ಅಧ್ಯಾಯ ಎರಡು
ನಿಮ್ಮನ್ನು ಒಳಗೂಡಿರುವ ಸಾಂತ್ವನದ ಪ್ರವಾದನ ಮಾತುಗಳು
1. ಯೆಶಾಯನ ಪ್ರವಾದನೆಯಲ್ಲಿ ನಮಗೆ ಏಕೆ ಆಸಕ್ತಿಯಿರಬೇಕು?
ಯೆಶಾಯನ ತನ್ನ ಹೆಸರಿನ ಪುಸ್ತಕವನ್ನು ಸುಮಾರು 3,000 ವರುಷಗಳ ಹಿಂದೆ ಬರೆದರೂ, ಅದು ಇಂದು ಸಹ ನಮಗೆ ನಿಜವಾಗಿಯೂ ಉಪಯುಕ್ತವಾಗಿದೆ. ಅವನು ಮಾಡಿರುವ ಐತಿಹಾಸಿಕ ಘಟನೆಗಳ ದಾಖಲೆಯಿಂದ ನಾವು ಮಹತ್ವಪೂರ್ಣ ಮೂಲತತ್ತ್ವಗಳನ್ನು ಕಲಿಯಬಲ್ಲೆವು. ಮತ್ತು ಅವನು ಯೆಹೋವನ ಹೆಸರಿನಲ್ಲಿ ಬರೆದಿಟ್ಟಿರುವ ಪ್ರವಾದನೆಗಳ ಅಧ್ಯಯನದಿಂದ ನಾವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬಲ್ಲೆವು. ಹೌದು, ಯೆಶಾಯನು ಜೀವಸ್ವರೂಪನಾದ ದೇವರ ಪ್ರವಾದಿಯಾಗಿದ್ದನು. ಅವನು ಇತಿಹಾಸವನ್ನು ಮುಂಚಿತವಾಗಿಯೇ ದಾಖಲಿಸುವಂತೆ, ಅಂದರೆ ಘಟನೆಗಳು ಸಂಭವಿಸುವ ಮೊದಲೇ ಅವುಗಳನ್ನು ವರ್ಣಿಸುವಂತೆ ಯೆಹೋವನು ಅವನನ್ನು ಪ್ರೇರಿಸಿದನು. ಹೀಗೆ ಯೆಹೋವನು, ತಾನು ಭವಿಷ್ಯವನ್ನು ಮುಂತಿಳಿಸಿ, ಅದನ್ನು ರೂಪಿಸಶಕ್ತನೆಂಬುದನ್ನು ತೋರ್ಪಡಿಸಿದನು. ಸತ್ಯ ಕ್ರೈಸ್ತರು ಯೆಶಾಯನ ಪುಸ್ತಕವನ್ನು ಅಧ್ಯಯನ ಮಾಡಿದ ಮೇಲೆ, ಯೆಹೋವನು ತಾನು ವಚನಕೊಟ್ಟಿರುವುದನ್ನೆಲ್ಲ ನೆರವೇರಿಸುವನೆಂಬ ದೃಢನಂಬಿಕೆಯಿಂದಿದ್ದಾರೆ.
2. ಯೆಶಾಯನು ತನ್ನ ಪ್ರವಾದನ ಪುಸ್ತಕವನ್ನು ದಾಖಲಿಸಿದಾಗ ಯೆರೂಸಲೇಮಿನ ಪರಿಸ್ಥಿತಿ ಹೇಗಿತ್ತು ಮತ್ತು ಯಾವ ಬದಲಾವಣೆಯಾಗಲಿತ್ತು?
2 ಯೆಶಾಯನು ತನ್ನ ಪ್ರವಾದನೆಯ ಬರವಣಿಗೆಯನ್ನು ಪೂರ್ಣಗೊಳಿಸುವಷ್ಟರೊಳಗೆ, ಯೆರೂಸಲೇಮು ಅಶ್ಶೂರವು ಹಾಕಿದ್ದ ಮುತ್ತಿಗೆಯಿಂದ ಪಾರಾಗಿತ್ತು. ದೇವಾಲಯವು ಇನ್ನೂ ಹಾಳಾಗದೆ ಉಳಿದಿತ್ತು ಮತ್ತು ಜನರು ನೂರಾರು ವರ್ಷಗಳಿಂದ ಮಾಡುತ್ತಾ ಬಂದಂತೆಯೇ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿದ್ದರು. ಆದರೆ ಆ ಸ್ಥಿತಿಗತಿಯಲ್ಲಿ ಬದಲಾವಣೆಯಾಗಲಿತ್ತು. ಯೆಹೂದಿ ರಾಜರ ಐಶ್ವರ್ಯವು ಬಾಬೆಲಿಗೆ ಒಯ್ಯಲ್ಪಡುವ ಮತ್ತು ಆ ನಗರದಲ್ಲಿ ಯೆಹೂದಿ ಯುವಜನರು ಆಸ್ಥಾನದ ಅಧಿಕಾರಿಗಳಾಗುವ ಸಮಯ ಬರಲಿಕ್ಕಿತ್ತು.a (ಯೆಶಾಯ 39:6, 7) ಆದರೆ ಇದು ನೂರಕ್ಕೂ ಹೆಚ್ಚು ವರುಷಗಳು ಕಳೆದ ಬಳಿಕ ಸಂಭವಿಸಲಿಕ್ಕಿತ್ತು.—2 ಅರಸುಗಳು 24:12-17; ದಾನಿಯೇಲ 1:19.
3. ಯೆಶಾಯ 41ನೆಯ ಅಧ್ಯಾಯದಲ್ಲಿ ಯಾವ ಸಂದೇಶವು ಕಂಡುಬರುತ್ತದೆ?
3 ಯೆಶಾಯನ ಮೂಲಕ ತಿಳಿಸಲ್ಪಟ್ಟ ದೇವರ ಸಂದೇಶವು ಬರಿಯ ದುರ್ಗತಿಯ ವಾರ್ತೆಯಾಗಿರಲಿಲ್ಲ. ಆ ಪುಸ್ತಕದ 40ನೆಯ ಅಧ್ಯಾಯವು ‘ಸಂತೈಸು’ ಎಂಬ ಪದದಿಂದ ಆರಂಭಗೊಳ್ಳುತ್ತದೆ.b ತಾವು ಇಲ್ಲವೇ ಕಡಿಮೆಪಕ್ಷ ತಮ್ಮ ಮಕ್ಕಳಾದರೂ ಸ್ವದೇಶಕ್ಕೆ ಹಿಂದಿರುಗಿ ಹೋಗುವರೆಂಬ ಆಶ್ವಾಸನೆಯಿಂದ ಯೆಹೂದ್ಯರು ಸಾಂತ್ವನವನ್ನು ಪಡೆದುಕೊಳ್ಳಲಿದ್ದರು. ಅದೇ ಸಾಂತ್ವನದ ಸಂದೇಶವು 41ನೆಯ ಅಧ್ಯಾಯದಲ್ಲಿ ಮುಂದುವರಿಸಲ್ಪಟ್ಟಿದೆ ಮತ್ತು ಆ ದೈವಿಕ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಯೆಹೋವನು ಬಲಾಢ್ಯನಾದ ಅರಸನೊಬ್ಬನನ್ನು ನೇಮಿಸುವನೆಂದು ಅದು ಮುಂತಿಳಿಸುತ್ತದೆ. ಇದರಲ್ಲಿ ಪುನರಾಶ್ವಾಸನೆಗಳು ಒಳಗೂಡಿವೆ ಮತ್ತು ದೇವರಲ್ಲಿ ಭರವಸೆಯಿಡುವಂತೆ ಇದು ಪ್ರೋತ್ಸಾಹವನ್ನು ನೀಡುತ್ತದೆ. ಅನ್ಯ ಜನಾಂಗಗಳು ಭರವಸೆಯಿಡುವ ಸುಳ್ಳುದೇವತೆಗಳ ಶಕ್ತಿಹೀನತೆಯನ್ನೂ ಇದು ಬಯಲುಗೊಳಿಸುತ್ತದೆ. ಇದರಲ್ಲೆಲ್ಲಾ, ಯೆಶಾಯನ ದಿನದಲ್ಲಿ ಮತ್ತು ನಮ್ಮ ದಿನಗಳಲ್ಲಿ ನಂಬಿಕೆಯನ್ನು ಬಲಪಡಿಸಲು ಅತ್ಯಧಿಕ ವಿಷಯಗಳು ಅಡಕವಾಗಿವೆ.
ಯೆಹೋವನು ಜನಾಂಗಗಳಿಗೆ ಸವಾಲೊಡ್ಡುತ್ತಾನೆ
4. ಯೆಹೋವನು ಅನ್ಯ ಜನಾಂಗಗಳಿಗೆ ಯಾವ ಮಾತುಗಳಿಂದ ಸವಾಲೊಡ್ಡುತ್ತಾನೆ?
4 ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳುವುದು: “ದ್ವೀಪನಿವಾಸಿಗಳೇ, ನನ್ನ ಕಡೆಗೆ ತಿರುಗಿ ಮೌನದಿಂದಿರಿ; ಜನಾಂಗಗಳು [ಎಷ್ಟಾದರೂ] ತಮ್ಮನ್ನು ಬಲಪಡಿಸಿಕೊಳ್ಳಲಿ; ಸಮೀಪಕ್ಕೆ ಬಂದು ಮಾತಾಡಲಿ; ನ್ಯಾಯಸ್ಥಾನಕ್ಕೆ ಒಟ್ಟಿಗೆ ಹೋಗುವ.” (ಯೆಶಾಯ 41:1) ಈ ಮಾತುಗಳಿಂದ ಯೆಹೋವನು ತನ್ನ ಜನರನ್ನು ವಿರೋಧಿಸುವ ಅನ್ಯ ಜನಾಂಗಗಳಿಗೆ ಸವಾಲೊಡ್ಡುತ್ತಾನೆ. ಅವರು ಆತನ ಮುಂದೆ ನಿಂತುಕೊಂಡು ಮಾತಾಡಲು ಸಿದ್ಧರಾಗಲಿ! ನಾವು ಮುಂದೆ ನೋಡಲಿರುವಂತೆ, ಯೆಹೋವನು ತಾನು ಒಂದು ನ್ಯಾಯಾಲಯದ ನ್ಯಾಯಾಧೀಶನೊ ಎಂಬಂತೆ, ತಮ್ಮ ವಿಗ್ರಹಗಳು ನಿಜವಾಗಿಯೂ ದೇವರುಗಳೆಂಬುದಕ್ಕೆ ಈ ಜನಾಂಗಗಳು ರುಜುವಾತನ್ನು ನೀಡುವಂತೆ ತಗಾದೆಮಾಡುತ್ತಾನೆ. ತಮ್ಮ ಆರಾಧಕರಿಗೆ ದೊರೆಯಲಿರುವ ರಕ್ಷಣೆಯ ಕಾರ್ಯಗಳನ್ನು ಇಲ್ಲವೆ ತಮ್ಮ ವೈರಿಗಳ ಮೇಲೆ ಬರಲಿರುವ ನ್ಯಾಯತೀರ್ಪುಗಳನ್ನು ಮುಂತಿಳಿಸುವ ಸಾಮರ್ಥ್ಯ ಈ ದೇವತೆಗಳಿಗಿದೆಯೆ? ಹಾಗಿರುವಲ್ಲಿ, ಇಂತಹ ಪ್ರವಾದನೆಗಳನ್ನು ಅವರು ನೆರವೇರಿಸಬಲ್ಲರೊ? ಅಸಾಧ್ಯವೇ ಸರಿ. ಯೆಹೋವನೊಬ್ಬನೇ ಇವುಗಳನ್ನು ನೆರವೇರಿಸಬಲ್ಲನು.
5. ಯೆಶಾಯನ ಪ್ರವಾದನೆಗಳಿಗೆ ಹೇಗೆ ಒಂದಕ್ಕಿಂತ ಹೆಚ್ಚು ನೆರವೇರಿಕೆಯಿದೆ ಎಂಬುದನ್ನು ವಿವರಿಸಿ.
5 ನಾವು ಯೆಶಾಯನ ಪ್ರವಾದನೆಯನ್ನು ಪರಿಗಣಿಸುವಾಗ, ಈ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ. ಅದೇನೆಂದರೆ, ಅನೇಕ ಬೈಬಲ್ ಪ್ರವಾದನೆಗಳಂತೆ ಇವನ ಮಾತುಗಳಿಗೂ ಒಂದಕ್ಕಿಂತ ಹೆಚ್ಚು ನೆರವೇರಿಕೆಯಿದೆ. ಸಾ.ಶ.ಪೂ. 607ರಲ್ಲಿ ಯೆಹೂದದ ನಿವಾಸಿಗಳು ದೇಶಭ್ರಷ್ಟರಾಗಿ ಬಾಬೆಲಿಗೆ ಹೋಗಲಿರುವರು. ಆದರೂ, ಅಲ್ಲಿ ಸೆರೆಯಾಳುಗಳಾಗಿರುವ ಇಸ್ರಾಯೇಲ್ಯರನ್ನು ಯೆಹೋವನು ಬಿಡುಗಡೆ ಮಾಡುವನೆಂದು ಯೆಶಾಯನ ಪ್ರವಾದನೆಯು ತಿಳಿಸುತ್ತದೆ. ಇದು ಸಾ.ಶ.ಪೂ. 537ರಲ್ಲಿ ನೆರವೇರಿತು. ಆ ಬಿಡುಗಡೆಗೆ ಸಮಾಂತರವಾದ ಇನ್ನೊಂದು ಬಿಡುಗಡೆಯು ಇಪ್ಪತ್ತನೆಯ ಶತಮಾನದ ಆರಂಭದ ದಿನಗಳಲ್ಲಿ ನೆರವೇರಿತು. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಭೂಮಿಯಲ್ಲಿದ್ದ ಯೆಹೋವನ ಅಭಿಷಿಕ್ತ ಸೇವಕರ ಮೇಲೆ ಒಂದು ಸಂಕಷ್ಟದ ಸಮಯಾವಧಿಯು ಬಂತು. ಮಹಾ ಬಾಬೆಲಿನ ಪ್ರಧಾನ ಭಾಗವಾದ ಕ್ರೈಸ್ತಪ್ರಪಂಚದಿಂದ ಪ್ರೇರಿಸಲ್ಪಟ್ಟ ಸೈತಾನನ ಲೋಕದಿಂದ ಬಂದ ಒತ್ತಡವು, 1918ರಲ್ಲಿ ವ್ಯವಸ್ಥಾಪಿತ ಸುವಾರ್ತಾ ಸಾರುವಿಕೆಯನ್ನು ಕಾರ್ಯತಃ ನಿಲ್ಲಿಸಿಬಿಟ್ಟಿತು. (ಪ್ರಕಟನೆ 11:5-10) ವಾಚ್ ಟವರ್ ಸೊಸೈಟಿಯ ಕೆಲವು ಪ್ರಧಾನ ಅಧಿಕಾರಿಗಳನ್ನು ಸುಳ್ಳು ಆರೋಪಗಳ ಮೇಲೆ ಸೆರೆಮನೆಗೆ ಕಳುಹಿಸಲಾಯಿತು. ಹೀಗೆ, ದೇವರ ಸೇವಕರ ಮೇಲೆ ಹೂಡಿದ ಯುದ್ಧದಲ್ಲಿ ಲೋಕವು ಜಯಪಡೆದಿರುವಂತೆ ತೋರಿತು. ಆಗ, ಸಾ.ಶ.ಪೂ. 537ರಲ್ಲಿ ನಡೆದಂತೆ, ಯೆಹೋವನು ಅನಿರೀಕ್ಷಿತವಾಗಿ ಅವರನ್ನು ಬಿಡುಗಡೆ ಮಾಡಿದನು. 1919ರಲ್ಲಿ ಬಂದಿಗಳಾಗಿದ್ದ ಆ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಆ ಬಳಿಕ ಅವರ ಮೇಲಿದ್ದ ಆರೋಪಗಳನ್ನು ರದ್ದುಗೊಳಿಸಲಾಯಿತು. 1919ರ ಸೆಪ್ಟೆಂಬರ್ನಲ್ಲಿ ಒಹಾಯೊ ಪ್ರಾಂತ್ಯದ ಸೀಡರ್ ಪಾಯಿಂಟ್ನಲ್ಲಿ ನಡೆದ ಅಧಿವೇಶನವೊಂದು, ಯೆಹೋವನ ಸೇವಕರು ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವನ್ನು ಪುನಃ ಆರಂಭಿಸುವಂತೆ ಅವರನ್ನು ಉತ್ತೇಜಿಸಿತು. (ಪ್ರಕಟನೆ 11:11, 12) ಅಂದಿನಿಂದ ಹಿಡಿದು ಇಂದಿನ ತನಕ ಸಾರುವ ಕೆಲಸದ ವ್ಯಾಪ್ತಿಯಲ್ಲಿ ಗಮನಾರ್ಹವಾದ ವೃದ್ಧಿಯಾಗಿದೆ. ಅಲ್ಲದೆ, ಯೆಶಾಯನ ಅನೇಕ ಮಾತುಗಳು ಬರಲಿರುವ ಪರದೈಸ ಭೂಮಿಯಲ್ಲಿ ಆಶ್ಚರ್ಯಕರವಾದ ರೀತಿಯಲ್ಲಿ ನೆರವೇರಲಿವೆ. ಈ ಕಾರಣದಿಂದ, ಯೆಶಾಯನ ಪುರಾತನ ಮಾತುಗಳು ಇಂದಿನ ಸರ್ವ ಜನಾಂಗಗಳನ್ನೂ ಜನರನ್ನೂ ಒಳಗೂಡಿವೆ.
ವಿಮೋಚಕನೊಬ್ಬನನ್ನು ಕರೆಯಲಾಗುತ್ತದೆ
6. ಪ್ರವಾದಿಯು ಭಾವೀ ವಿಜೇತನೊಬ್ಬನನ್ನು ಹೇಗೆ ವರ್ಣಿಸುತ್ತಾನೆ?
6 ಯೆಶಾಯನ ಮೂಲಕ ಯೆಹೋವನು, ಬಾಬೆಲಿನಿಂದ ದೇವಜನರನ್ನು ರಕ್ಷಿಸುವ ಮತ್ತು ಅದೇ ಸಮಯದಲ್ಲಿ ಅವರ ವೈರಿಗಳಿಗೆ ನ್ಯಾಯತೀರ್ಪನ್ನು ವಿಧಿಸುವ ಒಬ್ಬ ವಿಜೇತ ಅರಸನ ಕುರಿತು ಮುಂತಿಳಿಸುತ್ತಾನೆ. ಯೆಹೋವನು ಕೇಳುವುದು: “ಮೂಡಲಲ್ಲಿ ಒಬ್ಬನನ್ನು ಎಬ್ಬಿಸಿ ನ್ಯಾಯದ [“ನೀತಿಯ,” NW] ಸಂಕಲ್ಪಾನುಸಾರವಾಗಿ ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ವಶಕ್ಕೆ ಕೊಟ್ಟು ಅವನನ್ನು ರಾಜರ ಮೇಲೆ ಆಳಗೊಡಿಸಿ ಅವರ ಕತ್ತಿಯನ್ನು ದೂಳನ್ನಾಗಿಯೂ ಬಿಲ್ಲನ್ನು ಗಾಳಿ ಬಡಿದುಕೊಂಡು ಹೋಗುವ ಒಣಹುಲ್ಲನ್ನಾಗಿಯೂ ಮಾಡಿ ಅವನು ಅವರನ್ನು ಹಿಂದಟ್ಟುತ್ತಾ ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ [“ನೆಮ್ಮದಿಯಿಂದ,” NW] ಮುಂದೆ ಹಾದು ಹೋಗುವಂತೆ ಗೈದವನು ಯಾರು? ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನ ವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ.”—ಯೆಶಾಯ 41:2-4.
7. ಬರಲಿದ್ದ ವಿಜೇತನು ಯಾರು, ಮತ್ತು ಅವನು ಏನನ್ನು ಈಡೇರಿಸುತ್ತಾನೆ?
7 ಹಾಗಾದರೆ, ಮೂಡಲಿಂದ ಅಂದರೆ ಸೂರ್ಯೋದಯದ ದಿಕ್ಕಿನಿಂದ ಎಬ್ಬಿಸಲ್ಪಡುವವನು ಯಾರು? ಮೇದ್ಯಯ ಪಾರಸಿಯ ಮತ್ತು ಏಲಾಮ್ ದೇಶಗಳು ಬಾಬೆಲಿನ ಮೂಡಲಲ್ಲಿವೆ. ಅಲ್ಲಿಂದ ಪಾರಸಿಯನಾದ ಕೋರೆಷನು ತನ್ನ ಮಹಾ ಸೈನ್ಯಗಳೊಂದಿಗೆ ಏರಿ ಬರುತ್ತಾನೆ. (ಯೆಶಾಯ 41:25; 44:28; 45:1-4, 13; 46:11) ಕೋರೆಷನು ಯೆಹೋವನ ಆರಾಧಕನಲ್ಲವಾದರೂ ಅವನು ನೀತಿಯ ದೇವರಾದ ಯೆಹೋವನ ಸಂಕಲ್ಪಾನುಸಾರ ಕ್ರಿಯೆಗೈಯುತ್ತಾನೆ. ಕೋರೆಷನು ಅರಸರನ್ನು ಅಧೀನಪಡಿಸಿಕೊಂಡು ಅವರನ್ನು ಜಯಿಸಿದಾಗ, ಅವನ ಮುಂದೆ ಅವರು ದೂಳಿನಂತೆ ಚೆಲ್ಲಾಪಿಲ್ಲಿಯಾಗುತ್ತಾರೆ. ವಿಜಯವನ್ನು ಬೆನ್ನಟ್ಟುವಾಗ ಅವನು “ಸುರಕ್ಷಿತವಾಗಿ” ಇಲ್ಲವೆ ನೆಮ್ಮದಿಯಿಂದ, ಸಾಮಾನ್ಯವಾಗಿ ಪ್ರಯಾಣಿಸದಿರುವ ದಾರಿಯಲ್ಲಿ, ಸಕಲ ತಡೆಗಳನ್ನು ಜಯಿಸುತ್ತ ದಾಟಿಹೋಗುತ್ತಾನೆ. ಸಾ.ಶ.ಪೂ. 539ನೆಯ ವರ್ಷದಷ್ಟಕ್ಕೆ, ಕೋರೆಷನು ಬಲಾಢ್ಯವಾಗಿದ್ದ ಬಾಬೆಲ್ ನಗರವನ್ನು ತಲಪಿ, ಅದನ್ನೂ ಕೆಡವಿ ಹಾಕುತ್ತಾನೆ. ಇದರ ಫಲವಾಗಿ, ಯೆರೂಸಲೇಮಿಗೆ ಹಿಂದಿರುಗಿ ಹೋಗಿ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುವಂತೆ ದೇವಜನರಿಗೆ ಬಿಡುಗಡೆಯಾಗುತ್ತದೆ.—ಎಜ್ರ 1:1-7.c
8. ಯೆಹೋವನೊಬ್ಬನೇ ಏನನ್ನು ಮಾಡಬಲ್ಲನು?
8 ಹೀಗೆ, ಕೋರೆಷನು ಹುಟ್ಟುವುದಕ್ಕೆ ಮೊದಲೇ ಯೆಹೋವನು ಯೆಶಾಯನ ಮುಖಾಂತರ ಆ ರಾಜನ ಆಳ್ವಿಕೆಯನ್ನು ಮುಂತಿಳಿಸುತ್ತಾನೆ. ಇಂತಹ ಸಂಗತಿಯನ್ನು ಸತ್ಯ ದೇವರೊಬ್ಬನೇ ನಿಷ್ಕೃಷ್ಟವಾಗಿ ಪ್ರವಾದಿಸಬಲ್ಲನು. ಅನ್ಯಜನಾಂಗಗಳ ಸುಳ್ಳು ದೇವತೆಗಳಲ್ಲಿ ಯೆಹೋವನಿಗೆ ಸಮಾನರಾದವರು ಯಾರೂ ಇಲ್ಲ. ಸಕಾರಣದಿಂದಲೇ ಯೆಹೋವನು, “ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು” ಎಂದು ಹೇಳುತ್ತಾನೆ. “ನಾನೇ ಆದಿ, ಅಂತವೂ ನಾನೇ; ನಾನು ಹೊರತು ಯಾವ ದೇವರೂ ಇಲ್ಲ,” ಎಂದು ಹಕ್ಕಿನಿಂದ ಹೇಳಬಲ್ಲವನು ಯೆಹೋವನೊಬ್ಬನೇ.—ಯೆಶಾಯ 42:8; 44:6, 7.
ಭಯಭೀತರಾದ ಜನರು ವಿಗ್ರಹಗಳಲ್ಲಿ ಭರವಸೆಯಿಡುತ್ತಾರೆ
9-11. ಕೋರೆಷನ ದಂಡಯಾತ್ರೆಗೆ ಜನಾಂಗಗಳ ಪ್ರತಿಕ್ರಿಯೆಯೇನು?
9 ಈ ಭಾವೀ ವಿಜೇತ ರಾಜನ ಸಂಬಂಧದಲ್ಲಿ ಜನಾಂಗಗಳ ಪ್ರತಿಕ್ರಿಯೆಯನ್ನು ಯೆಶಾಯನು ಈಗ ವರ್ಣಿಸುತ್ತಾನೆ: “ದ್ವೀಪನಿವಾಸಿಗಳು ಕಂಡು ಬೆರಗಾದರು, ಭೂಮಿಯ ಕಟ್ಟಕಡೆಯವರು ನಡುಗಿದರು, ಎಲ್ಲರೂ ನೆರೆದುಬಂದರು. ಒಬ್ಬರಿಗೊಬ್ಬರು ಸಹಾಯಮಾಡಿದರು, ಒಬ್ಬನಿಗೊಬ್ಬನು ಧೈರ್ಯವಾಗಿರು ಎಂದು ಹೇಳಿದನು. ಬೆಸಿಗೆ ಚೆನ್ನಾಗಿದೆ ಎಂದು ಹೇಳಿ ಶಿಲ್ಪಿಯು ಎರಕದವನನ್ನೂ ಸುತ್ತಿಗೆಯಿಂದ ಸಮತಟ್ಟುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು; ವಿಗ್ರಹವನ್ನು ಅಲುಗದಂತೆ ಮೊಳೆಗಳಿಂದ ಬಿಗಿದರು.”—ಯೆಶಾಯ 41:5-7.
10 ಸುಮಾರು 200 ವರ್ಷಗಳ ಮುಂದಿನ ಭವಿಷ್ಯವನ್ನು ನೋಡುತ್ತ, ಯೆಹೋವನು ಲೋಕ ಸನ್ನಿವೇಶವನ್ನು ಅವಲೋಕಿಸುತ್ತಾನೆ. ಕೋರೆಷನ ಬಲಾಢ್ಯ ಸೈನ್ಯಗಳು ತ್ವರಿತವಾಗಿ ಮುನ್ನುಗ್ಗಿ ವೈರಿಗಳೆಲ್ಲರನ್ನು ಜಯಿಸಿಬಿಡುತ್ತವೆ. ಜನರು ಮತ್ತು ಅತಿ ದೂರದಲ್ಲಿ ವಾಸಿಸುವ ದ್ವೀಪನಿವಾಸಿಗಳು ಸಹ, ಅವನ ಬರೋಣವನ್ನು ನೋಡಿ ನಡುಗುತ್ತಾರೆ. ಭಯದಿಂದ ಅವರು, ನ್ಯಾಯತೀರ್ಪು ವಿಧಿಸಲಿಕ್ಕಾಗಿ ಯೆಹೋವನು ಮೂಡಲಿಂದ ಕರೆದಾತನನ್ನು ವಿರೋಧಿಸಲು ಒಟ್ಟುಗೂಡುತ್ತಾರೆ. “ಧೈರ್ಯವಾಗಿರು” ಎಂದು ಹೇಳುತ್ತ ಅವರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಾರೆ.
11 ಕುಶಲಕರ್ಮಿಗಳು ಒಟ್ಟುಗೂಡಿ, ಜನರನ್ನು ವಿಮೋಚಿಸಲು ವಿಗ್ರಹ ದೇವತೆಗಳನ್ನು ರಚಿಸುತ್ತಾರೆ. ಒಬ್ಬ ಬಡಗಿಯು ವಿಗ್ರಹವನ್ನು ರಚಿಸಲು ಮರದ ಚೌಕಟ್ಟನ್ನು ಸಿದ್ಧಮಾಡಿದ ಬಳಿಕ, ಅದಕ್ಕೆ ಪ್ರಾಯಶಃ ಚಿನ್ನದ ಲೇಪವನ್ನು ಕೊಡುವಂತೆ ಅಕ್ಕಸಾಲಿಗನನ್ನು ಪ್ರೋತ್ಸಾಹಿಸುತ್ತಾನೆ. ಒಬ್ಬ ಶಿಲ್ಪಿಯು ಲೋಹವನ್ನು ನಯವಾಗಿ ಬಡಿದು ಬೆಸಗೆಯನ್ನು ಹಾಕಿಸಲು ಒಪ್ಪಿಕೊಳ್ಳುತ್ತಾನೆ. ಮೊಳೆಗಳಿಂದ ಬಿಗಿಯಿರೆಂದು ಹೇಳುವ ಮಾತು ಪ್ರಾಯಶಃ ತುಸು ವ್ಯಂಗ್ಯನುಡಿಯಾಗಿರಬೇಕು. ಅದು ಬೀಳದಂತೆ ಅಥವಾ ಬಲಹೀನತೆಯನ್ನು ತೋರಿಸದ ಹಾಗೆ ಮೊಳೆಯೊಡೆಯುವಂತೆ ಹೇಳಲ್ಪಟ್ಟಿರಬೇಕು. ಏಕೆಂದರೆ, ಹಿಂದೊಮ್ಮೆ ಯೆಹೋವನ ಸಾಕ್ಷಿಗುಡಾರದ ಮುಂದೆ ದಾಗೋನನ ವಿಗ್ರಹವು ಮಗುಚಿ ಬಿದ್ದಿತ್ತು.—1 ಸಮುವೇಲ 5:4.
ಹೆದರಬೇಡಿ!
12. ಯೆಹೋವನು ಇಸ್ರಾಯೇಲಿಗೆ ಯಾವ ಪುನರಾಶ್ವಾಸನೆಯನ್ನು ನೀಡುತ್ತಾನೆ?
12 ಯೆಹೋವನು ಈಗ ತನ್ನ ಜನರ ಕಡೆಗೆ ಗಮನ ಹರಿಸುತ್ತಾನೆ. ನಿರ್ಜೀವ ವಿಗ್ರಹಗಳಲ್ಲಿ ಭರವಸೆಯಿಡುವ ಜನಾಂಗಗಳಂತೆ, ಸತ್ಯ ದೇವರಲ್ಲಿ ಭರವಸೆಯಿಡುವವರು ಎಂದಿಗೂ ಭಯಪಡುವ ಅಗತ್ಯವಿಲ್ಲ. ಇಸ್ರಾಯೇಲು ತನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೆಂಬ ಮರುಜ್ಞಾಪನವನ್ನು ಕೊಡುತ್ತ ಯೆಹೋವನು ತನ್ನ ಪುನರಾಶ್ವಾಸನೆಯನ್ನು ಆರಂಭಿಸುತ್ತಾನೆ. ಮನಸ್ಸು ಕರಗಿಸುವಂತಹ ಒಂದು ವಚನದಲ್ಲಿ, ಯೆಹೋವನ ಈ ಮಾತುಗಳನ್ನು ಯೆಶಾಯನು ವರದಿಸುತ್ತಾನೆ: “ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ, ನಾನು ಭೂಮಿಯ ಕಟ್ಟಕಡೆಯಲ್ಲಿ ಹಿಡಿದು ದಿಗಂತಗಳಿಂದ ಕರೆದ ಜನವೇ, ನೀನು ನನ್ನ ಸೇವಕನು, ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ, ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 41:8-10.
13. ಬಂದಿಗಳಾಗಿದ್ದ ಯೆಹೂದ್ಯರಿಗೆ ಯೆಹೋವನ ಮಾತುಗಳು ಏಕೆ ಸಾಂತ್ವನದಾಯಕವಾಗಿರುವವು?
13 ವಿದೇಶದಲ್ಲಿ ಬಂಧಿವಾಸಿಗಳಾಗಿದ್ದ ನಂಬಿಗಸ್ತ ಇಸ್ರಾಯೇಲ್ಯರಿಗೆ ಈ ಮಾತುಗಳು ಎಷ್ಟೊಂದು ಸಾಂತ್ವನದಾಯಕವಾಗಿದ್ದವು! ತಾವು ದೇಶಭ್ರಷ್ಟರಾಗಿದ್ದು, ಬಾಬೆಲಿನ ಅರಸನ ಸೇವಕರಾಗಿದ್ದಾಗ, ಯೆಹೋವನು ತಮ್ಮನ್ನು “ನನ್ನ ಸೇವಕನು” ಎಂದು ಕರೆಯುವುದನ್ನು ಕೇಳಿಸಿಕೊಳ್ಳುವುದು ಎಷ್ಟು ಪ್ರೋತ್ಸಾಹಜನಕವಾಗಿತ್ತು! (2 ಪೂರ್ವಕಾಲವೃತ್ತಾಂತ 36:20) ಯೆಹೋವನು ಅವರ ಅಪನಂಬಿಗಸ್ತಿಕೆಯ ಕಾರಣ ಅವರನ್ನು ಶಿಕ್ಷಿಸುವುದು ಖಂಡಿತವಾಗಿದ್ದರೂ, ಆತನು ಅವರನ್ನು ತಳ್ಳಿಹಾಕುವುದಿಲ್ಲ. ಏಕೆಂದರೆ, ಇಸ್ರಾಯೇಲು ಯೆಹೋವನ ಸೊತ್ತಾಗಿದೆ, ಬಾಬೆಲಿನದ್ದಲ್ಲ. ವಿಜೇತ ಕೋರೆಷನು ದಂಡೆತ್ತಿ ಬರುತ್ತಿರುವಾಗ ದೇವರ ಸೇವಕರಿಗೆ ಭಯದಿಂದ ನಡುಗಲು ಯಾವ ಕಾರಣವೂ ಇರುವುದಿಲ್ಲ. ಏಕೆಂದರೆ, ಸಹಾಯ ನೀಡಲು ಯೆಹೋವನೇ ತನ್ನ ಜನರ ಸಂಗಡ ಇರುವನು.
14. ಇಸ್ರಾಯೇಲಿಗೆ ಹೇಳಿದ ಯೆಹೋವನ ಮಾತುಗಳು ಇಂದು ದೇವಜನರನ್ನು ಹೇಗೆ ಸಂತೈಸುತ್ತವೆ?
14 ಆ ಮಾತುಗಳು ನಮ್ಮ ದಿನಗಳ ವರೆಗೂ ದೇವರ ಸೇವಕರಿಗೆ ಪುನರಾಶ್ವಾಸನೆ ನೀಡಿವೆ ಮತ್ತು ಅವರನ್ನು ಬಲಪಡಿಸಿವೆ. ಅವರು ಹಿಂದೆ 1918ರಲ್ಲಿ ತಮಗಾಗಿ ಯೆಹೋವನ ಚಿತ್ತವೇನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಹಾತೊರೆದರು. ಅವರು ತಮ್ಮ ಆತ್ಮಿಕ ಬಂಧನದಿಂದ ಬಿಡುಗಡೆಹೊಂದಲು ಹಂಬಲಿಸಿದರು. ಇಂದು ನಾವು ಸಹ, ಸೈತಾನನಿಂದ, ಲೋಕದಿಂದ ಮತ್ತು ನಮ್ಮ ಸ್ವಂತ ಅಪರಿಪೂರ್ಣತೆಗಳಿಂದಾಗಿ ಬರುವ ಒತ್ತಡಗಳಿಂದ ಬಿಡುಗಡೆಹೊಂದಲು ಹಾತೊರೆಯುತ್ತೇವೆ. ಆದರೆ, ತನ್ನ ಜನರ ಪರವಾಗಿ ಸರಿಯಾಗಿ ಯಾವಾಗ ಮತ್ತು ಹೇಗೆ ಕ್ರಮ ಕೈಕೊಳ್ಳಬೇಕೆಂಬುದು ಯೆಹೋವನಿಗೆ ತಿಳಿದದೆ ಎಂಬುದನ್ನು ನಾವು ಗಣ್ಯಮಾಡುತ್ತೇವೆ. ಎಳೆಯ ಮಕ್ಕಳಂತೆ ನಾವು, ಆತನ ಬಲಾಢ್ಯವಾದ ಹಸ್ತವನ್ನು ಹಿಡಿದುಕೊಂಡು, ನಾವು ಸಹಿಸಿಕೊಳ್ಳಲು ಬೇಕಾದ ಸಹಾಯವನ್ನು ಆತನು ಕೊಡುವನೆಂಬ ಭರವಸೆಯಿಂದಿದ್ದೇವೆ. (ಕೀರ್ತನೆ 63:7, 8) ಯಾರು ತನ್ನ ಸೇವೆಮಾಡುತ್ತಾರೋ ಅವರನ್ನು ಯೆಹೋವನು ಅಮೂಲ್ಯರನ್ನಾಗಿ ಪರಿಗಣಿಸುತ್ತಾನೆ. ಆತನು ತನ್ನ ಜನರನ್ನು 1918-19ರ ಕಷ್ಟಕರ ಸಮಯದಲ್ಲಿ ಬೆಂಬಲಿಸಿದಂತೆ ಮತ್ತು ದೀರ್ಘಕಾಲದ ಹಿಂದೆ ನಂಬಿಗಸ್ತ ಇಸ್ರಾಯೇಲ್ಯರನ್ನು ಬೆಂಬಲಿಸಿದಂತೆ, ಈಗಲೂ ನಮಗೆ ಬೆಂಬಲವನ್ನು ಕೊಡುತ್ತಾನೆ.
15, 16. (ಎ) ಇಸ್ರಾಯೇಲಿನ ವೈರಿಗಳಿಗೆ ಏನಾಗುವುದು, ಮತ್ತು ಇಸ್ರಾಯೇಲು ಯಾವ ವಿಧಗಳಲ್ಲಿ ಒಂದು ಕ್ರಿಮಿಯನ್ನು ಹೋಲುತ್ತದೆ? (ಬಿ) ಸನ್ನಿಹಿತವಾಗಿರುವ ಯಾವ ಆಕ್ರಮಣದ ದೃಷ್ಟಿಯಲ್ಲಿ ಯೆಹೋವನ ಮಾತುಗಳು ಇಂದು ವಿಶೇಷವಾಗಿ ಪ್ರೋತ್ಸಾಹದಾಯಕವಾಗಿವೆ?
15 ಯೆಹೋವನು ಯೆಶಾಯನ ಮೂಲಕ ಮುಂದೆ ಹೇಳುವುದನ್ನು ಪರಿಗಣಿಸಿ: “ಆಹಾ, ನಿನ್ನ ಮೇಲೆ ಕಿಡಿಕಿಡಿಯಾದವರು ಆಶಾಭಂಗಪಟ್ಟು ಅವಮಾನಹೊಂದುವರು; ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು; ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನಗೆ ವಿರುದ್ಧವಾಗಿ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು. ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ. ಕ್ರಿಮಿಪ್ರಾಯವಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು ಎಂದು ಯೆಹೋವನು ಅನ್ನುತ್ತಾನೆ.”—ಯೆಶಾಯ 41:11-14.
16 ಇಸ್ರಾಯೇಲಿನ ವೈರಿಗಳು ಜಯಹೊಂದುವುದಿಲ್ಲ. ಇಸ್ರಾಯೇಲಿನ ಮೇಲೆ ಕೋಪಿಸಿಕೊಂಡವರು ನಾಚಿಕೆಪಡುವರು. ಆ ಜನಾಂಗದ ವಿರುದ್ಧ ಹೋರಾಡುವವರು ಅಳಿದುಹೋಗುವರು. ಸೆರೆಯಾಳುಗಳಾದ ಇಸ್ರಾಯೇಲ್ಯರು ದೂಳಿನಲ್ಲಿ ಒದ್ದಾಡುವ ಕ್ರಿಮಿಯಂತೆ ದುರ್ಬಲರೂ ರಕ್ಷಣೆಯಿಲ್ಲದವರೂ ಆಗಿ ಕಂಡುಬರುವುದಾದರೂ ಯೆಹೋವನು ಅವರಿಗೆ ಸಹಾಯಕನಾಗಿರುವನು. ನಿಜ ಕ್ರೈಸ್ತರು “ಕಡೇ ದಿವಸಗಳ” ಸಮಯದಲ್ಲೆಲ್ಲ ಲೋಕದ ಅನೇಕರಿಂದ ದೃಢವಾದ ವಿರೋಧವನ್ನು ಎದುರಿಸುತ್ತಿರುವಾಗ, ಇದು ಅವರಿಗೆ ಎಷ್ಟೊಂದು ಪ್ರೋತ್ಸಾಹದಾಯಕವಾಗಿ ಪರಿಣಮಿಸಿದೆ! (2 ತಿಮೊಥೆಯ 3:1) ಮತ್ತು ಪ್ರವಾದನೆಯಲ್ಲಿ, ‘ಮಾಗೋಗ್ ದೇಶದ ಗೋಗನು’ ಎಂದು ಕರೆಯಲ್ಪಟ್ಟಿರುವ ಸೈತಾನನ ಸನ್ನಿಹಿತ ಆಕ್ರಮಣದ ದೃಷ್ಟಿಯಲ್ಲಿ ನೋಡುವುದಾದರೆ, ಯೆಹೋವನ ವಾಗ್ದಾನವು ಅದೆಷ್ಟು ಬಲದಾಯಕವಾಗಿದೆ! ಗೋಗನ ಭಯಂಕರವಾದ ಆಕ್ರಮಣದ ಸಮಯದಲ್ಲಿ, ಯೆಹೋವನ ಜನರು ಒಂದು ಕ್ರಿಮಿಯಷ್ಟು ರಕ್ಷಣಾರಹಿತರಾಗಿ, ಅಂದರೆ “ಗೋಡೆಗಳಿಲ್ಲದೆ” ಮತ್ತು “ಅಗುಳಿ ಬಾಗಿಲು” ಇಲ್ಲದೆ ಜೀವಿಸುವ ಜನರಾಗಿ ಕಂಡುಬರುವರು. ಹೀಗಿದ್ದರೂ, ಯೆಹೋವನನ್ನು ನಿರೀಕ್ಷಿಸುವವರು ಭಯದಿಂದ ನಡುಗಬೇಕೆಂದಿಲ್ಲ. ಸರ್ವಶಕ್ತನಾದ ದೇವರು ತಾನೇ ಅವರನ್ನು ವಿಮೋಚಿಸುವ ಉದ್ದೇಶದಿಂದ ಹೋರಾಡುವನು.—ಯೆಹೆಜ್ಕೇಲ 38:2, 11, 14-16, 21-23; 2 ಕೊರಿಂಥ 1:3.
ಇಸ್ರಾಯೇಲಿಗೆ ಸಾಂತ್ವನ
17, 18. ಇಸ್ರಾಯೇಲಿನ ಬಲಪಡಿಸುವಿಕೆಯನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ, ಮತ್ತು ಯಾವ ನೆರವೇರಿಕೆಯ ಕುರಿತು ನಮಗೆ ಆಶ್ವಾಸನೆಯಿದೆ?
17 ಯೆಹೋವನು ತನ್ನ ಜನರಿಗೆ ಸಾಂತ್ವನವನ್ನು ಕೊಡುವುದನ್ನು ಮುಂದುವರಿಸುತ್ತಾನೆ: “ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಕ್ಕುತ್ತಾ ಪುಡಿಪುಡಿಗೈದು ಗುಡ್ಡಗಳನ್ನು ಹೊಟ್ಟುಮಾಡುವಿ. ನೀನು ತೂರಲು ಅವುಗಳನ್ನು ಗಾಳಿಯು ಬಡಿದುಕೊಂಡು ಹೋಗುವದು; ಬಿರುಗಾಳಿಯು ಚೆಲ್ಲಾಪಿಲ್ಲಿಮಾಡುವದು; ನೀನಂತು ಯೆಹೋವನಲ್ಲಿ ಆನಂದಿಸುವಿ, ಇಸ್ರಾಯೇಲಿನ ಸದಮಲಸ್ವಾಮಿಯಲ್ಲಿ ಹೆಚ್ಚಳಪಡುವಿ.”—ಯೆಶಾಯ 41:15, 16.
18 ಇಸ್ರಾಯೇಲ್ ಕ್ರಿಯೆಗೈಯುವಂತೆ ಮತ್ತು ಆತ್ಮಿಕ ಅರ್ಥದಲ್ಲಿ ತನ್ನ ಬೆಟ್ಟಸದೃಶ ವೈರಿಗಳನ್ನು ತಡೆಯುವಂತೆ ಅದಕ್ಕೆ ಬಲವು ಕೊಡಲ್ಪಡುವುದು. ಇಸ್ರಾಯೇಲ್ ಜನಾಂಗವು ದೇಶಭ್ರಷ್ಟತೆಯಿಂದ ಹಿಂದಿರುಗುವಾಗ, ದೇವಾಲಯ ಮತ್ತು ಯೆರೂಸಲೇಮಿನ ಗೋಡೆಗಳ ಪುನರ್ನಿರ್ಮಾಣವನ್ನು ತಡೆಯಲು ಪ್ರಯತ್ನಿಸುವ ವೈರಿಗಳ ಮೇಲೆ ಜಯವನ್ನು ಪಡೆಯಲಿತ್ತು. (ಎಜ್ರ 6:12; ನೆಹೆಮೀಯ 6:16) ಆದರೆ ಯೆಹೋವನ ಈ ಮಾತುಗಳು ‘ದೇವರ ಇಸ್ರಾಯೇಲಿನ’ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವೇರುವವು. (ಗಲಾತ್ಯ 6:16) ಯೇಸು ಅಭಿಷಿಕ್ತ ಕ್ರೈಸ್ತರಿಗೆ ವಚನ ಕೊಡುವುದು: “ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇ ವರೆಗೂ ನಡಿಸುತ್ತಾನೋ ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು; ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದುಹೋಗುವದು.” (ಪ್ರಕಟನೆ 2:26, 27) ಸ್ವರ್ಗೀಯ ಮಹಿಮೆಗೆ ಪುನರುತ್ಥಾನಗೊಳಿಸಲ್ಪಟ್ಟಿರುವ ಕ್ರಿಸ್ತನ ಸಹೋದರರು, ಯೆಹೋವ ದೇವರ ವೈರಿಗಳ ನಾಶನದಲ್ಲಿ ಭಾಗವಹಿಸಲಿರುವ ಸಮಯವು ಖಂಡಿತವಾಗಿ ಬರುವುದು.—2 ಥೆಸಲೊನೀಕ 1:7, 8; ಪ್ರಕಟನೆ 20:4, 6.
19, 20. ಇಸ್ರಾಯೇಲ್ಯರು ಸುಂದರವಾದ ಸ್ಥಳವೊಂದಕ್ಕೆ ಪುನಸ್ಸ್ಥಾಪಿಸಲ್ಪಡುವುದರ ಕುರಿತು ಯೆಶಾಯನು ಏನು ಬರೆಯುತ್ತಾನೆ, ಮತ್ತು ಇದು ಹೇಗೆ ನೆರವೇರುತ್ತದೆ?
19 ಯೆಹೋವನು ಈಗ ಸಾಂಕೇತಿಕ ಭಾಷೆಯಲ್ಲಿ, ತನ್ನ ಜನರಿಗೆ ಸಹಾಯವನ್ನು ನೀಡುವ ತನ್ನ ವಾಗ್ದಾನವನ್ನು ಇನ್ನೂ ಹೆಚ್ಚು ಖಾತ್ರಿಪಡಿಸುತ್ತಾನೆ. ಯೆಶಾಯನು ಬರೆಯುವುದು: “ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು. ಬೋಳುಗುಡ್ಡಗಳಲ್ಲಿ ನದಿಗಳನ್ನು, ತಗ್ಗುಗಳಲ್ಲಿ ಒರತೆಗಳನ್ನು ಹೊರಡಿಸಿ ಅರಣ್ಯವನ್ನು ಕೆರೆಯಾಗಿಯೂ ಮರುಭೂಮಿಯನ್ನು ಬುಗ್ಗೆಗಳಾಗಿಯೂ ಮಾಡುವೆನು. ದೇವದಾರು ಕಸ್ತೂರಿಜಾಲಿ ಸುಗಂಧ ಒಲೀವ ಮರಗಳನ್ನು ಅಡವಿಯಲ್ಲಿ ನೆಡುವೆನು, ತುರಾಯಿ ತಪಸಿ ತಿಲಕ ವೃಕ್ಷಗಳನ್ನು ಅರಣ್ಯದಲ್ಲಿ ತೋಪಾಗಿ ಬೆಳೆಯಿಸುವೆನು; ಆಗ ಯೆಹೋವನ ಹಸ್ತವು ಇದನ್ನು ಮಾಡಿದೆ, ಹೌದು, ಇಸ್ರಾಯೇಲಿನ ಸದಮಲಸ್ವಾಮಿಯೇ ಸೃಷ್ಟಿಸಿದ್ದಾನೆ ಎಂದು ಎಲ್ಲರೂ ಕಂಡು ತಿಳಿದು ಮನಮುಟ್ಟಿ ಗ್ರಹಿಸಿಕೊಳ್ಳುವರು.”—ಯೆಶಾಯ 41:17-20.
20 ದೇಶಭ್ರಷ್ಟರಾಗಿದ್ದ ಇಸ್ರಾಯೇಲ್ಯರು ಐಶ್ವರ್ಯಭರಿತ ಲೋಕ ಶಕ್ತಿಯ ರಾಜಧಾನಿಯಲ್ಲಿ ಜೀವಿಸಿದರೂ, ಅದು ಅವರಿಗೆ ಜಲರಹಿತ ಮರುಭೂಮಿಯಂತಿದೆ. ದಾವೀದನು ಅರಸನಾದ ಸೌಲನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಡಗಿಕೊಂಡಿದ್ದಾಗ ಅವನಿಗಾದ ಅನುಭವವೇ ಇವರಿಗಾಗುತ್ತದೆ. ಆದರೆ ಸಾ.ಶ.ಪೂ. 537ರಲ್ಲಿ, ಅವರು ಯೆಹೂದಕ್ಕೆ ಹಿಂದಿರುಗಿ ಹೋಗಿ, ಯೆರೂಸಲೇಮಿನಲ್ಲಿ ತನ್ನ ದೇವಾಲಯವನ್ನು ಪುನಃ ಕಟ್ಟಿ, ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುವ ದಾರಿಯನ್ನು ಯೆಹೋವನು ತೆರೆಯುತ್ತಾನೆ. ಯೆಹೋವನು ಅವರನ್ನು ಆಶೀರ್ವದಿಸುತ್ತಾನೆ ಸಹ. ಮುಂದಿನ ಒಂದು ಪ್ರವಾದನೆಯಲ್ಲಿ ಯೆಶಾಯನು ಮುಂತಿಳಿಸುವುದು: “ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುದಾರಿಸಿ ಕಾಡುನೆಲವನ್ನು ಏದೆನ್ ಉದ್ಯಾನದಂತೆಯೂ ಬೀಳುಭೂಮಿಯನ್ನು ಯೆಹೋವನ ವನದ ಹಾಗೂ ಕಳಿಕಳಿಸುವಂತೆ ಮಾಡುವನು; ಹರ್ಷ, ಉಲ್ಲಾಸ, ಸ್ತೋತ್ರ, ಗಾನ ಧ್ವನಿ, ಇವುಗಳು ಅಲ್ಲಿ ನೆಲೆಯಾಗಿರುವವು.” (ಯೆಶಾಯ 51:3) ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಇದು ನಿಶ್ಚಯವಾಗಿ ನೆರವೇರುತ್ತದೆ.
21. ಆಧುನಿಕ ಸಮಯಗಳಲ್ಲಿ ಯಾವ ಪುನಸ್ಸ್ಥಾಪನೆ ನಡೆಯಿತು, ಮತ್ತು ಭವಿಷ್ಯತ್ತಿನಲ್ಲಿ ಏನಾಗುವುದು?
21 ಆಧುನಿಕ ದಿನಗಳಲ್ಲೂ ತದ್ರೀತಿಯ ಸಂಗತಿಗಳು ನಡೆದವು. ಮಹಾ ಕೋರೆಷನಾದ ಯೇಸು ಕ್ರಿಸ್ತನು ತನ್ನ ಅಭಿಷಿಕ್ತ ಹಿಂಬಾಲಕರು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುವಂತೆ ಆತ್ಮಿಕ ಬಂಧನದಿಂದ ಅವರನ್ನು ಬಿಡಿಸಿದನು. ಆ ನಂಬಿಗಸ್ತರನ್ನು ಒಂದು ಸಂಪತ್ಭರಿತ ಆತ್ಮಿಕ ಪರದೈಸಿನಲ್ಲಿ, ಸಾಂಕೇತಿಕವಾದ ಏದೆನ್ ತೋಟದಲ್ಲಿ ಇಟ್ಟು ಆಶೀರ್ವದಿಸಲಾಯಿತು. (ಯೆಶಾಯ 11:6-9; 35:1-7) ಶೀಘ್ರದಲ್ಲೇ ದೇವರು ತನ್ನ ವೈರಿಗಳನ್ನು ನಾಶಗೊಳಿಸುವಾಗ, ಯೇಸು ಶೂಲದ ಮೇಲಿದ್ದ ಆ ದುಷ್ಕರ್ಮಿಗೆ ವಾಗ್ದಾನಿಸಿದಂತೆ, ಇಡೀ ಭೂಮಿಯು ನೈಸರ್ಗಿಕ ಪರದೈಸಾಗಿ ರೂಪಾಂತರಗೊಳ್ಳುವುದು.—ಲೂಕ 23:43.
ಇಸ್ರಾಯೇಲಿನ ವೈರಿಗಳಿಗೆ ಸವಾಲು
22. ಯೆಹೋವನು ಪುನಃ ಯಾವ ಮಾತುಗಳಿಂದ ಜನಾಂಗಗಳಿಗೆ ಸವಾಲೊಡ್ಡುತ್ತಾನೆ?
22 ಈಗ ಯೆಹೋವನು ಅನ್ಯ ಜನಾಂಗಗಳೊಂದಿಗೆ ಮತ್ತು ಅವರ ವಿಗ್ರಹ ದೇವತೆಗಳೊಂದಿಗೆ ತನಗಿದ್ದ ವಿವಾದಕ್ಕೆ ಹಿಂದಿರುಗುತ್ತಾನೆ: “ಯಾಕೋಬ್ಯರ ಅರಸನಾದ ಯೆಹೋವನು ಹೀಗನ್ನುತ್ತಾನೆ—ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ. ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು; ಅಥವಾ ಭವಿಷ್ಯತ್ತುಗಳನ್ನು ಅರುಹಿರಿ. ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದಾಗತಕ್ಕವುಗಳನ್ನು ತಿಳಿಸಿರಿ; ನಾವು ಒಟ್ಟಿಗೆ ಕಕ್ಕಾಬಿಕ್ಕಿಯಾಗಿ ನೋಡುವಂತೆ ಮೇಲಾಗಲಿ ಕೇಡಾಗಲಿ ಏನಾದರೂ ಮಾಡಿರಿ. ಆಹಾ, ನೀವು ಶೂನ್ಯವೇ! ನಿಮ್ಮ ಕಾರ್ಯವು ಮಟ್ಟಮಾಯವೇ! ನಿಮ್ಮನ್ನು ಮರೆಹೊಗುವವರು ತುಚ್ಛರೇ ಸರಿ!” (ಯೆಶಾಯ 41:21-24) ಚಾಚೂತಪ್ಪದ ಹಾಗೆ ಪ್ರವಾದಿಸಲು ಮತ್ತು ಹೀಗೆ ತಮಗೆ ಅದ್ಭುತವಾದ ಜ್ಞಾನವಿದೆಯೆಂದು ರುಜುಪಡಿಸಲು ಈ ಜನಾಂಗಗಳ ದೇವರುಗಳು ಶಕ್ತರೊ? ಶಕ್ತರಾಗಿರುವಲ್ಲಿ, ತಮ್ಮ ವಾದಗಳನ್ನು ಬೆಂಬಲಿಸಲಿಕ್ಕಾಗಿ, ಒಂದೊ ಒಳ್ಳೆಯ ಇಲ್ಲವೆ ಕೆಟ್ಟ ಪರಿಣಾಮಗಳನ್ನು ತೋರಿಸಲು ಅವರಿಗೆ ಸಾಮರ್ಥ್ಯವಿರಬೇಕು. ಆದರೆ, ವಾಸ್ತವವೇನಂದರೆ, ಅವರು ಏನನ್ನೂ ಸಾಧಿಸಲಾರದವರಾಗಿದ್ದಾರೆ ಮತ್ತು ಅಸ್ತಿತ್ವದಲ್ಲಿಲ್ಲದವರಂತಿದ್ದಾರೆ.
23. ಯೆಹೋವನು ತನ್ನ ಪ್ರವಾದಿಗಳ ಮೂಲಕ ವಿಗ್ರಹಗಳನ್ನು ಅಷ್ಟು ಪಟ್ಟುಹಿಡಿದು ಖಂಡಿಸಿದ್ದೇಕೆ?
23 ಯೆಹೋವನು ಯೆಶಾಯನ ಮೂಲಕ ಮತ್ತು ಅವನ ಜೊತೆ ಪ್ರವಾದಿಗಳ ಮೂಲಕ ವಿಗ್ರಹಾರಾಧನೆಯ ಮೂರ್ಖತನವನ್ನು ಖಂಡಿಸಲು ಅಷ್ಟೊಂದು ಸಮಯವನ್ನು ಏಕೆ ಕಳೆಯಬೇಕಾಗಿತ್ತು ಎಂದು ನಮ್ಮ ದಿನಗಳಲ್ಲಿ ಕೆಲವರು ಆಶ್ಚರ್ಯಪಡಬಹುದು. ಮಾನವನಿರ್ಮಿತ ವಿಗ್ರಹಗಳ ನಿಷ್ಪ್ರಯೋಜಕತೆ ಇಂದು ಅನೇಕರಿಗೆ ಸ್ಪಷ್ಟವಾಗಿ ಗೊತ್ತಿರಬಹುದು. ಆದರೂ, ಸುಳ್ಳು ನಂಬಿಕೆಗಳು ಸ್ಥಾಪಿಸಲ್ಪಟ್ಟು ಹೆಚ್ಚಿನವರಿಂದ ಅಂಗೀಕರಿಸಲ್ಪಟ್ಟ ನಂತರ, ಅವುಗಳನ್ನು ನಂಬುವವರ ಮನಸ್ಸಿನಿಂದ ಅವುಗಳನ್ನು ಕಿತ್ತುಹಾಕುವುದು ಕಷ್ಟಕರ. ಇಂದಿನ ಅನೇಕ ನಂಬಿಕೆಗಳು, ನಿರ್ಜೀವ ವಿಗ್ರಹಗಳು ನಿಜವಾಗಿಯೂ ದೇವರುಗಳು ಎಂದು ಹೇಳುವ ನಂಬಿಕೆಯಷ್ಟೇ ಅವಿವೇಕದವುಗಳು. ಆದರೆ, ಅಂತಹ ನಂಬಿಕೆಗಳ ವಿರುದ್ಧ ಮನವೊಪ್ಪಿಸುವ ರುಜುವಾತುಗಳಿದ್ದರೂ, ಜನರು ಅಂತಹ ನಂಬಿಕೆಗಳಿಗೆ ಅಂಟಿಕೊಳ್ಳುತ್ತಾರೆ. ಆದರೆ, ಸತ್ಯವನ್ನು ಪದೇ ಪದೇ ಕೇಳಿಸಿಕೊಳ್ಳುವುದರಿಂದ ಮಾತ್ರ ಕೆಲವರು ಯೆಹೋವನಲ್ಲಿ ಭರವಸೆಯಿಡುವುದು ಎಷ್ಟು ವಿವೇಕಯುತವಾದದ್ದೆಂಬುದನ್ನು ನೋಡಲು ಪ್ರಚೋದಿತರಾಗುತ್ತಾರೆ.
24, 25. ಯೆಹೋವನು ಪುನಃ ಕೋರೆಷನನ್ನು ಸೂಚಿಸಿ ಹೇಗೆ ಮಾತಾಡುತ್ತಾನೆ, ಮತ್ತು ಇದು ಇನ್ನಾವ ಪ್ರವಾದನೆಯನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ?
24 ಯೆಹೋವನು ಪುನಃ ಕೋರೆಷನನ್ನು ಸೂಚಿಸಿ ಹೀಗೆ ಹೇಳುತ್ತಾನೆ: “ನಾನು ಬಡಗಲಿಂದ ಒಬ್ಬನನ್ನು ಎಬ್ಬಿಸಿ ಕರತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿಂದ ಬಂದಿದ್ದಾನೆ; ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಮೇಲೆ ಬಿದ್ದು ಕುಂಬಾರನು ಜೇಡಿಯನ್ನು ತುಳಿಯುವ ಹಾಗೆ ತುಳಿಯುವನು.” (ಯೆಶಾಯ 41:25)d ಜನಾಂಗಗಳ ದೇವರುಗಳಿಗೆ ವ್ಯತಿರಿಕ್ತವಾಗಿ, ಯೆಹೋವನು ಕೆಲಸಗಳನ್ನು ಸಾಧಿಸಶಕ್ತನಾಗಿದ್ದಾನೆ. “ಮೂಡಲಿಂದ,” ಅಂದರೆ ಸೂರ್ಯೋದಯದ ದಿಕ್ಕಿನಿಂದ ದೇವರು ಕೋರೆಷನನ್ನು ಬರಮಾಡುವಾಗ, ಆತನು ತನ್ನ ಭವಿಷ್ಯನುಡಿಯುವ ಮತ್ತು ತನ್ನ ಆ ಭವಿಷ್ಯನುಡಿಯನ್ನು ನೆರವೇರಿಸಲಿಕ್ಕಾಗಿ ಭವಿಷ್ಯವನ್ನೇ ರೂಪಿಸುವ ತನ್ನ ಸಾಮರ್ಥ್ಯವನ್ನು ತೋರಿಸುವನು.
25 ಈ ಮಾತುಗಳು, ನಮ್ಮ ಕಾಲದಲ್ಲಿ ಕ್ರಿಯೆಗೈಯಲು ಎಬ್ಬಿಸಲ್ಪಡುವ ಅರಸರ ವಿಷಯದಲ್ಲಿ ಯೋಹಾನನು ಮಾಡಿರುವ ಪ್ರವಾದನಾತ್ಮಕ ವರ್ಣನೆಯನ್ನು ನಮಗೆ ಜ್ಞಾಪಕ ಹುಟ್ಟಿಸುತ್ತವೆ. ಪ್ರಕಟನೆ 16:12ರಲ್ಲಿ, “ಮೂಡಣ ದಿಕ್ಕಿನಿಂದ ಬರುವ ರಾಜರಿಗೆ” ಮಾರ್ಗವು ಸಿದ್ಧಮಾಡಲ್ಪಡುವುದು ಎಂದು ನಾವು ಓದುತ್ತೇವೆ. ಈ ರಾಜರು ಬೇರೆ ಯಾರೂ ಅಲ್ಲ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತರೇ ಆಗಿದ್ದಾರೆ. ಬಹಳ ಸಮಯದ ಹಿಂದೆ ಕೋರೆಷನು ದೇವಜನರನ್ನು ವಿಮೋಚಿಸಿದಂತೆ, ಅವನಿಗಿಂತಲೂ ಹೆಚ್ಚು ಬಲಶಾಲಿಗಳಾಗಿರುವ ಈ ರಾಜರು ಯೆಹೋವನ ವೈರಿಗಳನ್ನು ನಾಶಮಾಡಿ, ಮಹಾ ಸಂಕಟದಿಂದ ಆತನ ಜನರನ್ನು ಪಾರುಗೊಳಿಸಿ, ನೀತಿಯ ನೂತನ ಲೋಕದೊಳಕ್ಕೆ ನಡಿಸುವರು.—ಕೀರ್ತನೆ 2:8, 9; 2 ಪೇತ್ರ 3:13; ಪ್ರಕಟನೆ 7:14-17.
ಯೆಹೋವನು ಪರಮಶ್ರೇಷ್ಠನು!
26. ಯೆಹೋವನೀಗ ಯಾವ ಪ್ರಶ್ನೆಯನ್ನು ಹಾಕುತ್ತಾನೆ, ಮತ್ತು ಅದು ಉತ್ತರಿಸಲ್ಪಟ್ಟಿದೆಯೇ?
26 ಯೆಹೋವನು ಪುನಃ, ತಾನೊಬ್ಬನೇ ಸತ್ಯ ದೇವರೆಂಬ ಸತ್ಯವನ್ನು ಪ್ರಕಟಿಸುತ್ತಾನೆ. ಆತನು ಪ್ರಶ್ನಿಸುವುದು: “ಕಾರ್ಯವು ನಡೆಯುವದಕ್ಕೆ ಮುಂಚೆ [ಇವರಲ್ಲಿ] ಯಾವನು ಅದನ್ನು ಅರುಹಿದ್ದಾನೆ? ಅರುಹಿದ್ದರೆ [ಅವನು ನಿಜ ದೇವರೆಂದು] ನಮಗೆ ಗೊತ್ತಾಗುವದು; ಯಾವನು ಮುಂತಿಳಿಸಿದ್ದಾನೆ? ತಿಳಿಸಿದ್ದರೆ ಅವನನ್ನು ಸತ್ಯವಂತನೆನ್ನುವೆವು. ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವದಿಲ್ಲ.” (ಯೆಶಾಯ 41:26) ಯಾವ ವಿಗ್ರಹದೇವತೆಯೂ ತನ್ನಲ್ಲಿ ಭರವಸವಿಡುವವರನ್ನು ರಕ್ಷಿಸಲು ವಿಜೇತನೊಬ್ಬನನ್ನು ಕಳುಹಿಸುವೆನೆಂದು ಹೇಳಿದ್ದಿಲ್ಲ. ಅಂತಹ ದೇವತೆಗಳೆಲ್ಲ ನಿರ್ಜೀವವಾದ, ಮೂಕ ವಸ್ತುಗಳಾಗಿವೆ. ಅವು ದೇವರುಗಳೇ ಅಲ್ಲ.
27, 28. ಯೆಶಾಯ 41ರ ಸಮಾಪ್ತಿಯ ವಚನಗಳಲ್ಲಿ ಯಾವ ಪ್ರಧಾನ ಸತ್ಯವನ್ನು ಒತ್ತಿಹೇಳಲಾಗಿದೆ, ಮತ್ತು ಇದನ್ನು ಯಾರು ಮಾತ್ರ ಪ್ರಕಟಿಸುತ್ತಾರೆ?
27 ಯೆಹೋವನ ಇಂತಹ ಭಾವೋದ್ರೇಕಗೊಳಿಸುವ ಪ್ರವಾದನ ಮಾತುಗಳನ್ನು ತಿಳಿಸಿದ ನಂತರ, ಯೆಶಾಯನು ಒಂದು ಪ್ರಧಾನ ಸತ್ಯವನ್ನು ಒತ್ತಿಹೇಳುತ್ತಾನೆ: “[ನಾನು ಮೊದಲನೆಯನಾಗಿ] ಇಗೋ ನೋಡು ಎನ್ನುವ ಮುಂದೂತನನ್ನು ಚೀಯೋನಿಗೆ, ಶುಭ ಸಮಾಚಾರತರತಕ್ಕವನನ್ನು ಯೆರೂಸಲೇಮಿಗೆ, ಅನುಗ್ರಹಿಸುವೆನು. ನಾನು ನೋಡಲು ಇವರಲ್ಲಿ ಸಮರ್ಥರು ಯಾರೂ ಇಲ್ಲ; ನಾನು ಪ್ರಶ್ನೆಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ. ಆಹಾ, ಇವರೆಲ್ಲಾ ಮಾಯೆ, ಇವರ ಕಾರ್ಯಗಳು ಶೂನ್ಯ, ಇವರ ಎರಕದ ಬೊಂಬೆಗಳು ಗಾಳಿಯೇ, ಹಾಳೇ!”—ಯೆಶಾಯ 41:27-29.
28 ಯೆಹೋವನು ಮೊದಲನೆಯವನು. ಆತನು ಪರಮಶ್ರೇಷ್ಠನು! ತನ್ನ ಜನರಿಗೆ ಬಿಡುಗಡೆಯನ್ನು ಪ್ರಕಟಿಸುತ್ತಾ, ಅವರಿಗೆ ಸುವಾರ್ತೆಯನ್ನು ನೀಡುವ ಸತ್ಯ ದೇವರು ಆತನೇ. ಮತ್ತು ಆತನ ಸಾಕ್ಷಿಗಳು ಮಾತ್ರ ಜನಾಂಗಗಳಿಗೆ ಆತನ ಮಹತ್ವವನ್ನು ತಿಳಿಸುತ್ತಾರೆ. ವಿಗ್ರಹಾರಾಧನೆಯಲ್ಲಿ ಭರವಸೆಯಿಡುವವರನ್ನು ಯೆಹೋವನು ತುಚ್ಛೀಕಾರದಿಂದ ಖಂಡಿಸಿ, ಅವರ ದೇವತೆಗಳು “ಗಾಳಿಯೇ, ಹಾಳೇ!” ಎಂದು ಹೇಳುತ್ತಾನೆ. ಸತ್ಯ ದೇವರಿಗೆ ಅಂಟಿಕೊಳ್ಳುವುದಕ್ಕೆ ಇದೆಷ್ಟು ಬಲವಾದ ಕಾರಣವಾಗಿದೆ! ನಮ್ಮ ದೃಢಭರವಸೆಗೆ ಯೋಗ್ಯನಾಗಿರುವಾತನು ಯೆಹೋವನೊಬ್ಬನೇ.
[ಪಾದಟಿಪ್ಪಣಿಗಳು]
a ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I ಪುಸ್ತಕದ 29ನೆಯ ಅಧ್ಯಾಯವನ್ನು ನೋಡಿ.
b ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I ಪುಸ್ತಕದ 30ನೆಯ ಅಧ್ಯಾಯವನ್ನು ನೋಡಿ.
c ‘ದೇವರ ಇಸ್ರಾಯೇಲನ್ನು’ 1919ರಲ್ಲಿ ಆತ್ಮಿಕ ಬಂಧನದಿಂದ ಬಿಡಿಸಿದವನು ಮಹಾ ಕೋರೆಷನಾದ ಯೇಸು ಕ್ರಿಸ್ತನೇ. ಅವನು 1914ರಿಂದ ದೇವರ ಸ್ವರ್ಗೀಯ ರಾಜ್ಯದಲ್ಲಿ ಅರಸನಾಗಿ ಸಿಂಹಾಸನವನ್ನೇರಿರುತ್ತಾನೆ.—ಗಲಾತ್ಯ 6:16.
d ಕೋರೆಷನ ಸ್ವದೇಶವು ಬಾಬೆಲಿನ ಪೂರ್ವ ದಿಕ್ಕಿನಲ್ಲಿದ್ದರೂ, ಅವನು ಆ ನಗರವನ್ನು ಕೊನೆಯ ಬಾರಿ ಆಕ್ರಮಿಸಿದಾಗ, ಅವನು ಉತ್ತರ ದಿಕ್ಕಿನಿಂದ ಅಂದರೆ ಏಷ್ಯಾ ಮೈನರ್ನಿಂದ ಬಂದನು.
[ಪುಟ 19ರಲ್ಲಿರುವ ಚಿತ್ರ]
ಕೋರೆಷನು ಒಬ್ಬ ವಿಧರ್ಮಿಯಾಗಿದ್ದರೂ ದೇವರ ಕೆಲಸವನ್ನು ಮಾಡಲು ಆಯ್ಕೆಮಾಡಲ್ಪಡುತ್ತಾನೆ
[ಪುಟ 21ರಲ್ಲಿರುವ ಚಿತ್ರ]
ಜನಾಂಗಗಳು ನಿರ್ಜೀವ ವಿಗ್ರಹಗಳಲ್ಲಿ ಭರವಸೆಯಿಡುತ್ತವೆ
[ಪುಟ 27ರಲ್ಲಿರುವ ಚಿತ್ರಗಳು]
ಇಸ್ರಾಯೇಲು “ಹಂತಿಕುಂಟೆ”ಯೋಪಾದಿ ‘ಬೆಟ್ಟಗಳನ್ನು ಪುಡಿಪುಡಿ’ ಮಾಡುವುದು