“ಯೆಹೋವನೇ ವಿವೇಕವನ್ನು ಕೊಡುವಾತನು”
ನಿಮ್ಮ ಸಮಯ ಹಾಗೂ ಶಕ್ತಿಯು ಯಾವ ಚಟುವಟಿಕೆಗಳಿಗೋಸ್ಕರ ವಿನಿಯೋಗಿಸಲ್ಪಡುತ್ತದೆ? ಒಂದು ಒಳ್ಳೆಯ ಹೆಸರನ್ನು ಪಡೆದುಕೊಳ್ಳುವುದರ ಕುರಿತು ನೀವು ಹೆಚ್ಚು ಚಿಂತಿಸುತ್ತೀರೊ? ಐಶ್ವರ್ಯವನ್ನು ಒಟ್ಟುಗೂಡಿಸುವುದಕ್ಕಾಗಿ ನಿಮ್ಮನ್ನು ಮೀಸಲಾಗಿಟ್ಟುಕೊಂಡಿದ್ದೀರೊ? ಸಾಹಸಮಯವಾದ ಉದ್ಯಮ ಕ್ಷೇತ್ರದಲ್ಲಿ ಒಂದು ಜೀವನಕ್ರಮವನ್ನು ಬೆನ್ನಟ್ಟುವುದು ಅಥವಾ ಜ್ಞಾನವನ್ನು ಪಡೆದುಕೊಳ್ಳುವ ವಿಷಯದಲ್ಲಿ ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ನೈಪುಣ್ಯವನ್ನು ಬೆಳೆಸಿಕೊಳ್ಳುವುದರ ಕುರಿತಾಗಿ ಏನು? ಬೇರೆಯವರೊಂದಿಗೆ ಒಳ್ಳೆಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ನಿಮಗೆ ಪ್ರಾಮುಖ್ಯವಾದ ವಿಷಯವಾಗಿದೆಯೊ? ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳುವುದು ನಿಮ್ಮ ಪ್ರಮುಖ ಚಿಂತೆಯಾಗಿದೆಯೊ?
ಇಲ್ಲಿ ಪಟ್ಟಿಮಾಡಲ್ಪಟ್ಟಿರುವ ಎಲ್ಲ ವಿಚಾರಗಳು ಸ್ವಲ್ಪಮಟ್ಟಿಗೆ ಪ್ರಾಮುಖ್ಯವಾಗಿರುವಂತೆ ತೋರಬಹುದು. ಆದರೂ, ಯಾವುದು ಅತಿ ಪ್ರಾಮುಖ್ಯವಾದದ್ದಾಗಿದೆ? ಬೈಬಲು ಉತ್ತರಿಸುವುದು: “ಜ್ಞಾನವನ್ನು [“ವಿವೇಕವನ್ನು,” NW] ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.” (ಜ್ಞಾನೋಕ್ತಿ 4:7) ಹಾಗಾದರೆ ನಾವು ವಿವೇಕವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ, ಮತ್ತು ಇದರಿಂದ ಯಾವ ಪ್ರಯೋಜನಗಳು ದೊರಕುತ್ತವೆ? ಬೈಬಲಿನ ಜ್ಞಾನೋಕ್ತಿ ಪುಸ್ತಕದ ಎರಡನೆಯ ಅಧ್ಯಾಯವು ಉತ್ತರವನ್ನು ಒದಗಿಸುತ್ತದೆ.
“ವಿವೇಕಕ್ಕೆ ಕಿವಿಗೊಡು”
ಪುರಾತನ ಇಸ್ರಾಯೇಲ್ನ ಜ್ಞಾನಿಯಾದ ಅರಸ ಸೊಲೊಮೋನನು, ಒಬ್ಬ ತಂದೆಯ ಪ್ರೀತಿಯ ಮಾತುಗಳಲ್ಲಿ ಹೀಗೆ ಹೇಳುತ್ತಾನೆ: “ನನ್ನ ಮಗನೇ, ಒಂದುವೇಳೆ ನೀನು ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ಸ್ವಂತ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೊಳ್ಳುವಲ್ಲಿ, ನೀನು ವಿವೇಕಕ್ಕೆ ಕಿವಿಗೊಡುವಿ, ಮತ್ತು ವಿವೇಚನಾಶಕ್ತಿಯನ್ನು ಪಡೆದುಕೊಳ್ಳಲಿಕ್ಕಾಗಿ ನಿನ್ನ ಹೃದಯವನ್ನು ಒಲಿಸಿಕೊಳ್ಳುವಿ; ಅಷ್ಟುಮಾತ್ರವಲ್ಲ, ಒಂದುವೇಳೆ ನೀನು ತಿಳುವಳಿಕೆಗಾಗಿ ಮೊರೆಯಿಟ್ಟು, ವಿವೇಚನಾಶಕ್ತಿಗಾಗಿ ಕೂಗಿಕೊಳ್ಳುವಲ್ಲಿ, ಒಂದುವೇಳೆ ನೀನು ಬೆಳ್ಳಿಯನ್ನು ಹುಡುಕುವಂತೆ ಅದನ್ನು ಹುಡುಕುತ್ತಾ ಇರುವಲ್ಲಿ, ಮತ್ತು ಅಡಗಿರುವ ನಿಕ್ಷೇಪದಂತೆ ಅದನ್ನು ಪರಿಶೋಧಿಸುತ್ತಾ ಇರುವಲ್ಲಿ, ಆಗ ನೀನು ಯೆಹೋವನ ಭಯವನ್ನು ಅರ್ಥ ಮಾಡಿಕೊಳ್ಳುವಿ, ಮತ್ತು ನೀನು ದೇವರ ಜ್ಞಾನವನ್ನು ಕಂಡುಕೊಳ್ಳುವಿ.”—ಜ್ಞಾನೋಕ್ತಿ 2:1-5, NW.
ವಿವೇಕವನ್ನು ಪಡೆದುಕೊಳ್ಳುವ ಜವಾಬ್ದಾರಿಯು ಯಾರ ಮೇಲಿದೆ ಎಂಬುದು ನಿಮ್ಮ ಗಮನಕ್ಕೆ ಬಂತೊ? ಈ ವಚನಗಳಲ್ಲಿ, “ಒಂದುವೇಳೆ ನೀನು” ಎಂಬ ಅಭಿವ್ಯಕ್ತಿಯು ಮೂರು ಬಾರಿ ಕಂಡುಬರುತ್ತದೆ. ವಿವೇಕವನ್ನು ಹಾಗೂ ಅದರ ಸಹಾಯಕ ಗುಣಗಳಾದ ವಿವೇಚನಾಶಕ್ತಿ ಮತ್ತು ತಿಳುವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬುದು ಸ್ಪಷ್ಟ. ಆದರೂ, ಮೊದಲಾಗಿ ನಾವು ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ವಿವೇಕದ ನುಡಿಮುತ್ತುಗಳನ್ನು “ಅಂಗೀಕರಿಸಿ,” ಅವುಗಳನ್ನು ಮರೆಯದೆ “ನಿಧಿಯಂತೆ ಕಾಪಾಡಿಕೊಳ್ಳ”ಬೇಕು. ಇದನ್ನು ಮಾಡಬೇಕಾದರೆ ನಾವು ಬೈಬಲನ್ನು ಅಭ್ಯಾಸಿಸಬೇಕು.
ದೇವದತ್ತ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವಂತಹ ಸಾಮರ್ಥ್ಯವೇ ವಿವೇಕವಾಗಿದೆ. ಮತ್ತು ಎಷ್ಟು ಅದ್ಭುತಕರವಾದ ರೀತಿಯಲ್ಲಿ ಬೈಬಲು ವಿವೇಕವನ್ನು ಲಭ್ಯಗೊಳಿಸುತ್ತದೆ! ಹೌದು, ಬೈಬಲಿನಲ್ಲಿ ವಿವೇಕದ ನುಡಿಮುತ್ತುಗಳು ಇವೆ. ಇವು ಜ್ಞಾನೋಕ್ತಿಗಳು ಹಾಗೂ ಪ್ರಸಂಗಿ ಪುಸ್ತಕಗಳಲ್ಲಿ ದಾಖಲಿಸಲ್ಪಟ್ಟಿವೆ, ಮತ್ತು ಈ ನುಡಿಮುತ್ತುಗಳಿಗೆ ನಾವು ಕಿವಿಗೊಡುವ ಅಗತ್ಯವಿದೆ. ಬೈಬಲಿನ ಪುಟಗಳಲ್ಲಿ, ದೈವಿಕ ಮೂಲತತ್ವಗಳನ್ನು ಅನ್ವಯಿಸುವುದರಿಂದ ಬರುವ ಪ್ರಯೋಜನಗಳನ್ನು ಹಾಗೂ ಅವುಗಳನ್ನು ಅಲಕ್ಷಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ತೋರಿಸುವಂತಹ ಅನೇಕ ಉದಾಹರಣೆಗಳನ್ನು ಸಹ ನಾವು ಕಂಡುಕೊಳ್ಳುತ್ತೇವೆ. (ರೋಮಾಪುರ 15:4; 1 ಕೊರಿಂಥ 10:11) ದೃಷ್ಟಾಂತಕ್ಕಾಗಿ, ಪ್ರವಾದಿಯಾದ ಎಲೀಷನ ಸೇವಕನಾಗಿದ್ದ ಲೋಭಿ ಗೇಹಜಿಯ ವೃತ್ತಾಂತವನ್ನು ಪರಿಗಣಿಸಿರಿ. (2 ಅರಸು 5:20-27) ಲೋಭವನ್ನು ತೊರೆಯುವುದರ ಕುರಿತಾದ ವಿವೇಕವನ್ನು ಇದು ನಮಗೆ ಕಲಿಸುವುದಿಲ್ಲವೊ? ಮತ್ತು ಯಾಕೋಬನ ಮಗಳಾದ ದೀನಳು, ಕಾನಾನ್ “ದೇಶದ ಸ್ತ್ರೀಯರನ್ನು” ಆಗಿಂದಾಗ್ಗೆ ಭೇಟಿ ಮಾಡುತ್ತಿದ್ದದ್ದು ಹಾನಿರಹಿತವಾಗಿ ತೋರಿಬಂದರೂ, ಅದರಿಂದ ಉಂಟಾದ ದುರಂತಮಯ ಪರಿಣಾಮದ ಕುರಿತಾಗಿ ಏನು? (ಆದಿಕಾಂಡ 34:1-31) ಕೆಟ್ಟ ಸಹವಾಸವನ್ನು ಮಾಡುವುದರ ಮೂರ್ಖತನವನ್ನು ನಾವು ಈ ವೃತ್ತಾಂತದಿಂದ ವಿವೇಚಿಸಿ ತಿಳಿದುಕೊಳ್ಳುವುದಿಲ್ಲವೊ?—ಜ್ಞಾನೋಕ್ತಿ 13:20; 1 ಕೊರಿಂಥ 15:33.
ವಿವೇಕಕ್ಕೆ ಕಿವಿಗೊಡುವುದು, ವಿವೇಚನಾಶಕ್ತಿಯನ್ನು ಹಾಗೂ ತಿಳುವಳಿಕೆಯನ್ನು ಸಂಪಾದಿಸುವುದನ್ನು ಅಗತ್ಯಪಡಿಸುತ್ತದೆ. ವೆಬ್ಸ್ಟರ್ಸ್ ರಿವೈಸ್ಡ್ ಅನ್ಅಬ್ರಿಡ್ಜ್ಡ್ ಡಿಕ್ಷನೆರಿಗನುಸಾರ, “ಒಂದು ವಸ್ತುವಿಗೂ ಇನ್ನೊಂದು ವಸ್ತುವಿಗೂ ಇರುವ ವ್ಯತ್ಯಾಸವನ್ನು ಕಂಡುಹಿಡಿಯುವ ಮಾನಸಿಕ ಶಕ್ತಿ ಅಥವಾ ಸಾಮರ್ಥ್ಯ”ವೇ ವಿವೇಚನಾಶಕ್ತಿಯಾಗಿದೆ. ದೈವಿಕ ವಿವೇಚನಾಶಕ್ತಿಯು, ಒಳ್ಳೇದರ ಮತ್ತು ಕೆಟ್ಟದ್ದರ ವ್ಯತ್ಯಾಸವನ್ನು ಗುರುತಿಸಿ, ಸರಿಯಾದ ಮಾರ್ಗಕ್ರಮವನ್ನು ಆಯ್ಕೆಮಾಡುವಂತಹ ಒಂದು ಸಾಮರ್ಥ್ಯವಾಗಿದೆ. ನಾವು ವಿವೇಚನಾಶಕ್ತಿಗೆ ‘ನಮ್ಮ ಹೃದಯವನ್ನು ಒಲಿಸಿ’ಕೊಳ್ಳದಿರುವಲ್ಲಿ, ಅಥವಾ ವಿವೇಚನಾಶಕ್ತಿಯನ್ನು ಸಂಪಾದಿಸಲು ತವಕಪಡದಿರುವಲ್ಲಿ, ‘ನಿತ್ಯಜೀವಕ್ಕೆ ಹೋಗುವ ದಾರಿ’ಯಲ್ಲಿ ಹೇಗೆ ಉಳಿಯಸಾಧ್ಯವಿದೆ? (ಮತ್ತಾಯ 7:14; ಹೋಲಿಸಿರಿ ಧರ್ಮೋಪದೇಶಕಾಂಡ 30:19, 20.) ದೇವರ ವಾಕ್ಯದ ಅಭ್ಯಾಸ ಹಾಗೂ ಅದರ ಅನ್ವಯವು ವಿವೇಚನಾಶಕ್ತಿಯನ್ನು ಒದಗಿಸುತ್ತದೆ.
ನಾವು “ತಿಳುವಳಿಕೆಗಾಗಿ” ಅಂದರೆ ಒಂದು ವಿಷಯದ ಬೇರೆ ಬೇರೆ ಅಂಶಗಳು ಹೇಗೆ ಒಂದಕ್ಕೊಂದು ಸಂಬಂಧಿಸಿವೆ ಎಂಬುದನ್ನು ಅವಲೋಕಿಸುವ ಸಾಮರ್ಥ್ಯಕ್ಕಾಗಿ ಹೇಗೆ “ಮೊರೆಯಿ”ಡಬಹುದು? ವಯಸ್ಸು ಮತ್ತು ಅನುಭವಗಳು, ಹೆಚ್ಚಿನ ತಿಳುವಳಿಕೆಯನ್ನು ವಿಕಸಿಸಿಕೊಳ್ಳುವುದರಲ್ಲಿ ನಮಗೆ ಸಹಾಯ ಮಾಡಸಾಧ್ಯವಿರುವ ಅಂಶಗಳಾಗಿರುವುದಾದರೂ, ವಾಸ್ತವದಲ್ಲಿ ಹಾಗಿರಬೇಕೆಂದೇನಿಲ್ಲ. (ಯೋಬ 12:12; 32:6-12) “ನಿನ್ನ [ಯೆಹೋವನ] ನೇಮಕಗಳನ್ನು ಕೈಕೊಂಡಿರುವದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ” ಎಂದು ಕೀರ್ತನೆಗಾರನು ಹೇಳಿದನು. “ನಿನ್ನ ವಾಕ್ಯವಿವರಣೆಯಿಂದ ಯುಕ್ತಿಹೀನರಿಗೆ ಜ್ಞಾನೋದಯವಾಗುವದು” ಎಂದು ಸಹ ಅವನು ಹಾಡಿದನು. (ಕೀರ್ತನೆ 119:100, 130) ಯೆಹೋವನು “ಮಹಾವೃದ್ಧ”ನಾಗಿದ್ದಾನೆ ಮತ್ತು ಸರ್ವ ಮಾನವಕುಲಕ್ಕಿಂತಲೂ ಅತ್ಯುತೃಷ್ಟವಾದ ತಿಳುವಳಿಕೆ ಆತನಿಗಿದೆ. (ದಾನಿಯೇಲ 7:13) ಒಬ್ಬ ಅನನುಭವಿಗೆ ದೇವರು ತಿಳುವಳಿಕೆಯನ್ನು ನೀಡಶಕ್ತನು, ಅಂದರೆ ಆ ವ್ಯಕ್ತಿಯು, ವಯಸ್ಸಿನಲ್ಲಿ ದೊಡ್ಡವರಾಗಿರುವವರಿಗಿಂತಲೂ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳಶಕ್ತನಾಗುವಂತೆ ಮಾಡಬಲ್ಲನು. ಆದುದರಿಂದ, ನಾವು ದೇವರ ವಾಕ್ಯವಾದ ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸಬೇಕು ಮತ್ತು ಅದನ್ನು ಅನ್ವಯಿಸಿಕೊಳ್ಳಬೇಕು.
ಜ್ಞಾನೋಕ್ತಿ ಪುಸ್ತಕದ ಎರಡನೆಯ ಅಧ್ಯಾಯದ ಆರಂಭದಲ್ಲಿ, “ಒಂದುವೇಳೆ ನೀವು” ಎಂಬ ಪುನರಾವರ್ತಿತ ವಾಕ್ಸರಣಿಯ ಬಳಿಕ, “ಅಂಗೀಕರಿಸು,” “ನಿಧಿಯಂತೆ ಕಾಪಾಡಿಕೊ,” “ಹುಡುಕು,” “ಪರಿಶೋಧಿಸು” ಎಂಬ ಅಭಿವ್ಯಕ್ತಿಗಳು ಕಂಡುಬರುತ್ತವೆ. ತೀವ್ರತೆಯನ್ನು ಹೆಚ್ಚಿಸುವ ಈ ಅಭಿವ್ಯಕ್ತಿಗಳನ್ನು ಬರಹಗಾರನು ಏಕೆ ಉಪಯೋಗಿಸುತ್ತಾನೆ? ಒಂದು ಪ್ರಮಾಣ ಗ್ರಂಥವು ಹೇಳುವುದು: “[ಇಲ್ಲಿ] ಜ್ಞಾನಿಯು, ವಿವೇಕದ ಬೆನ್ನಟ್ಟುವಿಕೆಯಲ್ಲಿ ಶ್ರದ್ಧಾಪೂರ್ವಕವಾದ ಆಸಕ್ತಿಯ ಅಗತ್ಯವನ್ನು ಒತ್ತಿಹೇಳುತ್ತಾನೆ.” ಹೌದು, ನಾವು ಶ್ರದ್ಧಾಪೂರ್ವಕವಾದ ಆಸಕ್ತಿಯಿಂದ ವಿವೇಕವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಗುಣಗಳಾದ ವಿವೇಚನಾಶಕ್ತಿ ಮತ್ತು ತಿಳುವಳಿಕೆಯನ್ನು ಬೆನ್ನಟ್ಟಬೇಕು.
ನೀವು ಪ್ರಯತ್ನಗಳನ್ನು ಮಾಡುತ್ತೀರೊ?
ವಿವೇಕದ ಬೆನ್ನಟ್ಟುವಿಕೆಯಲ್ಲಿನ ಅತಿ ಪ್ರಮುಖವಾದ ಒಂದು ಅಂಶವು, ಬೈಬಲನ್ನು ಶ್ರದ್ಧೆಯಿಂದ ಅಭ್ಯಾಸಿಸುವುದೇ ಆಗಿದೆ. ಆದರೂ, ಈ ಅಭ್ಯಾಸವು ಮಾಹಿತಿಯನ್ನು ಸಂಗ್ರಹಿಸಲಿಕ್ಕಾಗಿ ಕೇವಲ ಓದುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿರತಕ್ಕದ್ದು. ಆದುದರಿಂದ, ನಾವು ಏನು ಓದುತ್ತೇವೋ ಅದರ ಕುರಿತು ಮನನಮಾಡುವ ಗುರಿಯೊಂದಿಗೆ ಶಾಸ್ತ್ರವಚನಗಳನ್ನು ಅಭ್ಯಾಸಿಸುವುದು ಅತ್ಯಗತ್ಯವಾಗಿದೆ. ನಾವು ಏನನ್ನು ಕಲಿಯುತ್ತಿದ್ದೇವೋ ಅದನ್ನು, ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮತ್ತು ನಿರ್ಣಯಗಳನ್ನು ಮಾಡುವುದರಲ್ಲಿ ನಾವು ಹೇಗೆ ಉಪಯೋಗಿಸಸಾಧ್ಯವಿದೆ ಎಂದು ಪರ್ಯಾಲೋಚಿಸುವುದು ಸಹ ವಿವೇಕ ಮತ್ತು ವಿವೇಚನಾಶಕ್ತಿಯನ್ನು ಪಡೆದುಕೊಳ್ಳುವುದರಲ್ಲಿ ಒಳಗೂಡಿದೆ. ತಿಳುವಳಿಕೆಯನ್ನು ಸಂಪಾದಿಸಬೇಕಾದರೆ, ಈಗಾಗಲೇ ನಮಗೆ ಗೊತ್ತಿರುವ ವಿಷಯಗಳೊಂದಿಗೆ ಹೊಸ ವಿಚಾರಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಪರಿಗಣಿಸುವುದು ಅತ್ಯಗತ್ಯ. ಬೈಬಲಿನ ಇಂತಹ ಧ್ಯಾನಪರ ಅಭ್ಯಾಸವು, ಸಮಯ ಹಾಗೂ ಕ್ರಿಯಾಶೀಲ ಪ್ರಯತ್ನವನ್ನು ಅಗತ್ಯಪಡಿಸುತ್ತದೆ ಎಂಬುದನ್ನು ಯಾರು ತಾನೆ ಅಲ್ಲಗಳೆಯುವರು? ಸಮಯ ಹಾಗೂ ಕ್ರಿಯಾಶೀಲ ಶಕ್ತಿಯ ಬಂಡವಾಳವು, ‘ಬೆಳ್ಳಿಯನ್ನು ಹುಡುಕುವಾಗ ಮತ್ತು ಅಡಗಿರುವ ನಿಕ್ಷೇಪವನ್ನು ಪರಿಶೋಧಿಸುತ್ತಿರುವಾಗ’ ವ್ಯಯಿಸಲ್ಪಡುವ ಸಮಯ ಹಾಗೂ ಶಕ್ತಿಗೆ ಸಮಾನವಾಗಿದೆ. ಅಗತ್ಯವಿರುವ ಪ್ರಯತ್ನವನ್ನು ನೀವು ಮಾಡುವಿರೊ? ಹಾಗೆ ಮಾಡಲಿಕ್ಕಾಗಿ ನೀವು ‘ಅನುಕೂಲಕರವಾದ ಸಮಯವನ್ನು ಖರೀದಿಸು’ವಿರೊ?—ಎಫೆಸ 5:15, 16, NW.
ಪ್ರಾಮಾಣಿಕ ಹೃದಯದಿಂದ ನಾವು ಬೈಬಲನ್ನು ಆಳವಾಗಿ ಅಗೆಯುವಲ್ಲಿ, ನಮಗೋಸ್ಕರ ಯಾವ ನಿಕ್ಷೇಪಗಳು ಕಾದಿರಿಸಲ್ಪಟ್ಟಿವೆ ಎಂಬುದನ್ನು ಪರಿಗಣಿಸಿರಿ. ನಾವು “ದೇವರ ಜ್ಞಾನವನ್ನು” ಅಂದರೆ ನಮ್ಮ ಸೃಷ್ಟಿಕರ್ತನ ಕುರಿತಾದ ಸದೃಢವಾದ, ಜೀವದಾಯಕ ಜ್ಞಾನವನ್ನು ಕಂಡುಕೊಳ್ಳಸಾಧ್ಯವಿದೆ! (ಯೋಹಾನ 17:3) “ಯೆಹೋವನ ಭಯ”ವು ಸಹ ಒಂದು ನಿಕ್ಷೇಪವಾಗಿದ್ದು, ನಾವು ಅದನ್ನು ನಮ್ಮದಾಗಿಮಾಡಿಕೊಳ್ಳಬೇಕಾಗಿದೆ. ಆತನ ಕುರಿತಾದ ಪೂಜ್ಯಭಾವನೆಯಿಂದ ಕೂಡಿದ ಭಯಭಕ್ತಿಯು ಎಷ್ಟು ಅಮೂಲ್ಯವಾದದ್ದಾಗಿದೆ! ಆತನಿಗೆ ಅಸಂತೋಷವನ್ನು ಉಂಟುಮಾಡುವಂತಹ ಹಿತಕರವಾದ ಭಯವು, ನಾವು ಮಾಡುವ ಎಲ್ಲ ಕೆಲಸಕ್ಕೆ ಆತ್ಮಿಕ ಪ್ರಮುಖತೆಯನ್ನು ನೀಡುತ್ತಾ, ನಮ್ಮ ಜೀವಿತದ ಪ್ರತಿಯೊಂದು ಅಂಶವನ್ನೂ ನಿಯಂತ್ರಿಸತಕ್ಕದ್ದು.—ಪ್ರಸಂಗಿ 12:13.
ಆತ್ಮಿಕ ನಿಕ್ಷೇಪಗಳನ್ನು ಹುಡುಕುವ ಮತ್ತು ಅಗೆಯುವ ಉತ್ಕಟ ಬಯಕೆಯು ನಮ್ಮೊಳಗೆ ಪ್ರಜ್ವಲಿಸುತ್ತಿರಬೇಕು. ನಮ್ಮ ಪರಿಶೋಧನೆಯನ್ನು ಸುಲಭಗೊಳಿಸಲಿಕ್ಕಾಗಿ, ಅತ್ಯುತ್ತಮವಾದ ಅಗೆಯುವ ಸಾಧನಗಳನ್ನು ಯೆಹೋವನು ಒದಗಿಸಿದ್ದಾನೆ. ಕಾವಲಿನಬುರುಜು ಮತ್ತು ಎಚ್ಚರ! ಎಂಬ ಸತ್ಯದ ಸಮಯೋಚಿತ ಪತ್ರಿಕೆಗಳು, ಹಾಗೂ ಇನ್ನಿತರ ಬೈಬಲಾಧಾರಿತ ಪ್ರಕಾಶನಗಳು ಇವುಗಳಲ್ಲಿ ಕೆಲವಾಗಿವೆ. (ಮತ್ತಾಯ 24:45-47) ತನ್ನ ವಾಕ್ಯ ಹಾಗೂ ಮಾರ್ಗಗಳಲ್ಲಿ ನಮಗೆ ಶಿಕ್ಷಣ ನೀಡಲಿಕ್ಕಾಗಿ ಯೆಹೋವನು ಕ್ರೈಸ್ತ ಕೂಟಗಳನ್ನು ಸಹ ಒದಗಿಸಿದ್ದಾನೆ. ನಾವು ಈ ಕೂಟಗಳಿಗೆ ಕ್ರಮವಾಗಿ ಹಾಜರಾಗಬೇಕು, ಅಲ್ಲಿ ಹೇಳಲ್ಪಡುವ ವಿಷಯಗಳನ್ನು ಕಿವಿಗೊಟ್ಟು ಕೇಳಿಸಿಕೊಳ್ಳಬೇಕು, ಮುಖ್ಯ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಮತ್ತು ಅವುಗಳನ್ನು ನಿಕ್ಷೇಪದಂತೆ ಕಾಪಾಡಿಕೊಳ್ಳಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಬೇಕು, ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧದ ಕುರಿತು ಆಳವಾಗಿ ಯೋಚಿಸಬೇಕು.—ಇಬ್ರಿಯ 10:24, 25.
ನೀವು ಅಸಫಲರಾಗುವುದಿಲ್ಲ
ಅನೇಕವೇಳೆ, ಹುದುಗಿಹೋಗಿರುವ ರತ್ನಗಳು, ಚಿನ್ನ, ಅಥವಾ ಬೆಳ್ಳಿಯನ್ನು ಹುಡುಕುವ ಪ್ರಯತ್ನಗಳು ನಿಷ್ಫಲವಾಗಿ ಕಂಡುಬರುತ್ತವೆ. ಆತ್ಮಿಕ ನಿಕ್ಷೇಪಗಳನ್ನು ಹುಡುಕುವ ವಿಷಯದಲ್ಲಿ ಯಾವುದೇ ಪ್ರಯತ್ನವು ನಿಷ್ಫಲವಾಗುವುದಿಲ್ಲ. ಏಕೆ? “ಯೆಹೋವನೇ ವಿವೇಕವನ್ನು ಕೊಡುವಾತನು, ಆತನ ಬಾಯಿಂದಲೇ ಜ್ಞಾನವೂ ವಿವೇಚನಾಶಕ್ತಿಯೂ ಹೊರಟುಬರುತ್ತವೆ” ಎಂದು ಸೊಲೊಮೋನನು ನಮಗೆ ಆಶ್ವಾಸನೆ ನೀಡುತ್ತಾನೆ.—ಜ್ಞಾನೋಕ್ತಿ 2:6, NW.
ಅರಸನಾದ ಸೊಲೊಮೋನನು ತನ್ನ ವಿವೇಕಕ್ಕೆ ತುಂಬ ಹೆಸರುವಾಸಿಯಾಗಿದ್ದನು. (1 ಅರಸು 4:30-32) ಸಸ್ಯಗಳು, ಪ್ರಾಣಿಗಳು, ಮಾನವ ಸ್ವಭಾವ, ಮತ್ತು ದೇವರ ವಾಕ್ಯವನ್ನೂ ಒಳಗೊಂಡು, ಬೇರೆ ಬೇರೆ ವಿಷಯಗಳ ಕುರಿತು ಅವನಿಗೆ ತುಂಬ ಜ್ಞಾನವಿತ್ತೆಂದು ಶಾಸ್ತ್ರವಚನಗಳು ತಿಳಿಯಪಡಿಸುತ್ತವೆ. ತಾವು ಒಂದೇ ಮಗುವಿನ ತಾಯಂದಿರು ಎಂದು ವಾದಿಸುತ್ತಿದ್ದ ಇಬ್ಬರು ಸ್ತ್ರೀಯರ ನಡುವಿನ ಜಗಳವನ್ನು ಪರಿಹರಿಸುವುದರಲ್ಲಿ ಈ ಯುವ ಅರಸನು ತೋರಿಸಿದ ವಿವೇಚನಾಶಕ್ತಿಯು, ಅವನಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು. (1 ಅರಸು 3:16-28) ಅವನ ಮಹಾನ್ ವಿವೇಕದ ಮೂಲವು ಏನಾಗಿತ್ತು? “ಜ್ಞಾನವಿವೇಕಗಳನ್ನು” ಮತ್ತು “ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವ” ಸಾಮರ್ಥ್ಯವನ್ನು ದಯಪಾಲಿಸುವಂತೆ ಸೊಲೊಮೋನನು ಯೆಹೋವನ ಬಳಿ ಪ್ರಾರ್ಥಿಸಿದನು. ಯೆಹೋವನೇ ಇವುಗಳನ್ನು ಸೊಲೊಮೋನನಿಗೆ ದಯಪಾಲಿಸಿದನು.—2 ಪೂರ್ವಕಾಲವೃತ್ತಾಂತ 1:10-12; 1 ಅರಸು 3:9.
ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಿಸುವಾಗ, ನಾವು ಸಹ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ಕೀರ್ತನೆಗಾರನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.” (ಕೀರ್ತನೆ 86:11) ಯೆಹೋವನು ಈ ಪ್ರಾರ್ಥನೆಯನ್ನು ಅಂಗೀಕರಿಸಿದನು, ಆದುದರಿಂದಲೇ ಆತನು ಈ ಪ್ರಾರ್ಥನೆಯನ್ನು ಬೈಬಲಿನಲ್ಲಿ ದಾಖಲಿಸಿದನು. ಬೈಬಲಿನಲ್ಲಿ ಆತ್ಮಿಕ ನಿಕ್ಷೇಪಗಳನ್ನು ಕಂಡುಕೊಳ್ಳಲು ಸಹಾಯಮಾಡುವಂತೆ ನಾವು ಮನಃಪೂರ್ವಕವಾಗಿ ಮತ್ತು ಅನೇಕಾವರ್ತಿ ಮಾಡುವ ಪ್ರಾರ್ಥನೆಗಳು, ಖಂಡಿತವಾಗಿಯೂ ಉತ್ತರಿಸಲ್ಪಡುವವು ಎಂಬ ವಿಷಯದಲ್ಲಿ ನಾವೂ ಖಾತ್ರಿಯಿಂದಿರಸಾಧ್ಯವಿದೆ.—ಲೂಕ 18:1-8.
ಸೊಲೊಮೋನನು ಹೇಳಿದ್ದು: “ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು [“ವಿವೇಕವನ್ನು,” NW] ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು ನ್ಯಾಯಮಾರ್ಗವನ್ನು ರಕ್ಷಿಸುತ್ತಾ ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು. ಹೀಗಿರಲು ನೀನು ನೀತಿನ್ಯಾಯಗಳನ್ನೂ ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.” (ಜ್ಞಾನೋಕ್ತಿ 2:7-9, ಓರೆ ಅಕ್ಷರಗಳು ನಮ್ಮವು.) ಇದು ಎಂತಹ ಪುನರಾಶ್ವಾಸನೆಯಾಗಿದೆ! ಯಾರು ಪ್ರಾಮಾಣಿಕ ರೀತಿಯಲ್ಲಿ ವಿವೇಕವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೋ ಅವರಿಗೆ ಆತನು ವಿವೇಕವನ್ನು ದಯಪಾಲಿಸುತ್ತಾನೆ ಮಾತ್ರವಲ್ಲ, ದೋಷವಿಲ್ಲದೆ ನಡೆಯುವವರಿಗೆ ರಕ್ಷಣೆಯನ್ನು ನೀಡುವ ಗುರಾಣಿಯಾಗಿ ರುಜುವಾಗುತ್ತಾನೆ. ಏಕೆಂದರೆ ಅವರು ನಿಜವಾದ ವಿವೇಕವನ್ನು ತೋರಿಸುತ್ತಾರೆ ಮತ್ತು ನಿಷ್ಠೆಯಿಂದ ಆತನ ನೀತಿಯ ಮಟ್ಟಗಳಿಗೆ ಅನುಸಾರವಾಗಿ ನಡೆಯುತ್ತಾರೆ. ಯಾರಿಗೆ ಯೆಹೋವನು “ಸಕಲ ಸನ್ಮಾರ್ಗಗಳನ್ನು” ತಿಳಿದುಕೊಳ್ಳಲು ಸಹಾಯ ಮಾಡುತ್ತಾನೋ ಅವರಲ್ಲಿ ನಾವೂ ಒಬ್ಬರಾಗಿರೋಣ.
“ಜ್ಞಾನವು ತಾನೇ . . . ಹಿತಕರ”ವಾಗಿ ಪರಿಣಮಿಸುವಾಗ
ವಿವೇಕವನ್ನು ಸಂಪಾದಿಸಲು ಅತ್ಯಗತ್ಯವಾಗಿರುವ ಬೈಬಲಿನ ವೈಯಕ್ತಿಕ ಅಭ್ಯಾಸವು ತಾನೇ ಅನೇಕ ಜನರಿಗೆ ಒಂದು ಹಿತಕರವಾದ ಸಂಗತಿಯಾಗಿರುವುದಿಲ್ಲ. ಉದಾಹರಣೆಗೆ, 58 ವರ್ಷ ಪ್ರಾಯದ ಲಾರೆನ್ಸ್ ಹೇಳುವುದು: “ನನಗೆ ಯಾವಾಗಲೂ ಕೆಲಸ ಮಾಡುವುದೆಂದರೆ ತುಂಬ ಇಷ್ಟ. ಅಭ್ಯಾಸಿಸುವುದೆಂದರೆ ತುಂಬ ಕಷ್ಟ.” ಮತ್ತು ಶಾಲಾ ವ್ಯಾಸಂಗವನ್ನು ಯಾರು ಇಷ್ಟಪಡುತ್ತಿರಲಿಲ್ಲವೋ ಆ 24 ವರ್ಷ ಪ್ರಾಯದ ಮೈಕಲ್ ಹೇಳುವುದು: “ಕುಳಿತುಕೊಂಡು ಓದಲಿಕ್ಕಾಗಿ ನಾನು ನನ್ನನ್ನು ಬಲವಂತಪಡಿಸಿಕೊಳ್ಳಬೇಕಾಗಿತ್ತು.” ಆದರೂ, ಓದುವ ಬಯಕೆಯನ್ನು ನಾವು ಬೆಳೆಸಿಕೊಳ್ಳಸಾಧ್ಯವಿದೆ.
ಮೈಕಲ್ ಏನು ಮಾಡಿದನು ಎಂಬುದನ್ನು ಪರಿಗಣಿಸಿರಿ. ಅವನು ಹೇಳುವುದು: “ಪ್ರತಿ ದಿನ ಕಡಿಮೆಪಕ್ಷ ಅರ್ಧ ತಾಸಾದರೂ ಕುಳಿತುಕೊಂಡು ಅಭ್ಯಾಸಮಾಡುವಂತೆ ನನ್ನನ್ನು ಶಿಸ್ತಿಗೊಳಪಡಿಸಿಕೊಂಡೆ. ಅತಿ ಬೇಗನೆ ಇದು ನನ್ನ ಮನೋಭಾವ, ಕ್ರೈಸ್ತ ಕೂಟಗಳಲ್ಲಿನ ನನ್ನ ಉತ್ತರಗಳು, ಮತ್ತು ಇತರರೊಂದಿಗಿನ ನನ್ನ ಸಂಭಾಷಣೆಗಳ ಮೇಲೆ ಬೀರಿದ ಪರಿಣಾಮವನ್ನು ನಾನು ಗಮನಿಸಸಾಧ್ಯವಾಯಿತು. ಈಗ ನಾನು ನನ್ನ ಅಭ್ಯಾಸ ಅವಧಿಗಳಿಗಾಗಿ ಸದಾ ಮುನ್ನೋಡುತ್ತಿರುತ್ತೇನೆ, ಮತ್ತು ಬೇರೆ ಯಾವುದೇ ಕೆಲಸವು ಇದಕ್ಕೆ ಅಡ್ಡಬರುವುದನ್ನು ನಾನು ಇಷ್ಟಪಡುವುದಿಲ್ಲ.” ಹೌದು, ನಾವು ಮಾಡುವ ಪ್ರಗತಿಯನ್ನು ನೋಡುವಾಗ, ವೈಯಕ್ತಿಕ ಅಭ್ಯಾಸದ ಕಡೆಗೆ ಹೆಚ್ಚೆಚ್ಚು ಅಭಿರುಚಿಯನ್ನು ಬೆಳೆಸಿಕೊಳ್ಳುತ್ತೇವೆ. ಲಾರೆನ್ಸ್ ಸಹ ವೈಯಕ್ತಿಕ ಬೈಬಲ್ ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡನು, ಮತ್ತು ಸಕಾಲದಲ್ಲಿ, ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಹಿರಿಯನಾಗಿ ಸೇವೆ ಸಲ್ಲಿಸುವ ಸುಯೋಗ ಅವನಿಗೆ ದೊರಕಿತು.
ವೈಯಕ್ತಿಕ ಅಭ್ಯಾಸವನ್ನು ಆನಂದದಾಯಕವಾದ ಅನುಭವವಾಗಿ ಮಾಡಬೇಕಾದರೆ, ಸತತ ಪ್ರಯತ್ನದ ಅಗತ್ಯವಿದೆ. ಆದರೂ, ಇದರ ಪ್ರಯೋಜನಗಳು ಅಪಾರ. “ವಿವೇಕವು ನಿಮ್ಮ ಹೃದಯದೊಳಗೆ ಪ್ರವೇಶಿಸುವಾಗ ಮತ್ತು ಜ್ಞಾನವು ತಾನೇ ಪ್ರಾಣಕ್ಕೆ ಹಿತಕರವಾಗಿ ಪರಿಣಮಿಸುವಾಗ, ಆಲೋಚನಾಶಕ್ತಿಯು ತಾನೇ ನಿಮಗೆ ಕಾವಲಾಗಿರುವುದು, ವಿವೇಚನಾಶಕ್ತಿಯು ತಾನೇ ನಿಮ್ಮನ್ನು ಕಾಪಾಡುವುದು” ಎಂದು ಸೊಲೊಮೋನನು ಹೇಳುತ್ತಾನೆ.—ಜ್ಞಾನೋಕ್ತಿ 2:10, 11, NW.
‘ಇದರಿಂದ ನೀನು ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವಿ’
ವಿವೇಕ, ಜ್ಞಾನ, ಆಲೋಚನಾಶಕ್ತಿ, ಮತ್ತು ವಿವೇಚನಾಶಕ್ತಿಗಳು ಯಾವ ರೀತಿಯಲ್ಲಿ ಕಾವಲಾಗಿರುವವು? “ಇದರಿಂದ [ಇವುಗಳಿಂದ] ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ. ಅವರಾದರೋ ಕತ್ತಲ ಹಾದಿಗಳನ್ನು ಹಿಡಿಯಬೇಕೆಂದು ಧರ್ಮಮಾರ್ಗಗಳನ್ನು ತೊರೆದುಬಿಡುವರು; ಅವರು ಕೆಟ್ಟದ್ದನ್ನು ಮಾಡುವದರಲ್ಲಿ ಸಂತೋಷಿಸಿ ಕೆಟ್ಟವರ ದುಷ್ಟತನಕ್ಕೆ ಒಲಿಯುವರು. ಅವರ ಮಾರ್ಗಗಳು ವಕ್ರವಾಗಿವೆ. ಅವರ ನಡತೆಗಳು ದುರ್ನಡತೆಗಳೇ.”—ಜ್ಞಾನೋಕ್ತಿ 2:12-15.
ಹೌದು, ಯಾರು ನಿಜವಾದ ವಿವೇಕವನ್ನು ಅಮೂಲ್ಯವಾಗಿ ಎಣಿಸುತ್ತಾರೋ ಅವರು, “ಕೆಟ್ಟ ಮಾತನಾಡುವವರ,” ಅಂದರೆ ಸತ್ಯ ಹಾಗೂ ನೀತಿಗೆ ವಿರುದ್ಧವಾದ ಮಾತುಗಳನ್ನು ಆಡುತ್ತಾರೋ ಅಂಥವರ ಸಹವಾಸವನ್ನು ಮಾಡುವುದಿಲ್ಲ. ಯಾರು ಸತ್ಯವನ್ನು ತೊರೆದು ಕತ್ತಲ ಹಾದಿಗಳಲ್ಲಿ ನಡೆಯುತ್ತಾರೋ ಮತ್ತು ಯಾರು ವಂಚಿಸುವವರೂ ದುಷ್ಕೃತ್ಯಗಳನ್ನು ಮಾಡುವುದರಲ್ಲಿ ಸುಖಾನುಭವವನ್ನು ಕಂಡುಕೊಳ್ಳುತ್ತಾರೊ ಅಂತಹವರಿಂದ, ಆಲೋಚನಾಶಕ್ತಿ ಮತ್ತು ವಿವೇಚನಾಶಕ್ತಿಯು ನಮ್ಮನ್ನು ಕಾಪಾಡುತ್ತದೆ.—ಜ್ಞಾನೋಕ್ತಿ 3:32.
ನಿಜವಾದ ವಿವೇಕ ಹಾಗೂ ಅದರ ಸಹಾಯಕ ಗುಣಗಳು, ಅನೈತಿಕ ಸ್ತ್ರೀಪುರುಷರ ಕೆಟ್ಟ ಮಾರ್ಗದಿಂದಲೂ ನಮ್ಮನ್ನು ಕಾಪಾಡುತ್ತವೆ ಎಂಬುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಸಾಧ್ಯವಿದೆ! ಈ ಗುಣಗಳು “ನಿನ್ನನ್ನು ಜಾರಳಿಂದ ಎಂದರೆ ಸವಿಮಾತನಾಡುವ ಪರಸ್ತ್ರೀಯಿಂದ, ತಪ್ಪಿಸುವವು. ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳಷ್ಟೆ. ಅವಳ ಮನೆಯೇ ಪಾತಾಳಕ್ಕೆ ಇಳಿಯುವ ದಾರಿ, ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ. ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವದಿಲ್ಲ, ಅವರಿಗೆ ಜೀವದ ಮಾರ್ಗವು ದೊರೆಯುವದೇ ಇಲ್ಲ” ಎಂದು ಸೊಲೊಮೋನನು ಕೂಡಿಸುತ್ತಾನೆ.—ಜ್ಞಾನೋಕ್ತಿ 2:16-19.
ಆ “ಪರಸ್ತ್ರೀ”ಯು ಅಥವಾ ವೇಶ್ಯೆಯು, “ತನ್ನ ಯೌವನಕಾಲದ ಕಾಂತನನ್ನು”—ಬಹುಶಃ ತನ್ನ ಯೌವನಪ್ರಾಯದ ಗಂಡನನ್ನು—“ತ್ಯಜಿಸು”ವವಳಾಗಿ ವರ್ಣಿಸಲ್ಪಟ್ಟಿದ್ದಾಳೆ.a (ಹೋಲಿಸಿರಿ ಮಲಾಕಿಯ 2:14.) ಧರ್ಮಶಾಸ್ತ್ರದೊಡಂಬಡಿಕೆಯ ಒಂದು ಭಾಗವಾಗಿದ್ದ, ವ್ಯಭಿಚಾರ ಮಾಡಬಾರದು ಎಂಬ ನಿಯಮವನ್ನು ಅವಳು ಮರೆತುಬಿಟ್ಟಿದ್ದಾಳೆ. (ವಿಮೋಚನಕಾಂಡ 20:14) ಅವಳ ಮಾರ್ಗಗಳು ಮರಣಕ್ಕೆ ನಡಿಸುತ್ತವೆ. ಅವಳೊಂದಿಗೆ ಸಹವಾಸಮಾಡುತ್ತಿರುವವರಿಗೆ ಎಂದೂ “ಜೀವದ ಮಾರ್ಗವು ದೊರೆಯುವದೇ ಇಲ್ಲ.” ಏಕೆಂದರೆ ಅತಿ ಬೇಗನೆ ಅವರು ಎಂದೂ ಹಿಂದಿರುಗಲಾರದ ಹಂತವನ್ನು, ಅಂದರೆ ಮರಣವನ್ನು ತಲಪಬಹುದು, ಮತ್ತು ಇದರಿಂದ ಅವರೆಂದೂ ಹಿಂದಿರುಗಲು ಸಾಧ್ಯವಿಲ್ಲ. ವಿವೇಚನಾಶಕ್ತಿ ಮತ್ತು ಆಲೋಚನಾಶಕ್ತಿಯಿರುವ ಒಬ್ಬ ಮನುಷ್ಯನು, ಅನೈತಿಕತೆಯ ಸೆಳೆತಗಳ ಅರಿವುಳ್ಳವನಾಗಿರುತ್ತಾನೆ ಮತ್ತು ಆ ಸೆಳೆತಗಳಿಗೆ ಒಳಗಾಗದಂತೆ ವಿವೇಕದಿಂದ ತನ್ನನ್ನು ಕಾಪಾಡಿಕೊಳ್ಳುತ್ತಾನೆ.
“ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು”
ವಿವೇಕದ ಕುರಿತಾಗಿ ಕೊಟ್ಟ ತನ್ನ ಸಲಹೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾ ಸೊಲೊಮೋನನು ಹೇಳುವುದು: “ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ [ವಿವೇಕವು] ನಿನ್ನನ್ನು ಪ್ರೇರಿಸಿ ನೀತಿವಂತರ ಹಾದಿಗಳನ್ನು ಹಿಡಿಯುವ ಹಾಗೆ [ಮಾಡುವದು].” (ಜ್ಞಾನೋಕ್ತಿ 2:20) ವಿವೇಕವು ಎಷ್ಟು ಅದ್ಭುತಕರವಾದ ಉದ್ದೇಶವನ್ನು ಪೂರೈಸುತ್ತದೆ! ಇದು ದೇವರ ಅಂಗೀಕಾರಕ್ಕೆ ಯೋಗ್ಯವಾದ ಸಂತೋಷಭರಿತ ಹಾಗೂ ಸಂತೃಪ್ತಿಕರ ಜೀವಿತವನ್ನು ನಡೆಸಲು ನಮಗೆ ಸಹಾಯ ಮಾಡುತ್ತದೆ.
“ಒಳ್ಳೆಯವರ ಹಾದಿಗಳಲ್ಲಿ” ನಡೆಯುವವರಿಗೆ ಮುಂದೆ ಕಾದಿರಿಸಲ್ಪಟ್ಟಿರುವ ಮಹಾನ್ ಆಶೀರ್ವಾದಗಳನ್ನು ಸಹ ಪರಿಗಣಿಸಿರಿ. ಸೊಲೊಮೋನನು ಮುಂದುವರಿಸುವುದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ದೇವರ ನೀತಿಯ ನೂತನ ಲೋಕದಲ್ಲಿ ನಿತ್ಯ ವಾಸಿಸಲಿರುವ ನಿರ್ದೋಷಿಗಳಲ್ಲಿ ನೀವು ಸಹ ಒಬ್ಬರಾಗಿರಿ.—2 ಪೇತ್ರ 3:13.
[ಅಧ್ಯಯನ ಪ್ರಶ್ನೆಗಳು]
a “ಪರಕೀಯ” ಎಂಬ ಶಬ್ದವು, ಧರ್ಮಶಾಸ್ತ್ರಕ್ಕೆ ಹೊಂದಿಕೆಯಲ್ಲಿದ್ದ ವಿಚಾರಗಳಿಗೆ ವಿರುದ್ಧವಾಗಿ ನಡೆದು, ಯೆಹೋವನಿಂದ ವಿಮುಖರಾದವರಿಗೆ ಅನ್ವಯವಾಗುತ್ತಿತ್ತು. ಆದುದರಿಂದ, ವೇಶ್ಯೆಯನ್ನು—ಒಬ್ಬ ವಿದೇಶೀಯಳೇ ಆಗಿರಬೇಕೆಂದೇನಿಲ್ಲ—“ಪರಸ್ತ್ರೀ” ಎಂದು ಸೂಚಿಸಲಾಗಿದೆ.
[ಪುಟ 26 ರಲ್ಲಿರುವ ಚಿತ್ರ]
ಸೊಲೊಮೋನನು ವಿವೇಕಕ್ಕಾಗಿ ಪ್ರಾರ್ಥಿಸಿದನು. ನಾವು ಸಹ ಹಾಗೆ ಮಾಡತಕ್ಕದ್ದು