ನೀವು ಯೆಹೋವನ ಸಂಸ್ಥೆಯನ್ನು ಗಣ್ಯಮಾಡುತ್ತೀರೊ?
“ಯೆಹೋವನು ಹೀಗನ್ನುತ್ತಾನೆ—ಆಕಾಶವು [“ಸ್ವರ್ಗವು,” NW] ನನಗೆ ಸಿಂಹಾಸನ, ಭೂಮಿಯು ನನಗೆ ಪಾದ ಪೀಠ.”—ಯೆಶಾಯ 66:1.
1, 2. (ಎ) ಯೆಹೋವನ ಸಂಸ್ಥೆಯ ಯಾವ ದೃಶ್ಯ ಪುರಾವೆಯನ್ನು ನೀವು ಸೂಚಿಸಸಾಧ್ಯವಿದೆ? (ಬಿ) ಯೆಹೋವನು ಎಲ್ಲಿ ವಾಸಿಸುತ್ತಾನೆ?
ಯೆಹೋವನಿಗೆ ಒಂದು ಸಂಸ್ಥೆಯಿದೆ ಎಂಬುದನ್ನು ನೀವು ನಂಬುತ್ತೀರೊ? ಹಾಗಿರುವಲ್ಲಿ, ನೀವೇಕೆ ಅದನ್ನು ನಂಬುತ್ತೀರಿ? ನೀವು ಹೀಗೆ ಉತ್ತರಿಸಬಹುದು: ‘ಏಕೆಂದರೆ, ನಮಗೆ ಒಂದು ರಾಜ್ಯ ಸಭಾಗೃಹವಿದೆ. ಒಂದು ಸುಸಜ್ಜಿತವಾದ ಸಭೆಯಿದೆ; ಹಿರಿಯರ ಮಂಡಲಿಯಿದೆ. ನಮ್ಮನ್ನು ಕ್ರಮವಾಗಿ ಸಂದರ್ಶಿಸುವಂತೆ ಯೋಗ್ಯ ರೀತಿಯಲ್ಲಿ ನೇಮಿತರಾದ ಸರ್ಕಿಟ್ ಮೇಲ್ವಿಚಾರಕರಿದ್ದಾರೆ. ವ್ಯವಸ್ಥಾಪಿಸಲ್ಪಟ್ಟ ಸಮ್ಮೇಳನಗಳು ಹಾಗೂ ಅಧಿವೇಶನಗಳಿಗೆ ನಾವು ಹಾಜರಾಗುತ್ತೇವೆ. ನಮ್ಮ ದೇಶದಲ್ಲಿ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸ್ ಇದೆ. ಖಂಡಿತವಾಗಿಯೂ, ಈ ವಿಷಯಗಳು ಹಾಗೂ ಇನ್ನೂ ಹೆಚ್ಚಿನ ವಿಷಯಗಳು, ಒಂದು ಕಾರ್ಯಪ್ರವೃತ್ತ ಸಂಸ್ಥೆಯು ಯೆಹೋವನಿಗಿದೆ ಎಂಬುದನ್ನು ರುಜುಪಡಿಸುತ್ತವೆ.’
2 ಅಂತಹ ವಿಶೇಷತೆಗಳು, ಒಂದು ಸಂಸ್ಥೆಯು ಇದೆಯೆಂಬುದಕ್ಕೆ ಸಾಕಷ್ಟು ಪುರಾವೆಯಾಗಿವೆ. ಆದರೆ ನಾವು ನೋಡಿ, ಗಣ್ಯಮಾಡುವುದು ಕೇವಲ ಭೂಸಂಸ್ಥಾಪನೆಯಾಗಿರುವುದಾದರೆ, ಯೆಹೋವನ ಸಂಸ್ಥೆಯ ಸಂಪೂರ್ಣ ತಿಳುವಳಿಕೆಯು ನಮಗಿಲ್ಲ. ಭೂಮಿಯು ಕೇವಲ ತನ್ನ ಪಾದ ಪೀಠವಾಗಿದೆ, ಆದರೆ ಸ್ವರ್ಗವು ತನ್ನ ಸಿಂಹಾಸನವಾಗಿದೆ ಎಂದು ಯೆಹೋವನು ಯೆಶಾಯನಿಗೆ ಹೇಳಿದನು. (ಯೆಶಾಯ 66:1) ಯಾವ “ಸ್ವರ್ಗ”ಕ್ಕೆ ಯೆಹೋವನು ಸೂಚಿಸುತ್ತಿದ್ದನು? ನಮ್ಮ ವಾಯುಮಂಡಲಕ್ಕೊ? ಬಾಹ್ಯಾಕಾಶಕ್ಕೊ? ಅಥವಾ ಬೇರಾವುದೋ ಜೀವನ ಮಟ್ಟಕ್ಕೆ ಆತನು ಸೂಚಿಸುತ್ತಿದ್ದನೊ? ಯೆಹೋವನ “ಪರಿಶುದ್ಧವೂ ಘನವೂ ಆದ . . . ಉನ್ನತಸ್ಥಾನ”ದ ಕುರಿತಾಗಿ ಯೆಶಾಯನು ಮಾತಾಡುತ್ತಾನೆ, ಮತ್ತು ಕೀರ್ತನೆಗಾರನು ಈ ಸ್ವರ್ಗವನ್ನು “ಆತನು ನಿವಾಸಿಸುವ ಸ್ಥಾಪಿತ ಸ್ಥಳ” (NW) ಎಂದು ವರ್ಣಿಸುತ್ತಾನೆ. ಹೀಗೆ, ಯೆಶಾಯ 66:1ರಲ್ಲಿರುವ (NW) “ಸ್ವರ್ಗ”ವು, ಯೆಹೋವನು ಯಾವ ಅತ್ಯುನ್ನತ, ಅಥವಾ ಅಂತಿಮ ಸ್ಥಾನದಲ್ಲಿ ನೆಲೆಸುತ್ತಾನೋ ಆ ಅದೃಶ್ಯ ಆತ್ಮಿಕ ಕ್ಷೇತ್ರವನ್ನು ಸೂಚಿಸುತ್ತದೆ.—ಯೆಶಾಯ 63:15; ಕೀರ್ತನೆ 33:13, 14.
3. ನಾವು ಸಂಶಯಗಳನ್ನು ಹೇಗೆ ಜಯಿಸಬಲ್ಲೆವು?
3 ಆದುದರಿಂದ, ನಾವು ನಿಜವಾಗಿಯೂ ಯೆಹೋವನ ಸಂಸ್ಥೆಯನ್ನು ಗ್ರಹಿಸಿ, ಗಣ್ಯಮಾಡಲು ಬಯಸುವುದಾದರೆ, ಸ್ವರ್ಗದ ಕಡೆಗೆ ಮನಸ್ಸನ್ನು ತಿರುಗಿಸಬೇಕಾಗಿದೆ. ಮತ್ತು ಕೆಲವರಿಗೆ ಆ ವಿಷಯದಲ್ಲಿಯೇ ಸಮಸ್ಯೆಯು ಅಡಗಿದೆ. ದೇವರ ಸ್ವರ್ಗೀಯ ಸಂಸ್ಥೆಯು ಅದೃಶ್ಯವಾಗಿರುವುದರಿಂದ, ಅದು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ? ‘ನಾವು ಹೇಗೆ ಖಾತ್ರಿಯಿಂದಿರಸಾಧ್ಯವಿದೆ?’ ಎಂದು ಕುತೂಹಲಪಡುತ್ತಾ, ಕೆಲವರು ಸ್ವಲ್ಪ ಕಾಲಾವಧಿಯ ವರೆಗೆ ಸಂದೇಹಾಸ್ಪದರಾಗಿರಬಹುದು. ಒಳ್ಳೇದು, ನಂಬಿಕೆಯು ಹೇಗೆ ಸಂದೇಹವನ್ನು ಜಯಿಸಬಲ್ಲದು? ಪ್ರಮುಖವಾದ ಎರಡು ಮಾರ್ಗಗಳು ಯಾವುವೆಂದರೆ, ದೇವರ ವಾಕ್ಯದ ಗಹನವಾದ ವೈಯಕ್ತಿಕ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಒಳಗೂಡುವಿಕೆಯೇ ಆಗಿದೆ. ಆಗ ನಾವು ಸತ್ಯದ ಬೆಳಕಿನಿಂದ ನಮ್ಮ ಸಂದೇಹಗಳನ್ನು ಹೋಗಲಾಡಿಸಸಾಧ್ಯವಿದೆ. ಯಾರಿಗೆ ಸಂದೇಹಗಳು ಇದ್ದವೋ ಅಂತಹ ದೇವರ ಇನ್ನಿತರ ಸೇವಕರು ಇದ್ದರು. ಇಸ್ರಾಯೇಲು ಅರಾಮ್ಯರ ಅರಸನ ಆಕ್ರಮಣದ ಕೆಳಗಿದ್ದಾಗ, ಎಲೀಷನ ಸೇವಕನ ಪರಿಸ್ಥಿತಿಯನ್ನು ನಾವು ಪರಿಗಣಿಸೋಣ.—ಹೋಲಿಸಿರಿ ಯೋಹಾನ 20:24-29; ಯಾಕೋಬ 1:5-8.
ಸ್ವರ್ಗೀಯ ಸೈನ್ಯಗಳನ್ನು ನೋಡಿದಾತನು
4, 5. (ಎ) ಎಲೀಷನ ಸೇವಕನಿಗೆ ಯಾವ ಸಮಸ್ಯೆಯಿತ್ತು? (ಬಿ) ಎಲೀಷನ ಪ್ರಾರ್ಥನೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
4 ಅರಾಮ್ಯರ ಅರಸನು, ಎಲೀಷನನ್ನು ಸೆರೆಹಿಡಿಯಲಿಕ್ಕಾಗಿ ಒಂದೇ ರಾತ್ರಿಯಲ್ಲಿ ದೊಡ್ಡ ಸೇನಾಪಡೆಯನ್ನು ದೋತಾನ್ಗೆ ಕಳುಹಿಸಿದನು. ಬಹುಶಃ ಸ್ವಚ್ಛವಾದ ಗಾಳಿಯನ್ನು ಸೇವಿಸಲಿಕ್ಕಾಗಿ, ಎಲೀಷನ ಸೇವಕನು ಬೆಳಗ್ಗೆ ಬೇಗನೆ ಎದ್ದು, ಮಧ್ಯಪೂರ್ವದ ನಿವಾಸದ ಸಮತಟ್ಟಾದ ಛಾವಣಿಯ ಮೇಲೆ ನಿಂತಿದ್ದಾಗ, ಅಬ್ಬ, ಎಂತಹ ಆಘಾತ ಅವನಿಗಾಯಿತು! ದೇವರ ಪ್ರವಾದಿಯನ್ನು ಸೆರೆಹಿಡಿಯಲಿಕ್ಕಾಗಿ ಕಾಯುತ್ತಾ, ರಥರಥಾಶ್ವಸಹಿತವಾದ ಅರಾಮ್ಯರ ಒಂದು ಮಹಾ ಸೈನ್ಯವು ಆ ಪಟ್ಟಣವನ್ನು ಸುತ್ತುವರಿದಿತ್ತು. ಆ ಸೇವಕನು ಎಲೀಷನಿಗೆ ಗಟ್ಟಿಯಾಗಿ ಕೂಗಿ ಹೇಳಿದ್ದು: “ಅಯ್ಯೋ, ಸ್ವಾಮೀ, ಏನು ಮಾಡೋಣ.” ಆಗ ಶಾಂತವಾಗಿ ಮತ್ತು ನಿಶ್ಚಿತಾಭಿಪ್ರಾಯದಿಂದ ಎಲೀಷನು ಬಹಳ ಸ್ಪಷ್ಟವಾದ ರೀತಿಯಲ್ಲಿ ಪ್ರತ್ಯುತ್ತರಿಸಿದ್ದು: “ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” ‘ಅವರು ಎಲ್ಲಿದ್ದಾರೆ? ನನಗೆ ಕಾಣಿಸುತ್ತಲೇ ಇಲ್ಲ!’ ಎಂದು ಆ ಸೇವಕನು ಆಶ್ಚರ್ಯಪಟ್ಟಿದ್ದಿರಬೇಕು. ಕೆಲವೊಮ್ಮೆ ನಮ್ಮ ಸಮಸ್ಯೆಯೂ—ನಾವು ಸ್ವರ್ಗೀಯ ಸೈನ್ಯವನ್ನು ತಿಳುವಳಿಕೆಯ ದೃಷ್ಟಿಯಿಂದ ನೋಡಲು, ಅಥವಾ ಗ್ರಹಿಸಲು ತಪ್ಪಿಹೋಗುವುದು—ಅದೇ ರೀತಿಯದ್ದಾಗಿರಬಹುದು.—2 ಅರಸುಗಳು 6:8-16; ಎಫೆಸ 1:18.
5 ತನ್ನ ಸೇವಕನ ಕಣ್ಣುಗಳನ್ನು ತೆರೆಯುವಂತೆ ಎಲೀಷನು ಪ್ರಾರ್ಥಿಸಿದನು. ತದನಂತರ ಏನು ಸಂಭವಿಸಿತು? “ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.” (2 ಅರಸುಗಳು 6:17) ಹೌದು, ದೇವರ ಸೇವಕನನ್ನು ಸಂರಕ್ಷಿಸಲಿಕ್ಕಾಗಿ ಸಿದ್ಧವಾಗಿರುವ ಸ್ವರ್ಗೀಯ ಸೈನ್ಯಗಳನ್ನು, ದೇವದೂತರ ದಂಡುಗಳನ್ನು ಅವನು ಕಂಡನು. ಈಗ ಅವನು ಎಲೀಷನ ದೃಢಭರವಸೆಯನ್ನು ಅರ್ಥಮಾಡಿಕೊಳ್ಳಸಾಧ್ಯವಿತ್ತು.
6. ಯೆಹೋವನ ಸ್ವರ್ಗೀಯ ಸಂಸ್ಥೆಯ ವಿಷಯದಲ್ಲಿ ನಾವು ಹೇಗೆ ಒಳನೋಟವನ್ನು ಪಡೆದುಕೊಳ್ಳಸಾಧ್ಯವಿದೆ?
6 ಎಲೀಷನ ಸೇವಕನಿಗೆ ಇದ್ದಂತೆಯೇ ನಮಗೂ ಕೆಲವೊಮ್ಮೆ ಗ್ರಹಿಕೆಯ ಸಮಸ್ಯೆಯು ಇರುತ್ತದೊ? ನಮಗೆ ಅಥವಾ ಕೆಲವೊಂದು ದೇಶಗಳಲ್ಲಿ ಕ್ರೈಸ್ತ ಕೆಲಸಕ್ಕೆ ಬೆದರಿಕೆಯನ್ನು ಒಡ್ಡುತ್ತಿರುವಂತಹ ಸನ್ನಿವೇಶಗಳ ಭೌತಿಕ ಪಾರ್ಶ್ವವನ್ನು ಮಾತ್ರ ನೋಡುವ ಪ್ರವೃತ್ತಿ ನಮಗಿದೆಯೊ? ಹಾಗಿರುವಲ್ಲಿ, ನಮಗೆ ಜ್ಞಾನೋದಯವನ್ನು ಉಂಟುಮಾಡಲಿಕ್ಕಾಗಿ ನಾವು ಒಂದು ವಿಶೇಷ ದರ್ಶನವನ್ನು ನಿರೀಕ್ಷಿಸಸಾಧ್ಯವಿದೆಯೊ? ಇಲ್ಲ, ಏಕೆಂದರೆ ಎಲೀಷನ ಸೇವಕನ ಬಳಿ ಇಲ್ಲದಿದ್ದಂತಹ ಒಂದು ಸಾಧನವು—ಅನೇಕ ದರ್ಶನಗಳನ್ನು ಒಳಗೂಡಿರುವಂತಹ ಒಂದು ಸಂಪೂರ್ಣ ಪುಸ್ತಕವಾದ ಬೈಬಲ್ ನಮ್ಮಲ್ಲಿದೆ; ಇದು ನಮಗೆ ಸ್ವರ್ಗೀಯ ಸಂಸ್ಥೆಯೊಳಗಿನ ಒಳನೋಟವನ್ನು ಕೊಡಬಲ್ಲದು. ಆ ಪ್ರೇರಿತ ವಾಕ್ಯವು, ನಮ್ಮ ಆಲೋಚನೆಯನ್ನು ಹಾಗೂ ನಮ್ಮ ಜೀವನ ರೀತಿಯನ್ನು ತಿದ್ದಲಿಕ್ಕಾಗಿ ಮಾರ್ಗದರ್ಶಕ ಮೂಲತತ್ವಗಳನ್ನು ಸಹ ಕೊಡುತ್ತದೆ. ಹಾಗಿದ್ದರೂ, ನಾವು ವಿವೇಚನಾಶಕ್ತಿಗಾಗಿ ಹುಡುಕಲು ಪ್ರಯತ್ನಿಸಬೇಕು ಮತ್ತು ಯೆಹೋವನ ಏರ್ಪಾಡಿಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳಬೇಕು. ಮತ್ತು ಅದನ್ನು ನಾವು, ವೈಯಕ್ತಿಕ ಅಧ್ಯಯನ, ಜೊತೆಗೆ ಪ್ರಾರ್ಥನೆ ಹಾಗೂ ಮನನದೊಂದಿಗೆ ಮಾಡಸಾಧ್ಯವಿದೆ.—ರೋಮಾಪುರ 12:12; ಫಿಲಿಪ್ಪಿ 4:6; 2 ತಿಮೊಥೆಯ 3:15-17.
ಗ್ರಹಿಸಲಿಕ್ಕಾಗಿ ಅಭ್ಯಾಸಮಾಡುವುದು
7. (ಎ) ವೈಯಕ್ತಿಕ ಬೈಬಲ್ ಅಧ್ಯಯನದ ವಿಷಯದಲ್ಲಿ ಕೆಲವರಿಗೆ ಯಾವ ಸಮಸ್ಯೆಯಿರಬಹುದು? (ಬಿ) ವೈಯಕ್ತಿಕ ಅಧ್ಯಯನವು ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ ಏಕೆ?
7 ಶಾಲೆಯಲ್ಲಿ ಅಭ್ಯಾಸಿಸುವುದನ್ನು ಎಂದೂ ಇಷ್ಟಪಡದಿದ್ದವರಿಗೆ ಅಥವಾ ಅಭ್ಯಾಸದಲ್ಲಿ ಒಳಗೂಡಲು ಎಂದೂ ಅವಕಾಶವೇ ದೊರಕದಿದ್ದಂತಹ ಅನೇಕ ಜನರಿಗೆ, ವೈಯಕ್ತಿಕ ಅಧ್ಯಯನವು ಅಗತ್ಯವಾಗಿ ಒಂದು ಹಿತಕರವಾದ ಪ್ರತೀಕ್ಷೆಯಾಗಿರುವುದಿಲ್ಲ. ಆದರೂ, ನಾವು ನಮ್ಮ ತಿಳುವಳಿಕೆಯ ದೃಷ್ಟಿಯಿಂದ ಯೆಹೋವನ ಸಂಸ್ಥೆಯನ್ನು ಗ್ರಹಿಸಿ, ಅದನ್ನು ಗಣ್ಯಮಾಡಲು ಬಯಸುವಲ್ಲಿ, ಅಭ್ಯಾಸಿಸುವ ಅಪೇಕ್ಷೆಯನ್ನು ಬೆಳೆಸಿಕೊಳ್ಳಬೇಕು. ನೀವು ಒಂದು ರುಚಿಕರವಾದ ಊಟಕ್ಕಾಗಿ ಸಿದ್ಧತೆಯನ್ನು ಮಾಡದೆ, ಅದರಲ್ಲಿ ಆನಂದವನ್ನು ಪಡೆದುಕೊಳ್ಳಬಲ್ಲಿರೊ? ಯಾವನೇ ಒಬ್ಬ ಮುಖ್ಯ ಬಾಣಸಿಗನು ಅಥವಾ ಅಡಿಗೆಯವನು ನಿಮಗೆ ಹೇಳುವಂತೆ, ರುಚಿಕರವಾದ ಊಟವನ್ನು ಸಿದ್ಧಪಡಿಸಲಿಕ್ಕಾಗಿ ಬಹಳಷ್ಟು ಕೆಲಸದ ಅಗತ್ಯವಿದೆ. ಆದರೂ, ಅದನ್ನು ಅರ್ಧ ತಾಸಿನೊಳಗೆ ಅಥವಾ ಅದಕ್ಕಿಂತಲೂ ಕಡಿಮೆ ಸಮಯದೊಳಗೆ ತಿಂದುಬಿಡಬಹುದು. ಇನ್ನೊಂದು ಕಡೆಯಲ್ಲಿ, ವೈಯಕ್ತಿಕ ಅಧ್ಯಯನದ ಪ್ರಯೋಜನಗಳು ಜೀವನಪರ್ಯಂತ ಉಳಿಯಬಲ್ಲವು. ನಾವು ಮಾಡಸಾಧ್ಯವಿರುವ ಪ್ರಗತಿಯನ್ನು ನೋಡುವಾಗ, ವೈಯಕ್ತಿಕ ಅಧ್ಯಯನವು ನಾವು ಕ್ರಮೇಣವಾಗಿ ಆನಂದಿಸಸಾಧ್ಯವಿರುವ ಒಂದು ವಿಷಯವಾಗಸಾಧ್ಯವಿದೆ. ನಾವು ನಮ್ಮ ವಿಷಯದಲ್ಲಿ ಹಾಗೂ ನಮ್ಮ ಬೋಧನೆಯ ವಿಷಯದಲ್ಲಿ ಸತತವಾದ ಗಮನವನ್ನು ಕೊಡಬೇಕು ಮತ್ತು ಸಾರ್ವಜನಿಕ ಓದುವಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತಾ ಮುಂದುವರಿಯಬೇಕು ಎಂದು ಅಪೊಸ್ತಲ ಪೌಲನು ಸೂಕ್ತವಾಗಿಯೇ ಹೇಳಿದನು. ಸತತವಾದ ಪ್ರಯತ್ನದ ಅಗತ್ಯವಿದೆಯಾದರೂ, ಅದರ ಪ್ರಯೋಜನಗಳು ನಿತ್ಯಕ್ಕೂ ಇರಬಲ್ಲವು.—1 ತಿಮೊಥೆಯ 4:13-16.
8. ಜ್ಞಾನೋಕ್ತಿಯು ಯಾವ ಮನೋಭಾವವನ್ನು ಶಿಫಾರಸ್ಸು ಮಾಡುತ್ತದೆ?
8 ಪುರಾತನ ಸಮಯದ ಜ್ಞಾನಿಯೊಬ್ಬನು ಹೀಗೆ ಹೇಳಿದನು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.”—ಜ್ಞಾನೋಕ್ತಿ 2:1-5.
9. (ಎ) “ದೈವಜ್ಞಾನ”ಕ್ಕೆ ಚಿನ್ನದ ಮೌಲ್ಯವು ಹೇಗೆ ಹೋಲುತ್ತದೆ? (ಬಿ) ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ನಮಗೆ ಯಾವ ಸಾಮಗ್ರಿಗಳ ಅಗತ್ಯವಿದೆ?
9 ಜವಾಬ್ದಾರಿಯು ಎಲ್ಲಿ ಅಡಗಿದೆ ಎಂಬುದನ್ನು ನೀವು ಗುರುತಿಸುತ್ತೀರೊ? ಅಲ್ಲಿ ಉಪಯೋಗಿಸಲ್ಪಟ್ಟಿರುವ ವಾಕ್ಸರಣಿಗಳು, ವಾಚಕನಿಗೆ ವೈಯಕ್ತಿಕವಾಗಿ ಅನ್ವಯವಾಗುತ್ತವೆ. ಮತ್ತು ‘ಅದನ್ನು . . . ನಿಕ್ಷೇಪದಂತೆಯೂ ಹುಡುಕು’ ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ದಕ್ಷಿಣ ಆಫ್ರಿಕ, ಬೊಲಿವಿಯ, ಮೆಕ್ಸಿಕೊ, ಮತ್ತು ಇತರ ದೇಶಗಳಲ್ಲಿ, ಅನೇಕ ಶತಮಾನಗಳ ವರೆಗೆ ಬೆಳ್ಳಿಗಾಗಿಯೂ ಚಿನ್ನಕ್ಕಾಗಿಯೂ ಅಗೆದಿರುವ ಗಣಿಗಾರರ ಕುರಿತಾಗಿ ಯೋಚಿಸಿರಿ. ಅವರು ಅಮೂಲ್ಯವಾದ ಖನಿಜ ಸಂಪತ್ತುಗಳನ್ನು ಎಲ್ಲಿ ಪಡೆದುಕೊಳ್ಳಸಾಧ್ಯವಿತ್ತೋ ಆ ಬಂಡೆಯನ್ನು ಅಗೆಯಲಿಕ್ಕಾಗಿ, ಪಿಕಾಸಿ ಹಾಗೂ ಗುದ್ದಲಿಗಳನ್ನು ಉಪಯೋಗಿಸುತ್ತಾ, ಕಷ್ಟಪಟ್ಟು ಕೆಲಸಮಾಡಿದರು. ಅವರು ಚಿನ್ನವನ್ನು ಎಷ್ಟು ಅಮೂಲ್ಯವೆಂದು ಪರಿಗಣಿಸಿದರೆಂದರೆ, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಗಣಿಯೊಂದರಲ್ಲಿ, ಕೇವಲ ಚಿನ್ನವನ್ನು ಹುಡುಕಲಿಕ್ಕಾಗಿಯೇ, ಸುಮಾರು 1.5 ಕಿಲೊಮೀಟರುಗಳಷ್ಟು ಆಳಕ್ಕೆ ಇಳಿದು, ಅವರು 591 ಕಿಲೊಮೀಟರುಗಳಷ್ಟುದ್ದದ ಸುರಂಗಗಳನ್ನು ತೋಡಿದರು. ಆದರೂ, ನೀವು ಚಿನ್ನವನ್ನು ತಿನ್ನಸಾಧ್ಯವಿದೆಯೊ? ಅದನ್ನು ಕುಡಿಯಸಾಧ್ಯವಿದೆಯೊ? ನೀವು ಒಂದು ಮರಳುಗಾಡಿನಲ್ಲಿ ಹಸಿವೆ ಹಾಗೂ ಬಾಯಾರಿಕೆಯಿಂದ ಸಾಯುತ್ತಿರುವಾಗ, ಅದು ನಿಮ್ಮನ್ನು ಸಂರಕ್ಷಿಸುವುದೊ? ಇಲ್ಲ, ಅದರ ಮೌಲ್ಯವು ಕೃತಕವೂ ಅನಿಯಂತ್ರಿತವೂ ಆದದ್ದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿಬಿಂಬಿಸಲ್ಪಡುವಂತೆ ದಿನಾಲೂ ಬದಲಾಗುತ್ತಿರುತ್ತದೆ. ಆದರೂ ಮನುಷ್ಯರು ಅದಕ್ಕಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಆತ್ಮಿಕ ಚಿನ್ನವಾಗಿರುವ “ದೈವಜ್ಞಾನವನ್ನು” ಪಡೆದುಕೊಳ್ಳಲಿಕ್ಕಾಗಿ, ಇನ್ನೆಷ್ಟು ಪ್ರಯತ್ನವನ್ನು ಮಾಡತಕ್ಕದ್ದು? ಈ ವಿಶ್ವದ ಪರಮಾಧಿಕಾರಿಯ, ಆತನ ಸಂಸ್ಥೆಯ, ಮತ್ತು ಆತನ ಉದ್ದೇಶಗಳ ವಿಷಯವಾದ ಜ್ಞಾನದ ಕುರಿತಾಗಿ ಆಲೋಚಿಸಿರಿ! ಈ ವಿಷಯದಲ್ಲಿ, ನಾವು ಆತ್ಮಿಕ ಪಿಕಾಸಿ ಹಾಗೂ ಗುದ್ದಲಿಗಳನ್ನು ಉಪಯೋಗಿಸಸಾಧ್ಯವಿದೆ. ಅವು, ಯೆಹೋವನ ವಾಕ್ಯವನ್ನು ಅಗೆಯಲು, ಅವುಗಳ ಅರ್ಥವನ್ನು ವಿವೇಚಿಸಲು ನಮಗೆ ಸಹಾಯಮಾಡುವ ಬೈಬಲಾಧಾರಿತ ಪ್ರಕಾಶನಗಳಾಗಿವೆ.—ಯೋಬ 28:12-19.
ಒಳನೋಟಕ್ಕಾಗಿ ಅಗೆಯುವುದು
10. ದಾನಿಯೇಲನು ಒಂದು ದರ್ಶನದಲ್ಲಿ ಏನನ್ನು ನೋಡಿದನು?
10 ಯೆಹೋವನ ಸ್ವರ್ಗೀಯ ಸಂಸ್ಥೆಯ ಕುರಿತ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಸ್ವಲ್ಪ ಆತ್ಮಿಕ ಅಗೆತವನ್ನು ಮಾಡೋಣ. ಒಂದು ಪ್ರಮುಖ ಒಳನೋಟಕ್ಕಾಗಿ, ನಾವು ಸಿಂಹಾಸನಾಸೀನನಾಗಿರುವ ಮಹಾವೃದ್ಧನ ಕುರಿತಾದ ದಾನಿಯೇಲನ ದರ್ಶನವನ್ನು ಪರಿಗಣಿಸೋಣ. ದಾನಿಯೇಲನು ಬರೆಯುವುದು: “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು, ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು; ಆತನ ನ್ಯಾಯಾಸನವು ಅಗ್ನಿಜ್ವಾಲೆಗಳು, ಅದರ ಚಕ್ರಗಳು ಧಗಧಗಿಸುವ ಬೆಂಕಿಯೇ. ನ್ಯಾಯಾಸನದ ಮುಂದೆ ಉರಿಯ ಪ್ರವಾಹವು ಉಕ್ಕಿ ಹರಿದುಬಂತು; ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು; ನ್ಯಾಯಸಭೆಯವರು ಕೂತುಕೊಂಡರು, ಪುಸ್ತಕಗಳು ತೆರೆಯಲ್ಪಟ್ಟವು.” (ದಾನಿಯೇಲ 7:9, 10) ಯೆಹೋವನ ಸೇವೆಮಾಡುತ್ತಿದ್ದ ಈ ಲಕ್ಷೋಪಲಕ್ಷ ಜನರು ಯಾರಾಗಿದ್ದರು? ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ, “ಪಿಕಾಸಿಗಳು” ಹಾಗೂ “ಗುದ್ದಲಿಗಳು” ಎಂಬುದಾಗಿ ಉಪಯೋಗಿಸಲ್ಪಟ್ಟಿರುವ ಮಾರ್ಜಿನಲ್ ರೆಫರೆನ್ಸ್ಗಳು, ಕೀರ್ತನೆ 68:17 ಮತ್ತು ಇಬ್ರಿಯ 12:22ರಂತಹ ರೆಫರೆನ್ಸ್ಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹೌದು, ಆತನ ಸೇವೆಮಾಡುತ್ತಿದ್ದವರು, ಸ್ವರ್ಗೀಯ ದೇವದೂತರಾಗಿದ್ದರು!
11. ದಾನಿಯೇಲನ ದರ್ಶನವು, ಎಲೀಷನ ಮಾತುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಹೇಗೆ ಸಹಾಯ ಮಾಡಸಾಧ್ಯವಿದೆ?
11 ದೇವರ ಅಧೀನತೆಯಲ್ಲಿರುವ ಎಲ್ಲ ನಂಬಿಗಸ್ತ ದೇವದೂತರನ್ನು ಅವನು ಕಂಡನೆಂಬುದಾಗಿ ದಾನಿಯೇಲನ ವೃತ್ತಾಂತವು ಹೇಳುವುದಿಲ್ಲ. ಇನ್ನೂ ಕೋಟಿಗಟ್ಟಲೆ ದೇವದೂತರು ಇರಬಹುದು. ಆದರೆ “ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಎಲೀಷನು ಏಕೆ ಹೇಳಸಾಧ್ಯವಿತ್ತು ಎಂಬುದನ್ನು ನಾವು ಈಗ ಖಂಡಿತವಾಗಿಯೂ ಗಣ್ಯಮಾಡಸಾಧ್ಯವಿದೆ. ಅರಾಮ್ಯರ ಅರಸನ ಸೇನೆಯು ಅಪನಂಬಿಗಸ್ತ ದೇವದೂತ—ದೆವ್ವಗಳು—ರಿಂದ ಬೆಂಬಲಿಸಲ್ಪಟ್ಟಿತ್ತಾದರೂ, ಯೆಹೋವನ ಸ್ವರ್ಗೀಯ ಸೈನ್ಯಗಳು ಅತ್ಯಧಿಕ ಸಂಖ್ಯೆಯಲ್ಲಿದ್ದವು!—ಕೀರ್ತನೆ 34:7; 91:11.
12. ನೀವು ದೇವದೂತರ ಕುರಿತು ಇನ್ನೂ ಹೆಚ್ಚಿನ ವಿಷಯಗಳನ್ನು ಹೇಗೆ ತಿಳಿದುಕೊಳ್ಳಬಲ್ಲಿರಿ?
12 ಈ ದೇವದೂತರ—ಯೆಹೋವನ ಸೇವೆಮಾಡುವುದರಲ್ಲಿನ ಅವರ ಪಾತ್ರದಂತಹ ವಿಚಾರದ—ಕುರಿತಾಗಿ ಹೆಚ್ಚು ವಿಷಯವನ್ನು ತಿಳಿದುಕೊಳ್ಳಲು ನೀವು ಬಯಸಬಹುದು. ದೇವದೂತ ಎಂಬುದಕ್ಕಿರುವ ಗ್ರೀಕ್ ಶಬ್ದದಿಂದ, ಅವರು ಸಂದೇಶವಾಹಕರಾಗಿದ್ದಾರೆ ಎಂಬುದನ್ನು ನಾವು ತಿಳಿಯಸಾಧ್ಯವಿದೆ. ಏಕೆಂದರೆ ಆ ಗ್ರೀಕ್ ಶಬ್ದವು, “ಸಂದೇಶವಾಹಕ” ಎಂಬ ಅರ್ಥವನ್ನೂ ಕೊಡುತ್ತದೆ. ಆದರೆ, ಅವರ ಕರ್ತವ್ಯದ ವಿಷಯದಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ. ಆದರೂ, ಅದು ಏನಾಗಿದೆ ಎಂಬುದನ್ನು ಕಂಡುಹಿಡಿಯಲಿಕ್ಕಾಗಿ ನೀವು ಸಹ ಅಗೆಯಬೇಕು. ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕವು ನಿಮ್ಮ ಬಳಿ ಲಭ್ಯವಿರುವಲ್ಲಿ, “ದೇವದೂತರು” ಎಂಬ ಲೇಖನವನ್ನು ನೀವು ಅಭ್ಯಾಸಿಸಸಾಧ್ಯವಿದೆ ಅಥವಾ ಕಾವಲಿನಬುರುಜು ಪತ್ರಿಕೆಯ ಹಳೆಯ ಲೇಖನಗಳಲ್ಲಿ, ನೀವು ದೇವದೂತರ ಕುರಿತು ಓದಿನೋಡಸಾಧ್ಯವಿದೆ. ದೇವರ ಈ ಸ್ವರ್ಗೀಯ ಸೇವಕರ ಕುರಿತು ನೀವು ಎಷ್ಟೊಂದು ವಿಷಯಗಳನ್ನು ಕಲಿಯಸಾಧ್ಯವಿದೆ ಎಂಬುದನ್ನು ತಿಳಿದು, ನೀವು ಆಶ್ಚರ್ಯಗೊಳ್ಳುವಿರಿ ಮತ್ತು ಅವರ ಬೆಂಬಲವನ್ನು ಗಣ್ಯಮಾಡಲಾರಂಭಿಸುವಿರಿ. (ಪ್ರಕಟನೆ 14:6, 7) ಹಾಗಿದ್ದರೂ, ದೇವರ ಸ್ವರ್ಗೀಯ ಸಂಸ್ಥೆಯಲ್ಲಿ, ಕೆಲವು ಆತ್ಮಜೀವಿಗಳು ವಿಶೇಷವಾದ ಉದ್ದೇಶಗಳನ್ನು ಪೂರೈಸುತ್ತವೆ.
ಯೆಶಾಯನು ನೋಡಿದ ಸಂಗತಿ
13, 14. ದರ್ಶನದಲ್ಲಿ ಯೆಶಾಯನು ಏನನ್ನು ನೋಡಿದನು, ಮತ್ತು ಇದು ಅವನ ಮೇಲೆ ಹೇಗೆ ಪ್ರಭಾವವನ್ನು ಬೀರಿತು?
13 ಈಗ ನಾವು ಯೆಶಾಯನ ದರ್ಶನದ ಕುರಿತು ಸ್ವಲ್ಪ ವಿಷಯವನ್ನು ಅಗೆದುನೋಡೋಣ. 6ನೆಯ ಅಧ್ಯಾಯದ 1ರಿಂದ 7ನೆಯ ವಚನಗಳನ್ನು ಓದುವಾಗ, ನೀವು ಪ್ರಭಾವಿತರಾಗಬೇಕು. ತಾನು “ಯೆಹೋವನು ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು ಕಂಡೆನು” ಮತ್ತು “ಆತನ ಸುತ್ತ ಸೆರಾಫಿಯರು ಇದ್ದರು” ಎಂದು ಯೆಶಾಯನು ಹೇಳುತ್ತಾನೆ. ಅವರು ಯೆಹೋವನ ಪಾವಿತ್ರ್ಯವನ್ನು ಉತ್ಸಾಹಪೂರ್ವಕವಾಗಿ ಹೊಗಳುತ್ತಾ, ಆತನ ಮಹಿಮೆಯನ್ನು ಘೋಷಿಸುತ್ತಾ ಇದ್ದರು. ಕೇವಲ ಈ ವೃತ್ತಾಂತವನ್ನು ಓದುವ ಮೂಲಕವೂ ನೀವು ಪ್ರಭಾವಿತರಾಗಬೇಕು. ಯೆಶಾಯನ ಪ್ರತಿಕ್ರಿಯೆ ಏನಾಗಿತ್ತು? “ಆಗ ನಾನು—ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸು ತುಟಿಯವನು, ಹೊಲಸುತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು ಎಂದು ಕೂಗಿ”ಕೊಂಡೆನು. ಆ ದರ್ಶನದಿಂದ ಅವನು ಎಷ್ಟೊಂದು ಪ್ರಭಾವಿತನಾಗಿದ್ದನು! ನೀವೂ ಅಷ್ಟೊಂದು ಪ್ರಭಾವಿತರಾಗಿದ್ದೀರೊ?
14 ಹಾಗಾದರೆ ಈ ಮಹಿಮಾನ್ವಿತ ದರ್ಶನವನ್ನು ಯೆಶಾಯನು ಹೇಗೆ ತಡೆದುಕೊಳ್ಳಲು ಶಕ್ತನಾಗಿದ್ದನು? ಅವನು ವಿವರಿಸುವುದೇನೆಂದರೆ, ಒಬ್ಬ ಸೆರಾಫಿಯನು ತನ್ನ ರಕ್ಷಣೆಗೆ ಬಂದು, ಹೇಳಿದ್ದು: “ನಿನ್ನ ದೋಷವು ನೀಗಿತು, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು.” (ಯೆಶಾಯ 6:7) ಯೆಶಾಯನು ದೇವರ ಕರುಣೆಯಲ್ಲಿ ಭರವಸೆಯಿಡಸಾಧ್ಯವಿತ್ತು ಮತ್ತು ಯೆಹೋವನ ಮಾತುಗಳಿಗೆ ಗಮನವನ್ನು ಹರಿಸಸಾಧ್ಯವಿತ್ತು. ಈಗ, ಅತ್ಯುಚ್ಚ ಸ್ಥಾನದಲ್ಲಿರುವ ಈ ಆತ್ಮಜೀವಿಗಳ ಕುರಿತಾಗಿ ನೀವು ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಬಯಸಲಾರಿರೊ? ಹಾಗಾದರೆ ನೀವೇನು ಮಾಡತಕ್ಕದ್ದು? ಹೆಚ್ಚಿನ ಮಾಹಿತಿಗಾಗಿ ಅಗೆದು ನೋಡಿರಿ. ಸ್ಪಷ್ಟವಾದ ಉತ್ತರವನ್ನು ಕೊಡುವ ಮಾಹಿತಿಯ ಅನೇಕ ಮೂಲಗಳಿಗಿರುವ ಅದರ ರೆಫರೆನ್ಸ್ಗಳನ್ನು ಅನುಸರಿಸುತ್ತಾ, ಉಪಯೋಗಿಸಸಾಧ್ಯವಿರುವ ಒಂದು ಸಹಾಯಕವು, ವಾಚ್ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಆಗಿದೆ.
ಯೆಹೆಜ್ಕೇಲನು ಏನನ್ನು ನೋಡಿದನು?
15. ಯೆಹೆಜ್ಕೇಲನ ದರ್ಶನವು ವಿಶ್ವಾಸಾರ್ಹವಾದದ್ದಾಗಿದೆ ಎಂಬುದನ್ನು ಯಾವುದು ಸೂಚಿಸುತ್ತದೆ?
15 ಈಗ ಇನ್ನೊಂದು ವಿಧದ ಆತ್ಮ ಸೃಷ್ಟಿಯ ಕಡೆಗೆ ಗಮನ ಕೊಡೋಣ. ಯೆಹೆಜ್ಕೇಲನು ಇನ್ನೂ ಬಾಬೆಲಿನಲ್ಲಿ ಬಂದಿವಾಸಿಯಾಗಿದ್ದಾಗ, ದೈವಪ್ರೇರಿತವಾದ ದರ್ಶನವನ್ನು ನೋಡುವ ಸುಯೋಗವು ಅವನಿಗೆ ದೊರೆಯಿತು. ನಿಮ್ಮ ಬೈಬಲನ್ನು ಯೆಹೆಜ್ಕೇಲ 1ನೆಯ ಅಧ್ಯಾಯದ ಮೊದಲ ಮೂರು ವಚನಗಳಿಗೆ ತೆರೆಯಿರಿ. ಆ ವೃತ್ತಾಂತವು ಹೇಗೆ ಆರಂಭವಾಗುತ್ತದೆ? ‘ಒಂದಾನೊಂದು ಕಾಲದಲ್ಲಿ, ಬಹು ದೂರದ ಒಂದು ದೇಶದಲ್ಲಿ . . .’ ಎಂದು ಅದು ಹೇಳುತ್ತದೊ? ಇಲ್ಲ, ಇದು ಪುರಾಣ ಸಾಹಿತ್ಯದ ಸಮಯದಲ್ಲಿನ ಒಂದು ರಂಜನ ಕಥೆಯಾಗಿಲ್ಲ. 1ನೆಯ ವಚನವು ಹೀಗೆ ಹೇಳುತ್ತದೆ: “ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ಸೇರಿಕೊಂಡಿರುವಾಗ ಮೂವತ್ತನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ಒಡೆದು ನನಗೆ ದೇವದರ್ಶನಗಳು ಉಂಟಾದವು.” ಈ ವಚನದ ಕುರಿತು ನೀವು ಏನನ್ನು ಗಮನಿಸುತ್ತೀರಿ? ಅದು ನಿರ್ದಿಷ್ಟ ದಿನಾಂಕವನ್ನೂ ನಿಖರವಾದ ಸ್ಥಳವನ್ನೂ ತಿಳಿಯಪಡಿಸುತ್ತದೆ. ಈ ವಿವರಗಳು, ರಾಜ ಯೆಹೋಯಾಖೀನನ ಸೆರೆವಾಸದ ಐದನೆಯ ವರ್ಷವಾದ ಸಾ.ಶ.ಪೂ. 613ನ್ನು ಸೂಚಿಸುತ್ತವೆ.
16. ಯೆಹೆಜ್ಕೇಲನು ಏನನ್ನು ನೋಡಿದನು?
16 ಯೆಹೋವನ ಹಸ್ತಸ್ಪರ್ಶವು ಯೆಹೆಜ್ಕೇಲನ ಮೇಲೆ ಉಂಟಾಯಿತು, ಮತ್ತು ಅವನು ಭಯಭಕ್ತಿ ಪ್ರೇರಕವಾದ ಒಂದು ದರ್ಶನವನ್ನು ನೋಡಲಾರಂಭಿಸಿದನು. ಅದರಲ್ಲಿ ಯೆಹೋವನು, ಒಂದು ದೊಡ್ಡ ಸ್ವರ್ಗೀಯ ರಥದಲ್ಲಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಅದಕ್ಕೆ ಬೃಹತ್ ಗಾತ್ರದ ಚಕ್ರಗಳಿದ್ದು, ಅವುಗಳ ಹೊರಸುತ್ತಿನ ಮೇಲೆಲ್ಲ ಕಣ್ಣುಗಳಿದ್ದವು. ಇಲ್ಲಿ ನಮಗೆ ಆಸಕ್ತಿಯನ್ನು ಕೆರಳಿಸುವಂತಹ ವಿವರವು ಯಾವುದೆಂದರೆ, ಅಲ್ಲಿ ನಾಲ್ಕು ಜೀವಿಗಳಿದ್ದು, ಪ್ರತಿಯೊಂದು ಚಕ್ರದ ಬಳಿ ಒಂದೊಂದು ಜೀವಿಯು ನಿಂತಿತ್ತು. “ಅವುಗಳ ರೂಪವು ಮನುಷ್ಯರೂಪದಂತಿತ್ತು. ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು. ಮುಖಗಳು ಎಂಥವುಗಳೆಂದರೆ ಒಂದೊಂದರ ಮುಂದಿನ ಮುಖವು ಮನುಷ್ಯನದು, ಬಲಗಡೆಯ ಮುಖವು ಸಿಂಹನದು, ಎಡಗಡೆಯ ಮುಖವು ಹೋರಿಯದು, ಹಿಂದಿನ ಮುಖವು ಗರುಡಪಕ್ಷಿಯದು.”—ಯೆಹೆಜ್ಕೇಲ 1:5, 6, 10.
17. ಕೆರೂಬಿಗಳ ನಾಲ್ಕು ಮುಖಗಳು ಏನನ್ನು ಪ್ರತಿನಿಧಿಸುತ್ತವೆ?
17 ಈ ನಾಲ್ಕು ಜೀವಿಗಳು ಏನಾಗಿದ್ದವು? ಅವು ಕೆರೂಬಿಗಳಾಗಿದ್ದವೆಂದು ಯೆಹೆಜ್ಕೇಲನು ತಾನೇ ನಮಗೆ ಹೇಳುತ್ತಾನೆ. (ಯೆಹೆಜ್ಕೇಲ 10:1-3, 14) ಅವುಗಳಿಗೆ ಏಕೆ ನಾಲ್ಕು ಮುಖಗಳಿದ್ದವು? ಪರಮಾಧಿಕಾರಿ ಕರ್ತನಾದ ಯೆಹೋವನ ನಾಲ್ಕು ಪ್ರಮುಖ ಗುಣಗಳನ್ನು ಪ್ರತಿನಿಧಿಸಲಿಕ್ಕಾಗಿಯೇ. ಗರುಡಪಕ್ಷಿಯ ಮುಖವು, ದೂರದೃಷ್ಟಿಯುಳ್ಳ ವಿವೇಕದ ಒಂದು ಸಂಕೇತವಾಗಿತ್ತು. (ಯೋಬ 39:27-29) ಹೋರಿಯ ಮುಖವು ಏನನ್ನು ಪ್ರತಿನಿಧಿಸಿತು? ಅದರ ಕತ್ತು ಮತ್ತು ಭುಜಗಳಲ್ಲಿ ಭಾರಿ ಪ್ರಮಾಣದ ಬಲವಿದ್ದು, ಕಾಳಗಮಾಡುವ ಒಂದು ಹೋರಿಯು, ಒಂದು ಕುದುರೆಯನ್ನೂ ಹಾಗೂ ಅದರ ಸವಾರನನ್ನೂ ಮೇಲಕ್ಕೆಸೆಯಬಲ್ಲದೆಂಬ ಪ್ರಖ್ಯಾತಿಯನ್ನು ಪಡೆದಿದೆ. ಖಂಡಿತವಾಗಿಯೂ, ಹೋರಿಯು ಯೆಹೋವನ ಅಪರಿಮಿತ ಶಕ್ತಿಯ ಒಂದು ಸಂಕೇತವಾಗಿದೆ. ಸಿಂಹವು ಧೈರ್ಯಭರಿತ ನ್ಯಾಯದ ಒಂದು ಸಂಕೇತವಾಗಿ ಉಪಯೋಗಿಸಲ್ಪಟ್ಟಿದೆ. ಅಂತಿಮವಾಗಿ, ಮನುಷ್ಯನ ಮುಖವು ಸೂಕ್ತವಾಗಿಯೇ ದೇವರ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಈ ಗುಣವನ್ನು ಬುದ್ಧಿವಂತಿಕೆಯಿಂದ ಪ್ರದರ್ಶಿಸಸಾಧ್ಯವಿರುವ ಏಕಮಾತ್ರ ಭೂಜೀವಿಯು ಮನುಷ್ಯನಾಗಿದ್ದಾನೆ.—ಮತ್ತಾಯ 22:37, 39; 1 ಯೋಹಾನ 4:8.
18. ಸ್ವರ್ಗೀಯ ಸಂಸ್ಥೆಯ ಕುರಿತಾದ ನಮ್ಮ ಗ್ರಹಣಶಕ್ತಿಗೆ ಅಪೊಸ್ತಲ ಯೋಹಾನನು ಹೇಗೆ ಹೆಚ್ಚಿನ ವಿಷಯವನ್ನು ಕೂಡಿಸುತ್ತಾನೆ?
18 ಈ ಚಿತ್ರಣವನ್ನು ಪೂರ್ಣಗೊಳಿಸಲಿಕ್ಕಾಗಿ ನಮಗೆ ಸಹಾಯ ಮಾಡಸಾಧ್ಯವಿರುವ ಇನ್ನಿತರ ದರ್ಶನಗಳು ಇವೆ. ಇವುಗಳಲ್ಲಿ, ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಯೋಹಾನನ ದರ್ಶನಗಳೂ ಸೇರಿವೆ. ಯೆಹೆಜ್ಕೇಲನಂತೆ ಅವನು, ಯೆಹೋವನು ಮಹಿಮಾನ್ವಿತ ಸಿಂಹಾಸನದ ಮೇಲೆ ಕೆರೂಬಿಗಳೊಂದಿಗೆ ಇರುವುದನ್ನು ನೋಡುತ್ತಾನೆ. ಕೆರೂಬಿಗಳು ಏನು ಮಾಡುತ್ತಿವೆ? “ದೇವರಾದ ಯೆಹೋವನು ಪರಿಶುದ್ಧನು ಪರಿಶುದ್ಧನು ಪರಿಶುದ್ಧನು; ಆತನು ಸರ್ವಶಕ್ತನು, ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವಂಥವನು” ಎಂದು ಹೇಳುತ್ತಾ, ಯೆಶಾಯ 6ನೆಯ ಅಧ್ಯಾಯದಲ್ಲಿರುವ ಸೆರಾಫಿಯರ ಘೋಷಣೆಯನ್ನು ಅವು ಪ್ರತಿಧ್ವನಿಸುತ್ತವೆ. (ಪ್ರಕಟನೆ 4:6-8) ಯೋಹಾನನು ಆ ಸಿಂಹಾಸನದ ಬಳಿಯಲ್ಲಿ ಒಂದು ಕುರಿಮರಿಯನ್ನೂ ನೋಡುತ್ತಾನೆ. ಅದು ಏನನ್ನು ಪ್ರತಿನಿಧಿಸಬಹುದು? ದೇವರ ಕುರಿಮರಿಯಾದ ಯೇಸು ಕ್ರಿಸ್ತನನ್ನೇ.—ಪ್ರಕಟನೆ 5:13, 14.
19. ಈ ಅಭ್ಯಾಸದ ಮೂಲಕ, ಯೆಹೋವನ ಸಂಸ್ಥೆಯ ಕುರಿತಾಗಿ ನೀವು ಯಾವ ವಿಷಯವನ್ನು ಗ್ರಹಿಸಿದ್ದೀರಿ?
19 ಹೀಗೆ ಈ ದರ್ಶನಗಳ ಸಹಾಯದಿಂದ, ನಾವು ಯಾವ ವಿಷಯಗಳನ್ನು ಗ್ರಹಿಸಿಕೊಂಡಿದ್ದೇವೆ? ಸ್ವರ್ಗೀಯ ಸಂಸ್ಥೆಯ ತುತ್ತತುದಿಯಲ್ಲಿ, ತನ್ನ ಸಿಂಹಾಸನದ ಮೇಲೆ ಯೆಹೋವ ದೇವರು ಆಸೀನನಾಗಿದ್ದು, ವಾಕ್ಯವಾಗಿರುವ ಯೇಸು ಕ್ರಿಸ್ತನು—ಕುರಿಮರಿಯು—ಆತನೊಂದಿಗಿದ್ದಾನೆ. ತದನಂತರ ನಾವು ಸೆರಾಫಿಯರು ಹಾಗೂ ಕೆರೂಬಿಗಳನ್ನು ಒಳಗೊಂಡು, ಸ್ವರ್ಗೀಯ ದೇವದೂತರ ಸೈನ್ಯವನ್ನು ನೋಡಿದ್ದೇವೆ. ಅವು, ಯೆಹೋವನ ಉದ್ದೇಶಗಳನ್ನು ಪೂರೈಸುತ್ತಿರುವ ಬಹು ದೊಡ್ಡ, ಐಕ್ಯವಾದ ಸಂಸ್ಥೆಯ ಒಂದು ಭಾಗವಾಗಿವೆ. ಮತ್ತು ಆ ಉದ್ದೇಶಗಳಲ್ಲಿ ಒಂದು, ಈ ಅಂತ್ಯ ಕಾಲದಲ್ಲಿ ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವುದೇ ಆಗಿದೆ.—ಮಾರ್ಕ 13:10; ಯೋಹಾನ 1:1-3; ಪ್ರಕಟನೆ 14:6, 7.
20. ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಯು ಉತ್ತರಿಸಲ್ಪಡುವುದು?
20 ಕೊನೆಯದಾಗಿ, ಪರಮಾಧಿಕಾರಿಯಾದ ಕರ್ತನ ಚಿತ್ತವನ್ನು ಹೇಗೆ ಮಾಡುವುದೆಂಬುದನ್ನು ಕಲಿಯಲಿಕ್ಕಾಗಿ, ತಮ್ಮ ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುತ್ತಿರುವ ಯೆಹೋವನ ಸಾಕ್ಷಿಗಳು ಭೂಮಿಯಲ್ಲಿದ್ದಾರೆ. ನಿಶ್ಚಯವಾಗಿಯೂ, ಸೈತಾನನೊಂದಿಗೆ ಹಾಗೂ ಸತ್ಯದ ವೈರಿಗಳೊಂದಿಗೆ ಇರುವವರಿಗಿಂತಲೂ, ನಮ್ಮ ಬಳಿಯಲ್ಲಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ನಾವು ಈಗ ಗಣ್ಯಮಾಡಸಾಧ್ಯವಿದೆ. ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕೂ ಸ್ವರ್ಗೀಯ ಸಂಸ್ಥೆಗೂ ಯಾವ ಸಂಬಂಧವಿದೆ? ಎಂಬ ಪ್ರಶ್ನೆ ಉಳಿಯುತ್ತದೆ. ಮುಂದಿನ ಲೇಖನವು, ಆ ವಿಚಾರವನ್ನೂ ಅದರೊಂದಿಗೆ ಇನ್ನಿತರ ವಿಚಾರಗಳನ್ನೂ ಪರೀಕ್ಷಿಸಿ ನೋಡುವುದು.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
ಯೆಹೋವನ ಸಂಸ್ಥೆಯನ್ನು ಗಣ್ಯಮಾಡಲಿಕ್ಕಾಗಿ, ನಾವು ಏನನ್ನು ಗ್ರಹಿಸತಕ್ಕದ್ದು?
◻ ಎಲೀಷನ ಸೇವಕನಿಗೆ ಯಾವ ಅನುಭವವಾಯಿತು, ಮತ್ತು ಪ್ರವಾದಿಯು ಅವನಿಗೆ ಹೇಗೆ ಉತ್ತೇಜನವನ್ನು ನೀಡಿದನು?
◻ ನಾವು ವೈಯಕ್ತಿಕ ಅಧ್ಯಯನವನ್ನು ಹೇಗೆ ವೀಕ್ಷಿಸತಕ್ಕದ್ದು?
◻ ದಾನಿಯೇಲ, ಯೆಶಾಯ, ಮತ್ತು ಯೆಹೆಜ್ಕೇಲರು, ಸ್ವರ್ಗೀಯ ಸಂಸ್ಥೆಯ ಕುರಿತಾದ ವಿವರಗಳನ್ನು ಹೇಗೆ ನೀಡುತ್ತಾರೆ?
[ಪುಟ 13 ರಲ್ಲಿರುವ ಚಿತ್ರ]
ಚೆನ್ನಾಗಿ ತಯಾರಿಸಲ್ಪಟ್ಟ ಒಂದು ಊಟದ ಪ್ರಯೋಜನಗಳಿಗಿಂತಲೂ, ವೈಯಕ್ತಿಕ ಅಧ್ಯಯನದ ಪ್ರಯೋಜನಗಳು ಹೆಚ್ಚು ಬಾಳಿಕೆ ಬರುತ್ತವೆ
[ಪುಟ 15 ರಲ್ಲಿರುವ ಚಿತ್ರ]
ಸ್ವರ್ಗೀಯ ಸೈನ್ಯಗಳ ಒಂದು ದರ್ಶನವು, ಯೆಹೋವನು ಎಲೀಷನ ಪ್ರಾರ್ಥನೆಗೆ ಕೊಟ್ಟ ಉತ್ತರವಾಗಿತ್ತು