ಬಹುಮಾನವನ್ನು ಗೆಲ್ಲಲಿಕ್ಕಾಗಿ ಸ್ವನಿಯಂತ್ರಣವನ್ನು ತೋರಿಸಿರಿ!
“ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ವಿಷಯಗಳಲ್ಲಿ ಸ್ವನಿಯಂತ್ರಣವನ್ನು ತೋರಿಸುತ್ತಾನೆ.”—1 ಕೊರಿಂಥ 9:25, NW.
1. ಎಫೆಸ 4:22-24ಕ್ಕನುಸಾರ, ಲಕ್ಷಾಂತರ ಮಂದಿ ಹೇಗೆ ಯೆಹೋವನ ಚಿತ್ತವನ್ನು ಮಾಡಲು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ?
ನೀವು ಒಬ್ಬ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡಿರುವಲ್ಲಿ, ನಿತ್ಯಜೀವವನ್ನು ಬಹುಮಾನವಾಗಿ ನೀಡುವಂಥ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಮನಃಪೂರ್ವಕವಾಗಿ ಸಿದ್ಧರಿದ್ದೀರಿ ಎಂಬುದನ್ನು ಆ ಸಮಯ ಬಹಿರಂಗವಾಗಿ ತಿಳಿಯಪಡಿಸಿದ್ದೀರಿ. ಯೆಹೋವನ ಚಿತ್ತವನ್ನು ಮಾಡಲು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡಿರಿ. ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಳ್ಳುವುದಕ್ಕೆ ಮುಂಚೆ, ನಮ್ಮ ಸಮರ್ಪಣೆಯು ಅರ್ಥಗರ್ಭಿತವಾಗಿರುವಂತೆ ಹಾಗೂ ದೇವರಿಗೆ ಸ್ವೀಕಾರಾರ್ಹವಾಗುವಂತೆ, ನಮ್ಮಲ್ಲಿ ಅನೇಕರು ಜೀವನದಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಬೇಕಾಯಿತು. ಅಪೊಸ್ತಲ ಪೌಲನು ಕ್ರೈಸ್ತರಿಗೆ ಕೊಟ್ಟ ಸಲಹೆಯನ್ನು ನಾವು ಅನುಸರಿಸಿದೆವು: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ನೀವು . . . ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.” (ಎಫೆಸ 4:22-24) ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ದೇವರಿಗೆ ಸಮರ್ಪಣೆಯನ್ನು ಮಾಡಿಕೊಳ್ಳುವ ಹೆಜ್ಜೆಯನ್ನು ತೆಗೆದುಕೊಳ್ಳುವುದಕ್ಕೆ ಮೊದಲು, ಅಸ್ವೀಕರಣೀಯವಾದ ಹಿಂದಿನ ಜೀವನ ರೀತಿಯನ್ನು ಕಡಾಖಂಡಿತವಾಗಿ ನಿರಾಕರಿಸಬೇಕಾಯಿತು.
2, 3. ದೇವರ ಸ್ವೀಕೃತಿಯನ್ನು ಪಡೆಯಲಿಕ್ಕಾಗಿ ಎರಡು ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು 1 ಕೊರಿಂಥ 6:9-12 ಹೇಗೆ ಸೂಚಿಸುತ್ತದೆ?
2 ಮುಂದೆ ಯೆಹೋವನ ಸಾಕ್ಷಿಯಾಗಲಿರುವಂಥ ಒಬ್ಬ ವ್ಯಕ್ತಿಯು ತೆಗೆದುಹಾಕಿಬಿಡಬೇಕಾದ ಹಳೇ ವ್ಯಕ್ತಿತ್ವದ ಕೆಲವು ಅಂಶಗಳು, ದೇವರ ವಾಕ್ಯವು ನೇರವಾಗಿ ಖಂಡಿಸುವಂಥ ವಿಷಯಗಳೇ ಆಗಿವೆ. ಕೊರಿಂಥದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಅವುಗಳಲ್ಲಿ ಕೆಲವನ್ನು ಹೆಸರಿಸಿದನು. ಅವನು ಹೇಳಿದ್ದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” ತದನಂತರ, “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ” ಎಂದು ಕೂಡಿಸಿ ಹೇಳುವ ಮೂಲಕ ಪ್ರಥಮ ಶತಮಾನದ ಕ್ರೈಸ್ತರು ತಮ್ಮ ವ್ಯಕ್ತಿತ್ವದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಿದರು ಎಂಬುದನ್ನು ತೋರಿಸಿದನು. ಅವರು ಮೊದಲು ಹಾಗಿದ್ದರು ಆದರೆ ನಂತರ ಬದಲಾದರು ಎಂಬುದನ್ನು ಗಮನಿಸಿರಿ.—1 ಕೊರಿಂಥ 6:9-11.
3 ಹೆಚ್ಚಿನ ಬದಲಾವಣೆಗಳು ಸಹ ಅಗತ್ಯವಾಗಿರಬಹುದು ಎಂದು ಪೌಲನು ಸೂಚಿಸಿದನು, ಏಕೆಂದರೆ ಅವನು ಮುಂದುವರಿಸಿ ಹೇಳಿದ್ದು: “ಎಲ್ಲಾ ಕಾರ್ಯಗಳನ್ನು ಮಾಡುವುದು ನನಗೆ ಕಾನೂನುಬದ್ಧವಾಗಿ ತೋರುತ್ತದೆ; ಆದರೆ ಎಲ್ಲಾ ಕಾರ್ಯಗಳೂ ಉಪಯುಕ್ತಕರವಾಗಿರುವುದಿಲ್ಲ.” (1 ಕೊರಿಂಥ 6:12, NW) ಹೀಗಿರುವುದರಿಂದ, ಇಂದು ಯೆಹೋವನ ಸಾಕ್ಷಿಗಳಾಗಲು ಬಯಸುವಂಥ ಅನೇಕರು, ಕಾನೂನುಬದ್ಧವಾಗಿರುವುದಾದರೂ ಯಾವುದೇ ರೀತಿಯಲ್ಲಿ ಉಪಯುಕ್ತಕರವಾಗಿರದ ಅಥವಾ ಬಾಳುವ ಮೌಲ್ಯವನ್ನು ಹೊಂದಿರದಂಥ ಕಾರ್ಯಗಳನ್ನು ಸಹ ನಿರಾಕರಿಸುವ ಆವಶ್ಯಕತೆಯನ್ನು ಮನಗಾಣುತ್ತಾರೆ. ಈ ಕಾರ್ಯಗಳು ಸಮಯವನ್ನು ವ್ಯರ್ಥಮಾಡುವಂಥವುಗಳು ಮತ್ತು ಹೆಚ್ಚು ಮಹತ್ವಪೂರ್ಣವಾದ ವಿಷಯಗಳನ್ನು ಬೆನ್ನಟ್ಟುವುದರಿಂದ ಅವರನ್ನು ಹಳಿತಪ್ಪಿಸುವಂಥವು ಆಗಿರಬಹುದು.
4. ಯಾವ ವಿಷಯದಲ್ಲಿ ಸಮರ್ಪಿತ ಕ್ರೈಸ್ತರು ಪೌಲನ ಮಾತುಗಳಿಗೆ ಸಮ್ಮತಿಸುತ್ತಾರೆ?
4 ದೇವರಿಗೆ ಮಾಡಲ್ಪಡುವ ಸಮರ್ಪಣೆಯು, ಅದು ಬಹು ದೊಡ್ಡ ತ್ಯಾಗವನ್ನು ಅಗತ್ಯಪಡಿಸುತ್ತದೋ ಎಂಬಂತೆ ಒಲ್ಲದ ಮನಸ್ಸಿನಿಂದಲ್ಲ ಬದಲಾಗಿ ಮನಃಪೂರ್ವಕವಾಗಿ ಮಾಡಲ್ಪಡುತ್ತದೆ. ಸಮರ್ಪಿತ ಕ್ರೈಸ್ತರು ಪೌಲನ ಮುಂದಿನ ಮಾತುಗಳನ್ನು ಸಮ್ಮತಿಸುತ್ತಾರೆ. ಕ್ರಿಸ್ತನ ಹಿಂಬಾಲಕನಾದ ಬಳಿಕ ಅವನು ಹೇಳಿದ್ದು: “ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” (ಫಿಲಿಪ್ಪಿ 3:8) ದೇವರ ಸಮ್ಮತಿಯನ್ನು ಪಡೆಯುತ್ತಾ ಮುಂದುವರಿಯಸಾಧ್ಯವಾಗುವಂತೆ ಪೌಲನು ಸಂತೋಷದಿಂದಲೇ ಕಡಿಮೆ ಮೌಲ್ಯವುಳ್ಳ ವಿಷಯಗಳನ್ನು ಕಡಾಖಂಡಿತವಾಗಿ ನಿರಾಕರಿಸಿದನು.
5. ಯಾವ ರೀತಿಯ ಓಟದಲ್ಲಿ ಪೌಲನು ಯಶಸ್ವಿಕರವಾಗಿ ಭಾಗವಹಿಸಿದನು, ಮತ್ತು ನಾವು ಸಹ ತದ್ರೀತಿ ಮಾಡಸಾಧ್ಯವಿದೆ ಹೇಗೆ?
5 ಪೌಲನು ತನ್ನ ಆತ್ಮಿಕ ಓಟವನ್ನು ಓಡುವುದರಲ್ಲಿ ಸ್ವನಿಯಂತ್ರಣವನ್ನು ತೋರಿಸಿದನು ಮತ್ತು ಕಟ್ಟಕಡೆಗೆ ಹೀಗೆ ಹೇಳಶಕ್ತನಾಗಿದ್ದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ; ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು; ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.” (2 ತಿಮೊಥೆಯ 4:7, 8) ಒಂದು ದಿನ ನಾವು ಸಹ ತದ್ರೀತಿಯ ಅಭಿವ್ಯಕ್ತಿಯನ್ನು ನುಡಿಯಲು ಶಕ್ತರಾಗುವೆವೋ? ನಮ್ಮ ಕ್ರೈಸ್ತ ಓಟವನ್ನು ಮಧ್ಯೆ ನಿಲ್ಲಿಸದೆ ಕೊನೇ ತನಕ ಓಡುವಾಗ ನಾವು ನಂಬಿಕೆಯಿಂದ ಸ್ವನಿಯಂತ್ರಣವನ್ನು ತೋರಿಸುವಲ್ಲಿ, ಖಂಡಿತವಾಗಿಯೂ ಹಾಗೆ ಹೇಳಲು ಶಕ್ತರಾಗುವೆವು.
ಒಳ್ಳೇದನ್ನು ಮಾಡಲು ಸ್ವನಿಯಂತ್ರಣದ ಅಗತ್ಯವಿದೆ
6. ಸ್ವನಿಯಂತ್ರಣ ಎಂದರೇನು, ಮತ್ತು ಯಾವ ಎರಡು ವಿಧಗಳಲ್ಲಿ ನಾವು ಅದನ್ನು ತೋರಿಸಬೇಕಾಗಿದೆ?
6 ಬೈಬಲಿನಲ್ಲಿ “ಸ್ವನಿಯಂತ್ರಣ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಪದಗಳು, ಒಬ್ಬ ವ್ಯಕ್ತಿಯು ಸ್ವತಃ ತನ್ನ ಮೇಲೆ ಅಧಿಕಾರ ಅಥವಾ ನಿಯಂತ್ರಣವನ್ನು ಹೊಂದಿದ್ದಾನೆ ಎಂಬುದನ್ನು ಅಕ್ಷರಾರ್ಥವಾಗಿ ಸೂಚಿಸುತ್ತವೆ. ಅವು ಅನೇಕವೇಳೆ ಕೆಟ್ಟದ್ದನ್ನು ಮಾಡುವುದರಿಂದ ಒಬ್ಬನು ತನ್ನನ್ನು ತಡೆದುಹಿಡಿಯುವ ಅರ್ಥವನ್ನು ಕೊಡುತ್ತವೆ. ಆದರೆ ನಾವು ಸತ್ಕಾರ್ಯಗಳನ್ನು ಮಾಡುವುದರಲ್ಲಿ ನಮ್ಮನ್ನು ಉಪಯೋಗಿಸಿಕೊಳ್ಳಲಿಕ್ಕಾಗಿಯೂ ಸಾಕಷ್ಟು ಸ್ವನಿಯಂತ್ರಣದ ಅಗತ್ಯವಿದೆ ಎಂಬುದು ಸುವ್ಯಕ್ತ. ಅಪರಿಪೂರ್ಣ ಮಾನವರ ಸ್ವಾಭಾವಿಕ ಪ್ರವೃತ್ತಿಯು ತಪ್ಪನ್ನು ಮಾಡುವುದಾಗಿದೆ, ಆದುದರಿಂದಲೇ ನಾವು ಇಬ್ಬಗೆಯ ಹೋರಾಟವನ್ನು ನಡೆಸಬೇಕಾಗಿರುತ್ತದೆ. (ಪ್ರಸಂಗಿ 7:29; 8:11) ನಾವು ಕೆಟ್ಟದ್ದನ್ನು ಮಾಡುವುದರಿಂದ ದೂರವಿರಬೇಕು, ಅದೇ ಸಮಯದಲ್ಲಿ ಒಳ್ಳೇದನ್ನು ಮಾಡಲಿಕ್ಕಾಗಿ ನಮ್ಮನ್ನು ಬಲವಂತಪಡಿಸಿಕೊಳ್ಳಬೇಕು. ವಾಸ್ತವದಲ್ಲಿ, ಒಳ್ಳೇದನ್ನು ಮಾಡಲಿಕ್ಕಾಗಿ ನಮ್ಮನ್ನು ನಿಯಂತ್ರಿಸುವುದು, ಕೆಟ್ಟದ್ದನ್ನು ಮಾಡುವುದನ್ನು ತಡೆಯಲಿಕ್ಕಾಗಿರುವ ಅತ್ಯುತ್ತಮ ವಿಧಗಳಲ್ಲಿ ಒಂದಾಗಿದೆ.
7. (ಎ) ನಾವು ದಾವೀದನಂತೆ ಯಾವುದಕ್ಕಾಗಿ ಪ್ರಾರ್ಥಿಸಬೇಕು? (ಬಿ) ಯಾವುದರ ಕುರಿತು ಮನನಮಾಡುವುದು ಹೆಚ್ಚಿನ ಸ್ವನಿಯಂತ್ರಣವನ್ನು ತೋರಿಸಲು ನಮಗೆ ಸಹಾಯಮಾಡುವುದು?
7 ದೇವರಿಗೆ ಮಾಡಿಕೊಂಡಿರುವ ನಮ್ಮ ಸಮರ್ಪಣೆಗನುಸಾರ ನಾವು ಜೀವಿಸಬೇಕಾದರೆ, ಸ್ವನಿಯಂತ್ರಣವು ಅತ್ಯಾವಶ್ಯಕ ಎಂಬುದಂತೂ ಸ್ಪಷ್ಟ. ನಾವು ದಾವೀದನಂತೆ ಪ್ರಾರ್ಥಿಸುವ ಅಗತ್ಯವಿದೆ: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತನೆ 51:10) ನೈತಿಕವಾಗಿ ತಪ್ಪಾಗಿರುವ ಅಥವಾ ದೇಹಾರೋಗ್ಯವನ್ನು ಕುಗ್ಗಿಸುವಂಥ ವಿಷಯಗಳನ್ನು ದೂರಮಾಡುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ನಾವು ಮನನಮಾಡಸಾಧ್ಯವಿದೆ. ಅಂಥ ವಿಷಯಗಳಿಂದ ದೂರವಿರಲು ತಪ್ಪಿಹೋಗುವಾಗ ಉಂಟಾಗಬಹುದಾದ ಹಾನಿಯ ಕುರಿತು, ಅಂದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳು, ಪ್ರಕ್ಷುಬ್ಧ ಸಂಬಂಧಗಳು ಮತ್ತು ಅಕಾಲಿಕ ಮರಣದ ಕುರಿತು ತುಸು ಆಲೋಚಿಸಿರಿ. ಇನ್ನೊಂದು ಕಡೆಯಲ್ಲಿ, ಯೆಹೋವನು ಶಿಫಾರಸ್ಸು ಮಾಡುವಂಥ ಜೀವನಮಾರ್ಗದಲ್ಲಿ ಸಾಗುವುದರಿಂದ ಸಿಗುವ ಅನೇಕ ಪ್ರಯೋಜನಗಳ ಕುರಿತು ಆಲೋಚಿಸಿರಿ. ಆದರೆ ನಾವು ವಾಸ್ತವಿಕ ನೋಟವುಳ್ಳವರೂ ಆಗಿದ್ದು, ನಮ್ಮ ಹೃದಯವು ಎಲ್ಲಕ್ಕಿಂತಲೂ ವಂಚಕವಾಗಿದೆ ಎಂಬುದನ್ನು ಎಂದಿಗೂ ಮರೆಯಬಾರದು. (ಯೆರೆಮೀಯ 17:9) ಯೆಹೋವನ ಮಟ್ಟಗಳನ್ನು ಎತ್ತಿಹಿಡಿಯುವುದರ ಗಂಭೀರತೆಯನ್ನು ತಗ್ಗಿಸಲಿಕ್ಕಾಗಿ ನಮ್ಮ ಹೃದಯವು ಮಾಡುವ ಪ್ರಯತ್ನಗಳನ್ನು ಪ್ರತಿರೋಧಿಸಲು ನಾವು ದೃಢನಿರ್ಧಾರವನ್ನು ಮಾಡಬೇಕು.
8. ಅನುಭವವು ನಮಗೆ ಯಾವ ವಾಸ್ತವಿಕತೆಯನ್ನು ಕಲಿಸುತ್ತದೆ? ದೃಷ್ಟಾಂತಿಸಿರಿ.
8 ನಿರಾಸಕ್ತ ಶರೀರವು ಅನೇಕವೇಳೆ ಇಷ್ಟಪೂರ್ವಕ ಮನೋಭಾವದ ಉರಿಯುತ್ತಿರುವ ಜ್ವಾಲೆಯನ್ನು ನಂದಿಸಲು ಪ್ರಯತ್ನಿಸುತ್ತದೆ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ಅನುಭವದಿಂದ ತಿಳಿದಿದೆ. ಉದಾಹರಣೆಗೆ, ರಾಜ್ಯದ ಸಾರುವಿಕೆಯನ್ನು ತೆಗೆದುಕೊಳ್ಳಿ. ಈ ಜೀವರಕ್ಷಕ ಕೆಲಸದಲ್ಲಿ ಭಾಗವಹಿಸಲಿಕ್ಕಾಗಿ ಮಾನವರು ಮನಃಪೂರ್ವಕವಾಗಿ ಮಾಡುವ ಪ್ರಯತ್ನಗಳಲ್ಲಿ ಯೆಹೋವನು ಸಂತೋಷಿಸುತ್ತಾನೆ. (ಕೀರ್ತನೆ 110:3; ಮತ್ತಾಯ 24:14) ನಮ್ಮಲ್ಲಿ ಹೆಚ್ಚಿನವರಿಗೆ ಸಾರ್ವಜನಿಕವಾಗಿ ಸಾರುವುದನ್ನು ಕಲಿಯುವುದು ಸುಲಭವಾಗಿರಲಿಲ್ಲ. ನಮ್ಮ ದೇಹವನ್ನು ಇಷ್ಟಬಂದಂತೆ ಕ್ರಿಯೆಗೈಯಲು ಬಿಡುವ ಬದಲು, ಅದನ್ನು ನಿಯಂತ್ರಿಸುವುದನ್ನು ಅಂದರೆ ‘ಜಜ್ಜಿ ಸ್ವಾಧೀನಪಡಿಸಿಕೊಳ್ಳುವುದನ್ನು’ ಅದು ಅಗತ್ಯಪಡಿಸಿತು ಮತ್ತು ಈಗಲೂ ಅಗತ್ಯಪಡಿಸುತ್ತಿರಬಹುದು.—1 ಕೊರಿಂಥ 9:16, 27; 1 ಥೆಸಲೊನೀಕ 2:2.
“ಎಲ್ಲಾ ವಿಷಯಗಳಲ್ಲಿ”?
9, 10. “ಎಲ್ಲಾ ವಿಷಯಗಳಲ್ಲಿ ಸ್ವನಿಯಂತ್ರಣವನ್ನು” ತೋರಿಸುವುದರಲ್ಲಿ ಏನು ಒಳಗೂಡಿದೆ?
9 “ಎಲ್ಲಾ ವಿಷಯಗಳಲ್ಲಿ ಸ್ವನಿಯಂತ್ರಣವನ್ನು” ತೋರಿಸಬೇಕೆಂಬ ಬೈಬಲಿನ ಸಲಹೆಯು, ಕೇವಲ ನಮ್ಮ ಕೋಪವನ್ನು ನಿಯಂತ್ರಿಸುವ ಅಥವಾ ಅನೈತಿಕ ನಡತೆಯಿಂದ ನಮ್ಮನ್ನು ತಡೆಹಿಡಿಯುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ ಎಂಬುದನ್ನು ಸೂಚಿಸುತ್ತದೆ. ಈ ಕ್ಷೇತ್ರಗಳಲ್ಲಿ ನಾವು ಸ್ವನಿಯಂತ್ರಣವನ್ನು ಸಾಧಿಸಿದ್ದೇವೆ ಎಂದು ನಮಗನಿಸಬಹುದು, ಮತ್ತು ಒಂದುವೇಳೆ ಹಾಗಿರುವಲ್ಲಿ ಖಂಡಿತವಾಗಿಯೂ ನಾವು ಕೃತಜ್ಞರಾಗಿರಸಾಧ್ಯವಿದೆ. ಆದರೂ, ಸ್ವನಿಯಂತ್ರಣವನ್ನು ತೋರಿಸುವ ಆವಶ್ಯಕತೆಯಿದೆ ಎಂಬುದು ಅಷ್ಟೇನೂ ಸುವ್ಯಕ್ತವಾಗಿ ಕಂಡುಬರದಿರಬಹುದಾದಂಥ ಜೀವನದ ಇತರ ಕ್ಷೇತ್ರಗಳ ಕುರಿತಾಗಿ ಏನು? ದೃಷ್ಟಾಂತಕ್ಕಾಗಿ, ಒಬ್ಬ ವ್ಯಕ್ತಿಯು ಉಚ್ಚ ಮಟ್ಟದ ಜೀವನವುಳ್ಳ ಸಂಪದ್ಭರಿತ ದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಊಹಿಸಿಕೊಳ್ಳಿ. ಇಂಥ ಸನ್ನಿವೇಶದಲ್ಲಿ ಅನಗತ್ಯವಾದ ಖರ್ಚುವೆಚ್ಚಗಳನ್ನು ಮಾಡಲು ಕಡಾಖಂಡಿತವಾಗಿ ನಿರಾಕರಿಸಲು ಕಲಿಯುವುದು ವಿವೇಕಯುತವಾದ ಸಂಗತಿಯಾಗಿರುವುದಿಲ್ಲವೋ? ಒಂದು ವಸ್ತು ಲಭ್ಯವಿದೆ, ಮನಸ್ಸಿಗೆ ಹಿಡಿಸಿದೆ ಅಥವಾ ಆರ್ಥಿಕವಾಗಿ ನಮ್ಮ ಕೈಗೆ ಎಟಕುವಂಥದ್ದಾಗಿದೆ ಎಂದ ಮಾತ್ರಕ್ಕೆ ಕಣ್ಣಿಗೆ ಬೀಳುವಂಥ ವಸ್ತುಗಳನ್ನೆಲ್ಲಾ ಖರೀದಿಸದಂತೆ ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವುದು ಒಳ್ಳೇದು. ಆದರೆ ಇಂಥ ಉಪದೇಶವು ಪರಿಣಾಮಕಾರಿಯಾಗಬೇಕಾದರೆ, ಹೆತ್ತವರೇ ಯೋಗ್ಯವಾದ ಮಾದರಿಯನ್ನು ಇಡುವ ಅಗತ್ಯವಿದೆ ಎಂಬುದು ನಿಜ.—ಲೂಕ 10:38-42.
10 ನಮಗೆ ಅಗತ್ಯವಿರುವಂಥ ವಸ್ತುಗಳಿಲ್ಲದೆಯೂ ನಿಭಾಯಿಸಿಕೊಂಡುಹೋಗಲು ಕಲಿಯುವುದು ನಮ್ಮ ಸಂಕಲ್ಪಶಕ್ತಿಯನ್ನು ಇನ್ನಷ್ಟು ಬಲಪಡಿಸಬಲ್ಲದು. ಇದು ಈಗಾಗಲೇ ನಮ್ಮ ಬಳಿಯಿರುವ ಭೌತಿಕ ವಸ್ತುಗಳಿಗಾಗಿ ಇನ್ನಷ್ಟು ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ಮಾಡಬಲ್ಲದು ಮತ್ತು ತಮ್ಮ ಸ್ವಂತ ಇಷ್ಟದಿಂದಲ್ಲ ಬದಲಾಗಿ ಬೇರೆ ಮಾರ್ಗವೇ ಇಲ್ಲದೆ ಇಂಥ ವಸ್ತುಗಳ ಸಹಾಯವಿಲ್ಲದೆ ಜೀವಿಸಬೇಕಾಗಿರುವಂಥ ಜನರ ಕಡೆಗೆ ನಾವು ಹೆಚ್ಚು ಸಹಾನುಭೂತಿಯುಳ್ಳವರು ಆಗಿರುವಂತೆಯೂ ಮಾಡಬಲ್ಲದು. ಸಭ್ಯ ಜೀವನ ಶೈಲಿಯು, “ನಿಮಗೆ ಕಷ್ಟಕೊಡಬೇಡಿ” ಅಥವಾ “ನಿಮಗೆ ಅತ್ಯುತ್ತಮವಾದದ್ದೇ ಸಿಗಬೇಕು” ಎಂಬ ಜನಪ್ರಿಯ ಮನೋಭಾವಗಳಿಗೆ ತದ್ವಿರುದ್ಧವಾಗಿರುತ್ತದೆ ಎಂಬುದೇನೋ ನಿಜ. ಜಾಹೀರಾತಿನ ಪ್ರಪಂಚವು ದಿಢೀರ್ ಸಂತೋಷಕ್ಕಾಗಿರುವ ಬಯಕೆಯನ್ನು ಬಡಿದೆಬ್ಬಿಸುತ್ತದೆ, ಆದರೆ ಇದನ್ನು ತನ್ನ ಸ್ವಂತ ವಾಣಿಜ್ಯ ಲಾಭಕ್ಕಾಗಿಯೇ ಮಾಡುತ್ತದೆ. ಈ ಸನ್ನಿವೇಶವು ಸ್ವನಿಯಂತ್ರಣವನ್ನು ತೋರಿಸಲಿಕ್ಕಾಗಿರುವ ನಮ್ಮ ಪ್ರಯತ್ನಗಳನ್ನು ಕುಂಠಿತಗೊಳಿಸಬಹುದು. ಸಮೃದ್ಧ ಐರೋಪ್ಯ ದೇಶವೊಂದರ ಪತ್ರಿಕೆಯೊಂದು ಇತ್ತೀಚಿಗೆ ಹೀಗೆ ತಿಳಿಸಿತ್ತು: “ಕಡು ಬಡತನದ ಪರಿಸ್ಥಿತಿಗಳಲ್ಲಿ ಜೀವಿಸುತ್ತಿರುವವರಿಗೆ ಅನಪೇಕ್ಷಿತವಾದ ಮನಸ್ಸಿನ ಆವೇಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಂತರಿಕ ಹೋರಾಟದ ಅಗತ್ಯವಿರುವಲ್ಲಿ, ಇಂದಿನ ಸಮೃದ್ಧ ದೇಶಗಳಲ್ಲಿನ ಸಂಪದ್ಭರಿತ ಸಮಾಜದಲ್ಲಿ ಜೀವಿಸುತ್ತಿರುವ ಜನರ ವಿಷಯದಲ್ಲಿ ಇದು ಇನ್ನೆಷ್ಟು ಸತ್ಯವಾಗಿದೆ!”
11. ಇತಿಮಿತಿಯಲ್ಲೇ ಜೀವನ ಸಾಗಿಸಲು ಕಲಿಯುವುದು ಏಕೆ ಪ್ರಯೋಜನದಾಯಕವಾಗಿದೆ, ಆದರೆ ಯಾವುದು ಇದನ್ನು ಕಷ್ಟಕರವಾದದ್ದಾಗಿ ಮಾಡುತ್ತದೆ?
11 ನಾವು ಏನನ್ನು ಬಯಸುತ್ತೇವೆ ಮತ್ತು ನಮಗೆ ನಿಜವಾಗಿಯೂ ಯಾವುದರ ಆವಶ್ಯಕತೆಯಿದೆ ಎಂಬುದರ ನಡುವಣ ವ್ಯತ್ಯಾಸವನ್ನು ಕಂಡುಹಿಡಿಯುವುದು ನಮಗೆ ಕಷ್ಟಕರವಾಗಿರುವಲ್ಲಿ, ನಾವು ಬೇಜವಾಬ್ದಾರಿಯಿಂದ ಕ್ರಿಯೆಗೈಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಸಹಾಯಕಾರಿಯಾಗಿರಬಹುದು. ಉದಾಹರಣೆಗೆ, ಇತಿಮಿತಿಯಿಲ್ಲದೆ ಖರ್ಚುಮಾಡುವ ಪ್ರವೃತ್ತಿಯನ್ನು ನಾವು ನಿಯಂತ್ರಿಸಲು ಬಯಸುವಲ್ಲಿ, ಸಾಲದ ಮೇಲೆ ವಸ್ತುಗಳನ್ನು ಖರೀದಿಸದಿರಲು ನಿಶ್ಚಯಿಸಬಹುದು ಅಥವಾ ಖರೀದಿಗಾಗಿ ಅಂಗಡಿಗೆ ಹೋಗುವಾಗ ಮಿತವಾದ ಮೊತ್ತದ ಹಣವನ್ನು ಮಾತ್ರ ನಮ್ಮೊಂದಿಗೆ ಕೊಂಡೊಯ್ಯಬಹುದು. “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ” ಎಂದು ಪೌಲನು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿರಿ. ಅವನು ತರ್ಕಿಸಿದ್ದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:6-8) ನಾವು ಸಂತುಷ್ಟರಾಗಿದ್ದೇವೋ? ಯಾವುದೇ ರೀತಿಯ ಸ್ವಭೋಗಾಸಕ್ತಿಯೆಂಬ ಅನಗತ್ಯ ಗಂಟುಮೂಟೆಯಿಂದ ಮುಕ್ತವಾಗಿದ್ದು, ಸರಳವಾದ ಜೀವನವನ್ನು ನಡೆಸಲು ಕಲಿಯುವುದು, ಸಂಕಲ್ಪಶಕ್ತಿ ಹಾಗೂ ಸ್ವನಿಯಂತ್ರಣವನ್ನು ಕೇಳಿಕೊಳ್ಳುತ್ತದೆ. ಹೀಗಿದ್ದರೂ, ಇದು ಕಲಿಯಲು ಅರ್ಹವಾಗಿರುವಂಥ ಒಂದು ಪಾಠವಾಗಿದೆ.
12, 13. (ಎ) ಯಾವ ವಿಧಗಳಲ್ಲಿ ಕ್ರೈಸ್ತ ಕೂಟಗಳು ಸ್ವನಿಯಂತ್ರಣವನ್ನು ಒಳಗೂಡಿವೆ? (ಬಿ) ನಾವು ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳಬೇಕಾಗಿರುವ ಇನ್ನಿತರ ಕ್ಷೇತ್ರಗಳು ಯಾವುವು?
12 ಕ್ರೈಸ್ತ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಹಾಜರಾಗುವುದು ಸಹ ಒಂದು ನಿರ್ದಿಷ್ಟ ರೀತಿಯ ಸ್ವನಿಯಂತ್ರಣವನ್ನು ತೋರಿಸುವುದನ್ನು ಒಳಗೂಡಿದೆ. ಉದಾಹರಣೆಗೆ, ಕಾರ್ಯಕ್ರಮದ ಸಮಯದಲ್ಲಿ ನಮ್ಮ ಮನಸ್ಸು ಬೇರೆ ಕಡೆ ಅಲೆದಾಡದಂತೆ ನೋಡಿಕೊಳ್ಳಲು ಜಾಗ್ರತೆವಹಿಸಬೇಕಾದರೆ ಆ ಗುಣದ ಆವಶ್ಯಕತೆಯಿದೆ. (ಜ್ಞಾನೋಕ್ತಿ 1:5) ಭಾಷಣಕಾರನ ಕಡೆಗೆ ನಮ್ಮ ಪೂರ್ಣ ಗಮನವನ್ನು ಕೊಡುವುದಕ್ಕೆ ಬದಲಾಗಿ, ನಮ್ಮ ಪಕ್ಕದಲ್ಲಿ ಕುಳಿತುಕೊಂಡಿರುವವರ ಕಿವಿಯಲ್ಲಿ ಪಿಸುಗುಟ್ಟುವ ಮೂಲಕ ಬೇರೆಯವರಿಗೆ ತೊಂದರೆಯನ್ನು ಉಂಟುಮಾಡದಿರಲು ಸ್ವನಿಯಂತ್ರಣವು ಬೇಕಾಗಬಹುದು. ಸಮಯಕ್ಕೆ ಸರಿಯಾಗಿ ಆಗಮಿಸಲಿಕ್ಕಾಗಿ ನಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳುವುದು ಸಹ ಸ್ವನಿಯಂತ್ರಣವನ್ನು ಕೇಳಿಕೊಳ್ಳಬಹುದು. ಅಷ್ಟುಮಾತ್ರವಲ್ಲ, ಕೂಟಗಳಿಗೆ ತಯಾರಿ ಮಾಡಲು ಮತ್ತು ಕೂಟಗಳಲ್ಲಿ ಭಾಗವಹಿಸಲಿಕ್ಕಾಗಿ ಸಮಯವನ್ನು ಬದಿಗಿರಿಸಲು ಸಹ ಸ್ವನಿಯಂತ್ರಣವು ಆವಶ್ಯಕವಾಗಿರಬಹುದು.
13 ಸಣ್ಣಪುಟ್ಟ ವಿಷಯಗಳಲ್ಲಿ ಸ್ವನಿಯಂತ್ರಣವನ್ನು ತೋರಿಸುವುದು, ದೊಡ್ಡ ದೊಡ್ಡ ವಿಷಯಗಳಲ್ಲಿಯೂ ಹಾಗೆ ಮಾಡಲಿಕ್ಕಾಗಿರುವ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಬಲಗೊಳಿಸುವುದು. (ಲೂಕ 16:10) ಈ ಕಾರಣದಿಂದಾಗಿ, ದೇವರ ವಾಕ್ಯವನ್ನು ಮತ್ತು ಬೈಬಲ್ ಪ್ರಕಾಶನಗಳನ್ನು ಕ್ರಮವಾಗಿ ಓದಲು, ಅವುಗಳ ಅಧ್ಯಯನಮಾಡಲು ಮತ್ತು ನಾವು ಕಲಿಯುವಂಥ ವಿಷಯಗಳ ಕುರಿತು ಮನನಮಾಡಲು ನಮ್ಮನ್ನು ಶಿಸ್ತುಗೊಳಿಸಿಕೊಳ್ಳುವುದು ಎಷ್ಟು ಅತ್ಯುತ್ತಮ! ಅನುಚಿತವಾದ ಉದ್ಯೋಗಗಳು, ಸ್ನೇಹಗಳು, ಮನೋಭಾವಗಳು ಮತ್ತು ವೈಯಕ್ತಿಕ ರೂಢಿಗಳ ವಿಷಯದಲ್ಲಿ ನಮ್ಮನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಅಥವಾ ದೇವರ ಸೇವೆಗಾಗಿರುವ ಅಮೂಲ್ಯ ಸಮಯದಿಂದ ನಮ್ಮನ್ನು ವಂಚಿಸಸಾಧ್ಯವಿರುವ ಚಟುವಟಿಕೆಗಳನ್ನು ಕಡಾಖಂಡಿತವಾಗಿ ನಿರಾಕರಿಸಲಿಕ್ಕಾಗಿ ನಮ್ಮನ್ನು ಕಟ್ಟುನಿಟ್ಟುಗೊಳಿಸಿಕೊಳ್ಳುವುದು ಎಷ್ಟು ವಿವೇಕಭರಿತ! ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದು, ಯೆಹೋವನ ಲೋಕವ್ಯಾಪಕ ಸಭೆಯ ಆತ್ಮಿಕ ಪರದೈಸದಿಂದ ನಮ್ಮನ್ನು ದೂರ ಸೆಳೆಯಸಾಧ್ಯವಿರುವಂಥ ವಿಷಯಗಳ ವಿರುದ್ಧ ನಿಶ್ಚಯವಾಗಿಯೂ ಒಂದು ಅತ್ಯುತ್ತಮ ಸಂರಕ್ಷಣೆಯಾಗಿದೆ.
ಸ್ವನಿಯಂತ್ರಣದ ಮೂಲಕ ಪ್ರಾಯಸ್ಥರಾಗಿ
14. (ಎ) ಮಕ್ಕಳು ಹೇಗೆ ಸ್ವನಿಯಂತ್ರಣವನ್ನು ತೋರಿಸಲು ಕಲಿಯಬೇಕು? (ಬಿ) ಮಕ್ಕಳು ತಮ್ಮ ಜೀವಿತದ ಆರಂಭದಲ್ಲಿಯೇ ಅಂಥ ಪಾಠಗಳನ್ನು ಕಲಿತುಕೊಳ್ಳುವಾಗ ಯಾವ ಪ್ರಯೋಜನಗಳು ಸಿಗಸಾಧ್ಯವಿದೆ?
14 ಒಂದು ನವಜಾತ ಶಿಶುವು ಸ್ವನಿಯಂತ್ರಣಕ್ಕಾಗಿ ಹೆಸರುವಾಸಿಯಾಗಿರುವುದಿಲ್ಲ. ಮಕ್ಕಳ ನಡವಳಿಕೆಯ ಕುರಿತು ಪರಿಣತರಿಂದ ಬರೆಯಲ್ಪಟ್ಟ ಒಂದು ಕರಪತ್ರವು ವಿವರಿಸುವುದು: “ಸ್ವನಿಯಂತ್ರಣವು ತಾನಾಗಿಯೇ ಬರುವುದಿಲ್ಲ ಅಥವಾ ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ. ಶಿಶುಗಳು ಮತ್ತು ಪುಟ್ಟ ಮಕ್ಕಳು ಸ್ವನಿಯಂತ್ರಣವನ್ನು ಕಲಿಯುವ ಪ್ರಕ್ರಿಯೆಯನ್ನು ಆರಂಭಿಸಲು ಹೆತ್ತವರ ಮಾರ್ಗದರ್ಶನ ಹಾಗೂ ಬೆಂಬಲದ ಅಗತ್ಯವಿದೆ. . . . ಈ ಪ್ರಕ್ರಿಯೆಯಲ್ಲಿ ಹೆತ್ತವರ ಮಾರ್ಗದರ್ಶನದಿಂದಾಗಿ, ಶಾಲಾ ವರ್ಷಗಳಾದ್ಯಂತ ಅವರ ಸ್ವನಿಯಂತ್ರಣವು ಹೆಚ್ಚುತ್ತಾ ಹೋಗುತ್ತದೆ.” ಸ್ವಲ್ಪಮಟ್ಟಿಗಿನ ಸ್ವನಿಯಂತ್ರಣವನ್ನು ತೋರಿಸಲು ಕಲಿತಿದ್ದ ಮಕ್ಕಳು “ಸಾಮಾನ್ಯವಾಗಿ ಹೆಚ್ಚು ಉತ್ತಮವಾಗಿ ಹೊಂದಿಕೊಳ್ಳುವವರು, ಹೆಚ್ಚು ಜನಪ್ರಿಯರು, ಸಾಹಸಿಗಳು, ಆತ್ಮಸ್ಥೈರ್ಯವುಳ್ಳವರು ಮತ್ತು ಭರವಸಾರ್ಹ ಹದಿವಯಸ್ಕರಾಗಿ ಬೆಳೆದರು” ಎಂದು ನಾಲ್ಕು ವರ್ಷದ ಮಕ್ಕಳ ಕುರಿತಾದ ಒಂದು ಅಧ್ಯಯನವು ಪ್ರಕಟಪಡಿಸಿತು. ಯಾರು ಈ ಪಾಠವನ್ನು ಕಲಿಯಲು ಆರಂಭಿಸಲಿಲ್ಲವೋ ಅವರು “ಒಂಟಿಗರಾಗುವ, ಸುಲಭವಾಗಿ ಆಶಾಭಂಗಗೊಳ್ಳುವ ಮತ್ತು ಹಟಮಾರಿಗಳಾಗುವ ಸಂಭವನೀಯತೆ ಹೆಚ್ಚಾಗಿತ್ತು. ಅವರು ಮಾನಸಿಕ ಒತ್ತಡದ ಕೆಳಗೆ ಕುಸಿಯುತ್ತಿದ್ದರು ಮತ್ತು ಪಂಥಾಹ್ವಾನಗಳಿಂದ ತಮ್ಮನ್ನು ದೂರವಿರಿಸಿಕೊಂಡಿದ್ದರು.” ಒಂದು ಮಗುವು ಚೆನ್ನಾಗಿ ಹೊಂದಿಕೊಳ್ಳುವಂಥ ಒಬ್ಬ ವಯಸ್ಕನಾಗಿ ಪರಿಣಮಿಸಬೇಕಾದರೆ, ಅದು ಸ್ವನಿಯಂತ್ರಣವನ್ನು ತೋರಿಸಲು ಕಲಿಯಬೇಕು ಎಂಬುದಂತೂ ಸುವ್ಯಕ್ತ.
15. ಸ್ವನಿಯಂತ್ರಣದ ಕೊರತೆಯು ಏನನ್ನು ಸೂಚಿಸುತ್ತದೆ, ಮತ್ತು ಇದು ಬೈಬಲಿನಲ್ಲಿ ಕೊಡಲ್ಪಟ್ಟಿರುವ ಯಾವ ಧ್ಯೇಯಕ್ಕೆ ವ್ಯತಿರಿಕ್ತವಾಗಿದೆ?
15 ತದ್ರೀತಿಯಲ್ಲಿ ನಾವು ಪ್ರಾಯಸ್ಥ ಕ್ರೈಸ್ತರಾಗಬೇಕಾದರೆ, ಖಂಡಿತವಾಗಿಯೂ ಸ್ವನಿಯಂತ್ರಣವನ್ನು ತೋರಿಸಲು ಕಲಿಯಬೇಕಾಗಿದೆ. ಇದರ ಕೊರತೆಯು ನಾವಿನ್ನೂ ಆತ್ಮಿಕ ಶಿಶುಗಳಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು” ಎಂದು ಬೈಬಲು ನಮಗೆ ಬುದ್ಧಿಹೇಳುತ್ತದೆ. (1 ಕೊರಿಂಥ 14:20) ನಮ್ಮ ಗುರಿಯು “ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟು”ವುದೇ ಆಗಿದೆ. ಏಕೆ? ಏಕೆಂದರೆ “ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು.” (ಎಫೆಸ 4:12, 14) ಸ್ವನಿಯಂತ್ರಣವನ್ನು ತೋರಿಸಲು ಕಲಿಯುವುದು ನಮ್ಮ ಆತ್ಮಿಕತೆಗೆ ಅತ್ಯಗತ್ಯವಾದದ್ದಾಗಿದೆ ಎಂಬುದಂತೂ ಸುಸ್ಪಷ್ಟ.
ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದು
16. ಯೆಹೋವನು ಹೇಗೆ ಸಹಾಯವನ್ನು ಒದಗಿಸುತ್ತಾನೆ?
16 ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳಲು ನಮಗೆ ದೈವಿಕ ಸಹಾಯದ ಅಗತ್ಯವಿದೆ ಮತ್ತು ಅದು ನಮಗೆ ಲಭ್ಯವಿದೆ. ಒಂದು ಅತ್ಯುತ್ತಮ ಕನ್ನಡಿಯೋಪಾದಿ ದೇವರ ವಾಕ್ಯವು, ನಾವು ಎಲ್ಲಿ ವೈಯಕ್ತಿಕ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂಬುದನ್ನು ನಮಗೆ ತೋರಿಸುತ್ತದೆ, ಮತ್ತು ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದರ ಕುರಿತಾದ ಸಲಹೆಯನ್ನೂ ಅದು ಒದಗಿಸುತ್ತದೆ. (ಯಾಕೋಬ 1:22-25) ಪ್ರೀತಿಭರಿತ ಸಹೋದರರ ಬಳಗವು ಸಹ ಸಹಾಯಹಸ್ತವನ್ನು ಚಾಚಲು ಸದಾ ಸಿದ್ಧವಾಗಿರುತ್ತದೆ. ವೈಯಕ್ತಿಕ ಸಹಾಯವನ್ನು ನೀಡುವುದರಲ್ಲಿ ಕ್ರೈಸ್ತ ಹಿರಿಯರು ಸಹ ಪರಿಗಣನೆಯನ್ನು ತೋರಿಸುತ್ತಾರೆ. ಒಂದುವೇಳೆ ನಾವು ಪ್ರಾರ್ಥನೆಯಲ್ಲಿ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವಲ್ಲಿ, ಯೆಹೋವನು ತಾನೇ ಅದನ್ನು ನಮಗೆ ಎಷ್ಟೋ ಉದಾರವಾಗಿ ದಯಪಾಲಿಸುತ್ತಾನೆ. (ಲೂಕ 11:13; ರೋಮಾಪುರ 8:26) ಆದುದರಿಂದ ನಾವು ಈ ಒದಗಿಸುವಿಕೆಗಳನ್ನು ಹರ್ಷಾನಂದದಿಂದ ಉಪಯೋಗಿಸೋಣ. 21ನೆಯ ಪುಟದಲ್ಲಿರುವ ಸಲಹೆಗಳು ಸಹಾಯಕರವಾಗಿರಬಹುದು.
17. ಜ್ಞಾನೋಕ್ತಿ 24:16 ನಮಗೆ ಯಾವ ಉತ್ತೇಜನವನ್ನು ನೀಡುತ್ತದೆ?
17 ಯೆಹೋವನನ್ನು ಸಂತೋಷಪಡಿಸಲು ಯತ್ನಿಸುತ್ತಿರುವಾಗ ನಾವು ಮಾಡುವ ಪ್ರಯತ್ನಗಳನ್ನು ಆತನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದನ್ನು ತಿಳಿಯುವುದು ಎಷ್ಟು ಸಾಂತ್ವನದಾಯಕವಾದದ್ದಾಗಿದೆ! ಇನ್ನೂ ಹೆಚ್ಚು ಸ್ವನಿಯಂತ್ರಣವನ್ನು ತೋರಿಸಲು ಸತತವಾಗಿ ಪ್ರಯತ್ನವನ್ನು ಮಾಡುತ್ತಾ ಇರುವಂತೆ ಇದು ನಮ್ಮನ್ನು ಪ್ರಚೋದಿಸತಕ್ಕದ್ದು. ಹೀಗೆ ಮಾಡುವಾಗ ನಾವು ಎಷ್ಟೇ ಬಾರಿ ಎಡವಿ ಬೀಳುವುದಾದರೂ, ನಮ್ಮ ಪ್ರಯತ್ನಗಳನ್ನು ಎಂದಿಗೂ ಬಿಟ್ಟುಬಿಡಬಾರದು. “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.” (ಜ್ಞಾನೋಕ್ತಿ 24:16) ಪ್ರತಿ ಬಾರಿ ನಾವು ವಿಜಯವನ್ನು ಪಡೆಯುವಾಗ, ನಮ್ಮ ಬಗ್ಗೆ ನಾವೇ ಸಂತೋಷಪಟ್ಟುಕೊಳ್ಳಲು ನಮಗೆ ಸಕಾರಣವಿರುತ್ತದೆ. ಯೆಹೋವನು ಸಹ ನಮ್ಮ ಪ್ರಯತ್ನಗಳನ್ನು ನೋಡಿ ಸಂತೋಷಪಡುತ್ತಾನೆ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದಕ್ಕೆ ಮುಂಚೆ, ಒಂದು ಇಡೀ ವಾರ ಧೂಮಪಾನ ಮಾಡುವುದರಿಂದ ತನ್ನನ್ನು ನಿಗ್ರಹಿಸಿಕೊಳ್ಳುವುದರಲ್ಲಿ ತಾನು ಪ್ರತಿ ಬಾರಿ ಸಫಲನಾದಾಗ, ಸ್ವನಿಯಂತ್ರಣವು ತನಗೆ ಉಳಿತಾಯಮಾಡಲು ಸಹಾಯಮಾಡಿದ್ದ ಹಣದಿಂದ ಉಪಯುಕ್ತಕರವಾದ ಒಂದು ವಸ್ತುವನ್ನು ತನಗಾಗಿ ಕೊಂಡುಕೊಳ್ಳುವ ಮೂಲಕ ಸ್ವತಃ ತನಗೇ ಬಹುಮಾನವನ್ನು ನೀಡಿಕೊಂಡೆ ಎಂದು ಒಬ್ಬ ಸಾಕ್ಷಿಯು ಹೇಳಿದನು.
18. (ಎ) ಸ್ವನಿಯಂತ್ರಣಕ್ಕಾಗಿರುವ ನಮ್ಮ ಕದನದಲ್ಲಿ ಏನು ಒಳಗೂಡಿದೆ? (ಬಿ) ಯೆಹೋವನು ಯಾವ ಆಶ್ವಾಸನೆಯನ್ನು ನೀಡುತ್ತಾನೆ?
18 ಎಲ್ಲಕ್ಕಿಂತಲೂ ಮಿಗಿಲಾಗಿ, ಸ್ವನಿಯಂತ್ರಣವು ಮನಸ್ಸು ಹಾಗೂ ಭಾವನೆಗಳನ್ನು ಒಳಗೂಡಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವಿದನ್ನು ಯೇಸುವಿನ ಈ ಮಾತುಗಳಿಂದ ಮನಗಾಣುತ್ತೇವೆ: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28; ಯಾಕೋಬ 1:14, 15) ತನ್ನ ಮನಸ್ಸು ಹಾಗೂ ಭಾವನೆಗಳನ್ನು ನಿಯಂತ್ರಿಸಲು ಕಲಿತಿರುವಂಥ ಒಬ್ಬ ವ್ಯಕ್ತಿಯು, ತನ್ನ ಇಡೀ ದೇಹವನ್ನು ನಿಯಂತ್ರಿಸಿಕೊಳ್ಳುವುದನ್ನು ಹೆಚ್ಚು ಸುಲಭವಾದದ್ದಾಗಿ ಕಂಡುಕೊಳ್ಳುವನು. ಆದುದರಿಂದ, ಕೆಟ್ಟದ್ದನ್ನು ಮಾಡುವುದರಿಂದ ಮಾತ್ರವಲ್ಲ ಅದರ ಕುರಿತು ಆಲೋಚಿಸುವುದರಿಂದಲೂ ದೂರವಿರುವ ನಮ್ಮ ದೃಢನಿರ್ಧಾರವನ್ನು ನಾವೆಲ್ಲರೂ ಬಲಪಡಿಸಿಕೊಳ್ಳೋಣ. ದುರಾಲೋಚನೆಗಳು ಮನಸ್ಸಿಗೆ ಬರುವಲ್ಲಿ, ಆ ಕೂಡಲೆ ಅವುಗಳನ್ನು ಹೊಡೆದೋಡಿಸಿರಿ. ಪ್ರಾರ್ಥನಾಪೂರ್ವಕವಾಗಿ ನಮ್ಮ ದೃಷ್ಟಿಯನ್ನು ಯೇಸುವಿನ ಮೇಲೆ ನೆಡುವ ಮೂಲಕ ನಾವು ಶೋಧನೆಯಿಂದ ದೂರ ಓಡಿಹೋಗಸಾಧ್ಯವಿದೆ. (1 ತಿಮೊಥೆಯ 6:11; 2 ತಿಮೊಥೆಯ 2:22; ಇಬ್ರಿಯ 4:15, 16) ನಮ್ಮಿಂದಾದುದೆಲ್ಲವನ್ನೂ ನಾವು ಮಾಡುವಾಗ, ಕೀರ್ತನೆ 55:22ರ ಸಲಹೆಯನ್ನು ನಾವು ಅನುಸರಿಸುತ್ತಿರುವೆವು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”
ನೀವು ಜ್ಞಾಪಿಸಿಕೊಳ್ಳುವಿರೋ?
• ಯಾವ ಎರಡು ವಿಧಗಳಲ್ಲಿ ನಾವು ಸ್ವನಿಯಂತ್ರಣವನ್ನು ತೋರಿಸಬೇಕು?
• “ಎಲ್ಲಾ ವಿಷಯಗಳಲ್ಲಿ ಸ್ವನಿಯಂತ್ರಣವನ್ನು” ತೋರಿಸುವುದರ ಅರ್ಥವೇನು?
• ನಮ್ಮ ಅಧ್ಯಯನದ ಸಮಯದಲ್ಲಿ, ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳಲಿಕ್ಕಾಗಿರುವ ಯಾವ ಪ್ರಾಯೋಗಿಕ ಸಲಹೆಗಳನ್ನು ನೀವು ವಿಶೇಷವಾಗಿ ಗಮನಿಸಿದಿರಿ?
• ಸ್ವನಿಯಂತ್ರಣವು ಎಲ್ಲಿಂದ ಆರಂಭವಾಗುತ್ತದೆ?
[ಪುಟ 21ರಲ್ಲಿರುವ ಚೌಕ/ಚಿತ್ರಗಳು]
ಸ್ವನಿಯಂತ್ರಣವನ್ನು ಹೇಗೆ ಬಲಪಡಿಸಸಾಧ್ಯವಿದೆ?
• ಸಣ್ಣಪುಟ್ಟ ವಿಷಯಗಳಲ್ಲೂ ಅದನ್ನು ಬೆಳೆಸಿಕೊಳ್ಳಿರಿ
• ಅದರ ಸದ್ಯದ ಹಾಗೂ ಮುಂದಿನ ಪ್ರಯೋಜನಗಳ ಕುರಿತು ಮನನಮಾಡಿರಿ
• ದೇವರು ನಿಷೇಧಿಸುವಂಥ ವಿಷಯಗಳಿಗೆ ಬದಲಾಗಿ ಆತನು ಉತ್ತೇಜಿಸುವಂಥ ವಿಷಯಗಳನ್ನು ಮಾಡಿರಿ
• ತಪ್ಪಾದ ವಿಚಾರಗಳನ್ನು ಆ ಕೂಡಲೆ ಮನಸ್ಸಿನಿಂದ ತೆಗೆದುಹಾಕಿರಿ
• ನಿಮ್ಮ ಮನಸ್ಸನ್ನು ಆತ್ಮಿಕವಾಗಿ ಭಕ್ತಿವೃದ್ಧಿಮಾಡುವಂಥ ಆಲೋಚನೆಗಳಿಂದ ತುಂಬಿಸಿರಿ
• ಪ್ರೌಢ ಜೊತೆ ಕ್ರೈಸ್ತರು ಕೊಡಸಾಧ್ಯವಿರುವ ಸಹಾಯವನ್ನು ಸ್ವೀಕರಿಸಿರಿ • ಶೋಧನೆಯನ್ನು ಉಂಟುಮಾಡುವಂಥ ಸನ್ನಿವೇಶಗಳಿಂದ ದೂರವಿರಿ
• ಶೋಧನೆಯ ಸಮಯಗಳಲ್ಲಿ ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ
[ಪುಟ 18, 19ರಲ್ಲಿರುವ ಚಿತ್ರಗಳು]
ಸ್ವನಿಯಂತ್ರಣವು ಒಳ್ಳೇದನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ