ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಿರಿ
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಶಿಷ್ಯನಾದ ಯಾಕೋಬನು ಬರೆದನು. (ಯಾಕೋಬ 4:8) ಕೀರ್ತನೆಗಾರನಾದ ದಾವೀದನು ಹೀಗೆ ಹಾಡಿದನು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.” (ಕೀರ್ತನೆ 25:14) ನಾವು ಆತನೊಂದಿಗೆ ಆಪ್ತವಾದ ಸಂಬಂಧವನ್ನಿರಿಸಿಕೊಳ್ಳಬೇಕೆಂದು ಯೆಹೋವ ದೇವರು ಬಯಸುತ್ತಾನೆಂಬುದು ಸ್ಪಷ್ಟ. ಆದರೆ ದೇವರನ್ನು ಆರಾಧಿಸುತ್ತಿರುವ ಮತ್ತು ಆತನ ನಿಯಮಗಳನ್ನು ಪಾಲಿಸುತ್ತಿರುವ ಎಲ್ಲರೂ ಆತನೊಂದಿಗೆ ಆಪ್ತರಾಗಿರುತ್ತಾರೆ ಎಂದು ಹೇಳಸಾಧ್ಯವಿಲ್ಲ.
ನಿಮ್ಮ ವಿಷಯದಲ್ಲೇನು? ದೇವರೊಂದಿಗೆ ನಿಮಗೆ ಒಂದು ಆಪ್ತ ಸಂಬಂಧವಿದೆಯೊ? ನಿಸ್ಸಂದೇಹವಾಗಿಯೂ, ನೀವು ಆತನಿಗೆ ಹೆಚ್ಚು ನಿಕಟರಾಗಲು ಬಯಸುತ್ತೀರಿ. ಆದರೆ ನಾವು ದೇವರೊಂದಿಗೆ ಅಂತಹ ಆಪ್ತತೆಯನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದಕ್ಕಾಗಿ ನಾವೇನು ಮಾಡಬೇಕು? ಈ ಪ್ರಶ್ನೆಗಳಿಗೆ ಬೈಬಲಿನ ಜ್ಞಾನೋಕ್ತಿ ಪುಸ್ತಕವು ಉತ್ತರಗಳನ್ನು ಕೊಡುತ್ತದೆ.
ಪ್ರೀತಿಪೂರ್ವಕವಾದ ದಯೆ ಮತ್ತು ಸತ್ಯತೆಯನ್ನು ಪ್ರದರ್ಶಿಸಿರಿ
ಪುರಾತನ ಇಸ್ರಾಯೇಲಿನ ರಾಜನಾಗಿದ್ದ ಸೊಲೊಮೋನನು, ಜ್ಞಾನೋಕ್ತಿ ಪುಸ್ತಕದ ಮೂರನೆಯ ಅಧ್ಯಾಯವನ್ನು ಈ ಮಾತುಗಳೊಂದಿಗೆ ಆರಂಭಿಸುತ್ತಾನೆ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು.” (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 3:1, 2) ಸೊಲೊಮೋನನು ದೈವಿಕ ಪ್ರೇರಣೆಯಿಂದ ಇದನ್ನು ಬರೆದ ಕಾರಣ, ಈ ಪಿತೃಸದೃಶವಾದ ಬುದ್ಧಿವಾದವು ವಾಸ್ತವದಲ್ಲಿ ಯೆಹೋವ ದೇವರಿಂದ ಬಂದಿರುತ್ತದೆ ಮತ್ತು ನಮಗಾಗಿ ಕೊಡಲ್ಪಟ್ಟಿದೆ. ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ಮರುಜ್ಞಾಪನಗಳಿಗನುಸಾರ, ಅಂದರೆ ಆತನ ಉಪದೇಶ ಮತ್ತು ಆತನ ಆಜ್ಞೆಗಳಿಗನುಸಾರ ನಡೆಯುವಂತೆ ನಮಗೆ ಇಲ್ಲಿ ಸಲಹೆ ನೀಡಲಾಗಿದೆ. ನಾವು ಹಾಗೆ ಮಾಡುವಲ್ಲಿ, ನಮ್ಮ ‘ದಿನಗಳು ಹೆಚ್ಚಿಸಲ್ಪಟ್ಟು, ಆಯುಷ್ಯವು ವೃದ್ಧಿಗೊಳಿಸಲ್ಪಟ್ಟು, ಸುಕ್ಷೇಮವುಂಟಾಗುವುದು.’ ಹೌದು, ಈಗಲೂ ನಾವು ಶಾಂತಿಭರಿತ ಜೀವನವನ್ನು ಅನುಭವಿಸಬಲ್ಲೆವು ಮತ್ತು ಅನೇಕವೇಳೆ ದುಷ್ಟರ ಮೇಲೆ ಎರಗುವ ಅಕಾಲಿಕ ಮರಣದ ಅಪಾಯಕ್ಕೆ ನಮ್ಮನ್ನು ಒಡ್ಡಬಹುದಾದ ಚಟುವಟಿಕೆಗಳಿಂದ ದೂರವಿರಬಲ್ಲೆವು. ಇದಕ್ಕಿಂತಲೂ ಹೆಚ್ಚಾಗಿ, ನಾವು ಒಂದು ಶಾಂತಿಭರಿತ ಹೊಸ ಲೋಕದಲ್ಲಿ ನಿತ್ಯಕ್ಕೂ ಜೀವಿಸುವ ನಿರೀಕ್ಷೆಯನ್ನು ಇಡಬಲ್ಲೆವು.—ಜ್ಞಾನೋಕ್ತಿ 1:24-31; 2:21, 22.
ಸೊಲೊಮೋನನು ಮುಂದುವರಿಸುತ್ತಾ ಹೇಳುವುದು: “ಪ್ರೀತಿಸತ್ಯತೆಗಳು [“ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಗಳು,” NW] ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ; ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ ಸಮ್ಮತಿಯನ್ನೂ ಪಡೆದುಕೊಳ್ಳುವಿ.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:3, 4.
ಮೂಲ ಭಾಷೆಯಲ್ಲಿ “ಪ್ರೀತಿಪೂರ್ವಕ ದಯೆ”ಗಾಗಿರುವ ಪದವನ್ನು, ಪರ್ಯಾಯವಾಗಿ “ನಿಷ್ಠಾವಂತ ಪ್ರೀತಿ” ಎಂದು ಭಾಷಾಂತರಿಸಲಾಗಿದೆ ಮತ್ತು ಇದರಲ್ಲಿ ಯಥಾರ್ಥತೆ, ಒಕ್ಕಟ್ಟು ಮತ್ತು ನಿಷ್ಠೆಯು ಒಳಗೂಡಿದೆ. ಏನೇ ಆದರೂ ಯೆಹೋವನಿಗೇ ಅಂಟಿಕೊಂಡಿರುವೆವು ಎಂಬ ದೃಢನಿರ್ಧಾರವನ್ನು ನಾವು ಮಾಡಿಕೊಂಡಿದ್ದೇವೊ? ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ಸಂಬಂಧಗಳಲ್ಲಿ ನಾವು ಪ್ರೀತಿಪೂರ್ವಕ ದಯೆಯನ್ನು ತೋರಿಸುತ್ತೇವೊ? ಅವರಿಗೆ ನಿಕಟರಾಗಿರಲು ನಾವು ಪ್ರಯತ್ನಿಸುತ್ತೇವೊ? ಅವರೊಂದಿಗಿನ ನಮ್ಮ ಪ್ರತಿನಿತ್ಯದ ವ್ಯವಹಾರಗಳಲ್ಲಿ ಹಾಗೂ ಕಷ್ಟಕರ ಪರಿಸ್ಥಿತಿಗಳಲ್ಲೂ ‘ಪ್ರೀತಿಪೂರ್ವಕ ದಯೆಯ ನಿಯಮವು ನಮ್ಮ ನಾಲಿಗೆಯನ್ನು’ ನಿಯಂತ್ರಿಸುತ್ತದೊ?—ಜ್ಞಾನೋಕ್ತಿ 31:26, NW.
ಯೆಹೋವನಲ್ಲಿ ಪ್ರೀತಿಪೂರ್ವಕ ದಯೆಯು ತುಂಬಿತುಳುಕುತ್ತಿರುವುದರಿಂದ, ಆತನು “ಕ್ಷಮಿಸಲು ಸಿದ್ಧನಾಗಿದ್ದಾನೆ.” (ಕೀರ್ತನೆ 86:5) ನಮ್ಮ ಗತ ಪಾಪಗಳಿಗಾಗಿ ನಾವು ಪಶ್ಚಾತ್ತಾಪಪಟ್ಟು, ನೇರವಾದ ಮಾರ್ಗಗಳಲ್ಲಿ ನಡೆಯುತ್ತಿರುವಲ್ಲಿ, ಯೆಹೋವನಿಂದ “ಚೈತನ್ಯದಾಯಕ ಕಾಲಗಳು” ಒದಗಿಬರುವವು. (ಅ. ಕೃತ್ಯಗಳು 3:19, 20, NW) ನಾವು ಕೂಡ ಇತರರ ತಪ್ಪುಗಳನ್ನು ಕ್ಷಮಿಸುವ ಮೂಲಕ ದೇವರನ್ನು ಅನುಕರಿಸಬಾರದೊ?—ಮತ್ತಾಯ 6:14, 15.
ಯೆಹೋವನು “ಸತ್ಯದ ದೇವರು” ಆಗಿದ್ದಾನೆ, ಮತ್ತು ಆತನೊಂದಿಗೆ ಆಪ್ತರಾಗಿರಲು ಬಯಸುವವರೆಲ್ಲರಿಂದ ಆತನು “ಸತ್ಯತೆ”ಯನ್ನು ಅಪೇಕ್ಷಿಸುತ್ತಾನೆ. (ಕೀರ್ತನೆ 31:5) ತಮ್ಮ ನಿಜ ಸ್ವಭಾವವನ್ನು ಮರೆಮಾಡುವ “ಅಸತ್ಯದ ಮನುಷ್ಯರಂತೆ” ನಾವು ಇಬ್ಬಗೆಯ ಜೀವನವನ್ನು ನಡೆಸುತ್ತಿರುವಲ್ಲಿ, ಅಂದರೆ ಕ್ರೈಸ್ತ ಸಹವಾಸಿಗಳೊಂದಿಗಿರುವಾಗ ಒಂದು ರೀತಿ, ಮತ್ತು ಅವರ ಹಿಂದೆ ಇನ್ನೊಂದು ರೀತಿಯಲ್ಲಿ ವರ್ತಿಸುವುದಾದರೆ ಯೆಹೋವನು ನಮ್ಮ ಮಿತ್ರನಾಗಿರುವನೆಂದು ನಾವು ನಿರೀಕ್ಷಿಸಬಹುದೊ? (ಕೀರ್ತನೆ 26:4, NW) ಯೆಹೋವನ “ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ” ಇರುವುದರಿಂದ, ಅಂತಹ ಜೀವಿತವನ್ನು ನಡಿಸುವುದು ಎಂತಹ ಮೂರ್ಖತನವಾಗಿದೆ!—ಇಬ್ರಿಯ 4:13.
ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಯನ್ನು, ‘ನಮ್ಮ ಕೊರಳಿಗೆ ಕಟ್ಟಿರುವ’ ಒಂದು ಬೆಲೆಬಾಳುವ ಹಾರದಂತೆ ಅಮೂಲ್ಯವೆಂದೆಣಿಸಬೇಕು. ಯಾಕೆಂದರೆ ಅವು ‘ದೇವರ ಮತ್ತು ಮನುಷ್ಯರ ದಯೆಯನ್ನೂ ಸಮ್ಮತಿಯನ್ನೂ ಪಡೆದುಕೊಳ್ಳಲು’ ನಮಗೆ ಸಹಾಯಮಾಡುವವು. ನಾವು ಈ ಗುಣಗಳನ್ನು ಬಹಿರಂಗವಾಗಿ ತೋರಿಸಬೇಕು ಮಾತ್ರವಲ್ಲ, ಅವುಗಳನ್ನು ‘ನಮ್ಮ ಹೃದಯದ ಹಲಗೆಯ’ ಮೇಲೂ ಕೆತ್ತಬೇಕು, ಅಂದರೆ ಅವುಗಳನ್ನು ನಮ್ಮ ಆಂತರಿಕ ವ್ಯಕ್ತಿತ್ವದ ಭಾಗವನ್ನಾಗಿಯೂ ಮಾಡಿಕೊಳ್ಳಬೇಕು.
ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನು ಬೆಳೆಸಿಕೊಳ್ಳಿರಿ
ಆ ವಿವೇಕಿ ಅರಸನು ಮುಂದುವರಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:5, 6.
ಯೆಹೋವನು ಖಂಡಿತವಾಗಿಯೂ ನಮ್ಮ ಸಂಪೂರ್ಣ ಭರವಸೆಗೆ ಅರ್ಹನಾಗಿದ್ದಾನೆ. ಸೃಷ್ಟಿಕರ್ತನೋಪಾದಿ, ಆತನು “ಬಲಾಢ್ಯನೂ ಮಹಾಶಕ್ತನೂ” ಆಗಿದ್ದಾನೆ. (ಯೆಶಾಯ 40:26, 29) ತಾನು ಉದ್ದೇಶಿಸಿದ್ದೆಲ್ಲವನ್ನು ಆತನು ಪೂರೈಸಬಲ್ಲನು. ಅಷ್ಟೇಕೆ, ಆತನ ಹೆಸರಿನ ಅಕ್ಷರಾರ್ಥವೇ “ಆತನು ಆಗಿಸುತ್ತಾನೆ” ಎಂದಾಗಿದೆ. ಮತ್ತು ಇದು ತಾನು ಏನನ್ನು ವಾಗ್ದಾನಿಸಿದ್ದಾನೊ ಅದೆಲ್ಲವನ್ನು ನೆರವೇರಿಸುವ ಆತನ ಸಾಮರ್ಥ್ಯದಲ್ಲಿ ನಮಗಿರುವ ಭರವಸೆಯನ್ನು ಹೆಚ್ಚಿಸುತ್ತದೆ! ದೇವರು ‘ಸುಳ್ಳಾಡನು’ ಎಂಬ ವಾಸ್ತವಾಂಶವು, ಆತನನ್ನು ಸತ್ಯದ ಸಾಕಾರರೂಪವನ್ನಾಗಿ ಮಾಡುತ್ತದೆ. (ಇಬ್ರಿಯ 6:19) ಆತನ ಪ್ರಧಾನ ಗುಣವು ಪ್ರೀತಿಯಾಗಿದೆ. (1 ಯೋಹಾನ 4:8) ಆತನ “ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು.” (ಕೀರ್ತನೆ 145:17) ನಾವು ದೇವರ ಮೇಲೆ ಭರವಸೆಯನ್ನಿಡಲು ಸಾಧ್ಯವಾಗದಿರುವಲ್ಲಿ, ಇನ್ನಾರಲ್ಲಿ ಭರವಸೆಯನ್ನಿಡಬಲ್ಲೆವು? ಆದರೆ ಆತನಲ್ಲಿ ಭರವಸೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ, ನಾವು ಬೈಬಲಿನಿಂದ ಕಲಿತುಕೊಳ್ಳುವ ವಿಷಯಗಳನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮೂಲಕ ಮತ್ತು ಅದರಿಂದ ಫಲಿಸುವ ಪ್ರಯೋಜನಗಳ ಕುರಿತು ಆಲೋಚಿಸುವ ಮೂಲಕ ‘ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ಸವಿದು ನೋಡಬೇಕು.’—ಕೀರ್ತನೆ 34:8.
‘ನಮ್ಮ ಎಲ್ಲ ಮಾರ್ಗಗಳಲ್ಲೂ ಯೆಹೋವನನ್ನು ಲಕ್ಷ್ಯಕ್ಕೆ ತಂದುಕೊಳ್ಳುವುದು’ ಹೇಗೆ? ಪ್ರೇರಿತ ಕೀರ್ತನೆಗಾರನು ಹೇಳುವುದು: “ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.” (ಕೀರ್ತನೆ 77:12) ದೇವರು ಅದೃಶ್ಯನಾಗಿರುವುದರಿಂದ, ಆತನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಲು, ಆತನ ಮಹಾನ್ ಕೃತ್ಯಗಳು ಮತ್ತು ತನ್ನ ಜನರೊಂದಿಗಿನ ಆತನ ವ್ಯವಹಾರಗಳ ಕುರಿತಾಗಿ ಮನನಮಾಡುವುದು ಅತ್ಯಾವಶ್ಯಕವಾಗಿದೆ.
ಯೆಹೋವನನ್ನು ಲಕ್ಷ್ಯಕ್ಕೆ ತಂದುಕೊಳ್ಳುವ ಒಂದು ಪ್ರಮುಖ ವಿಧವು ಪ್ರಾರ್ಥನೆಯಾಗಿದೆ. ರಾಜ ದಾವೀದನು “ದಿನವೆಲ್ಲಾ” ಯೆಹೋವನಿಗೆ ಮೊರೆಯಿಟ್ಟನು. (ಕೀರ್ತನೆ 86:3) ಅನೇಕವೇಳೆ ದಾವೀದನು ಇಡೀ ರಾತ್ರಿ ಪ್ರಾರ್ಥಿಸಿದನು. ಉದಾಹರಣೆಗಾಗಿ, ಅವನು ಪಲಾಯನಗೈದು ಅರಣ್ಯದಲ್ಲಿದ್ದ ಸಮಯದಲ್ಲಿ ಹಾಗೆ ಮಾಡಿದನು. (ಕೀರ್ತನೆ 63:6, 7) “ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ . . . ಪ್ರಾರ್ಥಿಸಿರಿ” ಎಂದು ಅಪೊಸ್ತಲ ಪೌಲನು ಉತ್ತೇಜಿಸಿದನು. (ಎಫೆಸ 6:18) ನಾವು ಎಷ್ಟು ಬಾರಿ ಪ್ರಾರ್ಥಿಸುತ್ತೇವೆ? ದೇವರೊಂದಿಗೆ ವೈಯಕ್ತಿಕ ಹಾಗೂ ಹೃತ್ಪೂರ್ವಕವಾದ ಸಂವಾದವನ್ನು ನಡೆಸುವುದರಲ್ಲಿ ಆನಂದಿಸುತ್ತೇವೊ? ಕಷ್ಟಕರ ಸನ್ನಿವೇಶಗಳಲ್ಲಿರುವಾಗ, ನಾವು ಆತನಿಂದ ಸಹಾಯವನ್ನು ಬೇಡುತ್ತೇವೊ? ಮಹತ್ವಪೂರ್ಣ ನಿರ್ಣಯಗಳನ್ನು ಮಾಡುವ ಮುಂಚೆ ನಾವು ಪ್ರಾರ್ಥನಾಪೂರ್ವಕವಾಗಿ ಆತನ ಮಾರ್ಗದರ್ಶನವನ್ನು ಕೋರುತ್ತೇವೊ? ಪ್ರಾಮಾಣಿಕ ಮನಸ್ಸಿನಿಂದ ಪ್ರಾರ್ಥನೆಗಳನ್ನು ಮಾಡುವಾಗ, ನಾವು ಆತನಿಗೆ ಪ್ರೀತಿಪಾತ್ರರಾಗುತ್ತೇವೆ. ಮತ್ತು ಆತನು ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು, ‘ನಮ್ಮ ಮಾರ್ಗಗಳನ್ನು ಸರಾಗಮಾಡುವನು’ ಎಂಬ ಆಶ್ವಾಸನೆ ನಮಗಿದೆ.
ನಮ್ಮ ಪೂರ್ಣ ಭರವಸೆಯನ್ನು ನಾವು ಯೆಹೋವನ ಮೇಲೆ ಇಡಲು ಸಾಧ್ಯವಿರುವಾಗ, ನಾವು ‘ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳುವುದು’ ಅಥವಾ ಲೋಕದ ಗಣ್ಯವ್ಯಕ್ತಿಗಳ ಬುದ್ಧಿಯನ್ನು ಅವಲಂಬಿಸುವುದು ಎಂತಹ ಮೂರ್ಖತನವಾಗಿದೆ! “ನೀನೇ ಬುದ್ಧಿವಂತನು ಎಂದೆಣಿಸ”ಬೇಡ ಎಂದು ಸೊಲೊಮೋನನು ಹೇಳುತ್ತಾನೆ. ಅದಕ್ಕೆ ವ್ಯತಿರಿಕ್ತವಾಗಿ, “ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು. ಇದರಿಂದ ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಉಂಟಾಗುವವು” ಎಂಬ ಬುದ್ಧಿವಾದವನ್ನು ಕೊಡುತ್ತಾನೆ. (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 3:7, 8) ದೇವರನ್ನು ಅಸಂತೋಷಪಡಿಸುವ ಹಿತಕರವಾದ ಭಯವು, ನಮ್ಮ ಎಲ್ಲ ಕೃತ್ಯಗಳು, ಯೋಚನೆಗಳು ಮತ್ತು ಭಾವನೆಗಳನ್ನು ನಿಯಂತ್ರಿಸಬೇಕು. ಅಂತಹ ಪೂಜ್ಯ ಭಾವನೆಯ ಭಯವು, ಕೆಟ್ಟದ್ದನ್ನು ಮಾಡುವುದರಿಂದ ನಮ್ಮನ್ನು ತಡೆಯುತ್ತದೆ ಮತ್ತು ಆತ್ಮಿಕ ರೀತಿಯಲ್ಲಿ ಗುಣಮುಖಗೊಳಿಸುವಂತಹದ್ದೂ ಚೇತೋಹಾರಿಯೂ ಆಗಿರುತ್ತದೆ.
ಯೆಹೋವನಿಗೆ ಸರ್ವೋತ್ಕೃಷ್ಟವಾದದ್ದನ್ನು ಕೊಡಿರಿ
ಇನ್ಯಾವ ವಿಧದಲ್ಲಿ ನಾವು ದೇವರ ಸಮೀಪಕ್ಕೆ ಬರಬಲ್ಲೆವು? “ನಿನ್ನ ಆದಾಯದಿಂದಲೂ [“ಅಮೂಲ್ಯ ವಸ್ತುಗಳಿಂದಲೂ,” NW] ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು” ಎಂದು ರಾಜನು ಉಪದೇಶಿಸುತ್ತಾನೆ. (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 3:9) ಯೆಹೋವನನ್ನು ಸನ್ಮಾನಿಸುವುದರ ಅರ್ಥವು, ಆತನಿಗೆ ಉಚ್ಚ ಮಾನ್ಯತೆಯನ್ನು ನೀಡಿ, ಆತನ ಹೆಸರಿನ ಸಾರ್ವಜನಿಕ ಘೋಷಣೆಯಲ್ಲಿ ಪಾಲ್ಗೊಳ್ಳುವ ಮತ್ತು ಬೆಂಬಲಿಸುವ ಮೂಲಕ ಆತನನ್ನು ಸಾರ್ವಜನಿಕವಾಗಿ ಘನಪಡಿಸುವುದೇ ಆಗಿದೆ. ನಾವು ಯಾವುದರಿಂದ ಯೆಹೋವನನ್ನು ಸನ್ಮಾನಿಸಬಹುದೊ ಆ ಅಮೂಲ್ಯ ವಸ್ತುಗಳು, ನಮ್ಮ ಸಮಯ, ನಮ್ಮ ಹುಟ್ಟುಸಾಮರ್ಥ್ಯಗಳು ಮತ್ತು ನಮ್ಮ ಭೌತಿಕ ಸ್ವತ್ತುಗಳಾಗಿವೆ. ಇವು ಪ್ರಥಮಫಲಗಳಾಗಿರಬೇಕು, ಅಂದರೆ ಸರ್ವೋತ್ಕೃಷ್ಟವಾದವುಗಳು ಆಗಿರಬೇಕು. ನಾವು ನಮ್ಮ ವೈಯಕ್ತಿಕ ಸಂಪನ್ಮೂಲಗಳನ್ನು ಉಪಯೋಗಿಸುವ ರೀತಿಯಲ್ಲಿ, ನಾವು ‘ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ಆತನ ನೀತಿಗಾಗಿಯೂ ತವಕಪಡುತ್ತೇವೆ’ ಎಂಬ ನಮ್ಮ ದೃಢನಿಶ್ಚಯವನ್ನು ಪ್ರತಿಬಿಂಬಿಸಬಾರದೊ?—ಮತ್ತಾಯ 6:33.
ನಾವು ಯೆಹೋವನನ್ನು ನಮ್ಮ ಅಮೂಲ್ಯ ವಸ್ತುಗಳಿಂದ ಸನ್ಮಾನಿಸಿದರೆ ನಮಗೆ ತಕ್ಕ ಪ್ರತಿಫಲವು ಸಿಗದೆ ಹೋಗುವುದಿಲ್ಲ. “ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿ ತುಳುಕುವದು” ಎಂದು ಸೊಲೊಮೋನನು ಆಶ್ವಾಸನೆ ಕೊಡುತ್ತಾನೆ. (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 3:10) ಆತ್ಮಿಕ ಸಮೃದ್ಧಿ ಇದ್ದ ಮಾತ್ರಕ್ಕೆ ಭೌತಿಕ ಸಮೃದ್ಧಿಯೂ ಪ್ರಾಪ್ತವಾಗುವುದೆಂಬುದು ಇದರ ಅರ್ಥವಲ್ಲ. ಆದರೆ, ಯೆಹೋವನನ್ನು ಸನ್ಮಾನಿಸಲಿಕ್ಕಾಗಿ ನಮ್ಮ ಸಾಧನ ಸಂಪತ್ತುಗಳನ್ನು ಉದಾರವಾಗಿ ಬಳಸುವುದು ನಮಗೆ ಹೇರಳವಾದ ಆಶೀರ್ವಾದಗಳನ್ನು ತರುತ್ತದೆ. ದೇವರ ಚಿತ್ತವನ್ನು ಮಾಡುವುದು ಯೇಸುವಿಗೆ “ಆಹಾರ”ವಾಗಿತ್ತು. (ಯೋಹಾನ 4:34) ತದ್ರೀತಿಯಲ್ಲಿ, ಯೆಹೋವನನ್ನು ಮಹಿಮೆಪಡಿಸುವಂತಹ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವುದು, ನಮ್ಮನ್ನು ಪೋಷಿಸುತ್ತದೆ. ನಾವು ಆ ಕೆಲಸವನ್ನು ಪಟ್ಟುಹಿಡಿದು ಮಾಡುವಲ್ಲಿ, ನಮ್ಮ ಆತ್ಮಿಕ ಕಣಜಗಳು ಯಾವಾಗಲೂ ತುಂಬಿಕೊಂಡಿರುವವು. ದ್ರಾಕ್ಷಾರಸದಿಂದ ಸಂಕೇತಿಸಲ್ಪಟ್ಟಿರುವ ನಮ್ಮ ಆನಂದವು ತುಂಬಿತುಳುಕುವುದು.
ಪ್ರತಿ ದಿನಕ್ಕೆ ಸಾಕಾಗುವಷ್ಟು ಆಹಾರವನ್ನು ಕೊಡುವಂತೆಯೂ ನಾವು ಯೆಹೋವನ ಕಡೆ ನೋಡಿ ಆತನಿಗೆ ಪ್ರಾರ್ಥಿಸುವುದಿಲ್ಲವೊ? (ಮತ್ತಾಯ 6:11) ವಾಸ್ತವದಲ್ಲಿ, ನಮ್ಮ ಬಳಿ ಇರುವಂಥದ್ದೆಲ್ಲವೂ ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯಿಂದ ಬಂದದ್ದಾಗಿದೆ. ನಾವು ಎಷ್ಟರ ಮಟ್ಟಿಗೆ ನಮ್ಮ ಅಮೂಲ್ಯ ವಸ್ತುಗಳನ್ನು ಉಪಯೋಗಿಸುತ್ತೇವೊ ಅಷ್ಟರ ಮಟ್ಟಿಗೆ ಯೆಹೋವನು ಇನ್ನೂ ಹೆಚ್ಚಿನ ಆಶೀರ್ವಾದಗಳ ಮಳೆಗರೆಯುವನು.—1 ಕೊರಿಂಥ 4:7.
ಯೆಹೋವನ ಶಿಸ್ತನ್ನು ಸಂತೋಷದಿಂದ ಸ್ವೀಕರಿಸಿರಿ
ಯೆಹೋವನೊಂದಿಗೆ ಆಪ್ತರಾಗುವುದರಲ್ಲಿ ಶಿಸ್ತಿನ ಮಹತ್ವವನ್ನು ಗಮನಿಸುತ್ತಾ, ಇಸ್ರಾಯೇಲಿನ ರಾಜನು ನಮಗೆ ಬುದ್ಧಿವಾದ ನೀಡುವುದು: “ಮಗನೇ, ಯೆಹೋವನ ಶಿಕ್ಷೆಯನ್ನು [“ಶಿಸ್ತನ್ನು,” NW] ತಾತ್ಸಾರಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:11, 12.
ಆದರೆ ಶಿಸ್ತನ್ನು ಸ್ವೀಕರಿಸುವುದು ಸುಲಭವಾಗಿರಲಿಕ್ಕಿಲ್ಲ. “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 12:11) ಗದರಿಕೆ ಮತ್ತು ಶಿಸ್ತು, ನಮ್ಮನ್ನು ದೇವರೊಂದಿಗೆ ಹೆಚ್ಚು ಆಪ್ತರನ್ನಾಗಿ ಮಾಡುವ ತರಬೇತಿಯ ಒಂದು ಅತ್ಯಾವಶ್ಯಕ ಭಾಗವಾಗಿವೆ. ಯೆಹೋವನಿಂದ ಬರುವ ತಿದ್ದುಪಾಟು—ಅದು ಹೆತ್ತವರಿಂದ, ಕ್ರೈಸ್ತ ಸಭೆಯ ಮೂಲಕ ಅಥವಾ ನಮ್ಮ ವೈಯಕ್ತಿಕ ಅಭ್ಯಾಸದ ಸಮಯದಲ್ಲಿ ಶಾಸ್ತ್ರವಚನಗಳ ಕುರಿತು ಮನನ ಮಾಡುವುದರಿಂದ ಬರಲಿ—ನಮಗಾಗಿ ಆತನಿಗಿರುವ ಪ್ರೀತಿಯ ಅಭಿವ್ಯಕ್ತಿಯಾಗಿದೆ. ನಾವು ಅದನ್ನು ಸಂತೋಷದಿಂದ ಸ್ವೀಕರಿಸಿದರೆ ಬುದ್ಧಿವಂತರು.
ವಿವೇಕ ಮತ್ತು ವಿವೇಚನಾಶಕ್ತಿಯನ್ನು ಭದ್ರವಾಗಿ ಹಿಡಿದುಕೊಳ್ಳಿರಿ
ದೇವರೊಂದಿಗೆ ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳುವುದರಲ್ಲಿ, ವಿವೇಕ ಮತ್ತು ವಿವೇಚನಾಶಕ್ತಿಯ ಮಹತ್ವವನ್ನು ಸೊಲೊಮೋನನು ಮುಂದೆ ಎತ್ತಿಹೇಳುತ್ತಾನೆ. ಅವನು ಘೋಷಿಸುವುದು: “ಜ್ಞಾನವನ್ನು [“ವಿವೇಕವನ್ನು,” NW] ಪಡೆಯುವವನು ಧನ್ಯನು, ವಿವೇಕವನ್ನು [“ವಿವೇಚನಾಶಕ್ತಿಯನ್ನು,” NW] ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. . . . ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ [“ಭದ್ರವಾಗಿ ಹಿಡಿದುಕೊಳ್ಳುವ,” NW] ಪ್ರತಿಯೊಬ್ಬನೂ ಧನ್ಯನು.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:13-18.
ಯೆಹೋವನ ಅದ್ಭುತ ಸೃಷ್ಟಿಕಾರ್ಯಗಳಲ್ಲಿ ಪ್ರದರ್ಶಿಸಲ್ಪಟ್ಟಿರುವ ವಿವೇಕ ಮತ್ತು ವಿವೇಚನಾಶಕ್ತಿಯ ಕುರಿತು ನಮಗೆ ಜ್ಞಾಪಕಹುಟ್ಟಿಸುತ್ತಾ ಆ ರಾಜನು ತಿಳಿಸುವುದು: “ಯೆಹೋವನು ಜ್ಞಾನದ [“ವಿವೇಕದ,” NW] ಮೂಲಕ ಭೂಮಿಯನ್ನು ಸ್ಥಾಪಿಸಿ ವಿವೇಕದ [“ವಿವೇಚನಾಶಕ್ತಿಯ,” NW] ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು. . . . ಮಗನೇ, ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವವು.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:19-22.
ವಿವೇಕ ಮತ್ತು ವಿವೇಚನಾಶಕ್ತಿಗಳು ದೈವಿಕ ಗುಣಗಳಾಗಿವೆ. ನಾವು ಅವುಗಳನ್ನು ಬೆಳೆಸಿಕೊಳ್ಳಬೇಕು ಮಾತ್ರವಲ್ಲ, ಅವುಗಳನ್ನು ಭದ್ರವಾಗಿ ಹಿಡಿದುಕೊಂಡಿರಬೇಕು. ಇದಕ್ಕಾಗಿ ನಾವು ಶಾಸ್ತ್ರವಚನಗಳ ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಕಲಿತುಕೊಳ್ಳುವ ವಿಷಯಗಳನ್ನು ಅನ್ವಯಿಸುವ ಕುರಿತು ಎಂದೂ ಅಲಕ್ಷ್ಯ ತೋರಿಸಬಾರದು. “ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ” ಎಂದು ಸೊಲೊಮೋನನು ಮುಂದುವರಿಸುತ್ತಾನೆ. “ನೀನು ಮಲಗುವಾಗ ಹೆದರಿಕೆ ಇರುವದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ” ಎಂದು ಕೂಡಿಸಿ ಹೇಳುತ್ತಾನೆ. (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:23, 24.
ಹೌದು, ಸೈತಾನನ ದುಷ್ಟ ಲೋಕದ ಮೇಲೆ “ನಾಶನ” ದಿನವು ಕಳ್ಳನಂತೆ ಬರುತ್ತಿರುವುದನ್ನು ಕಾಯುತ್ತಿರುವಾಗ, ನಾವು ನಿರ್ಭಯವಾಗಿ ನಡೆದಾಡಬಹುದು ಮತ್ತು ಮನಶ್ಶಾಂತಿಯಿಂದ ನಿದ್ರಿಸಬಲ್ಲೆವು. (1 ಥೆಸಲೊನೀಕ 5:2, 3; 1 ಯೋಹಾನ 5:19) ಸಮೀಪಿಸುತ್ತಿರುವ ಮಹಾ ಸಂಕಟದ ಸಮಯದಲ್ಲೂ ನಮಗೆ ಈ ಆಶ್ವಾಸನೆಯಿರಬಲ್ಲದು: “ಫಕ್ಕನೆ ಬರುವ ಅಪಾಯಕ್ಕಾಗಲಿ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವದೇ ಇಲ್ಲ. ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು ನಿನ್ನ ಕಾಲು ಪಾಶಕ್ಕೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:25, 26; ಮತ್ತಾಯ 24:21.
ಒಳ್ಳೇದನ್ನು ಮಾಡಿರಿ
“ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ” ಎಂದು ಸೊಲೊಮೋನನು ಬುದ್ಧಿವಾದ ನೀಡುತ್ತಾನೆ. (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 3:27) ಇತರರಿಗಾಗಿ ಒಳ್ಳೆಯದನ್ನು ಮಾಡುವುದರಲ್ಲಿ, ಅವರ ಪರವಾಗಿ ನಮ್ಮ ಸಂಪನ್ಮೂಲಗಳನ್ನು ಉದಾರಭಾವದಿಂದ ಉಪಯೋಗಿಸುವುದು ಒಳಗೂಡಿರುತ್ತದೆ, ಮತ್ತು ಇದನ್ನು ಅನೇಕ ವಿಧಗಳಲ್ಲಿ ಮಾಡಸಾಧ್ಯವಿದೆ. ಆದರೆ ಈ ‘ಅಂತ್ಯಕಾಲದಲ್ಲಿ’ ನಾವು ಇತರರಿಗಾಗಿ ಮಾಡಬಹುದಾದ ಅತಿ ಶ್ರೇಷ್ಠವಾದ ಕೆಲಸವು, ಸತ್ಯ ದೇವರೊಂದಿಗೆ ಅವರು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುವುದೇ ಆಗಿದೆ ಅಲ್ಲವೇ? (ದಾನಿಯೇಲ 12:4) ಆದುದರಿಂದ, ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪನ್ನು ತೋರಿಸುವ ಸಮಯವು ಇದೇ ಆಗಿದೆ.—ಮತ್ತಾಯ 28:19, 20.
ನಾವು ದೂರವಿರಿಸಬೇಕಾದ ಕೆಲವೊಂದು ವರ್ತನೆಗಳನ್ನೂ ಆ ವಿವೇಕಿ ರಾಜನು ಪಟ್ಟಿಮಾಡುತ್ತಾನೆ: “ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ—ಹೋಗಿ ಬಾ, ನಾಳೆ ಕೊಡುತ್ತೇನೆ ಎಂದು ಹೇಳಬೇಡ. ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ. ನಿನಗೆ ಅಪಕಾರಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ. ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:28-31.
ತನ್ನ ಸಲಹೆಗೆ ಕಾರಣವನ್ನು ಸಾರಾಂಶಿಸುತ್ತಾ ಸೊಲೊಮೋನನು ಹೇಳುವುದು: “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು. ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು. ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುವನು. ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು; ಜ್ಞಾನಹೀನರಿಗಾಗುವ ಬಹುಮಾನವೋ ಅವಮಾನವೇ.” (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 3:32-35.
ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಅನುಭವಿಸಬೇಕಾದರೆ, ಕುಟಿಲವಾದ ಮತ್ತು ಹಾನಿಕರವಾದ ಸಂಚುಗಳನ್ನು ಹೂಡಬಾರದು. (ಜ್ಞಾನೋಕ್ತಿ 6:16-19) ದೇವರ ದೃಷ್ಟಿಯಲ್ಲಿ ಸರಿಯಾಗಿರುವ ಕೆಲಸವನ್ನು ನಾವು ಮಾಡಿದರೆ ಮಾತ್ರ, ನಮಗೆ ಆತನ ಅನುಗ್ರಹ ಮತ್ತು ಆಶೀರ್ವಾದವು ದೊರಕುವುದು. ನಾವು ದೈವಿಕ ವಿವೇಕಕ್ಕನುಗುಣವಾಗಿ ಕೆಲಸಮಾಡುತ್ತೇವೆಂಬುದನ್ನು ಇತರರು ಗಮನಿಸುವಾಗ, ನಾವು ಅರಸಿಕೊಂಡು ಹೋಗದಿದ್ದ ಸನ್ಮಾನವೂ ನಮಗೆ ದೊರಕಬಹುದು. ಆದುದರಿಂದ, ಈ ದುಷ್ಟ ಮತ್ತು ಹಿಂಸಾತ್ಮಕ ಲೋಕದ ಕುಟಿಲ ಮಾರ್ಗಗಳನ್ನು ನಾವು ತಿರಸ್ಕರಿಸೋಣ. ಹೌದು, ಯಥಾರ್ಥವಾದ ಮಾರ್ಗಕ್ರಮವನ್ನು ಬೆನ್ನಟ್ಟಿ, ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳೋಣ!
[ಪುಟ 25ರಲ್ಲಿರುವ ಚಿತ್ರಗಳು]
“ಯೆಹೋವನನ್ನು ನಿನ್ನ ಅಮೂಲ್ಯ ವಸ್ತುಗಳೊಂದಿಗೆ ಸನ್ಮಾನಿಸು”