ಅವರು ಯಾರು?
ನೀವು ಯೆಹೋವನ ಸಾಕ್ಷಿಗಳೊಂದಿಗೆ ಉತ್ತಮವಾಗಿ ಪರಿಚಿತರಾಗುವುದು ಅವರ ಆಶೆಯಾಗಿರುತ್ತದೆ. ನೆರೆಯವರಾಗಿ ಮತ್ತು ಜತೆಕೆಲಸಗಾರರಾಗಿ ಯಾ ಜೀವಿತದ ದೈನಂದಿನ ವ್ಯವಹಾರಗಳ ಯಾವುದಾದರೊಂದರಲ್ಲಿ ನೀವು ಅವರನ್ನು ಭೇಟಿಯಾಗಿರಬಹುದು. ತಮ್ಮ ಪತ್ರಿಕೆಗಳನ್ನು ಹಾದುಹೋಗುವವರಿಗೆ ನೀಡುತ್ತಿರುವ ಅವರನ್ನು ರಸ್ತೆಯ ಮೇಲೆ ನೀವು ನೋಡಿರಬಹುದು. ಯಾ ನಿಮ್ಮ ಬಾಗಲಲ್ಲಿ ನೀವು ಅವರೊಂದಿಗೆ ಸಂಕ್ಷಿಪ್ತವಾಗಿ ಮಾತಾಡಿರಬಹುದು.
ವಾಸ್ತವದಲ್ಲಿ, ಯೆಹೋವನ ಸಾಕ್ಷಿಗಳು ನಿಮ್ಮಲ್ಲಿ ಮತ್ತು ನಿಮ್ಮ ಶ್ರೇಯೋಭಿವೃದ್ಧಿಯಲ್ಲಿ ಅಭಿರುಚಿಯುಳ್ಳವರಾಗಿದ್ದಾರೆ. ನಿಮ್ಮ ಸ್ನೇಹಿತರಾಗಿರಲು ಮತ್ತು ಸ್ವತಃ ಅವರ ಕುರಿತಾಗಿ, ಅವರ ನಂಬಿಕೆಗಳ, ಅವರ ಸಂಸ್ಥೆಯ, ಮತ್ತು ಜನರ ಮತ್ತು ನಾವೆಲ್ಲರೂ ಜೀವಿಸುತ್ತಿರುವ ಲೋಕದ ಕುರಿತು ಅವರ ಅನಿಸಿಕೆಗಳೇನು ಎಂದು ಹೆಚ್ಚನ್ನು ನಿಮಗೆ ಹೇಳಲು ಬಯಸುತ್ತಾರೆ. ಈ ಉದ್ದೇಶವನ್ನು ಪೂರೈಸಲು, ನಿಮಗಾಗಿ ಈ ಬ್ರೋಷರನ್ನು ಅವರು ತಯಾರಿಸಿದ್ದಾರೆ.
ಅನೇಕ ವಿಷಯಗಳಲ್ಲಿ ಯೆಹೋವನ ಸಾಕ್ಷಿಗಳು ಬೇರೆಲ್ಲರಂತೆಯೇ ಇದ್ದಾರೆ. ಅವರಿಗೆ ಅವರ—ಆರ್ಥಿಕ, ಶಾರೀರಿಕ, ಭಾವನಾತ್ಮಕ—ಸಮಸ್ಯೆಗಳು ಇವೆ. ಕೆಲವೊಮ್ಮೆ ಅವರು ತಪ್ಪುಮಾಡುತ್ತಾರೆ, ಯಾಕಂದರೆ ಅವರು ಪರಿಪೂರ್ಣರಲ್ಲ, ದೇವಪ್ರೇರಿತರಲ್ಲ, ಯಾ ತಪ್ಪೇ ಮಾಡದವರಲ್ಲ. ಆದರೆ ಅವರ ಅನುಭವಗಳಿಂದ ಕಲಿಯಲು ಅವರು ಪ್ರಯತ್ನಿಸುತ್ತಾರೆ ಮತ್ತು ಆವಶ್ಯಕವಾದ ತಿದ್ದುಪಾಟುಗಳನ್ನು ಮಾಡಲು ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ದೇವರ ಚಿತ್ತವನ್ನು ಮಾಡಲು ಅವನಿಗೆ ಸಮರ್ಪಣೆಯನ್ನು ಅವರು ಮಾಡಿರುತ್ತಾರೆ, ಮತ್ತು ಈ ಸಮರ್ಪಣೆಯನ್ನು ನೆರವೇರಿಸಲು ಅವರು ತಮ್ಮನ್ನು ಅನ್ವಯಿಸಿಕೊಳ್ಳುತ್ತಾರೆ. ಅವರ ಎಲ್ಲಾ ಚಟುವಟಿಕೆಗಳಲ್ಲಿ ಅವರು ದೇವರ ವಾಕ್ಯದ ಮತ್ತು ಅವನ ಪವಿತ್ರ ಆತ್ಮದ ಮಾರ್ಗದರ್ಶನವನ್ನು ಹುಡುಕುತ್ತಾರೆ.
ಬೈಬಲಿನ ಮೇಲೆ ತಮ್ಮ ನಂಬಿಕೆಗಳು ಆಧಾರಿತವಾಗಿರುವುದು ಅವರಿಗೆ ಅತ್ಯಾವಶ್ಯಕವಾಗಿದೆಯೇ ಹೊರತು, ಕೇವಲ ಮಾನವ ಊಹಾಪೋಹಗಳ ಯಾ ಧಾರ್ಮಿಕ ಸಿದ್ಧಾಂತಗಳ ಮೇಲೆ ಅಲ್ಲ. ತಾನು ಪ್ರೇರೇಪಣೆಗೊಳಗಾಗಿ ದೃಢವಾಗಿ ತನ್ನನ್ನು ವ್ಯಕ್ತಪಡಿಸಿದಾಗ, ಅಪೊಸ್ತಲ ಪೌಲನು ಭಾವಿಸಿದಂತೆ ಅವರು ಭಾವಿಸುತ್ತಾರೆ: “ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ.” (ರೋಮಾಪುರ 3:4, ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್a). ಬೈಬಲಿನ ಸತ್ಯಗಳೆಂದು ನೀಡಲ್ಪಟ್ಟ ಬೋಧನೆಗಳ ಸಂಬಂಧದಲ್ಲಿಯಾದರೋ, ಅಪೊಸ್ತಲ ಪೌಲನು ಸಾರುವುದನ್ನು ಕೇಳಿದಾಗ, ಬೆರೋಯದವರು ತೆಗೆದುಕೊಂಡ ಪಥವನ್ನು ಅವರು ಬಲವಾಗಿ ಒಪ್ಪುತ್ತಾರೆ: “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅ. ಕೃತ್ಯಗಳು 17:11) ಬೋಧನೆಯು ತಮ್ಮಿಂದ ನೀಡಲ್ಪಡಲಿ ಯಾ ಬೇರೆ ಯಾರಿಂದಲೂ ನೀಡಲ್ಪಡಲಿ, ಎಲ್ಲಾ ಧಾರ್ಮಿಕ ಬೋಧನೆಗಳು ಶಾಸ್ತ್ರಗ್ರಂಥದೊಂದಿಗೆ ಸಹಮತದಲ್ಲಿರುವ ಈ ಪರೀಕೆಗ್ಷೊಡಲ್ಪಡಬೇಕೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಅವರೊಂದಿಗಿನ ನಿಮ್ಮ ಚರ್ಚೆಗಳಲ್ಲಿ ನೀವು ಇದನ್ನು ಮಾಡುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ—ನಿಮ್ಮನ್ನು ಒತ್ತಾಯಿಸುತ್ತಾರೆ.
ಬೈಬಲ್ ದೇವರ ವಾಕ್ಯವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆಂದು ಇದರಿಂದ ವಿದಿತವಾಗುತ್ತದೆ. ಅವರು ಅದರ 66 ಪುಸ್ತಕಗಳು ದೇವಪ್ರೇರಿತವಾಗಿವೆ ಮತ್ತು ಐತಿಹಾಸಿಕವಾಗಿ ನಿಷ್ಕೃಷ್ಟವಾಗಿವೆ ಎಂದು ಪರಿಗಣಿಸುತ್ತಾರೆ. ಹೊಸ ಒಡಂಬಡಿಕೆಯೆಂದು ಸಾಮಾನ್ಯವಾಗಿ ಕರೆಯಲ್ಪಡುವದನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥಗಳೆಂದು ಅವರು ಸೂಚಿಸುತ್ತಾರೆ, ಮತ್ತು ಹಳೇ ಒಡಂಬಡಿಕೆಯನ್ನು ಅವರು ಹೀಬ್ರು ಶಾಸ್ತ್ರಗ್ರಂಥಗಳೆಂದು ಕರೆಯುತ್ತಾರೆ. ಅವರು ಗ್ರೀಕ್ ಮತ್ತು ಹೀಬ್ರು ಶಾಸ್ತ್ರಗ್ರಂಥಗಳೆರಡರ ಮೇಲೂ ಆತುಕೊಳ್ಳುತ್ತಾರೆ ಮತ್ತು ಎಲ್ಲಿ ವಾಕ್ಸರಣಿಗಳು ಯಾ ಸನ್ನಿವೇಶಗಳು ವಿಶದವಾಗಿ ಲಾಕ್ಷಣಿಕ ಯಾ ಸಾಂಕೇತಿಕವೆಂದು ಸೂಚಿಸುತ್ತವೆಯೋ ಅವನ್ನು ಬಿಟ್ಟು, ಅವುಗಳನ್ನು ಅವರು ಅಕ್ಷರಶಃವಾಗಿ ತೆಗೆದುಕೊಳ್ಳುತ್ತಾರೆ. ಬೈಬಲಿನ ಪ್ರವಾದನೆಗಳಲ್ಲಿ ಅನೇಕ ನೆರವೇರಿವೆ, ಬೇರೆಯವುಗಳು ನೆರವೇರುತ್ತಾ ಇವೆ, ಮತ್ತು ಇನ್ನೂ ಇತರ ಪ್ರವಾದನೆಗಳು ನೆರವೇರಿಕೆಗಾಗಿ ಕಾದಿವೆ ಎಂದು ಅವರು ತಿಳಿದುಕೊಳ್ಳುತ್ತಾರೆ.
ಅವರ ಹೆಸರು
ಯೆಹೋವನ ಸಾಕ್ಷಿಗಳೋ? ಹೌದು, ಆ ವಿಧಾನದಲ್ಲಿ ಅವರು ತಮ್ಮನ್ನು ಸ್ವತಃ ಸೂಚಿಸಿಕೊಳ್ಳುತ್ತಾರೆ. ಅದೊಂದು ವಿವರಣಾತ್ಮಕ ಹೆಸರಾಗಿದ್ದು, ಯೆಹೋವನ, ಅವನ ದೇವತ್ವದ, ಮತ್ತು ಅವನ ಉದ್ದೇಶಗಳ ಕುರಿತು ಅವರು ಸಾಕ್ಷಿಯನ್ನು ಹೇಳುತ್ತಾರೆಂದು ಸೂಚಿಸುತ್ತದೆ. “ದೇವರು,” “ಕರ್ತನು,” ಮತ್ತು “ನಿರ್ಮಾಣಿಕನು”—“ಅಧ್ಯಕ್ಷ,” “ಅರಸ,” ಮತ್ತು “ಸೇನಾಪತಿ” ಯಂತೆ—ಬಿರುದುಗಳಾಗಿವೆ ಮತ್ತು ಭಿನ್ನವಾದ ಅನೇಕ ಗಣ್ಯವ್ಯಕ್ತಿಗಳಿಗೆ ಅನ್ವಯಿಸಬಹುದು. ಆದರೆ “ಯೆಹೋವ” ಒಂದು ವೈಯಕ್ತಿಕ ಹೆಸರಾಗಿದೆ ಮತ್ತು ಸರ್ವೋನ್ನತ ದೇವರಿಗೆ ಮತ್ತು ವಿಶ್ವದ ಸೃಷ್ಟಿಕರ್ತನಿಗೆ ಸೂಚಿಸುತ್ತದೆ. ಬೈಬಲಿನ ಕಿಂಗ್ಸ್ ಜೇಮ್ಸ್ ವರ್ಷನ್ಗನುಸಾರ, ಕೀರ್ತನೆ 83:18 ರಲ್ಲಿ ಅದು ಹೀಗೆ ತೋರಿಸಲ್ಪಟ್ಟಿದೆ: “ಯಾವನ ಹೆಸರು ಮಾತ್ರ ಯೆಹೋವ ಎಂದಾಗಿದೆಯೋ ಅಂತಹ ನೀನು ಭೂಮಿಯ ಮೇಲೆಲ್ಲಾ ಸರ್ವೋನ್ನತನೆಂದು ಜನರು ತಿಳಿಯಲಿ.”
ಯೆಹೋವ (ಯಾ ಯಾಹ್ವೆ ರೋಮನ್ ಕ್ಯಾತೊಲಿಕ್ ಜೆರೂಸಲೇಮ್ ಬೈಬಲ್ ನಲ್ಲಿ ಮತ್ತು ಕೆಲವು ಆಧುನಿಕ ವಿದ್ವಾಂಸರುಗಳು ಇಷ್ಟಪಡುವಂತೆ) ಎಂಬ ಹೆಸರು ಮೂಲ ಹೀಬ್ರು ಶಾಸ್ತ್ರಗ್ರಂಥದಲ್ಲಿ ಬಹುತೇಕ 7,000 ದಷ್ಟು ಬಾರಿ ಕಾಣಬರುತ್ತದೆ. ಅನೇಕ ಬೈಬಲುಗಳು ಅದನ್ನು ಹಾಗೆಂದು ತೋರಿಸುವುದಿಲ್ಲ, ಆದರೆ ಅದನ್ನು “ದೇವರು” ಯಾ “ಕರ್ತನು” ಎಂದು ಬದಲಿಮಾಡುತ್ತಾರೆ. ಆದಾಗ್ಯೂ, ಈ ಬೈಬಲುಗಳಲ್ಲಿ ಕೂಡ ಮೂಲ ಹೀಬ್ರು ಶಾಸ್ತ್ರಗ್ರಂಥದಲ್ಲಿ ಎಲ್ಲಿ ಯೆಹೋವ ಎಂದು ಬಳಸಲ್ಪಟ್ಟಿತ್ತು ಎಂದು ವ್ಯಕ್ತಿಯೊಬ್ಬನು ಸುಲಭವಾಗಿ ಹೇಳಬಲ್ಲನು ಯಾಕಂದರೆ ಈ ಸ್ಥಳಗಳಲ್ಲಿ ಬದಲಿಯಾಗಿ ಹಾಕಲ್ಪಟ್ಟ ಶಬ್ದಗಳು ದೊಡ್ಡ ಮತ್ತು ಸಣ್ಣ ದೊಡ್ಡಕ್ಷರಗಳಲ್ಲಿ ಹೀಗೆ GOD, LORD ಎಂದು ಬರೆಯಲ್ಪಟ್ಟಿವೆ. ಅನೇಕ ಆಧುನಿಕ ಭಾಷಾಂತರಗಳು ಯೆಹೋವ ಎಂಬ ಹೆಸರು ಯಾ ಯಾಹ್ವೆ ಎಂಬ ಹೆಸರನ್ನು ಬಳಸುತ್ತವೆ. ಆದಕಾರಣ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಯೆಶಾಯ 42:8 ರಲ್ಲಿ ಓದುವದು: “ನಾನು ಯೆಹೋವನು. ಅದು ನನ್ನ ಹೆಸರು.”
ಯೆಹೋವನ ಸಾಕ್ಷಿಗಳು ತಮ್ಮ ಹೆಸರನ್ನು ತೆಗೆದುಕೊಳ್ಳುವ ಶಾಸ್ತ್ರೀಯ ದಾಖಲೆಯು ಯೆಶಾಯನ 43 ನೆಯ ಅಧ್ಯಾಯದಲ್ಲಿದೆ. ಅಲ್ಲಿ ಲೋಕದೃಶ್ಯವನ್ನು ಒಂದು ನ್ಯಾಯಸ್ಥಾನದ ನಾಟಕದೋಪಾದಿ ದೃಷ್ಟಿಸಲಾಗುತ್ತದೆ: ನೀತಿಯುಕ್ತತೆಯ ತಮ್ಮ ವಾದಿಸಲ್ಪಟ್ಟ ಮೊಕದ್ದಮೆಗಳನ್ನು ರುಜುಪಡಿಸಲು ಅವರ ಸಾಕ್ಷಿಗಳನ್ನು ತರುವಂತೆ ಯಾ ಯೆಹೋವನ ಪಕ್ಕದಲ್ಲಿರುವ ಸಾಕ್ಷಿಗಳಿಗೆ ಆಲಿಸುವಂತೆ ಮತ್ತು ಸತ್ಯವನ್ನು ಅಂಗೀಕರಿಸುವಂತೆ ಜನಾಂಗಗಳ ದೇವರುಗಳನ್ನು ಆಮಂತ್ರಿಸಲಾಗುತ್ತದೆ. ಅಲ್ಲಿ ಯೆಹೋವನು ತನ್ನ ಜನರಿಗೆ ಘೋಷಿಸುವುದು: “ನೀವು ನನ್ನ ಸಾಕ್ಷಿ. ನಾನು ಆರಿಸಿಕೊಂಡಿರುವ ನನ್ನ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು]; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ.”—ಯೆಶಾಯ 43:10, 11, ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್.
ಕ್ರಿಸ್ತನಿಗಿಂತ ಮೊದಲಿನ ಸಾವಿರಾರು ವರುಷಗಳಲ್ಲಿ ಯೆಹೋವ ದೇವರಿಗೆ ಭೂಮಿಯ ಮೇಲೆ ಸಾಕ್ಷಿಗಳು ಇದ್ದರು. ಇಬ್ರಿಯ 11 ನೆಯ ಅಧ್ಯಾಯದಲ್ಲಿ ಆ ನಂಬಿಕೆಯ ಪುರುಷರುಗಳಲ್ಲಿ ಕೆಲವರ ಹೆಸರುಗಳನ್ನು ಪಟ್ಟಿಮಾಡಿದ ಅನಂತರ, ಇಬ್ರಿಯ 12:1 ಹೇಳುವುದು: “ಆದಕಾರಣ ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” ಯೇಸು ಪೊಂತ್ಯ ಪಿಲಾತನ ಮುಂದೆ ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” ಅವನನ್ನು “ನಂಬತಕ್ಕ ಸತ್ಯ ಸಾಕ್ಷಿ” ಎಂದು ಕರೆಯಲಾಗುತ್ತದೆ. (ಯೋಹಾನ 18:37; ಪ್ರಕಟನೆ 3:14) ಯೇಸುವು ತನ್ನ ಶಿಷ್ಯರಿಗೆ ಅಂದದ್ದು: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
ಆದಕಾರಣ, ಕ್ರಿಸ್ತ ಯೇಸುವಿನ ಮೂಲಕ ಯೆಹೋವನ ರಾಜ್ಯದ ಶುಭ ವಾರ್ತೆಯನ್ನು 230 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಇಂದು ಸಾರುವ 40,00,000ಕ್ಕೂ ಅಧಿಕ ಜನರು, ತಮ್ಮನ್ನು ಯೆಹೋವನ ಸಾಕ್ಷಿಗಳು ಎಂಬುದಾಗಿ ಸೂಚಿಸಿಕೊಳ್ಳುವುದು ಯೋಗ್ಯವೆಂದು ಭಾವಿಸುತ್ತಾರೆ.
[ಅಧ್ಯಯನ ಪ್ರಶ್ನೆಗಳು]
a ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಈ ಬ್ರೋಷರಿನಲ್ಲಿ ಬೈಬಲ್ ಉದ್ಧರಣೆಗಳು ‘ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್’ ಭಾಷಾಂತರದಿಂದ ಮಾಡಲ್ಪಟ್ಟಿವೆ.
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮ್ಮಲ್ಲಿ ಅವರು ಆಸಕ್ತಿಯುಳ್ಳವರಾಗಿದ್ದಾರೆ
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರ ಚಿತ್ತವನ್ನು ಮಾಡಲು ಅವರು ಸಮರ್ಪಿಸಿಕೊಂಡಿದ್ದಾರೆ
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲನ್ನು ದೇವರ ವಾಕ್ಯವೆಂದು ಅವರು ನಂಬುತ್ತಾರೆ
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನ್ಯಾಯಸ್ಥಾನದ ನಾಟಕವೊಂದಕ್ಕೆ ಸಂಬಂಧಿಸಿದ ಆ ಹೆಸರು
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
230 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ 40,00,000 ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು
[ಪುಟ 5 ರಲ್ಲಿರುವ ಚಿತ್ರ]
ಪುರಾತನ ಕಾಲದ ಹೀಬ್ರುವಿನಲ್ಲಿ ದೇವರ ವೈಯಕ್ತಿಕ ನಾಮ