ಯುವ ಜನರು ಪ್ರಶ್ನಿಸುವುದು . . .
ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸುವುದು ಯಾಕೆ ಅಷ್ಟೊಂದು ಕಠಿನವಾಗಿದೆ?
“ನೀವು ಯುವಪ್ರಾಯದಲ್ಲಿರುವಾಗ ಲೈಂಗಿಕ ವಿಷಯದ ಕುರಿತಾದ ನಿಮ್ಮ ಕುತೂಹಲವು ಅತ್ಯಂತ ಪ್ರಾಮುಖ್ಯವಾದ ವಿಚಾರವಾಗಿದೆ” ಎಂದು ಯುವತಿ ಲರೇನ್ ವಿವರಿಸಿದಳು. “ಲೈಂಗಿಕ ವಿಚಾರಗಳಲ್ಲಿ ನೀವು ಹೆಚ್ಚೆಚ್ಚು ಮಗ್ನವಾಗಿರುತ್ತೀರಿ.”
ವಿರುದ್ಧ ಲಿಂಗದವರ ಕುರಿತು ಯೋಚಿಸುತ್ತಾ, ಅವರ ಕುರಿತು ಮಾತಾಡುತ್ತಾ, ಅಥವಾ ಅವರ ಕಡೆಗೆ ನೋಡುತ್ತಾ ಎಚ್ಚರವಾಗಿರುವ ನಿಮ್ಮ ಹೆಚ್ಚಿನ—ತೀರ ಹೆಚ್ಚಲ್ಲದ್ದಿದರೂ—ತಾಸುಗಳನ್ನು ನೀವು ಕಳೆಯುತ್ತೀರೊ? ನಿಮ್ಮ ಶಾಲಾಮನೆಗೆಲಸವನ್ನು ಪೂರ್ಣಗೊಳಿಸಲು ನೀವು ಕುಳಿತುಕೊಂಡಿರುವಾಗ, ಆ ಅಪರಾಹ್ನ ನೀವು ನೋಡಿದ ಯಾವನೋ ಆಕರ್ಷಕ ಹುಡುಗ ಅಥವಾ ಮೋಹಕ ಹುಡುಗಿಯ ಕುರಿತಾದ ಒಂದು ಹಗಲುಗನಸಿನ ಪ್ರವಾಹದಲ್ಲಿ ತೇಲಿಹೋಗುತ್ತೀರೋ? ಆಕರ್ಷಕನಾದ ದಾರಿಹೋಕನ ಕಡೆಗೆ ಕಳ್ಳ ನೋಟಗಳನ್ನು ಬೀರುವ ಮೂಲಕ ನಿಮ್ಮ ಸಂಭಾಷಣೆಗಳು ಮಧ್ಯೆಮಧ್ಯೆ ತಡೆಗಟ್ಟಲ್ಪಡುತ್ತವೊ? ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸುವುದು ನಿಮ್ಮಿಂದ ಸಾಧ್ಯವಾಗದ ಕಾರಣದಿಂದ ಮಾತ್ರವೇ ಓದಲು, ಅಭ್ಯಸಿಸಲು, ಅಥವಾ ಕ್ರೈಸ್ತ ಕೂಟಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಸಹ ಮನಸ್ಸನ್ನು ಕೇಂದ್ರೀಕರಿಸಲು ನಿಮಗೆ ಕಷ್ಟವಾಗಿದೆಯೆ?
ಹಾಗಿರುವುದಾದರೆ, ನೀವು ಉನ್ಮತ್ತರಾಗುತ್ತಿದ್ದೀರೆಂದು ನೀವು ಭಯಪಡಬಹುದು! ಒಬ್ಬ ಯೌವನಸ್ಥನು ನಿವೇದಿಸಿದ್ದು: “ನಾನು ಲೈಂಗಿಕತೆಯ ಅಥವಾ ಯಾವುದೋ ಒಂದು ವಿಷಯದ ಗೀಳುಹಿಡಿದವನಾಗಿರಬಹುದೆಂದು ಎಣಿಸುತ್ತೇನೆ. ಅಂದರೆ, ನಾನು ಅನೇಕವೇಳೆ ಕಲ್ಪನಾ ರಾಜ್ಯದಲ್ಲಿ ವಿಹರಿಸುತ್ತಾ, ಹುಡುಗಿಯರ ಕುರಿತು ಯೋಚಿಸುತ್ತಿದ್ದೇನೆ. . . ನಾನು ಮಾನಸಿಕವಾಗಿ ಸ್ತಿಮಿತದಲ್ಲಿದ್ದೇನೆಂದು ನೀವು ಅಭಿಪ್ರಯಿಸುವಿರೊ?” ಬರಹಗಾರ್ತಿ ಲಿಂಡ ಮಡೇರಸ್ ದಾಖಲಿಸುವಂತೆ, ನೀವು ಯುವಪ್ರಾಯದಲ್ಲಿರುವಾಗ “ಭಾವೋದ್ರೇಕದ ಅಥವಾ ಲೈಂಗಿಕ ಭಾವನೆಗಳು ಹೆಚ್ಚು ಬಲವಾಗಿರಸಾಧ್ಯವಿದೆ. ಆಗಾಗ, ನೀವು ಯೋಚಿಸಸಾಧ್ಯವಿರುವುದೆಲ್ಲವೂ ಭಾವೋದ್ರೇಕ ಅಥವಾ ಲೈಂಗಿಕ ವಿಷಯಗಳ ಕುರಿತಾಗಿದೆಯೋ ಎಂಬಂತೆ ಸಹ ಭಾಸವಾಗಬಹುದು!”a
ಲೈಂಗಿಕ ಭಾವನೆಗಳು ಸ್ವತಃ ಕೆಡುಕಿನದ್ದಾಗಿರುವುದಿಲ್ಲ. ದೇವರು ಪುರುಷ ಮತ್ತು ಸ್ತ್ರೀಯನ್ನು ಪರಸ್ಪರವಾಗಿ ಒಂದು ಬಲವಾದ ಆಕರ್ಷಣೆಯೊಂದಿಗೆ ಸೃಷ್ಟಿ ಮಾಡಿದನು. ಅವರು ವಿವಾಹವಾಗಿ, ನೀತಿವಂತ ಸಂತಾನದಿಂದ “ಭೂಮಿಯಲ್ಲಿ ತುಂಬಿ”ಕೊಳ್ಳುವ ಆತನ ಉದ್ದೇಶದೊಂದಿಗೆ ಇದು ಸಮನ್ವಯವಾಗಿತ್ತು. (ಆದಿಕಾಂಡ 1:28) ವಿವಾಹಿತ ದಂಪತಿಗಳಿಗೆ ಲೈಂಗಿಕ ಸಂಬಂಧಗಳು ಮಹತ್ತಾದ ಆನಂದದ ಒಂದು ಮೂಲವಾಗಿರಬಲ್ಲವು ಎಂದು ತೋರಿಸುವುದರಲ್ಲಿ ಬೈಬಲು ಸಹ ತೀರ ಮುಚ್ಚುಮರೆ ಇಲ್ಲದ್ದಾಗಿದೆ.—ಜ್ಞಾನೋಕ್ತಿ 5:19.
ಅಪರಿಪೂರ್ಣ ಮಾನವರೋಪಾದಿ ಅನೇಕವೇಳೆ ನಮ್ಮ ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ನಮಗೆ ಕಷ್ಟವಿರುವುದು ಸಮಸ್ಯೆಯಾಗಿದೆ. (ಹೋಲಿಸಿ ಆದಿಕಾಂಡ 6:5.) “ಶರೀರದಾಶೆ”ಯು ತಡೆಯಲಸಾಧ್ಯವಾದಷ್ಟು ಪ್ರಬಲವಾಗಿ ಭಾಸವಾಗಬಲ್ಲದು! (1 ಯೋಹಾನ 2:16) ಮತ್ತು ನೀವು ಯೌವನಸ್ಥರಾಗಿರುವುದರಿಂದ, ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸುವುದು ನಿಮಗೆ ನಿರ್ದಿಷ್ಟವಾಗಿ ಕಠಿನವಾಗಿರಬಹುದು. ಇದು ಏಕೆ?
ಪ್ರೌಢಾವಸ್ಥೆಯ ಒತ್ತಡಗಳು
ಲೈಂಗಿಕ ಅಪೇಕ್ಷೆಗಳು ತಮ್ಮ ಪರಮಾವಧಿಯಲ್ಲಿರುವ ಸಮಯವಾದ, “ಯೌವನಾವಸ್ಥೆ”ಯನ್ನು ನೀವು ಸಮೀಪಿಸುತ್ತಿರುವುದು ಒಂದು ಕಾರಣವಾಗಿದೆ. (1 ಕೊರಿಂಥ 7:36, NW) ಡಾ. ಬೆಟಿ ಬಿ. ಯಂಗ್ಸ್ ವಿವರಿಸುವುದು: “ಪ್ರೌಢಾವಸ್ಥೆಯಲ್ಲಿ ಹಾರ್ಮೋನ್ಗಳ ಮಟ್ಟಗಳು ನಾಟಕೀಯವಾಗಿ ಅಧಿಕಗೊಳ್ಳುತ್ತವೆ. ಒಂದು ಮಗುವಿನ ದೇಹವನ್ನು ಪ್ರೌಢನ ದೇಹವನ್ನಾಗಿ ರೂಪಾಂತರಿಸುವ ಎಲ್ಲಾ ಶಾರೀರಿಕ ಬದಲಾವಣೆಗಳನ್ನು ಆರಂಭಿಸಲು ಇವು ಕಾರಣವಾಗಿವೆ. ಹಾರ್ಮೋನ್ಗಳ ಅಧಿಕಗೊಳ್ಳುತ್ತಿರುವ ಮಟ್ಟಗಳೊಂದಿಗೆ ಹರೆಯವು ಜೊತೆಗೂಡಿಸಲ್ಪಟ್ಟು, ಅನೇಕ ಭಾವನಾತ್ಮಕ ಮತ್ತು ನಡವಳಿಕೆಯ ಬದಲಾವಣೆಗಳನ್ನು ಹೊರಪಡಿಸುತ್ತದೆ.”
ಯಾವ ರೀತಿಯ ಬದಲಾವಣೆಗಳು? ಹೌದು, ಅತ್ಯಂತ ದೊಡ್ಡ ಬದಲಾವಣೆಗಳು ಅನೇಕವೇಳೆ ವಿರುದ್ಧ ಲಿಂಗದ ಕಡೆಗಿನ ಒಬ್ಬನ ಭಾವನೆಗಳನ್ನು ಒಳಗೊಳ್ಳುತ್ತವೆ. ಬರಹಗಾರ್ತಿ ರೂತ್ ಬೆಲ್ ಹೇಳುವುದು: “ಪ್ರೌಢಾವಸ್ಥೆಯ ದೈಹಿಕ ಬದಲಾವಣೆಗಳು ಅನೇಕವೇಳೆ ಪ್ರಬಲವಾದ ಲೈಂಗಿಕ ಭಾವನೆಗಳನ್ನು ತರುತ್ತವೆ. ಲೈಂಗಿಕತೆಯ ಕುರಿತು ಹೆಚ್ಚು ಆಲೋಚಿಸುತ್ತಾ, ಹೆಚ್ಚು ಸುಲಭವಾಗಿ ಲೈಂಗಿಕವಾಗಿ ಉದ್ರೇಕಿಸಲ್ಪಡುತ್ತಾ, ಆಗಾಗ ಲೈಂಗಿಕತೆಯಲ್ಲಿಯೇ ಮಗ್ನರಾಗಿರುವಂತೆ ನಿಮ್ಮನ್ನು ನೀವು ಕಂಡುಕೊಳ್ಳಬಹುದು. ದಾರಿಯಲ್ಲಿ ನಡೆಯುತ್ತಿರುವಾಗ ಅಥವಾ ಬಸ್ಸಿನಲ್ಲಿ ಕುಳಿತಿರುವಾಗ, ಲೈಂಗಿಕ ಶಕ್ತಿ ಮತ್ತು ಉದ್ರೇಕದಿಂದ ತಮ್ಮ ಇಡೀ ದೇಹವು ಬೆಂಕಿಯಲ್ಲಿದೆಯೋ ಎಂಬಂತಹ ಅನಿಸಿಕೆಯ ಕುರಿತು [ಲೇಖಕರು ಸಂದರ್ಶನ ಮಾಡಿದ] ಹದಿಪ್ರಾಯದ ಅನೇಕರು ವಿವರಿಸಿದರು.” ಯುವ ಜನರು ನಿಭಾಯಿಸಬೇಕಾದ ಅನೇಕ “ಯೌವನದ ಇಚ್ಛೆ”ಗಳಲ್ಲಿ, ವಿರುದ್ಧ ಲಿಂಗದೊಂದಿಗಿನ ಅಂತಹ ವಿಷಯಮಗ್ನತೆಯು ಒಂದಾಗಿದೆ.—2 ತಿಮೊಥೆಯ 2:22.
ಮಾಧ್ಯಮ ಮತ್ತು ಸ್ನೇಹಿತರ ಪ್ರಭಾವ
ಆದಾಗ್ಯೂ, ಈ ಅಪೇಕ್ಷೆಯ ಜ್ವಾಲೆಯು ಅನೇಕವೇಳೆ ಹೊರಗಿನ ಪ್ರಭಾವಗಳಿಂದ ಉದ್ದೀಪಿಸಲ್ಪಡುತ್ತದೆ. ಟೆಲಿವಿಷನ್ ಕಾರ್ಯಕ್ರಮಗಳು, ಜಾಹೀರಾತು, ಪುಸ್ತಕಗಳು, ಪತ್ರಿಕೆಗಳು, ಸಂಗೀತ ಮತ್ತು ಚಲನಚಿತ್ರಗಳ ಮೂಲಕ ಲೈಂಗಿಕ ಚಟುವಟಿಕೆಯನ್ನು ಪ್ರಚೋದಿಸಲು ತೀರ್ಮಾನಿಸಿರುವ ಒಂದು ಸಮಾಜದಲ್ಲಿ ನಾವು ಜೀವಿಸುತ್ತೇವೆ. ಲೈಂಗಿಕವಾಗಿ ತಪ್ಪು ನಡವಳಿಕೆಯಲ್ಲಿ ಬಿದ್ದಂತಹ ಕ್ರೈಸ್ತ ಯೌವನಸ್ಥನೊಬ್ಬನು ವರದಿಸುವುದು: “ಲಂಪಟ ಸಾಹಿತ್ಯವು ಶಾಲೆಯಲ್ಲಿ ತೀರ ಸಾಮಾನ್ಯವಾಗಿದೆ, ಮತ್ತು ಲೈಂಗಿಕತೆಗಾಗಿ ನಿಜವಾದ ಹಂಬಲಿಕೆಯನ್ನು ಇದು ಉಂಟುಮಾಡುತ್ತದೆ. ಯಾವುದು ಸರಿಯೆಂದು ನನಗೆ ಗೊತ್ತಿತ್ತು, ಆದರೆ ನನ್ನ ಲೈಂಗಿಕ ಭಾವನೆಗಳು ಪ್ರಬಲವಾಗಿದ್ದವು.”
ಆದುದರಿಂದ ಹೆತ್ತವರಿಗಾಗಿ ಬರೆಯಲ್ಪಟ್ಟಿರುವ ಒಂದು ಪುಸ್ತಕವು ಹೇಳುವುದು: “ಮಾಧ್ಯಮವು ಅಗಾಧವಾದ ಪ್ರಭಾವವನ್ನು ಹೊಂದಿದೆ. ತಮ್ಮಷ್ಟೇ ಪ್ರಾಯದ ಯುವ ರೂಪದರ್ಶಿಗಳು ಲೈಂಗಿಕವಾಗಿ ಅಭಿನಯಿಸುವುದನ್ನು ಮತ್ತು ಲೈಂಗಿಕ ವಸ್ತ್ರಗಳನ್ನು ಮಾರುವುದನ್ನು ನಮ್ಮ ಹದಿಪ್ರಾಯಸ್ಥರು ನೋಡುತ್ತಾರೆ; ಚಲನಚಿತ್ರಗಳಲ್ಲಿ ಮತ್ತು ಟೆಲಿವಿಷನ್ನಲ್ಲಿ ಪ್ರವರ್ತಿಸಲ್ಪಡುವ ತಾರುಣ್ಯದ ಲೈಂಗಿಕತೆಯನ್ನು ಅವರು ನೋಡುತ್ತಾರೆ.” ವಾಸ್ತವವಾಗಿ, ಕೇಬಲ್ ಟೆಲಿವಿಷನ್ ಮತ್ತು ವಿಡಿಯೋಕ್ಯಾಸೆಟ್ ರೆಕಾರ್ಡರ್ಗಳು ಅನೇಕ ಯುವ ಜನರಿಗೆ ಲಂಪಟ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಸುಲಭವಾದ ಪ್ರವೇಶಮಾರ್ಗವನ್ನು ಕೊಟ್ಟಿವೆ. “ಒಬ್ಬ ಯುವ ವ್ಯಕ್ತಿಯ ಅಪೇಕ್ಷೆಗಳನ್ನು ಮತ್ತು ಕುತೂಹಲವನ್ನು ಮಾಧ್ಯಮವು ಉದ್ರೇಕಿಸುತ್ತದೆ” ಎಂದು ಒಬ್ಬ ಯೌವನಸ್ಥನು ಒಪ್ಪಿಕೊಳ್ಳುತ್ತಾನೆ.
ಹಾಗಿದ್ದರೂ, ಒಂದು ಪುಸ್ತಕವು ಅಹಿತಕರವಾಗಿರಲು ಪ್ರತಿಯೊಂದು ಪುಟದಲ್ಲಿ ವಿಷಯಲಂಪಟವಾಗಿರಬೇಕಾದ ಅಗತ್ಯವಿಲ್ಲ. ಕ್ರೈಸ್ತ ಯುವತಿಯೊಬ್ಬಳ ಅನುಭವವನ್ನು ಪರಿಗಣಿಸಿ. ಅವಳು ಜ್ಞಾಪಿಸಿಕೊಳ್ಳುವುದು: “ಲೈಂಗಿಕತೆಗೆ ಸಂಬಂಧಿಸಿದ ಕೇವಲ ಒಂದು ಯಾ ಎರಡು ಪ್ಯಾರಗ್ರಾಫ್ಗಳಿದ್ದ ಒಂದು ಸಭ್ಯವಾದ ಪುಸ್ತಕವನ್ನು ನಾನು ಓದಿದೆ. ಆ ಪ್ಯಾರಗ್ರಾಫ್ಗಳನ್ನು ಬಿಟ್ಟು ನಾನು ಓದಲಾರಂಭಿಸಿದೆ, ಆದರೆ ಯಾವುದೋ ಒಂದು ವಿಷಯವು ನಾನು ಹಿಂದಿರುಗುವಂತೆ ಮತ್ತು ಅವುಗಳನ್ನು ಓದುವಂತೆ ಮಾಡಿತು. ಅದು ಎಂತಹ ಒಂದು ತಪ್ಪಾಗಿತ್ತು! ಅದರ ಫಲಿತಾಂಶವಾಗಿ ನನಗೆ ಭಯಂಕರವಾದ ಸ್ವಪ್ನಗಳು ಬಿದ್ದವು.”
ನಿಮ್ಮ ಸ್ನೇಹಿತರು ಮತ್ತು ಸಹವಾಸಿಗಳು ಸಹ ನಿಮ್ಮ ಆಲೋಚನೆಯ ಮೇಲೆ ಒಂದು ದೊಡ್ಡ ಪ್ರಭಾವವನ್ನು ಹಾಕಬಲ್ಲರು. ತಾರುಣ್ಯದ ವಿಕಸನದ ಕುರಿತು ಒಂದು ಪುಸ್ತಕವು ಹೇಳುವುದು: “ದಾರಿಯ ತಿರುವುಗಳಲ್ಲಿ, ಶಾಲೆಯ ಹಾಲ್ಗಳಲ್ಲಿ, ಕ್ಯಾಫಿಟೇರಿಯಗಳಲ್ಲಿ, ಮತ್ತು ವಿಹಾರ ಮಾರ್ಗಗಳಲ್ಲಿ ಸಂಭವಿಸುವ ಹುಡುಗ ಮತ್ತು ಹುಡುಗಿಯ ದೃಷ್ಟಿಹರಿಸುವಿಕೆಗಳು ಸಾಮಾನ್ಯ ಕಾಲಕ್ಷೇಪಗಳಾಗಿವೆ.” ಮತ್ತು ಯುವ ಜನರು ವಿರುದ್ಧ ಲಿಂಗದವರ ಕಡೆಗೆ ದಿಟ್ಟಿಸು ನೋಡದಿರುವಾಗ, ಅವರು ಅನೇಕವೇಳೆ ಅವರ ಕುರಿತು ಮಾತಾಡುತ್ತಿರುತ್ತಾರೆ. “ನಾನು ಯೌವನಸ್ಥನಾಗಿದ್ದಾಗ, ಲೈಂಗಿಕತೆಯಲ್ಲಿ ಭಾಗವಹಿಸುವ ಒತ್ತಡಗಳು ತೀರ ಮಹತ್ತಾಗಿದ್ದವು . . . ಲಾಕರ್ ರೂಮ್ನಲ್ಲಿ ಎಲ್ಲರ ಮಾತು ಅದರ ಕುರಿತಾಗಿಯೇ ಇತ್ತು.” ಎಂದು 18 ವರ್ಷ ಪ್ರಾಯದ ರಾಬರ್ಟ್ ಒಪ್ಪಿಕೊಳ್ಳುತ್ತಾನೆ. ಇನ್ನೊಬ್ಬಳು ಯೌವನಸ್ಥೆ ಒಪ್ಪಿಕೊಳ್ಳುವುದು: “ಶಾಲೆಯ ಸಹಪಾಠಿಗಳಲ್ಲಿ ಲೈಂಗಿಕತೆಯು ಸಂಭಾಷಣೆಯ ಪ್ರಥಮ ಶ್ರೇಣಿಯ ವಿಷಯವಾಗಿತ್ತು, ಆದುದರಿಂದ ಲೈಂಗಿಕತೆಯು ಅನೇಕವೇಳೆ ನಿಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುತ್ತಿತ್ತು.”
ಬೇರೆಯಾಗಿ ನಿಲುವನ್ನು ತೆಗೆದುಕೊಳ್ಳುವುದು ಕಠಿನವಾಗಿದೆ. ನಿಮ್ಮ ಸಮಾನಸ್ಥರು ವಿರುದ್ಧ ಲಿಂಗದವರ ಕುರಿತು ಸತತವಾಗಿ ಮಾತಾಡುತ್ತಿರುವಾಗ—ಬಹುಶಃ ಕೀಳ್ಮಟ್ಟದ, ನೀತಿಗೆಡಿಸುವ ಒಂದು ರೀತಿಯಲ್ಲಿ—ಅವರೊಂದಿಗೆ ಜೊತೆಗೂಡುವಂತೆ ಅದು ಪ್ರೇರೇಪಿಸಸಾಧ್ಯವಿದೆ. ಆದರೆ ಬೈಬಲು ಎಚ್ಚರಿಸುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
ಸಮತೂಕದ ಅಗತ್ಯ
ವಿರುದ್ಧ ಲಿಂಗದವರ ಕುರಿತು ಮಾತಾಡಲು ಬಯಸುವುದು ಅಥವಾ ಗಮನಿಸುವುದು ತಪ್ಪಾಗಿದೆಯೆಂದು ಇದೆಲ್ಲವೂ ಅರ್ಥೈಸುತ್ತದೊ? ಇಲ್ಲ, ನಿರ್ದಿಷ್ಟ ಪುರುಷರು ಮತ್ತು ಸ್ತ್ರೀಯರು ಶಾರೀರಿಕವಾಗಿ ಆಕರ್ಷಕವಾಗಿದ್ದರು ಎಂಬ ಸಂಗತಿಯ ಕುರಿತು ಬೈಬಲಿನ ಬರಹಗಾರರು ಸಹ ದಾಖಲಿಸಿದರು. (ಹೋಲಿಸಿ 1 ಸಮುವೇಲ 9:2; ಎಸ್ತೇರಳು 2:7.) ಆದುದರಿಂದ, ಸ್ತ್ರೀಯೊಬ್ಬಳು ಆಕರ್ಷಕಳಾಗಿರುವುದನ್ನು ಗಮನಿಸಿದ್ದಕ್ಕಾಗಿ ಯೇಸು ಯಾರಾದರೊಬ್ಬರನ್ನು ಖಂಡಿಸಲಿಲ್ಲ. ಆದರೆ ‘ಅವಳೊಂದಿಗೆ ಮೋಹಗೊಳ್ಳುವಷ್ಟರ ಮಟ್ಟಿಗೆ ಸ್ತ್ರೀಯೊಬ್ಬಳ ಕಡೆಗೆ ನೋಡುತ್ತಾ’ ಇರಬಾರದೆಂದು ಅವನು ಕ್ರೈಸ್ತರಿಗೆ ಪ್ರಬೋಧಿಸಿದನು. (ಮತ್ತಾಯ 5:28) ತದ್ರೀತಿಯಲ್ಲಿ, ಕುರುಡಾದ ಮೋಹದಿಂದ ಪ್ರೇರಿಸಲ್ಪಡುವಂತೆ ನೀವು ಸ್ವತಃ ಅನುಮತಿಸದಿರಿ. 1 ಥೆಸಲೊನೀಕ 4:4, 5ರಲ್ಲಿ ನಮಗೆ ಹೇಳಲ್ಪಟ್ಟಿರುವುದು: “ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ತನ್ನ ದೇಹವನ್ನು ನಿಯಂತ್ರಿಸಿಕೊಳ್ಳಲು ಕಲಿಯಬೇಕು.”—ನ್ಯೂ ಇಂಟರ್ನ್ಯಾಷನಲ್ ವರ್ಷನ್.
ಆಗಾಗ್ಗೆ ಕಾಮ ಸಂಬಂಧವಾದ ಆಲೋಚನೆಗಳು ಮನಸ್ಸಿನೊಳಗೆ ಬರಬಹುದಾದರೂ, ಅವುಗಳಲ್ಲಿ ಲಕ್ಷ್ಯವಿಡುವುದು ಒಂದು ಗೀಳಾಗಿ ಪರಿಣಮಿಸಬಹುದು, ಮತ್ತು ಬಳಿಕ ಗಂಭೀರ ಸಮಸ್ಯೆಗಳು ವಿಕಸಿಸಬಹುದು. ಪ್ರಸಂಗಿ 5:3 ಹೇಳುವುದು: “ಕನಸು ಬಹು ಪ್ರಯಾಸದಿಂದಲೂ ಉಂಟಾಗುತ್ತದೆ.” ಹೌದು, ವೈಯಕ್ತಿಕ ಅಪೇಕ್ಷೆಗಳಿಂದ ತಲ್ಲೀನನಾಗಿರುವ ಒಬ್ಬನು ಅನೇಕವೇಳೆ ಅಸ್ವಸ್ಥಕರವಾದ ಭ್ರಾಂತಿಗಳನ್ನು ಮತ್ತು ಹಗಲುಗನಸುಗಳನ್ನು ಪೋಷಿಸಲು ಪ್ರಾರಂಭಿಸುತ್ತಾನೆ.b
ಆಗಾಗ್ಗೆ ಕಾಮಸಂಬಂಧವಾದ ಆಲೋಚನೆಗಳನ್ನು ಹೊಂದಿರುವುದು ಸಾಮಾನ್ಯವಾಗಿರುವುದಾದರೂ, ಅವುಗಳಲ್ಲಿ ಲಕ್ಷ್ಯವಿಡುವುದು ಇನ್ನೊಂದು ವಿಷಯವಾಗಿದೆ. ಬರಹಗಾರ್ತಿ ರೂತ್ ಬೆಲ್ ದಾಖಲಿಸುವುದೇನಂದರೆ “ಆಗಾಗ್ಗೆ ವ್ಯಕ್ತಿಯೊಬ್ಬನು ಬಹುಮಟ್ಟಿಗೆ ಇಡೀ ದಿನ ಮತ್ತು ರಾತ್ರಿಯನ್ನು ಭ್ರಾಂತಿಗಳಲ್ಲಿ ಕಳೆಯುತ್ತಿರುವಂತೆ ತನ್ನನ್ನು ಕಂಡುಕೊಳ್ಳುವನು. ಅವು ವಾಸ್ತವಿಕತೆಗಿಂತಲೂ ಹೆಚ್ಚು ನೈಜವಾದವುಗಳಾಗಿ ಕಂಡುಬರಬಹುದು.” ಮೋಹಪರವಶತೆಯಲ್ಲಿ ತನ್ನನ್ನು ಸಿಕ್ಕಿಸಿಕೊಂಡಿರುವ ಯುವತಿಯೊಬ್ಬಳನ್ನು ಪರಿಗಣಿಸಿರಿ. ಅವಳನ್ನುವುದು: “ನಾನು 12 1⁄2 ವರ್ಷ ಪ್ರಾಯದವಳು, ಮತ್ತು ನನ್ನ ರಾಜ್ಯ ಸಭಾಗೃಹಕ್ಕೆ ಹಾಜರಾಗುವ ಒಬ್ಬ ಹುಡುಗನ ಕುರಿತು ನಾನು ಪ್ರಬಲವಾದ ಭಾವನೆಯುಳ್ಳವಳಾಗಿದ್ದೇನೆ. ಪ್ರಣಯಾಚರಣೆ ನಡೆಸಲು ನಾನು ಸಾಕಷ್ಟು ದೊಡ್ಡವಳಾಗಿಲವ್ಲೆಂದು ನನಗೆ ಗೊತ್ತು. ಆದರೆ ಅವನ ಕಡೆಗಿನ ನನ್ನ ಭಾವಾವೇಶಗಳನ್ನು ನಿಯಂತ್ರಿಸುವುದು ನನಗೆ ತೀರ ಕಠಿನವಾಗಿದೆ.” ತದ್ರೀತಿಯ ಸಾಲುಗಳೊಂದಿಗೆ, ಅವರ ಮನಸ್ಸುಗಳು ಭಾವೂದ್ರೇಕದ ಅಥವಾ ಲೈಂಗಿಕವಾಗಿ ಉದ್ರೇಕಿಸುವ ಆಲೋಚನೆಗಳಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಿರುವುದರಿಂದ, ಕೆಲವು ಯುವ ಜನರು ಓದುವುದನ್ನು, ಅಭ್ಯಸಿಸುವುದನ್ನು, ತರಗತಿಯಲ್ಲಿ ಗಮನವನ್ನು ಕೇಂದ್ರೀಕರಿಸುವುದನ್ನು, ಅಥವಾ ಕ್ರೈಸ್ತ ಕೂಟಗಳಿಗಾಗಿ ತಯಾರಿಸುವುದನ್ನು ಕಷ್ಟವಾದದ್ದಾಗಿ ಕಂಡುಕೊಳ್ಳುತ್ತಾರೆ.
ಯೌವನಸ್ಥನೊಬ್ಬನು ಅಂತಹ ರೀತಿಯ ಉದ್ರೇಕವನ್ನು ಮುಷ್ಟಿಮೈಥುನದಿಂದ ಪರಿಹರಿಸಲು ಪ್ರಯತ್ನಿಸುವಾಗ ಸಹ ಗಂಭೀರವಾದ ಸಮಸ್ಯೆಗಳು ಫಲಿಸಬಲ್ಲವು. ಬೈಬಲು ಕ್ರೈಸ್ತರಿಗೆ ಒತ್ತಾಯಿಸುವುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:5) ಮುಷ್ಟಿ ಮೈಥುನವು ಒಂದು ಅಶುದ್ಧವಾದ ಹವ್ಯಾಸವಾಗಿದ್ದು, ಕ್ರೈಸ್ತರಿಂದ ತೊರೆಯಲ್ಪಡಬೇಕಾಗಿದೆ ಮತ್ತು ‘ಲೈಂಗಿಕ ಕಾಮನೆಯನ್ನು ನಿಶೇತ್ಚಗೊಳಿಸುವುದರ’ ತೀರ ವಿರುದ್ಧವಾಗಿದೆ. ಅದಕ್ಕೆ ಬದಲಾಗಿ ಅದು ಅದನ್ನು ಪ್ರಚೋದಿಸುತ್ತದೆ ಮತ್ತು ಅದನ್ನು ಪೋಷಿಸುತ್ತದೆ. ಅತಿ ಬೇಗನೆ ಅಂತಹ ಅಪೇಕ್ಷೆಯು ವಾಸ್ತವವಾಗಿ ಪರಿಣಮಿಸುತ್ತದೆ. ಬೈಬಲಿನ ಬರಹಗಾರನಾದ ಯಾಕೋಬನು ವಿವರಿಸುವುದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”—ಯಾಕೋಬ 1:14, 15.
ಹಾಗಾದರೆ, ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸಲಿಕ್ಕಾಗಿ ನೀವೇನು ಮಾಡಬಲ್ಲಿರಿ? ದಯಮಾಡಿ ಈ ಸರಣಿಯಲ್ಲಿರುವ ಮುಂದಿನ ಸಂಚಿಕೆಯನ್ನು ಓದಿರಿ.
[ಅಧ್ಯಯನ ಪ್ರಶ್ನೆಗಳು]
a ಇನ್ನೊಂದು ಕಡೆಯಲ್ಲಿ, ಬರಹಗಾರರಾದ ಆಲ್ವಿನ್ ರೋಜನ್ಬಾಮ್ ಯುವ ಜನರಿಗೆ ಜ್ಞಾಪಿಸುವುದು: “ಲೈಂಗಿಕ ಭಾವನೆಗಳು ಮತ್ತು ಮನೋಭಾವಗಳು ವ್ಯಾಪಕವಾಗಿ ವ್ಯತ್ಯಾಸವಾಗಿವೆ. ಲೈಂಗಿಕತೆಯ ಕುರಿತು ಆಲೋಚಿಸುವುದನ್ನು ನಿಲ್ಲಿಸಲು ಕೆಲವು ಜನರಿಗೆ ಅಸಾಧ್ಯವೆಂಬಂತೆ ಕಾಣುವಾಗ, ಇತರರಿಗೆ ಲೈಂಗಿಕತೆಯ ಭಾವನೆಯು ಸ್ವಲ್ಪವೂ ಇರುವುದಿಲ್ಲ. . . . ಎರಡೂ ಪ್ರತಿಕ್ರಿಯೆಗಳು ಸಾಮಾನ್ಯವಾಗಿವೆ.” ಅವರು ಕೂಡಿಸಿದ್ದು: “ಪ್ರತಿಯೊಬ್ಬ ವ್ಯಕ್ತಿಯೂ ವಿವಿಧ ಪ್ರಮಾಣದಲ್ಲಿ ಅದನ್ನು ವಿಕಸಿಸುತ್ತಾನೆ.”
b ಅವೇಕ್! ಪತ್ರಿಕೆಯ 1993, ಜುಲೈ 8 ಮತ್ತು ಜುಲೈ 22ರ ಸಂಚಿಕೆಗಳಲ್ಲಿ ಕಂಡುಬರುವ ಹಗಲುಗನಸಿನ ಕುರಿತಾದ ಲೇಖನಗಳನ್ನು ನೋಡಿ.
[ಪುಟ 19 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಭಾವೋದ್ರೇಕದ ಅಥವಾ ಲೈಂಗಿಕ ಭಾವನೆಗಳು ಹೆಚ್ಚು ಪ್ರಬಲವಾಗಿರಬಲ್ಲವು.”
[ಪುಟ 20 ರಲ್ಲಿರುವ ಚಿತ್ರ]
ಟೀವೀ ಪ್ರದರ್ಶನಗಳು ಮತ್ತು ಪತ್ರಿಕಾ ಜಾಹೀರಾತುಗಳು ಅನೇಕವೇಳೆ ವಿರುದ್ಧ ಲಿಂಗದವರಲ್ಲಿ ಅಹಿತಕರವಾದ ಆಸಕ್ತಿಯನ್ನು ಉಂಟುಮಾಡುತ್ತವೆ