“ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು”
ದೇವರ ವಾಕ್ಯವಾದ ಬೈಬಲಿನಿಂದ ಬರುವ ಮಾರ್ಗದರ್ಶನವು, ‘ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕದ್ದು ಆಗಿದೆ.’ (ಕೀರ್ತನೆ 19:7-10) ಏಕೆ? ಏಕೆಂದರೆ “ಜ್ಞಾನಿಯ [ಯೆಹೋವನ] ಬೋಧೆ ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.” (ಜ್ಞಾನೋಕ್ತಿ 13:14) ಶಾಸ್ತ್ರವಚನಗಳ ಸಲಹೆಯು ಅನ್ವಯಿಸಲ್ಪಡುವಾಗ, ಅದು ನಮ್ಮ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ ಮಾತ್ರವಲ್ಲ, ನಮ್ಮ ಜೀವವನ್ನು ಅಪಾಯಕ್ಕೊಡ್ಡುವಂಥ ಪಾಶಗಳಿಂದ ನಾವು ದೂರವಿರುವಂತೆಯೂ ಸಹಾಯಮಾಡುತ್ತದೆ. ಹೀಗಿರುವುದರಿಂದ, ಶಾಸ್ತ್ರವಚನಗಳ ಜ್ಞಾನವನ್ನು ಹುಡುಕಿ, ನಾವು ಕಲಿಯುವ ವಿಷಯಗಳಿಗೆ ಅನುರೂಪವಾಗಿ ಕಾರ್ಯವೆಸಗುವುದು ಎಷ್ಟು ಅತ್ಯಾವಶ್ಯಕ!
ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು ನಾವು ಹೆಚ್ಚು ಉತ್ತಮವಾದ ಮತ್ತು ಹೆಚ್ಚು ದೀರ್ಘವಾದ ಬದುಕನ್ನು ಆನಂದಿಸಲಾಗುವಂತೆ ಜ್ಞಾನಭರಿತರಾಗಿ ವರ್ತಿಸಲು ಸಹಾಯಮಾಡುವಂಥ ಬುದ್ಧಿವಾದವನ್ನು ಕೊಟ್ಟನು. ಇದನ್ನು ಜ್ಞಾನೋಕ್ತಿ 13:15-25ರಲ್ಲಿ ದಾಖಲಿಸಲಾಗಿದೆ.a ಚುಟುಕಾದ ಜ್ಞಾನೋಕ್ತಿಗಳನ್ನು ಬಳಸುತ್ತಾ ಅವನು, ನಾವು ಇತರರಿಂದ ಮೆಚ್ಚಲ್ಪಡಲು, ನಮ್ಮ ಶುಶ್ರೂಷೆಯಲ್ಲಿ ನಂಬಿಗಸ್ತರಾಗಿ ಉಳಿಯಲು, ಶಿಕ್ಷೆ ಇಲ್ಲವೆ ಶಿಸ್ತಿನ ಕಡೆಗೆ ಸರಿಯಾದ ಮನೋಭಾವವನ್ನು ಹೊಂದಲು, ಮತ್ತು ನಮ್ಮ ಸಂಗಾತಿಗಳನ್ನು ವಿವೇಕಯುತವಾಗಿ ಆಯ್ಕೆಮಾಡಲು ದೇವರ ವಾಕ್ಯವು ನಮಗೆ ಹೇಗೆ ಸಹಾಯಮಾಡಬಲ್ಲದೆಂದು ತೋರಿಸುತ್ತಾನೆ. ನಮ್ಮ ಸಂತತಿಗಾಗಿ ಒಂದು ಆಸ್ತಿಯನ್ನು ಬಿಟ್ಟುಹೋಗುವ ಮತ್ತು ಅದೇ ಸಮಯದಲ್ಲಿ ಪ್ರೀತಿಯಿಂದ ಶಿಸ್ತುಕೊಡುವುದರ ವಿವೇಕವನ್ನು ಅವನು ತೋರಿಸುತ್ತಾನೆ.
ಸುಬುದ್ಧಿಯು ದಯಾಸ್ಪದವು
ಸೊಲೊಮೋನನು ಹೇಳುವುದು: “ಸುಬುದ್ಧಿಯು ದಯಾಸ್ಪದವು; ದ್ರೋಹಿಯ ಮಾರ್ಗವು ನಾಶಕರ.” (ಜ್ಞಾನೋಕ್ತಿ 13:15) “ಸುಬುದ್ಧಿ” ಇಲ್ಲವೆ ಒಳ್ಳೇ ತಿಳಿವಳಿಕೆಗಾಗಿರುವ ಮೂಲ ಭಾಷಾ ಅಭಿವ್ಯಕ್ತಿಯು, “ಪರಿಜ್ಞಾನ, ಉತ್ತಮ ತೀರ್ಮಾನಶಕ್ತಿ, ಮತ್ತು ವಿವೇಕಯುತ ಅಭಿಪ್ರಾಯಗಳಿಗಾಗಿರುವ ಸಾಮರ್ಥ್ಯವನ್ನು ವರ್ಣಿಸುತ್ತದೆ” ಎಂದು ಪರಾಮರ್ಶೆ ಕೃತಿಯೊಂದು ಹೇಳುತ್ತದೆ. ಇಂಥ ಗುಣಗಳುಳ್ಳ ಒಬ್ಬ ವ್ಯಕ್ತಿಯು, ಇತರರ ಅನುಗ್ರಹಕ್ಕೆ ಪಾತ್ರನಾಗುವುದು ಕಷ್ಟಕರವಲ್ಲ.
ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತನಾದ ಫಿಲೆಮೋನನೊಂದಿಗೆ ಸುಬುದ್ಧಿಯಿಂದ ವ್ಯವಹರಿಸಿದ ರೀತಿಯನ್ನು ಪರಿಗಣಿಸಿರಿ. ಫಿಲೆಮೋನನಿಂದ ಓಡಿಹೋಗಿದ್ದ ಆದರೆ ನಂತರ ಒಬ್ಬ ಕ್ರೈಸ್ತನಾಗಿ ಪರಿಣಮಿಸಿದ್ದ ಅವನ ದಾಸನಾದ ಓನೇಸಿಮನನ್ನು, ಪೌಲನು ಅವನ ಬಳಿ ಹಿಂದೆ ಕಳುಹಿಸುತ್ತಿದ್ದ ಸಮಯ ಅದಾಗಿತ್ತು. ಓನೇಸಿಮನನ್ನು ದಯಾಪರವಾಗಿ ಅಂದರೆ ಅಪೊಸ್ತಲನಾಗಿರುವ ತನ್ನನ್ನು ಸ್ವಾಗತಿಸುವ ರೀತಿಯಲ್ಲೇ ಬರಮಾಡಿಕೊಳ್ಳಬೇಕೆಂದು ಪೌಲನು ಫಿಲೆಮೋನನಿಗೆ ಸಲಹೆಕೊಟ್ಟನು. ಓನೇಸಿಮನು ಫಿಲೆಮೋನನ ಯಾವುದೇ ಸಾಲವನ್ನು ತೀರಿಸಲಿಕ್ಕಿರುವಲ್ಲಿ ಅದನ್ನು ತಾನು ತೀರಿಸುವೆನೆಂದು ಪೌಲನು ಹೇಳಿದನು. ಹೌದು, ಪೌಲನು ತನ್ನ ಅಧಿಕಾರವನ್ನು ಚಲಾಯಿಸಿ, ಫಿಲೆಮೋನನು ಏನನ್ನು ಮಾಡಬೇಕೆಂದು ಅಪ್ಪಣೆ ಕೊಡಬಹುದಿತ್ತು. ಆದರೆ ಆ ಅಪೊಸ್ತಲನು ವಿಷಯವನ್ನು ಜಾಣ್ಮೆಯಿಂದ ಮತ್ತು ಪ್ರೀತಿಯಿಂದ ನಿರ್ವಹಿಸಲು ಆಯ್ಕೆಮಾಡಿದನು. ಹೀಗೆ ಮಾಡುವ ಮೂಲಕ, ಫಿಲೆಮೋನನ ಸಹಕಾರವನ್ನು ಗಳಿಸುವೆನೆಂದು ಮತ್ತು ಕೇಳಲ್ಪಡುವುದಕ್ಕಿಂತ ಹೆಚ್ಚನ್ನು ಮಾಡಲು ಅವನು ಪ್ರಚೋದಿಸಲ್ಪಡುವನೆಂದು ಪೌಲನಿಗೆ ಭರವಸೆಯಿತ್ತು. ಜೊತೆ ವಿಶ್ವಾಸಿಗಳೊಂದಿಗೆ ನಾವು ಸಹ ಇದೇ ರೀತಿಯಲ್ಲಿ ವ್ಯವಹರಿಸಬೇಕಲ್ಲವೊ?—ಫಿಲೆಮೋನ 8-21.
ಇನ್ನೊಂದು ಬದಿಯಲ್ಲಿ, ದ್ರೋಹಿಯ ಮಾರ್ಗವು ನಾಶಕರವಾಗಿರುತ್ತದೆ ಇಲ್ಲವೆ “ಗಟ್ಟಿ”ಯಾಗಿರುತ್ತದೆ (ನ್ಯೂ ಇಂಟರ್ನ್ಯಾಷನಲ್ ವರ್ಷನ್). ಯಾವ ಅರ್ಥದಲ್ಲಿ? ಒಬ್ಬ ವಿದ್ವಾಂಸನಿಗನುಸಾರ, ಇಲ್ಲಿ ಬಳಸಲ್ಪಟ್ಟಿರುವ ಶಬ್ದದ ಅರ್ಥ “ಬಲಿಷ್ಠ ಇಲ್ಲವೆ ದೃಢ” ಆಗಿದ್ದು, “ದುಷ್ಟ ಜನರ ಕಠೋರವಾದ ನಡವಳಿಕೆಗೆ ಸೂಚಿಸುತ್ತದೆ. . . . ತನ್ನ ಕೆಡುಕಿನ ಮಾರ್ಗಗಳಲ್ಲಿ ನೆಲೆಗೊಂಡಿರುವ, ಇತರರ ವಿವೇಕಭರಿತ ಸೂಚನೆಗಳ ಕಡೆಗೆ ಕಲ್ಲುಹೃದಯದವನೂ ಉದಾಸೀನನೂ ಆಗಿರುವ ಪುರುಷನು, ವಿನಾಶಕ್ಕೆ ನಡೆಸುವ ಹಾದಿಯಲ್ಲಿದ್ದಾನೆ.”
ಸೊಲೊಮೋನನು ಮುಂದುವರಿಸಿದ್ದು: “ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು; ಮೂಢನು ತನ್ನ ಮೂರ್ಖತನವನ್ನು ಡಂಭವಾಗಿ ತೋರ್ಪಡಿಸುವನು.” (ಜ್ಞಾನೋಕ್ತಿ 13:16) ಈ ಜಾಣನು ಒಬ್ಬ ಕುತಂತ್ರಿಯಲ್ಲ. ಇಲ್ಲಿ ತಿಳಿಸಲ್ಪಟ್ಟಿರುವ ಜಾಣತನವು, ತಿಳುವಳಿಕೆ ಇಲ್ಲವೆ ಜ್ಞಾನದೊಂದಿಗೆ ಜೋಡಿಸಲ್ಪಟ್ಟಿದೆ ಮತ್ತು ಯಾವುದೇ ಕಾರ್ಯಕ್ಕಿಳಿಯುವ ಮೊದಲು ಜಾಗರೂಕತೆಯಿಂದ ಯೋಚಿಸುವ ಒಬ್ಬ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂಬಂಧಿಸಲ್ಪಟ್ಟಿದೆ. ಅನ್ಯಾಯಭರಿತ ಟೀಕೆ ಇಲ್ಲವೆ ಅವಹೇಳನವನ್ನೂ ಎದುರಿಸುವಾಗ, ಜಾಣನು ತನ್ನ ನಾಲಗೆಯನ್ನು ಬಿಗಿಹಿಡಿಯುತ್ತಾನೆ. ತಾನು ಅತಿಯಾಗಿ ಸಿಡಿಮಿಡಿಗೊಳ್ಳದಂತೆ, ಪವಿತ್ರಾತ್ಮದ ಫಲವನ್ನು ತೋರಿಸಲು ಅವನು ಪ್ರಾರ್ಥನಾಪೂರ್ವಕವಾಗಿ ಪ್ರಯತ್ನಿಸುತ್ತಾನೆ. (ಗಲಾತ್ಯ 5:22, 23) ಬುದ್ಧಿವಂತ ವ್ಯಕ್ತಿಯು, ಇನ್ನೊಬ್ಬ ವ್ಯಕ್ತಿಯಾಗಲಿ, ಸನ್ನಿವೇಶವಾಗಲಿ ತನ್ನನ್ನು ನಿಯಂತ್ರಿಸುವಂತೆ ಬಿಡುವುದಿಲ್ಲ. ಬದಲಿಗೆ, ಅವನು ಸ್ವನಿಯಂತ್ರಣವುಳ್ಳವನಾಗಿದ್ದು, ಯಾರಾದರೂ ತನ್ನ ಮನಸ್ಸನ್ನು ನೋಯಿಸುವುದಾದರೂ, ಬೇಗನೆ ಸಿಟ್ಟಿಗೇಳುವ ವ್ಯಕ್ತಿಯು ಸಿಕ್ಕಿಬೀಳುವಂಥ ಜಗಳಗಳಿಂದ ದೂರವಿರುತ್ತಾನೆ.
ನಿರ್ಣಯಗಳನ್ನು ಮಾಡುವಾಗಲೂ ಜಾಣನು ತಿಳಿವಳಿಕೆಯಿಂದ ಕೆಲಸಮಾಡುತ್ತಾನೆ. ವಿವೇಕಯುತ ಕೃತ್ಯಗಳು, ಕೇವಲ ಊಹಾಪೋಹ, ಭಾವುಕರಾಗಿ ಕ್ರಿಯೆಗೈಯುವ, ಇಲ್ಲವೆ ಬೇರೆ ಜನರು ಮಾಡಿರುವ ಕಾರಣ ತಾವೂ ಮಾಡುವ ಕೆಲಸವಾಗಿರುವುದಿಲ್ಲವೆಂದು ಅವನಿಗೆ ತಿಳಿದಿದೆ. ಆದುದರಿಂದ ಅವನು ಮೊದಲು ಸನ್ನಿವೇಶದ ಬಗ್ಗೆ ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಾನೆ. ಅವನು ಎಲ್ಲಾ ವಾಸ್ತವಾಂಶಗಳನ್ನು ಶೇಖರಿಸುತ್ತಾನೆ, ಮತ್ತು ತನ್ನ ಮುಂದೆ ಇರುವ ಆಯ್ಕೆಗಳು ಯಾವವು ಎಂಬುದನ್ನು ಕಂಡುಹಿಡಿಯುತ್ತಾನೆ. ನಂತರ, ಅವನು ಶಾಸ್ತ್ರವಚನಗಳಲ್ಲಿ ಹುಡುಕಿ, ತನ್ನ ಸನ್ನಿವೇಶಕ್ಕೆ ಯಾವ ಬೈಬಲ್ ನಿಯಮಗಳು ಇಲ್ಲವೆ ಮೂಲತತ್ತ್ವಗಳು ಅನ್ವಯವಾಗುತ್ತವೆಂಬುದನ್ನು ನಿರ್ಣಯಿಸುತ್ತಾನೆ. ಅಂಥ ವ್ಯಕ್ತಿಯ ಮಾರ್ಗವು ಸರಾಗವಾಗಿರುತ್ತದೆ.—ಜ್ಞಾನೋಕ್ತಿ 3:5, 6.
“ನಂಬಿಕೆಯಾದ ರಾಯಭಾರಿಯು ಕ್ಷೇಮಕರನು”
ಯೆಹೋವನ ಸಾಕ್ಷಿಗಳೋಪಾದಿ, ನಮಗೆ ದೇವದತ್ತ ಸಂದೇಶವನ್ನು ಘೋಷಿಸುವ ಕೆಲಸವು ವಹಿಸಲ್ಪಟ್ಟಿದೆ. ಮುಂದಿನ ಜ್ಞಾನೋಕ್ತಿಯ ಮಾತುಗಳು ನಾವು ನಮ್ಮ ನೇಮಕಕ್ಕೆ ನಂಬಿಗಸ್ತರಾಗಿ ಉಳಿಯುವಂತೆ ಸಹಾಯಮಾಡುತ್ತವೆ. ಅದನ್ನುವುದು: “ಕೆಟ್ಟ ದೂತನು ಕೇಡಿಗೆ ಬೀಳುವನು; ನಂಬಿಕೆಯಾದ ರಾಯಭಾರಿಯು ಕ್ಷೇಮಕರನು.”—ಜ್ಞಾನೋಕ್ತಿ 13:17.
ಇಲ್ಲಿ, ದೂತನ ಗುಣಗಳ ಮೇಲೆ ಒತ್ತನ್ನು ಕೊಡಲಾಗಿದೆ. ಆದರೆ ಸಂದೇಶವನ್ನು ಹೊತ್ತಿರುವ ದೂತನು, ದುಷ್ಟ ಮನಸ್ಸಿನಿಂದ ಸಂದೇಶವನ್ನು ತಿರುಚುವಲ್ಲಿ ಇಲ್ಲವೆ ಬದಲಾಯಿಸುವಲ್ಲಿ ಆಗೇನು? ಅವನಿಗೆ ಪ್ರತಿಕೂಲವಾದ ನ್ಯಾಯದಂಡನೆ ಸಿಗುವುದು ಅಲ್ಲವೊ? ಪ್ರವಾದಿಯಾದ ಎಲೀಷನ ಸೇವಕನಾದ ಗೇಹಜಿಯ ಕುರಿತಾಗಿ ಯೋಚಿಸಿರಿ. ದುರಾಶೆಯಿಂದ ಅವನು ಆರಾಮ್ಯ ಸೇನಾಪತಿ ನಾಮಾನನಿಗೆ ಒಂದು ಸುಳ್ಳು ಸಂದೇಶವನ್ನು ತಲಪಿಸಿದನು. ಆಗ, ನಾಮಾನನಿಗೆ ವಾಸಿಯಾಗಿದ್ದ ಕುಷ್ಠರೋಗವು ಗೇಹಜಿಗೆ ಬಂತು. (2 ಅರಸುಗಳು 5:20-27) ರಾಯಭಾರಿಯು ಅಪನಂಬಿಗಸ್ತನಾಗಿ, ಸಂದೇಶವನ್ನು ಘೋಷಿಸುವುದನ್ನೇ ನಿಲ್ಲಿಸಿಬಿಟ್ಟರೆ ಆಗೇನು? ಬೈಬಲು ತಿಳಿಸುವುದು: “ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಪಡಿಸದೆ ಹೋದರೆ ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವದು; ಅವನ ಮರಣಕ್ಕೆ ಹೊಣೆಯಾದ ನಿನಗೆ ನಾನು [ಯೆಹೋವನು] ಮುಯ್ಯಿತೀರಿಸುವೆನು.”—ಯೆಹೆಜ್ಕೇಲ 33:8.
ಇನ್ನೊಂದು ಬದಿಯಲ್ಲಿ, ನಂಬಿಗಸ್ತನಾದ ರಾಯಭಾರಿಯು, ಸ್ವತಃ ತನಗೂ ತನಗೆ ಕಿವಿಗೊಡುವವರಿಗೂ ಕ್ಷೇಮಕರನಾಗಿದ್ದಾನೆ. ಪೌಲನು ತಿಮೊಥೆಯನನ್ನು ಉತ್ತೇಜಿಸಿದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ರಾಜ್ಯ ಸುವಾರ್ತೆಯನ್ನು ನಂಬಿಗಸ್ತಿಕೆಯಿಂದ ಘೋಷಿಸುವುದರಿಂದ ಪೂರೈಸಲ್ಪಡುವಂಥ ಕ್ಷೇಮಗೊಳಿಸುವ ಕೆಲಸದ ಕುರಿತಾಗಿ ಯೋಚಿಸಿರಿ. ಅದು ಸಹೃದಯದ ಸ್ಥಿತಿಯುಳ್ಳ ಜನರನ್ನು ಬಡಿದೆಬ್ಬಿಸಿ, ಅವರನ್ನು ಬಿಡುಗಡೆಗೊಳಿಸುವಂಥ ಸತ್ಯದ ಕಡೆಗೆ ನಡೆಸುತ್ತದೆ. (ಯೋಹಾನ 8:32) ಒಂದುವೇಳೆ ಜನರು ಆ ಸಂದೇಶಕ್ಕೆ ಕಿವಿಗೊಡಲು ತಪ್ಪುವುದಾದರೂ, ನಿಷ್ಠಾವಂತನಾದ ರಾಯಭಾರಿಯಾದರೊ, ‘ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.’ (ಯೆಹೆಜ್ಕೇಲ 33:9) ನಮಗೆ ಕೊಡಲ್ಪಟ್ಟಿರುವ ಸಾರುವ ನೇಮಕವನ್ನು ನಾವೆಂದೂ ಅಲಕ್ಷಿಸದಿರೋಣ. (1 ಕೊರಿಂಥ 9:16) ಮತ್ತು ನಾವು ಯಾವಾಗಲೂ, ‘ವಾಕ್ಯವನ್ನು ಸಾರಲು’ ಎಚ್ಚರವಾಗಿರೋಣ. ಆದರೆ ಎಂದಿಗೂ ಅದರ ತೀಕ್ಷ್ಣತೆಯನ್ನು ಕಡಿಮೆಮಾಡಲು ಇಲ್ಲವೆ ಜನರನ್ನು ಆಕರ್ಷಿಸಲಿಕ್ಕಾಗಿ ಬೈಬಲಿನ ಸಂದೇಶವನ್ನು ಮಾರ್ಪಡಿಸದಿರೋಣ.—2 ತಿಮೊಥೆಯ 4:2.
‘ಗದರಿಕೆಯನ್ನು ಗಮನಿಸುವವನಿಗೆ ಮಾನ’
ಒಬ್ಬ ವಿವೇಕಿ ವ್ಯಕ್ತಿಯು, ತಾನು ಪಡೆಯುವಂಥ ಯಾವುದೇ ಸಹಾಯಕಾರಿ ಬುದ್ಧಿವಾದದ ಬಗ್ಗೆ ಕೋಪಿಸಿಕೊಳ್ಳಬೇಕೊ? ಜ್ಞಾನೋಕ್ತಿ 13:18 ತಿಳಿಸುವುದು: “ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ; ಗದರಿಕೆಯನ್ನು ಗಮನಿಸುವವನಿಗೆ ಮಾನ.” ನಾವು ಕೇಳಿಕೊಳ್ಳದಿರುವಾಗ ಸಿಗುವ ಗದರಿಕೆಯನ್ನೂ ಕೃತಜ್ಞತಾಭಾವದಿಂದ ಸ್ವೀಕರಿಸಿದರೆ ನಾವು ವಿವೇಕಿಗಳು. ಏಕೆಂದರೆ ನಮಗೆ ಸ್ಥಿರವಾದ ಬುದ್ಧಿವಾದದ ಅಗತ್ಯವಿದೆಯೆಂದು ನಮಗೆ ತಿಳಿಯದೆ ಇರುವ ಸಮಯದಲ್ಲಿಯೇ ಅದು ತುಂಬ ಸಹಾಯಕಾರಿಯಾಗಿರಬಹುದು. ಅಂಥ ಸಲಹೆಗೆ ಕಿವಿಗೊಡುವುದು, ಹೃದಯದ ನೋವನ್ನೂ ದುರಂತವನ್ನೂ ತಪ್ಪಿಸಿಕೊಳ್ಳಲು ನಮಗೆ ಸಹಾಯಮಾಡಬಲ್ಲದು. ಆದರೆ ಅದನ್ನು ಅಲಕ್ಷಿಸುವುದು ಅವಮಾನವನ್ನು ತರುವುದು.
ಪ್ರಶಂಸೆಯು ಅರ್ಹವಾಗಿರುವಾಗ ನೀಡಲ್ಪಡುವಲ್ಲಿ, ಅದು ನಮಗೆ ಆತ್ಮೋನ್ನತಿಯನ್ನು ಉಂಟುಮಾಡುತ್ತದೆ ಮತ್ತು ಉತ್ತೇಜನದಾಯಕವಾಗಿ ಇರುತ್ತದೆ. ಆದರೆ ನಾವು ಗದರಿಕೆಯನ್ನು ಸಹ ನಿರೀಕ್ಷಿಸಬೇಕು ಹಾಗೂ ಸ್ವೀಕರಿಸಬೇಕು. ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಎರಡು ಪತ್ರಗಳನ್ನು ಪರಿಗಣಿಸಿರಿ. ಪೌಲನು ತಿಮೊಥೆಯನ ನಂಬಿಗಸ್ತಿಕೆಗಾಗಿ ಅವನನ್ನು ಪ್ರಶಂಸಿಸುತ್ತಾನೆ, ಆದರೆ ಅದೇ ಸಮಯದಲ್ಲಿ ಅವನ ಆ ಪತ್ರಗಳಲ್ಲಿ ಸಲಹೆಯು ತುಂಬಿದೆ. ನಂಬಿಕೆ ಮತ್ತು ಒಳ್ಳೇ ಮನಸ್ಸಾಕ್ಷಿಗೆ ಅಂಟಿಕೊಳ್ಳುವುದರ, ಸಭೆಯಲ್ಲಿ ಇತರರೊಂದಿಗೆ ವ್ಯವಹರಿಸುವುದರ, ದೈವಿಕಭಕ್ತಿ ಹಾಗೂ ಸ್ವಸಂತುಷ್ಟಿಯನ್ನು ಬೆಳೆಸಿಕೊಳ್ಳುವುದರ, ಬೇರೆಯವರಿಗೆ ಉಪದೇಶನೀಡುವ, ಧರ್ಮಭ್ರಷ್ಟತೆಯನ್ನು ಪ್ರತಿರೋಧಿಸುವ, ಮತ್ತು ಅವನ ಶುಶ್ರೂಷೆಯನ್ನು ನೆರವೇರಿಸುವುದರ ಬಗ್ಗೆ ಪೌಲನು ಮುಕ್ತವಾಗಿ ಆ ಯುವ ಪುರುಷನಿಗೆ ಸಲಹೆಕೊಡುತ್ತಾನೆ. ಸಭೆಯ ಯುವ ಸದಸ್ಯರು ಹೆಚ್ಚು ಅನುಭವಿ ವ್ಯಕ್ತಿಗಳಿಂದ ಸಲಹೆಯನ್ನು ಕೋರಿ ಸ್ವೀಕರಿಸಬೇಕು.
‘ಜ್ಞಾನಿಗಳೊಂದಿಗೆ ಸಹವಾಸಿಸಿರಿ’
ವಿವೇಕಿಯಾದ ಅರಸನು ಹೇಳುವುದು: “ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವದು ಮೂಢರಿಗೆ ಕಹಿ.” (ಜ್ಞಾನೋಕ್ತಿ 13:19) ಈ ಜ್ಞಾನೋಕ್ತಿಯ ಅರ್ಥದ ಬಗ್ಗೆ, ಒಂದು ಪರಾಮರ್ಶಕ ಕೃತಿಯು ಹೇಳುವುದು: “ಒಂದು ಗುರಿಯು ತಲಪಲ್ಪಟ್ಟಾಗ ಇಲ್ಲವೆ ಒಂದು ಇಷ್ಟವು ಸಿದ್ಧಿಯಾಗುವಾಗ, ಇಡೀ ವ್ಯಕ್ತಿಯಲ್ಲಿ ತೃಪ್ತಿಯ ಭಾವನೆಯು ತುಂಬಿಕೊಳ್ಳುತ್ತದೆ . . . ಒಬ್ಬನ ಧ್ಯೇಯವನ್ನು ಸಾಧಿಸುವುದು ಅತ್ಯಂತ ಆಹ್ಲಾದಕರವಾದ ಅನುಭವವಾಗಿರುವುದರಿಂದ, ಕೆಡುಕಿನಿಂದ ದೂರಸರಿಯುವುದು ಮೂರ್ಖರಿಗೆ ಹೇಸಿಗೆಯ ಕೃತ್ಯವಾಗಿರಲೇಬೇಕು ಎಂದು ಹೇಳಬೇಕಾಗಿಲ್ಲ. ಅವರ ಮಹತ್ವಾಕಾಂಕ್ಷೆಗಳು ಕೇವಲ ದುಷ್ಟ ವಿಧಾನಗಳಿಂದ ಸಾಧಿಸಲ್ಪಡಸಾಧ್ಯವಿದೆ, ಮತ್ತು ಒಂದುವೇಳೆ ಅವರು ಕೆಡುಕನ್ನು ತೊರೆದರೆ, ಅವರು ತಮ್ಮ ಇಷ್ಟಗಳನ್ನು ಪೂರೈಸುವ ಸುಖದಿಂದ ಸರ್ವದಾ ವಂಚಿತರಾಗುವರಲ್ಲವೇ.” ನಾವು ಯೋಗ್ಯವಾದ ಇಷ್ಟಗಳನ್ನು ಪೋಷಿಸುವುದು ಎಷ್ಟು ಅತ್ಯಾವಶ್ಯಕ!
ನಮ್ಮ ಆಲೋಚನೆಗಳು ಮತ್ತು ನಮ್ಮ ಇಷ್ಟಾನಿಷ್ಟಗಳ ಮೇಲೆ ನಮ್ಮ ಒಡನಾಡಿಗಳು ಎಂಥ ಪ್ರಬಲವಾದ ಪ್ರಭಾವವನ್ನು ಬೀರುತ್ತಾರೆ! ಸೊಲೊಮೋನನು, “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಎಂದು ಹೇಳಿದಾಗ ಬದಲಾಗದಂಥ ಒಂದು ಸತ್ಯವನ್ನು ತಿಳಿಸಿದನು. (ಜ್ಞಾನೋಕ್ತಿ 13:20) ಹೌದು, ನಮ್ಮ ಸಹವಾಸವು—ಅದು ಮನೋರಂಜನೆ, ಇಂಟರ್ನೆಟ್, ಅಥವಾ ಓದುವ ಸಾಮಗ್ರಿಯ ಮೂಲಕವೇ ಆಗಿರಲಿ—ನಾವೇನಾಗಿದ್ದೇವೊ ಮತ್ತು ಏನಾಗುವೆವೊ ಅದರ ಮೇಲೆ ಪ್ರಭಾವಬೀರುತ್ತದೆ. ನಮ್ಮ ಸಹವಾಸವನ್ನು ವಿವೇಕದಿಂದ ಆಯ್ಕೆಮಾಡುವುದೆಷ್ಟು ಪ್ರಾಮುಖ್ಯ!
‘ಆಸ್ತಿ ಸಂತತಿಗೆ ಬಾಧ್ಯ’
“ಅಮಂಗಳವು ಪಾಪಿಗಳನ್ನು ಹಿಂಬಾಲಿಸುವದು; ಮಂಗಳವು ಸಜ್ಜನರಿಗೆ” ಇಲ್ಲವೆ ನೀತಿವಂತರಿಗೆ “ಪ್ರತಿಫಲವಾಗುವದು” ಎಂದು ಇಸ್ರಾಯೇಲಿನ ರಾಜನು ಘೋಷಿಸುತ್ತಾನೆ. (ಜ್ಞಾನೋಕ್ತಿ 13:21) ನೀತಿಯನ್ನು ಬೆನ್ನಟ್ಟುವುದು ಪ್ರತಿಫಲದಾಯಕವಾಗಿದೆ, ಯಾಕೆಂದರೆ ಯೆಹೋವನು ನೀತಿವಂತರನ್ನು ಪರಾಂಬರಿಸುತ್ತಾನೆ. (ಕೀರ್ತನೆ 37:25) ಹಾಗಿದ್ದರೂ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬದನ್ನು ನಾವು ಅರಿತುಕೊಳ್ಳಬೇಕು. (ಪ್ರಸಂಗಿ 9:11) ಅಕಾಲಿಕ ಸಂಭವಗಳಿಗಾಗಿ ತಯಾರಾಗಿರಲು ನಾವೇನಾದರೂ ಮಾಡಬಲ್ಲೆವೊ?
“ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ” ಎಂದು ಸೊಲೊಮೋನನು ಹೇಳಿದನು. (ಜ್ಞಾನೋಕ್ತಿ 13:22ಎ) ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವಂತೆ ಮತ್ತು ಆತನೊಂದಿಗೆ ಸುಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುವಾಗ ಎಂಥ ಬೆಲೆಬಾಳುವ ಆಸ್ತಿಯನ್ನು ಬಿಟ್ಟುಹೋಗುತ್ತಾರೆ! ಆದರೆ ಅದೇ ಸಮಯದಲ್ಲಿ, ತಂದೆ ಇಲ್ಲವೆ ತಾಯಿಯ ಅಕಾಲಿಕ ಮರಣ ಸಂಭವಿಸುವಲ್ಲಿ ಕುಟುಂಬದ ಭೌತಿಕ ಹಿತಕ್ಷೇಮಕ್ಕೆ ಯಾವುದೇ ಧಕ್ಕೆಯುಂಟಾಗದಂತೆ ಸಾಧ್ಯವಿರುವಲ್ಲಿ ಏರ್ಪಾಡುಗಳನ್ನು ಮಾಡುವುದು ಸಹ ವಿವೇಕಯುತವಲ್ಲವೊ? ಅನೇಕ ಸ್ಥಳಗಳಲ್ಲಿ, ಕುಟುಂಬದ ತಲೆಗಳು, ವಿಮೆಗಾಗಿಯೊ, ಕಾನೂನುಬದ್ಧ ಉಯಿಲಿಗಾಗಿಯೊ, ಸ್ವಲ್ಪ ಉಳಿತಾಯಕ್ಕಾಗಿಯೊ ಏರ್ಪಾಡನ್ನು ಮಾಡಲು ಶಕ್ತರಾಗಬಹುದು.
ದುಷ್ಟರ ಆಸ್ತಿಯ ಕುರಿತಾಗಿ ಏನು ಹೇಳಬಹುದು? “ಪಾಪಿಯ ಸೊತ್ತು ಸಜ್ಜನರಿಗೆ ಗಂಟು” ಎಂದು ಸೊಲೊಮೋನನು ಮುಂದುವರಿಸಿ ಹೇಳುತ್ತಾನೆ. (ಜ್ಞಾನೋಕ್ತಿ 13:22ಬಿ) ಈಗ ಸಿಗುವ ಯಾವುದೇ ಪ್ರಯೋಜನಗಳಿಗೆ ಕೂಡಿಸುತ್ತಾ, ಈ ಮಾತುಗಳು ಯೆಹೋವನು ‘ನೀತಿಯು ವಾಸವಾಗಿರುವ’ ‘ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ’ ಸೃಷ್ಟಿಸುವ ತನ್ನ ವಾಗ್ದಾನವನ್ನು ನೆರವೇರಿಸುವಾಗ ಸತ್ಯವಾಗುವುದು. (2 ಪೇತ್ರ 3:13) ಆಗ ದುಷ್ಟರು ಇಲ್ಲವಾಗುವರು, ಮತ್ತು “ದೀನರು ದೇಶವನ್ನು ಅನುಭವಿಸುವರು.”—ಕೀರ್ತನೆ 37:11.
ಒಬ್ಬ ವಿವೇಕಿಯು, ಅಲ್ಪ ಸ್ವತ್ತುಗಳುಳ್ಳವನಾಗಿದ್ದರೂ ತಿಳಿವಳಿಕೆಯಿಂದ ಕಾರ್ಯವೆಸಗುತ್ತಾನೆ. “ಬಡವರಿಗೆ ಬಂಜರುಭೂಮಿಯೂ ಬಹು ಬೆಳೆಯನ್ನೀಯುವದು; ಅನ್ಯಾಯದಿಂದ [“ನ್ಯೂನ ತೀರ್ಮಾನದಿಂದ,” NW] ಹಾಳಾದ ಸುದ್ದಿಯು ಉಂಟು” ಎಂದು ಜ್ಞಾನೋಕ್ತಿ 13:23 ಹೇಳುತ್ತದೆ. ಬಡ ವ್ಯಕ್ತಿಗಳು, ಕಠಿನ ಶ್ರಮ ಹಾಗೂ ದೇವರ ಆಶೀರ್ವಾದಗಳಿಂದ ಬಹಳಷ್ಟನ್ನು ಫಲಿಸುವರು. ಆದರೆ ನ್ಯಾಯದ ಕೊರತೆಯಿರುವಾಗ, ಅನ್ಯಾಯದ ತೀರ್ಮಾನವು ಸಂಪತ್ತನ್ನು ಅಳಿಸಿಹಾಕಬಲ್ಲದು.
‘ಚೆನ್ನಾಗಿ ಶಿಕ್ಷಿಸುವುದು’
ಅಪರಿಪೂರ್ಣ ಜನರಿಗೆ ಶಿಕ್ಷೆ ಇಲ್ಲವೆ ಶಿಸ್ತು ಅಗತ್ಯ, ಮತ್ತು ಅದು ಅವರಿಗೆ ಬಾಲ್ಯದಿಂದಲೇ ಅಗತ್ಯ. “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ” ಎಂದು ಇಸ್ರಾಯೇಲಿನ ರಾಜನು ತಿಳಿಸುತ್ತಾನೆ.—ಜ್ಞಾನೋಕ್ತಿ 13:24.
ಬೆತ್ತ ಅಧಿಕಾರದ ದ್ಯೋತಕವಾಗಿದೆ. ಜ್ಞಾನೋಕ್ತಿ 13:24ರಲ್ಲಿ ಅದು ಹೆತ್ತವರ ಅಧಿಕಾರಕ್ಕೆ ಸೂಚಿಸುತ್ತದೆ. ಈ ಸನ್ನಿವೇಶದಲ್ಲಿ, ಶಿಕ್ಷೆಯ ಬೆತ್ತವನ್ನು ಉಪಯೋಗಿಸುವುದರ ಅರ್ಥ ಯಾವಾಗಲೂ, ಮಗುವಿಗೆ ಏಟುಕೊಡುವುದು ಎಂದಾಗಿರುವುದಿಲ್ಲ. ಅದರ ಬದಲು ಅದು ತಿದ್ದುಪಡಿಯ ಮಾಧ್ಯಮವನ್ನು ಪ್ರತಿನಿಧಿಸುತ್ತದೆ. ಇದು ಯಾವುದೇ ರೂಪದಲ್ಲಿ ಇರಬಹುದು. ಕೆಲವೊಮ್ಮೆ, ಒಂದು ಮಗುವಿಗೆ ದಯಾಪರವಾದ ಗದರಿಕೆಯು, ಅವನ ಅನುಚಿತ ನಡತೆಯನ್ನು ತಿದ್ದಲು ಸಾಕಾಗಬಹುದು. ಇನ್ನೊಂದು ಮಗುವಿಗೆ ಹೆಚ್ಚು ಬಲವಾದ ಗದರಿಕೆಯ ಆವಶ್ಯಕತೆಯಿರಬಹುದು. “ಮಂದನಿಗೆ ನೂರು ಪೆಟ್ಟು ಹೊಡೆಯುವದಕ್ಕಿಂತಲೂ ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ” ಎಂದು ಜ್ಞಾನೋಕ್ತಿ 17:10 ಹೇಳುತ್ತದೆ.
ಹೆತ್ತವರ ಶಿಕ್ಷೆಯು ಯಾವಾಗಲೂ ಮಕ್ಕಳ ಪ್ರಯೋಜನಾರ್ಥವಾಗಿ ಪ್ರೀತಿ ಹಾಗೂ ವಿವೇಕದಿಂದ ನಿರ್ದೇಶಿಸಲ್ಪಟ್ಟಿರಬೇಕು. ಪ್ರೀತಿಯ ತಂದೆಯು ತನ್ನ ಮಗುವಿನ ದೋಷಗಳ ಕಡೆಗೆ ಕಣ್ಣುಮುಚ್ಚುವುದಿಲ್ಲ. ಬದಲಾಗಿ, ಅವುಗಳು ಆಳವಾಗಿ ಬೇರುಬಿಡುವ ಮುಂಚೆ ಕಿತ್ತುಹಾಕುವಂತೆ ಅವುಗಳಿಗಾಗಿ ಹುಡುಕುತ್ತಾನೆ. ನಿಜ, ಪ್ರೀತಿಯ ಹೆತ್ತವರು ಪೌಲನ ಈ ಬುದ್ಧಿವಾದವನ್ನು ಪಾಲಿಸುತ್ತಾರೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.”—ಎಫೆಸ 6:4.
ಹೆತ್ತವರು ಮಕ್ಕಳನ್ನು ಸ್ವಚ್ಛಂದವಾಗಿ ಬಿಟ್ಟು, ಅಗತ್ಯವಿರುವ ತಿದ್ದುಪಾಟನ್ನು ಕೊಡದಿರುವಲ್ಲಿ ಆಗೇನು? ಅವರು ಕೊಟ್ಟ ಸ್ವಚ್ಛಂದತೆಗಾಗಿ ಅವರಿಗೆ ಆಮೇಲೆ ಉಪಕಾರ ಸಿಗುವುದೊ? ನಿಶ್ಚಯವಾಗಿಯೂ ಇಲ್ಲ! (ಜ್ಞಾನೋಕ್ತಿ 29:21) ಬೈಬಲ್ ಹೇಳುವುದು: “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” (ಜ್ಞಾನೋಕ್ತಿ 29:15) ಹೆತ್ತವರು ತಮ್ಮ ಅಧಿಕಾರವನ್ನು ತೋರಿಸದಿರುವುದು, ಉದಾಸೀನತೆ ಹಾಗೂ ಪ್ರೀತಿಯ ಕೊರತೆಯನ್ನು ಪ್ರದರ್ಶಿಸುತ್ತದೆ. ಆದರೆ ಅಧಿಕಾರವನ್ನು ದಯಾಪರವಾಗಿ ಮತ್ತು ದೃಢವಾಗಿ ತೋರಿಸುವುದು, ಪ್ರೀತಿಪರ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ.
ನಿಜವಾದ ಜ್ಞಾನದೊಂದಿಗೆ ವರ್ತಿಸುವ ಒಬ್ಬ ವಿವೇಕಯುತ ಹಾಗೂ ಯಥಾರ್ಥಮನಸ್ಸಿನ ವ್ಯಕ್ತಿಯು ಆಶೀರ್ವದಿಸಲ್ಪಡುವನು. ಸೊಲೊಮೋನನು ನಮಗೆ ಆಶ್ವಾಸನೆ ಕೊಡುವುದು: “ಶಿಷ್ಟನು ಹೊಟ್ಟೆತುಂಬಾ ಉಣ್ಣುವನು; ದುಷ್ಟನ ಹೊಟ್ಟೆ ಹಸಿದಿರುವದು.” (ಜ್ಞಾನೋಕ್ತಿ 13:25) ನಮ್ಮ ಜೀವನದ ಯಾವುದೇ ಕ್ಷೇತ್ರದಲ್ಲಿ—ನಮ್ಮ ಕುಟುಂಬ ವ್ಯವಹಾರಗಳು, ಇತರರೊಂದಿಗಿನ ನಮ್ಮ ಸಂಬಂಧಗಳು, ನಮ್ಮ ಶುಶ್ರೂಷೆ ಇಲ್ಲವೆ ನಾವು ಶಿಕ್ಷಿಸಲ್ಪಡುವಾಗ—ನಮಗೇನು ಒಳ್ಳೇದೆಂದು ಯೆಹೋವನಿಗೆ ತಿಳಿದಿದೆ. ಮತ್ತು ಆತನ ವಾಕ್ಯದಲ್ಲಿರುವ ಸಲಹೆಯನ್ನು ವಿವೇಕಯುತವಾಗಿ ಅನ್ವಯಿಸಿಕೊಳ್ಳುವ ಮೂಲಕ ನಾವು ಅತ್ಯುತ್ತಮವಾದ ಜೀವನ ರೀತಿಯನ್ನು ಅನುಭವಿಸುವೆವೆಂಬದಕ್ಕೆ ಮರುಮಾತಿಲ್ಲ.
[ಪಾದಟಿಪ್ಪಣಿ]
a ಜ್ಞಾನೋಕ್ತಿ 13:1-14ರ ಚರ್ಚೆಗಾಗಿ, ಕಾವಲಿನಬುರುಜುವಿನ ಸೆಪ್ಟೆಂಬರ್ 15, 2003 ಸಂಚಿಕೆಯಲ್ಲಿ 21-5ನೆಯ ಪುಟಗಳನ್ನು ನೋಡಿರಿ.
[ಪುಟ 28ರಲ್ಲಿರುವ ಚಿತ್ರ]
ಅನ್ಯಾಯಭರಿತ ಟೀಕೆಯ ಎದುರಿನಲ್ಲಿ ಜಾಣನು ತನ್ನ ನಾಲಗೆಯನ್ನು ಬಿಗಿಹಿಡಿಯುತ್ತಾನೆ
[ಪುಟ 29ರಲ್ಲಿರುವ ಚಿತ್ರ]
ನಂಬಿಗಸ್ತ ರಾಜ್ಯ ಪ್ರಚಾರಕರು ಬಹಳಷ್ಟು ಒಳಿತನ್ನು ಸಾಧಿಸುತ್ತಾರೆ
[ಪುಟ 30ರಲ್ಲಿರುವ ಚಿತ್ರ]
ಪ್ರಶಂಸೆಯು ಉತ್ತೇಜನದಾಯಕವಾಗಿದೆ ನಿಜ, ಆದರೆ ನಾವು ತಿದ್ದುವಿಕೆಯನ್ನೂ ಸ್ವೀಕರಿಸಬೇಕು
[ಪುಟ 31ರಲ್ಲಿರುವ ಚಿತ್ರ]
ಪ್ರೀತಿಯ ತಂದೆಯು, ತನ್ನ ಮಗುವಿನ ದೋಷಗಳ ಕಡೆಗೆ ಕಣ್ಣುಮುಚ್ಚುವುದಿಲ್ಲ