗಾರವು ಅಲ್ಲಿ ತಕ್ಕದ್ದಾಗಿರುವುದೇ ಇಲ್ಲ—ಅದು ಆಕರ್ಷಣೀಯವೂ ಆಗಿರುವುದಿಲ್ಲ.
ನಾವು ಬೇರೆಯವರಿಗೆ ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬ ಚಿಂತೆಯು ಸ್ವಾಭಾವಿಕವೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೆ ನಮ್ಮ ಮುಖ ಅಥವಾ ಶರೀರದ ತೋರಿಕೆಯ ವಿಷಯದಲ್ಲಿ ನಾವೇಕೆ ಅತಿ ವ್ಯಾಕುಲಪಟ್ಟವರಾಗಿರಬೇಕು, ಏಕೆ ಅಸಂತೃಪ್ತರಾಗಿರಬೇಕು? ನಮ್ಮ ತೋರಿಕೆಯ ಅನೇಕ ಅಂಶಗಳು ನಮ್ಮ ಹತೋಟಿಯಲ್ಲಿಲ್ಲ. ಮತ್ತು ದೈಹಿಕ ತೋರಿಕೆಯು ಅತಿ ಪ್ರಮುಖವಾದ ವಿಷಯವಾಗಿರುವುದಿಲ್ಲ. ನಾವು ಇಷ್ಟಪಟ್ಟು ಶ್ಲಾಘಿಸುವ ಅನೇಕರು ಸಾಮಾನ್ಯ ರೀತಿಯ ತೋರಿಕೆಯವರೆಂಬುದು ಸತ್ಯವಲ್ಲವೊ? ಶಾರೀರಿಕ ಆಕರ್ಷಣೀಯತೆಯು ಸಂತೋಷಕ್ಕೆ ಕೀಲಿ ಕೈಯಾಗಿರುವುದಿಲ್ಲ. ಬಾಳಿಕೆ ಬರುವ ದೈವಿಕ ಗುಣಗಳ ಆಂತರಿಕ ಸೌಂದರ್ಯವೇ ಬೆಲೆಬಾಳುವ ವಿಷಯವಾಗಿರುತ್ತದೆ. ಆದಕಾರಣ, ನಾವು ಬುದ್ಧಿವಂತರಾಗಿದ್ದು ಅಂತಹ ಗುಣಗಳನ್ನು ಬೆಳೆಸಿಕೊಳ್ಳೋಣ.
“ಉದಾರಿಯು ಪುಷ್ಟನಾಗುವನು”
ಅರಸನಾದ ಸೊಲೊಮೋನನು ಹೇಳುವುದು: “ಸಜ್ಜನರ ಆಶೆಯು ಮಂಗಳಾಸ್ಪದ; ದುರ್ಜನರ ನಿರೀಕ್ಷೆಯು ರೋಷಾಸ್ಪದ.” ಇದು ಹೇಗೆಂಬುದನ್ನು ಚಿತ್ರಿಸುತ್ತಾ ಅವನು ಕೂಡಿಸಿ ಹೇಳುವುದು: “ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ; ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ.”—ಜ್ಞಾನೋಕ್ತಿ 11:23, 24.
ನಾವು ದೇವರ ವಾಕ್ಯದ ಜ್ಞಾನವನ್ನು ಶ್ರದ್ಧಾಪೂರ್ವಕವಾಗಿ ಚೆಲ್ಲುವಲ್ಲಿ, ಅಂದರೆ ಇತರರಿಗೆ ತಿಳಿಸುವಲ್ಲಿ, ನಾವು ನಮ್ಮ ಸ್ವಂತ ತಿಳಿವಳಿಕೆಯ “ಅಗಲ ಉದ್ದ ಎತ್ತರ ಆಳ”ವನ್ನು ಖಂಡಿತವಾಗಿ ಹೆಚ್ಚಿಸುವೆವು. (ಎಫೆಸ 3:18) ಆದರೆ ತನ್ನ ಜ್ಞಾನವನ್ನು ಉಪಯೋಗಿಸದಿರುವವನು ಅದನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ. ಹೌದು, “ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.”—2 ಕೊರಿಂಥ 9:6.
“ಉದಾರಿಯು ಪುಷ್ಟನಾಗುವನು; [“ಉದಾರವಾಗಿ,” NW] ನೀರು ಹಾಯಿಸುವವನಿಗೆ ನೀರು [“ಉದಾರವಾಗಿ,” NW] ಸಿಕ್ಕುವದು,” ಎನ್ನುತ್ತಾನೆ ರಾಜನು. (ಜ್ಞಾನೋಕ್ತಿ 11:25) ನಾವು ನಮ್ಮ ಸಮಯ ಮತ್ತು ಸಂಪತ್ತನ್ನು ಉದಾರತೆಯಿಂದ ಸತ್ಯಾರಾಧನೆಯನ್ನು ಪ್ರವರ್ಧಿಸಲು ಉಪಯೋಗಿಸುವಲ್ಲಿ, ಯೆಹೋವನು ನಮ್ಮನ್ನು ಮೆಚ್ಚುತ್ತಾನೆ. (ಇಬ್ರಿಯ 13:15, 16) ಆತನು “ಪರಲೋಕದ ದ್ವಾರಗಳನ್ನು ತೆರೆದು ಸ್ಥಳ ಹಿಡಿಯಲಾಗದಷ್ಟು ಸುವರಗಳನ್ನು” ಸುರಿಸುತ್ತಾನೆ. (ಮಲಾಕಿಯ 3:10) ಇಂದು ಆತನ ಸೇವಕರ ಆತ್ಮಿಕ ಸಮೃದ್ಧಿಯನ್ನು ನೋಡಿರಿ!
ನೀತಿವಂತರ ಮತ್ತು ದುಷ್ಟರ ಮಧ್ಯೆ ಇರುವ ವೈದೃಶ್ಯವಾದ ಬಯಕೆಗಳ ಇನ್ನೊಂದು ದೃಷ್ಟಾಂತವನ್ನು ಕೊಡುತ್ತಾ ಸೊಲೊಮೋನನು ಹೇಳುವುದು: “ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ; ಮಾರುವವನ ತಲೆಯ ಮೇಲೆ ಆಶೀರ್ವಾದ.” (ಜ್ಞಾನೋಕ್ತಿ 11:26) ಬೆಲೆ ಕಮ್ಮಿ ಇರುವಾಗ ವಸ್ತುಗಳನ್ನು ಕೊಂಡುಕೊಂಡು, ಸರಬರಾಯಿ ಕಡಮೆಯಾಗಿ ಬೆಲೆ ಹೆಚ್ಚುವ ತನಕ ಇಟ್ಟುಕೊಂಡು ಮಾರುವುದು ಲಾಭದಾಯಕವಾಗಿರಬಲ್ಲದು. ಉಪಭೋಗವನ್ನು ನಿಯಂತ್ರಿಸುವುದರಿಂದ ಮತ್ತು ಶೇಖರಣೆ ಮಾಡುವುದರಿಂದ ತುಸು ಒಳ್ಳೆಯದಾಗಬಹುದಾದರೂ, ಜನರು ಸಾಮಾನ್ಯವಾಗಿ ಅಂಥವನನ್ನು ಅವನ ಸ್ವಾರ್ಥದ ಕಾರಣ ಉಪೇಕ್ಷಿಸುತ್ತಾರೆ. ಅದೇ ಸಮಯದಲ್ಲಿ, ತುರ್ತು ಪರಿಸ್ಥಿತಿಯನ್ನು ತನಗೋಸ್ಕರ ದೊಡ್ಡ ಲಾಭವನ್ನು ಮಾಡಲು ಬಳಸದೆ ಇರುವವನನ್ನು ಜನರು ಮೆಚ್ಚುತ್ತಾರೆ.
ಒಳ್ಳೆಯದಾಗಿರುವ ಅಥವಾ ನೀತಿಯ ವಿಷಯಗಳನ್ನು ಅಪೇಕ್ಷಿಸಬೇಕೆಂಬುದನ್ನು ಪ್ರೋತ್ಸಾಹಿಸುತ್ತಾ, ಇಸ್ರಾಯೇಲಿನ ಅರಸನು ಹೇಳುವುದು: “ಧರ್ಮಕ್ಕೆ ಆತುರಪಡುವವನಿಗೆ ದಯೆ; ಕೇಡನ್ನು ಹುಡುಕುವವನಿಗೆ ಕೇಡೇ. ಧನವನ್ನೇ ನಂಬಿದವನು ಬಿದ್ದುಹೋಗುವನು; ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು.”—ಜ್ಞಾನೋಕ್ತಿ 11:27, 28.
ನೀತಿವಂತನು ಪ್ರಾಣಗಳನ್ನು ಆಕರ್ಷಿಸುವನು
ಮೂರ್ಖ ಕ್ರಿಯೆಗಳು ದುಷ್ಪರಿಣಾಮಗಳನ್ನು ಹೇಗೆ ಫಲಿಸುತ್ತವೆಂಬುದನ್ನು ಚಿತ್ರಿಸುತ್ತಾ ಸೊಲೊಮೋನನು ಹೇಳುವುದು: “ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು.” (ಜ್ಞಾನೋಕ್ತಿ 11:29ಎ) ಆಕಾನನ ಪಾಪವು ‘ಅವನನ್ನು ಆಪತ್ತಿಗೆ ಗುರಿಮಾಡಿತು.’ (ಯೆಹೋಶುವ, ಅಧ್ಯಾಯ 7) ಇಂದು, ಕ್ರೈಸ್ತ ಕುಟುಂಬದ ಯಜಮಾನನಾಗಲಿ ಕುಟುಂಬದ ಇತರರಾಗಲಿ ಪಾಪಕಾರ್ಯದಲ್ಲಿ ಒಳಗೂಡಿರುವ ಕಾರಣ ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡಬಹುದು. ದೇವರಾಜ್ಞೆಗಳನ್ನು ಪಾಲಿಸಲು ವೈಯಕ್ತಿಕವಾಗಿ ತಪ್ಪುವುದರ ಮೂಲಕ ಮತ್ತು ತನ್ನ ಕುಟುಂಬದ ಗಂಭೀರವಾದ ತಪ್ಪುಗಳನ್ನು ಸಹಿಸಿಕೊಳ್ಳುವ ಮೂಲಕ, ಒಬ್ಬನು ತನ್ನ ಸ್ವಂತ ಕುಟುಂಬವನ್ನು ಆಪತ್ತಿಗೆ ಗುರಿಮಾಡುತ್ತಾನೆ. ಅವನು ಅಥವಾ ಅವನ ಕುಟುಂಬದ ಇತರರು ಪಶ್ಚಾತ್ತಾಪಪಡದ ಪಾಪಿಗಳಾಗುವುದರಿಂದ, ಕ್ರೈಸ್ತ ಸಹವಾಸದಿಂದ ಅವರನ್ನು ಬೇರ್ಪಡಿಸಲಾಗುತ್ತದೆ. (1 ಕೊರಿಂಥ 5:11-13) ಮತ್ತು ಇದರಿಂದ ಅವನು ಏನು ಸಂಪಾದಿಸುವನು? ಗಾಳಿಯನ್ನೇ ಅಂದರೆ ಸಾರವಾಗಲಿ ಬೆಲೆಯಾಗಲಿ ಇಲ್ಲದ ವಸ್ತುವನ್ನೇ.
“ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು” ಎಂದು ಮುಂದುವರಿಯುತ್ತದೆ ಆ ವಚನ. (ಜ್ಞಾನೋಕ್ತಿ 11:29ಬಿ) ಮೂರ್ಖನಿಗೆ ಪ್ರಾಯೋಗಿಕ ಜ್ಞಾನವಿಲ್ಲದ ಕಾರಣ ಅವನಿಗೆ ಹೆಚ್ಚು ಜವಾಬ್ದಾರಿಯನ್ನು ಕೊಡಲಾಗುವುದಿಲ್ಲ. ಇದಲ್ಲದೆ, ತನ್ನ ಸ್ವಂತ ಕಾರ್ಯಗಳ ದುರ್ನಿರ್ವಹಣೆಯಿಂದಾಗಿ ಅವನು ಹೇಗೊ ಇನ್ನೊಬ್ಬನ ಹಂಗಿಗೊಳಗಾದಾನು. ಇಂತಹ ಅವಿವೇಕಿಯು “ಜ್ಞಾನವಂತನ ಅಧೀನ”ಕ್ಕೆ ಒಳಗಾಗುವ ಸಂದರ್ಭ ಬಂದೀತು. ಹಾಗಾದರೆ, ನಮ್ಮ ಎಲ್ಲ ವ್ಯವಹಾರಗಳಲ್ಲಿ ನಾವು ಸುವಿವೇಚನೆ ಮತ್ತು ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುವುದು ಮಹತ್ವವುಳ್ಳದ್ದಾಗಿದೆ.
“ಧರ್ಮಾತ್ಮನ ಫಲ ಜೀವವೃಕ್ಷ; ಜ್ಞಾನಿಯು ಆತ್ಮ [“ಪ್ರಾಣ,” NW]ಗಳನ್ನು ಆಕರ್ಷಿಸುವನು.” (ಜ್ಞಾನೋಕ್ತಿ 11:30) ಇದು ಹೇಗೆ ಸಂಭವಿಸುತ್ತದೆ? ತನ್ನ ನಡೆನುಡಿಗಳಿಂದ ಒಬ್ಬ ನೀತಿವಂತನು ಇತರರಿಗೆ ಆತ್ಮಿಕ ಪೋಷಣೆಯನ್ನು ತರುತ್ತಾನೆ. ಇದರ ಫಲವಾಗಿ, ಅವರು ಯೆಹೋವನನ್ನು ಸೇವಿಸುವಂತೆ ಪ್ರೋತ್ಸಾಹಿಸಲ್ಪಟ್ಟು, ಅಂತಿಮವಾಗಿ ದೇವರು ಸಾಧ್ಯಮಾಡುವ ಜೀವವನ್ನು ಪಡೆಯಬಹುದು.
‘ಪಾಪಿಯು ಕ್ರಿಯಾಫಲವನ್ನು ಹೆಚ್ಚು ಅನುಭವಿಸುವನು’
ಮೇಲೆ ಚರ್ಚಿಸಲ್ಪಟ್ಟಿರುವ ಜ್ಞಾನೋಕ್ತಿಗಳು ನಮಗೆ ಎಷ್ಟು ಮನವೊಪ್ಪಿಸುವ ರೀತಿಯಲ್ಲಿ ನೀತಿಯನ್ನು ಬಿತ್ತುವಂತೆ ಪ್ರಬೋಧಿಸುತ್ತವೆ! “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು” ಎಂಬ ಮೂಲತತ್ತ್ವವನ್ನು ಇನ್ನೊಂದು ವಿಧದಲ್ಲಿ ಅನ್ವಯಿಸುತ್ತಾ, ಸೊಲೊಮೋನನು ಹೇಳುವುದು: “ಶಿಷ್ಟನೇ ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ ದುಷ್ಟನೂ ಪಾಪಿಯೂ ಅನುಭವಿಸುವರು [“ದುಷ್ಟನೂ ಪಾಪಿಯೂ ಎಷ್ಟು ಹೆಚ್ಚಾಗಿ ಅನುಭವಿಸಬೇಕು!” NW] ಎಂದು ಹೇಳಬೇಕಾಗಿಲ್ಲ.”—ಜ್ಞಾನೋಕ್ತಿ 11:31.
ನೀತಿವಂತನು ಸರಿಯಾಗಿರುವುದನ್ನು ಮಾಡಲು ಪ್ರಯತ್ನಿಸಿದರೂ ಆಗಾಗ ತಪ್ಪಿಬೀಳುತ್ತಾನೆ. (ಪ್ರಸಂಗಿ 7:20) ಮತ್ತು ಅವನ ತಪ್ಪುಗಳಿಗಾಗಿ ಅವನು ಶಿಕ್ಷೆಯನ್ನು ‘ಅನುಭವಿಸುವನು.’ ಹಾಗಾದರೆ, ಬೇಕುಬೇಕೆಂದು ತಪ್ಪನ್ನು ಮಾಡಿ, ಅದರಿಂದ ಸನ್ಮಾರ್ಗಕ್ಕೆ ತಿರುಗಲು ಪ್ರಯತ್ನವನ್ನೇ ಮಾಡದ ದುಷ್ಟನ ವಿಷಯದಲ್ಲೇನು? ಅವನು ಕಠಿನ ಶಿಕ್ಷೆಯ ಅನುಭವಕ್ಕೆ ಅರ್ಹನಾಗಿರುವುದಿಲ್ಲವೊ? ಅಪೊಸ್ತಲ ಪೇತ್ರನು ಬರೆದುದು: “ನೀತಿವಂತನೇ ರಕ್ಷಣೆಹೊಂದುವದು ಕಷ್ಟವಾದರೆ ಭಕ್ತಿಹೀನನೂ ಪಾಪಿಷ್ಠನೂ ನಿಲ್ಲುವದು ಹೇಗೆ?” (1 ಪೇತ್ರ 4:18) ಆದಕಾರಣ, ನಾವು ಸದಾ ನೀತಿಯ ಬೀಜವನ್ನು ಬಿತ್ತಿ ಪ್ರಯೋಜನವನ್ನು ಪಡೆದುಕೊಳ್ಳಲು ದೃಢನಿಶ್ಚಯವನ್ನು ಮಾಡುವವರಾಗಿರೋಣ.
[ಪಾದಟಿಪ್ಪಣಿ]
a ಇಲ್ಲಿ ಉಪಯೋಗಿಸಿರುವುದು ಬದಲಿ ಹೆಸರು.
[ಪುಟ 28ರಲ್ಲಿರುವ ಚಿತ್ರ]
“ಆಕರ್ಷಣೀಯತೆ”ಯು ಅಬೀಗೈಲಳಿಗೆ “ಮಾನ”ವನ್ನು ಬರಮಾಡಿತು
[ಪುಟ 30ರಲ್ಲಿರುವ ಚಿತ್ರಗಳು]
‘ಅಧರ್ಮಿಯ ಸಂಬಳ ಜೊಳ್ಳು, ನೀತಿವಂತನ ಆದಾಯ ನಿಜ’
[ಪುಟ 31ರಲ್ಲಿರುವ ಚಿತ್ರ]
‘ಹೆಚ್ಚಾಗಿ ಬಿತ್ತಿರಿ ಹೆಚ್ಚಾಗಿ ಕೊಯ್ಯಿರಿ’